MAITHILI RAGHUPATHI

Tragedy Inspirational Others

4  

MAITHILI RAGHUPATHI

Tragedy Inspirational Others

ಹರಕೆ

ಹರಕೆ

6 mins
263



ಶ್ಯಾಮರಾಯರು ನಮ್ಮೂರಿನಲ್ಲಿ ಒಳ್ಳೆಯ ಹೆಸರಿದ್ದ ವ್ಯಕ್ತಿ. ಅಂತಹ ಅನುಕೂಲಸ್ತರಲ್ಲದಿದ್ದರೂ ತಕ್ಕಮಟ್ಟಿಗಿನ ಆದಾಯ ಅವರು ನಂಬಿಕೊಂಡಿದ್ದ ಅಡಿಕೆ ಬೆಳೆಯಿಂದ ಬರುತ್ತಿತ್ತು. ಇವರ ಅಜ್ಜ ಮುತ್ತಜ್ಜನ ಕಾಲದಿಂದಲೂ ಯಾವುದೇ ಬದಲಾವಣೆಗಳಿಲ್ಲದೆ ಒಂದೇ ರೀತಿಯಾಗಿ ಬದುಕಿದವರು ಇವರು. ಅಂದರೆ ದಿಢೀರನೆ ಶ್ರೀಮಂತಿಕೆ ಬಂದದ್ದಾಗಲೀ, ಬಡತನ ಬಂದು ಅಪ್ಪಳಿಸಿದ್ದಾಗಲೀ, ಅಥವಾ ಯಾವುದೋ ವಾದ ವಿವಾಧಗಳ ಸುಳಿಗೆ ಸಿಲುಕಿ ನಲುಗಿದ್ದಾಗಲೀ ಇಲ್ಲ. ಈಗ ನೂರಾರು ವರ್ಷಗಳ ಹಿಂದೆ ಕಟ್ಟಿದ ಮಣ್ಣಿನ ಮನೆ ಹಾಗೇ ಇದೆ. ಮನೆಯ ಗೋಡೆಗಳು ಈಗಲೂ ಹಾಗೆಯೇ ಇವೆ. ಸುಣ್ಣ ಬಣ್ಣ ಕಾಣದೆ ಕೆಮ್ಮಣ್ಣಿನಿಂದ ಮೆತ್ತಿಸಿಕೊಂಡು ಹಾಗೆಯೇ ಇದೆ. ಕಿಂಚಿತ್ತೂ ಮಾಸಲಾಗಿಲ್ಲ. ಆದರೆ ಇತ್ತೀಚೆಗೆ ಮಾತ್ರ ಊರಿನ ಎಲ್ಲಾ ಮನೆಗಳಿಗೂ ಅಲ್ಲಲ್ಲಿ ಗೆದ್ದಲು ಹಿಡಿದದ್ದು ಶ್ಯಾಮರಾಯರ ಮನೆಯ ಕಿಟಕಿಗಳಿಗೂ ಆಗಮಿಸಿವೆ. ಬಿಟ್ಟರೆ ಇನ್ನೇನೂ ಬದಲಾವಣೆ ಇಲ್ಲ. ಗೆದ್ದಲು ಹಿಡಿದ ಬಾಗಿಲ ಬುಡ ನೋಡಿದ ನಮ್ಮ ಶ್ಯಾಮರಾಯರ ಹೆಂಡತಿ ಮೊನ್ನೆ ನಮ್ಮ ಮನೆಗೆ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಾ ಹೇಳುತ್ತಿದ್ದರು ‘ಯಂತ ಮಾಡ್ಲಿ ನಾನು ಮೊನ್ನೆ ನಾಲ್ಕು ಗೆದ್ಲು ಹುಳ ತೆಗ್ದು ಹಾಕಿದ್ದಿ. ಇವತ್ತು ನೋಡಿರೆ ಎಂಟು ಹುಳ…. ಹಿಂಗೆ ಬಿಟ್ರೆ ನಮ್ಮನೆ ಬಿದೋಗ್ತು ಅಷ್ಟೆ. ಯಂತ ಮಾಡಕು ಅಂತನೇ ಗೊತಾಗ್ತಾ ಇಲ್ಲೆ. ನಂಗಂತೂ ತಲೆಬಿಶಿ ಹತ್ತೋಯ್ದು'. ಮಾತು ನಿಲ್ಲಿಸಿದರು ರತ್ನಮ್ಮ. ‘ಅಯ್ಯೋ ಬಿಡೆ ರತ್ನಕ್ಕಾ, ನಮ್ಮನೆಲೂ ಹಿಂಗೇ ಆಯ್ದು. ಯಂತ ಮಾಡದು ಹೇಳು. ವರ್ಲೆ ಓಡ್ಸ ಕೆಲ್ಸ ಯಾವಾಗ್ಲೂ ಹೆಂಗುಸ್ರ ಪಾಲಿಗೆಯ. ಗಂಡುಸ್ರಿಗೆ ಇದ್ನ ಹೇಳಿರೆ ತಲಿಗೆ ತಗತ್ವ… ಚೂರೂ ಇಲ್ಲೆ. ನಂಗಂತೂ ದಿನಾ ಕ್ಲೀನ್ ಮಾಡಿ ಮಾಡಿ ಸಾಕಾಗೋಯ್ದು. ಕೈ ರಟ್ಟೆ ಎಲ್ಲ ಬಿದ್ದೋತು.’ ಎಂದು ಉಸುರಿದರು ನಮ್ಮಮ್ಮ. ‘ಹೌದು ಇವ್ಳೆ. ಅದ್ಕೆ ನಾನೂ ಒಂದ್ ಕೆಲ್ಸ ಮಾಡಕು ಅಂತಿದ್ದಿ. ಹ್ಯಾಂಗೂ ನಾಳೆ ಪಾಡ್ಯ. ಗಣಪತಿಗೆ ಒಂದು ಲೋಟ ಹುಳಿ ಮಜ್ಗೆ ನೈವೇದ್ಯ ಮಾಡ್ತಿ ಅಂತ ಹರಕೆ ಹೊತ್ಗತ್ತಿ. ವರ್ಲೆ ಕಡ್ಮೆ ಆದ್ರೆ ಗಣಪತಿಗೆ ಹುಳಿ ಮಜ್ಗೆ. ಇಲ್ಲೆ ಅಂದ್ರೆ ಹಾಲೂ ಇಲ್ಲೆ, ಮೊಸರೂ ಇಲ್ಲೆ, ಮಜ್ಗೆನೂ ನಾಸ್ತಿ’ ಎಂದು ಹೇಳಿ ಹೌದು ಅಲ್ಲವೆಂಬಂತ ಕೋಪದಿಂದ ಹೊರ ಬಂದರು ರತ್ನಮ್ಮ. ಅಯ್ಯೋ ರತ್ನಕ್ಕಾ ನಿಂತ್ಕಳೇ.. ಹಂಗೆಲ್ಲ ಹರಕೆ ಕಟ್ಕಿಳಡ ಮರಾಯ್ತಿ…. ನನ್ ಮಾತು ಕೇಳು… ಎಂದು ಹೇಳುತ್ತಾ ನಮ್ಮಮ್ಮ ಹೊರ ಬಂದರು ಅಷ್ಟರಲ್ಲಿ ರತ್ನಮ್ಮ ಎಲ್ಲಿದ್ದಾರೆ ಹೋಗಿಯಾಗಿದೆ.

 ‘ಗಡಿಬಿಡಿ ರತ್ನಮ್ಮಅಂದ್ರೆ ಕೇಳಕಾ…..?. ಕೂತ್ ಕುಂಡೆಲಿ ಕುತ್ಕಳದಿಲ್ಲೆ.…. ಒಂದು ಕ್ಷಣ ಹಿಂಗ್ ಬಂದ, ಹಂಗ್ ಹೋದ. ಬಂದ ಬಂದ ಅನ್ನ ತಂಕ ಓಡೋಗಿರ್ತ. ಎಂದು ಗೊಣಗಿಕೊಳ್ಳುತ್ತಾ ಅಮ್ಮ ತಿರುಗಿದ ತಕ್ಷಣ ಪಕ್ಕದ ಮನೆಯ ಶಾರದಕ್ಕ ಕಂಡು ಏನಾತೆ ಗೌರಿ? ರತ್ನಕ್ಕ ಬಂದಂಗೆ ಕಂಡಿ, ಎಲ್ಲಿ?.. ಹೋದ್ಲ?,’ ಹು ಹೋದ….. ಅವ್ಳು ಎಲ್ಲಿ ಕೂತ್ಗತ್ಲೆ. ಓಡ್ತಾ ಇರ್ತ.. ಎಷ್ಟೊತಿಗುವ… ಹೇಳಿದಳು ನನ್ನ ಅಮ್ಮ. ಅಲ್ಲ ಅದೆಂತೋ ಹರ್ಕೆ ಅಂದಂಗೆ ಆತಲೇ…. ಯಂತದೆ ಹರ್ಕೆ? ನಂಗಂತೂ ಈಗೀಗ ಹರ್ಕೆ ಅಂತ ಯಾರಾದ್ರೂ ಹೇಳಿರೇ ಹೆದ್ರಿಕೆ ಆಗ್ತು ಮರಾಯ್ತಿ? ಈಗಿನ್ ಕಾಲ್ದಲ್ಲಿ ಹರಕೆ ಕಟ್ಕಿಂಡ್ರೆ ಬೇಗ ಬೇಗ ತೀರ್ಸಿದ್ರೆ ಅಡ್ಡಿಲ್ಲೆ ಇಲ್ಲೆ ಅಂದ್ರೆ ಕಥೆ ಅಷ್ಟೆಯ’ ಹೇಳಿ ನಿಟ್ಟುಸಿರು ಬಿಟ್ಟಳು ಶಾರದಕ್ಕ. ಹು.. ಅದು ಹೌದು… ಎಂದು ಒಂದು ಕ್ಷಣ ಮೌನವಾದರು ಇಬ್ಬರು. ನಂತರ ‘ಆತ ಕೆಲ್ಸ ಎಲ್ಲವಾ… ಕೆಲ್ಸ ಮಾಡಿರೆ ಮುಗಿತೇ ಇಲ್ಲೆ, ಹಳ್ಳಿ ಮನೆಲಿ ಹಿಂಗೆಯ, ಕೆಲ್ಸ ಮಾಡಿದಷ್ಟು ಇರ್ತು.ಮುಗಿತೇ ಇಲ್ಲೆ. ಹೇಳಿ ಇಬ್ಬರೂ ತಮ್ಮ ತಮ್ಮ ಮನೆ ಒಳಗೆ ಹೋದರು.

ಇತ್ತ ಕಡೆ ನಾಣಿ ಭಟ್ಟರ ಮನೆಯಲ್ಲಿ ಏನೋ ಗಲಾಟೆ ಕೇಳಿದಂತಾಗಿ ಹೊರ ಬಂದೆ. ಹೌದು ಸಾಲಗಾರರು ಬಂದು ಮನೆ ಮುಂದೆ ನಿಂತಿದ್ದರು. ಗಲಾಟೆಯೋ ಗಲಾಟೆ. “ ಇವತ್ತೇ ಮನೆ ಖಾಲಿ ಮಾಡು ಇಲ್ಲ ಅಂದ್ರೆ ಕಾನೂನಿನ ಪ್ರಕಾರ ನಾವು ಏನು ಮಾಡಬೇಕೋ ಅದನ್ನ ಮಾಡ್ತೀವಿ.’ ಅಂತ ಎತ್ತರಿಸಿದ ದ್ವನಿಯಲ್ಲಿ ಬಂಗಿ ಶೆಟ್ಟರು ಕೂಗುತ್ತಿದ್ದರು.

ಒಂದು ಕಾಲದಲ್ಲಿ ನಾಣಿ ಭಟ್ಟರು ನಮ್ಮೂರಿನ ಶ್ರೀಮಂತರಲ್ಲಿ ಒಬ್ಬರು. ಇವರ ಹೆಂಡತಿ ಲಕ್ಷ್ಮಮ್ಮ. ಸಾಕ್ಷಾತ್ ಅನ್ನಪೂರ್ಣೇಶ್ವರಿನೇ. ಕೊಡುಗೈ ದಾನಿಯಾಗಿ ಬಾಳಿದವರು ಇಂದು ಸಾಲದ ಸುಳಿಗೆ ಸಿಲುಕಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಂತೆ ಆಯಿತಲ್ಲಾ…. ಕರುಳು ಕಿವುಚಿ ಬಂತು. ಇಷ್ಟಕ್ಕೂ ಆದದ್ದು ಏನು? ಕಟ್ಟಿಕೊಂಡ ಒಂದು ಹರಕೆ ಬದುಕನ್ನೇ ನಾಶ ಮಾಡಿತಲ್ಲ.ಪಾಪ ಛೆ… ಎಂತೆಂಥವರೋ ಹೇಗೇಗೋ ಬದುಕುತ್ತಿರುವಾಗ ಗುಣವಂತ ಕುಟುಂಬಕ್ಕೆ ಈ ಪರಿಯ ಶಿಕ್ಷೆ ತರವೇ ಭಗವಂತಾ… ಅಂತ ಮನದಲ್ಲಿಯೇ ಕೇಳಿಕೊಂಡೆ, ಕಣ್ಣೀರು ಹೊರಬರುವ ಸನ್ನಾಹದಲ್ಲಿತ್ತು.

ಇದು ಈಗ ನಲವತ್ತು ವರ್ಷ ಹಿಂದಿನ ಕಥೆ. ಮಕ್ಕಳಿಲ್ಲದ ನಾಣಿ ಭಟ್ಟ ದಂಪತಿಗಳು ಹೋಮ, ಹವನ, ಪೂಜೆ ಪುನಸ್ಕಾರಗಳನ್ನು ಮಾಡಿ ಮಗುವಿಗಾಗಿ ನಿತ್ಯ ಹಂಬಲಿಸಿದ್ದರು. ಅದೆಷ್ಟು ದೇವರಿಗೆ ಮನಸಾರೆ ನೊಂದು ಹರಕೆ ಕಟ್ಟಿ ಕೊಂಡಿದ್ದರೋ ಗೊತ್ತಿಲ್ಲ. ನಮಗ್ಯಾರಿಗೂ ಹರಕೆಯ ಲೆಕ್ಕವಿಲ್ಲದಿದ್ದರೂ ಲಕ್ಷ್ಮಮ್ಮ ಮಾತ್ರ ಯಾವುದನ್ನೂ ಮರೆತಿರಲಿಲ್ಲ. ಎಲ್ಲವನ್ನೂ ಪುಸ್ತಕವೊಂದರಲ್ಲಿ ಕೆತ್ತಿದ್ದರು. ಪ್ರತೀ ದಿನ ಆ ಪುಸ್ತಕ ತೆಗೆಯುವುದು, ನೋಡುವುದು, ಅದರ ಮೇಲೆ ಕೈಯಾಡಿಸಿ ತನ್ನ ಮಗುವೆಂದೇ ಅಂದುಕೊಂಡು ಎದೆಗಪ್ಪಿ ಆನಂದಭಾಷ್ಪ ಸುರಿಸುವುದು ಇದು ನಿರಂತರವಾಗಿ ನಡೆದುಕೊಂಡು ಬಂದಿತ್ತು. ಆದರೆ ನಿಜವಾದ ಮಗು ಮಾತ್ರ ಆಗಲೇ ಇಲ್ಲ.

ಈಗ ಒಂದೆರಡು ವರ್ಷಗಳ ಕೆಳಗೆ ಯಾರೋ ಸಿಕ್ಕರಂತೆ, ಹೀಗೆ ಮಾತನಾಡುತ್ತಾ ಹರಕೆಯ ಸುದ್ಧಿ ಬಂದು “ ಫಲ ದೊರಿಲೆ ಅಂದ್ರೂ ಹರಕೆ ತೀರ್ಸಕು ಹೇಳ್ತ. ಹರಕೆ ಕಟ್ಟಿಕೊಂಡ್ರೆ ಕೆಲಸ ಆಗ್ತೋ ಬಿಡ್ತೋ ಹರ್ಕೆ ಮಾತ್ರ ತೀರುಸ್ಲೇ ಬೇಕಡ. ನಿಗನೂ ಏನು ದೊಡ್ಡ ದೊಡ್ಡ ಹರಕೆನೂ ಏನು ಕಟ್ಟಿಕಿಳ್ಯಲ ಹ್ಯಾಂಗೂ…. ಪುರುಸೊತ್ ಇದ್ದಾಗೆಲ್ಲ ತೀರುಸ್ತಾ ಬನ್ನಿ. ಯಂತಕೆ ಸುಮ್ನೆ ಇಂತದ್ದೆಲ್ಲ ಜನ್ಮ ಜನ್ಮಕ್ಕೂ ಗಂಟು ಹಾಕಿತ್ತಾ ಹೋಗ್ತಡ. ನಿಗಕ್ಕೂ ವಯಸ್ಸಾತು ಹ್ಯಾಂಗೂ… ಇನ್ನೂ ತಡ ಮಾಡಡಿ.’ ಅಂತ ಹೇಳಿ ಹೊರು ಹೋದರಂತೆ ಆ ವ್ಯಕ್ತಿ. ಈಗ ಶುರುವಾಯಿತು ನೋಡಿ ವಯೋವೃದ್ಧರ ಪರದಾಟ. ಪುಸ್ತಕ ತೆಗೆದು ನೋಡಿ ಒಂದೊಂದೇ ಹರಕೆಗಳನ್ನು ತೀರಿಸಿ ಬರಲು ತೀರ್ಮಾನಿಸಿದರು ದಂಪತಿಗಳು.

ಮರುದಿನವೇ ಬಟ್ಟೆಗಳನ್ನು ಜೋಡಿಸಿಕೊಂಡು ಹೊರನಾಡಿನತ್ತ ಪಯಣ ಬೆಳೆಸಿದರು. ಅನ್ನಪೂರ್ಣೆಯ ಸನ್ನಿಧಾನದಲ್ಲಿ ಅನ್ನದಾನ ಮಾಡಿ, ತಿರುಪತಿಯಲ್ಲಿ ಮುಡಿಕೊಟ್ಟು, ಮೇಲುಕೋಟೆಯ ಚೆಲುವನಾರಾಯಣನಿಗೆ ಅಲಂಕಾರ ಸೇವೆ ಮಾಡಿ, ಸುಭ್ರಮಣ್ಯನ ಹುಂಡಿಗೆ ಆಗಿನ ಕಾಲದಲ್ಲಿಯೇ ಹೊತ್ತ ಹರಕೆಯಂತೆ ನೂರು ರೂಪಾಯಿಗಳನ್ನು ಹಾಕಿ, ಕಾಳಹಸ್ತಿ, ರಾಮೇಶ್ವರ, ಗೋಕರ್ಣ, ಮುರುಡೇಶ್ವರ ಎಲ್ಲೆಡೆಯೂ ತೀರ್ಥ ಸ್ನಾನ ಮಾಡಿ, ಶುದ್ಧ ಮನಸ್ಸಿನಿಂದ ಮುಂದಿನ ಜನ್ಮದಲ್ಲಿಯಾದರೂ ಮಕ್ಕಳ ಭಾಗ್ಯ ಕರುಣಿಸುವಂತೆ ಬೇಡಿಕೊಂಡು ಕಡೆಯದಾಗಿ ಹರಕೆ ಕಟ್ಟಿಕೊಂಡ ಪೇಟ ಬೆಟ್ಟದ ಸ್ವಾಮೀಜಿಯ ಬಳಿ ಬಂದರು.

‘ಬನ್ನಿ, ತುಂಬಾ ವರ್ಷಗಳೇ ಆಗಿತ್ತು ಇಲ್ಲಿಗೆ ಬರದೆ, ಎಲ್ಲರೂ ಕ್ಷೇಮ ತಾನೆ ಎಂದು ಸ್ವಾಮೀಜಿ ಕೇಳಿದರು. ‘ಹು… ತಮ್ಮ ಆಶೀರ್ವಾದದಿಂದ ಎಲ್ಲರೂ ಕ್ಷೇಮವೇ. ಈಗ ನಲವತ್ತು ವರ್ಷಗಳ ಹಿಂದೆ ನಾವು ಸಂತಾನ ಭಾಗ್ಯಕ್ಕಾಗಿ ತಮ್ಮ ಸನ್ನಿಧಾನದಲ್ಲಿ ಹರಕೆ ಹೊತ್ತಿದ್ದೆವು. ನಮ್ಮ ತೋಟದಲ್ಲಿ ಬೆಳೆದ ಬೆಳೆಯಲ್ಲಿ ಒಂದಷ್ಟು ಮತ್ತು ಐವತ್ತು ಕೆಜಿ ಬಂಗಾರ ಕೊಡುತ್ತೇವೆ ಎಂದು ಹರಕೆ ಕಟ್ಟಿಕೊಂಡೆದ್ದೆವು. ಎಷ್ಟು ಹರಕೆ ಹೊತ್ತರೂ ನಮಗೆ ಮಕ್ಕಳಾಗಲೇ ಇಲ್ಲ.... ಆದರೂ ಹರಕೆ ತೀರಿಸಬೇಕು ಎಂದು ಯಾರೋ ಹೇಳಿದರು. ಅದಕ್ಕೆ ಬಂದಿದ್ದೇವೆ. ತೀರಿಸಿಹೋಗೋಣ ಅಂತ’ ಎಂದು ದೀನನಾಗಿ ನುಡಿದರು ನಾಣಿ ಭಟ್ಟರು.

“ ಓ ಹೌದಾ…. ಇರಲಿ, ಇವತ್ತೇ ತೀರಿಸಿ ಹೋಗುತ್ತೀರೋ ಅಥವಾ ಇನ್ನೊಂದು ದಿನ ಬರುತ್ತೀರೋ?” ಕೇಳಿದರು ಸ್ವಾಮೀಜಿ. ‘ಗುರುವರ್ಯ ನಮಗೆ ವಯಸ್ಸಾಯಿತು. ಇನ್ನು ಓಡಾಡುವುದು ಕಷ್ಟ. ಇವತ್ತೇ ತೀರಿಸಿ ಹೋಗುತ್ತೇವೆ. ಬೆಳೆಯನ್ನು ನಾಳೆ ತಮ್ಮವರು ಯಾರಾದರೂ ಬಂದರೆ ಕೊಟ್ಟು ಕಳಿಹಿಸುತ್ತೇನೆ.’ ಎಂದು ನುಡಿದರು. “ ಸರಿ ಹಾಗಾದರೆ ಒಳಗೆ ಹೋಗಿ ಅಲ್ಲಿ ನಮ್ಮವನೊಬ್ಬ ಇರುತ್ತಾನೆ ಅವನ ಬಳಿ ನೀವು ಬಂಗಾರ ಕೊಟ್ಟು ಹೋಗಿ “ ಎಂದು ಸ್ವಾಮೀಜಿ ನುಡಿದರು. ಇಬ್ಬರೂ ದಂಪತಿಗಳು ಕೃತಾರ್ಥ ಭಾವದಿಂದ ಸ್ವಾಮಿಗಳಿಗೆ ನಮಿಸಿ ಒಳ ಬಂದರು.

ವಿಶಾಲವಾದ ಪ್ರಾಂಗಣದಲ್ಲಿ ತಂಪಾದ ವಾತಾವರಣವಿತ್ತು. ಜಪ ಮಾಲೆ ಹಿಡಿದು ಧ್ಯಾನಾಸಕ್ತರಾದ ಕೆಲ ಮಂದಿ ಒಂದು ಕಡೆ, ಭಗವಂತನ ನಾಮ ಸ್ಮರಣೆ ಮಾಡುತ್ತ ಭಜನೆ ಮಾಡುತ್ತಿದ್ದ ಒಂದಷ್ಟು ಮಂದಿ ಒಂದು ಕಡೆ, ಸ್ವಚ್ಛತೆ ಕಾರ್ಯದಲ್ಲಿ ನಿರತರಾದವರು ಒಂದು ಕಡೆ, ಸುಸ್ತಾಗಿ ದಣಿದು ವಿಶ್ರಮಿಸಿಕೊಳ್ಳುತ್ತಿದ್ದ ಕೆಲ ಮಂದಿ ಒಂದು ಕಡೆ, ಹೀಗೆ ನೋಡುತ್ತಾ ಮುಂದೆ ಸಾಗುತ್ತಿದ್ದ ದಂಪತಿಗಳಿಗೆ ದೃಢ ಕಾಯದ ವ್ಯಕ್ತಿ ಕಂಡ, ಪದ್ಮಾಸನ ಹಾಕಿ ಕುಳಿತುಕೊಂಡು ಎದುರಿಗೆ ಒಂದು ದೊಡ್ಡ ಪುಸ್ತಕ ಹಿಡಿದು ಏನೋ ನೋಡುತ್ತಾ ಕುಳಿತಿದ್ದ. ಸ್ವಾಮಿಗಳು ಹೇಳಿದ ವ್ಯಕ್ತಿ ಆತನೇ ಎಂದು ಗೊತ್ತಾದ ನಾಣಿಭಟ್ಟ ದಂಪತಿಗಳು ಆತನ ಎದುರು ಬಂದರು.

‘ಹೀಗೆ ಹರಕೆ ಇತ್ತು ತೀರಿಸಲು ಬಂದೆವು,,,,, ಸ್ವಾಮಿಗಳು ನಿಮ್ಮನ್ನು ಕಾಣಲು ಹೇಳಿದ್ದಾರೆ…….’ ಎಂದು ಎಲ್ಲಾ ವಿವರಣೆ ನೀಡಿದರು. “ ಓಹೋ ಹಾಗೋ… ಸರಿ ಸರಿ…. ಬಂಗಾರದ ಹರಕೆ ಇತ್ತೋ…. ಎಷ್ಟು….? ‘ ರಾಗ ಎಳೆದ ವ್ಯಕ್ತಿ. “ ನಲವತ್ತು ವರ್ಷದ ಹಿಂದೆ ಕಟ್ಟಿ ಕೊಂಡದ್ದು ಐವತ್ತು ಕೆ.ಜಿ ಬಂಗಾರ ಸ್ವಾಮಿ…’ ವಿನಯದಿಂದ ನುಡಿದರು. “ ಎಷ್ಟು ತಂದಿದ್ದೀರಿ?’ “ಐವತ್ತು ಕೆ. ಜಿ ತಂದಿದ್ದೇವೆ ಸ್ವಾಮಿ’ ‘ ಓ ಹೋ ನಿಮಗೆ ವಿಷಯ ತಿಳಿದಿಲ್ಲವೇ? ಹರಕೆ ಹನ್ನೆರಡು ವರ್ಷ ಅಂತ ಹೇಳ್ತಾರೆ. ಹನ್ನೆರಡು ವರ್ಷದ ಮೇಲೆ ತೀರಿಸುವುದಾದರೆ ಕಟ್ಟಿಕೊಂಡ ಹರಕೆ ಗಿಂತಲೂ ಹೆಚ್ಚು ತೀರಿಸ ಬೇಕು. ನೀವು ತಂದ ಐವತ್ತು ಕೆ.ಜಿ ಗೆ ಇನ್ನಷ್ಟು ಸೇರಿಸಿ ನೀಡಿ.’ ಎಂದು ಕಡ್ಡಿ ಮುರಿದಂತೆ ಮಾತನಾಡಿ ಬಿಟ್ಟ. ಯಾರೂ ದಿಕ್ಕಿಲ್ಲದ ಈ ದಂಪತಿಗಳು ಈಗಾಗಲೇ ಹರಕೆ ತೀರಿಸಲು ಬಹಳಷ್ಟು ಖರ್ಚು ಮಾಡಿದ್ದರು. ಕೊನೆಗೆ ಐವತ್ತು ಕೆ.ಜಿ ಬಂಗಾರದ ಹರಕೆ ತೀರಿಸಲು ಸಾಲ ಮಾಡಿ ಬಂಗಾರ ತಂದಿದ್ದರು. ಈಗ ಅದರ ಜೊತೆ ಮತ್ತಷ್ಟು ಸೇರಿಸುವುದು ಎಂದರೆ ಹೇಗೆ ಸಾಧ್ಯ? ತಮ್ಮ ಪರಿಸ್ಥಿತಿ ಹೇಳಿದರೆ ಆತ ಕೇಳುವ ಸ್ಥಿತಿಯಲ್ಲಿಯೇ ಇಲ್ಲ. ಕೊನೆಗೆ ಒಪ್ಪಿಸಿ ನಾಳೆ ಮತ್ತೆ ಬರುವುದಾಗಿ ಹೇಳಿ ಹೋದರು. ಮನೆಗೆ ಬಂದವರೇ ಬಂಗಿ ಶೆಟ್ಟರ ಬಳಿ ಮನೆಯನ್ನು ಅಡವಿಟ್ಟು ಸಾಲ ಪಡೆದರು. ಆದರೆ ಬಂಗಾರದ ಹರಕೆ ತೀರಲಿಲ್ಲವಲ್ಲ, ಕೊನೆಗೆ ತೋಟವನ್ನೂ ಅಡವಿಟ್ಟು ಬಂಗಾರದ ಹರಕೆ ತೀರಿಸಿದರು. ತೋಟ, ಮನೆ ಅಡವಿಟ್ಟ ವೃದ್ಧರು ಈ ಇಳಿ ವಯಸ್ಸಿನಲ್ಲಿ ಸಾಲದ ಬಾರ ಹೊರಲಾರದೆ ಹೊರತೊಡಗಿದರು.

ದಿನ ಕಳೆಯುತ್ತಿದೆ, ತೆಗೆದುಕೊಂಡ ಸಾಲ…. ಬಡ್ಡಿ, ಚಕ್ರಬಡ್ಡಿಗಳಾಗಿ ಬೆಳೆಯುತ್ತಲೇ ಇದೆ, ಯಾರದ್ದೋ ಮನೆಯಲ್ಲಿ ಕಾರ್ಯಕ್ರಮಗಳಾದರೆ ಪಡಿಚಾಕರಿಗೆಂದು ಹೋಗಿ ಹೊಟ್ಟೆ ಹೊರಿದುಕೊಳ್ಳುತ್ತಿರುವ ಲಕ್ಷ್ಮಮ್ಮನ್ನನ್ನು ನೋಡಿದರೆ ಕರುಳು ಕಿವುಚುತ್ತಿದೆ. ಯಾರಾದರೂ ಸಹಾಯ ಮಾಡುವುದೆಂದರೂ ಅವರ ಸಾಲ ತೀರಿಸುವಷ್ಟು ಶ್ರೀಮಂತರು ಯಾರೂ ಇಲ್ಲವಲ್ಲ ಊರಿನಲ್ಲಿ, ಹರಕೆ ಯಾಕಾದರೂ ಕಟ್ಟಿಕೊಂಡರೋ….

ಬಂಗಿ ಶೆಟ್ಟರು ಈ ಬಾರಿ ಪಟ್ಟು ಹಿಡಿದೇ ಬಿಟ್ಟಿದ್ದರು. ನಾಣಿ ಭಟ್ಟರಿಗೂ ಬೇರೆ ದಾರಿ ಇರಲಿಲ್ಲ. ಊರು ಬಿಡುವುದೊಂದೇ ಮಾರ್ಗ. ಊರಿನಲ್ಲಿ ಯಾರಿಗೂ ಅವರು ಊರು ಬಿಡುವುದು ಇಷ್ಟವಿರಲಿಲ್ಲ. ಸುದ್ಧಿ ಹರಡಿ ಬಿಟ್ಟಿತು. ಎಲ್ಲರೂ ಬಂದರು. ಇರುವಷ್ಟು ದಿನ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳಿ ಎಂದು ಎಲ್ಲರೂ ಕರೆದವರೇ… ಆದರೆ ಸ್ವಾಭಿಮಾನಿ ದಂಪತಿ…ಸುತರಾಮ್ ಒಪ್ಪಲಿಲ್ಲ. ಒಂದೆರಡು ಬಟ್ಟೆಗಳನ್ನು ಕಟ್ಟಿಕೊಂಡು ನಡೆದೇ ಬಿಟ್ಟರು. ಹುಟ್ಟಿ, ಬೆಳೆದು, ಆಡಿ ನಲಿದ ಮನೆ ನಾಣಿಭಟ್ಟರಿಗೆ, ಸೊಸೆಯಾಗಿ ಬಲಗಾಲಿಟ್ಟು ಮನೆಗೆ ಬಂದು ನಿತ್ಯ ಅನ್ನದಾನ ಮಾಡಿದ ಆ ಪುಣ್ಯದ ಮನೆ ಲಕ್ಷ್ಮಮ್ಮನ ಪಾಲಿಗೆ…. ಇನ್ನು ಇಬ್ಬರಿಗೂ ಅದಿಲ್ಲ. ಊರು ಮನೆ ಎಲ್ಲವನ್ನೂ ಬಿಟ್ಟು ನಡೆದೇ ಬಿಟ್ಟರು. ಕತ್ತಲಾಯಿತು ಜಗತ್ತು, ಕತ್ತಲಾಯಿತು ಊರು.

ಇಷ್ಟು ನಡೆದ ಮೇಲೆ ನಮ್ಮೂರಿನಲ್ಲಿ ಯಾರೂ ಕೂಡಾ ಹರಕೆ ಎಂಬ ಹೆಸರೇ ಎತ್ತುವುದಿಲ್ಲ, ಒಂದು ವೇಳೆ ಹೆಸರು ಕೇಳಿದರೂ ಬೆಚ್ಚಿಬೀಳುತ್ತಾರೆ.

ಊರು ಬಿಟ್ಟಮೇಲೆ ನಾಣಿಭಟ್ಟರು ಎಲ್ಲಿದ್ದಾರೆ ಹೇಗಿದ್ದಾರೆ ಒಂದೂ ಗೊತ್ತಿಲ್ಲ. ಅವರನ್ನು ನೆನೆಸಿಕೊಂಡರೆ ಸಾಕು ಕಣ್ಣು ತುಂಬಿ ಬರುತ್ತದೆ. ಹೀಗೆ ನಮ್ಮ ಕೇರಿಯವರೆಲ್ಲ ನಿಂತು ಮಾತನಾಡುತ್ತಿದ್ದಾಗ ಗುಡುಗುಡುನೆ ಓಡಿ ಬಂದರು ರತ್ನಕ್ಕ…..” ಏನಾತೆ ರತ್ನಕ್ಕಾ?’ ‘ ‘ಅಯ್ಯೋ ನಾನು ಒಂದು ಮರ್ತೆ ಬಿಟ್ಟಿದ್ದಿ. ಅಯ್ಯಪ್ಪಾ ಸದ್ಯ ಹುಳಿ ಮಜ್ಜಿಗೆ ಹರ್ಕೆ ಕಟ್ಟಿಕಿಳ್ಳಲ್ಲೆ ನಾನು… ಕೊನಿಗೆ ನಮ್ಮನೆಲಿ ಇರ ಒಂದು ದನನೇ ಕೊಡಕು ಹೇಳಿ ಮಾಡ್ತಿದ್ದ. ಸದ್ಯ ನೆನಪಾತು…” ಅಂತ ಹೇಳಿ ಮತ್ತೆ ಗುಡುಗುಡುನೆ ಓಡಿದರು… ಎಲ್ಲರೂ ಅವಳೋದ ದಾರಿಯನ್ನೇ ನೋಡುತ್ತಾ ನಿಂತುಬಿಟ್ಟರು.



Rate this content
Log in

Similar kannada story from Tragedy