ಬಚ್ಚಲಮನೆಯ ಅಳು ನನ್ನದೇ
ಬಚ್ಚಲಮನೆಯ ಅಳು ನನ್ನದೇ
ಮೊನ್ನೆ ಬಚ್ಚಲಿಗೆ ಹೋದವಳಿಗೆ ಅಳುವ ಶಬ್ದ ಕೇಳಿಸಿತು. ಮಗಳು ಎದ್ದಳೇನೋ ಎಂದುಕೊಂಡೆ. ಇಲ್ಲ ಇದು ಮಗಳ ಅಳುವಿನ ಸದ್ದಲ್ಲ. ಯಾರೋ ನನ್ನ ಅಣಕಿಸುವಂತೆ ಅಳುತ್ತಿದ್ದ ಅಳು ಅದು. ಹೌದು ಅದು ನನ್ನ ಭ್ರಮೆ. ಆದರೂ ಬಚ್ಚಲ ಮನೆ ಎಂಬ ಸಂಗಾತಿ ಆಗಾಗ ನನ್ನೊಡನೆ ಮಾತನಾಡುತ್ತಲೇ ಇರುತ್ತದೆ. ಅದು ಮೊನ್ನೆ ಹಿಂದೊಮ್ಮೆ ನಾನು ಅತ್ತದ್ದನ್ನೇ ಅತ್ತು ಅಣಕವಾಡಿತ್ತು. ಬದುಕಿದ್ದಕ್ಕೆ ನೋಡು ಇವತ್ತು ನಿನ್ನಲ್ಲಿ ಈ ನಗು ಎಂದು ನನ್ನ ಬೆನ್ನು ತಟ್ಟಿತು.
ಇದಕ್ಕೆ ಕಥೆ ಹೇಳಬೇಕೋ ಜೀವನ ಹೇಳಬೇಕೋ ಗೊತ್ತಿಲ್ಲ. ಆದ್ರೆ ಒಂದಂತೂ ಸತ್ಯ ... ಕಥೆಯೊಳಗಿನ ಜೀವನ ..... ಜೀವನದೊಳಗಿನ ಕಥೆ ಇದು..
. ಕೆಲವೊಮ್ಮೆ ಕೆಲವು ಘಟನೆಗಳು ನಮ್ಮನ್ನು ಎಷ್ಟು ಗಟ್ಟಿ ಮಾಡಿ ಬಿಡುತ್ತವೆ ಎಂದರೆ... ಹಿಂದಣ ಹೆಜ್ಜೆಯನ್ನ ಒಮ್ಮೆ ತಿರುಗಿ ನೋಡದರೆ ಅದು ನನ್ನದಾ....? !!!! ಎಂದು ಆಶ್ಚರ್ಯಪಡುವಷ್ಟು ನಮ್ಮ ಹೆಜ್ಜೆ ಗುರುತುಗಳು ಅಳವಾಗಿರುತ್ತವೆ.
ಡಿಗ್ರಿ ಓದುತ್ತಿದ್ದೆ, ಮೊದಲ ವರ್ಷ ಮೊದಲ ಸೆಮಿಸ್ಟರ್, ನನಗೆ ಇಂಗ್ಲಿಷ್ ಮೊದಲಿನಿಂದಲೂ ಕಷ್ಟ.... ಅಂತದ್ದರಲ್ಲಿ ಹೇಗೋ ಓದಿಕೊಂಡು ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದೆ. ಪರೀಕ್ಷೆ ಬರೆದು ಹೊರ ಬಂದವಳಿಗೆ ಆಘಾತ ಆಯ್ತು ಪೇಪರ್ ಔಟ್ ಆಗಿದೆ... ಮತ್ತೆ ಪರೀಕ್ಷೆ ಮಾಡಲಾಗುವುದು ಎಂದು ಅನೌನ್ಸಮೆಂಟ್ ಬಂತು... ಮತ್ತೆ ಬರೆಯಬೇಕಾ ಮತ್ತೆ ಓದಬೇಕಾ ಆಕಾಶ ಕಳಚಿ ಬಿದ್ದ ಅನುಭವ ಆಯ್ತು. ಕೊನೆಗೆ ಮತ್ತೆ ಓದಿ ಪರೀಕ್ಷೆ ಬರೆದೆ.. ಸ್ವಲ್ಪ ದಿನಕ್ಕೆ ಫಲಿತಾಂಶ ಬಂತು ನಾನು ಫೇಲ್ ಆಗಿದ್ದೆ. ಕೊನೆಗೆ ಮೂರುನೂರು ರೂಪಾಯಿ ಕಟ್ಟಿ ಎರಡನೇ ಸೆಮಿಸ್ಟರ್ ನಲ್ಲಿ ಮತ್ತೆ ಬರೆದೆ ಮತ್ತೆ ಫೇಲ್ ಆದೆ.... ಕೊನೆಗೆ ಮೂರನೇ ಸೆಮಿಸ್ಟರ್ ನಲ್ಲಿ ಮತ್ತೆ ದುಡ್ಡು ಕಟ್ಟಿ ಪರೀಕ್ಷೆ ಬರೆದೆ ಮತ್ತೆ ಫೇಲ್. ಸಾಕು ಜೀವನ ಅನ್ನಿಸೋ ಅಷ್ಟು..ಹತಾಶೆ ನನಗೆ....ಪ್ರತೀ ಬಾರಿ ಪರೀಕ್ಷೆಗೆ ದುಡ್ಡು ಕಟ್ಟುವಾಗಲೂ ತೋಟಕ್ಕೆ ಹೋಗಿ ಕೊಳೆ ಅಡಿಕೆ ಹೆಕ್ಕಿ ತಂದು ಮೌನವಾಗಿ ನೊಂದುಕೊಳ್ಳುತ್ತಿದ್ದ ಅಪ್ಪ ಕಣ್ಣ ಮಂದೆ ಬರುತ್ತಿದ್ದರು, ನನ್ನ ಪರೀಕ್ಷೆಗೆ ಫೀಸು ಕಟ್ಟಬೇಕೆಂದು ಸೆಕೆಯಲ್ಲಿಯೂ ಬೆಂಕಿ ಮುಂದೆ ಕುಳಿತು ಹೂರಣದ ಹೋಳಿಗೆ ಮಾಡಿ ಮಾರಾಟ ಮಾಡುತ್ತಿದ್ದ ತಾಯಿ ಕಣ್ಣ ಮಂದೆ ಬರುತ್ತಿದ್ದರು..... ಕುಗ್ಗಿ ಹೋಗಿದ್ದೆ...ಆತ್ಮ ಹತ್ಯೆ ಮಾಡಿಕೊಂಡು ಬಿಡೋಣ ಎನಿಸಿತು.... ನೇಣ ಕುಣಿಕೆಯ ವರೆಗೆ ಹೋದವಳು ಮರಳಿ ಬಂದೆ...ಕೊನೆಗೆ ನಾಲ್ಕನೇ ಸೆಮಿಸ್ಟರ್ ಹೊತ್ತಿಗೆ ಮನಸ್ಸು ಗಟ್ಟಿಯಾಗಿತ್ತು... ಇದು ಕಡೆಯ ಬಾರಿ ಬರೆಯುವ ಇಂಗ್ಲೀಷ್ ಪರೀಕ್ಷೆ ಪಾಸ್ ಆದರೆ ಆಯಿತು ಇಲ್ಲವೆಂದರೆ ಸೆಕೆಂಡ್ ಪಿಯುಸಿ ಅಂಕದ ಮೇಲೆ ಉದ್ಯೋಗ ಏನಾದರೂ ಹುಡುಕಿದರೆ ಆಯಿತು ಎಂದುಕೊಂಡು ಪರೀಕ್ಷೆಗೆ ಹಾಜರಾದೆ.. ಆದರೆ ಉದ್ಯೋಗ ಅಷ್ಟೊಂದು ಸುಲಭವಾಗಿ ಸಿಕ್ಕಿ ಬಿಡುವಂತದ್ದೇ? ಪರೀಕ್ಷೆ ಬರೆಯಬೇಕು, ಸಂದರ್ಶನಕ್ಕೆ ಹಾಜರಾಗಬೇಕು, ಅದರಲ್ಲಿ ತೇರ್ಗಡೆಯಾಗಬೇಕು. ಕೆಲವೊಂದು ಉದ್ಯೋಗದಲ್ಲಿ ಹಣ ಕಟ್ಟಬೇಕು. ಹಣ ಕಟ್ಟಿದರೆ ಉದ್ಯೋಗ ಖಾಯಂ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಅದು.... ಇದು... ಹಾಗೆ... ಹೀಗೆ.... ಎಂಬ ಮಾತುಗಳೇ ನನಗೆ ಕೇಳಿಬರುತ್ತಿತ್ತು. ಇಂತದ್ದನ್ನೆಲ್ಲ ಹೇಳಿ ಹೆದರಿಸುವ ಮಂದಿಯೂ ಏನು ಕಡಿಮೆ ಇರಲಿಲ್ಲ. ಭಯ ಇತ್ತು. ಮಾಡು ಇಲ್ಲವೆ ಮಡಿ, ಪರೀಕ್ಷೆ ಬರೆ ಇಲ್ಲ ಮನೆಗೆ ಹೋಗು. ಮನೆಗೆ ಹೋಗಿ ಸುತ್ತಲಿನವರ ಅವಮಾನದ ನೋಟ ಎದುರಿಸು ಇಲ್ಲ ಸಾಯಿ. ಎಂಬಂತ ಸ್ಥಿತಿ ನನ್ನದು. ಅದೇನೋ ಗೊತ್ತಿಲ್ಲ ಮನಸ್ಸು ಬೇಡ ಬೇಡ ಎಂದು ಎಷ್ಟೇ ಹೇಳಿದರೂ ನನ್ನ ಆಲೋಚನೆ ಮತ್ತೆ ಮತ್ತೆ ಸಾವಿನ ದಾರಿ ಹುಡುಕುತಿತ್ತು. ಸತ್ತರೆ? ಮತ್ತೆ ಅದೇ ಪ್ರಶ್ನೆಗಳು ಸಹಜ ಸಾವಾದರೆ ಒಂದು ರೀತಿ, ನಾನೇ ತಂದು ಕೊಂಡ ದುರಂತವಾದರೆ ಇನ್ನೊಂದು ರೀತಿ. ಮನಸ್ಸು ಸಾವಿನ ಆಲೋಚನೆಯ ಸುತ್ತ ಗಿರಿಕಿ ಹೊಡೆಯ ತೊಡಗಿತು. ಒಂದು ದಿನ ಬಚ್ಚಲ ಮನೆಯ ಹೊಕ್ಕೆ. ಅತ್ತುಬಿಟ್ಟೆ. ಮನಸಿನಲ್ಲಿನ ಸಾವಿನ ಆಲೋಚನೆಗಳು ಬಚ್ಚಲ ನೀರಿನಲ್ಲಿ ಕೊಚ್ಚಿ ಹೋಗುವಷ್ಟು ಅತ್ತೆ. ( ಈಗಲೂ ಮನಸ್ಸಿಗೆ ನೋವಾದಾಗ ಬಚ್ಚಲ ಮನೆಯೇ ನನಗೆ ಆಪ್ತವಾಗುವಂತದ್ದು. ಏಕೆಂದರೆ ಬಚ್ಚಲಮನೆಯ ಗೋಡೆಗಳು ನನ್ನ ಪಾಲಿಗೆ ಯಾವಾಗಲೂ ಮೌನವಾಗಿಯೇ ಇರುತ್ತವೆ. ನಾನು ಹೇಳಿದ್ದನ್ನು ಕೇಳಿಸಿಕೊಂಡು. ಯಾರ ಬಳಿಯೂ ಕೊಂಬು ಬಾಲ ಸೇರಿಸಿ ಹೇಳುವುದೇ ಇಲ್ಲ. ಅದಕ್ಕೆ ನಾನು ಸ್ನಾನ ಮಾಡುವಾಹ ಹೆಚ್ಚು ಸಮಯ ಬಚ್ಚಲ ಮನೆಯಲ್ಲಿ ಕಳೆಯುವುದು. ನನ್ನ ಮನದ ನಗು ಅಳುವಿಗೆ ಬಚ್ಚಲ ಮನೆಯೇ ಸಂಗಾತಿ.) ಅತ್ತೆ.... ಅತ್ತೆ... ಮನಸ್ಸು ಹಗುರಾಗುವಷ್ಟು ಅತ್ತೆ. ನನ್ನ ಅಳುವಿನ ಫಲಿತವೋ ಅಥವಾ ಬಚ್ಚಲ ಮನೆಯ ಗೋಡೆಗಳ ಹಾರೈಕೆಯೋ ಅದೃಷ್ಟವೋ ಏನೋ ಪಾಸ್ ಆಗಿ ಬಿಟ್ಟೆ... ಇದು ನನ್ನನ್ನು ಎಷ್ಟು ಗಟ್ಟಿ ಮಾಡಿತು ಎಂದರೆ ಮುಂದೆ ಬಂದಿದ್ದ ಅದೆಷ್ಟೋ ಜೀವನದ ಪರೀಕ್ಷೆಗಳನ್ನು ದೈರ್ಯವಾಗಿ ಎದಿರಿಸಲು ಪ್ರೇರಣೆಯಾಯಿತು.
