ನಾಲ್ಕು ಗೋಡೆಯ ನಡುವೆ
ನಾಲ್ಕು ಗೋಡೆಯ ನಡುವೆ
ನಾಲ್ಕು ಗೋಡೆ..... ಹೆಸರು ಕೇಳಿದರೆ ಒಂದು ಕ್ಷಣ ಬೆಚ್ಚಿಬೀಳುತ್ತೇನೆ.... ಹಾಗೆಯೇ ಸಾವರಿಸಿಕೊಂಡು ಹೊಸ ಬದುಕಿನ ಭರವಸೆಯ ಹೊಸ್ತಿಲ ತುಳಿದದ್ದನ್ನು ನೆನೆದು ನಿಟ್ಟುಸಿರು ಬಿಡುತ್ತೇನೆ.
ಅದು ನನಗೆ ಖಾಸಗೀ ವಾಹಿನಿಯೊಂದರಲ್ಲಿ ಕೆಲಸ ಸಿಕ್ಕ ವರ್ಷ... ಆ ವರ್ಷವೇ ವಿವಾಹವೆಂಬ ಬಂಧನವನ್ನೂ ನನ್ನ ಪಾಲಿಗೆ ನಾನೇ ತಂದು ಕೊಂಡೆ. ನಾನೇ ತಂದು ಕೊಂಡೆ ಎಂದರೆ ತಪ್ಪು ಭಾವಿಸ ಬೇಡಿ ನಾನು ಪ್ರೀತಿಸಿದ ಹುಡುಗ ಎಂದು ಮನೆಯವರು ಮದುವೆ ಮಾಡಿಕೊಟ್ಟಿದ್ದರು. ಅಕ್ಕನಿಗಿಂತ ಮೊದಲ ಮದುವೆ... ಪ್ರೀತಿ ಗೆದ್ದ ಖುಷಿಯಲ್ಲಿ ಹಸೆಮಣೆ ಏರುತ್ತಿದ್ದೆನೇನೋ...ಆದರೆ....ಹೆತ್ತವಳ ಕಣ್ಣೀರು, ಒಡಹುಟ್ಟಿದವಳ ಒಳಗೊಳಗಿನ ಸಂಕಟ, ಜನ್ಮದಾತನ ವ್ಯಕ್ತಪಡಿಸಲಾರದ ಮೌನ, ಇವೆಲ್ಲ ನನ್ನ ಮನಸ್ಸನ್ನು ವ್ಯಾಕುಲಗೊಳಿಸಿಬಿಟ್ಟಿತ್ತು. ಮದುವೆಯ ದಿನ... ಬ್ಯೂಟಿಪಾರ್ಲರ್ ನವರು ಬಂದಿದ್ದರು ನನ್ನನ್ನು ಸುಂದರವಾಗಿ ಮದುವೆಗೆ ತಯಾರು ಮಾಡಲು... ಮಹಡಿ ಮೇಲಿನ ಕೋಣೆ... ಹಳೆಯ ಮನೆಯಾದ್ದರಿಂದ ಅಷ್ಟೊಂದು ಬೆಳಕು ಬರುವುದಿಲ್ಲ ಅಲ್ಲಿ ನಾನು ತಯಾರಾಗುತ್ತಿದ್ದೆ.... ಆ ಕೋಣೆಯ ಆ ನಾಲ್ಕು ಗೋಡೆಗಳು ನನಗೆ ಅಪರಿಚಿತವಾದ ಭಾವ... ನನ್ನ ನೋಡಿ ಮುಖಕ್ಕೆ ಉಗಿದ ಭಾವ.... ಅಟ್ಟಹಾಸದಿ ನಕ್ಕಂತೆ ಭಾಸವಾಗುತ್ತಿತ್ತು...ಛೆ.... ಅಷ್ಟೊಂದು ಆತುರವೇ ಮದುವೆಗೆ ಎಂದು ಪದೇ ಪದೇ ಆ ನಾಲ್ಕು ಗೋಡೆಗಳು ನನಗೆ ಕೇಳುತ್ತಿರುವಂತೆ ಭಾಸವಾಗುತ್ತಿತ್ತು. ಕಣ್ಣೀರು ಬರುತ್ತಿತ್ತೇನೋ ಆದರೆ ಅಷ್ಟರಲ್ಲಾಗಲೇ ಅತ್ತು ಅತ್ತು ಕಣ್ಣೀರು ಬತ್ತಿ ಹೋಗಿತ್ತು ನನಗೆ. ಅಂತೂ ಮದುವೆ ಮಗಿದಿತ್ತು. ಮತ್ತೊಂದು ಮನೆಯ ನಾಲ್ಕು ಗೋಡೆಗಳು ನನಗಾಗಿ ಕಾಯುತ್ತಿತ್ತು. ಹೊಸ ಬಾಳ ಕನಸಿನ ಸೇರೊದ್ದು ಆ ನಾಲ್ಕು ಗೋಡೆಯ ಒಳಗೆ ಪ್ರವೇಶ ಪಡೆದಿದ್ದೆ. ಕೊನೆಗೆ ನೌಕರಿಯ ನಿಮಿತ್ತ ಬೆಂಗಳೂರಿನ ನಾಲ್ಕು ಗೋಡೆಯ ಬಾಡಿಗೆ ಮನೆಗೆ ಪ್ರವೇಶ ಪಡೆದೆ.
ಮದುವೆಯಾದ ಹೊಸತು, ಮನೆ, ನೌಕರಿ ಎರಡನ್ನೂ ನಿಭಾಯಿಸಲು ಹರ ಸಾಹಸ ಪಟ್ಟೆ. ಪ್ರೀತಿಸಿದ ಹುಡುಗನೇ ಆದರೂ ಮನಸ್ಥಾಪಗಳಿಗೇನೂ ಕಡಿಮೆ ಇರಲಿಲ್ಲ... ನೆಂಟರ ಮನೆಯ ಮಗನಾದರೂ ಇಬ್ಬರ ಸಂಪ್ರದಾಯಗಳೂ ಬೇರೆ ಬೇರೆಯೆ.. ನಾನು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಹಾಸ್ಟೆಲ್ ಸೇರಿದವಳು. ಕೆಲವು ಸಂಪ್ರದಾಯಗಳ ಬಗ್ಗೆ ನನಗೆ ತಿಳಿಯದು. ಅದಕ್ಕೆ ಬಹಳಷ್ಟು ಬಾರಿ ಜಗಳ ಆದದ್ದಿತ್ತು. ನಾನು ಮಾಡಿದ ಅಡುಗೆ ತಿನ್ನದೆ ಆತ ಆಫೀಸಿಗೂ ಹೋದದ್ದಿತ್ತು. ಆಗೆಲ್ಲ ಬಾಡಿಗೆಗೆ ಸಿಕ್ಕ ಆ ಮನೆಯ ನಾಲ್ಕು ಗೋಡೆಗಳೇ ನನಗೆ ಸಮಾಧಾನ ನೀಡುವ ಸಂಗಾತಿಯಾಗುತ್ತಿತ್ತು. ನಂತರದ ದಿನಗಳಲ್ಲಿ ಮನೆ ಮತ್ತು ನೌಕರಿ ಇವೆರಡರ ನಡುವಿನ ತೂಗು ತಕ್ಕಡಿಯಲ್ಲಿ ಮನೆಯೇ ಗೆದ್ದಾಗ ಮನೆಯಲ್ಲಿಯೇ ಉಳಿಯುವಂತೆ ಆಗಿತ್ತು. ನಾನು ನನ್ನವನು ಇಬ್ಬರೇ ಇರುವ ಮನೆ ಅದು. ಗಂಡ ಬೆಳಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟವ ರಾತ್ರಿ ಒಂಬತ್ತಕ್ಕೆ ಮನೆ ಸೇರುತ್ತಿದ್ದ. ಆಗೆಲ್ಲ ಒಂದಷ್ಟು ಹೊತ್ತು ಮನೆ ಕೆಲಸದಲ್ಲಿ ಕಳೆದು ಹೋದರೂ ನಂತರ ನಾಲ್ಕು ಗೋಡೆಯ ನಡುವೆ ನನಗೇ ಕಾಡುವ ಒಂಟಿತನ... ಹಿಂದೊಮ್ಮೆ ಕಾಡಿದಂತೆ ಮತ್ತೆ ಎಲ್ಲಿ ಖಿನ್ನತೆ ನನ್ನ ಕಾಡಿ ಬಿಡುತ್ತೋ ಎಂಬ ಆತಂಕ ನನಗಿದ್ದದ್ದು ಸುಳ್ಳಲ್ಲ. ಆದರೆ ಗಂಡನ ಪ್ರೀತಿ, ಆತನ ಸಹಕಾರ ನಾಲ್ಕು ಗೋಡೆಯ ಒಳಗೇ ನಾನು ಹೊಸರೀತಿಯಿಂದ ಬದುಕಲು ಪ್ರೇರೇಪಿಸಿತು. ಬರವಣಿಗೆಯತ್ತ ಮುಖಮಾಡಿದೆ. ನಾಲ್ಕು ಗೋಡೆಯ ನಡುವೆಯೇ ಕುಳಿತು ಒಂದು ಪುಸ್ತಕವನ್ನೂ ಬರೆದೆ. ಈಗ ನಾಲ್ಕು ಗೋಡೆಯ ನಡುವೆಯೇ ಮುದ್ದಾದ ಮಗಳನ್ನ ಬೆಚ್ಚಗೆ ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದೇನೆ. ಇನ್ನೇನಿದೆ ಹೇಳಿ ನಾಲ್ಕು ಗೋಡೆಯ ನಡುವೆ?
