ಅಯನ ಘೋಶ
ಅಯನ ಘೋಶ

"ನಂದ ಗೋಕುಲಕ್ಕೆ ಬಂದ ಕೃಷ್ಣ ರಾದೆಯನ್ನ ಮಾತನಾಡಿಸದೇ ಹೊರಟು ಹೋದ.ಅರಮನೆ ಫೋಶಾಕಿನಲ್ಲಿ ತುಂಬ ಚಂದ ಕಾಣುತ್ತಿದ್ದ. ಎಲ್ಲರನ್ನೂ ಮಾತಾಡಿಸಿದ... ಬೃಂದಾವನದ, ಯಮುನೆಯ ತೀರದ ಆಟಗಳನ್ನೆಲ್ಲ ನೆನಪಿಸಿಕೊಂಡ.. ಗೋಕುಲದ ಎಲ್ಲರನ್ನ, ಅಂದರೆ ಎತ್ತಿ ಆಡಿಸಿದ, ಬೆಣ್ಣೆ ತಿನ್ನಿಸಿದ, ಬೆದರಿಸಿದ ತಾಯಂದಿರನ್ನ, ಗೋಳು ಹುಯ್ದುಕೊಂಡ ಗೋಪಿಕೆಯರನ್ನ ಕೆನ್ನೆ ತಟ್ಟಿ ಮಾತನಾಡಿಸಿದ. ಅಷ್ಟು ದೊಡ್ಡವನಾದರೂ ಯಶೋದೆಯ ಮಡಿಲಲ್ಲಿ ಮತ್ತೆ ಕೂತು ಕೈ ತುತ್ತು ತಿಂದ.ರಾದೆಯನ್ನು ಮಾತ್ರ ಮಾತನಾಡಿಸಲೇ ಇಲ್ಲ.. ಹಾಗೇ ಹೊರಟು ಹೋದ.ರಾದೆ ಅವಳ ಗುಡಿಸಲಿನಲ್ಲಿ ಬಿಮ್ಮನೆ ಕೂತಿದ್ದಾಳೆ. ಅಳುತ್ತಿಲ್ಲ. ಭಾವ ರಹಿತವಾಗಿದೆ ಅವಳ ಮುಖ.. ಅದು ಅವಳಿಗೆ ಆಗಬೇಕಾದ್ದೇ...''
ಎಂದು ಗೆಳೆಯ ಚೆನ್ನ ಬಂದು ಹೇಳಿದಾಗ ನನಗೆ ಆಗಿದ್ದು ಸಂತೋಶವಾ? ತೃಪ್ತಿಯಾ? ಬೇಸರವ? ನಿರ್ವಾತವಾ? ಸರಿಯಾಗಿ ಗೊತ್ತಿಲ್ಲ. ಐದು ವರುಶಗಳೇ ಆಗಿ ಹೋದವು ನನ್ನ ಹಾಗು ರಾದೆಯ ಮದುವೆಯಾಗಿ.
ಏನಿರಲಿಲ್ಲ ನಂದಗೋಕುಲದಲ್ಲಿ . ಹಸುಳೆಯಾಗಿ ಬಂದ ಕೃಷ್ಣ ಗೋಕುಲಕ್ಕೆ ಎಲ್ಲವನ್ನ ತಂದಿದ್ದ. ನನಗೆ ಚೆನ್ನಾಗಿ ನೆನಪಿದೆ.ಯಶೋದೆಯ ಮಗ್ಗುಲಲ್ಲಿ ಆಗ ತಾನೆ ಜನಿಸಿದ ಹೆಣ್ಣು ಶಿಶು ರಾತ್ರೋರಾತ್ರಿ ಗಂಡಾಗಿ ಬದಲಾಗಿದ್ದನ್ನ ಜನ ಗುಸು ಗುಸು ಮಾತನಾಡಿದ್ದರು. ನನಗೆ ಎಂಟು ವರುಶ ಆಗ. ನಂತರ ಗೋಕುಲದಲ್ಲಿ ಯಾರೂ ಆ ಬಗ್ಗೆ ಮಾತನಾಡಲಿಲ್ಲ. ಕೃಷ್ಣನ ಬಾಲಲೀಲೆ, ಯಶೋದೆಯ ಮಾತೃ ಪ್ರೀತಿ ಗೋಕುಲದಲ್ಲಿ ಜನಜನಿತವಾಯಿತು .
ಬಾಲ ಕೃಷ್ಣ ನನಗೂ ಇಷ್ಟವಾಗಿದ್ದ.ಯಶೋದೆಯOತೂ ತನ್ನ ಕಣ್ರೆಪ್ಪೆಗಿಂತ ಹೆಚ್ಚು ಕೃಷ್ಣನನ್ನ ಕಾಪಾಡುತ್ತಿದ್ದಳು. ನಾನು ಆಕೆಗೆ ಸಂಭಂದಿಯಾದ್ದರಿಂದ ಕೆಲವು ಬಾರಿ ಆತನನ್ನ ಎತ್ತಿಕೊಳ್ಳುತ್ತಿದ್ದೆ. ಆತನ ನಗು, ಅಳು, ತುಂಟಾಟ ಎಲ್ಲರಿಗೂ ಇಷ್ಟ. ಪೂತನಿಯನ್ನ ಕೊಂದ ನಂತರ ಬಹಳಷ್ಟು ಜನರಿಗೆ ಆತ ದೇವರ ರೂಪವಾದ. ಸ್ವಲ್ಪ ದೊಡ್ಡವನಾಗಿ ಕಾಳಿಂಗಮರ್ಧನ ಮಾಡಿದ ಮೇಲಂತೂ ದೇವರೇ ಆಗಿ ಹೋದ. ಗೋವರ್ಧನ ಗಿರಿ ಎತ್ತಿ ಗೋಪಾಲಕರನ್ನ ಕಾಪಾಡಿದ ಮೇಲೆ ಕೃಷ್ಣ ಗೋಕುಲ ರಕ್ಷಕನಾದ .
ಗೋಕುಲವೂ ಅಷ್ಟೇ..ನಂದನ ಯಜಮಾನಿಕೆಯಲ್ಲಿ ಸ್ವರ್ಗ.... ಹತ್ತು ಲಕ್ಷಕ್ಕೂ ಮಿಕ್ಕಿ ಗೋವುಗಳು ಇದ್ದವು.ಗೋಪಾಲನೆಯೇ ಎಲ್ಲರ ವೃತ್ತಿ... ಒಟ್ಟಿಗೆ ಕೆಲಸ ಒಟ್ಟಿಗೆ ಜೀವನ.ಗಂಡಸರೆಲ್ಲ ಗೋವುಗಳನ್ನ ಕಾಡಿಗೆ ಮೇಯಿಸಲು ಹೊಡೆದು ಕೊಂಡು ಹೋಗಿ ಸಂಜೆಗೆ ಹಿಂದಿರುಗುತ್ತಿದ್ದೆವು.ಕಾಡಲ್ಲಿ ಆಟ, ಯಮುನೆಯಲ್ಲಿ ಈಜು, ಕೊಳಲು ಎಲ್ಲರ ಸಂಗಾತಿ,.. ಮಧ್ಯಾಹ್ನನದ ಊಟದ ನಂತರ ಮರದ ನೆರಳಲ್ಲಿ ವೇಣುವಾದನಕ್ಕೆ ತಲೆದೂಗಿ ಅಲ್ಲೇ ಜೋoಪು ನಿದ್ರೆ,.ಗೋಧೂಳಿಯ ಸಮಯಕ್ಕೆ ಹಸುಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿ., ಹಾಲು ಕರೆದು ಮಡಕೆಗಳಲ್ಲಿ ತುಂಬಿದರೆ ಅಂದಿನ ಕೆಲಸ ಮುಗಿದಂತೆ.
ಗೋಕುಲದ ಹೈನು ಮಥುರೆಯನ್ನ ದಾಟಿ ದೂರದ ಹಸ್ತಿನಾಪುರದವರೆಗೂ ಪ್ರಸಿದ್ಧಿ.ಗೋಕುಲದಿಂದ ನೊರೆ ಹಾಲು ದಿನವೂ ಮಥುರಾ ನಗರಿಗೆ ತಲುಪುತ್ತಿತ್ತು.ದೊಡ್ಡ ಮಣ್ಣಿನ ಗಡಿಗೆಗಳಲ್ಲಿ ರಾತ್ರಿ ಕಾಯಿಸಿ ತಣ್ಣಗಾದ ಹಾಲಿಗೆ ಹೆಪ್ಪು ಹಾಕಿ, ಏಲಕ್ಕಿ ಕರ್ಪೂರ ಹಾಕಿ ಮೇಲೆ ಮುಚ್ಚಿಟ್ಟರೆ ಬೆಳಿಗ್ಗೆ ಚಾಕುವಿನಿಂದ ಕತ್ತರಿಸಬಹುದಾದಷ್ಟು ಗಟ್ಟಿ ಸಿಹಿ ಮೊಸರು.
ಹಸ್ತಿನಾಪುರಕ್ಕೆ ಗೋಕುಲದಿಂದ ಪ್ರತಿ ರಾತ್ರಿಯೂ ನೂರು ಗಾಡಿಗಳು ಹೊರಡುತ್ತಿದ್ದವು. ಒಂದೊಂದು ಗಾಡಿಯಲ್ಲೂ ದೊಡ್ಡ ಮಣ್ಣಿನ ಮಡಕೆ ಮತ್ತು ಅಗಷ್ಟೇ ಹೆಪ್ಪಿಟ್ಟ ಹಾಲು. ಆ ಹಾಲಿಗೆ ಹುಳಿ ಹಿಡಿಯದಂತೆ ಕೆಲವು ಗಿಡಮೂಲಿಕೆ ಸೇರಿಸಿ ಆ ರಾತ್ರಿ ಹೊರಟ ಗಾಡಿಗಳು ಮೂರು ದಿನದ ನಂತರವೇ ಹಸ್ತಿನಾಪುರ ಸೇರುತ್ತಿದ್ದುದು.. ಮುಚ್ಚಳ ತೆರೆದರೆ ಮಡಕೆಯ ತುಂಬಾ ಸುವಾಸನಯುಕ್ತ ಕೆನೆ ಸಿಹಿ ಮೊಸರು.ಕೆಲವು ಗಾಡಿಗಳಲ್ಲಿ ಬೆಣ್ಣೆ,. ಜನ ಮುಗಿಬಿದ್ದು ಕೊಳ್ಳುತ್ತಿದ್ದರು. ನಾನು ಸಹ ಐದಾರು ಬಾರಿ ಆ ಯಾತ್ರೆ ಕೈಗೊಂಡಿದ್ದೆ. ಮಥುರೆ, ಹಸ್ತಿನಾಪುರಗಳನ್ನ ನೋಡಿ ಬೆರಗಾಗಿದ್ದೆ. ಆ ವೈಭವ, ಸುವರ್ಣ ರಾಶಿ... ಅಬ್ಬ.
ಆದರೆ ಗೋಕುಲದ ಮುಂದೆ ಅವು ಸಪ್ಪೆ.ಇಲ್ಲಿ ಕಳ್ಳಕಾಕರಿರಲಿಲ್ಲ.. ಕಾನೂನು ಕಟ್ಟಳೆಗಳಿರಲಿಲ್ಲ. ನಾಳೆಗಾಗಿ ಯಾರೂ ಸ್ವಂತಕ್ಕೆ ಎತ್ತಿಡುತ್ತಿರಲಿಲ್ಲ. ನಂದ ಎಲ್ಲರನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಕೆಲಸ ಸಹ ಯಾರಿಗೂ ಅತಿಯಲ್ಲ. ಆಟ, ಹರಟೆ, ನೃತ್ಯ, ಹಾಡು, ಜೋಕಾಲಿ ಹಾಗು ವರ್ಶ ಪೂರಾ ಹಬ್ಬಗಳು.. ಸಂತಸವೇ ಸಂತಸ.ನಮ್ಮ ಮೇಲೆ ಯಾರೂ ದಾಳಿಗೆ ಬರುತ್ತಿರಲಿಲ್ಲ.. ಗೋ ಸಂಪತ್ತು ಬಿಟ್ಟರೆ ಬೇರೆ ಸಂಪತ್ತು ನಮ್ಮಲ್ಲಿರಲಿಲ್ಲ.ಹೈನನ್ನು ಕಡಿಮೆ ದರಕ್ಕೆ ಕೊಡುತ್ತಿದ್ದೆವು. ಹಣ ನಮಗೆ ಬೇಕಿರಲಿಲ್ಲ. ನಾವು ಅಲ್ಪತೃಪ್ತರು.
ಗೋಕುಲದ ಜನ ಸೌ೦ದರ್ಯಕ್ಕೆ ಪ್ರಸಿದ್ಧಿ.ಗೋಪಿಕೆಯರದು ಪ್ರಮಾಣಬದ್ಧ ದೇಹ .ಹಾಲು ಬೆಣ್ಣೆ ತಿಂದು ದುಂಡು ದುಂಡಗೆ ಇರುತ್ತಿದ್ದರು.ಮೊಸರಿನ, ಬೆಣ್ಣೆಯ ಗಡಿಗೆಗಳನ್ನು ಹೊತ್ತು ಸಾಲಾಗಿ ಹೊರಟರೆ ಮಥುರೆಯ ಗಂಡಸರೆಲ್ಲ ಉಗುಳು ನುಂಗಿಕೊಂಡು ನೋಡುತ್ತಿದ್ದರು. ಸಣ್ಣ ನಡು, ತುಂಬಿದೆದೆಯ ಹೆಣ್ಣುಗಳು, ಅವರ ಕಣ್ಣಲ್ಲಿನ ಆ ಮಾದಕ ತುಂಟತನ ಯಾರನ್ನಾದರೂ ಕೆರಳಿಸುತ್ತಿತ್ತು. ಮಥುರೆಯಂತೆ ಇಲ್ಲಿನ ಹೆಣ್ಣುಗಳಿಗೆ ಧಾರ್ಮಿಕ ಕಟ್ಟುಪಾಡುಗಳಿರಲಿಲ್ಲ. ತನ್ನ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶ ಆಕೆಗೆ ಇತ್ತು. ಆದರೂ ಮಥುರೆಯ, ಬೇರೆ ದೂರದ ನಗರಗಳ ಪೀಚು ದೇಹದ ಪುರುಷರಿಗಿಂತ ಗೋಕುಲದ ತಿಂದುಂಡು ಕೆಲಸ ಮಾಡಿ ಕೊಬ್ಬಿದ ಗೋಪಾಲರೇ ಅವರಿಗೆ ಇಷ್ಟ. ಕೆಲವು ಮಥುರೆಯ ಪುರುಷರು ದೈಹಿಕವಾಗಿ ಬಲಿಷ್ಠರಿದ್ದರೂ ಅವರ ಸಣ್ಣ ಮನಸು ಗೋಕುಲದ ಹೆಂಗಸರಿಗೆ ಇಷ್ಟವಾಗುತ್ತಿರಲಿಲ್ಲ. ಅದಾಗ್ಯೂ ಅಪರೂಪಕ್ಕೊಮ್ಮೆ ಗೋಕುಲದ ಹೆಣ್ಣು ಮಥುರೆಯ ಪುರುಷನಿಗೆ ಒಲಿದು ಅಲ್ಲೇ ಹೋಗಿ ನೆಲೆಸಿ ನಂತರ ಗೋಕುಲವನ್ನ ನೆನೆಸಿಕೊಂಡು ಕೊರಗುತ್ತಿದ್ದುದೇ ಹೆಚ್ಚು ,.
ರಾದೆ ಪುಟಕ್ಕಿಟ್ಟ ಚಿನ್ನ.ಗೋಕುಲದಲ್ಲಿ ಎಲ್ಲರ ಕಣ್ಮಣಿ.ಹುಚ್ಚು ಸೌoದರ್ಯ ಅವಳದು.ದೇಹದ ಒಂದೊಂದು ಅಂಗುಲವು ತಿದ್ದಿ ತೀಡಿದ ಮಾಟ. ಮುಖ ಹುಣ್ಣಿಮೆಯ ಪೂರ್ಣ ಚಂದ್ರ.. ಬಿಗಿದೆದೆಗೆ ದಾವಣಿ ಹಾಕಿ ತಲೆಯ ಮೇಲೊಂದು, ಜಾರುವ ಸೊಂಟದ ಮೇಲೊಂದು ಮೊಸರಿನ ಗಡಿಗೆ ಇಟ್ಟುಕೊಂಡು ಬರುತ್ತಿದ್ದರೆ ನೋಡುವ ಕಣ್ಣಿಗೆ ಹಬ್ಬ.ವಸಂತೋತ್ಸವದಲ್ಲಿ ಆಕೆಯ ನೃತ್ಯ, ಗಾಯನದ ಲಾಲಿತ್ಯ ನೋಡಿ, ಕೇಳಿಯೇ ಅನುಭವಿಸಬೇಕು.. ತನ್ಮಯಳಾಗಿ ಹಾಡುತ್ತ ರಾದೆ ನರ್ತಿಸುತ್ತಿದ್ದರೆ ಆಕೆಯ ದೇಹದಿಂದ ಹೊಮ್ಮುತ್ತಿದ್ದ ಸುವಾಸನೆ ನಮ್ಮನ್ನೆಲ್ಲ ಉನ್ಮತ್ತರಾಗಿಸುತ್ತಿತ್ತು. ಯಾರಿಗೂ ಹೆದರದ, ನಿಷ್ಠುರ ಮಾತಿನ ರಾದೆ ನನ್ನವಳಾದರೆ ಸಾಕು ಎಂಬುದು ಪ್ರತಿಯೊಬ್ಬ ಗೋಪಾಲನ ಆಸೆ.
ಹುಣ್ಣಿಮೆಯ ಹಿಂದು ಮುಂದಿನ ಐದಾರು ದಿನಗಳು ಗೋಕುಲದಲ್ಲಿ ಸ್ವರ್ಗ.ಪ್ರಕೃತಿ ಪುರುಷರ ಪ್ರೇಮಕಾಮಗಳು ಸುರಿಯುವ ಬೆಳದಿಂಗಳಲ್ಲಿ ಪುನೀತವಾಗುತ್ತಿದ್ದವು.ಮದುವೆಯಾದ ಜೋಡಿಗಳು, ಹರೆಯದ ಪ್ರೇಮಿಗಳು., ಉನ್ಮತ್ತ ವಿಟರು, ಮುದುಕರು ಎಲ್ಲರೂ ಬಹಿರಂಗ ಕೇಳಿಗೆ ಇಳಿಯುತ್ತಿದ್ದರು.ಮಕ್ಕಳನ್ನ ಬೇಗ ಮಲಗಿಸಿ ಎಲ್ಲರೂ ಯಮುನೆಯ ತೀರಕ್ಕೆ ಬರುತ್ತಿದ್ದರು. ಗೋಕುಲದಲ್ಲಿ ಪ್ರೇಮಕ್ಕಾಗಲಿ ಕಾಮಕ್ಕಾಗಲಿ ಕಟ್ಟಳೆ ನಿಯಮಗಳಿರಲಿಲ್ಲ. ತನ್ನ ಸಂಗಾತಿಯೊಡನೆ ಕೆಲ ಕಾಲ ಕಳೆದು, ಸುಖಿಸಿ ಒಪ್ಪಿಗೆಯಾದರೇ ಮಾತ್ರ ವಿವಾಹವಾಗುತ್ತಿದ್ದರು. ಇಲ್ಲವಾದಲ್ಲಿ ಸೂಕ್ತ ಬೇರೆ ಸಂಗಾತಿಗೆ ಹುಡುಕಾಟ.. ಹೆಣ್ಣಾಗಲಿ ಗಂಡಾಗಲಿ ಯಾರಿಗೂ ಬಲವಂತವಿಲ್ಲ.. ಎಲ್ಲವೂ ಒಪ್ಪಿತ, ಕ್ಷಮ್ಯ.

ನಂಗೆ ಚೆನ್ನಾಗಿ ನೆನಪಿದೆ. ನಾನೇ ಹೋಗಿ ರಾದೆಯನ್ನ ಹುಣ್ಣಿಮೆಯ ನಾವಾ ವಿಹಾರಕ್ಕೆ ಕರೆದದ್ದು. ಬೇರೆ ಗೋಪಾಲಕರಿಗೆ ಹೋಲಿಸಿದರೆ ನಾನು ಸ್ವಲ್ಪ ಪೀಚು. ಕೊಂಚ ನಾಚಿಕೆ, ಹಿಂಜರಿಕೆಯೂ ನನಗೆ ಹೆಚ್ಚು. ಇಂದಿಗೂ ಆಶ್ಚರ್ಯ ಅಷ್ಟು ಧೈರ್ಯ...ರಾದೆ ಮುಂದೆ ಹೋಗಿ ಕೇಳುವ ಶಕ್ತಿ ಹೇಗೆ ಬಂತು ಅಂತ .ಪ್ರಾಯಶಃ ಆಕೆ ಎಡೆಗಿದ್ದ ಪ್ರೀತಿ ನನ್ನ ಕೇಳಿಸಿತು. ಅಷ್ಟೊಂದು ಚೆಲುವಾಂತ ಚೆನ್ನಿಗರಿದ್ದ ಗೋಕುಲದಲ್ಲಿ ಯಾರೂ ರಾದೆ ಬಳಿ ಪ್ರೇಮ ಭಿಕ್ಷೆ ಬೇಡಿರಲಿಲ್ಲ. ಆಕೆ ಒಪ್ಪುವುದಿಲ್ಲ ಎಂಬ ಭಯದಿಂದ.ರಾದೆ ನನ್ನ ಜೊತೆ ನಾವೆಯ ವಿಹಾರಕ್ಕೆ ಒಪ್ಪಿದ್ದಳು. ಪ್ರೇಮದ ಮೊದಲ ಹೆಜ್ಜೆ .
ಗೋಕುಲದಲ್ಲಿ ನಾವೆಯ ವಿಹಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಎಲ್ಲರೂ ಹುಣ್ಣಿಮೆಯ ಆಸುಪಾಸಿಗೆ ಕಾಯುತ್ತಾರೆ. ಸಂಜೆ ಬೇಗನೆ ಕೆಲಸ ಮುಗಿಸಿ ಚಿಕ್ಕ ಮಕ್ಕಳನ್ನ ಮಲಗಿಸಿ ಅಥವಾ ವೃದ್ಧರಿಗೆ ಒಪ್ಪಿಸಿ ಚಂದ್ರೋದಯದ ಸಮಯಕ್ಕೆ ಯಮುನೆಯ ತೀರದಲ್ಲಿ ಸೇರುತ್ತಾರೆ.ಬೆಳದಿಂಗಳ ಸಿರಿಯಲ್ಲಿ ಹೊಳೆಯುವ ಗೋಪಿಕೆಯರನ್ನ ನೋಡಿದರೆ ಯಾರ ಎದೆಬಡಿತವೇ ಆಗಲಿ ತಾಳ ತಪ್ಪುತ್ತದೆ. ಮೊದಲು
ಯಮುನೆಯ ತೀರದ ಬೃಂದಾವನದಲ್ಲಿ ಹಾಡಿನಿಂದ ಮೊದಲಾಗಿ ಸಂಭ್ರಮ ಶುರು.ಶೃಂಗಾರ ಪ್ರಧಾನವಾದ ನೃತ್ಯ ಕಳೆಗಟ್ಟುತ್ತದೆ. ಸಾಕ್ಷಾತ್ ರಂಭೆ ಮೇನಕೆಯರೇ ಧರೆಗಿಳಿದು ನೃತ್ಯ ಮಾಡಿದಂತೆ... ಯಾರೋ ಕೊಳಲು ನುಡಿಸುತ್ತಾರೆ. ಅದರ ಮಾದುರ್ಯಕ್ಕೆ ಸೋತು ಗೊಲ್ಲ ಭಾಮೆಯರ ಕಾಲುಗಳು ತಂತಾನೆ ಹೆಜ್ಜೆ ಹಾಕುತ್ತವೆ. ಸ್ವಲ್ಪ ಸೋಮರಸ ಎಲ್ಲರೂ ಸೇವಿಸಿದ ಮೇಲಂತೂ ರಾತ್ರಿಗೆ ರಂಗು.ಮಧ್ಯರಾತ್ರಿಯ ಹೊತ್ತಿಗೆ ಹಾಡಿನ ಹುಮ್ಮಸ್ಸು ಕಡಿಮೆಯಾಗಿ ಒಂದೊಂದು ಜೋಡಿ ಒಂದೊಂದು ನಾವೆ ಏರುತ್ತವೆ. ಪ್ರತಿ ನಾವೆಯಲ್ಲೂ ಒಂದೊಂದು ಪಲ್ಲಂಗ, ಆರದ ನೀಲಾಂಜನ.ನಾವೆಗಳು ನೀರಿಗಿಳಿಯುತ್ತವೆ. ಗೋಕುಲದಲ್ಲಿ ಯಮುನೆ ಮಂದವಾಗಿ ಹರಿಯುತ್ತಾಳೆ. ನೀರು ನಿಂತಂತೆ ಇರುತ್ತದೆ. ಶುಭ್ರ ನೀರಿನಲ್ಲಿ ಚಂದಿರ ಹೊಳೆಯುತ್ತಾನೆ. ನೂರಾರು ನಾವೆಗಳು ಯಮುನೆಯಲ್ಲಿ ಇಳಿಯುತ್ತವೆ. ಹುಟ್ಟು ಹಾಕುವುದೇ ಬೇಡ.ಹಂಸತೂಲಿಕಾತಲ್ಪದಂತೆ ಯಮುನೆಯ ಸಣ್ಣ ಅಲೆಗಳ ಮೇಲೆ ಜೋಕಾಲಿಯಂತೆ ಪ್ರಯಾಣ.ದೂರದಿಂದ ನೋಡಿದರೆ ನೀಲಾಂಜನಗಳ ಬೆಳಕಿನಿಂದ ಯಮುನೆಯ ಮೇಲೆ ನಕ್ಷತ್ರಗಳ ಮೆರವಣಿಗೆಯಂತೆ ಕಾಣುತ್ತದೆ. ರಾತ್ರಿಯೆಲ್ಲ ಪ್ರಯಾಣ ಮಾಡಿದರೂ ಹರ ದಾರಿಯೂ ಸಾಗುವುದಿಲ್ಲ. ನಾವೆಯೊಳಗಿನ ಶೃಂಗಾರ ಕಾವ್ಯಕ್ಕೆ ಮನ್ಮಥನೂ ನಾಚುತ್ತಾನೆ. ಸದ್ದೇ ಇರದ ಕೇಳಿಗೆ ಯಮುನೆ ಮಂದಸ್ಮಿತ ಸಾಕ್ಷಿಯಾಗುತ್ತಾಳೆ. ಮಿಥುನ ಮುಗಿಸಿದ ಗೋಪಾಲನ ಮಡಿಲಲ್ಲಿ ಗೊಲ್ಲಭಾಮೆ ತಲೆ ಇಟ್ಟು ಆತನ ಮುಖವನ್ನೇ ನೋಡುತ್ತಾಳೆ. ತೃಪ್ತಿಯಿಂದ ಆತ ವೇಣು ನಾದಕ್ಕೆ ತೊಡಗುತ್ತಾನೆ. ಅನತಿ ದೂರದ ನಾವೆಯಲ್ಲಿ ಆ ಕೊಳಲನಾದ ಕೇಳಿಗೆ ಹೊಸ ಹುಮ್ಮಸ್ಸು ತರುತ್ತದೆ.
ರಾದೆ ನನ್ನ ಜೊತೆ ನಾವೆಯ ವಿಹಾರಕ್ಕೆ ಒಪ್ಪಿದ ದಿನವೇ ಕೃಷ್ಣ ಕೂಡ ಮೊದಲ ಬಾರಿಗೆ ಯಮುನಾ ತೀರದ ಹುಣ್ಣಿಮೆ ರಾತ್ರಿ ಉತ್ಸವಕ್ಕೆ ಬಂದಿದ್ದು. ಹದಿನಾಲ್ಕು ವರುಶಗಳಿರಬೇಕು ಅವನಿಗೆ ಆಗ. ಸುರಸುಂದರಾಂಗ, ಕಪ್ಪು ಶಿಲೆಯಲ್ಲಿ ಕಟೆದ ವಿಗ್ರಹದಂತೆ ಕಂಡಿದ್ದ. ಗಾಳಿಗೆ ಹಾರುತ್ತಿದ್ದ ಕೂದಲನ್ನ ಎತ್ತಿಕಟ್ಟಿ ನವಿಲುಗರಿಯನ್ನ ಸಿಕ್ಕಿಸಿಕೊಂಡಿದ್ದ.ಕೊರಳಲ್ಲಿ ತುಳಸಿ ಹಾರ, ಕೈಯಲ್ಲಿ ಕೊಳಲು, ಕೊಳಲಿನ ಅಂಚಿಗೂ ನವಿಲುಗರಿ.ತಾಯಿ ಯಶೋದೆ ಜತನದಿಂದ ಎದೆಯುದ್ದ ಬೆಳೆದ ಮಗನಿಗೆ ಅಲಂಕರಿಸಿ ಕಳಿಸಿದ್ದಳು. ಗೋಕುಲದ ಎಳೆ ಚೆಲುವೆಯರಲ್ಲಿ ಒಬ್ಬಳು ಮಗನ ಜೊತೆಯಾಗಲಿ ಎಂದು.ಅಂದು ಉತ್ಸವ ಕಳೆಗಟ್ಟಿತ್ತು. ನಾನೋ ರಾದೆಯ ಸಾಮಿಪ್ಯಕ್ಕೆ ಹಾತೊರೆಯುತ್ತಿದ್ದೆ. ಎಲ್ಲ ಗೋಪಾಲಕರ ಮೆಚ್ಚುಗೆ ಬರಿತ ಈರ್ಶೆಯ ನೋಟ ನನ್ನ ಮೇಲಿತ್ತು. ರತಿಯಂತೆ ಅಲಂಕರಿಸಿಗೊಂಡು ಬಂದ ರಾದೆ ನಗುತ್ತಾ ನನ್ನ ಪಕ್ಕ ಕುಳಿತಳು. ನನ್ನ ತೋಳು ಹಿಡಿದುಕೊಂಡು ನೃತ್ಯ ನೋಡಿದಳು. ನಂತರ ರಾದೆಯ ಗಾಯನ ನೃತ್ಯ ಶುರುವಾಗಬೇಕು... ನಾನಂತೂ ತಡೆಯಲಾಗದ ಉದ್ವೇಗದಿಂದ ಕಾಯುತ್ತಿದ್ದೆ.
ಆಗಲೇ ಕೃಷ್ಣನ ಆಗಮನವಾದದ್ದು.ಮೊದಲ ಬಾರಿ ಕೃಷ್ಣ ಯಮುನಾ ತೀರದ ಬೃಂದಾವನ ಉದ್ಯಾನವನದ ನೃತ್ಯ ಮಂಟಪಕ್ಕೆ ಬಂದಿದ್ದು, ಹುಣ್ಣಿಮೆಯ ಬೆಳಕಿದ್ದರೂ ಗೋಪಿಕೆಯರ ನೃತ್ಯ ಸೌ೦ದರ್ಯ ಇನ್ನೂ ಚೆನ್ನಾಗಿ ಕಾಣಲಿ ಎಂದು ಬೃಂದಾವನದ ತುಂಬೆಲ್ಲ ಪಂಜಿನ ದೀಪಗಳನ್ನು ಹಚ್ಚಿಡಲಾಗಿತ್ತು... ಆ ಉರಿಯುತ್ತಿರುವ ಪಂಜಿನ ಬೆಳಕಿನಲ್ಲಿ ಶ್ಯಾಮಲ ವರ್ಣದ ಕೃಷ್ಣ ದೇದಿಪ್ಯಮಾನವಾಗಿ ಕಂಗೊಳಿಸಿದ. ಗೋಪಿಕೆಯರಿರಲಿ, ಗೋಪಾಲರೂ ಕೃಷ್ಣನ ಸೌಂದರ್ಯವನ್ನ ಮಂತ್ರಮುಗ್ಧರಾಗಿ ನೋಡುತ್ತಾ ಕುಳಿತರು, ನನ್ನನ್ನೂ ಸೇರಿಸಿ.
ಆಗಷ್ಟೇ ಬಾಲ್ಯವನ್ನ ಮುಗಿಸಿ ಹರೆಯಕ್ಕೆ ಅಂಬೆಗಾಲಿಡುತ್ತಾ ಬರುತ್ತಿದ್ದ ಕೃಷ್ಣ.ಬಾಲ್ಯದ ಮುಗ್ಧತೆ ಕಣ್ಣಲ್ಲಿನ್ನೂ ಮಾಸಿರಲಿಲ್ಲ. ಹರೆಯ ಸಹಜ ಕುತೂಹಲ ಮತ್ತು ಕಾಮನೆ ಆಗಷ್ಟೇ ಆತನ ಕಣ್ಣಲ್ಲಿಳಿಯುತ್ತಿತ್ತು.ಮುಖದಲ್ಲಿ ತುಂಟ ನಗುವನ್ನಿಟ್ಟುಕೊಂಡೇ ಬಂದು ಕುಳಿತ ಕೃಷ್ಣ... ಗೋಪಿಕೆಯರು ಅರಿವಿಲ್ಲದಂತೆ ಒಬ್ಬೊಬ್ಬರಾಗಿ ಹೋಗಿ ಕೃಷ್ಣನ ಸುತ್ತ ಕುಳಿತು ಸರಸದ ಮಾತುಕತೆಗೆ ಮೊದಲಿಟ್ಟರು. ಆ ಕ್ಷಣಕ್ಕೆ ಕೃಷ್ಣ ಎಲ್ಲ ಹೆಂಗಳೆಯರ ಅಗತ್ಯವಾಗಿದ್ದ. ಗೋಪಾಲರೂ ಸಂತಸದಿಂದಲೇ ಕೃಷ್ಣನ ಹೊಸ ಪ್ರಣಯದವತಾರವನ್ನ ವೀಕ್ಷಿಸುತ್ತಿದ್ದರು. ನಾನು ಒಂದು ಕ್ಷಣ ಪಕ್ಕದ ರಾದೆಯನ್ನ ಮರೆತು ಕೃಷ್ಣನ ಆರಾಧನೆಯಲ್ಲಿ ಮುಳುಗಿದೆ.
ಜಗ್ಗನೆ ಬೃಂದಾವನ ರಂಗಸ್ಥಳದ ದೀಪಗಳು ಹೊತ್ತಿಕೊಂಡು ರಾದೆಯ ನೃತ್ಯ ಮತ್ತು ಗಾಯನ ಮೊದಲಾಯಿತು. ಎಲ್ಲರ ಗಮನವೂ ರಾದೆಯ ಮೇಲೆ.ಬಂಗಾರದ ನೀರಲ್ಲಿ ಎರಕಹೊಯ್ದ ಆಕೆಯ ಮೈ ಬಣ್ಣ, ಗಾಳಿಗೆ ಬಳುಕುತ್ತಿದ್ದ ಆಕೆಯ ಸೊಂಟ, ಮೊಣಕಾಲಿನವರೆಗೂ ಇಳಿಬಿದ್ದ ಆಕೆಯ ದಪ್ಪ ನಾಗರ ಜಡೆ, ಪ್ರಣಯದ ಮಧುವೆಲ್ಲ ಅರಳುಗಟ್ಟಿ ಕುಳಿತ ಆಕೆಯ ಮುಖ, ಪ್ರಿಯಸಖನ ಆಗಮನಕ್ಕಾಗಿ ಕಾತರಿಸಿ ಹಾಡುತ್ತಿರುವ ಆಕೆಯ ಕಂಠ,, ಅದಕ್ಕೆ ತಕ್ಕನಾಗಿ ಕುಣಿಯುತ್ತಿದ್ದ ಆಕೆಯ ಕಾಲುಗಳು, ಹಣೆಯ ಮೇಲೆ ಸಾಲುಗಟ್ಟಿದ ಬೆವರ ಹನಿಗಳು..... ಅಬ್ಬ ಬೃಂದಾವನ ಮೂಗಿನ ಮೇಲೆ ಬೆರಳಿಟ್ಟುಕೊಂಡು ಸ್ತಬ್ದವಾಗಿತ್ತು. ಅರೆಕ್ಷಣ ಕೃಷ್ಣ ಮರೆಯಾಗಿ ರಾದೆ ಮುನ್ನೆಲೆಗೆ ಬಂದಿದ್ದಳು. ಪ್ರಚಂಡ ಕರತಾಡನ.
ನಂತರ ಕೃಷ್ಣನ ಮುರಳೀ ಗಾನ, ಸಮ್ಮೋಹನಾಸ್ತ್ರ ಪ್ರಯೋಗ. ಅದರ ನಾದಕ್ಕೆ ಎಲ್ಲರ ತಲೆದೂಗಿ ಅರಿವಿಲ್ಲದೇ ಕಾಲುಗಳು ಕುಣಿಯಲು ಶುರು ಮಾಡಿದವು. ಗೋಪಿಕೆಯರು ಎಲ್ಲ ಮರೆತು ಪುಂಗಿನಾದಕ್ಕೆ ಆಡಿಸುವ ಹಾವಿನ ಹಾಗೆ ಕೃಷ್ಣನ ಸುತ್ತ ನೆರೆದರು. ಹಾಡು ಕುಣಿತ ಅದ್ಬುತವಾಗಿತ್ತು. ಕೃಷ್ಣ ಗಂಧರ್ವನಂತೆ ಕಂಡ.ಅಂದು ಮೊದಲ ಬಾರಿಗೆ ಕೆಲ ಗೋಪಿಕೆಯರು ನಾವೆ ವಿಹಾರ ನಿರಾಕರಿಸಿ ಕೃಷ್ಣನ ಜೊತೆ ಕುಣಿಯುತ್ತಾ ಕಳೆದರು. ಕೃಷ್ಣ ಕೆಲ ವಿವಾಹಿತ ಗೋಪಿಕೆಯರೂ ಸೇರಿದಂತೆ ಹಲವರ ಕನಸಿನ ಪ್ರಿಯಕರನಾಗಿ ಹೊಮ್ಮಿದ್ದ.
ಮಧ್ಯರಾತ್ರಿಯಾಗುತ್ತಿದ್ದಂತೆ ಕೆಲ ನಾವೆಗಳು ಯಮುನೆಗಿಳಿದವು. ರಾದೆ ಸಹ ನನ್ನ ಕೈ ಹಿಡಿದು ನಾವೆ ಹತ್ತಿ ನೀಲಾಂಜನದ ಬತ್ತಿ ಹೆಚ್ಚು ಪ್ರಕಾಶಮಾನವಾಗುವಂತೆ ಮಾಡಿ ಪಲ್ಲಂಗದ ಮೇಲೆ ಕುಳಿತಳು.ಅಂದು ಯಮುನೆಗೆ ಹುಚ್ಚು ಆವೇಗ, ನನ್ನಲ್ಲಿಯೂ ಸಹ.ನಾವೆ ಸರಿದಂತೆ ಕೃಷ್ಣನ ಮುರಳಿ ಗಾನ ,ಗೋಪಿಕೆಯರ ಕುಣಿತದ ಗೆಜ್ಜೆ ಸದ್ದು ಲಯಬದ್ದವಾಗಿ ಕೇಳಿಸುತ್ತಿತ್ತು. ಎಲ್ಲ ನಾವೆಗಳಲ್ಲಿ ಕೃಷ್ಣನಿಂದ ಪ್ರಣಯಕ್ಕೂ ಹೊಸ ಆವೇಗ.ಕೃಷ್ಣ ಅ೦ದು ನಾವೆ ಏರಲಿಲ್ಲ.
ರಾದೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತಳು.. ನಾನು ಸಹ ಕಣ್ಣಲ್ಲೇ ಅವಳ ಸೌಂದರ್ಯ ಹೀರುತ್ತಿದ್ದೆ. ಮೊಸರು ಮಾರಲು ಹಸ್ತಿನಾಪುರಕ್ಕೆ ಹೋದಾಗ, ಮೊಸರಿನ ರುಚಿ ಮೆಚ್ಚಿ ಒಬ್ಬ ಶ್ರೇಷ್ಠಿ ಒಂದು ಕಂಠಿಹಾರವನ್ನ ಕೊಟ್ಟು ಇದನ್ನ ನಿನ್ನ ಹೆಂಡತಿಗೆ ಕೊಡು ಎಂದು ಹೇಳಿದ್ದ. ಜತನದಿಂದ ಅದನ್ನ ಎತ್ತಿಟ್ಟುಕೊಂಡಿದ್ದೆ. ಮತ್ತೇರಿಸುವ ಕೆಲ ವನಸುಮಗಳ ಹಾರಗಳನ್ನ ನಾನೇ ಮಾಡಿ ತಂದಿದ್ದೆ. ಕoಠಿಹಾರವನ್ನ ರಾದೆಯ ಕೊರಳಿಗೆ ಹಾಕಿದೆ... ಹೂವಿನ ಹಾರವನ್ನು ಸಹ. ಮೈರೋಮಗಳೆಲ್ಲ ನವಿರಾಗಿ ನಿಂತಿದ್ದವು. ಮೆಚ್ಚಿದ ರಾದೆ ತನ್ನ ಬೊಗಸೆ ಕೈಗಳಲ್ಲಿ ನನ್ನ ಮುಖ ಇಟ್ಟು ಹತ್ತಿರ ತಂದು ಹೇಳಿದಳು
"ಅಯನ ಘೋಶ, ನಿನ್ನ ಪ್ರೀತಿ ಎಷ್ಟೇ ಉತ್ಕಟವಾಗಿದ್ದರೂ ಗೋಕುಲದಲ್ಲಿ ಬಂಗಾರದ ಆಭರಣಗಳು ನಿಷಿದ್ಧ.ನಾವು ವನ ಮಾನವರು, ನಮಗೆ ಪ್ರಕೃತಿ ಪೂಜ್ಯ, ಆಭರಣಗಳಲ್ಲ... ಬೇಜಾರಾಗಬೇಡ " ಎಂದು ಹೇಳಿ ಕಂಠಿ ಹಾರ ತೆಗೆದು ಯಮುನೆಗೆಸೆದಳು. ಹೂವಿನ ಹಾರವನ್ನ ಮೂಸಿ ಕಮ್ಮನುಸಿರು ಬಿಟ್ಟಳು.
ನನಗೋ ಇದಾವುದೂ ತಲೆಗೆ ಹೋಗಲಿಲ್ಲ.ರಾದೆಯ ದೇಹದ ಬಿಲ್ಲಿಗೆ ಹೆದೆಯೇರಿಸುವ ಹಂಬಲ.. ಮೆಲ್ಲನೇ ಮುಂದುವರಿದೆ.
" ಇದು ನಮ್ಮ ಮೊದಲ ಭೇಟಿ. ನನಗೆ ಇನ್ನೂ ಕೆಲ ಕಾಲ ನಾವಿಬ್ಬರೂ ಪ್ರೇಮಿಗಳಾಗಿರಬೇಕೆಂಬ ಆಸೆ. ಹಾಡುವ.ಅಪ್ಪುವ, ಕುಣಿಯುವ... ಮೈಥುನದ ಕುತೂಹಲವನ್ನು ಉಳಿಸಿಕೊಳ್ಳುವ... ಪ್ರೀತಿ ಮತ್ತು ದೈಹಿಕ ವಾಂಚೆ ಕಳಿತ ಮೇಲೆ ಸೇರುವ '' ಎಂದಳು.
ನನಗೋ ಆಸೆ ಇತ್ತು.. ಆತುರವು ಇತ್ತು.ಸಂಯಮ ಸಹ ಇತ್ತು.ಪ್ರೇಮಿಯಾಗಿ ಪ್ರಬುದ್ಧರಾಗುವ ರಾದೆಯ ಯೋಚನೆ ಹಿಡಿಸಿತು.ಒಪ್ಪಿದೆ.ರಾದೆಯ ಮಡಿಲಲ್ಲಿ ತಲೆ ಇಟ್ಟು ಮಲಗಿದೆ. ನನ್ನ ಮುಖ ನೋಡುತ್ತಾ ನಾವೆಯಲ್ಲಿ ಕುಳಿತು ಆ ರಾತ್ರಿ ಇಡೀ ಪ್ರೇಮಗೀತೆಗಳನ್ನ ರಾದೆ ಮೈಮರೆತು ಹಾಡಿದಳು. ಸಗ್ಗದ ಬಾಗಿಲು ನನಗೆ ಕಾಣಿಸುತಿತ್ತು... ಬಾಗಿಲು ತೆರೆಯುವದಷ್ಟೇ ಬಾಕಿ.. ಎಲ್ಲೋ ದೂರದಲ್ಲಿ ಕೃಷ್ಣನ ಕೊಳಲಗಾನದ ಲಹರಿ ಮುಂದುವರೆದಿತ್ತು.

ಮುಂದಿನ ಆರು ತಿಂಗಳು ನಮ್ಮಿಬ್ಬರ ಪಾಲಿಗೆ ನನಸಾದ ಕನಸು. ಎಲ್ಲೇ ಹೋದರೂ ಜೊತೆಯಾಗಿ ಹೋಗುತ್ತಿದ್ದೆವು. ನಾವೆ ವಿಹಾರವಂತೂ ಇದ್ದೇ ಇತ್ತು. ನನಗೆ ಈಜು ಬರುತ್ತಿರಲಿಲ್ಲ.ರಾದೆ ನನಗೆ ಯಮುನೆಯಲ್ಲಿ ಈಜು ಕಲಿಸಿದಳು. ವನ ವಿಹಾರ ,ವನ ಭೋಜನ, ಬೆಳದಿಂಗಳ ಫಲಾಹಾರಗಳು ನಮ್ಮಿಬ್ಬರ ನಡುವೆ ಸಾಮಾನ್ಯವಾಗಿತ್ತು.
ಅನತಿ ಕಾಲದಲ್ಲೇ ಗೋಕುಲದಲ್ಲಿ ಕೃಷ್ಣ ಹೆಂಗಳೆಯರ ಕನಸಿನ ರಾಜಕುಮಾರನಾದ. ಆತನ ತುಂಟತನ, ಗೋಪಿಕೆಯರೊಂದಿಗೆ ಮಾಡುತ್ತಿದ್ದ ಚೇಷ್ಟೆ, ವೇಣುವಾದನ, ನೃತ್ಯ ಮತ್ತು ಆತನ ಸಾಹಸಗಳನ್ನು ಪ್ರತಿ ಗೊಲ್ಲ ಭಾಮೆಯೂ ಕನವರಿಸುತ್ತಿದ್ದರು. ಎದುರಿಗೆ ಕೃಷ್ಣನಲ್ಲಿ ಹುಸಿ ಮುನಿಸು ತೋರಿದರೂ ಕೃಷ್ಣ ಒಂಟಿಯಾಗಿ ಸಿಕ್ಕರೆ ಬಿಗಿದಪ್ಪಿ ಚುಂಬಿಸುವರು.. ವಿವಾಹಿತ ಗೋಪಿಯರೂ ಸೇರಿ.. ಅದು ಗೋಕುಲದಲ್ಲಿ ಒಪ್ಪಿತ.. ಗಂಡು ಹೆಣ್ಣು ಒಪ್ಪಿ ಮಾಡಿದರೆ ಯಾವುದೂ ನಿಷಿದ್ಧವಲ್ಲ. ಇಷ್ಟಪಟ್ಟವನನ್ನೇವರಿಸುತ್ತಿದ್ದರಿಂದ ವಿವಾಹೇತರ ಸಂಭಂದಗಳು ಕಡಿಮೆ. ಅದಾಗ್ಯೂ ದೈಹಿಕ ಬಯಕೆಗಳು ಗರಿಗೆದರಿ ಆಗಾಗ ಸಂಭಂದಗಳು ಉಂಟಾದರೂ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಂದೆರೆಡು ಸಲ ಬೆರೆತ ನಂತರ ಇಷ್ಟಪಟ್ಟವನೆಡೆಗೆ ಸಂಗಾತಿಗಳು ಮರಳುತ್ತಿದ್ದರು. ಮನಸು ಕಹಿ ಆದರೂ
ಮಥುರೆಯಂತೆ ಗಲಾಟೆಗಳಾಗುತ್ತಿರಲಿಲ್ಲ.
ಕೃಷ್ಣ ನನ್ನ ಹಾಗು ರಾದೆಯ ನಡುವಿನ ಚರ್ಚೆಗೆ ಆಗಾಗ ವಸ್ತುವಾಗಿದ್ದ. ಎಲ್ಲ ಗೋಪಿಕೆಯರೂ ಕೃಷ್ಣನಿಗೆ ಹಾತೊರೆಯುವಾಗ ರಾದೆ ಮಾತ್ರ ಆತನಿಂದ ದೂರವಿದ್ದಳು. ಆತನ ವೇಣುವಾದನ ಇಬ್ಬರೂ ಮೆಚ್ಚಿದ್ದೆವು.
ಕೃಷ್ಣನೆಡೆಗಿನ ರಾದೆಯ ನಿರ್ಲಿಪ್ತ ಧೋರಣೆ ಗೋಕುಲದಲ್ಲಿ ಹರಡಿ ಕೃಷ್ಣನ ಕಿವಿಗೂ ಬಿದ್ದಿರಬೇಕು. ಬೇರೆಯವರು ಇದಕ್ಕೆ ರಾದೆಯ ಅಹಂ ಕಾರಣ ಎಂದಾಗ ಕೃಷ್ಣನಿಗೆ ಕುತೂಹಲ ಮೂಡಿತ್ತು. ಕೃಷ್ಣ ರಾದೆಗೆ ನಾಲ್ಕು ವರುಶ ಚಿಕ್ಕವನು.. ಈಗಷ್ಟೇ ಮೀಸೆ ಮೂಡುತ್ತಿರುವ ತರುಣ.ರಾದೆ ಯವ್ವನ ಬಿರಿದು ಅರಳುತ್ತಿರುವ ತರಳೆ. ಕೃಷ್ಣ ನಿಧಾನವಾಗಿ ರಾದೆಯ ಕಾಡಲಾರಂಭಿಸಿದ.ಬೆಣ್ಣೆ ತುಂಬಿದ ಮಡಕೆಗಳನ್ನ ಹೊತ್ತು ಬರುವಾಗ ಆಕೆಯ ಸೆರಗ ಎಳೆಯುವುದು, ಎಲ್ಲಿಂದಲೋ ಓಡಿ ಬಂದು ಆಕೆಯ ಕೆನ್ನೆಗೆ ಮುತ್ತಿಕ್ಕಿ ಪರಾರಿಯಾಗುವುದು, ಹೊಳೆಯಲ್ಲಿ ಬಟ್ಟೆ ತೊಳೆಯುವಾಗ ಆಕೆಯನ್ನ ನೀರಿಗೆ ನೂಕಿ ತಾನು ಬೀಳುವುದು., ಹಿಂದಿನಿಂದ ಬಂದು ಅವಳನ್ನ ಬಿಗಿದಪ್ಪುವುದು ಮಾಡಲಾರಂಭಿಸಿದ.ರಾದೆ ಇದೆಲ್ಲದರ ವರದಿ ಹುಸಿ ಗೋಪದಿಂದ ನನಗೆ ಒಪ್ಪಿಸುತ್ತಿದ್ದಳು.ಕೃಷ್ಣನ ಕಾಟ ಅತಿಯಾಗಿದೆ, ಕೆಲಸ ಮಾಡಲು ಸಹ ಬಿಡದೇ ಕಾಡುತ್ತಾನೆ ಎನ್ನುತ್ತಿದ್ದಳು. ನಾನು ನಗುತ್ತಿದ್ದೆ. ಆಗ ಅವಳ ಕೋಪ ಹೆಚ್ಚಾಗುತ್ತಿತ್ತು., ಕೃಷ್ಣನ ಮೇಲೆ.ನಾನೇನಾದರೂ ಅಕಸ್ಮಾತ್ ಕೃಷ್ಣನ ಬೈಯಲು ಶುರು ಮಾಡಿದರೆ ತಟ್ಟನೆ ಕೃಷ್ಣನ ತುಂಟಾಟ ಹೊಗಳಲು ಶುರು ಮಾಡುವಳು.
ಒಮ್ಮೆಯಂತೂ ರಾದೆ ಯಮುನೆಯಲ್ಲಿ ಸ್ನಾನ ಮಾಡುವಾಗ ಆಕೆಯ ವಸ್ತ್ರಗಳನ್ನ ಎತ್ತಿಕೊಂಡು ಮರವೇರಿ ಕೃಷ್ಣ ಕೊಳಲನೂದುತ್ತ ಕುಳಿತನಂತೆ.ರಾದೆ ಬಟ್ಟೆಗೆ ಅಂಗಲಾಚಿದಾಗ ಹಾಗೇ ಎದ್ದು ಮರದಡಿಗೆ ಬಂದು ಕೇಳು ಕೊಡುವೆ ಎಂದನಂತೆ. ಇದನ್ನ ನನಗೆ ಹೇಳುವಾಗ ರಾದೆಯ ಕಣ್ಣಲ್ಲಿ ಕೋಪವಿತ್ತಾ?ನಿನ್ನಂಥ ಸುಂದರಿಯ ಸೌಂದರ್ಯ ದರುಶನವಾಗುವದಾದರೇ ನಾನೂ ಹಾಗೆ ಮಾಡುತ್ತಿದ್ದೆ ಎಂದು ನಗುತ್ತಾ ಹೇಳಿದೆ.ರಾದೆ ಎದ್ದು ಬಂದು ಕೃಷ್ಣನಿಗೆ ದರುಶನ ವಿತ್ತಳಾ? ನನಗೆ ಹೇಳಲಿಲ್ಲ.
ಆರು ತಿಂಗಳಲ್ಲಿ ರಾದೆಯ ಮನ ಕೃಷ್ಣನೆಡೆಗೆ ವಾತ್ಸಲ್ಯವನ್ನು ಬೆಳೆಸಿಕೊಂಡಿತ್ತು. ಹಂಗಂತ ಆಕೆ ಅಂದುಕೊಂಡಳು (ನಂತರದಲ್ಲಿ ಆಕೆ ನನಗೆ ಹೇಳಿದ ಮಾತು ).ಪ್ರೀತಿ ನನ್ನ ಮೇಲೆಯೇ ಇತ್ತು. ಹಂಗಂತಲೂ ಆಕೆ ಅಂದುಕೊಂಡಿದ್ದಳು. ಗೋಕುಲದಲ್ಲಿ ಗುಸು ಗುಸು ಶುರುವಾಗಿತ್ತ? ರಾದ ಕೃಷ್ಣರ ಬಗ್ಗೆ. ಕೃಷ್ಣನಾಗಲೇ ದೇವರ ಪಟ್ಟಕ್ಕೇರಿದ್ದ. ಕೆಲವರು ಆತ ಹರಿಯ ಅವತಾರವೆಂದೇ ಹೇಳುತ್ತಿದ್ದರು. ನನಗೂ ಹೌದು ಎನಿಸಿತ್ತು. ದೇವರ ಕೆಲಸದ ಬಗ್ಗೆ ಶಂಕೆಯೇ ? ಯಾರಿಗೂ ಅವರಿಬ್ಬರ ಯಾವ ಕೆಲಸಗಳು ತಪ್ಪೇನಿಸಲಿಲ್ಲ. ಅಥವಾ ಹಾಗೇ ಅoದು ಕೊಂಡಿದ್ದರು.ರಾದೆಗೆ ಕಸಿವಿಸಿಯಾಯಿತೇನೋ. ಆಕೆಯೇ ಬಂದು ವಿವಾಹ ಆಗೋಣ ಎಂದಳು.ನನಗೋ ಸ್ವರ್ಗಕ್ಕೆ ಮೂರೇ ಗೇಣು.ನನ್ನ ಸೋದರಿ ಮತ್ತು ತಾಯಿ ಈ ವಿವಾಹದ ಬಗ್ಗೆ ಮತ್ತೊಮ್ಮೆ ರಾದೆ ಮನಃಪೂರ್ವಕವಾಗಿ ಒಪ್ಪಿದ್ದಾಳೆಯೇ ಎಂದು ಕೇಳಿದರು.ರಾದೆ ಮತ್ತೊಮ್ಮೆ ಹೂo ಎಂದಳು.
ಯಶೋದೆಯೇ ಮುಂದೆ ನಿಂತು ನನ್ನ ರಾದೆಯ ವಿವಾಹ ಮಾಡಿಸಿದಳು. ಹಾಗೆ ಮಾಡಿ ತನ್ನ ಮಗ ಕೃಷ್ಣನನ್ನ ರಾದೆಯ ಬಲೆಯಿಂದ ಬಿಡಿಸಿಕೊಂಡಳು ಎಂದು ಗೋಕುಲದಲ್ಲಿ ಕೆಲವರು ಮಾತನಾಡಿಕೊಂಡರು.ನಾನೋ ರಾದೆಯ ಮೋಹದಲ್ಲಿ ಕುರುಡನಾಗಿದ್ದೆ .ಏನೂ ಕೇಳಿಸಲಿಲ್ಲ. ರಾದೆ ಸಹ ಕುರುಡಾಗಿದ್ದಳು.ತನಗಿಂತ ಚಿಕ್ಕವನಾದ ಕೃಷ್ಣನ ಮೋಹ ಪಾಶದಿಂದ ಬಿಡಿಸಿಕೊಳ್ಳುವಆತುರದಲ್ಲಿ.
ಗೋಕುಲ ಮಾತ್ರ ಕುರುಡಾಗದೇ ಎಲ್ಲದಕ್ಕೂ ಸಾಕ್ಷಿಯಾಗಿತ್ತು.
ಗೋಕುಲದಲ್ಲಿ ಮೊದಲಿರುಳು ಯಮುನೆಯ ನಾವೆಯಲ್ಲಿಯೇ... ನಾವೆಯಲ್ಲಿ ನಾವಿಬ್ಬರೇ. ಅದ್ಬುತ ಸುಂದರಿ ರಾದೆಯೊಡನೆ ಮಿಲನಮಹೋತ್ಸವ.. ನನ್ನ ಸಂಯಮದ ಕಟ್ಟೆ ಒಡೆದಿತ್ತು.ದೋಣಿ ನೀರಿಗಿಳಿದೊಡನೆಯೇ ಆಕೆಯನ್ನ ಬಿಗಿದಪ್ಪಿದೆ. ಆಕೆ ಸಹ ಗಟ್ಟಿಯಾಗಿ ನನ್ನ ತಬ್ಬಿಕೊಂಡಳು. ತುಂಬಿದೆದೆಯ ಆಕೆಯ ಸ್ಫರ್ಶ ಆಪ್ಯಾಯಮಾನವಾಗಿತ್ತು. ಹಾಗೆ ರಾದೆಯನ್ನ ವಿವಸ್ತ್ರಗೊಳಿಸಲು ಆಕೆಯ ಕಂಚುಕ ಸಡಿಲಿಸಲು ಮುಂದಾದೆ. ಬೆಚ್ಚಗಿನ ದ್ರವ ಆಕೆಯ ಎದೆಯನ್ನ ತೋಯಿಸುತ್ತಿತ್ತು.
ರಾದೆ ಅಳುತ್ತಿದ್ದಳು.ನಿಶಬ್ದವಾಗಿ,.ಕೆನ್ನೆಯ ಮೇಲಿಂದ ಇಳಿದ ಕಣ್ಣೀರು ಆಕೆಯ ಕಂಚುಕವನ್ನೆಲ್ಲ ನೆನೆಸಿತ್ತು. ನಾನು ಗಾಭರಿಗೊಂಡೆ. ನೀಲಾಂಜನದ ಬತ್ತಿಯ ಬೆಳಕನ್ನು ಹೆಚ್ಚಿಸಿ ಆಕೆಯ ಮುಖ ನೋಡಿದೆ.
ಮ್ಲಾನವಾಗಿತ್ತು. ಯಾಕೆ ಎಂದೆ. ಆಕೆ ಮಾತಾಡಲಿಲ್ಲ. ಜೋರಾಗಿ ಅಳತೊಡಗಿದಳು. ಸ್ವಲ್ಪ ಹೊತ್ತು ಆಕೆಯ ಅಶ್ರುದಾರೆ ಒರೆಸಿದ ನಾನು ನಂತರದಲ್ಲಿ ಸುಮ್ಮನಾದೆ. ಅತ್ತು ಹಗುರಾದ ರಾದೆ ನನ್ನ ಕ್ಷಮಿಸು ಎಂದಳು. ಯಾಕೆ ಎಂದೆ.ನಾನಿನ್ನು ಅದಕ್ಕೆ ಮಾನಸಿಕವಾಗಿ ಸಿದ್ಧಳಾಗಿಲ್ಲ ಎಂದಳು. ಯಾಕೆ ಎಂದೆ. ಗೊತ್ತಿಲ್ಲ ಎಂದು ಮತ್ತೆ ಅಳತೊಡಗಿದಳು.ಹೋಗಲಿ ಬಿಡು ನಾನು ಕಾಯಲು ಸಿದ್ಧ ಎಂದೆ. ನೀನೇಕೆ ಇಷ್ಟೊಂದು ಒಳ್ಳೆಯವ ಎಂದು ರಾದೆ ಮತ್ತೆ ಅತ್ತಳು. ನಿನಗಲ್ಲದೇ ಇನ್ನಾರಿಗೆ ಒಳ್ಳೆಯವನಾಗಲಿ ಎಂದೆ.ರಾದೆ ಮತ್ತೆ ನನ್ನ ಬಿಗಿದಪ್ಪಿ ತನ್ನ ಮಡಿಲಲ್ಲಿ ನನ್ನ ತಲೆ ಇಟ್ಟು ಗುನುಗತೊಡಗಿದಳು. ಆಕೆಯ ಕಣ್ಣ ತುಂಬೆಲ್ಲ ನನ್ನೆಡೆಗೆ ವಾತ್ಸಲ್ಯ. ಪ್ರೀತಿ ಕಾಣಲಿಲ್ಲ ಮೊದಲ ಬಾರಿಗೆ.ಭಯ ಮತ್ತು ಅನುಮಾನ ಮೊದಲ ಬಾರಿಗೆ ನನಗೆ ಉಂಟಾಯಿತು.ಮದುವೆಗೆ ಅವಸರ ಮಾಡಿದ್ದು ಅವಳೇ... ಈಗ ನೋಡಿದರೆ ಹೀಗೆ...
ಸ್ವಲ್ಪ ಹೊತ್ತಿನಲ್ಲಿ ರಾದ ತನ್ನ ಸುಶ್ರಾವ್ಯ ಕಂಠದಲ್ಲಿ ಹಾಡಲು ಶುರು ಮಾಡಿದಳು. ಆಕೆಯ ಕೈ ನನ್ನ ಮುಖವನ್ನ ನೇವೆರಿಸುತ್ತಿತ್ತು. ವಿರಹದ ಬಾದೆಯಿಂದ ನರಳಿ ಪ್ರಿಯಕರ ನನ್ನ ದೈನ್ಯದಿಂದ ಪ್ರೇಮಭಿಕ್ಷೆ ಬೇಡುವ ಹಾಡು. ಎಂಥಹ ನೋವಿತ್ತು ಆಕೆಯ ದನಿಯಲ್ಲಿ. ದೂರದಾಗಸದಲ್ಲಿ ಕೃಷ್ಣ ಆಕೆಯ ಹಾಡು ಕೇಳಿ ಪ್ರತ್ಯಕ್ಷನಾದನಾ ಎನ್ನಿಸಿತು. ನಾನು ನಿದ್ದೆ ಬಂದಂತೆ ನಟಿಸಿದೆ.ರಾದೆಯ ಹಾಡು ರಾತ್ರಿಯಿಡೀ ಮುಂದುವರೆದಿತ್ತು. ನೀಲಾಂಜನ ಯಾವಾಗಲೋ ಆರಿ ಹೋಗಿತ್ತು. ಮೊದಲಿರುಳು ಮುಗಿದಿತ್ತು.
ಮೊದಲ ತಪ್ಪು ಮಾಡುವಾಗ ಮಾತ್ರ ಪಾಪ ಪುಣ್ಯದ ಭೀತಿ. ನಂತರ ಮನಸು ಪಾಪಕ್ಕೆ ಒಗ್ಗಿಕೊಳ್ಳುತ್ತೆ.ರಾದೆ ಕೂಡ ಹಾಗೆಯೇ ಆದಳು. ಮದುವೆ ಕೃಷ್ಣನೆಡೆಗಿನ ಆಕರ್ಶಣೆಯನ್ನು ನಿಲ್ಲಿಸುತ್ತೆ ಅಂದುಕೊಂಡಿದ್ದು
ಸುಳ್ಳಾಯಿತು.ಎರಡು ದಿನ ಸುಮ್ಮನಿದ್ದ ಆಕೆ ನೀರಿನಿಂದ ಹೊರಬಿಟ್ಟ ಮೀನಿನOತಾದಳು ಕೃಷ್ಣ ಸಾಂಗತ್ಯವಿಲ್ಲದೇ.
ಕೃಷ್ಣನೂ ಹಾಗೆಯೇ.. ಎಲ್ಲ ಗೋಪಿಕೆಯರೂ ತಪಿಸುವಂತೆ ಮಾಡುತ್ತಿದ್ದ. ಸಂಜೆಯಾಗುತ್ತಲೇ ಬೃಂದಾವನಕ್ಕೆ ಹೋಗಿ ಕೊಳಲನೂದುತ್ತಿದ್ದ.. ಮನೆಯಲ್ಲಿ, ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ, ಮಕ್ಕಳ ಲಾಲನೆ ಮಾಡುವ ಗೋಪಿಕೆಯರು ಬೇರೆಯವರಿಗೆ ಅರಿವಾಗುವಷ್ಟರಲ್ಲಿ ಅಲ್ಲಿಂದ ಜಾರಿಕೊಂಡು ಬೃಂದಾವನಕ್ಕೆ ಹೋಗುತ್ತಿದ್ದರು. ಅಲ್ಲಿ ಕೃಷ್ಣ ಲೀಲೆಯಂತೆ. ಪ್ರತಿ ಗೋಪಿಕೆಯೊಂದಿಗೂ ಕೃಷ್ಣ ತಾನಿರುವಂತೆ ಭ್ರಮೆ ಸೃಷ್ಟಿಸುತ್ತಿದ್ದನಂತೆ.. ಅವರನ್ನ ರೇಗಿಸಿ, ರಮಿಸಿ, ಕುಣಿಸಿ, ಹಾಡಿಸಿ ನಸುಕಿನ ಜಾವಕ್ಕೆ ಮನೆಗೆ ಕಳಿಸುತ್ತಿದ್ದನಂತೆ. ರಾತ್ರಿಯೆಲ್ಲಾ ಕೃಷ್ಣ ಸಂಗದಲ್ಲಿ ಕಳೆದ ಗೋಪಿಕೆಯರು ಸುಸ್ತಾಗಿ ತೂಕಡಿಸುತ್ತಾ ಮನೆಗೆ ಬರುವ ಹಾದಿಯಲ್ಲಿ ಆಗಷ್ಟೇ ಪೂರ್ಣ ನಿದ್ದೆ ಮುಗಿಸಿ ಎದ್ದು ಸ್ನಾನ ಮಾಡಿ, ಉಪಹಾರ ಮುಗಿಸಿ ಕೊಳಲನೂದುತ್ತಾ ಗೋವುಗಳನ್ನು ಕಾಡಿಗೆ ಕರೆದುಕೊಂಡು ಹೋಗುವ ನಗೆ ಮೊಗದ ಮುದ್ದು ಕೃಷ್ಣ ಎದುರಾಗುತ್ತಿದ್ದನಂತೆ. ಅರೆ ನನ್ನ ಜೊತೆ ರಾತ್ರಿ ಕಳೆದ ಕೃಷ್ಣ ನಿದ್ದೆ ಯಾವಾಗ ಮಾಡಿದ, ಯಾವಾಗ ಹೋದ ಎಂದು ತಲೆ ಕೆಡಿಸಿಕೊಂಡು ಗೋಪಿಕೆಯರು ಬೇಗನೆ ಮೊಸರು ಕಡೆಯಲು ಹೋಗುತ್ತಿದ್ದರು.
ರಾದೆ ಕೂಡ ಹಾಗೆಯೇ.ವಿವಾಹ ಬಂಧನ ಆಕೆಯ ಪಾಲಿಗೆ ಗೂಳಿಯನ್ನ ಬಂಧಿಸಲು ಹಾಕಿದ ತೆಳುವಾದ ದಾರದಂತಾಯಿತು..ಮೊದಲೆರಡು ದಿನ ಕಣ್ಣ ತಪ್ಪಿಸಿ ಕೃಷ್ಣನ ನೋಡಲು ಹೋದವಳು ನಂತರದ ದಿನಗಳಲ್ಲಿ ರಾಜಾರೋಶವಾಗಿ ಹೋಗತೊಡಗಿದಳು. ಮನೆಯ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಯಾರೊಡನೆಯು ಮಾತುಕತೆ ಇಲ್ಲ. ನನ್ನ ಊಟವನ್ನ ಆಸ್ಥೆಯಿ೦ದ ಸಿದ್ದಪಡಿಸಿ, ಬಿಸಿ ಬಿಸಿಯಾಗಿ ಬಡಿಸಿ ಗಾಳಿ ಹಾಕುತ್ತ ಕೂರುತ್ತಿದ್ದಳು.ಹಾಸಿಗೆಯನ್ನ ಸಿದ್ದಪಡಿಸಿ ಬೇರೆ ಕೋಣೆಗೆ ತೆರಳಿ ಮಲಗುತ್ತಿದ್ದಳು. ಪಾಪಪ್ರಜ್ಞಯೋ, ಪಶ್ಚಾತಾಪವೋ ನನ್ನೆಡೆಗೆ ಆಕೆಯಲ್ಲಿ ಇತ್ತು.ಅದಕ್ಕೆ ಆಕೆ ನನ್ನ ಯಾವತ್ತೂ ದ್ವೇಶಿಸಲಿಲ್ಲ.. ಪ್ರೀತಿ ಇರಲಿಲ್ಲ ಅಷ್ಟೇ. ಆ ಕಾರಣಕ್ಕೆ ರಾದೆ ನನಗೆ ಹೆಚ್ಚು ಇಷ್ಟವಾದಳ ? ಗೊತ್ತಿಲ್ಲ.
ಮೊದ ಮೊದಲು ಚೆನ್ನ ಮತ್ತು ಇತರ ಗೆಳೆಯರು, ನಂತರದಲ್ಲಿ ತಾಯಿ ಮತ್ತು ಸೋದರಿ ರಾಧಾಕೃಷ್ಣರ ಬಗ್ಗೆ ನನಗೆ ಹೇಳಿದರು.ಬೃಂದಾವನದಲ್ಲಿ ತೂಗುಮಂಚದ ಮೇಲೆ ಮಲಗಿ ರಮಿಸುತ್ತಿದ್ದ ಬಗ್ಗೆ, ಯಮುನೆಯ ತೀರದಲ್ಲಿ ಉನ್ಮತ್ತ ರಾದೆ ಕೃಷ್ಣನ ಬಿಗಿದಪ್ಪಿ ಹೊರಳಾಡುತ್ತಿದ್ದ ಬಗ್ಗೆ, ಕೇವಲ ಕೃಷ್ಣನಿಗೆ ಮಾತ್ರ ರಾದೆ ಹಾಡುತ್ತಿದ್ದ , ಕುಣಿಯುತ್ತಿದ್ದ ಬಗ್ಗೆ, ಕೃಷ್ಣನ ಕುರಿತೇ ಹಾಡುತ್ತಿದ್ದ ಬಗ್ಗೆ ಬಗೆ ಬಗೆಯಾಗಿ ವಿಷಯ ನನ್ನ ತಲುಪುತ್ತಿದ್ದವು.ತಾಯಿ ,ಸೋದರಿ ನನ್ನಿದುರಿನಲ್ಲಿ ಒಮ್ಮೆ ಅವಳ ಪ್ರಶ್ನೆ ಮಾಡಿದ್ದರು.ಮೌನವೇ ರಾದೆಯ ಉತ್ತರ.ನಾನಿಲ್ಲದಿದ್ದಾಗ ಒಮ್ಮೆ ತಾಯಿ ಜೋರು ಮಾಡಿ ಕೇಳಿದಳOತೆ.ರಾದೆ ಬಿರು ನೋಟ ಬೀರಿದ್ದಾಳೆ. ಅಂದಿನಿಂದ ಯಾರೂ ಆಕೆಯನ್ನ ಪ್ರಶ್ನೆ ಮಾಡಲಿಲ್ಲ. ಪ್ರಶ್ನೆ ಮಾಡಬೇಕಿದ್ದ ನಾನು ಸುಮ್ಮನಿದ್ದೆ.ಹೇಡಿತನವಾ ?ಕಾಲಾoತರದಲ್ಲಿ ನಾನು ಇಷ್ಟವಾಗದೇ ಹೋಗಿದ್ದರೆ ರಾದೆ ಯಾಕೆ ನನ್ನ ಮದುವೆಯಾಗಿ ಇಬ್ಬರ ಬಾಳೂ ಹಾಳು ಮಾಡಿದಳು.? ಆಕೆ ಎಂದೂ ಬಾಯಿ ಬಿಟ್ಟು ಇದಕ್ಕೆ ಉತ್ತರ ಹೇಳಲಿಲ್ಲ. ನಾನು ಊಹಿಸಿದ್ದಿಷ್ಟು.ರಾದೆಗೆ ಯಶೋದೆಯ ಭಯವಿತ್ತು. ತನ್ನ ಮಗನಿಗಿಂತ ದೊಡ್ಡವಳಾದ ರಾದೆಯನ್ನು ಆಕೆ ಎಂದೂ ಸೊಸೆಯಾಗಿ ಒಪ್ಪುತ್ತಿರಲಿಲ್ಲ. ಈಗಂತೂ ರಾದೆ ಮದುವೆಯಾದ ಗೃಹಿಣಿ.ರಾದೆಯಂತೆ ಯಶೋದೆ ಕೂಡ ತನ್ನ ಮಗ ತನಗೆ ಮಾತ್ರ ಸೇರಿದವನು ಎಂದುಕೊಂಡಿದ್ದಳು.ಅದಕ್ಕೆ ಕೃಷ್ಣ ರಾಧೆಯ ಹಿಂದೆ ಬಿದ್ದಿದ್ದಾನೆ ಎಂದು ಗೊತ್ತಾದ ತಕ್ಷಣ ಲಗುಬಗೆಯಿಂದ ನನ್ನ ಜೊತೆ ರಾದೆಯ ಮದುವೆ ತಾನೇ ನಿಂತು ಮಾಡಿಸಿದ್ದಳು.ಯಶೋದೆ ಹಾಗೂ ರಾದೆ ಇಬ್ಬರಿಗೂ ಅದಮ್ಯ ವಿಶ್ವಾಸ .ಕೃಷ್ಣ ಕೊನೆಯವರೆಗೂ ತಮ್ಮ ಜೊತೆ ಮಾತ್ರ ಉಳಿಯುತ್ತಾನೆ ., ತಮ್ಮ ಮಾತು ಮಾತ್ರ ಕೇಳುತ್ತಾನೆ ಎಂದು . ಪಾಪ, ಕೃಷ್ಣ ಭಗವಂತ. ಇಬ್ಬರಿಗೂ ಆಗ ಅರಿವಿರಲಿಲ್ಲ.ಅವರ ಅಹಂಕಾರ ಮುರಿದು ಇಬ್ಬರನ್ನೂ ತೊರೆದು ಲೋಕಕಲ್ಯಾಣಕ್ಕಾಗಿ ಕೃಷ್ಣ ದೂರ ಹೋಗುವನೆಂದು.ಅದಕ್ಕೆ ರಾದೆ ಸಾಯುವವರೆಗೂ ಕೃಷ್ಣನಿಗೆ ಸಖಿಯಾಗಿಯೇ ಉಳಿಯಲು ಬಯಸಿದ್ದು.
ಗೋಕುಲದಲ್ಲಿ ಕೃಷ್ಣನಿಗೆ ದೇವರ ಪಟ್ಟ ಸಿಕ್ಕ ಮೇಲೆ ಆತನ ಎಲ್ಲ ಕೃತ್ಯಗಳು ಸಹ್ಯವಾಯಿತು. ಆತನ ಹಿಂಬಾಲಕರಿಗೆ ಆತನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲೇಬೇಕಿತ್ತು .ರಾದಾ ಕೃಷ್ಣ ಸಂಭಂದ ಎಲ್ಲೆ ಮೀರಿ ಮುಂದುವರೆದಿದ್ದು ದೊಡ್ಡ ಗುಲ್ಲಾಗಿತ್ತು.ದೇವರ ಅವತಾರ ತಪ್ಪು ಮಾಡುತ್ತಾ? ಸಾಧ್ಯವೇ ಇಲ್ಲ. ಅದಕ್ಕೆ ರಾಧಾಕೃಷ್ಣರ ಸಂಭಂದದ ಸಮರ್ಥನೆಗೆ ಕೃಷ್ಣನ ಹಿಂಬಾಲಕರು ತೊಡಗಿದರು.ಅದು ಶುದ್ಧ ಪ್ರೀತಿಯಂತೆ,ದೈವಿಕವoತೆ, ಭಕ್ತಿರಸ ಪ್ರಧಾನ ಪ್ರಣಯವಂತೆ. ಅವರಿಬ್ಬರ ಮೇಲೆ ಲಾವಣಿ ಕಟ್ಟಿ ಹಾಡಲಾರಂಭಿಸಿದರು.ಅವರ ಸಂಭಂದಕ್ಕೆ ದೈವತ್ವ ಲಭಿಸಿತು.ಬಲಿಪಶುವಾಗಿದ್ದು ನಾನು.ನಾನು ನಪುಂಸಕನಂತೆ ಅದಕ್ಕೆ ರಾದ ನನ್ನ ಬಿಟ್ಟು ಕೃಷ್ಣನೆಡೆಗೆ ಹೋಗಿದ್ದು, ಹೋದಲ್ಲಿ ಬಂದಲ್ಲಿ ನನ್ನೆಡೆಗೆ ಅಪಹಾಸ್ಯದ ಮಾತುಗಳು, ಕುಹಕಗಳು ಹೆಚ್ಚಾದವು.ಹೊರಗೆ ಹೋಗುವುದೇ ದುಸ್ತರವಾಯಿತು.
ಈ ಮಾತುಗಳು ರಾದೆಯ ಕಿವಿಗೂ ಬಿದ್ದಿರಬೇಕು. ಪಾಪಪ್ರಜ್ಞ ಕಾಡಿರಬೇಕು. ಕರುಣೆಯಿಂದ ನನ್ನ ನಪುಂಸಕತೆಗೆ ಹಿನ್ನೆಲೆಯೊಂದು ಸೃಷ್ಟಿಯಾಯಿತು.
ನಾನು ಶಾಪಗ್ರಸ್ಥ ಗಂಧರ್ವನಂತೆ.ತಪಸ್ಸು ಮಾಡಿ ವಿಷ್ಣುವಿನ ಮಡದಿ ಲಕ್ಷ್ಮಿಯ ಮದುವೆಯಾಗಲು ಹವಣಿಸಿದೆನಂತೆ. ಅದಕ್ಕೆ ಕೋಪಗೊಂಡ ಹರಿ ಶಪಿಸಿದನಂತೆ. ಮುಂದಿನ ನರಜನ್ಮದಲ್ಲಿ ಲಕ್ಷ್ಮಿಯನ್ನ ಮದುವೆಯಾಗುತ್ತೀಯಾ ಆದರೆ ನಪುಂಸಕನಾಗುತ್ತಿಯಾ ಎಂದು.ಗಂಗೆ ವಿವಾಹಿತ ಶಿವನನ್ನ ಪ್ರೀತಿಸಿದ್ದು, ಭೂ ದೇವಿ ಮದುವೆಯಾದ ಹರಿಯನ್ನ ವರಿಸಿದ್ದು ಸಹ್ಯವಾದರೆ ಗಂಧರ್ವ ಮಾಡಿದ್ದು ಯಾಕೆ ಅಸಹ್ಯ? ದೇವರಲ್ಲೂ ಲಿಂಗಭೇದವೆ?ಒಟ್ಟಿನಲ್ಲಿ ಒಂದೇ ಏಟಿಗೆ ಎರಡು ಹಕ್ಕಿಗಳನ್ನ ಹೊಡೆದಿದ್ದರು.ನಾನು ಷoಡ, ರಾದೆಗೆ ಲಕ್ಷ್ಮಿ ಪಟ್ಟಮೈ ಧಗಧಗನೇ ಉರಿದು ಹೋಗಿತ್ತು ಇದನ್ನ ಕೇಳಿ.ದೇವರು ಯಾಕೆ ದೇವರಾಗಿರಲ್ಲ.
ದೇವರಾಗಿಯೇ ಭಕ್ತರಿಗೆ ಒಳ್ಳೆಯದು ಮಾಡಬಹುದಲ್ಲ.ಯಾಕೆ ಮನುಷ್ಯನ ಅವತಾರ ಎತ್ತಿ ಅತಿಮಾನುಷ ಶಕ್ತಿ ಹೊಂದುತ್ತಾನೆ?ನಾನೋ ಸಾಮಾನ್ಯ. ಆತನನ್ನ ಹೇಗೆ ಎದುರು ಹಾಕಿಕೊಳ್ಳಬಲ್ಲೆ?ಹೇಗೆ ಗೆಲ್ಲಬಲ್ಲೆ?
ಅಸಮಾನರ ನಡುವಿನ ಪಂದ್ಯ ಅನ್ಯಾಯವಲ್ಲವಾ? ಇದನ್ನ ದೇವರು ಮೆಚ್ಚುತ್ತಾ ನಾ?ದೇವರೇ ಹೀಗೆ ಮಾಡಿದಾಗ ಯಾರಲ್ಲಿ ದೂರಲಿ?
ಕೊನೆಗೂ ಕೃಷ್ಣನ ವಿರುದ್ಧ ತೊಡೆ ತಟ್ಟಲು ನಿರ್ಧರಿಸಿದೆ. ಗೆಳೆಯ ಚೆನ್ನ ನನಗಾಗಿ ದೇವರ ವಿರುದ್ಧ ನಿಲ್ಲಲು ಒಪ್ಪಿದ. ಕೃಷ್ಣನ ಕೊರಳಪಟ್ಟಿ ಹಿಡಿದು ಕೇಳಬೇಕು ಯಾಕೆ ಹೀಗೆ ಮಾಡಿದೆ ಎಂದು ? ಗೋಕುಲದಲ್ಲಿ ಕೃಷ್ಣ ಆಗಾಗ ಎದುರಾಗುತ್ತಿದ್ದ .ಜೊತೆಯಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು. ನಾನು ಪೆಚ್ಚು ನಗೆ ನಕ್ಕು ಸರಿದು ಹೋಗುತ್ತಿದ್ದೆ. ಕೃಷ್ಣ ಮಾತಾಡದೆ ಮುಂದೆ ಹೋಗುತ್ತಿದ್ದ .ಮಾತಿಗೆಲ್ಲ ಬಗ್ಗುವುದಿಲ್ಲ ಕಳ್ಳ ಕೃಷ್ಣ.
ಆತನ ಜೀವಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದೆ.ಚೆನ್ನ ಜೊತೆಗಿದ್ದ. ಗುದ್ದಾಟದಲ್ಲಿ ನಾನು ಸತ್ತರೂ ಪರವಾಗಿಲ್ಲ. ನನ್ನ ಸಂಕಟಕ್ಕಾದರೂ ಮುಕ್ತಿ ದೊರೆಯುತ್ತೆ.ಕೊನೆಗೂ ಕೃಷ್ಣನನ್ನ ಕೊಲ್ಲುವ ಘಳಿಗೆ ಕೂಡಿಬಂತು.
ಚೆನ್ನ ಬಂದು ಹೇಳಿದ್ದ ಬೃಂದಾವನದಾಚೆಯ ಕಾಡಿನ ಅಂಚಿಗೆ ಆ ರಾತ್ರಿ ಕೃಷ್ಣ ಒಬ್ಬನೇ ನಿರಾಯುಧನಾಗಿ ರಾದೆಯ ಭೇಟಿಗೆ ಬರುತ್ತಾನೆ ಎಂದು.ಗಂಡುಗೊಡಲಿಯನ್ನೆತ್ತಿಕೊ೦ಡು ಸದ್ದಿಲ್ಲದೇ ರಾದೆಯನ್ನ ಹಿಂಬಾಲಿಸಿದೆ.ಅಮವಾಸ್ಯೆಯ ಹಿಂದಿನ ರಾತ್ರಿ, ಚಂದ್ರಿಕೆಯ ಬೆಳಕಿರಲಿಲ್ಲ.ರಾದೆ ಸರಸರ ಕಾಡೊಳಗೆ ಹೋದಳು. ನಾನು ಮರದ ಮರೆಯಲ್ಲಿ ನಿಂತು ನೋಡುತ್ತಿದ್ದೆ. ಕೃಷ್ಣ ಬಂದ.ಕತ್ತಲು. ಎಲ್ಲ ಮಸುಕಾಗಿ ಕಾಣುತ್ತಿತ್ತು. ಅರ್ಧಗಂಟೆ ಜೊತೆಯಲ್ಲಿ ಕಳೆದಿರಬೇಕು. ನನ್ನ ರೋಶ ಹೆಚ್ಚುತ್ತಿತ್ತು.ಕೊಡಲಿಯನ್ನು ಭದ್ರವಾಗಿ ಹಿಡಿದೆ.ಇದ್ದಕ್ಕಿದ್ದಂತೆ ರಾದೆ ಹೊರ ಬಂದು ಬಿರಬಿರನೆ ನಡೆದು ನನ್ನ ಗಮನಿಸದೇ ಹಾಗೇಹೋದಳು.
ಅವಳು ಅಳುತ್ತಿದ್ದಳಾ?ಹಾಗನ್ನಿಸಿತು.ನನ್ನ ಗಮನವೆಲ್ಲ ಕೃಷ್ಣನ ಬರುವಿಕೆಯ ಕಡೆಗಿತ್ತು.ಗಂಡುಗೊಡಲಿಯನ್ನ ಎತ್ತಿ ಹಿಡಿದೆ.ಸ್ವಲ್ಪ ಸಮಯದ ನಂತರ ಕೃಷ್ಣ ನನ್ನೆಡೆಗೆ ನಡೆದು ಬಂದ., ನಿಧಾನವಾಗಿ.ತಟ್ಟನೆ ಕೃಷ್ಣನೆದುರಿಗೆ ಜಿಗಿದು ನಿಂತೆ.ಸಾವಿರ ಪ್ರಶ್ನೆಗಳಿದ್ದವು ಕೇಳಲು, ಆತನ ಕೊಲ್ಲುವ ಮೊದಲು.ಕೃಷ್ಣ ಆಶ್ಚರ್ಯಗೊಂಡ. ಆತನ ಮುಖ ಶಾಂತವಾಗಿತ್ತು. ತುಟಿಯಲ್ಲಿ ಕಿರುನಗೆ"ಹೇಗಿದ್ದೀಯಾ ಅಯನ ಘೋಶ" ಎಂದ.ಭಯ ಇನಿತು ಇರಲಿಲ್ಲ ಅವನ ಮುಖದಲ್ಲಿ.ನನ್ನ ಬಾಯಿಂದ ಮಾತೇ ಹೊರಡಲಿಲ್ಲ.ಭಗವಂತ ಎದುರಿಗೆ ನಿ೦ತು ಕ್ಷೇಮ ಸಮಾಚಾರ ಕೇಳುತ್ತಿದ್ದಾನೆ.ಏನು ಹೇಳಲಿ?ಕೃಷ್ಣನ ಕಾಲ ಬಳಿ ಕುಸಿದೆ.
ಆತನ ಕಾಲುಗಳನ್ನ ಗಟ್ಟಿಯಾಗಿ ಹಿಡಿದುಕೊಂಡು ಅಳಲಾರಂಬಿಸಿದೆ. ಆತನ ಪಾದಗಳನ್ನ ನನ್ನ ಕಣ್ಣೀರು ತೊಳೆದವು. ಮಾತೇ ಹೊರಡಲಿಲ್ಲ ನನ್ನಿಂದ.ಕೃಷ್ಣ ನಗುತ್ತಾ ಬಗ್ಗಿ ನನ್ನ ಮೈದಡವಿದ. ನನ್ನನ್ನ ಎಬ್ಬಿಸಿ ನಿಲ್ಲಿಸಿ ಅಪ್ಪಿಕೊಂಡು ತನ್ನ ಬಲಗೈ ನನ್ನ ತಲೆಯ ಮೇಲಿಟ್ಟ. ನಾನು ನಡುಗುತ್ತಿದ್ದೆ.. ಮೈ ರೋಮಾಂಚನಗೊಳ್ಳುತ್ತಿತ್ತು." ಎಲ್ಲವೂ ಒಳ್ಳೆಯದಾಗುತ್ತೆ. ನೀನು ತುಂಬಾ ಒಳ್ಳೆಯವ ಅಯನ "ಇಷ್ಟು ನುಡಿದು ಕೃಷ್ಣ ಬಿರಬಿರನೆ ಹೋಗಿಬಿಟ್ಟ.ನನ್ನ ಮನಸ್ಸು ಶಾಂತವಾಗಿತ್ತು. ಅನಿವರ್ಚನೀಯವಾದ ಆನಂದ ಎದೆಯಲ್ಲಿ. ಆ ಕ್ಷಣಕ್ಕೆ ರಾದೆ ಮರೆತು ಹೋದಳು.ಕೃಷ್ಣನ ಪಾದವೊಂದೇ ನೆನಪಿನಲ್ಲಿ ಉಳಿದದ್ದು.ಮನೆಗೆ ಬಂದಾಗ ಮೂಡಣದಲ್ಲಿ ಸೂರ್ಯ ಮೂಡುತ್ತಿದ್ದ.
ಮುಂದಿನದೆಲ್ಲ ಕನಸಿನಂತೆ ನಡೆದುಹೋಯಿತು ಬೆಳಿಗ್ಗೆ ಎದ್ದಾಗ ಗೋಕುಲದಲ್ಲಿ ಅಲ್ಲೋಲಕಲ್ಲೋಲ .ಕೃಷ್ಣ ಬಲರಾಮನೊಡನೆ ಗೋಕುಲವನ್ನು ಬಿಟ್ಟು ಮಥುರೆಗೆ ಹೋಗಿದ್ದ.ಯಶೋಧೆ ರಾಧೆ ಹಾಗು ಎಲ್ಲಾ ಗೋಪಿಕೆಯರು ಅಳುತ್ತಿದ್ದರು.ಕೃಷ್ಣ ಮಥುರೆಯ ಅರಸನ ಮಗನಂತೆ ,ಯಶೋದೆಗೆ ಸಾಕುಮಗನಂತೆ ಎಂಬ ವಿಚಾರ ಎಲ್ಲರ ಬಾಯಲ್ಲಿತ್ತು. ಕೃಷ್ಣ ಯಾರಿಗೂ ದಕ್ಕದೆ ಹೊರಟುಹೋಗಿದ್ದ.ಮುಂದೆ ಕೆಲವೇ ದಿನಗಳಲ್ಲಿ ಕಂಸನ ಕೊಂದು ಕೃಷ್ಣ ಪಟ್ಟಕ್ಕೇರಿದ. ಮಥುರೆಯ ಅರಸನಾದ. ನಂತರದ ಕೆಲವೇ ದಿನಗಳಲ್ಲಿ ರಾಜಧಾನಿಯನ್ನ ಮಥುರೆಯಿಂದ ದೂರದ ದ್ವಾರಕೆಗೆ ಬದಲಾಯಿಸಿದ.ಎಲ್ಲೋ ದೂರದ ಸಮುದ್ರ ತೀರದ ರೇವು ಪಟ್ಟಣವಂತೆ. ಹಾಗಾಗಿ ಮತ್ತೆ ಬರುತ್ತೆನೋ ಇಲ್ಲವೋ ಎಂದು ಕೊನೆಯ ಬಾರಿ ಗೋಕುಲಕ್ಕೆ ದೇವಕಿ ನಂದನನಾಗಿ ಭೇಟಿ ಇತ್ತಿದ್ದ.ಯಶೋದೆಯ ದುಃಖ ಹೇಳತೀರದು. ಗೋಪಿಕೆಯರೆಲ್ಲ ಕೃಷ್ಣನ ಸಾಂಗತ್ಯ ನೆನೆದು ಅವನ ತಬ್ಬಿ ಹಿಡಿದು ಅಳುತ್ತಿದ್ದರು. ಕೃಷ್ಣ ಎಲ್ಲರ ಸಮಾಧಾನ ಪಡಿಸಿ ರಾದೆಯನ್ನ ನೋಡದೇ, ಆಕೆಯ ಕುರಿತು ವಿಚಾರಿಸದೇ ಕೊನೆಯ ವಿದಾಯ ಹೇಳಿ ಹೋಗಿದ್ದ.ಭಗವಂತ ನನಗಿತ್ತ ಮಾತು ಉಳಿಸಿಕೊಂಡಿದ್ದ.ಅದನ್ನೇ ಚೆನ್ನ ಬಂದು ಹೇಳಿದ್ದು.ಕೃಷ್ಣ ಕಂಸವದೆ ಮಾಡಲು ತೆರಳಿದ ಮೇಲೆ ರಾದೆ ನನ್ನ ಮನೆ ಬಿಟ್ಟು ಬೇರೆ ಗುಡಿಸಲಿನಲ್ಲಿ ವಾಸಿಸತೊಡಗಿದ್ದಳು. ಸದಾ ಕೃಷ್ಣ ಧ್ಯಾನ, ಕೃಷ್ಣ ಭಜನೆ ಮತ್ತು ಅವನು ಹಿಂದುರುಗುತ್ತಾನೆ ಎಂಬ ಭರವಸೆಯಿಂದ ಕಾಯುತ್ತಿದ್ದಳು. ಈಗ ಕೃಷ್ಣ ಬಂದು ಅವಳನ್ನ ನೋಡದೇ ಕೇಳದೇ ಹೋದ.ರಾದೆ ನನ್ನವಳು.ಭಗವಂತ ಈಗ ನನ್ನ ಪಕ್ಷ .ರಾದೆಯ ಮನ ಗೆಲ್ಲಲು ಪ್ರಯತ್ನ ಮಾಡುತ್ತೇನೆ. ಆಕೆಯನ್ನು ಮತ್ತೆ ಒಲಿಸಿಕೊಳ್ಳುತ್ತೇನೆ.ಗೋವರ್ಧನ ಗಿರಿ ತಡಿಯ ನಾಗರ ಬನದ ಕೇದಗೆ ಹೂಗಳು ಅವಳಿಗಿಷ್ಟವಂತೆ.ಕೃಷ್ಣನನ್ನ ಅದನ್ನು ತಂದು ಕೊಡಲು ಸದಾ ಕಾಡುತ್ತಿದ್ದಳಂತೆ. ಕೃಷ್ಣ ತಂದು ಕೊಟ್ಟಿರಲಿಲ್ಲ.ನಾನು ತಂದು ಕೊಡುತ್ತೇನೆ ನನ್ನ ರಾದೆಗೆ,ಕೇದಗೆ ಹೂಗಳ ರಾಶಿಯನ್ನ ಎಂದು ಜೋರಾಗಿ ಹೇಳಿ ಚೆನ್ನನನ್ನಿಡಿದು ಎತ್ತಿ ಸಂತಸದಿಂದ ತಿರುಗಿಸಿದೆ.ಗೆಳೆಯ ಚೆನ್ನ ಸಂತಸದಿಂದ ನಗುತ್ತಿದ್ದ.
ನನಗಾಗಿ, ನನ್ನ ಸಂತೋಶಕ್ಕಾಗಿ.