ಉತ್ತಮ ಪುರುಷ
ಉತ್ತಮ ಪುರುಷ


"ಸೌಂದರ್ಯ ದೇಹದಲ್ಲಿಲ್ಲ, ನೋಡುವ ಕಣ್ಣುಗಳಲ್ಲಿ ಕೂಡ ಇಲ್ಲ. ಅದು ನಾ ಅನುಭವಿಸೋ ತೃಪ್ತಿಯಲ್ಲಿದೆ. ಇಷ್ಟೊಂದು ತೃಪ್ತಿಯ ಸುಖ ಕೊಟ್ಟ ನೀನೇ ನನ್ನ ಉತ್ತಮ ಪುರುಷ "
ಅಶ್ವ ಶಾಲೆಯ ಹುಲ್ಲಿನ ಹಾಸಿನ ಮೇಲೆ ಮಲಗಿ ನನ್ನ ಮುಖವನ್ನ ತನ್ನ ಎರಡೂ ಕೈಯಲ್ಲಿ ತೆಗೆದುಕೊಂಡು, ಕಣ್ಣಲ್ಲಿ ಕಣ್ಣಿಟ್ಟು ಅಮೃತಮತಿ ಮೇಲಿನ ಮಾತು ನನಗೆ ಹೇಳಿದಾಗ ಒಳಗೆಲ್ಲೋ ಮಲಗಿದ್ದ ನನ್ನ ಅಹಂ ಖುಷಿಯಿ೦ದ ಹೆಡೆಯೆತ್ತಿದ್ದು ನಿಜ.ಈ ತರಹದ ಒಂದು ರಾತ್ರಿ ನನ್ನ ಜೀವನದಲ್ಲೂ ಬರಬಹುದು ಎಂದು ಕನಸು ಮನಸಿನಲ್ಲೂ ನಾನು ಊಹಿಸಿರಲಿಲ್ಲ.ಹೇಗೆ ಊಹಿಸಲು ಸಾಧ್ಯವಿತ್ತು?
ಅಹಂ, ಆನಂದ, ಸುಖ, ಸಂತೋಶ ಇವುಗಳ ಅರಿವೇ ನನಗಿರಲಿಲ್ಲ.ಅಷ್ಟಾವಂಕ ನನ್ನ ಹೆಸರು .ಅಷ್ಟಾವಕ್ರ ಎಂದೇ ಬಹಳಷ್ಟು ಜನ ಕರೆಯುತ್ತಿದ್ದರು. ಎಲ್ಲಿ ಹುಟ್ಟಿದ್ದೆನೋ? ಯಾರು ನನ್ನ ತಂದೆ ತಾಯಿಗಳು? ಒಂದೂ ಗೊತ್ತಿಲ್ಲ .ನನಗೆ ಬುದ್ದಿ ಬಂದಾಗಿನಿಂದ ಅಶ್ವಶಾಲೆಯಲ್ಲಿಯೇ ಇದ್ದೆನು.ಇಲ್ಲಿ ಇದ್ದ ರಾಜ ಯಶೋಧರ ಪರಮ ಕರುಣಾಳುವಂತೆ. ಅಷ್ಟೊಂದು ಕುರೂಪಿ ಹಾಗು ಅನಾಥನಾಗಿದ್ದ ನನಗೆ ಅಶ್ವ ಶಾಲೆಯಲ್ಲಿ ನೆಲೆ ಒದಗಿಸಿದ್ದ.
ಕುದುರೆಗಳ ಲಾಯ ತೊಳೆಯುವುದು, ಹುರುಳಿ ,ಹುಲ್ಲು ನೀರು ,ಕುದುರೆಗಳಿಗೆ ಒದಗಿಸುವುದು., ಯುದ್ಧಗಳು ನಡೆಯುತ್ತಲೇ ಇರಲಿಲ್ಲವಾದ್ದರಿಂದ ಕುದುರೆಗಳ ನೋಡಲು, ಸಾಮು ಮಾಡಲು ಸೈನಿಕರು ಬರುತ್ತಲೇ ಇರಲಿಲ್ಲ. ನಾನೇ ಅವುಗಳಿಗೆ ಜಳಕ ಮಾಡಿಸಿ ದಿನಾ ಒಂದು ಸುತ್ತು ಕರೆದುಕೊಂಡು ಹೋಗುತ್ತಿದ್ದೆ.ಅಶ್ವ ಶಾಲೆಯಲ್ಲಿ ಇತರ ಕೆಲಸಗಾರರಿದ್ದರೂ ಎಲ್ಲರೂ ನನಗಿಂತ ಮೇಲಿನ ಹುದ್ದೆಯವರು.ನನಗೊಬ್ಬನಿಗೆ ಮೈಮುರಿವ ಕೆಲಸ. ಸಂಜೆಯಾಗುತ್ತಿದ್ದಂತೆ ಎಲ್ಲ ಮನೆಗೆ ಹೋಗುತ್ತಿದ್ದರು. ನನಗೆ ಮಾತ್ರ ಕಾವಲುಗಾರನ ಕೆಲಸವಾಗಿ ಬದಲಾಗಿ ಅಲ್ಲಿಯೇ ಮಲಗುತ್ತಿದ್ದೆ. ಅರಮನೆಯ ಪಾಕಶಾಲೆಯಿಂದ ಹಿಂದಿನ ದಿನದ ಮಿಕ್ಕಿದ ಆಹಾರ ಬರುತ್ತಿತ್ತು. ನನಗೂ ಹಾಗು ಕುದುರಗಳಿಗೆ.ರುಚಿಯಾಗೇ ಇರುತ್ತಿತ್ತು.ಅದನ್ನೇ ತಿನ್ನುತ್ತಿದ್ದೆ.ಅಷ್ಟಕ್ಕೂ ರುಚಿಯ ಬಗ್ಗೆ ನನಗೇನು ಗೊತ್ತಿತ್ತು ಅಲ್ಲಿವರೆಗೆ ?
ಸುಖ ಹೇಗೆ ಗೊತ್ತಿರಲಿಲ್ಲವೋ ಹಾಗೆ ಕಷ್ಟ ಸಹ ನನಗೆ ಅರಿವಿರಲಿಲ್ಲ. ಸುಮ್ಮನೇ ಕೆಲಸ ಮಾಡುತ್ತಿದ್ದೆ. ಸುಲಭಕ್ಕೆ ದಣಿವಾಗುತ್ತಿರಲಿಲ್ಲ. ಕುದುರೆಗಳನ್ನ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆ.ಅಶ್ವ ಶಾಲೆಯನ್ನ ಸಹ. ಆದರೂ ಬೈಯುತ್ತಿದ್ದರು. ಹೊಡೆಯುತ್ತಿದ್ದರು. ನೋವಾಗುತ್ತಿರಲಿಲ್ಲ. ದುಃಖವೂ ಆಗುತ್ತಿರಲಿಲ್ಲ.ಇದೇ ನನ್ನ ಜೀವನ, ಇದೇ ನನ್ನ ಕೆಲಸ. ಅವರು ಕೆಲಸ ಮಾಡಿಸುವವರು. ಅದಕ್ಕೆ ಹೊಡೆಯುತ್ತಾರೆ. ಅಷ್ಟೇ.
ಅದುವರೆಗೂ ಯಾರೂ ನನ್ನ ಹೊಗಳಿರಲಿಲ್ಲ, .ನನ್ನ ಬಗ್ಗೆ ಕನಿಕರ ಸಹ ತೋರಿಸಿರಲಿಲ್ಲ. ನನ್ನ ಕುರೂಪ ಎಲ್ಲರಿಗೂ ಅಸಹ್ಯ.ಉಬ್ಬಿದ ಹಲ್ಲುಗಳು, ದಪ್ಪ ವಕ್ರ ಮೂಗು, ಸೊಟ್ಟ ಬಾಯಿ.ಮಂಗನ ತರ ಒಳಕ್ಕೆ ತಿರುಗಿದ ಕೈಗಳು. ಚಿಕ್ಕ ಮಕ್ಕಳು ನನ್ನ ನೋಡಿದರೆ ಕಿರುಚಿಕೊಳ್ಳುತ್ತಿದ್ದರು. ಹೆಂಗಸರು ಹೆದರಿ ಓಡುತ್ತಿದ್ದರು. ಗಂಡಸರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು. ನನಗೇನೂ ಅನ್ನಿಸುತ್ತಿರಲಿಲ್ಲ.
ಕುದುರೆಗಳು ಮಾತ್ರ ಹಾಗಲ್ಲ. ನನ್ನ ನೋಡಿದೊಡನೆ ಕೆನೆಯುತ್ತಿದ್ದವು. ಹುರುಳಿ ತಿನ್ನಿಸಿದಾಗ ನನ್ನ ನೆಕ್ಕುತ್ತಿದ್ದವು. ಆಗಾಗ ಅವುಗಳ ಸವಾರಿ ಕೂಡ ಮಾಡುತ್ತಿದ್ದೆ.ಜಿದ್ದಿಗೆ ಬಿದ್ದು ಅವುಗಳ ಸಮಕ್ಕೆ ಓಡುತ್ತಿದ್ದೆ. ಕುದುರೆಯಂತೆಯೆ ಆಗಿದ್ದೆ. ಬಲಶಾಲಿ. ಎದ್ದು ಕಾಣುತ್ತಿದ್ದ ಮಾಂಸಖಂಡ,ಬಿರುಸಾದ ,ಒರಟಾದ ತೊಡೆಗಳು ಆಕಾರ ಮಾತ್ರ ವಿಚಿತ್ರ.ಯಾರೋ ಬಿಸಾಡಿದ ಮುರಿದ ಕೊಳಲು ಸಿಕ್ಕಿತ್ತು. ರಾತ್ರಿಯಲ್ಲಿ ನಿದ್ದೆ ಬರದಿದ್ದಾಗ ನುಡಿಸುತ್ತಿದ್ದೆ. ಮೊದಲು ಕರ್ಕಶವಾದರೂ ನಂತರದಲ್ಲಿ ಒಂದು ಹದಕ್ಕೆ ತಕ್ಕ ಮಟ್ಟಿಗೆ ನುಡಿಸುತ್ತಿದ್ದೆ. ಕೇಳುವವರಿಲ್ಲದ ಮೇಲೆ ಹೇಗೆ ನುಡಿಸಿದರೇನು?ಹಾಗೆ ಇದ್ದೆ. ನಾನು ನನ್ನ ಕೆಲಸ ಹಾಗು ಕುದುರೆಗಳೊಂದಿಗೆ.
ಆ ಅಪರಾತ್ರಿ ಕೈಯಲ್ಲಿ ಕಂದೀಲು ಹಿಡಿದು ಅಮೃತಮತಿ ಕೊಳಲನಾದದ ಜಾಡು ಹಿಡಿದು ನನ್ನಲ್ಲಿಗೆ ಬರುವವರೆಗೂ. ಬೆಚ್ಚಿ ಬಿದ್ದಿದ್ದೆ ನಾನು ಆ ರಾತ್ರಿ.ಹೆದರಿಕೆಯಿಂದಲ್ಲ... ಆ ಅನಿರೀಕ್ಷಿತ ದನಿಯಿಂದ.
ನನ್ನ ಪಾಡಿಗೆ ನಾನು ಆಗಷ್ಟೇ ಊಟ ಮುಗಿಸಿ ಹುಲ್ಲಿನ ಮೆದೆಯ ಮೇಲೆ ಕುಳಿತು, ಕಣ್ಣು ಮುಚ್ಚಿಕೊಂಡು ಮುರಿದ ಕೊಳಲನ್ನ ನುಡಿಸುತ್ತಿದ್ದೆ."ಯಾರದು? ಈ ಅಪರಾತ್ರಿಯಲ್ಲಿ ಕೊಳಲು ನುಡಿಸುತ್ತಿರುವುದು?"
ಅಷ್ಟೊಂದು ನೀರವ ರಾತ್ರಿಯಲ್ಲಿ ಆ ದನಿ ಕೇಳಿ ಬೆಚ್ಚಿ ಕಣ್ತೆರೆದು ನೋಡಿದ್ದೆ.ಯಾರೋ ರಾಣಿ ವಾಸದ ಮಹಿಳೆ. ಪ್ರಾಯಶಃ ನಿದ್ರಾಭಂಗವಾಗಿ ನನ್ನ ನಿಂದಿಸಲು ಬಂದಿರುವರೆಂದು ಪಕ್ಕನೆ ಎದ್ದು ನಿಂತು ಬೆನ್ನು ಬಾಗಿಸಿ ಕ್ಷಮೆ ಕೇಳಿದೆ.ಮೆಲುವಾಗಿ ನಕ್ಕ ಆಕೆ ನನ್ನ ಕೊಳಲನಾದದಿ೦ಪಿಗೆ ಸೋತು ನನ್ನ ಹುಡುಕಿ ಬಂದದ್ದೆಂದು ಹೇಳಿದಳು.ನನಗೆ ಏನೂ ತೋಚಲಿಲ್ಲ. ಮೊದಲ ಬಾರಿ ನನ್ನ ಬಗ್ಗೆ ಮೆಚ್ಚುಗೆಯ ಮಾತು ಕೇಳಿದ್ದು.ಆಕೆ ನನ್ನ ಕೊಳಲು ನುಡಿಸಲು ಹೇಳಿದಳು.ಅದುವರೆಗೂ ನೀರಾತಂಕವಾಗಿ ನುಡಿಸುತ್ತಿದ್ದ ನಾನು ತಡವರಿಸುತ್ತಾ ನುಡಿಸಹತ್ತಿದೆ. ಮುಜುಗರವಾಗಿ ಕಣ್ಣ ಮುಚ್ಚಿ ನುಡಿಸಲು ಪ್ರಯತ್ನಿಸಿ ಸೋತೆ. ಹಾಗೆ ಅರ್ಧ ಕಣ್ಣ ತೆರೆದು ಆಕೆಯನ್ನ ನೋಡಿದೆ. ತದೇಕಚಿತ್ತಳಾಗಿ ನನ್ನ ಕಡೆ ಅಪಾದಮಸ್ತಕ ನೋಟ ಬೀರುತ್ತಿದ್ದಳು. ಆ ಕಣ್ಣಲ್ಲಿ ಆಕರ್ಶಣೆ ಇತ್ತು. ಕೊಳಲ ಕೇಳುತ್ತಿದ್ದಳಾ? ಗೊತ್ತಿಲ್ಲ.
ಅಶ್ವ ಶಾಲೆಯ ದ್ವಾರಕ್ಕೆ ಹಚ್ಚಿಟ್ಟ ಪಂಜಿನ ಬೆಳಕಲ್ಲಿ ನನ್ನನ್ನೇ ನೋಡುತ್ತಿದ್ದಳು ತುಂಬಾ ಹೊತ್ತು. ನಾನು ನುಡಿಸುವುದ ನಿಲ್ಲಿಸಿದೆ. ಆಕೆ ನೋಡುವುದ ಮುಂದುವರೆಸಿದ್ದಳು. ತುಂಬಾ ಹೊತ್ತು ನೋಡಿದ ಮೇಲೆ ದಿಗ್ಗನೆ ಎದ್ದು ನಾಳೆ ಕೊಳಲು ಕೇಳುವುದಕ್ಕಾಗಿ ಮತ್ತೆ ಬರುವನೆಂದು ಹೇಳಿದಳು.ನನ್ನನ್ನೇ ನೋಡುತ್ತಿದ್ದ ಅವಳ ಕಣ್ಣು ಬೇರೆನೋ ಹೇಳುತ್ತಿತ್ತು. ಆ ರಾತ್ರಿ ನನಗೆ ನಿದ್ರೆ ಬರದೆ ಹೊರಳಾಡಿದೆ.
ಒಂದು ದಿನವೆoಬುದು ಯಾವತ್ತೂ ನನಗೆ ಅಷ್ಟು ದೀರ್ಘವೆನಿಸಿರಲಿಲ್ಲ. ಯಾವುದೇ ನಿರೀಕ್ಷೆಗಳು ಇರಲಿಲ್ಲವಾದರೂ ಕುತೂಹಲವಿತ್ತು. ಲಾಯದಲ್ಲಿ ಆ ರಾತ್ರಿ ಎರಡು ಪಂಜಿನ ದೀಪಗಳನ್ನು ಹೆಚ್ಚೇ ಹಚ್ಚಿದ್ದೆ.ಮುಸ್ಸಂಜೆಯ ನಂತರ ಯಾವ ನರ ಪ್ರಾಣಿಯು ಅಶ್ವ ಶಾಲೆಗೆ ಬರುತ್ತಿರಲಿಲ್ಲ. ಬೇಗನೇ ಊಟವಾದ ಬಳಿಕ ಕೊಳಲನೂದಲು ಪ್ರಾರಂಭಿಸಿದೆ.. ಸತಾಯಿಸಿ ಮಧ್ಯರಾತ್ರಿಯ ಬಳಿಕ ಬಂದಳು. ಆಗಲೇ ಮೊದಲ ಬಾರಿ ಆಕೆಯನ್ನ ಪೂರ್ಣ ನೋಡಿದ್ದು. ದೀಪದ ಬೆಳಕಿನಲ್ಲಿ ಹೆಪ್ಪುಗಟ್ಟಿದ್ದ ಅವಳ ಸೌಂದರ್ಯ ರಾಶಿ ಕರಗಿ ಕರಗಿ ಮತ್ತೆ ನನ್ನ ಮುಂದೆ ಸಾಂದ್ರಗೊಳ್ಳುತ್ತಿತ್ತು.
ಸೀದಾ ನಡೆದು ಬಂದವಳೆ ನನಗೆ ಸನಿಹದಲ್ಲೇ ಕುಳಿತು ನಕ್ಕಳು.ಕೊಳಲು ನವಿರಾಗಿ ಕಂಪಿಸಿತು. ತದೇಕಚಿತ್ತಳಾಗಿ ನನ್ನೇ ನೋಡುತ್ತಿದ್ದಳು. ನಾನು ಅವಳನ್ನೇ ನೋಡುತ್ತಾ ನುಡಿಸುತ್ತಿದ್ದೆ. ಹುರಿಗೊಂಡು ಬಲಿಷ್ಠವಾಗಿದ್ದ ನನ್ನ ತೋಳು, ಮೀನಖಂಡ, ಎದೆ, ಬೆವರ ಸ್ನಾನ ಮಾಡಿ ಆ ಬೆಳಕಿನಲ್ಲಿ ಮಿನುಗುತ್ತಿದ್ದವು.ಹಾಗೆ ನನ್ನೆಡೆ ವಾಲಿ ನನ್ನ ತೋಳುಗಳನ್ನ ಹಿಡಿದು ದೀರ್ಘವಾಗಿ ಮೂಸಿದಳು.ಅಶ್ವಗಳು ಕೆನೆಯುತ್ತಿದ್ದವು.ಸಂಯಮದ ಕಟ್ಟೆ ಒಡೆದಿತ್ತು.
ಹುಲ್ಲಹಾಸಿನ ಮೇಲೆ ಆಕೆಯನ್ನ ಕೆಡವಿಕೊ೦ಡವನೇ ಆಕ್ರಮಿಸಿದೆ.ಮೃಗ ತೃಷ್ಣ ಕೆರಳಿ ಕಾಮಕೇಳಿ ಮೊದಲಾಯಿತು.ಒರಟೊರಟಾದ ಕಾಮ ಕದನ, ಒಣ ಹುಲ್ಲ ಮೇಲೆ ಹೊರಳಾಟ, ನರಳಾಟ. ಆಕೆಯ ಧಾರಣಾ ಶಕ್ತಿ ನನ್ನ ಅಶ್ವಶಕ್ತಿಗೆ ಪೈಪೋಟಿ. ಸಾಕಷ್ಟು ಸಮಯದ ಕದನದ ನಂತರ ಇಬ್ಬರೂ ಸೋತೆವು.ಗೆದ್ದ ತೃಪ್ತಿ ಇಬ್ಬರಲ್ಲೂ ಇತ್ತು.
"ಅಬ್ಬಾ ,ಎಂಥ ಮಣ್ಣ ವಾಸನೆ, ಘಟ್ಟಿಸಿ ಕೆರಳಿಸುವ ಬೆವರ ಸುವಾಸನೆ, ಅರಮನೆಯ ಸುಗಂಧ ದ್ರವ್ಯಗಳೆಲ್ಲ ವಾಕರಿಕೆ ತರಿಸಿತ್ತು. ಮೈಯ ಕಂಪು ಬೇಕಿತ್ತು. ನೀನು ಕೊಟ್ಟೆ. ನಾನು ತಣಿದೆ. ಧನ್ಯವಾದ" ಎಂದು ಗಟ್ಟಿಯಾಗಿ ನನ್ನ ತಬ್ಬಿದಳು.ನನಗೆ ಯಾವ ನಯನಾಜೂಕು ಗೊತ್ತಿತ್ತು. ಗೊತ್ತಿದ್ದೆಲ್ಲ ಮೂಲಭೂತ ಅವಶ್ಯಕತೆಗಳು. ಊಟ, ನಿದ್ರೆ ಹಾಗು ಈಗ ಸಿಕ್ಕ ಮೈಥುನ. ಹೇಗಾದರೂ ಸರಿ ಅವನ್ನ ಸಂಪಾದಿಸಿಕೊಳ್ಳಬೇಕು,. ಲಾಯದಲ್ಲಿ ಆಗಾಗ ಅಶ್ವಗಳ ರತಿಕ್ರೀಡೆ ನೋಡಿ ಕೆರಳಿ ಏನು ಮಾಡಬೇಕೆಂದು ಗೊತ್ತಾಗದೇ ಒದ್ದಾಡುತ್ತಿದ್ದ ನನ್ನ ಕಾಮ ಮೊದಲ ಬಾರಿ ತಣಿದಿತ್ತು.
"ಯಾರು ನೀನು? ಎಲ್ಲಿದ್ದೆ ಇಷ್ಟು ದಿನ? ಈ ಮೊದಲೇ ಯಾಕೆ ಬರಲಿಲ್ಲ ? "ಅವಳನ್ನ ಉಸಿರಾಡದಂತೆ ಬಿಗಿದಪ್ಪಿ ಕೇಳಿದೆ."ನಾನು ಅಮೃತಮತಿ. ಈ ರಾಜ್ಯದ ಅರಸು ಯಶೋದರನ ಪಟ್ಟದ ರಾಣಿ, ಜಗದೇಕ ಸುಂದರಿ. ಆದರೆ ಈಗ ನನ್ನ ದೊರೆ ಅಷ್ಟಾವಂಕನ ಚರಣದಾಸಿ,", ಎಂದು ನಕ್ಕಳು. ನನಗೇನೂ ಭಯವಾಗಲಿಲ್ಲ. ಹೆಮ್ಮೆಯಾಯಿತು. ದಾಹಗೊಂಡು ಬಂದ ಅರಸಿಯ ದಾಹ ನೀಗಿಸಿದ ಹೆಮ್ಮೆ. ಅಷ್ಟೇ. ಸರಿ ತಪ್ಪುಗಳ ಅರಿವಿರಲಿಲ್ಲ. ನನ್ನ ಕುದುರೆಗಳ೦ತೆಯೇ.ಹಸಿವಾದರೆ ಆಹಾರ, ದಾಹವಾದರೆ ನೀರು.ಅಂತೆಯೇ ಸುರತ ಕೂಡ.ಮುಂದೆ ಇದನ್ನ ಅಮೃತಮತಿ ಅನುಮೋದಿಸಿ ಸುರತಕ್ಕಿದ್ದ ನೈತಿಕ ಚೌಕಟ್ಟನ್ನ ಕಿತ್ತು ಎಸೆದಿದ್ದಳು.ಪ್ರತಿ ರಾತ್ರಿಯಲ್ಲದಿದ್ದರೂ ಆಗಾಗ ನಮ್ಮಿಬ್ಬರ ಸಮಾಗಮ ನಡೆಯುತ್ತಿತ್ತು. ರತಿಕ್ರೀಡೆಯಾಡಿದ ಮೇಲೆ ಅಮೃತಮತಿ ತನ್ನ ಮಡಿಲಲ್ಲಿ ನನ್ನ ತಲೆಯನಿಟ್ಟುಕೊಂಡು ಆಗಾಗ ತನ್ನ ಬಗ್ಗೆ ಹೇಳುತ್ತಿದ್ದಳು.ಆಗಲೇ ನನಗೆ ಮೊದಲ ಬಾರಿ ಜಿನ ಧರ್ಮ,ಅಹಿಂಸೆ,ಜೀವದಯೆ,ನೈತಿಕತೆ ಮೊದಲಾದವುಗಳ ಬಗ್ಗೆ ತಿಳಿದದ್ದು.ಮೊದಲ ಬಾರಿ ನನ್ನ ಹೆಸರಿಡಿದು ಕರೆಯದೇ ದೊರೆ ಅಂತ ಸಂಬೋಧಿಸಿದ್ದೇ ಅಮೃತಮತಿ.
"ದೊರೆ, ನಾನು ಕ್ಷತ್ರಿಯಳು, ಯುದ್ಧ, ಹಿಂಸೆ ,ವಿಜಯ ನಂಗೆ ರಕ್ತಗತವಾಗಿ ಬಂದದ್ದು.ಯಶೋಧರನನ್ನ ಮದುವೆಯಾಗಿ ಬಂದಾಗ ನನ್ನಲ್ಲಿ ಕನಸುಗಳ ರಾಶಿ ಇತ್ತು.
ಆದರೆ ಯಶೋಧರ ಜಿನ ಧರ್ಮ ಪಾಲಕ, ಅಹಿಂಸಾವಾದಿ. ಜೋರಾಗಿ ಮಾತನಾಡಿದವನೂ ಅಲ್ಲ. ಸಾತ್ವಿಕ ಆಹಾರ ಸಾತ್ವಿಕ ಮಾತು, ಸಾತ್ವಿಕ ನಡೆ ನುಡಿ... ಯಾವ ಜೀವಿಗೂ ನೋವು ಮಾಡದಂತೆ ಬದುಕಬೇಕಂತೆ. ಹೇಗೆ ಸಾಧ್ಯದೊರೆ.ಜೀವ ಭಯವಿದ್ದರೆ ಸಾಧಿಸುವ, ಬದುಕಲು ಹೋರಾಡುವ ಕೆಚ್ಚು ಮೂಡುವುದು. ಹೋರಾಟದಿಂದ ಮಾತ್ರ ಏಳಿಗೆ ಸಾಧ್ಯ.
ಬರಿ ಜೀವದಯೆಯಿಂದ ಹೇಗೆ ಬದುಕಲು ಸಾಧ್ಯ.ಸಸ್ಯಹಾರಿಯಾದರೂ ಎತ್ತುಗಳಿಗೆ ನೊಗ ಹೊಡಿಯೇ ಬೆಳೆಯಲು ಸಾಧ್ಯ. ಅವಕ್ಕೆ ನೋವಾಗುವ ದಿಲ್ಲವೆ? ಕೇಳಿದರೆ ವಿತಂಡವಾದ ಎಂದರು.
ಅರಮನೆಯ ರೀತಿ ನೀತಿಯೇ ವಿಚಿತ್ರ. ಜೋರಾಗಿ ನಗುವಂತಿಲ್ಲ, ಮಾತನಾಡುವಂತಿಲ್ಲ. ಅವರ ಪ್ರಕಾರ ಸುಕೋಮಲ ಶರೀರದವಳು ನಾನು. ಒಂದು ಏಳುಸುತ್ತಿನ ಮಲ್ಲಿಗೆ ಹೂವನ್ನು ನನಗೆ ಎಸೆದರೆ ನಾನು ಬವಳಿ ಬಂದು ಬೀಳಬೇಕು. ಅದನ್ನು ಎಸೆದ ಯಶೋಧರ ಓಡಿ ಬಂದು ಶೈತ್ಯೋಪಚಾರ ಮಾಡಿ ಪಲ್ಲಂಗದಲ್ಲಿ ಮಲಗಿಸಬೇಕು. ನಂತರ ಮೃದು ನುಡಿಗಳಿಂದ ನನ್ನ ಸಂತೈಸಬೇಕು
ಪ್ರತಿ ರಾತ್ರಿಯು ಈ ನಾಟಕದಿಂದ ನನಗೆ ಸಾಕಾಗಿ ಹೋಗಿತ್ತು.ಎಷ್ಟು ಅಂತ ಬವಳಿ ಬಂದು ಬೀಳಲಿ?. ಇಡೀ ರಾಜ್ಯದಲ್ಲಿ ಇದು ದೊಡ್ಡ ಕತೆ. ಮತ್ತು ನನ್ನ ಸುಕೋಮಲ ಶರೀರಕ್ಕೆ ಸಿಕ್ಕ ಪ್ರಚಾರ.
ಸುರತವು ಸಹ ಕೋಮಲ . ಮುಟ್ಟಿದರೆ ಎಲ್ಲಿ ನೋವಾಗುವದೋ ಎಂಬಂತೆ ಜಾಗರೂಕತೆಯಿಂದ ಆಟ. ಹೂದಾನಿಯಲ್ಲಿ ಹೂವಿಟ್ಟಶ್ಟು ಮೃದು. ನಾನು ಕೆರಳುವಂತಿಲ್ಲ, ನರಳುವಂತಿಲ್ಲ, ಮರ್ದನವಂತೂ ದೂರದ ಮಾತು. ಕೊನೆಯಲ್ಲಿ ಕಣ್ಣಲ್ಲೇ ಸಂತಸ ತೋರಿಸುವ ಕರ್ಮ ಬೇರೆ.ನಾನು ಕ್ಷತ್ರಿಯ ಹೆಣ್ಣು ದೊರೆ . ರತಿಕ್ರೀಡೆಯಲ್ಲಿ ಉದ್ದೀಪನ ವಿರಬೇಕು. ಮೈಯಲ್ಲಿ ಬೆಂಕಿ ಹೊತ್ತಿಕೊಳ್ಳಬೇಕು.ಘರ್ಶಣೆ ಇರಬೇಕು. ಬೆವರಬೇಕು. ಹಣೆಯ ಮೇಲೆ ಬೆವರ ಹನಿಗಳು ಸಾಲುಗಟ್ಟಿಮುತ್ತುಗಳಾಗಬೇಕು. ಕೆರಳಬೇಕು'. ಕೆರಳಿಸಬೇಕು. ಮದಿಸಬೇಕು. ಸೋಲಿಸಬೇಕು.ಸೋತು ಒರಗಬೇಕು. ಆಗ ತೃಪ್ತಿಯ ನಗೆ ಮೂಡುತ್ತದೆ.ಪಲ್ಲಂಗವಲ್ಲ, ಸುಗಂಧ ದ್ರವ್ಯಗಳಲ್ಲ. ಬೆವರ ವಾಸನೆ ಬೇಕು. ಮಣ್ಣ ವಾಸನೆ ಬೇಕು. ತೊಯ್ಯಬೇಕು. ತಣಿಯಬೇಕು. ನನಗೆ ಅರಮನೆ ಬೇಡ,ಅಧಿಕಾರ ಬೇಡ. ನನ್ನ ತಣಿಸಿದರೆ ಸಾಕು. ತಣಿಸಿದ್ದು ನೀನು, ಯಶೋಧರನಲ್ಲ. ಅದಕ್ಕೆ ನೀನೇ ನನ್ನ ದೊರೆ""ನನ್ನ ಕಾಮನೆಯನ್ನ ನನ್ನಿಚ್ಚೆಗೆ ತಕ್ಕಂತೆ ತಣಿಸದೇ ನನ್ನ ನರಳುವಂತೆ ಮಾಡುವುದು ಕೂಡ ಹಿಂಸೆಯೇ ಎನ್ನುವುದು ನನ್ನ ಗಂಡನಿಗೆ ಅರಿವಾಗುತ್ತಲೇ ಇಲ್ಲ. ಕಡ್ಡಾಯದ ಸಂಯಮ ಕೂಡ ಶಿಕ್ಷೆಯೇ"
ಎಂದಿದ್ದಳು ಅಮೃತಮತಿ.
ನನ್ನ ತಲೆಗೆ ಆಕೆ ಹೇಳಿದ್ದೆಲ್ಲ ಅರ್ಥವಾಗಲಿಲ್ಲ. ನನ್ನ ದೊರೆಅಂದಿದ್ದಳು.ಅವಳನ್ನ ಆಳಬೇಕಿತ್ತು, ಆಕ್ರಮಿಸಬೇಕಿತ್ತು,ದೊರೆಯಾಗಿ.ಅದನ್ನ ಯಶಸ್ವಿಯಾಗಿ ಮಾಡುತ್ತಿದ್ದೆ.ಪ್ರತಿ ರಾತ್ರಿ ಅಲ್ಲದಿದ್ದರೂ ಸಾಧ್ಯವಾದಾಗಲೆಲ್ಲ ನಾವು ಕೂಡುತ್ತಿದ್ದೆವು. ಆಕೆ ತನ್ನ ಗಂಡನನ್ನ ಮಲಗಿಸಿದ ಮೇಲಷ್ಟೇ ನನ್ನ ಬಳಿ ಬರಲು ಸಾಧ್ಯವಿತ್ತು.ಒಮ್ಮೆ ಸುಖ ಉಂಡ ದೇಹಕ್ಕೆ ವಿರಹ ಭಾದೆ ಸಹಿಸಲಸಾಧ್ಯ. ಆಕೆಯ ದೇಹ ಸಾಂಗತ್ಯಕ್ಕೆ ಹಾತೊರೆದು ಹುಚ್ಚನಾಗಿ ಬಿಡುತ್ತಿದ್ದೆ.ಅಮೃತಮತಿಯು ಪತಿಯ ಊಟದಲ್ಲಿ ನಿದ್ದೆ ಔಷಧಿ ಬೆರೆಸಿ ತಿನಿಸಿ ಮಲಗಿಸಿ ಓಡೋಡಿ ಬರುತ್ತಿದ್ದಳು.ಒಮ್ಮೆ ಒಂದು ಹುಣ್ಣಿಮೆಯ ರಾತ್ರಿ ಇಡೀ ಮಧುಚಂದ್ರದ ಯೋಜನೆ ಹಾಕಿ ಆಕೆಗೆ ಬೇಗ ಬರಲೆಂದು ತಿಳಿಸಿದ್ದೆ. ಮಧ್ಯರಾತ್ರಿ ಕಳೆದರೂ ಆಕೆ ಬರಲಿಲ್ಲ. ಕಾಮನೆಯಿಂದ ಬೆಂದು ಕ್ರೋಧದಿಂದ ಕುದ್ದು ಹೋಗಿದ್ದೆ. ಏನೂ ಮಾಡಲು ಅಸಹಾಯಕನಾಗಿ ಕೊಳಲು ಹಿಡಿದು ನುಡಿಸುತ್ತಿದ್ದೆ. ಕೋಪ ಹೆಚ್ಚಾಗುತ್ತಿತ್ತು. ಬೆಳ್ಳಿ ಚುಕ್ಕಿ ಮೂಡುವ ಹೊತ್ತಿಗೆ ಬಂದಳು. ಬಂದವಳೇ ನನ್ನ ರಮಿಸಲು ಮುಂದಾಗಿ ಅಪ್ಪಲು ಬಂದಳು.ಎಲ್ಲಿತ್ತೋ ಕೋಪ.ಜಾಡಿಸಿ ಒದ್ದೆ ಕಾಲಿನಿಂದ. ಅಷ್ಟು ದೂರ ಹೋಗಿ ಬಿದ್ದಳು.ನಾನು ಒದ್ದ ರಭಸಕ್ಕೆ ಆಕೆಯ ಸೊಂಟ ಮುರಿದು ಬುಡ ಕಡಿದ ಬಾಳೆಗಿಡದಂತೆ ಬೀಳಬೇಕಿತ್ತು.ಸಾಕಷ್ಟು ನೋವಾಗಿರಬೇಕು. ಯಕಶ್ಚಿತ್ ಒಬ್ಬ ಕುದುರೆ ಲಾಯದ ಆಳಿನಿಂದ ಒದೆಸಿಕೊಂಡದ್ದು ಭಾರಿ ಅವಮಾನವಾಗಿರಬೇಕು.ಚಂದ್ರ ಮತಿಯ ಮುಖದಲ್ಲಿ ಲವಲೇಶವೂ ನೋವು ಕಾಣಿಸಲಿಲ್ಲ. ನಗುತ್ತಲೇ ಎದ್ದು ಬಂದು ನನ್ನ ರಮಿಸತೊಡಗಿದಳು ನನ್ನ ದೊರೆ ಸಾನಿ.
"ಒಲ್ಲದ ಗಂಡನೊಡನೆ ಸುಖಿಸುವಂತೆ ನಾಟಕ ಮಾಡಿ ಮಲಗಿಸಿ ಇಲ್ಲಿಗೆ ಬರುವ ಕಷ್ಟ ನಿನಗೆ ಹೇಗೆ ಹೇಳಲಿ ದೊರೆ.ನಿನ್ನ ಬಾಹು ಬಂಧನದ ಮುಂದೆ ಆ ಕಷ್ಟವೆಲ್ಲ., ಈ ಒದೆತವೆಲ್ಲ ತೃಣ ಸಮಾನ"
ಎಂದು ವಯ್ಯಾರದಿಂದ ಬಳುಕುತ್ತ ಬಂದು ಉದ್ರೇಕಿಸಿ ಕಾಮಕೇಳಿಯಲ್ಲಿ ತೊಡಗಿದಳು.
ಅದ್ಭುತವಾಗಿತ್ತು ಆ ರಾತ್ರಿ. ಹಾದರವನ್ನ ಎಷ್ಟು ದಿನ ಮುಚ್ಚಿಡಲು ಸಾಧ್ಯ. ನಾವು ಹಾವಿನಂತೆ ಎಣೆ ಹಾಕಿಕೊಂಡು ಸುಖಿಸುತ್ತಿದ್ದ ಆ ರಾತ್ರಿ ಯಾವ ಏಳು ಸುತ್ತಿನ ಮಲ್ಲಿಗೆಯ ಏಟಿಗೆ ಮೂರ್ಚೆ ಬೀಳುತ್ತಿದ್ದ ತನ್ನ ನೆಚ್ಚಿನ ಮಡದಿ ,ನಾನು ಜಾಡಿಸಿ ಒದ್ದರೂ ಕಿಮಕ್ ಅನ್ನದೇ ಮತ್ತೆ ನನ್ನ ಬಳಿ ಬಂದು ರತಿಕ್ರೀಡೆಗೆ ತೊಡಗಿದ ರೀತಿಯನ್ನ ....ಮೊದಲ ಬಾರಿ ಆಕೆಯ ಮೇಲೆ ಸಂಶಯ ಪಟ್ಟು ಹಿಂಬಾಲಿಸಿ ಬಂದು ನೋಡಿದ ಅರಸ ಯಶೋಧರ ಹೌಹಾರಿ ಕ್ರೋಧಗೊಂಡಿದ್ದನೆಂದು ನನಗೆ ಅಂದು ಗೊತ್ತಿರಲಿಲ್ಲ.ನಂತರ ನಡೆದ ವಿದ್ಯಮಾನಗಳು ನನಗೆ ಖುಷಿ ಕೊಟ್ಟರೂ ಅರ್ಥವಾಗಿರಲೇ ಇಲ್ಲ. ಕ್ರೋಧಗೊಂಡ ಯಶೋಧರ ನಂತರ ತನ್ನ ಕ್ರೋಧದ ಬಗ್ಗೆ ಪಶ್ಚಾತ್ತಾಪ ಪಟ್ಟನಂತೆ. ತನ್ನ ಹೆಂಡತಿಯ ಮುಂದೆ ಯಾಚಿಸಿದನಂತೆ.
ನಮ್ಮ ಅನೈತಿಕ ಸಂಬಂಧವನ್ನು ಬಿಡು ಎಂದು. ಯಾವತ್ತೂ ಅವನು ನನ್ನನ್ನ ಅಥವಾ ಅಮೃತಮತಿಯನ್ನು ಶಿಕ್ಷಿಸಲು ಪ್ರಯತ್ನಿಸಲೇ ಇಲ್ಲ. ಅಮೃತಮತಿ ಹೇಳಿದ ಪ್ರಕಾರ ಅವನು ತನ್ನ ತಾಯಿಯೊಡನೆ ನಮ್ಮ ಸಂಭಂದ ತನಗೆ ಬಿದ್ದ ಕನಸು ಎಂದನಂತೆ.ನನಗೆ ನಗು ಬರುತ್ತಿತ್ತು ಇದನ್ನ ಕೇಳುವಾಗ. ಆ ಕನಸನ್ನೇ ಕೇಡಿನ ಮುನ್ಸೂಚನೆ ಎಂದು ತಿಳಿದ ಯಶೋಧರನ ತಾಯಿ ಇದಕ್ಕೆ ಪರಿಹಾರರ್ಥವಾಗಿ ಪೂಜೆ ಮಾಡಿ ಪ್ರಾಣ ಬಲಿ ಕೊಡುವ೦ತೆ ಹೇಳಿದಳಂತೆ.ಜಿನ ಧರ್ಮ ಪರಿಪಾಲಕ ಯಶೋಧರ ಇದಕ್ಕೆ ಒಪ್ಪದೆ, ತಾಯ ಮಾತೂ ಮೀರಲಾಗದೆ ಒಂದು ಹಿಟ್ಟಿನ ಹುಂಜವನ್ನಬಲಿ ಕೊಟ್ಟ ನಂತೆ. ಅದರ ಕತ್ತು ಕತ್ತರಿಸುವಾಗ ಅದ ಕೂಗಿತಂತೆ. ಯಾರು ಜೋರಾಗಿ ಮಾತನಾಡದಿದ್ದರೂ ಇದೆಲ್ಲ ಅರಮನೆಯಲ್ಲಿ ಗುಲ್ಲಾಗಿತ್ತು.ಅದ್ಯಾವ ಧೈರ್ಯ ಬ೦ದಿತ್ತೊ ಅಮೃತಮತಿಗೆ ರಾಜಾರೋಷವಾಗಿಯೆ ರಾತ್ರಿ ಸಮಯ ತನ್ನ ಗಂಡನ ಎದುರಿನಲ್ಲೇ ನನ್ನ ಸೇರಲು ಬರುತ್ತಿದ್ದಳು. ಕೇಳಲು ಬಂದ ಗಂಡನಿಗೆ "ಅಷ್ಟಾವಂಕನನ್ನುಳಿದು ಬೇರೆ ಪುರುಷರು ನನಗೆ ಸೋದರ ಸಮಾನ "
ಎಂದೇ ಹೇಳಿ ಬಂದಿದ್ದಳು. ಆಕೆಯ ಗಂಡನೊಡನೆ ಒಲ್ಲದ ಸುರತಕ್ಕೂ ಕೊನೆ ಹಾಡಿದ್ದಳು. ಇಷ್ಟು ದೊಡ್ಡ ಅಪರಾಧ ಮಾಡಿದ ನಮ್ಮನ್ನ ಶಿಕ್ಷಿಸುವ ಗಂಡಸ್ತನವನ್ನ ಕೂಡ ಅವನು ತೋರಲಿಲ್ಲ ಎಂದು ತಿರಸ್ಕಾರದ ನಗೆ ನಕ್ಕಳು. ನನಗೆ ಇದಾವುದೂ ಬೇಕಿರಲಿಲ್ಲ.ಈಗ ಹೆಚ್ಚು ಹೆಚ್ಚು ಬಾರಿ ಅಮೃತಮತಿ ಪ್ರಣಯಕ್ಕೆ ಸಿಗುತ್ತಿದ್ದಳು. ಕೂಡಿದಷ್ಟೂ ದಾಹ, ಮತ್ತೆ ಮತ್ತೆ ಬೇಕೆನಿಸುವ ಅವಳ ಸಂಗ, ಮನಸ್ಸು ಹುಚ್ಚು ಕುದುರೆಯಂತೆ ಕೆನೆಯುತ್ತಿತ್ತು. ಯಶೋಧರ ರಾಜ ಈಗ ಮಗ್ಗುಲ ಮುಳ್ಳಾಗಿದ್ದ.ನಮ್ಮ ಸಂಭಂದವನ್ನ ನಿಲ್ಲಿಸುವಂತೆ ಅಂಗಲಾಚುತ್ತಿದ್ದ. ಆತನ ಈ ಬಲಹೀನ ವತ೯ನೆ ಅಮೃತಮತಿಗೆ ಸಹಿಸಲಸಾಧ್ಯವಾಗಿತ್ತು. ಕೊನೆಗೂ ತನ್ನ ಗಂಡನ ಹಾಗು ಅತ್ತೆಯ ಪೀಡನೆಗೆ ಇತಿಶ್ರೀ ಹಾಡ ಬಯಸಿದ್ದಳು. ನನಗೆ ಹೇಳಿಯೆ ಅವರಿಬ್ಬರಿಗೂ ಆಹಾರದಲ್ಲಿ ವಿಷ ಬೆರೆಸಿದ್ದು, ವಿಷದುಂಡೆ ತಿಂದ ತಾಯಿ ಮಗ ಇಹಲೋಕ ಯಾತ್ರೆ ಮುಗಿಸಿದ್ದರು. ಹಿಟ್ಟಿನ ಕೋಳಿಯ ಕೂಗು ಅವರಿಬ್ಬರನ್ನ ಹೈರಾಣು ಮಾಡಿತ್ತು. ಸತ್ತು ಮುಕ್ತಿ ಕಂಡುಕೊಂಡರು... ಅಥವಾ ಸಾಯುವ ಮುನ್ನ ಹಾಗೆ ಅಂದುಕೊಂಡರು. ಹದಿನಾಲ್ಕು ದಿನದ ಕಡ್ಡಾಯ ಸೂತಕದ ನಂತರ ಅಮೃತಮತಿಗೆ ರಾಜಮಾತೆಯ ಪಟ್ಟ. ಆಕೆಯ ಮಗ ಯಶೋಮತಿಗೆ ರಾಜನ ಪಟ್ಟ. ಅಮ್ಮನ ಕೈಗೊಂಬೆ. ಯಾರು ಏನು ಹೇಳಿದರೂ ತಾಯ ಮಾತು ತೆಗೆದು ಹಾಕುತ್ತಿರಲಿಲ್ಲ. ಸತ್ತ ಗಂಡ ಯಶೋಧರ ಅಮೃತ ಮತಿಯ ಮೇಲೆ ಒತ್ತಾಯಪೂರ್ವಕವಾಗಿ ಜೈನ ಧರ್ಮಹೇರಿದ್ದನಂತೆ. ಆಕೆಯ ಸ್ತ್ರೀ ಸಹಜ ಆಸೆಗಳಿಗೆ ಅಂಕುಶ ಹಾಕಿದ್ದ. ಕಠೋರ ಜಿನ ಧರ್ಮ ಸಂಪ್ರದಾಯ ಪಾಲನೆಗಳು, ಬಲವಂತ ಸಾತ್ವಿಕ ಜೀವನ ಆಕೆಯಲ್ಲಿ ಅಸಹ್ಯ ಉಂಟು ಮಾಡಿದ್ದವಂತೆ.ಅಮೃತಮತಿ ಮೂಲಭೂತವಾದಿಯಾಗಿ ಬದಲಾಗಿದ್ದಳು ಅಧಿಕಾರ ಕೈಯಲ್ಲಿತ್ತು. ಮಗ ಕೈಗೊಂಬೆ. ಆಕೆಯ ಜಿನ ಧರ್ಮ ದ್ವೇಶಕ್ಕೆ ಕೊನೆಯೇ ಇರಲಿಲ್ಲ. ನನಗೋ ಈ ಧರ್ಮಕರ್ಮಗಳು ಅರ್ಥವಾಗುತ್ತಿರಲಿಲ್ಲ ಬೇಕೂ ಇರಲಿಲ್ಲ. ಸುಖಕ್ಕೆ ಮಿಗಿಲಾದ ಧರ್ಮ ಉಂಟೆ? ಅದೀಗ ಯಥೇಚ್ಚವಾಗಿ ಸಿಗುತ್ತಿತ್ತು. ನನಗೀಗ ಅಮೃತಮತಿಯ ಅಂತಃಪುರಕ್ಕೆ ನೇರ ಪ್ರವೇಶ. ಹಿಂದಿನಿಂದ ನಮ್ಮ ಬಗ್ಗೆ ಆಡಿಕೊಳ್ಳುವ ಜನ ಸಹ ಅಮೃತಮತಿಯ ಕ್ರೂರತ್ವಕ್ಕೆ ಬೆದರಿ ಬಾಯಿ ಮುಚ್ಚಿಕೊಂಡರು. ಹಿಂಸಾ ವಿನೋದ ನನಗೂ ಇಷ್ಟವಾಗತೊಡಗಿತ್ತು. ಅಥವಾ ಮೊದಲಿನಿಂದಲೂ ಇಷ್ಟವೇ ಇತ್ತಾ? ಅರಮನೆಯ ಪಾಕಶಾಲೆಯಲ್ಲಿ ಈಗ ನಿತ್ಯಮಾಂಸದ ಔತಣ.ಎಳೆ ಮಾಂಸಕ್ಕೆ ರುಚಿ ಹೆಚ್ಚು. ಎಳೆಗರುಗಳು, ಜಿಂಕೆಗಳು, ನವಿಲುಗಳು ಮಸಾಲೆ ಸೇರಿಸಿ ಕುದಿಸಿ ಬಾಯಿಗಿಟ್ಟರೆ ಅಲ್ಲೆ ಕರಗುತ್ತಿತ್ತು. ಎ೦ಥಹ ರುಚಿ. ಜಿನ ಧರ್ಮದ ಅಹಿಂಸೆಯ ಕುತ್ತಿಗೆ ಹಿಸುಕುವ ಕಟ್ಟುಪಾಡುಗಳಿಂದ ಜನರೂ ಮುಕ್ತಿ ಬಯಸಿದ್ದರಾ? ಅಥವಾ ಮಾನವ ಸ್ವಭಾವ ಜನ್ಯ ಹಿಂಸಾ ವಿನೋದಿಯಾ ? ಮಾಂಸಹಾರಿಯಾ? ಪ್ರಜೆಗಳು ಬೇಗನೆ ಮಾಂಸಹಾರಕ್ಕೆ ಹೊರಳಿಕೊಂಡರು. ನಂತರ ಜೈನಧರ್ಮದಿಂದಲೂ ಸಹ. ಅಹಿಂಸೆ, ಜೀವದಯೆ, ನೈತಿಕತೆ ನಾಲಿಗೆಯ ರುಚಿ, ದೇಹ ಸುಖ, ಕ್ರೂರತ್ವದ ಮುಂದೆ ಮಂಕಾಗಿ ಮರೆಯಾದವುನನಗೆ ಇವೆಲ್ಲ ಗೊತ್ತೂ ಇರಲಿಲ್ಲ. ರುಚಿಯಾದ ಮಾಂಸಾಹಾರ, ಸುಖಿಸಿದಷ್ಟು ಸುರತ, ಹೊಸದಾಗಿ ಅಶ್ವ ಶಾಲೆಯ ಮೇಲ್ವಿಚಾರಣೆ ಮತ್ತು ದೇಹ ದಂಡನೆ.ಕುರೂಪಿಯಾಗಿದ್ದರೂ ಮಾಂಸಖಂಡಗಳು ಉಬ್ಬಿಕೊಂಡು ಕೊಬ್ಬಿದ ಗೂಳಿಯ೦ತಾಗಿದ್ದೆ.ರಾಜ್ಯದಲ್ಲಿ ಪೂಜೆಯ ರೀತಿ ನೀತಿಗಳೂ ಬದಲಾಗಿದ್ದವು.ನೈವೇದ್ಯಕ್ಕೆ ಫಲಪಾಯಸದ ಬದಲು ಪ್ರಾಣಿ ಬಲಿ.ಚಂಡಮಾರಿ ರಾಜ್ಯದ ಅಧಿದೇವತೆ. ಆಕೆಯ ದೇವಳದಲ್ಲoತೂ ನಿತ್ಯ ರಕ್ತಾಭಿಶೇಕ. ಆಡು, ಕುರಿ, ಕೋಣ, ಹಸು, ಕುದುರೆಗಳ ಸಾಲು ಸಾಲು ಮಾರಣ ಹೋಮ.
ಕಾಲುವೆಯಾಗಿ ಹರಿಯುತ್ತಿದ್ದ ರಕ್ತನಿಲ್ಲುತ್ತಲೇ ಇರಲಿಲ್ಲ. ಮಾರಿಗುಡಿಯ ಮೇಲ್ವಿಚಾರಕ ಮಾರಿದತ್ತ ನಂತೂ ಸಾವಿರಾರು ಪ್ರಾಣಿಗಳ ತಲೆ ಕಡಿದವ..ಇತ್ತೀಚೆಗೆ ಪ್ರಾಣಿ ಬಲಿಗಳ ಜೊತೆ ನರಬಲಿಗಳನ್ನ ಸಹ ಶುರು ಮಾಡಿದ್ದಾನೆ. ಆತನ ಹಿಂಸೆಯನ್ನೇ ಮೆಚ್ಚಿ ಆತನ ಸೋದರಿಯನ್ನು ಅಮೃತಮತಿ ತನ್ನ ಮಗ ಯಶೋಮತಿಗೆ ಮದುವೆ ಮಾಡಿದ್ದಾಳೆ. ದಿನವೂ ಮಾರಿಗುಡಿಯಿಂದ ಬಲಿಯಾದ ಎಳೆ ಮಾಂಸ ಪ್ರಸಾದದ ರೂಪದಲ್ಲಿ ಅರಮನೆಗೆ ಬರುತ್ತೆ.ಅಮೃತಮತಿ ಬಗೆ ಬಗೆಯ ಭಕ್ಷ ತಯಾರಿಸಿ ನನಗೆ ,ಮಗನಿಗೆ ಬಡಿಸುತ್ತಾಳೆ.ತಿಂದಷ್ಟು ಕಾಮ ಗರಿಗೆದರುತ್ತದೆ. ಅವಳಿಗೆ ದಿನೇ ದಿನೇ ನನ್ನ ಮೇಲೆ ಮೋಹ ಹೆಚ್ಚಾಗುತ್ತಲೇ ಇತ್ತು. ಮಗನಾದ ಯಶೋಮತಿಯೂ ನನ್ನ ಹಾಗು ಅಮೃತಮತಿಯ ಸಂಭಂದಕ್ಕೆ ಯಾವ ವಿರೋಧವನ್ನ ವ್ಯಕ್ತಪಡಿಸಲಿಲ್ಲ. ತನ್ನ ತಾಯಿ ಮಾಡುವ ಎಲ್ಲ ಕಾರ್ಯಗಳು ಆತನಿಗೆ ಸಹ್ಯ. ಆತನೇ ಸುಮ್ಮನಿದ್ದ ಮೇಲೆ ಉಳಿದವರೂ ಸುಮ್ಮನಾದರು. ನಮ್ಮ ಸಂಭಂದಕ್ಕೆ ರಾಜ ಮುದ್ರೆ ದೊರಕಿತು. ನಾನು ಅರಮನೆಯಲ್ಲೇ ಸುಖವಾಗಿ ಇರಲಾರಂಬಿಸಿದೆ. ಹಾಗೇ ನನ್ನ ಜೀವನ ಪೂರ ಆ ಲೋಭ ಜೀವನದಲ್ಲೇ ಕಳೆದು ಹೋಗುತ್ತಿತ್ತೇನೋ. ಆ ನವಿಲು ಬಂದು ನನ್ನ ಕಣ್ಣ ಕುಕ್ಕಿರದಿದ್ದರೆ. ಅದು ಅಮೃತಮತಿಯೇ ಸಾಕಿದ್ದ ನವಿಲು. ಅಂದು ನಾನು ಅಮೃತಮತಿ ಭೋಜನಾನಂತರ ಸರಸದಲ್ಲಿ ತೊಡಗಿದ್ದೆವು. ಇದ್ದಕ್ಕಿದ್ದಂತೆ ಆ ನವಿಲು ಹಾರಿ ಬಂದು ನನ್ನ ಕಣ್ಣು ಕುಕ್ಕಿತ್ತು. ಅಮ್ಮ ಎಂದು ಮೊದಲು ಚೀರಿದ್ದು ಅಮೃತಮತಿ. ನಂತರವೇ ನನಗೆ ನೋವು ತಿಳಿದದ್ದು. ರಕ್ತ ಸೋರತೊಡಗಿತ್ತು.ಬಲವಾಗಿಯೇ ಕುಕ್ಕಿತ್ತು ನವಿಲು. ನೋವಿನಿಂದ ಒದ್ದಾಡಲಾರoಭಿಸಿದೆ. ಕ್ರೋಧಗೊಂಡ ಅಮೃತಮತಿ ಆ ನವಿಲನ್ನ ಬಡಿದು ಕೊಂದಳು. ರಾಜವೈದ್ಯರ ಆಗಮನವಾಯಿತು. ಚಿಕಿತ್ಸೆ ನಡೆಯಿತು.ಒಂದು ಕಣ್ಣಿನ ದೃಷ್ಟಿ ಶಾಶ್ವತವಾಗಿ ಹೋಗಿತ್ತು. ನವಿಲು ಕುಕ್ಕಿದ ನನ್ನ ಕಣ್ಣು ನಂಜೇರಿತು. ಗಾಯ ಬಾತು ಕೀವು ಹರಿಯತೊಡಗಿತು, ತುಂಬಾ ನೋವು ಬಹಳಷ್ಟು ನರಳಿದೆ .ಅಮೃತಮತಿ ಯಂತೂ ತನಗೆ ಗಾಯ ಆದಹಾಗೆ ಆಡುತ್ತಿದ್ದಳು. ಅವಳ ಮತ್ತು ರಾಜವೈದ್ಯರ ಉಪಚಾರದಿಂದ ಕ್ರಮೇಣ ಗಾಯ ವಾಸಿಯಾಯಿತು. ನೋವು ಎಷ್ಟು ನೋವುಂಟು ಮಾಡುತ್ತದೆ ಎಂಬುದು ಮೊದಲ ಬಾರಿಗೆ ನನ್ನ ಅರಿವಿಗೆ ಬಂದಿತ್ತು.ಹೃದಯದ ಮೂಲೆಯಲ್ಲಿ ಎಲ್ಲೋ ಸಣ್ಣ ಕಂಪನ. ಹೆದರಿಕೆಯಾ?ಛೆ ಇಲ್ಲ ಪಶ್ಚಾತ್ತಾಪವೋ ....ಗೊತ್ತಿಲ್ಲ ಆ ನವಿಲು ಏಕೆ ನನ್ನನ್ನೇ ಹುಡುಕಿಕೊಂಡು ಬಂದು ಕುಕ್ಕಿತು ಎಂದು ಆ ಕ್ಷಣಕ್ಕೆ ಅರಿವಾಗಿರಲೇ ಇಲ್ಲ.ನಾನು ಸ್ವಲ್ಪ ಮೆತ್ತಗಾಗಿದ್ದೆ. ಮಾಂಸಹಾರ ಭಕ್ಷಣೆ ನಿಲ್ಲಿಸಿರಲಿಲ್ಲವಾದರೂ ಬಲಿ ಕೊಡುವ ಜಾಗಗಳಿಗೆ ಹೋಗುವದ ನಿಲ್ಲಿಸಿದ್ದೆ.
ಸಾಯುವ ಮುನ್ನ ಆ ಪ್ರಾಣಿಗಳ ಕಣ್ಣಿನ ನೋಟ ನನಗೆ ನನ್ನ ಕಣ್ಣ ಗಾಯದ ನೆನಪು ತರುತ್ತಿತ್ತು. ಇದನ್ನ ಅಮೃತಮತಿಗೆ ಹೇಳಿ ಮಾಂಸಾಹಾರವನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದೆ ..ಆಕೆ ನಕ್ಕು , ಕೊಂದ ಪಾಪ ತಿಂದಾಗ ಪರಿಹಾರ ಎಂದಳು. ಆ ವರ್ಷದ ತನ್ನ ಗಂಡನ ಶ್ರಾದ್ಧಕ್ಕೆ ಮೀನಿನ ಅಡುಗೆ ಮಾಡಿ ಬಡಿಸಿದರು.ತೃಪ್ತಿಯಿಂದ ಮೀನು ತಿಂದವರು ಆಕೆಯ ಗಂಡನ ಆತ್ಮಕ್ಕೆ ಶಾಂತಿ ಕೋರಿ ತೆರಳಿದರು. ಅಮೃತಮತಿಗೆ ಅದಿನ್ನಾವ ದ್ವೇಶವೋ..? ಅಹಿಂಸೆ, ಜೀವದಯ, ಬ್ರಹ್ಮಚರ್ಯ ,ಸಸ್ಯಹಾರದ ಮೇಲೆ ಪ್ರಾಣಿ ಬಲಿಯ ಜೊತೆ ಆಗಾಗ ನರಬಲಿಯೂ ಚಂಡಮಾರಿಗೆ ಶುರುವಾಗಿತ್ತು. ಇಷ್ಟುತ್ತಿಗಾಗಲೇ ಮಗ ಯಶೋಮತಿಯ ಅಭಯ ರುಚಿ ಅಭಯ ಮತಿ ಎಂಬ ಮಕ್ಕಳು ಹಿಂಸೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಅದಾರ ಬೋಧನೆಯಾಗಿತ್ತೋ ಮಕ್ಕಳಿಗೆ,? ಸಾತ್ವಿಕತೆಯ ಮೂರ್ತಿಗಳು.ಹಿಂಸೆಯ ವಿರೋಧಿಸಿ ಅರಮನೆಯಿಂದಲೇ ಹೊರ ನಡೆದಿದ್ದರು.
ಅರಮನೆ ಬಿಟ್ಟು ಹೋಗುವ ಹಿಂದಿನ ರಾತ್ರಿ, ಅಭಯ ಮತಿ ಅಭಯ ರುಚಿಗೆ ನಾನು ಮಲಗುವ ಪಕ್ಕದ ಕೋಣೆಯಲ್ಲಿ ಹೇಳುವದ ಕೇಳಿಸಿಕೊಂಡಿದ್ದೆ,. "ಮನುಷ್ಯನಿಗೆ ರಜೋಗುಣಗಳಾದ ಮತ್ಸರ, ಲೋಭ, ಹಿಂಸೆ ಹುಟ್ಟಿನಿಂದಲೇ ಬರುತ್ತವೆ. ಅವು ಸ್ವಭಾವ ಜನ್ಯ.ನಮ್ಮ ಕಲಿಕೆ, ನಡವಳಿಕೆ ಜ್ಞಾನ ಆ ರಜೆೋ ಗುಣಗಳನ್ನ , ಅಹಿಂಸೆ, ಸತ್ಯ. ಸಾತ್ವಿಕತೆ ಎಂಬ ತಮೋ ಗುಣಗಳನ್ನಾಗಿಬದಲಿಸಬೇಕು. ಇದಕ್ಕೆ ನಾವಿರುವ ಪರಿಸರ ಸಹ ಮುಖ್ಯ. ಇಲ್ಲೆ ಇದ್ದರೆ ನಾವು ತಂದೆಯಂತೆ ಆಗುವುದರಲ್ಲಿಸಂದೇಹವಿಲ್ಲ" ನನಗೆ ಅರ್ಥವಾಗಿರಲಿಲ್ಲ.ಮಕ್ಕಳಿಬ್ಬರೂ ಅರಮನೆ ತೊರೆದಿದ್ದರು.ಹಿಂಸೆಯಲ್ಲಿ ಮೀಯುತ್ತಿದ್ದ ಯಶೋಮತಿಗೆ ಸುದತ್ತಾಚಾರ್ಯರಿಂದ ಉಪದೇಶವಾಗಿತ್ತು.
ಆಗಲೇ ನನ್ನ ಕುಕ್ಕಿದ ನವಿಲು.. ತಾನು ತಿಂದ ಮೀನು ತನ್ನ ತಂದೆಯ ಮರುಜನ್ಮಗಳು ಎಂದು ತಿಳಿದದ್ದು.ನಂತರ ಘಟನೆಗಳು ಬೇಗನೆ ನಡೆದವು.ಯಶೋಮತಿ ಬದಲಾಗಿದ್ದ. ಜಿನ ಧರ್ಮವನ್ನ ಅಪ್ಪಿಕೊಂಡಿದ್ದ.ಪಶ್ಚಾತಾಪ ಪಟ್ಟಿದ್ದ. ಮಾರಿದೇವತೆಯೇ ಪ್ರತ್ಯಕ್ಷಳಾಗಿ ಹಿಂಸೆ ವರ್ಜ್ಯ ಎಂದಿದ್ದಳು.ಮಗ ಅಭಯ ರುಚಿಗೆ ರಾಜ್ಯವಹಿಸಿ ತಾಯಿ ಅಮೃತಮತಿಗೆ ಒಂದು ಮಾತೂ ಹೇಳದೆ ವೈರಾಗ್ಯದಿಂದ ತಪಸ್ಸಿಗೆ ನಡೆದಿದ್ದ.ಸಾಮಾನ್ಯವಾಗಿ ಧರ್ಮಸಂಕ್ರಮಣ ಕಾಲದಲ್ಲಿಹಿಂಸೆ ವಿಜೃಂಭಿಸುತ್ತದೆ. ಹೊಸ ಧರ್ಮಕ್ಕೆ ತೆರೆದುಕೊಂಡವರು ಹಳೆ ಧರ್ಮದ ಮೂಲಭೂತವಾದಿಗಳನ್ನ ಶಿಕ್ಷಿಸುತ್ತಾರೆ. ಇಲ್ಲಿ ಹಾಗಾಗಲಿಲ್ಲ. ಹೆಚ್ಚಿನ ಸಂಘರ್ಶವಿಲ್ಲದೇ ಅಹಿಂಸೆಯ ತಳಹದಿಯಲ್ಲೇ ಜಿನ ಧರ್ಮ ಮತ್ತೆ ಪ್ರವರ್ಧಮಾನಕ್ಕೆ ಬಂದಿತ್ತು.ರಾಜಮಾತೆ ಎಂಬ ಭಯವಾ? ಅಜ್ಜಿ ಎಂಬ ಪ್ರೀತಿಯಾ? ಅಥವಾ ಜಿನ ಧರ್ಮದ ಪರಿಪಾಲನೆಯಾ? ಒಟ್ಟಿನಲ್ಲಿ ಅಮೃತಮತಿ ಹಾಗು ನಾನು ನಡೆಸಿದ ಪ್ರಾಣ ಬಲಿ ಹಾಗು ಹಿಂಸೆಗೆ ಯಾರೂ ಶಿಕ್ಷೆ ವಿಧಿಸುವ ಧೈರ್ಯ ತೋರಲಿಲ್ಲ.
ಇಷ್ಟಕ್ಕೆ ಆಗಿದ್ದಿದ್ದರೆ ಅಮೃತಮತಿ ಜಗ್ಗುತ್ತಿರಲಿಲ್ಲ. ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದಳು. ಕಾಲ ಆಕೆಯ ವಯಸ್ಸಿನ ಮೇಲೆ ಪರಿಣಾಮ ಬೀರಿತ್ತು. ಆರೋಗ್ಯದ ಮೇಲೂ ತಿಂದ ಆಹಾರವೇ ಜೀರ್ಣವಾಗುತ್ತಿರಲಿಲ್ಲ. ಮೈಗೆ ಹತ್ತುತ್ತಿರಲಿಲ್ಲ. ಇನ್ನು ಮಾಂಸಹಾರ ದೂರವೇ. ಮುಖ ಮೂಗು ವಿಕಾರಗೊಳ್ಳುತ್ತಿತ್ತು. ಕೈ ಬೆರಳುಗಳು ಗಿಡ್ಡವಾಗಿ ಮೊಂಡಾಗುತ್ತಿದ್ದವು. ಪಾದದಲ್ಲಿ ಮಾಗದ ಗಾಯಗಳು... ಸ್ಪರ್ಶ ಜ್ಞಾನವನ್ನೇಕಳೆದುಕೊಂಡಳು. ಅಷ್ಟೊಂದು ಅದ್ಬುತ ಸುಂದರಿ ಅಮೃತಮತಿ ವಿಕಾರವಾದ ಮುದುಕಿಯಾಗಿದ್ದಳು. ಕುರೂಪ ಕೆಲವೇ ದಿನಗಳಲ್ಲಿ ಬಂದಿತ್ತು. ನನಗಿಂತಲೂ ಹೆಚ್ಚು ಕುರೂಪ. ಯಾವ ನನ್ನ ಸ್ಪರ್ಶಕ್ಕಾಗಿ ರತಿರೂಪಿಯಾಗಿ ಕಾತರಿಸುತ್ತಿದ್ದಳೋ ಆ ಸ್ಫರ್ಶ ಜ್ಞಾನ, ಆ ಇಂದ್ರಿಯಸಂವೇದನೆ ಅವಳಿಂದ ದೂರವಾಗಿತ್ತು. ಮುಂದೆ ಅನ್ನ ಕೂಡ ಗಂಟಲಲ್ಲಿ ಳಿಯುತ್ತಿರಲಿಲ್ಲ.. ಕೇವಲ ದ್ರವಾಹಾರ.. ಇತರ ಸೇವಕರು ಆಗಲೇ ಆಕೆಯಿಂದ ದೂರ.. ಯಾರೂ ಹತ್ತಿರ ಬರುತ್ತಿರಲಿಲ್ಲ ಮಾಡಿದ ಪಾಪಕ್ಕೆ ಫಲವಾ? ಎಲ್ಲರೂ ಹಾಗೇ ಹೇಳುತ್ತಿದ್ದರು. ಕರುಣೆ ಹಾಗು ಜಿಗುಪ್ಸೆಯಿಂದ ಒಮ್ಮೆ ರಾಜ ವೈದ್ಯರು ದೂರದಿಂದಲೇ ಅಮೃತಮತಿಯನ್ನ ನೋಡಿ ಕುಷ್ಟ ರೋಗ ಎಂದು ಘೋಶಿಸಿದರು. ನಿರ್ವಿಕಾರವಾಗಿತ್ತು ಅಮೃತಮತಿಯ ಮುಖ ಇದನ್ನ ಕೇಳಿದಾಗ.ಸಂಕಟವಾ? ನೋವಾ? ನಂಬಲಸಾಧ್ಯವಾ? ನನ್ನನ್ನೂ ಸೇರಿದಂತೆ ಯಾರೊಡನೆಯೂ ಮಾತಾಡಲಿಲ್ಲ ಅವಳು. ನನ್ನ ವಿನಃ ಯಾರೂ ಮಾತನಾಡುತ್ತಿರಲಿಲ್ಲ ಅವಲೊಡನೆ. ಆ ರಾತ್ರಿ ಏಕಾಂತವಾಗಿ ಕಳೆದಳು. ಮಾರನೆಯ ದಿನ ಯಾರೋ ಒಲ್ಲದ ಮನಸ್ಸಿನಿಂದ ನನಗೆ ಸುದ್ದಿ ಮುಟ್ಟಿಸಿದರು.
ತಾ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅಮೃತಮತಿ ಜಿನ ಧರ್ಮಕ್ಕೆ ತಲೆಬಾಗಿ ಸಲ್ಲೇಖನ ವೃತ ಕೈಗೊಂಡು ಪ್ರಾಣ ತ್ಯಜಿಸುವ ನಿರ್ಧಾರ ಕೈಗೊಂಡಿದ್ದು ಕೊನೆಯ ಬಾರಿಗೆ ನನ್ನೊಡನೆ ಮಾತನಾಡಲು ಬಯಸಿದ್ದಾಳೆ ಎಂದು.ಗಾಭರಿಯಾಗಿ ಅಮೃತಮತಿಯ ಬಳಿ ಓಡಿದೆ.ನಾ ಕೇಳಿದ್ದು ನಿಜವಾ ಅಂದೆ.ನಕ್ಕಳು.
"ದೊರೆ, ಹೀಗೆ ಬದುಕಬೇಕು ಎಂದು ನನ್ನಿಚ್ಚೆಗೆ ತಕ್ಕಂತೆ ಬದುಕಿದಳು ನಾನು. ನನಗೆ ಒಪ್ಪಿಗೆಯಾದರೆ ತೀರಿತು. ಯಾವ ಕಟ್ಟುಪಾಡುಗಳು, ಧರ್ಮಕರ್ಮಗಳು ನನ್ನ ತಡೆಯಲಿಲ್ಲ.ಸುಖಕ್ಕೆ ಯಾವ ಮೈಲಿಗೆ ಎಂದೇ ಅನುಭವಿಸಿದವಳು.ಇನ್ನು ಮರಣವನ್ನ ನನ್ನ ಮೇಲೆ ಸವಾರಿ ಮಾಡಲು ಬಿಡುತ್ತೇನೆಯೆ? ಸಾವು ಕೂಡ ನನ್ನ ಮುಂದೆ ಡೊಗ್ಗು ಸಲಾಮು ಹೊಡೆದು ಮಾರು ದೂರ ನಿಲ್ಲಬೇಕು. ನಿಲ್ಲುತ್ತೆ ಕೂಡ. ನಾನು ಕರೆದ ಮೇಲಷ್ಟೇ ಅದು ಬರಬೇಕು.
ಸಾಕು. ತೃಪ್ತಿಯಾಗಿದೆ ಜೀವನ. ಎಂಟು ಜನ್ಮಕ್ಕಾಗುವಷ್ಟು ಸುಖ ಸೂರೆ ಹೊಡೆದಿದ್ದೇನೆ. ತಪ್ಪೊ? ಸರಿಯೋ? ಕನಸಿದ್ದೆಲ್ಲ ನನಸಾಗಿದೆ. ನನಸು ಮಾಡಿಕೊಂಡಿದ್ದೇನೆ. ದೈಹಿಕ ಸುಖದ ಮುಂದೆ ನೈತಿಕತೆ, ಧರ್ಮಗಳನ್ನ ಗಾಳಿಗೆ ತೂರಿದ್ದೇನೆ.ಸುಖ ಕೊಡದ ಗಂಡನನ್ನ ದೂರವಿಟ್ಟೆ. ಕೊಂದೆ. ಕೊಂದದ್ದು ಬೇಸರವಾದರೂ ಪಶ್ಚಾತಾಪವಂತೂ ಇಲ್ಲ. ಆತನ ಎಡಬಿಡಂಗಿತನ, ಅರೆ ಬೆಂದ ತಾತ್ವಿಕತೆಗೆ ಕೊಂದು ಮುಕ್ತಿಗೆ ಎಡೆ ಮಾಡಿದೆ. ಅಸಹ್ಯಪಡಿಸುತ್ತಿದ್ದ ಆತನ ಸೋಗಲಾಡಿತನ, ಮತ್ತು ಅಹಿಂಸೆಗೆ ಪ್ರತೀಕಾರವೆಂಬಂತೆ ಪ್ರಾಣಿ ಹಿಂಸೆಗೆ ಇಳಿದೆ.ಅದು ತಪ್ಪಾ?ಗೊತ್ತಿಲ್ಲ. ಹಾಗೆ ಎಲ್ಲವೂ ಅಹಿಂಸೆಯಂತಾದರೆ ಯಾರನ್ನು ಯಾರು ಉಳಿಸಬೇಕು?. ಹುಲ್ಲು ಜಿಂಕೆ ತಿನ್ನುತ್ತೆ.ಜಿಂಕೆಯನ್ನ ಹುಲಿ.ಎಲ್ಲರೂ ಹುಲ್ಲೇ ತಿಂದರೆ ಯಾರು ಉಳಿಯಬೇಕು?. ದೇವರು ಕೂಡ ಎಲ್ಲ ಹುಲ್ಲೇ ತಿನ್ನುವಂತೆ ಯಾಕೆ ಮಾಡಲಿಲ್ಲ?.
ನನಗೆ ತೋಚಿದ್ದು ಇಷ್ಟು. ಅದರಂತೆ ನಡೆದೆ. ಸತ್ತ ಬಳಿಕ ಸಿಗುವ ಸಗ್ಗ ನರಕಗಳ ಬಗ್ಗೆ ನನಗೆ ಚಿಂತೆಯಿಲ್ಲ.ಆ ಸಗ್ಗ ನರಕಗಳನ್ನ ಅನುಭವಿಸುವ ಈ ಇಂದ್ರಿಯಗಳನ್ನ ಹೊತ್ತ ದೇಹವೇ ನಶಿಸಿದ ಮೇಲೆ ಯಾವ ಆತ್ಮಅದನ್ನ ಅನುಭವಿಸುತ್ತೆ.?ನಾ ಪಡೆದ ಸುಖದ ಅನುಭವ ಮಾತ್ರ ಶಾಶ್ವತ. ಮಧುರ.ಈಗ ಅನುಭವಿಸುತ್ತಿರುವ ನೋವು ಕ್ಷಣಿಕ.ಮರಣನನ್ನ ಸೇವಕ . ಈಗ ನಾ ಕರೆದರೆ ಬಂದು ಅದಕ್ಕೆ ಮುಕ್ತಿ ಕೊಡುತ್ತಾನೆ.ಇರಲಿ ಬಿಡು ದೊರೆ.ನಿನ್ನಿಂದ ಅಷ್ಟು ಸುಖ ಅನುಭವಿಸಿದ ಈ ದೇಹ ನರಕದಲ್ಲೇ ಕೊಳೆಯಲಿ ಬಿಡು, ಶಾಶ್ವತವಾಗಿ.ಆ ಸುಖದ ನೆನಪಿನಲ್ಲೇ ಅನುಭವಿಸುತ್ತೇನೆ.ನನ್ನವರು ಎಂದು ನನಗಿದ್ದವರು ಇಬ್ಬರೇ ದೊರೆ. ನೀನು ಹಾಗು ಮಗ ಯಶೋಮತಿ.ಯಶೋಮತಿ ಪುಕ್ಕಲ, ಹೇಳದೇ ಓಡಿ ಹೋದ. ಆ ನೋವಿದೆ.ಇನ್ನು ನೀನು. ಕೇವಲ ನನಗಾಗಿ ಬದುಕಿದೆ. ಎಲ್ಲ ಸುಖ ಕೊಟ್ಟೆ. ನಿನ್ನ ಅಂಗೈಲಿ ಇಟ್ಟು ಸಾಕಿದೆ. ಎಲ್ಲೋ ನನ್ನ ಸ್ಟಾರ್ಥಕ್ಕೆ ನಿನ್ನ ಉಪಯೋಗಿಸಿದೆನಾ ?ಬಿಡು ದೊರೆ. ನಾನು ನನ್ನಿಷ್ಟದಂತೆ ಸಾಯುತ್ತೇನೆ.. ಇದಕ್ಕೆ ಈ ಜನ ಸಲ್ಲೇಖನ .. ಪ್ರಾಯಶ್ಚಿತ್ತ ಎಂದು ಕರೆದು ಸಂತಸ ಪಡುತ್ತಿದ್ದಾರೆ. ಖುಷಿ ಪಡಲಿ ಬಿಡು ಪಾಪ.ಸಾಯುವ ಮುನ್ನ ನಿನಗೆ ಇದನ್ನೆಲ್ಲ ಹೇಳಬೇಕು ಎನ್ನಿಸಿತು. ನನ್ನ ನಿಜವಾದ ಪತಿಯಾದ ನಿನಗೆ ನಮಸ್ಕರಿಸಬೇಕು ಅನ್ನಿಸಿತು.
ತೆಗೆದುಕೋ... ಈ ಚೀಲದಲ್ಲಿ ಲಕ್ಷ ಸುವರ್ಣ ವರಹಗಳಿವೆ.. ನನ್ನ ಕೊನೆ ಗಳಿಗೆಯಲ್ಲಿ ನಾನು ಒಂಟಿಯಾಗಿರಬೇಕು. ಸತ್ತ ಮೇಲೆ ನನ್ನ ಹೆಣ ನಾಯಿ ನರಿ ತಿಂದರೂ ಚಿಂತೆಯಿಲ್ಲ. ಬದುಕಿರುವವರೆಗೂ ನಾ ಅರಸಿ. ನಾ ಹೋದ ಮೇಲೆ ನಿನಗಿನ್ನು ಇಲ್ಲಿ ಬದುಕುವುದು ಕಷ್ಟ.ಇಲ್ಲಿಂದ ದೂರ ಎಲ್ಲಿಯಾದರೂ ಹೋಗಿ ಬದುಕು ,ದೊರೆ."ಮಾನವ ಸ್ವಭಾವ ಜನ್ಯ ರಜೋಗುಣಿ....ಪ್ರಾಣಿಗಳಂತೆ... ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು ಎಂದು ಅಭಯ ರುಚಿ ಹೇಳುತ್ತಿದ್ದುದು ನನಗೆ ನೆನಪಿಗೆ ಬಂತು.ನನಗೂ ಈಗೀಗ ಧರ್ಮ ಕರ್ಮಗಳು ಅಲ್ಪ ಸ್ವಲ್ಪ ಅರ್ಥವಾಗುತ್ತಿದ್ದವು.
ತನ್ನಿಚ್ಚೆಯಂತೆ ಬದುಕಿದ ಅಮೃತ ಮತಿ, ನನ್ನ ದೂರ ಹೋಗಲು ತಿಳಿಸಿದ್ದಳು. ನನ್ನನ್ನು ಅಂಗೈಲಿಟ್ಟುಕೊಂಡು ಕಾಪಾಡಿದ, ನನ್ನ ವಿನಃ ಬೇರೆಲ್ಲ ಪುರುಷರನ್ನ ಸೋದರರೆಂದ ಅಮೃತಮತಿ, ಯಾವ ಸಮಾಜಕ್ಕೂ ಜಗ್ಗದೆ ನಮ್ಮಿಬ್ಬರ ಸಂಭಂದವನ್ನ ಮುಚ್ಚಿಡದೆ ಘoಟಾಘೋಶವಾಗಿ ಸಾರಿದ, ನನ್ನ ನೋವು ತಾನು ಅನುಭವಿಸಿದ, ನನ್ನ ಜೊತೆ ಸೇರಿ ದೈಹಿಕ ಸುಖ ಸೂರೆ ಹೊಡೆದ ಅಮೃತಮತಿ ತನ್ನ ಕೊನೆಯ ಕ್ಷಣಗಳಲ್ಲಿ ಒಂಟಿಯಾಗ ಬಯಸಿದ್ದಳು. ನಾನು ನಿರಾಕರಿಸಿದೆ ಅವಳ ಬೇಡಿಕೊಂಡೆ. ಮಾತಾಡದೇ ಸುಮ್ಮನೆ ಅವಳ ಮುಖ ನೋಡುತ್ತಾ ದೂರ ಇರುವೆನೆoದೆ.ಅವಳ ಹಠವೇ ಗೆದ್ದಿದ್ದು.ಅಪಾರ ಪ್ರೀತಿಯನ್ನ ಸೂಸುತ್ತಿದ್ದ ಅವಳ ಕಣ್ಣುಗಳನ್ನ ಕೊನೆಯ ಬಾರಿ ನೋಡಿ ಹೊರ ನಡೆದೆ.ಗಂಟಲು ಮೊದಲ ಬಾರಿ ಗದ್ಗದಿತವಾಗಿತ್ತು.ಈ ವೃದ್ದಾಪ್ಯದಲ್ಲಿ ಎಲ್ಲಿಗೆ ಹೋಗಲಿ?
ಆಕೆ ಕೊಟ್ಟ ಬಂಗಾರದ ವರಹಗಳು ಭದ್ರವಾಗಿದ್ದವು ಎಲ್ಲಿಯಾದರೂ ತುಂಬಾ ದೂರ ಹೋಗಿ ಬಿಡಬೇಕು. ಮನಸು ಮತ್ತೆ ಹಳೆಯ ಅಶ್ವ ಶಾಲೆಗೆ ನಡೆ ಎಂದಿತು.ವರಹಗಳನ್ನ ಅಲ್ಲಿಯೇ ಬಿಟ್ಟೆ.ನಡೆದು ಹೋದ ಕಾಲುಗಳು ನನ್ನ ನಿಲ್ಲಿಸಿದ್ದು. ಮಾರಿಗುಡಿಯ ಮುಂದೆ. ಮಾರಿಗುಡಿ ಬದಲಾಗಿತ್ತು. ರಕ್ತ ಕಾಲುವೆಯಂತೆ ಹರಿಯುತ್ತಿರಲಿಲ್ಲ.ಹಿಂಸೆಯ ಲವಲೇಶವೂ ಅಲ್ಲಿರಲಿಲ್ಲ.ಜೀವದಯೆ.ಅಹಿಂಸೆ.
ಏನೂ ತೋಚಲಿಲ್ಲ.ಮಾರಿಗೆ ಅರ್ಪಿಸಿದ ಮುತ್ತುಗದ ಹೂಗಳು ಬಾಡಿದ್ದವು. ದೇವಳದ ಪ್ರಾಂಗಣವನ್ನ ಗುಡಿಸಿ ಸ್ವಚ್ಚ ಮಾಡಿ ಮೂಲೆಯಲ್ಲಿ ಕೂತೆ.ಯಾರೋ ಮುದುಕ ಎಂದು ಪ್ರಸಾದ ತಂದಿಟ್ಟರು.ಹೊದ್ದುಕೊಳ್ಳಲು ಕಂಬಳಿ ನೀಡಿದರು.ಅಲ್ಲೇ ನನ್ನ ವಾಸ ಶುರು ಮಾಡಿದೆ.ಇದೇ ನನ್ನ ನಿತ್ಯ ಕ್ರಮವಾಯಿತು.ಬೇಡವಾದರೂ ದೇವಳದಲ್ಲಿ ನಡೆಯುತ್ತಿದ್ದ ಜಿನ ಧರ್ಮ ಪ್ರವಚನಗಳು ಕಿವಿಗೆ ಬೀಳುತ್ತಿದ್ದವು.ಸರಿ ತಪ್ಪು ಸರಿಯಾಗಿ ಗೊತ್ತಾಗುತ್ತಿರಲಿಲ್ಲ.ಮೊದಲಿದ್ದ ಅಜ್ಞಾನವೇ ವಾಸಿ.ಮಾಡಿದ್ದೇಲ್ಲಾ ಸರಿ.ಈ ಅರೆ ಬರೆ ಜ್ಞಾನ ಈ ಇಳಿವಯಸ್ಸಿನಲ್ಲಿ ಸಾಕಷ್ಟು ಧ್ವಂದ್ವ ಉಂಟು ಮಾಡಿತ್ತು.ಅಮೃತಮತಿ ನಶೆಯಂತೆ ಮತ್ತೆ ಮತ್ತೆ ನೆನಪಿಗೆ ಬಂದು ಕಾಡುತ್ತಿದ್ದಳು.ಒಂದು ವಾರಕ್ಕೆ ಅಮೃತಮತಿ ಸತ್ತ ಸುದ್ದಿ ಬಂತು.ಯಾರೂ ದುಃಖಿಸಲಿಲ್ಲ ನನ್ನ ವಿನಃ.ಆಕೆಯನ್ನ ನೋಡಲು ಹೋಗಲಿಲ್ಲ.ದಿನವೂ ಬೆಳಿಗ್ಗೆಯಿಂದ ಮಾರಿ ದೇವತೆಯ ಮುಖವನ್ನೇ ತದೇಕಚಿತ್ತದಿಂದ ನೋಡಹತ್ತಿದೆ.ಯಾವುದು ಹೆಚ್ಚು ಪಾಪ?ಅಮೃತ ಮತಿಯ ಸಂಗವಾ?ಆಕೆಯ ಗಂಡನನ್ನ ಕೊಂದಿದ್ದಾ?ಕಡೆಗಳಿಗೆಯಲ್ಲಿ ಅವಳನ್ನ ಬಿಟ್ಟು ಬಂದಿದ್ದಾ?
ಯಾವುದು ಹೆಚ್ಚು ಸುಖ?ಅಶ್ವ ಶಾಲೆಯಲ್ಲಿ ಎಲ್ಲ ಮರೆತು ರಾತ್ರಿ ಕೊಳಲು ನುಡಿಸಿದ್ದಾ?ಅದ್ಬುತ ಸುಂದರಿ ಅಮೃತಮತಿ ದೇಹಕ್ಕೆ ಹಾವಿನಂತೆ ಸುತ್ತಿಕೊಂಡು ಕುದುರೆಯಂತೆ ಕೆನೆದಿದ್ದಾ?
ಯಾವುದು ಸರಿ? ಯಾವುದು ತಪ್ಪು?ನನ್ನ ಅಜ್ಞಾನದಲ್ಲಿ ಪಟ್ಟ ಸುಖವಾಜ್ಞಾನದಿಂದ ಬಂದ ದುಃಖವಾ?ಸ್ವರ್ಗವಾ? ನರಕವಾ?ಎಲ್ಲ ಅಸ್ಪಷ್ಟ. ಮಸುಕು ಮಸುಕು.ಆ ಮಸುಕಿನಲ್ಲಿ ಉತ್ತಮ ಪುರುಷನೊಬ್ಬ ಕೋಣದ ಮೇಲೆ ಕುಳಿತುಕೊಂಡು , ಕೈಯಲ್ಲಿ ಕುಣಿಕೆ ಹಿಡಿದುಕೊಂಡು, ಕಣ್ಣಲ್ಲಿ ಕರುಣೆ ತುಂಬಿಕೊಂಡು ಪ್ರೀತಿಯಿಂದ ನನ್ನೆಡೆಗೆ ಬರುತ್ತಿದ್ದ.ಮರಣ ನನ್ನ ನೋವನ್ನ, ಸಂಕಟವನ್ನ, ದ್ವಂದ್ವವನ್ನ, ಎಲ್ಲವನ್ನ ಕೊನೆಗಾಣಿಸುತ್ತದೆ.ಹೌದುಸಾವು ದಯಾಮಯಿ.