ಕಸದ ಲಾರಿಯಲ್ಲಿಯ ಲಕೋಟೆ ಹೇಳಿತು ಸತ್ಯ
ಕಸದ ಲಾರಿಯಲ್ಲಿಯ ಲಕೋಟೆ ಹೇಳಿತು ಸತ್ಯ


ಬೆಳಿಗ್ಗೆ 8 ಗಂಟೆಯ ಸಮಯ ಕಸದ ಆಟೋ ಬಂತು ಅಂಭುಜ ಹೊರಗೆ ಬಂದು ನೋಡಲು ಆಟೋದವರು ಈ ದಿನ ಕೇವಲ ಒಣಕಸ ಮಾತ್ರ ಹಾಕಬೇಕೆಂದು ಹೇಳುತ್ತಿದ್ದಾನೆ ತಕ್ಷಣ ಒಳಹೊಕ್ಕು ಒಣಕಸವನ್ನು ತಂದು ಆಟೋಗೆ ಹಾಕಿ ನಂತರ ಬೆಳಗಿನ ತಿಂಡಿ ಮಾಡಲು ಅಡಿಗೆ ಮನೆಗೆ ಹೆಜ್ಜೆ ಹಾಕಿದಳು. ಅದಾಗಲೇ ಸಾಕಷ್ಟು ಸಮಯ ಆಗಿದ್ದರಿಂದ ಬೇಗನೆ ಆಗುವ ತಿಂಡಿ ಉಪ್ಪಿಟ್ಟನ್ನು ಮಾಡಿದಳು. ಇದೀಗ ಅವಳಿಗೆ ಒಂದು ರೀತಿ ನಿಮ್ಮಳವಾಗಿತ್ತು ಮನಸ್ಸು. ಏನೋ ಒಂದು ಸಮಾದಾನ
ಒಂದು ಚಿಕ್ಕ ನಿಟ್ಟುಸಿರು ಬಿಟ್ಟು ಉಳಿದ ಕೆಲಸದ ಕಡೆ ಗಮನ ಹರಿಸಿದಳು.
ಸುತ್ತ ಮುತ್ತ ರಸ್ತೆ ಗಳಲ್ಲಿ ಒಣಕಸವನ್ನು ಸಂಗ್ರಹಿಸಿದ ಆಟೋ ಮುಂದೆ ದೊಡ್ಡ ಲಾರಿಗೆ ಒಣಕಸವನ್ನು ತುಂಬಲು ಬೇಗನೆ ಹೊರಟಿತು. ಅದೊಂದು ಸ್ಥಳ ಕೇಂದ್ರ ಮಾಡಿದ್ದರು ಅಲ್ಲಿ ಬರುವ ಸುತ್ತಮುತ್ತಲಿನ ಎಲ್ಲಾ ಕಸದ ಆಟಗಳಲ್ಲಿ ತಂದಿರುವ ಕಸವನ್ನು ದೊಡ್ಡ ಲಾರಿಗೆ ತುಂಬುವ ಕೆಲಸವನ್ನು ಆನಂದ ಮಾಡುವವನು. ಆನಂದ S.S.L.C. ಪರೀಕ್ಷೆ ಫೇಲಾಗಿ
ಈ ಕೆಲಸಕ್ಕೆ ಸೇರಿದ್ದನು. ಆದರೆ ಅವನು ತುಂಬಾ ಚುರುಕು ಸ್ವಭಾವದವನು. ಹೀಗೆ ಕಸವನ್ನು ತುಂಬುತ್ತಿರುವಾಗ ಅವನಿಗೆ ಒಂದು ಲಕೋಟೆ ಸಿಕ್ಕಿತು ಹೊಸದಾಗಿ ಇತ್ತು ಅದು ಅಂಚೆ ಕಚೇರಿಗೆ ಹೋಗುವ ಬದಲು ಕಸದಲ್ಲಿ ಬಂದಿತ್ತು. ಆದರೆ ಲಕೋಟೆಯನ್ನು ಭದ್ರವಾಗಿ ಅಂಟಿಸಿದ್ದರು ವಿಳಾಸವನ್ನು ಮಾತ್ರ ಬರೆದಿರಲಿಲ್ಲ. ಮೇಲೆ " ದಯವಿಟ್ಟು ಈ ಲಕೋಟೆ ಸಿಕ್ಕವರು ತಕ್ಷಣ ಹತ್ತಿರದ ಪೋಲೀಸ್ ಠಾಣೆಗೆ ತಲುಪಿಸಿ " ಧನ್ಯವಾದಗಳು. ಎಂದು ಮಾತ್ರ ಬರೆದಿತ್ತು. ಈಗ ಆನಂದ ಅದನ್ನು ಓದಿ ಒಂದು ಕ್ಷಣ ಅವಕ್ಕಾದನು ಏನಿದು ಈ ಲಕೋಟೆ ಇದರಲ್ಲಿ ಏನು ಇರಬಹುದು ವಿಷಯ ಲಕೋಟೆ ನೋಡಿದರೆ ಹೊಸದಾಗಿ ಇದೆ ಆದರೆ ಇದರಲ್ಲಿ ವಿಳಾಸವಿಲ್ಲ ಅದನ್ನು ಹಾಗೆ ಬಿಸಾಡಲು ಮನಸ್ಸು ಬರಲಿಲ್ಲ. ಅದನ್ನು ಲಾರಿಯಲ್ಲಿ ತನ್ನ ಚೀಲದಲ್ಲಿಟ್ಟು ಭದ್ರ ಪಡಿಸಿದನು.
ಅಂದಿನ ಕೆಲಸವನ್ನು ಮುಗಿಸಿ ಪೋಲಿಸ್ ಠಾಣೆಗೆ ಹೋದನು . ಅಲ್ಲಿಯೇ ಇದ್ದ ಇನ್ಸ್‌ಪೆಕ್ಟರ್ ಅಮರೇಶ್ ಕ್ರೈಮ್ ಬ್ರಾಂಚ್ ರವರು ಕುಮಾರ್ ಪೇದೆಯ ಜೊತೆ ಮಾತನಾಡುತ್ತಿದ್ದರು. ಆನಂದನನ್ನು ನೋಡಿ ಬಂದ ವಿಷಯದ ಬಗ್ಗೆ ಕೇಳಿದರು.ಈಗ ಆನಂದ ತನ್ನ ಕೈಯಲ್ಲಿದ್ದ ಹೊಸ ಲಕೋಟೆಯನ್ನು ಕೊಟ್ಟು ನಂತರ ಬೆಳಿಗ್ಗೆ ತನ್ನ ಕೈಗೆ ಸಿಕ್ಕಿದ್ದನ್ನು ವಿವರಿಸಿದನು. ಅದನ್ನು ಪಡೆದು ಆನಂದನಿಗೆ ಭೇಷ್ ಎಂಬ ಶಹಬಾಸ್ ಗಿರಿ ಕೊಟ್ಟು ಧನ್ಯವಾದಗಳನ್ನು ತಿಳಿಸಿದರು ಇನ್ಸ್ಪೆಕ್ಟರ್ ಅಮರೇಶ್.
ಈಗ ಅದನ್ನು ತೆರೆದು ಓದಲು ಆರಂಭಿಸಿದರು. ತಡ ಮಾಡಲು ಇಚ್ಚಿಸದೆ ಕುತೂಹಲ ಹೆಚ್ಚಾಗಿ ನಿದಾನವಾಗಿ ಒಂದೊಂದೇ ಸಾಲನ್ನು ಓದುತ್ತಾ ಸಣ್ಣಗೆ ಬೆವರ ಹತ್ತಿದರು. ಕಾರಣ "ಅದೊಂದು ಆತ್ಮಹತ್ಯೆ ಅಲ್ಲ ಕೊಲೆ ಆಗಿರುವುದು ನೂರಕ್ಕೆ ನೂರು ಸತ್ಯ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಮಾಲಿನಿಯ ಆತ್ಮಕ್ಕೆ ಶಾಂತಿ ಸಿಗಬೇಕು" ಎನ್ನುವ ವಿನಮ್ರ ಪತ್ರ ವಾಗಿತ್ತು. ಒಕ್ಕಣೆ ಏನೋ ತುಂಬಾ ಚೆನ್ನಾಗಿ ಅಂದವಾದ ಬರವಣಿಗೆಯಲ್ಲಿ ಬರೆಯಲಾಗಿತ್ತು ಮತ್ತು ಬಹಳ ನಿಖರವಾಗಿ ಸತ್ಯ ಸಂಗತಿಯನ್ನು ಸ್ವಲ್ಪ ನಿಗೂಢ ವಾಗಿ ಹೇಳಲಾಗಿತ್ತು. ಆ ಪತ್ರದಲ್ಲಿ ದಿನಾಂಕ 10-12-2019 ಬೆಂಗಳೂರು ಎಂದು ಮಾತ್ರ ಇತ್ತು. ಮತ್ತು ತರುಣಿಯ ಕೊಲೆ ಆಗಿರುವುದು ಸ್ಪಷ್ಟ ಮಾಹಿತಿ ಇತ್ತು.
ಮಾಲಿನಿ ತಂದೆ ತಾಯಿ ಅಣ್ಣ ಅತ್ತಿಗೆ ಪುಟ್ಟ ತಮ್ಮನ ಜೊತೆಯಲ್ಲಿದ್ದಳು. ಅಣ್ಣ ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಎರಡು ವರ್ಷಗಳ ಹಿಂದೆ ಮದುವೆ ಯಾಗಿದ್ದ. ಅತ್ತಿಗೆ ಶಾಲಿನಿ ಸಹ ರೂಪವತಿ ಆಗಿದ್ದಳು. ಆದರೆ ಮಾಲಿನಿಯು ಅನುರೂಪಳಾಗಿದ್ದಳು. ಓದಿನಲ್ಲಿ ನಡೆ ನುಡಿಯಲ್ಲಿ ಕೆಲಸದಲ್ಲಿ ಎಲ್ಲದರಲ್ಲೂ ತುಂಬಾ ಜಾಣೆಯಾಗಿದ್ದಳು. ಇದು ಹೆಣ್ಣು ಮಕ್ಕಳ ವಯೋ ಸಹಜ ಈರ್ಷ್ಯೆ ಸ್ವಲ್ಪ ಮಟ್ಟಿಗೆ ಇತ್ತು.ಆದರೆ ಇಬ್ಬರೂ ಗೆಳತಿಯರಾಗೇ ಇದ್ದರು.
ಶಾಲಿನಿಗೆ ಅರುಣ ಎಂಬ ಒಬ್ಬ ತಮ್ಮನಿದ್ದ ಅವನು ಕೆಲಸದ ಹುಡುಕಾಟದಲ್ಲಿದ್ದ. ಉದ್ಯೋಗ ಅನ್ವೇಷಣೆ ಗಾಗಿ ರಾಮನಗರದಿಂದ ಬೆಂಗಳೂರಿಗೆ ಬರುತ್ತಿದ್ದ. ಮಾಲಿನಿಯ ಅಂದ ಚಂದಕ್ಕೆ ಅವಳ ಜಾಣತನಕ್ಕೆ ಮರುಳಾಗಿದ್ದ. ಡಬ್ಬಲ್ ಗ್ರಾಜುಯೇಟ್ ಆಗಿದ್ದರೂ ತನಗೆ ಬೇಕಾದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ.
ಈಗ ಆರು ತಿಂಗಳುಗಳ ಹಿಂದೆ ಸಿನಿಮಾಗಾಗಿ ಹೋಗಿದ್ದ ಮಾಲಿನಿಯ ತಂದೆ ತಾಯಿ ಮರಳಿ ಬರುವಾಗ ಅಕಸ್ಮಾತ್ತಾಗಿ ಆಕ್ಸಿಡೆಂಟ್ ಆಗಿ ಸ್ಥಳ ದಲ್ಲೇ ಮರಣ ಹೊಂದಿದರು. ಈಗ ಮಾಲಿನಿ ಮತ್ತು ತಮ್ಮ ಇಬ್ಬರೂ ಅಣ್ಣ ಅತ್ತಿಗೆ ಯ ಜೊತೆಯಲ್ಲಿ ಇದ್ದರು. ಮಾಲಿನಿಯು ತನ್ನ ವಿದ್ಯಾಭ್ಯಾಸ ವನ್ನು ಮುಂದುವರಿಸಿದ್ದಳು. ನೆರೆ ಮನೆಯ ಅಂಭುಜಕ್ಕ ಅತ್ಯಂತ ಪ್ರೀತಿ ಯ ಗೆಳೆತಿಯಾಗಿದ್ದಳು. ತನ್ನ ಎಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಲುತ್ತಿದ್ದಳು.
ಅರುಣ ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದ ಅವನು ಮಾಲಿನಿಯ ಅಂದ ಚಂದದ ಮೇಲೆ ಕಣ್ಣಿಟ್ಟಿದ್ದ. ಇದು ಸ್ವಲ್ಪ ಮಾಲಿನಿಗೆ ಈಗ ನುಂಗಲಾರದ ಬಿಸಿತುಪ್ಪವಾಗಿತ್ತು. ಒಂದು ಕಡೆ ಅತ್ತಿಗೆಯ ತಮ್ಮ ಅತ್ತಿಗೆಯನ್ನು ಎದುರು ಹಾಕಿಕೊಳ್ಳಲು ಆಗುತ್ತಿರಲಿಲ್ಲ. ಇನ್ನೊಂದು ಕಡೆ ಇಂತಹ ವಿಷಯವನ್ನು ಅಣ್ಣನಿಗೆ ಹೇಳಿ ಅಣ್ಣನ ಮನಸ್ಸು ನೋಯಿಸಲು ಇಷ್ಟವಿರಲಿಲ್ಲ. ಇದನ್ನು ಬೇರೆಯವರಿಗೆ ಹೇಳಲು ಆಗುವುದಿಲ್ಲ. ಇಂತಹ ಕಸಿವಿಸಿಯಲ್ಲಿ ಬೆಂದು ಹೋಗುತ್ತಿದ್ದಳು ಮಾಲಿನಿ. ತುಂಬಾ ಬೇಸರವಾದಾಗ ಅಂಬುಜಕ್ಕನೊಡನೆ ಕಷ್ಟಸುಖ ಹಂಚಿಕೊಳ್ಳುತ್ತಿದ್ದಳು.
ಅಂದು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯ ಶಾಲಿನಿ ಬನಶಂಕರಿ ಅಮ್ಮನವರ ದೇವಸ್ಥಾನಕ್ಕೆ ರಾಹುಕಾಲದ ದೀಪ ಹಚ್ಚಲು ಹೋಗಿದ್ದಳು. ಮನೆಗೆ ಬಂದಿದ್ದ ತಮ್ಮನೊಡನೆ ಊಟ ಮುಗಿಸಿಕೊಂಡು ದೇವಾಲಯಕ್ಕೆ ಹೋಗಿದ್ದಳು. ಅರುಣ ಮನೆಯಲ್ಲೇ ಇರುವುದಾಗಿ ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಹೇಳಿದನು. ಈಗ ಅರಣನೊಬ್ಬನೇ ಮನೆಯಲ್ಲಿ ಇದ್ದ.
ಮಾಲಿನಿಗೆ ಇಂದು ಕೊನೆಯ ತರಗತಿ ಇರಲಿಲ್ಲ ಎಂದು ಸ್ವಲ್ಪ ಬೇಗನೆ ಮನೆಗೆ ಬಂದಳು. ಆದರೆ ಇಂದು ಅತ್ತಿಗೆ ದೇವಾಲಯಕ್ಕೆ ಹೋಗಿದ್ದಾರೆ ಇರುವುದು ಅರಣನೊಬ್ಬನೆ ಎಂದಾಗ ಸ್ವಲ್ಪ ಕಸಿವಿಸಿಯಾಯಿತು.
ಇಂತಹ ಸಮಯಕ್ಕಾಗಿ ಕಾಯುತ್ತಿದ್ದ ಅರುಣನಿಗೆ ಮನದಲ್ಲಿ ತುಂಬಾ ಖುಷಿ ಯಾಗಿತ್ತು. ಇಂದು ಮಾಲಿನಿಯನ್ನು ತುಂಬಾ ಪ್ರೀತಿ ಯಿಂದ ಮಾತನಾಡಿಸಿದ. ಹಾಗೆ ಅವಳಿಗೆ ತಿನ್ನಲು ತಾನು ಬೆಳಿಗ್ಗೆ ತಂದಿದ್ದ ಮೈಸೂರು ಪಾಕ್ ಸಿಹಿ ಮತ್ತು ಪಕೋಡವನ್ನು ಕೊಟ್ಟ. ಹೀಗೆ ತಿನ್ನುತ್ತಿದ್ದ ಮಾಲಿನಿಯ ಜೊತೆಗೆ ಮಾತನಾಡುತ್ತಿದ್ದ. ಅವಳು ತಿಂದು ಮುಗಿಸುವುದನ್ನೇ ಕಾಯುತ್ತಿದ್ದ. ತಿಂದು ಮುಗಿದ ನಂತರ ರೂಮಿನ ಬಾಗಿಲು ಹಾಕಿ ಮಾಲಿನಿಗೆ ಅತ್ಯಾಚಾರ ಮಾಡಲು ಅವಣಿಸಿದ ಇದನ್ನು ತಿರಸ್ಕರಿಸಲು ಮಾಲಿನಿ ಹೆಣಗಾಡುತ್ತಿದ್ದಳು. ಇದೇ ಸಮಯಕ್ಕೆ ತುಂಬಾ ಬುದ್ಧಿವಂತಿಕೆ ಯಿಂದ ಮಾಲಿನಿಯ ಕೈಯಲ್ಲಿ ಒಂದು ಡೆತ್ ನೋಟ್ ಬರೆಸಿದ. " ನನ್ನ ಸಾವಿಗೆ ನಾನೇ ಕಾರಣ " ಎಂದು ಮಾಲಿನಿಯ ಸಹಿಯನ್ನು ಹಾಕಿಸಿದ.
ಹೀಗೆ ಆಗುತ್ತೆಂದು ಅಲ್ಲ ಅಕಸ್ಮಾತ್ ಏನಾದರೂ ಹೆಚ್ಚು ಕಡಿಮೆ ಆದರೆ ಒಂದು ವೇಳೆ ತಾನು ಸಿಕ್ಕಿ ಹಾಕಿಕೊಳ್ಲಬಾರದೆಂದು ಮುಂದಾಲೋಚನೆಯಿಂದ ಬರೆಸಿದ. ಇದನ್ನು ಬರೆದುಕೊಟ್ಟರೆ ತಾನು ಏನೂ ಮಾಡುವುದಿಲ್ಲ ಎಂಬ ಆಮಿಷ ಒಡ್ಡಿದ. ಮಾಲಿನಿಗೆ ತಾನು ಮೊದಲು ಅಲ್ಲಿಂದ ಹೊರ ಬಂದರೆ ಸಾಕು ಎನ್ನುವ ತೂಕದಲ್ಲಿ ಡೆತ್ ನೋಟ್ ಬರೆದುಕೊಟ್ಟಳು. ಅವಳಷ್ಟೇ ಅಂದವಾಗಿತ್ತು ಅವಳ ಬರವಣಿಗೆ.
ಈಗ ಪತ್ರವನ್ನು ಪಡೆದು ಅದನ್ನು ಭದ್ರ ಪಡಿಸಿದ ಆದರೆ ಅವನ ಕೋರಿಕೆ ಮಾತ್ರ ಅವನನ್ನು ನುಡಿದಂತೆ ನಡೆಯಲು ಬಿಡಲಿಲ್ಲ. ಮಾಲಿನಿಯು ಎಷ್ಟೇ ಬೇಡವೆಂದರೂ ಬಿಡದೆ ಬಲಾತ್ಕಾರ ಮುಂದುವರಿಸಿದ. ಈ ಒದ್ದಾಟದಲ್ಲಿ ಜೋರಾಗಿ ಕೂಗಲು ಬಾಯಿ ತೆರೆದಳು ಆಗ ಅರುಣ ಅವಳ ಬಾಯನ್ನು ಬಲವಂತವಾಗಿ ದಿಂಬಿನ ಸಹಾಯದಿಂದ ಮುಚ್ಚಿದ.
ಅವಳ ಕೂಗಿನ ಶಬ್ದ ಹೊರಬರದಂತೆ ಮಾಡಿದ. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಶಬ್ದವು ನಿಂತಿತ್ತು ಮಾಲಿನಿ ಈ ಸೆಣಸಾಟದಲ್ಲಿ ಆಯಾಸಗೊಂಡಿದ್ದಳು ಈಗ ದಿಂಬಿನಿಂದ ಬಾಯಿ ಮುಚ್ಚಿದ್ದರಿಂದ ಉಸಿರಾಟದ ತೊಂದರೆ ಆಗಿ ಪ್ರಾಣ ಪಕ್ಷಿ ಹಾರಿಹೋಗಿತ್ತು. . ಇದನ್ನು ಅರುಣ ನೀರಿಕ್ಷಿಸಿರಲಿಲ್ಲ. ಈಗ ಅರುಣನಿಗೆ ಮನದಲ್ಲಿ ಹೆದರಿಕೆ ಆರಂಭವಾಯಿತು. ಇತ್ತ ಮಾಲಿನಿಯು ಸಿಗಲಿಲ್ಲ ಅತ್ತ ಕೊಲೆಯೇ ನಡೆದು ಹೋಗಿದೆ.
ಶಾಲಿನಿ ದೇವಾಲಯದಿಂದ ಬಂದಳು ಅರುಣನೇ ಬಾಗಿಲು ತೆರೆದನು. ಮಾಮೂಲಿನಂತೆ ಕಾಫಿ ಮಾಡಿಕೊಡಲು ಅಡಿಗೆ ಮನೆಗೆ ಹೋದಳು. ಇಬ್ಬರಿಗೂ ಕಾಫಿ ಮಾಡಿಕೊಂಡು ಬಂದು ಸೋಫಾದಲ್ಲಿ ಕುಳಿತು ಕಾಫಿಯನ್ನು ಕುಡಿಯುವಾಗ ಶಾಲಿನಿಗೆ ಅರುಣನ ಮುಖದ ಮೇಲಿನ ಸಣ್ಣ ಬೆವರಿನ ಹನಿ ಕಾಣಿಸಿತು ಹಾಗೇ ಸ್ವಲ್ಪ ದುಗುಡದಿಂದ ಕೂಡಿದ ಮುಖವನ್ನು ಕಂಡು ಏಕೆ ಏನಾಯಿತು ಹೀಗೆ ಬೆವರುತ್ತಿದ್ದೀಯ ಎಂದು ಪ್ರಶ್ನಿಸಿದಾಗ ಅಲ್ಲಿ ಯವರೆಗೂ ನಡೆದ ಘಟನೆಯನ್ನು ವಿವರಿಸಿದ. ಈಗ ಶಾಲಿನಿಗೆ ಕೈಕಾಲು ಆಡಲಿಲ್ಲ ಇವಳೂ ಸಹ ಬೆವರ ತೊಡಗಿದಳು. ಏನು ಮಾಡುವುದು ಎಂದು ಒಂದು ಕ್ಷಣ ತಟಸ್ಥಳಾದಳು.
ಈಗ ನೋಡಿದರೆ ತಮ್ಮ ತನ್ನ ಕಾಲನ್ನು ಭದ್ರವಾಗಿ ಹಿಡಿದುಕೊಂಡಿದ್ದಾನೆ. ಅಕ್ಕಾ ಇದು ಅಚಾನಕ್ಕಾಗಿ ಆಗಿರುವುದು ನಾನು ಬೇಕೆಂದು ಮಾಡಲಿಲ್ಲ. ನಾನು ಮಾಲಿನಿಯನ್ನು ಬಯಸಿದ್ದೇನೋ ನಿಜ ಆದರೆ ಅವಳನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ. ನಾನು ಬಲಾತ್ಕಾರ ಮಾಡುವ ಮುನ್ನವೇ ಶವವಾದಳು. ಮಾನವನ್ನು ಉಳಿಸಿಕೊಂಡು ಪ್ರಾಣವನ್ನು ಬಿಟ್ಟಿದ್ದಾಳೆ. ಈಗ ಏನು ಮಾಡುವುದು ನೀನೇ ನನಗೆ ದಾರಿತೋರಬೇಕು ಎಂದು ಕಣ್ಣೀರು ಗೆರೆದನು.
ಈಗ ಒಂದು ಕಡೆ ನಾದಿನಿಯ ಕೊಲೆ ಇನ್ನೊಂದು ಕಡೆ ತಮ್ಮನ ಭವಿಷ್ಯದ ಚಿಂತೆ. ಅತ್ತ ತಂದೆ ತಾಯಿಯ ಪ್ರೀತಿಯ ಏಕೈಕ ಸುಪುತ್ರ. ನಿದಾನವಾಗಿ ಯೋಚಿಸುತ್ತಿರುವಾಗ ಅರುಣ ಒಂದು ಉಪಾಯವನ್ನು ಹೇಳಿದ. ಅಕ್ಕ ನಾನು ಮಾಲಿನಿಯ ಕೈಯಲ್ಲಿ ಒಂದು ಡೆತ್ ನೋಟ್ ಬರೆಸಿಟ್ಟುಕೊಂಡಿದ್ದೇನೆ ನೋಡು ಎಂದು ತೋರಿಸಿದನು. ಅದನ್ನು ನೋಡಿ ಶಾಲಿನಿಗೆ ಸ್ವಲ್ಪ ನಿಟ್ಟುಸಿರು ಬಂತು.
ಈಗ ಅಕ್ಕ ತಮ್ಮ ಇಬ್ಬರೂ ಸೇರಿ ಮಾಲಿನಿಯನ್ನು ನೇಣಿಗೆ ಶರಣಾಗಿದ್ದಾಳೆ ಎಂಬಂತೆ ರೋಮಿನಲ್ಲಿ ಇದ್ದ ಫ್ಯಾನಿಗೆ ಮಾಲಿನಿಯನ್ನು ನೇಣು ಹಾಕಿದರು. ಯಾರಿಗೂ ಯಾವುದೇ ಕಾರಣಕ್ಕೂ ತಮ್ಮ ಮೇಲೆ ಅನುಮಾನ ಬರದಂತೆ ಎಚ್ಚರ ವಹಿಸಿ ತಮ್ಮ ಕೆಲಸ ಪೂರೈಸಿದರು.
ಆದರೆ ಇದೆಲ್ಲಾ ಆಗುವಾಗ ಸ್ವಲ್ಪ ಕಿಟಕಿಯ ಕಡೆ ಗಮನ ಹರಿಸಲಿಲ್ಕ. ನೆರೆ ಮನೆಯ ಅಂಭುಜಕ್ಕ ಹೊರಗೆ ಬಂದು ಹೂವನ್ನು ಕೊಂಡು ಒಳಗೆ ಬರುತ್ತಿದ್ದಾಗ ಅಕಸ್ಮಾತಾಗಿ ಕಿಟಕಿಯಲ್ಲಿ ಇಣುಕಿ ನೋಡಿದಾಗ ಅಚ್ಚರಿಯಾದಳು. ಅಕ್ಕ ತಮ್ಮ ಇಬ್ಬರೂ ಸೇರಿ ಮಾಲಿನಿಯನ್ನು ಫ್ಯಾನ್ ಗೆ ಏರಿಸುತ್ತಿದ್ದ ದೃಶ್ಯ ವನ್ನು ನೋಡಿ ಅವಕ್ಕಾದಳು. ತಕ್ಷಣ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು.
ಡಿಸೆಂಬರ್ ಚಳಿಗಾಲದ ಸಮಯದಲ್ಲಿ ಸ್ವಲ್ಪ ಬೇಗನೆ ಕತ್ತಲಾಗುತ್ತದೆ. ಸುತ್ತ ಮುತ್ತ ಜನ ಸಾಯಂಕಾಲ ಕಾಫಿ ಕುಡಿಯುವ ಸಮಯ ಜೊತೆಗೆ ಧಾರವಾಹಿಯನ್ನು ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಮಾಲಿನಿಯ ತಮ್ಮ ಗಿರೀಶ ಶಾಲೆಯಿಂದ ಪ್ರವಾಸಕ್ಕೆ ಹೋಗಿದ್ದನು. ಅದು ಮೂರು ದಿನಗಳ ಪ್ರವಾಸ ವಾದ್ದರಿಂದ ಇಂದು ಅವನು ಮನೆಯಲ್ಲಿರಲಿಲ್ಲ.
ಈಗ ಮಾಲಿನಿಯ ಮನೆಯಿಂದ ಅಳುವಿನ ಆಕ್ರಂದನ ಶಾಲಿನಿಯ ಗಂಡ ಪ್ರಕಾಶ ಇಂದು ಸ್ವಲ್ಪ ಬೇಗನೆ ಆಫೀಸಿನಿಂದ ಬಂದ ಆದರೆ ಅವನಿಗೆ ನಡೆಯಬಾರದ್ದು ತನ್ನ ಮನೆಯಲ್ಲಿ ನಡೆದಿರುವುದನ್ನು ಊಹಿಸಲು ಸಾದ್ಯವಿಲ್ಲ. ತನ್ನ ಪ್ರೀತಿಯ ತಂಗಿ ಈಗ ನೇಣಿಗೆ ಶರಣಾಗಿದ್ದಾಳೆ. ತನ್ನ ದುಃಖವನ್ನು ಸಾವರಿಸಿಕೊಂಡು ಪ್ರಕಾಶ ಪೋಲಿಸರಿಗೆ ವಿಷಯ ಮುಟ್ಟಿಸಿದ.
ಮುಂದೆ ಎಲ್ಲವೂ ಚಾಚೂ ತಪ್ಪದೆ ನಡೆದುಹೋಯಿತು. ಆದರೆ ಬಾಳಿ ಬದುಕ ಬೇಕಿದ್ದ ತನ್ನ ತಂಗಿ ಇನ್ನಿಲ್ಲವಾಗಿದ್ದಳು. ಪೋಲಿಸರು ತಮ್ಮ ಕೆಲಸವನ್ನು ತಾವು ಮಾಡಿ ಮುಗಿಸಿದರು. ಮಾಲಿನಿಯ ಡೆತ್ ನೋಟ್ ಅವಳದೇ ಸ್ವಂತ ಬರವಣಿಗೆ ಎಂದು ತಿಳಿದು ಸುಮ್ಮನಾದರು.ಯಾರ ಮೇಲೂ ಅನುಮಾನ ವಿರದ ಕಾರಣ ಅಲ್ಲಿಗೆ ಮುಗಿಸಿದರು. ಕೊನೆಗೆ ಮಾಲಿನಿ ನೇಣಿಗೆ ಶರಣು ಎಂದು ಅಂತ್ಯವಾಯಿತು. ಅರುಣ ಊರಿಗೆ ಹೊರಟು ಹೋದ.
ಆದರೆ ಕಣ್ಣಾರೆ ಕಂಡ ಸತ್ಯ ವನ್ನು ಹೇಳುವ ದೈರ್ಯವಿಲ್ಲದೆ ವಿಲವಿಲ ಒದ್ದಾಡುತ್ತಿದ್ದ ಅಂಭುಜಕ್ಕನಿಗೆ ಮಾಲಿನಿಯ ಸಾವಿಗೆ ನ್ಯಾಯ ಒದಗಿಸಲೇಬೇಕೆಂದು ತನ್ನ ಮೇಲೆ ಅನುಮಾನವೂ ಬರಬಾರದೆಂದು ಬಹಳ ಬಹಳ ಆಲೋಚಿಸಿ ಕೊನೆಗೆ ಈ ರೀತಿ ಲಕೋಟೆ ಯಲ್ಲಿ ಎಲ್ಲವನ್ನೂ ಬರೆದು ಕಸದ ಆಟೋಗೆ ಹಾಕಿದಳು.
ಈಗ ಕುಮಾರ ಪೇದೆಯ ಪ್ರಶ್ನೆ ಸರ್ ಏನು ಮಾಡುತ್ತೀರ?ಇದು ನಿಜವಾಗಿ ಆಗಿರಬಹುದೇ ,ಅಥವಾ ಸುಮ್ಮನೆ ಬರೆದಿರಬಹುದೇ ? ಯಾರು ಬರೆದಿರಬಹುದು? ಎಂದೆಲ್ಲಾ ಕೇಳುತ್ತಿದ್ದಾನೆ. ಒಂದು ರೀತಿಯಲ್ಲಿ ಇದೇ ಗೊಂದಲ ತಳಮಳ ಅಮರೇಶ್ ಸರ್ ತಲೆಯಲ್ಲೂ ಓಡುತ್ತಿತ್ತು.
ಈಗ ಅಮರೇಶ್ ಮತ್ತು ಕುಮಾರ ಇಬ್ಬರೂ ಒಂದು ಹಂತಕ್ಕೆ ಬಂದರು. ಇದು ನಿಜವಾದ ಪತ್ರವೇ ಆಗಿರಬಹುದು ಅವರು ತುಂಬಾ ಹತ್ತಿರ ದಿಂದ ನೋಡಿರಬಹುದು ಪೋಲೀಸು ಕೇಸು ಎಂದು ಸಿಲುಕಿ ಕೊಳ್ಳಲು ಇಚ್ಚಿಸದೇ ಸತ್ಯವನ್ನು ಬಚ್ಚಿಡಲು ಆಗದೆ ಏನು ಮಾಡಬೇಕೆಂದು ತಿಳಿಯದೆ ಈ ರೀತಿ ಪತ್ರವನ್ನು ಬರೆದು ನಮಗೆ ತಲುಪಿಸಿರಬಹುದು.
ಈಗ ಈ ಲಕೋಟೆಯನ್ನು ಉದಾಸೀನ ಮಾಡಲು ಅಮರೇಶ್ ಗೆ ಮನಸ್ಸು ಒಪ್ಪಲಿಲ್ಲ. ಸರಿ ಪ್ರಯತ್ನ ಮಾಡಿ ನೋಡೋಣ ಆ ಅಮಾಯಕಿ ತರುಣಿ ಮಾಲಿನಿಯ ಸಾವಿಗೆ ನ್ಯಾಯ ಒದಗಿಸೋಣ ಎಂದು ನಿರ್ದರಿಸಿದರು.
ಆದರೆ ಇದು ಬಹಳ ಜಟಿಲ ವಾದ ಸಮಸ್ಯೆ ಏಕೆಂದರೆ ಇದರಲ್ಲಿ ಆತ್ಮಹತ್ಯೆ ಅಲ್ಲ ಅದು ಕೊಲೆ ಎನ್ನುವುದು ಬಿಟ್ಟರೆ ಬೇರೆ ಮಾಹಿತಿ ಇಲ್ಲ. ಪತ್ರವೇನೋ ಬೆಂಗಳೂರು ಎಂದು ಇದೆ. ಆದರೆ ಅದು ಅಂಚೆ ಕಚೇರಿಯಿಂದ ಬಂದಿಲ್ಲ ಒಂದು ವೇಳೆ ಬಂದಿದ್ದರೆ ಎಲ್ಲಿಂದ ಎಂದು ಸ್ವಲ್ಪ ತಿಳಿಯಬಹುದಿತ್ತು. ಸರಿ ಹೀಗೆ ಆಲೋಚಿಸುತ್ತಾ ಒಂದು ನಿರ್ಧಾರಕ್ಕೆ ಬಂದರು. ಬನಶಂಕರಿಯ ಸುತ್ತಮುತ್ತಲಿನ ಠಾಣೆ ಗಳಿಗೆ ಮೇಲ್ ಕಳಿಸಿದರು " 10-12-2019 ಯಾವುದಾದರೂ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದರೆ ಅದು ತರುಣಿಯದಾಗಿದ್ದರೆ ತಕ್ಷಣವೇ ತಮಗೆ ತಿಳಿಸಬೇಕೆಂದು ಬರೆದರು "
ಈಮೇಲ್ ಕಳುಹಿಸಿದ ಅಮರೇಶ್ ಸ್ವಲ್ಪ ಅಲ್ಪ ವಿರಾಮ ಹಾಕಿ ಸಿದ್ದಪ್ಪನ ಹತ್ತಿರ ಕಾಫಿ ತರಿಸಿಕೊಂಡು ಕುಡಿದನು.ಅಂದಿನ ಮುಂದಿನ ಕೆಲಸದ ಕಡೆ ಗಮನ ಹರಿಸಿದನು.
ಮಧ್ಯಾಹ್ನದ ಸಮಯದಲ್ಲಿ ಒಂದು ಬಾರಿ ಕಂಪ್ಯೂಟರ್ ನೋಡೋಣ ಎಂದು ಕುಳಿತರು. ತಮ್ಮ ಈ ಮೇಲ್ ಗೆ ಉತ್ತರ ಬಂದಿದೆಯೇ ಎಂದು ಪರೀಕ್ಷಿಸಿದಾಗ ಕೆಲವು ಠಾಣೆ ಗಳಿಂದ ಉತ್ತರವೇನೋ ಬಂದಿತ್ತು. ಅದನ್ನು ನೋಡಿ ಒಂದು ಕಡೆ ಸಮಾದಾನ ವಾದರೂ ಅದನ್ನು ಓದಿದಾಗ ಬೇಸರವಾಯಿತು ಕಾರಣ ಬಂದ ಉತ್ತರ ಗಳು ಇವರಿಗೆ ಬೇಕಾದ ಮಾಹಿತಿ ಆಗಿರಲಿಲ್ಲ.
ಸರಿ ಬೇರೆ ರೀತಿಯಲ್ಲಿ ಹೇಗೆ ಇದಕ್ಕೆ ಪರಿಹಾರ ಹುಡುಕುವುದು ಎಂದು ಆಲೋಚಿಸಿತ್ತಾ ಕುಳಿತನು.
ಸಂಜೆ 6 ಗಂಟೆಯ ಸಮಯವಾಗಿತ್ತು ��
ಸಂಜೆ 6 ಗಂಟೆಯ ಸಮಯವಾಗಿತ್ತು ಬೇರೆ ಮೇಲ್ ಗಳನ್ನು ವೀಕ್ಷಿಸುತ್ತಿದ್ದಾಗ ಅದು ಮುಗಿದ ಮೇಲೆ ತಮ್ಮ ಈಮೇಲ್ ಗೆ ಬೇರೆ ಯಾರಾದರು ಉತ್ತರ ನೀಡಿದ್ದಾರೆಯೇ ಎಂದು ನೋಡುತ್ತಿದ್ದಾಗ ಬ್ಯಾಟರಾಯನಪುರದ ಪೋಲಿಸ್ ಠಾಣೆ ಯಿಂದ ಉತ್ತರ ಬಂದಿತ್ತು.ಈಗ ಅದನ್ನು ಓದಲು ಆರಂಭಿಸಿದರು. ಇದು ಬಹಳ ಹತ್ತಿರವಾದ ಮಾಹಿತಿಯಾಗಿತ್ತು. ಒಂದು ಕಡೆ ತಮ್ಮ ಪ್ರಯತ್ನಕ್ಕೆ ಫಲ ಸಿಗುವ ದಾರಿ ಸಕ್ಕಿತೆಂದು ಮನಸ್ಸಿಗೆ ಆನಂದ ವಾಯಿತು.
ತಕ್ಷಣ ಪೇದೆ ಕುಮಾರ ನೊಡನೆ ಬ್ಯಾಟರಾಯನಪುರದ ಪೋಲಿಸ್ ಠಾಣೆಗೆ ಹೆಜ್ಜೆ ಹಾಕಿದರು.
ಬ್ಯಾಟರಾಯನಪುರದ ಪೋಲಿಸ್ ಠಾಣೆಯಲ್ಲಿ ಕ್ರೈಮ್ ಬ್ರ್ಯಾಂಚ್ ನಲ್ಲಿ ಇನ್ಸ್ಪೆಕ್ಟರ್ ಪೃಥ್ವಿ ಇದ್ದರು. ಅವರೂ ಸಹ ಇನ್ನೇನು ಹೊರಡಲು ತಯಾರಾಗುತ್ತಿದ್ದರು. ಅಮರೇಶ್ ರವರು ತಮ್ಮ ಪರಿಚಯ ಮತ್ತು ತಾವು ಕಳುಹಿಸಿದ ಮೇಲ್ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಹೀಗೆ ಮಾತನಾಡುತ್ತಿದ್ದಾಗ 10-12-2019 ತಮ್ಮ ಠಾಣೆ ಯಲ್ಲಿ ರೆಕಾರ್ಡ್ ಆಗಿದ್ದ ಫೈಲನ್ನು ತೆಗೆದು ನೋಡುತ್ತಾ ಅದರ ಬಗ್ಗೆ ಬಹಳ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಕಾರಣ ಅದನ್ನು ಈಗಾಗಲೇ ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಅದು ಮಾಲಿನಿಯದೇ ಹೆಸರಾಗಿತ್ತು. ಈಗ ಈ ಲಕೋಟೆಯ ಮೂಲಕ ಒಂದು ಹೊಸ ವಿಷಯ ಹೊರ ಬರುತ್ತಿದೆ. ಇಬ್ಬರೂ ಸ್ವಲ್ಪ ಸಮಯ ಮೌನ ವಹಿಸಿದರು. ನಂತರ ಇನ್ಸ್ಪೆಕ್ಟರ್ ಅಮರೇಶ್ ರವರು ಇನ್ಸ್ಪೆಕ್ಟರ್ ಪೃಥ್ವಿ ಅವರಿಗೆ ಈ ಕೇಸನ್ನು ವಹಿಸಿ ಬೀಳ್ಕೊಟ್ಟರು.
ಮರುದಿನ ತಮ್ಮ ಮೊದಲ ಆದ್ಯತೆಯನ್ನು ಮಾಲಿನಿಯ ಕೇಸಿಗೆ ಕೊಟ್ಟರು ಕಾರಣ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎನ್ನುವ ನಿರ್ಧಾರ ಮಾಡಿದರು. ತಮ್ಮ ಸಹಾಯಕ ಪೇದೆ ಮಂಜು ಅವರನ್ನು ಕರೆದುಕೊಂಡು ಮಾಲಿನಿಯ ಮನೆಗೆ ಬಂದರು. ಇದ್ದಕ್ಕಿದ್ದಂತೆ ಪುನಃ ಪೋಲಿಸ್ ರನ್ನು ನೋಡಿ ಶಾಲಿನಿ ಮತ್ತು ಪ್ರಕಾಶ ಇಬ್ಬರೂ ಅವಕ್ಕಾದರು. ಪ್ರಕಾಶ ಇನ್ನೂ ತನ್ನ ತಂಗಿಯ ಸಾವಿನಿಂದ ಹೊರ ಬಂದಿರಲಿಲ್ಲ. ಶಾಲಿನಿಗೆ ಈಗ ಸ್ವಲ್ಪ ಕಸಿವಿಸಿ ಆರಂಭವಾಯಿತು ಕಾರಣ ಮಾಲಿನಿಯ ಸಾವಿನ ಕಥೆ ಮುಗಿದ ಅಧ್ಯಾಯ ಎಂದು ಮನದಲ್ಲೇ ಸಂತಸದಿಂದ ಇದ್ದಳು ಆದರೆ ಈಗ ಕಣ್ಣೆದುರಿನಲ್ಲಿ ಪೋಲಿಸ್ ರನ್ನು ನೋಡಿ ಮಾತು ಬರಲಿಲ್ಲ. ಇದನ್ನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ.
ಇನ್ಸ್ಪೆಕ್ಟರ್ ಪೃಥ್ವಿ ರವರು ಪ್ರಕಾಶ ಮತ್ತು ಶಾಲಿನಿ ಇಬ್ಬರೂ ತಮ್ಮ ಠಾಣೆಗೆ ಬರಬೇಕೆಂದು ಮಾಲಿನಿಯ ಸಾವಿನ ಬಗ್ಗೆ ಮಾಹಿತಿ ಇದೆ ಆದ್ದರಿಂದ ಈಗಲೇ ತಮ್ಮ ಜೊತೆ ಬರಬೇಕೆಂದು ಕರೆದುಕೊಂಡು ಹೋದರು ಅದೇ ವೇಳೆಗೆ ಪಕ್ಕದ ಮನೆಯ ಅಂಭುಜಕ್ಕ ಹೊರಗೆ ಬಂದದ್ದು ಒಂದೇ ಆಯಿತು. " ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ " ಎನ್ನುವಂತಾಯಿತು. ಕೆಲ ಕಾಲ ಅಂಭುಜಕ್ಕಳೂ ಸಹ ಆಶ್ಚರ್ಯ ಚಕಿತಳಾಗಿದ್ದಳು. ತನ್ನ ಸ್ವಂತ ಹೊಸ ಲಕೋಟೆ ಪ್ರಯೋಗ ಸಫಲವಾಗುತ್ತಿದೆ ಎಂದು ದೇವರಿಗೆ ಮನದಲ್ಲೇ ನಮಿಸಿದಳು.
ಠಾಣೆಗೆ ಬಂದಾಗಿದೆ ಈಗ ಏನಿದ್ದರೂ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿರಬೇಕು ಅಷ್ಟೇ. ಪ್ರಕಾಶ ಆಫೀಸಿನಲ್ಲಿದ್ದ ಈ ಪ್ರಕರಣ ನಡೆದಾಗ ಆದ್ದರಿಂದ ಅವನ ಮೇಲೆ ಅಷ್ಟೊಂದು ಅನುಮಾನ ಇರಲಿಲ್ಲ. ಮತ್ತು ಹತ್ಯೆ ಆದವಳು ತಂಗಿಯಾದ್ದರಿಂದ ತಂಗಿಯನ್ನು ಕೊಲೆಗೈಯುವ ಸಂಪ್ರದಾಯ ನಮ್ಮಲಿಲ್ಲ. ಈಗ ಉಳಿದ ವಳು ಶಾಲಿನಿ. ಶಾಲಿನಿಗೆ ಕೈಕಾಲು ನಡುಗುತ್ತಿತ್ತು ಏಕೆಂದರೆ ಅವಳು ಒಂದು ರೀತಿ ಈ ಕೊಲೆಗೆ ಸಹಾಯ ಹಸ್ತ ನೀಡಿದ್ದಳು. ಅವಳ ಮುಖಭಾವದಿಂದಲೇ ಇನ್ಸ್ಪೆಕ್ಟರ್ ಪೃಥ್ವಿಗೆ ಇದ್ದಂತಹ ಸ್ವಲ್ಪ ಅನುಮಾನ ಇನ್ನಷ್ಟು ಗಟ್ಟಿ ಆಯಿತು. ಈಗ ಪ್ರಕಾಶ ರನ್ನು ಮನೆಗೆ ಕಳುಹಿಸಿ ಶಾಲಿನಿಯನ್ನು ವಿಚಾರಕ್ಕೆ ಒಳಪಡಿಸಿದರು. ಅವರು ಕೇಳುವ ಪ್ರಶ್ನೆಗಳಿಗೆ ಮತ್ತು ಕೇಳುವ ರೀತಿಗೆ ಹೆದರಿದ ಹರಿಣಿಯಂತಾದಳು. ಈಗ ತಪ್ಪಿಸಿಕೊಳ್ಳಲು ಯಾವ ಉಪಾಯವು ಇರಲಿಲ್ಲ ಆದ್ದರಿಂದ ಶಾಲಿನಿ ಭಯದಿಂದಲೇ ಅಂದು ನಡೆದ ಎಲ್ಲವನ್ನೂ ಚಾಚೂ ತಪ್ಪದೆ ಬಿಡಿಸಿ ಹೇಳಿದಳು.
ಎಲ್ಲವನ್ನೂ ಶಾಲಿನಿಯೆ ಒಪ್ಪಿಕೊಂಡ ಮೇಲೆ ಇನ್ನು ತಡಮಾಡದೆ ಇನ್ಸ್ಪೆಕ್ಟರ್ ಪೃಥ್ವಿ ರಾಮನಗರದಲ್ಲಿ ವಾಸವಾಗಿದ್ದ ಅರುಣನನ್ನು ಬಂಧಿಸಿ ಕರೆತರಲು ಇಬ್ಬರನ್ನು ಕಳಿಸಿದರು.
ತಪ್ಪು ಯಾರೇ ಮಾಡಲಿ ಅದಕ್ಕೆ ತಕ್ಕ ಶಿಕ್ಷೆ ಕಟ್ಟಿಟ್ಟ ಬುತ್ತಿ. ಸತ್ಯ ಯಾವಾಗಲೂ ಬೂದಿ ಮುಚ್ಚಿದ ಕೆಂಡದ ಹಾಗೆ ಅದು ಯಾವಾಗ ಬೇಕಾದರೂ ಬೆಂಕಿ ಹತ್ತಿಕೊಳ್ಳಬಹದು.ಅದಕ್ಕೆ ಹೇಳುವುದು ಸತ್ಯಕ್ಕೆ ಸಾವಿಲ್ಲ ಎಂದು.
ಮುಂದೆ ಪೋಲಿಸ್ ಅತಿಥಿ ಗಳಾಗಿ ಅರುಣನ ಜೊತೆ ಶಾಲಿನಿಯು ಹೋಗಬೇಕಾಯಿತು.
ಒಂದು ಕಡೆ ಅರುಣನ ಆತುರದ ಕಾಮಾಂದಕ್ಕೆ ಒಂದು ಅಮಾಯಕ ಹೆಣ್ಣು ಜೀವ ಬಲಿಯಾದಳು.ಇನ್ನೊಂದು ಕಡೆ ತಂದೆ ತಾಯಿ ಗಳಿಗೆ ಪ್ರೀತಿಯ ಮಗನ ಅಗಲಿಕೆ ಶಾಶ್ವತವಾಯಿತು. ಮತ್ತೊಂದು ಕಡೆ ಪ್ರಕಾಶ ಒಂಟಿಯಾದ. ತಮ್ಮನನ್ನು ಉಳಿಸಲು ಹೋಗಿ ಹೆಂಡತಿ ಶಾಲಿನಿ ಜೈಲು ಪಾಲಾದಳು.
ಏನೇ ಆದರೂ ಅಂಭುಜಕ್ಕ ನಿಗೆ ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಎದೆಯಲ್ಲೇ ಅವಿತುಕೊಂಡಿದ್ದ ಕಣ್ಣೀರ ಕೋಡಿ ಈಗ ಹರಿಯಿತು. ತನ್ನ ಗೆಳತಿಯ ಆತ್ಮಕ್ಕೆ ಶಾಂತಿ ಕೋರಿದಳು. ಗೆಳತಿಯ ಸಾವಿಗೆ ನ್ಯಾಯ ದೊರಕಿಸುವಲ್ಲಿ ಸಫಲಳಾದುದಕ್ಕೆ ಸ್ವಲ್ಪ ಮಟ್ಟಿಗೆ ಮನಃಶಾಂತಿ ದೊರಕಿತು.