Shantha Kumari

Crime

4  

Shantha Kumari

Crime

ಮೊಬೈಲ್ ನಲ್ಲಿ ಅಡಗಿತ್ತು ಸತ್ಯ

ಮೊಬೈಲ್ ನಲ್ಲಿ ಅಡಗಿತ್ತು ಸತ್ಯ

7 mins
93


ವತ್ಸಲ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಒಬ್ಬ ಮಗಳಿದ್ದಳು ಅವಳೇ ದೀಪ. ಮಗಳು ತುಂಬಾ ಬುದ್ಧಿವಂತೆ ಮತ್ತು ಚುರುಕು ಸ್ವಭಾವದವಳಾಗಿದ್ದಳು. ಚೆನ್ನಾಗಿ ಓದುತ್ತಿದ್ದಳು.

ವತ್ಸಲ ಮನೆ ಕೆಲಸಕ್ಕಾಗಿ ಪರಿಮಳಳನ್ನು ಇಟ್ಟು ಕೊಂಡಿದ್ದಳು. ಅವಳಿಗೆ ಒಬ್ಬ ಮಗ ಮತ್ತು ಮಗಳು ಇಬ್ಬರು ಮಕ್ಕಳಿದ್ದರು. ಪರಿಮಳಳಿಗೆ ವತ್ಸಲ ಬಹಳ ಚೆನ್ನಾಗಿ ನೋಡಿಕೊಳ್ಳಿತ್ತಿದ್ದಳು. ಅವಳಿಗೆ ಮನೆ ಕೆಲಸಕ್ಕೆ ಸಂಬಳದ ಜೊತೆಗೆ ಬಟ್ಟೆ ಬರೆ ಮಕ್ಕಳಿಗೆ ಓದಲು ಪುಸ್ತಕಗಳು ಶಾಲೆಯ ಖರ್ಚು ವೆಚ್ಚ ಗಳನ್ನೂ ಸಹ ನೋಡಿಕೊಳ್ಳುತ್ತಿದ್ದಳು. ಆದ್ದರಿಂದ ಇವರ ಮನೆಯ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಳು ಮತ್ತು ಅಚ್ಚು ಕಟ್ಟಾಗಿ ಚೆನ್ನಾಗಿ ಮಾಡುತ್ತಿದ್ದಳು. ಇವರ ಮನೆ ಅಲ್ಲದೇ ಇನ್ನೂ ಮೂರು ಮನೆಯ ಕೆಲಸವನ್ನು ಮಾಡುತ್ತಿದ್ದಳು. ಸಮಯಕ್ಕೆ ಸರಿಯಾಗಿ ಹಾಜರಿ ಆಗುತ್ತಿದ್ದುದರಿಂದ ವತ್ಸಲಳಿಗೆ ಎಂದೂ ಕೆಲಸದವಳಿಂದ ತೊಂದರೆ ಇರಲಿಲ್ಲ. ಎಂದೂ ಚಕ್ಕರ್ ಹಾಕುತ್ತಿರಲಿಲ್ಲ.  ತಾನು ಹೊರಗೂ ಹಾಗು ಒಳಗೂ ಕೆಲಸ ಮಾಡಿಕೊಂಡು ಹೋಗಲು ಕಷ್ಟವೆನಿಸಿರಲಿಲ್ಲ. ಪರಿಮಳ ಹೊಂದಿಕೊಂಡು ಮನೆಯವಳೇ ಎನ್ನುವಷ್ಟು ಎಲ್ಲರೊಂದಿಗೆ ಬೆರೆತು ಹೋಗಿದ್ದಳು. ಇಂದೂ ಸಹ ಬೇಗನೆ ಕೆಲಸಕ್ಕೆ ಬಂದಿದ್ದಳು ಜೊತೆಗೆ ಇಂದು ಮಗಳನ್ನು ಕರೆದುಕೊಂಡು ಬಂದಿದ್ದಳು. ಶಾಲೆಗಳು ಇರಲಿಲ್ಲವಾದ್ದರಿಂದ ಕೊರೊನ ಒಂದು ಕಡೆ ಆದ್ದರಿಂದ ಮಗಳನ್ನು ಬಿಟ್ಟು ಬರದೇ ಜೊತೆಯಲ್ಲಿ ಕರೆದುಕೊಂಡು ಬೇಗ ಬೇಗ ಕೆಲಸ ಮುಗಿಸಿಕೊಂಡು ಹೋಗ ಬೇಕೆಂದು ಎಂದಿಗಿಂತಲೂ ಬೇಗನೆ ಬಂದಿದ್ದಳು.

    ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ವತ್ಸಲ ಒಂದು ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದಳು ಆದ್ದರಿಂದ ತಾನು ಬಳಸುತ್ತಿದ್ದ ಫೋನ್ ಅನ್ನು ಪರಿಮಳಳಿಗೆ ಕೊಟ್ಟಿದ್ದಳು. ಅದರಲ್ಲೂ ಸಹ ಫೋಟೋ ವೀಡಿಯೋ ಎಲ್ಲವನ್ನೂ ಮಾಡಬಹುದಾಗಿತ್ತು. ಇಂದು ಪರಿಮಳ ಮಗಳು ರಶ್ಮಿ ಅದೇ ಫೋನ್ ನೊಂದಿಗೆ ಆಟವಾಡುತ್ತಾ ಕುಳಿತ್ತಿದ್ದಳು.

   ಅದೇ ವೇಳೆಗೆ ಅಲ್ಲಿಗೆ ಬಂದ ದೀಪ ಕೌತುಕದಿಂದ ರಶ್ಮಿ ಯಾವ ಆಟ ಆಡುತ್ತಿದ್ದಾಳೋ ನೋಡೋಣವೆಂದು ರಶ್ಮಿಯ ಪಕ್ಕದಲ್ಲಿ ಕುಳಿತುಕೊಂಡಳು. ಇಬ್ಬರೂ ಸ್ವಲ್ಪ ಹೊತ್ತು ಆಟವಾಡಿದರು. ರಶ್ಮಿಯನ್ನು ಪರಿಮಳ ತನಗೆ ಕೆಲಸದಲ್ಲಿ ಸಹಾಯ ಮಾಡಲು ಕರೆದಳು.

   ಇತ್ತ ದೀಪ ರಶ್ಮಿಯಿಂದ ಫೋನ್ ಪಡೆದು ಆಟ ಮುಂದುವರಿಸಿದಳು. ನಂತರ ಹಾಗೆ ಸುಮ್ಮನೆ ಫೋಟೋ ಗ್ಯಾಲರಿ ಯಲ್ಲಿ ಇರುವ ಫೋಟೋ ಗಳನ್ನು ನೋಡುತ್ತಿದ್ದಳು. ಹೀಗೆ ನೋಡುತ್ತಿದ್ದಾಗಲೇ ಒಂದು ಅಚ್ಚರಿ ಕಾದಿತ್ತು. ಸ್ವಲ್ಪ ಕಾಲ ತನ್ನ ಕಣ್ಣನ್ನು ತಾನೇ ನಂಬಲಾಗದ ಸತ್ಯ ಕಣ್ಣಿಗೆ ಬಿತ್ತು. ನಂತರ ಸ್ವಲ್ಪ ಸಾವದಾನಿಸಿಕೊಂಡು ತಾನು ಕಂಡ ಸತ್ಯ ವನ್ನು ತನ್ನ ಮೊಬೈಲ್ ಗೆ ರವಾನಿಸಿಕೊಂಡು ಸದ್ದಿಲ್ಲದೆ ಸುಮ್ಮನೆ ಯಾರಿಗೂ ಹೇಳದೆ ಆ ಫೋನ್ ಅನ್ನು ರಶ್ಮಿ ಗೆ ಕೊಟ್ಟು ಬಿಟ್ಟಳು .

    ಪರಿಮಳ ರಶ್ಮಿಯ ಜೊತೆಯಲ್ಲಿ ಅಂದಿನ ತಿಂಡಿ ಚಿತ್ರಾನ್ನವನ್ನು ತಿಂದು ಕಾಫಿ ಕುಡಿದು ತನ್ನ ಕೆಲಸವೆಲ್ಲವನ್ನೂ ಮುಗಿಸಿ ಹೊರಟು ಹೋದಳು.

     ವತ್ಸಲಳಿಗೆ ಈಗ ಒಂದು ವಾರದಿಂದ ಮದುವೆ ಓಡಾಟ. ತವರಿನಲ್ಲಿ ಮದುವೆ ಎಂದರೆ ಕೇಳಬೇಕೆ ಸಂತೋಷ ಆನಂದ ಸಂಭ್ರಮ ಸಡಗರ. ತನ್ನ ತಮ್ಮನ ಮಗಳ ಮದುವೆ. ಅವಳೊಬ್ಬಳೆ ಏಕೈಕ ಪುತ್ರಿ ಬೇರೆ ಇನ್ನೂ ಕೇಳುವಂತೆಯೇ ಇಲ್ಲ. ಒಬ್ಬಳೇ ಮಗಳಾದ್ದರಿಂದ‌ ಎಲ್ಲಾ ಶಾಸ್ತ್ರೋಕ್ತವಾಗಿ ಮಾಡಬೇಕೆಂದು ಹಿಂದಿನ ಕಾಲದಲ್ಲಿ ಮಾಡುವ ಹಾಗೆ ಒಂದು ವಾರದ ಮದುವೆ ಆಗಿತ್ತು. 

   ಇಂದು ರಿಸೆಪ್ಷನ್ ಇತ್ತು ವತ್ಸಲ ತುಂಬಾ ತುಂಬ ಚೆನ್ನಾಗಿ ಸಿದ್ಧವಾಗಿದ್ದಳು. ಅವಳಿಗೆ ಇದೊಂದು ಅವಕಾಶ ಸಿಕ್ಕಿತ್ತು ತಾನು ಹೊಸದಾಗಿ ಕೊಂಡಿದ್ದ ವಜ್ರದ ಓಲೆ 

ನೆಕ್ಲೆಸ್ , ಬಳೆ, ಉಂಗುರ ಎಲ್ಲವನ್ನೂ ಹಾಕಿಕೊಂಡು ಹೋಗಿದ್ದಳು. ಅಲ್ಲಿಗೆ ಬಂದಿದ್ದ ಬಂಧು ಮಿತ್ರರೊಡನೆ ಬಂದವರೊಡನೆ ಮಾತಿನಲ್ಲಿ ಮುಳುಗಿಹೋಗಿದ್ದಳು. ಊಟವನ್ನು ಮುಗಿಸಿಕೊಂಡು ಮನೆಗೆ ಬರುವ ವೇಳೆಗೆ ರಾತ್ರಿ ಬಹಳ ತಡವಾಗಿ ಹೋಗಿತ್ತು. ಮೊದಲೇ ಆಯಾಸಗೊಂಡ ವತ್ಸಲ ವಜ್ರದ ನೆಕ್ಲೆಸನ್ನು ಬಿಚ್ಚಿ ಟೇಬಲ್ ಮೇಲೆ ಇಟ್ಟು ಮಲಗಿದಳು.

    ಮರುದಿನ ಬೆಳಿಗ್ಗೆ ಯಥಾ ಪ್ರಕಾರ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇದ್ದುದರಿಂದ ಬೇಗ ಬೇಗ ತಿಂಡಿ ಮಾಡಿ ತಿನ್ನಲು ಸಮಯವಿಲ್ಲದೆ ಡಬ್ಬಿಗೆ ಹಾಕಿಕೊಂಡು ಗಂಡನಿಗೆ ಪರಿಮಳ ಬಂದರೆ ಕೆಲಸ ಮಾಡಿಸಿ ಎಂದು ಹೇಳಿ ಆತುರದಿ‌ ಹೊರಟು ಹೋದಳು.

ನಂತರ ಯಾವಾಗಿನಂತೆ ಪರಿಮಳ ಬಂದು ತನ್ನ ಪಾಡಿಗೆ ತಾನು ಮನೆ ಕೆಲಸ ಮಾಡಿ ಮುಗಿಸಿಕೊಂಡು ಹೋದಳು

    ವತ್ಸಲ ಕೆಲಸದಿಂದ ಬಂದ ಮೇಲೆ ಸ್ವಲ್ಪ ಆಯಾಸಗೊಂಡ ಕಾರಣ ಬಿಸಿ ಬಿಸಿಯಾಗಿ ಕಾಫಿ ಮಾಡಿಕೊಂಡು ಸೋಫಾ ಮೇಲೆ ಕುಳಿತುಕೊಂಡು ನಿಧಾನವಾಗಿ ಆಸ್ವಾದಿಸುತ್ತಾ ಕುಡಿಯುತ್ತಾ ನಿಧಾನವಾಗಿ ಹಾಗೆ ಕಣ್ಣು ಮುಚ್ಚಿ ಕುಳಿತಳು. ಅರ್ಧ ಗಂಟೆಯ ನಂತರ ಎದ್ದು ರಾತ್ರಿಯ ಅಡುಗೆ ಮಾಡಲು ಅಡುಗೆ ಮನೆಯ ಕಡೆಗೆ ನಡೆದಳು. ಅದಾಗಲೆ 9 ಗಂಟೆ ಸಮಯ ವಾಯಿತು . ಎಲ್ಲರೂ ಸೇರಿ ಊಟ ಮಾತುಕತೆ ಮುಗಿಸುವ ವೇಳೆಗೆ ಹತ್ತು ಗಂಟೆ ಆಗೇ ಹೋಯಿತು.

 ರೂಮಿಗೆ ಬಂದ ವತ್ಸಲ ತನ್ನ ಕೈಗೆ ತಗುಲಿದ ಬಳೆಯನ್ನು ಗಮನಿಸಿ ಓ ಇನ್ನೂ ತಾನು ಹಿಂದಿನ ದಿನ ಧರಿಸಿದ ಆಭರಣಗಳನ್ನು ಬೀರುವಿನಲ್ಲಿ ತೆಗೆದಿಟ್ಟಿಲ್ಲ ಎಂದು ಮನದಟ್ಟಾಗಿ ತಕ್ಷಣ ಕೈಯಲ್ಲಿನ ವಜ್ರದ ಬಳೆ,ಉಂಗುರ, ಕಿವಿಯಲ್ಲಿನ ಓಲೆ ಎಲ್ಲವನ್ನೂ ತೆಗೆದು ಭದ್ರ ಪಡಿಸಲು ಸಿದ್ಧಳಾದಳು. ಹೀಗೆ ಎಲ್ಲವನ್ನೂ ತೆಗೆದಿಡುವಾಗ ತಾನು ಹಾಕಿಕೊಂಡ ನೆಕ್ಲೆಸ್ ನೆನಪಿಗೆ ಬಂತು. ರಾತ್ರಿ ಎಲ್ಲಿ ಬಿಚ್ಚಿಟ್ಟೆ ಎಂಬುದನ್ನು ಸ್ವತಃ ಮರೆತುಬಿಟ್ಟಿದ್ದಳು.ಇದು ಸರ್ವೇ ಸಾಮಾನ್ಯ ಅಲ್ಲವೇ. ಬಹಳ ಆಯಾಸಗೊಂಡಾಗ ನಮಗೆ ಅರಿವಿಲ್ಲದೆ ಇಟ್ಟ ವಸ್ತುಗಳನ್ನು ಮರೆತು ಬಿಡುತ್ತೇವೆ.ಈಗ ವತ್ಸಲಳ ಸ್ಥಿತಿಯೂ ಅದೇ ಆಗಿದೆ. ರಾತ್ರಿ ತೆಗೆದಿಟ್ಟ ನೆಕ್ಲೆಸ್ ಈಗ ಕಾಣುತ್ತಿಲ್ಲ . ಈಗ ಮನೆಯಲ್ಲೆಲ್ಲಾ ಹುಡುಕಲು ಆರಂಭಿಸಿದಳು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ ‌ಅದಾಗಲೇ ಆ ನೆಕ್ಲೆಸ್ ಬೇರೆಯವರ ಸ್ವತ್ತಾಗಿತ್ತು.

    ತಕ್ಷಣ ತನ್ನ ರೂಮಿನಿಂದ ಹೊರಬಂದು T.V.ನೋಡುತ್ತಾ ಕುಳಿತ್ತಿದ್ದ ತನ್ನ ಗಂಡನನ್ನು ಕೇಳಿದಳು. ಏನ್ರಿ ನಿನ್ನೆ ರೂಮಲ್ಲಿ ಟೇಬಲ್ ಮೇಲೆ ಬಿಚ್ಚಿಟ್ಟಿದ್ದ ವಜ್ರದ ನೆಕ್ಲೆಸ್ ನೀವೇನಾದರು ನೋಡಿದಿರ? ಬೆಳಿಗ್ಗೆ ನಾನು ಕೆಲಸಕ್ಕೆ ಹೋಗುವ ಅವಸರದಲ್ಲಿ ಗಮನಿಸಲಿಲ್ಲ ಈಗ ತೆಗಿದಿಡಲು ನೋಡಿದರೆ ಅದು ಕಾಣುತ್ತಿಲ್ಲ ನೀವೇನಾದರು ಅದನ್ನು ನೋಡಿದಿರ ಅಥವಾ ನೋಡಿ ಅದನ್ನು ಎತ್ತಿಟ್ಟಿದ್ದೀರ ? ದಯವಿಟ್ಟು ಹೇಳಿ. ಈಗ ನನಗೆ ಕೈ ಕಾಲು ಆಡುತ್ತಿಲ್ಲ ಒಂದೇ ಸಮನೆ ಉದ್ವೇಗ ಹೆಚ್ಚುತ್ತಿದೆ. ಅದಕ್ಕುತ್ತರವಾಗಿ ಗಂಡ ತಾನು ಅದನ್ನು ನೋಡಿಲ್ಲವೆಂದನು. ಆದರೂ ಈ ಉತ್ತರ ವತ್ಸಲಳಿಗೆ ಸಮಂಜಸವಾಗಲಿಲ್ಲ. ರೀ ರೀ ದಯವಿಟ್ಟು ಇಂತಹದರಲ್ಲಿ ತಮಾಷೆ ಮಾಡಬೇಡಿ ಹಾಗೆ ನನ್ನನ್ನು ಅಳಿಸಲು ಬೇಡಿ ಹೇಳಿ ಸರಿಯಾಗಿ ಉತ್ತರ ಹೇಳಿ ಎಂದು ಒಂದೇಸಮನೆ ಪುಸಲಾಯಿಸಿದಳು.

ಖಂಡಿತವಾಗಿಯೂ ತಾನು ಅದನ್ನು ನೋಡಲಿಲ್ಲವೆಂದಾಗ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ಅಷ್ಟೊಂದು ಬೆಲೆಬಾಳುವ ನೆಕ್ಲೆಸ್ ಇದ್ದಕ್ಕಿದ್ದಂತೆ ಕಾಣೆ ಆಗಿದೆ ಎಂದರೆ ಏನರ್ಥ? ಮಂಕಾಗಿ ಮನದಲ್ಲೇ ಆಲೋಚಿಸುತ್ತಾ ಹಾಗೆ ಸೋಫಾ ಮೇಲೆ ಕುಸಿದು ಬಿಟ್ಟಳು.ಈಗ ಏನು ಮಾಡುವುದು ಎಲ್ಲಿ ಹುಡುಕುವುದು? ಈಗಾಗಲೇ ಎಲ್ಲಾ ಕಡೆ ಹುಡುಕಿದ್ದು ಆಯಿತು ಎಂದು ಬೇಸರದಿಂದ ಮಲಗಲು ಹೊರಟಳು.

   ನೆಕ್ಲೆಸ್ ನದೇ ಚಿಂತೆಯಲ್ಲೇ ಮುಳುಗಿದ್ದ ವತ್ಸಲಳಿಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ಹೊರಳಾಡುತ್ತಾ ಅದೇ ಗುಂಗಿನಲ್ಲಿ ಮಲಗಿದ್ದಾಗ ನಿಧಾನವಾಗಿ ನಿದ್ರೆಗೆ ಜಾರಿದಳು. ಇನ್ನು ಮಗಳನ್ನು ಬೆಳಗಾದ ಮೇಲೆ ಕೇಳಬೇಕೆಂದು ಮನದಲ್ಲಿ ಚಿಂತನೆ ಮಾಡಿದಳು. ಯಾವುದು ಏನೇ ಆದರೂ ಹಗಲು ರಾತ್ರಿ ಅದು ತನ್ನ ಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಅದು ದೈವದತ್ತ ನಿಯಮ ಅಲ್ಲವೇ.

     ಬೆಳಗಾಯಿತು ಒಂದು ಕಡೆ ಕೆಲಸದ ಒತ್ತಡ ಮತ್ತೊಂದು ಕಡೆ ರಾತ್ರಿ ಸರಿಯಾಗಿ ನಿದ್ರೆ ಆಗಿರಲಿಲ್ಲ ಮತ್ತದೇ ಗುಂಗಿನಲ್ಲಿ ವತ್ಸಲ ಮಗಳು ಏಳುವುದನ್ನೇ ಕಾಯುತ್ತಿದ್ದಳು . ನಿತ್ಯ ಕರ್ಮಗಳನ್ನು ಮುಗಿಸಿ ಸ್ವಲ್ಪ ಬಿಸಿ ಬಿಸಿ ಕಾಫಿ ಕುಡಿದು ನಂತರ ಆಲೋಚಿಸೋಣ ಎಂದು ಅಡಿಗೆ ಮನೆಯ ಕಡೆ ಹೆಜ್ಜೆ ಹಾಕಿದಳು. ಈದಿನ ಸ್ವಲ್ಪ ಬೇಗನೆ ಎಂದಿನಂತೆ ಪರಿಮಳ ಮನೆ ಕೆಲಸಕ್ಕೆ ಬಂದೇ ಬಿಟ್ಟಳು. ಅವಳಿಗೂ ಸೇರಿಸಿ ಕಾಫಿಮಾಡಿಕೊಂಡು ಬಂದು ಹಾಲಿನಲ್ಲಿ ಕುಳಿತು ಕೊಂಡಳು. 

    ಈಗ ಪರಿಮಳ ಪ್ರಶ್ನಿಸಿದಳು ಏಕಮ್ಮಾ ಕಣ್ಣೆಲ್ಲಾ ಕೆಂಪಗಾಗಿದೆ ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲವೇ? ಇಲ್ಲಾ ಕಣೇ , ನಾನು ರೂಮಿನಲ್ಲಿ ತೆಗೆದಿಟ್ಟಿದ್ದ ವಜ್ರದ ನೆಕ್ಲೆಸ್ ಈಗ ಕಾಣುತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದೆ ಆದರೆ ಅದು ಸಿಗಲಿಲ್ಲ. ನಿನ್ನ ಕಣ್ಣಿಗೆ ಏನಾದರೂ ಬಿತ್ತೇ? ನೀನೇನಾದರು ಅದನ್ನು ನೀಡಿದೆಯಾ ಎಂದು ಕೇಳಿದಳು? ಅದಕ್ಕುತ್ತರವಾಗಿ ಪರಿಮಳ ಐಯ್ ಏನು ಮಾತು ಅಂತ ಆಡುತ್ತೀರಿ? ಬಿಡುತು ಅನ್ನೀ ನನ್ನ ಕೈಗೆ ಸಿಕ್ಕಿದ್ದರೆ ನಾನು ನಿಮಗೆ ಕೊಡುತ್ತಿರಲಿಲ್ಲವೇ? ಅವೊತ್ತು ಅಣ್ಣಾವ್ರು ಪ್ಯಾಂಟ್ ಜೇಬಿನಲ್ಲಿ ದುಡ್ಡಿಟ್ಟು ಮರೆತು ಒಗೆಯುವದಕ್ಜೆ ಹಾಕಿದ್ದಾಗ ನಾನೇ ನಿಮಗೆ ತಂದು ಕೊಡಲಿಲ್ಲವೇ , ನಾ ನಿಮ್ ನೆಕ್ಲೆಸ್ ಕಂಡಿಲ್ಲತಾಯಿ, ಅಲ್ಲೇ ಎಲ್ಲದರೂ ಸಿಗುತ್ತದೆ ಮತ್ತೊಮ್ಮೆ ನೋಡಿ ಎಂದು ಹೇಳಿ ತನ್ನ ಕೆಲಸಕ್ಕೆ ಹೋದಳು.

    ಈಗ ವತ್ಸಲಳಿಗೆ ಪರಿಮಳಳ ಮೇಲೆ ಇದ್ದ ಒಂದು ಸಣ್ಣ ಅನುಮಾನವು ಅವಳಲ್ಲವೆಂದಾಯಿತು. ಇದ್ದವರು ಮೂವರು ಕದ್ದವರು ಯಾರು? ಎಂಬಂತಾಯಿತು ಪರಿಸ್ಥಿತಿ. ಅದೇ ಗುಂಗಿನಲ್ಲಿ ಆಲೋಚಿಸುತ್ತಾ ಹಾಗೆ ಸೋಫಾ ಮೇಲೆ ಒರಗಿದಳು. 

    ಸ್ವಲ್ಪ ಹೊತ್ತಿನ ನಂತರ ಮಗಳು ದೀಪ ತನ್ನ ನಿತ್ಯ ಕರ್ಮ ಗಳನ್ನು ಮುಗಿಸಿ ಕೊಂಡು ಹೊರ ಬಂದಳು‌. ಅಲ್ಲೇ ಕುಳಿತಿದ್ದ ಅಮ್ಮನಿಗೆ ಶುಭೋದಯ ಹೇಳಿ ಕಾಫಿ ಕೇಳಿದಳು. ಅವಳ ಮುಖದಲ್ಲಿ ಎಂದಿನಂತೆ ನಗುವಿಲ್ಲದೆ ದುಗುಡದಿಂದ ಕೂಡಿರುವುದನ್ನು ನೋಡಿ ಕಾರಣ ಕೇಳಿದಳು. ಅದಕ್ಕುತ್ತರವಾಗಿ ವತ್ಸಲ ಮಗಳೇ ನೀನೇನಾದರು ನನ್ನ ವಜ್ರದ ನೆಕ್ಲೆಸ್ ರೋಮಿನಲ್ಲಿ ದ್ದದ್ದು ನೋಡಿದೆಯಾ ಎಂದು ಪ್ರಶ್ನಿಸಿದಳು? ಇಲ್ಲಮ್ಮಾ ನಾನು ನೋಡಲಿಲ್ಲ, ಏಕೆ ಈಗ ಕಾಣುತ್ತಿಲ್ಲವೇ? ಕಳುವಾಗಿದೆಯಾ? ಯಾರು ತೆಗೆದುಕೊಂಡಿರಬಹುದು? ಯಾವಾಗಿನಿಂದ ಇಲ್ಲ? ಎಂದೆಲ್ಲಾ ಒಂದೇ ಸಮನೆ ಪ್ರಶ್ನೆ ಗಳ ಸುರಿಮಳೆ ಗೆರೆದಳು.

   ಈಗ ವತ್ಸಲ ಮಗಳಿಗೆ ತಾನು ಮದುವೆಯಿಂದ ದಣಿದು ಬಂದು ಮಲಗುವಾಗ ನೆಕ್ಲೆಸ್ ನ್ನು ಅಲ್ಲೇ ಟೇಬಲ್ ಮೇಲಿಟ್ಟಿದ್ದ ನೆನಪನ್ನು, ಮರುದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಅವಸರದಲ್ಲಿ ಅದನ್ನು ಬೀರುವಿನಲ್ಲಿ ಎತ್ಯಿಡುವುದನ್ನು ಮರೆತದ್ದು, ರಾತ್ರಿ ಎತ್ತಿಡಲು ನೋಡಿದಾಗ ಅದು ಕಾಣೆಯಾಗಿದ್ದು ಎಲ್ಲವನ್ನೂ ವಿವರಿಸಿದಳು.

  ಈಗ ತಾಯಿ ಮಗಳು ಇಬ್ಬರೂ ಕೂಡಿ ಮನೆಯೆಲ್ಲಾ ಶೋಧನೆ ಮಾಡಲು ಆರಂಭಿಸಿದರು. ಆದರೆ ಅದು ಕಣ್ಣಿಗೆ ಬೀಳಲಿಲ್ಲ. ಈಗ ಏನು ಮಾಡಬೇಕೆಂದು ತೋಚದೆ ಅತ್ತ ಕೆಲಸಕ್ಕೆ ಬರಲಾಗುವುದಿಲ್ಲ ಎಂದು ಒಂದು ಇಮೇಲ್ ಕಳುಹಿಸಿ ಹಾಗೆ ಕುಳಿತಳು.

   ‌ ವತ್ಸಲಳಿಗೆ ನೆಕ್ಲೆಸ್ ನದೇ ಚಿಂತೆ . ಅದಕ್ಕೆ ಕಾರಣವೂ ಇತ್ತು. ಅದು ತನ್ನ ಗಂಡ ಅತ್ಯಂತ ಪ್ರೀತಿಯಿಂದ ತಮ್ಮ 20 ನೇ ವರ್ಷದ ಮದುವೆಯಾದ ದಿನ ಉಡುಗೊರೆ ಕೊಟ್ಟಿದ್ದು. ಅಷ್ಟೊಂದು ಬೆಲೆ ಬಾಳುವ ನೆಕ್ಲೆಸ್ ಒಂದು ಕಡೆ ಆದರೆ ಮತ್ತೊಂದು ಕಡೆ ಉಡುಗೊರೆ ಗೆ ಆ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ತಮ್ಮ ಸವಿನೆನಪಿನ ದಾಂಪತ್ಯ ಜೀವನದ ಕುರುಹಾಗಿತ್ತು.

   ತನ್ನ ಆತ್ಮೀಯ ಗೆಳತಿ ಮೀರಳಿಗೆ ಫೋನ್ ಮಾಡಿದಳು. ಅವಳು ಬಾಲ್ಯದ ಗೆಳತಿ ಜೊತೆಗೆ ಯಾವುದೇ ವಿಷಯಕ್ಕೂ ಸ್ವಲ್ಪ ಮಟ್ಟಿಗೆ ಉಪಯುಕ್ತ ಸಲಹೆಗಳನ್ನು ಕೊಡುತ್ತಾಳೆ ಎಂದು. ಅದರಂತೆ ಮೀರಾಳು ಸಹ ವಿಷಯ ವನ್ನು ಕೇಳಿ ಬೇಸರಗೊಂಡು ತನಗೆ ಪರಿಚಿತರಿರುವ ಒಬ್ಬ ಅಣ್ಣನ ಫೋನ್ ನಂಬರ್ ಕೊಟ್ಟಳು. ಅವರು ಅದರ ಆಗು ಹೋಗುಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಾರೆ ಎಂದು. ಅವರ ದೈವೋಪಾಸನೆ ಮಾಡಿರುವ ದೈವಭಕ್ತರು, ಹಲವು ವಿದ್ಯೆಗಳನ್ನು ಕಲಿತಿದ್ದರಿಂದ ಹಲವಾರು ಸಮಸ್ಯೆ ಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಅವರು ನುಡಿದಂತೆ ನಡೆಯುತ್ತಿತ್ತು ಆದ್ದರಿಂದ ಜನರಿಗೆ ಅವರ ಮೇಲೆ ನಂಬಿಕೆ ಹೆಚ್ಚು. ಈ ವಿಷಯ ತಿಳಿದ ಮೇಲೆ ವತ್ಸಲ ತಡಮಾಡದೆ ಫೋನ್ ಮಾಡಿದಳು ಆದರೆ ಅವರ ಫೋನ್ ಸಿಗಲಿಲ್ಲ ಬೇರೊಂದು ಕರೆಯಲ್ಲಿ ನಿರತರಾಗಿದ್ದಾರೆ ಎಂಬ ದ್ವನಿ ಆ ಕಡೆಯಿಂದ ಬಂತು. ಸರಿ ಸ್ವಲ್ಪ ಹೊತ್ತು ಬಿಟ್ಟು ಎರಡು ಮೂರು ಬಾರಿ ಮಾಡತೊಡಗಿದಾಗ ನಾಲ್ಕನೇ ಬಾರಿ ಗೆ ಫೋನ್ ಕಾಲ್ ಸಿಕ್ಕಿತು.

 ‌‌‌‌‌  ಮೊದಲು ವತ್ಸಲ ತನ್ನ ಪರಿಚಯವನ್ನು ಹೇಳಿ ಹೀಗೆ ಮೀರ ತಮ್ಮ ಫೋನ್ ನಂಬರ್ ಕೊಟ್ಟಿದ್ದು ಹೇಳಿ ಈಗ ತನ್ನ ಸಮಸ್ಯೆ ನೆಕ್ಲೆಸ್ ಕಾಣೆಯಾಗಿರುವ ವಿಚಾರ ಹೇಳಿದಳು. ಸ್ವಲ್ಪ ಹೊತ್ತು ಧ್ಯಾನ ಮಗ್ನರಾಗಿ ಅಣ್ಣ ಆ ಕಡೆಯಿಂದ ಉತ್ತರ ನೀಡಿದರು. ಮಗು ಅದು‌‌ ಈಗಾಗಲೆ ನಿಮ್ಮ ಮನೆಯ ಹೊಸ್ತಿಲು ದಾಟಿದೆ ಆದರೆ ನಿಮ ಪೂಜಾ ಫಲದ ಭಾಗ್ಯ ಮುಂದೆ ಸಿಗಬಹುದು ಎಂದು ಹೇಳಿ ಫೋನ್ ಇಟ್ಟು ಬಿಟ್ಟರು ಮತ್ತೇನನ್ನು ಮಾತನಾಡಲಿಲ್ಲ.

    ಅಣ್ಣ ಹೇಳಿದ್ದ ಮಾತನ್ನೇ ನೆನೆಯುತ್ತ ಮನದಲ್ಲೇ ಮಂಥನ ಮಾಡುತ್ತಾ ಕುಳಿತಿದ್ದಳು ವತ್ಸಲ. ಒಂದು ಕಡೆ ನೆಕ್ಲೆಸ್ ಮನೆ ಹೊಸ್ತಿಲು ದಾಟಿದೆ ಎಂದಾದರೆ ಮತ್ತೊಂದು ಕಡೆ ಸಿಗಬಹುದು ಅದು ನಿಮ್ಮ ಅದೃಷ್ಟ ಎಂದು ಹೇಳಿದ್ದು.    ಇನ್ನು ಈಗ ಮನೆಯೆಲ್ಲಾ ಹುಡುಕುವುದರಿಂದ ಏನೂ ಲಾಭವಿಲ್ಲವೆಂದರಿತು ಮುಂದೇನುಮಾಡುವುದು ಎಂದು ಚಿಂತನೆಯಲ್ಲಿ ಮುಳುಗಿದಳು.

    ತಕ್ಷಣ ಅರಸಿಕೆರೆಲ್ಲಿರುವ ತನ್ನ ತಂಗಿ‌ ಪಂಕಜಳ ನೆನಪಾಯಿತು. ಅವಳಿಗೆ ಫೋನ್ ಮಾಡಿದಳು ಅತ್ತ ದಿಢೀರ್ ಅಕ್ಕನ ಫೋನ್ ಕಾಲ್ ನೋಡಿ ಒಂದು ಕಡೆ ಸಂತಸ ಮತ್ತೊಂದು ಕಡೆ ಏಕೋ, ಏನೋ, ಯಾವ ವಿಷಯವಿರಬಹುದು ಎನ್ನುವ ತವಕ ಪಂಕಜಳಿಗೆ.

ಕುಶಲೋಪರಿ ವಿಚಾರವಾದ ಮೇಲೆ ತಂಗಿ ಅಕ್ಕನ ದ್ವನಿ ಇಂದು ಸ್ವಲ್ಪ ದುಗುಡ ವಾಗಿದೆ ಎಂದು ಏಕೆಂದು ಕೇಳಿದಳು? ಆಗ ಅಕ್ಕ ಇಲ್ಲಿ ನಡೆದ ವಿಷಯವನ್ನೆಲ್ಲಾ ಹೇಳಿ ಏನು ಮಾಡಬೇಕೆಂದು ತೋಚುತ್ತಿಲ್ಲ ಮಂಕಾಗಿದ್ದೇನೆ ಎಂದಳು.

  ಅದಕ್ಕುತ್ತರವಾಗಿ ಪಂಕಜ ಅತ್ತ ಕಡೆಯಿಂದ ನಮ್ಮ ಊರಿನ ಬಳಿ ಮಾಡಾಳು ಎಂಬ ಗ್ರಾಮವಿದೆ ಅಲ್ಲಿಯ ದೇವಿ ಗೌರಮ್ಮನಿಗೆ ಕರ್ಪೂರದ ಹರಕೆ ಮಾಡಿಕೋ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ. ಆ ದೇವರಿಗೆ ಕರ್ಪುರದ ಹರಕೆಯೇ ಮುಖ್ಯ . ಇಲ್ಲಿ ಬಹಳ ಜನರಿಗೆ ತಮ್ಮ ಕೋರಿಕೆಗಳು ಈಡೇರಿದೆ ಎಂದು ಹೇಳಿದಳು. ನಂಬಿಕೆ ಶ್ರದ್ಧೆ ಬಹಳ ಮುಖ್ಯ ಎಂದು ಹೇಳಿ ಫೋನ್ ಇಟ್ಟಳು.

    ಇತ್ತ ವತ್ಸಲ ತಂಗಿಯ ಮಾತಿನಿಂದ ಸ್ವಲ್ಪ ತ್ರಾಣ ಸಿಕ್ಕಂತಾಗಿ ಬೇಗನೆ ಸ್ನಾನ ಮಾಡಿಕೊಂಡು ಬಂದು ದೇವರಿಗೆ ಶರಣಾಗಿ ಕರ್ಪೂರ ಕ್ಜೆ ಹಣವನ್ನು ಯಥಾಶಕ್ತಿ ಒಂದು ಕರವಸ್ರದಲ್ಲಿಟ್ಟು ಗಂಟು ಕಟ್ಟಿದಳು. ಈಗ ಒಂದು ರೀತಿಯ ಸಮಾಧಾನ ಸಿಕ್ಕಂತಾಯಿತು.

   ಈ ದಿನ ಸುದಿನವಾಗಿತ್ತು ವತ್ಸಲಳಿಗೆ ಕಾರಣ ನೆಕ್ಲೆಸ್ ಕಳೆದುಕೊಂಡು ಸುಮಾರು ಆರು ವರುಷಗಳೇ ಆಗಿ ಹೋಗಿದ್ದವು. ಸಮಯವೇ ಹಾಗೆ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಿರುತ್ತದೆ. ದೀಪ ಓಡೋಡಿ ಬಂದು ಅಮ್ಮಾ ಅಮ್ಮ ಪರಿಮಳ ಹೋದಳ ಎಂದು ಕೇಳಿದಳು ಹೂ ಹೋದಳು ಏಕೆ ಎಂದು ಕೇಳಿದಳು?

   ಈಗ ದೀಪ ಅಮ್ಮಾ ನಿನಗೊಂದು ಸಿಹಿ ಸುದ್ಧಿ ಇದೆ ಎಂದಳು. ಈಗ ವತ್ಸಲಳಿಗೆ ಆಶ್ಚರ್ಯ, ಏನಿರಬಹುದು ನನಗಂತಹ ಸಿಹಿ ಸುದ್ದಿ ಎಂದು ಮನದಲ್ಲೇ ಲೆಕ್ಕ ಹಾಕತೊಡಗಿದಳು. ಬೇಗ ಹೇಳು ಏನು ಅಂತಹ ಸುದ್ದಿ ಎಂದಾಗ ಮಗಳು ದೀಪ ತನ್ನ ಮೊಬೈಲ್ ನಲ್ಲಿ ಒಂದು ಫೋಟೋ ತೋರಿಸಿದಳು. ಈಗ ಆ ಫೋಟೋ ನೋಡಿ ಹಾಗೆ ಸೋಫಾ ಮೇಲೆ ಕುಸಿದಳು. ಎರಡು ನಿಮಿಷ ಸಾವರಿಸಿಕೊಂಡು ಮತ್ತೊಮ್ಮೆ ನೋಡಿದಾಗ ಪರಿಮಳ ತನ್ನ ಮಗಳಿಗೆ ಹುಟ್ಟು ಹಬ್ಬದ ದಿನ ಆ ವಜ್ರದ ನೆಕ್ಲೆಸ್ ಹಾಕಿದ್ದಳು. ಇದರಿಂದ ಈಗ ಸಂಪೂರ್ಣ ಖಾತರಿ ಆಯಿತು ಪರಿಮಳ ನೆ ಆ ನೆಕ್ಲೆಸ್ ಕದ್ದಿರುವುದು ಎಂದು.

   ಮರುದಿವಸ ಬೆಳಗ್ಗೆ ಪರಿಮಳ ಬರುವುದನ್ನೇ ಕಾಯುತ್ತಾ ವತ್ಸಲ ಕುಳಿತ್ತಿದ್ದಳು. ಇದ್ಯಾವುದರ ಬಗ್ಗೆ ತಿಳಿಯದ ಪರಿಮಳ ಖುಷಿ ಯಾಗಿ ಯಥಾಪ್ರಕಾರ ಮನೆ ಕೆಲಸಕ್ಕೆ ಹಾಜರಾದಳು. ಪರಿಮಳಳನ್ನು ಈಗ ವತ್ಸಲ ಗಂಡ ಪ್ರಕಾಶನೊಡನೆ ಮಗಳ ಎದುರಿಗೆ ಕೇಳಿದಳು ಎಲ್ಲಿ ನಮ್ಮ ವಜ್ರದ ನೆಕ್ಲೆಸ್ ? ಅದಕುತ್ತರವಾಗಿ ಪರಿಮಳ ಯಾವುದು ನನಗೊಂದೂ ಗೊತ್ತಿಲ್ಲ ಎಂದು ಸಹಜವಾಗಿ ಹೇಳಿದಳು.

      ಆಗ ವತ್ಸಲ ಈಗ ನೀನು ಸುಳ್ಳು ಹೇಳುವ ಹಾಗಿಲ್ಲ ನಮ್ಮ ಬಳಿ ನಿನ್ನ ಬಳಿ ನೆಕ್ಲೆಸ್ ಇರುವುದಕ್ಕೆ ಸಾಕ್ಷಿ ಇದೆ ತಪ್ಪು ಒಪ್ಪಿಕೊಂಡು ಕದ್ದಿರುವ ವಜ್ರದ ನೆಕ್ಲೆಸ್ ತಂದುಕೊಡು ಎಂದಾಗ ಪರಿಮಳಳಿಗೆ ಬೆವರು ಕಿತ್ತುಕೊಳ್ಳ ತೊಡಗಿತು. ತನ್ನ ಬಳಿ ಇರುವುದನ್ನು ಫೋಟೋ ಸಮೇತ ತೋರಿಸಿ ಕೇಳುತ್ತಿರುವಾಗ ಈಗ ಅದಲ್ಲಾ ಹಾಗೆ ಹೀಗೆ ಎಂದು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲೇ ಕೋಪಗೊಂಡಿದ್ದಾರೆ ಈಗ ಏನಾದರೂ ಬಾಲ ಬಿಚ್ಚಿದರೆ ಪೋಲಿಸ್ ಠಾಣೆ ಎಂದು ಅಲೆಯ ಬೇಕಾಗುತ್ತದೆ ಎಂದು ಆಲೋಚಿಸಿ ಪರಿಮಳ ತನ್ನ ತಪ್ಪನ್ನು ಮನ್ನಿಸುವಂತೆ ಕಾಲಿಗೆ ಬಿದ್ದು ಕೇಳಿಕೊಂಡಳು. 

   ಪ್ರಕಾಶನೊಡನೆ ಪರಿಮಳ ತನ್ನ ಮನೆಗೆ ಹೋಗಿ ನೆಕ್ಲೆಸ್ ವಾಪಸ್ ತಂದು ಕೊಟ್ಟಳು. ಇದಕ್ಕೆ ಅಲ್ಲವೇ ಹಿರಿಯರು ಹೇಳುವುದು " ಸತ್ಯಕ್ಕೆ ಸಾವಿಲ್ಲ ಸತ್ಯ ಎಂದಿದ್ದರೂ ಬೂದಿ ಮುಚ್ಚಿದ ಕೆಂಡ ಇದ್ದ ಹಾಗೆ " ಯಾವತ್ತಿದ್ದರೂ ಹೊರ ಬರಲೇ ಬೇಕು.

 ಪರಿಮಳ ತನ್ನ ದುರಾಸೆಗೆ ಬಲಿಯಾಗಿ ಒಂದು ಒಳ್ಳೆಯ ಮನೆಯಿಂದ ಹೊರಗೆ ಬಂದಳು ಇದ್ದ ಕೆಲಸವೂ ಹೋಯಿತು ನಂಬಿಕೆಯನ್ನು ಕಳೆದುಕೊಂಡಳು." ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು.

  ಇತ್ತ ವತ್ಸಲ ದೇವರಿಗೆ ತುಪ್ಪದ ದೀಪ ಹಚ್ಚಿ ಧನ್ಯವಾದ ಹೇಳಿ ನಮಿಸಿದಳು ಹಾಗೆ ಸ್ವಲ್ಪ ದಿನಗಳಲ್ಲೇ ಮಾಡಳು ಗೌರಮ್ಮನ ಕರ್ಪೂರದ ಹರಕೆ ತೀರಿಸಿದಳು ಕೊನೆಗೂ ತನ್ನ ಗಟ್ಟಿ ಸ್ವತ್ತು ಕಳೆದುಕೊಂಡಿದ್ದ ವಜ್ರದ ನೆಕ್ಲೆಸ್ ತನಗೇ ಸಿಕ್ಕಿದ ಆನಂದ ವರ್ಣಿಸಲು ಪದಗಳಿಲ್ಲ‌ದೆ ಸಂತೋಷದಿಂದ ಕುಣಿದಾಡಿದಳು. ಅಂತೂ ಇಂತೂ ಮೊಬೈಲ್ ನಲ್ಲಿ ಅಡಗಿತ್ತು ಸತ್ಯ.


ಇದು ಒಂದು ನೈಜ ಘಟನೆಯ ಸ್ಪೂರ್ತಿ. ಇದರಲ್ಲಿ ವಿಶೇಷ ಎಂದರೆ ಅದೃಷ್ಟ ಇದ್ದರೆ, ನಮ್ಮದೇ ಗಟ್ಟಿ ಸ್ವತ್ತಾಗಿದ್ದರೆ ಅದು ಪುನಃ ನಮಗೇ ಸಿಗುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಪರಿಮಳ ಅತಿ ಆಸೆಗೆ ಬಲಿಯಾಗಿ ದುರಾಸೆಯ ದೆಸೆಯಿಂದ ಡೈಮೆಂಡ್ ನೆಕ್ಲೆಸ್ ಕದ್ದು ಸಿಕ್ಕಿಬಿದ್ದು ಇದ್ದ ಕೆಲಸವನ್ನು ಕಳೆದುಕೊಂಡಳು. ಆದ್ದರಿಂದ ಜನರಿಗೆ ಒಂದು ಸತ್ಯ ತಿಳಿಯುವಂತಾಯಿತು ಯಾರನ್ನೂ ಅತಿಯಾಗಿ ನಂಬಬಾರದು. ಬೆಳ್ಳಗಿರುವುದೆಲ್ಲ ಹಾಲಲ್ಲ ಇದು ಸರ್ವ ಕಾಲಿಕ ಸತ್ಯ.


Rate this content
Log in

Similar kannada story from Crime