ಚಹಾ ಲೋಟ
ಚಹಾ ಲೋಟ
ನಮ್ಮ ನಿತ್ಯ ಜೀವನದಲ್ಲಿ ಅದೆಷ್ಟೋ ಹಾಸ್ಯ ಸನ್ನಿವೇಶಗಳು ನಡೆಯುತ್ತವೆ ಅಲ್ಲವೇ...? ಕೆಲವು ನಮಗೆ ತಿಳಿದಿದ್ದರೂ, ತಿಳಿಯದಿದ್ದರೂ ನಡೆಯುತ್ತವೆ. ಕೆಲವು ಅಚಾನಕ್ಕಾಗಿ ನಡೆದು ಬಿಡುತ್ತವೆ. ಹೀಗೆ ನಡೆವ ಹಾಸ್ಯಗಳು ನಾವು ಮತ್ತೆ ಮತ್ತೆ ನೆನಪಿಸಿಕೊಂಡು ನಗುವಂತೆ ಮಾಡುತ್ತವೆ, ಅಯ್ಯೋ! ನಾನು ಹಾಗೆ ಹೇಳಿದಿನಾ? ಹೀಗೆ ಮಾಡಿದೀನಾ? ಎಂದು ಪ್ರಶ್ನೆ ಮಾಡಿಕೊಂಡು, ಸ್ನೇಹಿತರೊಟ್ಟಿಗೆ ಹೇಳಿಕೊಂಡು ನಗೆಗಡಲಿನಲ್ಲಿ ತೇಲುವಂತೆ ಮಾಡುತ್ತವೆ.
ಅಂದು ನಾನು ಬೆಂಗಳೂರಿನಿಂದ ಕನ್ನಡ ಸಹಾಭಿವೃದ್ಧಿ ಸಭೆ ಮುಗಿಸಿ ಯಾದಗಿರಿಗೆ ಬಂದೆ. ನನ್ನ ಪ್ರಯಾಣದ ಖರ್ಚು ವೆಚ್ಚಗಳನ್ನು ಅಲ್ಲಿ ಒಪ್ಪಿಸಿ ಸುರಪುರಕ್ಕೆ ಮರಳಬೇಕಿತ್ತು. ತುಂಬಾ ಸಮಯದಿಂದ ಒಂದೇ ಕೆಲಸ ಮಾಡಿ ಮಾಡಿ ನನಗೂ ಬೇಸರ ಬಂದಿತ್ತು. ಅಲ್ಲದೆ ರಾತ್ರಿ ಪ್ರಯಾಣದ ಆಯಾಸ, ನನ್ನನ್ನು ಸೋಮಾರಿಯನ್ನಾಗಿ ಮಾಡುತ್ತಿತ್ತು. ಆ ಕೆಲಸವನ್ನೂ ಮಾಡುತ್ತಾ ನಾನು ನನ್ನ ಬಳಿ ಬರುವವರನ್ನೆಲ್ಲ ಕರೆದು ‘ಬಯಲು’ ವಿಗೆ ನಿಮ್ಮ ಬರಹ ಕೊಡಿ ಸರ್ ಎಂದು ಅವರುಗಳನ್ನ ಪೀಡಿಸುತಿದ್ದೆ. ಈ 'ಬಯಲು' ಎನ್ನೋದು ಅಜೀಂ ಪ್ರೇಂಜೀ ಫೌಡೇಶನ್ ನ ಸದಸ್ಯರಿಗಾಗಿ ಇರುವ ಅಂತರ್ಜಾಲ ದ ಮಾಸ ಪತ್ರಿಕೆ. ನಾನು ಅಲ್ಲಿ ಆ ಪತ್ರಿಕೆಯ ಗುಲಬರ್ಗಾ ಜಿಲ್ಲೆಯಿಂದ ಸಂಪಾದಕರಾಗಿ ಕಾರ್ಯ ನಿರ್ವಹಿಸಿತ್ತಿದ್ದೆ. ಜೊತೆ ಜೊತೆಗೆ ಯಾದಗಿರಿಯ ನನ್ನ ಆತ್ಮೀಯರ ಜೊತೆಯೂ ಚರ್ಚಿಸಿ ಅವರೂ ಬರೆಯುವಂತೆ ಕಾಡಿಸುವ ಕೆಲಸವನ್ನೂ ಮಾಡುತ್ತಿದ್ದೆ. ಈ ಕಾಡುವಿಕೆಯ ಜೊತೆಗೆ ನನ್ನ ಕೆಲಸವೂ ಸಾಗಿತ್ತು. ನಾನು ಆ ಕೆಲಸದಲ್ಲಿ ಅದು ಯಾವ ಮಾಯದಲ್ಲಿ ಮುಳುಗಿ ಕುಳಿತಿದ್ದೆನೋ ನಾನರಿಯೆ. ನನ್ನ ಪಕ್ಕದ ಟೇಬಲ್ಲಿನಲ್ಲಿ ಕಲಾಕಾರನೊಬ್ಬ ಕುಳಿತಿದ್ದ. ನನ್ನ ಕೆಲಸದ ಮದ್ಯದಲ್ಲಿ ಆತನ ಕಾಲೆಳೆಯುತ್ತಾ, ರೇಗಿಸುತ್ತಾ ಈ ಬಾರಿ ಬಯಲು ವಿಗೆ ಇವತ್ತೇ ಚಿತ್ರ ಬಿಡಿಸಿ ಇಟ್ಟಿರಿ ಇಲ್ಲದಿದ್ದರೆ ಬಯಲು ಮುಗಿದರೂ... ನಿಮ್ಮ ಚಿತ್ರ ಮುಗಿಯುವುದಿಲ್ಲ ಎಂದೆಲ್ಲಾ ತಮಾಷೆ ಮಾಡುತ್ತಿದ್ದೆ. ಯಾವಾಗಲೂ ಆತನೇ ಬಯಲು ಪತ್ರಿಕೆಯ ಪ್ರತಿಯೊಂದು ಲೇಖನ, ಕಥೆ, ಕವಿತೆಗಳಿಗೆ ಚಿತ್ರ ಬಿಡಿಸಿ ಕೊಡುತ್ತಿದ್ದ.
ನನ್ನ ಖರ್ಚು ವೆಚ್ಚಗಳನ್ನು ಅಪ್ಲೈ ಮಾಡಿ ಅದನ್ನು ಪ್ರಿಂಟ್ ತೆಗೆದುಕೊಳ್ಳಬೇಕಿತ್ತು, ಆದರೆ ನನ್ನ ಲ್ಯಾಪ್‍ಟಾಪ್ ನಿಂದ ಪ್ರಿಂಟ್ ತೆಗೆಯಲು ಬರುತ್ತಿರಲಿಲ್ಲ. ಪಕ್ಕದ ಕಲಾಕಾರನಿಗೆ ನನ್ನ ಸಮಸ್ಯೆ ತಿಳಿಸಿದೆ. ಅದರ ವಿಷಯವನ್ನು ಮಾತನಾಡುವ ಸಲುವಾಗಿ ಆತನ ಟೇಬಲ್ಲಿನ ಬಳಿ ಹೋದೆ. ನಾನು ಕುಡಿಯುತ್ತಿದ್ದ ಚಹಾ ಹಾಗೆಯೇ ನನ್ನ ಟೇಬಲ್ಲಿನ ಮೇಲೆ ಇಟ್ಟು ಆತನ ಟೇಬಲ್ಲಿನ ಹತ್ತಿರ ಹೋದೆ. ಅಗ ತಾನೆ, ಆತ ಚಹಾ ಕುಡಿದು ಮುಗಿಸಿದ್ದ. ನಾನು ಆತನ ಬಳಿ ನನಗೆ ಬೇಕಾದ ಮಾಹಿತಿಗಳನ್ನು ತೆಗೆದುಕೊಂಡು ಆತನ ಬಳಿಯಿರುವ ಚಹಾದ ಕಪ್ಪನ್ನು ಕೈ ಗೆ ತೆಗೆದು ಕೊಂಡು ಕುಡಿಯ ತೊಡಗಿದೆ. ಅರೆ! ಇದೇನಿದು!!?? ಚಹಾ ಬರುತ್ತಿಲ್ಲವಲ್ಲ ಎಂದು ನೋಡಿದರೆ ಅದು ಕಲಾಕಾರ ನಾನು ಅರ್ದ ಕುಡಿದು ಬಿಟ್ಟ ಚಹಾದ ಕಪ್ಪಾಗಿರಲಿಲ್ಲ ಬದಲಿಗೆ ಕಲಾಕಾರ ಕುಡಿದು ಇಟ್ಟ ಒಣಗಿ ಹೋದ ಚಹಾ ಕಪ್ಪಾಗಿತ್ತು. ಸದ್ಯ ಯಾರಿಗೂ ಗೊತ್ತಾಗಲಿಲ್ಲ ಎಂದು ನೋಡಿದರೆ ಎಲ್ಲರೂ ನನ್ನನ್ನೇ ನೋಡಿ ನಗುತ್ತಿದ್ದರು. ಮುಜುಗರವಾದರೂ ನಾನೂ ನಕ್ಕೆ ಏಕೆಂದರೆ ನನಗೆ ನೋವಾಗಿರಲಿಲ್ಲ. ಅಂದು ಅಲ್ಲಿ ಇಡಿಯ ವಾತವರಣವೇ ನಗೆಗಡಲಲ್ಲಿ ತೇಲುತ್ತಿತ್ತು. ನಾವೆಲ್ಲರೂ ನಗುತ್ತಿದ್ದೆವು. ಇಂದಿಗೂ ಆಗೊಮ್ಮೆ ಈಗೊಮ್ಮೆ ಕಲಾಕಾರ ಕರೆ ಮಾಡಿ ಮೇಡಂ ಜೆಸ್ಟ್ ಚಹಾ ಕುಡಿದೀನ್ರಿ., ಕಪ್ ತೊಳಿಲಿಲ್ಲ ಎಂದು ನಗುತ್ತಾನೆ.
