ಇಬ್ಬರು ಮಿತ್ರರು
ಇಬ್ಬರು ಮಿತ್ರರು


ಒಮ್ಮೆ ಒಂದು ಹಡಗು ಬಿರುಗಾಳಿ ಸಹಿತ ಭಾರೀ ಮಳೆಯ ಕಾರಣ ಮುಳುಗುವಂತಾಯ್ತು. ಬಹಳ ಜನ ನೀರಲ್ಲಿ ಧುಮುಕಿ ಹೇಗೋ ಈಜಿಕೊಂಡು ಪ್ರಾಣ ಉಳಿಸಿ ಕೊಳ್ಳಲು ಪ್ರಯತ್ನ ಮಾಡಿದರು. ಅದರಲ್ಲಿ ಹಡಗಿನಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮಾತ್ರ ಕಷ್ಟ ಪಟ್ಟು ದಡ ಸೇರಿದರು. ಅವರಿಬ್ಬರೂ ಆತ್ಮೀಯ ಸ್ನೇಹಿತರು. ಭೂಮಿಗೆ ಬಂದು ಕಂಡದ್ದು ಅದು ಜನವಸತಿ ಇಲ್ಲದ, ಮಳೆ ಗಾಳಿಗೂ ಒಂದು ನೆಲೆ ಇಲ್ಲದ ತೀರ. ಮಳೆಯಲ್ಲಿ ನೆನೆಯುತ್ತ ಬೇರೆ ದಾರಿ ಕಾಣದೆ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ಅದೇನೆಂದರೆ ಇಬ್ಬರೂ ಒಂದೊಂದು ದಿಕ್ಕಿಗೆ ಹೋಗಿ ದೇವರಲ್ಲಿ ಸಹಾಯ ಬೇಡುವುದು. ಹಾಗೆ ಯಾರಿಗೆ ದೇವರು ಮೊದಲು ಸಹಾಯ ಮಾಡಿದರೂ ಇಬ್ಬರೂ ಅದನ್ನ ಹಂಚಿಕೊಳ್ಳುವುದು. ವಿರುದ್ಧ ದಿಕ್ಕಿನಲ್ಲಿ ಬಹಳ ದೂರ ನಡೆದೇ ಹೋದರು. ಒಬ್ಬ ದೇವರನ್ನ ಪ್ರಾರ್ಥಿಸಿದ ತಕ್ಷಣ ದೇವರು ಪ್ರತ್ಯಕ್ಷ ನಾದ. ಇವನು ಕೇಳಿದ್ದನ್ನೆಲ್ಲ ಕೊಟ್ಟ. ಇವನು ಇದ್ದ ಸ್ಥಳ ಒಂದು ಪುಟ್ಟ ಊರಾಗಿ ಪರಿವರ್ತನೆ ಆಯ್ತು. ಬೇಕಾದ ಎಲ್ಲಾ ವ್ಯವಸ್ಥೆಗಳೂ ಸಮೃದ್ಧ ವಾಗಿದ್ದವು . ಬಹಳ ಸಂತೋಷ ವಾಯ್ತು. ಮನೆಯಲ್ಲಿ ಎಲ್ಲಾ ಕೆಲಸಕ್ಕೂ ಆಳುಗಳು. ಹೇರಳ ಹಣ. ಸಮಯಕ್ಕೆ ಸರಿಯಾಗಿ ನೆಚ್ಚಿನ ತಿಂಡಿ ತಿನಿಸು ಟೇಬಲ್ ಮೇಲೆ ಬರು ತ್ತಿತ್ತು. ಅರಸನಂತೆ ಜೀವನ ಸಾಗಿದೆ. ಸುಖದ ಸುಪತ್ತಿಗೆಯಿಂದಾಗಿ ತನ್ನ ಆತ್ಮೀಯ ಮಿತ್ರನನ್ನೂ ಆಗ ಮರೆತು ಬಿಟ್ಟ. ಆರು ತಿಂಗಳಾಯ್ತು . ಮಳೆಗಾಳಿ ಯಾವುದೂ ಇಲ್ಲ. ಒಂದು ಹಡಗು ಇವನು ಇದ್ದ ತೀರಕ್ಕೆ ಬಂದಿದೆ. ಇಲ್ಲಿ ಕೆಲವರು ವಾಸವಿರುವುದನ್ನ ಮೊದಲಬಾರಿ ಕಂಡು ಅದರ ಕ್ಯಾಪ್ಟನ್ ಇಲ್ಲಿಗೆ ತಂದಿದ್ದ. ಅದರಲ್ಲಿ ಇವನ ಊರಿನ ಕೆಲವರು ಇದ್ದರು. ಇವನನ್ನು ಕಂಡು ಆಶ್ಚರ್ಯ ಪಟ್ಟಾಗ ಈ ಜಾಗವೆಲ್ಲಾ ತನ್ನದೆಂದು ಈ ಅರಮನೆಗೆ ಅಪಾರ ಹಣ ಕೊಟ್ಟು ಖರೀದಿ ಸಿದ್ದೇನೆಂದು ಆಳುಕಾಳುಗಳನ್ನ ತಾನೇ ನೇಮಿಸಿದ್ದೇನೆಂದು ಹೇಳಿದ. ಆರು ತಿಂಗಳ ಅವಧಿಯಲ್ಲಿ ಇಷ್ಟೆಲ್ಲಾ ಸಂಪಾದನೆ ಮಾಡಿದ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು. ಅವರಿಗೆಲ್ಲಾ ಊಟತಿಂಡಿ ತಂಗಲು ಸ್ಥಳ ಕೊಟ್ಟು ಹೋಗುವಾಗ ತಪ್ಪದೆ ಅವರಿಂದ ಹಣ ವಸೂಲುಮಾಡಿದ. ಅವರೆಲ್ಲಾ ಹೊರಟು ಹೋದಮೇಲೆ ದೇವರು ಮತ್ತೆ ಪ್ರತ್ಯಕ್ಷ ವಾಗಿ ಇವನನ್ನ ಜೀವನ ಹೇಗಿದೆ ಮತ್ತೆ ಏನಾದರೂ ಬೇಕೆ ಎಂದು ಕೇಳಿದ. ಅದಕ್ಕೆ ಅವನು ಬೇಡಾ ಎಲ್ಲಾ ಅನುಕೂಲ ಇದೆ ಎಂದು ಹೇಳಿದಾಗ ದೇವರು ನಿನ್ನಜೊತೆ ಇದ್ದ ಒಬ್ಬ ಸ್ನೇಹಿತನ ಬಗ್ಗೆ ತಿಳಿದುಕೊಳ್ಳಲು ಇಷ್ಟ ವಿಲ್ಲವೇ ಎಂದು ಕೇಳಿದ. ಬೇಡ ಅವನು ಇಲ್ಲಿಗೆ ಬಂದರೆ ಅರ್ಧ ಪಾಲು ಕೊಡಬೇಕಾಗುತ್ತೆ ಅಂದ. ಆಗ ದೇವರು ಅಯ್ಯಾ ಮಾನವ, ಇದರಲ್ಲಿ ನಿನ್ನದು ಅಂತ ಚಿಕ್ಕಾಸಿನ ಪಾಲೂ ಇಲ್ಲ. ನೀನು ಇಷ್ಟು ಸುಖ ಭೋಗ ಅನುಭವಿಸುತ್ತಿರುವುದಕ್ಕೆ ಕಾರಣ ನಿನ್ನ ಸ್ನೇಹಿತ ಇದೆಲ್ಲಾ ಅವನಿಂದಲೇ ನಿನಗೆ ಬಂದಿರುವುದು. ಅವನ ಹತ್ತಿರ ಮೊದಲು ಹೋಗಿ ಏನು ಬೇಕೆಂದಾಗ ಅಲ್ಲಿ ನನ್ನ ಸ್ನೇಹಿತ ಇದ್ದಾನೆ. ನನ್ನ ಹಾಗೇ ಕಷ್ಟ ದಲ್ಲಿದ್ದಾನೆ. ಅವನು ಬಯಸಿದ್ದೆಲ್ಲಾ ಕೊಡು. ಅದರಲ್ಲಿ ನನಗೂ ಅವನು ಅರ್ಧ ಪಾಲು ಕೊಡುತ್ತಾನೆ ಎಂದು ಹೇಳಿದ. ಆದರೆ ಅವನು ಇಲ್ಲಿಗೆ ಬಂದಾಗ ನೀನು ಅವನನ್ನ ಗುರುತಿಸದೇ ನಿನ್ನ ಹತ್ತಿರವೇ ಅವನನ್ನ ನಿನಗೆ ಊಟ ತಿಂಡಿ ಕೊಡಲು ನೇಮಿಸಿ ಕೊಂಡಿದ್ದೀಯೆ. ಅಲ್ಲಿ ನೋಡು ಅಂತ ತೋರಿಸಿದಾಗ ತಕ್ಷಣವೇ ಎಚ್ಚರವಾಗಿ ಇದು ಬರೀ ಕನಸೆಂದು ತಿಳಿಯಿತು.