ದೇವರ ಲೆಕ್ಕ
ದೇವರ ಲೆಕ್ಕ


ಇಬ್ಬರು ಪ್ರಾಣ ಸ್ನೇಹಿತರು ಒಮ್ಮೆ ಮರದ ಕೆಳಗೆ ಕೂತು ತಮ್ಮಲ್ಲಿದ್ದ ರೊಟ್ಟಿ ತಿನ್ನಲು ಡಬ್ಬಿ ತೆಗೆಯುವ ವೇಳೆ ಅವರ ಹಳೆಯ ಸ್ನೇಹಿತನೊಬ್ಬ ಬಂದ. ಮೂವರೂ ಹಂಚಿ ಕೊಂಡು ತಿನ್ನಲು ಮುಂದಾದರು. ಮೊದಲನೆಯವನ ಬಳಿ ಐದು ರೊಟ್ಟಿ ,ಎರಡನೆಯವನ ಬಳಿ ಮೂರು ರೊಟ್ಟಿ ಇತ್ತು. ಮೂವರಿಗೂ ಸಮಪಾಲು ಮಾಡಲು ಇವರಿಗೆ ಹೊಳೆಯದಿದ್ದಾಗ ಅಲ್ಲೇ ಹತ್ತಿರ ಹೋಗುತ್ತಲಿದ್ದ ವ್ರುದ್ದರನ್ನ ಕೇಳಿದ್ದಕ್ಕೆ ಅವರು ಎಲ್ಲಾ ರೊಟ್ಟಿಯನ್ನೂ ಮೂರು ಮೂರು ಭಾಗವಾಗಿ ಕತ್ತರಿಸಿ ಹಂಚಿಕೊಳ್ಳಲು ಹೇಳಿದರು. ಈಗ ಪ್ರತಿಯೊಬ್ಬರೂ ಎಂಟು ಚೂರು ಸಮವಾಗಿ ತಿಂದರು. ಮೂರನೆಯ ಸ್ನೇಹಿತ ಹೊರಡುವಾಗ ನನಗೆ ಬಹಳ ಹಸಿವಾಗಿತ್ತು ಅಂತಹ ಸಮಯದಲ್ಲಿ ರೊಟ್ಟಿ ಕೊಟ್ಟಿದ್ದೀರಿ. ಆದ್ದರಿಂದ ನನ್ನ ಹತ್ತಿರ ಎಂಟು ಚಿನ್ನದ ನಾಣ್ಯಗಳು ಇದೆ ನೀವಿಬ್ಬರೂ ಹಂಚಿಕೊಳ್ಳಿ ಅಂತ ಕೊಟ್ಟು ಹೊರಟು ಹೋದ .ಮೊದಲನೆಯವನು ನನ್ನ ಬಳಿ ಐದು ರೊಟ್ಟಿ ಇತ್ತು ಆದ್ದರಿಂದ ನನಗೆ ಐದು ಕೊಡು. ನಿನ್ನ ಬಳಿ ಮೂರು ಇತ್ತು ಅದಕ್ಕೆ ನೀನು ಮೂರು ನಾಣ್ಯ ತೆಗೆದುಕೋ ಅಂದ. ಇದು ನ್ಯಾಯವಲ್ಲ ಮೂರನೆಯವನಿಗೆ ಇಬ್ಬರೂ ಸೇರಿ ಸಮಪಾಲು ಕೊಟ್ಟಿದ್ದೇವೆ.ಆದ್ದರಿಂದ ಇಬ್ಬರೂ ನಾಲ್ಕು ನಾಲ್ಕು ನಾಣ್ಯ ತೆಗೆದು ಕೊಳ್ಳೋಣವೆಂದ ಮೊದಲನೆಯವನು ಒಪ್ಪಲಿಲ್ಲ. ಇವರ ತಕರಾರು ರಾಜನ ಬಳಿ ಬಂದು ರಾಜನಿಗೂ ಸೂಕ್ತ ಪರಿಹಾರ ಹೊಳೆಯದೇಒಂದು ದಿನ ಸಮಯ ಪಡೆದು ಮಾರನೆ ದಿನ ಬರಲು ಹೇಳಿದ. ರಾತ್ರಿ ರಾಜನ ಕನಸಿನಲ್ಲಿ ದೇವರೇ ಬಂದು ಇಬ್ಬರಿಗೂ ಸಮಪಾಲು ಕೊಟ್ಟರೆ ತಪ್ಪಾಗುತ್ತೆ. ಮೊದಲನೆಯವನಿಗೆ ಏಳು ಕೊಟ್ಟು ಎರಡನೆಯವನಿಗೆ ಒಂದು ಕೊಡುವುದೇ ಸರಿಯಾದ ಕ್ರಮವೆಂದ.ರಾಜನಿಗೆ ಅರ್ಥ ವಾಗಲಿಲ್ಲ. ಆಗ ದೇವರು ಹೇಳಿದ್ದು ಮೊದಲನೆಯವನು ಐದು ರೊಟ್ಟಿ ತಂದಿದ್ದ. ಅದರಲ್ಲಿ ಹದಿನೈದು ಭಾಗಮಾಡಿ ಏಳು ಭಾಗ ಮೂರನೆಯವನಿಗೆ ಕೊಟ್ಟ. ಆದರೆ ಎರಡನೆಯವನು ತನ್ನಲ್ಲಿದ್ದ ಮೂರು ರೊಟ್ಟಿಯನ್ನು ಒಂಭತ್ತು ಭಾಗಮಾಡಿ ಒಂದು ಭಾಗ ಕೊಟ್ಟ. ಅದಕ್ಕೆ ಹೇಳಿದ್ದು ಮೊದಲನೆಯವನಿಗೆ ಏಳು ಎರಡನೆಯವನಿಗೆ ಒಂದು ಎಂದ.
ನೀತಿ: ನಮ್ಮಲ್ಲಿ ಎಷ್ಟು ಇದೆ ಎನ್ನುವುದಕ್ಕಿಂತ ನಾವೆಷ್ಟುಸಹಾಯ ಮಾಡಿದ್ದೇವೆ ಅನ್ನುವುದು ದೇವರ ಲೆಕ್ಕಾಚಾರ.