kaveri p u

Abstract Comedy Fantasy

3.7  

kaveri p u

Abstract Comedy Fantasy

ಅನ್ಯಲೋಕ

ಅನ್ಯಲೋಕ

4 mins
858


ನಾನ್-ಸ್ಟಾಪ್ ನವೆಂಬರ್ ಎಡಿಷನ್

ಅನ್ಯಲೋಕ


ಬನ್ನಿ ಬನ್ನಿ ಲೇಟ್ ಆಯ್ತು, ಅಲ್ಲಿಗೆ ಹೋಗೋಕೆ ಬಸ್ ಗಿಸ್ ಇಲ್ಲ, ಹೀಗೆ ಬಿರುಗಾಳಿ ಬಂದಾಗ್ಲೇ ತೂರಿಕೊಂಡು ಹೋಗ್ಬೇಕು.. ಬಿರುಗಾಳಿಯಲ್ಲಿ ತೂರಿಕೊಂಡು ಇವಳು ಎಲ್ಲಪ್ಪಾ ಹೊರಟಳು ಅಂತಿದೀರಾ? ಅಯ್ಯೋ ಅದೇನು ಅಂತ ಹೇಳಲಿ! ಈ ಭೂಮಿ ಮೇಲೆ ಇಪ್ಪತ್ತಾರು ವರ್ಷದಿಂದ ಇದ್ದೂ ಇದ್ದೂ ಬೋರು ಕಣ್ರೀ. ಇಷ್ಟು ದಿನ ಇದ್ದಿದ್ದಕ್ಕೂ ಒಂದು ಸೈಟ್ ಕೂಡ ಫ್ರೀ ಆಗಿ ಕೊಡದ ಈ ಜನರ ಮಧ್ಯೆ ಇರೋದಕ್ಕಿಂತ ಬೇರೆಯೇ ಲೋಕಕ್ಕೆ ಹೋಗುವುದು ಉತ್ತಮ ಎಂದು ತೀರ್ಮಾನಿಸಿ ಪ್ರಯಾಣ ಬೆಳೆಸುತ್ತಿದ್ದೇನೆ, ಮಕ್ಕಳು ಗಂಡನ ಸಮೇತ ! ನನ್ನ ಪ್ರಯಾಣ ಎಲ್ಲಿಗೆ ಗೊತ್ತಾ?


ನಾನು ಗುರು ಗ್ರಹದ ಗೌಡತಿಯಾಗಬೇಕೆಂದು ಬಯಸಿದ್ದೇನೆ. ಅಷ್ಟಕ್ಕೂ ಈ ಭೂಮಿ ಮೇಲೆ ಇವತ್ತು ಕೋವಿಡ್ ಬಿಟ್ಟು ಬೇರೇನಾದರೂ ಇದೆಯೇ,ಬದುಕೋಕೆ? ಕೋವಿಡ್ಗೂ ಗುರು ಗ್ರಹದ ದಾರಿ ಗೊತ್ತಿಲ್ಲ, ಬರ್ಲಿ ಬಡ್ಡಿ ಮಗಾ ಅದ್ಹೇಗೆ ಬರ್ತಾನೋ ಅಲ್ಲಿಗೆ ನೋಡ್ಬಿಡ್ತೀನಿ.


ಎಲ್ಲಾ ಸರಿ, ಇವಮ್ಮಾ ಮಂಗಳ ಗ್ರಹ, ಚಂದ್ರಲೋಕ ಬಿಟ್ಟು ಗುರು ಗ್ರಹಕ್ಕೆ ಯಾಕೆ ಹೊರಟಿದ್ದಾಳೆ ಅನ್ಕೊಂಡ್ರಾ? ಹ್ಹಹ್ಹಹ್ಹ ಅಲ್ಲೆ ಇರೋದು ಪಾಯಿಂಟ್ ! ನಿಮಗೆ ಗೊತ್ತಾ ಗುರು ಗ್ರಹ ಭೂಮಿಗಿಂತ ಬರೋಬ್ಬರಿ ನೂರ ಹನ್ನೆರಡು (112) ಪಟ್ಟು ದೊಡ್ಡದು.  ಭೂಮಿ ಮೇಲೆ ಪುತು ಪುತು ಅಂತ ಜನಸಂಖ್ಯೆ ಜಾಸ್ತಿ ಆಗ್ತಾ ಆಗ್ತಾ ಜಾಗ ಕಡಿಮೆ ಆಗ್ತಿದೆ ಅಲ್ವಾ.


ಎಲ್ಲಾ ಗ್ರಹಗಳಿಗಿಂತ ಗುರು ಗ್ರಹ ತುಂಬ ದೊಡ್ಡ ಗ್ರಹ, ಎಷ್ಟೇ ವರ್ಷ ಆದ್ರೂ, ಎಷ್ಟೇ ಜನ ಬಂದರೂ ಅಲ್ಲಿ ಸಾಮಾಜಿಕ ಅಂತರದಲ್ಲಿ ಮನೆ ಕಟ್ಟಿಕೊಂಡೇ ಆರಾಮಾಗಿ ಇರಬಹುದು.. ಏನಂತೀರಿ? ಆದರೆ ಈಗಂತೂ ಅಲ್ಲಿ ಯಾರೂ ಇಲ್ಲ. ನಾನೇ ಮೊದಲು ಹೋಗಿ ನೆಲೆಯೂರುತ್ತೇನೆ. ಆಮೇಲೆ ನಮ್ಮ ಸಂಬಂಧಿಕರನ್ನೆಲ್ಲ ಕರೆಸಿ ಎಲ್ಲರಿಗೂ ಫ್ರೀ ಆಗಿ ಸೈಟು, ಮನೆ ಕೊಡ್ತೀನಿ. ಎಲ್ರು ಅವರವರ ಮನೆಗಳಿಗೆ ಕಾವೇರಿ ನಿಲಯ ಅಂತ ಹೆಸ್ರು ಇಟ್ಕೊಂಡು ಸುಖವಾಗಿರಲಿ.


ನಾವು ಮೊದ್ಲೇ ಉತ್ತರ ಕರ್ನಾಟಕದ ಮಂದಿ. ಯಾವಾಗ್ಲೂ ಜೋರು ಬಿಸಿಲು ನಮಗೆ. ಅದೇ ಗುರು ಗ್ರಹ ಸೂರ್ಯನಿಂದ ಐದನೇ ಸ್ಥಾನದಲ್ಲಿದಾನೆ. ಭೂಮಿಗೆ ಬೀಳೋವಷ್ಟು ಬಿಸಿಲು ಅಲ್ಲಿ ಬೀಳಲ್ಲ ನೋಡಿ ! ಮತ್ತೊಂದು ಆಸಕ್ತಿದಾಯಕ ವಿಷಯ ಹೇಳ್ತಿನಿ ಕೇಳ್ರಿ. ಈಗಿರೋ ಎಲ್ಲಾ ಗ್ರಹಗಳನ್ನ ಒಟ್ಟಿಗೆ ಒಂದು ತಕ್ಕಡಿಗೆ ಹಾಕಿ, ನಾನೀಗ ಹೋಗ್ತಿರೋ ಗುರು ಗ್ರಹನಾ ಇನ್ನೊಂದು ತಕ್ಕಡಿಗೆ ಹಾಕಿದ್ರೂ ನಮ್ಮ ಗುರುಗೆ ಅವರ್ಯಾರು ಸಮ ಆಗಲ್ಲ ಗೊತ್ತಾ. ಬೇರೆಲ್ಲ ಗ್ರಹಗಳ ದ್ರವ್ಯರಾಶಿಗಿಂತ ಎರಡೂವರೆ ಪಟ್ಟು ತೂಕದ್ದು ನಮ್ಮ ಹೀರೋ ಗುರು. ಹೆಂಗೆ ನಾವು !


ನಿಮಗೀಗ ಕೂತುಹಲ ಮೂಡ್ತಿದೆ ಅಲ್ವಾ. ಇರಿ ಇರಿ ಇನ್ನೂ ಇದೆ ನಮ್ಮ ಗುರು ಬಗ್ಗೆ ಹೇಳೋದು. ಭೂಮಿಗೆ ಆದ್ರೆ ದಿನಕ್ಕೆ ಇಪ್ಪತ್ನಾಲ್ಕು ಗಂಟೆ. ಅದೂ ಈ ಲಾಕ್ ಡೌನ್ ಆದಾಗಿನಿಂದ ಅದು ಎಪ್ಪತ್ನಾಲ್ಕು ಗಂಟೆ ಅನ್ನೋವಷ್ಟು ದೀರ್ಘ ಆಗಿದೆ . ಕೆಲಸ ಇಲ್ಲ ಕಾರ್ಯ ಇಲ್ಲ, ಪಾಪಾ ನೀವಾದ್ರೂ ಏನ್ಮಾಡ್ತೀರಾ ಅಲ್ವಾ. ಅದೇ ನಮ್ ಗುರು ತುಂಬ ಕಿಲಾಡಿ. ಇಪ್ಪತ್ತು ಮೂವತ್ತು ಗಂಟೆ ಯಾಕ್ ಆ ಸೂರ್ಯನ ಸುತ್ತ ತಿರಗೋದು ಅಂತ ಬರೀ ಒಂಬತ್ತು ಗಂಟೆ ಆರು ನಿಮಿಷದಲ್ಲಿ ದೈನಂದಿನ ಚಲನೆ ಮುಗಿಸಿಬಿಡ್ತಾನೆ ಕಳ್ಳ !

ಎಷ್ಟು ಅನುಕೂಲ ನೋಡಿ ಹೀಗಿದ್ರೆ, ನಾಲ್ಕು ಗಂಟೆ ಎಚ್ಚರ ಇದ್ದರೆ ಸಾಕು, ಆಮೇಲೆ ಕತ್ತಲಾಗತ್ತೆ. ಎಂಟೊಂಬತ್ತು ಗಂಟೆಗಳಲ್ಲಿ ಒಂದೊಂದು ದಿನ ಮುಗಿದೇ ಹೋಗತ್ತೆ. ನೀವೆಲ್ಲ ಭೂಮಿ ಮೇಲೆ ಅರವತ್ತು, ಇಪ್ಪತ್ತು ವರ್ಷ ಬದುಕೋಕೆ ಕಷ್ಟ ಪಟ್ರೆ, ನಾನು ಗುರು ಜೊತೆ ಇದ್ರೆ ಮಿನಿಮಮ್ ನೂರೈವತ್ತು ವರ್ಷ, ಮ್ಯಾಕ್ಸಿಮಮ್ ಇನ್ನೂರು ವರ್ಷ ಬದುಕ್ತಿನಿ.. ಹೆಂಗೆ ನಮ್ಮ ಗುರು !


ಹಾಂ ತಾಳ್ಮೆ ಇರ್ಲಿ. ಪೂರ್ತಿ ಹೇಳಿಯೇ ಹೋಗ್ತೀನಿ ಅವಸರ ಬೇಡ. ಬ್ರಹ್ಮಾಂಡದಲ್ಲಿ, ಮೊದಲು ಹುಟ್ಟಿದ್ದೇ ನಮ್ಮ ಗುರು.. ಆಮೇಲೆ ನಿಮ್ಮ ಭೂಮಿ ನೆನಪಿರಲಿ. ನಮ್ಮ ಗುರು ಸೀನಿಯರ್ ಸಿಟಿಜನ್ !

ಭೂಮಿ 450 ಕೋಟಿ ವರ್ಷಗಳ ಹಿಂದೆ ಉಗಮಿಸಿದ್ದರೆ, ನಮ್ಮ ಗುರು ಸುಮಾರು 500ಕೋಟಿ ವರ್ಷಗಳ ಹಿಂದೆ ಹುಟ್ಟಿದಾನೆ ಅಂತ ವಿಜ್ಞಾನಿಗಳು ನಂಬಿದ್ದಾರೆ.


ನಿಮ್ಮ ಭೂಮಿಗೆ ಭೂಮಿ ಅಥವಾ ಅರ್ಥ್ ಅಂತ ಯಾಕೆ ಕರೀತಾರೆ ಗೊತ್ತಾ ನಿಮಗೆ? ಅದನ್ನೂ ನನ್ನೇ ಕೇಳ್ಬೇಡಿ. ನಿಮ್ಮ ಗ್ರಹ, ನಿಮ್ಮ ವಿಷಯ. ನಮಗ್ಯಾಕೆ ಕಂಡವರ ಮನೆ ವಿಷಯ ಅಂತ ನಾನು ನಿಮ್ಮ ಭೂಮಿ ಬಗ್ಗೆ ತಿಳ್ಕೊಂಡಿಲ್ಲ.

ಆದರೆ ನಮ್ಮ ಗುರು ಗ್ರಹಕ್ಕೆ ಗುರು ಅಥವಾ ಜುಪಿಟರ್ ಅನ್ನುವುದು ಪುರಾತನ ರೋಮನ್ ದೇವರ ಸಂಕೇತವಾಗಿ ಇಟ್ಟಿದ್ದು.


ಇನ್ನು ನಮ್ಮ ಗುರು ಗ್ರಹದ ಅಗಲ ಎಷ್ಟು ಗೊತ್ತಾ? ಹೇಳಿದ್ರೆ ನೀವು, ನಿಮ್ ನಿಮ್ ಸಂಬಂಧಿಕರನ್ನೆಲ್ಲ ಸೇರಿಸಿ ಗುರು ಗ್ರಹದಲ್ಲಿ ತುಂಬ ಜಾಗ ಇದೆ, ಅಲ್ಲೆ ಸೈಟ್ ಮಾಡೋಣ ಅಂತ ಪ್ಲಾನ್ ಹಾಕ್ತಿರಾ. ಇರ್ಲಿ ಆದ್ರೂ ಹೇಳ್ತಿನಿ ಕೇಳಿ, ಹನ್ನೊಂದು ಭೂಮಿ ಇಟ್ಟರೆ ನಮ್ಮ ಗುರು ಗ್ರಹದ ಅಗಲಕ್ಕೆ ಸಮ.


ಇನ್ನೊಂದು ಇಂಟರೆಸ್ಟಿಂಗ್ ವಿಷಯ ಹೇಳ್ಬೇಕು ನಮ್ಮ ಗುರು ಬಗ್ಗೆ. ಇದನ್ನ ಕೇಳಿದ್ಮೇಲೆ ನಾಳೆಯಿಂದ ನೀವೆಲ್ಲ ನಮ್ಮ ಗುರುನಾ ಪೂಜಿಸಬೇಕು. ಸರೀನಾ?

ಸೌರವ್ಯೂಹದಲ್ಲಿ ಅತೀ ಹೆಚ್ಚಿನ ಗುರುತ್ವಾಕರ್ಷಣ ಬಲ ಇರೋದು ನಮ್ಮ ಗುರುಗೆ. ಕಾಡಿಗೆ ಸಿಂಹ ರಾಜನಾದರೆ, ಗ್ರಹಗಳ ರಾಜ ನಮ್ ಗುರು. (ಹೊಡಿರಿ ಚಪ್ಪಾಳೆ )

ಗಂಭೀರ ವಿಷಯಕ್ಕೆ ಈಗ ಬರುತ್ತೇನೆ. ಗುರು ಗ್ರಹಕ್ಕೆ ಎಷ್ಟು ಗುರುತ್ವ ಇದೆ ಅಂದ್ರೆ ತನ್ನ ಸುತ್ತ ಮುತ್ತ ಬರುವ ದೈತ್ಯ ಕ್ಷುದ್ರಗ್ರಹಗಳನ್ನೆಲ್ಲ ತನ್ನತ್ತ ಸೆಳೆಯುವಷ್ಟು. ಹಾಗೆ ಸೆಳೆದು ಆ ದೈತ್ಯ ಕ್ಷುದ್ರ ಗ್ರಹಗಳನ್ನೆಲ್ಲ ನಾಶ ಪಡಿಸುತ್ತದೆ ನಮ್ ಗುರು. ಈಗಲೂ ಭೂಮಿಯನ್ನು ಕ್ಷುದ್ರ ಗ್ರಹಗಳು ಢಿಕ್ಕಿ ಹೊಡೆಯಲು ಸಾಧ್ಯ ಆಗ್ತಿಲ್ಲ, ಅದಕ್ಕೂ ಕಾರಣ ನಮ್ ಗುರು. ಅಷ್ಟು ಪವರ್ಫುಲ್ ನಮ್ ಹೀರೋ. ಭೂಮಿ, ಮಂಗಳ ಗ್ರಹದವರೆಗೂ ಗುರುತ್ವ ಸಾಧಿಸಬಲ್ಲ ನಮ್ ಗುರು. ಈಗ ಯೋಚಿಸಿ, ಗುರು ಗ್ರಹ ಇಲ್ಲದಿದ್ದರೆ ಅದೆಷ್ಟೋ ಕ್ಷುದ್ರ ಗ್ರಹಗಳ ಢಿಕ್ಕಿಯಾಗಿ ನಿಮ್ಮ ಭೂಮಿ ಉಳೀತಿತ್ತಾ? ನೀವೆಲ್ಲ ನಮ್ ಗುರುಗೆ ಇನ್ನೂ ಧನ್ಯವಾದ ಹೇಳಲೇ ಇಲ್ಲ !


ಆಯ್ತು ಅನ್ಕೊಂಡ್ರಾ ನಮ್ಮ ಹೀರೋ ಪವಾಡ? ಅದ್ಹೇಗ್ರಿ ಆಗತ್ತೆ ಇಷ್ಟು ಬೇಗ? ಅಷ್ಟಿಲ್ಲದೇ ನಾನು ಗುರುವಿಗೆ ಗೌಡತಿ ಆಗ್ತಿದ್ನಾ? ಎಷ್ಟು ಹೇಳಿದ್ರೂ ಕಮ್ಮಿನೇ ಗುರು ಕಥೆಯನ್ನ. ಈಗ ಮತ್ತೊಂದು ಮಜವಾದ ವಿಷಯ ಹೇಳ್ತಿನಿ ಕೇಳಿ.

ನಿಮ್ಮ ಭೂಮಿಗೆ ಒಂದೇ ಉಪಗ್ರಹ, ಅದೂ ರಾತ್ರಿ ಮಾತ್ರ ಕಾಣುವ ಚಂದ್ರ. ನಮ್ ಗುರುಗೆ ಬರೋಬ್ಬರಿ ಎಪ್ಪತ್ತೊಂಬತ್ತು (79) ಉಪಗ್ರಹಗಳು. ಪ್ರತಿವರ್ಷವೂ ಹೊಸ ಹೊಸ ಉಪಗ್ರಹಗಳು ಗೋಚರಿಸುತ್ತವೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ನೀವೆಲ್ಲ ಮದುವೆ ಆದಾಗ ಹನಿಮೂನ್ ಅಂತ ಚಂದ್ರಲೋಕಕ್ಕೆ ಹೋಗ್ತೀನಿ ಅಂತ ಸುಳ್ಳು ಹೇಳಿ ಕಾಶ್ಮೀರ ಕಂಡು ಬರ್ತೀರಾ ! ನಾನು ಹಾಗಲ್ಲ, ಇನ್ಮೇಲೆ ಪ್ರತೀ ವರ್ಷ ಒಂದೊಂದು ಹೊಸ ಹೊಸ ಉಪಗ್ರಹಕ್ಕೆ ಪಿಕ್ನಿಕ್ ಹೋಗ್ತೀನಿ ಮಕ್ಕಳ ಜೊತೆ. ಅಲ್ಲೆ ಪಾರ್ಕ್, ಫಾರ್ಮ್ ಹೌಸ್ ಕಟ್ಟಿ ಭವಿಷ್ಯಕ್ಕೆ ಆಸ್ತಿನೂ ಮಾಡ್ಬಿಡ್ತೀನಿ !


ಇನ್ನೂ 79 ಉಪಗ್ರಹಗಳು ಅಂದೆ ಸರಿ. ಅದರ ಬಗ್ಗೆ ಸ್ವಲ್ಪ ಆಸಕ್ತಿದಾಯಕ ವಿಷಯ ಇದೆ ಕೇಳಿ.


ಗುರು ಗ್ರಹದ 79 ಉಪಗ್ರಹಗಳಲ್ಲಿ ಅತೀ ದೊಡ್ಡ ಉಪಗ್ರಹ 'ಗ್ಯಾನಿಮೇಡ್' ಅನ್ನೋದು ಬುಧ ಗ್ರಹಕ್ಕಿಂತಲೂ ದೊಡ್ಡದಂತೆ. ಮತ್ತೆ ಇನ್ನೊಂದು ಉಪಗ್ರಹ 'ಯುರೋಪಾ ' ಅನ್ನುವುದು ಸಂಪೂರ್ಣ ಮಂಜುಗಡ್ಡೆಯಿಂದ ಕೂಡಿದೆಯಂತೆ. ಇಲ್ಲಿ ನೀರಿರುವ ಸಾಧ್ಯತೆ ಬಗ್ಗೆ ನಿಮ್ಮ ಭೂಮಿಯಲ್ಲಿರುವ ವಿಜ್ಞಾನಿಗಳು ಸಂಶೋಧನೆ ಮಾಡ್ತಾನೆ ಇದ್ದಾರೆ. ನಾನು ಗುರು ಗ್ರಹಕ್ಕೆ ಹೋದ್ರೆ ಮೊದ್ಲು 'ಯುರೋಪಾ ' ಹತ್ತಿರ ಹೋಗಿ ಸುತ್ತ ಮುತ್ತ ಚೆಕ್ ಪೋಸ್ಟ್ ಹಾಕ್ಬಿಡ್ತೀನಿ. ಬರ್ಲಿ ಅದ್ಯಾವ ವಿಜ್ಞಾನಿ ಸಂಶೋಧನೆ ಮಾಡಿ, ನೀರು ತೆಗಿತಾರೋ ನಾನು ನೋಡ್ತೀನಿ. !


ಈಗ ಗುರು ಗ್ರಹದ ಮುಖ್ಯ ವಿಷಯಕ್ಕೆ ಬರ್ತೀನಿ. ನಾನು ಗುರುಗೆ ಯಾಕೆ ಮರುಳಾದೆ ಅನ್ನೋದಕ್ಕೂ ಇದೇ ಉತ್ತರ.

ಅದೇ ಗುರು ಗ್ರಹದ "ಗ್ರೇಟ್ ರೆಡ್ ಸ್ಪಾಟ್" (ಕೆಂಪು ಕಲೆ). ರಾಸಾಯನಿಕ ಅನಿಲಗಳಿಂದ ಮೂನ್ನೂರು ವರ್ಷಗಳ ಹಿಂದೆಯೇ ಉತ್ಪತ್ತಿಯಾಗಿರುವ ಭಾರೀ ಸುಂಟರಗಾಳಿ ಈ ರೆಡ್ ಸ್ಪಾಟ್. ಅಚ್ಚರಿ ಏನು ಅಂದ್ರೆ ಈ ಸುಂಟರಗಾಳಿ ಇಂದಿಗೂ ತಿರುಗುತ್ತಲೇ ಇದೆ. ಇದು ಕೆಂಪಗೆ ಕಾಣುವುದರಿಂದ ಕೆಂಪು ಕಲೆ ಎನ್ನಲಾಗಿದೆ.

ಇನ್ಮೇಲೆ ಇಲ್ಲಿ ಜನರು ವಾಸ ಮಾಡೋಕೆ ಶುರು ಮಾಡ್ತಾರೆ. ಜನ ಅಂದ್ಮೇಲೆ ಮೋಸ ಗೀಸ ಇದ್ದೇ ಇರತ್ತೆ ಅಲ್ವಾ. ಅಂತಹ ವಂಚಕರನ್ನು ಈ ರೆಡ್ ಸ್ಪಾಟಿಗೆ ತಂದು ಎಸೆದು ಬಿಟ್ರೆ ಮುಂದಿನವರು ಪಾಠ ಕಲೀತಾರೆ. ನಿಮ್ ತರ ಯಾಕ್ ಒಂದೇ ಕೇಸಿಗೆ ಒಂಬತ್ತು ವರ್ಷ ಕಾಯ್ಸೋದು !


ನಮ್ ಗುರು ಹೈಡ್ರೋಜನ್ 71%,  ಹೀಲಿಯಮ್ 24%, 5% ಇತರೆ ಧಾತುಗಳನ್ನು ಒಳಗೊಂಡಿದ್ದಾನೆ.


ಈಗ ಕೊನೆ ಪಾಯಿಂಟ್ಗೆ ಬಂದೆ. ಸಖತ್ ಇಂಟೆರೆಸ್ಟಿಂಗ್ ವಿಷಯ ಇವಾಗ ಹೇಳ್ತಿನಿ ಕೇಳಿ. ಇಷ್ಟೆಲ್ಲ ಹೇಳಿದೆ ಸರಿ. ಆದರೆ ಈ ಗುರು ಗ್ರಹಕ್ಕೆ ನೆಲವೇ ಇಲ್ಲ.

(ಸಾಲಿಡ್ ನೆಲ ) ಬರೀ ಅನಿಲಗಳಿಂದ ತುಂಬಿದ ಈ ಗ್ರಹದ ಮೇಲ್ಮೈಯಲ್ಲಿರುವ ಅನಿಲಗಳ ಪದರಗಳ ಆಳವೇ ನಲವತ್ಮೂರು ಮೈಲಿಗೂ ಹೆಚ್ಚು. ಆದ್ದರಿಂದ ಮನುಷ್ಯ ಈ ಗ್ರಹದ ಮೇಲೆ ಲ್ಯಾಂಡ್ ಆಗಲು ಸಾಧ್ಯವಿಲ್ಲ !!


ಮತ್ತೆ ಇವಳು ಹೇಗೆ ಹೋಗ್ತಾಳೆ ಅನ್ಕೊಂಡ್ರಾ? ಅದೊಂದ್ ದೊಡ್ಡ ಕಥೆ ಬಿಡಿ. ನಮ್ ಮೈದುನನ ಮದ್ವೇಲಿ ಮನೆ ಸ್ವಲ್ಪ ರಿಪೇರಿ ಮಾಡಿದ್ವಿ. ಎಷ್ಟೊಂದು ಕಾಡಗಲ್ಲು ತೆಗಿಬೇಕಾಗಿ ಬಂತು. ಎಷ್ಟು ಗಟ್ಟಿ ಪಾಟಿಗಲ್ಲು ಅವು. ಸುಮ್ನೆ ಕೊಟ್ಟಿಗೆಯಲ್ಲಿ ಇಡೋದಕ್ಕಿಂತ ಗುರು ಹತ್ರ ಲ್ಯಾಂಡ್ ಆಗೋವಾಗ ಅಲ್ಲಿ ಜೋಡಿಸಬೇಕು ಅಂತ ಎತ್ತಿಟ್ಟಿದ್ದೆ . ಲ್ಯಾಂಡ್ ಆದ್ಮೇಲೆ ಅವೇ ಕಲ್ಲನ್ನು ಅಲ್ಲಿ ಹಾಕಿದ್ರೆ ಗಟ್ಟಿ ನೆಲ ಆಗತ್ತೆ, ನನ್ನ ಸುಂದರ ಸಂಸಾರವೂ ಸಾಗುತ್ತದೆ. ಹೆಂಗೆ ನಾವು!


Rate this content
Log in

Similar kannada story from Abstract