ಹೃದಯ ಸ್ಪರ್ಶಿ

Abstract Fantasy Others

4.7  

ಹೃದಯ ಸ್ಪರ್ಶಿ

Abstract Fantasy Others

ಕಿರುಗತ್ತಿ ಯಾರ ಪಾಲಿಗೆ..?!

ಕಿರುಗತ್ತಿ ಯಾರ ಪಾಲಿಗೆ..?!

4 mins
287



ಕತ್ತಲ ಅಂಧಕಾರವನ್ನು ಸೀಳಿದಂತೆ ಕಂಡುಬಂದಿತೊಂದು ಬೆಳಕಿನ ಕಿರಣ. ಕಡುಕಪ್ಪು ಬಣ್ಣದ ವಸ್ತ್ರ ಧರಿಸಿರುವ ಅವನು, ಮುಖಕ್ಕೂ ಅದೇ ಬಣ್ಣದ ಬಟ್ಟೆಯನ್ನು ಅಡ್ಡಲಾಗಿ ಕಟ್ಟಿದ್ದಾನೆ. ಆ ಬೆಳಕಿನ ಕಿರಣ ಕೈಯ್ಯಲ್ಲಿರುವ ಸಣ್ಣ ದೀಪದಿಂದ ಬರುತ್ತಿದೆ. ಊರಿನ ಬಾಗಿಲು ದಾಟಿ ಒಳಗಡಿಯಿಡುತ್ತಿದ್ದಂತೆ ಕಂಡುಬಂದಿತು... ಊರಬಾಗಿಲಲ್ಲೇ ತೂಗು ಹಾಕಿರುವ ಚಿತ್ರಪಟ.!!


ಹುಡುಕಿಕೊಟ್ಟವರಿಗೆ ರಾಜ್ಯದ ಕಡೆಯಿಂದ ಬಹುಮಾನವಿದೆ ಎಂಬುದನ್ನೂ ಅದರ ಮೇಲೆ ಬರೆಯಲಾಗಿದೆ. ಒಂದುಕ್ಷಣ ನಿಂತು ನೋಡಿದವನು ಮಂದೆ ಹೆಜ್ಜೆ ಹಾಕಿದ.


ಸ್ವಲ್ಪ ದೂರ ನಡೆಯುತ್ತಿದ್ದಂತೆ ಕಂಡಿತು ಸೈನಿಕರ ಕಣ್ಗಾವಲು. ಮುಂದೆ ನಡೆಯುವುದು ಅಸಾಧ್ಯ ಎನಿಸಿದಾಗ ನಿಂತಲ್ಲೇ ಮೇಲೆದ್ದವು ಅವನ ಕಾಲ್ಗಳು. ಗಾಳಿಯಲ್ಲಿ ಹಾರಿದವನು ಅಲ್ಲಿರುವವರಿಗೆ ಅರಿವಾಗದಂತೆ ಮನೆಯಿಂದ ಮನೆಯ ಹೆಂಚಿನ ಮೇಲೆ ಜಂಪ್ ಮಾಡುತ್ತಾ ಸಾಗಿದ. ಅವನನ್ನು ನೋಡಿದರೆ ಮಾರ್ಷಲಾರ್ಟ್ಸ್ ಎಕ್ಸ್ ಪರ್ಟ್ ಅನಿಸುತ್ತಿತ್ತು.


''ಟಕ್ ಟಕ್...'' ಒಂದೆರಡು ಕ್ಷಣದಲ್ಲಿ ಬಾಗಿಲು ತೆರೆಯಲ್ಪಟ್ಟಿತ್ತು.


''ರೇಯಾಂಶ್..? ನೀನು...?, ನೀನು ಇಲ್ಲೇನ್ಮಾಡ್ತಿದ್ದೀಯಾ?'' ಒಳಗೆಳೆದುಕೊಂಡು ಬಾಗಿಲು ಭದ್ರಪಡಿಸಿದರು.


''ಮರ್ವಾ.. ಗುರುಗಳಿಂದ ಸೂಚನೆ ಸಿಕ್ಕಿದೆ. ನಮ್ಮ ಸಾಥಿಗಳಿಗೂ ಈ ಸುದ್ಧಿ ತಲುಪಿಸಬೇಕು. ನಾವಿಂದು ರಾತ್ರಿಯೇ ಇಲ್ಲಿಂದ ಹೊರಡಬೇಕು...' ನುಡಿದ ಆ ವ್ಯಕ್ತಿ.


''ಅದೇನೋ ಸರಿ. ಆದರೆ ನೀನು ಇಲ್ಲಿಗೆ ಹೇಗೆ ಬಂದೆ..? ಯಾರಾದರೂ ನಿನ್ನನ್ನಿಲ್ಲಿ ನೋಡಿದರೆ ಏನಾಗಬಹುದೆಂದು ಗೊತ್ತಿದೆ ಅಲ್ವಾ?'' ಭಯದಲ್ಲೇ ಕೇಳಿದಳು ಮರ್ವಾ.


''ಹ್ಮ್ ಗೊತ್ತು. ಅದಿಕ್ಕೆ ನಾವು ತಡಮಾಡುವಂತಿಲ್ಲ. ರಾಜ ಜರ್ನವ್'ಗೆ ನನ್ನ ಬಗ್ಗೆ ತಿಳಿಯೋ ಮೊದಲು ನಾವಿಲ್ಲಿಂದ ಹೊರಡಬೇಕು. ಆದ್ದರಿಂದ ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೋ'' ಅಲ್ಲೇ ನಿಂತ.


''ಸರಿ ತಗೋ, ಈ ಮದಿರೆ ಸೇವಿಸುತ್ತಿರು. ಅಷ್ಟರಲ್ಲಿ ನಾನೆಲ್ಲಾ ತಯಾರಿ ಮಾಡುತ್ತೇನೆ'' ಮದಿರಾಪಾತ್ರೆ ಅವನ ಕೈಗಿತ್ತು ಅತ್ತ ನಡೆದಳು. ದಾಹವೂ ಆಗಿದ್ದರಿಂದ ಏನೊಂದು ಮಾತನಾಡದೆ ಪಡೆದಿದ್ದ, ಮುಖಕ್ಕೆ ಕಟ್ಟಿದ್ದ ನಖಾಬನ್ನು ಕೆಳಗಿಳಿಸಿದ ಮೆಲ್ಲನೇ. ಸ್ಪಷ್ಟವಾಗಿ ಕಂಡಿತೀಗ ಮುಖ..! ಅದೇ..!?

ಅದೇ..ಚಿತ್ರಪಟದಲ್ಲಿರುವ ಮುಖ.?!!


ಕಟ್ಟುಮಸ್ತಾದ ದೇಹ, ರಕ್ಷಣೆಗೆ ತೊಟ್ಟಿರುವ ರಕ್ಷಣಾ ಕವಚಗಳು. ಸೊಂಟದಲ್ಲಿ ಖಡ್ಗ, ಮತ್ತೊಂದು ಪುಟ್ಟದಾದ ಕಿರುಗತ್ತಿ. ಹೆಗಲಿಗೆ ತೂಗುಹಾಕಿರುವ ತುಸು ದೊಡ್ಡದೇ ಎನಿಸುವ ಕೈ ಚೀಲ. ಕೈಯ್ಯಲ್ಲಿ ಹಿಡಿದಿರುವ ತೂಗುದೀಪ. ಕಣ್ಣು ಒಂದನ್ನು ಬಿಟ್ಟು ಎಲ್ಲವೂ ಕಪ್ಪು ವಸ್ತ್ರದಲ್ಲೇ ಮುಚ್ಚಿ ಹೋಗಿದೆ.


ಈಶಾನ್ಯದೇಶ ಅಮರಪುರಿಯ ಯುವರಾಜ, ರಾಜಗುರು ಚೈತನ್ಯಾಚಾರ್ಯರ ಪ್ರಿಯ ಶಿಷ್ಯ. ಅನಾದಿಕಾಲದಿಂದಲೂ ಅಮರಾವತಿಯ ನಗರದೇವತೆ ಅನಾಯಾಳ ಶಕ್ತಿಯನ್ನೊಳಗೊಂಡಿರುವ ಅನ್ವಿ ಎಂಬ ವಿಶೇಷ ಕಿರುಗತ್ತಿಯ ಮೇಲಿತ್ತು ದುಷ್ಟರ ಕಣ್ಣು..!

ಅದರಲ್ಲೂ ವಿಶೇಷ, ಜರಾಯು ರಾಜ್ಯದ ರಾಜ ಜರ್ನವ್


ಯುವರಾಜ ತನ್ನ ಶಸ್ತ್ರಾಸ್ತ್ರಭ್ಯಾಸದ ಸಲುವಾಗಿ ಸಾಮ್ರಾಜ್ಯದಿಂದ ದೂರವಿದ್ದ ಸಮಯದಲ್ಲಿ, ಅಮರಾವತಿಯ ರಾಜ ವೀರಾಂಶುವಿನ ನಿಗೂಢ ನಿಧನ ಶತ್ರುಗಳಿಗೆ ಸಾಮ್ರಾಜ್ಯದ ಮೇಲೆ ಆಕ್ರಮಣ ನಡೆಸಲು ಸುಲಭ ದಾರಿ ಒದಗಿಸಿತ್ತು. ಕಟ್ಟುಮಸ್ತಾಗಿದ್ದ ರಾಜ ಇದ್ದಕ್ಕಿದ್ದಂತೆ ಹೇಗೆ ಸಾವನ್ನಪ್ಪಿದ್ದ ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ.


ಅಮರಾವತಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ರಾಜ ಜರ್ನವ್ ಮೊದಲು ಮಾಡಿದ ಕೆಲಸವೇ ನಗರದೇವತೆಯ ಮಂಟಪದಲ್ಲಿ ತನ್ನ ಜನರನ್ನು ಕಾವಲಿಗೆ ಇರಿಸಿದ್ದು. ಅನಾಯಾ ದೇವಿಯ ಕೈಯ್ಯಲ್ಲೇ ಪ್ರತಿಷ್ಠಾಪಿತಗೊಂಡಿರುವ ವಿಶೇಷ ಶಕ್ತಿಯುಳ್ಳ ಕಿರುಗತ್ತಿಯನ್ನು ವಶಪಡಿಸಿಕೊಂಡು ಅದರ ಅಸಾಧಾರಣ ತಾಕತ್ತನ್ನು ತನ್ನ ವಶಕ್ಕೆ ಪಡೆದು, ಇಡೀ ಜಗತ್ತಿನ ಮೇಲೆ ಅಧಿಕಾರ ಸ್ಥಾಪಿಸುವುದು ಅವನ ಮಹದಾಸೆ.


ತಂದೆಯ ಸಾವಿನ ಸುದ್ಧಿ ತಿಳಿಯುತ್ತಲೇ ತನ್ನ ಸಾಮ್ರಾಜ್ಯಕ್ಕೆ ಮರಳಿದವನಿಗೆ ಅಚ್ಚರಿ ಕಾದಿತ್ತು. ಇಡೀ ಸಾಮ್ರಾಜ್ಯ ಜರ್ನವ್ ಕೈಕೆಳಗೆ ಬಂದು, ತನ್ನೆಲ್ಲಾ ಸೈನ್ಯಶಕ್ತಿಯನ್ನು ಕಳೆದುಕೊಂಡು ಒಂಟಿಯಾದವನಿಗೆ ಸಹಾಯಹಸ್ತ ಚಾಚಿದ್ದು ಅನಾಯಾ ದೇವತೆಯ ಪೂಜಾರಾಧಕ ಮಹಾಂತರ ಪುತ್ರಿ ಮರ್ವಾ. ಅವಳ ಸಹಾಯದಿಂದ ಮಂಟಪ ಪ್ರವೇಶಿಸಿದ ರೇಯಾಂಶು ಆ ಶಕ್ತಿಶಾಲಿ ಕಿರುಗತ್ತಿಯನ್ನು ಅಪಹರಿಸುವಲ್ಲಿ ಯಶಸ್ವಿಯಾಗಿದ್ದ. ಆದರೆ ಕೊನೆಯಕ್ಷಣದಲ್ಲಿ ಅವನ ಮುಖ ನೋಡಿದ ಸೈನಿಕರು ಅವನವರಿಂದ ತಪ್ಪಿಸಿಕೊಂಡರೂ ಅವನ ಚಿತ್ರ ಬಿಡಿಸಿ ರಾಜ್ಯದ ಕೋಣೆ ಕೋಣೆಯಲ್ಲೂ ಅಂಟಿಸಿದ್ದರು.


ತನ್ನ ಗುರುಗಳ ಬಳಿಗೆ ಹೋದರೆ ಎಲ್ಲವರಿಗೆ ತೊಂದರೆಯಾಗುವುದೋ.? ಎಂಬ ಕಾರಣಕ್ಕೆ ಅವರ ಬಳಿಯೂ ಹೋಗದೆ ಕಾಡಿನಲ್ಲಿ ಉಳಿದುಕೊಂಡವನಿಗೆ ಸಹಾಯ ಮಾಡಿದ್ದು ಅವನ ಜೊತೆ ವಿದ್ಯೆ ಕಲಿತ ಸ್ನೇಹಿತರು. ಆದರೆ ಕೊನೆಯ ಕ್ಷಣದಲ್ಲಿ ಜರ್ನವ್ ಸೈನಿಕರು ಅಲ್ಲಿಗೂ ತಲುಪಿದ ಕಾರಣ,ತಮ್ಮ ಠಿಕಾನೆಯನ್ನು ಬದಲಿಸಿ, ವೇಷ ಬದಲಿಸಿ ದೂರದೂರವೇ ಇದ್ದುಬಿಟ್ಟಿದ್ದರು. ಇಂದು ರಾಜಗುರು ಚೈತನ್ಯಾಚಾರ್ಯರ ವಿಶೇಷ ಸಂದೇಶ ಅವನ ತಲುಪಿದ ಕಾರಣ ಮತ್ತೆ ಎಲ್ಲರನ್ನು ಒಟ್ಟು ಸೇರಿಸುವುದು ಅನಿವಾರ್ಯವಾದ್ದರಿಂದ ತಾನು ಅಡಗಿದ್ದ ಸ್ಥಳದಿಂದ ಹೊರಬಂದಿದ್ದ ರೇಯಾಂಶು.


''ಮರ್ವಾ,ಉಳಿದೆಲ್ಲರಿಗೂ ವಿಷಯ ತಲುಪಿಸಿರುವೆ ತಾನೇ?'' ತಾನು ನಿಗದಿಪಡಿಸಿದ್ದ ಸ್ಥಳಕ್ಕೆ ತಲುಪಿ ಅರ್ಧಗಂಟೆ ಕಳೆದರೂ ಉಳಿದವರಾರೂ ಬರದೆ ಇರುವುದನ್ನು ಕಂಡು ಕೇಳಿದ್ದ.


''ಹೂಂ ಆಗಲೇ ಸುದ್ದಿ ಮುಟ್ಟಿಸಿರುವೆ. ಇನ್ನೇನು ಬರಬಹುದು...'' ಎಲ್ಲರ ಕಣ್ತಪ್ಪಿಸಿ ಬರಬೇಕೆಂದರಿವಿದ್ದ ರೇಯಾಂಶು ಸುಮ್ಮನಾದ.


''ಗುರುಗಳೇ...ಆ ಕಿರುಗತ್ತಿ ಪಡೆಯಬೇಕೆಂಬ ನನ್ನ ಆಸೆ ಪೂರೈಸುವುದೇ ಇಲ್ಲವೇ?'' ತನ್ನ ಗುರುವಿನ ಬಳಿ ಕೇಳಿದ ರಾಜ ಜರ್ನವ್. 


''ಇದೆ.. ಇದೆ ಮಹಾರಾಜ. ಇಂದು ಆ ಅವಕಾಶ ತಾನಾಗೇ ತಮ್ಮನ್ನು ಹುಡುಕಿ ಬಂದಿದೆ. ಇಂದು ಅನ್ಯಾ ಹುಣ್ಣಿಮೆಯ ರಾತ್ರಿ. ಪ್ರತಿ ಹತ್ತು ಸಾವಿರ ವರ್ಷಗಳಿಗೊಮ್ಮೆ ಬರುವ ಈ ಹುಣ್ಣಿಮೆ ರಾತ್ರಿಯ ಮಧ್ಯರಾತ್ರಿಯ ಸಮಯದಲ್ಲಿ ಆ ಕಿರುಗತ್ತಿ.. ಹದಿನೈದು ನಿಮಿಷಕ್ಕೆ ತನ್ನ ಶಕ್ತಿ ಕಳೆದುಕೊಳ್ಳುವ ಕಾರಣ ಅದನ್ನು ಯಾರು ಬೇಕಾದರೂ ಎತ್ತಿಕೊಳ್ಳಬಹುದು. ಆ ಸಮಯದಲ್ಲಿ ಶಕ್ತಿಶಾಲಿ ಕಿರುಗತ್ತಿ ನಿಮ್ಮ ಕೈಸೇರಿದ್ದಲ್ಲಿ.. ಆ ಕೂಡಲೇ ಇನ್ಮುಂದೆ ಆ ಶಕ್ತಿಶಾಲಿ ಕಿರುಗತ್ತಿ ನಿಮಗೆ ನಿಷ್ಠವಾಗಿರುವಂತೆ ನಾನು ಮಾಡುತ್ತೇನೆ.


ಆದರೆ...?'' ನಿಲ್ಲಿಸಿದರು ಗುರುಗಳು.


''ಆ..ಆದರೆ, ಆದರೆ ಏನು ಗುರುಗಳೇ..?''


''ಅನ್ವಿ ಕಿರುಗತ್ತಿ ತನ್ನ ಶಕ್ತಿಯನ್ನು ಕೇವಲ ಹದಿನೈದು ನಿಮಿಷಗಳಿಗೆ ಮಾತ್ರ ಕಳೆದುಕೊಳ್ಳುತ್ತದೆ. ನಂತರ ಅದರ ಶಕ್ತಿ ಮೊದಲಿಗಿಂತ ದ್ವಿಗುಣಗೊಳ್ಳುತ್ತದೆ. ಆಗ ಕೇವಲ ಅಮರಾವತಿ ರಾಜ ವಂಶಸ್ಥರು ಮಾತ್ರ ಅದನ್ನು ಬಳಸಲು ಸಾಧ್ಯ. ಕಿರುಗತ್ತಿಯ ಶಕ್ತಿ ಮರಳುವ ಮುನ್ನ ಅದು ನಿಮ್ಮ ಕೈಸೇರಿದರೆ ಮಾತ್ರ ನಿಮ್ಮ ಜಗತ್ತನ್ನು ಜಯಿಸುವ ಕನಸು ಈಡೇರಲು ಸಾಧ್ಯ...?!'' ಹೇಳಿದರವರು.


''ಆದರೆ ಗುರುಗಳೇ ಆ ಕಿರುಗತ್ತಿ ಈಗ ಅಮರಾವತಿಯ ಯುವರಾಜ ರೇಯಾಂಶುವಿನ ಕೈಯ್ಯಲ್ಲಿದೆ. ಅವನು ಎಲ್ಲಿದ್ದಾನೆಂಬುದು ನಮಗೆ ಗೊತ್ತಿಲ್ಲವಲ್ಲ..!!

ಮತ್ತೆ ಹೇಗೆ ಕಿರುಗತ್ತಿಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲು ಸಾಧ್ಯ...?'' ಕೇಳಿದ ರಾಜ ಜರ್ನವ್.


''ಅದಕ್ಕೇ ಹೇಳಿದ್ದು ನಾನು ಮಹಾರಾಜ, ಅವಕಾಶ ತಾನಾಗೇ ಒದಗಿ ಬಂದಿದೆಯೆಂದು''


''ಅಂದರೆ..?

ನಮಗೆ ಅರ್ಥವಾಗಲಿಲ್ಲ, ಗುರುಗಳೇ..?'' ನುಡಿದ ರಾಜ.


''ಇಂದು ಅನ್ಯಾಹುಣ್ಣಿಮೆ. ಈ ದಿನ ರಾತ್ರಿ, ಅಮರಾವತಿ ರಾಜ ವಂಶಸ್ಥರು ಎಲ್ಲೇ ಇದ್ದರೂ ಅಮರಬೆಟ್ಟದಲ್ಲಿರುವ ಅನಾಯಾ ದೇವತೆ ಮಂಟಪಕ್ಕೆ ಬರಲೇಬೇಕು. ಅಲ್ಲಿ ಪೂಜೆ ನೆರವೇರಿಸಲೇಬೇಕು..! ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅದನ್ನು ಯುವರಾಜ ಕೂಡಾ ಮರೆಯಲಾರರು'' ನುಡಿದರು ಪ್ರಧಾನಮಂತ್ರಿ ಮಾರೇಶ್.


''ಸರಿಯಾಗಿ ಹೇಳಿದಿರಿ ಪ್ರಧಾನಮಂತ್ರಿಗಳೇ.

ಮಹಾರಾಜ, ಇಂದಿನ ರಾತ್ರಿ ಯುವರಾಜ ಎಲ್ಲೇ ಇದ್ದರೂ..ಅನಾಯಾ ದೇವತೆ ಪುಣ್ಯಸ್ಥಳಕ್ಕೆ ಆ ಶಕ್ತಿಶಾಲಿ ಕಿರುಗತ್ತಿಯೊಂದಿಗೆ ಬಂದೇ ಬರುತ್ತಾರೆ. ಅವರು ಬರೋ ಮೊದಲು ನಾವೇ ಅಲ್ಲಿ, ಪಹರೆ ಹಾಕಿ ಕಾದರೆ.. ಕಿರುಗತ್ತಿ ಜೊತೆ ಜೊತೆಗೆ ಯುವರಾಜನನ್ನು ಸೆರೆಹಿಡಿದು, ರಾಜ್ಯದ ಜನರ ಮಹತ್ವಕಾಂಕ್ಷೆಯನ್ನು ಶಾಶ್ವತವಾಗಿ ಅಂತ್ಯಗೊಳಿಸಬಹುದು.."


ಗುರು ಮತ್ತು ಪ್ರಧಾನಮಂತ್ರಿಯ ಮಾತುಗಳು ರಾಜ ಜರ್ನವ್'ಗೂ ಸರಿಯೆನಿಸಿ ಅವರ ಮಾತಿಗೆ ಒಪ್ಪಿಕೊಂಡ.


''ಯುವರಾಜ, ನಾವು ಮುಂದೆ ಹೋಗಬೇಕೆಂದೂ.. ಗುರುಗಳು ಸಮಯಕ್ಕೆ ಸರಿಯಾಗಿ ಅನಾಯಾ ದೇವತೆ ಪುಣ್ಯಸ್ಥಳಕ್ಕೆ ತಲುಪುತ್ತೇವೆ ಎಂಬುದನ್ನು ತಿಳಿಸುವಂತೆ ಆದೇಶವಿದೆ'' ನುಡಿದ ಜೊವಿನ್.


''ಹಾಗಿದ್ದಲ್ಲಿ ನಾವು ಹೊರಡೋಣ..'' ಮುಂದೆ-ನಡೆದ ರೇಯಾಂಶುವನ್ನು ಹಿಂಬಾಲಿಸಿದರು ಉಳಿದವರು. ಒಟ್ಟು ಐದು ಜನ.


''ರಾಜ ಜರ್ನವ್ ಜನರು ಈಗಾಗಲೇ ಅಲ್ಲಿ ನಮಗಾಗಿ ಕಾಯುತ್ತಿರಬಹುದು. ಹಾಗಾಗಿ ಹುಷಾರಾಗಿರಿ...'' ಅವನ ಮಾತಿಗೆ ಹ್ಞೂಂಗುಟ್ಟಿದರು ಎಲ್ಲರೂ.


ಹೆಜ್ಜೆ ಸಪ್ಪಳ ಕೇಳುತ್ತಲೇ... ಮೈಯೆಲ್ಲಾ ಕಣ್ಣಾಗಿ ಎದ್ದು ನಿಂತರು ಸೈನಿಕರು. ರೇಯಾಂಶು ಮತ್ತು ಉಳಿದವರನ್ನು ಜೀವಂತವಾಗಿ ಸೆರೆ ಹಿಡಿಯುವಂತೆ ಸೂಚಿಸಿದ್ದರು. ಮಂಟಪದೊಳಗೆ ಕಾಲಿಡುತ್ತಲೇ ಸುತ್ತುವರಿದಿದ್ದರು ಸೈನಿಕರು.


''ನೀವು ಹೇಳಿದಂತೆ ಆಯಿತು ಯುವರಾಜ'' ಪಿಸುಗುಟ್ಟಿದ ನುಮೈರ್.


''ನಿಮಗೆಲ್ಲಾ ಏನು ಮಾಡಬೇಕೆಂದು ತಿಳಿದಿದೆ ತಾನೇ.?'' ಕೇಳಿದ ರೇಯಾಂಶು.


''ನೀವೇನೂ ಹೆದರಬೇಡಿ ಯುವರಾಜ. ನಿಮ್ಮ ಮತ್ತು ಈ ಶಕ್ತಿಶಾಲಿ ಕಿರುಗತ್ತಿಯ ರಕ್ಷಣೆ ನಮ್ಮ ಹೊಣೆ. ನೀವೆಲ್ಲಾ ಮೂಗು ಮುಚ್ಚಿಕೊಳ್ಳಿ..'' ನುಡಿದಳು ಮರ್ವಾ.


''ಆದರೆ ನೀವೂ ಎಚ್ಚರವಾಗಿರಿ'' ಅವನು ಬಾಯ್ಮುಚ್ಚುವುದಕ್ಕೂ, ಮರ್ವಾ ತಾನು ಸಂಶೋಧಿಸಿದ್ದ ವಿಷಯುಕ್ತ ಔಷಧಿ ಹುಡಿಯನ್ನು ಗಾಳಿಯಲ್ಲಿ ಎಸೆಯುವುದಕ್ಕೂ ಸರಿ ಹೋಗಿತ್ತು. ಸುತ್ತುವರಿದಿದ್ದವರು ವಿಷಗಾಳಿ ಉಸಿರ ಮೂಲಕ ದೇಹದೊಳಗೆ ಸೇರುತ್ತಲೇ ಬುಡ ಕಡಿದ ಬಾಳೆಗಿಡದಂತೆ ನೆಲಕ್ಕುರುಳಿದ್ದರು.


ರೇಯಾಂಶು ಮಂಟಪದೊಳಗೆ ನಡೆದರೆ ಉಳಿದವರು.. ಕಾವಲು ನಿಂತರು.

ಹತ್ತು ನಿಮಿಷಕ್ಕೆಲ್ಲಾ ಮತ್ತಷ್ಟು ಸೈನಿಕರು ರಾಜನ ಜೊತೆಗೆ ಅಲ್ಲಿಗೆ ಆಗಮಿಸಿದ್ದರು. ಅಷ್ಟರಲ್ಲಿ ಕೈಯ್ಯಲ್ಲಿದ್ದ ಕಿರುಗತ್ತಿ ದೇವತೆಯ ಪಾದಚರಣದಲ್ಲಿಟ್ಟು ಧ್ಯಾನದಲ್ಲಿ ಲೀನವಾಗಿದ್ದ ರೇಯಾಂಶು.


''ಮಹಾರಾಜ ಕಿರುಗತ್ತಿ ತನ್ನ ಶಕ್ತಿ ಕಳೆದುಕೊಳ್ಳುವ ಸಮಯ ಸನ್ನಿಹಿತವಾಗಿದೆ. ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಿ'' ಮಂತ್ರಿಯ ಎಚ್ಚರಿಕೆ ಕೇಳಿ ಅತ್ತ ಓಡಿದ ಅವನು.


ಆದರೆ ಅಷ್ಟರಲ್ಲಿ ತಡವಾಗಿತ್ತು. ರಾಜಗುರುಗಳ ಆಗಮನವಾಗಿ ಮಂಟಪದೊಳಗೆ ಹೊರಗಿನವರಾರು ಹೋಗದಂತೆ ದಿಗ್ಬಂಧನ ಹಾಕಿ ಬಿಟ್ಟಿದ್ದರು. ಅದು ಶಕ್ತಿಶಾಲಿ ದಿಗ್ಬಂಧನವಾದ ಕಾರಣ ಅದರ ಶಕ್ತಿ ಕಡಿಮೆಯಾಗದೆ... ಹೊರಗಿನಿಂದ ಒಳಗೆ ಮತ್ತು ಒಳಗಿನಿಂದ ಹೊರಗೆ ಹೋಗಲು ಯಾರಿಗೂ ಸಾಧ್ಯವಿರಲಿಲ್ಲ.


ಆ ಒಂದು ಕಾರಣದಿಂದ ರೇಯಾಂಶು ಒಳಗೆ ಉಳಿದು ಬಿಟ್ಟರೆ ವನ ಗೆಳೆಯರು ಹೋರಾಡುತ್ತಲೇ ಹೊರಗೆ ಒಬ್ಬೊಬ್ಬರಾಗೇ.. ಅಸುನೀಗತೊಡಗಿದ್ದರು.


''ಗುರುಗಳೇ, ಇದೇನು ಮಾಡಿಬಿಟ್ಟಿರಿ? ಇದನ್ನು ಈಗಲೇ ತೆಗೆಯಿರಿ.. ನಾನು ಗೆಳೆಯರನ್ನು ಕಾಪಾಡಬೇಕು'' ಒಳಗಿನಿಂದ ಚೀರಾಡಿದ ರೇಯಾಂಶು.


''ಇಲ್ಲ, ಯುವರಾಜ. ಇದರ ಶಕ್ತಿ ಮುಂದಿನ ಹುಣ್ಣಿಮೆಯವರೆಗೆ ಹೀಗೇ ಇರುತ್ತದೆ. ಅಲ್ಲಿಯವರೆಗೆ ನೀವೂ..ಇಲ್ಲೇ ಬಂಧಿತರಾಗಿರಬೇಕಾಗುತ್ತದೆ. ನನ್ನನ್ನು ಕ್ಷಮಿಸಿ, ನಿಮ್ಮನ್ನು ಕಾಪಾಡಲು ಮತ್ತು ಆ ಶಕ್ತಿಶಾಲಿ ಕಿರುಗತ್ತಿ ದುಷ್ಟರ ವಶವಾಗದಂತೆ ತಡೆಯಲು ಇದೊಂದೇ ಮಾರ್ಗ'' ಹೇಳಿದರು ಗುರುಗಳು. ಆದರೆ.. ಹಿಂದಿನಿಂದ ಬಂದ ಬಾಣವೊಂದು ಅವರೆದೆ ಸೀಳಿ, ಇನ್ನು ಏನೋ ಹೇಳಬೇಕು ಎಂದುಕೊಂಡಿದ್ದ ಮಾತುಗಳು ಅವರ ಗಂಟಲಲ್ಲೇ ಉಳಿದುಕೊಂಡಿತು.


ರಾಜ ಜರ್ನವ್ ಕಿರುಗತ್ತಿ ಸಿಗದ ಹತಾಶೆ.. ಕೋಪದಿಂದ ಎದುರಿಗೆ ಬಂದವರನ್ನೆಲ್ಲಾ ಸಾಯಿಸಿ... ರಾಜ್ಯಕ್ಕೆ ಹಿಂದುರುಗಿದ್ದ.


ಮುಂದಿನ ಹುಣ್ಣಿಮೆಗೆ ಕಾಯುತ್ತಾ... ರಾಜ್ಯದ-ಜನರು ರೇಯಾಂಶು.. ಹಾದಿ ಕಾಯುತ್ತಿದ್ದರೆ, ರಾಜ ಕೂಡಾ ಕಿರುಗತ್ತಿಗಾಗಿ ಮುಂದಿನ ಹುಣ್ಣಿಮೆಯನ್ನು ಎದುರು ನೋಡುತ್ತಿದ್ದಾನೆ. 


ಅಂತ್ಯವಿಲ್ಲದ ಕಥೆಗೆ... ಚಂದದೊಂದು ಶೀರ್ಷಿಕೆ ಕಿರುಗತ್ತಿ ಯಾರ ಪಾಲಿಗೆ..?!


ಮುಗಿಯಿತು.








Rate this content
Log in

Similar kannada story from Abstract