Ramesh gundmi

Abstract Fantasy Thriller

5  

Ramesh gundmi

Abstract Fantasy Thriller

ಬಾಗಿಲು ತೆರೆದೇ ಇತ್ತು!

ಬಾಗಿಲು ತೆರೆದೇ ಇತ್ತು!

4 mins
684


" ರೀ, ಪೇಟೆಯಿಂದ ಬರ್ತಾ, ತೊಟ್ಟಿಲಲ್ಲಿ ಹಾಕಲಿಕ್ಕೆ ಒಂದೆರಡು ಚೌಕಾ ತನ್ನಿ, ಮಳೆಗಾಲ, ಬೇಗ ಒಣಗೊಲ್ಲ" ಹೇಳಿದಳು ಕಲ್ಯಾಣಿ ತನ್ನ ಗಂಡ ದೇವರಾಯನಿಗೆ ಮಗು ಗಂಗಾ ಸಲುವಾಗಿ.


"ಆಯ್ತು, ಬೇರೇನಾದ್ರೂ ಬೇಕಿದ್ರೂ ಹೇಳಿಬಿಡು"


"ಇಲ್ಲ ಏನೂ ಬೇಡ" ಎನ್ನುತ್ತಾ 


ತೊಟ್ಟಿಲೂ ತೂಗೇನು

ಜೋಗುಳವ ಹಾಡೇನು

ಮಲಗಮ್ಮ ಮಗಳೇ ಗಂಗಮ್ಮಾ.


ಮಲಗಮ್ಮ ಮಗಳೇ ಗಂಗಮ್ಮಾ.

ಮನೆತುಂಬ ಕೆಲಸಾ ಬಿದ್ದಯ್ತಿ..

ಜೋ...ಜೋ... ಜೋ...ಲಾಲಿ... ಓ


ಎನ್ನುತ್ತಾ ಮಗುವನ್ನು ತೊಟ್ಟಿಲಲ್ಲಿ ಹಾಡಿ ಮಲಗಿಸುತ್ತಿದ್ದಳು.


ಮನೆಯಲ್ಲಿ ಗಂಡ ಹೆಂಡತಿ ಐದು ತಿಂಗಳ ಮಗುವಷ್ಟೇ. 

ಗಂಡ ದೇವರಾಯನೂ ತುಂಬಾ ಸಂಪನ್ನ. ತಾನಾಯಿತು, ತನ್ನ ತೋಟದ ಕೆಲಸವಾಯಿತು, ಮನೆಗೆ ಬಂದರೆ ಹೆಂಡತಿ.

ದೈವಭಕ್ತ ಕೂಡ ಹೌದು. ಧರ್ಮಸ್ಥಳ ಮಂಜುನಾಥಸ್ವಾಮಿ ಅವನ ಮನೆಯ ಆರಾಧ್ಯ ದೇವರು.


ವರ್ಷದಲ್ಲಿ ಒಂದು ಸಾರೆಯಾದರೂ ಕ್ಷೇತ್ರಕ್ಕೆ ಹೋಗದೇ ತಪ್ಪಿಸಿದ್ದಿಲ್ಲ. ಮತ್ತೇನು ಮನಸ್ಸಿಗೆ ತೊಂದರೆ ಅನ್ನಿಸಿದರೂ ಧರ್ಮಸ್ಥಳಕ್ಕೆ ಹೋಗಿ ಬಂದರೆ ಸಮಾಧಾನವೆನ್ನಿಸುತ್ತಿತ್ತು. ಬಹಳಷ್ಟು ಸಾರೆ ತೊಂದರೆ ನಿವಾರಣೆಯೇ ಆಗುತ್ತಿತ್ತು. ಹಾಗಾಗಿ ಅವನು ಎಲ್ಲ ಭಾರವನ್ನೂ ಮಂಜುನಾಥನ ಮೇಲೆ ಹಾಕಿ ಧೈರ್ಯದಿಂದಿರುತ್ತಿದ್ದ.


ಗಂಗಾ "ಅಮ್ಮಾ" ಅನ್ನಲು ತೊಡಗಿದಾಗ ಕಲ್ಯಾಣಿ ಖುಷಿಯಿಂದ ಉಬ್ಬಿ ಹೋದಳು.

ಹೌದು, ತಾಯಿಗೆ ತನ್ನ ಮಗು ಅಮ್ಮಾ ಎಂದು ಕರೆಯುವದ ಕೇಳುವ ಸಂಭ್ರಮ ವರ್ಣಿಸಲಸದಳ. ಹಾಗೆ ಕಲ್ಯಾಣಿ ಮನ ಮಳೆ ಬಂದಾಗ ನವಿಲಿನ ಪರಿ ಆಯಿತು. ಮನವು ಮುದದಿಂದ ನಲಿದಾಡಿತು, ಕುಣಿದಾಡಿತು. 

ಮಗಳನ್ನು ಮತ್ತೆ ಮತ್ತೆ ತಬ್ಬುತ್ತಾ ಮುತ್ತಿಟ್ಟಳು. ಗಂಡ ಬಂದಾಗ, ನೆರೆಮನೆಯ ಸಾವಿತ್ರಿಯಲ್ಲಿ ಕಣ್ಣಿನಲಿ ಖುಷಿಯ ಚಿಮ್ಮಿಸುತ್ತ ಹೇಳಿದ್ದೇ ಹೇಳಿದ್ದು. ಒಂಟಿ ಚೆನ್ನಕ್ಕನಿಗೂ ಹೇಳಿದಳು. ಅವಳಿಗೆ ಮತ್ತೆ ಲೋಟ ಸಕ್ಕರೆ ಲೋಟ ಬೇಳೆ ತೆಗೆದುಕೊಳ್ಳಲು ದಾರಿಯಾಯಿತು.


ಮಗಳು ಹಾಗೆಯೇ ದೊಡ್ಡವಳಾಗುತ್ತ ಸುಮಾರು ಐದಾರು ವರ್ಷದವಳಾದಳು.


ಮಗಳಿಗೆ ಕುಳ್ಳಿರಿಸಿ ಅಕ್ಷರ, ಅಂಕೆ, ದೇವರ ಹಾಡು ಕಥೆ ಏನೆಲ್ಲಾ ಹೇಳುತ್ತಾ ದಿನಕಳೆಯುವುದರಲ್ಲಿ ಎಷ್ಟೋ ನಿತ್ಯದ ಕೆಲಸ ಮರೆತು ಗಡಿಬಿಡಿಯಲ್ಲಿ ಮಾಡುತ್ತಿದ್ದುದುಂಟು.

ಗಂಡ ದೇವರಾಯನಂತೂ ಇವಳ ಮಗಳ ಪ್ರೀತಿಯಲಿ ಮರೆಯುವುದ ತಿಳಿದು ನಕ್ಕು ಬಿಡುತ್ತಿದ್ದುದೇ ಹೆಚ್ಚು.


ದಿನಗಳು ಹೀಗೆಯೇ ಉರುಳುತ್ತಿದ್ದವು.

ಒಮ್ಮೆ ಬೆಳಿಗ್ಗೆ ಅದೇನೋ ಮೂರು ರಸ್ತೆ ಕೂಡುವಲ್ಲಿ ಕುಂಕುಮ ಲಿಂಬೆಹಣ್ಣು ದಾಟಿ ಬಂದ ನೆವವಾಗಿ ಕಲ್ಯಾಣಿ ಸೊರುಗುತ್ತ ಕೃಶಳಾಗುತ್ತ ಇರುವುದನ್ನು ಎಷ್ಟೆಲ್ಲಾ ಕಡೆ ಡಾಕ್ಟರಿಗೆ ತೋರಿಸಿದರೂ ಏನೂ ಮಾಡಲಾಗಲಿಲ್ಲ.

ದೇವರಾಯ ದಿಕ್ಕು ತಪ್ಪಿದಂತಾಗಿ ದೇವರಿಗೆ ಮೊರೆಯಿಟ್ಟದ್ದೂ ಆಯಿತು. ಏನೆಲ್ಲ ಮಾಡಿದರೂ ಏನೂ ಪ್ರಯೋಜನವಿಲ್ಲದಾಯಿತು.

ಕಲ್ಯಾಣಿಗೆ ತನ್ನ ದಿನ ಮುಗಿಯಿತು ಅನ್ನಿಸಿರಬೇಕು, ಮಗಳನ್ನು ಕರೆದು ತಲೆ ನೇವರಿಸುತ್ತ, ಅವಳ ಮುಖವನ್ನು ಬಗ್ಗಿಸಿ ಮುತ್ತಿಟ್ಟು, ಕಣ್ಣಲಿ ಕಣ್ಣಿಟ್ಟು ಗಂಡ ದೇವರಾಯನ ಕೈಲಿ ಮಗಳ ಕೈಯಿರಿಸಿದಳು. ಸಣ್ಣಗೆ ನಗುಮುಖವಿದ್ದರೂ ನೋವು ಕಾಣುತ್ತಿತ್ತು. ಅಷ್ಟೇ, ಕಲ್ಯಾಣಿ ಮಾತ್ರ ಮಗಳಿಗೆ ಅಮ್ಮ ಇಲ್ಲದಂತೆ ಮಾಡಿ ನಡದೇ ಬಿಟ್ಟಳು.


ದೇವರಾಯನದು ಹೆಣ್ಣಿನ ಕರುಳು. ಸಿಕ್ಕಾಪಟ್ಟೆ ಒದ್ದಾಡುತ್ತ ಅತ್ತುಬಿಟ್ಟ. ಆದರೇನು? ಹೋದ ಜೀವ ಹೋಗಿಯೇ ಬಿಟ್ಟಿತು. ತಂದೆಯನ್ನು ನೋಡಿದ ಗಂಗಾ ಕೂಡ ಅತ್ತುಬಿಟ್ಟಳು, ಅವಳಿಗೆ ಅಮ್ಮ ಸತ್ತರು ಅಂದದ್ದು ಅರ್ಥವಾಗದಿದ್ದರೂ.


ಕಲ್ಯಾಣಿಯ ಅಂತ್ಯಕ್ರಿಯೆಯಾದಿಯಾಗಿ ಎಲ್ಲ ಕೆಲಸ ಮುಗಿಸಿದ ದೇವರಾಯನಿಗೆ ಮಗಳನ್ನು ನೋಡಿಕೊಂಡು ತನ್ನ ತೋಟದ ಕೆಲಸವನ್ನೂ ನೋಡಿಕೊಳ್ಳುವುದು ಕಷ್ಟದಾಯಕವಾಯಿತು. ಅದಕ್ಕೆ ಯಾರಾದರೂ ಜನವನ್ನಿಟ್ಟು ತೋಟದ ಕೆಲಸ ನಿರ್ವಹಿಸುವುದೆಂದು ಸಾಕಷ್ಟು ಜನರಿಗೆ ಹೇಳಿ ಇಟ್ಟನು.


ಕೆಲಸಕ್ಕೆ ಕೇಳಿ ಬಂದವರು ಅಷ್ಟು ಯೋಗ್ಯರಾಗಿರದೇ ಏನು ಮಾಡುವುದೆಂದು ತೋಚದಿದ್ದಾಗ, " ನೋಡು ಏಳೆಂಟು ವರ್ಷದ ಹೆಣ್ಣು ಮಗುವನ್ನು ನೋಡಿಕೊಂಡಿರಲು ನಿನ್ನಿಂದ ಸಾಧ್ಯವಾಗೋದಿಲ್ಲ. ಅದಕ್ಕೆ ನೀ ಇನ್ನೊಂದು ಮದುವೆ ಮಾಡಿಕೋ. ಅಂಥ ದೊಡ್ಡ ವಯಸ್ಸೇನೂ ಅಲ್ಲ, ಅನ್ನುವ ಸಲಹೆ ಕೊಡುವುದರೊಂದಿಗೆ ತಮಗೆ ಗೊತ್ತಿದ್ದ ಒಂದು ಹುಡುಗಿಯ ಬಗ್ಗೆಯೂ ಹೇಳಿದರು.


ಮೊದಲಿಗೆ ಮತ್ತೆ ಮದುವೆ ಮಾಡಿಕೊಳ್ಳುವುದಿಲ್ಲ ಬೇಕಾದರೆ ನೋಡಿಕೊಂಡಿರಲು ಮನೆಯಲ್ಲಿರಲಿ ಅಂದರೆ, " ಹಾಗೆ ಯಾರೂ ವಯಸ್ಸಿನ ಹುಡುಗಿಯನ್ನು ಒಬ್ಬ ವಿಧುರನ ಮನೆಯಲ್ಲಿ ಬಿಡಲು ಒಪ್ಪುವುದಿಲ್ಲ ಅಂದಾಗ ದೇವರಾಯನಿಗೆ ಬೇರೇನೂ ಮಾಡಲಾಗದೇ ಮದುವೆಗೆ ಒಪ್ಪಿಕೊಳ್ಳುತ್ತಾನೆ. ಆದರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅದರಲ್ಲಿ ಕಡಿಮೆ ಮಾಡಬಾರದು ಅಂತೆಲ್ಲ ದೊಡ್ಡವರೆದುರು ಒಪ್ಪಿಸಿ ಮದುವೆಯಾಗುತ್ತಾನೆ. ಅವಳೇ ಗೋದಾವರಿ.


ಗೋದಾವರಿ ಗಂಗಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತ ದಿನಗಳು ಹೋಗುತ್ತಿರಲು, ಒಂಟಿ ಚನ್ನಕ್ಕ, ತನ್ನ ಲೋಟದ ವ್ಯವಹಾರ ಮಾಡುತ್ತ ಸಣ್ಣಗೆ ಗೋದಾವರಿಯ ಕಿವಿ ಚುಚ್ಚಲು ಪ್ರಾರಂಭಿಸಿದಳು. " ನೀನು ಹೀಗ್ ಮಾಡಿದ್ರೆ, ಆ ಹುಡ್ಗಿ ಚಾಕರಿ ಮಾಡಿ ಮಾಡಿ ಸಾಯ್ತಿ ಅಷ್ಟೇ. " ಅನ್ನುತ್ತ ಬೇಡ ಬೇಡದ ಕುಯುಕ್ತಿಯನ್ನೆಲ್ಲ ಹೇಳಿಕೊಟ್ಟಳು.


ಮೊದಮೊದಲು ಚನ್ನಕ್ಕಳ ಮಾತನ್ನು ಹಾಗೆಯೇ ಕೇಳಿ ಸುಮ್ಮನೇ ಬಿಡುತ್ತಿದ್ದ ಗೋದಾವರಿಗೂ ಅವಳು ಹೇಳಿದ್ದರಲ್ಲಿ ಸತ್ಯವಿದೆ ಅನ್ನಿಸತೊಡಗಿತು. 


ಮನುಷ್ಯನ ಸಾಮಾನ್ಯ ಗುಣವೆಂದರೆ ಯಾರಾದರೂ ತಮಗೆ ಬೇಕಾದಂತೆ ಅಥವಾ ಅನುಕೂಲವಾಗಿ ಕಾಣುವಂತೆ ಮಾತಾಡಿದರೆ ಅವರ ಮಾತು ರುಚಿಸತೊಡಗುತ್ತದೆ.


ಇಲ್ಲಿಯೂ ಹಾಗೆಯೇ ಆಯಿತು. ಚೆನ್ನಕ್ಕ ತನ್ನ ಒಳ್ಳೇದಕ್ಕೆ ಹೇಳ್ತಿದ್ದಾಳೆ ಎಂದು ತಿಳಿದು ಅವಳು ಲೋಟದಲ್ಲಿ ಕೇಳಿದರೆ ಇವಳು ಗಿಂಡಿಯಲ್ಲಿ ಕೊಡುವಷ್ಟು ಧಾರಾಳಿಯಾಗಿ, ಚನ್ನಕ್ಕನ ಮಾತೆಂದ್ರೆ ಗೋದಾವರಿಗೆ ದೇವರ ಮಾತೇ ಅನ್ನುವಂತನಿಸಿ ಬಿಟ್ಟಿತು.


ನಿಧಾನದಲ್ಲಿ ಗಂಗಾಗೆ ತೊಂದರೆ ಕೊಡುವ ಮೊದಲ ಹೆಜ್ಜೆಯಾಗಿ ಅವಳಿಗೆ ಊಟ ಕೊಡುವುದರಲ್ಲಿ ಕೈ ಕಿರಿದು ಮಾಡಿ ಮಲತಾಯಿ ಧೋರಣೆ ತೋರಿದಳು.


ಅಂದೇ ರಾತ್ರಿ ಗೋದಾವರಿ ಮಲಗಿದಾಗ ಸಣ್ಣಗೆ ಹಾಡಿನ ಶಬ್ದ ಕೇಳಿದಂತಾಯಿತು. ಸುಮ್ಮನಿದ್ದರೆ ಯಾರೋ ಬೆಡ್ಶೀಟ್ ಎಳೆದಂತಾಯಿತು. ಲೈಟ್ ಹಚ್ಚಿ ನೋಡಿದರೆ, ಬೆಡ್ಶೀಟ್ ಒಂದು ಮಾರು ದೂರ ಬಿದ್ದಿತ್ತು. ನಿದ್ದೆ ಕಣ್ಣಲ್ಲಿ ಇರಬೇಕು ಅಂತ ಸುಮ್ಮನಾದಳು.


ಅಂದೇ ರಾತ್ರಿ, ಗಂಗಾಗೆ ಕನಸಲ್ಲಿ ಅಮ್ಮ ಬಂದು ಕರೆದಂತೆ ಅನ್ನಿಸಿತು. ಕಣ್ಣು ಬಿಟ್ಟಳು. ಪಕ್ಕದಲ್ಲೇ ಅಮ್ಮ ನಿಂತಿದ್ದಾಳೆ.

ತನ್ನ ತಲೆ ನೇವರಿಸುತ್ತಿದ್ದಾಳೆ! ಅಮ್ಮನ ಸನಿಹದ ಅನುಭೂತಿ ಆಗುತ್ತಿದೆ. ಅಪ್ಪನನ್ನು ಎಬ್ಬಿಸಲು ಕೈ ಹಾಕಲು ಹೋದರೆ ಕಲ್ಯಾಣಿ ಅವಳನ್ನು ತಡೆದು ಸುಮ್ಮನಿರುವಂತೆ ಹೇಳಿ, ಮತ್ತೆ ಬರುತ್ತೇನೆ ಅಂತ ಹೋಗಿಬಿಟ್ಟಳು

 ಎಲ್ಲ ಕನಸಿನಂತೆ ನಡೆದು ಹೋಯಿತು.


ಮತ್ತೆ ಎಂದಿನಂತೆ ಬೆಳಗಾಯಿತು. ಗೋದಾವರಿ ತಲೆಯಲ್ಲಿ ರಾತ್ರಿಯ ಬೆಡ್ಶೀಟ್ ವಿಚಾರವೇನೂ ಉಳಿದಿರಲಿಲ್ಲ. ಆದರೆ ಗಂಗಾ ಮಾತ್ರ ಅಮ್ಮ ಬಂದ ವಿಚಾರ ತಲೆಯಲ್ಲಿ ಇಟ್ಟುಕೊಂಡಿದ್ದಳು." ಚಿಕ್ಕಮ್ಮಾ, ನಿನ್ನೆ ಅಮ್ಮ ಕನಸಿನಲ್ಲಿ ಬಂದಿದ್ದಳು" ಅಂತ ಹೇಳಿದರೂ, 'ಏನೋ ಸುಮ್ಮನೇ ಹೇಳ್ತಾ ಇರಬೇಕು' ಅಂದುಕೊಂಡಳು. ಸಣ್ಣದಾಗಿ ಗಂಗಾಗೆ ಪಾತ್ರೆ ತೊಳೆಯಲಿಕ್ಕೆ ಹಾಕಿ, " ಅಪ್ಪನಿಗೆ ಹೇಳ್ಬೇಡಾ " ಅಂತಲೂ ಕಣ್ಣಲ್ಲೇ ಗದರಿದಳು. 


ಅದೇನೂ ಅಂಥ ದೊಡ್ಡ ಕೆಲಸ ಅಂದುಕೊಳ್ಳದೇ ಗಂಗಾ ಮಾಡಿದಳು. 


ಆದರೆ ಒಂಟಿ ಚನ್ನಕ್ಕ ಬಂದು, " ರಾತ್ರಿ ಚಿಲಕ ಹಾಕಿ ಮಲಗಿದ್ದೆ. ಬೆಳಿಗ್ಗೆ ಚಿಲಕ ತೆಗೆದಿತ್ತು, ಬಾಗಿಲೂ ತೆರೆದೇ ಇತ್ತು. ಸಧ್ಯ ನನಗೇನೂ ಆಗಲಿಲ್ಲ" ಅಂತ ಹೇಳುವಾಗ ಗಾಬರಿ ಎದ್ದು ಕಾಣುತ್ತಿತ್ತು.


ಗೋದಾವರಿ 'ಇವಳಿಗೆ ಅರವತ್ತು ಆಗ್ತಾ ಬಂತು. ಅರಳು ಮರಳಿರಬೇಕು ' ಅಂದುಕೊಂಡಳು.


ಆದರೆ ಪುನಃ ಇಂದು ರಾತ್ರಿ, ಗೋದಾವರಿಗೆ ಹಾಡು ಸ್ಪಷ್ಟವಾಗಿ ಕೇಳಿಸಿತು,


ತೊಟ್ಟಿಲೂ ತೂಗೇನು

ಜೋಗುಳವ ಹಾಡೇನು

ಮಲಗಮ್ಮ ಮಗಳೇ ಗಂಗಮ್ಮಾ.


ಮಲಗಮ್ಮ ಮಗಳೇ ಗಂಗಮ್ಮಾ.

ಮನೆತುಂಬ ಕೆಲಸಾ ಬಿದ್ದಯ್ತಿ..

ಜೋ...ಜೋ... ಜೋ...ಲಾಲಿ... ಓ


ಈಗ ಇದು ಕಲ್ಯಾಣಿಯೇ ಅನ್ನೋದು ಗೋದಾವರಿಗೆ ಅನ್ನಿಸಿಯೇ ಬಿಟ್ಟಿತು. ಅದರಲ್ಲೂ, ಬೆಳಿಗ್ಗೆ ಮಗಳಿಗೆ ಯಾವ ಪಾತ್ರೆ ತೊಳೆಯಲು ಹಾಕಿದ್ದಳೋ, ಅದರಲ್ಲೇ ಒಂದು ಪೆಟ್ಟೂ ಕೊಟ್ಟಿದ್ದಳು, ಅದೂ ಕಣ್ಣಿನ ಹತ್ತಿರವೇ.ಈಗ ಅವಳಿಗೆ ನೋವಾದರೂ ಕೂಗಲು ಬಾಯೇ ಬರಲಿಲ್ಲ.


ನೋವಿನಲ್ಲಿಯೇ ಲೈಟ್ ಹಚ್ಚಿ ನೋಡಿದರೆ, ಬೆಳಿಗ್ಗೆ ಗಂಗಾಗೆ ತೊಳೆಯಲು ಹಾಕಿದ್ದ ಪಾತ್ರೆ. ಈಗ ಪೂರ್ತಿ ಗೊತ್ತಾಯ್ತು, ತಾನೇನಾದರೂ ಇಲ್ಲದ ತೊಂದ್ರೆ ಗಂಗಾಗೆ ಕೊಟ್ಟ್ರೆ, ತನ್ನ ಸಾವೇ ಖಚಿತ ಅಂತ.


ಮರುದಿನ ಬೆಳಿಗ್ಗೆ ಅಲ್ಲಿ ಕೇರಿಲಿ ಸುದ್ದಿ. ಒಂಟಿ ಚನ್ನಕ್ಕನ ಮನೇಲಿ ಕೂಡ ಆ ಹಾಡು ಕೇಳಿತಂತ. ಚನ್ನಕ್ಕ ಈಗ ಹೌಹಾರಿ ಬಿಟ್ಟಿದ್ದಳು. ತಾನು ಗಂಗಾಗೆ ತೊಂದರೆ ಕೊಡಲು ಹೇಳಿ ಕೊಟ್ಟದ್ದಕ್ಕೆ ಹೀಗಾಗಿದೆ ಅಂತ ಗೊತ್ತಾಯ್ತು. ಆದರೆ ಯಾರಿಗೂ ಹೇಳಲಿಲ್ಲ. 


"ಗೋದಾವರಿ, ಗಂಗಾ ಸುದ್ದಿಗೆ ಹೋಗಬೇಡ" ತನಗಾದ ಹಾಡಿನ ಅನುಭವ ಹೇಳಿದಳು. ಈಗಂತೂ ಗೋದಾವರಿ 'ತಾನು ಏಕಾದರೂ ಈ ಚೆನ್ನಕ್ಕನ ಮಾತು ಕೇಳಿದೆನೋ ಅಂದುಕೊಂಡು ಥರಗುಟ್ಟಿ ನಡುಗಿದಳು.


ಈಗ ಎಲ್ಲ ತಾರುಮಾರಾಯಿತು. ಗಂಗಾಳನ್ನು ಈಗ ತುಂಬಾ ಪ್ರೀತಿಸತೊಡಗಿದಳು. ತನ್ನ ಮಗಳಾದರೂ ಅಷ್ಟು ಪ್ರೀತಿಸುತ್ತಿದ್ದಳೋ ಇಲ್ಲವೋ?


ಪ್ರತಿದಿನ ಗಂಗಾಳನ್ನು ಮಾತಾಡಿಸಿ ಹೋಗಲು ಕಲ್ಯಾಣಿ ಬರುತ್ತಿದ್ದುದನ್ನು ಗಂಗಾ ಈಗ ಹೇಳುತ್ತಿದ್ದರೆ, "ಹೌದು ಗಂಗಾ, ಅಮ್ಮಾ ಆದೋಳು ಮಕ್ಕಳನ್ನು ಯಾವಾಗಲೂ ಕಾಯ್ತಾ ಇರ್ತಾಳೆ" ಅಂತೆಲ್ಲ ಹೇಳುತ್ತಿದ್ದಳು. ಆದರೆ ಈ ವಿಷಯ ಅಪ್ಪನಿಗೆ ಹೇಳಬೇಡವೆಂದು ಕಲ್ಯಾಣಿಯೇ ಹೇಳಿದ್ದಳು.

ಗೋದಾವರಿ ಅಂತೂ ಹೇಳುವುದೇ ಇಲ್ಲ.


ಇದಾಗಿ ಎರಡು ದಿನದಲ್ಲಿಯೇ ಚನ್ನಕ್ಕ ಒಳಗೆ ಮಲಗಿದಲ್ಲಿಯೇ ಪ್ರಾಣ ಬಿಟ್ಟಿದ್ದಳು.


ವಯಸ್ಸಾಗಿತ್ತಲ್ಲ!!

ಆದರೆ ಬಾಗಿಲು ತೆರೆದೇ ಇತ್ತು!!!


ಮುಗಿಯಿತು.



Rate this content
Log in

Similar kannada story from Abstract