ಅಹಂ
ಅಹಂ
ಒಂದು ಉಪ ಕಥೆ - " "
ಒಮ್ಮೆ ಅರ್ಜುನ ಹನುಮನ ಹತ್ತಿರ ಹೇಳಿದ. ಲಂಕೆಗೆ ಹೋಗಲು ನೀವುಗಳು ಅಷ್ಟು ಕಷ್ಟ ಪಟ್ಟು ಕಲ್ಲುಗಳನ್ನ ಹೊತ್ತು ತಂದು ಸೇತುವೆ ಮಾಡಬೇಕಿತ್ತೆ. ನಿಮ್ಮ ರಾಮ ಬಿಲ್ಲು ವಿದ್ಯೆಯಲ್ಲಿ ಅಷ್ಟು ಗಟ್ಟಿಗ. ಅದರಲ್ಲೇ ಮಾಡಿ ಬಿಡ ಬಹುದಿತ್ತು. ನಾನಾದರೆ ಹಾಗೇ ಮಾಡುತ್ತಿದ್ದೆ ಎಂದ. ಬಾಣಗಳಲ್ಲಿ ನೀನೇನೋ ಮಾಡಬಹುದು. ಆದರೆ ಅದು ನಮ್ಮ ಕಪಿ ಸೇನೆಯ ಭಾರ ಹೊರಬೇಕಲ್ಲ ಅಂದಾಗ ಅರ್ಜುನನಿಗೆ ಕೋಪಬಂದು ಇಲ್ಲೇ ಈಗಲೇ ನೂರು ಅಡಿ ಉದ್ದದ ಸೇತುವೆ ನಿರ್ಮಾಣ ಮಾಡ್ತೀನಿ ನೀನೇ ಹೋಗಿ ತುಳಿದು ನೋಡು ಅಂದ. ಕ್ಷಣ ಮಾತ್ರದಲ್ಲಿ ಸಾವಿರಾರು ಬಾಣಗಳನ್ನ ಬಿಟ್ಟು ನಿರ್ಮಿಸಿ ಬಿಟ್ಟ. ಹನುಮಂತ ಪರೀಕ್ಷೆ ಮಾಡೋಣ ಅಂತ ರಾಮರಾಮ ಅಂತ ಧ್ಯಾನ ಮಾಡ್ತಾ ಹತ್ತಿದ. ಎಲ್ಲಾ ಮುರಿದೇ ಹೋಯ್ತು. ಅರ್ಜುನನಿಗೆ ಅವಮಾನವಾಯ್ತು. ಅದೇ ಸಮಯಕ್ಕೆ ಅಲ್ಲಿಗೆ ಕೃಷ್ಣ ಬಂದ. ಇಬ್ಬರೂ ಏನು ಮಾಡ್ತಾ ಇದೀರಿ. ಸಮುದ್ರದಲ್ಲಿ ಏಕೆ ಇಷ್ಟೊಂದು ಬಾಣಗಳು ಮುರಿದು ಬಿದ್ದಿವೆ ಎಂದು ಕೇಳಿದ. ಇಬ್ಬರೂ ಸೇರಿ ನಡೆದದ್ದು ಹೇಳಿದರು. ಕೃಷ್ಣ ನಕ್ಕು, ನಿಮ್ಮಿಬ್ಬರ ಈ ವಿವಾದ ಬಗೆಹರಿಸಲು ಮೂರನೆಯವರ ಅವಶ್ಯಕತೆ ಇದೆ ಎಂದು ಹೇಳಿ ಅಲ್ಲೇ ಹತ್ತಿರದ ಆಶ್ರಮದಲ್ಲಿ ಇದ್ದ ಒಬ್ಬ ಋಷಿಯನ್ನು ಕರೆತಂದು ಇವರ ಮುಂದೆ ನಿಮ್ಮ
ವಾದ ಮಂಡನೆ ಆಗಲಿ ಎಂದ. ಅರ್ಜುನ ನೀನು ಮೊದಲಿನಂತೆ ಮತ್ತೆ ಬಾಣ ಬಿಟ್ಟು ಅದೇ ರೀತಿ ಸೇತುವೆ ನಿರ್ಮಿಸೆಂದ.
ಕೃಷ್ಣನಿಗೆ ನಮಸ್ಕಾರ ಪೂರ್ವಕವಾಗಿ ಪಾದದ ಬಳಿ ಒಂದು ಬಾಣ ಬಿಟ್ಟು. ಮೊದಲು ನಿರ್ಮಾಣ ಮಾಡಿದ್ದ ಸಮಯಕ್ಕಿಂತಲೂ ವೇಗವಾಗಿ ಮಾಡಿಬಿಟ್ಟ. ಹನುಮಂತ ಪರೀಕ್ಷೆ ಮಾಡುವ ಬರದಲ್ಲಿ ಹತ್ತಿ ಕುಣಿದಾಡಿದ. ಆದರೆ ಒಂದು ಬಾಣವೂ ಅಲುಗಾಡಲಿಲ್ಲ. ಹನುಮಂತನಿಗೂ ಬೇಸರವಾಯ್ತು. ಆ ಋಷಿಮುನಿಗೀನೋ ಇದರ ರಹಸ್ಯ ತಿಳಿಯಿತು. ಕೃಷ್ಣ ಸಹಾ ಇಬ್ಬರಿಗೂ ತಿಳಿಸಲಿಲ್ಲ. ಅದೇನೆಂದರೆ, ಮೊದಲು ಅರ್ಜುನ, ಸೇತುವೆ ನಿರ್ಮಾಣ ಮಾಡುವಾಗ ತನ್ನ ಗುರುವನ್ನಾಗಲಿ, ಕೃಷ್ಣನನ್ನಾಗಲಿ ನೆನೆಯಲಿಲ್ಲ. ಆಗ ಅವನಿಗೆ ಅಹಂ ಹೊಕ್ಕಿತ್ತು .ಹನುಮಂತ ರಾಮ ರಾಮ ಅಂತ ಧ್ಯಾನಮಾಡಿ ಕುಣಿದಿದ್ದ ಹಾಗಾಗಿ ಎಲ್ಲಾಮುರಿದು ಹೋಯ್ತು. ಅರ್ಜುನ ಮೊದಲ ಬಾಣವನ್ನ ಕೃಷ್ಣನ ಪಾದಗಳಿಗೆ ಅರ್ಪಿಸಿ ಸೇತುವೆಗೆ ಮುಂದಾದ. ಆಗ ಕೃಷ್ಣ ತನ್ನ ಮಾಯೆಯನ್ನ ಬಳಸಿ, ಅರ್ಜುನ ಬಾಣಗಳನ್ನ ಬಿಡುತ್ತಿದ್ದಾಗ, ತನ್ನ ಶಿಷ್ಯನನ್ನ ಕಾಪಾಡಲು ಸುದರ್ಶನ ಚಕ್ರ ವನ್ನ ಸೇತುವೆ ಕೆಳಗೆ ಇರಿಸಿದ್ದ. ಅಷ್ಟೇ ಅಲ್ಲದೆ ಹನುಮಂತ ಈ ಸಾರಿ ತನ್ನ ಬಲ ಪ್ರಯೋಗದಲ್ಲೇ ಹೆಚ್ಚು ಮಗ್ನನಾಗಿದ್ದ ಕಾರಣ ಆ ಕ್ಷಣ ರಾಮನನ್ನೇ ಮರೆತಿದ್ದುದೂ ಒಂದು ಕಾರಣ ವಾಯ್ತು.