Republic Day Sale: Grab up to 40% discount on all our books, use the code “REPUBLIC40” to avail of this limited-time offer!!
Republic Day Sale: Grab up to 40% discount on all our books, use the code “REPUBLIC40” to avail of this limited-time offer!!

JAISHREE HALLUR

Drama Tragedy Others

4  

JAISHREE HALLUR

Drama Tragedy Others

ಹೆಣ್ಣೆಂದರೆ ತಾತ್ಸಾರವೇಕೆ?--2

ಹೆಣ್ಣೆಂದರೆ ತಾತ್ಸಾರವೇಕೆ?--2

4 mins
406ಸೂಟ್ಕೇಸ್ ತಳ್ಳಿಕೊಂಡು ಗೇಟ್ ಒಳಗೆ ಬಂದು ಮನೆಯ ಕಾಲಿಂಗ್ ಬೆಲ್ ಒತ್ತಿದಳು ಅಪರ್ಣಾ..


ಬಾಗಿಲು ತೆರೆದ ಅಮ್ಮನ ಮುಖದಲ್ಲಿ ಹಲವು ಪ್ರಶ್ನೆಗಳ ಚಿನ್ಹೆ. 

ಮೌನವಾಗಿ ಅಮ್ಮನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದಳು. ಹೇಳಲಾಗದ ಭಾವನೆ ಆಕೆಗೆ ತಲುಪಿತ್ತು. 


ಹಿಂದೆ ಸರಿದು ..

' ಬಾ ಒಳಗೆ..' ಎಂದು, ಬಾಗಿಲು ಮುಚ್ಚಿದರು.


ಅಪ್ಪನ ದನಿ ಒಳಕೋಣೆಯಿಂದ ಹರಿದು ಬಂತು..


" ಯಾರದು ಬಂದದ್ದು?" 


" ನಿಮ್ಮ ಮುದ್ದಿನ ಮಗಳು, ಗಂಟುಮೂಟೆ ಕಟ್ಟಿಕೊಂಡು ಬೆಳಬೆಳಿಗ್ಗೆನೇ ಬಂದಿದ್ದಾಳೆ. ನೀವೇ ವಿಚಾರಿಸಿಕೊಳ್ಳಿ.." ಎಂದು ಅಲ್ಲೇ ಸೋಫಾಗೆ ಒರಗಿ ಕುಳಿತರು. 


ಅಪರ್ಣಾಗೆ ಏನು ಹೇಳಬೇಕೆಂದು ತೋಚದೆ, ಒಳಗೆ ನಡೆದಳು. 

ಅಪ್ಪನೆದುರು ನಿಂತು, " ನಾನು ನಿಮ್ಮ ಜೊತೆ ಒಂದಷ್ಟು ದಿನ ಇರಬೇಕೆಂದು ಬಯಸಿ ಬಂದೆ, ತಪ್ಪಾ?" ಕೇಳಿದಳು.


ಅವಳ ಮುಖದ ಭಾವ ತಂದೆಗೆ ಗೋಚರವಾದರೂ ಪ್ರಶ್ನಿಸದೇ, 

" ಮಗೂ, ಇದು ನಿನ್ನ ಮನೆ. ಯಾವಾಗ ಬೇಕಾದರೂ ಬಂದುಹೋಗು. ನಾವು ಯಾರೂ ಪ್ರಶ್ನಿಸೋಲ್ಲ. ತಿಳೀತಾ?, ಕುತುಕೋ, ಚಹಾ ಮಾಡಿ ತರ್ತೀನಿ..ಎಲ್ಲರೂ ಕುಡಿಯೋಣ" , ಎಂದ ಅಪ್ಪನ ಅಷ್ಟೇ ಉತ್ಸಾಹದ ನುಡಿಗೆ ಅಪರ್ಣಾ ಕೊಂಚ ಸಮಾಧಾನದ ಉಸಿರೆಳೆದುಕೊಂಡಳು..


ಚಹಾ ಕುಡಿಯುತ್ತಾ, ನಿಧಾನವಾಗಿ ಮಾತು ಶುರು. 

ಅಮ್ಮನ ನಯವಾದ ಮೂದಲಿಕೆ. 

"ಇದು ನಿನ್ನ ಮನೆಯಲ್ಲ ಕಣೆ, ಅದೇ ನಿನ್ನ ಮನೆ. ಮದುವೆ ಆದ ಮೇಲೆ , ನೀನು ಅವರ ಸ್ವತ್ತು. ಹೀಗೆ ಏನೋ ಎಡವಟ್ಟು ಮಾಡಿಕೊಂಡಿದ್ದರೆ ಈಗಲೇ ಸರಿಪಡಿಸಿಕೋ", ಅದನ್ನು ಹೆಚ್ಚು ಬೆಳೆಯಲು ಬಿಡಬೇಡವೆಂಬ ಬುದ್ಧಿವಾದ.


 ಅಪ್ಪನ ಮೌನ ಉತ್ತರ. 

ಅಪರ್ಣಾ ನಿಧಾನವಾಗಿ ನಡೆದ ಘಟನೆಗಳನೆಲ್ಲಾ ವಿವರಿಸಿ, ತನಗಾದ ಅವಮಾನದಿಂದ, ಅಲ್ಲಿ ನೆಮ್ಮದಿಯಿಲ್ಲದೇ ತವರಿಗೆ ಬಂದುದಾಗಿ ಹೇಳಿದಾಗ, ತಾಯಿಗೆ ಜಂಘಾಬಲವೇ ಉಡುಗಿತು..


ಪತಿಯೊಂದಿಗೆ, ..

" ನಾವು ಇವಳನ್ನು ಬೆಳೆಸುವುದರಲ್ಲಿ ಏನು ಕಮ್ಮೀ ಮಾಡಿದ್ವಿ? ಚೆನ್ನಾಗಿ ವಿಧ್ಯಾಭಾಸ ಮಾಡಿಸಿ, ಒಳ್ಳೆಯ ಶ್ರೀಮಂತ ಮನೆತನದಲ್ಲಿ ಚಂದದ ಹುಡುಗನಿಗೆ ಮದುವೆ ಮಾಡಿಕೊಟ್ವಿ. ಸುಖವಾಗಿರೋದು ಬಿಟ್ಟು ರಂಪರಾಮಾಯಣ ಮಾಡಿಕೊಂಡಿದ್ದಾಳೆ..ಎಲ್ಲಾ ನಿಮ್ಮ ಮುದ್ದಿಂದಲೇ ಇವಳು ಹಾಳಾದದ್ದು" ..ಎಂಬ ಕೊಂಕು..


ಅಮ್ಮನ ಮಾತು ಕಹಿ ಅನಿಸಿದರೂ, ಆ ದನಿಯಲ್ಲಿನ ಆತಂಕ, ನೋವು ಅಪರ್ಣಾಗೆ ಅರ್ಥವಾಗಿತ್ತು. ಎದುರಾಡುವ ಗೋಜಿಗೆ ಹೋಗಲಿಲ್ಲ. ಮೌನವೇ ಉತ್ತರ ಅವಳದು. 


ಇದೇ ನನಗೆ ಬಹಳ ಹಿಡಿಸಿದ್ದು..


ಗೆಳೆಯರೇ, ನಿಮಗೆ ನನ್ನ ಅಮ್ಮನ ಗಂಡನ ಮನೆಯ ಪ್ರಸಂಗವೊಂದನ್ನು ಹಂಚಿಕೊಳ್ಳಲೇಬೇಕೆಂದು ಅನಿಸುತ್ತಿದೆ..


ನನ್ನ ಹೆತ್ತಮ್ಮ, ತನ್ನ ಪುಟ್ಟ ವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದಾಗ, ತನ್ನ ಪತಿ, ಮೈದುನ ಮತ್ತು ಅವನ ಹೆಂಡತಿ..ಅಂದರೆ ವಾರಗಿತ್ತಿ, ಅತ್ತೆ, ಇಷ್ಟು ಜನರ ಒಟ್ಟು ಕುಟುಂಬದಲ್ಲಿ ಸಂಸಾರ ತೂಗಿಸಬೇಕಿತ್ತು. ಹಳ್ಳಿಯ ವಾತಾವರಣ, ರೈತರ ಉದ್ಯೋಗ, ಅತ್ತೆಯ ಕಾಟ, ಹೊಲಗದ್ದೆಗಳ ಚಾಕರಿ..ಇತ್ಯಾದಿ ಬಹಳ ಕಷ್ಟದ ದಿನಗಳೇ. ಹೀಗಿರುವಾಗ, ಒಮ್ಮೆ ಅಡಿಗೆಯಲ್ಲಿ ಉಪ್ಪು ಹೆಚ್ಚಾದ ಕಾರಣ, ಗಂಡ ಮತ್ತೆ ಸೇರಿ, ಈ ಇಬ್ಬರು ಸೊಸೆಯಂದಿರಿಗೆ ಪಾಠ ಕಲಿಸಲೆಂದು ತಟ್ಟೆಯ ಅನ್ನಕ್ಕೆ ಒಂದು ಹಿಡಿ ಉಪ್ಪು ಬೆರೆಸಿ ತಿನ್ನಲು ಹೇಳಿದ್ದರಂತೆ. ಅಷ್ಟು ಉಪ್ಪಿನಾಂಶದ ಊಟ ತಿನ್ನಲಾಗದೇ ಒದ್ದಾಡುತ್ತ ತಿಂದು ಮುಗಿಸಿ, ಬೆಳಗಿನ ಜಾವ ಮುಖಮೂತಿಯೆಲ್ಲಾ ಊದಿಸಿಕೊಂಡ ಘಟನೆ ಈಗಲೂ ನೆನಪಿಸಿಕೊಂಡು ಹೇಳುತ್ತಿರುತ್ತಾರೆ. ಇದು ಅಂದಿನ ಕಾಲ. ಈಗಲೂ ಏನೂ ಕಡಿಮೆಯಿಲ್ಲ. ಕೆಲವು ಗಂಡಂದಿರೂ ಅವಹೇಳನೆ ಮಾಡುತ್ತಾರೆ..ಆಗಾಗ ಚುಚ್ಚಿ ಮಾತಾಡೋದು , ಮನೆಗೆ ಬಂದವರೆದುರು ಕೊಂಕು ನುಡಿದು ಮರ್ಯಾದೆ ತೆಗೆಯೋದು..ಇತ್ಯಾದಿ ನಡೆಯುತ್ತವೆ. ಗೃಹಿಣಿ..ಓದುಬರಹ ತಿಳಿಯದವಳಾಗಿದ್ದರೆ, ಅವರದೇ ಮೇಲುಗೈ. ಅವಳೇನಾದರೂ ತಿರುಗಿಬಿದ್ದರೆ, ಆಡಬಾರದ ನುಡಿಗೆ ತುತ್ತಾಗಬೇಕಷ್ಟೇ. ಇದು ಪುರುಷಪ್ರಧಾನವಾದ ಸಮಾಜ. ನಾವು ಎಷ್ಟೇ ಮುಂದುವರಿದವರಾದರೂ ಸಹ, ಒಂದೆರಡು ಘಟನೆಗಳಲ್ಲಾದರೂ ಪಶುತ್ವದ ಬುದ್ದಿ ತೋರಿಸಿಯೇ ಇರ್ತಾರೆ...ಇದು ಸಹನೆಯ ಒಂದು ಮುಖವಷ್ಟೇ..


ನನ್ನ ತಾಯಿ ಅಂತಹ ಗುಂಪಿಗೆ ಸೇರಿದವರು. ಅಪ್ಪನ ಸಾವಿನ ಕೊನೇತನಕವೂ ಅಂಜಿ, ಅಳುಕಿದವರು, ನಾನೇ ಬಹಳಷ್ಟು ಸಲ, ಅಪ್ಪನಿಗೆದುರು ವಾದಿಸಿದ್ದುಂಟು...ನನಗಿಷ್ಟವಿಲ್ಲದ ವಿಷಯಕ್ಕೆ ನಾನೆಂದೂ ಸಮರ್ಥಿಸಿಕೊಂಡಿರಲಿಲ್ಲ. 


####


ಅಪರ್ಣಾಳ ಬದುಕೂ ಸಹ ಇದಕ್ಕೆ ಹೊರತೇನಾಗಿರಲಿಲ್ಲ. ಅವಳೂ ನನ್ನ ಹಾಗೇ ಧೈರ್ಯವಾಗಿ ಮನೆಬಿಟ್ಟು ಬಂದಿದ್ದಳು..ಇದು ತಪ್ಪು ನಿಜ. ಅದನ್ನು ಅಲ್ಲೇ ಬಗೆಹರಿಸಿಕೊಳ್ಳಬೇಕಿತ್ತು. ಅವನ ಕಪಾಳಕ್ಕೆ ತಿರುಗಿ ಕೊಟ್ಟಿದ್ದರೆ, ...ಎಂಬ ಅನಿಸಿಕೆಯಷ್ಟೇ..

ಆದರೆ, ಅದು ಹಾಗಾಗಲಿಲ್ಲ. ತಾನು ಬೆಳೆದ ವಾತಾವರಣ ಹಾಗಿಲ್ಲ. ಗಂಡನ ತಾಯಿ, ಇದನ್ನು ಮಗನಿಗೆ ಕಲಿಸಲಿಲ್ಲ. ಸುಸಂಸ್ಕೃತಿ ಬಾಲ್ಯದಿಂದ ಬರಬೇಕು. ವಯಸ್ಕರಾದ ಮೇಲೆ ಕಲಿಯಲು ಸಾಧ್ಯವಿಲ್ಲ ಎಂದು ಒಪ್ಪುತ್ತೀರಿ ತಾನೇ..


ಮಗಳ ಮನಸು ಸಮಾಧಾನವಾಗಲೆಂದು ತಂದೆ ವಿಷಯ ಬದಲಿಸಿದರು. ತಮ್ಮನಿಗೆ ಮದುವೆ ನಿಶ್ಚಯವಾಗಿದೆ. ಹುಡುಗಿ ಲಾಯರ್..ಇನ್ನೇನು ಹತ್ತಿರದಲ್ಲೇ ಮದುವೆ ಮುಹೂರ್ತವೆಂದಾಗ ಅಪರ್ಣಾಳಿಗೂ ಖುಷಿಯಾಯ್ತು..


ರಾತ್ರಿ ಊಟದ ಸಮಯ, ಎಲ್ಲರೂ ಒಟ್ಟಿಗೆ ಸೇರಿದಾಗ, ತಮ್ಮನ ಹೆಂಡತಿಯಾಗುವವಳನ್ನು ಮನೆಗೆ ಕರೆದು ಪರಿಚಯಿಸಿದ್ದ ತಮ್ಮನನ್ನು ಅಭಿನಂದಿಸಿದಳು. 


ಎಲ್ಲರೂ ಖುಷಿಯಲ್ಲಿದ್ದಾಗ, ವಿಷಯ ತಿಳಿದ ತಮ್ಮ ಅಕ್ಕನ ಮೇಲೆ ಕಿಡಿಕಾರಿದ. 

"ಇಷ್ಟು ಸಣ್ಣ ವಿಷಯಕ್ಕೆ ಹೊರಟುಬಂದೆಯಾ?, ಅದು ಸಾಮಾನ್ಯ ಎಲ್ಲರ ಸಂಸಾರದಲ್ಲಿ ನಡೆದೇ ಇರುತ್ತದೆ ತಾನೇ..? ಸಾವರಿಸಿಕೊಂಡು ಹೋಗೋದು ಬಿಟ್ಟು, ಹೀಗೆ ಬಂದರೇನು ಅರ್ಥ?.." ಎಂದು ಮೂದಲಿಸಿದ್ದ. 


ಒಮ್ಮೆಲೇ ವಾತಾವರಣ ಬಿಸಿಯಾಯ್ತು..

ಅಪ್ಪನೇ ಮಧ್ಯಸ್ತಿಕೆ ವಹಿಸಿ ಸಮಾಧಾನಿಸಿ, "ಒಂದೆರಡು ದಿನ ಇರಲಿ ಬಿಡು..ಅವಳ ಮನಸಿಗೂ ಕೊಂಚ ಬೇಸರವಾಗಿದೆ."..ಎಂದರು..


" ಅಂದರೆ, ನೀನು ಹೇಳುವುದೇನು ? ನಾನು ಏಟು ತಿಂದರೂ ಸಹಿಸಿಕೊಂಡು ಅಲ್ಲೇ ಇರಬೇಕಿತ್ತಾ..? ನನಗೂ ಸ್ವಾಭಿಮಾನ, ಬೆಲೆ ಏನೂ ಇಲ್ಲದೇ ಬದುಕು ಅಂತೀಯಾ?" 

ತಮ್ಮನಿಗೆ ಸವಾಲೆಸೆದಳು..


" ಮತ್ತಿನ್ನೇನು? ಯಾರಾದರೂ ಕೇಳಿಸಿಕೊಂಡರೆ, ನಮ್ಮ ಮರ್ಯಾದೆ ಮೂರುಕಾಸಿಗೆ ಹರಾಜಾಗೋದು ಗ್ಯಾರೆಂಟೀ. ಗಂಡನ್ನ ಬಿಟ್ಟು ಬಂದಿದ್ದಾಳೆ ಅಂತ.." ಅವನ ದನಿಯೇರಿತ್ತು..


ಅಪರ್ಣಾಗೆ ಮತ್ತಷ್ಟು ಅಪಮಾನ..

ಅದೂ ತನ್ನ ತಮ್ಮನ ಭಾವೀ ಪತ್ನಿಯೆದುರಿಗೆ...ಇದು ಬೇಕಿತ್ತಾ ತನಗೇ? ತಾನೇಕೆ ಇಷ್ಟು ಸಹಿಸಿಕೊಳ್ಳಬೇಕು? ಯಾವ ತಪ್ಪು ಮಾಡಿದೇಂತಾ ? ಸ್ವಂತ ಒಡಹುಟ್ಟಿದ ತಮ್ಮನೇ ಹೀಗೆ ಅರ್ಥವಾಗದೇ ನುಡಿದರೆ, ಮತ್ತೆ ನನ್ನ ನೋವನ್ನು ಯಾರು ಅರ್ಥ ಮಾಡಿಕೊಳ್ಳಬಲ್ಲರು?...ಅವಳ ಕಣ್ಣಲ್ಲಿ ಹನಿಜಿನುಗಿತು...


ಕವಿತಾ ..ಭಾವೀ ಪತ್ನಿ ಮಾತ್ರ, ಇದಕ್ಕೆ ಹೊರತಾಗಿದ್ದಳು...


ಭಾವೀ ಗಂಡನ ಮಾತನ್ನು ಅಲ್ಲಗಳೆದು, 

"ಅಕ್ಕಾ.., ನೀವು ಮಾಡಿದ್ದೇ ಸರಿ. ಏನೂ ಯೋಚನೆ ಮಾಡಬೇಡಿ...ಎಲ್ಲ ಸರಿಹೋಗುತ್ತದೆ. ಸ್ವಲ್ಪ ಕಾಲಾವಕಾಶ ಬೇಕು. ನೀವು ಆರಾಮಾಗಿರಿ ಒಂದಿಷ್ಟು ದಿನ. " ಎಂದು ಹೇಳಿದಾಗ, 


ಆಕೆಯ ಮೇಲೆ ಹರಿಹಾಯ್ದ ತಮ್ಮನ ವರ್ತನೆ ಎಲ್ಲ ಗಂಡಸರೂ ಒಂದೇ ಜಾತಿಗೆ ಸೇರಿದವರೆಂದು ಅಪರ್ಣಾಗೆ ಅನಿಸದಿರಲಿಲ್ಲ. 


ನಂತರ, ಅಮ್ಮನ ಆತಂಕ, ಅಪ್ಪನ ಕೆಂಗಣ್ಣು ಕಂಡು ಕವಿತಾಗೆ ಸಾರೀ.. ಹೇಳಿ ಮನೆಗೆ ಕಳಿಸಿಕೊಡ್ತಾನೆ...ಇದು ಇಂದಿನ ನಾಗರೀಕತೆಯ ಸಭ್ಯತೆ..


ಒಂದು ಹೆಣ್ಣು ಗಂಡನ ಮನೆಯಲ್ಲಿ ಅನುಭವಿಸಿದ ಕಷ್ಟವನ್ನು ತಾಯಿ ಅರಿತಿರಬೇಕು..ಇಲ್ಲಾ ಒಡಹುಟ್ಟಿದವರು ಅರ್ಥಮಾಡಿಕೊಳ್ಳಬೇಕು. ಇಬ್ಬರೂ ಅರಿಯದೇ ಹೋದರೆ ಅವಳ ಪಾಡು ನಾಯಿ ಪಾಡು...


ಅಪರ್ಣಾಳ ತಂದೆ ಎಷ್ಟು ಹೆಂಗರುಳು ಎಂದರೆ, ಯಾವತ್ತೂ ಹೆಣ್ಣು ಮಕ್ಕಳನ್ನು ನೋಯಿಸಿದವರಲ್ಲ..


ಥೇಟ್ ನನ್ನಪ್ಪನಂತೆಯೇ..


ಅವರೂ ಸಹ ನನ್ನ ಯಾವ ಬೇಡಿಕೆಯನ್ನೂ ಅಲ್ಲಗಳೆದವರಲ್ಲ. ಅಷ್ಟು ಪ್ರೀತಿ ವಾತ್ಸಲ್ಯ ತೋರಿದ್ದರು. ಅಮ್ಮ ಅದಕ್ಕೆ ತದ್ವಿರುದ್ಧವಾಗಿದ್ದರು..


******

ಎರಡು ದಿನ ಕಳೆದು, ಗಂಡ ವಿಕ್ರಂ ಮನೆ ಬಾಗಿಲು ಬಡಿದಾಗ, ಇವಳು ಮೌನವಾಗಿ ಅವನನ್ನೇ ದಿಟ್ಟಿಸಿದ್ದಳು..


ಅಪ್ಪ ಮಾತ್ರ ಚಹ ಮಾಡುವ ನೆಪದಲ್ಲಿ ಅಡಿಗೆ ಕೋಣೆಗೆ ನಡೆದದ್ದು, ಇವರುಗಳೇ ಬಗೆಹರಿಸಿಕೊಳ್ಳಲಿ ಎಂಬ ಆಶಯದಲ್ಲೇ...ಅಮ್ಮ ಹಾಲ್ಗೆ ಬರದೇ ತಪ್ಪಿಸಿಕೊಂಡರು..


ವಿಕ್ರಂ..ಮಾತ್ರ, ಏನೂ ನಡೆದೇ ಇಲ್ಲದಷ್ಟು ಕೂಲಾಗಿ, " ನಡೀ ಮನೆಗೆ, ಎರಡು ದಿನ ಆಯ್ತಲ್ಲಾ...? ಅಲ್ಲಿ ಅಮ್ಮನಿಗೆ ಕಷ್ಟ ಆಗುತ್ತೆ. ನಾನು ಆಫೀಸು ನಿಭಾಯಿಸೋದು ಕಷ್ಟ.." ಮತ್ತದೇ ರಾಗ...


" ಇಲ್ಲ, ನಾನೀಗಲೇ ಬರೋಲ್ಲ. ಸ್ವಲ್ಪ ಕಾಲಾವಕಾಶ ಬೇಕು.." ಅಪರ್ಣಾಳ ಅಹವಾಲು..


" ನೋಡು, ಹೀಗೆ ಹಠ ಒಳ್ಳೆದಲ್ಲ, ನನ್ನ ತಲೆ ಕೆಟ್ಟು ಕೆರ ಆಗಿದೆ. ಆಗಿದ್ದು ಆಗಿಹೋಯಿತು. ಏನು ಮಾಡೋಕಾಗುತ್ತೆ? ನೀನು ಬಾ ಈಗಲೇ..ನಾನು ಮಾಡೋದೆಲ್ಲಾ ನಿನಗೋಸ್ಕರ ತಾನೇ?" ಎಂದಾಗ, 


" ನನಗೋಸ್ಕರನಾ?, ನಿಮಗೆ ನಿಮ್ಮ ವೃತ್ತಿಯೇ ಹೆಚ್ಚಾಯಿತು. ಅದರ ಟೆನ್ಶನ್ ಮನೆವರೆಗೂ ತಂದು ಎಲ್ಲರ ನೆಮ್ಮದಿ ಹಾಳುಮಾಡೋದು ಯಾವ ನ್ಯಾಯ? ಹಾಗೆ ನೋಡಿದರೆ, ನಾನೂ ಇಷ್ಟು ದಿನ ಅದೇ ಅರ್ಥದಲ್ಲಿ ಬದುಕಿದ್ದೆ. ಅದೇ ಅರ್ಥದಲ್ಲಿ ಎಲ್ಲ ವಿಷಯದಲ್ಲೂ ಭಾಗಿಯಾಗಿದ್ದು ನಿಜ. ಯಾವತ್ತು ನನ್ನ ಮೇಲೆ ಕೈಮಾಡುವಷ್ಟು ಹೀನ ಮಟ್ಟಕ್ಕೇ ನೀವು ಇಳಿದಿರೋ..ಅಂದೇ ನನಗೆ ಎಲ್ಲವೂ ಸ್ಪಷ್ಟವಾಗಿ ಹೋಯ್ತು..ಇದು ಅಧಿಕಾರದ ಮಧ! ಶ್ರೀಮಂತಿಕೆಯ ಅಹಂ. ಗಂಡಸಿನ ದರ್ಪ . ಅದು ನನಗೆ ಅರ್ಥವಾಗಿರಲೇ ಇಲ್ಲ. ಯಾಕೆಂದರೆ, ನಾನು ನನ್ನ ಸುತ್ತಲಿರುವ ಭ್ರಮೆಯಲ್ಲಿ ಸಿಲುಕಿಕೊಂಡಿದ್ದೆ. ಅದರಿಂದ ಹೊರಬಂದ ಮೇಲಷ್ಟೇ ತಿಳಿಯಿತು..ನಿಜವಾದ ಸಂಗತಿ ಏನೆಂದು"...


" ಏನು ತಿಳಿದಿದೆ, ನಿನ್ನತಲೆ, ಸುಮ್ನೇ ಏನೇನೋ ಯೋಚನೆ ಮಾಡಿ ಜೀವನ ಹಾಳು ಮಾಡಿಕೋಬೇಡ..ಯೋಚನೆ ಮಾಡು ಇನ್ನೊಮ್ಮೆ.." ಅವನ ಮಾತಿಗೆ ಅವಳ ನಕಾರ...


ಒಳಗಿದ್ದ ಅಪ್ಪ ಚಹಾದ ಕಪ್ಪಿನೊಂದಿಗೆ ಬಾಗಿಲಲ್ಲೇ ತಡೆದು ಆಲಿಸಿದ್ದರು..


ಅಳಿಯ ಅಡಿಗೆ ಮನೆ ಬಳಿ ನಿಂತ ಮಾವನೆಡೆ ನೋಡಿ.." ನೀವಾದರೂ ಹೇಳಿ...ಈಗ ಏಂತಾದ್ದು ಆಗಿದೇಂತ? "


" ಹೌದಾ..? ಎಂತದ್ದೂ ಆಗೇ ಇಲ್ವಾ ಹಾಗಾದರೆ? ಅವಳು ಸುಮ್ನೇ ಬಂದದ್ದಾ ?" 


" ಹಂಗಲ್ಲ ಮಾವ, ಸಣ್ಣದೊಂದು ತಪ್ಪು ನಡೆದುಹೋಯಿತು. ಈಗ ಏನು ಮಾಡೋದು? ಅದನ್ನು ಸರಿಪಡಿಸೋಕಾಗುತ್ತಾ..?"


" ಆ ತಪ್ಪು ಯಾಕಾಯ್ತು..?"


" ಹೌದು, ನಾನು ಕುಡಿದಿದ್ದೆ, ರೇಗಿದ್ದು ನಿಜ. ಲಂಡನ್ ಹೋಗುವ ಆತುರ, ಎಲ್ಲಿ ಅವಕಾಶ ಕೈತಪ್ಪಿ ಹೋಗುತ್ತೋ ಅನ್ನುವ ಆತಂಕದಲ್ಲಿ ಒಂದೇಟು ಹೊಡೆದದ್ದು ನಿಜ. ಅದಕ್ಕೆ ಇಷ್ಟೊಂದು ಕೋಪ ಒಳ್ಳೆದಲ್ಲ..ಅಲ್ವಾ?"


" ಅದನ್ನು ಅವಳೇ ಹೇಳಬೇಕು,. ಅವಳೇ ಏಟು ತಿಂದವಳು. ಅವಮಾನ ಆಗಿರೋದು ಅವಳಿಗೆ. ಅವಳದೇ ತೀರ್ಮಾನ . ನಂದೇನಿದೇ..?"


ಮಾವನ ನುಡಿಯಿಂದ ಬಂದ ದಾರಿಗೆ ಸುಂಕವಿಲ್ಲದೇ ಹೊರನಡೆದ ವಿಕ್ರಂ....


ಇಂತಹ ಪ್ರಕರಣಗಳು ನಮ್ಮ ನಿಮ್ಮ ನಡುವಿನ ಎಷ್ಟೋ ಸಂಸಾರದಲ್ಲಿ ದಿನನಿತ್ಯ ನಡೆಯುತ್ತಲೇ ಇರುತ್ತವೆ. ಎಷ್ಟು ಜನ ಸಹಿಸಿಕೋತಾರೆ, ಎಷ್ಟು ಜನ ತಿರುಗಿಬೀಳ್ತಾರೆ. ಎಷ್ಟು ಜನರಿಗೆ ನ್ಯಾಯ ಸಿಗುತ್ತೇ ಎನ್ನೋದು..ನೀವೇ ಯೋಚಿಸಿ...


ಮುಂದಿನ ಭಾಗ...ನಂತರ .🙏🙏🙏🙏🙏🙏


Rate this content
Log in

More kannada story from JAISHREE HALLUR

Similar kannada story from Drama