STORYMIRROR

Shruthi Shetty

Drama Tragedy Classics

3.5  

Shruthi Shetty

Drama Tragedy Classics

ಸ್ನೇಹದಿಂದ ಪ್ರೇಮದೆಡೆಗೆ

ಸ್ನೇಹದಿಂದ ಪ್ರೇಮದೆಡೆಗೆ

4 mins
429




"ಚಿನ್ಮಯಿ ... ನಿಲ್ಲು.. ಓಡ್ಬೇಡ... ಪ್ಲೀಸ್ ನನ್ನ ಮಾತು ಕೇಳಮ್ಮ... ನೀನು ಹೀಗೆಲ್ಲಾ ಆಡಿದ್ರೆ ನಂಗೆ ಕೈಕಾಲೇ ಆಡಲ್ಲ ಕಣೇ.." ಎಂದು ಗೆಳತಿಯನ್ನು ಕೂಗುತ್ತಾ ಅವಳ ಹಿಂದೆ ಓಡುತ್ತಿದ್ದಳು ಸುಶ್ಮಿತಾ.


ಇವಳೆಷ್ಟು ಕೂಗಿದರೂ ಕಿವಿಗೆ ಹಾಕಿಕೊಳ್ಳದೆ ಒಂದೇ ಸಮನೆ ಓಡಿದ ಚಿನ್ಮಯಿ ಕಾಲೇಜಿನ ಮಹಡಿಯ ಜಗಲಿ ಮೇಲೆ ನಿಂತಿದ್ದಳು. ಕಣ್ಣೀರು ಒಂದೇ ಸಮನೆ ಸುರಿಯುತ್ತಿತ್ತು.


ಎಷ್ಟೇ ಜೋರು ಓಡಿದರೂ ಅವಳನ್ನು ತಲುಪಲು ಆಗಲಿಲ್ಲ ಸುಶ್ಮಿತಾಳಿಗೆ.

ಅವಳ ಹಿಂದೆ ಓಡುವಾಗ ಅದೃಷ್ಟವಶಾತ್ ಸುಶ್ಮಿತಾಳ ಕಣ್ಣಿಗೆ ಬಿದ್ದ ಅವರಿಬ್ಬರ ಬೆಸ್ಟ್ ಫ್ರೆಂಡ್ ಸುಧೀರ್. ತಡಮಾಡದೆ ಅವನನ್ನು ಕರೆದು ವಿಷಯ ತಿಳಿಸಿದಳು.


ತಕ್ಷಣ ಮಹಡಿಗೆ ಧಾವಿಸಿ ಬಂದವನಿಗೆ ಲೋಕದ ಪರಿವೇ ಇಲ್ಲದೆ.. ಕಣ್ಣೀರು ಸುರಿಸುತ್ತಾ ಮಹಡಿಯ ಜಗಲಿ ಮೇಲೆ ನಿಂತಿದ್ದ ಚಿನ್ಮಯಿ ಕಂಡಳು.


ಹೋದಜೀವ ಬಂದ ಹಾಗಾಯಿತು ಅವನಿಗೆ. ಅವಳ ಹಿಂದಿನಿಂದ ಹೋಗಿ ಕೆಳಗಿಳಿಸಿದವನು ಅವಳ ಕೆನ್ನೆ ಕೆಂಪಾಗಿಸಿದ್ದ ಒಂದೇ ಏಟಿನಲ್ಲಿ.


ಅವನ ಹೊಡೆತಕ್ಕೆ ಭ್ರಮೆಯಿಂದ ಹೊರಬಂದವಳು ಅವನ ತೆಕ್ಕೆಗೆ ಬಿದ್ದು ಜೋರು ಅಳಲು ಶುರುಮಾಡಿದಳು.

"ಸುಧೀ.... ರ... ರಮ್ಯಾ... "ಎಂದು ಜಗಳಿಯ ಕಡೆ ಕೈತೋರಿಸಿ ಅಳುತ್ತಲೇ ಇದ್ದಳು.


"ಚಿನ್ನು.... ನೋಡಿಲ್ಲಿ ನಿನ್ನ ನೋವು ಅರ್ಥ ಆಗುತ್ತೆ... ನಿನ್ನ ಹಾಗೇ ರಮ್ಯಾ ನಂಗೂ ಸುಶ್ಮಿತಾಗೂ ಗೆಳತಿನೇ ಅಲ್ವಾ... ಅವಳ ಸಾವು ನಮ್ಮನ್ನೂ ಕಂಗೆಡಿಸಿದೆ, ಅಳ್ಬೇಡ.... ಕಣೇ..." ಎಂದು ಸಂತೈಸಲು ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದ.


ಅಷ್ಟರಲ್ಲಿ ಏದುಸಿರು ಬಿಡುತ್ತಾ ಸುಶ್ಮಿತಾಳೂ ಅಲ್ಲಿಗೆ ಬಂದಳು.


ಬಂದವಳೇ... ಚಿನ್ಮಯಿಯನ್ನು ತಬ್ಬಿಕೊಂಡು ತಾನೂ ಅತ್ತಳು.


ಇಬ್ಬರ ಅಳು ನೋಡಿ ಸುಧೀರ್ ಕಣ್ಣಲ್ಲೂ ನೀರಿತ್ತು. ಇಬ್ಬರನ್ನೂ ತಬ್ಬಿ ತಾನೂ ಅತ್ತುಬಿಟ್ಟ.


ಸ್ವಲ್ಪ ಹೊತ್ತಲ್ಲಿ ಸುಧೀರ್ ಸುಧಾರಿಸಿಕೊಂಡು ಇಬ್ಬರನ್ನೂ ಕೆಳಗೆ ಕರೆತಂದ.


ಕಾಲೇಜ್ ಆವರಣದಲ್ಲಿ ಇದ್ದ ಒಂದು ಮರದ ಕೆಳಗಿನ ಕಲ್ಲು ಬೆಂಚಿನಲ್ಲಿ ಮೂವರೂ ಕುಳಿತ್ತಿದ್ದರು.

ಮೂವರ ಯೋಚನಾ ಲಹರಿ ಮಾತ್ರ ಒಂದು ತಿಂಗಳ ಹಿಂದೆ ನಡೆದ ಆ ಘಟನೆಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.


                          * * * * * * * * * *


ಸುಧೀರ್, ಚಿನ್ಮಯಿ, ಸುಶ್ಮಿತಾ ಮತ್ತು ರಮ್ಯಾ ನಾಲ್ವರು ಬೆಸ್ಟ್ ಫ್ರೆಂಡ್ಸ್.ಯಾವುದೇ ಸಂದರ್ಭದಲ್ಲೂ ಒಬ್ಬರನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಅದು ಆ ಊರಿಗೇ ತಿಳಿದ ವಿಷಯ

ನಾಲ್ವರೂ ಚಿಕ್ಕ ವಯಸ್ಸಿನಿಂದಲೇ ಒಟ್ಟಿಗೇ ಆಡಿ ಬೆಳೆದ ಹುಡುಗರು.


ಹೀಗೇ ಒಟ್ಟಿಗೇ ಆಡಿ ಬೆಳದವರು ಈಗ ಒಂದೇ ಕಾಲೇಜಿನಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.

ನಾಲ್ವರೂ ಓದಿನಲ್ಲಿ ಮಾತ್ರ ಒಬ್ಬರಿಗೊಬ್ಬರು ಪೈಪೋಟಿ ಕೊಡುತ್ತಿದ್ದದ್ದು. ಬೇರೆಲ್ಲಾ ವಿಷಯದಲ್ಲಿ ಒಗ್ಗಟ್ಟನ್ನು ಮುರಿಯುತ್ತಿರಲಿಲ್ಲ. ಇವರ ಮದ್ಯೆ ಯಾವ ಮುಚ್ಚು ಮರೆಯೋ ಇರುತ್ತಿರಲಿಲ್ಲ.


ಹೀಗಿರುವಾಗ ಒಂದು ದಿನ ರಮ್ಯಾಳ ಹೆಸರಿಗೆ ಒಂದು ಕಾಗದ ಬರುತ್ತದೆ.


ಅದನ್ನು ನಾಲ್ಕೂ ಜನರೂ ಒಟ್ಟಿಗಿದ್ದಾಗಲೇ ಓದುತ್ತಾಳೆ.


ಅದೊಂದು ಪ್ರೇಮ ಪತ್ರ,ಅದರಲ್ಲಿ ಬರೆದಿದ್ದುದು ಹೀಗೇ...


ಪ್ರೀತಿಯ ರಮ್ಯಾ...


ನಿನ್ನನ್ನು ಎರಡು ವರ್ಷಗಳಿಂದ ಹುಚ್ಚನಂತೆ ಪ್ರೀತಿಸುತ್ತಿದ್ದೇನೆ.

ನೀನಿಲ್ಲದೆ ಬದುಕಲು ಸಾಧ್ಯವಿಲ್ಲ. ನನ್ನ ಪ್ರೀತಿಯನ್ನು ಒಪ್ಪಿಕೊಂಡು ನನ್ನ ಬಾಳಿಗೆ ಬೆಳಕಾಗಿ ಬಾ.


                        ಇಂತಿ ನಿನ್ನ ಒಲವಿಗೆ ಕಾಯುತ್ತಿರುವ

                                     ಮಂಜುನಾಥ್


ಅದನ್ನು ಓದಿದವಳು ಜೋರಾಗಿ ನಗಲು ಶುರು ಮಾಡುತ್ತಾಳೆ. ಲವ್ ಅಂತೆ ಲವ್... ಮಾಡೋದಕ್ಕೆ ಬೇರೆ ಕೆಲಸ ಇಲ್ಲ ಇಂತವರಿಗೆ. ಎನ್ನುತ್ತಾ ಇನ್ನಷ್ಟು ನಗುತ್ತಾಳೆ.


ಅವಳು ಮೊದಲಿಂದಲೂ ಹೀಗೇ... ಪ್ರೀತಿ ಪ್ರೇಮ ಅನ್ನುವ ವಿಷಯದಿಂದ ದೂರ. ಅವಳ ಮನೆಯಲ್ಲೂ ಅದರ ಸುದ್ದಿ ಎತ್ತುವಂತಿರಲಿಲ್ಲ. ಹಾಗೇ ಬೆಳಿಸಿದ್ದರು ಕೂಡಾ.


ಆದರೆ ಅವಳ ಆ ವರ್ತನೆ ಸುಶ್ಮಿತಾಳಿಗೆ ಹಿಡಿಸಲಿಲ್ಲ.


" ಯಾಕೆ ನಗೋದು ಪಾಪ ಅವನು ಅವನ ಭಾವನೆಯನ್ನು ಹೇಳಿದ್ದಾನೆ, ನಿಂಗೆ ಇಷ್ಟ ಇದ್ದರೆ ಒಪ್ಪಿಕೊ ಇಲ್ಲದಿದ್ದಲ್ಲಿ ಅವನಿಗೆ ಬೇಡ ಎಂದು ಹೇಳಿ ನಿನ್ನ ಮನಸ್ಥಿತಿಯನ್ನು ವಿವರಿಸು ಅಷ್ಟೇ, ಅದು ಬಿಟ್ಟು ಹೀಗೆಲ್ಲಾ ನಗ್ಬೇಡ " ಎಂದು ಖಾರವಾಗಿಯೇ ನುಡಿದಳು.


" ಹೌದು ರಮ್ಯಾ.. ಹೋಗಿ ಅವನ ಬಳಿ ಮಾತಾಡಿ ನಿಂಗೆ ಒಪ್ಪಿಗೆ ಇಲ್ಲ ಅನ್ನುವುದನ್ನು ಹೇಳು. ಅರ್ಥ ಮಾಡ್ಕೋತಾನೆ ಅಂತ ಅನ್ಸುತ್ತೆ " ಚಿನ್ಮಯಿಯೂ ನುಡಿದಳು.


ಅವರೆಲ್ಲರ ಮಾತು ಕೇಳಿ ರಮ್ಯಾಳಿಗೂ ಹಾಗೇ ಮಾಡುವುದು ಸರಿ ಅನ್ನಿಸಿ ಆ ಪತ್ರವನ್ನು ತನ್ನ ಬ್ಯಾಗ್ ಒಳಗೆ ಹಾಕಿದಳು. ಅವನ ಬಳಿ ಮಾತಾಡಿ ವಾಪಾಸ್ ಕೊಡೋಣ ಎಂದು.ಅದೇ ಅವಳು ಮಾಡಿದ ತಪ್ಪು.


ಸಂಜೆಯೊಳಗೆ ಅವನನ್ನು ಭೇಟಿಯಾಗಿ ಅವನಿಗೆ ಪತ್ರ ಹಿಂದಿರುಗಿಸಬೇಕು ಅಂದುಕೊಂಡಿದ್ದಳು.

ಆದರೆ ಅವಳ ದುರದೃಷ್ಟಕ್ಕೆ  ಅವನು ಅಂದು ಕಣ್ಣಿಗೆ ಕಾಣಿಸಲೇ ಇಲ್ಲ.


ಮನೆಗೆ ಹೋದನಂತರ ಅವಳಿಗೆ ತಾನು ಬ್ಯಾಗೊಳಗೆ ಇಟ್ಟ ಪತ್ರದ ನೆನಪೂ ಇರಲಿಲ್ಲ.


ಮನೆಗೆ ಬಂದು ತಿಂಡಿ ತಿನ್ನುತ್ತಿದ್ದಾಗ ಅವಳ ಅವಳ ಅಪ್ಪ ಏನೋ ಬರೆಯಲು ಕಾಗದ ಪೆನ್ನು ಹುಡುಕುತ್ತಿದ್ದರು. ಇವಳನ್ನು ಕೇಳಿದಾಗ " ಬ್ಯಾಗಲ್ಲಿದೆ ತಗೋಳಿ ಅಪ್ಪಾ " ಎಂದು ಒಳಗಿಂದಲೇ ಕೂಗಿ ಹೇಳಿದಳು.


ಅವಳ ತಂದೆ ಬ್ಯಾಗ್ ಗೆ ಕೈ ಹಾಕಿದಾಗ ಸಿಕ್ಕಿದ್ದು ಅವಳಿಗೆ ಮಂಜುನಾಥ್ ಬರೆದ ಪ್ರೇಮ ಪತ್ರ.


ಅವಳಿಗೆ ಅದರ ನೆನಪೂ ಇರಲಿಲ್ಲ.


ಪತ್ರವನ್ನು ಬಿಡಿಸಿ ಓದಿದ ಅವಳ ತಂದೆ ಅದರ ಆಗುಹೋಗುಗಳನ್ನು ವಿಚಾರಿಸದೆ,ತಿಂಡಿ ತಿನ್ನುತ್ತಿದ್ದ ಮಗಳನ್ನು ಎಬ್ಬಿಸಿ ಎಳೆದುಕೊಂಡೆ ಬಂದರು ಅಂಗಳಕ್ಕೆ.


" ಓದಿ ಉದ್ದಾರ ಆಗಲಿ ಅಂತ  ಕಾಲೇಜ್ ಗೆ ಕಳ್ಸಿದ್ರೆ ಇಂಥ ಕೆಲಸ ಮಾಡ್ತೀಯ.. ದರಿದ್ರದವಳೇ " ಎಂದು ಕೆನ್ನೆಗೆ ಬಾರಿಸ ತೊಡಗಿದರು.


ಅವಳಿಗೆ ಏನಾಗ್ತಿದೆ ಅಂತ ತಿಳಿಯೋ ಹೊತ್ತಿಗೆ ಅರ್ಧ ಜೀವ ಆಗಿದ್ಲು ಏಟು ತಿಂದು. ಅವಳ ಅಮ್ಮ ಅಜ್ಜಿ ಎಲ್ಲಾ ಬಂದು ಅವಳು ಅಂಥವಳಲ್ಲ ಅಂತ ಎಷ್ಟು ಹೇಳಿದರೂ, ರಮ್ಯಾಳ ಮಾತೂ ಕಿವಿಗೆ ಹಾಕಿಕೊಳ್ಳದೆ ಕೋಪದ ಕೈಗೆ ಬುದ್ದಿ ಕೊಟ್ಟಿದ್ದರು ಅವಳ ತಂದೆ.

ಮರುದಿನದಿಂದ ಕಾಲೇಜ್ ಗೂ ಬಿಟ್ಟಿರಲಿಲ್ಲ.


ಇದರಿಂದ ಅವಮಾನ ಆದಂತಾಗಿ ಕೊರಗಿದಳು .


ಸುಧೀರ್, ಚಿನ್ಮಯಿ ಸುಶ್ಮಿತಾ ಅವಳು ಕಾಲೇಜ್ ಗೆ ಬರದೇ ತುಂಬಾ ದಿನ ಆಯ್ತಲ್ಲ ಏನಾಗಿರ್ಬೋದು ಅಂತ ಯೋಚಿಸಿ ಅವಳ ಮನೆಕಡೆ ಹೊರಟರು.


ಅವರ ಬಳಿ ರಮ್ಯಾ ಮನೆಯಲ್ಲೇ ಇದ್ದರೂ ಅವಳ ಅಜ್ಜಿ ಮನೆಗೆ ಹೋಗಿದ್ದಾಳೆ. ಅವಳ ಅಜ್ಜಿಗೆ ಹುಷಾರಿಲ್ಲ ಅಂತ ಸುಳ್ಳು ಹೇಳಿ ಅವರನ್ನು ಅಲ್ಲಿಂದ ಸಾಗಹಾಕಿದರು.


ಇದಾಗಿ ಎರಡು ಮೂರು ದಿನ ಕಳೆದು ಬೆಳಗ್ಗೆ ಈ ಮೂರು ಸ್ನೇಹಿತರು ಕಾಲೇಜು ಆವರಣದೊಳಗೆ ಬಂದಾಗ ಒಂದು ವಿಜ್ಞಾನ ವಿಭಾಗದ ಕಟ್ಟಡದ ಮುಂದೆ ಜನ ಸೇರಿದ್ದರು.


ಏನಾಗಿರಬಹುದು ಅಂತ ಮೂವರೂ ಅಲ್ಲಿ ಹೋದರೆ

ರಮ್ಯಾ ಹೆಣವಾಗಿ ಮಲಗಿದ್ದಳು.


ಅದನ್ನು ನೋಡಿದ ಶಾಕ್ ಗೆ ಚಿನ್ಮಯಿ ಪ್ರಜ್ಞೆ ತಪ್ಪಿದರೆ, ಸುಶ್ಮಿತಾ ಸುಧೀರ್ ಎದೆಬಿರಿಯುವಂತೆ ಅಳುತ್ತಿದ್ದರು ಹೆಣದ ಮುಂದೆ.


>

ನಂತರ ಪೊಲೀಸ್ ಎಲ್ಲಾ ಬಂದು ಹೆಣವನ್ನು ಅಲ್ಲಿಂದ ಮರಣೋತ್ತರ ಪರೀಕ್ಷೆಗೆಂದು ತೆಗೆದುಕೊಂಡು ಹೋದರು, ಅಲ್ಲಿ ಅವರಿಗೆ ಅವಳು ಸಾಯುವಾಗ ಬರೆದಿದ್ದ ಕಾಗದ ಸಿಕ್ಕಿದ್ದನ್ನು ತಂದು ಸುಧೀರ್ ಕೈಗೆ ಕೊಟ್ಟರು.


ಅದನ್ನು ಓದಿದವನಿಗೆ ಅವಳ ತಂದೆಯನ್ನು ಸಿಗಿದು ಹಾಕುವಷ್ಟು ಕೋಪ ಬಂದಿತ್ತು.

ಮೊದಲು ಅವಳ ಕಾರ್ಯಗಳಾಗಲಿ ನಂತರ ಮಾತಾಡುವ ಎಂದು ಸುಮ್ಮನಾಗಿದ್ದ.


ಕಾರ್ಯಗಲೆಲ್ಲ ಮುಗಿದ ಮೇಲೆ ರಮ್ಯಾಳ ತಂದೆಯನ್ನು ಕರೆದುಕೊಂಡು ವಿಷಯ ತಿಳಿಸಿ , ಬೈದು ಬಂದಿದ್ದ.


ಮಗಳನ್ನು ಅರ್ಥ ಮಾಡಿಕೊಳ್ಳದೆ ಅವಳ ಸಾವಿಗೆ ನಾನೇ ಕಾರಣ ಅಂತ  ನೆಲದಲ್ಲಿ ಹೊರಳಾಡಿ ಅತ್ತರು.


ಚಿನ್ಮಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು ಅವಳಿಗೆ ಪ್ರಜ್ಞೆ ಮರಳಿದಾಗ ಮತ್ತೆ ಅಳಲು ಶುರು ಮಾಡಿದಳು.

ಸುಶ್ಮಿತಾ ಚಿನ್ಮಯಿ ಜೊತೆಯಿದ್ದಳು.

ರಮ್ಯಳ ಕಾರ್ಯಗಳನ್ನು ಮುಗಿಸಿ ಬಂದ ಸುಧೀರ್ ಗೆ ಇವಳ ಪರಿಸ್ಥಿತಿ ನೋಡಿ ಅಳು ತಡೆಯಲಾಗಲಿಲ್ಲ. ತಮ್ಮ ಗುಂಪಿನ ಒಬ್ಬಳನ್ನು ಕಳೆದುಕೊಂಡ ನೋವು, ಈಗ ಚಿನ್ಮಯಿಯ ಪರಿಸ್ಥಿತಿ ಎಲ್ಲವೂ ಅವನನ್ನು ಕುಗ್ಗಿಸಿ ಬಿಟ್ಟಿತ್ತು.

ಸುಶ್ಮಿತಾ ಸ್ವಲ್ಪ ಗಟ್ಟಿಗಿತ್ತಿ ನೋವನ್ನು ತಡೆಯುವ ಶಕ್ತಿ ಈ ನಾಲ್ವರಲ್ಲಿ ಅವಳಿಗೆ ಕೊಂಚ ಜಾಸ್ತಿ.


ಚಿನ್ಮಯಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು ಆಗಲೇ ಮೂರು ವಾರ ಕಳೆದಿತ್ತು.

ರಮ್ಯಾಳ ಸಾವನ್ನು ಅವಳ ಮನಸು ಇನ್ನೂ ಒಪ್ಪಿರಲಿಲ್ಲ.

ಅವಳ ಹೆಸರನ್ನೇ ನಿದ್ದೆಯಲ್ಲೂ ಕನವರಿಸುತ್ತಿದ್ದಳು. ಆಗಾಗ ಬೆಚ್ಚಿಬಿದ್ದು ತನ್ನ ಅಮ್ಮನನ್ನು ತಬ್ಬಿ ಮಲಗುತ್ತಿದಳು.


ಒಂದರ್ಥದಲ್ಲಿ ಮಾನಸಿಕ ರೋಗಿಯಾಗಿದ್ದಳು.


ಸುಧೀರ್ ಹಾಗೂ ಸುಶ್ಮಿತಾ ಅವಳಿಗೆ ಕ್ಲಾಸಿನ ವಿಚಾರಗಳನ್ನು ಅವಳ ಬಳಿ ಕುಳಿತು ಮಾತಾಡುತ್ತಿದರು.


ಆಗೆಲ್ಲಾ ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ.

ಅವಳ ನೋಟ್ಸ್ ಎಲ್ಲವನ್ನೂ ಇವರೇ ಬರೆಯುತ್ತಿದ್ದರು.

ಅದರಲ್ಲೂ ಸುಧೀರ್ ನ ಮನೆ ಅವಳ ಮನೆಯ ಪಕ್ಕವೇ ಇದ್ದಿದ್ದರಿಂದ ಆದಷ್ಟೂ ಅವಳ ಜೊತೆಗಿರುತ್ತಿದ್ದ. ದಿನಕಳೆದಂತೆ ಮನೆಯವರು ಬಿಟ್ಟರೆ ಸುಶ್ಮಿತಾ ಸುಧೀರ್ ಜೊತೆಗೆ ಮಾತಾಡಲು ಶುರು ಮಾಡಿದಳು.


ಇನ್ನೇನು ಪರೀಕ್ಷೆ ಹತ್ತಿರ ಬರುತ್ತಿದೆ ಎಂದಾಗ ಸುಧೀರ್ ಇವಳ ಮನೆಯವರ ಬಳಿ , ಚಿನ್ನು ನ ನಂಜೊತೆ ಕಳಿಸಿ , ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಹೇಳಿ ಒಪ್ಪಿಸಿದ್ದ.


ಹಾಗೇ ಅವಳು ಕಾಲೇಜಿಗೆ ಬಂದಾಗಲೇ ರಮ್ಯಾಳನ್ನು ನೆನೆದು ಅವಳು ಬಿದ್ದ ಕಟ್ಟಡದ ತುದಿಗೆ ತಾನೂ ಓಡಿದ್ದು, ಸುಧೀರ್ ಬಂದು ಕೆನ್ನೆಗೆ ಬಾರಿಸಿದ್ದು ಎಲ್ಲಾ.


ಮಗಳ ಸಾವಿಗೆ ತಾನೇ ಕಾರಣ ಅಂತ ಕೊರಗಿ ಹುಚ್ಚರಾಗಿದ್ದರು ರಮ್ಯಾಳ ತಂದೆ.


                             ************


ಮೊದಲಿನಿಂದಲೂ ಸುಧೀರ್ ಗೆ ಚಿನ್ಮಯಿ ಎಂದರೆ ಪ್ರಾಣ, ಚಿಕ್ಕ ವಯಸಿನಿಂದಲೋ ಚಿನ್ನೂ ಚಿನ್ನೂ ಅಂತ ಅವಳ ಹಿಂದೆ ಮುಂದೆಯೇ ಇರುತ್ತಿದ್ದ.

ಆದರೆ ಅದು ಪ್ರೀತಿ ಅಂತ ತಿಳಿಯುವ ವಯಸ್ಸಲ್ಲವಲ್ಲ.


ಇತ್ತೀಚೆಗೆ ಚಿನ್ಮಯಿಯ ಜೊತೆಯೇ ಇರುತ್ತಿದ್ದರಿಂದಲೋ ಏನೋ ಚಿನ್ಮಯಿಯ ಮೇಲೆ ವಿಶೇಷ ಭಾವನೆ ಇರುವುದು ಅವನಿಗೂ ಅರಿವಾಗಿತ್ತು..ಮನದೊಳಗೆ ಅವಳನ್ನು ಪ್ರೀತಿಸಲು ಶುರು ಮಾಡಿರುವೆ ಎಂಬುದನ್ನು ಒಪ್ಪಿಕೊಂಡಿದ್ದ .


ಆವತ್ತು ಸುಶ್ಮಿತಾ ಜೊತೆಗೆ ಇದ್ದಾಳೆ ಅಂತ ಧೈರ್ಯದಿಂದ ಲೈಬ್ರರಿಗೆ ಪುಸ್ತಕ ತರಲು ಹೋಗಿದ್ದ.

ಆದರೆ ಅವಳು ಹಾಗೇ ಹೇಳದೇ  ಮಹಡಿ ಮೇಲೆ ಓಡಿದಾಗ

ಅವಳನ್ನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭಯಕ್ಕೆ ಸಂಯಮ ಕಳೆದುಕೊಂಡು ಬಾರಿಸಿದ್ದ. ಸುಶ್ಮಿತಾಳಿಗೂ ನೋಡ್ಕೊಳ್ಳೋಕ್ಕಾಗಲ್ವಾ ಅಂತ ರೇಗಿದ್ದ.


ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ ಚಿನ್ಮಯಿ. ಈ ನಡುವೆ ಸುಧೀರ್ ನ ಮನಸು ಚಿನ್ಮಯಿಯ ಪ್ರೀತಿಗಾಗಿ ಹಂಬಲಿಸುತ್ತಿತ್ತು.

ಅವ್ಳು ಕೊಂಚ ಕಣ್ಣಿಂದ ಮರೆಯದರೂ ಚಡಪಡಿಸುತ್ತಿದ್ದ.


ಅವಳ ಹಾಗೂ ತನ್ನ ಮನೆಯಲ್ಲಿ ತನ್ನ ಪ್ರೀತಿಯ ವಿಷಯ ಹೇಳಬೇಕು, ಯಾವುದಕ್ಕೂ ಪರೀಕ್ಷೆ ಮುಗಿದು ಕೆಲಸ ಸಿಗಲಿ ಅಂತ ಕಾಯುತ್ತಿದ್ದ.


ಅದರಂತೆ ಪರೀಕ್ಷೆಗಳು ಮುಗಿದು ಸುಶ್ಮಿತಾ ಸುಧೀರ್ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ ಯಾವಾಗಲೂ ಕ್ಲಾಸ್ಸಿಗೆ ಟಾಪ್ಪರ್ ಆಗಿರುತ್ತಿದ್ದ ಚಿನ್ಮಯಿ, ಸುಧೀರ್ ಹಾಗೂ ಸುಶ್ಮಿತಾಳ ಸತತ ಪ್ರಯತ್ನದಿಂದ ಪಾಸಾಗಿದ್ದಳು.


ಸುಧೀರ್ ಗೆ ಈಗ ತಾನು ಅವಳನ್ನು ಪ್ರೀತಿಸುತ್ತಿರುವುದನ್ನು ಹೇಳಿದರೆ ಒಪ್ಪಿಕೊಳ್ತಾಳ, ಇಲ್ಲಾ ಇಷ್ಟು ವರ್ಷದ ಸ್ನೇಹವನ್ನೂ ತೊರೆದು ಹೋಗುವಳಾ ಅನ್ನುವ ಭಯ ಕಾಡಲು ಶುರುವಾಗಿತ್ತು.


ಅವನ ವರ್ತನೆಯಿಂದ ಸುಶ್ಮಿತಾಳಿಗೆ ಅವನು ಅವಳನ್ನು ಪ್ರೀತಿಸುತ್ತಿದ್ದಾನೆ ಅನ್ನುವ ಅನುಮಾನ ಬಂದಿತ್ತು.ಬಾಯಿಬಿಟ್ಟು ಹೇಳದಿದ್ದರೂ ಅವನ ಪ್ರೀತಿಗೆ ಅವಳು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಳು.

ಅವರಿಬ್ಬರೂ ಆದಷ್ಟೂ ಒಟ್ಟಿಗೇ ಇರುವಂತೆ ನೋಡಿಕೊಳ್ಳುತ್ತಿದ್ದಳು.


ಕಾಲೇಜು ಜೀವನ ಮುಗಿದು, ತಾನೆಲ್ಲೂ ಕೆಲಸಕ್ಕೆ ಹೋಗಲ್ಲ ಅಂತ ಚಿನ್ಮಯಿ ಹಠ ಮಾಡಿ ಮನೆಯಲ್ಲೇ ಉಳಿದಳು. ಅವಳು ಇಷ್ಟರಮಟ್ಟಿಗೆ ಶಾಕ್ನಿಂದ ಹೊರಬಂದಿದ್ದೆ ಪುಣ್ಯ ಅಂದುಕೊಂಡು ಅವಳ ಮನೆಯವರು ಜಾಸ್ತಿ ಒತ್ತಾಯಿಸಲಿಲ್ಲ.


ಸುಧೀರ್ ಸುಶ್ಮಿತಾ ಇಬ್ಬರಿಗೂ ಕೆಲಸ ಸಿಕ್ಕಿತ್ತು.


ಒಂದು ತಿಂಗಳು ಕಳೆದು ಮೊದಲ ಸಂಬಳ ಕೈಯಲ್ಲಿ ಹಿಡಿದು ಬಂದ ಸುಧೀರ್.


ಚಿನ್ಮಯಿಗಾಗಿ, ಒಂದು ಸೀರೆ ಕಾಲ್ಗೆಜ್ಜೆ, ಬಳೆಗಳು ಎಲ್ಲಾ ಕೊಂಡ್ಕೊಂಡು ಅವಳ ಮನೆಗೆ ಹೋಗಿ ಅವಳ ಕೈಹಿಡಿದು, ನೇರವಾಗಿ ಅವಳ ತಂದೆಯ ಮುಂದೆ ನಿಂತು


"ನಿಮ್ಮ ಮಗಳನ್ನು ತುಂಬಾ ಇಷ್ಟ ಪಡ್ತಿದ್ದೀನಿ, ನನ್ನ ಜೀವನಕ್ಕೆ ಅವಳನ್ನು ಕಳಿಸುವಿರಾ" ಎಂದು ಕೇಳಿಯೇ ಬಿಟ್ಟ.


ಅವಳ ತಂದೆಗಂತೂ ಸ್ವರ್ಗ ಸಿಕ್ಕ ಹಾಗಾಯಿತು.


" ನಮ್ಮ ಕಣ್ಣ ಮುಂದೆ ಬೆಳೆದು ದೊಡ್ಡವರಾದ ಹುಡುಗರು ನೀವು. ನಿನಗಿಂತ ಒಳ್ಳೆ ಹುಡುಗನ್ನ ಅವಳಿಗೆ ಹುಡುಕಲು ನನ್ನಿಂದ ಸಾಧ್ಯವಿಲ್ಲ ಕಂದ" ಎಂದು ಕೈಮುಗಿದು ಬಿಟ್ಟರು.


ಚಿನ್ಮಯಿಯ ಕಡೆ ತಿರುಗಿ " ಚಿನ್ನು ಚಿಕ್ಕಂದಿನಿಂದ ಸ್ನೇಹಿತರು ನಾವು ಅದ್ಯಾವ ಘಳಿಗೆಯಲ್ಲಿ ನಿನ್ನ ಮೇಲೆ ಪ್ರೀತಿ ಹುಟ್ಟಿತೋ ಗೊತ್ತಿಲ್ಲಾ.. ಇದು ಅನುಕಂಪ ಅಲ್ಲ, ಈ ಘಟನೆ ನಡೆಯುವುದಕ್ಕಿಂತ ಮುಂಚೆಯೇ ನೀನು ಬಳಿ ಇದ್ದಾಗ ಅದೇನೋ ಪುಳಕ. ಆಗಲೇ ಪ್ರೀತಿಯಾಗಿತ್ತು ಅನ್ಸುತ್ತೆ ಆದ್ರೆ ಆಗ ತಿಳಿಲೇ ಇಲ್ಲಾ. ಇದೇ ಪ್ರೀತಿ ಅಂತ ಗೊತ್ತಾಗುವ ಹೊತ್ತಿಗೆ ಇಷ್ಟೆಲ್ಲಾ ಘಟನೆಗಳು ನಡೆದವು. ನಿನ್ನ ಬಳಿ ಹೇಳ್ಕೊಂಡ್ರೆ ಎಲ್ಲಿ ನನ್ನ ಸ್ನೇಹನೂ ಬೇಡ ಅಂತ ಹೋಗ್ತಿಯೋ ಅಂತ ಭಯವಾಯಿತು ಚಿನ್ನು..." ಎಂದವನು ಮಂಡಿಯೂರಿ ತಾನು ತಂದ ವಸ್ತುಗಳನ್ನು ಅವಳ ಮುಂದೆ ಹಿಡಿದ.


ಅವಳ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು... ಆದರೆ ಅದರ ಕಾರಣ ಅವಳಿಗೆ ಅವನ ಪ್ರೀತಿಯ ಅರಿವಾಗಿತ್ತು.

ಅದನ್ನು ಸುಶ್ಮಿತಾಳ ಬಳಿ ಕೇಳಿ ಖಚಿತ ಪಡಿಸಿಕೊಂಡಿದ್ದಳು , ಆದರೆ ಅವನೇ ಬಂದು ಕೇಳಲಿ ಅಂತ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಈಗ ಅವಳ ಆಸೆ ನೆರವೇರಿತ್ತು . ಅಪ್ಪನ ಕಡೆ ನೋಡಿದಳು, ಅವರು ಕಣ್ಣಲ್ಲೇ ಒಪ್ಪಿಗೆ ಕೊಟ್ಟರು.


ಅವಳೂ ಅವನ ಮುಂದೆ ಮಂಡಿಯೂರಿ ಕುಳಿತು ತಬ್ಬಿಕೊಂಡಳು.


ಆಗ ಬಾಗಿಲ ಬಳಿ ನಿಂತಿದ್ದ ಸುಶ್ಮಿತಾ. " ಏನ್ ಮೇಡಂ, ಏನ್ ಸರ್ ನಿಮ್ಮ ಪ್ರೀತಿ ಸಿಕ್ಕಿದ ತಕ್ಷಣ ಈ ಬಡಪಾಯಿ ಸ್ನೇಹಿತೆ ಮರ್ತೇ ಹೋದ್ಲಾ.. " ಹುಸಿಕೋಪ ತೋರಿಸಿದಳು.


ಇಬ್ಬರೂ ಅವಳಿದ್ದಲ್ಲಿಗೆ ಬಂದು ಎರಡೂ ಬದಿಯಿಂದಲೂ ಅಪ್ಪಿಕೊಂಡರು.


ಅವರ ಬಾಂಧವ್ಯವನ್ನು ನೋಡುತ್ತಿದ್ದ ಚಿನ್ಮಯಿಯ ಅಪ್ಪಾ ಅಮ್ಮ, ನೂರ್ಕಾಲ ಈ ಮಕ್ಕಳನ್ನು ಚೆನ್ನಾಗಿಟ್ಟಿರು ತಂದೆ ಎಂದು ಮನದಲ್ಲೇ ಬೇಡಿಕೊಂಡರು.



Rate this content
Log in

Similar kannada story from Drama