ಆಗಂತುಕ!
ಆಗಂತುಕ!


ಅದೂಂದು ಸರವೂರು ಎಂಬ ಸಣ್ಣ ಹಳ್ಳಿ.
ಅಲ್ಲೋ ಇಲ್ಲೋ ದೂರದಲ್ಲಿ ಒಂದೊಂದು ಮನೆಗಳು ಇದ್ದವು. ಹಳ್ಳಿಯ ಒಂದು ಬದಿಗೆ ವಿಶಾಲವಾಗಿ ಹರಡಿಕೊಂಡಿರುವ ದಟ್ಟ ಅರಣ್ಯವಾದರೆ ಇನ್ನೊಂದು ಮಗ್ಗುಲಿಗೆ ತುಂಬಿ ಹರಿಯುವ ನದಿ. ಆ ಊರಿಗೆ ಒಂದೇ ದೇವಸ್ಥಾನ,ಒಂದೇ ಅಂಗಡಿ,ಒಂದು ಶಾಲೆ ಹೀಗೆ ತೀರಾ ಅಗತ್ಯವೆನಿಸುವವು ಮಾತ್ರ ಲಭ್ಯವಿರುವ ಹಳ್ಳಿ. ಅಗತ್ಯವನ್ನು ಮೀರಿ ಏನಾದರೂ ಬೇಕಾದಲ್ಲಿ ಆ ಹಳ್ಳಿಯೊಂದಿಗೆ ಪಟ್ಟಣದ ನಂಟು ಬೆಸೆಯುವ ಒಂದೇ ಒಂದು ಬಸ್ಸಲ್ಲಿ ಹೋಗಿ ಪಟ್ಟಣದಿಂದ ತರಬೇಕಾಗುತಿತ್ತು.
ಇಂತಹ ಆ ಊರಲ್ಲಿ ರಸ್ತೆಗೆ ಕಾಣಬಹುದಾದ ದೊಡ್ಡದೇ ಎನ್ನುವಂತಹ ಒಂದು ಮನೆ ಇತ್ತು. ಅದು ಸರವೂರಿನ ಶ್ರೀಮಂತ ವ್ಯಾಪಾರಿ ನರಸಿಂಗರಾಯನ ಮನೆ.
ಆ ಮನೆಯನ್ನು ನೋಡಿದವರಿಗೆ ಅದು ಶ್ರೀಮಂತರ ಮನೆಯೆಂದು ಅದರ ಲಕ್ಷಣಗಳೇ ಹೇಳುತ್ತಿತ್ತು. ಎರಡು ಅಂತಸ್ತಿನ ಹೆಂಚಿನ ಸುತ್ತು ಪೌಳಿಯ ಮನೆಯಾದ್ದರಿಂದ ಹಳೇಕಾಲದ ಬಂಗಲೆಯಂತಿತ್ತು. ಅಲ್ಲಿ ನರಸಿಂಗರಾಯ ತನ್ನ ಮಡದಿ ಸುಶೀಲ ಮತ್ತು ತಮ್ಮ ಎರಡು ವರ್ಷದ ಮಗ ನಾರಾಯಣನೊಂದಿಗೆ ವಾಸಿಸುತಿದ್ದರು.
ಊರೂರು ತಿರುಗುತ್ತಾ ವ್ಯಾಪಾರದಲ್ಲಿ ತೊಡಗುವ ನರಸಿಂಗ ಮನೆಯಲ್ಲಿ ಇದ್ದುದೇ ಅಪರೂಪವಾಗಿತ್ತು. ಆದ್ದರಿಂದ ಸುಶೀಲ ಒಬ್ಬಳೇ ಮಗುವಿನೊಂದಿಗೆ ಇರುತ್ತಿದ್ದುದೇ ಹೆಚ್ಚು. ಹಗಲಿನಲ್ಲಿ ಮನೆಯ ಆಳುಗಳು ಇರುತ್ತಿದ್ದರು, ಆದರೆ ರಾತ್ರಿ ಮಾತ್ರಾ ತಾಯಿ ಮಗು ಇಬ್ಬರೇ.
ಹೀಗಿರುವಾಗ ಒಂದಿನ ಕತ್ತಲಾಗುತ್ತಾ ಬರುವಾಗ ಆ ಊರಿಗೆ ಪಟ್ಟಣದಿಂದ ಬಂದು ತಂಗುವ ಬಸ್ಸಲ್ಲಿ ಒಬ್ಬಳು ಬ್ರಾಹ್ಮಣ ಹೆಂಗಸು ಬಂದಿಳಿದಳು. ಕೆಂಪು ಸೀರೆಯುಟ್ಟು ತಲೆತುಂಬಾ ಸೆರಗ್ಹೊದ್ದಿದ್ದರಿಂದ ಆಕೆ ಬ್ರಾಹ್ಮಣೆ ವಿಧವೆ ಎಂದು ತಿಳಿಯುತ್ತಿತ್ತು. ಬಸ್ಸಿಳಿದ ಆಕೆ ರಸ್ತೆಯಲ್ಲಿ ನಡೆದು ಬರುವಾಗ ದೂರದಲ್ಲಿ ಆ ದೊಡ್ಡ ಮನೆ ಕಂಡಿತು. ಆಕೆ ನೇರವಾಗಿ ಆ ಮನೆ ಕಡೆಗೆ ನಡೆದಳು. ಮನೆಯ ಬಾಗಿಲಿಗೆ ಬಂದು ಯಾರಾದರೂ ಇದ್ದೀರಾ ಎಂದು ತುಸು ಜೋರಾಗಿ ಕೇಳಿದಳು. ಹೊರಗಿಂದ ಕರೆದ ದನಿ ಕೇಳಿ ಮನೆಯೊಳಗೆ ಇದ್ದ ಸುಶೀಲ ಬಾಗಿಲು ತೆರೆದಳು. ಬಾಗಿಲಾಚೆ ನಿಂತಿರುವ ಹೆಂಗಸನ್ನು ಕಂಡು ಕಸಿವಿಸಿಯೆನಿಸಿದರೂ ಸಾವರಿಸಿಕೊಂಡು, "ಯಾರು ತಾವು?
ಎಲ್ಲಿಂದ ಬಂದಿರಿ? ಏನಾಗಬೇಕಿತ್ತು ?" ಎಂದು ಕೇಳಿದಳು.
ಅವಳ ಪ್ರಶ್ನೆಗಳಿಗೆ ಆಕೆ, "ನನ್ನ ಹೆಸರು ಅಚ್ಚಮ್ಮ, ನಾನು ಪೇಟೆಯಿಂದ ಬಂದಿದ್ದೇನೆ, ನದಿಯಾಚೆಗಿನ ಅಮೃತಹಳ್ಳಿಗೆ ಹೋಗಬೇಕಾಗಿತ್ತು, ಈ ಸಮಯದಲ್ಲಿ ನದಿ ದಾಟಲು ದೋಣಿ ನಡೆಸುವವರು ಯಾರೂ ಇರುವುದಿಲ್ಲವಲ್ಲ ಹಾಗಾಗಿ ನನಗೆ ಒಂದು ರಾತ್ರಿ ನಿಮ್ಮ ಮನೆಯಲ್ಲಿ ತಂಗಲು ಜಾಗಕೊಡುವಿರಾ..?" ಭಿನ್ನವಿಸಿದಳು. ಅವಳ ಮಾತು ಕೇಳಿದ ಸುಶೀಲ 'ಒಂಟಿ ಹೆಂಗಸು ಅಪರಾತ್ರಿಯಲ್ಲಿ ಒಬ್ಬಳೇ ಹೋಗುವುದು ಸರಿಯಲ್ಲ' ಎಂದು ಯೋಚಿಸಿ ಕನಿಕರದಿಂದ ಒಪ್ಪಿಗೆ ಕೊಟ್ಟು "ಬನ್ನಿ ಒಳಗೆ" ಎಂದು ಕರೆದಳು.
ಒಳಗೆ ಬಂದವಳು ಸುಶೀಲ ತೋರಿಸಿದ ಕಡೆ ಬಚ್ಚಲಿಗೆ ಹೋಗಿ ಮಡಿ ಮೈಲಿಗೆ ಮುಗಿಸಿಕೊಂಡು ಬಂದು ಮನೆಯ ಹಜಾರದ ಬೆಂಚಿನ ಮೇಲೆ ಕುಳಿತಳು.
"ಪ್ರಯಾಣದ ಆಯಾಸ ಇರುತ್ತೆ ನಿಮ್ಗೆ, ಬನ್ನಿ ಊಟ ಮಾಡುವ " ಎಂದು ಕರೆದವಳಿಗೆ,
"ನಾನು ಗಂಡ ಸತ್ತಾಗಿನಿಂದ ರಾತ್ರಿ ಊಟ ಬಿಟ್ಟಿದ್ದೇನೆ, ಹಾಗಾಗಿ ನಂಗೊಂದು ಲೋಟ ನೀರು ಕೊಡಿ ಸಾಕು"
ಎಂದಾಗ ಒಳಗೆ ಹೊಗೆ ಒಂದು ತಂಬಿಗೆಯಲ್ಲಿ ನೀರು ತಂದು ಕೊಟ್ಟಳು. ಬಳಿಕ ಅಲ್ಲೇ ಆಡಿಕೊಂಡಿದ್ದ ಮಗನನ್ನು ಕರೆದುಕೊಂಡು ಒಳಗೆ ನಡೆದು, ಮಗುವಿಗೂ ಊಟ ಮಾಡಿಸಿ ತಾನೂ ಊಟ ಮಾಡಿ ಬಂದು ಹಜಾರದಲ್ಲಿ ಕೂತು ಅಚ್ಚಮ್ಮನ ಜೊತೆ ಲೋಕಾರೂಢಿ ಮಾತಗಳನ್ನಾಡುತ್ತಾ ಕುಳಿತಳು. ನಂತರ ಆಕೆಗೆ ಹಜಾರದಲ್ಲೇ ಚಾಪೆ ಹಾಸಿ ಮಲಗಲು ಹೇಳಿ ಚಿಮಣಿಯ ಬೆಳಕನ್ನು ಸಣ್ಣದಾಗಿ ಉರಿಯುವಂತೆ ಇಟ್ಟು ಮನೆಯ ಚಾವಡಿಯಲ್ಲಿ ಒಂದು ಕಡೆ ಮಗುವನ್ನು ಮಲಗಿಸಿ ತಾನೂ ಮಲಗಿದಳು ಸುಶೀಲ.
ಚಿಮಿಣಿಯ ಮಂದ ಬೆಳಕು ಹರಡಿದ್ದರಿಂದ ಚಾವಡಿಯಲ್ಲಿ ಮಲಗಿದ್ದ ಸುಶೀಲಳಿಗೆ, ಹಜಾರದಲ್ಲಿ ಮಲಗಿದ್ದ ಅಚ್ಚಮ್ಮನ ಮುಖ ಸ್ಪಷ್ಠವಾಗಿ ಕಾಣುತ್ತಿತ್ತು. ಮಲಗಿದರೂ ನಿದ್ದೆ ಬಂದಿರಲಿಲ್ಲ. ಮನದಲ್ಲಿ ಏನೋ ಒಂದು ಅವ್ಯಕ್ತ ಭಯ ಒಂದೇ ಸಮನೆ ಕಾಡುತ್ತಿತ್ತು. 'ಮನೆಯಲ್ಲಿರಲೇನೋ ಹೇಳಿದ್ದಾಗಿದೆ , ಯಾರೋ ಏನೋ ಗೊತ್ತಿಲ್ಲ, ಗಂಡನೂ ಮನೆಯಲ್ಲಿಲ್ಲ' ಎಂದು ಎಚ್ಚರದಂದಲೇ ಆ ಅಚ್ಚಮ್ಮ ಮಲಗಿದ್ದ ಕಡೆ ನೋಡುತ್ತಾ ಈಕೆ ಯೋಚಿಸುತ್ತಿದ್ದಳು. ಯೋಚಿಸುತ್ತಾ ಹೊತ್ತು ಸರಿದಿದ್ದೇ ತಿಳಿಯಲಿಲ್ಲ.
ಸಮಯ ಮದ್ಯರಾತ್ರಿ ಎರಡು ಗಂಟೆ ಆಗಿದೆ ಎಂದು ಗೋಡೆಯಲ್ಲಿ ತೂಗುಹಾಕಿದ್ದ ಗಡಿಯಾರ ದ
ೊಡ್ಡದಾಗಿ ಸದ್ದಿನಲ್ಲಿ ಬಡಿದುಕೊಂಡು ತಿಳಿಸಿತು. ಅಷ್ಟೊತ್ತಿಗೆ ಅಚ್ಚಮ್ಮ ಎದ್ದು ಹೊರಗೆ ಹೋಗಿ ಬಂದು ಬೆಂಚಲ್ಲಿ ಕೂತು ತನ್ನ ಎಲೆ ಅಡಿಕೆ ಚೀಲ ತೆಗೆದಳು. ಚೀಲದಿಂದ ಒಂದು ಎಲೆ ತೆಗೆದು ತನ್ನ ಮುಂಗೈಯಿಂದ ಮೊಣಕೈಯವರೆಗೆ ಸವರಿದಳು. ಇದನ್ನೆಲ್ಲಾ ಮಲಗಿದ್ದಲ್ಲಿಂದಲೇ ನೋಡಿದಳು ಸುಶೀಲ. ಅದನ್ನು ನೋಡಿ ಭಯದಿಂದ ನಡುಗಿ, ಒಮ್ಮೆಲೆ ಬೆವತು ಹೋದಳು. ತಕ್ಷಣ ಗಾಬರಿಯಿಂದ ಮಗುವನ್ನೂ ಬಿಟ್ಟು ಒಳಗೆ ಓಡಿಹೋಗಿ ಬಾಗಿಲು ಮುಚ್ಚಿದಳು. ಒಂದು ಕ್ಷಣ ಏನು ಮಾಡುವುದೆಂದು ಯೋಚಿಸುತ್ತಾ ಒಳಗೇ ನಿಂತಳು. ಇತ್ತ ಬಾಗಿಲು ಮುಚ್ಚಿದ ಸದ್ದಿಗೆ ಅಚ್ಚಮ್ಮ ಚಾವಡಿಯತ್ತ ಓಡಿದಳು. ಮಲಗಿದ್ದ ಮಗುವನ್ನು ಕಂಡು ಕುಹಕ ನಗೆಯೊಂದು ಮಿಂಚಿ ಮರೆಯಾಯಿತು ತುಟಿಯಂಚಲಿ. ಮಗುವಿನ ಬಳಿ ಹೋಗಿ ಮಲಗಿದ್ದ ಮಗುವನ್ನು ಎಬ್ಬಿಸಿದಳು. ಚಿವುಟಿ ಅಳಿಸಿದಳು. ಮಗು ಒಂದೇ ಸಮನೆ ಕಿರುಚಲು ಶುರು ಮಾಡಿತು ಆದರೂ ಒಳಗಿಂದ ಎಲ್ಲಾ ಕೇಳಿಸಿಕೊಂಡು ಹಲ್ಲು ಕಚ್ಚಿ ದುಃಖ ಸಹಿಸಿದಳೇ ಹೊರತು ಬಾಗಿಲು ತೆರೆಯಲಿಲ್ಲ ಸುಶೀಲ . ಮಗು ಮಾತ್ರ ಅಳುತ್ತಲೇ ಇತ್ತು ಅಚ್ಚಮ್ಮ ಚಿವುಟಿದ ನೋವಿಗೆ .
ಇತ್ತ ಒಳಗೋಡಿದ ಸುಶೀಲ, ನಡುಮನೆಯಿಂದ ಊಟದ ಹಜಾರಕ್ಕೆ ಮೆಲ್ಲನೆ ಸದ್ದಾಗದಂತೆ ಹೋಗಿ ಅಲ್ಲೇ ರುಬ್ಬುವ ಕಲ್ಲಿನ ಬದಿಗೆ ಒರಗಿಸಿಟ್ಟ ಒನಕೆಯನ್ನು ಕೈಗೆ ತೆಗೆದುಕೊಂಡು ಮನೆಯ ಹಜಾರವನ್ನು ಒಂದು ಸುತ್ತು ಬಳಸಿ ಚಾವಡಿಯಲ್ಲಿದ್ದ ಅಚ್ಚಮ್ಮನ ಹಿಂದೆ ಬಂದು ನಿಂತಳು. ಮಗುವಿಗೆ ತೊಂದರೆ ಕೊಡುತ್ತಿದ್ದವಳಿಗೆ, ಮಗುವಿನ ಅಳುವಿನ ಸದ್ದಿಗೆ ಇದ್ಯಾವುದೂ ಗೊತ್ತಾಗಲಿಲ್ಲ.
ಮಗುವಿನ ಚೀರಾಟ ಕೇಳಿ ಸುಶೀಲ ತನಗೆ ಶರಣಾಗಿ ತಾನು ಬಯಸಿದ ಒಡವೆ ದುಡ್ಡನ್ನು ತಂದೊಪ್ಪಿಸುವಳೆಂದೇ ಈಕೆ ಭಾವಿಸಿದ್ದಳು. ತನ್ನ ಉದ್ದೇಶ ಈಡೇರಲು ಮಗುವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಅವಳ ಉಪಾಯವಾಗಿತ್ತು.
ಅದನ್ನೆಲ್ಲಾ ನೋಡುತ್ತಾ, ಮಗ ನಾರಾಯಣನ ಅಳುವಿಗೆ ತನ್ನ ಕಣ್ಣಿಂದಲೂ ನೀರು ಸುರಿಸುತ್ತಾ ಅವಳ ಹಿಂದೆ ನಿಂತ ಸುಶೀಲ ಮರದ ಒನಕೆಯಿಂದ ಬಲವಾಗಿ ತಲೆಗೆ ಹೊಡೆದಳು. ಆ ಪೆಟ್ಟು ಎಲ್ಲಿಂದ ಬಿತ್ತು ಎನ್ನುವುದು ತಿಳಿಯುವಷ್ಟರಲ್ಲಿ ಅಚ್ಚಮ್ಮ ಎಚ್ಚರ ತಪ್ಪಿ ಆಗಿತ್ತು. ಇದೇ ಸಮಯದಲ್ಲಿ ಸುಶೀಲ ಮಗುವನ್ನು ಎತ್ತಿಕೊಂಡು ಹೊರಗೆ ಓಡಿದಳು.
ಮನೆಯಿಂದ ಹೊರಬಂದ ಸುಶೀಲ, ಮನೆಗಿದ್ದ ಎರಡು ಮೂರು ಬಾಗಿಲುಗಳನ್ನು ಹೊರಗಿಂದ ಭದ್ರಗೊಳಿಸಿ ಓಡಿಕೊಂಡೇ ಸುಮಾರು ಅರ್ಧ ಕಿ.ಮೀ ದೂರದ ಇನ್ನೊಂದು ಮನೆಗೆ ಬಂದು ಮನೆಯವರನ್ನು ಕರೆದಳು. ಅಷ್ಟರಲ್ಲಾಗಲೇ ನಸುಕಿನ ವೇಳೆಯಾಗಿತ್ತು. ಇವಳು ಕರೆದ ಸದ್ದಿಗೆ ಎಚ್ಚರಗೊಂಡ ಆ ಮನೆಯವರು ಎದ್ದು ಬಾಗಿಲು ತೆರೆದರು. ಗಾಬರಿಯಿಂದ ಮಗುವಿನೊಂದಿಗೆ ನಿಂತಿರುವ ಇವಳನ್ನು ನೋಡಿ ಏನೋ ಅವಘಡ ಆಗಿದೆಯೆಂದು ಊಹಿಸಿ " ಸುಶೀಲ...! ಏನಾಯ್ತು ಇಷ್ಟೊತ್ತಲ್ಲಿ ಹೀಗೆ ಓಡ್ಕೊಂಡು ಬರುವಂತದ್ದು, ಬಾ ಒಳಗೆ ಕೂತ್ಕೋ ಸುಧಾರಿಸಿಕೋ.." ಎಂದುಗಾಬರಿಯಿಂದಲೇ ವಿಚಾರಿಸಿದರು.
ಮನೆಯವರನ್ನು ಕಂಡೊಡನೆ ಆಕೆ,"ನಮ್ಮನೆಗೆ ನಿನ್ನೆ ರಾತ್ರಿ ಬಸ್ಲಲ್ಲಿ , ವಿಧವೆ ಬ್ರಾಹ್ಮಣ ಹೆಂಗಸಿನ ವೇಷದಲ್ಲಿ ಬಂದು ರಾತ್ರಿ ಉಳಿದುಕೊಳ್ಳಲು ಜಾಗ ಕೊಡಿ ಅಂದಳು, ನಾನು ಒಂಟಿ ಹೆಂಗಸು ಎನ್ನುವ ಕನಿಕರದಿಂದ ಅನುಮತಿ ಕೊಟ್ಟೆ. ರಾತ್ರಿ ಎರಡು ಗಂಟೆಯ ಸುಮಾರಿಗೆ ಆಕೆ ಎದ್ದು ಎಲೆ ಅಡಿಕೆ ತಿನ್ನಲು ಕುಳಿತವಳು, ಚೀಲದಿಂದ ತೆಗೆದ ಎಲೆಯನ್ನು ಮುಂಗೈಯಿಂದ ಮೊಣಕೈವರೆಗೆ ಉಜ್ಜಿದ್ದನ್ನು ಕಂಡು ಬಂದಿರುವುದು ಹೆಂಗಸಲ್ಲ, ಹೆಂಗಸಿನ ವೇಷದಲ್ಲಿರುವ ಗಂಡಸು ಎಂದು ಸ್ಪಷ್ಟವಾಯಿತು" ಎಂದು ಎಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿದಳು. ಇದನ್ನು ಕೇಳಿ ಆ ಮನೆಯವರು ದಂಗಾಗಿ ಹೋದರು. ನಂತರ ಅವರೆಲ್ಲಾ ಈಕೆಯೊಡನೆ ಇವಳ ಮನೆಗೆ ಬಂದು ನೋಡಿದರು. ಮನೆಯಲ್ಲಿ ಏಟು ತಿಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ಹೆಂಗಸಿನ ವೇಷ ಗಂಡಸನ್ನು ಮುಖಕ್ಕೆ ನೀರು ಸುರಿದು ಎಬ್ಬಿಸಿದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಿಡಿದು ಒದೆಗಳನ್ನು ಕೊಟ್ಟರು.
ಸುಶೀಲಳ ಜಾಣ್ಮೆ, ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಮೆಚ್ಚಿ ಪ್ರಶಂಸಿಸಿದರು. ನಂತರ ಆತನನ್ನು ನೆರೆಮನೆಯ ಗಂಡಸರಿಬ್ಬರು ಕೈಕಾಲು ಕಟ್ಟಿ ಪೋಲೀಸ್ ಠಾಣೆಗೆ ಕರೆದೊಯ್ದರು.
ಎಲ್ಲಾ ಮುಗಿದ ಬಳಿಕ ಸುಧಾರಿಸಿಕೊಂಡ ಸುಶೀಲ ಅನಾಹುತವನ್ನು ತಪ್ಪಿಸಿದ್ದಕ್ಕಾಗಿ, ತನ್ನನ್ನೂ ತನ್ನ ಮಗುವನ್ನು ರಕ್ಷಿಸಿದ್ದಕ್ಕಾಗಿ ಮನದಲ್ಲಿಯೇ ದೇವರನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸಿದಳು. ಜೊತೆಗೆ ತನಗೆ ಸಹಾಯಕ್ಕೆ ನಿಂತ ನೆರಮನೆಯವರ ಉಪಕಾರವನ್ನೂ ಸ್ಮರಿಸಿ ಧನ್ಯವಾದಗಳನ್ನು ಅರ್ಪಿಸಿದಳು.
ಮುಗಿಯಿತು.