G K

Inspirational

3.9  

G K

Inspirational

ಪರಿಮಳಾ ಟೀಚರ್..

ಪರಿಮಳಾ ಟೀಚರ್..

3 mins
242


ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಸಮಯ. ಬಹುಶಃ ಮೂರು ಅಥವಾ ನಾಲ್ಕನೆಯ ತರಗತಿಯಲ್ಲಿದ್ದೆನೇನೋ...ಆಗ ಆ ಸರರ್ಕಾರಿ ಶಾಲೆಗೆ ಹೊಸದಾಗಿ ನೇಮಕಗೊಂಡು ಬಂದವರು, ಈ ಪರಿಮಳಾ ಟೀಚರ್.

ಅದೆ ಹಳೆಯ ಮುಖಗಳನ್ನು ಕಂಡು ಬೇಸತ್ತಿದ್ದ ನಮಗೆ ಪರಿಮಳಾ ಟೀಚರ್ ಒಂದಷ್ಟು ಆಪ್ತವಾದರು. ಮುಖ್ಯವಾಗಿ ಅವರು ಬೋರ್ಡ್ ಮೇಲೆ ಬರೆಯುವ ಅಕ್ಷರಗಳಿಂದಾಗಿ. ಸಾಮಾನ್ಯವಾಗಿ ನೋಟ್ ಬುಕ್ಗಳಲ್ಲೂ ಮತ್ತು ಬೋರ್ಡ್ ಮೇಲೂ ಸುಂದರವಾಗಿ ಬರೆಯುವವರು ಬಲು ಅಪರೂಪ. ಕೆಲವರು ನೋಟ್ಸಲ್ಲಿ ಚಂದವಾಗಿ ಬರೆದಷ್ಟು, ಬೋರ್ಡಿನಲ್ಲಿ ಬರೆಯಲಾರರು. ಕೆಲವರ ಕೈ ಬರಹ ಹೇಗೆಂದರೆ ಅದನ್ನು ಓದಲು ಸುಮಾರು ಸಮಯ ಬೇಕಾಗುತ್ತಿತ್ತು. ನಾನು ಕಂಡ ಮೊದಲ ಸುಂದರ ಕೈ ಬರಹ ಅದೂ ಬೋರ್ಡ್ ಮೇಲೆ ಎಂದರೆ ಅದು ಪರಿಮಳಾ ಟೀಚರ್ ದೆ.

ಬರಹದಲ್ಲಿನ ಸುಂದರತೆಯ ಜೊತೆಗೆ ಪರಿಮಳಾ ಟೀಚರ್ ಗೆ ಒಂದಷ್ಟು ಶಿಸ್ತು ಮೈಗೂಡಿತ್ತು. ಪಾಠ ಮಾಡುವುದರಿಂದ ಹಿಡಿದು, ಪಾಠ ಓದಿಸುವವರೆಗೂ, ಈ ಶಿಸ್ತಿನ ಝಲಕು ಹೊರಹೊಮ್ಮುವುದು. ಅವರು ಪಾಠಕ್ಕೆ ನಿಂತರೆ ನಮ್ಮನ್ನು ಒಂದು ನೂತನ ಪ್ರಪಂಚಕ್ಕೆ ಕರೆದೊಯ್ಯುವರೆಂದೆ ಅರ್ಥ. ಈ ಟೈಮಿಷಿನ್ ಅಂತ ಒಂದಿದೆಯಂತೆ, ಇದು ಗತಕಾಲಕ್ಕೆ ನಮ್ಮನ್ನು ಕರೆದೊಯ್ಯುವುದಂತೆ...ಈ ಅಂತೆಕಂತೆಗಳ ಪುರಾಣ ನನಗೆ ಗೊತ್ತಿಲ್ಲ, ಆದರೆ ಪರಿಮಳಾ ಟೀಚರ್ ಪಾಠದಲ್ಲಿ ನಾವು ಕಾಣದ ಪ್ರಪಂಚಗಳೆ ಇಲ್ಲ.

ನನಗೆ ಈಗಲೂ, ಈ ವಯಸ್ಸಿನಲ್ಲೂ ಒಂದು ಕುಮಾರವ್ಯಾಸನ ಪದ್ಯ ಕಂಠಪಾಠವಾಗಿದೆ. ಅದು ಯಾವ ಸಂದರ್ಭದ್ದೂ ಅಂತ ನೆನಪಿಲ್ಲ. ಆ ಪದ್ಯ ಹೀಗೆ ಆರಂಭವಾಗುತ್ತದೆ.

"ಕೊಳಚೆ ನೀರೊಳಗಾಳುತೇಳುತ

ಜಲಧಿ ಕಾಲ್ದೊಳೆಯೆಂಬ ಭಂಡರ

ಮುಳಿದು ಮಾಡುವುದೇನು ಮೊದಲಲಿ

ನಮ್ಮ ನೀ ಗೆಲಿದು"

ಇದು ಬಹುಶಃ ಅಭಿಮನ್ಯು ಪ್ರಕೋಪ ಎನ್ನಿಸುತ್ತದೆ.

ಈ ಪದ್ಯವನ್ನು ಅದೆಷ್ಟು ಆವೇಶಭರಿತರಾಗಿ, ಹಾವಭಾವ ಪೂರ್ಣವಾಗಿ ಅಭಿನಯಿಸಿ ಹೇಳಿದ್ದರೆಂದರೆ, ಸ್ವತಃ ನಾವೆ ಕುರುಕ್ಷೇತ್ರ ರಣರಂಗದಲ್ಲಿ ಸಾಕ್ಷಾತ್ ಅಭಿಮನ್ಯುವಿನ ಮುಂದೆ ನಿಂತು ಅದನ್ನೆಲ್ಲಾ ನೋಡುತ್ತಿದ್ದೆವೆಯೋ ಎನ್ನುವ ರೀತಿಯಲ್ಲಿ.

ಎಷ್ಟೋ ದಿನಗಳವರೆಗೆ ಕೈಯಲ್ಲೊಂದು ಕೋಲನ್ನು ಹಿಡಿದು, ಅದನ್ನೆ ಬಿಚ್ಚುಗತ್ತಿ ಎಂದು ಭಾವಿಸಿ, ಈ ಪದ್ಯವನ್ನು ಹೇಳಿಕೊಂಡು ಸಂಭ್ರಮಪಡುತ್ತಿದ್ದೆನಾಗ.

ಪರಿಮಳಾ ಟೀಚರ್ ಅವರ ಬಹುಮುಖ್ಯ ಗುಣ ಸಾಹಿತ್ಯ ಪ್ರೇಮ. ನನಗೆ ತಿಳಿದಂತೆ ಆ ಸಮಯದಲ್ಲಿ ಅವರು ಕೇವಲ ಹತ್ತನೆ ತರಗತಿ ಮುಗಿದ ನಂತರ ಶಿಕ್ಷಕರ ತರಬೇತಿ ಪಡೆದು ಬಂದವರು. ಆದರೂ ಅವರಿಗೆ ಸಾಹಿತ್ಯ ಜ್ಞಾನ ಅಪಾರ. ಪಂಪನಿಂದ ಕುವೆಂಪುವರೆಗೂ ಅವರು ನಮಗೆ ಪರಿಚಯಿಸದಿರುವ ಕವಿಗಳೆ ಇಲ್ಲ. ರಾಷ್ಟ್ರೋತ್ಥಾನ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾಗುತ್ತಿದ್ದ "ಭಾರತ-ಭಾರತಿ" ಸರಣಿಯ ಚಿಕ್ಕ ಪುಸ್ತಕಗಳನ್ನು ರಾಶಿರಾಶಿ ತಂದಿಟ್ಟು ವಾರದಲ್ಲೊಂದು ದಿನ ಓದಿಸುವುದು ಅವರ ರೂಢಿ. ಈ ಓದು ಅಂತಿಂತಹ ಓದಲ್ಲಾ..ಭಾವ ಪೂರ್ಣವಾಗಿ, ಸ್ಪಷ್ಟವಾಗಿ, ವ್ಯಾಕರಣಶುದ್ಧವಾಗಿ, ಉಸಿರನ್ನು ನಿಯಂತ್ರಿಸುತ್ತಾ ಓದುವುದನ್ನು ಹೇಳಿಕೊಟ್ಟವರೆ, ಅವರು. ಒಂದು ಪದ, ಅಕ್ಷರ ತಪ್ಪಿದರೂ ಹಸಿಯಾದ ತೆಳು ಕಟ್ಟಿಗೆಯಿಂದ ಕಾಲಿಗೆ ಬಾಸುಂಡೆ ಮೂಡುವಂತೆ ಏಟು ತಿನ್ನಬೇಕಾಗುತ್ತಿತ್ತು.

ಅಕಾರ,ಹಕಾರಗಳ ವ್ಯತ್ಯಾಸ, ಸ,ಶ ಪ್ರಯೋಗ, ಶಕಟರೇಫೆಗಳ ಉಚ್ಛಾರಣೆ, ಲೇಖನ ಚಿಹ್ನೆಗಳನ್ನು ಗಮನಿಸುವಿಕೆ, ಭಾವಗಳಿಗನುಗುಣವಾಗಿ ಓದುವುದು, ಓದಿನ ಧ್ವನಿ ಏರಿಳಿತ, ಸ್ಪಷ್ಟ ಉಚ್ಛಾರಗಳು..ಒಂದೆ ಎರಡೆ.

ನನಗೆ ಕನ್ನಡ ಸಾಹಿತ್ಯದ ಬನಾದಿ ಹಾಕಿದವರೆ, ಪರಿಮಳಾ ಟೀಚರ್.

ಅವರಿಗೆ ಬರದಿರುವ ವಚನವಿಲ್ಲ, ದಾಸರ ಪದಗಳಿಲ್ಲ, ಜನಪದ ಗೀತೆಗಳಿಲ್ಲ‌...‌ಎಲ್ಲವೂ ಕಂಠಸ್ಥ. ನಮಗೂ ಹಾಗೆಯೆ ತಯಾರು ಮಾಡಿದ್ದೊಂದು ವಿಶೇಷತೆ. ನಿತ್ಯ ಪ್ರಾರ್ಥನಾ ಸಭೆಯಲ್ಲಿ ಹೊಸ ಹೊಸ ಗೀತ ಗೇಯಗಳನ್ನು, ವಚನ,ಕೀರ್ತನೆಗಳನ್ನು ಪ್ರಸ್ತುತ ಪಡಿಸಲು ಹುರಿದುಂಬಿಸುವರು.

ಮಕ್ಕಳಿಂದ ಸಂಗ್ರಹಿಸಿದ ಸುಭಾಷಿತಗಳೆ ಆ ಕಾಲಕ್ಕೆ ಮೂರು ಸಾವಿರ ದಾಟಿತ್ತು. ಇನ್ನು ಬರವಣಿಗೆಯಲ್ಲೂ ಅದೆ ಶಿಸ್ತು...ಅಕ್ಷರಗಳು ಚಂದವಾಗಿ ಕಾಣುವಂತೆ ಬರೆಯಲೆ ಬೇಕು. ಶುದ್ಧ ಕಾಪಿ ಲೇಖನ ಬರೆಯಿಸಿ, ಬರೆಯಿಸಿ ನಮ್ಮೆಲ್ಲರ ಕೈ ನೋವಾಗಿ, ಊದಿಕೊಂಡ ಮೇಲೆ ಅವರಿಗೆ ಸಮಾಧಾನ.

ಪರಿಣಾಮ....ಇಂದಿಗೂ ನನ್ನ ಬರಹದಲ್ಲಿ ಒಂದು ಚಿತ್ತು, ಕಾಟುಗಳಿಲ್ಲ. ಒಮ್ಮೆ ಹಿಡಿದ ಲೇಖನಿ ಸರಾಗವಾಗಿ ಸಾಗುವುದಕ್ಕೆ ಅಡೆತಡೆಗಳಿಲ್ಲ. ವಿಚಾರ ಲಹರಿ ಓತಪ್ರೋತವಾಗಿ ಹೊಮ್ಮಲು ಯಾವುದೆ ಸಂದಿಗ್ಧಗಳಿಲ್ಲ...

ಇದು ನನ್ನ ಹೆಮ್ಮೆ ಅಲ್ಲ, ಇದು ಅವರ ಕೊಡುಗೆ.

ನಾನಿಂದು ಏನಾದರೂ ಒಂದಷ್ಟು ಸಾಹಿತ್ಯದಲ್ಲಿ ರಚನಾತ್ಮಕವಾಗಿ ಕೆಲಸಮಾಡುತ್ತಿದ್ದೇನೆಂದರೆ ಅದಕ್ಕೆ ಮೂಲ ಕಾರಣವೆ ಪರಿಮಳಾ ಟೀಚರ್.

"ಮಾತೃಭಾಷೆಯನ್ನು ಪ್ರೀತಿಸದವನು ಮಾತೃಹತ್ಯೆಯನ್ನು ಮಾಡಿದ ಪಾಪಿಗೆ ಸಮನಾದವನು"

ಇದು ಅವರು ಹೇಳುತ್ತಿದ್ದ ಒಂದು ವಾಕ್ಯ.

ಯಾವ ITC ಗಳಿಲ್ಲದೆ, ಯಾವುದೆ ತಂತ್ರಜ್ಞಾನದ ನೆರವಿಲ್ಲದೆ ಅವರು ನಮ್ಮಲ್ಲಿ ಮೂಡಿಸಿದ ಕಲ್ಪನಾ ಪ್ರಪಂಚವಿದೆಯಲ್ಲಾ, ಅದಕ್ಕೆ ಯಾವ ಡಿಸ್ನಿಲ್ಯಾಂಡ್ ಆಗಲಿ, ಫಿಲಂಸಿಟಿಗಳಾಗಲಿ ಸಮನಾಗಲಾರದು.

ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಅಂತಾರೆ. ಕೇವಲ ಓದಿನಲ್ಲಿ ಜಾಣತನವಿದ್ದರೆ ಸಾಲದು, ವ್ಯವಹಾರ ಕುಶಲತೆ ಬೇಕು. ಅದನ್ನೂ ಕಲಿಸಿಕೊಟ್ಟವರು.

ಸಂತೆ,ಪೇಟೆ, ಆದಾನ,ಪ್ರದಾನ, ಖರೀದಿ,ಮಾರಾಟ, ಉತ್ತುವುದು, ಬಿತ್ತುವುದು, ನೇಯುವುದು, ನುಡಿಸುವುದು..... ಎಲ್ಲದರ ಪ್ರಾತ್ಯಕ್ಷಿಕೆ ನಮಗೆ ಆದದ್ದು ಅವರ ಕೃಪೆಯಿಂದ.

ಇಂದು ಕಾಲ ಬದಲಾಗಿದೆ. ಶಿಕ್ಷಣ ಪದ್ಧತಿಗಳೂ ಸಾಕಷ್ಟು ಬದಲಾಗಿವೆ. ಶಿಕ್ಷಕರೂ ಈಗ "ಸಂಪನ್ಮೂಲ ಭರಿತ" ರಾಗಿದ್ದಾರೆ, ಸಾಕಷ್ಟು ಜ್ಞಾನ ಸೋತ್ರಗಳು ಹತ್ತಾರು ಕಡೆಯಿಂದ ಸುಲಭವಾಗಿ ಲಭ್ಯವಿದೆ....ಎಲ್ಲಾ ನಿಜ.

ಆದರೆ ಭಾವನಾತ್ಮಕವಾಗಿ ಬೆಸೆಯುವ ಕಲೆ ಇಂದಿನ ಶಿಕ್ಷಕರಿಗೂ ಇಲ್ಲ, ಶಿಕ್ಷಣದಲ್ಲೂ ಇಲ್ಲ, ಮುಖ್ಯವಾಗಿ ಮಕ್ಕಳಲ್ಲಿ ಅಂತಹ ಭಾವುಕತೆಯ ನೆರಳೆ ಇಲ್ಲ.

ಭಾವಗಳಿಲ್ಲದ ಪ್ರಪಂಚದಲ್ಲಿ ಯಂತ್ರದಂತೆ ಬದುಕುವುದನ್ನು ಇಂದಿನ ಶಿಕ್ಷಣ ಕಲಿಸುತ್ತಿದೆಯೆ? ಗೊತ್ತಿಲ್ಲ!!!

ಕನ್ನಡಕ್ಕೂ, ಕರುಳಿಗೂ ಬೆಸುಗೆ ಹಾಕಿದ ಪರಿಮಳಾ ಟೀಚರ್ ಅಂಥವರು ಮಾತ್ರ ಇಂದು ಅಪರೂಪವೆ..‌



Rate this content
Log in

Similar kannada story from Inspirational