ಕೂಡಿಟ್ಟ ದುಡ್ಡು
ಕೂಡಿಟ್ಟ ದುಡ್ಡು


ನಾನು ಪದ್ಮಜಾ, ಪಿಯುಸಿ ಮುಗಿಸುವ ಹೊತ್ತಿಗೆ ರಸ್ತೆ ಅಪಘಾತದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡೆ. ಶ್ರೀಮಂತಿಕೆ ಇಲ್ಲದಿದ್ದರೂ ಅಪ್ಪ ಕಟ್ಟಿಸಿದ ಮನೆ ಮತ್ತು ಅಪ್ಪನ ಪೆನ್ಷನ್ ಹಣದಿಂದ ಎರಡು ಹೊತ್ತಿನ ಊಟವನ್ನು ನಾನು ತಮ್ಮ ತಂಗಿಯರ ಜೊತೆಯಲ್ಲಿ ಮಾಡುತ್ತಿದ್ದೆ.ನಮ್ಮ ವಿದ್ಯಾಭ್ಯಾಸಕ್ಕೆ ಹಣ ಸಾಲದೇ ಇದ್ದುದರಿಂದ ನಾನು ಬೆಳಿಗ್ಗೆ ಗಾರ್ಮೆಂಟ್ಸ್ ನಲ್ಲಿ ದುಡಿದು ರಾತ್ರಿ ಕಾಲೇಜು ಓದಿದೆ. ಬ್ಯಾಂಕಿಂಗ್ ಪರೀಕ್ಷೆ ಕಟ್ಟಿದೆ. ಒಳ್ಳೆಯ ಅಂಕ ಪಡೆದು ಬ್ಯಾಂಕ್ ಕೆಲಸವನ್ನು ಗಿಟ್ಟಿಸಿ ಕಳೆದ ಹದಿನೈದು ವರ್ಷಗಳಿಂದ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಕೆಲಸ ಸಿಕ್ಕಿದ ಮೇಲೆಯೇ ತಮ್ಮ ತಂಗಿ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿದ್ದು. ಬೇಕಾದ ಬಟ್ಟೆ ಹಾಕಿ ಸಂತೋಷ ಪಟ್ಟದ್ದು. ಹೆತ್ತವರಿಲ್ಲದೆ ಇದ್ದರೂ ನನ್ನ ಕರ್ತವ್ಯ ಮರೆಯಲಿಲ್ಲ ನಾನು. ಪೈಸೆ ಪೈಸೆಯನ್ನು ಜೋಡಿಸಿ ತಮ್ಮ ತಂಗಿಯನ್ನು ಓದಿಸಿದೆ.ಬ್ಯಾಂಕಿನಲ್ಲಿ ಕೆಲಸವಿದ್ದುದ್ದರಿಂದ ಯಾವ ಖಾತೆಯಲ್ಲಿ ಹಣ ಹಾಕಿದರೆ ಜಾಸ್ತಿ ಬಡ್ಡಿ ಬರುವುದೆಂದು ನೋಡಿಕೊಂಡು ಕೈಯಲ್ಲಿದ್ದ ಸ್ವಲ್ಪ ಹಣವನ್ನಾದರೂ ಖಾತೆಗೆ ಹಾಕುತ್ತಿದ್ದೆ.ತಮ್ಮ ಮಧು ಇಂಜಿನಿಯರ್ ಆಗಬೇಕೆಂದಾಗ ಬ್ಯಾಂಕ್ ಖಾತೆಯಲ್ಲಿ ಹಾಕಿದ ಎಲ್ಲಾ ಹಣವನ್ನು ತೆಗೆದೆ. ಸಾಲ ಮಾಡಿ ಅವನನ್ನು ಇಂಜಿನಿಯರಿಂಗ್ ಓದಿಸಿ ಅವನ ಕಾಲ ಮೇಲೆ ನಿಲ್ಲಿಸಿದೆ. ತಂಗಿ ಪ್ರಿಯಳನ್ನು ಪದವಿಯವರೆಗೆ ಓದಿಸಿದೆ. ಓದಿನಲ್ಲಿ ಅಷ್ಟೊಂದು ಆಸಕ್ತಿ ಇರದ ಅವಳಿಗೆ ಅವಳು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯನ್ನು ಮಾಡಿಸಿದೆ.ಮಧು ಕೆಲಸ ಸಿಕ್ಕಿತೆಂದು ಪರದೇಶಕ್ಕೆ ಹೋದ. ಪ್ರಿಯ ಅವಳ ಗಂಡನ ಮನೆಗೆ ಹೋದಳು.ಇನ್ನೂ ನನ್ನ ಜೀವನ ಒಂಟಿಯಾಗಿ ಕಳೆಯಬೇಕೆನೋ ಎಂದು ದಿನದೂಡುತ್ತಿದ್ದೆ.
ಬ್ಯಾಂಕಿನಲ್ಲಿ ಖಾತೆ ತೆರೆಯಲು ಬಂದ ರಾಜುವಿನ ಪರಿಚಯವಾಗಿ ಸ್ನೇಹ ಹುಟ್ಟಿತು.ಆ ಸ್ನೇಹದಿಂದಲೇ ನಾವಿಬ್ಬರೂ ಒಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸುವಂತಾಯಿತು. ದಿನವೂ ನಮ್ಮ ಭೇಟಿ ಪಾರ್ಕಿನಲ್ಲಾಗುತ್ತಿತ್ತು. ಒಂದು ದಿನ ನನ್ನಿಷ್ಟದ ಮಲ್ಲಿಗೆ ಹೂವಿನೊಂದಿಗೆ ರಾಜು ಮನೆಗೆ ಬಂದು ಸಿಹಿ ತಿನ್ನಿಸುತ್ತಿದ್ದಾಗ ಅವನಿಗೊಂದು ಪೋನ್ ಕರೆ ಬಂತು.ಈಗಲೇ ಬರುವೆ ಎಂದು ಪೋನಿನಲ್ಲಿ ಹೇಳುತ್ತಾ ಹೋದ ರಾಜು ಎರಡು ದಿನವಾದರೂ ಪತ್ತೆಯೇ ಇಲ್ಲ. ಪೋನ್ ಮಾಡಿದರೆ ಸ್ವಿಚ್ ಆಫ್ ಬರುವುದರಿಂದ ರಾಜುವಿನ ಬಗ್ಗೆ ತಿಳಿಯದೆ ಒದ್ದಾಡಿದೆ. ನನ್ನ ನೋವು ಸಂಕಟ ದೇವರಿಗೆ ತಿಳಿಯಿತೋ ಏನೋ, ಮೂರನೆಯ ದಿನ ಬಾಡಿದ ಮುಖದೊಂದಿಗೆ ರಾಜು ಬೆಳ್ಳಂಬೆಳಗೆ ಬಾಗಿಲು ತಟ್ಟಿದ. ಕಾಫಿ ಕೊಟ್ಟು ಏನಾಯಿತೆಂದು? ಕೇಳಿದೆ.ಅಮ್ಮನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು, ಆಸ್ಪತ್ರೆಯಲ್ಲಿದ್ದಾರೆ. ಅಪರೇಷನ್ ಖರ್ಚ
ು ಎರಡು ಲಕ್ಷ ರೂಪಾಯಿ, ನಾನೊಬ್ಬ ಬಡ ಗುಮಾಸ್ತ. ಎರಡು ಲಕ್ಷ ಹಣದ ವ್ಯವಸ್ಥೆ ಮಾಡಿಸಲಾಗಲಿಲ್ಲ. ಅಮ್ಮನಿಗೆ ಆಪರೇಷನ್ ಮಾಡಿಸದೇ ಸಾವು ಬದುಕಿನ ಹೋರಾಟ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ.
ರಾಜುವಿನ ತಾಯಿ ಮುಂದೆ ನನ್ನ ಅತ್ತೆಯಾಗುವವರು, ಅತ್ತೆ ತಾಯಿ ಸಮಾನವೆಂದು "ನಾನು ಕೂಡಿಟ್ಟ ಹಣ"ವನ್ನು ಕೊಡುತ್ತೇನೆಂದು ಭರವಸೆ ನೀಡಿದೆ. ಮರುದಿನ ಹೇಳಿದ ಸಮಯಕ್ಕೆ ಬ್ಯಾಂಕಿಗೆ ಬಂದ ರಾಜುವಿಗೆ ನನ್ನ ಅಕೌಂಟ್ ನಿಂದ ಎರಡು ಲಕ್ಷ ಹಣವನ್ನು ಕೊಟ್ಟೆ. ಹಣ ಪಡೆದು ಹೋದ ರಾಜುವಿನ ವಿಚಾರ ಎರಡು ವರ್ಷ ಕಳೆದರೂ ಆಗಲಿಲ್ಲ. ಒಂಟಿಯಾಗಿ ಅವನ ನೀರಿಕ್ಷೆಯಲ್ಲಿ ದಿನದೂಡುತ್ತಿದ್ದೆ. ಒಂದು ದಿನ ಸೂರ್ಯೋದಯದ ವೇಳೆಗೆ ಬಾಗಿಲು ತಟ್ಟಿದ ಸದ್ದಿಗೆ ಎಚ್ಚರಗೊಂಡು ಬಾಗಿಲು ತೆರೆದೆ.
ಮನೆಯ ಎದುರಿನಲ್ಲಿ ರಾಜು ನಿಂತಿದ್ದ.ದೇಹ ಸೊರಗಿದರೂ ಕಣ್ಣಿನಲ್ಲಿ ಕಾಂತಿ ತುಂಬಿತ್ತು.ಕಾಫಿ ಮಾಡಿ ಅವನಿಗೂ ಕೊಟ್ಟು ನಾನು ಕುಡಿದೆ. ರಾಜುವಿನಲ್ಲಿ ಯಾಕೆ ನನ್ನ ಬಿಟ್ಟು ಹೋದೆ ? ಎಂದು ಕೇಳಿದೆ. "ನೀನು ಪೈಸೆ ಪೈಸೆ ಜೋಡಿಸಿ ಕೂಡಿಟ್ಟ ಹಣವನ್ನು ಕೊಡದೆ ನನಗೆ ಸಮಾಧಾನವಿರಲಿಲ್ಲ. ನಿನ್ನ ದುಡಿಮೆಯ ಹಣ ಹಿಂತಿರುಗಿಸಲು ನನ್ನ ದುಡಿಮೆ ಸಾಲುತಿರಲಿಲ್ಲ, ಅದಕ್ಕಾಗಿ ಊರು ಬಿಟ್ಟು ಮುಂಬಯಿ ಸೇರಿದೆ. ಮುಂಬಯಿಯಲ್ಲಿ ಕೆಲಸಕ್ಕೆ ಗಂಟೆಗಳ ಆಧಾರದ ಮೇಲೆ ಸಂಬಳ ಕೊಡುತ್ತಿದ್ದರು. ಹಗಲು ರಾತ್ರಿ ದುಡಿದೆ.ಎರಡು ವರ್ಷದಲ್ಲಿ ನೀನು ಕೊಟ್ಟ ಎರಡು ಲಕ್ಷ ರೂಪಾಯಿ ಸಂಪಾದಿಸಿದೆ." ಎಂದು ನನ್ನ ಬಳಿ ಬಂದು ಹಣವನ್ನು ನೀಡಿದ.
ಅವನ ಪ್ರೀತಿಗೆ ಸೋತು ಅವನನ್ನು ಪ್ರೀತಿಯಿಂದ ಅಪ್ಪಿಕೊಂಡೆ. ನನ್ನ ದುಡ್ಡು ಕೂಡಿಡುವ ಬುದ್ಧಿಯಿಂದ ತಮ್ಮನಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಅವನ ಭವಿಷ್ಯ ಬೆಳಗಿತು.ತಂಗಿಯ ಮದುವೆಯಲ್ಲಿ ವರದಕ್ಷಿಣೆ, ವರೋಪಚಾರ ಕೊಟ್ಟದ್ದರಿಂದ ಅವಳ ಬಾಳು ಸುಖವಾಗಿದೆ. ಅತ್ತೆಯವರ ಜೀವ ಉಳಿಸಿ ರಾಜುವಿನ ಪ್ರೀತಿ ಗಳಿಸಿದೆ. ನನ್ನ ರಾಜು ಗುಣದಲ್ಲಿ ಅಪ್ಪಟ ಚಿನ್ನವೆಂದು ತಿಳಿಯುವಂತಾಯಿತು ನನಗೆ ಎಂದು ಮನಸ್ಸಿನಲ್ಲಿ ನಕ್ಕುಬಿಟ್ಟೆ.
ನಮ್ಮ ಮದುವೆಯಾಗಿ ಎರಡು ವರ್ಷವಾಯಿತು. ಅತ್ತೆಯವರು ನಮ್ಮ ಜೊತೆಯಲ್ಲಿದ್ದಾರೆ. ನಾನೀಗ ತಾಯಿಯಾಗಿದ್ದೇನೆ. ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ಪ್ರಿಯ ಹಾಗೂ ವಿದೇಶದಿಂದ ಮಧು ಕೂಡಾ ಬಂದಿದ್ದಾರೆ. ರಾಜು ಪ್ರೀತಿಯಿಂದ ಮಗುವಿಗೆ
" ಆಕಾಶ್" ಎಂದು ಹೆಸರಿಟ್ಟು ನಿನ್ನ ಕೀರ್ತಿ ಆಕಾಶದಷ್ಟು ಎತ್ತರಕ್ಕೆ ಬೆಳೆಯಲಿ ಎಂದರು. ಮಗುವಿಗೆ ಕಿವಿ ಚುಚ್ಚಿದ ಮೇಲೆ ಮಧು ಆಕಾಶನನ್ನು ತೋಳಲ್ಲಿ ಬಳಸಿ ಮುದ್ದಿಸುತ್ತಾ ನಿನಗೂ"ನಿಮ್ಮ ಅಮ್ಮನ ಹಾಗೆ ದುಡ್ಡು ಕೂಡಿಡುವ ಬುದ್ಧಿ ಬರಲಿ" ಎಂದು ಹರಸಿದಾಗ ನಮ್ಮ ಮನೆ ನಗೆಕಡಲಾಯಿತು.