ನಿರ್ಭಯ
ನಿರ್ಭಯ
ನಾನೇನು ಫಿಲ್ಮ್ ಹೀರೋಯಿನ್ ತರಹ ಮೈಕೈ ಕಾಣಿಸುವ ಬಟ್ಟೆ ಹಾಕಿರಲಿಲ್ಲ, ಈಗಿನ ಹುಡುಗಿಯರ ಹಾಗೆ ಅತಿಯಾದ ಮೇಕಪ್ ಮಾಡಿಕೊಂಡವಳಲ್ಲ. ಮನೆಯಲ್ಲಿರುವ ವಯಸ್ಸಾದ ಅಪ್ಪ ಅಮ್ಮ, ತಂಗಿಯಂದಿರ ಹೊಟ್ಟೆ ತುಂಬಿಸಲು ಮನೆ ಕೆಲಸ, ತೋಟದ ಕೆಲಸಕ್ಕೆ ಹೋದರೆ ಸಂಬಳ ಕಡಿಮೆ ಎಂದು ಕಾಂಕ್ರೀಟ್ ನ ಕೂಲಿ ಕೆಲಸ ಮಾಡುವವಳು.
ಎಂಟು ಗಂಟೆಯೊಳಗೆ ಕೆಲಸ ಶುರುಮಾಡಲಿದೆಯೆಂದು ಬೆಳಿಗ್ಗೆ ಬೇಗ ಎದ್ದು ಆರು ಗಂಟೆಗೆ ತಂಗಳ್ನ ತಿಂದು ಕೆಲಸಕ್ಕೆ ಹೋದರೆ , ಬೆಳಗಿನ ತಿಂಡಿ, ಮಧ್ಯಾಹ್ನದ ಊಟ , ಸಂಜೆ ಹೊತ್ತಿಗೆ ಚಾ ಎಲ್ಲವನ್ನೂ ನಮ್ಮನ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ಬ್ರೋಕರ್ ಕೊಡಿಸುತ್ತಿದ್ದ. ಅವನು ತರಿಸಿಕೊಟ್ಟ ಊಟ ತಿಂಡಿಯಿಂದಲೇ ನನ್ನ ಹೊಟ್ಟೆಯ ಜೊತೆಯಲ್ಲಿ ಮೈಕೈ ತುಂಬಿಕೊಂಡಿತ್ತು.
ಸಂಜೆ ಆರುಗಂಟೆ ಹೊತ್ತಿಗೆ ಕೆಲಸ ಬಿಟ್ಟು ಅವನ ಟೆಂಪೋದಲ್ಲಿ ಹೊರಟರೆ ಬೆಳಿಗ್ಗೆ ನಾವೆಲ್ಲರೂ ಸೇರುವ ಬಸ್ಸು ನಿಲ್ದಾಣ ಹತ್ತಿರ ತಲುಪುವಾಗ ರಾತ್ರಿ ಎಂಟು ಗಂಟೆ ಆಗುತ್ತಿತ್ತು. ಅಲ್ಲಿಂದ ಎಲ್ಲರೂ ಅವರ ಅವರ ಮನೆಗೆ ನಡೆದುಕೊಂಡು ಹೋಗ್ತಾ ಇದ್ರು. ನಾನು ಎಂದಿನಂತೆ ಆವತ್ತು ಕೂಡಾ ಒಬ್ಬಳೆ ಬರುತ್ತಾ ಇದ್ದೆ.
ನನ್ನ ಹಿಂದಿನಿಂದ ನೆರಳು ಕಾಣಿಸಿದಂತಾಗಿ ಹಿಂತಿರುಗಿ ನೋಡಿದೆ, ಯಾರು ಕಾಣಿಸಲಿಲ್ಲವೆಂದು ನೆಮ್ಮದಿಯಿಂದ ಬರುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಮತ್ತದೇ ಚಪ್ಪಲು ಸವೆಯುವ 'ಪರ ಪರ ' ಎಂಬ ಸದ್ದಿಗೆ ಹೆದರಿಕೆಯಿಂದ ಎದೆ 'ಡಬ್ ಡಬ್' ಎಂದು ಬಡಿದುಕೊಳ್ಳತೊಡಗಿತು. ಪರಪರ ಶಬ್ದ ಹೆಚ್ಚಾದಂತೆ ಹಿಂತಿರುಗಿ ನೋಡದೇ ಎಂದಿಗಿಂತಲೂ ಹತ್ತು ಪಟ್ಟು ವೇಗವಾಗಿ ಚಲಿಸಿದೆ.
ತಿರುವೊಂದು ದಾಟಿದರೆ ನಮ್ಮ ಮನೆಗೆ ತಲುಪಬಹುದೆಂದು ಮತ್ತಷ್ಟು ವೇಗವಾಗಿ ಹೆಜ್ಜೆ ಹಾಕಿದೆ. ನಡೆದು ನಡೆದು ಸುಸ್ತಾಗಿ ಕಾಲುಗಳು ಸೋಲುವಂತಾಗಿ ಒಂದು ಕ್ಷಣ ನಿಂತು ಹಿಂತಿರುಗಿ ನೋಡಿದೆ. ಯಾರು ಹಿಂಬಾಲಿಸುತ್ತಿಲ್ಲವೆಂದು ಖಾತ್ರಿಯಾದ ಮೇಲೆ ಹೆಜ್ಜೆಯ ವೇಗವನ್ನು ಕಡಿಮೆ ಮಾಡಿದೆ.
ಕ್ಷಣದೊಳಗೆ ಇಬ್ಬರೂ ನನ್ನನ್ನು
ಸುತ್ತುವರೆದು ತಿರುವಿನ ಪಕ್ಕದಲ್ಲಿದ್ದ ಕಾಡಿಗೆ ಎಳೆದುಕೊಂಡು ಹೋದರು. ನನ್ನ ದೇಹದ ಅಂಗಾಂಗಗಳನ್ನು ಆಕ್ರಮಿಸಿ ನನಗೆ ಚಿತ್ರಹಿಂಸೆ ಕೊಟ್ಟರು.ಅವರ ಕಪಿಮುಷ್ಟಿಗೆ ಸಿಲುಕಿ ಬಿಡಿಸಿಕೊಳ್ಳಲಾಗದೇ ನಾನು ಸೋತು ಹೋದೆ.
ಬಡವನಾದರೂ ಚಿಂತೆಯಿಲ್ಲ, ನನ್ನನ್ನು ಪ್ರೀತಿಸುವ ಹುಡುಗನ ಜೊತೆಯಲ್ಲಿ ಮದುವೆಯಾಗುವ ಕನಸುಗಳು ಕಣ್ಣೀರಿನಲ್ಲಿ ಜಾರಿ ಹೋದವು.
ತುಂಬಾ ದಿನದಿಂದ ನನ್ನ ಬಗ್ಗೆ ಮಾಹಿತಿ ಸಂಗ್ರಹಿಸಿ ಎಲ್ಲಾ ತಯಾರಿ ಮಾಡಿ ಬಂದಿರಬೇಕು, ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್ ಹಾಕಿ ನನ್ನ ದೇಹಕ್ಕೆ ಸ್ನಾನಮಾಡಿಸಿ ಅಂತ್ಯ ಸಂಸ್ಕಾರ ಮಾಡಲು ತಯಾರಾದರು.ಸುಪ್ತ ಮನಸ್ಸು ವಯಸ್ಸಾದ ಅಪ್ಪ ಅಮ್ಮನಿಗೆ ಯಾರಿದ್ದಾರೆಂದು? ಎಚ್ಚರಿಸಿತು.
ಅವರಿಬ್ಬರನ್ನೂ ದೂಡಿ ಕಾಡುದಾರಿಯಿಂದಲೇ ಓಡಿ ಬಂದೆ. ನನ್ನ ಹಿಂದೆ ಬಂದವರು ಬೆಂಕಿ ಕಡ್ಡಿಯನ್ನು ಗೀರಿಯೇ ಬಿಟ್ಟರು.... ಪೆಟ್ರೋಲ್ ತನ್ನ ಪ್ರಭಾವ ತೋರಿಸಿ 'ಬಗ್ ' ಎಂದು ಉರಿದು ನನ್ನ ಮೈಯನ್ನು ಅವರಿಸಿತು.
ಅಗ್ನಿಯ ಪ್ರಕೋಪಕ್ಕೆ ಕಣ್ಣಿನ ರೆಪ್ಪೆಗಳು ಸುಟ್ಟು ಹೋಗಿ ಕಣ್ಣು ತೆರೆಯಲಾಗುತಿರಲಿಲ್ಲ. ತಲೆಕೂದಲು, ಮೈಯಲ್ಲಿನ ರೋಮವೆಲ್ಲಾ ಸುಟ್ಟು ನೋವು ತಾಳಲಾರದೆ ಕಿರುಚುತ್ತಾ ಓಡುತ್ತಾ ಬರುತ್ತಿದ್ದಾಗ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ
ಲಾರಿಗೆ ಡಿಕ್ಕಿ ಹೊಡೆದೆ.
ನನ್ನ ಪ್ರಾಣಪಕ್ಷಿ ಹಾರಿ ಹೋಗಿದೆಯೆಂದು ತಿಳಿದು ನನ್ನ ಬದುಕು ಕಸಿದುಕೊಂಡವರು ಹಿಂತಿರುಗಿ ಹೋದರು. ಕೋರ್ಟು- ಕಚೇರಿ ಕೇಸು ನಮ್ಮಂತವರಿಗಲ್ಲ ಎಂದು ನನ್ನ ದೇಹವನ್ನು ಅಲ್ಲೇ ಬಿಟ್ಟು ಚಾಲಕ ಲಾರಿಯ ಜೊತೆಯಲ್ಲಿ ಪರಾರಿಯಾದ.
ಹೆತ್ತವರನ್ನು ನೋಡಿಕೊಳ್ಳಲಾಗದೇ, ಕನಸು ನನಸು ಮಾಡಿಕೊಳ್ಳಲಾಗದೇ ತ್ರಿಶಂಕು ಸ್ಥಿತಿಯಲ್ಲಿ ನಾನಿದ್ದೇನೆ.
ಗಂಡು ಮಗನಂತೆ ಕೂಲಿಕೆಲಸ ಮಾಡಿ ಮನೆಯವರನ್ನು ನೋಡಿಕೊಳ್ಳುತ್ತಿದ್ದ ನನ್ನಂತಹ 'ನಿರ್ಭಯ'ಳಿಗೂ ಹೆದರಿಕೆಯಾಗುತಿದೆ, ಪ್ರತಿ ಗಳಿಗೆಯನ್ನು ಭಯದಿಂದಾಗಿ ಕಳೆಯುತ್ತಿದ್ದೇನೆ. ನನ್ನ ಹಾಗೆ ಮತ್ತೊಂದು ಹೆಣ್ಣು ಅಂತರಪಿಶಾಚಿಯಾಗಿ ಅಲೆಯಬಾರದೆಂದು.