Jyothi Baliga

Horror

3.6  

Jyothi Baliga

Horror

ನಡುರಾತ್ರಿಯ ಹೊತ್ತು

ನಡುರಾತ್ರಿಯ ಹೊತ್ತು

4 mins
25.6K


ಇವತ್ತು ಬೆಳಿಗ್ಗೆ ಧನಿಯೋರು ಯಾರ ಮುಖ ನೋಡಿದ್ರೋ...ಅವರಿಗೆ ಶುಕ್ರದೆಸೆ. ನನಗೆ ಮಾತ್ರ

ಗ್ರಹಚಾರ ಕೆಟ್ಟಿದೆ. ಬೆಳಿಗ್ಗೆ ೮ ಗಂಟೆಗೆ ಹಿಡಿದ ಸ್ಟೇರಿಂಗ್ ಗೆ ರೆಸ್ಟ್ ಕೊಟ್ಟದ್ದು ಊಟ ತಿಂಡಿ ಹೊತ್ತಿಗೆ ಮಾತ್ರ ಎಂದು ಕ್ಲೀನರ್ ಹತ್ತಿರ ಹೇಳುತ್ತಾ ಲಾರಿಯಿಂದ ಇಳಿದೆ.

ಹೊಸ ಊರು, ಗುರುತು ಪರಿಚಯದವರು ಯಾರಿಲ್ಲ, ಕೈಯಲ್ಲಿ ಜಾಸ್ತಿ ಹಣ ಕೂಡ ಇಲ್ಲ. ದೊಡ್ಡ ಹೋಟೆಲ್ ಗಳನ್ನೆಲ್ಲಾ ನೋಡಿದರೆ ಜೇಬಿನಲ್ಲಿದ್ದ ಕಾಸು ಸಾಕಾಗಲಿಕ್ಕಿಲ್ಲ. ನಮ್ಮ ಲೆವೆಲ್ ಗೆ ಕಣ್ಣೆದುರಿಗೆ ಕಾಣಿಸಿದ ಮಿಲಿಟರಿ ಹೋಟೆಲ್ ಸಾಕೆಂದು ಒಳಹೊಕ್ಕೆ. ನನಗೂ, ರಂಗನಿಗೂ ಚಿಕನ್ ಬಿರಿಯಾನಿ ತರಿಸಿದೆ.

"ಅಣ್ಣಾ...ಹೀಟ್ ನಿಂದ ಈಗಲೇ ಬ್ಯಾಕ್ ಪುಲ್ ಟೈಟ್ ಆಗಿ ಕಕ್ಕಸ್ ಮಾಡಲಿಕ್ಕೆ ಬಯಲಲ್ಲಿ ಒಂದು ಗಂಟೆ ಕೂರಬೇಕು .ಚಿಕನ್ ತಿಂದ್ರೆ ಅಷ್ಟೇ... ನಾಳೆ ನೀವು ಡ್ರೈವಿಂಗ್ ಮಾಡೋ ಹಂಗಿಲ್ಲ " ಎಂದು ರಂಗ ಹೇಳಿದ.

" ನಾಯಿ ... ಬಾಯಿ ಮುಚ್ಚಿಕೊಂಡು ‌'ಅನ್ನ' ತಿನ್ನು. ಊಟದ ಹೊತ್ತಲ್ಲಿ‌ ಕಕ್ಕದ ವಿಷಯ ಮಾತನಾಡದೇ ಇದ್ರೆ ತಿಂದನ್ನ ಕರಗಲ್ವಾ ?" ಎಂದು ರಂಗನಿಗೆ ಜೋರು ಮಾಡಿ ಊಟ ಮುಗಿಸಿ ಮತ್ತೆ ಡ್ರೈವಿಂಗ್ ಕೆಲಸ ಶುರುಮಾಡಿದೆ.

ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಇನ್ನೂ ನಿನ್ನ ಡ್ರೈವಿಂಗ್ ಕೆಲಸಕ್ಕೆ ನಾನು ಸಹಕಾರ ಕೊಡುವುದಿಲ್ಲವೆಂದು ನಿದ್ರಾದೇವಿ ಹಠಮಾಡುತ್ತಾ ಕಣ್ಣುಗಳನ್ನು ಮುಚ್ಚುತ್ತಿದ್ದಳು. ತಣ್ಣನೆಯ ಗಾಳಿ ಮುಖಕ್ಕೆ ಬಡಿಯುತ್ತಿದ್ದರಿಂದ ರಂಗ ಕಣ್ಣು ಕೂರುತ್ತಾ ಇದ್ದ.

" ರಂಗ... ಇನ್ನೂ ನನ್ನ ಕೈಯಲ್ಲಿ ಆಗಲ್ಲ ಕಣೋ...ಇಲ್ಲೇ ಗಾಡಿ ನಿಲ್ಲಿಸಿ ಮಲಗೋಣ" ಎಂದು ಹೇಳಿದ್ದೆ ತಡ ರಂಗ ತನ್ನಲ್ಲಿದ್ದ ಚಾದರದಿಂದ ಮುಸುಕು ಹಾಕಿ ಗುಬ್ಬಚ್ಚಿಯಂತೆ ಮುದುರಿ ಮಲಗಿದ. ಅವನ ಜೊತೆಯಲ್ಲಿ ನಾನು ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ನನಗೆ ಹೊಟ್ಟೆನೋವು ಶುರುವಾಯಿತು.

ಯಾಕೋ 'ಮಿಲಿಟ್ರಿ' ಹೋಟೆಲ್ ಊಟ ಸರಿಯಾಗಿಲ್ಲವೋ ಏನೋ? ... "ಹೊಟ್ಟೆ ಗುರು ಗುರು ಶಬ್ದ ಮಾಡ್ತಾ ಇದೆ ಕಣೋ, ನಾನು ಹೋಗಿ ಹೊಟ್ಟೆಯಲ್ಲಿದ್ದದ್ದು ಅನ್ ಲೋಡ್ ಮಾಡಿ ಬರ್ತಿನಿ ಕಣೋ" ಎಂದು ರಂಗನನ್ನು ಎಬ್ಬಿಸಿ ಲಾರಿಯಿಂದ ಜಿಗಿದು ಕೆಳಗಿದೆ.

ಎಚ್ಚರಗೊಂಡ ರಂಗ ಸುತ್ತಲೂ ನೋಡಿ "ಅಣ್ಣಾ

ಮಧ್ಯರಾತ್ರಿ ಬೇರೆ, ಘೋರ ಕತ್ತಲು, ಸುತ್ತಲಿದ್ದ ಮರಗಿಡಗಳು ರಾಕ್ಷಸಕಾರದಲ್ಲಿ ಕಾಣುತ್ತಿವೆ. ನನಗ್ಯಾಕೋ ಹೆದರಿಕೆ ಆಗುತ್ತೆ ಒಬ್ಬನೇ ಇರೋಕೆ ಅಣ್ಣಾ, ನಾನು ಬರ್ತೀನಿ" ಎಂದು ನನ್ನ ಹಿಂದೆನೇ ಬಂದ.

"ಏಯ್ ದೂರ ನಿಲ್ಲೋ... ನಾನು ಮುಗಿಸಿ ಬರ್ತೀನಿ" ಅಂತ ಹೇಳಿ ಗಾಡಿಯಲ್ಲಿದ್ದ ನೀರಿನ ಬಾಟಲ್ ತೆಗೆದುಕೊಂಡು ಹೋದೆ.

ಲಾರಿಯಿದ್ದ ಕಡೆಯಿಂದ ತುಂಬಾ ದೂರ ಹೋಗಿದ್ದೆ.ನನ್ನ ಕೆಲಸ ಮುಗಿಸಿ ಬರುವಾಗ ಸೊಗಸಾದ ಜಾಗ ಕಾಣಿಸಿತು. ಹೋಗುವಾಗ ಗಡಿಬಿಡಿಯಿಂದ ನೋಡಿರಲಿಲ್ಲ.ಎಲ್ಲೋ ಪಾರ್ಕ್ ಇರಬೇಕು , ಜನರಿಗೆ ಕೂರಲು ಅಲ್ಲಲ್ಲಿ ಬೆಂಚುಕಲ್ಲು ಹಾಕಿದ್ದರು. ಮತ್ತೆ ಲಾರಿಯ ಹತ್ತಿರ ಬರಲು ಆಲಸ್ಯವಾಯಿತು. ಹೇಗೂ ಲಾರಿಗೆ ಬೀಗ ಹಾಕಿ ಬಂದಿದ್ದೇವು. ಕೈಕಾಲು ಬಿಟ್ಟು ಆರಾಮವಾಗಿ ಮಲಗಲು ಸರಿಯಾಗುತ್ತೆ ಅಂತ ಬೆಂಚುಕಲ್ಲು ಮೇಲೆ ಮಲಗಿದೆ. ರಂಗ ನನ್ನ ಪಕ್ಕದ ಕಲ್ಲಿನಲ್ಲಿ ಮಲಗಿದ.

ಸುಖವಾದ ನಿದ್ರೆಯಲ್ಲಿದ್ದ ನನ್ನ ಯಾರೋ ಎಚ್ಚರಿಸಿದಂತಾಗಿ ಕಣ್ಣುಬಿಟ್ಟು ನೋಡಿದರೆ ಕರಿಕೂದಲು ಹರಡಿ ಬಿಳಿಯ ಸೀರೆಯುಟ್ಟ ಹೆಣ್ಣೊಬ್ಬಳು ನನ್ನ ಮುಖದ ಬಳಿ ಮುಖ ತಂದಿದ್ದಳು.ಎದೆ ಗಟ್ಟಿಯಿದ್ದ ಕಾರಣವೋ ಏನೋ ಆ ವಿಕಾರ ರೂಪವನ್ನು ನೋಡಿ ಸಾಯದೇ ಬದುಕಿದೆ.

ನನ್ನ ಕಾಲ ಬಳಿ ಅಳುತ್ತಾ ಇದ್ದವಳು ಒಮ್ಮೆಲೆ ರೋಷದಿಂದ ಕಣ್ಣುಕೆಂಪು ಮಾಡಿ " ನಾನು‌ ನಿನ್ನ ಬಿಡಲ್ಲಾ ಕಣೋ" ಎಂದು ನನ್ನ ಬಟ್ಟೆಯನ್ನು ಎಳೆಯಲು ಪ್ರಾರಂಭಿಸಿದಳು. ಸುತ್ತಲೂ ನೋಡಿದರೆ ರಂಗನ ಸುಳಿವಿಲ್ಲ, ಜೋರಾಗಿ ಕಿರುಚೋಣವೆಂದರೆ ಧ್ವನಿ ಬರುತ್ತಿಲ್ಲ. ಏನು ಮಾಡಲಿ? ಎಂದು ಯೋಚಿಸುವಷ್ಟರಲ್ಲಿ ನಾನು ನಾಲ್ಕು ಸುತ್ತು ತಿರುಗಿ ಮತ್ತದೆ ಬೆಂಚುಕಲ್ಲಿನ ಮೇಲೆ ಬಿದ್ದೆ. ಕಲ್ಲಿನ ಮೇಲೆ ಬಿದ್ದದ್ದರಿಂದ ಮೂಳೆಯೆಲ್ಲಾ ಪುಡಿಪುಡಿಯಾದ ಹಾಗಾಯಿತು. ಅಯ್ಯೋ ....ಅಮ್ಮ ಎಂದು ಕಿರುಚುತ್ತಾ ಸುಧಾರಿಸಿಕೊಳ್ಳುವುದರೊಳಗೆ ಜೋರಾದ ಬಿರುಗಾಳಿ ಎದ್ದು ಧೂಳುಗಳೆಲ್ಲಾ ಕಣ್ಣಿನೊಳಗೆ ಹೋಗಿ ಏನು ಕಾಣಿಸುತ್ತಿರಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಕಣ್ಣುರಿ ಕಡಿಮೆಯಾದಾಗ ನೋಡಿದರೆ ಸಮಾಧಿಯೊಳಗಿಂದ ಎಲ್ಲಾ ಹೆಣಗಳು ಮೇಲೆ ಬಂದು‌ ಗಾಳಿಪಟದಂತೆ ಹಾರುತ್ತಿವೆ.

ಅಯ್ಯೋ ದೇವರೇ!!! ನಾನು ಬಂದದ್ದು ಸಶ್ಮಾನದೊಳಗೆ, ಮಲಗಿದ್ದು ಸಮಾಧಿಯ ಮೇಲೆ ಎಂದು ತಿಳಿದಾಗ ನನ್ನೆದೆ ನಡುಗಲು ಶುರುವಾಯಿತು.

ಪ್ರೇತಾತ್ಮಗಳೆಲ್ಲಾ ಅವರದೇ ಲೋಕದಲ್ಲಿ ಕುಣಿಯುವ ಹಾಗೆ ‌ಕಾಣಿಸಿದರು.ಎಲ್ಲರೂ ಅವರ ನೋವುಗಳನ್ನು ತಮ್ಮ ಸಾವಿನ ಕಾರಣವನ್ನು ಹೇಳುತ್ತಾ ಮತ್ತೊಂದು ಪ್ರೇತಾತ್ಮವನ್ನು ಸಮಾಧಾನಪಡಿಸುತ್ತಿದ್ದಂತೆ ಕಾಣಿಸಿದವು.

ಕಪಾಲಕ್ಕೊಂದು ಎಲ್ಲಿಂದಲೋ ಏಟು ಬಿತ್ತೆಂದು ನೋಡಿದರೆ ಉದ್ದನೆಯ ಕೈಯೊಂದು ಕಾಣಿಸಿತು.ಆ ಕೈಯಲ್ಲಿ ಉದ್ದನೆಯ ಉಗುರು ಮಾತ್ರ ಇತ್ತು, ಕೈ ನನ್ನ ಕುತ್ತಿಗೆಯ ಹತ್ತಿರ ಬಂದು ಕತ್ತು ಹಿಸುಕಲು ಪ್ರಾರಂಭಿಸಿತು. ಕೈಯನ್ನು ತಳ್ಳೋಣವೆಂದರೆ ಚರ್ಮ ಇರಲಿಲ್ಲಾ ಬರಿ ಎಲುಬು ಮಾತ್ರ ಕಾಣುವಂತೆ ರಕ್ತ ಇಳಿಯುತಿತ್ತು.

ಬಿಡಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಂತೆ, ಕೂದಲು ಬಿಟ್ಟ ಹೆಂಗಸು ಮತ್ತೆ ಬಂದಳು. ಕಣ್ಣಲ್ಲಿ ರಕ್ತ, ಬಾಯಲ್ಲಿ ರಕ್ತವನ್ನು ಇಳಿಸುತ್ತಾ ನನ್ನನ್ನು ಕೊಂದು ಬಿಡುವ ರೋಷವನ್ನು ತೋರಿಸುತ್ತಿದ್ದಳು.

ದೇವರೇ... ಯಾವ ಸುಳಿಯಲ್ಲಿ ಸಿಲುಕಿಸಿದೆ ? ಹಣದ ಆಸೆಗಾಗಿ ನಾನೇನೂ ಮೋಸ ಮಾಡಲಿಲ್ಲ, ಹೆಂಡತಿ ಮಕ್ಕಳ ಹೊಟ್ಟೆ ಬಟ್ಟೆ ತುಂಬಿಸಲು ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವುದಕ್ಕೆ ಅಪರಾತ್ರಿಯಲ್ಲಿ ಅನಾಥ ಶವದಂತೆ ಪ್ರೇತಾತ್ಮದ ಕೈಯಲ್ಲಿ ಸಾಯುವಂತೆ ಮಾಡುತ್ತೀಯಾ ? ಎಂದು ಕಣ್ಣೀರು ಹಾಕಿದೆ.

ಅಷ್ಟು ಹೊತ್ತು ಅದೆಲ್ಲಿದ್ದನೋ ರಂಗ ... ನನ್ನ ಸಾವು ಸಮೀಪಿಸುತ್ತಿದೆ ಎನ್ನುತ್ತಿದ್ದಂತೆ ಯಾರ ಜೊತೆಗೋ ಪ್ರತ್ಯಕ್ಷನಾದ.ಆ ವ್ಯಕ್ತಿಯ ಕೈಯಲ್ಲಿ ಸ್ವಲ್ಪ ಬೂದಿ ಹಾಗೂ ಏನೇನೋ ವಸ್ತುಗಳು ಇದ್ದವು. ಅವನು ಸಶ್ಮಾನದೊಳಗೆ ಬರುತ್ತಿದ್ದಂತೆ ಪ್ರೇತಾತ್ಮಗಳು ಒಟ್ಟಾಗಿ ಕಿರುಚಲು ಪ್ರಾರಂಭಿಸಿದವು. ವಿಕಾರ ಶಬ್ದದಿಂದ ಕಿವಿ ತಮಟೆ ತೂತು ಬೀಳುವ ಹಾಗಿತ್ತು.ಆ ವ್ಯಕ್ತಿ ಮಂತ್ರ ಹೇಳುತ್ತಿದ್ದಂತೆ ಎಲ್ಲ ಪ್ರೇತಾತ್ಮವೂ ಸ್ವಸ್ಥಾನಕ್ಕೆ ಹೋದವು.

ವ್ಯಕ್ತಿ ನನ್ನ ಬಳಿ ಬಂದು ಹಣೆಗೆ ವಿಭೂತಿ ಹಚ್ಚಿ, ಇನ್ ಮುಂದೆ ಇಂತಹ ಸ್ಥಳಗಳಿಗೆ ಬರಬೇಡಿ, ಅದು ಅಮಾವಾಸ್ಯೆಯ ದಿನವಂತೂ ಇಲ್ಲಿ ಗಾಡಿ ನಿಲ್ಲಿಸಲೇಬೇಡಿ ಎಂದು ಬುದ್ದಿ ಹೇಳಿ ನನ್ನನ್ನು ಸ್ಮಶಾನದಿಂದ ಹೊರಗೆ ಕರೆದುಕೊಂಡು ಬಂದು ಅವನ ಮನೆಯ ಕಡೆ ಹೋದ. ಮೈಕೈಯೆಲ್ಲಾ ಪುಡಿ ಪುಡಿಯಾದಂತಹ ಅನುಭವದಿಂದ ನಡೆಯಲಾಗದೇ ಕುಂಟುತ್ತಾ ರಂಗನ ಜೊತೆಯಲ್ಲಿ ಲಾರಿಯ ಬಳಿ ಹೋದೆ.

ಲಾರಿ ಹತ್ತಿ ಸ್ಟೇರಿಂಗ್ ಹಿಡಿಯುವ ಮೊದಲು ನಮಸ್ಕರಿಸಿ ರಂಗನ ಮುಖ ನೋಡಿದೆ. "ನೀನಗೇನು‌ ಆಗಿಲ್ವಾ ರಂಗ ?" ಎಂದು ಕೇಳಿದೆ.

"ಮಲಗಿದ ಐದು ನಿಮಿಷಕ್ಕೆ ನನ್ನ ಎತ್ತಿ ಬಿಸಾಕಿದ ಹಾಗೆ ಆಯಿತಣ್ಣ, ಎದ್ದು ಕೂತು ಆಚೆ ಈಚೆ ನೋಡಿದರೆ ಯಾರಿರಲಿಲ್ಲ ಅಣ್ಣ. ಹೆದರಿಕೆಯಿಂದ ನಿಮ್ಮ ಹತ್ತಿರ ಬಂದು ನಿಮಗೆ ಕರೆದೆ, ಎಷ್ಟು ಎಬ್ಬಿಸಿದರೂ‌ ನೀವು ಏಳಲೇ ಇಲ್ಲ.‌ ಮತ್ತೊಮ್ಮೆ ಮೊದಲು ಮಲಗಿದ ಜಾಗಕ್ಕೆ ‌ಹೋಗಿ ಮಲಗಿದಾಗ‌ ಹಿಂದಿನ ಸಲದ ಹಾಗೆ ಮತ್ತೆ ಎತ್ತಿ ಬಿಸಾಕಿದ ಹಾಗಾಯಿತು. ಇನ್ನೂ ನಿಂತರೆ ಆಗಲಿಕ್ಕಿಲ್ಲಾಂತ ಗಾಡಿಯಲ್ಲಿ ‌ಹೋಗಿ ಮಲಗಲು ಬಂದೆ. ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಕಿರುಚಾಟ, ಬೊಬ್ಬೆ ಕೇಳಿಸಿ ಹೆದರಿಕೆಯಿಂದ ಮತ್ತೆ ಹಿಂದೆ ಬಂದೆ. ನಿಮ್ಮನ್ನು ಗಾಳಿಯಲ್ಲಿ ತೇಲಿಸಿದ ಹಾಗೆ ಬಿಸಾಡುವುದನ್ನು ನೋಡಿ ಕೈಕಾಲು ನಡುಗಲು ಶುರುವಾಯಿತು. ‌ಇದು ದೈವ್ವದ ಕೆಲಸನೇ ಅಂತ‌ ಗೊತ್ತಾಗಿ ಯಾರನ್ನಾದರೂ ಕರೆಯೋಣ ಎಂದು ಓಡಿ ಬರ್ತಾ ಇದ್ದೆ. ಸಶ್ಮಾನದ ಮತ್ತೊಂದು ‌ಕಡೆಯಿಂದ‌‌ ಈಗ ಬಂದಿದ್ರಲ್ಲ ಆ ವ್ಯಕ್ತಿ ಬರ್ತಾ ಇದ್ರು. ನಾನು ನೋಡದೆ ಅವರಿಗೆ ಡಿಕ್ಕಿ ಹೊಡೆದೆ. 

ಸಶ್ಮಾನದೊಳಗೆ ಪೂಜೆ ಮಾಡಿ ಬಂದಿದ್ದರು ಕಾಣಬೇಕು. ಅವರ ಮೈಯೆಲ್ಲಾ ಒಂದು ರೀತಿಯ ವಾಸನೆ ಇತ್ತು, ಯಾರೋ ಮಂತ್ರವಾದಿನೋ... ತಾಂತ್ರಿಕನೋ ಇರಬೇಕೂಂತ ಯೋಚಿಸಿದೆ.

ಅವರೇ, ಏನಾಯಿತು ? ನೀನ್ಯಾರು ? ಹೀಗೆಕೆ ಓಡಿ ಬರ್ತಾ ಇದ್ದಿಯಾ ? ಎಂದು ಕೇಳಿದಾಗ ನಡೆದದ್ದನ್ನೆಲ್ಲಾ ಹೇಳಿದೆ.ನನ್ನ ಜೊತೆಯಲ್ಲಿ ಅವರು ಬಂದು ನಿಮ್ಮನ್ನು ಪ್ರೇತಾತ್ಮದ ಕೈಯಿಂದ ಬಿಡಿಸಿದರು " ಎಂದು ಹೇಳಿದ.

ಅಪರಿಚಿತ ವ್ಯಕ್ತಿಗೆ ಕೈ ಮುಗಿದು ಅಲ್ಲಿಂದ ಹೋಗೋಣ ಎಂದು ಲಾರಿಯನ್ನು ಸ್ಟಾರ್ಟ್ ಮಾಡುವ ಮೊದಲು ಗಂಟೆಯನ್ನು ನೋಡಿದರೆ ಗಂಟೆ ಒಂದಾಗಿತ್ತು. ನನ್ನ ಜೊತೆಯಲ್ಲಿ ಇಷ್ಟೆಲ್ಲಾ ನಡೆದದ್ದು ಬರೀ ಹತ್ತು ನಿಮಿಷದ ಅವಧಿಯೊಳಗೆ ಎಂದು ಗೊತ್ತಾದಾಗ ಮೈ ಜುಂ ಎದ್ದಿತ್ತು.Rate this content
Log in

Similar kannada story from Horror