ಕನಸಿನೊಂದಿಗೆ ಸೆಣಸಾಟ.
ಕನಸಿನೊಂದಿಗೆ ಸೆಣಸಾಟ.
ಗೆಳೆಯರೇ,
ಅಂದೊಮ್ಮೆ ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...
ಆ ಸಂಜೆ, ಟೀ ಕುಡಿಯುತ್ತಾ, ಟೀವಿ ಮುಂದೆ ಕುಳಿತಾಗ, ಚಂದದ ಸಿನೇಮಾ ಪರದೆಯ ಮೇಲೆ ಹಾದುಹೋಯಿತು. ಮತ್ತೆ ಹೊರಳಿಸಿ ನೋಡತೊಡಗಿದೆ. ಕಥೆ, ಚಿತ್ರಪಟಗಳು ಸುಂದರವಾಗಿದ್ದು ಕ್ಷಣಕಾಲ ತಲ್ಲೀನಳಾಗಿಬಿಟ್ಟೆ. ಸ್ವಲ್ಪ ಸಮಯದ ನಂತರ, ನೆನಪಾಗಿ, ಹೊರಹೊರಾಂಗಣದ ವಿದ್ಯುತ್ ದೀಪ ಬೆಳಗಿಸಿ, ಗಡಿಯಾರದ ಕಡೆ ನೋಡಿದಾಗ ಗಂಟೆ ಏಳೂವರೆ ತೋರಿಸುತ್ತಿತ್ತು. ರಾತ್ರಿ ಅಡಿಗೆಯ ನೆನಪಾಗಿ,ಅಡಿಗೆ ಮನೆಯೊಳಕ್ಕೆ ಹೋಗಿ,ನೋಡಿದಾಗ, ಮಧ್ಯಾನದ ಅನ್ನ ಇನ್ನೂ ಹಾಗೇ ಇತ್ತು. ಮೊಸರನ್ನುವಷ್ಟೇ ಊಟ ಮಾಡಿದ್ದರಿಂದ ರಾತ್ರಿಗೆ ಏನಾದರೂ ಮಾಡಲೇಬೇಕಿತ್ತು. ಆದರೂ ಮೈಭಾರ, ಬೇಸರ. ಒಬ್ಬಳಿಗೆ ಏನು ಮತ್ತೆ ಅಡಿಗೆ ಮಾಡೋದು ಎಂಬ ಸೋಮಾರಿತನವಷ್ಟೇ..
ಏನು ಮಾಡೋದಪ್ಪಾ..ಅಂತ ಯೋಚಿಸುವಷ್ಟರಲ್ಲಿ ತಟ್ಟಂತಾ ಹೊಳೀತು..ನಮ್ಮ ಮನೇ ಬೀದಿ ಕೊನೇಲಿ ಹೊಸದಾಗಿ ಮಂಗಳೂರು ಸ್ಟೈಲಿನ ಹೋಟೇಲೊಂದು ಓಪನ್ ಆಗಿದ್ದು ನೆನಪಾಯಿತು..ಅಲ್ಲಿಂದ ಏನಾದರೂ ಪಾರ್ಸಲ್ ತರೋಣ ಅಂತ ಅನಿಸಿತು. ಸರಿ, ಹೊರಗೆ ಹೋಗಲು ಬಟ್ಟೆ ಬದಲಾಯಿಸುವ ಮನಸಿರಲಿಲ್ಲ. ಉಟ್ಟ ನೈಟೀ ಮೇಲೆ ಒಂದು ಶಾಲನ್ನು ಹೊದೆದು, ಕೈಗೆ ಸಣ್ಣ ಪರ್ಸೊಂದನ್ನು ಹಿಡಿದು ಬಾಗಿಲು ಬೀಗ ಹಾಕಿ ನಡೆದೆ..
ನಾನಿರುವ ಚೆನ್ನೈಲಿ ಹೆಂಗಸರು ಹೆಚ್ಚಾಗಿ ನೈಟೀ ಹಾಕೊಂಡೇ ಹೊರಗೆ ಅಂಗಡಿಗಳಿಗೆ ತಿರುಗಾಡೋದು ನೋಡಿದ್ದೆ . ಮೊದಮೊದಲು, ನನಗೆ ಸೋಜಿಗವೆನಿಸುತ್ತಿತ್ತು. ಇನ್ನೂ ಹೇಳಬೇಕೆಂದರೆ, ನೈಟೀ ಹಾಕೊಂಡೇ ಗಾಡಿನೂ ಓಡಿಸ್ತಾರೆ ಎನ್ನಬಹುದು..ಒಬ್ಬ ದಡೂತಿ ಹೆಂಗಸು, ನೈಟೀ ಧರಿಸಿಕೊಂಡು ಬೈಕನ್ನೇ ಓಡಿಸ್ತಿದ್ದಳು. ನಾನಂತೂ ಅಚ್ಚರಿಯಿಂದ ಅವಳನ್ನೇ ದಿಟ್ಟಿಸಿದ್ದೆ. ಇದು ಗೊತ್ತಿರಿವ ವಿಷಯ. ಹಾಗಾಗಿ, ನಾನೂ ನಿದಾನವಾಗಿ ಅದನ್ನೇ ಅಭ್ಯಾಸ ಮಾಡಿಕೊಂಡೆನೆಂದೇ ಹೇಳಬೇಕು..ಕತ್ತಲಾದ್ದರಿಂದ ಬೇಗ ಬೇಗ ಹೆಜ್ಜೆ ಹಾಕಿದೆ. ರೋಡೆಲ್ಲಾ ಯಾಕೋ ಖಾಲೀ ಅನಿಸ್ತಿತ್ತು..ಹೋಟೇಲ್ನಲ್ಲೂ ಜನರೇ ಇಲ್ಲ. ಖಾಲಿ ಮೇಜು, ಕುರ್ಚಿಗಳೇ ಕಂಡವು. ಊಟ ತಿಂಡಿ ಇದೆಯಾ ಎಂಬ ಅನುಮಾನವೂ ಬಂತು. ನೋಡೋಣ ಎಂದು ಒಳಗೆ ಹೋದೆ. ಗಲ್ಲಾ ಪೆಟ್ಟಿಗೆಯ ಮೇಲೆ , ಉದ್ದ ನಾಮಧಾರಿ , ಸುಮಾರು ಮುವತ್ತರ ವಯಸಿನ ಆಸಾಮಿ ಕುಳಿತ್ತಿದ್ದ.
ಪನ್ನೀರ್ ಬಟರ್ ಮಸಾಲಾ ಇದೆಯಾ? ಕೇಳಿದೆ.
ನನ್ನೇ ಒಂದು ಕ್ಷಣ ಮೇಲಿಂದ ಕೆಳಗೆ ನೋಡಿ, ಇದೆಯೆಂದ. ಒಂದು ಪ್ಲೇಟ್ ಪಾರ್ಸಲ್ ಕೊಡಿ..ಎಂದೆ....
ಮತ್ತೆ ನನ್ನತ್ತಲೇ ನೋಡಿದ. ನಾನು ಏನೂ ಮಾತಾಡದೇ ಪರ್ಸ್ ತೆಗೆದೆ ಹಣ ಕೊಡುವ ಸಲುವಾಗಿ..
ಇಲ್ಲೇ ಬೇಕಾ..ಅಥವಾ..ಮನೇಗೇ ಕಳಿಸ್ಲಾ..? ಅಂದ...
ಅವನ ಮಾತಿನರ್ಥವಾಗದೇ ..ಏನೂ?
ಎಂದೆ. ಅಷ್ಟೇ...
ಅವನ ಮುಖದಲ್ಲಿ ವಿಕಾರವಾದ ನಗು. ನನಗೆ ಮೈ ಜುಂ ಅಂತು. ಕೋಪ ನೆತ್ತಿಗೇರಿತು..
ರೀ ಮಿಸ್ಟರ್ ..ಏನ್ರೀ ಮಾತಾಡ್ತಿದ್ದೀರಾ..? ನಾಲಿಗೆ ಮೇಲೆ ಹಿಡಿತವಿರಲಿ..ಎಂದೆ.
ನನ್ನ ಧ್ವನಿ ನನಗೇ ಜೋರಾಗಿದೆ ಅನಿಸಿತ್ತು...
ಆದರೂ ಕೊಂಚ ಸಂಕೋಚವೇ ಆಗಿತ್ತು. ಛೆ! ಇಂತಹ ಜಾಗಕ್ಕೆ ಇಷ್ಟೊತ್ತಿನಲ್ಲಿ ಬರಲೇಬಾರದಿತ್ತು. ತಪ್ಪು ನಂದೇ ಅಂದೊಕೊಂಡು ಕೊಂಚ ಮುಖಭಾವವನ್ನು ನಾನೇ ಸಡಿಲಿಸಿಕೊಂಡೆ...
ನನ್ನನ್ನೇ ಕೆಕ್ಕರಿಸಿಕೊಂಡು ನೋಡಿ, ಬಿಲ್ ರೆಡೀ ಮಾಡುತ್ತಿದ್ದವನ ಬಳಿ ಮತ್ತೊಬ್ಬ ಒಳಗಿನಿಂದ ಬಂದ. ಅವನ ವೇಶಭೂಷಣ ನೋಡಿದರೆ ಇವನೇ ಹೋಟೇಲ್ ಮಾಲೀಕನಿರಬಹುದೇನೋ ಅನಿಸ್ತು. ಗಲ್ಲಾ ಪೆಟ್ಟಿಗೆ ಹತ್ತಿರ ಬಂದವನೇ .
ಎಂತ ಬೇಕಂತೆ? ಪಾರ್ಸಲ್ಲಾ..? ಇಲ್ಲೇನಾ? ಏರುದನಿ ಅವನದು.
ನನಗೋ ಅಲ್ಲಿ ನಿಲ್ಲೋಕೆ ಆಗದೇ ಒದ್ದಾಡಿದೆ. ಬೇಗ ಕೊಡಬಾರದೇ..?
ಎಂದು ಮನದಲ್ಲೇ ಬೈದುಕೊಂಡೆ..
ನೂರಾ ಐವತ್ತು ಕೊಡಿ..ಅಂದ..
ಕೈಲಿದ್ದ ಪರ್ಸ್ ತೆರೆದು ನೂರರ ಎರಡು ನೋಟು ಕೊಟ್ಟೆ. ಚೇಂಜ್ ಕೊಡಿ ಅಂದ. ನನ್ನ ಬಳಿಯಿಲ್ಲವೆಂದೆ.
ಮುಖಮುಖ ನೋಡಿದ..ಇಬ್ಬರೂ ನನ್ನ ಹಾಗೆ ನೋಡಿದ್ದರ ಅರ್ಥ ನನಗೆ ಆಗಲೇ ಇಲ್ಲ..ನನಗೆ ತಕ್ಷಣ ನೆನಪಾಯಿತು. ಡೆಬಿಟ್ ಕಾರ್ಡ್ ನನ್ನ ಪರ್ಸಿನಲ್ಲಿತ್ತು. ಕಾರ್ಡನ್ನು ಹೊರತೆಗೆದು ಮುಂದೆ ಹಿಡಿದೆ..ತಗೊಳ್ಳಿ..ಎಂದೆ.
ಆ ಮಾಲೀಕ ನನ್ನ ಕೈಯಿಂದ ಕಾರ್ಡನ್ನು ಇಸಿದುಕೊಂಡು ತಿರುಗಿಸಿ ಮುರುಗಿಸಿ ನೋಡಿ, ಬೆರಳ ತುದಿಯಿಂದ ಮೇಲಕ್ಕೆ ಚಿಮ್ಮಿದಂತೆ..ಮಾಡಿದ..
ಅದು ಅಷ್ಟು ದೂರ ಒಳಗಾಂಗಣದ ಬಾಗಿಲಲ್ಲಿ ಹಾರಿ ಬಿತ್ತು..
ನನಗೆ ಕೆಟ್ಟ ಕೋಪ ಬಂತು..ಏನ್ರಿ ಮಾಡ್ತಿದ್ದೀರಾ..? ಅದನ್ಯಾಕೆ ಎಸೆದಿದ್ದು?
ಅದಾ...ನಿನಗೆ ಬೇಕಾದರೆ, ಒಳಗೆ ಹೋಗಿ ತಗೋ..ಅಂತ ಅಸಹ್ಯವಾದ ದನಿಯಲ್ಲಿ ಹೇಳಿದವನ ಮುಖಕ್ಕೆ ರಪ್ಪಂತಾ ಬಾರಿಸೋವಷ್ಟು ಕೋಪ ಬಂತು. ಎಂತ ಉದ್ಧಟತನ! ಹೆಣ್ಣುಮಕ್ಕಳು ಒಂಟಿಯಾಗಿ ಸಿಕ್ಕರೆ ಹೀಗೆಲ್ಲಾ ಮಾಡ್ತಾರೆ ಅಂತ ಸಿನೇಮಾಗಳಲ್ಲಿ ನೋಡಿದ ನೆನಪು.
ನಾ ಕೇಳಿದ ಪನ್ನೀರ್ ಬಟರ್ ಮಸಾಲಾ ಬರಲೇ ಇಲ್ಲ. ಬದಲಾಗಿ ನನ್ನು ಕಾರ್ಡನ್ನೂ ಎಗರಿಸಿಕೊಂಡು ಕೇಕೆಹಾಕಿದ್ದ
ಇಬ್ಬರನ್ನೂ ಬಾಯಿಗೆ ಬಂದಂತೆ ಬೈಯೋಣವೆನಿಸಿತು. ಆದರೆ, ಯಾಕೋ ಏನೋ, ನಾನಿರುವ ಪರಿಸ್ಥಿತಿಯಲ್ಲಿ ಬಾಯಿಂದ ಮಾತೇ ಹೊರಡಲಿಲ್ಲ. ಸುತ್ತಲೂ ಹೋಟೇಲಿನಲ್ಲಿ ಯಾರೂ ಇಲ್ಲದ ಕಾರಣ ನಾನು ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದೆ..ಏನು ಮಾಡೋದೆಂದು ತೋಚದೇ.
ಮರ್ಯಾದೆಯಾಗಿ ನನ್ನ ಕಾರ್ಡು ವಾಪಸ್ ಕೊಡಿ. ನನಗೆ ನಿಮ್ಮ ಪನ್ನೀರ್ ಬಟರ್ ಮಸಾಲಾ ಬೇಡ..ಎಂದೆ.
ಅವರಿಬ್ಬರಿಗೂ ತಮಾಷೆ ಅನಿಸ್ತು..
ಓವ್! ಆರ್ಡರ್ ಕೊಟ್ಟ ಮೇಲೆ ವಾಪಸ್ ತಗೋಳಲ್ಲಮ್ಮಾ...ತಿಳೀತಾ..?
ನೋಡಿ, ಅದೆಲ್ಲಾ ನಂಗೊತ್ತಿಲ್ಲ. ನೀವು ನನ್ನ ಕಾರ್ಡು ಕೊಟ್ಟುಬಿಡಿ. ನಾ ಹೋಗಬೇಕು..ಎಂದೆ..
ಕೊಡಲ್ಲ..ಏನು ಮಾಡ್ತೀಯಾ?
ಮತ್ತದೇ ಧಾಟೀ..
ನಾನು ಪೋಲಿಸ್ಗೆ ಕಂಪ್ಲೇಂಟು ಮಾಡ್ತೀನಿ..ಹೀಗೆಲ್ಲಾ ಮಾಡೋದು ಸರಿಯಲ್ಲ ಗೊತ್ತುಂಟಾ??
ಪೋಲೀಸಾ? ಯಾರವನು?
ಹೇಳಿಕೋ ಹೋಗು. ಅವನೇನು ಮಾಡ್ತಾನೆ...
ಕೆಟ್ಟ ನಗು ಇಬ್ಬರದು..
ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತಾತ ಎದ್ದು ನನ್ನತ್ತಲೇ ಬರಲೆತ್ನಿಸಿದ..
ಇದು ತೀರ ಅನಿರಿಕ್ಷಿತವಾದ ಘಟನೆ. ನಾನು ಒಂದು ಹೆಜ್ಜೆ ಹಿಂದೆ ಸರಿದೆ..ಅವನು ಮತ್ತಷ್ಟು ಮುಂದೆ ಬಂದ..ನಾನು ಅಧೀರಳಾದೆ...ಯಾರೂ ನನ್ನ ಸಹಾಯಕ್ಕೆ ಬರಲೇ ಇಲ್ಲ...ಶಾಲನ್ನು ಮತ್ತಷ್ಟು ಎಳೆದುಕೊಂಡೆ..ಹಿಂದೆ ಹಿಂದೆ ಸರಿದು ಬಾಗಿಲಿನಿಂದಾಚೆ ಬಂದೆ. ಅಷ್ಟೇ...
ಹಿಂದಿರುಗಿ ಅಲ್ಲಿಂದ ಒಂದೇ ಓಟ...ಓಡಿದೆ..
ಬೀದಿಯಲ್ಲೂ ಜನಸಂಚಾರವಿಲ್ಲ..ಕೊರೋನಾದ ಕಾರಣ ನಗರದಲ್ಲಿ ಸೆಕ್ಷನ್ 144 ಲಾಘೂ ಆಗಿದ್ದು ಮರೆತೆ.
ಓಡಿ ಓಡಿ ದಾರೀಲಿ ಎಡವುದರಲ್ಲಿದ್ದೆ. ಒಮ್ಮೆ ಹಿಂದಿರುಗಿ ನೋಡಿದೆ. ಅವರ್ಯಾರೂ ನನ್ನ ಹಿಂಬಾಲಿಸಲಿಲ್ಲ ಸಧ್ಯ. ಆದರೂ ಎದೆಬಡಿತ ಜೋರಾಗಿತ್ತು. ಏದುಸಿರು ಬಿಡುತ್ತಾ..ಮತ್ತೆ ಓಡಿದೆ. ಕತ್ತಲು ಸುತ್ತಲೂ..ನಿರ್ಜನ ಪ್ರದೇಶ..ಗಂಟೆ ಎಂಟಾಗಿರಬಹುದು..
ಕೊಂಚ ದೂರ ಹೋದಾಗ ಅಲ್ಲೊಬ್ಬ ವಾಚ್ ಮ್ಯಾನ್ ನಿಂತಿದ್ದು ಕಾಣಿಸ್ತು..
ಅವನ ಬಳಿ ಹೋಗಿ..ಕೇಳಿದೆ..
ಇಲ್ಲಿ ಪೋಲಿಸ್ ಸ್ಟೇಶನ್ ಎಲ್ಲಿದೆ ಹೇಳ್ತೀರಾ..?
ಅದು ಮುಂದಿನ ಬೀದಿಯಿಂದ ಬಲಕ್ಕೆ ತಿರುಗಿದರೆ ಅಲ್ಲೇ ಸಮೀಪವಿದೆ..ಮೆಡಿಕಲ್ಲ ಸ್ಟೋರ್ ಪಕ್ಕದ್ದೇ..ಹೋಗಿ..'
ಪಾಪ, ಸೌಮ್ಯವಾಗಿ ಉತ್ತಿಸಿದ್ದಕ್ಕೆ ಆತನಿಗೆ ಧನ್ಯವಾದಗಳನ್ನರ್ಪಿಸುತ್ತ ಮತ್ತೆ ಓಡಿದೆ..
ನನ್ನ ಬಳಿಯಿರುವ ಒಂದೇ ಕಾರ್ಡು. ಬ್ಯಾಂಕಿನ ಹಣವನ್ನು ಲಪಟಾಯಿಸಿದರೇನು ಗತಿಯೆಂಬ ಭಯ ಶುರುವಾಗಿತ್ತು...ಏನಾದರಾಗಲಿ, ಕಂಪ್ಲೇಂಟು ಕೊಡುವುದಂತೂ ಖಚಿತ..
ದೂರದಲ್ಲಿ ದೀಪದ ಬೆಳಕಲ್ಲಿ ಪೋಲಿಸ್ ಠಾಣೆ ಕಾಣಿಸ್ತು. ಏದುಸಿರಿನೊಂದಿಗೆ ಒಳಗೆ ಹೋದೆ...
ಇಬ್ಬರು ಕಾನ್ಟೆಬಲ್ಲ್ ಗಳು ಏನಮ್ಮಾ..?
ಯಾರು ಬೇಕು? ಏನು ವಿಷಯಾ?
ಎಂದು ವಿಚಾರಿಸಿದರು..
ಸರ್, ಒಂದು ಕಂಪ್ಲೇಂಟು ಕೊಡಬೇಕಿತ್ತು...ನನ್ನ ಡೆಬಿಟ್ ಕಾರ್ಡನ್ನು ಕಸಿದುಕೊಂಡು ಅಸಭ್ಯವಾಗಿ ವರ್ತಿಸಿದ ಹೋಟೇಲಿನವರ ಬಗ್ಗೆ ಹೇಳಿದೆ...
ಯಾವ ಹೋಟೇಲು? ಎಲ್ಲಿ ಎತ್ತ..ಎಂದು ಪರಿಶೀಲಿಸಿ, ನನಗೆ ಕುಳಿತುಕೊಳ್ಳಲು ಹೇಳಿದರು.
ಇನ್ಸ್ ಪೆಕ್ಟರ್ ಸ್ವಲ್ಪ ಸಂಬೈತನದೆ ಕಂಡು ಸಮಾಧಾನವಾಯಿತು..
ಒಂದು ಬಿಳೀ ಹಾಳೆಯನ್ನು ಪೆನ್ನನ್ನೂ ನನ್ನ ಮುಂದಿಟ್ಟು ಕಂಪ್ಲೇಂಟು ಬರೀರಿ..ಎಂದಾಗ..ಎಲ್ಲಿಲ್ಲದ ಕೋಪ, ರೋಷ, ಉಕ್ಕಿ ಬಂತು..
ಬರೆದೆ..ಪೂರ್ತಿ ಹಾಳೆ...ಸಂಪೂರ್ಣ ವಿವರದೊಂದಿಗೆ ..
ಸಹಿ ಹಾಕಿದೆ..
ಹೆಸರು, ದಿನಾಂಕ, ಸ್ಥಳ ಬರೆದು ಅವರಿಗೆ ಕೊಟ್ಟೆ..
ಅದನ್ನು ಪರಿಶೀಲಿಸಿದ ಇನ್ಸ್ ಪೆಕ್ಟರ್...
ಇದೇನಮ್ಮಾ....ನೀವು ಅಡ್ರೆಸ್ಸು ತಪ್ಪಾಗಿ ಬರೆದಿದ್ದೀರಲ್ಲಾ....ಎಂದಾಗ..
ಹೌದಾ..? ಎಂದು ಉದ್ಗಾರ ನನಗರಿವಿಲ್ಲದೇ ಹೊರಟಿತ್ತು..
ಹೌದ್ರೀ...ನೀವಿರೋದು ಬೆಂಗಳೂರಲ್ಲಿ..
ಚೆನ್ನೈ ಅಂತ ಬರೆದಿದ್ದೀರಲ್ರೀ...?
ಅಯ್ಯೋ..! ಬೆಂಗಳೂರಾ...?
ನಾನು ಚೆನ್ನೈಲೇ ಇರೋದು....
ಹೇಗೆ ಸಾಧ್ಯ?..
ಹಲೋ ಮೇಡಂ...ನಾನೂ ಇರೋದು ಬೆಂಗಳೂರೆ..ನೋಡಿ ಹೊರಗೆ ಬೋರ್ಡು..ಎಂದಾಗ....
ಎಂತಾ..ಆಘಾತವಾಗಿತ್ತು ಅಂತೀರಾ..
ಹೆದರಿ ಮೈಯೆಲ್ಲಾ ಬೆವೆತುಹೋದ ಅನುಭವ...ಗಾಭರಿಯಿಂದ..
ತಟ್ಟನೆ ಎಚ್ಚರವಾಗಿತ್ತು..ಎದ್ದು ಕುಳಿತು ನೋಡ್ತೀನಿ...ರೂಮಿನ ಕತ್ತಲು ಕಣ್ಣಿಗೆ ಮರೆಮಾಡಿತು..ಸುತ್ತಲೂ ಅವಲೋಕಿಸಿದಾಗ ಅರಿವಾದದ್ದು ನಾನು ನನ್ನ ಮನೇಲಿ , ಬೆಂಗಳೂರಲ್ಲಿ , ಹಾಸಿಗೆ ಮೇಲೆ ಸೇಫಾಗಿದ್ದೀನಿ ಅಂತ ಅನಿಸಿ ಸಮಾಧಾನ ಆಯ್ತು ಮಾರ್ರೆ...
ಅಬ್ಬಾ!!! ಎಂತಾ ಕನಸು ಕಣ್ರೀ...
ಎಲ್ಲಾ ಎಡವಟ್ಟಾಗಿದ್ದು ಈ ಹಾಳು ಕೊರೋನಾದಿಂದಾನೇ ಇರಬೇಕು..
ಧನ್ಯವಾದಗಳು..ಎಲ್ಲರಿಗೂ..ನಿಮಗೂ ಗಾಭರಿಯಾಗಿರಲೇಬೇಕು ಅಲ್ವಾ...
ಕ್ಷಮಿಸಿ...ಆಯ್ತಾ?