ಆ ಕರಾಳ ಮಳೆ ರಾತ್ರಿ
ಆ ಕರಾಳ ಮಳೆ ರಾತ್ರಿ
ನಾನು ಉಡುಪಿಯ ******ನಲ್ಲಿ ಕೆಲ್ಸ ಮಾಡುತ್ತಿದ್ದಾಗ ನಡೆದ ಘಟನೆ ಇದು. ಆಗ ನನಗೆ ದಿನಾಲೂ ಕೆಲ್ಸ ಬಿಡುವುದು ತಡ ವಾಗುತ್ತಿತ್ತು.ನನ್ನ ಮನೆ ಇದ್ದದ್ದು ******ಯಲ್ಲಿ. ಕಾಡು ಪ್ರದೇಶ. ಈಗ ಸುಮಾರು ಜಾಗಗಳಲ್ಲಿ ಮನೆಗಳನ್ನು ಕಟ್ಟಿದ್ದಾರೆ. ಬಸ್ಟಾಪ್ ನಿಂದ ಮನೆಯವರೆಗೆ 15-20 ನಿಮಿಷದ ದಾರಿ. ಆಫೀಸಿನಿಂದ ಬರುವಾಗ 8ರ ಆಸುಪಾಸು ಆಗುತ್ತಿತ್ತು.ನಾನು ಮನೆಗೆ ಒಬ್ಬಳೇ ಬರಲು ಹೆದರಿಕೊಳ್ಳಬಹುದೆಂದು ಅಪ್ಪ ಸ್ಕೂಟಿ ತೆಗೆದುಕೊಂಡು ಬಸ್ಟಾಪಿಗೆ ಬಂದು ನಿಲ್ಲುತ್ತಿದ್ದರು. ಅಲ್ಲಿಂದ ನನ್ನನ್ನು ಸ್ಕೂಟಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು.
ಆದರೆ ಅದೊಂದು ರಾತ್ರಿ ಜೋರಾಗಿ ಮಳೆ ಬರುತ್ತಿತ್ತು. ನನಗೆ ಆಫೀಸಿನಲ್ಲಿ ಬಿಡುವಾಗ 7:30 ಆಗಿತ್ತು. ಅಲ್ಲಿಂದ ಬಸ್ಸಿನಲ್ಲಿ ****** ಬಸ್ಟಾಪಿಗೆ ಬಂದಿಳಿದೆ.ಸಮಯ 8ರ ಆಸು ಪಾಸು ಆಗಿತ್ತು. ತುಂಬಾ ಜೋರಾಗಿ ಮಳೆ ಬರುತ್ತಿತ್ತು. ಅಪ್ಪ ಕಾಣಿಸಲಿಲ್ಲ. ಬೈಕ್ ಕೂಡಾ ಕಾಣಿಸಲಿಲ್ಲ.10 ಹೆಜ್ಜೆ ಮುಂದಿಟ್ಟೆ. ಎಲ್ಲೆಲ್ಲೂ ಕತ್ತಲೆ. ಏನೂ ಕಾಣಿಸುತ್ತಿಲ್ಲ. ಕೊಡೆ ಹಿಡಿದುಕೊಂಡಿದ್ದರೂ ಮೈಯೆಲ್ಲಾ ಒದ್ದೆ. ಅಷ್ಟು ಜೋರಾಗಿ ಮಳೆ ಬರುತ್ತಿತ್ತು. ಮತ್ತೆ ಹೆದರಿ ಹಿಂದೆ ಬಂದು ಬಸ್ಟಾಪಿನಲ್ಲಿ ನಿಂತುಕೊಂಡು ಅಪ್ಪನಿಗೆ ಕಾಲ್ ಮಾಡಿದೆ.
"ಅಪ್ಪಾ!! ಎಲ್ಲಿದ್ದೀರಾ!!
"ಚಿನ್ನು!!! ನಾನು ಜಾಕೆಟ್ ಮನೆಯಲ್ಲೇ ಬಿಟ್ ಬಂದಿದ್ದೇನೆ. ಇಲ್ಲಿ ಸ್ವಲ್ಪ ಕೆಲ್ಸಾನು ಇದೆ. ನಾನು ಬರಿವಾಗ ತಡವಾಗುತ್ತೆ. ನೀನ್ ಹೋಗು!!"
ಅಪ್ಪ ಹೇಳಿದ ಮಾತು ಕೇಳಿ ಅಮ್ಮನಿಗೆ ಕಾಲ್ ಮಾಡಿದೆ.ಅಮ್ಮ ನನಗೆ ಮುಂದೆ ಹೋಗಲು ಹೇಳಿ ತಾನು ಎದುರು ಬರುವುದಾಗಿ ಹೇಳಿದರು. ನನಗೆ ತುಂಬಾ ಭಯವಾದರೂ ಧೈರ್ಯ ತೆಗೆದುಕೊಂಡು ಭಯ ಕಡಿಮೆಮಾಡಲು ಮೊಬೈಲಿನಲ್ಲಿ ಗಟ್ಟಿಯಾಗಿ ಹಾಡು ಇಡುತ್ತಾ ಮುನ್ನಡೆದೆ.
ನಮ್ಮ ಮನೆಗೆ ಹೋಗುವ ಆ ರಸ್ತೆಗೆ ಎರಡೇ ದಾರಿದೀಪ!! ಮುಂದೊಂದು ,ಕೊನೆಯಲ್ಲೊಂದು. ಪೂರ್ತಿ ಕತ್ತಲೆ, ಜೋರು ಮಳೆ, ಗಟ್ಟಿ ಹಾಡು ಇಟ್ಟು ಭಯದಿಂದ ಹೆಜ್ಜೆ ಹಾಕುತ್ತಾ ಹೋದೆ.!!!!.......
ಆ ದಾರಿಯ ಮಧ್ಯಭಾಗದ ಒಂದು ಬದಿಯಲ್ಲಿ ಒಂದು ಮನೆಯಿದೆ. ಅಲ್ಲಿ ಯಾರೂ ವಾಸಿಸುವುದಿಲ್ಲ. ಹಾಗಾಗಿ ಆ ಮನೆಯಲ್ಲಿ, ಆ ರಸ್ತೆ ಭಾಗದಲ್ಲಿ ನೆಗಟಿವ್ ಏನರ್ಜಿಗಳ ಓಡಾಟವಿದೆ ಎಂದು ಊರಿನವರು ನಂಬುತ್ತಾರೆ. ಅಲ್ಲಿ ಎಷ್ಟೋ ಜನರಿಗೆ ಬರುವಾಗ ವಿಚಿತ್ರ ಅನುಭವಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ಆ ಜಾಗದ ಬಗ್ಗೆ ನೆನೆಸಿಕೊಂಡು ಇನ್ನಷ್ಟು ಭಯವಾಯಿತು!!!!.......
ಆ ರಸ್ತೆಯ ಮುಂಭಾಗದ ದಾರಿ ದೀಪ ಕ್ಷೀಣಿಸುತ್ತಾ ಆ ಮನೆ ಹತ್ತಿರ ಹತ್ತಿರವಾಗುತ್ತಿದ್ದಂತೆ ತುಂಬಾ ಹೆದರಿಕೆಯಾಗಿ ನನ್ನ ಸ್ನೇಹಿತೆಗೆ ಕಾಲ್ ಮಾಡಿದೆ. ಅವಳ ಮನೆ ಅಲ್ಲೇ ಆ ಉರಿನಲ್ಲೇ ತುಸು ದೂರದಲ್ಲಿತ್ತು. ಅವಳನ್ನು ಸ್ಕೂಟಿ ತರಲು ಹೇಳೋಣ ಎಂದುಕೊಂಡೆ ಆದರೆ ಅವಳಿಗೆ ಕಾಲ್ ಹೋಗಲೇ ಇಲ್ಲ. ನೆಟ್ವವ್ರ್ಕ್ ವೀಕ್ ಆಗಿತ್ತು. ಏನು ಮಾಡುವುದು ಎಂದು ತೋಚದೆ ಇನ್ನು ಎದುರು ಬರದ ಅಮ್ಮನಿಗೆ ಬಯ್ದುಕೊಳ್ಳುತ್ತಾ, ತುಂಬಾ ಭಯದಿಂದ ಹೆಜ್ಜೆಯಿಡುತ್ತಾ ಹೋದೆ............
ಆ ಮನೆ ಹತ್ತಿರವಾಗುತ್ತಿದಂತೆ ನನ್ನ ಎದುರು ದೂರದಲ್ಲಿ ಯಾವುದೋ ವ್ಯಕ್ತಿ ಹೋಗುತ್ತಿರುವಂತೆ ಕಾಣಿಸಿತು........ !!!
ಮತ್ತೆ ನೋಡುವಾಗ ಅವರು ನಮಗೆ ಪರಿಚಯವಿರುವ ಓರ್ವ ವ್ಯಕ್ತಿಯಾಗಿದ್ದರು. ಆದರೆ ನನಗೆ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಕುಟುಂಬಕ್ಕೂ ನಮಗೂ ಯಾವುದೋ ವಿಷಯವಾಗಿ ಜಗಳವಾಗಿ ಮಾತು ನಿಲ್ಲಿಸಿದ್ದೆವು. ಆದರೂ ಆ ಭಯಾನಕ ರಾತ್ರಿ ಯಲ್ಲಿ ಆ ಭಯಾನಕ ದಾರಿಯಲ್ಲಿ ಅವರನ್ನು ದೂರದಲ್ಲಿ ನೋಡಿ ನನಗೆ ಭಯ ಸಾಕಷ್ಟು ಕಡಿಮೆಯಾಯಿತು. ಮೊಬೈಲ್ ಸಾಂಗ್ ಆಫ್ ಮಾಡಿದೆ. ಆದರೂ ಅವರು ನನ್ನಿಂದ ಬಹಳ ದೂರವಿದ್ದರು. ತುಸು ವೇಗವಾಗಿ ಹೆಜ್ಜೆಹಾಕುತ್ತಾ ಇದ್ದರೂ ಬಹಳ ದೂರದಲ್ಲಿ ಇದ್ದರು. ಹೆಜ್ಜೆ ಹಾಕುತ್ತಾ ಆ ಮನೆ ಬಂತು..........!!!!
ಆ ಮನೆಯ ಪಕ್ಕದಿಂದ ನಾನು ನಡೆಯುತ್ತಾ ಹೋದಾಗ ಒಮ್ಮೆಲೆ ನನ್ನ ಹಿಂದೆ ಜೋರಾದ ಹೆಜ್ಜೆ ಸದ್ದುಗಳು ಕೇಳಿಸಿದವು........!!!
ಮತ್ತೆ ಭಯ ನನ್ನ ಶರೀರವನ್ನು ಆವರಿಸಿಕೊಂಡಿತು!!! ಆ ಮನೆಯ ಬಗ್ಗೆ ಇರುವ ನಿಲುವಿಗೂ ಅಲ್ಲೇ ಶುರುವಾದ ಈ ಹೆಜ್ಜೆ ಸದ್ದಿಗೂ ಸರಿಯಾಗಿತ್ತು!!!!
ನಾನು ಮುಂದೆ ಮುಂದೆ ನಡೆಯುತ್ತಿದಂತೆಯೂ ಜೋರಾಗಿ ನನ್ನ ಹಿಂದೆಯಿಂದ ಹೆಜ್ಜೆ ಸದ್ದುಗಳು ಕೇಳುತ್ತಲೇ ಇದ್ದವು!!!! ಯಾರೋ ನನ್ನ ಹಿಂದೆಯಿಂದ ನಡೆದುಕೊಂಡು ಬರುತ್ತಿದ್ದಂತೆ ಕ್ಲಿಯರ್ ಆಗಿ ಫೀಲ್ ಆಗುತ್ತಿತ್ತು!!!ಬಹುಶಃ ವ್ಯಕ್ತಿಯಾಗಿರಬೇಕು ಎಂದೆನಿಸಿ ಧೈರ್ಯದಿಂದ ಒಮ್ಮೆಲೆ ಹಿಂದಿರುಗಿದೆ!!!!......!!!!!!
ಆದರೆ ಹಿಂದೆ ಯಾರೂ ಇಲ್ಲ!!!.....ಒಮ್ಮೆಲೆ ನನ್ನ ಜೀವ ಬಾಯಿಗೆ ಬಂದಂತಾಗಿತ್ತು......!!! ಎದೆಬಡಿತ ಒಮ್ಮೆಲೆ ಮೇಲೇರಿತ್ತು. ತುಂಬಾ ಕತ್ತಲೆ. ಮಳೆ ನಿರಂತರವಾಗಿ ಬರುತ್ತಲೇ ಇತ್ತು.ಝಪಕ್ಕನೆ ಮುಂದಿರುಗಿ ತುಸು ವೇಗದಲ್ಲಿ ಮತ್ತೆ ಹೆಜ್ಜೆ ಹಾಕಿದೆ. ಆಗ ಒಂದೆರೆಡು ಕ್ಷಣ ಸ್ತಬ್ಧವಾದ ಆ ಗಟ್ಟಿ ಹೆಜ್ಜೆ ಸದ್ದುಗಳು ಮತ್ತೆ ಕೇಳಿಸತೊಡಗಿತು!!!!!
ಮತ್ತೆ ಹಿಂದೆಯಿಂದ ಯಾರೋ ನಡೆದುಕೊಂಡು ಬರುವ ಅದೇ ವಿಚಿತ್ರ ಅನುಭವ......!!!!
ಎದೆ ಬಡಿತ ಇನ್ನೂ ಜೋರಾಗಿ ತುಂಬಾ ತುಂಬಾ ಭಯವಾಗಿ ನಡುಗುತ್ತಾ ಗಟ್ಟಿಯಾಗಿ ಎದುರಿಗೆ ದೂರದಲ್ಲಿ ಹೋಗುತ್ತಿದ್ದ ಆ ಪರಿಚಯದ ವ್ಯಕಿಯನ್ನು "ಅಂಕಲ್" ಎಂದು ಕಿರುಚಿದೆ. ತುಂಬಾ ಹೆದರಿ ಹೋಗಿದ್ದೆ!!!......!!!
ಮನಸಿಲ್ಲದಿದ್ದರೂ ಇಷ್ಟವಿಲ್ಲದ ಆ ವ್ಯಕ್ತಿಯನ್ನು ಕರೆದೆ. ಅವರು ಅವರಷ್ಟಕ್ಕೆ ಮುಂದೆ ಹೋಗುತ್ತಿದ್ದವರು ನಾನು ಅವರನ್ನು ಕಿರುಚಿದ್ದು ಕೇಳಿ ಹಿಂದಿರುಗಿ "ಏನು!!" ಎಂದು ಆಶ್ಚರ್ಯದಿಂದ ಕೇಳಿದರು. ನಾನು "ಎನಿಲ್ಲ" ಎಂದು ನಡೆದ ವಿಷಯ ಹೇಳಲಾಗದ ಮುಜುಗರದಿಂದ ಹೇಳಿದೆ. ಅವರು ಮತ್ತೆ ಅವರಷ್ಟಕ್ಕೆ ಮುಂದೆ ನಡೆಯುತ್ತಾ ಹೋದರು.ನಾನು ಆಂಜನೆಯನನ್ನು ನೆನೆಸಿಕೊಂಡು ಬೇಗ ಬೇಗ ಆ ವ್ಯಕ್ತಿಯತ್ತ ಹೆಜ್ಜೆಹಾಕಿ ಅವರ ಅಶುಪಾಸಿನಲ್ಲೇ ಅವರನ್ನು ಅತ್ತ ಒಮ್ಮೆ ಇತ್ತ ಒಮ್ಮೆ ಹಿಂದೆಯಿಂದ ಫೋಲ್ಲೋ ಮಾಡುತ್ತಾ ನಡೆದೆ.ಮತ್ತೆ ಭಯವಾಗಬರದೆಂದು ಮೊಬೈಲಿನಲ್ಲಿ ಗಟ್ಟಿಯಾಗಿ ಸಾಂಗ್ ಇಡುತ್ತಾ ಆ ವ್ಯಕ್ತಿಯ ಹಿಂದೆ ಹಿಂದೆ ನಡೆಯುತ್ತ ಹೋದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಮುಂದೆ ನನ್ನ ಮನೆಗೆ ಹೋಗುವ ಮೇಲ್ದಾರಿ ಬಂತು. ಅಲ್ಲಿಂದ ನಾನು ಒಬ್ಬಳೇ ಹೋಕಬೇಕಿತ್ತು. ಆ ವ್ಯಕ್ತಿ ಸೀದ ರಸ್ತೆಯಲ್ಲಿ ನಡೆಯುತ್ತಾ ಹೋದರು.
ಹೀಗೆ ಆ ಭಯಾನಕ ಹಾದಿಯಲ್ಲಿ ಧೈರ್ಯಕ್ಕೆ ಜೊತೆಯಲ್ಲಿದ್ದ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾದೆ. ಆ ಮೇಲ್ದಾರಿಯಲ್ಲೊಂದು ದಾರಿದೀಪವಿತ್ತು. ಇನ್ನು ರಭಸದಲ್ಲಿ ಧರೆಗುರುಳುತ್ತಿದ್ದ ಮಳೆಹನಿಗಳ ಬಿಟ್ಟು ಆ ದಾರಿಯಲ್ಲಿ ಬೇರೆ ಯಾರೂ ನನ್ನ ಸಂಗಾತಿಯಾಗಲಿಲ್ಲ. ಆ ಮೇಲ್ದಾರಿಯ ದಾರಿದೀಪದ ಬೆಳಕಲ್ಲಿ ನನ್ನದೇ ಜೋಡಿ ಛಾಯೆ ದೊಡ್ಡದಾಗಿ ವಿಚಿತ್ರವಾಗಿ ಕಾಣಿಸುತ್ತಿತ್ತು.......!!!ಅದನ್ನು ನೋಡಿ ಒಮ್ಮೆಲೇ ಹೆದರಿಕೊಂಡೆ!!!
ಮನೆ ಸೇರಲು ಇನ್ನೈದು ನಿಮಿಷಗಳ ದಾರಿಯಷ್ಟೇ. ಆದರೂ ಓಡಲು ಕಾಲು ಆಡುತ್ತಿಲ್ಲ. ಮೈಯೆಲ್ಲಾ ನಡುಗುತ್ತಿತ್ತು. ಒಂದು ಮನೆಯ ಬಳಿ ಶಾರ್ಟ್ ಕಟ್ ರಸ್ತೆ ತೆಗೆದುಕೊಂಡೆ.
ಆದರೆ ಆ ಮನೆಯ ಗೇಟಿನ ಬಾಗಿಲು ತೆಗೆಯುತ್ತಲೇ...................... "ಧೊಪ್ "ಎಂದು ಯಾರೋ ಒಂದು ಕಾಲನ್ನು ರಭಸದಿಂದ ನೆಲಕ್ಕೆ ಇಟ್ಟಂತೆ ಸದ್ದು ಕೇಳಿಸಿತು. "ಅಮ್ಮಾ" ಎಂದು ಗಟ್ಟಿಯಾಗಿ ಕಿರುಚಿಕೊಂಡು ಓಡಿದೆ.!!!... ಅಮ್ಮ ಮೇಲೆ ತುಸು ದೂರದಲ್ಲಿ ಇದ್ದರು. ನಡುಗುತ್ತಿದ್ದ ನನ್ನ ಮನೆಗೆ ಕರೆದುಕೊಂಡು ಹೋಗಿ ಒದ್ದೆಯಾದ ಮೈಯೆಲ್ಲಾ ಒರೆಸಿ ಹೆದರಿದ್ದ ಕಾರಣ ಕೇಳಿದರು. ನಾನು ನಡೆದ ಘಟನೆಯೆಲ್ಲಾ ವಿವರಿಸಿದೆ. ಅವರು ಅದು ನಿನ್ನ ಭ್ರಮೆ, ಇನ್ನು ಅದನ್ನು ತಲೆಗೆ ತೆಗೆದುಕೊಂಡು ರಾತ್ರಿ ಮಲಗಿದಲ್ಲಿ ಕನಸಿನಲ್ಲಿ ಕಿರುಚಬೇಡ, ಸುಮ್ಮನೆ ಮಲಗಿಕೊ ಎಂದರು.
ನನಗೆ ರಾತ್ರಿ ನಿದ್ದೆಯಲ್ಲಿ ಕನವರಿಸುವ ಕಿರುಚಿಕೊಳ್ಳುವ ಅಭ್ಯಾಸವಿತ್ತು.ಕೆಟ್ಟ ಕನಸು ಬಿದ್ದರೆ ಜೋರಾಗಿ ಕಿರುಚಿಕೊಂಡು ಅಪ್ಪ ಅಮ್ಮನನ್ನು ಎಬ್ಬಿಸುತ್ತಿದ್ದೆ.ಆವತ್ತು ರಾತ್ರಿ ಭಯದಿಂದಲೇ ಮಲಗಿಕೊಂಡೆ.ಆದರೆ ಮಧ್ಯ ರಾತ್ರಿ ಜೋರಾಗಿ ಕಿರುಚಿಕೊಂಡೆ.ಯಾರೋ ನನ್ನ ಕುತ್ತಿಗೆಯನ್ನು ಜೋರಾಗಿ ಕಿವುಚುತ್ತಿದ್ದರು. ನಾನು ಅದನ್ನು ಬಿಡಿಸಲು ಯತ್ನಿಸುತ್ತಾ ನೆಲದ ಮೇಲೆ ಹೊರಲಾಡುತ್ತಿದ್ದೆ.
"ಚಿನ್ನು ಚಿನ್ನು!! ಏನಾಯಿತು? " ಎಂದು ಹೇಳುತ್ತಾ ಅಪ್ಪ ಅಮ್ಮ ನನ್ನನ್ನು ಎಬ್ಬಿಸಿದ್ದರು. ನಾನು ಯಾರೋ ನನ್ನ ಕುತ್ತಿಗೆ ಹಿಡಿದರು ಎಂದು ಹೆದರಿ ಬಿಕ್ಕಳಿಸುತ್ತಾ ಹೇಳಿದೆ. ಆದರೂ ಅಮ್ಮ ಎಂದಿನಂತೆ ನಿಂದು ಇದ್ದಿದ್ದೇ ,ಸುಮ್ಮನೆ ಮಲಗಿಕೊ ಎಂದರು. ಅಂದು ರಸ್ತೆಯಲ್ಲಿ ನಡೆದ ಘಟನೆಯನ್ನು ಅಪ್ಪನಿಗೆ ನಾವು ಹೇಳಿರಲಿಲ್ಲ.ಅಂದು ಮತ್ತೆ ಅಪ್ಪ ಅಮ್ಮನ ಪಕ್ಕದಲ್ಲೇ ಮಲಗಿಕೊಂಡೆ.
ಮರುದಿನ ಎಲ್ಲಾ ಸರಿಯಿತ್ತು. ಆದರೆ ರಾತ್ರಿ ಪುನಃ ಹಾಗೆ ಆಯಿತು. ಇನ್ನೂ ಜೋರಾಗಿ ಯಾರೋ ಕತ್ತು ಹಿಡಿದು ನನ್ನನ್ನು ಎಳೆಯುತ್ತಿದ್ದರು. ನನಗೆ ಉಸಿರು ಕಟ್ಟಿದಂತಾಗಿ ಇನ್ನೂ ಜೋರಾಗಿ ಕಿರುಚಿಕೊಂಡು ಮಲಗಲು ಹೆದರಿಕೊಂಡೆ. ಗಟ್ಟಿಯಾಗಿ ಅತ್ತು ನಿಜವಾಗಿಯೂ ಯಾರೋ ಕತ್ತು ಹಿಡಿಯುತ್ತಾರೆಂದು ಬಿಕ್ಕಳಿಸುತ್ತಾ ತಂದೆ ತಾಯಿಗೆ ಹೇಳಿದೆ. ಆದರೆ ಅಪ್ಪ ಏನೂ ಇಲ್ಲ ನಿನ್ನ ಭ್ರಮೆ ಎಂದೆಲ್ಲಾ ಹೇಳಿದರು. ಆದರೆ ಮರುದಿನವೂ ರಾತ್ರಿ ಅದೇ ಭಯಾನಕ ಅನುಭವ ಮರುಕಳಿಸಿದಾಗ ತಂದೆ ತಾಯಿಗೆ ಬಹಳ ಭಯವಾಯಿತು. ನನಗೆ ನೀರು ಕುಡಿಸಿ ರಾತ್ರಿ ಇಡೀ ನನ್ನನ್ನು ಸಮಾಧಾನಪಡಿಸುತ್ತಾ ಮಲಗಲು ಒತ್ತಾಯಿಸಿದರು. ಆದರೆ ನನಗೆಷ್ಟು ಭಯವಾಗಿತ್ತೆಂದರೆ ಮತ್ತೆ ಮಲಗಿದರೆ ಆ ಅಗೋಚರ ಶಕ್ತಿ ನನ್ನ ಕತ್ತು ಹಿಸುಕಿ ನನ್ನನ್ನು ಕೊಂಡು ಬಿಡುತ್ತಿತ್ತು ಎಂಬುವಷ್ಟು. ಹೇಗೋ ಮುಂಜಾನೆಯಾಗುವಾಗ ಸ್ವಲ್ಪ ಮಲಗಿಕೊಂಡು ಮರುದಿನ ಆಫೀಸಿಗೆ ರಜೆ ಹಾಕಿದೆ. ನನ್ನ ಅಪ್ಪನಿಗೆ ಅಂದು ನಡೆದ ಘಟನೆಯನ್ನು ಇನ್ನೂ ಹೇಳಿರಲಿಲ್ಲ. ಅವರು ನನ್ನ ಜ
ಾತಕ ಮಾಡಿದ ಪಂಡಿತರ ಬಳಿ ನನ್ನ ಜಾತಕ ತೋರಿಸಿ ಹೀಗಾಗುವುದರ ಕಾರಣ ತಿಳಿಯಲು ಹೋಗಿದ್ದರು. ಬೆಳಿಗ್ಗೆ ಎದ್ದಾಗ ನನ್ನ ಅಮ್ಮ ಈ ವಿಷಯವನ್ನು ನನಗೆ ಹೇಳಿದರು. ನನಗೆ ಅಂದು ನಡೆದ ಘಟನೆಯೇ ಇದಕ್ಕೆಲ್ಲ ಕಾರಣ ಎಂದೆನಿಸುತ್ತಿತ್ತು.
ಅಪ್ಪ ಮಧ್ಯಾಹ್ನ ಊಟದ ಸಮಯಕ್ಕೆ ಬಂದು ಜ್ಯೋತಿಷರು ಹೇಳಿದ ಮಾತು ಹೇಳಿದಾಗ ನಾನು ಅಮ್ಮ ಅಚ್ಚರಿಗೊಂಡಿದ್ದೆವು.............!!!
ಅವರು ಖಚಿತವಾಗಿ *******ಯ ಆ ರಸ್ತೆಯಲ್ಲಿ ಅದೇ ದಿನ ಅದೇ ಸಮಯಕ್ಕೆ ಸವಾರಿಗೆ ನಾನು ಅಡ್ಡವಾಗಿದ್ದೇನೆ ಎಂದು ಹೇಳಿದ್ದರು. ಅಷ್ಟೊಂದು ಖಚಿತವಾಗಿ ಅವರು ಹೇಳಿದಾಗ ನನಗೂ ಅಮ್ಮನಿಗೂ ಆಶ್ಚರ್ಯ!!!! ಈ ವಿಷಯ ಅಪ್ಪನಿಗೆ ಗೊತ್ತೇ ಇರಲಿಲ್ಲ!!! ನಾನು ಆ ದಿನ ಕೊರಗ ಸಮುದಾಯದವರ ದೈವದ ಸವಾರಿಗೆ ಅಡ್ಡವಾಗಿದ್ದೆನಂತೆ. ಅಂದರೆ ಅಂದು ನನ್ನ ಹಿಂದೆ ನಡೆದದ್ದು ದೆವ್ವವಲ್ಲ ದೈವ. ಅದೇ ರಾತ್ರಿ ಬಂದು ನನಗೆ ತೊಂದರೆ ಕೊಡುತ್ತಿತ್ತು ಎಂದು ಜ್ಯೋತಿಷರು ಹೇಳಿದ್ದರು.
ತುಳುನಾಡಿನ ಜನ ದೈವಗಳನ್ನು ಅತೀವವಾಗಿ ನಂಬುತ್ತಾರೆ. ಆಯಾ ಸಮುದಾಯದವರಿಗೆ ಆಯಾ ದೈವಗಳಿರುತ್ತವೆ. ಬಿಲ್ಲವರಿಗೆ ಕೋಟಿ ಚೆನ್ನಯರು, ಮೊಗವೀರರಿಗೆ ಬ್ಬೊಬ್ಬರ್ಯ ಹೀಗೆ ಹಲವಾರು ದೈವಗಳನ್ನು ತುಳುವರು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಈ ದೈವಗಳಿಗೆ ಹರಕೆ ಕಟ್ಟಿ ಅದನ್ನು ತೀರಿಸದಿದ್ದಾಗ, ಒಮ್ಮೆ ನಂಬಿ ನಂಬಿಕೆ ಬಿಟ್ಟಾಗ ,ಮಾಡುವ ಪೂಜೆ ಪುನಸ್ಕಾರಗಳಲ್ಲಿ ಕೊರತೆಗಳನ್ನು ಮಾಡಿದಾಗ ಅದು ಹಲವಾರು ರೀತಿಯಲ್ಲಿ ಜನರಿಗೆ ತೊಂದರೆ ಕೊಡುತ್ತದೆ. ಆದರೆ ನಂಬಿದವರನ್ನು ಎಂತಾ ಕಷ್ಟಕರ ಸನ್ನಿವೇಶದಿಂದಲೂ ಕಾಪಾಡುತ್ತದೆ. ಈ ದೈವಗಳನ್ನು ತುಳುವರು "ಭೂತ" ಎಂದೂ ಕರೆಯುತ್ತಾರೆ. ಈ ದೈವಗಳು ರಾತ್ರಿ ಹೊತ್ತಿಗೆ ಸಂಚಾರ ಮಾಡುತ್ತಿರುತ್ತವೆ. ಆಗ ಅದಕ್ಕೆ ಯಾರೂ ಅಡ್ಡವಾದರೆ ಅದಕ್ಕೆ ಕೋಪ ಬರುತ್ತದೆ.
ಹಿಂದಿನವರು ದೈವ ಸಂಚಾರದ ಸನ್ನಿವೇಶಕ್ಕೆ ಎದುರಾದರೆ ಅಲ್ಲೇ ಅಡ್ಡ ಬಿದ್ದು ಕ್ಷಮೆಯಾಚಿಸುತ್ತಿದ್ದರು.ಮತ್ತೆ ಮಾಡಿದ ತಪ್ಪಿಗಾಗಿ ಅದಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಒಂದು ದಿನ ನನ್ನ ಅಜ್ಜಿಯ ತಂಗಿ( ನನಗೂ ಅಜ್ಜಿ) ಮಲ್ಪೆಯ ಮುಂಡದಲ್ಲಿ(ಮೀನು ಮಾರುವ ಸ್ಥಳ) ಮೀನು ಮಾರಿ ಸ್ವಲ್ಪ ಮೀನು ಮನೆಗೆ ತರುತ್ತಾ ತಡರಾತ್ರಿ ತನ್ನ ಸ್ನೇಹಿತೆಯರ ಜೊತೆ ಮಲ್ಪೆ ಬೀಚಿನಿಂದ ತೊಟ್ಟಂ ಬೀಚಿನತ್ತ ಕಡಲ ಬದಿಯಿಂದ ಬರುತ್ತಿದ್ದರಂತೆ. ಆಗ ಆ ಕತ್ತಲೆಯಲ್ಲಿ ದೂರದಿಂದ ಯಾವುದೋ ಬೆಳಕು ಹತ್ತಿರ ಬರುವಂತೆ ಅನಿಸಿತಂತೆ. ಇವರು ಮೊದಲು ಯಾರೋ ಟಾರ್ಚ್ ಹಿಡಿದುಕೊಂಡು ಬರುತ್ತಿದ್ದರೆಂದು ಸುಮ್ಮನೆ ಮಾತಾಡಿಕೊಂಡು ನಡೆದರಂತೆ......!!!
ಆದರೆ ಆ ಬೆಳಕಿಗೆ ಹತ್ತಿರವಾಗುತ್ತಿದ್ದಂತೆ ಅದು ಮನುಷ್ಯ ಆಕೃತಿಯಂತೆ ಕಾಣಿಸತೊಡಗಿದಂತೆ!!!! ದೈವ ಸವಾರಿ ಎಂದು ತಿಳಿದ ನಮ್ಮಜ್ಜಿ ಹಾಗೂ ಅವರ ಸ್ನೇಹಿತೆಯರು, ಹತ್ತಿರ ತುಸು ದೂರದಲ್ಲಿದ್ದ ತೀರದಲ್ಲಿ ಇಟ್ಟಿದ್ದ ದೊಡ್ಡ ದೋಣಿಯ ಮೂಲೆಗೆ ಹೋಗಿ ತಮ್ಮ ಬುಟ್ಟಿಯನ್ನು ಕೆಳಹಾಕಿ ಸೆರಗನ್ನು ಕೈಯಲ್ಲಿ ಒಡ್ಡಿ "ಮಾಫ್ ಮಲ್ಪ್ಲೇ ,ಇರೆಗ್ ಅಡ್ಡ ಆಯಾ, ಓ ದೈವ ಮಾಫ್ ಮಲ್ಪ್ಲೇ "(ಕ್ಷಮಿಸು ಓ ಧೈವ ,ನಿಮ್ಮ ದಾರಿಗೆ ನಾವು ಅಡ್ಡವಾದೆವು, ದಯವಿಟ್ಟು ಕ್ಷಮಿಸು ") ಎಂದು ಅಡ್ಡಬಿದ್ದು ಆ ಬೆಳಕಿನ ಆಕೃತಿ ಹೋಗುವವರೆಗೂ ತೆಂಗಿನ ಎಲೆಗಳಿಂದ ಮೇಲ್ಚಾವಣಿ ಕಟ್ಟಿದ್ದ ಆ ದೋಣಿಯ ಅಡಿ ಅಳುತ್ತಾ ಕ್ಷಮಿಸು ಎನ್ನುತ್ತಾ ಕೂತುಕೊಂಡರಂತೆ. ಪುಣ್ಯಕ್ಕೆ ಅವರಿಗಾಗಲಿ ಅವರ ಕುಟುಂಬಕ್ಕಾಗಲಿ ಮತ್ತೆ ಯಾವುದೇ ತೊಂದರೆಯಾಗಲಿಲ್ಲ. ಆದರೂ ಮನೆಯಲ್ಲಿ ಪೂಜೆ ಪುನಸ್ಕರಗಳನ್ನು ಮಾಡಿಸಿದ್ದರಂತೆ. ಹೀಗೆ ತುಳುವರು ಈ ದೈವಗಳನ್ನು ನಂಬಿ ಅವುಗಳ ಮೇಲೆ ಅಪಾರ ಭಯ ಭಕ್ತಿ ಇಟ್ಟುಕೊಳ್ಳುತ್ತಾರೆ.
ಇನ್ನೊಂದು ವ್ಯಕ್ತಿಯೊಮ್ಮೆ ಮಧ್ಯರಾತ್ರಿ ಮೂತ್ರ ವಿಸರ್ಜಿಸಲು ಹೊರಬಂದಾಗ. ಮೂತ್ರ ವಿಸರ್ಜಿಸುತ್ತಿದ್ದಾಗ ಗೆಜ್ಜೆ ಸದ್ದುಗಳು ಕೇಳಿಸಿತಂತೆ........!!!!ಅದಕ್ಕೆ ಅವರು ಅತ್ತ ಇತ್ತ ನೋಡಿದಾಗ ಪುಟ್ಟ ಸುಮಾರು 3 ವರ್ಷದಷ್ಟು ಪ್ರಾಯದ ಮಗುವೊಂದು ಮುಂಡಾಸು ಕಟ್ಟಿಕೊಂಡು ತುಸು ದೂರದಲ್ಲಿ ನಡೆದುಕೊಂಡು ಹೋಗುವುದು ಕಾಣಿಸಿತಂತೆ. ಇವರು ಅದನ್ನು ಹಿಂಬಾಳಿಸಿದಾಗ ತುಸು ದೂರದಲ್ಲಿ ಒಮ್ಮೆಲೇ ಮಾಯವಾಯಿತಂತೆ.......!!!! ನಂತರ ಅವರಿಗೆ ಯಾವಾಗಲೂ ಕನಸಲ್ಲಿ ಎಲ್ಲೆಲ್ಲೂ ಆ ಮಗುವೇ ಕರ್ಕಷವಾಗಿ ನಗುವಂತೆ ಕಾಣಿಸತೊಡಗಿತ್ತಂತೆ. ಅವರು ಇದರ ಬಗ್ಗೆ ಯಾರಿಗೂ ಹೇಳಲೇ ಇಲ್ಲ. ನಂತರ ಈ ಅನುಭವಗಳು ಪದೇ ಪದೇ ಆಗಿ ಅವರು ಡಿಪ್ರೆಷನ್ನಲ್ಲಿ ಕುಡಿಯುವುದನ್ನು ಶುರು ಮಾಡಿದರಂತೆ.ಆದರೂ ಎಲ್ಲೆಲ್ಲೂ ಮುಂಡಾಸು ಕಟ್ಟಿಕೊಂಡ ಮಗುವೊಂದು ಕರ್ಕಷವಾಗಿ ನಗುವ ಅನುಭವ ಅವರನ್ನು ನಿರಂತರವಾಗಿ ಕಾಡಿ ಕೊನೆಗೆ ಅವರು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡರಂತೆ........!!!!
ಮತ್ತೆ ಜ್ಯೋತಿಷರ ಬಳಿ ಕೇಳಿದಾಗ ಯಾವುದೋ ದೈವ ಸವಾರಿಯನ್ನು ಹಿಂಬಾಲಿಸಿ ತಪ್ಪು ಮಾಡಿ ಅದಕ್ಕೆ ಕ್ಷಮೆಯನ್ನೂ ಯಾಚಿಸದೆ ಹೀಗಾಯಿತೆಂದು ಹೇಳಿದರಂತೆ. ಅವರು ಈ ಅನುಭವಾಗಳಾಗುವುದನ್ನು ಕೇವಲ ತನ್ನೊಬ್ಬ ಸ್ನೇಹಿತನಿಗೆ ಹೇಳಿದ್ದರಂತೆ. ಅವರು ಪರಿಹಾರ ಮಾಡಿಸಲು ಹೇಳಿದಾಗ ಅವರು ಅದಕ್ಕೆ ಒಪ್ಪದೆ ಕೊನೆಗೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪ್ರಸಂಗ ಬಂತು. ಹೀಗೆ ದೈವಗಳನ್ನು ನಂಬದಿದ್ದರೆ ಅವು ತೊಂದರೆ ಕೊಡುತ್ತವೆ.
ರಾತ್ರಿ ಹೊತ್ತಿನಲ್ಲಿ ಕಡಲ ಬಳಿ ಬೆಂಕಿ ಉರಿಯುವುದು ಅದರ ಸುತ್ತ ಬೆಳಕಿನ ಆಕೃತಿಗಳು ಕಾಣಿಸುವುದನ್ನು ನಮ್ಮವರು ನೋಡಿದ್ದಾರೆ. ರಾತ್ರಿ ಸಮಯದಲ್ಲಿ ಈ ದೈವಗಣಗಳು ಬೆಂಕಿಯ ಸುತ್ತ ಕುಣಿಯುತ್ತವೆ ಎಂಬ ನಂಬಿಕೆ ಇದೆ.
ಅಂದು ನನಗಾದ ಅನುಭವಕ್ಕೆ ನಂತರ ಮನೆಯಲ್ಲಿ ದೊಡ್ಡ ಪೂಜೆ ಮಾಡಿಸಿದರು. ನನಗೆ ದಿನಾಲೂ ಹಾಕಿಕೊಳ್ಲಲು ತಿಲಕವನ್ನು ಕೊಟ್ಟರು. ಆಮೇಲೆ ಕತ್ತು ಹಿಸುಕುವ ಅನುಭವ ಮತ್ತೆ ಮರುಕಳಿಸಲಿಲ್ಲ. ನಂತರ ಒಂದು ದಿನ ನನ್ನ ಪಕ್ಕದ ಮನೆಯ ಸ್ನೇಹಿತೆ ದಿವ್ಯಾಳಿಗೆ ಈ ಘಟನೆಯ ಬಗ್ಗೆ ಹೇಳಿದ್ದೆ .ಆಗ ಅವಳು ಅವಳ ತಮ್ಮನಿಗೆ ಆ ಮನೆಯ ಬಳಿಯಿಂದ ಬರುವಾಗ ಆದ ಅನುಭವವನ್ನು ಹೇಳಿದಳು.
ಒಂದು ಮಧ್ಯಾಹ್ನ ಅವಳ ತಮ್ಮ ಆ ರಸ್ತೆಯಲ್ಲಿ ಆ ಮನೆಯ ಹತ್ತಿರವಾಗುತ್ತಾ ಬರುವಾಗ ಯಾರೋ ಗಂಡಸು ದೂರದಲ್ಲಿ ಆ ಮನೆಯ ಹತ್ತಿರ ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವಂತೆ ಕಾಣಿಸಿತಂತೆ. ಆದರೆ ಹತ್ತಿರವಾಗುತ್ತಿದ್ದಂತೆ ಆ ವ್ಯಕ್ತಿ ಇಲ್ಲ. ಮಾಯ!! ಆ ಘಟನೆಯ ಬಳಿಕ ಬಹಳ ಹೆದರಿದ ಅವನ ತಮ್ಮ ಒಬ್ಬನೇ ಮಧ್ಯಾಹ್ನ ಬರಲು ಹಿಂಜರಿಯುತ್ತಿದ್ದ. ಆ ಮನೆಯ ಬಳಿ ಎಷ್ಟೋ ಜನರಿಗೆ ವಿಚಿತ್ರ ಅನುಭವಾಗಳಾಗಿವೆ ಎಂದು ಅಲ್ಲಿನವರು ಹೇಳುತ್ತಾರೆ.
ಒಂದು ದಿನ ನನ್ನ ತಂದೆ ರಾತ್ರಿ ಬರುವಾಗ ಸುಮಾರು ಹನ್ನೊಂದು ಘಂಟೆಯಾಗಿತ್ತಂತೆ. ಅವರು ಆ ಮನೆಯ ಬಳಿಯಿಂದ ಬರುವಾಗ ರಸ್ತೆಯಲ್ಲಿ ಒಂದು ಮೊಲವನ್ನು ಕಂಡರಂತೆ. ಆ ಜಾಗ ಎಷ್ಟು ಭಯಾನಕ ಎಂದು ಗೊತ್ತಿದ್ದೂ ನನ್ನ ತಂದೆ ಸ್ಕೂಟಿ ನಿಲ್ಲಿಸಿ ಆ ಮೊಲವನ್ನು ಹಿಡಿಯಲು ಹೋದರು. ಆದರೆ ಆ ಮೊಲವನ್ನು ಹಿಡಿಯಲು ಆ ರಸ್ತೆಯಲ್ಲಿ ಮುಂದೆ ನಡೆದಾಗ ಹಿಂದೆ ಸರಿಯಾಗೇ ನಿಲ್ಲಿಸಿದ್ದ ಸ್ಕೂಟಿ ನೆಲಕ್ಕೆ ಅಡ್ಡ ಬಿತ್ತಂತೆ. ಅದನ್ನು ನೋಡಿ ನನ್ನ ತಂದೆ ಮತ್ತೆ ಮೊಲದತ್ತ ಹಿಂದಿರುಗಿದಾಗ ಮೊಲವೂ ಮಾಯಕ! ಎಲ್ಲೆಲ್ಲಿ ನೋಡಿದರೂ ಮೊಲ ಕಾಣಿಸಲೇ ಇಲ್ಲ ಕ್ಷಣ ಮಾತ್ರದಲ್ಲಿ ಎಲ್ಲಿ ಓಡಿಹೋಯಿತೆಂದು ಆಶ್ಚರ್ಯಗೊಂಡು ನನ್ನ ತಂದೆ ಬಿದ್ದ ಸ್ಕೂಟಿ ಎತ್ತಿ ಮನೆಗೆ ಬಂದು ನಡೆದ ವಿಷಯವನ್ನು ನಗುತ್ತಾ ವ್ಯಂಗ್ಯವಾಗಿ ಹೇಳಿದ್ದರು. ನನ್ನ ಅಮ್ಮ ಅವರಿಗೆ ಮೊಲ ಹಿಡಿಯಲು ಅದೇ ಜಾಗದಲ್ಲಿ ಹೋದದಕ್ಕೆ ಚೆನ್ನಾಗಿ ಬೈದಿದ್ದರು. ನನ್ನ ಅಪ್ಪ ****ಯಲ್ಲಿ ಅದೆಷ್ಟೋ ಭಯಾನಕ ಇಂತ ಹಾರರ್ ಅನುಭವಗಳನ್ನು ನೋಡಿದ್ದಾರೆ. ಹಾಗಾಗಿ ಅವರಿಗೆ ಅಭ್ಯಾಸವಾಗಿದೆ.
*******ಯಲ್ಲಿ ಇನ್ನೊಂದು ಜನರಿರದ ಮನೆಯಿದೆ.ಅದೂ ರಸ್ತೆ ಬದಿಯಲ್ಲೇ ಇರುವ ಮನೆ. ಅಲ್ಲಿ ಮಧ್ಯ ರಾತ್ರಿ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುವವರಿಗೆ ಆ ಮನೆಗೆ ಬೆಂಕಿ ಬಿದ್ದಂತೆ ಕಾಣಿಸುತ್ತದೆ. ಒಂದು ರಾತ್ರಿ ಬೈಕ್ನಲ್ಲಿ ನನ್ನ ತಂದೆಗೆ ಪರಿಚಯದವರೂ,ಆ ಊರಿಗೆ ಹೊಸಬರೊಬ್ಬರು ಪ್ರಯಾಣಿಸುತ್ತಿದ್ದಾಗ,ಆ ಮನೆಗೆ ಪೂರ್ತಿ ಬೆಂಕಿ ಬಿದ್ದು ಉರಿಯುತ್ತಿರುವುದು ಕಾಣಿಸಿತಂತೆ. ಅವರು ಹೆದರಿ.....
"ಅಯ್ಯೋ ಆ ಮನೆಗೆ ಬೆಂಕಿ ಬಿದ್ದಿದೆ.ಬೆಂಕಿ ಆರಿಸುವವರನ್ನು ಕರೆಯುವ "ಎಂದು ಮೊಬೈಲ್ ತೆಗೆದು ಫೋನ್ ಮಾಡುವುದರಲ್ಲಿದ್ದರಂತೆ. ಆಗ ನನ್ನ ತಂದೆಯ ಸ್ನೇಹಿತರು "ಬಿಡಿ ಸಾರ್ ಇದು ಇದ್ದಿದ್ದೇ,ಇಲ್ಲಿಂದ ಬೇಗ ಹೋಗೋಣ, ನಾಳೆ ಮನೆ ಇದ್ದ ಹಾಗೆ ಇರುತ್ತೆ ನೋಡಿ, ಇದು ಪ್ರೇತಗಳಾಟ" ಎಂದು ಅವರನ್ನು ಬೈಕ್ ಬಿಡಲು ಒತ್ತಾಯಿಸಿದರು.
"ಏನ್ ಹೇಳ್ತಿದ್ದೀರ ನೀವು ! ಅಷ್ಟು ದೊಡ್ಡ ಮನೆಗೆ ಬೆಂಕಿ ಬಿದ್ದಿದ್ದೆ, ಅಲ್ಲಿರೋರನ್ ಕಾಪಾಡಬೇಡ್ವಾ." ಎಂದು ಆ ಹೊಸಬರು ಹೇಳಿದರು.
"ಸಾರ್ ನಮ್ ಪ್ರಾಣ ಉಳೀಬೇಕಾದ್ರೆ ಇಲ್ಲಿಂದ ಬೇಗ ಓಡಿ ಹೋಗ್ಬೇಕು ಸಾರ್. ನಿಮ್ಗೆ ಈ ಊರಲ್ಲಿ ನಡೆಯೋ ವಿಚಿತ್ರ ಘಟನೆಗಳು ಗೊತ್ತಿಲ್ಲ ಸಾರ್ .ನಮ್ ತಾಯಾಣೆಗೂ ಹೇಳ್ತೀನಿ ಸಾರ್ ನಾಳೆ ಆ ಮನೆ ಇದ್ದ ಹಾಗೆ ಇರುತ್ತೆ ಸಾರ್ ನಡೀರಿ ಸಾರ್" ಎಂದು ಅವರನ್ನು ಒತ್ತಾಯಿಸಿ ಅಲ್ಲಿಂದ ಕರೆದುಕೊಂಡು ಹೋಗಿದ್ದರು. ಆದರೆ ಅವರು ಸ್ವಲ್ಪವೂ ನಂಬಿಕೆ ಇರದೇ ಆ ಮನೆಗೆ ಬೆಂಕಿ ಆರಿಸಲು ಸಹಾಯ ಮಾಡದೆ ಓಡಿದೆ ಎಂದು ಬೆಳಿಗ್ಗೆ ಇವರನ್ನೇ ಕರೆದುಕೊಂಡು ಆ ಮನೆಯನ್ನು ನೋಡಲು ಬಂದಾಗ ಆಶ್ಚರ್ಯವಾಗಿತ್ತಂತೆ. ಆ ಮನೆ ಒಂದು ಚೂರೂ ಸುಟ್ಟ ಕಳೆಯಿರದೆ ನಿಂತಿತ್ತಂತೆ. ಇದನ್ನು ನೋಡಿದವರಿಗೆ ಬಹಳ ಅಚ್ಚರಿಯಾಗಿ ಅಲ್ಲಿನ ಜನರ ಬಳಿ ಕೇಳಿದಾಗ ಅವರು ಮಧ್ಯ ರಾತ್ರಿ ಆ ಮನೆ ಬೆಂಕಿಯಲ್ಲಿ ಸುಡುವುದನ್ನು ಎಷ್ಟೋ ಮಂದಿ ನೋಡಿರುವುದಾಗಿ ಹೇಳಿದ್ದರು. ಹೀಗೆ ಎಷ್ಟೋ ಅಗೋಚರ ಶಕ್ತಿಗಳು, ವಿಚಿತ್ರ ಘಟನೆಗಳು ನಮ್ಮ ಸುತ್ತ ಮುತ್ತ ಎಷ್ಟೋ ಜಾಗಗಳಲ್ಲಿ ನಡೆಯುತ್ತವೆ. ಕಣ್ಣಿಗೆ ಕಾಣದ ಎಷ್ಟೋ ಅದೃಶ್ಯ ಶಕ್ತಿಗಳು ನಮ್ಮ ಅಶುಪಾಸಿನಲ್ಲೇ ತಮ್ಮ ಪಾಡಿಗೆ ತಾವಿರುತ್ತವೆ, ಇನ್ನು ಕೆಲವು ನಮಗೆ ತೊಂದರೆ ನೀಡುತ್ತವೆ.