STORYMIRROR

Rashmi R Kotian

Drama Romance

4  

Rashmi R Kotian

Drama Romance

ನಾನು ನಿಮ್ಮನ್ನ ಪ್ರೀತಿಸುತ್ತೇನೆ.......😦!!

ನಾನು ನಿಮ್ಮನ್ನ ಪ್ರೀತಿಸುತ್ತೇನೆ.......😦!!

21 mins
4

"ಬೇಡ ಕಣ್ರೆ, ಆ ಜಾಗದಿಂದ ಹೋಗೋದು ಬೇಡ. ಅಲ್ಲಿ ಕಳ್ಳರು, ದರೋಡೆಕೋರರು ಇದ್ದಾರೆ ಅಂತಾ ಜನ ಹೇಳ್ತಾರಂತೆ, ಪ್ಲೀಸ್ ಬೇಡ. ಅಮ್ಮ ಆ ಜಾಗದಿಂದ ಬರ್ಬೇಡ ಅಂತಾ ವಾರ್ನಿಂಗ್ ಮಾಡಿದ್ದಾರೆ. " ಭಯದಿಂದ ನಾನು ಹೇಳಿದ್ದೆ. " ಏನೇ ನೀನು, ಲೈಫನಲ್ಲಿ ಸ್ವಲ್ಪ ಅಡ್ವೆಂಚರ್ ಇರ್ಬೇಕಮ್ಮ, ಆ ಜಾಗದಲ್ಲಿ ಸೀಬೆ, ಮಾವಿನ ಮರ ತುಂಬಾನೇ ಇದೆ ಅಂತೆ. ಪಕ್ಕದ್ ಕ್ಲಾಸ್ ಹುಡುಗೀರು ಬ್ಯಾಗ್ ತುಂಬಾ ತಂದಿದ್ರು ಕಣೇ. ಅವ್ರಿಗೆ ಅಲ್ಲಿ ಯಾವ್ ಕಳ್ಳಾನು ಕಾಣಿಸ್ಲಿಲ್ಲ, ಯಾವ್ ನರಪಿಳ್ಳೆನೂ ಕಾಣಿಸ್ಲಿಲ್ಲಂತೆ. ಅಲ್ಲಿ ಏನೂ ಇಲ್ಲ, ಯಾರೂ ಇಲ್ಲಾ. ನಾವಲ್ಲಿಂದ ಇವತ್ತು ಹೋಗೋಣ. " ಮೈತ್ರಿ ಹೇಳಿದ್ದಳು. "ಏಯ್ ಬೇಡ ಕಣ್ರೆ. ಆ ಜಾಗದಿಂದ ನಮ್ ಪಕ್ಕದ್ ಮನೆ ಆಂಟಿ ಒಂದು ಸಲ ಬಂದಾಗ ಅವರ ಮಾಂಗಲ್ಯ ಕಿತ್ಕೊಂಡು ಬೈಕ್ನಲ್ಲಿ ಕಳ್ಳರು ಓಡಿದ್ರಂತೆ. ಇನ್ನು ಕೆಲವರಿಗೆ ಅಲ್ಲಿ ಚಾಕು ತೋರಿಸಿ ಹೆದರಿಸಿ ಅವರ್ ಒಡವೆನೆಲ್ಲಾ ದೋಚಿದ್ದಾರಂತೆ " ಗಾಯತ್ರಿ ಹೇಳಿದ ಮಾತುಗಳು ಕೇಳಿ ನನ್ನ ಮೈನಡುಕ ಹೆಚ್ಚಾಗಿತ್ತು. "ಹೌದ್ರೆ ಅಲ್ಲಿ ದರೋಡೆಕೋರರ ಗ್ರೂಪ್ ಆ ಪಾಳು ಬಿದ್ದಿರೋ ಮನೆಗಳಲೆಲ್ಲ ಇರುತ್ತಂತೆ, ಸುಮ್ನೆ ಹೋಗಿ ಸಿಕ್ಕಿಹಾಕೊಳ್ಳೋದ್ ಬೇಡ. ಸೀಬೆ ಮಾವು ಅಂಗಡಿಲಿ ತಗೊಂಡು ತಿನ್ನಿ. ಸುಮ್ನೆ ಈ ವಿಷಯಾನ ಇಲ್ಲೇ ಬಿಟ್ಬಿಡಿ. "ಎಂದು ದೀಕ್ಷಾ ಹೇಳಿದ್ದಳು. "ನೀವೆಲ್ಲಾ ಪುಕ್ಕಲರು. ಅಡ್ವೆಂಚರ್ ಇರ್ಬೇಕಮ್ಮ ಲೈಫನಲ್ಲಿ. ಪಕ್ಕದ್ ಕ್ಲಾಸ್ ಹುಡ್ಗಿರು ಹೋಗಿ ಬಂದು ದೊಡ್ಡ ಪೊಗರು ತೋರಿಸ್ತಾ ಇದ್ದಾರೆ. ಅದನ್ನ ಇಳಿಸಬೇಕು." ಮೈತ್ರಿ ಮರು ಮಾತಾಡಿದ್ದಳು. "ಅವರ್ ಹೋದಾಗ ಕಳ್ಳರು ಇರ್ಲಿಲ್ಲ ಅಷ್ಟೇ ವಿಷಯ.ಅದರಲ್ಲೇನಿದೆ ಪೊಗರು. " ಶೀತಲ್ ಹೇಳಿದ್ದಳು. "ಅಲ್ಲಿ ಹೋಗೋ ಧೈರ್ಯ ಮೆಚ್ಚಬೇಕು ಕಣ್ರೆ. ಎಲ್ಲಾ ಹಾಗೆ ಮಾತಾಡ್ಕೊಳ್ತಾ ಇದ್ದಾರೆ " ವಿಶಾಖ ಹೇಳಿದ ಮಾತು ಕೇಳಿ ಇನ್ನು ಆ ಜಾಗಕ್ಕೆ ನನ್ನನ್ನು ಈ ಹುಚ್ಚರು ಎಳೆದುಕೊಂಡು ಹೋಗುವುದು ಖಾತ್ರಿಯಾಗಿತ್ತು. ಮಧ್ಯಾಹ್ನ ಕಾಲೇಜು ಬಿಟ್ಟ ಸಮಯಕ್ಕೆ ಓಡಿ ಹೋಗೋಣ ಎಂದುಕೊಂಡ ನನ್ನನ್ನು ಅಷ್ಟ ದಿಕ್ಕಿನಲ್ಲಿ ಅಷ್ಟ ಸ್ನೇಹಿತೆಯರು ಸೆರೆಹಿಡಿದಿದ್ದರು. ನಾವು ಉಡುಪಿಯ ಪಿ.ಪಿ.ಸಿ ಕಾಲೇಜಿನಲ್ಲಿ ದ್ವೀತಿಯ ವರ್ಷ ಡಿಗ್ರಿ ಕಲಿಯುತ್ತಿದ್ವಿ. ಅಂದು ಶನಿವಾರ.ನಾವೊಂಬತ್ತು ಜನ ಮಣಿಪಾಲಕ್ಕೆ ಹೋಗುವ ಬಸ್ಸು ಹತ್ತಿ ಅಲ್ಲಿಂದ ಆ ಜಾಗ ತಲುಪಿದ್ವಿ. ನನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು.ಅಲ್ಲಿಗೆ ಬರಲು ಮನಸ್ಸಿಲ್ಲದ ನನ್ನ ಇವರು ಎಳೆದುಕೊಂಡು ಹೋಗಿದ್ದರು. ಕಾಡಿನ ದಾರಿಯೊಳಗೆ ಆ ಜಾಗ, ಆ ಜಾಗ ಬಿಟ್ಟು ಸ್ವಲ್ಪ ದೂರದಲ್ಲಿ ಮತ್ತೆ ಕಾಡು. ಅಲ್ಲಿ ಸೀಬೆಮರ, ಮಾವಿನ ಮರ ತುಂಬಾ ಇತ್ತು. ಕಳ್ಳರ ಜಾಗ ಎಂದು ಯಾರೂ ಅಲ್ಲಿಗೆ ಬಾರದ ಕಾರಣ ಆ ಹಣ್ಣುಗಳು ಪ್ರಾಣಿ ಪಕ್ಷಿಗಳ ಪಾಲಾಗಿದ್ದವು. ಅಲ್ಲೇ ಸ್ವಲ್ಪ ದೂರದಲ್ಲಿ ನನ್ನ ಮನೆಯಿತ್ತು. ನಾನು ನನ್ನ ಮನೆಗೆ ಹೋಗಲು ಅದೂ ಕೂಡಾ ಒಂದು ದಾರಿ. ಆದರೆ ಅಮ್ಮ "ಆ ಜಾಗದಿಂದ ಯಾವತ್ತೂ ಬರಬೇಡ ಅಲ್ಲಿ ಕಳ್ಳ ದರೋಡೆಕೋರರ ಹಿಂಡಿದೆ " ಎಂದು ಹೇಳಿದ್ದರು. ನಿರ್ಜನ ಪ್ರದೇಶ ಅತ್ತ ಇತ್ತ ಕಾಡಿನ ಮೂಲೆಗಳಲ್ಲಿ ಪಾಳು ಬಿದ್ದ ಮನೆಗಳು. ಮೆತ್ತ ಮೆತ್ತಗೆ ನೇಸರ ನೆತ್ತಿಯ ಮೇಲಿಂದ ಕೆಳಗಿಳಿಯುತ್ತಿದ್ದ. ನಾವೆಂಟು ಜನ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ್ದೆವು. "ತುಂಬಾ ಮಂದಿ ಇದ್ದೀವಮ್ಮ, ಯಾವ್ ದರೋಡೆಕೋರರು ಬರ್ತಾರೋ ನೋಡೇ ಬಿಡೋಣ "ಮೈತ್ರಿ ತೊಡೆ ತಟ್ಟಿದ್ದಳು. "ರೌಡಿಗಳು ಬಂದರೆ ಒಟ್ಟಿಗೇ ಎದುರಿಸೋಣ "ವಿಶಾಖ ಹೇಳಿದ್ದಳು. ಕಾಡು ದಾಟಿ ಪಾಳು ಬಿದ್ದ ಮನೆಗಳು ಬಂದಾಗ ಹೃದಯ ಢವ ಢವ ಹೊಡೆಯಲಾರಂಭಿಸಿತು.ಸ್ನೇಹಿತೆಯರೆಲ್ಲಾ ಜೋರಾಗಿ ಮಾತಾಡಿಕೊಳ್ಳುತ್ತಿದ್ದುದ ಕೇಳಿ ಎಲ್ಲಿ ದರೋಡೆಕೋರರು ಹೊರಗಡೆ ಬರುತ್ತಾರೋ ಎಂದು ಭಯವಾಗುತ್ತಿತ್ತು.ಅಲ್ಲಿ ಇಲ್ಲಿ ಪಾಳು ಬಿದ್ದ ಮನೆಗಳನ್ನು ಬಿಟ್ಟರೆ ಬೇರೆ ಏನೂ ಕಾಣಿಸುತ್ತಿರಲಿಲ್ಲ. ಶೀತಲ್, ವಿಶಾಖ, ಮೈತ್ರಿ, ಗಾಯತ್ರಿ, ದೀಕ್ಷಾ, ನಾನು, ಮಾನಸ, ರಶ್ಮಿ ಮತ್ತು ನಮ್ರತಾ ಒಟ್ಟು ನಾವು ಒಂಬತ್ತು ಮಂದಿ ಇದ್ವಿ. ಸುಮಾರು ದೂರ ನಡೆದಾಗ ಎಲ್ಲೂ ಜನರ ಸುಳಿವು ಕಾಣಿಸಲಿಲ್ಲ. ಎಲ್ಲರೂ ಮಾತಾಡುವುದರಲ್ಲೇ ಬ್ಯುಸಿ ಆಗಿದ್ದರು. ನಾನು ಯಾರೂ ಎದುರಿಗೆ ಬರಲಿಲ್ಲ, ಬಹುಷಃ ಇಲ್ಲಿ ದರೋಡೆಕೋರರಿರುವುದು ಸುಳ್ಳಿರಬಹುದು ಎಂದುಕೊಂಡು ಇನ್ನೇನು ಸ್ವಲ್ಪ ಹೆಜ್ಜೆಗಳಲ್ಲಿ ಈ ಸ್ಥಳವನ್ನು ದಾಟಬಹುದು ಎಂದುಕೊಂಡು ಸ್ವಲ್ಪ ತಂಗಾಳಿಯಲ್ಲಿ ಮೈಮರೆತೆನೇನೋ !!ಆಗಲೇ ಶೀತಲ್ ಜೋರಾಗಿ ಕಿರುಚಿದ್ದಳು. ಅವಳು ಕಿರುಚಿದ್ದೆ ತಡ, ನನ್ನೆಲ್ಲಾ ಸ್ನೇಹಿತೆಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ನಾನು ಕೂಡಾ ಏನು ಎಂದು ನೋಡದೆ ಕಾಲ್ಕಿತ್ತಿದ್ದೆ. ಓಡುತ್ತಾ ಹಿಂದೆ ನೋಡಿದಾಗ ಮುಖಕ್ಕೆ ಕರ್ಚಿಫು ಕಟ್ಟಿಕೊಂಡು ಮೈಯೆಲ್ಲಾ ಧೂಳು ಮೆತ್ತಿಕೊಂಡ ಬಟ್ಟೆಗಳನ್ನು ಹಾಕಿಕೊಂಡು, ಕೈಯಲ್ಲಿ ದೊಡ್ಡ ಚಾಕು ಹಿಡಿದ ನಾಲ್ಕು ಜನ ದರೋಡೆಕೋರರು ನಮ್ಮ ಬೆನ್ನಟ್ಟಿದ್ದರು.ಅವರ ಕೈಯಲ್ಲಿದ್ದ ದೊಡ್ಡ ಚಾಕುಗಳು ಭಯಾನಕವಾಗಿತ್ತು. ನನ್ನೆಂಟು ಸ್ನೇಹಿತೆಯರು ಎಂಟು ದಿಕ್ಕಿಗೆ ಓಡಿದ ನೆನಪು.ಕೆಲವು ಕ್ಷಣಗಳಲ್ಲೇ ಮಾಯವಾಗಿದ್ದರು. ದರೋಡೆಕೋರರು ಬಂದರೆ ಒಟ್ಟಿಗೆ ಎದುರಿಸೋಣ ಎಂದವರು ತಮ್ಮ ತಮ್ಮ ಪ್ರಾಣ ರಕ್ಷಣೆಗಾಗಿ ಹಿಗ್ಗಾಮುಗ್ಗಾ ಓಡಿದ್ದರು. ದೊಡ್ಡ ದೊಡ್ಡ ಸ್ನೇಹದ ಮಾತುಗಳು, ನಿಜವಾದ ಸ್ನೇಹ, ಪ್ರೀತಿ ಎಷ್ಟು ನಿಜ ಎಂದು ಗೊತ್ತಾಗುವುದು ಇಂತಹ ಸನ್ನಿವೇಶಗಳು ಎದುರಾದಾಗ ಮಾತ್ರ ಎಂದು ನನ್ನ ಹಿಂದಿಕ್ಕಿ ಎದುರು ಓಡಿದ ನನ್ನ ಸ್ನೇಹಿತೆಯರನ್ನು ನೋಡಿ ನನಗೆ ಮನದಟ್ಟಾಗಿತ್ತು. ಅವರೇನೋ ಓಡಿ ಬಚಾವಾದರು. ಆದರೆ ದೇಹವನ್ನೆಂದೂ ದಂಡಿಸದ ನಾನು ಓಡಲಾಗದೆಯೋ !!? ಇನ್ನು ಈ ಪರಿ ಓಡಿದರೆ ಕಳ್ಳರ ಕೈಗೆ ಸಿಗುವುದು ಖಚಿತವೆಂದೋ? ಮುಖ್ಯದ್ವಾರವಿರದ ಪಾಳು ಬಿದ್ದ ಮನೆಯೊಂದರ ಒಳಹೊಕ್ಕುವ ಮೂರ್ಖತನವೆಸಗಿದ್ದೆ.ಮನೆಯ ಒಳಹೊಕ್ಕು ಬಾಗಿಲಿದ್ದ ಕೋಣೆಯೊಳಗೆ ಸೇರಿ ಇನ್ನೇನು ಬಾಗಿಲು ಮುಚ್ಚುವೆ ಎಂದು ಬಾಗಿಲು ದೂಡಿದಾಗ ಒಬ್ಬ ದರೋಡೆಕೋರ ಬಾಗಿಲು ಹಿಡಿದಿದ್ದ. ನಾನು ಬಾಗಿಲು ಹಾಕಲೆತ್ನಿಸುತ್ತಾ ವ್ಯರ್ಥ ಪ್ರಯತ್ನ ಮಾಡಿದ್ದೆ.ಪ್ರಯತ್ನ ವಿಫಲವಾಗಿ ದರೋಡೆಕೋರ ನನ್ನ ಕೈ ಹಿಡಿದು ಹೊರಗೆಳೆದಿದ್ದ . ಕೈಹಿಡಿದು ಹೊರಗೆಳೆದ ರಭಸಕ್ಕೆ ಅವನ ಮೈಮೇಲೆ ಎಡವಿದ್ದೆ.ಅವನು ಮೈಗೆ ಮೈಲಿಗೆ ತಾಗಿತೇನೋ ಎಂಬಂತೆ ನನ್ನ ದೂರ ತಳ್ಳಿದ್ದ. ಅವನ ಕೈಯಲ್ಲಿದ್ದ ಚಾಕು ಕಂಡು ನನಗೆ ಆದ ಭಯ ಅಷ್ಟಿಷ್ಟಲ್ಲ. ಎದೆಗೆ ಸಿಡಿಲು ಬಡಿದಂತಾಗಿತ್ತು. ಅವನು ನನ್ನ ಬ್ಯಾಗು ಎಳೆದು ಅವನ ಸ್ನೇಹಿತರೆಡೆಗೆ ಎಸೆದಿದ್ದ ಮತ್ತು ನನ್ನ ಕತ್ತಿನಲ್ಲಿದ್ದ ಬಂಗಾರದ ಚೈನು ಬಿಚ್ಚಲು ಚಾಕು ತೋರಿಸಿ ಹೆದರಿಸುತ್ತಾ ಕುತ್ತಿಗೆಗೆ ಕೈ ಹಾಕಿದ್ದ. ಯಾವತ್ತೂ ಯಾವ ಹುಡುಗನೂ ನನ್ನ ಆ ರೀತಿಯೆಲ್ಲಾ ಮುಟ್ಟಿರಲಿಲ್ಲ. ನನಗೆ ತುಂಬಾ ಭಯವಾಗಿತ್ತು. ಸ್ನೇಹಿತರ ಹುಡುಗಾಟಕ್ಕೆ ನಾನು ಬಲಿಯಾದೆ ಎನ್ನುತ್ತಾ ಸ್ನೇಹಿತರಿಗೆ ಹಿಡಿಶಾಪ ಹಾಕುತ್ತಾ ಅಳುತ್ತಾ ನಡುಗುತ್ತಿದ್ದೆ.ಅವನು ನನ್ನ ಚೈನು ಬಿಚ್ಚಲಾರದೆ ಚಾಕುವಿನಿಂದ ಚೈನು ಕಡಿದು ಅವನ ಜೇಬಿನೊಳಗಿರಿಸಿದ್ದ.ಹಾಗೆ ಕಡಿಯುವಾಗ ನನ್ನ ಕತ್ತಿಗೆ ಸ್ವಲ್ಪ ಗಾಯ ಮಾಡಿದ್ದ.ಅವರನ್ನು ನೋಡುವಾಗ ಅವರ ಮಾತುಗಳನ್ನು ಕೇಳುವಾಗ ಅವರು ಡಿಗ್ರಿ ಕಲಿಯುವಷ್ಟೇ ಪ್ರಾಯದ ಹುಡುಗರೆಂಬಂತೆ ಅನಿಸುತಿತ್ತು. "300 ರೂಪಾಯಿಯಷ್ಟೇ ಕಣೋ ಆಕಾಶ ಈ ಹುಡುಗಿ ಬ್ಯಾಗಲ್ಲಿ."ಒಬ್ಬ ದರೋಡೆಕೋರ ಇವನಿಗೆ ಹಿಂದಿನಿಂದ ಹೇಳಿದ್ದ. ಇವನು ನನ್ನ ಕಿವಿಯೋಲೆ ತೆಗೆಯುವ ಸಲುವಾಗಿ ಕಿವಿಯೋಲೆಯನ್ನು ಗಟ್ಟಿಯಾಗಿ ಎಳೆದಿದ್ದ. ನಾನು ಗಟ್ಟಿಯಾಗಿ ಕಿರುಚಿದ್ದೆ. ಆದರೂ ಕಿವಿಯೋಲೆ ಬಿಚ್ಚಲಾರದಾಗ ನನ್ನ ಕಪಾಳಕ್ಕೆ ಒಂದು ಬಿಗಿದು ಕಿವಿಯೋಲೆಯ ಮೇಲೆ ಸ್ವಲ್ಪ ಜೋರಾಗೇ ಚಾಕುವಿನಿಂದ ಬಡಿದು ಕಿವಿಯೋಲೆ ಬಿಚ್ಚುವಂತೆ ನನಗೆ ಸನ್ನೆ ಮಾಡಿದ್ದ. ಆಗ ಹಿಂದಿಂದ ಅವನ ಇನ್ನೊಬ್ಬ ಸ್ನೇಹಿತ, "ಮೆತ್ತಗೆ ಕೀಳೋ ಆಕಾಶ, ಈ ಹುಡುಗೀನೇ ನಮ್ ಏರಿಯಾಗೆ ಬಂದಿರೋದು ತಾನೇ "ಎಂದಿದ್ದ. ಅವನ ಇನ್ನೊಬ್ಬ ಸ್ನೇಹಿತ ಇನ್ನೊಬ್ಬ ದರೋಡೆಕೋರ "ಓಡಿರೋ ಹುಡ್ಗೀರು ಪೊಲೀಸ್ರನ್ನ ಕರ್ಕೊಂಡ್ ಬರ್ಬೋದು, ಬೇಗ ಕೀಳೋ ಆಕಾಶ "ಎಂದಿದ್ದ. ಅವನು ಮಾತಾಡುತ್ತ ಇದ್ದಂತೆ ಅವನ ಮುಖದ ಮೇಲಿನ ಕರ್ಚೀಫ್ ಕಳಚಿ ಬಿತ್ತು. ನಾನಂದುಕೊಂಡಂತೆ 21ರ ಒಳಗಿನ ಹುಡುಗ. ನಾನು ಅವನ ಮುಖ ನೋಡಿದ್ದು ಅವನ ಗಮನಕ್ಕೆ ಬಿತ್ತು.ಮುಖ ಸಿಂಡರಿಸಿ ನನ್ನನ್ನು ನೋಡುತ್ತಾ ಕಳಚಿಬಿದ್ದ ಕರ್ಚೀಫ್ ಮುಖಕ್ಕೆ ಕಟ್ಟಿಕೊಂಡ. ಆದರೂ ಕೋಪದ ಕಣ್ಣುಗಳಿಂದಲೇ ನನ್ನನ್ನು ಗುರಾಯ್ಸಿ ನೋಡ್ತಿದ್ದ. ಆಕಾಶ ಎಂಬ ಇವನು ನನ್ನ ಕಾಲ್ಗೆಜ್ಜೆ ಕೀಳುತ್ತಿದ್ದ. ಅವನ ಸ್ಪರ್ಶ ವಿಚಿತ್ರವೆನಿಸುತ್ತಿತ್ತು. ಒಂದು ಗೆಜ್ಜೆ ಕಿತ್ತು ಇನ್ನೊಂದನ್ನು ತೆಗೆಯಲಾಗದೆ ಮತ್ತೆ ಚಾಕುವಿನಿಂದ ಕಡಿದಿದ್ದ. ನನ್ನನ್ನು ದುರುಗುಟ್ಟಿ ನೋಡಿದ್ದ. ನಾನು ನನ್ನ ಕಿವಿಯೋಲೆ ಬಿಚ್ಚಿ ಅವನೆಡೆ ನೂಕಿ ಅಳುತ್ತಾ ಬೇಡಿದ್ದೆ. "ದಯವಿಟ್ಟು ನನ್ನ ಬಿಟ್ಬಿಡಿ, ಎಲ್ಲಾ ಕೊಟ್ಟೆ.ದಯವಿಟ್ಟು ಬಿಟ್ಬಿಡಿ " ನನ್ನ ಮೈನಡುಕ ಹೆಚ್ಚಾಗಿತ್ತು. ಬಿಟ್ಟುಬಿಡುತ್ತಾರೋ ಏನು ಮಾಡುತ್ತಾರೋ, ಆ ಭಯಾನಕ ಸನ್ನಿವೇಶ ಹೇಗಿತ್ತು ಎಂಬುದು ಅನುಭವಿಸಿದವರಿಗಷ್ಟೇ ಗೊತ್ತಾಗುವುದು. "ದಯವಿಟ್ಟು ನನ್ನ ಬಿಟ್ಬಿಡಿ.ಎಲ್ಲಾ ಕೊಟ್ಟಿದ್ದೀನಿ" ಕೈಮುಗಿದು ಗಟ್ಟಿಯಾಗಿ ಅಳುತ್ತಾ ಬೇಡಿದ್ದೆ. ಆಗಲೇ ನಾನು ಯಾರ ಮುಖವನ್ನು ನೋಡಿದೆನೋ ಆ ದರೋಡೆಕೋರ "ಸಾಯ್ಸೋ ಅವಳನ್ನ. ನನ್ ಮುಖ ನೋಡಿಬಿಟ್ಲು. ಮುಂಚೆ ಒಮ್ಮೆ ಹಾಗೇ ಆಗಿ ಪೊಲೀಸ್ರ ಕೈಲಿ ಒದೆ ತಿಂದಿದ್ವಿ.ಮರ್ತ್ ಹೋದ್ಯಾ, ಸಾಯ್ಸೋ ಅವಳನ್ನ. " ಎಂದು ಕಿರುಚಿದ್ದ. "ನಮ್ ಬಗ್ಗೆ ಪೊಲೀಸ್ರ ಹತ್ರ ಕಂಪ್ಲೇಂಟ್ ಕೊಡ್ತೀಯಾ !!" ಅಂತಾ ಹೇಳ್ತಾ ಇವನು ನನ್ನ ಜುಟ್ಟು ಹಿಡಿದು ಮೂಲೆಯಲ್ಲಿ ಬಿದ್ದಿದ್ದ ನನ್ನ ಮೇಲೆತ್ತಿದ್ದ. ಇನ್ನೊಂದು ಕೈಯಲ್ಲಿ ಚಾಕು ಮೇಲೆತ್ತಿದ್ದ. ಅವನು ಚಾಕು ಹಿಡಿದುದನ್ನು ನೋಡಿ ನಾನು ಹರಿಯುವಷ್ಟು ದೊಡ್ಡ ಬಾಯಿ ಮಾಡಿ ಜೋರಾಗಿ ಕಿರುಚಿದ್ದೆ. ಪ್ರಪಂಚ ಮೂಕವಾಗಿತ್ತು, ಸಾವಿನ ದವಡೆಗೆ ಸಿಲುಕಿಕೊಂಡಿದ್ದೆ. ಸ್ನೇಹಿತರಿಗೆ ಶಾಪ ಹಾಕುತ್ತಾ ಅಳುತ್ತಾ ನಡುಗುತ್ತಾ ದೇವರನ್ನು ನೆನೆಯುತ್ತ, ಭಯದಲ್ಲಿ ಶಕ್ತಿಹೀನನಾದ ಅನುಭವವಾಗಿತ್ತು.ಅವನು ಚಾಕು ಹಿಡಿದು ಕ್ರೂರ ಕಣ್ಣುಗಳಿಂದ ನನ್ನ ಹೊಟ್ಟೆಗೆ ಚಾಕು ಇರಿಯಲು ಬಂದ. ತಕ್ಷಣ ಬೇಡ ಬೇಡ ಎನ್ನುತ್ತಿದ್ದ ನಾನು ಅವನ ಕಣ್ಣುಗಳನ್ನು ದಿಟ್ಟಿಸಿ ಅದು ಯಾಕಾಗಿ ಅಂದೇನೋ, ತನ್ನ ಪ್ರಾಣ ರಕ್ಷಣೆಗಾಗಿ ಹೇಳಿದ್ದೆ ಆ ಹುಚ್ಚು ಮಾತುಗಳ !ಮರುಳಾಗುವನೆಂದೋ?? ಚಾಕು ಇರಿಯುವುದಕ್ಕಿನ್ನೇನು ಕ್ಷಣಗಳು ಬಾಕಿ ಕಿರುಚಿದ್ದೆ "ನಾನು ನಿಮನ್ನ ಪ್ರೀತಿಸ್ತೀನಿ !!ನನ್ನ ಮದ್ವೆ ಮಾಡ್ಕೋತ್ತೀರಾ?? " !!!!!.............. ಹುಚ್ಚು ಮಾತುಗಳು, ಆ ಮಾತು ಹೇಳಲು ಅದೇನು ಸನ್ನಿವೇಶವಾ? ಯಾಕಾಗಿ ಹಾಗಂದೆ !! ಯಾವತ್ತೂ ಹುಡುಗರಿಂದ ದೂರ ಉಳಿದವಳು. ಅವರತ್ತ ಕಣ್ಣೆತ್ತಿಯೂ ನೋಡದ ನನಗೆ ಮೊದಲ ಬಾರಿ ನನ್ನ ಕೈಹಿಡಿದು ಎಳೆದ ಹುಡುಗನ ಮೇಲೆ ಆಕರ್ಷಣೆಯಾಗಿತ್ತಾ, ಎಡವಿ ಬಿದ್ದ ಕ್ಷಣ, ಅವನ ಮೈಸ್ಪರ್ಶ ನನ್ನ ರೋಮಾಂಚನಗೊಳಿಸಿತ್ತಾ,ಕತ್ತಲಿದ್ದ ಚೈನು ಬಿಚ್ಚಲೆತ್ನಿಸಿದವನು ನನಗೆ ಕಚಗುಳಿ ಮೂಡಿಸಿದನಾ? ಗೆಜ್ಜೆ ಕೀಳುವ ನೆಪದಲ್ಲಿ ನನ್ನ ಕಾಲು ಸ್ಪರ್ಶಿಸಿ ನನ್ನೆದುರಿಗೆ ಬಾಗಿದನಾ!ನಿಜ ಹುಡುಗನ ಸ್ಪರ್ಶದ ಅನುಭವವಿರದ ನನಗೆ ನನ್ನ ಮುಟ್ಟಿದ ಮೊದಲ ಹುಡುಗ ಅವನೇ ಆಗಿದ್ದ. ಅವನ ಸ್ಪರ್ಶವೆಲ್ಲಾ ಅಂತರ್ಮನಕೆ ಆನಂದ ಉಂಟುಮಾಡಿತ್ತೇನೋ. ಒಂದೆರಡು ಕ್ಷಣಗಳಲ್ಲಿ ಅವನ ಮೇಲೆ ನನಗೆ ಪ್ರೀತಿಯಾಯಿತಾ?ನನಗೆ ಹೆದರಿಸಿ,ಗಾಯ ಮಾಡಿ ಪ್ರಾಣ ತೆಗೆಯಲು ನಿಂತಿದ್ದ ಆ ಕ್ರೂರಿಯ ಮೇಲೆ ಎಂಥಾ ಪ್ರೀತಿ. ಅಂದವಾದ ನನ್ನಿಂದ ಪ್ರೇಮ ನಿವೇದನೆಯನ್ನು ಕೇಳಿದರೆ ಆ ಕ್ರೂರಿ ನನಗೆ ಮರುಳಾಗಬಹುದೆಂದು ನನ್ನ ತನ್ನ ರಕ್ಷಿಸು ಎಂದು ಚಡಪಡಿಸಿದ ದೇಹಕ್ಕೆ ಮೆದುಳು ಸಹಾಯ ಮಾಡುವ ಸಲುವಾಗಿ ಈ ಮಾತುಗಳ ನನ್ನ ತುಟಿಯಂಚಿಗೆ ಕಳಿಸಿತ್ತಾ !!ಇಲ್ಲ ಇಲ್ಲ ಹೃದಯ ಯಾವ ಕಾರ್ಯವನ್ನೂ ಎಸಗಲಿಲ್ಲ. ಪ್ರಕೃತಿ ಸಹಜವಾಗಿ ನನ್ನ ದೇಹ ಅವನ ಸ್ಪರ್ಶಕ್ಕೆ ಸ್ಪಂದಿಸಿತ್ತಷ್ಟೇ. ಆದರೂ ಆ ಕಷ್ಟದ ಸನ್ನಿವೇಶದಲ್ಲೂ ಎಂದೂ ಯಾವ ಹುಡುಗನ ಸನಿಹವ ಅನುಭವಿಸದ ನನ್ನ ದೇಹ, ಒಳ ಮನಸ್ಸು ನನಗರಿವಿಲ್ಲದೆಯೇ ಏನೋ ಮುದವನ್ನು ಅನುಭವಿಸಿತ್ತು. ಎಷ್ಟೋ ವರ್ಷಗಳ ದಾಹ, ಎಂದೂ ಹುಡುಗನಿಂದ ದೂರವೇ ಉಳಿದ ನನಗೆ,ಏನೋ ಅರಿಯದ ಅನುಭವವಾಗಿತ್ತು. ಅಥವಾ ಅವನ ರೂಪಕೆ ಮರುಳಾದೆನಾ !ಅದು ಹೇಗೆ ಸಾಧ್ಯ !ನಾನು ನೋಡಿದ್ದು ಅವನ ಕ್ರೂರ ಕಣ್ಣುಗಳ ಮಾತ್ರ. ಇಲ್ಲ ಪ್ರಾಣ ರಕ್ಷಣೆಗಾಗಿ ಹಾಗಂದೆ !!ಅಥವಾ ಈ ಮಾತುಗಳನ್ನು ನನ್ನ ತುಟಿಯಂಚಿಗೆ ತರುವಲ್ಲಿ ಕಾಣದ ಶಕ್ತಿಯ ಸಂಚಿತ್ತಾ !!ಆ ಮಾತುಗಳ ಹಿಂದೆಯೇನೋ ಮರ್ಮವಿತ್ತಾ !!ಇನ್ನು ಅರಿದೋ ಅರಿಯದೆಯೋ ಹೇಳಿದ ಈ ಹುಚ್ಚು ಮಾತುಗಳ ಕೇಳಿ ಬುದ್ಧನ ಮಾತುಗಳಿಂದ ಬದಲಾದ ಅಂಗುಲಿಮಾಲನಂತೆ ಇವನು ಬದಲಾಗುವನೋ ಅಥವಾ ತುಪ್ಪ ಸವಿದ ಕಿಚ್ಚಿನಂತೆ ಉರಿದು ನನ್ನನೇ ಸುಡುವನೋ ಎಂದು ನನ್ನ ಮನಸ್ಸು ಒದ್ದಾಡಲಾರಂಭಿಸಿತ್ತು. ಆದರೆ.... "ನಾನು ನಿಮ್ಮನ್ನ ಪ್ರೀತಿಸ್ತೀನಿ, ನನ್ನ ಮದ್ವೆ ಮಾಡ್ಕೋತೀರಾ...? !!" ಎಂದು ನಾನು ಹೇಳಿದ ಮಾತು ಕೇಳಿ ಮೆಲ್ಲನೆ ಅವನ ಕ್ರೂರ ಕಣ್ಣುಗಳು ನಿಧಾನವಾಗಿ ಶಾಂತ ರೂಪ ತಾಳಿದವು ಆದರೆ ಶಾಂತ ರೂಪದಿಂದ ಮತ್ತೆ ಆ ಕಣ್ಣುಗಳು ತನ್ನ ಆಕಾರವನ್ನು ಮೆತ್ತಗೆ ಹೆಚ್ಚಿಸುತ್ತಾ ಆಶ್ಚರ್ಯ ರೂಪವನ್ನು ತಾಳಿ ನನ್ನ ಕಣ್ಣುಗಳನ್ನು ನೋಡಲಾರಂಭಿಸಿದವು. " ಏಯ್ ಹುಡುಗಿ ನಿಂಗೇನ್ ಮೆಂಟ್ಲಾ? " ನನ್ನ ಸಾಯಿಸಲು ಇವನ ಕಿವಿಯೂದಿದ ದರೋಡೆಕೋರ ನನ್ನ ನೋಡಿ ಆಶ್ಚರ್ಯ, ಕೋಪದಲ್ಲಿ ತುಸು ವ್ಯಂಗ್ಯವಾಗಿ ಹೇಳಿದ. ಅವನ ಅನ್ಯ ಸ್ನೇಹಿತರು ಮುಖ ಮುಖ ನೋಡಿಕೊಂಡು ಒಬ್ಬ "ಯಾವಳೋ ಇವ್ಳು, ಹುಚ್ಚ್ ನನ್ ಮಗ್ಳು ",ಇನ್ನೊಬ್ಬ ನನ್ನನ್ನು ಆಶ್ಚರ್ಯ ಕಣ್ಣುಗಳಿಂದ ದಿಟ್ಟಿಸಿ ನೋಡಿದ್ದ. ಆಕಾಶನೆಂಬ ನನ್ನ ಹಿಡಿದ ದರೋಡೆಕೋರ ವಿಚಿತ್ರವಾಗಿ ಆಶ್ಚರ್ಯದ ಕಣ್ಣುಗಳಿಂದ ನನ್ನನ್ನು ನೋಡುತ್ತಲೇ ಇದ್ದ. "ಏಯ್ !!.." ಎಂದು ನನ್ನ ಸಾಯಿಸಲು ಹೇಳಿದವನು ಕೋಪದಲ್ಲಿ ಮುನ್ನುಗ್ಗಿದ. ಆಗ ಇವನು ಕಣ್ಣ ಸನ್ನೆಯಲ್ಲೇ ಅವನಿಗೆ ಹಿಂದೆ ಸರಿಯುವಂತೆ ಹೇಳಿದ. ಅವನಿಗೆ ತುಂಬಾ ಆಶ್ಚರ್ಯವಾಯಿತು. ನನಗೇನೂ ತೋಚಲಿಲ್ಲ. ಇವನ ಮನಸ್ಸು ಬದಲಾಯಿತಾ ಎನ್ನುವಷ್ಟರಲ್ಲಿ ಇನ್ನೊಂದು ಆಘಾತ ಕಾದಿತ್ತು. ಇವನು ತನ್ನ ಸ್ನೇಹಿತನಿಗೆ ಕಣ್ಣ ಸನ್ನೆಯಲ್ಲಿ ಮತ್ತೆ ಬಾಗಿಲು ಹಾಕುವಂತೆ ಹೇಳಿದ್ದ. ಅವನು ವಿಚಿತ್ರವಾದ ನಗುವನ್ನು ಬೀರುತ್ತಾ ಬಾಗಿಲನ್ನು ದೂಡಿ "ಪ್ರೀತಿಸ್ತೀಯಾ, ಮದ್ವೆ ಆಗ್ಬೇಕಾ? " ಎಂದು ನನ್ನ ನೋಡಿ ಹೇಳಿದ್ದ. ಅನ್ಯ ದರೋಡೆಕೋರರು ಮತ್ತೆ ಪರಸ್ಪರ ಮುಖ ನೋಡಿ ಇವನನ್ನು (ಆಕಾಶ ) ನೋಡಿದರು. ನನಗೆ ಹುಚ್ಚು ಹಿಡಿದಿತ್ತು. ಬೇಕಿತ್ತಾ ಇದೆಲ್ಲಾ.ಈಗ ಇವರು ನನ್ನನ್ನು ಏನು ಮಾಡುತ್ತಾರೋ ಎಂದು ಇನ್ನೂ ಜೋರಾಗಿ ಅಳುತ್ತಾ ಗದ್ಗದಿತ ಸ್ವರದಲ್ಲಿ ಹಿಂದೆ ಹಿಂದೆ ಸರಿಯುತ್ತಾ "ದಯವಿಟ್ಟು ಬಿಟ್ಬಿಡಿ, ನಂಗೇನೂ ಮಾಡ್ಬೇಡಿ, ನಾನ್ ಕಂಪ್ಲೇಂಟ್ ಕೊಡಲ್ಲ " ಹೇಳುತ್ತಲೇ ಇದ್ದೆ. "ಪ್ರೀತಿಸ್ತೀಯಾ, ಮದ್ವೆ ಆಗ್ಬೇಕಾ, ಆಗೋಣ !!" ವಿಚಿತ್ರ ಮುಗುಳುನಗು ಬೀರುತ್ತಾ ಮುನ್ನಡೆದಿದ್ದ ಅವನನ್ನು ಮತ್ತೆ ಇವನು ಕೋಪದ ಕಣ್ಣುಗಳಿಂದ ತಡೆದು ಹಿಂದೆ ಸರಿಯಲು ಕೈಯಲ್ಲಿ ಸನ್ನೆ ಮಾಡಿದ. ಅವನು "ಅಣ್ಣಾ !!😕...!!" ಎನ್ನುತ್ತಾ ತಲೆತಗ್ಗಿಸಿ ಹಿಂದೆ ನಡೆದಿದ್ದ. ಇವನು ಪಕ್ಕದಲ್ಲಿದ್ದ ಬೆಂಚಿನಲ್ಲಿ ಹೋಗಿ ನೆಲ ನೋಡಿಕೊಂಡು ಕುಳಿತುಕೊಂಡ.ಬೇರೆ ದರೋಡೆಕೋರರು ಒಬ್ಬರನೊಬ್ಬರ ಮುಖ ನೋಡಿಕೊಂಡರು. ಬಾಗಿಲು ಹಾಕಲು ಸನ್ನೆ ಮಾಡಿದಾಗ ನನಗೇನು ಮಾಡುತ್ತಾರೋ ಎಂದು ಭಯಪಟ್ಟುಕೊಂಡ ನನಗೆ ಮೂಲೆಯಲ್ಲಿ ಹೋಗಿ ಕುಳಿತ ಅವನ ಉದ್ದೇಶ ಅರ್ಥವಾಗಲಿಲ್ಲ. ಕುಳಿತವನು ಮತ್ತೆ ಮತ್ತೆ ಕಣ್ಣೆತ್ತಿ ನನ್ನನ್ನು ಆಶ್ಚರ್ಯದಿಂದ ನೋಡುತ್ತಿದ್ದ. "ಅಣ್ಣಾ ಸಾಯ್ಸುವ ಇವಳ್ನ !!ಇಲ್ಲಾಂದ್ರೆ ಸಿಕ್ಕಿ ಹಾಕೊಳ್ತೀವಿ ಅಷ್ಟೇ." ಕ್ಷಣ ಕಾಲ ಮೌನ ಬೀರಿದ್ದ ಮತ್ತೊಬ್ಬ ದರೋಡೆಕೋರ ಇವನಿಗೆ ಹೇಳಿದ್ದ. ನನಗೆ ಮತ್ತೆ ನಡುಕ ಶುರುವಾಗಿತ್ತು. ಎದೆ ಒಡೆದುಕೊಂಡು ಸಾಯುವುದೊಂದೇ ಬಾಕಿ. ಏನೇನೋ ಹೇಳುತ್ತಾ ತಿಳಿದ ಅಥವಾ ತಿಳಿಯದ ಭಗವದ್ಗೀತೆಯ ಸಾರವನ್ನು ಏನೇನೋ ಯದ್ವಾ ತದ್ವಾ ನುಡಿದಿದ್ದೆ. "ದಯವಿಟ್ಟು ನಂಗೇನೂ ಮಾಡ್ಬೇಡಿ.ನೀವೆಲ್ಲಾ ಯಾಕ್ ಈ ರೀತಿ ಮಾಡ್ತೀರಾ. ಭಗವದ್ಗೀತೆಯಲ್ಲಿ ಬರೆದಿದೆ, ಪ್ರತಿಯೊಬ್ಬ ವ್ಯಕ್ತಿಯೊಳಗೂ ದೇವರಿರ್ತಾನೆ, ಆತ್ಮ !!ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಪವಿತ್ರ. ಆದ್ರೆ ನಿಮ್ಮಂತವರು ಹೊರಗಿನಿಂದ ಏನೇನೋ ಕೆಟ್ಟ ಕೆಲಸ ಮಾಡಿ ಒಳಗಿರೋ ಆ ಆತ್ಮನಾ ಅಪವಿತ್ರ ಮಾಡ್ತೀರಾ. ನಿಮ್ಮೊಳಗೂ ಮುಗ್ದ ಹೃದಯ ಇದೆ.ಅದನ್ನ ಗುರುತಿಸಿ. ಯಾವುದೇ ವ್ಯಕ್ತಿ ಕೆಟ್ಟವನಲ್ಲ ಸಮಯ ಸಂದರ್ಭ ಅವನನ್ನ ಕೆಟ್ಟವನಾಗಿ ಮಾಡಿಸುತ್ತೆ. ಮನುಷ್ಯ ಮಾಡೋ ತಪ್ಪುಗಳು ಗ್ರಹಗತಿಗಳ ಆಟ ಅಂತಾ ಕೂಡಾ ಶ್ರೀಕೃಷ್ಣ ದೇವ್ರು ಹೇಳಿದ್ದಾರೆ.... " ನಡುಗುತ್ತಾ, ಶಕ್ತಿಹೀನಳಾಗಿ ಹರಿದ ಸ್ವರದೊಂದಿಗೆ ನಾನು ನುಡಿಯುತ್ತಿದ್ದಾಗ ಕೈಯಲ್ಲಿ ಯಾವುದೋ ಕಡ್ಡಿ ಮುರಿಯುತ್ತಾ ತೀಕ್ಷ್ಣ ಕಣ್ಣುಗಳಿಂದ ನನ್ನನ್ನು ನೋಡಲಾರಂಭಿಸಿದ. "ನೀವು ಕೆಲಸ ಮಾಡಿ ಸಂಪಾದಿಸಿ. ಜೀವನ ಮಧುರವಾಗಿರುತ್ತೆ.ಪ್ರೀತಿಸಿ. ದ್ವೇಷಿಸಬೇಡಿ.ಪ್ರೀತಿಗೆ ಜಗತ್ತನ್ನೇ ಗೆಲ್ಲೊ ಸಾಮರ್ಥ್ಯ ಇದೆ... " ಇನ್ನು ನಾನೊಬ್ಬಳು ಶೇಕ್ಸಪೀಯರ್, ಪ್ರೀತಿ ಪದದ ಬಗ್ಗೆ ಕವಿತೆ, ಲೇಖನ ಬರಿಯೊಳು,ಅದರ ಬಗ್ಗೆ ಪುರಾಣ ಬಿಗಿದಿದ್ದೆ. ನನ್ನನ್ನು ನಾನು ರಕ್ಷಿಸಿಕೊಳ್ಳುವ ಸಲುವಾಗಿ ಏನೇನೋ ಹೇಳಿದ್ದೆ. ಅವನು ಕೇಳುತ್ತಾ ತನ್ನ ಎರಡೂ ಕೈಗಳನ್ನು ಕೆನ್ನೆಯ ಮೇಲೆ ಒತ್ತಿಕೊಂಡು ಮತ್ತೆ ತೀಕ್ಷ್ಣ ಕಣ್ಣುಗಳಿಂದ ನನ್ನನ್ನು ನೋಡತೊಡಗಿದೆ. ಅವನು ನನ್ನ ಮಾತುಗಳನ್ನು ಆಲಿಸುತ್ತಿದ್ದ. ಅವನ ಗೆಳೆಯರಿಗೆ ವಿಚಿತ್ರವೆನಿಸುತ್ತಿತ್ತು. ಕೋಪದಲ್ಲಿ ನಿರಂತರ ಒಬ್ಬರನೊಬ್ಬರ ಮುಖ ನೋಡುತ್ತಿದ್ದರು.ನನ್ನ ಮಾತು ಆಲಿಸುತ್ತಿದ್ದ ಇವನ ತೀಕ್ಷ್ಣ ಕಣ್ಣುಗಳು ಮೆತ್ತಗೆ ಮುಗುಳುನಗು ಬೀರಲು ಶುರು ಮಾಡಿತು. ನನಗೆ ವಿಚಿತ್ರವೆನಿಸಿತು. ಅವನು ನನ್ನನ್ನು ನಿರಂತರವಾಗಿ ನೋಡುತ್ತಾ ಕಳೆದುಹೋದ. ಯಾವತ್ತೂ ನನಗಾಗಿ ಯಾವ ಹುಡುಗನ ಕಣ್ಣಲ್ಲಿಯೂ ಅಂತ ಭಾವನೆ ನೋಡಿರಲಿಲ್ಲ. ಅವನ ಆ ಸುಂದರ ಕಣ್ಣುಗಳಲ್ಲಿ ನನಗಾಗಿ ಪ್ರೀತಿಯ ಭಾವನೆ ಕಾಣಿಸತೊಡಗಿತು. ಆ ಮುದ್ದು ಕಣ್ಣುಗಳ ಸೌಂದರ್ಯಕ್ಕೆ ನನ್ನ ಹೃದಯವೂ ಸದ್ದು ಮಾಡತೊಡಗಿತು. ಅವನ ಸ್ನೇಹಿತರು ಕೂಡಾ ಮೌನದಿಂದ ನನ್ನ ಮಾತುಗಳನ್ನು ಆಲಿಸಿದರು. ನಾನು ಅವರಿಗೆ ಬುದ್ಧಿ ಹೇಳುತ್ತಿದ್ದೆ. ಅವರ ಬದಲಾದ ವರ್ತನೆ ನೋಡಿ ಕ್ರೂರಿಗಳಲ್ಲ ಎಂದು ಅನಿಸುತ್ತಿತ್ತು. ಇದೇನು ನಿಜ ಕಥೆನಾ, ಸಿನೆಮಾನ. ನನ್ನ ಮಾತುಗಳಿಗೆ ಇವರ ಮನಃಪರಿವರ್ತನೆಯಾಗುತ್ತಾ? ಇವರಿಗೆ ಹೇಳುವುದೂ ಒಂದೇ ಹುಲಿಗೆ ಹುಲ್ಲು ತಿನಿಸಲೆತ್ನಿಸುವುದೂ ಒಂದೇ ಎನ್ನುತ್ತಾ ಪಕ್ಕದಲ್ಲೇ ಬಿದ್ದಿದ್ದ ನನ್ನ ಚಿಕ್ಕ ನೋಕಿಯಾ ಫೋನ್ ಮುಖಾಂತರ ಪೊಲೀಸರಿಗೆ ಫೋನ್ ಮಾಡೋಣ ಎಂದುಕೊಂಡೆ. ಆದರೆ ಅವರ ಕಣ್ಣು ತಪ್ಪಿಸಿ ಕಾಲ್ ಮಾಡುವುದು ಬಹಳ ಕಠಿಣವಾಗಿತ್ತು. ಕಾಲ್ ಮಾಡುವುದನ್ನು ನೋಡಿದರೆ ಎಲ್ಲಿ ಮತ್ತೆ ಹೊಟ್ಟೆಗೆ ಚಾಕು ಇರಿಯುತ್ತಾರೋ ಎಂಬ ಭಯ. ಇವರು ಕೆಟ್ಟವರೋ, ಒಳ್ಳೆಯವರೋ, ನನಗೇನು ಮಾಡುತ್ತಾರೋ ಅಥವಾ ಮಾಡುವುದಿಲ್ಲವೋ ಅರ್ಥವೇ ಆಗಲಿಲ್ಲ. ಭಯ ಮಾತ್ರ ಇಡೀ ಶರೀರವನ್ನು ಅಲ್ಲೋಲ ಕಲ್ಲೋಲಗೊಳಿಸಿತ್ತು. ಅಂತಾ ಸನ್ನಿವೇಶದಲ್ಲೂ ಪ್ರಾಣ ತೆಗೆಯಲು ಬಂದ ಆ ಕಿಡಿಗೇಡಿಯ ಮೇಲೆ ನನಗೆ ಮೋಹ ಹೇಗಾಯಿತು ಎಂದರ್ಥವೇ ಆಗಲಿಲ್ಲ. ಅವರೇನು ನಿಜವಾಗಲೂ ದರೋಡೆಕೋರರಾ ಮೌನವಾಗಿದ್ದಾರೆ?? ಏನಾಗ್ತಿದೆ ಇಲ್ಲಿ !!ಅಂತೆಲ್ಲಾ ಮನಸೊಳಗೆ ತಳಮಳವಾಗುತ್ತಿದ್ದಾಗ ಬಾಗಿಲು ರಭಸವಾಗಿ ಒಳತಳ್ಳಿ ಪೊಲೀಸರು ಬಂದಿದ್ದರು.ಪೋಲೀಸರ ಹಿಂದೆ ನನ್ನ ತಂದೆ, ತಾಯಿ, ಮಾಮ ಮತ್ತು ನನ್ನ 8 ಮಂದಿ ಸ್ನೇಹಿತೆಯರು, ಒಬ್ಬಳ ತಾಯಿ, ಇನ್ನೊಬ್ಬಳ ಅಣ್ಣ ಬಂದಿದ್ದರು. ಪೊಲೀಸರು ಬಂದಾಗ ಅವನ ಸ್ನೇಹಿತರು ಒಡಲೆತ್ನಿಸಿದರು ಆದರೆ ಇವನು ಮಾತ್ರ ನೀರು ತುಂಬಿದ ಹಸನ್ಮುಖಿ ಕಣ್ಣುಗಳಿಂದ ನನ್ನನ್ನು ನೋಡುತ್ತಲೇ ಇದ್ದ. ಅವನು ಈ ಲೋಕದಲ್ಲೇ ಇರಲಿಲ್ಲ. ಒಡಲೆತ್ನಿಸಿದ ಅವನ ಸ್ನೇಹಿತರನ್ನು ಮಣಿಪಾಲ ಪೊಲೀಸರು ಹಿಡಿದರು. ಇವನನ್ನು ಇನ್ಸ್ಪೆಕ್ಟರ್ ಹಿಡಿದು ಜೋರಾಗಿ ಬಡಿದರು. ನನ್ನ ಕಪಾಳಕೆ ಬಾರಿಸಿದವನಿಗೆ ಹೊಡೆದಾಗ ಆನಂದಪಡಬೇಕಿದ್ದ ನನಗೆ ಒಳಗೊಳಗೆ ಅರಿಯಲಾಗದ ಹಿಂಸೆಯಾಯಿತು. ನನ್ನ ತಂದೆ ತಾಯಿ ಸ್ನೇಹಿತರು ನನ್ನನ್ನು ಬಿಗಿದಪ್ಪಿ ಹಿಡಿದು ನನ್ನಮ್ಮ ಅಪ್ಪ ನನ್ನ ಕತ್ತಲಿದ್ದ ಗಾಯ, ಕಪಾಳದಲ್ಲಿದ್ದ ಕೈಗುರುತು, ಎಡ ಪಾದದಲ್ಲಿ ಹರಿಯುತ್ತಿದ್ದ ರಕ್ತ ಕಂಡು ತುಂಬಾ ಗಾಬರಿಗೊಂಡರು. ನನ್ನಪ್ಪ, ಮಾಮ, ನನ್ನ ಸ್ನೇಹಿತೆಯ ಅಣ್ಣ ಅವನಿಗೂ ಅವನ ಸ್ನೇಹಿತರಿಗೂ ಇನ್ನಷ್ಟು ಚಚ್ಚಿದರು. ಆದರೆ ಅವನು ನನ್ನನ್ನು ನೋಡುತ್ತಲೇ ಇದ್ದ. ಅವನು ನನ್ನನ್ನು ನೋಡುತ್ತಾ ಕಳೆದುಹೋದ ಆ ಲೋಕದಿಂದ ವಾಪಾಸೆ ಆಗಿರಲಿಲ್ಲ. ಅವನ ಕಣ್ಣುಗಳಲ್ಲಿ ನೀರೂ ಕಾಣುತಿತ್ತು ಏನೋ ಒಂದು ಆನಂದವೂ ಕಾಣುತಿತ್ತು. ನನಗೆ ಮತ್ತೆ ಮತ್ತೆ ಇದು ನಿಜ ಜೀವನವಾ ಅಥವಾ ಸಿನಿಮಾವಾ ಅಂತನಿಸುತ್ತಲೇ ಇತ್ತು. ಅವನ ಮುಖದ ಕರ್ಚೀಫು ಕಳಚಿ ಎಸೆದು ಚೆನ್ನಾಗಿ ಚಚ್ಚಿದರು.ನೋಡಲು ತುಸು ಕೆಂಪು ಮಿಶ್ರಿತ ಗೋಧಿ ವರ್ಣದವನಾಗಿದ್ದ. ಬಹಳ ಅಂದವಾಗಿದ್ದ. ಅವನಿಗೆ ಪೊಲೀಸರೂ, ನನ್ನ ಮನೆಯವರು ಹೊಡೆಯುತ್ತಿದ್ದರೂ ನನ್ನನ್ನೇ ನೋಡುತ್ತಿದ್ದ. ನನಗೆ ಒಳಗೊಳಗೆ ಬಹಳ ನೋವಾಗುತ್ತಿತ್ತು. ಯಾಕೆಂದು ಅರ್ಥವಾಗಲಿಲ್ಲ. ಅವನು ಕಣ್ಣಿನಲ್ಲಿ ನನಗೇನೋ ಹೇಳುತ್ತಿದ್ದ. "ನಡಿ ಬ್ಯಾವರ್ಸಿಗಳ ಜೈಲಲ್ಲಿ ಇದೆ ನಿಮಗೆ" ಎಂದು ಎಳೆದುಕೊಂಡು ಹೋಗುವಾಗ ತುಂಬಿದ ಕಣ್ಣುಗಳಿಂದಲೇ ಮೆತ್ತಗೆ ಮುಗುಳುನಕ್ಕ.ಆ ಮುಗುಳುನಗು ನೋಡಿದ ಕ್ಷಣಕ್ಕೆ ನನ್ನ ಹೃದಯ ತನ್ನ ಬಡಿತವನ್ನು ಜೋರು ಮಾಡಿತ್ತು. ಅವನ ದಪ್ಪ ಹುಬ್ಬುಗಳು ಕಡುಕಪ್ಪಗೆ ಮುಖದಲ್ಲಿ ಎದ್ದು ಕಾಣುತ್ತಿತ್ತು. ತುಟಿ ಕಡು ಗುಲಾಬಿ ಬಣ್ಣದ ಬಿಲ್ಲಿನ ಆಕೃತಿಯಾಗಿತ್ತು. ಬಹಳ ಸುಂದರವಾಗಿದ್ದ. ಅಥವಾ ಹುಡುಗರನ್ನೆಂದೂ ನೋಡದ ನನಗೆ ಹಾಗನಿಸಿತ್ತೋ ಗೊತ್ತಿಲ್ಲ. "ನಗ್ತೀಯಾ, ಇರು ಮಗನೇ ನಿಂಗಿದೆ ಇವತ್ತು ಮಾರಿ ಹಬ್ಬ.ಬಾ ಜೈಲಿಗೆ "ಪೊಲೀಸರು ಅವನನ್ನು ಎಳೆದುಕೊಂಡು ಹೋದರು. ಅವನು ಹಿಂದಿರುಗಿ ನನ್ನನ್ನೇ ನಿರಂತರವಾಗಿ ನೋಡುತ್ತಿದ್ದ. ನನ್ಹುಚ್ಚು ಸ್ನೇಹಿತೆಯರೂ ಅವನನ್ನು ದುರುಗುಟ್ಟಿ ನೋಡುತ್ತಿದ್ದರು. " ಇಲ್ಲಿಗೆ ಬರ್ಲಿಕ್ಕೆ ಯಾರ್ ಹೇಳಿದ್ದು ಚಿನ್ನು. ನಂಗೆಷ್ಟು ಭಯ ಆಗಿತ್ತು ಗೊತ್ತಾ ಪುಟ್ಟ. " ಅಮ್ಮ ಅಳುತ್ತಾ ಹೇಳಿದ್ದರು. "ಎಷ್ಟ್ ಹೆದರಿಕೆ ಆಗಿತ್ತು ಗೊತ್ತಾ ನಮಗೆ, ಇನ್ನು ಮುಂದೆ ಯಾವತ್ತಾದರೂ ಮನೆಯವರಿಗೆ ಹೇಳದೆ ಯಾವಿದ್ಯಾವ್ದೋ ಜಾಗಕ್ಕೆಲ್ಲ ಹೋದ್ರೆ ನೋಡು " ಕಣ್ಣೀರಿಡುತ್ತಲೇ ಅಪ್ಪ ಬೈದಿದ್ದರು. ಮನೆಗೆ ಹೋಗಿ ನನಗೆ ಔಷದಿಯೆಲ್ಲ ಹಚ್ಚಿ, ದ್ರಿಷ್ಟಿ ತೆಗೆದು, ಜಾತಕ ತೋರಿಸುವ ವಿಚಾರ ಎಲ್ಲಾ ಪ್ರಸ್ತಾಪವಾಗಿತ್ತು. ತುಳುನಾಡಲ್ಲಿ ಏನೇ ಶೀತ, ಜ್ವರ ಗಂಡಾಂತರ ಬಂದರು ಮೊದಲು ಹೋಗಿ ತೋರಿಸುವುದು ಜಾತಕವನ್ನು ಜ್ಯೋತಿಷಿಗಳಿಗೆ. ಯಾಕೆ ಹೀಗಾಯಿತು. ಯಾವ ದಶೆ, ಏನು ಶಾಂತಿ. ನನ್ನಮ್ಮ ಬಂದು ನನ್ನ ತಬ್ಬಿ ಹಿಡಿದು "ಏನೂ ಮಾಡಲಿಲ್ಲ ಅಲ್ಲಾ ಪುಟ್ಟ ಆ ಹುಡುಗ್ರು." ಅಳುತ್ತಾ ಹೇಳಿದ್ದರು. ನನಗೆ ಆ ಮಾತಿನ ಮರ್ಮ ಅರ್ಥವಾಗಿತ್ತು. "ಊರಿನವರಿಗೆ ಗೊತ್ತಾಗದೆ ಇದ್ರೆ ಸಾಕು "ಮಾಮ ಹೇಳಿದ್ದರು. ರೌಡಿಗಳ ಕೈಗೆ ಸಿಕ್ಕಿಹಾಕಿಕೊಂಡಳು, ಅವರು ಏನಾದರೂ ಮಾಡಿರಬಹುದು ಎಂದು ಊರಿಡೀ ಹಬ್ಬಿದರೆ ಮನೆಯ ಮರಿಯಾದಿ ಹೋಗುತ್ತದೆ ಎಂದು ಅಪ್ಪ ಅಮ್ಮನಿಗೆ ಚಿಂತೆಯಾಗಿತ್ತು. ನನ್ನನ್ನು ಬಹಳ ಮುದ್ದು ಮಾಡಿ ಸಾಕಿದ್ದರು. ಅಪ್ಪ ಪಾದದ ಮೇಲಿನ ಗಾಯಕ್ಕೆ ಮದ್ದು ಹಾಕುತ್ತಿದ್ದರು. ಬ್ಯಾಂಡೇಜ್ ಹಾಕಿ ಕೋಣೆಯೊಳಗೆ ಹೋಗಿ ತಂಗಿಯ ಜೊತೆ ಮಲಗಿದ್ದೆ. ಆದರೆ ಅವನ ಮುಖವೇ ಕಣ್ಣೆದುರು ಬರುತ್ತಿತ್ತು . ಅವನು ನನ್ನ ಸ್ಪರ್ಶಿಸಿದ ಕ್ಷಣಗಳು,ನನ್ನ ನೋಡಿ ಕಳೆದುಹೋದ ಪರಿ,ಕಣ್ತುಂಬಿ ನನ್ನತ್ತ ದೃಷ್ಟಿ ಹರಿಸಿ ಮುಗುಳುನಕ್ಕ ಕ್ಷಣಗಳು ನನ್ನ ಕಣ್ಣ ಮುಂದೆ ಬಂದು ಅವನ ಆ ಸುಂದರ ರೂಪ ಮೈಯೆಲ್ಲಾ ರೋಮಾಂಚನಗೊಳಿಸುತ್ತಾ ಇತ್ತು. ನನಗವನ ಮೇಲೆ ಪ್ರೀತಿಯಾ? ಒಬ್ಬ ದರೋಡೆಕೋರನ ಮೇಲೆ !!ಛೆಛೆ !!ಎಂದು ಕಣ್ಮುಚ್ಚಿ ಮಲಗಲೆತ್ನಿಸಿದೆ. ಆದಾರೂ ಅವನ ಮುಖ ಪದೇ ಪದೇ ಎದುರು ಬರುತ್ತಿತ್ತು. 2 ದಿನ ರಜೆ ಹಾಕಿ ಕಾಲೇಜಿಗೆ ಹೋದೆ. ಸ್ನೇಹಿತೆಯರಿಗೆಲ್ಲಾ ನನಗೆ ಹೇಗೆ ಮುಖ ತೋರಿಸಬೇಕು ಎಂಬಂತಾಗಿತ್ತೇನೋ. ದೂರದಲ್ಲೇ ನಿಂತಿದ್ದರು. ಕಷ್ಟದಲ್ಲಿ ನನ್ನೊಬ್ಬಳನ್ನೇ ಬಿಟ್ಟು ದೂರ ಓಡಿದವರು.ಅದೂ ಆ ಕಷ್ಟದ ಸನ್ನಿವೇಶಕ್ಕೆ ನನ್ನ ಬಲವಂತವಾಗಿ ಎಳೆದವರು. ಆದರೂ ನನಗ್ಯಾಕೋ ಅವರ ಮೇಲೆ ಕೋಪ ಬರಲಿಲ್ಲ. ಫ್ರೀ ಟೈಂನಲ್ಲಿ ಎಲ್ಲಾ ಬಂದು ನನ್ನ ಬಳಿ ಸಾರೀ ಕೇಳಿದರು. ನಾನು ಪರವಾಗಿಲ್ಲ ಎಂದು ಮೆಲುದನಿಯಲ್ಲಿ ಹೇಳಿದ್ದೆ. ಇನ್ನೊಂದು ದಿನ ಬಿಟ್ಟು ನಾವು ಎಂದಿನಂತೆ ಜಾಲಿಯಾಗಿದ್ವಿ. ಎಲ್ಲಾ ನನ್ನ ಬಳಿ ಆವತ್ತು ಏನಾಯ್ತು ಎಂದು ಕೇಳಿದರು. ನಾನು ನಡೆದ ಘಟನೆಯನ್ನು ಮೆತ್ತಗೆ ವಿವರಿಸಿದ್ದೆ.ಅವರಿಗೆಲ್ಲಾ ಅಚ್ಚರಿಯಾಗಿತ್ತು. "ಅವ್ನಿಗೆ ನಿನ್ ಮೇಲೆ ಲವ್ ಆಗಿದ್ದ ಮಾರ್ರೆ !!ನಿಜ್ವಾಗ್ಲೂ !!" ರಶ್ಮಿ ಹೇಳಿದ್ದಳು. "ಲೇ ನೀನ್ ಯಾವ್ ಹುಚ್ಚಿನೇ !!ಅಂತಾ ಡೇಂಜರಸ್ ಸಿಚುವೇಶನ್ನಲ್ಲಿ ಅವ್ನಿಗ್ ಪ್ರೊಪೋಸ್ ಮಾಡಿದ್ಯಾ !!" ಮೈತ್ರಿ ಹೇಳಿದ್ದಳು. "ಪ್ರೊಪೋಸ್ ಮಾಡಿದ್ದಕ್ಕೆ ಪ್ರಾಣ ಉಳಿತಮ್ಮ !!ಏನೇ ಇದು ಫಿಲಂ ಸ್ಟೋರಿ ಥರ ಇದೆ !!ನಿಜಾನಾ !! ನಿಜ್ವಾಗ್ಲೂ ಹೀಗೆಲ್ಲಾ ಆಯ್ತಾ !!" ನಮ್ರತಾ ಎದೆ ಹಿಡಿದುಕೊಂಡು ಹೇಳಿದ್ದಳು. "ಏನೇ ಅವ್ನು ನಿನ್ ಪ್ರೊಪೋಸಲ್ಗೆ, ನಿನ್ನ ಭಗವದ್ಗೀತೆ ಡೈಲಾಗ್ಗಳಿಗೆ ಬಗ್ಗಿದ್ನಾ !!ಚಿನ್ನೂ ನೀನ್ ಸುಮ್ನೆ ಏನೇನೋ ಕಥೆ ಹೇಳ್ತಿದ್ಯಾ!!" ವಿಶಾಖ ಹೇಳಿದ್ದಳು. "ಇಲ್ಲ ನಿಜಾನೆ ಹೇಳ್ತಾ ಇದ್ದೀನಿ. ಅವನು ಹೊಟ್ಟೆಗ್ ಚೂರಿ ಇರಿಯಕ್ ಬಂದಾಗ ಏನ್ ಮಾಡಬೇಕು ಅಂತಾ ಗೊತ್ತಾಗ್ಲಿಲ್ಲ, ಆ ಸಿಚುವೇಷನ್ ನಿಮ್ಮಿಂದ ಇಮ್ಯಾಜಿನ್ ಮಾಡಕ್ಕೂ ಸಾಧ್ಯ ಇಲ್ಲ. ಇನ್ನು ಸಾಯುವುದು ಖಂಡಿತ ಅನ್ಸಿತ್ತು. ಆ ಕ್ಷಣ ನನ್ನ ನಾನು ರಕ್ಷಿಸ್ಕೊಳ್ಳಿಕ್ಕೆ ಹಾಗ್ ಹೇಳ್ದೆ ಅವ್ನಿಗೆ !!ಆದ್ರೆ ಅವನ್ ಹಾಗೆಲ್ಲ ಬಿಟ್ ಬಿಡ್ತಾನೆ ಅಂತಾ ಅಂದ್ಕೊಂಡಿರ್ಲಿಲ್ಲ. " ನಾನು ಹೇಳಿದ್ದೆ. "ಅಯ್ಯೋ ಇದೆಲ್ಲಾ ಏನು !!ರಿಯಲ್ ಲೈಫನಲ್ಲಿ ಹೀಗೆಲ್ಲಾ ಆಗಬೋದಾ !! ಏನೇ ಇರ್ಲಿ ನಿಜ್ವಾಗ್ಲೂ ನೀನು ಧೈರ್ಯವಂತೆ ಅಂತಾ ನಿರೂಪಿಸ್ಬಿಟ್ಟೆ ಚಿನ್ನು...... ನೀನ್ ಅನುಭವಿಸಿದ್ದನ್ನ ನನ್ ಕೈಲಿ ಇಮ್ಯಾಜಿನ್ ಮಾಡಕ್ಕಾಗ್ತಿಲ್ಲ. ಸಾರೀ ಕಣೇ ನಾವ್ ನಿನ್ನನ್ನ ಹಿಂದೆ ಬಿಟ್ಟು ಓಡಿದ್ವಿ. ಅವರ್ ಕೈಲಿದ್ ಚಾಕು ನೋಡಿ ನಂಗೇಶ್ಟ್ ಭಯ ಆಗಿತ್ತು ಅಂತದ್ರಲ್ಲಿ ಅದನ್ನ ನಿಂಗೆ ಅಬ್ಬಬ್ಬಾ ಹೇಗಾಗಿರಬೇಡ !ಪಾಪಿಗಳು ಜೈಲಲ್ಲಿದ್ದಾವೆ., ಪೊಲೀಸ್ರು ಚೆನ್ನಾಗಿ ಒದೀಲಿ ಅವಗಳ್ಗೆ "ಶೀತಲ್ ಹೇಳಿದ್ದಳು. "ಬಟ್ ಅವನಿಗ್ ಇವ್ಳ್ ಮೇಲೆ ನಿಜ್ವಾಗ್ಲೂ ಲೋವ್ವಾಯ್ತಾ !!ಹಾಗಾದ್ರೆ ಜೈಲಿಂದ ಬಂದ್ ಮೇಲೆ ಹುಷಾರಾಗಿರು ಚಿನ್ನು !!ನಿನ್ನ ಹಿಂದೆ ಬಂದ್ರೆ ಮತ್ತೆ ಅವ್ನು !!" ವಿಶಾಖ ಮತ್ತೆ ಹೇಳಿದ್ದಳು. "ನೋಡಕ್ ಸುಮಾರಾಗಿದ್ದ, " ಮೈತ್ರಿ ಹೇಳಿದ್ದಾಗ ನನಗೆ ಕಸಿವಿಸಿ ಎನ್ನಿಸಿತ್ತು. ಅಷ್ಟು ಅಂದವಾಗಿರುವವನಿಗೆ ಸುಮಾರು ಅಂದಳಲ್ಲ ಎನಿಸಿತ್ತು. ಮತ್ತೆ ಯಾಕೆ ಈ ರೀತಿ ಆ ರೌಡಿಯ ಬಗ್ಗೆ ಯೋಚಿಸುತ್ತಿದ್ದೀನಿ ಅನ್ನಿಸತೊಡಗಿತ್ತು.ಮತ್ತೆ ನಾವು ಎಂದಿನಂತೆ ಆ ಘಟನೆ ಮರೆತು ಇರತೊಡಗಿದ್ವಿ ಈ ಘಟನೆ ನನ್ನ ಮನಸೊಳಗೆ ಅಚ್ಚಳಿಯದೆ ನಿಂತಿತ್ತು. ಅವನ ಮುಖ ಸ್ಮ್ರಿತಿ ಪುಟದಿಂದ ಅಳಿಸಲಾಗುತ್ತಿರಲಿಲ್ಲ. ಆ ಸನ್ನಿವೇಶ ನೆನೆಸಿಕೊಂಡಾಗ ಭಯ ಆದರೂ ಅವನು ವರ್ತಿಸಿದ ರೀತಿ ನೋಡಿದಾಗ ಏನೋ ಖುಷಿಯಾಗುತ್ತಿತ್ತು. ನನ್ನ ಭಾವನೆಗಳು ನನಗರ್ಥವಾಗಲಿಲ್ಲ. ನನಗೆ ನನ್ನ ಪ್ರೀತಿಸುವ ಹುಡುಗ ಹಾಗಿರಬೇಕು ಹೀಗಿರಬೇಕು ಎಂದೆಲ್ಲಾ ಕನಸುಗಳಿತ್ತು. ಅವನು ಬರುವವರೆಗೂ ಯಾರಿಗೂ ನಾನು ಆಕರ್ಷಿತಳಾಗಬಾರದೆಂದು ಹುಡುಗರಿಂದ ದೂರ ಉಳಿದಿದ್ದೆ, ಅವರನ್ನು ನೋಡುತ್ತಿರಲಿಲ್ಲ ಕೂಡಾ. ಪ್ರೀತಿ, ಆಕರ್ಷಣೆಯ ಅನುಭವಕ್ಕಾಗಿ ಹೃದಯ ನೀರಿಗಾಗಿ ಹಾತರಿಸುವ ಜೀವದಂತೆ ಒಳಗೊಳಗೇ ಚಡಪಡಿಸುತ್ತಿತ್ತು. ಈ ಪ್ರೇಮ ತೃಷೆಯ ಮೇಲೆ ಬಿದ್ದ ಮೊದಲ ವರ್ಷೇ ಅವನಾಗಿದ್ದ. ನನ್ನ ಜೀವನದಲ್ಲಿ ನನಗಾದ ಮೊದಲ ಆಕರ್ಷಣೆ ಅವನಾಗಿದ್ದ. ನನ್ನ ಜೀವನದಲ್ಲಿ ಮುಂದೆ ಬರಲಿರುವ ಗೆಳೆಯನಿಗಾಗಿ ಬೇರೆ ಯಾರಿಗೂ ಆಹ್ವಾನ ನೀಡದೆ ತನ್ನ ಬಾಗಿಲನ್ನು ಮುಚ್ಚಿಕೊಂಡಿದ್ದ ಹೃದಯ ಇವನಿಗಾಗಿ ತೆರೆದುಕೊಂಡಿತ್ತಾ?ಅವನಿಗಾಗಿ ಸದ್ದುಮಾಡಬೇಕಿದ್ದ ಹೃದಯ ಇವನಿಗಾಗಿ ಸದ್ದು ಮಾಡಿತ್ತಾ? ಅವನೇ ಇವನಾ ??!! ಅಪರಿಚಿತನ ಮೇಲೆ, ಅದೂ ಒಬ್ಬ ಕಳ್ಳನ ಮೇಲೆ, ಕ್ರೂರಿಯ ಮೇಲೆ ಯಾಕೆ ಈ ಭಾವನೆಗಳು!! ಕ್ರೂರಿಯಾದವನು ಯಾಕೆ ಆ ಮುಗ್ದ ನೋಟವ ನನ್ನತ್ತ ಬೀರಿದ. ಈ ಭಾವಗಳು, ಅವನ ನೆನಪುಗಳು ಅನುದಿನವೂ ನನ್ನ ಮೈ ರೋಮಾಂಚನಗೊಳಿಸುತಿತ್ತು. .. ದಿನೇ ದಿನೇ ಹುಚ್ಚು ಹಿಡಿಸಿತ್ತು. ನಾನು ನನ್ನ ಫ್ಯಾಮಿಲಿ ಡಾಕ್ಟರ್ ಬಳಿ ಕೋನ್ಸೆಲ್ಲಿಂಗ್ಗೆ ಹೋಗಿದ್ದೆ. "ಚಿನ್ನೂ ! ಇದು ಸಹಜ !ಆದ್ರೂ ನಿನ್ನಾ ಸಾಯ್ಸಕ್ಕೆ ಬಂದಿದ್ದ ಆ ಹುಡುಗನ್ ಮೇಲೆ ಈ ರೀತಿ ಭಾವನೆ ಬರ್ತಿದೆ ಅಂತಾ ನೀನ್ ಹೇಳ್ತಿದ್ಯಾ. ನಂಗಾಶ್ಚರ್ಯ ಆಗ್ತಿದೆ. ಇದನ್ನ ಪ್ರೀತಿ ಅಂದ್ಕೋಬೇಡ. ಇದು ಮೊದಲ್ನೇ ಸಲ ಹುಡುಗನ್ ಸನಿಹದಿಂದ ನಿಂಗಾದ ಆಕರ್ಷಣೆ ಅಷ್ಟೇ. ಇನ್ನು ಅವ್ನು ನೋಡಕ್ಕೂ ಅಂದವಾಗಿದ್ನೇನೋ ! ಆಕರ್ಷಣೆ ಆಗುತ್ತೆ. ಆದ್ರೆ ಇದನ್ನ ಮನಸ್ಸಿಗೆ ಹಚ್ಕೋಬೇಡ.ಹುಲಿ ಕಣ್ಣೊಳಗೆ ಮುಗ್ದತೆ ಕಾಣ್ಸಲ್ಲ. ಇದು ನಿನ್ ಭ್ರಮೆ. ಈ ದರೋಡೆಕೋರರು, ಕೊಲೆಮಾಡೋರು ಇವ್ರೆಲ್ಲ ಕೆಟ್ಟೋರು, ಅವ್ರನ್ನ ಪರಿವರ್ತನೆ ಮಾಡಕ್ ಹೋದ್ರೆ, ಅಥವಾ ಬದ್ಲಾಗಿದ್ದಾರೆ ಅಂತಾ ನಂಬಕ್ ಹೋದ್ರೆ ನಾವೇ ನಮಗಾಗಿ ಗುಂಡಿ ತೊಡ್ಕೋತೀವಿ. ಇನ್ನು ಕಳ್ಳ ಅನ್ನೋ ಕಳಂಕ ಎಂದೂ ಕಳಚಿ ಹೋಗಲ್ಲ !ಇದನೆಲ್ಲ ನೀನ್ ಮನ್ಸಿಗ್ ಹಚ್ಕೋಬೇಡ !ನಿಂಗೆ ವಿದ್ಯಾವಂತನಾಗಿರೋ ಒಳ್ಳೆ ಮನಸಿನ್ ಹುಡ್ಗ ಸಿಗ್ತಾನೆ. ಈ ಘಟನೇನ ಮರ್ತು ಬಿಡು. " ಎಂದು ಸಪ್ನಾ ಆಂಟಿ ಹೇಳಿದ್ದರು. ಆ ಘಟನೆ ನಡೆದು ಮೂರು ತಿಂಗಳು ಕಳೆದಿತ್ತು.ನಾನು ಮನೆಗೆಲಸ ಮಾಡುತ್ತಾ ಇದ್ದೆ. ಮನೆಯ ಸೋಫಾ ಚೇರ್ಗಳನ್ನು ಮನೆ ಕ್ಲೀನ್ ಮಾಡುವ ಉದ್ದೇಶದಿಂದ ಹೊರಗಿಟ್ಟಿದ್ವಿ. ಅಮ್ಮ ಅಡುಗೆಕೋಣೆಯ ನೆಲ ಒರೆಸುತ್ತಿದ್ದರು. ಅಪ್ಪ ಕೋಣೆಯೊಳಗೆ ಏನೋ ಕೆಲಸ ಮಾಡುತ್ತಿದ್ದರು. ತಂಗಿ ಕೋಣೆಯೊಳಗಿದ್ದಳು. ನಾನು ಷೋಕೇಸಿನಲ್ಲಿದ್ದ ವಸ್ತುಗಳನ್ನು ಒರೆಸಿ ಇಡುತ್ತಿದ್ದೆ. ಒಮ್ಮೆಲೆ ನನ್ನ ಚಿಕ್ಕ ನೋಕಿಯಾ ಫೋನು ಎಲ್ಲಿಂದಲೋ ರಿಂಗಣಿಸಿತ್ತು. ಎಲ್ಲಿಟ್ಟಿದ್ದೇನೋ ನೆನಪಿರಲಿಲ್ಲ, ಸದ್ದು ಆಲಿಸುತ್ತಾ ಹೊರ ಬಂದಾಗ ಹೊರಗಿಟ್ಟಿದ್ದ ಸೋಫಾ ಚೇರ್ ಮೇಲೆ ನನ್ನ ನೋಕಿಯಾ ಫೋನ್ ರಿಂಗಾಗುತ್ತಿತ್ತು. ಎತ್ತಿ ಕಿವಿಯಲ್ಲಿರಿಸಿ "ಹಲೋ !!" ಎಂದೆ. ಅತ್ತ ಕಡೆಯಿಂದ ಏನೂ ಶಬ್ದ ಬರಲಿಲ್ಲ, ಇನ್ನೊಮ್ಮೆ ಹಲೋ ಎಂದಾಗ ಉಸಿರಿನ ಸದ್ದು ಕೇಳಿಸಿತು. "ಹಾ... ಹ್ಹ್ಹ್ಹ್ ಹ್ಹ್ಹ್ಹ್ ಹಾಹ್ಹ್ಹ್...... " ಯಾರೋ ಮಾತಾಡಲು ಸಂಕೋಚಪಡುತ್ತಿದ್ದಾರೆ ಅನಿಸಿತು. "ಹಲೋ !! ಯಾರ್ ಮಾತಾಡ್ತಿರೋದು? " ಮೆತ್ತಗೇ ಕೇಳಿದೆ. ಅತ್ತ ಕಡೆಯಿಂದ ಮಧುರವಾದ ಗಂಡು ಧ್ವನಿಯೊಂದು ಕೇಳಿಸಿತು.. " ನಾನು....ಹ್ಹ್ಹ್ಹ್ ನಾನು ಒಬ್ಬ ಅನಾಥ. ಚಿಕ್ ವಯಸ್ಸಿಂದ ಅಪ್ಪಾ ಅಮ್ಮ ಇಲ್ದೆ ರಸ್ತೆಯಲ್ಲಿ ಭಿಕ್ಷುಕರ ಜೊತೆ ಭಿಕ್ಷೆ ಬೇಡ್ತಾ ಬೆಳೆದೆ.ಅವರು ನನ್ನ ಭಿಕ್ಷೆ ಬೇಡಕ್ ಬಳ್ಸ್ಕೊಂಡ್ರು. ಊಟಾನೂ ಸರಿಯಾಗಿ ಕೊಡ್ತಾ ಇರ್ಲಿಲ್ಲ. ಒಬ್ನೇ ನಮ್ ಬಳಗದಲ್ಲಿರೋ ಮಕ್ಕಳ್ ಜೊತೆ ಉಡುಪಿಯ ಕೃಷ್ಣ ಮಠದಲ್ಲಿ ಊಟಕ್ಕೆ ಹೋಗುತ್ತಿದ್ವಿ. ಒಂದು ಹೊತ್ತಿಗೆ ಊಟ ಸಿಗುತ್ತಿತ್ತು. ಬೇರೆ ಎಲ್ಲಾ ಹಣನಾ ನನ್ನ ಸಾಕಿದ ಭಿಕ್ಷೆಯವ್ರು ಕಿತ್ಕೊಳ್ತಿದ್ರು.ನನಗೆ ರಾತ್ರಿ ಊಟವೂ ಸರಿಯಾಗಿ ಕೊಡುತ್ತಿರಲಿಲ್ಲ.ಒಂದು ದಿವಸ ನಾನ್ ಸಂಪಾದಿಸಿದ್ ಭಿಕ್ಷೇನಾ ಕೊಡ್ಲಿಕ್ ಕೇಳಿಲ್ಲಾ. ಅವರು ಕಿತ್ಕೊಂಡಾಗ ಅವರಿಗೆ ಕಲ್ಲು ಹೊಡೆದು ಆ ಹಣ ತೆಗೊಂಡು ಅಲ್ಲಿಂದ ಓಡಿದೆ.ಅಲ್ಲಿಂದ ಮಣಿಪಾಲದ ಬಸ್ಸು ಹತ್ತಿ ರಾತ್ರೋ ರಾತ್ರಿ ಮಣಿಪಾಲ ತಲುಪಿದೆ. ಗಂಟು ಹಣ ಕೈಲಿ ಹಿಟ್ಕೊಂಡು ಮೂಲೆಯಲ್ಲಿ ಕತ್ತಲೆಗೆ ಹೆದರಿ ಬಿದ್ದಿದ್ದ ನನ್ನ ಕೈಲಿ ಹಣ ನೋಡಿ ಕಳ್ಳರ ಗುಂಪೊಂದು ಬಂದು ನನ್ನಿಂದ ಹಣ ಕಿತ್ತುಕೊಳ್ಳಲು ಯತ್ನಿಸಿತು. ನಾನು ಕೊಡದೆ ಮತ್ತೆ ಕಲ್ಲು ಎಸೆದು ಕಿರುಚಿದೆ. ನನ್ನನು ಅವರ ಗುಂಪಿನ ನಾಯಕ, "ಕರೆದುಕೊಂಡು ಹೋಗುವ ಇವನ್ನ! ಇವನು ನಮ್ಮ ಹಾಗೇ ಕಳ್ಳ, ಕಲ್ಲು ಹೊಡೆದು ಹೆದರಿಸುತ್ತಾನೆ, ನಾವು ಚಾಕು ತೋರಿಸಿ ಹೆದರಿಸುತ್ತೇವೆ " ಎಂದು ನನ್ನನ್ನು ಕರೆದುಕೊಂಡು ಹೋದರು. ಅಲ್ಲಿಂದ ನನಗೆ ದರೋಡೆ ಮಾಡುವುದನ್ನು ಕಲಿಸಿದರು.ಕೈಗೆ ಚಾಕು ಕೊಟ್ಟರು.ನಾನು ಹೆದರಿಸಿ ಹಣ ಚಿನ್ನ ಕಿತ್ತುಕೊಳ್ಳುವುದನ್ನು ಕಲಿತೆ. ಆದರೂ ನಾನು ಸಂಪಾದಿಸುವುದನ್ನು ಅವರೇ ತೆಗೆದುಕೊಳ್ಳುತ್ತಿದ್ದರು. ಆದರೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದರು. ಭಿಕ್ಷೆ ಬೇಡುವುದಕ್ಕಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದೆ.ನಂತರ ಗುಂಪಿನವರು ಇನ್ನೂ ಮೂರ್ನಾಲ್ಕು ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೂ ಕಳ್ಳತನ ಕಳಿಸಿದರು. ನಾವು ಒಟ್ಟಿಗೆ ಬೆಳೆದ್ವಿ, ಕಳ್ಳತನ ಮಾಡಿದ್ವಿ.ಅವರಲ್ಲಿ ಒಬ್ಬ ನಾಯಕನ ಮಗ ಆಗಿದ್ದ. ಇನ್ನಿಬ್ಬರು ಕಳೆದುಹೋದ ಮಕ್ಕಳಾಗಿದ್ದರು. ಮತ್ತೆ ನಾವು ಗುಂಪಿನಲ್ಲಿ ಕಳ್ಳತನ ಮಾಡುತ್ತಾ ಬೆಳೆದ್ವಿ. ಕದ್ದ ಹಣ ಚಿನ್ನದ ವಿಷಯವಾಗಿ ಬಹಳ ಕಿತ್ತಾಟ ನಡೆಯುತ್ತಿತ್ತು.ಮತ್ತೆ ಕಳ್ಳತನ ಮಾಡುವುದಕ್ಕೆ ಒಂದಾಗುತ್ತಿದ್ವಿ, ಆದರೆ ಸ್ನೇಹ ಇರಲಿಲ್ಲ. ನನಗೆ ಆ ಗುಂಪಿನವರು ಹೊಟ್ಟೆ ತುಂಬಾ ರುಚಿಕರ ಊಟ ಕೊಟ್ಟರೂ ತಟ್ಟೆಯನ್ನು ನನ್ನತ್ತ ಚೆಲ್ಲುತ್ತಿದ್ದರು. ಆ ಬಳಗದಲ್ಲಿ ಸ್ನೇಹವಿರಲಿಲ್ಲ. ಕೇವಲ ಹೊಟ್ಟೆಗಾಗಿ ಕಟ್ಟಿಕೊಂಡ ಗುಂಪಷ್ಟೇ. ನನ್ ಸ್ನೇಹಿತ........ "ಆಕಾಶ !! ಇದು ನೋಡು ನನ್ನವ್ವ ಮಾಡಿದ್ದು !! ತಗೋ !!" "ಅವ್ವ ಅಂದ್ರೆ !!" "ನನ್ನವ್ವ !!ಅವ್ವ ಬಂದ್ಳು !!ಅವ್ವಾ !! "ಏನ್ಲಾ ಮಗಾ ಇದ್ ಏನ್ ಬಟ್ಟೆ ಹಾಕೊಂಡಿಯೇ !!ತಲೆ ಬ್ಯಾಚ್ಕೋಲಿಲ್ಲ !!" ಅವನ ತಲೇನ ಬಾಚಿ ಅವನ್ನ ಗಟ್ಟಿಯಾಗಿ ಅಪ್ಪಿ ಅವನ್ ಹಣೆಗೆ ಮುತ್ತಿಟ್ಟು ರಾತ್ರಿ ಅವನ್ನ ಕಾಲ್ ಮೇಲೆ ಮಲ್ಗಿಸ್ತಿದ್ಲು !!ನಾನು ನನ್ನಿಬ್ಬರು ಸ್ನೇಹಿತರು ಆ ಪ್ರೀತಿಗೆ ಹಾತರಿಸ್ತಾ ಇದ್ವಿ. ತಾಯಿ ಅಂದ್ರೆ ಏನೂ ಅಂತಾನೆ ಗೊತ್ತಿಲ್ದೆ ಬೆಳೆದೆ.ಆದ್ರೆ ನನ್ ಸ್ನೇಹಿತನಿಗೆ ಸಿಗ್ತಿದ್ ಆ ಪ್ರೀತಿ ನನಗೂ ಬೇಕು ಅನಿಸ್ತಿತ್ತು. ಹ್ಹ್ಹ್ಹ್ ಹ್ಹ್ಹ್ . " ಅವನು ಅಳುತ್ತಾ ಹೇಳಿದ. "ದೊಡ್ಡವರಾದಾಗ ಒಂದು ದಿವಸ... "ಲೋ ಆಕಾಶ ಪಿಕ್ಚರ್ ನೋಡೋಣ ಬಾ !!" "ಹಾ !ಬಂದೆ !!" ಪಿಕ್ಚರ್ ನಡೀತಿತ್ತು. "ನಾನು ತಂದೆ ತಾಯಿ ಇಲ್ದೇರೋ ಅನಾಥ ಹ್ಹ್ಹ್ಹ್ ಹ್ಹ್ಹ್ಹ್... "ಹಾಗ್ ಹೇಳ್ಬೇಡ್ರಿ !! ಹೆಂಡ್ತಿ ಗಂಡನಿಗೆ ಎರಡನೇ ತಾಯಿಯಂತೆ !!ಇನ್ನು ಮುಂದೆ ನೀವು ನನ್ ಪುಟ್ಟ್ ಮಗು !ನಿಮ್ಗೆ ತಂದೆ ತಾಯಿ ಬಂಧು ಬಳಗ ಎಲ್ಲಾರ ಪ್ರೀತಿ ನಾನೇ ಕೊಡ್ತೀನಿ.ಒಂದು ದಿನಾನೂ ನಿಮ್ ಕಣ್ಣಲ್ಲಿ ನೀರ್ ಬರ್ದೆ ಇರೋ ಹಾಗ್ ನೋಡ್ಕೋತೀನಿ ರೀ " ಅವಳು ಅವನ್ನ ಅವನ್ ತೊಡೆ ಮೇಲೆ ಮಲಗಿಸ್ಕೊಂಡ್ಲು. "ನಂಗೂ ಹೆಂಡ್ತಿ ಬರ್ತಾಳಾ !!" "ನಮ್ಮಂತ ಕಳ್ಲರನ್ನ ಯಾರ್ ಮದ್ವೆ ಮಾಡ್ಕೊಳ್ತಾರೆ!!ನಡೀಲೇ ಪಿಕ್ಚರ್ ಮುಗೀತು !!" ಆ ಘಟನೇನೂ ನನ್ ಮನಸಲ್ಲಿ ಉಳೀತು. ಹೊಟ್ಟೆಗಾಗಿ ಕಿತ್ತಾಡ್ತಾ ದರೋಡೆ ಮಾಡ್ತಾ ಬದುಕ್ತಾ ಇದ್ದ ನನಗೆ.... ಅವನ ಮಾತುಗಳಲ್ಲಿ ನೋವಿತ್ತು.ಅಳುತ್ತಾ ಹೇಳುತ್ತಿದ್ದ. ಆ ಮಧುರ ಧ್ವನಿಗೆ ಮೈ ಪುಳಕ ವಾಗುತ್ತಿತ್ತು. ಅವನ ಅಳು, ದುಃಖಕ್ಕೆ ಮನಸ್ಸು ಭಾವುಕವಾಗಿ ನೋಯುತ್ತಿತ್ತು. ".....ಇದ್ದ ನನಗೆ ಯಾರೂ ಪ್ರೀತಿ ತೋರಿಸಿರ್ಲಿಲ್ಲ. ನ್ ....ಹ್ಹ್ಹ್ಹ್... ನೀವ್.... ಹ್ಹ್ಹ್ಹ್ ಆವತ್ತು. . ಹ್ಹ್ಹ್ಹ್ಹ್.. ನನ್ನನ್ನ.... ಹ್ಹ್ಹ್... ನನ್ನನ್ನಾ... ಹ್ಹ್ಹ್... ಪ್ರೀತಿಸ್ತೀನಿ.... ಹ್ಹ್ಹ್ಹ್... ಹ್ಹ್ಹ್ಹ್.. ಹ್ಹ್ಹ್ಹ್ ಹ್ಹ್ಹ್ಹ್ " ಜೋರಾಗಿ ಅತ್ತಿದ್ದ . ನನ್ನ ಹೃದಯದ ಬಡಿತ ಏರಿತ್ತು. "ಆ ಹ್ಹ್ಹ್ಹ್ ಪದಾನ.. ನ್ ನಾ ಹ್ಹ್ ನಾನ್ ಯಾರ್ ಬಾಯಿಂದಾಲು.. ಹ್ಹ್ಹ್ಹ್ ನನ್ ಹ್ಹ್ ನಂಗೋಸ್ಕರ ಕೇಳ್ತೀನಿ.. ಹ್ಹ್ ಅಂತಾ ಹ್ಹ್ಹ್ಹ್ ಹ್ಹ್ ಕನಸಲ್ಲೂ ಅಂದ್ಕೊಂಡಿರ್ಲಿಲ್ಲ. ನಂಗೂ ಯಾರಾದ್ರೂ ಹ್ಹ್ ಹ್ಹ್ ಯಾವತ್ತಾದ್ರೂ ಹಾಗ್.. ಹೇಳ್ಬಹುದಾ... ನ್ ನೀವ್ ಹೇಳಿದ್ರಿ... ಈ ಅನಾಥನ್ಗೆ... ಯಾರೂ ಯಾವತ್ತೂ ಹ್ಹ್ಹ್ಹ್ ನಾನ್ ನಿನ್ನ ಪ್ರೀತಿಸ್ತೀನಿ.... ಅನ್ನಬಹುದಾ....ಹ್ಹ್ಹ್ಹ್ ಪ್ರೀತಿ.. ಕೊಡ್ಬಹುದಾ.... "ಬಿಕ್ಕಳಿಸುತ್ತಾ ಹೇಳಿದಾಗ ನನ್ನ ಕಂಗಳು ತುಂಬಿ ಅಶ್ರುಧಾರೆ ಹರಿದಿತ್ತು. ಹೃದಯ ಹಿಡಿದುಕೊಂಡು ಅವನ ಮಾತುಗಳಿಗೆ ಅತ್ತಿದ್ದೆ. "ನಿಜ್ವಾಗ್ಲೂ ನೀವ್... ಹ್ಹ್ಹ್ಹ್ ಈ ಅನಾಥನ್ನಾ ಪ್ರೀತಿಸ್ತೀರಾ. ನನ್ನ ಮದ್ವೆ ಮಾಡ್ಕೋತೀರಾ.. ನಾನ್ ದರೋಡೆ ಮಾಡೋದನ್ನ ಬಿಟಿಬಿಟ್ಟೆ. ಇಲ್ಲಿ ಕೂಲಿ ಕೆಲಸ ಮಾಡ್ತಾ ಇದ್ದೀನಿ. ತುಂಬಾ ಕೆಲಸ ಮಾಡ್ತೀನಿ. ದೊಡ್ಡ ಶ್ರೀಮಂತ ಆಗ್ತೀನಿ.ನಿಮ್ಮನ್ನ ತುಂಬಾ ಚೆನ್ನಾಗಿ ನೋಡ್ಕೋತೀನಿ. ನೀವ್ ನನ್ನ ಜೀವನ ಪೂರ್ತಿ ಪ್ರೀತಿಸ್ತೀರಾ. ಪ್ರೀತಿಸ್ತೀನಿ ಅನ್ನಿ ಮತ್ತೆ !! ಮತ್ತೆ ಹೇಳಿ...ಹೇಳಿ ನೀವ್ ನನ್ನ ಪ್ರೀತಿಸ್ತೀರಾ !!ಪ್ರೀತಿಸ್ತೀರಾ ಅಲ್ವಾ... ಹ್ಹ್ಹ್ಹ್ " ನಾನು ಏನೂ ಹೇಳದೆ ಮೂಕಳಾಗಿ ನಿಂತುಬಿಟ್ಟಿದ್ದೆ. ಆದರೆ ಹೃದಯ ಮಾತ್ರ ಅವನ ಆ ಮುಗ್ದ ಪ್ರೀತಿಗೆ ಮರುಳಾಗಿತ್ತು. ಅಪ್ಪಾ ಒಳಗಿಂದ ಹೊರ ಬಂದಿದ್ದರು. "ಯಾರ್ದು ಫೋನು !!" "ಹುಹ್ !!ಅಪ್ಪಾ ಅದೂ ರಶ್ಮಿದು !!" ಫೋನ್ ಕಟ್ ಮಾಡಿದ್ದೆ.     ಇಡೀ ರಾತ್ರಿ ನಿದ್ದೆ ಬಾರದೆ ಮಂಚದ ಮೇಲೆ ಹೊರಳಾಡಿದ್ದೆ. ಅವನು ಮತ್ತೆ ಕಾಲ್ ಮಾಡಿದ್ದ. ಆದರೆ ನಾನು ಕಟ್ ಮಾಡಿದ್ದೆ. ಮರುದಿನ ಕಾಲೇಜಿಗೆ ಹೋದಾಗ ನಾನು ಮಾತಾಡುವ ಮುನ್ನವೇ ಸ್ನೇಹಿತೆಯರು ನನ್ನ ಎಳೆದುಕೊಂಡು ರೆಸ್ಟ್ ರೂಮಿಗೆ ಹೋದರು. ಅಲ್ಲಿ ಮೈತ್ರಿ ಹೇಳಿದ್ದಳು" ಏಯ್ ಅರ್ಜುನ್ ನಿನ್ ನಂಬರ್ ಕೇಳ್ದ ಕಣೆ . ನಾವ್ ಕೋಟ್ಬಿಟ್ವಿ. ಏನೇ ಇವಾಗ ಅರ್ಜುನ್ ನಿನ್ ಪ್ರೀತಿಲೀ ಬಿದ್ದ!!" ಎಲ್ಲರೂ ನಕ್ಕಿದ್ದರು. "ಎಲ್ಲಿದ್ದಾನೆ ಅರ್ಜುನ್" ನಾನು ಕೇಳಿದ್ದೆ. "ಓಹೋ........." ಎಲ್ಲರ ಕೀಟಲೆ ಮುಂದುವರೆದಿತ್ತು. "ಅಲ್ಲಿ ನೋಡು ಗ್ರೌಂಡ್ನಲ್ಲಿ ಹೋಗ್ತಾ ಇದ್ದಾನೆ" ಮೈತ್ರಿ ಹೇಳಿದ್ದಳು. ಗ್ರೌಂಡ್ನತ್ತ ನಡೆದಿದ್ದೆ. ಸ್ನೇಹಿತೆಯರ ನಗು ಹಿಂದಿನಿಂದ ಮುಂದುವರೆದಿತ್ತು.        ಅರ್ಜುನ್ ಸಿಕ್ಕಿದವನೇ ನಾನು ಮಾತಾಡುವ ಮುನ್ನವೇ ಹೇಳಿದ್ದ. "ಏಯ್ ನಿನ್ನೆ ಯಾವನೋ ಹುಡುಗ ನಿನ್ ನಂಬರ್ ಕೇಳ್ದ. ನಾನು ಮೊದ್ಲು ಕೊಡಲ್ಲ ಅಂದೆ ಆದ್ರೆ ಆಮೇಲೆ ಅವ್ನು 5000 ರೂಪಾಯಿ ಕೊಡ್ತಿನಂದ. ಅದಕ್ಕೆ ನಿನ್ ಫ್ರೆಂಡ್ಸಿಂದ ಇಸ್ಕೊಂಡು ಅವ್ನಿಗ್ ಕೊಟ್ಟೆ. ನಾವು 5000ದಲ್ಲಿ ಮಜಾ ಮಾಡೋ ಹಾಗಾಯ್ತು. ನಡಿಮಾ ಹೋಗುಮಾ " ಎನ್ನುತ್ತಲೇ ಹೊರಟುಹೋದ.             ನಾನು ನನ್ನ ಸ್ನೇಹಿತೆಯರಿಗೆ ನಡೆದ ವಿಷಯ ವಿವರಿಸಿದ್ದೆ.   "ಚಿಕ್ ವಯಸ್ಸಿನಿಂದ ತಂದೆ ತಾಯಿ ಪ್ರೀತಿ ಇಲ್ದೆ ಬೆಳೆದಿದ್ದ ಅನಾಥ ಅವ್ನು. ಅವ್ನಿಗೆ ನಾನು ಆ ಸಂದರ್ಭದಲ್ಲಿ ನನ್ನನ್ನು ನಾನು ರಕ್ಷಿಸಿಕೊಳ್ಳೋ ಸಲುವಾಗಿ "ನಾನು ನಿಮನ್ನ ಪ್ರೀತಿಸ್ತೀನಿ" ಅಂದೆ. ಅದೇ ಮೊದಲನೆ ಸಲ ಅವನು ಯಾರದೋ ಬಾಯಿಂದ ತನಗಾಗಿ ಪ್ರೀತಿ ಅನ್ನೋ ಪದಾನ ಕೇಳಿದ್ದು. ಅದಕ್ಕೆ ಅವನ್ ಮನಸ್ಸು ಬದಲಾಯಿತು.ಇದುವರೆಗೂ ಪ್ರೀತಿ ಪದದ ಬಗ್ಗೆ ಬರೀತಾ ಇದ್ದೆ. ಆದ್ರೆ ಇವತ್ತು ಅರ್ಥ ಆಗ್ತಾ ಇದೆ ಪ್ರೀತಿಯ ನಿಜವಾದ ಹಸಿವು ಏನಂತಾ. ಪ್ರೀತಿ ಸಿಗಲಿಲ್ಲ ಅಂದ್ರೆ ಎಂಥವರೂ ಕೆಟ್ಟವರಾಗ್ತಾರೆ ,ಸಿಕ್ರೆ ಎಂಥವರ ಮನಸ್ಸು ಬದಲಾಗುತ್ತೆ. ಅವನೆಷ್ಟು ಮುಗ್ದ!! " ಕಣ್ಣೇರು ಸುರಿಸಿಕೊಂಡು ಹೇಳಿದ್ದೆ. " ಹಾಗಾದ್ರೆ ಏನು , ನೀನ್ ಅವನ್ನ ಪ್ರೀತಿಸ್ತಿದ್ಯಾ. ಮರಿಬೇಡ ಕಣೇ ನಿನ್ ಹೊಟ್ಟೆಗೆ ಚಾಕು ಇರಿಯಾಕ್ ನೋಡಿದವ ಅವಾ!ಇನ್ನು ಕೂಲಿ ಮಾಡೋನು ನಿನ್ನನ್ನು ಹೇಗೆ ನೋಡ್ಕೋತಾನೆ. ಇದಕ್ಕೆ ನಿಮ್ಮಪ್ಪ ಅಮ್ಮ ಒಪ್ತಾರಾ?ಹುಚ್ಚಿ ಥರ ಮಾತಾಡ್ಬೇಡ." ಮೈತ್ರಿ ಹೇಳಿದಳು. ನನ್ನ ಸ್ನೇಹಿತೆಯರೆಲ್ಲರೂ ಅವನನ್ನು ಮರೆತು ಬಿಡುವಂತೆ ನನಗೆ ಸಲಹೆ ನೀಡಿದ್ದರು. ಆದರೆ ನನ್ನ ಮನದ ತುಂಬಾ ಅವನ ಪ್ರೀತಿ ಉಕ್ಕಿ ಹರಿಯುತ್ತಿತ್ತು.           ಕಾಲೇಜು ಬಿಟ್ಟ ಸಮಯಕ್ಕೆ ನಾವೆಲ್ಲರೂ ಹೊರಬಂದಾಗ ಆಕಾಶ್ ಬೈಕ್ ಹಿಡಿದುಕೊಂಡು ಹೊರಗಡೆ ನಿಂತಿದ್ದ. ನನ್ನ ಸ್ನೇಹಿತರು ನನಗೆ ಸುಮ್ಮನೆ ಮನೆಗೆ ಹೋಗುವಂತೆ ಹೇಳಿದರು . ಆದರೆ ಆಕಾಶ್ ನನ್ನತ್ತ ಮುಗ್ದ ನೋಟವನ್ನು ಹರಿಸಿದ. ಆ ನೋಟವನ್ನು ಸಹಿಸಲಾರದೆ ನನ್ನ ಹೆಜ್ಜೆಗಳನ್ನು ಅವನತ್ತ ತಿರುಗಿಸಿದ್ದೆ. ನನ್ನ ಸ್ನೇಹಿತೆಯರು ನನ್ನ ವರ್ತನೆಗೆ ನನಗೆ ಬೈಯುತ್ತಾ ಮನೆ ಕಡೆ ಹೊರಟರು.       ಅಂದಿನಿಂದ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಕಾಶ್ ತಾನು ಯಾರನ್ನೂ ಕೊಲೆ ಮಾಡಿಲ್ಲವೆಂದೂ ಒಂದೊಮ್ಮೆ ಮಾಡದ ಕಾರಣ ಸಿಕ್ಕಿಹಾಕಿಕೊಂಡಾಗ ಪೊಲೀಸರಿಂದ ಅನುಭವಿಸಿದ ಯಾತನೆಗೆ ಅಂದು ಕೊಲೆ ಮಾಡಲು ಚಾಕು ಎತ್ತಿದನೆಂದು ನನಗೆ ಹೇಳಿದ. ಅಂದರೆ ಅವನು ಕೊಲೆ ಮಾಡಲೆತ್ನಿಸಿದ ಮೊದಲ ಜೀವ ನಾನು. ನಂತರ ಅಂದು ಎನಗೆ ಮಾಡಿದ ಗಾಯಕ್ಕೆ, ಹೊಡೆದದ್ದಕ್ಕೆ ಹುಚ್ಚನಂತೆ ಅಳುತ್ತಾ ನನ್ನ ಬಳಿ ಕ್ಷಮೆಯಾಚಿಸಿದನು. ಅಂದಿನಿಂದ ನಾವು ಮಣಿಪಾಲದ ಪಾರ್ಕ್ನಲ್ಲಿ ಯಾರಿಗೂ ಗೊತ್ತಾಗದ ಜಾಗದಲ್ಲಿ ಭೇಟಿಯಾಗಲು ಆರಂಭಿಸಿದೆವು. ಮೊದ ಮೊದಲು ನನಗೆ ಅವನು ಎಲ್ಲಿ ಅಸಭ್ಯವಾಗಿ ವರ್ತಿಸುತ್ತಾನೋ ಎಂದು ಭಯವಾಗುತ್ತಿತ್ತು. ಆದರೆ ಅವನೆಂದೂ ಹಾಗೆ ವರ್ತಿಸಲಿಲ್ಲ. ಕೇವಲ ಪದೇ ಪದೇ ನಿನ್ನ ತೊಡೆಯ ಮೇಲೆ ಮಲಗಿಕೊಳ್ಳಬೇಕು ಎಂದು ಚಡಪಡಿಸುತ್ತಿದ್ದನು. ನನ್ನ ತೊಡೆಯ ಮೇಲೆ ಮಲಗುತ್ತಿದ್ದವನೇ ಕಣ್ಣೀರಿಡುತ್ತಿದ್ದನು." ತುಂಬಾ ಖುಷಿ ಆಗ್ತಾ ಇದೆ" ಎನ್ನುತ್ತಿದ್ದನು. "ಪ್ರೀತಿಯ ಸುಖಾನೇ ಹಾಗೆ, ಸ್ವರ್ಗದಲ್ಲಿರೋ ಥರ ಅನ್ಸುತ್ತೆ" ಎನ್ನುತ್ತಿದ್ದೆ. ಅದೊಂದು ದಿನ ನಾನು ಮನೆಗೆ ಬಂದಾಗ ಮನೆಗೆ ಇನ್ಸ್ಪೆಕ್ಟರ್ ಅಂಕಲ್ ಬಂದಿದ್ದರು. ಅವರು ನನ್ನ ತಂದೆಯ ಸ್ನೇಹಿತರಾಗಿದ್ದರು. ಆಕಾಶ್ ಕೆಟ್ಟವನಲ್ಲ, ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅವರಿಂದ ದರೋಡೆ ಕೆಲಸಗಳನ್ನು ಮಾಡಿಸುತ್ತಾರೆ, ಆದ್ರೆ ಈಗ ಅವನು ದರೋಡೆ ಮಾಡಿದ ಪ್ರತಿಯೊಂದು ವಸ್ತುವನ್ನು ಅದರ ಮೊತ್ತವನ್ನು ಹಿಂದೊಪ್ಪಿಸುತ್ತಿದ್ದಾನೆ. ಈ ಬದಲಾವಣೆಗೆ ಕಾರಣ ಕೇಳಿದಾಗ ನನ್ನಿಂದ, ನನ್ನ ಮಾತುಗಳಿಂದ ಎಂದಿದ್ದಾನೆ ಎಂದು ತಂದೆಗೆ ಹೇಳುತ್ತಿದ್ದರು. ನಾನು ಒಳಬಂದಾಗ ನನ್ನ ಕರೆದು ಕೇಳಿದ್ದರು. " ಏನಮ್ಮಾ ಅದೇನಮ್ಮ ಬುದ್ಧಿ ಹೇಳ್ದೆ ಅವನಿಗೆ. ಅವನೀಗ ಬದಲಾಗಿದ್ದಾನೆ.ನಿನ್ನ ಒಮ್ಮೆ ಜೈಲಿಗೆ ಕರೆದುಕೊಂಡು ಹೋಗಿ ಖೈದಿಗಳಿಗೆ ಭಾಷಣ ಮಾಡಿಸಬೇಕು. ಅವ್ರು ಕೂಡ ಹೀಗೆ ಬದಲಾಗಬಹುದು. ಅಂತಹದೇನಮ್ಮಾ ಹೇಳ್ದೆ ಅವನಿಗೆ?" ನಾನು ಹೇಳಿದ ಮಾತುಗಳನ್ನು ನೆನೆಸಿಕೊಂಡು ನಾಚಿ ನಕ್ಕೆ. ಅಪ್ಪ ಅಮ್ಮನಿಗೆ ಆಶ್ಚರ್ಯ. ಅವರು ಈ ಕುರಿತು ನನ್ನ ಬಳಿ ಕೇಳಿದಾಗ ಅವನಿಗೆ ಭಗವದ್ಗೀತೆಯ ಸಾರವನ್ನು ಹೇಳಿದೆ ಎಂದೆ. ನನ್ನ ಆಕಾಶ್ ಪ್ರೀತಿ ಮುಂದುವರೆಯಿತು. ನಾನು ಆಕಾಶ್ಗೆ ಓದುವುದು ಬರೆಯುವುದನ್ನು ಹೇಳಿಕೊಟ್ಟೆ. ಕಾಲೇಜಿನಿಂದ ಬಿಡುವಿರದ ಕಾರಣ ಆಕಾಶನನ್ನು ಅವನು ಸಂಪಾದಿಸುತ್ತಿದ್ದ ಹಣದಿಂದಲೇ ಟ್ಯೂಷನ್ಗೆ ಸೇರಿಸಿದೆ. 1 ವರ್ಷದಲ್ಲಿ ಆಕಾಶ್ ಚೆನ್ನಾಗಿ ಓದುವುದು ಬರೆಯುವುದು ಕಳಿತುಕೊಂಡ ಆದರೆ ಮಾಡುತ್ತಿದ್ದುದು ಕಲ್ಲು ಮಣ್ಣು ಹೊಯ್ಯುವ ಕೆಲಸವೇ! ಅವನನ್ನು ದೊಡ್ಡ ವ್ಯಕ್ತಿಯಾಗಿ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ ಅವನಿಗೆ ಉನ್ನತ ಶಿಕ್ಷಣ ಕೊಡಿಸುವಷ್ಟು ಹಣ ನನ್ನ ಬಳಿಯಿರಲಿಲ್ಲ. ಹೇಗೆ ಅವನನ್ನು ದೊಡ್ಡ ವ್ಯಕ್ತಿಯನ್ನಾಗಿಸಲಿ ಎಂದು ಚಿಂತಿಸುತ್ತಾ ಮಣಿಪಾಲದ ಪಾರ್ಕ್ನಲ್ಲಿ ಅವನಿಗಾಗಿ ಕಾದು ಕೂತಿದ್ದಾಗ ಹಿಂದೆಯಿಂದ ಬಂದು ನನ್ನ ಕಣ್ಣು ಮುಚ್ಚಿ ನನ್ನ ಕಿವಿಯಲ್ಲಿ ಮೆತ್ತಗೆ ನನ್ನ ಹೆಸರು ಹೇಳಿದ. ಆಗ ನನ್ನ ಮನಸ್ಸು ಕದ್ದ ಆ ಮಧುರ ದನಿಯ ಬಗ್ಗೆ ಯೋಚಿಸಿದೆ. ಅವನನ್ನು ದೊಡ್ಡ ಸಂಗೀತಗಾರನಾಗಿ ಮಾಡಲೇಬೇಕೆನಿಸಿತು. ಅವನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ "ನಿನಗಾಗಿ ಏನು ಬೇಕಾದರೂ ಮಾಡುವೆ" ಎಂದು ಮುದ್ದಾಗಿ ನುಡಿದ. ನಾನು ಅಂದೇ ಅವನನ್ನು ಸ್ನೇಹಿತೆ ಹೋಗುತ್ತಿದ್ದ ಸಂಗೀತ ತರಗತಿಗೆ ಸೇರಿಸಿದೆ. ಅವನು ಚೆನ್ನಾಗಿ ಸಂಗೀತ ಕಲಿತ. ನಂತರ ನನ್ನ ಸ್ನೇಹಿತೆಯೊಬ್ಬಳ ಸಹಾಯದಿಂದ ಅವನು ಹಾಡುವುದನ್ನು ವೀಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬಿಗೆ ಹಾಕಿದೆವು.ಕವಿಯಾಗಿದ್ದ ನಾನು ಸ್ವತಃ ಅವನಿಗೆ ಹಾಡುಗಳನ್ನು ಬರೆದುಕೊಟ್ಟೆ. ಅವನು ಪ್ರತಿಯೊಂದು ಹಾಡು ಹಾಡುವಾಗ ನನ್ನನ್ನು ಕಲ್ಪಿಸಿಕೊಂಡೇ ಹಾಡುತ್ತಿದ್ದ.ಮೆತ್ತ ಮೆತ್ತಗೆ ಅವನ ಹಾಡಿಗೆ ಜನರ ಮೆಚ್ಚುಗೆ ದೊರಕಿತು. ನಾನು ಬರೆದ ಸಾಲುಗಳಿಗೂ ಜನರ ಸ್ಪಂದನೆ ಸಿಕ್ಕಿ ಸಿನೆಮಾಗೆ ನಮ್ಮನ್ನು ಆಹ್ವಾನಿಸಿದರು. ಅದಾಗಲೇ ಆಕಾಶ್ ಸಂಗೀತದಲ್ಲಿ ಆಕಾಶದೆತ್ತರಕ್ಕೆ ಬೆಳೆದಿದ್ದ. ನನ್ನ ಎಂಕಾಂ ಮುಗಿದು ಒಳ್ಳೆಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಆಕಾಶ್ ಹಾಡುವ ಹಾಡುಗಳು ಮನೆಯವರಿಗೂ ಇಷ್ಟವಾಗಿತ್ತು. ಆಕಾಶ್ ಫ್ಲಾಟ್ ಕೊಂಡುಕೊಂಡಿದ್ದ, ಓಡಾಡಲು ಕಾರು ಕೊಂಡುಕೊಂಡ. ನಂತರ ಸ್ವತಃ ಮನೆಗೆ ಬಂದು ನನ್ನ ತಂದೆ ತಾಯಿಯ ಬಳಿ ನನ್ನ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ. ಟಿವಿಯಲ್ಲಿ ಹಾಡುವವನು ಮನೆಗೆ ಬಂದು ಸಾಮಾನ್ಯ ವ್ಯಕ್ತಿಯ ಮಗಳ ಯಾಕೆ ಕೇಳಿದ ಎಂದು ಅಪ್ಪನಿಗೆ ಆಶ್ಚರ್ಯವಾಯಿತು. ಅಪ್ಪನಿಗೆ ಪ್ರೀತಿ ಪ್ರೇಮ ಹಿಡಿಸುತ್ತಿರಲಿಲ್ಲ. ಅದಕ್ಕಾಗಿಯೇ ಕಾಲೇಜು ಕಲಿಯುವಾಗ ಫೋನು ಕೂಡಾ ಕೊಡಿಸಲು ಹಿಂಜರಿದಿದ್ದರು. ಕೊನೆಗೆ ಕೊಡಿಸಿದಾಗಲೂ ಕೊಡಿಸಿದ್ದು ಕೇವಲ ಚಿಕ್ಕ ನೋಕಿಯಾ ಫೋನು. ಆಕಾಶ್ ನನ್ನನ್ನು ಎಲ್ಲೋ ನೋಡಿದ್ದಾಗಿಯೂ, ನೋಡಿ ಇಷ್ಟಪಟ್ಟಿದ್ದಾಗಿಯೂ ಸುಳ್ಳು ಹೇಳಿದರು. ಆದರೂ ಅಪ್ಪನಿಗೆ ಅನುಮಾನ ಬಂದಿತ್ತು. ನಮ್ಮ ಪುಣ್ಯಕ್ಕೆ ಆಕಾಶ್ ಗಡ್ಡ ಮೀಸೆ ತೆಗೆದಿದ್ದುರಿಂದಲೋ ಅಪ್ಪಾ ಅಮ್ಮ ಅಂದು ಅವರು ನೋಡಿದ ದರೋಡೆಕೋರ ಅವನೇ ಎಂದು ಗುರುತು ಹಿಡಿಯಲಿಲ್ಲ. ಆದರೂ ತಂದೆ ತಾಯಿ ಇಲ್ಲದ ಜಾತಿ ಕುಲ ಗೋತ್ರ ತಿಳಿಯದ ವ್ಯಕ್ತಿಗೆ ಮಗಳನ್ನು ಕೊಡುವುದಿಲ್ಲ ಎಂದು ಅಪ್ಪಾ ಅವನಿಗೆ ಮತ್ತೆ ಅವನು ಅನಾಥ ಎಂದು ಚುಚ್ಚಿ ಅವನ ಕಣ್ಣಲ್ಲಿ ನೀರು ಬರಿಸಿದ್ದರು. ಆಗ ನಾನು ಹೊರಬಂದು ಎಲ್ಲಾ ವಿಷಯ ತಿಳಿಸಿದ್ದೆ. ಅಪ್ಪನಿಗೆ ಬಹಳ ಕೋಪ ಬಂದಿತ್ತು. ಬಾಯಿಗೆ ಬಂದ ಹಾಗೆ ಬೈದು ಆಕಾಶ್ನನ್ನು ಹೊರದಬ್ಬಿದ್ದರು.ಇನ್ನು ಪ್ರೀತಿ ಗೀತಿ ಅಂತಾ ಹೋಗಿದ್ದಕ್ಕೆ, ಅದೂ ಒಬ್ಬ ದರೋಡೆಯವನ ಪ್ರೀತಿಸಿದ್ದಕ್ಕೆ ನನಗೆ ಕಪಾಳಕ್ಕೆ ಬಾರಿಸಿದ್ದರು. ನನ್ನ ಯಾವ ಮಾತನ್ನು ಕೇಳಲು ಒಪ್ಪಲಿಲ್ಲ. ನಾನು ಅವನಿಗೆ ಫೋನು ಮಾಡಿ ಹೇಳಿದ್ದೆ. "ಆಕಾಶ್ ನನ್ ಮೊದಲ್ನೇ ಪ್ರೀತಿನೂ ನೀನೇ, ನನ್ ಕೊನೆ ಪ್ರೀತಿನೂ ನೀನೇ. ಎಷ್ಟೋ ಜನ ಹೆಣ್ಮಕ್ಕಳು ಯಾರ್ನೋ ಪ್ರೀತಿಸಿ ಅಪ್ಪಾ ಅಮ್ಮನ ಬಲವಂತಕ್ಕೆ ಯಾರ್ನೋ ಮದ್ವೆ ಆಗ್ತಾರೆ. ಆದ್ರೆ ನಾನ್ ಹಾಗೆ ಯಾವತ್ತೂ ಮಾಡಲ್ಲ. ಹೆಣ್ಣಿನ ಮನಸ್ಸು ಪವಿತ್ರತೆಯ ಸಂಕೇತ. ಅಲ್ಲಿ ಒಬ್ಬನಿಗೆ ಮಾತ್ರ ಜಾಗ ಇರ್ಬೇಕು.ನಿನಗ್ ಮಾತ್ರ ಜಾಗ ಇರೋದು. ನೀನ್ ಅಲ್ದೆ ಬೇರೆ ಯಾರನ್ನೂ ನಾನ್ ಮದ್ವೆ ಆಗಲ್ಲ. ಬಲವಂತ ಮಾಡಿದ್ರೆ ಸತ್ ಹೋಗ್ತೇನೆ" ಎಂದಿದ್ದೆ. ಅವನು ಜೋರಾಗಿ ಅತ್ತಿದ್ದ. ಒಂದೆರಡು ವಾರ ನೋವಲ್ಲೇ ಕಳೆದಿದ್ವಿ. ಅವನು ಹಾಡು ಮರೆತಿದ್ದ. ಅವತ್ತು ಒಂದು ದಿನ ಮನೆಗೆ ಇನ್ಸ್ಪೆಕ್ಟರ್ ಅಂಕಲ್ ಯಾಕೋ ಬಂದಿದ್ದರು, ನನ್ನ ತಂದೆಯನ್ನು ಕುರಿತು ಹೇಳಿದ್ದರು " ಆ ಕಳ್ಳ ಇವತ್ತು ದೊಡ್ಡ ಸಿಂಗರ್ ಆಗಿದ್ದಾನೆ ಭಟ್ರೇ ಅದೂ ಅಲ್ದೆ ತಾನು ಗಳಿಸಿರೋ ಹಣಾನ ಎಷ್ಟೋ ಅನಾಥ, ಬಡ ಮಕ್ಕಳಿಗೆ ದಾನ ಮಾಡ್ತಿದ್ದಾನೆ. ಏನೇ ಇರ್ಲಿ ಭಟ್ರೇ ನಿಮ್ ಮಗಳನ್ನ ಒಮ್ಮೆ ಜೈಲಿನಲ್ಲಿ ಇರೋ ಖೈದಿಗಳಿಗೆ ಭಾಷಣ ಮಾಡಲು ಕರ್ಕೊಂಡು ಹೋಗ್ಬೇಕು "ಅಂದಿದ್ದರು. "ಅವನು ನನ್ನ ಮಗಳನ್ನು ಮದುವೆಯಾಗಲು ಕೇಳುತ್ತ ಮನೆಗೆ ಬಂದಿದ್ದ " ಅಪ್ಪಾ ಕೋಪದಲ್ಲಿ ಹೇಳಿದಾಗ ಇನ್ಸ್ಪೆಕ್ಟರ್ ಅಂಕಲ್ ನನ್ನ ನೋಡಿದ್ದರು, ನಂತರ ನನ್ನ ಬಳಿ ನಾನು ಅವನಿಗೆ ಏನು ಮೋಡಿ ಮಾಡಿದೆ ಎಂದು ಆಶ್ಚರ್ಯವಾಗಿ ಕೇಳಿದರು. ನಾನು ನಡೆದ ವಿಷಯವ ಹೇಳಿದ್ದೆ ಮತ್ತು ಮನೆಯಲ್ಲಿ ನಮ್ಮ ಮದುವೆಗೆ ಆಕ್ಷೇಪವಿರುವ ವಿಷಯವನ್ನೂ ತಿಳಿಸಿದೆ. ಹೋಗುವ ಮುನ್ನ ಅಪ್ಪನ ಬಳಿ ಹೋಗಿ ಹೇಳಿದರು " ನಿಮ್ಮ ಮಗಳ ಕಥೆ ಕೇಳಿ ಆಶ್ಚರ್ಯವಾಯಿತು. ಹೇಳಿದ್ದೆನಲ್ಲ ಆವತ್ತು. ಅನಾಥವಾಗಿ ಬೆಳೆದಿರೋ ಮಕ್ಕಳು. ಜೀವನದಲ್ಲಿ ತಂದೆ ತಾಯಿ ಬಂಧು ಬಳಗದ ಪ್ರೀತಿ ಇಲ್ದೆ ಏನೇನೋ ವಿಕೃತ ಸುಖ ಮೋಜು ಅನುಭವಿಸಲಿಕ್ಕೆ ಇಂತಹ ಬಳಗಕ್ಕೆ ಸೇರ್ಕೊಳ್ತಾರೆ. ಅವರ ಆ ಪ್ರೀತಿಗಾಗಿ ಇರೋ ಚಡಪಡಿಕೆ, ಹಸಿವು ಅದನ್ನ ನಮ್ಮಿಂದ ಅರ್ಥ ಮಾಡ್ಕೊಳ್ಲಿಕ್ ಸಾಧ್ಯ ಇಲ್ಲ. ಯಾಕಂದ್ರೆ ನಾವು ತಂದೆ ತಾಯಿ ಎಲ್ಲರ ಪ್ರೀತಿ ಅನುಭವಿಸಿ ಬೆಳೆದೋರು. ಆ ಅನಾಥನಿಗೆ ನಿಮ್ ಮಗಳು ತನ್ನನ್ನು ರಕ್ಷಿಸಿಕೊಳ್ಳೋ ಸಲುವಾಗಿ ಅವನ್ನ ಪ್ರೀತಿಸ್ತಾಳೆ ಅಂತಾ ಹೇಳಿದ್ದಕ್ಕೆ ಜೀವನದಲ್ಲಿ ನನ್ನಂತ ಅನಾಥನಿಗೂ ಯಾರಾದ್ರೂ ಹಾಗ್ ಹೇಳ್ಬಹುದಾ ಅಂತಾ ಆ ಹುಡಗನ ಮನಸ್ಸು ಬದಲಾಯಿತು.ಇನ್ನು ಆ ಪ್ರೀತಿನಾ ನಿಜಾ ಮಾಡು ಅಂತಾ ಆ ಅನಾಥ ನಿಮ್ ಮಗಳ್ ಹತ್ರ ಚಡಪಡಿಸಿದ. ಅದಕ್ಕೆ ನಿಮ್ ಮಗಳು !!ಅವನನ್ನ ಅಷ್ಟ್ ಎತ್ತರಕ್ಕೆ ಎರಿಸ್ಬಿಟ್ಲು. ಭೇಷ್ !!ಈಗ ಇವರ ಪ್ರೀತಿಗೆ ನೀವು ಆಕ್ಷೇಪ ಮಾಡ್ತಿದ್ದೀರಾ. ಇದ್ರಿಂದ ಯಾರಿಗ್ ಲಾಭ ಇದೆ. " "ಕಳ್ಳನ, ಅದೂ ಯಾವ್ ಜಾತಿಯೋ ಏನೋ !!ಅವ್ನಿಗೆ ನನ್ ಮಗಳ್ನ ಕೊಡ್ಬೇಕಾ !!" ಅಪ್ಪಾ ಗದರಿದ್ದರು. "ಈಗ ಸರಿ, ಅವ್ನು ಜಾತಿ ಬೇರೆ, ಯಾವತ್ತೋ ಕಳ್ಳ ಆಗಿದ್ದೋನು, ಅವ್ನಿಗೆ ನಿಮ್ ಮಗಳನ್ನ ಕೊಡದಿದ್ದರೆ ನಿಮ್ಗೆ ಲಾಭ ಆದ್ರೆ ನಷ್ಟ ಯಾರಿಗೆ ಭಟ್ರೇ !!ಸಮಾಜಕ್ಕೆ. ನಿಮ್ ಮಗಳ ಪ್ರೀತಿನೇ ಅವನ್ ಮನಸನ್ನ ಪರಿವರ್ತಿಸ್ತು, ಆ ಪ್ರೀತಿನೇ ಅವನ್ ಕೈಯಿಂದ ಒಳ್ಳೆ ಕೆಲಸ ಮಾಡಿಸ್ತಾ ಇದೆ. ನೀವ್ ಆ ಪ್ರೀತಿನಾ ಕಿತ್ಕೊಂಡ್ರೆ ಅವನು ಮತ್ತೆ ದರೋಡೆಕೋರ ಆಗಿ, ಮತ್ತೆ ಎಷ್ಟೋ ದರೋಡೆಕೋರರನ್ನ ಸೃಷ್ಟಿಸ್ತಾನೆ. ಆಮೇಲೆ ನಷ್ಟ ಈ ಸಮಾಜಕ್ಕೆ!! ಭಟ್ರೇ ನಿಮ್ ಮಗಳು ಒಬ್ಬ ದರೋಡೆಕೋರನನ್ನ ಒಳ್ಳೆ ವ್ಯಕ್ತಿಯಾಗಿ ಮಾಡಿ ಸಮಾಜಕ್ಕೆ ಆದರ್ಶವಾಗಿದ್ದಾಳೆ. ಇದಕ್ಕಿಂತ ಹೆಮ್ಮೆ ಏನಿದೆ. ಅವ್ನು ಎಷ್ಟೋ ಜನರಿಗೆ ಒಳ್ಳೇದ್ ಮಾಡ್ತಿದ್ದಾನೆ, ಸಹಾಯ ಮಾಡ್ತಿದ್ದಾನೆ, ನಿಮ್ಮಗಳನ್ನ ರಾಣಿ ಹಾಗೆ ನೋಡಿಕೊಳ್ಳುವ ಸಾಮರ್ಥ್ಯ ಅವನಿಗೆ ಇದೆ ಭಟ್ರೇ !! ಇವರಿಬ್ಬರ ದೂರ ಮಾಡಬೇಡಿ ಭಟ್ರೇ. ಒಬ್ಬ ದರೋಡೆಕೋರ ಇಷ್ಟ್ ಎತ್ತರಕ್ಕೆ ಬೆಳೆದಿದ್ದು ಎಷ್ಟು ಆಶ್ಚರ್ಯ ಪಡೋ ವಿಷ್ಯ. ಈ ರೀತಿ ಸಿನೆಮಾದಲ್ಲಿ ಮಾತ್ರ ಆಗೋದು !!ಆದ್ರೆ ನಿಮ್ ಮಗ್ಳು ಅದನ್ನ ನಿಜಜೀವನದಲ್ಲಿ ಮಾಡಿ ತೋರ್ಸಿದ್ದಾಳೆ. ಯೋಚಿಸಿ ಭಟ್ರೇ ನಿಮ್ಮಿಂದ ಸಾಮಾಜಕ್ಕು ಉಪ್ಕಾರ ಆಗುತ್ತೆ, ಯೋಚಿಸಿ " ಎಂದು ಹೇಳಿ ಇನ್ಸ್ಪೆಕ್ಟರ್ ಅಂಕಲ್ ಹೋಗಿದ್ದರು. ನನ್ನ ತಂದೆ ನಮ್ಮ ವಿವಾಹಕ್ಕೆ ಒಪ್ಪುತ್ತಾರೆಂಬ ನೀರೀಕ್ಷೆ ನನಗಿರಲಿಲ್ಲ. ಕಣ್ಣೆರಲ್ಲಿ ಸೊರಗಿ ಹೋಗಿದ್ದೆ. ತಂದೆಗೆ ನೋವಾದರೂ ಸುಮ್ಮನಿದ್ದರು. ಒಂದು ದಿನ ಗಾಡಿಯಲ್ಲಿ ಆಕಾಶ್ ಮನೆಗೆ ಬಂದ. ಅಪ್ಪಾ ಪೇಪರ್ ಓದುತ್ತಿದ್ದವರು ಒಮ್ಮೆಲೆ ನಿಂತುಕೊಂಡರು.ನಾನು ಕೋಣೆಯೊಳಗಿಂದ ಅವನತ್ತ ಬೇಸರದಿಂದ ಇಣುಕಿದೆ. ಬಂದವನೇ ಕಣ್ಣೀರಿಡುತ್ತ ಹೇಳಿದ್ದ, "ಪ್ಲೀಸ್ ಸರ್, ನಿಮ್ ಮಗಳ್ನ ನನ್ ಜೊತೆ ಮದುವೆ ಮಾಡಿಸಿಕೊಡಿ. ನಾನ್ ಅನಾಥ ಸರ್, ನಂಗೇ ಜೀವನದಲ್ಲಿ ಮೊದಲ್ನೇ ಸಲ ಪ್ರೀತಿ ತೋರ್ಸಿದ್ದು ನಿಮ್ ಮಗಳೇ ಸರ್ !! ಅವಳು ಕೊಡ್ಲಿಲ್ಲಾಂದ್ರೆ ಇಡೀ ಜೀವನ ನಂಗದು ಸಿಗ್ತಾ ಇರ್ಲಿಲ್ಲ. ಎಲ್ಲೋ ಯಾರ್ದೋ ಹಣ ದೋಚ್ತಾ, ಕೇವಲ ತಿಂದು ಓಡಾಡ್ತಾ ಬದುಕೋ ಪ್ರಾಣಿ ಆಗಿರ್ತಾ ಇದ್ದೆ. ಆದರೆ ಈ ಪ್ರಾಣಿಗೆ ಪ್ರೀತಿ ಅನ್ನೋ ಭಾವನೆ ಅನುಭವನ ನಿಮ್ ಮಗ್ಳು ಕೊಟ್ಲು ಸರ್. ಈ ಹಣ, ಗಾಡಿ, ಸಂಗೀತಗಾರನ ಪಟ್ಟ ಕೊಡ್ಸಿದ್ದು ನಿಮ್ ಮಗಳ್ ಸರ್. ನಂಗೇ ಇದೆಲ್ಲಾ ಬೇಕಿರಲಿಲ್ಲ ಸರ್, ನನ್ ಬೇಕಿದ್ದದು ಪ್ರೀತಿ ಮಾತ್ರ. ಅವ್ಳ ಸಂತೋಷಕ್ಕೆ ಇದೆಲ್ಲಾ ಪಡಿಯಾಕ್ ಶ್ರಮ ಪಟ್ಟೆ. ಇದೆಲ್ಲಾ ಅವ್ಳಿಗೆ ಸೇರಿದ್ದು. ಕೈಮುಗಿತೀನಿ ಸರ್,ನಂಗೇ ತಾಯಿ ತಂದೆ ಬಂಧು ಬಳಗ ಎಲ್ಲರ ಪ್ರೀತಿ ನೀಡಿದ ನಿಮ್ ಮಗಳನ್ನ ನನ್ನಿಂದ ಕಿತ್ಕೊಂಡು ನನ್ನ ಮತ್ತೆ ಅನಾಥ ಮಾಡ್ಬೇಡಿ ಸರ್.ಅವಳನ್ನ ರಾಣಿ ಥರ ನೋಡ್ಕೊತ್ತಿನಿ ಸರ್. ಆವತ್ತು ನಾನು ಅವ್ಳಿಗೆ ಏಟು ಮಾಡಿದೆ, ಆ ನೋವು ಈಗ್ಲೂ ನನ್ ಮನಸ್ಸು ಚುಚ್ಚುತ್ತೆ. ಆದ್ರೆ ಜೀವನ ಪೂರ್ತಿ ಅವ್ಳಿಗೆ ಯಾವ್ ನೋವು ಆಗ್ದೇ ಇರೋ ಹಾಗ್ ನೋಡ್ಕೊತ್ತಿನಿ ಸರ್, ಪ್ಲೀಸ್ ಸರ್." ಎಂದು ಕೈಮುಗಿದು ಜೋರಾಗಿ ಅತ್ತಿದ್ದ. ಅಪ್ಪಾ ಎದ್ದು ಕೆಳಗೆ ಬಂದಿದ್ದರು, ನಾನು ಮತ್ತೆ ಅವನನ್ನು ಹೊರದಬ್ಬುತ್ತಾರೋ ಎಂದುಕೊಂಡು ಜೋರಾಗಿ ಅತ್ತೆ, ಆದರೆ ಕೈಮುಗಿದು ಮೊಣಕಾಲಲ್ಲಿ ಕುಳಿತ ಅವನನ್ನು ಮೇಲೆಕ್ಕೆತ್ತಿದರು. ನನ್ನ ಕಣ್ಣು ಅಗಲವಾಗಿತ್ತು. "ನನ್ ಮಗಳಿಗೋಸ್ಕರ ಕಷ್ಟಪಟ್ಟು ಇಷ್ಟ್ ಎತ್ತರಕ್ಕೆ ಬೆಳೆದೋನು ನೀನು, ಅವಳ್ನ ಚೆನ್ನಾಗಿ ನೋಡ್ಕೊಳ್ದೆ ಇರ್ತೀಯ !!"ಎಂದು ಮುಗುಳುನಕ್ಕರು. ಅವನು ಸಂತೋಷದಿಂದ ಕಾಲಿಗೆ ಬಿದ್ದಿದ್ದ. ನಮ್ಮ ಮದುವೆಗೆ ಸಮ್ಮತಿ ನೀಡಿ ನಮ್ಮಿಬ್ಬರನ್ನು ಅಪ್ಪಾ ಅಮ್ಮ ಆಶೀರ್ವದಿಸಿದರು. ಅದ್ಧುರಿಯಾಗಿ ನಮ್ಮ ಮದುವೆಯೂ ನಡೆಯಿತು. ಜೀವನನೇ ಹಾಗೆ . ಎಲ್ಲಿ ಯಾವ ಕ್ಷಣದಲ್ಲಿ ಪ್ರೀತಿಯ ಅನುಭವ ಮೂಡಿಸುತ್ತೆ ಅನ್ನೋದು ಸೋಜಿಗ. ಆವತ್ತು ಕತ್ತಿನಲ್ಲಿದ್ದ ಬಂಗಾರದ ಚೈನು ಕಡಿದವನು ಇಂದು ನನ್ನ ಅದೇ ಕತ್ತಿಗೆ ಮಾಂಗಲ್ಯ ತೊಡಿಸುತ್ತಾನೆಂದು ಅಂದು ನಾನು ಊಹಿಸಿದ್ದೆನಾ!! ಇವತ್ತು ಅನಿಸಿತು ಅಂದು ನಾನು ಹೇಳಿದ ಮಾತು ಆ ಧೈವ ಶಕ್ತಿಯೇ ನನ್ನ ಹಣೆಯಲ್ಲಿ ಬರೆದ ಇವನಿಗೆ ಹೇಳಿಸಿತ್ತು. ವಿವಾಹವಾದಾಗಿನಿಂದ ಇಲ್ಲಿಯವರೆಗೂ ಆಕಾಶ್ ಪ್ರೀತಿಯಲ್ಲಿ ಒಂದು ಚೂರು ಇಳಿತವಾಗಲಿಲ್ಲ. ಬದಲಾಗಿ ಹೆಚ್ಚಾಗುತ್ತಾ ಹೋಯಿತು. ನನ್ನ ಹೀಯಾಳಿಸಿದ ಸ್ನೇಹಿತರು ನನ್ನ ಅವನ ನಡುವಿನ ಪ್ರೀತಿ ಕಂಡು ಮತ್ಸರ ಪಟ್ಟರು.ಎಷ್ಟೋ ಜನ ಮದುವೆ ಆಗುತ್ತಾರೆ. ಆದರೆ ಕಿರುಕುಳ ಕೊಡುವ ಗಂಡ ಸಿಗದಿದ್ದರೂ ಬಹಳ ಪ್ರೀತಿಸುವ ಗಂಡನೂ ಸಿಗುವುದು ವಿರಳ. ಹೆಚ್ಚಿನವರು ಕೇವಲ ಮಕ್ಕಳ ಹಡೆಯುವ ಹೆಣ್ಣನ್ನು ಬಯಸಿ ಮದುವೆಯಾಗುತ್ತಾರೆ ಅಷ್ಟೇ, ಪ್ರೀತಿಗಾಗಿ ಅಲ್ಲ. ಆದರೆ ಜೀವನದ ಒಂದು ಘಟ್ಟದಲ್ಲಿ ನನ್ನ ದೇಹಕ್ಕೆ ನೋವುಂಟು ಮಾಡಿದವನು ಜೀವನ ಪರ್ಯಂತ ನನ್ನನ್ನು ಜೀವಕ್ಕೆ ಜೀವವಾಗಿ ಒಂದು ಚೂರು ನೋವು ಮಾಡದೆ ಪ್ರೀತಿಸಿದನು.ಈಗ ನಾವಿಬ್ಬರು ಪುಟ್ಟ ಹೆಣ್ಣು ಮಗುವಿಗೆ ತಂದೆ ತಾಯಿ. ಆದರೆ ಇದು ನನಗೆ ಎರಡನೇ ಮಗು.ನನ್ನ ಮೊದಲ ಮಗು ಯಾವತ್ತೂ ಆಕಾಶನೇ.ಇಂದಿಗೂ ಅವನು ಮಲಗಿಕೊಳ್ಳುವುದು ನನ್ನ ತೊಡೆಯ ಮೇಲೆ. ನಂತರ ಅವನ ತಲೆಯೆತ್ತಿ ಮಂಚದ ಮೇಲೆ ಒರಗಿಸುತ್ತೇನೆ. ನಾನಂದು ಹೇಳಿದ ಹುಚ್ಚು ಮಾತುಗಳು ಇಂತಹ ಮುಗ್ದ ಗಂಡನನ್ನು ನಂಗೇ ನೀಡಿತು?? ! ಎಲ್ಲದಕ್ಕೂ ಅದೃಷ್ಟ ಬೇಕು !!

 ©ಕೃಷ್ಣಸುತೆ 🦚
 (ರಶ್ಮಿ ಆರ್ ಕೋಟ್ಯಾನ್)

 (ಕಥೆ ಇಷ್ಟವಾದಲ್ಲಿ ದಯವಿಟ್ಟು ಆದಷ್ಟು ಜನರಿಗೆ ಫಾರ್ವರ್ಡ್ ಮಾಡಿ ಕಥೆ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರೋತ್ಸಾಹಿಸಿ 🙏🙏)  


Rate this content
Log in

Similar kannada story from Drama