STORYMIRROR

Rashmi R Kotian

Drama Romance

4  

Rashmi R Kotian

Drama Romance

ಆ ಹುಚ್ಚು ಪ್ರೀತಿ

ಆ ಹುಚ್ಚು ಪ್ರೀತಿ

17 mins
25

" ಅಚ್ಚ ನಿನ್ನ ಅಮ್ಮನ್ ಪ್ರೀತಿ ಕಥೆ ಹೇಳಿ !!ಪ್ಲೀಸ್ !!"
, ಮಗಳು 16 ವರ್ಷದ ಅಕ್ಷರ ಹಠ ಮಾಡಿದ್ದಳು. ಅಡುಗೆ ಮನೆಯಲ್ಲಿದ್ದ ರಿಯಾ ಆಕಾಶ್ನತ್ತ ಗಂಭೀರ ನೋಟ ಬೀರಿದ್ದಳು. ಆಕಾಶ್ ಮಗಳ ಮಾತನ್ನು ಕೇಳಿಯೂ ಕೇಳದಂತೆ ವರ್ತಿಸಿ ದಿನಪತ್ರಿಕೆ ಓದುವುದರಲ್ಲಿ ಮಗ್ನನಾಗಿದ್ದ.
" ಅಮ್ಮ, ಅಚ್ಚ ನಿಮ್ ಲವ್ಸ್ಟೋರಿ ಹೇಳಿ ನಂಗೆ. "ರಿಯಾಳತ್ತ ನೋಟ ಬೀರಿ ಹಠ ಮಾಡಿದಾಗ ರಿಯಾ ಕೋಪಿಸಿಕೊಂಡು ಮಗ ಆರೇಶ್ ಜೊತೆಗೆ ಮಹಡಿ ಮೇಲಿನ ಕೋಣೆಗೆ ನಡೆದಿದ್ದಳು.
ಇತ್ತ ತಂದೆಯಿಂದಲೂ ಯಾವುದೇ ಪ್ರತಿಕ್ರಿಯೆ ದೊರಕದೆ ಅಕ್ಷರ ಮುಖ ಸಿಂಡರಿಸಿ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು.
ದಿನಪತ್ರಿಕೆಯನ್ನು ಮುಖ ಮುಚ್ಚುವಂತೆ ಹಿಡಿದುಕೊಂಡು ಆಕಾಶ್ ಓದುವಂತೆ ನಟಿಸುತ್ತಿದ್ದ. ಮಗಳ ಬಾಯಿಂದ ಹೊ ರಡಿದ ಮಾತುಗಳು ವರ್ಷಗಳ ಹಿಂದಿನ ನೆನಪುಗಳನ್ನು ಮತ್ತೆ ಮೆದುಳಿಗೆ ತಂದಿದ್ದವು. ತನ್ನ ಕೋಣೆಗೆ ಹೋಗಿ ಕಪಾಟಿನಲ್ಲಿದ್ದ ಪತ್ರವೊಂದನ್ನು ತೆಗೆದಿದ್ದ. ಮಗಳ ಕೋಣೆಗೆ ಮೆಲ್ಲನೆ ನಡೆದಿದ್ದ.
ಅಕ್ಷರ ಮುಖ ಸಿಂಡರಿಸಿ ಕೂತಿದ್ದಾಗ, ಮೆಲ್ಲನೆ ಬಾಗಿಲು ಬಡಿದಿದ್ದ,.
"ಅಕ್ಷರ !!" ಪ್ರೀತಿಯಿಂದ ಕರೆದಿದ್ದ.
ಅಕ್ಷರ ಕೋಪದಿಂದ ದೊಡ್ಡ ದೊಡ್ಡ ಕಣ್ಣುಗಳನ್ನು ಇನ್ನಷ್ಟು ಅಗಲ ಪಡಿಸಿ ತಂದೆಯನ್ನು ದುರುಗುಟ್ಟಿ ನೋಡಿದ್ದಳು.
ಅವಳ ಕಂಗಳನ್ನು ನೋಡಿ ಆಕಾಶ್ ಒಂದು ಕ್ಷಣ ಮೂಕನಾಗಿ ನಿಂತುಬಿಟ್ಟ. ತಾಯಿಯನ್ನೇ ಹೋಲುವ ಮಗಳು. ಕಣ್ಣುಗಳಂತೂ ಅವಳದ್ದೇ.
"ಅಚ್ಚ ನೀವ್ ನಿಮ್ ಲವ್ಸ್ಟೋರಿ ನಂಗ್ ಹೇಳಿಲ್ಲ !!" ಧ್ವನಿ ಏರಿತ್ತು.
"ನಾಳೆ ನಿನ್ನಮ್ಮನ್ ಹತ್ರ ಕೇಳು !! ಅವಳ್ ಹೇಳಿಲ್ಲಾ ಅಂದ್ರೆ ನಾನೇ ಹೇಳ್ತೀನಿ !! ಮುಗುಳುನಕ್ಕು ಕೈಲಿದ್ದ ಪತ್ರವನ್ನ ಅಕ್ಷರಾಗೆ ತಿಳಿಯದ ರೀತಿಯಲ್ಲಿ ಅವಳ ದಿಂಬಿನಡಿ ತುರುಕಿದ್ದ.
"ಅವೆಲ್ಲ ನಂಗೊತ್ತಿಲ್ಲ, ಈಗ್ಲೇ ಹೇಳಿ ಅಚ್ಚ !! ಪ್ಲೀಸ್, ಐ ಆಮ್ ಕ್ಯೂರಿಯಸ್ ಟು ಕ್ನೌ !!" ಅಕ್ಷರ ಮತ್ತೆ ಹೇಳಿದ್ಳು.
"ಸುಮ್ನೆ ಮಲ್ಕೋ ಪುಟ್ಟ !!" ಮೆಲ್ಲನೆ ಹೇಳಿ ಆಕಾಶ್ ಲೈಟ್ ಆಫ್ ಮಾಡಿ ಬಾಗಿಲು ಮುಚ್ಚಿ ಹೊರ ನಡೆದಿದ್ದ .
ಅಕ್ಷರ ಮಂಚದ ಮೇಲೆ ಒರಗಿಕೊಂಡಳು. ದಿಂಬನ್ನು ತೆಗೆದು ತಲೆಯ ಮೇಲೆ ಧರಿಸಿದಳು. ಕೆಳಗಿದ್ದ ಚೀಟಿ ನೋಡಿ ಆಶ್ಚರ್ಯಗೊಂಡು ತೆಗೆದಳು.
"ಅರ್ರೆ ಇದು ಅಚ್ಚನ್ ಹಾಂಡ್ರೈಟಿಂಗ್!!" ಪತ್ರ ಓದಲು ಶುರು ಮಾಡಿದಳು.

" ಪ್ರೀತಿಯ ಅಕ್ಷರ, ಆಗ ನನಗೆ ಹದಿನೇಳು ವರ್ಷ ವಯಸ್ಸು. ಉಡುಪಿಯಲ್ಲಿ ನನ್ನ ಕಾಲೇಜು.ಆ ವಿದ್ಯಾ ಸಂಸ್ಥೆಯಲ್ಲೇ ನನ್ನ ಸ್ಕೂಲು ಮುಗಿಸಿ ಅಚ್ಚ ಅಮ್ಮನ ಒತ್ತಾಯಕ್ಕೆ ಅದೇ ಕಾಲೇಜು ಸೇರಿದ್ದೆ. ಆಗ ನಿನ್ನಮ್ಮ ಅಲ್ಲಿ ಕಾಲೇಜಿಗೆ ಸೇರಿದ್ದಳು.ಇಡೀ ಕ್ಲಾಸ್ಸಲ್ಲೇ ಎಸ್. ಎಸ್. ಎಲ್ ಸಿಯಲ್ಲಿ ಅತ್ಯಂತ ಹೆಚ್ಚು ಮಾರ್ಕ್ಸು ಪಡೆದಿದ್ದಳು.
ನಾನು ತುಂಬಾ ತರಲೆ. ಕಾಲೇಜಿನಲ್ಲಿ ಏನೇನೋ ತರಲೆ ಮಾಡಿ ಲೆಕ್ಚರರ್ಗಳಿಂದ ಬೈಗುಳ, ಪ್ರಿನ್ಸಿಪಾಲ್ನಿಂದ ಬೈಗುಳ ತೆಗೊಳ್ತ ಇದ್ದೆ. ಮಾರ್ಕ್ಸು ಕೂಡ ಕಮ್ಮಿ. ಎಲ್ಲಾ ಆ ಸ್ಟ್ರಿಕ್ಟ್ ಕಾಲೇಜಿನಲ್ಲಿ ಹೇಗೋ ಮಜಾ ಮಾಡ್ತಿದ್ದ್ವಿ.ಆದ್ರೇ ನಿನ್ನಮ್ಮ ಮಾತ್ರ ಓಡೋದ್ರಲ್ಲೇ ಬ್ಯುಸಿ ಇರ್ತಿದ್ಳು.
ನಾನು ಸ್ನೇಹಜೀವಿ. ಎಲ್ಲಾರ ಹತ್ತಿರ ಮಾತಾಡೋನು, ಫ್ರೆಂಡ್ಶಿಪ್ ಮಾಡೋನು. ಎಲ್ಲಾರನ್ನ ಮಾತಾಡಿಸಿ ಸ್ನೇಹ ಬೆಳೆಸ್ತಾ ಇದ್ದೆ. ಆದ್ರೇ ನಿನ್ನಮ್ಮನ್ ಹತ್ರ ಮಾತ್ರ ಫ್ರೆಂಡ್ಶಿಪ್ ಮಾಡ್ಲಿಕ್ ಆಗ್ಲಿಲ್ಲ. ಚಿಕ್ಕ ಟೆಡ್ಡಿಬೇರ್ ಹಂಗಿದ್ಳು. ಗುಮುಡಿ.ಗುಂಡಕ್ಕೆ! ಯಾವತ್ತೂ ಯಾವದೇ ಹುಡುಗ್ರು ಹತ್ರಾನೂ ಮಾತಾಡ್ತಾ ಇರ್ಲಿಲ್ಲ. ನೋಡ್ತಾನೂ ಇರ್ಲಿಲ್ಲ. ಕಾಲೇಜಿಗೆ ಬರೋ ಹಾದಿಯಿಂದ ಹಿಡಿದು ಕ್ಲಾಸ್ಸಿನ್ ಒಳಹೊಕ್ಕೋ ವರೆಗೂ ಅವಳ್ ಕಣ್ಣು ನೆಲಾನೇ ನೋಡ್ತಾ ಇತ್ತು. ಇನ್ನು ಬಂದೋಳೆ ಪುಸ್ತಕ ಹಿಡಿದು ಓದಲು ಶುರು ಮಾಡ್ತಾ ಇದ್ಲು. ನಮಗೆಲ್ಲ ಇಂಗ್ಲೀಷ್ ಹೌರ್ನಲ್ಲಿ ಲೆಕ್ಚರರ್ ಬರ್ಲಿಲ್ಲ ಅಂದ್ರೆ ಆಡಿಯೋ ವಿಶುಅಲ್ ರೂಮಿನಲ್ಲಿ ಫಿಲಂ ತೋರ್ಸ್ತಾ ಇದ್ರು. ಆದ್ರೇ ನಿನ್ನಮ್ಮ ಮಾತ್ರ ಕ್ಲಾಸ್ನಲ್ಲೇ ಉಳಿದು ಓದ್ತಾ ಇದ್ಳು. ನಾನು ಬೆಲ್ ಹೊಡೆದಾಗ ಮೊದ್ಲು ಓಡಿ ಕ್ಲಾಸ್ಸಿಗ್ ಬರ್ತಾ ಇದ್ದೆ. ನಿನ್ನಮ್ಮ ಪುಸ್ತಕ ಹಿಡ್ಕೊಂಡು ಓದೋಳು. ನಾವೆಲ್ಲಾ ಕಾಮೆಂಟ್ ಹೊಡಿತಾ ಇದ್ವಿ. "ಎಷ್ಟ್ ಓದ್ತಾಳಪ್ಪಾ !!" ಅಂತ . ಅವಳ್ ಕೂದಲು ಶಾರ್ಟ್ ಕಟ್. ಕ್ಯಾನ್ಸರ್ನಿಂದ ಅದೇ ವರ್ಷ ಗುಣವಾಗಿ ಕಾಲೇಜು ಸೇರಿದ್ಳು. ಟ್ರೀಟ್ಮೆಂಟ್ಗಾಗಿ ಒಂದು ವರ್ಷ ವೇಸ್ಟ್ ಆಗಿ ಮತ್ತೆ ಎಸ್ ಎಸ್ ಎಲ್ ಸಿ ಬರೆದು ಬಂದಿದ್ಳು. ನಿನಮ್ಮ ನಂಗಿಂತ ಒಂದು ವರ್ಷ.... ಅಲ್ಲಾ !! ಆರು ತಿಂಗ್ಳು ಇಪ್ಪತ್ತು ದಿವಸ ದೊಡ್ಡೋಳು.
ಅಂತೂ ಇಂತೂ ಓದಿ ಓದಿ ನಿನಮ್ಮ ಕ್ಲಾಸ್ಸಿಗೆ ಸೆಕೆಂಡ್ ಬರ್ತಾ ಇದ್ಳು. ಸ್ವಾತಿ ಅನ್ನೋ ಹುಡುಗಿ ಯಾವಾಗ್ಲೂ ಫಸ್ಟ್ ಬರ್ತಾ ಇದ್ಳು. ಅವಳ್ನ ಹಿಂದೆ ಹಾಕ್ಲಿಕ್ಕೆ ಇವಳು ಇನ್ನಷ್ಟ್ ಓದ್ತಾ ಇದ್ಳು. ಹೀಗ್ ಓದು ಓದು ಅಂತಾ ಇರೋ ಹುಡುಗಿ ಮುಂದಿನ ವರ್ಷ ನನ್ ಪ್ರೀತಿಯಲ್ಲಿ ಬೀಳ್ತಾಳೆ ಅಂತಾ ನಾನ್ ಅಂದ್ಕೊಂಡೇ ಇರ್ಲಿಲ್ಲ.
ಒಂದೊಂದ್ಸಲ ನನ್ನ ವಿಚಿತ್ರವಾಗಿ ನೋಡೋಳು. ನೋಡ್ತಾನೆ ಇರೋಳು. ಕೆಲವೊಮ್ಮೆ ನಾನು ಅವಳ್ನ ನೋಡಿದಾಗ ಆಚೆ ತಿರುಗೋಳು. ಯಾಕೋ ಆ ವರ್ಷ ಅವಳ್ ಮಾರ್ಕ್ಸು ಕಡಿಮೆ ಆಯ್ತು. ಆದ್ರೇ ಅದಕ್ಕೆ ಕಾರಣ ನಾನು ಅಂತಾ ನಾನ್ ಕನಸು ಮನಸಲ್ಲೂ ಅಂದ್ಕೊಂಡಿರ್ಲಿಲ್ಲ. ನಿನ್ನಮ್ಮನ್ ಹೃದಯಕ್ಕೆ ಫಸ್ಟ್ ಕ್ರಶ್ ಆಗ್ಬಿಟ್ಟಿದೆ. ಅಲ್ಲಾ ಫಸ್ಟ್ ಲವ್. ನಿನ್ನಮ್ಮನಿಗೆ ಕ್ರಶ್ ಅಂದ್ರೆ ಏನು ಅಂತಾನೆ ಗೊತ್ತಿರ್ಲಿಲ್ಲ. ಅವಳ್ಗೆ ನನ್ ಮೇಲೆ ಪ್ರೀತಿ ಇದೆ ಅಂತಾ ನನಗೆ ಗೊತ್ತಾಗಿದ್ದು ನಾನ್ ಫಸ್ಟ್ ಇಯರ್ ಡಿಗ್ರೀಲಿರುವಾಗ. ಮಾರ್ಚ್ ತಿಂಗಳ ಇಪ್ಪತ್ತನೇ ತಾರೀಕು ನಿನ್ನಮ್ಮ ನಂಗೆ ಪ್ರೊಪೋಸ್ ಮಾಡಿದ್ಲು. ಡುಮ್ಮಿ ಹಾಗಿದ್ದ ಅವಳನ್ನ ನೋಡಿ ರಿಜೆಕ್ಟ್ ಮಾಡಿದ್ದೆ. ಆದ್ರೇ ಅವಳ್ನ ರಿಜೆಕ್ಟ್ ಮಾಡೋ ಮುಖ್ಯ ಕಾರಣ ಅವಳ ಗುಣ ನಂಗಿಷ್ಟ ಆಗ್ಲಿಲ್ಲ. ತುಂಬಾ ರಿಸೆರ್ವ್ಡ್ ಆಗಿದ್ಳು. ಹುಡುಗ್ರು ಹತ್ರ ಎಲ್ಲಾ ನಾನ್ ಮಾತಾಡೊಳಲ್ಲ. ನೋಡೋದು ಇಲ್ಲ ಅಂತೆಲ್ಲಾ ಓಬಿರಾಯನ ಕಾಲದ ಡೈಲಾಗ್ ಹೊಡೀದಿದ್ಲು. ನಂಗೆ ಓಪನ್ ಮೈಂಡೆಡ್ ಹುಡ್ಗಿರ್ ಇಷ್ಟ. ಈ ಗೌರಮ್ಮ ತರ ವರ್ತಿಸೋರು ಇಷ್ಟ ಆಗ್ತಾ ಇರ್ಲಿಲ್ಲ. ಪ್ರೀತಿ ತಿರಸ್ಕರಿಸಿದಾಗ ಸ್ನೇಹ ಬೇಡಿದ್ಲು. ಆದ್ರೆ ಎಲ್ಲಿ ಮುಂದೆ ನಂಗೆ ತೊಂದರೆ ಆಗಬೋದು ಅಂತಾ ಅವಳ್ನ ಬ್ಲಾಕ್ ಮಾಡಿದ್ದೆ.ಬುದ್ಧಿ ಹೇಳಿ ಕಳಿಸಿದ್ದೆ. ಏನೋ ಒಂದು ಸ್ವಲ್ಪ ದಿನ ಬಿಟ್ಟು ಮರ್ತು ಬಿಡ್ತಾಳೆ ಅಂದ್ಕೊಂಡ್ರೆ ನನ್ ಹಿಂದೇನೆ ಬಿದ್ದಿದ್ಲು. ಅಲ್ಲಿಂದ ನಂಗೆ ಶನಿ ಕಾಟ ಶುರುವಾಗಿತ್ತು.
ನಿನ್ನಮ್ಮ ಮುಲ್ಟಿಟಾಲೆಂಟೆಡ್.ಹಾಡ್ತಾ ಇದ್ಳು, ಚಿತ್ರ ಬಿಡಿಸ್ತಾ ಇದ್ಳು, ಇನ್ನು ನನ್ ಪ್ರೀತಿಯಲ್ಲಿ ಬಿದ್ಮೇಲೆ ಕವಿ ಆಗಿದ್ಲು. ಯೆಲ್ಲಾದ್ರಲ್ಲೂ ಮುಂದೆ ಬರೋಳು ಆದ್ರೇ ಪ್ರೀತಿ ವಿಷಯದಲ್ಲಿ ಮಾತ್ರ ಈ ನಿನ್ನಚ್ಚ ಅವಳನ್ನ ಹಿಂದೆ ಹಿಂದೆ ದೂಡಿದ್ದ." ಪತ್ರ ಓದ್ತಾ ಅಕ್ಷರ ಒಂದು ಕ್ಷಣ ಗಂಭೀರವಾದಳು.
ಅತ್ತ ಆಕಾಶ್ ಆರೇಶ್ ಕೋಣೆಯತ್ತ ಹೊರಟಿದ್ದ.10 ವರ್ಷದ ಮಗ ಮಲಗಿದ್ದ. ಅವನ ಮೇಲೆ ಹೊದಿಕೆ ಹಾಕಿ ತಲೆ ಸವರಿ ಕೋಣೆಗೆ ನಡೆದಿದ್ದ. ರಿಯಾ ದಣಿದು ಮಲಗಿದ್ದಳು.ಅವಳಿಗೂ ಹೊದಿಕೆ ಹಾಕಿ, ಮಂಚದ ಮೇಲೆ ಒರಗಿದ ಆದರೆ ನಿದ್ದೆ ಬರಲಿಲ್ಲ. ಹೇಗೆ ಜೀವನ ಒಂದು ದಿನ ಎಲ್ಲರನ್ನೂ ಎಲ್ಲಾ ಇದ್ದು ಒಂಟಿ ಮಾಡಿಬಿಡುತ್ತದೆ ಎಂದು ಯೋಚಿಸುತ್ತಾ ಕುಳಿತ.
ಅತ್ತ ಅಕ್ಷರ ಪತ್ರ ಓದುವುದನ್ನು ಮುಂದುವರೆಸಿದ್ದಳು.
"ನಿನ್ನಮ್ಮನ್ಗೆ ನನ್ ಮೇಲಿದ್ದ ಕ್ರಶ್, ಆ ಕ್ರಶ್ನಿಂದ ಅವಳಿಗಾದ ಮೊದಲ ಅನುಭವ, ನನ್ನ ನೋಡೋಕೆ ಕಾತರಿಸುತಿದ್ದ ಅವಳ ಕಣ್ಣುಗಳು, ನಿದ್ದೆಗೆಡಿಸಿದ್ದ ನನ್ನ ಮುಗುಳುನಗು. ಎಲ್ಲಾ ಭಾವನೆಗಳನ್ನ ಒಮ್ಮೆ ನನ್ ಹತ್ರ ಬಿಚ್ಚಿಡಬೇಕು,ಯಾವತ್ತೂ ಹುಡುಗ್ರು ಹತ್ರ ಸ್ನೇಹ ಇಟ್ಕೊಳ್ದೆ ಇದ್ದ ಅವಳಿಗೆ, ನನ್ ಸ್ನೇಹ ಮಾತ್ರ ಪಡೀಬೇಕು ಅಂತ ಆಸೆಯಾಗಿತ್ತು. ಅವಳ್ಗೆ ನನ್ ಮೇಲೆ ಇದ್ದ ಭಾವನೆಗಳು ಮನಸಲ್ಲಿ ತುಂಬಿ ಅದನ್ನ ನಂಗೆ ಹೇಳ್ಬೇಕು ಅಂತ ಚಡಪಡಿಸ್ತಾ ಇದ್ಳು. ಆದ್ರೆ ನಾನು ಅವಳ್ನ ಬ್ಲಾಕ್ ಮಾಡಿದ್ದೆ. ಆದರೂ ಅವಳು ಹೈಕ್ ಅಕೌಂಟ್ನಿಂದ ಅವಳ ಎಲ್ಲಾ ಭಾವನೆಗಳನ್ನು ನಂಗೆ ಸಂದೇಶವಾಗಿ ಕಳುಹಿಸಿದ್ಲು. ಉದುದ್ದ ಸಂದೇಶಗಳು. ಎಷ್ಟಿತ್ತೆಂದರೆ ಯಾರಿಗೂ ಅಷ್ಟೊಂದು ಬರೆಯುವ ಸಾಮರ್ಥ್ಯವಿರುವುದಿಲ್ಲ ಎಂಬಷ್ಟು.ಒಂದು ಕ್ಷಣ "ಯಪ್ಪಾ ಇವಳ್ಯಾರ್ ಹುಡುಗಿ !!ಹುಡುಗೀರು ಈ ರೀತಿ ಉದುದ್ದ ಸಂದೇಶ ಕಳುಹಿಸುತ್ತಾರಾ "ಅಂದ್ಕೊಂಡೆ. ಆದ್ರೆ ಅದನ್ನು ಓದ್ತಾ ಓದ್ತಾ ಮೈ ಮನಸ್ಸೆಲ್ಲ ರೋಮಾಂಚನಗೊಂಡಿತ್ತು. ದ್ವಿತೀಯ ಪಿ ಯು ಇಂದ ಅಲ್ಲಿವರೆಗೆ ನನ್ನ ಪ್ರೀತಿಯಲ್ಲಿ ಅವಳಿಗಾದ ಪ್ರತಿಯೊಂದು ಅನುಭವ ಅದರಲ್ಲಿ ಉದುದ್ದ ಸಂದೇಶವಾಗಿ ಕಳುಹಿಸಿದ್ದಳು. ನನ್ನ ಕಣ್ಣು, ಮುಗುಳುನಗು, ನಡೆಯುವ ಶೈಲಿ. ಗಂಭೀರ ಮುಖ, ಕೂದಲು ಬಾಚುವ ರೀತಿ ಅವಳಿಗೆಷ್ಟು ಇಷ್ಟ ಎಂಬುದನ್ನೆಲ್ಲ ಬರೆದು ನನ್ನನ್ನು ಮನ್ಮಥ ಮಾಡಿದ್ದಳು. ಯಾವತ್ತೂ ಈ ರೀತಿ ಯಾರಿಂದಲೂ ಭಾವನೆಗಳು ದೊರಕಿರಲಿಲ್ಲ. ಮುಖ ಎಲ್ಲಾ ನಾಚಿ ಕೆಂಪಾಗಿತ್ತು. ನಿನ್ನಮ್ಮ ಕೊನೆಗೆ "ಇನ್ನೂ ಇತ್ತು, ನೀನು ಕೋಪ ಮಾಡ್ಕೊತೀಯ ಅಂತ ಕಳಿಸ್ಲಿಲ್ಲಾ" ಅಂತ ಬೇರೆ ಕಳುಸಿದ್ಲು. "ಓ ದೇವರೇ !! ಇನ್ನೂ ಇತ್ತಾ "ಎಂದು ನಕ್ಕಿದ್ದೆ. ಆದರೆ ಅವಳ ಪ್ರೀತಿಯನ್ನು ಸ್ವೀಕರಿಸಲು ನನ್ನ ಹೃದಯ ಆಗಲೇ ಬೇರೆ ಹುಡುಗಿಯ ಪ್ರೀತಿಗೆ ಸಿಲುಕಿತ್ತು.ಅವಳು ನನ್ನ ಪ್ರೀತಿಯನ್ನು ತಿರಸ್ಕರಿಸಿದರೂ ಸ್ನೇಹವನ್ನು ಸ್ವೀಕರಿಸಿ ದ್ದಳು. ಅವಳಿಂದ ಪ್ರೀತಿ ಸಿಗುವುದಿಲ್ಲ ಎಂದು ತಿಳಿದೂ ಕೂಡ ಅವಳ ಸ್ನೇಹಿತನಾಗಿ ಹತ್ತಿರವಾಗಿದ್ದೆ. ಹಾಗಾಗಿ ಮತ್ತೆ ನಿನ್ನಮ್ಮನನ್ನು ಬ್ಲಾಕ್ ಮಾಡಿದ್ದೆ. ನಿನ್ನಮ್ಮ ನನಗಾಗಿ ದೇಹ ಕರಗಿಸಿ, ನಾ ಪ್ರೀತಿಸುವ ಹುಡುಗಿಗಿಂತ ಮುದ್ದಾಗಿ ಆಗ ನಮ್ಮ ಡಿಗ್ರಿ ಕಾಲೇಜಿನಲ್ಲಿ ಎಷ್ಟೋ ಹುಡುಗರ ಹೃದಯ ಕದ್ದ ಚೆಲುವೆಯಾಗಿದ್ದಳು. ಆದರೆ ಎಷ್ಟೇ ನನ್ನ ಹಿಂದೆ ಬಿದ್ದರೂ ನಾನು ಮಾತ್ರ ಅವಳನ್ನು ಆಗ ಸ್ವೀಕರಿಸಲಿಲ್ಲ. ನಾನು ಮುಚ್ಚಿ ಹೋದ ಬಾಗಿಲಿನ ಬಳಿ ಇದ್ದೇ ಸುಖವನ್ನು ಕಂಡಿದ್ದೆ.
ನಿನ್ನಮ್ಮ ಮನಸು ಮಾಡಿದರೆ ಯಾರನ್ನು ಬೇಕಾದರೂ ಪ್ರೀತಿಸಬಹುದಿತ್ತು.ಆದರೆ ಅವಳಿಗೆ ನಾನೇ ಬೇಕಿದ್ದೆ. ಎಲ್ಲಾ ಹುಡುಗರು ಹುಡುಕಿ ನೋಡುತಿದ್ದ ಚೆಲುವೆಯ ಆ ಸುಂದರ ಕಣ್ಣುಗಳು ಮಾತ್ರ ನನ್ನನ್ನೇ ಹುಡುಕುತಿತ್ತು. "ನೀನು ನಂಗೆ ಮೊದಲ ಪ್ರೀತಿ ಮೊದಲ ಆಕರ್ಷಣೆ, ನಂಗೆ ಬೇರೆ ಯಾರನ್ನೂ ಪ್ರೀತಿಸಲಾಗುವುದಿಲ್ಲ "ಎಂದು ನನ್ನ ಬಳಿ ಹೇಳಿಕೊಂಡಿದ್ದಳು.
ನನ್ನ ಪ್ರೀತಿ ಸಿಗದ ನೋವಿನಲ್ಲಿ ತುಂಬಾ ಖಿನ್ನತೆಗೆ ಒಳಗಾಗಿದ್ದಳು. ಅವಳಿಗೆ ನನ್ನನ್ನು ನಾನು ಪ್ರೀತಿಸುತ್ತಿದ್ದ ಆ ಹುಡುಗಿಯ ಜೊತೆ ನೋಡಲು ಕಷ್ಟವಾಗುತಿತ್ತು. ಅವಳಿಗೆ ಬೈದು ಜಗಳ ಮಾಡಿದ್ದಳು. ಎಷ್ಟೇ ಬೇಡಿಕೊಂಡರೂ ನಾನು ಅವಳ ಸ್ನೇಹವನ್ನೂ ಸ್ವೀಕರಿಸಲಿಲ್ಲ. ಕಾರಣ, ಇನ್ನೇನು ಅವಳನ್ನು ಒಪ್ಪಿಕೊಳ್ಳುತ್ತೇನೆ ಎನ್ನುವಷ್ಟರಲ್ಲಿ ಅವಳ ಇನ್ಸೆಕ್ಯುರ್ ಸ್ವಭಾವದ ಅರಿವಾಗಿತ್ತು. ನನಗೆ ಪ್ರೀತಿಯಲ್ಲಿ ನಂಬಿಕೆ ಇರಲಿಲ್ಲ.ನಾನು ನಂಬಿದ್ದು ಸ್ನೇಹಾನಾ !!ನನ್ನ ಹಾಗೆ ಬಹಳ ಓಪನ್ ಮೈಂಡೆಡ್ ಆಗಿ ಬೇರೆ ಹುಡುಗರ ಜೊತೆ ಫ್ರೆಂಡ್ಲಿ ಇರುವ ಹುಡುಗಿ ಬೇಕಿತ್ತು. ಹೀಗೆ ಅಸಹಜವಾಗಿ, ವಾಸ್ತವವಲ್ಲದ ರೀತಿ ಸಂಪೂರಣವಾಗಿ ನನ್ನೊಬ್ಬನನ್ನೇ ಇಷ್ಟ ಪಟ್ಟು ಹುಚ್ಚಿಯ ಥರ ಪ್ರೀತಿಸುವ ಹುಡುಗಿ ಬೇಕಿರಲಿಲ್ಲ. ತುಂಬಾ ಇರ್ರಿಟೇಟ್ ಆಗಿ ಅವಳನ್ನು ಕೋಪದಲ್ಲಿ ಬೈದು ಕಳಿಸಿದ್ದೆ. ಆದ್ರೆ ನಾನು ಎಷ್ಟೇ ತಿರಸ್ಕರಿಸಿದರೂ ಮತ್ತೆ ಮತ್ತೆ ಹೊಸ ನಂಬರ್ ಮಾಡಿ ನನ್ನನ್ನು ಪ್ರೀತಿಸಲು ಕಾಡಿದಳು. ಅವಳಿಗೆ ಪ್ರೀತಿ ಹಾಗು ಆಕರ್ಷಣೆಯ ನಡುವಿನ ಅಂತರ ತಿಳಿಯಲಿಲ್ಲ. ಅವಳು ಬೇರೆ ಯಾವ ಹುಡುಗನನ್ನು ಮೋಹಿಸಲಿಲ್ಲ, ಸಲಿಗೆ, ಸ್ನೇಹ ಇಟ್ಟುಕೊಳ್ಳಲಿಲ್ಲ. ಅವಳ ಪ್ರಕಾರ ಇದೆಲ್ಲ ತಪ್ಪು, ಬೇರೆ ಹುಡುಗಿಯರ ಹಾಗೆ ನಾನು ಹುಡುಗರನ್ನು ನೋಡುವುದಿಲ್ಲ, ಅವರಿಗೆ ಅಂಟಿಕೊಂಡು ಸ್ನೇಹದ ಹೆಸರಲ್ಲಿ ಸರಸವಾಡುವುದಿಲ್ಲ ಎಂದೆಲ್ಲ ಹೇಳಿ ನನ್ನ ಓಪನ್ ಮೈಂಡೆಡ್ ಮನೋಭಾವಕ್ಕೆ ಕಿರಿಕಿರಿ ಮಾಡಿದ್ದಳು. ಕಾಡಿದಳು, ಬೇಡಿದಳು. ಅವಳಿಗೆ ಪ್ರೀತಿ ಎಂದರೆ ಏನೆಂದೇ ಅರಿವಾಗಲಿಲ್ಲ. ಅವಳಿಗೆ ಹುಡುಗನ ಪ್ರೀತಿಯ, ಸಾನಿಹ್ಯದ ಅವಶ್ಯಕತೆ ಇತ್ತು.ಅದು ನನ್ನಿಂದಲೇ ಸಿಗಬೇಕು ಎಂಬುದು ಅವಳ ಹಠವಾಗಿತ್ತು. ಎಲ್ಲದ್ರಲ್ಲೂ ಪರ್ಫೆಕ್ಟ್ ಇರಬೇಕೆಂಬ ಹುಚ್ಚಲ್ಲಿ ಇಂಪ್ರಾಕ್ಟಿಕಲ್ ಆಗಿ ಜೀವನದಲ್ಲಿ ಸೋತು ಹೋಗಿದ್ದಳು. ಆದರೂ ಹಠ ಬಿಡಲಿಲ್ಲ. ನಾನು ಬೇಕೆಂಬ ಹಠ ಬಿಡಲಿಲ್ಲ. ಅವಳ ಕಾಟ ತಡೆಯಲಾರದೆ ಆ ಊರು ಬಿಟ್ಟು ಕೇರಳಾಗೆ ಬಂದಿದ್ದೆ. ಮತ್ತೆ ವಾಪಸು ಹೋದಾಗ ನನಗೆ 25 ವರ್ಷವಾಗಿತ್ತು, ಅವಳು ಬೇರೆ ಹುಡುಗನ ಜೊತೆ ಸುಖವಾಗಿ ಇದ್ದಾಳ ಎಂದು ನೋಡಲು ಹೋದರೆ ಅವಳು ನನ್ನನ್ನು ನೋಡಿದವಳೇ "ಆಕಾಶ್ ಆಕಾಶ್" ಎಂದು ಬಿಗಿದಪ್ಪಿ ಹಿಡಿದಿದ್ದಳು. ಮತ್ತೆ ನನ್ನನ್ನು ಪ್ರೀತಿಸು ಎಂದು ಕಾಡಿ ಬೇಡಿದ್ದಳು. ಅವಳು ನನಗಾಗಿಯೇ ಕಾದಿದ್ದಳು. ಡಿಗ್ರಿಯಲ್ಲಿದ್ದಾಗ ನನ್ನ ಅವಳ ಚಿತ್ರ ಬಿಡಿಸೋಳು. ಅವಳು ಯಾರದೇ ಚಿತ್ರ ನಿಖರವಾಗಿ ಬಿಡಿಸಬಲ್ಲ ಚಿತ್ರಗಾರ್ತಿ. ಆದರೆ ನನ್ನ ಅವಳ ಕಾರ್ಟೂನ್ ಚಿತ್ರ ಬಿಡಿಸುತ್ತಿದ್ದಳು. ಆ ಚಿತ್ರ ಈ ಪತ್ರದ ಕವರಿನಲ್ಲಿದೆ. "
ಆಗಲೇ ತೆಗೆದಿಟ್ಟ ಚಿತ್ರಗಳನ್ನು ಅಕ್ಷರ ಸೂಕ್ಷ್ಮವಾಗಿ ಗಮನಿಸಿದಳು. ಅಚ್ಚ ಅಮ್ಮನ ಕಾರ್ಟೂನು ಚಿತ್ರ ನೋಡಿ ನಗು ಬಂತು. ಮೊದಲ ಚಿತ್ರದಲ್ಲಿ ಯೂನಿಫಾರ್ಮ್ ಧರಿಸಿದ್ದ ಅವಳಮ್ಮ ನಾಚಿಕೊಂಡು ಅವಳಚ್ಚನ ಕೈ ಹಿಡಿದಿದ್ದಳು. ಎರಡನೆಯ ಚಿತ್ರ ನೋಡಿ ಅಕ್ಷರಾಳಿಗೆ ತುಂಬಾ ನಗು ಬಂತು. ಅದರಲ್ಲಿ ಅವಳಮ್ಮ ಅವಳಚ್ಚನ ಕೈಯಲ್ಲಿ ಎತ್ತಿಕೊಂಡು ಹೃದಯ ಚಿನ್ಹೆ ಅವಳ ಕಣ್ಣ ಮೇಲಿದ್ದು ಎರಡೂ ಕಣ್ಣುಗಳಿಗೆ ತಾಗುವಷ್ಟು ಬಾಯಿ ದೊಡ್ಡ ಮುಗುಳುನಗು ನೀಡಿತ್ತು. ಕಾರ್ಟೂನ್ ಚಿತ್ರದ ಸುತ್ತ ಹೃದಯಾಕೃತಿ ಚಿನ್ಹೆ ಬಿಡಿಸಲಾಗಿತ್ತು.
"ಅಯ್ಯೋ ಅಮ್ಮ !! ನೀನ್ ಅಚ್ಚನ್ನ ಇಷ್ಟ್ ಹುಚ್ಚಿ ಥರ ಪ್ರೀತಿಸ್ತಿದ್ಯಾ !!? ಅದಿಕ್ಕೆ ನಿಮ್ ಲವ್ಸ್ಟೋರಿ ನಂಗ್ ಹೇಳಿಲ್ಲಾ ಅಲ್ಲಾ ನೀನು?!" ಜೋರಾಗಿ ನಕ್ಕಿದ್ದಳು.
ಮೂರನೇ ಚಿತ್ರದಲ್ಲಿ ಕೂಡ ಎರಡು ಕ್ಯೂಟ್ ಕಾರ್ಟೂನುಗಳು ಕೈ ಕೈ ಹಿಡಿದು ನಿಂತಿದ್ದವು.ಆದರೆ ಪ್ರತಿ ಚಿತ್ರದಲ್ಲೂ ಅವಳಮ್ಮ ಅವಳಚ್ಚನ ನೋಡಿ ನಾಚಿ ನಕ್ಕಿದ್ದಳು ಆದರೆ ಅವಳಚ್ಚ ಮಾತ್ರ ಕೋಪದ ಭಾವ ಮುಖದ ಮೇಲೆ ಮೂಡಿಸಿದ್ದ. ಇನ್ನೊಂದು ಚಿತ್ರದಲ್ಲಿ ಅವಳಮ್ಮ ಹೂವು ಹಿಡಿದು ಮೊಣಕಾಲೂರಿ ಕೂತ ಕಾರ್ಟೂನ್ ಚಿತ್ರಿಸಿದ್ದಳು. ಆದ್ರೆ ಅದರ ಎಡಭಾಗದಲ್ಲಿ ಅವಳಚ್ಚ ಆ ಹೂವು ಎಸೆಯುವ ಕಾರ್ಟೂನ್ ಮಾಡಲಾಗಿತ್ತು. ಅವಳಚ್ಚನ ಕಾರ್ಟೂನ್ ಚಿತ್ರ ಕೋಪ ತಾಳಿತ್ತು. ಅವಳಮ್ಮನ ಚಿತ್ರ ಕಣ್ಣೀರು ಸುರಿಸಿತ್ತು. ಅಕ್ಷರಾಗೆ ಅಚ್ಚರಿಯಾಗಿತ್ತು.
"ಮತ್ ನೀವ್ ಹೆಂಗ್ ಒಟ್ಟಾದ್ರಿ !!" ಎಂದು ಎದುರು ನೋಡಿ ಹೇಳಿದ್ದಳು. ಮತ್ತೆ ಪತ್ರ ಓದುವುದನ್ನು ಮುಂದುವರೆಸಿದ್ದಳು.
" ಅವಳು ಆ ಚಿತ್ರಗಳನ್ನು ಬಿಡಿಸುವಾಗ ಅವಳಿಗೆ 20,21 ವರ್ಷ,ಇನ್ನು ಕೆಲವು ಚಿತ್ರಗಳು ಅವಳನ್ನು ನಾನು ಮದುವೆ ಆದಮೇಲೆ ಅವಳು ಬಿಡಿಸಿದ್ದು. ಸುಮಾರು 27ರ ಪ್ರಾಯದಲ್ಲಿ. ಡಿಗ್ರಿ ಓದುವಾಗ ಇಂತಹ ಎಷ್ಟೋ ಚಿತ್ರಗಳನ್ನು ಅವಳು ನನಗೆ ಬಿಡಿಸಿ ಕಳುಹಿಸುತ್ತಿದ್ದಳು,ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಎಲ್ಲರಿಗೂ ಚಿತ್ರದಲ್ಲಿರುವುದು ನಾನೇ ಎಂದು ಗೊತ್ತಾಗಿ ಎಲ್ಲರೂ ನನ್ನನ್ನು ಹೀಯಾಳಿಸುತ್ತಿದ್ದರು. ಎಲ್ಲಾ ನಾವಿಬ್ಬರು ಪ್ರೇಮಿಗಳು ಎಂದುಕೊಂಡಿದ್ದರು. ಅವಳ ಈ ಮಕ್ಕಳಂತ ವರ್ತನೆ ನನಗೆ ಕೋಪ ತರಿಸುತ್ತಿತ್ತು. ಅವಳು ಮಾನಸಿಕ ಅಸ್ವಸ್ಥೆಯಿರಬೇಕು ಎನ್ನುವಷ್ಟರ ಮಟ್ಟಿಗೆ ನನಗೆ ನನ್ನ ಸ್ನೇಹಿತರಿಗೆ ಅವಳ ಬಗ್ಗೆ ಭಾವನೆ ಮೂಡಿತ್ತು.ಅವಳು ಕಲ್ಪನಾಪ್ರಪಂಚದಲ್ಲಿ ನನ್ನೊಡನೆ ಪ್ರೀತಿಯಲ್ಲಿದ್ದಳು. ಆ ಪ್ರಪಂಚದಲ್ಲಿ ನಾನೂ ಅವಳನ್ನು ಪ್ರೀತಿಸುತ್ತಿದ್ದೆ. ಆದರೆ ಅಲ್ಲಿ ನಾನು ಅವಳು ಬಯಸುವ ಗುಣದ ಹುಡುಗನಾಗಿದ್ದೆ. ನಿಜದಲ್ಲಿ ನಾನೊಬ್ಬ ಪ್ರಾಕ್ಟಿಕಲ್ ವ್ಯಕ್ತಿ ಎಂಬುದನ್ನು ತಿಳಿಯುವುದು ಅವಳಿಗೆ ಬೇಕಿರಲಿಲ್ಲ. ಅವಳು ಕನಸಿನ ಲೋಕದಲ್ಲಿ ಮುಳುಗಿದ್ದಳು. ಅಲ್ಲಿರುವ ನಾನು ನಾನಲ್ಲ ಎಂಬುದನ್ನು ತಿಳಿಸಿದರೂ ಕೇಳುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅವಳು ಇನ್ನೂ ನನಗೆ ಬರೆದ ಕವಿತೆಗಳು,ಪತ್ರಗಳು, ನನ್ನ ನೈಜ ಚಿತ್ರಗಳು, ವ್ಯಾಲೆಂಟೈನ್ ಗಿಫ್ಟ್ಗಳು ಕೆಲವು ನಿನ್ನ ಮಂಚದ ಕೆಳಗಿರುವ ದೊಡ್ಡ ಬಾಕ್ಸ್ ನಲ್ಲಿದೆ. ಇನ್ನು ಹಲವು ನನ್ನ ಬಳಿ ಇದೆ.ಅವಳು ನನಗೆ ನೀಡಿದ, ಮಾಡಿದ ಉಡುಗೊರೆಗಳಿಗೆ ಲೆಕ್ಕವಿಲ್ಲ. ಕೇರಳದಿಂದ ಅಷ್ಟು ವರ್ಷದ ಮೇಲೆ ಬಂದರೂ ಅವಳ ಹೃದಯದಲ್ಲಿನ ನನ್ನ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ನಾನು ಅಲ್ಲಿಯವರೆಗೆ ಬಹಳ ಹುಡುಗಿಯರ ಜೊತೆ ಸ್ನೇಹ ಸಲಿಗೆ ಬೆಳೆಸಿದ್ದೆ. ಆದರೆ ಅದ್ಯಾವುದೂ ಇಲ್ಲದೆ ಅವಳು ನನಗಾಗಿ ಕಾದು ಕುಳಿತಿದ್ದಳು. ಅವಳ ಮೇಲೆ ಕರುಣೆ ಬಂದು ಎಲ್ಲಿ ಈ ಹಠವನ್ನು ಮುಂದುವರಿಸಿ ಬಾಳು ಹಾಳುಮಾಡಿಕೊಳ್ಳುತ್ತಾಳೋ ಎಂದು ಅವಳನ್ನು ಮದುವೆಯಾಗಲು ಒಪ್ಪಿದ್ದೆ. ನಾನು ಪ್ರೀತಿಸಿದ ಹುಡುಗಿಗೂ ಅದೇ ವರ್ಷ ಮದುವೆಯಾಗಿತ್ತು. ಎಲ್ಲೋ ನನ್ನ ಒಳಮನಸು ಪ್ರೀತಿ ಬಯಸಿಯೇ ಅವಳ ಬಳಿ ಬಂದಿತ್ತಾ? ಗೊತ್ತಿಲ್ಲ. ಕನ್ನಡ ಸಂಪ್ರದಾಯ ಮತ್ತು ಮಲಯಾಳಿ ಸಂಪ್ರದಾಯ ಒಗ್ಗೂಡಿ ನಮ್ಮ ವಿವಾಹ ವಿಜೃಂಭಣೆಯಿಂದ ನಡೆದಿತ್ತು. ಮದುವೆಯ ಇಡೀ ಸಮಾರಂಭದಲ್ಲಿ ನಿನ್ನಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೇರಳದ ಮಧುಮಗಳಂತೆ ಅಲಂಕೃತಗೊಂಡ ನಿನ್ನಮ್ಮ ದೇವಲೋಕದ ಅಪ್ಸರೆಯ ರೀತಿ ಕಾಣಿಸ್ತಾ ಇದ್ಳು.ಕಾಲೇಜ್ನಲ್ಲಿ ಇರ್ಬೇಕಾದ್ರೆ ಅವಳಿಗೆ ಗೊತ್ತಾಗದ ರೀತಿಯಲ್ಲಿ ಕದ್ದು ಅವಳನ್ನ ನೋಡ್ತಾ ಇದ್ದೆ.ಆವತ್ತು ಮಾತ್ರ ಅವಳ ನೋಡ್ತಾ ಮೈಮರೆತಿದ್ದೆ.ನನ್ ಕಣ್ಣಲ್ಲಿ ಅವ್ಳಗಿರೋ ಆಕರ್ಷಣೆ ನೋಡಿ ನಿನ್ನಮ್ಮನ್ ಮುಖ ಪೂರ್ತಿ ಖುಷಿಯಿಂದ ಅರಳಿತ್ತು. ಹದಿಹರೆಯದಲ್ಲಿ ಹೂವಿನ ಹಾಗೆ ಇರೋ ಅವಳನ್ನ ಆಗ್ಲೇ ಒಪಿಕೊಂಡಿದ್ರೆ ಆ ವಯಸ್ಸಲ್ಲಿ ಅವಳಿಗೆ ಬೇಕಾದ ಪ್ರೀತಿ ಸಿಗ್ತಿತ್ತು. ಆದ್ರೆ ನಿನ್ನಚ್ಚ ನಿನ್ನಮ್ಮನ್ ಜೀವನದ ಒಂದು ಹಂತಾನಾ ದುಃಖಕ್ಕೆ ದೂಡಿದ್ದ.
ಅವಳು ನನ್ ಬಾಳಸಂಗಾತಿ ಆದಮೇಲಾದ್ರು ಅವಳಿಗೆ ಅವಳು ಬಯಸುವಷ್ಟು ಪ್ರೀತಿ ನೀಡೋದು ನನ್ನ ಕರ್ತವ್ಯ ಆಗಿತ್ತು. ಆದ್ರೆ ನಾನ್ ಅದನ್ನೂ ಮಾಡ್ಲಿಲ್ಲ. ಮುಂಚೆಯಿಂದಲೂ ನಾವಿಬ್ರು ಒಂಥರಾ ಒಪೊಸಿಟ್. ಅವ್ಳು ಭಾವನಾಜೀವಿ, ರೋಮ್ಯಾಂಟಿಕ್, ಒಂದು ದಿನಾನೂ ನನ್ನ ಪ್ರೀತ್ಸೋದು ಕಡಿಮೆ ಮಾಡ್ತಾ ಇರ್ಲಿಲ್ಲ. ಎಲ್ಲೇ ಇದ್ರು ನನ್ ಕೈ ಹಿಡ್ಕೊಳ್ಳೋಳು. ನಾನ್ ಆಫೀಸಿನಿಂದ ಬಂದಾಗ ರುಚಿ ರುಚಿ ಅಡುಗೆ ಮಾಡೋಳು. ನನ್ ಎಲ್ಲಾ ಕೆಲಸ ಮಾಡೋಳು.ನಂಗಿದೆಲ್ಲ ಓವರ್ ಅನಿಸ್ತಿತ್ತು. ಸ್ಕೂಲ್ನಿಂದ ಹಿಡಿದು ಜೀವನದಲ್ಲಿ ನಾನ್ ಎಷ್ಟು ಹುಡ್ಗಿರ್ನ ಪ್ರೀತ್ಸಿದ್ದೆ ಅವರೆಲ್ಲ ನನ್ನ ಬಳಸ್ಕೊಂಡು ಪ್ರೀತಿ ಸ್ನೇಹದ ನಾಟಕ ಆಡಿದ್ರು. ಅದಿಕ್ಕೆ ಯಾರ್ ಮೇಲೂ ನಂಬಿಕೆ ಇರ್ಲಿಲ್ಲ. ಮದುವೆ ಆದ್ಮೇಲೆ ನಾವು ಉಡುಪಿಯಲ್ಲೇ ಸೆಟ್ಲ್ ಆದ್ವಿ.
ನಿನ್ನಮ್ಮ ನನ್ನ ಪ್ರೀತಿಸೋ ರೀತಿ ನೋಡಿ ನಿನ್ ಮುತ್ತಚ್ಚ ಮುತ್ತಸ್ಸಿ ಅವಳ್ನ ತುಂಬಾ ಇಷ್ಟ ಪಡ್ತಿದ್ರು. ಆದ್ರೆ ನನಗ್ ಮಾತ್ರ ಕಿರಿಕಿರಿ ಆಗ್ತಿತ್ತು. ಬಿಸಿನೆಸ್ ಟ್ರಿಪ್ಸ್ಗೆ ನಿನ್ನಮ್ಮ ನನ್ನನ್ನ ಹೋಗಕ್ಕೆ ಬಿಡ್ತಾ ಇರ್ಲಿಲ್ಲ.ಅವಳಿಗೆ ನನ್ನ ಬಿಟ್ಟಿರಕ್ಕೆ ಆಗ್ತಾ ಇರ್ಲಿಲ್ಲ. ನಾನು ಎಲ್ಲರ ಜೊತೆ ಬೆರೆತು ಫ್ರೆಂಡ್ಲಿ ಆಗಿರೋದು ಅವ್ಳಿಗ್ ಇಷ್ಟ ಆಗ್ತಾ ಇರ್ಲಿಲ್ಲ. ಹೆಚ್ಚಾಗಿ ನನ್ ಫೀಮೇಲ್ ಕಲೀಗ್ಸ್ ಜೊತೆ ನಾನ್ ಸಲಿಗೆಯಲ್ಲಿರೋದನ್ನ ಅವ್ಳಿಗ್ ನೋಡಕ್ ಆಗ್ತಾ ಇರ್ಲಿಲ್ಲ. ಅವ್ಳಿಗ್ ಹೆಚ್ಚು ಸ್ನೇಹಿತರಿರಲ್ಲ. ಅವ್ಳಿಗ್ ಪ್ರತಿ ಕ್ಷಣ ನನ್ ಜೊತೆ ನನಿಗೆ ಅಂಟಿಕೊಂಡಿರಬೇಕು ಅಂತ ಆಸೆ. ಈ ವಿಷಯದಲ್ಲಿ ಜಗಳ ಶುರು ಆಯ್ತು. ಅವಳ ಪ್ರೀತಿ ನನಗೆ ಅತೀ ಎನಿಸಿತ್ತು.
ಎಷ್ಟೋ ಸಲ ಒಬ್ಬನೇ ಬೈಕ್ನಲ್ಲಿ ಹೈ ಸ್ಪೀಡ್ನಲ್ಲಿ ಎಲ್ಲೆಲ್ಲೋ ಕೋಪದಲ್ಲಿ ಸುತ್ತುತ್ತಾ ಇದ್ದೆ. ಒಬ್ಬನೇ ಎಲ್ಲೋ ಕುತ್ಕೊಂಡು ಒಂಟಿತನ ಅನುಭವಿಸ್ತಾ ಇದ್ದೆ. ಎಷ್ಟೋ ಹುಡ್ಗಿರ್ನ ಪ್ರೀತಿಸಿ ಸೋತು ಮತ್ತೆ ಪ್ರೀತಿ ಪದದ ಅರ್ಥ ತಿಳಿಯಕ್ಕಾಗ್ಲಿಲ್ಲ. ನಾನ್ ಬಯಸೋ ತರಹ ಪ್ರಬುಧ್ದ ಮನಸ್ಥಿತಿ ನಿನ್ನಮ್ಮನಿಗೆ ಇರ್ಲಿಲ್ಲ. ಮಕ್ಕಳ ಹಾಗೆ ವರ್ತಿಸುತ್ತಿದ್ಲು. ಡಿಸ್ನಿ ಮೂವೀಸ್ ನೋಡೋದು.ಅದ್ರಲ್ಲಿರೋ ರಾಣಿ ತರಹ ಅವಳ ಚಿತ್ರ ಬಿಡಿಸೋದು ನನ್ನನ್ನ ರಾಜನ್ ತರಹ ಬಿಡ್ಸೋದು. ಅವ್ಳಿಗೆ ಪ್ರೀತಿ ಬಿಟ್ಟು ಬೇರೇನೂ ಗೊತ್ತಿಲ್ಲ. ಒಂಥರ ಅವ್ಳಿಗ್ ನನ್ ಹುಚ್ಚು. ನನ್ನ ಪುಟ್ಟ ಮಗು ಥರ ನೋಡ್ಕೋತಾ ಇದ್ಳು. ನನ್ನ ಮುದ್ದು ಮಾಡಿದಷ್ಟೂ ಅವ್ಳಿಗ್ ಸಾಲ್ತಾ ಇರ್ಲಿಲ್ಲ.
ಒಂದು ಮಗು ಆದ್ಮೇಲೆ ಸರಿ ಹೋಗ್ತಾಳೆ ಅಂತ ನಿನ್ನ ಈ ಪ್ರಪಂಚಕ್ಕೆ ತರಲು ನಾನ್ ನಿರ್ಧರಿಸಿದೆ.ಆದ್ರೇ ನಿನ್ನಮ್ಮ ನಮ್ಮಿಬ್ರ ಪ್ರೀತಿಗೆ ನೀನ್ ಅಡ್ಡಿಯಾಗ್ತೀಯಾ ಅಂದ್ಳು. 28ರ ಪ್ರಾಯದಲ್ಲೂ ತಾಯಿಯಾಗುವ ಬಯಕೆ ಅವಳ ಮನಸ್ನಲ್ಲಿರಲಿಲ್ಲ.ಅವ್ಳಿಗ್ ನಾನೆ ಅವಳ ಮಗು.ನಾನೇ ಸರ್ವಸ್ವ. ನಮ್ಮಿಬ್ರ ನಡುವೆ ನೀನ್ ಬಂದ್ರೆ ಎಲ್ಲಿ ನಾನ್ ಅವಳಿಂದ ದೂರ ಆಗ್ಬಿಟ್ರೆ ಅನ್ನೋ ಭಯ.
ಆದ್ರೂ ಅವಳು ಗರ್ಭಿಣಿಯಾದಾಗ ಅವಳ್ನ ಬಹಳ ಪ್ರೀತಿಯಿಂದ ನೋಡ್ಕೊಂಡೆ. ಹೊಟ್ಟೇಲಿ ಇರೋ ನಿನ್ ಮೇಲೆ ಒಳ್ಳೆ ಪ್ರಭಾವ ಬೀರ್ಲಿ ಅಂತ.ಅಂತೂ ಇಂತೂ ನೀನ್ ಹುಟ್ದೆ.ಆಸ್ಪತ್ರೆಯಲ್ಲಿ ನಿನ್ನನ್ನ ಪ್ರೀತಿಯಿಂದ ಅವಳ ಕೈಗೆ ಕೊಟ್ಟಾಗ ನಿನ್ನ ತಲೆ ಸವರಿ ನನ್ ಕೆನ್ನೆಗೆ ಅವಳಧರ ಒತ್ತಿದ್ಲು. ನರ್ಸ್ ಮುಗುಳುನಕ್ಕು ಹೊರಗೆ ಹೋಗಿದ್ಲು. ನಂತರ ನಿನ್ನ ಹಣೆಗೆ ಒಂದು ಪುಟ್ಟ ಮುತ್ತು ಒತ್ತಿದ್ಲು.
ನೀನ್ ಬೆಳೀತಾ ನಮಗೂ ಜವಾಬ್ದಾರಿ ಹೆಚ್ಚಾಯ್ತು. ಆದ್ರೂ ನಿನ್ ಅಮ್ಮನಿಗೆ ನನ್ ಮೇಲಿರೋ ಪ್ರೀತಿ, ಹುಚ್ಚು ಕಡಿಮೆ ಆಗ್ಲಿಲ್ಲ. ನಿನ್ನಮ್ಮ ನಿನಗೆ ಒಂದು ಮುತ್ತು ಕೊಟ್ರೆ, ನಂಗೆ ಮೂರು ಕೊಡೋಳು. ನಿನ್ನನ್ನ ಎಷ್ಟು ಮುದ್ದು ಮಾಡ್ತಾ ಇದ್ದಳೋ ಅದಕ್ಕೆ ದುಪಟ್ಟು ನನ್ನ ಮುದ್ದು ಮಾಡ್ತಾ ಇದ್ಳು. ಅವಳು ವರ್ತಿಸ್ತಾ ಇದ್ದ ರೀತಿ ನೋಡಿ ನಿನ್ ಮೇಲೆ ಅವ್ಳಿಗ್ ಪ್ರೀತಿಯಿಲ್ಲ ಅನ್ನಿಸ್ತಾ ಇತ್ತು. ನಾನು ಮಾತ್ರ ನಿನ್ನನ್ನ ತುಂಬಾ ಹಂಚ್ಕೊಂಡಿದ್ದೆ.
ನಾನು ನಿನ್ ಅಮ್ಮನ್ನ ಪ್ರೀತಿಸ್ತಿದ್ದೆನಾ ಇಲ್ಲವಾ !!ಬಹುಶ ಇಲ್ಲ. ನೀನ್ ಹುಟ್ಟಿದ್ಮೇಲೆ ನಾನ್ ಯಾವಾಗ್ಲೂ ನಿನ್ ಪ್ರೀತಿಲೇ ತಲ್ಲೀನ ಆದೆ. ಅವ್ಳಿಗೆ ದೂರ ಆದೇ. ಎಷ್ಟೋ ಸಲ ಸ್ನೇಹಿತರ ಜೊತೆ ಕಾಲ ಕಳೀತಾ ಇದ್ದೆ. ನಿನ್ನಮ್ಮನ್ನ ಕಂಪ್ಲೀಟ್ ನೆಗ್ಲೆಕ್ಟ್ ಮಾಡ್ಬಿಟ್ಟೆ. ಅವಳ ಹುಚ್ಚು ಪ್ರೀತಿ ಟಾರ್ಚರ್ ಆಗಿತ್ತು. ಯಾವತ್ತೂ ನಾನವ್ಳ್ನ ಪ್ರೀತಿಸ್ಲಿಲ್ಲ. ನಂಗೆ ಅವ್ಳಮೇಲೆ ಅನುಮಾನ. ಅವ್ಳಒಂತರ ವಿಚಿತ್ರ. ಯಾಕ್ ಇಷ್ಟೊಂದು ಪ್ರೀತಿಸ್ತಾಳೆ. ಇದು ನಿಜಾನಾ !ಅನ್ನಿಸ್ತಾ ಇತ್ತು. ಅವ್ಳಿಗ್ ಬೇರೆ ಯಾರ್ ಮೇಲೂ ಮೋಹನೂ ಇರ್ಲಿಲ್ಲ. ನಿನ್ನ ಬಿಟ್ಟು ಜಗತ್ನಲ್ಲಿರೋ ಎಲ್ಲಾ ಹುಡುಗ್ರು ನಂಗೆ ಅಣ್ಣತಮ್ಮಂದಿರು ಅಂತಿದ್ಲು. ಗಂಡು ಆದ್ರೆ ಜೀವನದಲ್ಲಿ ಮೊಹಿಸೋ, ಪ್ರೀತಿಸೋ ಹುಡ್ಗಿರ್ಗೆ ಲೆಕ್ಕಾನೇ ಇರಲ್ಲ.
ನಿನ್ನ ಅಮ್ಮ 30 ದಾಟಿದ್ದಳು. ಸಹಜವಾಗಿಯೋ ದುಃಖದಿಂದಲೋ ಅಂದ ದಿನೇ ದಿನೇ ಕ್ಷೀಣಿಸುತ್ತಾ ಇತ್ತು. ನಾನು ಎಂದಿನಂತೆ ಹೆಚ್ಚಾಗಿ ಹೊರಗಡೆ ಇರೋನು. ಬಿಸಿನೆಸ್ ಟ್ರಿಪ್ಸ್ ಅಂತಾ ಎಲ್ಲೆಲ್ಲೋ ಹೋಗೋನು. ಇವ್ಳ್ ಎಷ್ಟೋ ಸಲ ಬಿಸಿನೆಸ್ ಟ್ರಿಪ್ಸಿಗ್ ಹೋಗೋ ಹಿಂದಿನ ರಾತ್ರಿ ನನ್ನ ಗಟ್ಟಿಯಾಗಿ ಹಿಟ್ಕೊಂಡು ಅಳೋಳು. ಕೆನ್ನೆಗೆ ಒತ್ತಿ ಒತ್ತಿ ಮುತ್ತಿಡೋಳು. ಎಷ್ಟೋ ಸಲ "ಸುಮ್ನೆ ಮಲ್ಕೋ !!ನಾಟಕ ಆಡ್ಬೇಡ !!" ಅಂತಾ ಬೈತಾ ಇದ್ದೆ. ದಿನಕಳೆದಂತೆ ನಮ್ಮ ಮಾತು ಕಡಿಮೆ ಆಯ್ತು. ಎಷ್ಟೋ ಸಲ ಮಲ್ಪೆ ಬೀಚಿಗೆ ನಿನ್ನ ಕರ್ಕೊಂಡು ಹೋದಾಗ ಏನೋ ಮಾತಾಡೋಕೆ ಕೈ ಹಿಡಿದು ಚಡಪಡಿಸೋಳು. ನಂಗೆ ಅಲ್ಲಿ ಮುಜುಗರ ಅನ್ನಿಸ್ತಿತ್ತು. ಜನ ಇದ್ದಾರೆ ಅಂತಾ ನೋಡದೆ ನನ್ನ ಹೆಗಲ ಮೇಲೆ ತಲೆ ಇಟ್ಟು ಗಟ್ಟಿಯಾಗಿ ನನ್ನ ಕೈ ಹಿಡ್ಕೊಳೋಳು.ಎಲ್ಲಾ ನಮ್ಮನ್ನೇ ನೋಡ್ತಾ ಇದ್ರು. ಅವ್ಳಿಗೆ ನನ್ ಹತ್ರ ಹೇಳೋಕ್ ಇರೋ ಮಾತುಗಳೆಲ್ಲ ಹೃದಯದಲ್ಲೇ ಉಳಿದಿತ್ತು.ಎಲ್ಲಾ ಅವಳ ಡೈರಿಯಲ್ಲಿ ಬರೀತಾ ಇದ್ಳು. ಆ ಡೈರಿ ಕೂಡ ಆ ಬಾಕ್ಸ್ನಲ್ಲಿದೆ. ಹೀಗೆ ನಾನು ಅವಳ ಹತ್ರಾನೇ ಇದ್ದು ಅವಳಿಂದ ದೂರ ಆಗ್ತಾ ಹೋದೆ.ಯಾವತ್ತೂ ಅವಳು ನಾನು ಇಷ್ಟ ಪಡೋ ರೀತಿ ಮಾಡ್ರನ್ ಹುಡುಗಿ ಆಗಿರಲಿಲ್ಲ. ಆಗ ಆಫೀಸ್ನಲ್ಲಿ ಇನ್ನೊಬ್ಬ 24ರ ಪ್ರಾಯದ ಹುಡುಗಿಯ ಪರಿಚಯವಾಗಿತ್ತು. ನನಗಾಗ 32 ವರ್ಷ. ಅವಳ ಜೊತೆ ಬಹಳ ಆತ್ಮೀಯ ಸ್ನೇಹಿತನಾಗಿದ್ದೆ. ಅದಲ್ಲದೆ ಅವಳು ನಾನು ಯಾವ ರೀತಿ ನನ್ನನ್ನು ಅರ್ಥ ಮಾಡಿಕೊಳ್ಳುವ ಮಾಡ್ರನ್ ಹುಡುಗಿ ಬೇಕೆಂದುಕೊಂಡಿದ್ದೇನೋ ಹಾಗೇ ಗುಣ ಹೊಂದಿದ್ದಳು. ನನಗವಳ ಮೇಲೆ ಅವಳಿಗೂ ನನ್ನ ಮೇಲೆ ಆಕರ್ಷಣೆ ಮೂಡಿತ್ತು. ಅವಳು ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು "
ಅಕ್ಷರ ಓದುತ್ತಾ ಇನ್ನಷ್ಟು ಗಂಭೀರವಾಗಿದ್ದಳು. ಬಾಕ್ಸ್ ತೆಗೆದು ಅವಳಮ್ಮ ಅವಳಚ್ಚನಿಗೆ ನೀಡಿದ ಎಲ್ಲಾ ಗಿಫ್ಟ್, ಬರೆದ ಪತ್ರಗಳನ್ನು ನೋಡಿ ಆಶ್ಚರ್ಯಗೊಂಡಿದ್ದಳು.ಮತ್ತೆ ಪತ್ರ ಓದುವುದನ್ನು ಮುಂದುವರೆಸಿದ್ದಳು.
"ಆವತ್ತು ನನ್ ಹುಟ್ಟಿದ್ ಹಬ್ಬ. ಬೆಳ್ಳಿಗ್ಗೆ ಎದ್ದವಳೇ ನನ್ನ ಹಣೆಗೆ ಮುತ್ತಿನ ಸುರಿಮಳೆ ಸುರಿಸಿದ್ದಳು. "ಹ್ಯಾಪಿ ಬರ್ತ್ಡೇ "ಅಂತಾ ಕೆನ್ನೆಗೂ ಮುತ್ತಿಕ್ಕಿದ್ದಳು. ನಿನಗೆ ಆಗ ಮೂರು ವರ್ಷ. ಪುಟ್ಟ ಕೈಗಳಿಂದ ನನ್ನ ಕೆನ್ನೆ ಹಿಡಿದು ಮುತ್ತಿಟ್ಟಿದ್ದೆ ನಿಮ್ಮಿಬ್ಬರ ಮುತ್ತು ನನ್ನ ಮುಖವನ್ನ ಮುತ್ತಿಕ್ಕಿತ್ತು. ಏನೋ ಅಂದು ನಿಮ್ಮಿಬ್ಬರಿಂದ ಮುತ್ತು ಪಡೆಯುವ ಆ ಕ್ಷಣ ಬಹಳ ಸಂತೋಷಗೊಂಡಿದ್ದೆ. ಯಾಕೋ ನಿನ್ನಮ್ಮನಿಗೆ "ಇವತ್ತು ಹೊರಗಡೆ ಸುತ್ತಾಡಿ ಬರುವ "ಎಂದಿದ್ದೆ.ನಿನ್ನಮ್ಮನಿಗೆ ಬಹಳ ಖುಷಿ ಆಗಿತ್ತು. ಬೇಗ ನಿನಗೆ ಕೆಂಪು ಬಣ್ಣದ ಫ್ರಾಕ್ ಹಾಕಿ. ಅವಳೂ ಕೆಂಪು ಸೀರೆ ಉಟ್ಟಿದ್ದಳು. ನಿನ್ನಮನಿಗೆ ರೆಡ್ ಕಲರ್ ಇಷ್ಟ. ನಾನೂ ಕೆಂಪು ಶರ್ಟ್ ಧರಿಸಿದ್ದೆ. ಕಿವಿಯೋಲೆ ಹಾಕುತ್ತಾ ನನ್ನನ್ನು ನೋಡಿ ಮುಗುಳುನಕ್ಕಿದ್ದಳು.ನಾನೂ ಯಾಕೋ ಏನೋ ನಕ್ಕಿದ್ದೆ.ನಿನ್ನಮ್ಮ ಅಂದು ಬಹಳ ಮುದ್ದಾಗಿ ಕಾಣಿಸ್ತಾ ಇದ್ಳು . ಯಾಕೋ ಅವಳನ್ನು ಪ್ರೀತಿಯಿಂದ ಹಿಂದೆಯಿಂದ ತಬ್ಬಿದ್ದೆ. ಆ ಆಲಿಂಗನ ಸವಿಯದೆ ಎಷ್ಟು ದಿನವಾಗಿತ್ತೋ ಅವಳ ಬಟ್ಟಲು ಕಂಗಳಿಂದ ನೀರು ಹರಿದಿತ್ತು. ನಂತರದ ಅವಳ ನೋಟಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ.
"ಸರಿ ಬಾ ಹೋಗೋಣ !" ಎಂದು ದೂರ ಸರಿದಿದ್ದೆ. ಹೊರಗೆ ಬಂದು ಮುದ್ದಾದ ನಿನ್ನ ಎತ್ತಿ ಹಿಡಿದಿದ್ದೆ. ಯಾರೋ ಬೆಲ್ ಬಡಿದಿದ್ದರು.ನಿನ್ನನ್ನು ಕೆಳಗಿಳಿಸಿ,
"ಏಯ್ !ಮಗೂ ನೋಡ್ಕೋ " ಅಂತಾ ಹೇಳಿ ಕೆಳಗೆ ನಡೆದಿದ್ದೆ.
ಅವಳು "ಆಯ್ತು !!" ಅಂತಾ ಹೇಳಿದ್ದಳು.
ನನಗೆ ಯಾರೋ ಉಡುಗೊರೆ ಕಳಿಸಿದ್ದರು. ನನ್ನ ಸ್ನೇಹಿತೆ ಕಳಿಸಿರಬೇಕು ಎಂದು ಮುಗುಳುನಗುತ್ತಾ ಒಳಗೆ ನಡೆದು ಬಂದಿದ್ದೆ. ನಿನ್ನಮ್ಮ ನಿನ್ನನ್ನು ಮೆಟ್ಟಿಲಿನಿಂದ ಕೆಳಕ್ಕೆ ಕೈಯಲ್ಲಿ ಹಿಡಿದು ಬರುತ್ತಿದ್ದಳು. ನೀನು ಮೆಟ್ಟಿಲಲ್ಲಿ ನೀನೆ ನಡೆಯುತ್ತೀಯ ಎಂದು ಜೋರಾಗಿ ಅಳುತ್ತಾ ಹಠ ಮಾಡುತ್ತಿದ್ದೆ. ಆದರೂ ಅವಳು ಕೆಳಗೆ ಬಿಡಲಿಲ್ಲ. ನಾನು ಸ್ನೇಹಿತೆ ಕಳಿಸಿದ ಗಿಫ್ಟ್ ತೆರೆಯುತ್ತಾ ಇದ್ದೆ. ಮುಂದೆ ಏನಾಗಲಿತ್ತೋ ಆ ದೇವರು ನನಗೆ ಮುನ್ಸೂಚನೆ ನೀಡಲಿಲ್ಲ. ಕೆಳಗೆ ನಿನ್ನನ್ನು ಹಿಡಿದು ಬರುತ್ತಿದ್ದ ನಿನ್ನಮ್ಮನನ್ನು ಹಠ ಮಾಡುತ್ತಿದ್ದ ನಿನ್ನನ್ನು ಗಮನಿಸುತ್ತ ಗಿಫ್ಟ್ ತೆಗುಯುವುದರಲ್ಲಿ ಮಗ್ನನಾದ ಪಾಪಿಯಾದೆ."
ಅಕ್ಷರಾ ಹೃದಯದಲ್ಲಿ ಏನೋ ತಳಮಳ.ಇನ್ನಷ್ಟು ಗಂಭೀರವಾಗಿ ಮುಂದಿನ ಸಾಲುಗಳನ್ನು ಓದಿದಳು.
" ನಿನ್ನಮ್ಮ ನಿನ್ನನ್ನು ಹಿಡಿದು ಇನ್ನೇನು 5-6 ಮೆಟ್ಟಿಲು ಇರುವಾಗ, ನೀನು ಅವಳ ಪರಚಿ ಅವಳು ಸೀರೆಯಲ್ಲಿ ಹೈ ಹೀಲ್ ಎಡವಿ ನಿನ್ನ ಕೈ ಜಾರಿ ಬೀಳಿಸಿ ತಾನು ಸಹ ಬಿದ್ದಿದ್ದಳು.ಆದ್ರೆ ಅವಳಿಗೆ ಅಷ್ಟೇನೂ ಪೆಟ್ಟಾಗಲಿಲ್ಲ. ಪುಟ್ಟ 3ರ ಮಗುವಾಗಿದ್ದ ನೀನು ಬಿದ್ದ ರಭಸಕ್ಕೆ , ಮೈ ಕೈಗೆ ಏಟಾಗಿ, ತಲೆಗೆ ಏಟಾಗಿ ತುಂಬಾ ರಕ್ತ ಬಂದಿತ್ತು. ಒಂದು ಕ್ಷಣ ದಿಕ್ಕೇ ತೋಚದಂತಾಗಿ ಗಟ್ಟ್ಟಿಯಾಗಿ "ಪಾಪು "ಎಂದು ಕೂಗಿದ್ದೆ. ರಕ್ತ ನಿನ್ನ ತಲೆಯ ಸುತ್ತ ಹರಿದು ಆ ದೃಶ್ಯ ಭಯಾನಕವಾಗಿತ್ತು. ನೀನು ಪ್ರಜ್ಞೆ ತಪ್ಪಿದ್ದೆ. ನಿನ್ನಮ್ಮ ಕೂಡ ಜೋರಾಗಿ ಕಿರುಚಿ ಗಟ್ಟಿಯಾಗಿ ಅಳಲು ಶುರು ಮಾಡಿದ್ದಳು. ನಾನು ನಿನ್ನಮ್ಮನಿಗೆ ಬೈಯುತ್ತಾ, ಅವಳ ಕಪಾಳಕ್ಕೆ ಅಂದು ಎಷ್ಟು ಹೊಡೆದಿದ್ದೇನೋ.ಅವಳ ಬಾಯಿಯಲ್ಲಿ ರಕ್ತ ಬರುವಷ್ಟು ವಿಧಿಯಾಡಿದ ಆಟಕ್ಕೆ, ತಪ್ಪಿ ಆದ ಅಚಾತುರ್ಯಕ್ಕೆ ಅವಳಿಗೆ ಹೊಡೆದಿದ್ದೆ. ಆಂಬುಲೆನ್ಸ್ಗೆ ಕಾಲ್ ಮಾಡುವಾಗ ನಿನ್ನ ತಲೆಯಿಂದ ರಕ್ತ ಒರೆಸುತ್ತಾ ಅಳುತ್ತಾ ಹುಚ್ಚನಂತೆ ಕಿರುಚುತ್ತಾ,ದೇವರನ್ನು ಬೇಡುತ್ತಾ ನಿನ್ನಮ್ಮನ ಜುಟ್ಟು ಹಿಡಿದು ಎಳೆದಾಡಿ ಇನ್ನಷ್ಟು ಕಪಾಳಕ್ಕೆ, ಬೆನ್ನಿಗೆ ಬಡಿದೆ.ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಂದು ನಿನ್ನನ್ನು ಮಣಿಪಾಲದಲ್ಲಿರುವ ಆಸ್ಪತ್ರೆಗೆ ಸೇರಿಸಿದೆವು.ಆಸ್ಪತ್ರೆಗೆ ಹೋಗುವ ಮಾರ್ಗದುದ್ದಕ್ಕೂ ನೀನು ಏಳಲಿಲ್ಲ. ನಿನ್ನನ್ನು ಕಳೆದುಕೊಂಡೆನೇನೋ ಎಂದು ಹುಚ್ಚನಂತೆ ಚೀರುತ್ತಾ ಮೊದಲೇ ಎಲ್ಲದಕ್ಕೂ ನಾನೇ ಹೊಣೆ ಎಂದು ದುಃಖದಲ್ಲಿ ಜೋರಾಗಿ ಅಳುತಿದ್ದ ನೀನಮ್ಮನಿಗೆ ಕೈ ನೋವಾಗುವಷ್ಟು ಹೊಡೆದಿದ್ದೆ.ಯಾವತ್ತೂ ಅವಳ ಮೇಲೆ ಕೈ ಮಾಡಿದವನಲ್ಲ. "ಹೀಲ್ ಚಪ್ಪಲಿ ಯಾಕೆ ನಿಂಗೆ? ಮಗುನಾ ಸಾಯಿಸ್ಬೇಕು ಅಂತಾನೆ ಅಂದ್ಕೊಂಡಿದ್ದೀಯ. !" ಅಂತಾ ಏನೇನೋ ಹೇಳಿ ಜುಟ್ಟು ಎಳೀತಾನೆ ಇದ್ದೆ. ನಿನ್ನ ಸ್ಥಿತಿ ಬಹಳ ಗಂಭೀರವಾಗಿತ್ತು.ನೀನು ಐ ಸಿ ಯು ನಲ್ಲಿ ಸಾವು ಬದುಕಿನ ನಡುವೆ ಒದ್ದಾಡ್ತಾ ಇದ್ದೆ. ನಿನ್ನನ್ನು ಬದುಕಿಸುವುದು ಕಷ್ಟ ಎಂದಾಗ ಹುಚ್ಚನ ರೀತಿ ಆಸ್ಪತ್ರೆಯಲ್ಲಿ ನೆಲಕ್ಕೆ ಬಿದ್ದು ತಲೆ ಒಡೆದುಕೊಂಡು ಅತ್ತಿದ್ದೆ. ನಿನ್ನಮ್ಮ ನನ್ನನ್ನು ತಬ್ಬುತ್ತ ಅಳುತ್ತಾ ಸಮಾಧಾನಿಸಲು ಯತ್ನಿಸುತ್ತಿದ್ದಳು.ನಿನ್ನ ಮುತ್ತಚ್ಚ ಮುತ್ತಸ್ಸಿ ವಿಷಯ ತಿಳಿದು ಕೇರಳದಿಂದ ಉಡುಪಿಗೆ ಅಂದೇ ಹೊರಡಿದರು. ರಾತ್ರಿವರೆಗೆ ಹೊಟ್ಟೆಗೆ ಒಂದು ಹನಿ ನೀರು ಹಾಕದೆ ನಾನೂ ನಿನ್ನಮ್ಮ ಗೋಳಾಡ್ತಾ ಇದ್ವಿ. ರಾತ್ರಿ 8ಗಂಟೆಗೆ ನಿನ್ನ ಮುತ್ತಚ್ಚ ಮುತ್ತಸ್ಸಿ ಬಂದಿದ್ದರು.
ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಡಾಕ್ಟರ್ ಮಗುವನ್ನು ಬದುಕಿಸುವುದು ಕಷ್ಟ. ಬದುಕುಳಿಯುವ ಚಾನ್ಸಸ್ ಕಡಿಮೆ ಎಂದಿದ್ದರು. ತಲೆಯ ಮೇಲೆ ಕೈಯಿಟ್ಟು ಗಟ್ಟಿ ಅಳುತ್ತಾ ನಿನ್ನಮ್ಮನನ್ನು ಕೋಪದಿಂದ ನೋಡಿದ್ದೆ. ಮತ್ತೆ ಹೋಗಿ ಅವಳ ಜುಟ್ಟು ಹಿಡಿದು,
" ಎಲ್ಲಿದೆ ಮೆಟ್ಲು, !" ಕಿರುಚಿದ್ದೆ. ಅವಳ ಜುಟ್ಟು ಹಿಡಿದೇ ಮೆಟ್ಟಿಲ ಬಳಿ ಎಳೆದುಕೊಂಡು ಹೋಗಿ ದೂಡಿದ್ದೆ.
"ನೀನ್ ಬಿದ್ ಸಾಯಿ, ನನ್ ಪಾಪು ಜೀವ ತೆಗೆದ್ಬಿಟ್ಟೆ ನೀನು. ನೀನೆ ಸಾಯ್ಸಲಿಕ್ ನೋಡಿದ್ದು ನನ್ ಮಗೂನಾ "
ಮೊದಲೇ ನನ್ನ ಕೈಯಿಂದ ಏಟು ತಿಂದಿದ್ದ ನಿನ್ನಮ್ಮನಿಗೆ ಬಿದ್ದು ಏಟಾಗಿತ್ತು. ನನ್ನನ್ನು ನಿನ್ನ ಮುತ್ತಚ್ಚ ಮುತ್ತಸ್ಸಿ ಸಮಾಧಾನಪಡಿಸಿದ್ದರು.
ಕುರ್ಚಿಯ ಮೇಲೆ ಮುಖಕ್ಕೆ ಕೈ ಹಿಡಿದು ಕೂತ ನನ್ನ ಕಾಲ ಬಳಿ ಬಂದು ನಿನ್ನಮ್ಮ ಕಣ್ಣೀರಿಟ್ಟಿದ್ದಳು.ಕೋಪದಲ್ಲಿ ಸಿಡಿಯುತ್ತಿದ್ದ ನಾನು ಮತ್ತೊಮ್ಮೆ ಅವಳ ಕೆನ್ನೆಗೆ ಬಡಿದಿದ್ದೆ. ನಿನ್ನ ಮುತ್ತಸ್ಸಿ " ಅವಳಿಗೆ ಹೊಡೀಬೇಡ್ವೊ !ಹೆತ್ತ ತಾಯಿ ಮಗೂನಾ ಸಾಯಿಸ್ತಾಳಾ? ಏನೋ ಕೆಟ್ಟ ಗಳಿಗೆ. ಏನೋ ಆಗೋಯಿತು.ದೇವರೇ ಕಾಪಾಡಪ್ಪಾ !"ಕಣ್ಣೀರಿಟ್ಟಿದ್ದಳು.
"ಯಾವತ್ತೂ ಮಗುನಾ ಪ್ರೀತಿಸ್ಲಿಲ್ಲ ಇವ್ಳು, ಮಗೂ ಮಾಡ್ಕೊಳ್ಳೋಣ ಅಂದಾಗ ನಮ್ ನಡುವೆ ಮಗೂ ಬರೋದು ಬೇಡ ಅಂದಿದ್ಲು. ಏಯ್ !!ನಿಂಗಿದೆ ಬೇಕಿತ್ತಾ !!ಹಾಳಾದೋಳೇ !!" ಕಿರುಚಾಡಿದ್ದೆ
"ಏನ್ ಮಾತಾಡ್ತಾ ಇದ್ದಿಯೊ ಆಕಾಶ್, ದೇವರಿದ್ದಾನೆ ಮಗ !ಏನೂ ಆಗಲ್ಲ, ಅವ್ಳಿಗೆ ಬೈಬೇಡ, ಎಷ್ಟ್ ಹೊಡಿದಿದ್ದೀಯ ಅವ್ಳಿಗೆ " ನಿನ್ನ ಮುತ್ತಸ್ಸಿ ನನಗೆ ಧೈರ್ಯ ಹೇಳಿದ್ದ್ದಳು.
ಕಾಲ ಮೇಲೆ ಅಳುತ್ತಾ ಮಲಗಿಕೊಂಡ ನಿನ್ನಮ್ಮನಿಗೆ " ಸಾಯಿ !ನೀನ್ ಸಾಯಿ ! ಹುಚ್ಚಿ ನೀನು ! ಜೀವನ, ಮಕ್ಳು ಜವಾಬ್ದಾರಿ ಯಾಕೆ ಬೇಕು ನಿಂಗೆ. ನಂಗಂಟೋಡ್ ಬಿಟ್ಟು ನಿಂಗೆ ಏನ್ ಗೊತ್ತು. ನನ್ ಪಾಪು ಬೇಕು ನಂಗೆ, ಯಾವತ್ತೂ ನಿನ್ನನ್ನ ನಾನ್ ಪ್ರೀತಿಸ್ಲಿಲ್ಲ. ಮನಸಿಲ್ಲದ್ ಮನಸಲ್ಲಿ ನೀನ್ ನಿನ್ ಬಾಳ್ ಹಾಳ್ ಮಾಡ್ಕೊತೀಯ ಅನ್ನೋ ಒಂದೇ ಕಾರಣಕ್ಕೆ ಪ್ರೀತಿ ಪ್ರೀತಿ ಅಂತಾ ಸಾಯೋ ನಿನ್ನಂತ ಹುಚ್ಚಿನಾ ಮದ್ವೆ ಆದೆ. ಸ್ವಲ್ಪನೂ ಜೀವನದಲ್ಲಿ ಸೇರಿಔಸ್ನೆಸ್ ಇಲ್ಲ ನಿಂಗೆ. ಮಗುನಾ ಸರಿಯಾಗ್ ಕಾಪಾಡಕ್ ಆಗ್ದೇ ಇರೋ ನೀನು ಒಬ್ಬ ಅಮ್ಮನ. ನಾನ್ ಮಾತ್ರ ಇಷ್ಟ ಅಲ್ಲ ನಿಂಗೆ. ನಾನ್ ಮಗುಗಿಂತ ಜಾಸ್ತಿ ಅಲ್ಲ ನಿಂಗೆ. ಯಾರಿಗ್ ಬೇಕು ನಿನ್ ಹುಚ್ಚು ಪ್ರೀತಿ. ನನ್ನ ಮಗುಗೆನಾದ್ರು ಆದ್ರೆ ಸಾಯಿಸ್ತೀನಿ ನಿನ್ನ "ಮತ್ತೆ ಜುಟ್ಟು ಹಿಡಿದು ಕಪಾಳಕ್ಕೆ ಬಾರಿಸಿದ್ದೆ. ನಿನ್ನ ಮುತ್ತಸ್ಸಿ ನನ್ನ ತಡೆದಿದ್ದರು.
ನಾವೆಲ್ಲಾ ಅಲ್ಲೇ ನೆಲದ ಮೇಲೆ ತಲೆಗೆ ಕೈ ಹಿಡಿದು ಕೂತಿದ್ವಿ. ನಿನ್ನಮ್ಮ ಕಾಣಲಿಲ್ಲ. ನಾನು ಸ್ವಲ್ಪನೂ ಕನಿಕರ ಪಡದೆ ಅಲ್ಲೇ ಕೂತುಕೊಂಡೆ. ಸ್ವಲ್ಪ ಹೊತ್ತಲ್ಲಿ ನರ್ಸ್ ಆಸ್ಪತ್ರೆಗೆ ಇನ್ನಷ್ಟು ಹಣ ಕಟ್ಟಬೇಕು ಎಂದರು. ನಿನ್ನನ್ನು ಆ ಸ್ಥಿಥಿಯಲ್ಲಿ ಬಿಟ್ಟು ನಾನೇ ಮನೆಗೆ ಹೋಗಿ ಹಣ ತರಬೇಕಾಗಿ ಬಂತು.ಬೇಗ ಮನೆಗೆ ಓಡಿದ್ದೆ. ಆದರೆ ಮನೆಯ ಬಾಗಿಲು ತೆಗೆದಿತ್ತು. ಒಳಗೆ ಬಂದು ನೋಡಿದಾಗ ನಿನ್ನಮ್ಮ ಊಟ ಮಾಡುತ್ತಿದ್ದಳು.ನನ್ನನ್ನು ನೋಡಿದವಳೇ ಒಮ್ಮೆಲೆ ಹೆದರಿದ್ದಳು.ಬೆಳಿಗ್ಗೆಯಿಂದ ನಾವಿಬ್ಬರೂ ಒಂದು ಹನಿ ನೀರೂ ಕುಡಿದಿರಲಿಲ್ಲ. ಏನೇ ಆದರೂ ನಿನ್ನನ್ನು ಆ ಸ್ಥಿಥಿಯಲ್ಲಿ ಬಿಟ್ಟು ಊಟ ಮಾಡುವಷ್ಟು ಹೊಟ್ಟೆ ಹಸಿದಿತ್ತಾ ಈ ಪಾಪಿಗೆ !" ಎಂದು ಕೆಂಡಾಮಂಡಲವಾಗಿದ್ದೆ. ಆದರೂ ಅವಳಿಗೆ ಬೈಯುವಷ್ಟು ಸಮಯ ಇರಲಿಲ್ಲ. ಅವಳನ್ನು ದುರುಗುಟ್ಟಿ ಕೋಣೆಗೆ ಹೋಗಿ ಬೀರುವಿನಲ್ಲಿದ್ದ ಹಣವನ್ನು ತೆಗೆದು ಅವಳನ್ನು ಕರೆಯದೆ ಸೀದಾ ಕಾರಿನಲ್ಲಿ ಆಸ್ಪತ್ರೆಯ ಕಡೆಗೆ ಹೊರಟಿದ್ದೆ.
ದಾರಿಯ ಮಧ್ಯ ಯಾಕೋ ನಿನ್ನಮ್ಮನ್ ನೆನಪಾಯಿತು. ಬೆಳಿಗ್ಗೆಯಿಂದ ಸಂಜೆಯ ವರೆಗೂ ನಾನು ಅವಳಿಗೆ ಹೊಡೆದದ್ದು, ಬೆಳಿಗ್ಗೆ ಅವಳು ನನ್ನ ಹಣೆಗೆ ಮುತ್ತಿಟ್ಟಿದ್ದು, ಕೆಂಪು ಸೀರೆಯಲ್ಲಿ ಅವಳು ನನಗೆ ಮುದ್ದಾಗಿ ಕಾಣಿಸಿದ್ದು, ನನಗೆ ಬರೆದ ಪತ್ರ, ನನ್ನನ್ನು ಪ್ರೀತಿಸಿದ ರೀತಿ ಎಲ್ಲಾ ನೆನಪಾಗಲು ಶುರುವಾಯಿತು. ನನ್ನ ಮನಸ್ಸು ನಿರಂತರವಾಗಿ ಅವಳನ್ನೇ ಯೋಚಿಸಲು ಶುರು ಮಾಡಿತು.ಆ ಸ್ಥಿತಿಯಲ್ಲಿ ನನ್ನ ಮನಸ್ಸು ಅವಳನ್ನು ನನ್ನ ಅನುಮತಿಯಿಲ್ಲದೆ ತಾನಾಗಿಯೇ ನೆನೆಪಿಸಿಕೊಳ್ಳುತ್ತಿರುವಂತೆ ನನಗನಿಸಿತ್ತು. "ಅವಳ ನೆನಪು ನನಗೆ ಯಾಕೆ ಆಗ್ತಾ ಇದೆ " ಅಂತಾ ಹೇಳಿದ್ದೆ.ಎದೆ ಢವ ಢವ ಹೊಡೆಯಲಾರಂಭಿಸಿತ್ತು. ಅವಳು ಊಟ ಮಡುತ್ತಿದ್ದಾಗ ನನ್ನ ನೋಡಿ ಹೆದರಿದ್ದು ನಾನು ಅವಳನ್ನು ದುರುಗುಟ್ಟಿ ಬಂದದ್ದು ನೆನಪಾಯಿತು. ಅವಳು ಯಾಕೆ ನನ್ನ ಜೊತೆ ಬರಲಿಲ್ಲ ಎಂದು ನನಗೆ ನಾನೇ ಪ್ರಶ್ನಿಸುತ್ತಿದ್ದ್ದ ನನ್ನ ಮೈಎಲ್ಲಾ ನಡುಗಲು ಶುರುವಾಗಿತ್ತು. ಕಾರನ್ನು ಹಿಂದಕ್ಕೆ ತಿರುಗಿಸಿದ್ದೆ.ಕಣ್ಣೀರು ಸುರಿಸುತ್ತ ಅವಳ ಹೆಸರನ್ನು ಕೂಗುತ್ತಾ ಮನೆಯ ಕಡೆ ಗಾಡಿ ಓಡಿಸಿ ಮನೆ ತಲುಪಿದ್ದೆ. ಅತ್ತ ನಾನು ಬರದ್ದನ್ನು ನೋಡಿ ಸ್ನೇಹಿತ ಕಿಶನ್ ಆಸ್ಪತ್ರೆಗೆ ಹಣ ಕಟ್ಟಿದ್ದ.
ನಾನು ಮನೆ ತಲುಪಿದಾಗ ಗಂಟೆ 10ರ ಸಮೀಪವಾಗಿತ್ತು. ಹುಚ್ಚನಂತೆ ದಿಗ್ಭ್ರಮೆಯುಂಟಾಗಿ ನಿನ್ನಮ್ಮನ ಹೆಸರು ಕರೆಯುತ್ತಾ ಕಣ್ಣೀರು ಸುರಿಸುತ್ತ ಡೈನಿಂಗ್ ಹಾಲ್ಲ್ಗೆ ಮತ್ತೆ ಬಂದಿದ್ದೆ. ಆದ್ರೆ ನಿನ್ನಮ್ಮ ಅಲ್ಲಿರಲಿಲ್ಲ. ಮನದ ತುಂಬಾ ಭಯ ಆವರಿಸಿ ಅವಳ ಹೆಸರು ಕೂಗುತ್ತಾ ನಮ್ಮ ಕೋಣೆಯತ್ತ ಓಡಿದ್ದೆ.ಮೆಟ್ಟಿಲುಗಳ ಮೇಲೇರಿ ಬೇಗ ಬೇಗ ಕೋಣೆಯತ್ತ ಹೋಗುವಾಗ ವಿಚಿತ್ರವಾಗಿ ಬಿಕ್ಕಳಿಸುವ ಸದ್ದು ಬರುತ್ತಿತ್ತು. ಮೈಯೆಲ್ಲ ನಡುಗುತ್ತಾ ಕೋಣೆಯ ಬಾಗಿಲು ತೆಗೆದಾಗ ನಿನ್ನಮ್ಮ ನೆಲದ ಮೇಲೆ ಬಿಕ್ಕಳಿಸುತ್ತಾ ಹೊರಳಾಡುತ್ತಿದ್ದಳು.ಅವಳು ಊಟದಲ್ಲಿ ವಿಷ ಬೆರೆಸಿ ಸೇವಿಸಿದ್ದಳು.ನನ್ನ ಫೋಟೋಗಳನ್ನು, ನಿನ್ನ ಫೋಟೋವನ್ನು, ನನ್ನ ಶರ್ಟ್ ಅನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾ ನರಳಾಡುತ್ತಾ ಬಿಡಿದ್ದಳು. ಆ ದೃಶ್ಯ ನೋಡಿ ನನಗೆ ದಿಗಿಲು ಬಡಿದಿತ್ತು. ಅವಳೆಡೆ ರಭಸದಿಂದ ಓಡಿ ಕೈಯಲ್ಲಿ ಅವಳ ಹಿಡಿದು ಗಟ್ಟಿಯಾಗಿ ಅತ್ತಿದ್ದೆ. ಮತ್ತೆ ಆಂಬುಲೆನ್ಸ್ಗೆ ಕರೆ ನೀಡಿದ್ದೆ. ಅವಳನ್ನು ಗಟ್ಟಿಯಾಗಿ ತಬ್ಬಿ ಅವಳ ಮುಖ ತುಂಬಾ ಮುತ್ತಿಟ್ಟಿದ್ದೆ. ಅದೆಷ್ಟು ಬಾರಿ ನಮ್ಮ ಏಕಾಂತದ ಕ್ಷಣಗಳಲ್ಲಿ ಅವಳಿಗೆ ಮುತ್ತಿಟ್ಟಿದ್ದೇನೋ ಆದ್ರೆ ಅಂದು ನಿಜವಾದ ಪ್ರೀತಿಯಿಂದ ಅವಳ ಮುಖ ತುಂಬಾ ಮುತ್ತಿಟ್ಟಿದ್ದೆ.
"ನಾನ್ ಸಾಯಿ ಅಂದಿದ್ದಕ್ಕೆ ನಿಜ್ವಾಗ್ಲೂ ಸಾಯ್ಲಿಕ್ ಬಂದ್ಯಾ? ನಾನ್ ಮನಸ್ಸಿಂದ ಹೇಳ್ಳಿಲ್ಲ ಕಣೋ, ನೀನ್ ನನ್ ಸರ್ವಸ್ವ ಕಣೋ, ಈ ಜಗತ್ನಲ್ಲಿ ನಿನ್ನೊಬ್ಬಳನ್ನೇ ನಾನ್ ಪ್ರೀತಿಸಿದ್ದು. ತುಂಬಾ ಪ್ರೀತಿಸ್ತೀನಿ ನಿನ್ನ. ನಮ್ ಮಗೂ ಆಣೆ ತುಂಬಾನೇ ಪ್ರೀತಿಸ್ತೀನಿ ನಿನ್ನ. ಯಾಕೋ ವಿಷ ತಿಂದೆ. ನಿಂಗೆಷ್ಟ್ ಹೊಡೆದೆ ನಾನು, ನಾನು ತುಂಬಾ ಕೆಟ್ಟೋನು !!"ಜೋರಾಗಿ ನನ್ನ ತಲೆಗೆ ಹೊಡೆದುಕೊಂಡು ಅತ್ತಿದ್ದೆ. ನಿನ್ನಮ್ಮ ಆ ಸ್ಥಿತಿಯಲ್ಲೂ ನನಗೆ ಅಂಟಿಕೊಂಡು ನನ್ನ ಮೈ, ಮುಖ ಎಲ್ಲಾ ಸವರಿ ನನ್ನ ತಬ್ಬಿಕೊಳ್ತಾ ಇದ್ಳು. "ನಾನ್ ನಮ್ ಪಾಪುನ....ಅಂತಾ ಪದೇ ಪದೇ ಹೇಳ್ತ ನಿನ್ನ ಸಾವಿನ ದವಡೆಗೆ ದೂಡಿದ್ದು ಅವಳೇ ಅಂತಾ ಕೊರಗ್ತಾ ಇದ್ಳು. ನಿನ್ನನ್ನ ಆವತ್ತು ಮೇಲೆ ಬಿಟ್ಟು ಬಂದಿದ್ದು ನನ್ ತಪ್ಪು. ಕೆಳಗೆ ಬರುವಾಗ ಹಠ ಮಾಡುತ್ತಿದ್ದ ನಿನ್ನನ್ನು ಎತ್ತಿಕೊಂಡು ಮೆಟ್ಟಿಲು ಇಳಿದು ಬರುತ್ತಿದ್ದ ಅವಳಿಗೆ ಕಷ್ಟವಾಗುತ್ತಿತ್ತು ಎಂದು ಗೊತ್ತಿದ್ದೂ ಗಿಫ್ಟ್ ತೆಗೆಯುವುದರಲ್ಲಿ ಮಗ್ನನಾದ ನಾನು ಪಾಪಿ. ಕುಳ್ಳಗಿದ್ದ ನಿನ್ನ ಅಮ್ಮ ಯಾವತ್ತೂ ಹಾಕ್ತಾ ಇದ್ದುದು ಹೀಲ್ ಚಪ್ಪಲಿಯನ್ನೇ. ಈ ವಿಷಯ ಕೂಡ ನನಗೆ ಗೊತ್ತಿತ್ತು. ನಿನ್ನನ್ನು ಆ ಸ್ಥಿಥಿಯಲ್ಲಿ ನೋಡಿ ನಿನ್ನನ್ನು ಬೀಳಿಸದಳಲ್ಲ ಎಂದು ಜೀವನ ಪರ್ಯಂತ ನನ್ನನ್ನು ಮುದ್ದು ಮಾಡಿ ಕಿಂಚಿತ್ತೂ ನೋವು ನೀಡದ ನಿನ್ನಮ್ಮನಿಗೆ ಮುಖ ಮೈಯೆಲ್ಲ ಕೆಂಪಾಗುವಷ್ಟು ಹೊಡೆದಿದ್ದೆ. ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೇನೋ ಕರೆದುಕೊಂಡು ಬೇಗ ಹೋದ್ವಿ ಆದರೆ ನಿನ್ನಮ್ಮ ನಿನಗೆ ಕೊಟ್ಟ ನೋವಿಗೆ ದುಪ್ಪಟ್ಟು ನೋವು ತಾನು ಅನುಭವಿಸುತ್ತೇನೆ ಅಂತಾ ಹೊಟ್ಟೆ ತುಂಬಾ ಇಲಿ ಪಾಷಾಣ ತಿಂದಿದ್ದಳು. ನೀವಿಬ್ರು ಐ ಸಿ ಯು ನಲ್ಲಿ ನರಳಿದ್ರಿ. ನಾನು ನೀನಮ್ಮನ್ ಪ್ರೀತಿನಾ ನೆನೆಸ್ಕೊಂಡೆ. ಅವಳು ಜೀವನ ಪೂರ್ತಿ ನನಿಗೆ ನೀಡಿದ ಆ ಹುಚ್ಚು ಪ್ರೀತಿ ನೆನೆಸ್ಕೊಂಡು ಒದ್ದಾಡ್ತಾ ಇದ್ದೆ. ಅವತ್ತು ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ನಿನ್ನಮ್ಮ ನಿನ್ನ ಬದುಕಿಸಿ ನನ್ನ ಬಿಟ್ಟು ಹೋದ್ಳು. ಅವಳು ಸಾಯುವ ಸಮಯಕ್ಕೆ ವಿಚಿತ್ರವೆನಿಸುವಂತೆ ನೀನು ಪ್ರಾಣಾಪಾಯದಿಂದ ಪಾರಾಗಿದ್ದೆ. ಅವಳನ್ನು ಕೊನೆಯದಾಗಿ ಆಂಬುಲೆನ್ಸ್ನಿಂದ ಹೊರ ತರುವಾಗ ಮುಖ ತುಂಬಾ ಮುತ್ತಿಟ್ಟಿದ್ದೆ. ಆ ಹೀನಾಯ ಸ್ಥಿತಿಯಲ್ಲೂ ನನ್ನ ಮುತ್ತಿಗೆ ಸ್ಪಂದಿಸಿ ರಕ್ತ ತುಂಬಿದ ತುಟಿಗಳಿಂದ ನನಗೆ ಕೊನೆಯ ಮುತ್ತನ್ನು ನನ್ನ ಕತ್ತಿಗೆ ನೀಡಿದ್ದಳು.
ಅವಳ ಸಾವಿನ ಸುದ್ದಿಯನ್ನು ಕೇಳಿದ ನಾನು ಹುಚ್ಚನಂತೆ ತಲೆ ಹೊಡೆದುಕೊಂಡು ಅವಳ ದೇಹವನ್ನು ಹಿಡಿದು ತಲೆ ಆಡಿಸಿಕೊಂಡು ಮಾನಸಿಕ ಆಘಾತವಾಗಿ ಹೊರಳಾಡಿದ್ದೆ. ಅವಳ ದೇಹವನ್ನು ದಹನ ಕ್ರಿಯೆಗೆ ನೀಡಲೂ ಹಠ ಮಾಡಿದ್ದೆ. ಸಂಪೂರ್ಣ ಹುಚ್ಚನಾಗಿ ನಾನು ಟ್ರೀಟ್ಮೆಂಟ್ ಕೋನ್ಸೆಲ್ಲಿಂಗ್ ತಗೊಂಡು ಗುಣವಾಗಲು ಒಂದು ವರ್ಷ ಹಿಡಿದಿತ್ತು. ಹೀಗೆ ನಿನ್ನಮನ್ನ ನಾನ್ ಎಷ್ಟ್ ಪ್ರೀತಿಸ್ತೀನಿ ಅಂತಾ ಗೊತ್ತಾಗಿದ್ದು ಅವಳು ಸತ್ ಮೇಲೆ. "
ಅಕ್ಷರ ಕಣ್ಣಿಂದ ನೀರು ಹರಿದಿತ್ತು. ಬಹಳ ದೊಡ್ಡ ಸತ್ಯದ ಅರಿವು ಕೂಡ ಆಗಿತ್ತು. ಪತ್ರದ ಕೊನೆಯ ಪುಟವನ್ನು ಓದಿದ್ದಳು.
"ನಂತರ ನಿನ್ನ ಆರೈಕೆಗೆ ತಾಯಿ ಪ್ರೀತಿ ಮುಖ್ಯ ಅಂತಾ ನನ್ನ ಸ್ನೇಹಿತೆ ರಿಯಾ ನನ್ನ ಮದುವೆ ಆಗ್ತೀನಿ ಅಂದ್ಳು. ನಂಗೆ ನಿನಮ್ಮನ್ ಬಿಟ್ಟು ಬೇರೆ ಯಾರನ್ನೂ ಮದ್ವೆಯಾಗುವ ಮನಸಿಲ್ದೆ ಇದ್ರು ನಿನಗಾಗಿ ಈ ಮದುವೆ ಆದೆ.
ಆದ್ರೆ ರಿಯಾ ನನ್ಮೇಲಾಗ್ಲಿ ನಿನ್ಮೇಲಾಗ್ಲಿ ನಿನ್ನಮನ್ ಥರ ಹುಚ್ಚು ಪ್ರೀತಿ ಇಟ್ಕೊಂಡಿರ್ಲಿಲ್ಲ. ನಿನ್ನಜ್ಜ ಅಜ್ಜಿ ಮಗಳ ಕಳೆದುಕೊಂಡ ದುಃಖದಲ್ಲಿ ನಿನ್ನ ಮರೆತು ನಿನ್ನ ಮಾವ, ಚಿಕ್ಕಮ್ಮನ ಜೊತೆ ವಿದೇಶಕ್ಕೆ ಹೊರಟರು. ಅವರಿಗೆ ಮಗಳು ಮಲಯಾಳಿ ಹುಡುಗನ ಮದುವೆಯಾಗಿದ್ದು ಇಷ್ಟ ಇರಲಿಲ್ಲ. ಈ ಘಟನೆ ನಡೆದ ಮೇಲೆ ನನ್ನಿಂದ ಎಲ್ಲಾ ಸಂಪರ್ಕವನ್ನು ಕಳೆದು ಮಗಳ ಪ್ರತಿರೂಪವಾದ ನಿನ್ನನ್ನೂ ದೂರ ಮಾಡಿ ಹೋದರು. ಆಗ ರಿಯಾ ನಿನಗೆ ಅವಳು ನಿನ್ನ ಮಲತಾಯಿಯೆಂದು ಗೊತ್ತಾಗಬಾರದೆಂದು ನಿನ್ನಿಂದ ನಿನ್ನ ನಿಜವಾದ ತಾಯಿಯ ಅಸ್ಥಿತ್ವವನ್ನು ಮುಚ್ಚಿಡಬೇಕೆಂದು ಕೇಳಿಕೊಂಡಳು. ನಿನ್ನ ಸ್ವಂತ ತಾಯಿಯಂತೆ ಪ್ರೀತಿಸಿದಳು ಕೂಡಾ. ಆದರೆ ಅದು ಬರೀ ನಾಟಕ ಅಂತಾ ಗೊತ್ತಿದ್ರೆ ನಿನ್ನಿಂದ ನಿನ್ನ ಅಮ್ಮನ ನಾನು ಮುಚ್ಚಿಡ್ತಾ ಇರ್ಲಿಲ್ಲ. ಮಗ ಆರೇಶ್ ಹುಟ್ಟಿದ ಮೇಲೆ ನಿನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದ್ಲು.
ನಿಜ ಅವ್ಳು ನಾನ್ ಬಯಸಿದಂತಾ ಮಾಡ್ರನ್ ಹುಡ್ಗಿ. ಆದ್ರೆ ನಿನಮ್ಮನ್ ಥರ ಪ್ರೀತಿಸ್ಲಿಲ್ಲ. ಆ ಹುಚ್ಚು ಪ್ರೀತಿ, ಆ ಮುಗ್ದ ನಿಷ್ಕಲ್ಮಶ ಪ್ರೀತಿ. ಒಂದು ಕಾಲದಲ್ಲಿ ವಿಚಿತ್ರ ಅನ್ನಿಸಿದ್ದ ಅವಳ ಹುಚ್ಚು ಪ್ರೀತಿಗಾಗಿ ಅವಳು ಹೊದ್ಮೇಲಿಂದ ಇಲ್ಲಿವರೆಗೂ ಚಡಪಡಿಸ್ತಾ ಇದ್ದೀನಿ. ಒಬ್ರು ವ್ಯಾಲ್ಯೂ ಅವರು ನಮ್ಮಿಂದ ದೂರ ಆದ್ಮೇಲೆನೇ ಗೊತ್ತಾಗೋದು. ಆದ್ರೆ ನಿನ್ನಮ್ಮ ಖಂಡಿತ ನನ್ನಿಂದ ದೂರ ಇಲ್ಲ. ಖಂಡಿತ ನನ್ ಹತ್ರಾನೇ ಇರ್ತಾಳೆ. ಯಾಕಂದ್ರೆ ಅವ್ಳಿಗೆ ನನ್ನಿಂದ ದೂರ ಇರೋ ಸಾಮರ್ಥ್ಯನೇ ಇಲ್ಲ. ಎಲ್ಲಾ ಜನುಮದಲ್ಲೂ ನನಗೆ ನೀನೆ ಬೇಕು ಆಕಾಶ್ ಅಂತಿದ್ಲು. ಅಂತಾ ಹುಚ್ಚು ಪ್ರೀತಿ ಅವಳದು.ಅವಳ ಫೋಟೋ ಆ ಬಾಕ್ಸ್ನಲ್ಲಿದೆ. ನಿನ್ ಹಾಗೇ ಇದ್ದಾಳೆ ನಿನ್ನಮ್ಮ. ಕಣ್ಣಂತೂ ಸೇಮ್.ನಿನ್ನಮ್ಮ ನನಗೆ ಕೊಟ್ಟ ಆ ಹುಚ್ಚು ಪ್ರೀತಿಗೆ ನಾನ್ ಬೆಲೆನೇ ಕೊಡ್ಲಿಲ್ಲ. ಅವಳ ಸಾವಿಗೆ ಕಾರಣನು ಈ ನಿನ್ನ ಕೆಟ್ಟ ಅಚ್ಚ. ಇದೇ ನಿಮಮ್ಮನ ನಿನ್ನ ಅಚ್ಚನ್ ಮೇಲಿನ ಹುಚ್ಚು ಪ್ರೀತಿ ಕಥೆ. ಮುಂದಿನ ಎಲ್ಲಾ ಜನುಮದಲ್ಲೂ ಅವ್ಳಿಗೆ ಅವಳಿಷ್ಟದ್ ಹಾಗೇ ಅವಳ ಗಂಡನಾಗಿ ಹುಟ್ಟಿ ಅವಳಿಗೆ ಯಾರೂ ನೀಡದಷ್ಟೂ ಪ್ರೀತಿ ನೀಡ್ತೀನಿ. ಆ ಎಲ್ಲಾ ಜನ್ಮದಲ್ಲೂ ನಮ್ಮ ಪ್ರೀತಿಯ ಸಂಕೇತವಾಗಿ ನೀನೇ ನಮ್ಮ ಪಾಪುವಾಗಿ ಹುಟ್ಟಿ ಬಾ. ಮತ್ತೆ ಹಾಯಾಗಿರೋಣ. ಒಂದು ಮಾತ್ರ ನೂರರಷ್ಟು ಸತ್ಯ ನಿನ್ನಮ್ಮ ನನ್ನ ಪ್ರೀತಿಸಿದಷ್ಟು ಜಗತ್ನಲ್ಲಿ ಯಾವ ಪ್ರೇಮಿ ಕೂಡಾ ಪ್ರೀತಿಸಲು ಸಾಧ್ಯವೇ ಇಲ್ಲ. ಇದೇ ನಮ್ ಪ್ರೀತಿ ಕಥೆ. "
ನಿನ್ನಚ್ಚ.
ಅಕ್ಷರ ಬಾಕ್ಸ್ನಲ್ಲಿದ್ದ ತಾಯಿಯ ಫೋಟೋವನ್ನು ತೆಗೆದು ಕಣ್ಣೀರಿಡುತ್ತಾ ಮುತ್ತಿಟ್ಟಿದ್ದಳು. ಫೋಟೋ ಕೆಳಗಡೆ "ಇಂದು" ಎಂದು ಬರೆದಿತ್ತು. ತಾಯಿಯ ಹೆಸರೆಂದು ಅರಿತಿದ್ದಳು.ಎದೆಗಪ್ಪಿ ಅವಳ ಫೋಟೋ ಹಿಡಿದು ಕಣ್ಣೀರು ಸುರಿಸಿದ್ದಳು.ಫೋಟೋ ಹಿಡಿದುಕೊಂಡು "ಐ ಲವ್ ಯೂ ಅಮ್ಮ " ಅಂತ ಹೇಳಿ ನಿದ್ದೆಗೆ ಜಾರಿದಳು.
ಅತ್ತ ಆಕಾಶ್ ದುಃಖದಿಂದ ಮಲಗಿದಲ್ಲೇ "ಇಂದು" ಎಂದು ಕನವರಿಸಿದ್ದ. ಒಮ್ಮೆಲೆ ಜೋರಾಗಿ ಗಾಳಿ ಬೀಸಿ ಆಕಾಶ್ಗೆ ಕೆನ್ನೆಯ ಮೇಲೆ ಯಾರೋ ಮುತ್ತಿಟ್ಟ ಅನುಭವವಾಯಿತು.
ಮಲಗಿದಲ್ಲೇ ಮುಗುಳುನಕ್ಕು "ಇಂದು !! ಮತ್ತೊಂದು " ಎಂದ. ಸ್ವಲ್ಪ ಹೊತ್ತಲ್ಲಿ ಇನ್ನೊಂದು ಮುತ್ತು ಆಕಾಶ್ ಕೆನ್ನೆಯ ಮೇಲೆ ಬಿದ್ದಿತ್ತು. ಆಕಾಶ್ ಮುಗುಳುನಗು ಅವನ ಕಣ್ಣಿಂದ ಹರಿದ ನೀರನ್ನು ಸೇರಿತು.

ಕೃಷ್ಣಸುತೆ🦚
(ರಶ್ಮಿ ಆರ್ ಕೋಟ್ಯಾನ್)

(ಕಥೆ ಇಷ್ಟವಾದಲ್ಲಿ ದಯವಿಟ್ಟು ರೇಟ್ ಮಾಡಿ , ನಿಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನೂ ನೀಡಿ , ಆದಷ್ಟು ಜನರಿಗೆ ಶೇರ್ ಮಾಡಿ ಈ ಕಥೆಯನ್ನು ವೈರಲ್ ಮಾಡಿ. ಇದು ಉತ್ತಮ ಕಥೆಯಾಗಿದ್ದರು ಸಹ ಹೆಚ್ಚು ಜನರನ್ನು ತಲುಪಿಲ್ಲ. ದಯವಿಟ್ಟು ಪ್ರೋತ್ಸಾಹಿಸಿ🙏)


Rate this content
Log in

Similar kannada story from Drama