ದೆವ್ವವೋ?! ದೈವವೋ?! ಮರ್ಮ!
ದೆವ್ವವೋ?! ದೈವವೋ?! ಮರ್ಮ!


ಒಂದು ರಾತ್ರಿ ನಾನೂ ನನ್ನ ತಂದೆ ತಾಯಿ ಹಾಗೂ ತಂಗಿ ಮಲಗಿದ್ದಾಗ ಹೊರಗಡೆ ನಾಯಿಗಳೆಲ್ಲಾ ಗೂಳಿದುತ್ತಿದ್ದವು. ನಾನು ನನ್ನ ತಂಗಿ ಹಾಗೂ ನನ್ನ ತಾಯಿ ಒಂದೇ ಕೊಣೆಯಲ್ಲಿ ಮಲಗಿದ್ದೆವು. ಅಪ್ಪ ಪಕ್ಕದ ಕೋಣೆಯಲ್ಲಿ ಮಲಗಿದ್ದರು.ಅಂದು ರಾತ್ರಿ 12 ದಾಟಿತ್ತು. ನಾನು ಮಂಚದ ಮೇಲೆ ಒರಗಿದ್ದೆನೇ ಹೊರತು ಕಣ್ಣಿಗೆ ನಿದ್ದೆ ಆವರಿಸಿರಲ್ಲಿಲ್ಲ. ನಮ್ಮ ಮನೆಯ ಸುತ್ತ ಕ್ರಿಶ್ಚಿಯನ್ನರ ಮನೆಗಳಿದ್ದವು. ಎಲ್ಲರ ಮನೆಯಲ್ಲೂ ನಾಯಿ ಸಾಕಿದ್ದರು. ಆ ಎಲ್ಲಾ ನಾಯಿಗಳೂ ಗಟ್ಟಿಯಾಗಿ ಬೊಗಳಲು ಶುರುಮಾಡಿದವು. ನನಗೆ ಕರ್ಕಶವೆನಿಸಿದರೂ ಕಣ್ಣು ಮುಚ್ಚಿ ಸುಮ್ಮನೆ ಬಿದ್ದುಕೊಂಡೆ. ಆದರೆ ಅಮ್ಮ ಏಕೋ ಏನೋ ಶಾಂತವಾಗಿ ಎದ್ದರು. ಎದ್ದು ಸೀದಾ ಕಿಟಕಿಯ ಬಳಿ ಕಿಟಕಿಯ ಬಾಗಿಲು ತೆಗೆದು ಮೆತ್ತಗೆ ಇಣುಕಿದರು. ಅಂದು ಅಮ್ಮ ಸುಮ್ಮನೆ ನಾಯಿಗಳ ಬೊಗಳುವಿಕೆಯನ್ನು ಸಹಿಸಿಕೊಂಡು ಮಲಗಿರುತ್ತಿದ್ದರೆ ಅಂದು ಕಂಡ ನಿಗೂಢ ದೃಶ್ಯವನ್ನು ನಾವೆಲ್ಲರೂ ನೋಡಲಾಗುತ್ತಿರಲ್ಲಿಲ್ಲ. ಕಿಟಕಿಯ ಬಳಿ ಹೋದ ಅಮ್ಮ ಶಾಂತವಾಗಿ ಕಿಟಕಿಯಿಂದ ಇಣುಕಿ ಏನನ್ನೋ ನೋಡುತ್ತಲೇ ಇದ್ದರು. ನನಗೆ ವಿಚಿತ್ರವೆನಿಸಿದರೂ ಪುನಃ ಮಾತಾಡದೆ ಅಲ್ಲೇ ಬಿದ್ದುಕೊಂಡೆ. ಆದರೆ ಮರುಕ್ಷಣವೇ ಅಮ್ಮ ಮೆತ್ತಗೆ ನನ್ನನ್ನೂ ನನ್ನ ತಂಗಿಯನ್ನೂ ಕರೆದರು.
" ಚಿನ್ನು, ರಚ್ಚಿ ಇಲ್ಲಿ ಬನ್ನಿ. " ಅಮ್ಮ ಕರೆದಿದ್ದರು.
ಅಮ್ಮ ಕರೆದಾಗ ಹೊರಗಡೆ ಏನೋ ಕುತೂಹಲಕಾರಿಯಿದೆ ಎಂದೆನಿಸಿ ನಾವಿಬ್ಬರೂ ಕಿಟಕಿಯ ಬಳಿ ನಡೆದೆವು. ಆಗಲೇ ಕಂಡಿದ್ದು ನಾನು ಆ ನಿಗೂಢ ದೃಶ್ಯವನ್ನ!!!!!
ನಮ್ಮ ಮನೆಯ ಎಡಭಾಗದಲ್ಲಿದ್ದ ಮನೆಯ ಗೇಟಿನ ಹೊರಗೆ ಇದ್ದ ಕಾಲುದಾರಿಯಲ್ಲಿ ಯಾವುದೋ ಒಂದು ಬೆಳಕು ಮೆತ್ತಗೆ ಗಾಳಿಯಲ್ಲಿ ತೇಲುತ್ತಾ ಹಾದು ಹೋಗುತ್ತಿತ್ತು. ವಿಚಿತ್ರ ಹಾಗೂ ಭಯನಕವೇನೆಂದರೆ ಆ ಬೆಳಕು ಕ್ಷಣಕ್ಕೊಮ್ಮೆ ಮನುಷ್ಯ ಆಕೃತಿಯಂತೆ ರೂಪುಗೊಳ್ಳುತ್ತಿತ್ತು ಹಾಗೂ ಅದು ಹಾದು ಹೋಗುವಾಗ ಗೆಜ್ಜೆ ಸದ್ದು ಕೇಳಿಸುತ್ತಿತ್ತು. ನನ್ನಮ್ಮ ನನ್ನಪ್ಪನನ್ನೂ ಪಕ್ಕದ ಕೋಣೆಗೆ ಹೋಗಿ ಎಬ್ಬಿಸಿ ಕರೆತಂದಿದ್ದರು. ಆ ಬೆಳಕು ಆ ಕಾಲುದಾರಿಯಲ್ಲಿ ಮೆತ್ತಗೆ ಹಾದು ಹೋಗುವಾಗ ಪಕ್ಕದ ಮನೆಯವರ ಎರಡು ನಾಯಿಗಳು ಗೇಟಿನ ತನಕ ಬಂದು ಗಟ್ಟಿಯಾಗಿ ಬೊಗಳುತ್ತಿದ್ದವು. ಅಪ್ಪ ಕೂಡ ಶಾಂತವಾಗಿ ಈ ದೃಶ್ಯವನ್ನು ಗಮನಿಸಿದರು. ನಾನಂತೂ ಜೀವಮಾನದಲ್ಲೇ ಇಂತಾ ದೃಶ್ಯವನ್ನು ನೋಡಿರಲಿಲ್ಲ. ಭಯವಾಗಿದ್ದರೂ ದೆವ್ವವೋ ಬೇರೇನೊ , ಆ ಆಕೃತಿ ದೂರದಲ್ಲಿದ್ದುದರಿಂದ ಏನೋ ಸುರಕ್ಷಿತ ಅನುಭವವಿತ್ತು. ಅಪ್ಪ ತುಸು ಕಾಲ ದೃಶ್ಯ ಗಮನಿಸಿ ಆ ಆಕೃತಿ ಅಲ್ಲಿಂದ ದೂರ ಹಾದು ಹೋದ ಮೇಲೆ " ಮಲಗಿಕೊಳ್ಳಿ , ಮಲಗಿಕೊಳ್ಳಿ. ಕಿಟಕಿಯ ಬಾಗಿಲೆಲ್ಲ ಮುಚ್ಚಿ ಸುಮ್ಮನೆ ಮಲಗಿಕೊಳ್ಳಿ " ಎಂದು ಹೇಳಿ ಪಕ್ಕದ ಕೊಣೆಗೆ ಮಲಗಲು ಮರಳಿದರು. ನಾವು ಅಮ್ಮನ ಬಳಿ ಅದೇನಿರಬಹುದು ಕೇಳಿದಾಗ ಅಮ್ಮ " ಸುಮ್ಮನೆ ಮಲಗಿಕೊಳ್ಳಿ " ಎಂದು ನಮ್ಮ ಬಾಯಿ ಮುಚ್ಚಿಸಿ ಮಲಗಿಕೊಂಡರು. ನಾನು ಅದೇನು ಎಂಬ ಕುತೂಹಲದಲ್ಲೇ ಭಯದಿಂದಲೇ ಕಂಬಳಿ ಹೊದ್ದುಕೊಂಡು ಮಲಗಿಕೊಂಡೆ.
ಮರುದಿನ ನನ್ನ ಅಪ್ಪ ಅಮ್ಮ ಹಿಂದಿನ ರಾತ್ರಿಯ ಘಟನೆಯನ್ನು ಹೇಳುತ್ತಾ ತಮ್ಮೊಳಗೆ ಮಾತಾಡುತ್ತಿದ್ದರು. ನಾನು ಅವರ ಮಾತುಗಳನ್ನು ಕೇಳಿಸಿಕೊಂಡೆ.
" ಮಾರಿಗುಡಿಯ ದೇವಿ ಸವಾರಿ ಮಾಡುತ್ತಿದ್ದಳು. ನಿನ್ನ ತಮ್ಮಂದಿರಿಗೆ ರಾತ್ರಿ ತಡವಾಗಿ ಬರಬಾರದು ಎಂದು ಹೇಳು. ದೈವ ಸವಾರಿಗೆ ಎದುರಾದರೆ ಸುಮ್ಮನೆ ಅಪಾಯ ." ಎಂದು ಅಪ್ಪ ಹೇಳುತ್ತಿದ್ದರು.
" ಅದು ದೈವವೋ ಬೇರೆ ಏನೋ ಯಾರಿಗೆ ಗೊತ್ತು. " ಅಮ್ಮ ಮರುಮಾತಾಡಿದ್ದಳು.
ನಮ್ಮ ಕಡೆ ದೈವಗಳು ರಾತ್ರಿ ಹೊತ್ತು ಸವಾರಿ ಮಾಡುತ್ತದೆ ಎಂಬ ನಂಬಿಕೆಯಿದೆ. ಅವುಗಳಿಗೆ ಅಡ್ಡ ಬಂದರೆ ಅಪಾಯಕಾರಿ ಸನ್ನಿವೇಶಗಳಾಗುವ ಬಗ್ಗೆ ನಾನು ನನ್ನ " ಆ ಕರಾಳ ಮಳೆ ರಾತ್ರಿ " ಬರಹದಲ್ಲಿ ಬರೆದಿದ್ದೇನೆ . ಹೀಗೆ ನಾವು ಅಂದು ಕಂಡ ಭಯಾನಕ ನಿಗೂಢ ದೃಶ್ಯ ದೇವಿಯ ಸವಾರಿಯಾಗಿತ್ತು ಎಂದು ತಂದೆ ಹೇಳಿದರು. ಆದರೆ ಅಂತಹ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡ ನನಗೆ ಇಂದಿಗೂ ಅದು ದೇವಿಯ ಸವಾರಿಯೆಂದು ಸಂಪೂರ್ಣ ನಂಬಿಕೆಯಿಲ್ಲ. ಆ ದೃಶ್ಯವೂ ಬಿಡಿಸಲಾಗದ ಒಗಟಾಗಿ ನನ್ನೊಳಗೆಯೇ ಉಳಿದುಕೊಂಡಿದೆ. ಆದರೆ ರಾತ್ರಿ ಹೊರಗೆ ಹೋಗಲು ಭಯವನ್ನು ಹೆಚ್ಚು ಮಾಡಿದೆ!!!