Jyothi Baliga

Tragedy Inspirational

3.8  

Jyothi Baliga

Tragedy Inspirational

ವಿಧಿಲಿಖಿತ

ವಿಧಿಲಿಖಿತ

3 mins
11.6K


ಸೌಂದರ್ಯದ ದೇವತೆ ತರಹ ಇರೋ ಚಂದನಳನ್ನು ಎಲ್ಲರೂ "ಗೊಂಬೆ" ಅಂತಾನೆ ಕರಿತಿದ್ದರು. ಅವಳ ಸೌಂದರ್ಯ ಕಂಡು ಹೆಣ್ಣು ಮಕ್ಕಳು ಅಸೂಯೆ ಪಟ್ಟರೆ ಗಂಡು ಮಕ್ಕಳ 'ಕನಸಿನ ಕನ್ಯೆ' ಆಗಿದ್ದಳು.ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಚಂದನಳಿಗೆ ಮದುವೆ ಮಾಡಲು‌ ಮನೆಯವರು ಗಂಡು ಹುಡುಕುತ್ತಿದ್ದರು. ಮನೆಯವರು ಅಜಯ್‌ ನನ್ನು ಚಂದನಳಿಗೋಸ್ಕರ ಆಯ್ಕೆ ಮಾಡಿ , ಹೆಣ್ಣು ನೋಡುವ ಶಾಸ್ತ್ರಕ್ಕೆ ಅವನ ಹೆತ್ತವರನ್ನು ಮನೆಗೆ ಕರೆಸಿದರು.


ಅಜಯ್ ನನ್ನು ನೋಡಿ ಮನೆಯವರ ಆಯ್ಕೆಗೆ ತನ್ನ ಒಪ್ಪಿಗೆ ಇದೆ ಎಂದು ಕಣ್ಣೋಟದಲ್ಲೆ ತಿಳಿಸಿದಳು ಚಂದನ. ಹುಡುಗನ ಕಡೆಯವರಿಗೂ ಚಂದನ ಇಷ್ಟವಾಗಿ 'ಮಲ್ಲಿಗೆ ಹೂವು' ಮುಡಿಸಿ ತಮ್ಮ ಒಪ್ಪಿಗೆ ಸೂಚಿಸಿದರು. ಮದುವೆಯನ್ನು ಮೂರು ತಿಂಗಳೊಳಗೆ ಮಾಡೋಣ ಎಂದು ತೀರ್ಮಾನಿಸಿದರು. ಅಜಯ್,ತನಗೆ ಚಂದನಳೊಂದಿಗೆ ಮಾತನಾಡಬೇಕೆಂದಾಗ ಮನೆಯವರು,ತೋಟದಲ್ಲಿ ಮಾತನಾಡಲು ಅನುವು ಮಾಡಿ ಕೊಟ್ಟರು.


ಮದುವೆಗೆ ಯಾರ ಒತ್ತಡವಿಲ್ಲ ತಾನೆ ಚಂದನ ? ಎಂದು ಅಜಯ್ ಕೇಳಿದಾಗ, ತನ್ನ ಇಷ್ಟದಿಂದ ಒಪ್ಪಿಗೆಯನ್ನು ನೀಡಿದ್ದೇನೆ ಎಂದು ಚಂದನ ಉತ್ತರಿಸಿದಳು.ತನ್ನ ವಿದ್ಯಾಭ್ಯಾಸ,ಕೆಲಸದ ವಿಚಾರವನ್ನು ಚಂದನಳಿಗೆ ಅಜಯ್ ತಿಳಿಸಿದ. ಚಂದನ ಕೂಡಾ ಅವಳ ಕಾಲೇಜಿನ ಬಗ್ಗೆ ಹೇಳಿದಳು. ಮೊಬೈಲ್ ಇಲ್ಲದ ಕಾಲವಾದ್ದರಿಂದ ಮನೆಯ ಲ್ಯಾಂಡ್ ಲೈನ್ ಪೋನ್ ನಂಬರ್ ಗಳನ್ನು ಬದಲಾಯಿಸಿಕೊಂಡರು.

ಅಜಯ್ ಆಗಾಗ ಬಂದು ಚಂದನಳನ್ನು ಸಿನೆಮಾ, ಪಾರ್ಕ್ ಎಂದು ಸುತ್ತಿಸಲೂ ಕರೆದುಕೊಂಡು ಹೋಗುತ್ತಿದ್ದ. ಮದುವೆಗೆ ಇನ್ನೇನೂ ಕೆಲವೇ ದಿನಗಳು ಇರುವುದಲ್ಲವೇ ಎಂದು ‌ಮನೆಯವರೂ ಸುಮ್ಮನಿದ್ದರು.‌ಮದುವೆಗೆ ಒಂದು ವಾರವಿದೆ ಎನ್ನುವಾಗ 'ಅರಶಿನ ಹಚ್ಚಿದ ಮೈ ಹೊರಹೋಗಬಾರದು' ಎಂಬ ಅಮ್ಮನ ಆಜ್ಞೆ ಮತ್ತು ಹಠಕ್ಕೆ ಮಣಿದು ಇನ್ನೂ ಮದುವೆಯಲ್ಲಿ ಭೇಟಿಯಾಗೋಣ ಚಂದನ ಎಂದು ಪೋನಿನಲ್ಲಿ ತಿಳಿಸುತ್ತಾನೆ ಅಜಯ್.ಮದುವೆಯ ದಿನ ಅಜಯ್, ನಿನ್ನ ಮುದ್ದು ಮುಖ ನೋಡಬೇಕು ಅಂತ ಆಸೆಯಾಗಿದೆ ಕಣೆ ಬೇಗ ಬಾ ಛತ್ರಕ್ಕೆ, ನಾವು ಹೊರಟ್ಟಿದ್ದೇವೆ ಎಂದು ಪೋನ್ ಮಾಡಿ ಹೇಳಿದ. ಅಜಯ್ ನ ನೆನಪು , ವಧುವಿನ ಕಳೆಯೂ ಸೇರಿ ಚಂದನ ಇನ್ನೂ ಸುಂದರವಾಗಿ ಕಾಣುತ್ತಿದ್ದಳು. ಯಾವುದೇ ಅಡೆತಡೆಗಳಿಲ್ಲದೆ ಮದುವೆಯು ವಿಜೃಂಭಣೆಯಿಂದ ನಡೆಯಿತು.


ಮದುವೆಯಾದ ಮೂರು ತಿಂಗಳಿನಲ್ಲೇ ಚಂದನ "ಗರ್ಭಿಣಿ" ಎಂದು ತಿಳಿದಾಗ ಅತ್ತೆ ಮತ್ತು ಮಾವ ತುಂಬಾ ಸಂತೋಷ ಪಟ್ಟರು. ಮಗಳಿಗಿಂತ ಹೆಚ್ಚಾಗಿ ಅವಳನ್ನು ನೋಡಿಕೊಳ್ಳುತ್ತಿದ್ದರು. ಹುಟ್ಟಿದ ಮಗುವಿಗೆ ಮನೆಯವರೆಲ್ಲಾ "ಅರ್ಜುನ" ಎಂದು ನಾಮಕರಣ ಮಾಡಿದರು.

ಅರ್ಜುನನ ಮೊದಲನೆಯ ಹುಟ್ಟಿದ ಹಬ್ಬಕ್ಕೆ ಎರಡೂ ಕಡೆಯ ಕುಟುಂಬದವರು ಟೆಂಪೋ ಟ್ರಾವೆಲರ್ಸ್‌‌ನಲ್ಲಿ ಗೋವಾದಲ್ಲಿ 'ಪಾರ್ಟಿ' ಮಾಡೋಣ ಎಂದು ಹೋದಾಗ "ವಿಧಿ" ಚಂದನಳ ಜೀವನದ ಜೊತೆ ದುರಂತವಾಗಿ ಆಟ ಆಡಲು ಕಾಯುತಿತ್ತು.ಪಿಕ್ ನಿಕ್ ಸಂಭ್ರಮವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ , ಎದುರಿನಿಂದ ಬರುತ್ತಿದ್ದ ವೋಲ್ವೋ ಬಸ್ಸ್ ಗೆ ಅವರು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವಲ್ಸ್ ಮುಖಾಮುಖಿ ಡಿಕ್ಕಿ ಹೊಡೆಯಿತು. ಸ್ಥಳೀಯರು ಸೇರಿ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿದರು.ಪೋಲಿಸ್ ಕೇಸ್ ಆದುದ್ದರಿಂದ ಅವರೇ ಎರಡು ಕುಟುಂಬದ ಮನೆಯವರಿಗೂ ಮಾಹಿತಿಯನ್ನು ನೀಡುತ್ತಾರೆ.


ಎರಡು ದಿನದ ನಂತರ ಚಂದನಳಿಗೆ ಪ್ರಜ್ಞೆ ಬಂದಾಗ ತನ್ನ ಎದುರಿಗಿದ್ದ ಚಿಕ್ಕಮ್ಮನನ್ನು ನೋಡಿ ಅರ್ಜುನ ಮತ್ತು ಅಜಯ್ ಎಲ್ಲಿ? ಉಳಿದವರೆಲ್ಲಿ? ಏನಾಗಿದೆ ನನಗೆ ? ಎಂದು ಒಂದೇ ಸಮನೆ ಪ್ರಶ್ನೆ ಕೇಳುತ್ತಾಳೆ.

ಚಿಕ್ಕಮ್ಮ ಅವಳನ್ನು ಸಮಾಧಾನ ಮಾಡಿ ಒಂದೊಂದಾಗಿ ಎಲ್ಲಾ ವಿಷಯಗಳನ್ನು ತಿಳಿಸುತ್ತಾರೆ.ಆಕ್ಸಿಡೆಂಟ್ ನಲ್ಲಿ ಚಂದನ ಕಾಲು ಮುರಿದುಕೊಂಡದ್ದು, ಅಜಯ್ ಕೋಮಾದಲ್ಲಿರುವುದು, ಚಂದನಳ ಹೆತ್ತವರು, ಅತ್ತೆ ಮಾವ ಸ್ಥಳದಲ್ಲಿಯೇ ಮೃತರಾದದ್ದು, ಅರ್ಜುನ ಆರೋಗ್ಯವಾಗಿರುವುದು, ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು ಎಲ್ಲವನ್ನೂ ಚಿಕ್ಕಮ್ಮನಿಂದ ಕೇಳಿ ತಿಳಿದುಕೊಂಡ ‌ಚಂದನಳಿಗೆ ಒಂದು ಕ್ಷಣದಲ್ಲಿ ಎಲ್ಲವನ್ನೂ ಕಳೆದುಕೊಂಡಂತಹ ಅನುಭವವಾಗುತ್ತದೆ.

ಮನೆಯವರನ್ನು ಕಳೆದುಕೊಂಡು, ಅಜಯ್ ನ ಸ್ಥಿತಿಯನ್ನು ಕಂಡು ಎಷ್ಟೋ ಬಾರಿ ಚಂದನಳಿಗೆ ಯಾಕೆ ಬದುಕಬೇಕು ? ಅಂತ ಅನಿಸುತ್ತಿತ್ತು. ಪುಟ್ಟ ಅರ್ಜುನನ ಮುಖ ಕಣ್ಣೆದುರು ಬಂದಾಗ ತನ್ನೆಲ್ಲಾ ಕೆಟ್ಟ ಆಲೋಚನೆ ದೂರಮಾಡುತ್ತಿದ್ದಳು.ಹಣ, ಅಂತಸ್ತು ಬೇಕಾದಷ್ಟು ಇತ್ತು. ಚಂದನಳಿಗೆ ಮೊದಲಿನ ಹಾಗೆ ನಡೆಯುವುದಕ್ಕೆ ಆಗುತಿರಲಿಲ್ಲವಾದರೂ ಅಜಯ್ ಗೆ "ಜೀವರಕ್ಷಕ" ವನ್ನು ಅಳವಡಿಸಿ ಮನೆಯಲ್ಲೇ ನೋಡಿಕೊಳ್ಳುತ್ತಿದ್ದಳು.ಎಲ್ಲಾ ಕೆಲಸ ಹಾಗೂ ಮಗುವನ್ನು ನೋಡಿಕೊಳ್ಳುವುದರಲ್ಲೇ ಸುಸ್ತಾಗುವುದರಿಂದ ಮನೆ ಕೆಲಸಕ್ಕಾಗಿ ಅನಾಥೆಯಾದ ರಾಜಿಯನ್ನು ನೇಮಿಸಿದಳು.ಚಂದನಳ ಲಾಲನೆ ಪಾಲನೆಯಲ್ಲಿ "ಅರ್ಜುನ" ಸುಖವಾಗಿ ಬೆಳೆಯುತ್ತಿದ್ದ. ಒಂಟಿಯಾಗಿದ್ದರೆ ಬೇಡದ ವಿಚಾರಗಳು ತಲೆಗೆ ಬರುವುದೆಂದು ವಠಾರದ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಕೊಡುತ್ತಿದ್ದಳು.


ಅರ್ಜುನ ಬೆಳೆಯುತ್ತಾ ಇದ್ದ ಹಾಗೆ 'ಅಪ್ಪ' ಯಾಕೆ ಎಲ್ಲರ ಹಾಗೆ ಇಲ್ಲ ? ಯಾವಾಗಲೂ ಮಲಗಿಯೇ ಇರುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದ. ಚಂದನ ಮಗನ ಬಳಿ ಅಪ್ಪನಿಗೆ ಸೌಖ್ಯವಿಲ್ಲ , ನಾಳೆ ಹುಷಾರಾಗುತ್ತಾರೆ ಎಂದು ಹೇಳಿ ಸಮಾಧಾನ ಮಾಡುತ್ತಿದ್ದಳು.ಹತ್ತನೆಯ ವಯಸ್ಸಿನಲ್ಲಿ ಸ್ನೇಹಿತರ ಜೊತೆ ಜಗಳ ಮಾಡಿ ಮನೆಗೆ ಬಂದ ಅರ್ಜುನ ಸಿಟ್ಟಿನಿಂದ ತನ್ನ ಅಪ್ಪನ ಕೋಣೆಗೆ ಹೋಗಿ ಕೂಗಾಡಲು ಶುರು ಮಾಡಿದ. ಎಲ್ಲರ ಹಾಗೆ ನೀನೆಕಿಲ್ಲಾ? ನನ್ನ ಗೆಳೆಯರು ನನ್ನನ್ನು ತಮಾಷೆ ಮಾಡುತ್ತಾರೆ.ಒಮ್ಮೆ ಹೊರಗೆ ಬಂದು ಅವರಿಗೆ ಸರಿಯಾಗಿ ಬುದ್ದಿ ಕಲಿಸು ಅಂತ ಅಳುತ್ತಾ ಅಜಯ್ ನ ಎದೆಯಲ್ಲಿ ತಲೆಯಿಟ್ಟು ಮಲಗಿದ.ಮನೆಯೆಲ್ಲಾ ಹುಡುಕಿದರೂ ಶಾಲೆಯಿಂದ ಬಂದ ಅರ್ಜುನ ಕಾಣದೆ ಇದ್ದಾಗ ಕಂಗೆಟ್ಟ ಚಂದನ, ಅಜಯ್ ಗೆ ಕೋಣೆಗೆ ಬಂದಳು. ಅವನ ಎದೆಯ ಮೇಲೆ ಅರ್ಜುನ ಮಲಗಿರುವುದನ್ನು ಕಂಡು ಹೆದರಿ, ಸಿಟ್ಟು ತಡೆಯದೇ ಎರಡು ಎಟು ಕೊಟ್ಟು ,ಅಜಯ್ ಬಗ್ಗೆ ಇರೋ ಸತ್ಯ ವಿಚಾರ ಹೇಳಿದಳು. ಅಂದಿನಿಂದ ಅರ್ಜುನ ಮೌನಿಯಾದ.ತನ್ನ ತಾಯಿಯ ಸಂಕಟ ನೋವನ್ನು ಅರ್ಥ ಮಾಡಿಕೊಂಡು ಬೆಳಿಗ್ಗಿನ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ತನ್ನ ತಂದೆಗಾಗಿ ಮೀಸಲಿಡುತ್ತಾನೆ.


ದಿನವೂ ‌ತನ್ನ ಶಾಲೆಯಲ್ಲಿ ನಡೆದ ಘಟನೆಗಳನ್ನು ಅಪ್ಪನಿಗೆ ಹೇಳುವುದೆಂದರೆ ಅವನಿಗೆ ಸಮಾಧಾನ.ಸಮಯ ಓಡಿದ ಹಾಗೆ , ಅರ್ಜುನ ಬೆಳೆದು ದೊಡ್ಡವನಾದ.ತನ್ನ ತಂದೆ ಮಾಡುತ್ತಿದ್ದ

"ಶಿಕ್ಷಕ ವೃತ್ತಿ"ಯನ್ನು ಮಾಡಬೇಕೆನ್ನುವುದು ತನ್ನ ಇಚ್ಛೆ ಎಂದು ತಾಯಿಗೆ ತಿಳಿಸಿದ. ಆಕೆಯೂ ಸಂತೋಷದಿಂದ ಒಪ್ಪಿಗೆ ನೀಡಿದಳು.ಅಜಯ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗುತ್ತದೆ.ವೈದ್ಯರು ತುರ್ತು ಚಿಕಿತ್ಸೆ ಗಾಗಿ "ಐಸಿಯು"ಗೆ ಶಿಫ್ಟ್ ಮಾಡಿದರು.ತಂದೆಯ ದೇಹಸ್ಥಿತಿಯ ಬಗ್ಗೆ ಡಾಕ್ಟರ್ ಬಳಿ ಕೇಳಿದಾಗ, "ಅಜಯ್ ಅವರಿಗೆ ಪ್ರಜ್ಞೆ ಬಂದರೆ ಹಳೆಯದೆಲ್ಲಾ ನೆನಪಾಗಬಹುದು. ಪ್ರಜ್ಞೆ ಬಾರದಿದ್ದರೆ ಕೋಮದಲ್ಲಿಯೇ ಸಾವು ಸಂಭವಿಸಬಹುದೆಂದು" ಡಾಕ್ಟರ್ ಹೇಳಿದರು.


ಇಪ್ಪತ್ತನಾಲ್ಕು ಗಂಟೆಯ ತನಕ ಏನೂ ಹೇಳುವ ಹಾಗಿಲ್ಲ ಎಂದಾಗ ತಾಯಿ, ಮಗ ಜಾಗರಣೆಯಲ್ಲಿಯೇ ಕಳೆದರು. ಒಂದೊಂದು ಗಂಟೆಯು ಒಂದೊಂದು ಯುಗದಂತೆ ಭಾಸವಾದ ಅನುಭವ ಇಬ್ಬರಿಗೂ. ಒಮ್ಮೆ ನನ್ನ ಬಾಳನ್ನು, ಯೌವ್ವನವನ್ನು ಹಾಳು ಮಾಡಿದ್ದೀಯಾ ದೇವರೆ, ನನ್ನ "ಮಾಂಗಲ್ಯ"ವನ್ನು ಉಳಿಸು ಎಂದು ಚಂದನ ದೇವರಲ್ಲಿ ಬೇಡಿದಳು.ಅವಳ ಪ್ರಾರ್ಥನೆ ದೇವರಿಗೆ ಕೇಳಿಸಿತೋ ಏನೋ!!! ಇಪ್ಪತ್ತನಾಲ್ಕು ವರ್ಷಗಳ ನಂತರ ಅಜಯ್ ಕೋಮದಿಂದ ಹೊರಬಂದ.ಅಜಯ್ ಎಚ್ಚರಗೊಂಡಾಗ ಚಂದನಳ ಜೊತೆ ಅಜಾನುಬಾಹು ಯುವಕನನ್ನು ಕಂಡು ಅಚ್ಚರಿಗೊಂಡರೂ ,ಅರ್ಜುನ ತನ್ನ ಮಗ ಎಂದು ತಿಳಿದು ಸಂತೋಷಪಡುತ್ತಾನೆ. ಹೆತ್ತವರನ್ನು, ಅತ್ತೆ ಮಾವನನ್ನು ಕಳೆದುಕೊಂಡರೂ ಎದೆಗುಂದದೆ ಮಗುವನ್ನು ,ತನ್ನನ್ನು ಇಷ್ಟು ವರ್ಷ ಚೆನ್ನಾಗಿ ನೋಡಿಕೊಂಡ ಚಂದನಳ "ನಿಸ್ವಾರ್ಥ" ಸೇವೆಯನ್ನು ಮನಸಾರೆ ಕೊಂಡಾಡಿದ.ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದ ನಂತರ ಅಜಯ್ ತನ್ನ ಕುಟುಂಬದೊಂದಿಗೆ ಮನೆಗೆ ಮರಳಿದ.ಮುಂದಿನ ದಿನಗಳನ್ನು ಮೂವರು ಸುಖವಾಗಿ ಕಳೆದರು.Rate this content
Log in

Similar kannada story from Tragedy