ಕೊರಳ್ದನಿ
ಕೊರಳ್ದನಿ


ಏನ್ ಪಸಂದಾಗ್ ನುಡುಸ್ತಾನ್ಲಾ... ಕೇಳಾಕೆ ಒಂತರಾ ಕುಸಿಯಾಯ್ತದೆ...ನಿಜ್‌ವಾಗ್ಲುವೇ...” ಮಾರಮ್ಮನ್ ಪೂಜೆಗ್ ಬಂದಿದ್ದ ಪಕ್‌ದೂರ‍್ನ ದೊಡ್‌ರಾಮೇಗೌಡ್ರು ಶಹಬ್ಬಾಸ್ ಗಿರಿ ಮಾತಾಡ್ಡಾಗ ಅಲ್ಲಿ ಕುಂತು ನಿಂತು ಮಾದ್ನ ಕೊರುಳ್ ಸರ ಕೇಳ್ತಾ ಇದ್ದಾ ಜನ್ರೂ ಹೌದೌದು..” ಅಂತ ತಲೆದೂಗಿ ಚಪ್ಳೆ ಹೊಡ್ದ್ರು. ದೊಡ್‌ರಾಮೇಗೌಡ್ರು ದೊಡ್‌ಕುಳ ಆಗೀದ್ರಿಂದ ಮಾದಂಗೆ ಏನಾದ್ರು ಸಿಕ್ಬೋದು ಅಂತ ಜನ ಯೇಚ್ನೆ ಮಾಡ್ದಂಗೇ, ಹತ್ರೂಪಾಯಿದ ಗರಿಗರಿ ನೋಟು ಮಾದ್ನ ಹರಕಲು ಜೇಬಿ ಸೇರ‍್ಕೊತು. ನಿಜವಾಗ್ಲುವೇ ಮಾದ ಕೊರುಳ್ ನುಡುಸ್ತಾನಂದ್ರೆ ಮುಗೀತು. ಕೇಳ್ದೋರೆಲ್ರೂ ತಲೆದೂಗ್ಲೇ ಬೇಕು. ಅಂತಾ ಸರ... ನುಡುಸ್ತಾಯಿದ್ರೆ ಇನ್ನೊಂದು ಪದಾ ನುಡುಸ್ಲಾ ಮಾದ’ ಅಂತ ದೊಡ್ಡೋರಾಗ್ಲೀ ಹೈಕ್ಳಾಗ್ಲೀ ಮುಗಿಬೀಳೋರು..ಊರ‍್ನ ಜನ್ರ ಮದ್ಯ ಮಾದ ಕಲಾದೇವ್ತೆ. ಇವತ್ತು ಮಾರಮ್ಮನ್ ಪೂಜೆಗೆ ದೇವ್‌ಸ್ತಾನ್‌ದಲ್ಲಿ ರಾತ್ರಿ ಹೊತ್ತು ದೊಡ್ ಪೂಜೆ ಇದ್ದಿದ್ರಿಂದ ಲೋ ಮಾದ ತಗಾಂಬಾರ‍್ಲಾ ನಿನ್ ಕೊರ‍್ಳ...ರಾತ್ರಿ ನುಡ್ಸೀವಂತೆ.. ಅಂಗಾರೂ ಜನ ಸೇರ‍್ಲಿ’ಅಂತ ಪೂಜಾರಪ್ನೋರು ಏಳ್‌ದೇಟ್ಗೆಯಾ ಗೌಡ್ರ್ ಹಿತ್ಲಾಗಿನ ಕೊಟ್ಗೆ ತಾವ್ಕೋಗಿ ಸಿಕ್ಸಿದ್ದ ಕೊಳುಲ್ನ ಹಿಡ್ಕಂಡ್ ಹೊಂಟಿದ್ದ. ಎತ್ತಾಗ್ಲ ಹೊಂಟೆ.. ದೇವ್‌ಸ್ತಾನ್‌ಕಾ...ಜಗ್ಲೀ ಮ್ಯಾಗ್ ಕೂತು ಎಲಡ್ಕೆ ಜಗೀತಿದ್ ಗೌಡ್ರು ಕೇಳ್ದಾಗ... ಹೂಂ..’ ಅಂತ ತಲೆಯಾಡಿಸ್ತ. ದನ್‌ಗಳ್ನ ಕೂಡಾಕಿದ್ದೀಯಾ? ’ ಹೂಂ’ ಸರಿ ಓಗ್ಮತ್ತೆ..’ ಗೌಡ್ರು ಹೇಳ್ದೇಟ್ಗೆಯಾ ಒಂಟ್‌ಬುಟ್ಟು..ದೇವುಸ್ಥಾನ ಸೇರ‍್ಕಂಡ. ***
"ಸಾಲೆಗೀಲೆ ಅಲ್ಲರ‍್ಲಿ ಬಾಯ್ಮುಚ್ಕೊಂಡು ಗೌಡ್ರಮನ್ಯಾಗ ದನನೋಡೋಕೋಗ್ಲಾ...ಅಪ್ಪನ್ಗೂ ಉಸಾರಿಲ್ಲ.. ಗಂಜಿಗ್ ತಂದಕೋರ‍್ಯಾರು... ಅವ್ರಂತರ‍್ಮನೆ ಕೆಲ್ಸ ಸಿಗದಂದ್ರೆ ನಾವ್ ಪುಣ್ಯ ಪಡೀಬೇಕು... ನೆನ್ನೆ ತಾನೇ ನನ್ ಕರ‍್ದು ಕೈಗತ್ರೂಪಾಯ ಕೊಟ್... ಈ ಇಸ್ಯ ತಿಳ್ಸವ್ರೆ... ಓದ್ಕಾಂಡಿದ್ರೇನೂ ಗಂಜಿ ಬಂದ್ಬುಡಾಕಿಲ್ಲ ಸುಮ್ಕೆ ನಾಳಿಕಿಂದ ಗೌಡ್ರು ಮನ್ಯಾಗ ಅಟ್ಟಿತಾವ ಓಗು.. ಕೆಲ್ಸಹಚ್ಕೋ”
ಎರಡು ಮಂಡಿಗೂ ಕೈ ಒತ್ತಿ ಮ್ಯಾಲೆದ್ದು ‘ಉಸ್ಸಪ್ಪಾ’ ಅಂತ ಉಸಿರಾಕಿ ಆ ನೆರಕೆ ಮನೆಯ ಬಾಗ್ಲಲ್ಲಿ ಬಗ್ಗಿ ನಡ್ದು ಎಲಡ್ಕೆರಸ ಉಗ್ದು ಬಾಯಲ್ಲಿ ಉಳ್ಕೊಂಡಿದ್ದ ಚೂರುಪರ‍್ನ ಕೈ ಬೆರಳು ಮೀಚಿ ತಗ್ದು ಹೊರ‍್ಗಾಕಿ “ತ್ಥೂತ್ಥೂ..” ಅಂತ ಉಗ್ದು ಒಳಗ್ ಬಂದು ಕುಂತ್ಲು ಸಣ್ಣಮ್ಮ.
ಬುಡ್ಡೀ ದೀಪದ್ ಬೆಳ್ಕಲ್ಲಿ ಗುಡಿಸ್ಲೊಳ್ಗೆ ಅಷ್ಟೇನೂ ಕಾಣ್ಸೋಕಿಲ್ಲ..ಒಲೆ ಹತ್ರ ಹೋದ ಸಣ್ಣಮ್ಮ... ಸೌದೇನ ಪುನ: ಒಳೀಕ್ ದೂಡಿ ಉರಿ ಹೊತ್ತೋವಂಗ್ ಮಾಡಿದ್ಲು..
ಅವ್ವ ಹೇಳ್ದ ಮಾತ್ಗೆ ಮಾದ ತಿರುಗಿ ತಂದೆ ಕಡೆ ನೋಡ್ದ... ನೆರ್ಕೆಗೋಡೆಗೊರಗಿದ್ದ ಜವುರಪ್ಪ ಕಾಲ್ಗೆ ಹೊದ್ದ ಕಂಬ್ಳಿ ಸಡಿಲ ಮಾಡ್ಕಂಡು.. ಬಲ್‌ಬದೀಲಿ ಹಾಸ್ಗೆ ಕೆಳ್ಗೆ ಮಡ್ಗಿದ್ದ ಆ ಮೋಟ್‌ಬೀಡಿ ತೆಗ್ದು ಮಾದ್ನ ಕೈಗೆ ನೀಡ್ದ.. ಒಲೆ ಉರಿಗೆ ಬೀಡಿಯ ತುದಿಯನ್ನು ಹಿಡ್ದು ನಂತ್ರ ತಂದು ಅಪ್ಪನ್ಗೆ ನೀಡ್ದ. ಜವ್ರಪ್ಪ ತ್ರಾಣವಿಲ್ದಿದ್ರೂ ಒಂದ್ ದಂ ಜೋರಾಗೆ ಎಳ್ದು ಒಗೆ ಬುಟ್ಟು... ತಡೆತಡೆದು ಕೆಮ್ಮತೊಡಗಿದ. ಜವ್ರಪ್ಪನ ಆ ಕೃಶ ಶರೀರದಲ್ಲಿ ಎಲುಬುಗಳ ಆಕಾರ ಹೆಂಗಿತ್ತೋ ಅಂಗೇ ಕಾಣಿಸ್ತಿದ್ದೋ. ಎಲುಬು ಗೂಡಿನ ಮೇಲೆ ಚರ್ಮದ ಬಟ್ಟೆ ಹರವಿದಂತಿತ್ತು ಆ ದೇಹ. ಕಣ್ಣುಗಳು ಗುಳಿಬಿದ್ದಿದ್ವು. ತಲೆಗೂದ್ಲು ಎಣ್ಣೆಕಾಣ್ದೆ ವರ‍್ಸಗಳೇ ಆಗಿರ‍್ಬೇಕು. ಕೂದ್ಲು ದಟ್‌ವಾಗದಿದ್ರೂ ಕೆದರಿದ್ರಿಂದ ಕೃಶ ಮುಖಕಿಂತ್ಲೂ ದೊಡ್ಡದಾಗೇ ಕಾಣಿಸ್ತಿತ್ತು. ಅದ್ಯಾವ್ದೋ ಒಂದಿನ ಜವ್ರಪ್ಪನಿಗೆ ವಾಂತಿಭೇದಿ ಅತಿಯಾದಾಗ ಡಾಕ್ಟ್ರ ಹತ್ರ ಹೋದಾಗ ಪರೀಕಿಸಿ ನಂತ್ರ ಕೊಟ್ಟ ಮದ್ದು ಮಾತ್ರೆ ತಂದು ಮೊದಲೆರ‍್ಡು ದಿನ ಉಪಯೋಗ್ಸಿದ್ರೂ ಆನಂತ್ರ “ಅವುಸ್ದಿ ಬ್ಯಾಡ... ಸ್ವಲ್ಪ ಕಾರ ಮಾಡಮ್ಮಿ.. ನಾಲ್ಗೆ ಚಪ್ಪೆಯಾಗದೆ...” ಅಂದು ಹೆಂಡರ‍್ಗೇಳ್ದಾಗ, ಸಣ್ಣಮ್ಮ ಒಂದರ‍್ಡು ಮೆಣ್ಸು ಎಂಗೋ ತಂದು ಕಾರಮಾಡಿ ಬಡ್ಸಿದ್ಲು. ನಿಂತಿದ್ ರೋಗ ಪುನ: ಜಾಸ್ತಿಯಾದಾಗ ಹೆದ್ರಿ ಸಣ್ಣಮ್ಮ ಸೋಕು ತೆಗ್ದು.. ಎಲೆ ನೀವಳ್ಸಿ ಹಾಕಿದ್ಳು. ಈಗ ಹೆಂಗೋ ಪರವಾಯಿಲ್ಲ ಎಂಬಂತೆ ಕುಳ್ತಿದ್ದ ಜವ್ರಪ್ಪ. ಆದ್ರು ನಿತ್ರಾಣ ಎದ್ದು ಕಾಣ್ತಿತ್ತು. 'ಮಾದ... ನಾಳಿಂ...’
ಜವ್ಮಾರಪ್ನ ಮಾತ್ಗೆ ಕೆಮ್ಮು ಅಡ್ಡಿಯಾಗ್ತಿತ್ತು.
"ನಾಳಿಂದ ಅವ್ವುಂಜತ್ಗೆ...ನೀನೂ ಓಗಪಾ..ಗೌಡ್ರ ಹಟ್ಟಿತಾವ್ಕೆ..."
"ಅವ್ವ ಒಬ್ಳೆ ತಂದ್ರೇನೂ ಸಾಲಾಕಿಲ್ಲ..." ಉಸಿರೆಳ್ದು "ಕರ್ಚ್ಗ್ಯಾರ್ ಕೊಡೋರು... ನಾಳಿಕಿಂದ ಓಗಪ್ಪಾ..." ಅಂದು ಕೆಮ್ಮ ತೊಡಗಿದ. ಮಾದ್ನ ಹನಿ ಜವ್ರಪ್ಪಂಗೆ ಆಗ್ಲೀ.. ಸಣ್ಣಮ್ಮನಿಗಾಗ್ಲಿ ಆ ರಾತ್ರೆ ಬೆಳಕಿನಾಟ್ದಲ್ಲಿ ಕಾಣ್ಸಿಲ್ಲ.
"ಲೋ ಮಾದ ನೀನ್ ಕಲ್ತಿರೊ ಕರ‍್ಳ ಇದ್ಯಗೆ..ನೀನೇನಾದ್ರೂ ಸಾಲೆ ಸೇರುದ್ರೆ, ಆ ಇದ್ಯೆ ಸೇರ‍್ಕಂಡು ಬಾಳ್ದೊಡ್ ಮನ್ಸಾ ಆಗ್ತೀ ಕಣ್ಲಾ" ಪಕ್ಕದ್ ಮನೆ ಸಿದ್ಧ ಹೇಳಿದ್ ಮಾತು, ಮಾದ್ನ ಮನ್ಸಲ್ಲಿ..ಬಾಳ್ದೊಡ್ಡ ಕನ್ಸನ್ನೇ ಮೂಡ್ಸಿತ್ತು. ಮಾದ್ನ ಯೇಚ್ನೆ ಮೆಲ್ಲ ಹಿಂದ್ಕೋಡ್ತು
***
ಲೋ ಮಾದ ನೀನು ಪಾಸಾಗಿದ್ದೀ... ನಾನುವೇ...” ಅಂತ ಸಿದ್ದ ಕೂಗಿ ಹೇಳ್ದಾಗ ಮಾದ್ನ ಕುಸಿಗೇ ಅಂತ್ಯ ಅಂತೇಳದೇ ಇಲ್ಲ. ಓಡಿ ಹೋದವ್ನೇ ಅವ್ವನ ಸೆರಗಿಡ್ದ.. ಅವನ ನಗು ಮುಖ ಕಂಡು ಸಿದ್ದ ಹೇಳ್ದ ಸುದ್ದಿ ಕೇಳಿಸ್ಕಂಡ್ರೂ ಯಾವ್ದೇ ಬಾವ್ನೆಯಿಲ್ದೆ ಜವ್ರಪ್ಪ ಕುಂತಿದ್ದ. ಪುಡಿಗಾಸೂ ಇಲ್ಲದ ಜವ್ರಪ್ಪನಿಗೆ ಮಗೀಗೆ ಮೀಟಾಯಿ ತೆಗೆದುಕೊಡಲು ಹಿಂಜರಿದು ಅವೆಲ್ಲಾ ಬೇಡ ಕಣ್ಲ’ ಅಂದ. ಮಾದ, ಸಿದ್ದ ಬೀದೀಲಿ ಆಟ ಆಡ್ತಾ ಇರ‍್ಬೇಕಾದ್ರೆ... ಅದೇ ಬೀದಿ ದಾರಿಗಾಗಿ ಮೇಷ್ಟ್ರು ಬರ್ತಾ ಇದ್ರು.
'ನಿಮ್ಮನೆಗೇ ಆಗಿರ‍್ಬೋದು..'ಸಿದ್ದ ಮಾದ್ನ ನೋಡಿ ಹೇಳ್ದ. ಆ ಬೀದೀಲಿ ಮಲ್ಗಿದ್ದ ನಾಯಿ ಕೋಳಿ ಕಸಗಳ್ನೆಲ್ಲಾ ದಾಟಿ ಜವ್ರಪ್ನ ಗುಡಿಸ್ಲ ಮುಂದೆ ನಿಂತ್ರು ಮೇಷ್ಟ್ರು. ಮಾದ ಕೈ ಸಂಜ್ಞೆಯಿಂದ್ಲೇ ನಮಸ್ಕಾರ ಅರ್ಪಿಸ್ದ. ಜವ್ರಪ್ಪ... ಸಣ್ಣಮ್ಮರೂ ಹೊರಗ್ ಬಂದು ಭಯಭಕ್ತಿಯಿಂದ ನಮಸ್ತೆ ಸಾಮಿ’ ಅಂದ್ರು. ಮಾದನೆಡೆ ತಿರುಗಿದ ಮೇಷ್ಟ್ರು ‘ಮಾದ ನೀನು ಕ್ಲಾಸ್ನಲ್ಲಿ ಎಲ್ರಿಗಿಂತ್ಲೂ ಜಾಸ್ತಿ ಮಾರ್ಕ್ಸು ತಗ್ದು ಪಾಸಾಗಿದ್ದಿ’ ಅನ್ನುತ್ತಾ ತಾನು ತಂದಿದ್ದ ಪೊಟ್ಟಣ ಬಿಡಿಸಿ ಸಿಹಿ ಕೊಟ್ರು.
"ಈಗ ಹೇಗಿದ್ದೀರಿ... "
ಮೇಷ್ಟ್ರು ಜವ್ರಪ್ಪನ ಕಡೆ ತಿರುಗಿ ಕೇಳಿದರು.
"ಸತ್ತಿಲ್ಲ ಅಷ್ಟೆ ಸಾಮಿ.... "
ಮುಖ ಕವುಚಿ ನುಡಿದ ಜವ್ರಪ್ಪ.
"ಏನೂ ಚಿಂತೆ ಮಾಡ್ಬೇಡಿ...ದೇವ್ರವ್ನೆ ದಾರಿ ತೋರಿಸ್ತಾನೆ..ಮಗ್ನ ಮುಂದೂ ಓದ್ಸಿ"
"......’"
"ನಿಮ್ ಮಗ ಪಾಸಾಗವ್ನಲ್ಲ ಸಂತೋಷಪಡಿ.. ನಿಮ್ಗಿರೋ ನೋವು ನಂಗೂ ಗೊತ್ತಿದೆ... ಆದ್ರೆ ಅದ್ನೇ ಯೇಚ್ನೆ ಮಾಡ್ಕಂಡು ಕೊರಗ್ಬೇಡಿ.. ಮಾದಂಗೆ ಮುಂದೆ ಒಳ್ಳೇ ಭವಿಷ್ಯ ಐತೆ... ಈಗ್ಲೇ ಮನ್‌ದಲ್ಲೇ ಓದಿ ಅರ್ಥ ಮಾಡ್ಕಲ್ಲೋ ಶಕ್ತಿ ಅವುನ್‌ಗೈತೆ ಅಂದ್ಮೇಲೆ ನೀವೇ ಯೇಚ್ನೆ ಮಾಡಿ.." ಮಾದ ಮೇಷ್ಟ್ರನ್ನೇ ನೋಡ್ತಿದ್ದ.. ಅವತ್ತೊಂದಿನ ಕ್ಲಾಸ್ನಲ್ಲಿ
“ನೀನೇಳಪ್ಪಾ..ಅಂತ ಮಾದನೆಡೆ ಕೈ ತೋರ‍್ಸಿ ಪ್ರಶ್ನೆ ಕೇಳ್ದಾಗ.. ಮಾದ ಎದ್‌ನಿಂತ ಅಷ್ಟೆ. ಸುಮ್ನೆ ನಿಂತಿದ್ದ. ಬಾಯ್ ಬರದ್ ಮೂಗ್‌ಪಿಶಾಚಿ ತರ ನಿಂತಿದ್ದಿಯಲ್ಲೋ ಹೇಳೋ..."
ಬೆತ್ತದಿಂದ ರಪ್ಪನೆ ಹೊಡ್ದಾಗ ಮಾದ ಏನೂ ಆಗದವನಂತೆ ಸುಮ್ಮನೆ ನಿಂತಿದ್ದ.
"ಮಾದಂಗ್ ಬಾಯ್ ಬರೋದಿಲ್ಲ ಸಾ.. ಮೂಗ" ಅಂತ ಸಿದ್ಧ ಉಸುರಿದ್ದ ಕ್ಷಣವೇ ಮೇಷ್ಟ್ರಿಗೆ ಅಘಾತವಾಗಿತ್ತು. ಅವತ್ತಿನಿಂದ ಮಾದನ ಓದ್ಗೆ ಸಣ್‌ಪುಟ್ಟ ಸಹಕಾರ ನೀಡ್ತಾ ಬರ್ತಾ ಇದ್ರು. ಮಾದ್ನ ಹಿನ್ನೆಲೆ ತಿಳ್ಕಂಡು ಪ್ರತೀ ಕಷ್ಟಕ್ಕೂ ಸ್ಪಂದಿಸ್ತಾ ಇದ್ರು. ಮೇಷ್ಟ್ರ ಕರುಣೆಗೆ ಮಾದ್ನೂ ಮನಸ್ಸೋತಿದ್ದ. ಪ್ರತೀಯೊಂದ್ರಲ್ಲೂ ಮುಂದೇನೆ ಇದ್ದ. ತಿನ್ನೋ ಬಡ್ತನವಿದ್ರೂ ದಪ್‌ವಾಗಿ ಮುದ್ದುಮುದ್ದಾಗ್ ಬೆಳ್ದ ಮಾದ ಮೇಷ್ಟ್ರ ಪ್ರೀತಿಯ ವಿದ್ಯಾರ್ಥಿಯಗಿದ್ದ. ಎಲ್ಲಾ ಕ್ಲಾಸಲ್ಲೂ ತೇರ್ಗಡೆಯಾಗ್ತಿದ್ದ.
***
ಜವ್ರಪ್ಪ ಸಣ್ಣಮ್ಮರ ಮೌನ ಮುರಿಯಲು ಮೇಷ್ಟ್ರು ಮತ್ತೆ ಮಾತಾಡಿದ್ರು..
"ಈಗ ಏಳನೇ ತರಗತಿ ಪ್ರಥಮದರ್ಜೆಯಲ್ಲಿ ಪಾಸಾಗವ್ನೆ ನಿಮ್ ಮಗ.. ಏನಂತೀರಿ ಜವ್ರಪ್ನೋರೆ.. ಸುಮ್ಕೇ ಇದ್ದೀರಿ"
"ಅಯ್ಯಾ ಬುಡೀ ಸಾಮಿ...ಈ ಇದ್ಯಾಗಿದ್ಯಾ ಅನ್ನಾದು ದೊಡ್ಡೊರ್ಗ್ ಮಾತ್ರ ನಮ್ಮಂತವ್ರ‍್ಗ್ಯಾಕೆ.." "ಅಂಗನ್ಬೇಡಿ... ನಾನೂ ಅಲ್ಪಸ್ವಲ್ಪ ಸಹಾಯ ಮಾಡ್ತೀನಿ.."
"ನೀವಿರೋತಂಕ ಮಾಡ್ತೀರಿ ಸಾಮಿ..ಅಮೇಗ್ಯರ‍್ಮಾಡಾರು.. ನಾನೂವೇ ಕಾಇಲೇ ಬಿದ್ದೀವ್ನಿ.. ನನ್ ಹೆಂಡ್ರು ಒಬ್ಳೇ ದುಡೀಬೇಕು.. ಅದ್ರುಬದ್ಲು ಇವ್ನುವೇ ಸಣ್‌ಪುಟ್ ಕೆಲ್ಸ ಮಾಡ್ಕಂಡ್ರೆ ..ಎಂಗೋ ಬದಿಕಂತೀವಿ... ಜವ್ರಪ್ಪ ನಿತ್ರಾಣದಲ್ಲೇ ಮಧ್ಯೆಮಧ್ಯೆ ಕೆಮ್ಮುತ್ತಾ ನುಡ್ದ.
" ಹಂಗ್ಯಾಕಂತೀರಿ ಬಡ್ತನ್ದಿಂದ ಮ್ಯಾಲ್ಕೆರ‍್ದೋರು ತುಂಬಾ ಅವ್ರೆ.. ನಿಮ್ಗಂತೂ ವಿದ್ಯೆ ಹತ್ತಿಲ್ಲ.. ಬುದ್ದಿನೂ ಇಲ್ಲ.. ಆ ಮಗೀನ್ ಬಾಳೇಕಾಳ್ಮಾಡ್ತೀರಿ..."
ಮೇಷ್ಟ್ರು ದನಿಯಲ್ಲಿ ಕಳವಳದ ಜತೆ ಕೋಪವಿತ್ತು. "............"
"ಏನ್ ಸಹಾಯ ಬೇಕೋ ನಾನ್ ಮಾಡ್ತೀನಿ.. ಒಂದ್ ವಾರ‍್ದೊಳ್ಗೆ ಏನೆಲ್ಲಾ ಪುಸ್ತಕ ಬೇಕೋ ನಾನೇ ತಗ್ದು, ಹೈಸ್ಕೂಲ್ ಸೇರ‍್ಸಿತೀನಿ.. ಪಕ್ಕದ್ ಊರ‍್ನಾಗ ಹೈಸ್ಕೂಲ್ ಐತೆ....ಮೇಷ್ಟ್ರು ಮಾದ್ನ ಕಡೆ ತಿರುಗಿ ನೋಡ್ದ್ರು.
ಮಾದ್ನ ಆ ಕಣ್ಣುಗಳಲ್ಲಿ ಹೊಸತನ ಕಂಡಾಗ ಅವ್ರಿಗೆ ಸ್ವಲ್ಪ ಸಮಾಧಾನವಾಯ್ತು.
"ಮಾದ... ಸರೀನಾ... "
ಮಾದ ಕುಸಿಯಿಂದ ತಲೆಯಾಡಿಸಿದ.
"ನಾನಿನ್ನು ಬರ‍್ತೇನೆ... ಜವ್ರಪ್ನೋರೆ.."
ಕೈಮುಗ್ದು.. ಮೇಷ್ಟ್ರು ಹೊರಟರು.
"ಓಗ್ ಬನ್ನಿ ಸಾಮಿ..." ಪ್ರತಿಯಾಗಿ ಜವ್ರಪ್ಪ ನುಡ್ದ. ಮೇಷ್ಟ್ರು ಮತ್ತೆ ಅಪ್ಪ-ಅವ್ನ ಕಡೆ ತಿರುಗಿ ನೋಡ್ತಿದ್ದ ಮಾದ...
ಏನೋ ನೆನಪಾದಂತಾಗಿ ಗುಡಿಸ್ಲೊಳಗೋಡ್ದ. ನೆರಕೆಯ ಛಾವಣಿ ಆಧಾರದ ಆ ಮಧ್ಯೆ ಕಂಬ್ದಲ್ಲಿ ಸಿಕ್ಕಿಸಿದ್ದ್ ಬ್ಯಾಗ್ನೊಮ್ಮೆ ತೆಗ್ದು ಒದ್ರಿ, ಪುಸ್ತಕಗಳ್ನ ತೆಗ್ದು ಜೋಡ್ಸಿ ಒಳ್ಗಡೆ ಪೆನ್ನು... ಕಂಪಾಸಬಾಕ್ಸು... ಪೆನ್ಸಿಲ್ಲು ಓರಣವಾಗಿಟ್ಟ. ಬ್ಯಾಗೊಳ್ಗೆ ಎಂಟ್ನೆ ಕ್ಲಾಸು ಪುಸ್ತಕದ ಕನಸ ಕಂಡರ‍್ಬೇಕು, ಪ್ರೀತಿಯಿಂದ ಕೈಯಾಡ್ಸಿ ಅದೇ ಕಂಬ್ಕೆ ಸಿಕ್ಕಿಸ್ದ. ಅವತ್ತಿಡೀ ತಾನು ಎಂಟ್ನೇ ಕ್ಲಾಸ್‌ಗೋಗೋ ಕನ್ಸು ಕಾಣೋದರಲ್ಲೇ ಕಳ್ದ. ಜವ್ರಪ್ಪ ತನ್ ಮಗೀನ ಕುಸಿ
ಮೋಟು ಬೀಡಿಯೆಳೆಯುತ್ತಾ ನೋಡ್ತಿದ್ನೇ ಹೊರ‍್ತು ಶೂನ್ಯವಾಗಿದ್ದ.
"ಏನಾದ್ರೂ ಮಾಡ್ಕಳ್ಳಿ..."ಅಂತ ಅಸಹನೆಯಿಂದ ಸಣ್ಣಮ್ಮ ಸೌದೆ ಆಯ್ತಿದ್ರೆ
ಮಾದ್ನ ಎಳೇ ಮನಸ್ನಲ್ಲಿ ಯಾವ್ದೋ ಅವ್ಯಕ್ತ ಆನಂದ ತುಂಬಿತ್ತು.
***
ಆ ಪುಟ್ಟ ಗುಡಿಸಲ ನೆರಕೆಯ ಮನೆಯೊಳಗೆ ದೀಪ್ದ ಬೆಳ್ಕು ಕುಣೀತಿತ್ತು. ಎಳೇ ಬಾಲಕ ಮಾದ್ನ ಕಣ್ಣುಗಳು ಮುಗ್ದುವಾಗೇ ಕಾಣ್ತಿದ್ವು. ಆ ಕಣ್ಣುಗಳು ಹನಿಗೂಡಿದ್ದು ಜವ್ರಪ್ಪನಾಗ್ಲೀ... ಸಣ್ಣಮ್ಮಳಾಗ್ಲೀ... ನೋಡ್ಲಿಲ್ಲ.
ನಿಶ್ಯಬ್ದ!...
ಒಲೆಯೊಳಗಿದ್ದ ಉರೀತಿರೋ ಸೌದೆಯ ಚಿಟ್‌ಚಿಟ್’ ಶಬ್ದ.. ಮಧ್ಯೆಮಧ್ಯೆ ಕೆಮ್ಮೋ ಸರ ಬಿಟ್ರೆ ನೆರ್ಕೆಯೊಳ್ಗೆ ಗಾಡಮೌನ. ಮೌನದ ನಡುನಡುವೆ ಮಾದ್ನ ಬಿಕ್ಕುವ ದನಿ. ಅವ್ವಂಗೂ ಅಪ್ಪಂಗೂ ಏನೇಳ್ಬೇಕು.. ಹೇಳ್ಬೇಕನ್ಸುದ್ರೂ... ಹೆಂಗೇಳೋದು... ಅಸಾಧ್ಯದ್ ಮಾತೇ..ಬಾವ್ನೆಗಳ್ನಾದ್ರೂ ಅರ್ತ ಮಾಡ್ಕಳ್ಳ ಸಕ್ತಿ... ಬಾವ್ನೆಗಳೇ ಇಲ್ದ ಅಪ್ಪಂಗೂ ಅವ್ವಂಗೂ ಇಲ್ಲ. ಮಾದ್ನ ದುರಾದೃಸ್ಟವಿರ‍್ಬೇಕು.. ಬಿಕ್ಕುವ ದನಿಗೂ ಅವ್ರ ಸಾಂತ್‌ವಾನ ಇಲ್ಲ.
"ಆ ಮೇಷ್ಟ್ರುಗೇನಾಗ್ಬೇಕು...ಅವ್ನು ಏಳ್ದಂಗ್ ಕುಣಿಯೋಕಾಗಾದಾ? ಅವ್ರೇನು ನಮ್ ಜೀವ್ನುಕಿರೋದೆಲ್ಲಾ ಮಾಡಾರಾ.. ನಮ್ಮಂತವ್ರ್ ಕಸ್ಟ ಅವ್ರ‍್ಗೇನ್ಗೊತ್ತು...’ ಸಣ್ಣಮ್ಮ ಒಲೆಮೇಲಿದ್ದ ಗಂಜಿ ಕೆಳ್ಗಿಳಿಸ್ತಾ ಹೇಳುದ್ಲು. ಸುಮ್ಕಿರಮ್ಮಿ...ಸಾಲಗೋದ್ರೂವೇ ಯೇನೀಗ.. ಕುಂತಿದ್ದ ಜವ್ರಪ್ಪ ಬರಿಮೈಯ ಬಗ್ರಿಮೂಳೆಮ್ಯಾಗೇ ಕೈಯಾಡಿಸ್ತಾ.. ಬಲಗೈನಾಗೆ ಜೋರಾಗ್ ಬೀಡಿ ಎಳ್ದು ಹೊಗೆ ಬುಟ್ಟು ಹೇಳ್ದ.
ನಂತ್ರ ನಿರಾಳವಾಗಿ ಸರಾಯಿ ಕುಡಿದು.. ಗ್ಳಾಸು ಕೆಳಗಿಟ್ಟು.... ಖಾರಾ ನೆಂಜತೊಡಗಿದ. ಇದ್ನೆಲ್ಲಾ ಮಾಮೂಲಿ ರಾತ್ರಿ ಕಂಡು.. ಆ ಘಾಟುವಾಸನೆ ಅನುಭವ್ಸಿ ಮಾದನಿಗೆ ಅಭ್ಯಾಸ. ಯಾವ್ದೇ ಭಾವನೆ ತರ‍್ದೆ.. ಆ ರಗ್ಗು ಹೊದ್ಕೊಂಡು ಮಲಗ್ದ. ಆದ್ರೆ ನಿದ್ದೆ ಬಂದಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವ್ವನ ಗೊರಕೆ ಶಬ್ದ.. ಅಪ್ಪನ ಗೊರಕೆ.. ದೀಪ ಉರೀತ್ತಿತ್ತು.. ಮಾದ ಮಲ್ಗಿದ್ದ ಜಾಗ್ದಿಂದ ಬ್ಯಾಗು ನೋಡ್ದ... ದು:ಖ ತಡೆಯಲಾರದೆ ಪುನ: ಬಿಕ್ಕಲು ಪ್ರಾರಂಭಿಸಿದ.... ಆದರೆ ಆತನ ಬಿಕ್ಕಳಿಕೆಯಿಂದ ಅವ್ವನಗೊರಕೆಗೂ..ಕುಡಿದು ಮಲಗಿದ್ದ ಅಪ್ಪಂಗೂ ಯಾವ್ದೇ ಭಂಗವಿರಲ್ಲಿಲ್ಲ.. ಬಿಕ್ಕುತ್ತಲೇ ಇದ್ದ..
ಬೆಳ್ಗೆ ಸೂರ‍್ಯ ಮೂಡೋ ಹೊತ್ಗೆ... ಮಾದನ್ಗೆ ಎಚ್ರವಾದಾಗ ಅವ್ವ ಎಲ್ಲೋ ಹೋಗಿದ್ದಳು.. ಮಲ್ಗಿದ್ರೂ ಎಚ್ರವಾಗೇ ಇದ್ದ... ಅವ್ವ ಬಂದಾಗಾಯ್ತು..
"ಕೇಳ್ದ್ರಾ... ಇಸ್ಯವ’
"ಏನೇಳಮ್ಮಿ..." ಅಪ್ಪ ಅವ್ವನ ದನಿ ಕಣ್ಣು ಮುಚ್ಚಿದ ಮಾದಂಗೆ ಕೇಳಿಸ್ತಿತ್ತು
"ಆ ಮೇಷ್ಟ್ರು... ಬ್ಯಾರೆ ಇನ್ನಿಲ್ವಂತೆ...ಬೇರೆ ಸಾಲೆಗೆ ಓಗವ್ರಂತೆ..."
"ಅವುದೇನಮ್ಮಿ...ಅಂಗಾರೆ... ನಮ್ ಮಾದಂಗೇನ್ಮಾಡಾದು..."
"ಸುಮ್ಕಿರಿ... ಅದ್ಬೇರೆ ಏಳಿ ಆ ಮಗೀನ್ಮನ್ಸು ಕೇಡ್ಸ್ಬೇಡಿ... ಸುಮ್ಕೆ ಇವತ್ತಿಂದ ಗೌಡ್ರ ಹುಟ್ಟಿತಾವ ಓಗ್ಲಿ..." "ಅದೇನಂತಾ... ದೊಡ್‌ಕೆಲ್ಸ ಅಲ್ವಲ್ಲಾ... ದನ್‌ಗಳ್ನ ಆ ಬಾಣೀಲ್ಬುಡೋದು ....ನೋಡ್ಕಾಂಡ್ಕುಂತಿರದಷ್ಟೇ ಅಲ್ವಾ..."
ಎಳೆಮನಸ್ಗೊಂದು ಸೂಜಿ ಚುಚ್ಚಿದನುಭವ...
"ಏಳಪ್ಪಾ ಮೊಕ ತೊಳೀ.... ಗೌಡ್ರು ಅಟ್ಟಿತಾವ್ಕೋಗೋವ..." ಎಂದು ಸಣ್ಣಮ್ಮ ಹತ್ರ ಬಂದು ತಲೆನೇವರಿಸಿ ಪೂಸಿಯೊಡೆದಾಗ ಮಾದನಿಗೆ ಬೇರೆ ದಾರಿ ಕಾಣಲ್ಲಿಲ್ಲ..
***
ಕೊಟ್ಗೆ ಸೂರಿನಲ್ಲಿ ಧೂಳಿಡಿದ ಆ ಕೊರ‍್ಳನ್ನ ಕಷ್ಟಪಟ್ಟು ತೆಗೆದು ಅದನ್ನು ಒದರಿ... ನೀರಿನಲ್ಲಿ ತೊಳೆದು ತನ್ನ ಅಂಗಿಯಿಂದ ಒರೆಸಿದ ಮಾದ ಅದ್ರ ಅಂದಚಂದಕ್ಕೆ ಮಾರುಹೋದ.... ಬೇಕಾದ್ರ್ ತಗಂಡೋಗು... ಬಂದ ಗಡಸು ಸ್ವರಕ್ಕೆ ಮಾದ ತಿರುಗಿದ... ದಢೂತಿಯಾಕಾರಾದ ದಪ್ಪ ಮೀಸೆಯ ಸಾವುಕಾರ್ರು ನಿಂತಿದ್ದ... ಬೇಗ್ಬೇಗ ಕಟ್ಟಾಕಿದ್ದ ದನಗಳ್ನ ಬಿಚ್ಚಿ ಗುಡ್ಡದ್ ಬಾಣೆ ಮ್ಯಾಕೆ ಹೊಡ್ಕೊಂಡೋಗ ಹತ್ತಿದ. ಕೈನಲ್ಲಿ ಕೊರ‍್ಳು ಗಟ್ಟಿಯಾಗಿ ಹಿಡ್ಕಂಡಿದ್ದ. ಗುಡ್ಡದ್ ಬಾಣೆಗೆ ಹೋದ ಮಾದ ಮೇಯಲು ದನಗಳ್ನ ಬಿಟ್ಟು..ಒಂದ್ಕಡೆ ಕುಂತ್ಕಂಡ.. ಅವಂಗೆ ಸಿಕ್ದ ಆ ಕೊರ‍್ಳು..ಬೇರೆಲ್ಲವನ್ನೂ ಮರೆಯೋ ಅಂಗೆ ಮಾಡೋಕೆ ಶುರು ಮಾಡ್ಕತ್ತು.
"ಸಾಲೆಗೀಲೆ ಅಲ್ಲರ‍್ಲಿ... ಬಾಯ್ಮುಚ್ಕೊಂಡು... ಗೌಡ್ರ ಮನ್ಯಾಗ ದನ ನೋಡ್ಕೊಳಕ್ಕೋಗ್ಲಿ.. ಅಪ್ಪಂಗೂ ಉಸಾರಿಲ್ಲ... ಗಂಜಿಗ್ ತಂದಾಕರ‍್ಯಾರು... ಅವ್ರಂತರ‍್ಮನೆ... ಕೆಲ್ಸ ಸಿಕ್ಕದಂದ್ರೆ... ನಾವ್ ಪುಣ್ಯ ಪಡಿಬೇಕು. ನಿನ್ನೆ ತಾನೆ ನನ್ ಕರ‍್ದು ಕೈಗತ್ರೂಪಾಯ ಕೊಟ್.... ಈ ಇಸ್ಯ ತಿಳ್ಸವ್ರೆ... ಓದ್ಕಾಂಡಿದ್ರೇನೂ... ಗಂಜಿ ಬಂದ್ಬುಡಾಕಿಲ್ಲ ಗೌಡ್ರಮನ್ಯಾಗ ಅಟ್ಟಿತಾವ ಓಗು... ಕೆಲ್ಸ ಹಚ್ಕೋ’ ಮಾದ್ನ ಮನ್ಸು ಯಾಕೋ ಸರಿಯಾಗಿಲ್ಲ..
ಮೈಕೈಗೆ ತಣ್ಣಗ್ ಗಾಳಿ ಸಿಕ್ಕೋ ಆ ದೊಡ್ ಮರ‍್ದ ಕೆಳಗ್ ಕೂತ..ದನಗಳು ತಮ್ಮಷ್ಟಕ್ಕೇ ಮೇಯ್ತಿದ್ವು. ಗೌರಿಹಸ್ದ ಕೊರಳ್ಗೆ ಕಟ್ಟಿರೋ ಗಂಟೆ ‘ಚಣ್ ಚಣ್’ ಅನ್ನುತ್ತಿತ್ತು... ಬೆಟ್ಟಗುಡ್ಡಗಳು ತನ್ನ ಸೌಂರ‍್ಯದಿಂದ ಮಾದನನ್ನು ಸೆಳೆಯಲು ಸೋತಿದ್ದವು. ಮೇಷ್ಟ್ರು ಯಾಕೆ ಬಂದಿಲ್ಲ?..
ಮನಸ್ಗೆ ಚುಚ್ಚರ‍್ಬೇಕೇನೋ.. ಕಣ್ಣಂಚಿನಲ್ಲಿ ಒಂದೆಲ್ಡು ಹನಿ.. ಸ್ವಲ್ಪ ಹೊತ್ತಾದ್ಮೇಲೆ ಕಣ್ಣುಗಳು ಕುತೂಹಲದಿಂದ ಕೊಳಲಿನ ಕಡೆಗೋಯ್ತು.. ನಮ್ ಕೇರಿ ಕೆಂಚಯ್ಯ... ಇದ್ನ ಏಸ್ ಚೆನ್ನಾಗ್ ನುಡ್ಸೋನು.. ಪಾಪ ಆವ್ನ್ ಸತ್ತೋದ. ಅಂಗಂದುಕೊಂಡವನೇ ಕೊರ್ಳ್ಗೆ ತುಟಿಯೊತ್ತಿದ.. ಮ್ಯಾಗೇ ಕೈಗೆತ್ಕೊಂಡ, ಉಸುರಿದ....ಊಹೂಂ..ಬರಲ್ಲಿಲ್ಲ.. ಪ್ರಯತ್ನಿಸಿದ..ಮುಂದುವರೀತು..ಅಲ್ಲಿದ್ದ ರಂದ್ರಗಳ ಮೇಲೆ ಬೆರಳಿಟ್ಟ ..ಹೆಂಗೆಗೋ ಆಡಿಸಿದ...ಒಟ್ಟಾರೆ ಅಪಸ್ವರಗಳು ಹಿಂದೆ...ಮುಂದೆ..ಆತನ ಜೀವನದ ದಾರಿಯಂಗೆ..
ದಿನಗಳುರುಳುತ್ತಿತ್ತು... ಎಂದಿನಂತೆ ಗುಡ್ಡದ್ ಮ್ಯಾಗಿನ ಜೀವ್ನ..ದನಗಳ್ನ ಬಿಟ್ಟು ತುಟಿ ತಾಗುವ ಕೊರ್ಳು..
ಕೊರ‍್ಳ ದನಿ ಲಯಲಯವಾಗಿ ಹೊಮ್ಮಿ ಇಂಪಾದ್ ರಾಗ ಮೂಡಹತ್ತಿತ್ತು. ಮಾದ್ನ ಆ ಕೊರ‍್ಳ ಸರದಲ್ಲಿ ಆಳವಾದ ದನಿ ಯಾರ‍್ಗೂ ಗೊತ್ತಾಗ್ತರ‍್ಲಿಲ್ಲ..ಯಾರ‍್ಗೂ ಅರ್ಥವಾಗ್ತಿರ‍್ಲಿಲ್ಲ.. ಆ ಕೊರ‍್ಳು ದನಿ ಗುಡ್ಡದ್ ಬಾಣಿಯ ಸುತ್ತಮುತ್ತ ಕಾಡಿನೊಳ್ಗೆ ಪ್ರತಿದನಿಸ್ತಿತ್ತು..ಆಮೇಲೆ ಲೀನವಾಗ್ತಿತ್ತು..
ಮಾದ್ನ ದನಿ ಊರ‍್ನಮಂದಿಗಾಗ್ಲೀ.. ಮೇಷ್ಟುಗಾಗ್ಲೀ
ಸಾವುಕಾರ್ಗಾಗ್ಲೀ ಕೇಳಿಸ್ತಿರ್ಲಿಲ್ಲ.. ಮಾದ್ನ ಸರ... ಮೂಕದನಗಳಗ್ ಮಾತ್ರ ಅರ್ಥವಾಗ್ತಿತ್ತೋ ಏನೋ