ವಿಯೋಗ
ವಿಯೋಗ
ಪ್ರೀತಿಯ ರಮೇಶ್,
ಆ ದಿನ ನನಗೆ ನೆನಪಿದೆ. ಕುಶಾಲನಗರದಲ್ಲಿ ಅನಾಥ ಅಜ್ಜಿಯೊಬ್ಬಳು ಅನ್ನಾಹಾರವಿಲ್ಲದೆ ಅಲೆದಾಡುತ್ತಿದ್ದಾಳೆ ಎಂಬ ಮಾಹಿತಿಯನ್ನು ಕುಶಾಲನಗರದ ಸಮಾಜ ಸೇವಕರಾದ ಚಂದ್ರು ಸರ್ ಅವರು ದೂರವಾಣಿ ಮುಖೇನ ತಿಳಿಸಿದರು. ಆ ಸಮಯಕ್ಕೆ ನಾನೂ ಕೂಡ ಸ್ಲಲ್ಪ ಬಟ್ಟೆ ಮೂಟೆಗಳೊಂದಿಗೆ ಸುಂಟಿಕೊಪ್ಪದಲ್ಲಿನ ನಿಮ್ಮ ವೃದ್ಧಾಶ್ರಮದಲ್ಲಿದ್ದೆ.
ಕರೆ ಬಂದ ತಕ್ಷಣ ಲಗುಬಗೆಯಿಂದ ಎದ್ದು ತಮ್ಮ ಮಾರುತಿ ಓಮಿನಿ ವ್ಯಾನ್ ಅನ್ನು ಅವಸರದಲ್ಲಿ ತೆಗೆದು ನನ್ನನ್ನೂ ಹತ್ತಿಸಿಕೊಂಡು ಸುಂಟಿಕೊಪ್ಪದಿಂದ ಹೊರಟಿರಿ. ಸುಂಟಿಕೊಪ್ಪ ದಾಟಿ ಸ್ವಲ್ಪ ದೂರ ಹೋಗಿದ್ದೇವೆ ಅಷ್ಟೆ. ಏನೋ ನೆನಪು ಮಾಡಿಕೊಂಡು
"ಸರ್ ಆಶ್ರಮದಲ್ಲಿ ಸಿಲಿಂಡರ್ ಖಾಲಿಯಾಗಿತ್ತು. ಬುಕ್ ಮಾಡಿದ್ದೆ. ಈಗಲೇ ಕಲೆಕ್ಟ್ ಮಾಡ್ಕೊಬೇಕು" ಅನ್ನುತ್ತಾ ಮತ್ತೆ ವ್ಯಾನನ್ನು ವಾಪಾಸು ತಿರುಗಿಸಿದಿರಿ. ಆಶ್ರಮದಿಂದ ಖಾಲಿ ಸಿಲಿಂಡರ್ ಅನ್ನು ತೆಗೆದುಕೊಂಡು ಮತ್ತೆ ತುಂಬಿದ ಸಿಲಿಂಡರ್ ಅನ್ನು ವೃದ್ಧಾಶ್ರಮಕ್ಕೆ ತಲುಪಿಸಿದಾಗ, ನಾನು ನಿಮ್ಮ ಮುಖವನ್ನು ಗಮನಿಸಿದ್ದೆ. ಒಂದು ಸಾರ್ಥಕ ಭಾವದಿಂದ ನಗುತ್ತಾ.." ಮತ್ತೇನು ಸರ್ ವಿಶೇಷ.." ಎನ್ನುತ್ತಾ ನನ್ನ ಗಮನವನ್ನು ಬೇರೆಡೆಗೆ ಸೆಳೆದಿರಿ.
ಇದು ಕೇವಲ ಸಿಲಿಂಡರ್ ವಿಷ್ಯ ಆಗಿರಲಿಲ್ಲ. ಆ ಹೊತ್ತಿನ ಊಟವನ್ನು ನಂಬಿಕೊಂಡೇ ಇದ್ದ ಹಲವು ಅನಾಥ ಜೀವಗಳ ಬಗ್ಗೆ ತಮಗಿದ್ದ ಕಾಳಜಿ ವಿಷಯ. ನಿಮಿಷ ನಿಮಿಷಕ್ಕೂ ತಾವು ತೆಗೆದುಕೊಳ್ಳುತ್ತಿದ್ದ ಆ ಕಾಳಜಿ ಬಗ್ಗೆ ನನಗೆ ಗೌರವ ಅನ್ನೋದಕ್ಕಿಂದ ಹೆಚ್ಚಾಗಿ ಇದೆಂತಾ ಹುಚ್ಚು ಧೈರ್ಯ ಇವರಿಗೆ ಎಂಬ ಆಶ್ಚರ್ಯ ಮೂಡುತ್ತಿದ್ದುದ್ದೂ ಇದೆ. ಏಕೆಂದರೆ ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್ಆರ್ ಫಂಡ್ ಮತ್ತು ತೆರಿಗೆ ವಿನಾಯಿತಿಗಾಗಿ ಸಮಾಜಸೇವೆಯ ಹೆಸರಿನಲ್ಲಿ ಯಾವ ರೀತಿಯ ವೇದಿಕೆಗಳನ್ನು ಸೃಷ್ಟಿ ಮಾಡಿಕೊಂಡು ನಾಟಕ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಕಾರ್ಪೊರೇಟ್ ಕಂಪನಿಗಳಿಗೆ ಟ್ರಸ್ಟ್, ಎನ್ ಜಿಓ, ಅನಾಥಾಶ್ರಮ, ವಿಶೇಷ ಶಾಲೆಗಳನ್ನು ನಡೆಸುವುದು ದೊಡ್ಡ ವಿಷಯವಲ್ಲ ಬಿಡಿ. ಆದರೆ ನಿಮ್ಮಂಥ ಒಬ್ಬ ಸಾಮಾನ್ಯ ವ್ಯಕ್ತಿ, ತಮ್ಮ ಅಭಿರುಚಿ ತಕ್ಕಂತಿರುವ ಕೆಲವೇ ಕೆಲವು ಗೆಳೆಯರನ್ನು ಸೇರಿಸಿಕೊಂಡು ಒಂದು ಅನಾಥಾಶ್ರಮ ನಡೆಸೋದು ಇದೆಯಲ್ಲ, ಸಾಹಸವಲ್ಲದೆ ಮತ್ತೇನು?..
ನಿಮ್ಮ ಬದುಕಿನೊಂದಿಗೆ ಐವತ್ತಕ್ಕಿಂತಲೂ ಹೆಚ್ಚು ಅನಾಥರ ಬದುಕಿಗಾಗಿ ನೀವು ನಡೆಸಿದ ಹೋರಾಟ ಪರದಾಟಗಳನ್ನೂ ಗಮನಿಸಿದ್ದೇನೆ. ನನ್ನಂಥವರು ಒಂದೆರಡು ಬಾರಿ ಬಂದು ಧೈರ್ಯ ತುಂಬಿ ಒಂದೆರಡು ಸಲ ಸಣ್ಣ ಸಹಾಯ ಹಸ್ತ ಮಾಡಬಹುದೇ ಹೊರತು, ನೀವು ಹೊತ್ತಷ್ಟು ಜವಾಬ್ದಾರಿಯನ್ನು ಹೊರಲಂತೂ ನಮಗೆ ಸಾಧ್ಯವಿಲ್ಲ ಬಿಡಿ.
ಅಂತೂ ಕುಶಾಲನಗರದಲ್ಲಿ ಆ ಅಜ್ಜಿ ಸಿಕ್ಕಿದಾಗ ನಾನು ಮೊದಲು ಹುಡುಕಿದ್ದು ಸ್ಯಾನಿಟೈಸರ್. ನನ್ನಲ್ಲಿ ಸಮಾಜ ಸೇವಾ ಮನೋಭಾವ ಇದ್ದರೂ, ಅಜ್ಜಿಯನ್ನು ನೋಡಿದಾಗ, ಮೊದಲು ನಂಗೆ ನನ್ನ ಆರೋಗ್ಯದ ಗತಿಯೇನು ಅನ್ನಿಸಿದ್ದು ಸತ್ಯ. ಆ ಸಮಯದಲ್ಲಿ ನೀವು ನನ್ನ ಅವಸ್ಥೆ ನೋಡಿ ನಗುತ್ತಿದ್ದಿರಿ. ಅಜ್ಜಿ ಅಷ್ಟು ಕೊಳಕಾಗಿದ್ದಳು. ಅವಳು ಕುಳಿತ ಜಾಗದಿಂದ ಕೈ ಹಿಡಿದು ವ್ಯಾನು ಹತ್ತಿಸುವಾಗ ಅಜ್ಜಿಯನ್ನು ಹಿಡಿದುಕೊಂಡಿದ್ದ ನಂಗಂತೂ ವಾಂತಿ ಬಂದಂತಾಗುತ್ತಿತ್ತು. ಅಯ್ಯೋ..ಈ ಹಾಳು ಬಿದ್ದ ಸಮಾಜ ಸೇವೆಯೇ ಬೇಡಪ್ಪಾ..ಅಂತಾಗಿತ್ತು ನನಗೆ. ಆದರೆ ಏನೂ ಆಗಿಲ್ಲವೆಂಬಂತೆ ನಿರ್ಭಾವುಕರಾಗಿ ತಾವು ಅಜ್ಜಿಯನ್ನು ಬಳಸಿ ಎತ್ತಿ ವ್ಯಾನ್ ನಲ್ಲಿ ಕುಳ್ಳಿರಿಸಿದಿರಿ.ಆ ಸಮಯದಲ್ಲಿ ಚಂದ್ರು ಸರ್ ಕೂಡ ನಿಮ್ಮೊಂದಿಗೆ ಎಷ್ಟು ಪ್ರಾಂಪ್ಟ್ ಆಗಿ ಕೈ ಜೋಡಿಸಿದ್ದರು...?!!. ಗ್ರೇಟ್.
ಅಲ್ಲಿಂದ ನಾವು ಮೊದಲು ಹೋಗಿದ್ದು ಪೊಲೀಸ್ ಸ್ಟೇಷನ್ ಗೆ. ಅಲ್ಲಿನ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡು, ಅಜ್ಜಿಯನ್ನು ಕುಶಾಲನಗರದ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದು ನೆನಪಿದೆ ನನಗೆ.
ಅಡ್ಮಿಟ್ ಮಾಡಿದ ನಂತರ, ವೈದ್ಯರೊಂದಿಗೆ ಮಾತನಾಡಿ, ಮಾರನೇ ದಿನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿ, ಹೊರನಡೆದು ಚಂದ್ರು ಸರ್ ಗೆ ಬೈ ಹೇಳಿ ವಾಪಾಸಾಗುವಾಗ ರಾತ್ರಿಯಾಗಿತ್ತು. ನಾನು ಸುಂಟಿಕೊಪ್ಪದ ಅವರ ಆಶ್ರಮದಲ್ಲಿ ನನ್ನ ಸ್ಕೂಟಿ ನಿಲ್ಲಿಸಿದ್ದೆ. ಅಲ್ಲಿಂದ ಅಮ್ಮತ್ತಿ ಗ್ರಾಮಕ್ಕೆ ಬರಬೇಕಿತ್ತು. ತಡ ರಾತ್ರಿಯಾದರೆ ಆನೆಗಳ ಭಯ ಬೇರೆ. ಬೇಗ ಹೋಗೋಣ ರಮೇಶ್ ಜೀ ಅಂದೆ. ಆವಾಗ ನನ್ನ ಕಡೆ ತಿರುಗಿ ಒಂದು ಕ್ಷಣ ನಕ್ಕು ಸುಮ್ಮನಾದಿರಿ. ಅರ್ಥವಾಗಿತ್ತು ನನಗೆ. ಅಷ್ಟೂ ಅರ್ಥ ಮಾಡಿಕೊಳ್ಳದೆ ಇದ್ದರೆ ನಾವೆಂಥಾ ಫ್ರೆಂಡ್ಸ್?..ಅಲ್ಲವೇ?
ನನಗೆ ಮನೆಗೆ ಬಂದು ಸ್ನಾನಮಾಡಿ ತದ ನಂತರ ಊಟದ ಶಾಸ್ತ್ರಕ್ಕೆ ಕೂರಬೇಕಿತ್ತು. ಅದರಲ್ಲೂ ಇವತ್ತಂತೂ ಸ್ನಾನಕ್ಕೆ ಏಕೆ ಆದ್ಯತೆ ಕೊಡುತ್ತಿದ್ದೇನೆ ಎಂಬುದು ನಿಮಗೂ ಗೊತ್ತಿತ್ತು. ಒಬ್ಬರಲ್ಲ ಇಬ್ಬರು ಅನಾಥರ ಬಳಿ ನನ್ನ ಎಳೆದು ತಂದಿದ್ದಿರಿ. ಕುಶಾಲನಗರ ದಾಟಿ ಸ್ವಲ್ಪ ಮುಂದೆ ಗಾಡಿ ನಿಲ್ಲಿಸಿ ಏನೋ ತರಲು ಹೋದಿರಿ. ನಂಗೆ ಅರ್ಥವಾಗಿತ್ತು. ನಾನು ಪಕ್ಕದ ಸಣ್ಣ ಅಂಗಡಿಯಿಂದ ಸ್ವಲ್ಪ ಖಾರ, ಸ್ನ್ಯಾಕ್ಸ್ ಹಾಗೂ ಒಂದು ಗಾರ್ಬೇಜ್ ಬ್ಯಾಗ್ ತೆಗೆದುಕೊಂಡಿದ್ದೆ.
ಸರಿ. ಇವತ್ತಂತೂ ಮನೆ ತಲುಪೊದಿಕ್ಕೆ ಮಧ್ಯರಾತ್ರಿಯಾಗುತ್ತೆ ಅಂತ ತೀರ್ಮಾನವಾಗಿತ್ತು. ಸಮಾಜಸೇವೆಯಿಂದ ಇಬ್ಬರೂ ಹೊರಬಂದು ಸ್ವಲ್ಪ ಕಷ್ಟ ಸುಖ ಹಂಚ್ಕೊಬೇಕು ಅಂದುಕೊಳ್ಳಲು ಇಬ್ಬರ ಮನಸೂ ರೆಡಿಯಿಲ್ಲ. ಅದೇ ಸೇವೆ , ಅದೇ ಅನಾಥರು, ಅದೇ ಬೀದಿ ಬದಿಗಳ ಮಾತು. ಅದೇ ಹಣದ ಸಮಸ್ಯೆಗಳು. ಅದೇ ಕಿತ್ತು ತಿನ್ನುವ ಕಮಿಟ್ಮೆಂಟ್ಗಳು..ಹೊರಬರಲು ಸಾಧ್ಯವಿಲ್ಲ ಬಿಡಿ ಎಂಬಂತಹ ಭಾವನೆಗಳ ಹಂಚಿಕೆ.
ರಸ್ತೆ ಬದಿಯಲ್ಲಿ ಯಾರಿಗೂ ಕಾಣದಂತೆ ಸ್ಬಲ್ಪ ಹೊತ್ತು ದಣಿವಾರಿಸಲು ನಿಲ್ಲಿಸಿ, ಇರಲಿ ಬಿಡಿ ಎಂದು ಒಂದೆರಡು ಪೆಗ್ ಏರಿಸುತ್ತಾ..ಸೇವಾ ಜಗತ್ತಿನ ಮಾತುಕತೆಯಾದ ಬಳಿಕ.. ಪ್ಲಾಸ್ಟಿಕ್ ಲೋಟಗಳು ಇನ್ನಿತರ ವೇಸ್ಟ್ ಗಳನ್ನು ಹೊರಬಿಸಾಕದಂತೆ ಗಾರ್ಬೇಜ್ ಬ್ಯಾಗೊಳಗೆ ತುಂಬಿಸಿದ ಮೇಲೆ..ಮತ್ತೆ ಆಶ್ರಮ ತಲುಪುವವರೆಗೂ..ಆಶ್ರಮದ ಬಾಡಿಗೆ ಹಣ, ಆಶ್ರಮವಾಸಿಗಳಿಗೆ ದಿನನಿತ್ಯದ ಊಟ ತಿಂಡಿ ವ್ಯವಸ್ಥೆಯ ಬಗ್ಗೆ ನಿಮಗಿರುವ ಟೆನ್ಸನ್ ಗಳ ಒಂದಿಷ್ಟು ವಿಚಾರಗಳ ವಿನಿಮಯ..!
ಆವತ್ತು ನಿಮ್ಮಿಂದ ಬೀಳ್ಕೊಂಡು ಮನೆಗೆ ಬಂದ ಮೇಲೆ ಆಮೇಲಾಮೇಲೆ ನಮ್ಮ ಭೇಟಿ ಎಲ್ಲೊ ದೂರ ದೂರವಾಯ್ತು. ತದ ನಂತರ ತಾವು ಆಶ್ರಮದ ಜಾಗ ಬದಲಾವಣೆಯ ತಿಳಿಸಿದ್ದಿರಿ. ಮತ್ತೊಮ್ಮೆ ನಾನು ಹೊಸ ಆಶ್ರಮಕ್ಕೆ ಬಂದಾಗಲೂ ನೀವು ನನಗೆ ಸಿಕ್ಕಿರಲಿಲ್ಲ.
ಆದರೆ ಇವತ್ತು ಬೆಳಿಗ್ಗೆ ಎದ್ದು ನನ್ನ ಗೆಳೆಯರೊಬ್ಬರ ವಾಟ್ಸ್ಯಾಪ್ ಸ್ಟೇಟಸ್ ಗಮನಿಸಿದಾಗ ನನಗೆ ಆಘಾತ ಕೊಟ್ಟುಬಿಟ್ಟಿರಿ. ಚೇತರಿಸಿಕೊಳ್ಳಲು ಒಂದೆರಡು ನಿಮಿಷಗಳೇ ಬೇಕಾಯಿತು ನನಗೆ. ನಂಬೋಕೆ ಆಗದಂತಹ ಸುದ್ಧಿಯದು. ಸಿಲಿಂಡರ್ ಸ್ಪೋಟದಿಂದ ತಾವು ಇನ್ನಿಲ್ಲವೆಂಬ ಸುದ್ದಿ ನನಗೆ ಮಾತ್ರವಲ್ಲ, ಇಡೀ ಕೊಡಗಿನ ಸೇವಾ ಜಗತ್ತಿಗೆ ಆಘಾತವಾಗಿತ್ತು. ತಮ್ಮ ಪತ್ನಿಯನ್ನು ಕಾಪಾಡಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡಿ ತಾವೂ ಹೋದಿರಿ. ಜೊತೆಗೆ ನಿಮ್ಮ ಪತ್ನಿಯನ್ನೂ ಕರೆದೊಯ್ದಿರಿ. ಅಂದು ತಮ್ಮ ಅನಾಥಾಶ್ರಮದಲ್ಲಿ ಸಿಲಿಂಡರ್ ಖಾಲಿಯಾಗಿದೆಯೆಂದು, ಅಡ್ಜಸ್ಟ್ ಮಾಡದೆ ಹೋದರೆ ಆಶ್ರಮವಾಸಿಗಳು ಹಸಿವಿನಲ್ಲಿರಬೇಕಾಗುತ್ತದೆ ಎನ್ನುವ ಆತಂಕವನ್ನು ಅಂದು ನಿಮ್ಮಲ್ಲಿ ಗಮನಿಸಿದ್ದೇನೆ. ಅವರ ಹಸಿವು ನೀಗಿಸಲು ಸಿಲಿಂಡರ್ ಗಾಗಿ ತಾವು ಐದಾರು ಕಿ.ಮೀ. ನಷ್ಟು ವಾಪಾಸು ನನ್ನ ಕರೆತಂದದ್ದೂ ನೆನಪಿದೆ.
ಆದರೆ...
ಅದೇ ಸಿಲಿಂಡರ್ ನಿಮ್ಮ ಬದುಕನ್ನೇ ಸುಟ್ಟು ಹಾಕಿ ಕತ್ತಲು ಕವಿಯುವಂತೆ ಮಾಡಿತ್ತಲ್ಲ..ಜೊತೆಗೆ ಆಶ್ರಮವಾಸಿಗಳ ಬದುಕೂ...
