ಕಥೆ ಹೇಳುವ ಕಲ್ಲು
ಕಥೆ ಹೇಳುವ ಕಲ್ಲು


"ಅಜ್ಜಯ್ಯ ನನ್ನು ಒಂದು ಸಲ ಗಡಾಯಿಕಲ್ಲಿಗೆ ಕರ್ಕೊಂಡು ಹೋಗಜ್ಜಯ್ಯ... " ಎಂದು ಅಜ್ಜನನ್ನು ಪೀಡಿಸುತ್ತಿದ್ದ ಆರವ್.
"ನಿಂಗೆಷ್ಟು ಸಲ ಹೇಳೋದು ಕೂಸೇ... ಆ ಬೆಟ್ಟಕ್ಕೆ ನಾನು ಕರ್ಕೊಂಡು ಹೋಗಲ್ಲ ಅಲ್ಲೆಲ್ಲಾ ಹೋಗ್ಬಾರ್ದು ಹೇಳಿ " ಆರವ್ನ ಹಠವನ್ನು ಮಣಿಸುವ ಪ್ರಯತ್ನದಲ್ಲಿದ್ದರು ಅಜ್ಜಯ್ಯ
"ಪ್ರತಿ ಸಲ ರಜೆಯಲ್ಲಿ ಊರಿಗೆ ಬಂದಾಗಲೂ ಕೇಳ್ತಾ ಇದ್ದೀನಿ ... ಹೋಗ್ಬಾರ್ದು ಅನ್ನೋದಿಕ್ಕೆ ಅಲ್ಲೇನಿದೆ ಅಂಥದ್ದು ದೆವ್ವ ಪಿಶಾಚಿ ಏನಾದ್ರೂ ಇದ್ಯಾ.?" ತಾನೂ ಹಠ ಬಿಡಲಿಲ್ಲ.
"ನೋಡು ಕೂಸೇ ಹಠ ಮಾಡ್ಬೇಡ ನಿಂಗೆ ಮನೇಲಿದ್ದು ಬೇಜಾರು ಅನ್ನೋದಾದ್ರೆ ಧರ್ಮಸ್ಥಳಕ್ಕೆ ಹೋಗಿಬರುವ ಆಮೇಲೆ ಸಂಜೆ ನಿನ್ನ ದಿಡುಪೆ ಜಲಪಾತಕ್ಕೆ ಕರ್ಕೊಂಡು ಹೋಗ್ತೇನೆ ಆಯಿತಾ.." ಸಮಾಧಾನಿಸುವ ಪ್ರಯತ್ನ ಮುಂದುವರೆಯಿತು.
ಮನೆಯ ಮುಂದಿನ ಜಗಲಿಯ ಮೇಲೆ ಕೂತ ಆರವ್ ಎದುರಿಗೆ ದೂರದಲ್ಲಿ ಕಾಣುತ್ತಿದ್ದ ಗಡಾಯಿಕಲ್ಲು ( ಜಮಲಾಬಾದ್ ಬೆಟ್ಟವನ್ನು ) ನೋಡುತ್ತಲೇ ಇದ್ದ. "ಅಜ್ಜಯ್ಯ ನೋಡಲ್ಲಿ ಬೆಟ್ಟದ ಸುತ್ತಾ ಮಂಜು ಕವಿದು ಎಷ್ಟು ಚಂದ ಕಾಣ್ತದೆ., ಪ್ಲೀಸ್ ಅಜ್ಜಯ್ಯ ಒಮ್ಮೆ ಮನಸು ಮಾಡು".
ಮೊಮ್ಮಗನ ಹಠಕ್ಕೆ ಸೋತ ಅಜ್ಜಯ್ಯ ಒಪ್ಪಿಕೊಂಡರು, ಆದರೆ ಅವರ ಕೈಬಿಟ್ಟು ಆಚೆ ಈಚೆ ಹೋಗುವ ಹಾಗಿಲ್ಲ ಎಂಬ ಶರತ್ತಿನೊಂದಿಗೆ.
ಆರವ್ನ ಖುಷಿಗೆ ಪಾರವೇ ಇರಲಿಲ್ಲ. ಕುಣಿದಾಡಿ ಬಿಟ್ಟ ಹುಡುಗ, ಅವನ ಖುಷಿ ನೋಡಿ ಅಜ್ಜನಿಗೆ ಖುಷಿ ಆಯಿತು ಅದಕ್ಕಿಂತಲೂ ಜಾಸ್ತಿ ಭಯ ಆವರಿಸಿತ್ತು. ಅಜ್ಜ ಮೊಮ್ಮಗನ ಮಾತನ್ನು ಕೇಳಿದಮೇಲೆ ಆರವ್ನ ಅಜ್ಜಿ ಕಲ್ಯಾಣಿಯವರೂ ಗತವನ್ನು ನೆನೆದು ಒಮ್ಮೆ ಮಂಕಾದರು.
ಆರವ್ಗೆ ಈಗ ಹನ್ನೆರಡು ವರ್ಷ . ಬೆಂಗಳೂರಲ್ಲಿ ತನ್ನ ಆರನೇ ತರಗತಿಯಲ್ಲಿ ಕಲಿಯುವ ಹುಡುಗ ತನ್ನ ತಾಯಿ ಭಾವನಾ ಜೊತೆ ಇರುವುದು. ತಂದೆಯಿಲ್ಲದೇ ಬೆಳೆಯುತ್ತಿರುವ ಆರವ್ ರಜೆಯಲ್ಲಿ ತನ್ನ ಅಜ್ಜನ ಮನೆ ಬೆಳ್ತಂಗಡಿ ತಾಲೂಕಲ್ಲಿರುವ ಮುದ್ರಾಡಿಗೆ ಓಡೋಡಿ ಬರುತ್ತಾನೆ. ತನ್ನ ತಂದೆ ಯಾವುದೊ ಅಪಘಾತದಲ್ಲಿ ತೀರಿಹೋಗಿದ್ದರೆನ್ನುವುದು ಅವನಿಗೆ ತಿಳಿದಿದ್ದು, ಅವನ ತಾಯಿ ಬೆಂಗಳೂರಲ್ಲೇ ಕೆಲಸ ಮಾಡೋದ್ರಿಂದ ರಜೆ ಸಿಕ್ಕಾಗೊಮ್ಮೆ ಆರವ್ನನ್ನು ಊರಿಗೆ ಬಿಟ್ಟು ಒಂದೆರಡು ದಿನ ಇದ್ದು ಮತ್ತೆ ರಜೆ ಮುಗಿದಾಗ ಕರೆದುಕೊಂಡು ಹೋಗಲು ಬರುತ್ತಾಳೆ.
ಮರುದಿನ ಗಡಾಯಿಕಲ್ಲಿಗೆ ಹೋಗವುದು ನೆನಪಾಗಿ ಆರವ್ ಬೇಗನೆ ಎದ್ದ. ಏಳುವುದೆಲ್ಲಿಂದ ಬಂತು ಖುಷಿಯಲ್ಲಿ ನಿದ್ದೆಯೇ ಬಂದಿರಲಿಲ್ಲ ಹುಡುಗನಿಗೆ. ಅಜ್ಜಯ್ಯನೂ ಗಡಾಯಿಕಲ್ಲಿಗೆ ಹೋಗಲು ಅವರ ಊರಿನ ಶಂಕರಣ್ಣನ ಜೀಪು ಬರಹೇಳಿದ್ದರು. ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಜೀಪು ಬಂದು ನಿಂತಿತ್ತು ಅಂಗಳದಲ್ಲಿ. ಬೇಗ ಹೋದರೆ ಬಿಸಿಲಿಂದ ತಪ್ಪಿಕೊಳ್ಳಬಹುದು ಎಂಬ ಕಾರಣಕ್ಕೆ ಬೇಗನೆ ಹೊರಟರು.
ಮುದ್ರಾಡಿಯಿಂದ ಇಪ್ಪತ್ತು ನಿಮಿಷಗಳ ದಾರಿ ಗಡಾಯಿಕಲ್ಲಿಗೆ ಬೆಟ್ಟದ ಕೆಳಭಾಗದಲ್ಲಿ ನಿಂತೊಮ್ಮೆ ಮೇಲೆ ನೋಡಿ ನಿಟ್ಟುಸಿರು ಬಿಟ್ಟರು ಅಜ್ಜಯ್ಯ. ಅಲ್ಲಿಯೇ ಜೀಪು ನಿಲ್ಲಿಸಿ ಮುಂದೆ ಕಡಿದಾದ ಮೆಟ್ಟಿಲುಗಳ ಮೇಲೆ ಹತ್ತಿ ಹೋಗಬೇಕು
ಅಜ್ಜ ಮೊಮ್ಮಗನ ಜೊತೆ ಶಂಕರಣ್ಣನೂ ಬೆಟ್ಟ ಹತ್ತಿದರು.
ಮೆಟ್ಟಿಲುಗಳು ಕೊನೆಗೂಳ್ಳುತ್ತಲೇ ನರಸಿಂಹಘಡ ಕೋಟೆ ಎತ್ತರದಲ್ಲಿ ಕಾಣುತ್ತದೆ, ಅಲ್ಲಿಂದ ಪಕ್ಕಕ್ಕೆ ತಿರುಗಿದಾಗ ಒಂದು ಗುಹೆ ಕಾಣುತ್ತದೆ. ಅದರೊಳಗಿಂದ ಬಗ್ಗುತ್ತಾ ಸಾಗಿದರೆ ಕೋಟೆಯ ತುದಿಯಲ್ಲಿರುವ ಮಂಟಪಕ್ಕೆ ಅಡ್ಡದಾರಿಯಲ್ಲಿ ತಲುಪಬಹುದು. ಅದನ್ನೆಲ್ಲಾ ವಿವರಿಸುತ್ತಾ ಅಜ್ಜಯ್ಯ ಮೊಮ್ಮಗನನ್ನು ತಮ್ಮ ಹಿಂದೆ ಬರಲು ಹೇಳಿ ಗುಹೆಯ ಒಳಗೆ ಹೆಜ್ಜೆ ಇಟ್ಟರು ಅವರ ಹಿಂದೆಯೇ ಶಂಕರಣ್ಣನೂ ನಡೆದರು.
ಕತ್ತಲದಾರಿಯಲ್ಲಿ ತಮ್ಮ ಜೊತೆಯಲ್ಲಿ ತಂದಿದ್ದ ಟಾರ್ಚ್ ಲೈಟಿನ ಬೆಳಕಲ್ಲಿ ಮುಂದೆ ಸಾಗಿ ಮಂಟಪ ತಲುಪಿದರು. ಅಲ್ಲಿಂದ ಒಮ್ಮೆ ಸುತ್ತಲೂ ನೋಡಿದ ಆರವ್ ಪ್ರಪಂಚ ಮರೆತಿದ್ದ. ಬೆಳ್ತಂಗಡಿ ಪೇಟೆ, ಉಜಿರೆ, ಧರ್ಮಸ್ಥಳದ ಗೊಮ್ಮಟ ಮೂರ್ತಿ ಎಲ್ಲವೂ ಕಾಣುತ್ತಿತ್ತು. ಎಲ್ಲವನ್ನೂ ಕಣ್ತುಂಬಿಕೊಂಡ .
"ಈ ಕೋಟೆಯ ಕಥೆ ಹೇಳು ಅಜ್ಜಯ್ಯ" ಅಜ್ಜನಿಗೆ ದುಂಬಾಲು ಬಿದ್ದ ಆರವ್.
"ಈ ಕೋಟೆಯನ್ನು ಕಟ್ಟಿಸಿದ್ದು ಟಿಪ್ಪು ಸುಲ್ತಾನ, ಇಲ್ಲಿ ನಿಂತು&nbs
p;ತನ್ನ ರಾಜ್ಯವನ್ನು ರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದ. ಅದೋ ಅಲ್ಲಿ ಕಾಣುತ್ತಿದೆಯಲ್ಲ ಪ್ರಪಾತ ಅದಕ್ಕೆ ಪಾಶಿಗುಂಡಿ ಎಂದು ಹೆಸರು. ಟಿಪ್ಪುಸುಲ್ತಾನ ಇಲ್ಲಿ ಕುಳಿತುಕೊಳ್ಳುತ್ತಿದ್ದಾಗ ಈ ಗುಹೆಯೊಳಗಿಂದ ಸೈನಿಕರು ನುಸುಳಿಬಂದ್ರೆ ಅವರನ್ನು ಹಿಡಿದು ಇದೆ ಪಾಶಿಗುಂಡಿಯೊಳಗೆ ತಳ್ಳುತ್ತಿದ್ದನಂತೆ. ಇಲ್ಲಿದೆ ನೋಡು ಬೀಸೋ ಕಲ್ಲು, ಅವನು ಕುಳಿತುಕೊಳ್ಳುತ್ತಿದ್ದ ಕಲ್ಲುಗಳು ಇವೆಲ್ಲವೂ ನಮಗೆ ಸ್ವಾತಂತ್ರ್ಯ ಪೂರ್ವದಲ್ಲಿ ರಾಜರುಗಳು ನಮ್ಮನ್ನು ಆಳುತ್ತಿದ್ದ, ರಕ್ಷಿಸುತ್ತಿದ್ದ ಕುರುಹುಗಳು. ಇಲ್ಲಿರುವ ಒಂದೊಂದು ಕಲ್ಲುಗಳು ನಮಗೆ ಅವರು ಬ್ರಿಟಿಷ್ ಸೈನಿಕರಿಂದ ನಮ್ಮನ್ನು ಕಾಪಾಡಿದ ಕಥೆ ಹೇಳುತ್ತವೆ. ಇಲ್ಲಿ ನೋಡು ಈ ಕೆರೆ ಇದೆಯಲ್ಲ , ಎಂಥ ಬೇಸಿಗೆಯಲ್ಲೂ ಇಷ್ಟು ಎತ್ತರದಲ್ಲಿ ಇದ್ದರೂ ಇದರ ನೀರು ಬತ್ತುವುದಿಲ್ಲ, ಮೇಲೆ ಹತ್ತಿ ಬರುವ ಅನೇಕ ಚಾರಣಿಗರಿಗೆ ಈ ಕೊಳದ ನೀರು ಅಮೃತವಿದ್ದಂತೆ ಕೂಸೇ" ಎಂದು ವಿವರಿಸಿದರು
"ಹೌದಾ ಅಜ್ಜಯ್ಯ..?" ಎಂದ ಆರವ್, ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದವನ ಕೈ ಹಿಡಿದು ಹಿಂದಕ್ಕೆ ಎಳೆದರು ಅಜ್ಜಯ್ಯ.
"ಯಾಕೆ ಅಜ್ಜಯ್ಯ ಏನಾಯಿತು.. ಯಾಕೆ ಹೀಗ್ ಎಳೆದ್ರಿ ನನ್ನ..?"
"ಬೇಡ ಕೂಸೇ ಮುಂದೆ ಹೋಗಬೇಡ. ಅಪಾಯ , ಇಲ್ಲೇ ಕೂಸೇ ನಿನ್ನಪ್ಪ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು " ಭಯದಲ್ಲಿ ಅರಿವಿರದೆ ಅವನಿಗೆ ಗೊತ್ತಿಲ್ಲದ ಸತ್ಯವೊಂದನ್ನು ಹೊರ ಹಾಕಿದ್ದರು ಅಜ್ಜಯ್ಯ.
"ಏನ್ ಹೇಳ್ತಿದ್ದೀರಿ ಅಜ್ಜಯ್ಯ, ಅಪ್ಪಂಗೆ ಆಕ್ಸಿಡೆಂಟ್ ಆಗಿದ್ದು ಅಲ್ವಾ...?" ಆಶ್ಚರ್ಯದಿಂದ ಕೇಳಿದ.
"ಇಲ್ಲ ಕೂಸೇ, ಆವತ್ತು ನಿನ್ನ ಹುಟ್ಟುಹಬ್ಬ ಆಚರಿಸಿ ಎರಡು ದಿನಕ್ಕೆ ನಾನು ನಿನ್ನಪ್ಪ ಧರ್ಮಸ್ಥಳಕ್ಕೆ ಹೋಗಿದ್ವಿ , ಅಲ್ಲಿಂದ ಬರುವಾಗ ನಿನ್ನ ಅಪ್ಪ ಮನೋಜ ನನ್ನ ಬಳಿ ತುಂಬಾ ವರ್ಷಗಳೇ ಆಯಿತು ಗಡಾಯಿಕಲ್ಲು ಹತ್ತಿ ಹೋಗೋಣವೆ ಅಪ್ಪಯ್ಯ ಎಂದ, ನಾನೂ ಇತ್ತೀಚೆಗೆ ಹೋಗಿರಲಿಲ್ಲ ಆಯಿತು ಎಂದು ಅವನ ಜೊತೆ ಹೋದೆ. ಮೇಲೆ ಹತ್ತಿದ ಮನೋಜನಿಗೆ ತುಂಬಾ ಖುಷಿಯಾಗಿತ್ತು. ದೂರಕ್ಕೆ ದೃಷ್ಟಿ ಹಾಯಿಸುತ್ತಾ ಮುಂದಕ್ಕೆ ಸಾಗುತ್ತಿದ್ದ ನಿನ್ನಪ್ಪ,
ನೋಡು ಕೂಸೇ... ಇದೆ ಬೀಸೋಕಲ್ಲನ್ನು ಎಡವಿ ಪಾಶಿಗುಂಡಿ ಪ್ರಪಾತಕ್ಕೆ ಬಿದ್ದ, ಮತ್ತೆ ಮೂರು ನಾಲ್ಕು ದಿನ ಪೊಲೀಸರು ಹುಡುಕಿದ ಮೇಲೆ ಸಿಕ್ಕಿದ್ದು ಹೆಣವಾಗಿ, ಕಣ್ಣ ಮುಂದೆಯೇ ನನ್ನ ಮಗನನ್ನು ಕಳೆದುಕೊಂಡೆ ಕೂಸೇ" ಎಂದು ಅಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕುಸಿದು ಬಿಕ್ಕುತ್ತಾ ಕುಳಿತರು.
ಶಂಕ್ರಣ್ಣಗೂ ಈ ವಿಷಯ ತಿಳಿದದ್ದೇ ಆದ್ದರಿಂದ ಆದಷ್ಟು ಸಮಾಧಾನಿಸಲು ಪ್ರಯತ್ನಿಸಿದರು.
ಅಜ್ಜನ ಬಾಯಲ್ಲಿ ಅಪ್ಪನ ಸಾವಿನ ಕಥೆ ಕೇಳಿ ಆರವ್ನ ಕಣ್ಣಲ್ಲೂ ನೀರು ಇಳಿಯುತ್ತಿತ್ತು.
ಹತ್ತಿರ ಬಂದವನು "ಅಳಬೇಡ ಅಜ್ಜಯ್ಯ.." ಎಂದು ಅವರ ಕಣ್ಣೀರು ತೊಡೆದ.
"ಇದಕ್ಕೆ ಕೂಸೇ ಇಲ್ಲಿಗೆ ಬರೋದು ಬೇಡ ಅಂದಿದ್ದು. ಬಂದರೆ ನಂಗೆ ಅವತ್ತಿನ ದಿನವೇ ಕಣ್ಣಮುಂದೆ ಬರುತ್ತದೆ ಕೂಸೇ... ಈಗ ನೀನೂ ಬೀಳುವುದರಲ್ಲಿ ಇದ್ದೆ, ಅದಕ್ಕೆ ನಿನ್ನ ಎಳೆದಿದ್ದು" ಎಂದರು
"ಸಾರೀ ಅಜ್ಜಯ್ಯ, ನಿನ್ನನು ಇಲ್ಲಿಗೆ ಬರಲು ನಾನೆ ಒತ್ತಾಯಿಸಿದೆ, ಬಾ ಅಜ್ಜಯ್ಯ ಹೋಗೋಣ ಮನೆಗೆ " ಎಂದು ಅವರನ್ನು ಕೈಹಿಡಿದು ಜೀಪಿನ ಬಳಿ ಕರೆತಂದ.
ಶಂಕರಣ್ಣನೂ ಮೌನವಾಗಿ ಜೀಪು ಓಡಿಸುತ್ತಿದರು. ಅಜ್ಜ ಮೊಮ್ಮಗನ ಬಳಿಯೂ ಮಾತುಗಳು ಇರಲಿಲ್ಲ.
ಮನೆಗೆ ಬಂದ ಅಜ್ಜ ಮೊಮ್ಮಗನ ಮುಖ ಚರ್ಯೆ ನೋಡಿಯೇ ಕಲ್ಯಾಣಿಯವರಿಗೆ ವಿಷಯ ಹೀಗೆಯೇ ಎಂದು ಅರ್ಥವಾಯಿತು.
"ಬನ್ನಿ ಒಳಗೆ ಕೈಕಾಲು ಮುಖ ತೊಳೆದು, ತಿನ್ನೋದಕ್ಕೆ ಏನಾದ್ರು ಕೊಡ್ತೀನಿ. ಬಾರೋ ಕೂಸೇ ಹೇಗಿತ್ತು ಗಡಾಯಿಕಲ್ಲು.. " ಎಂದು ಮಾತಾಡಿ ವಿಷಯ ಮರೆಸಲು ನೋಡಿದರು.
ಅಜ್ಜಯ್ಯ ಅಜ್ಜಿಯ ಬಳಿ ಬ್ರೇಕೇ ಇಲ್ಲದೆ ಸದಾ ಮಾತಾಡುತ್ತಾ ಅವರ ಸುತ್ತ ಮುತ್ತವೆ ಸುತ್ತುತ್ತಿದ್ದ ಆರವ್ ಇಂದು ಮೌನವನ್ನೇ ನೆಚ್ಚಿಕೊಂಡಿದ್ದ.
ಹೊರ ಬಂದ ಕಲ್ಯಾಣಿಯವರು, ಶಂಕ್ರಣ್ಣ ಬನ್ನಿ ಒಳಗೆ ತಿಂಡಿ ತಿಂದು ಹೋಗುವಿರಂತೆ ಎಂದು ಕರೆದು ಮೂವರಿಗೂ ಚಾ ತಿಂಡಿ ಕೊಟ್ಟರು.
ಕೈ ಬಾಯಿ ತನ್ನ ಕೆಲಸ ತನ್ನ ಪಾಡಿಗೆ ಮಾಡುತ್ತಿದ್ದವು. ಎಲ್ಲರ ಮನದೊಳಗೂ ಒಂದು ವಿಷಾದದ ಛಾಯೆ ಹಾಗೆಯೇ ಉಳಿದಿತ್ತು.