ಪ್ರೀತಿ
ಪ್ರೀತಿ


ಅತ್ತೂ ಅತ್ತೂ ಅನುವಿನ ಕಣ್ಣುಗಳು ಬರಿದಾಗಿದ್ದವು. ಇನ್ನೂ ಅಳಲು ಪ್ರಯತ್ನಿಸಿದರೆ ಕಣ್ಣೀರಿನ ಬದಲು ರಕ್ತ ಬರಬಹುದಾಗಿತ್ತು. ಸುಸ್ತಾದ ಅನು ರವಿ ಎದೆಗೊರಗಿ ಅವನನ್ನೇ ದಿಟ್ಟಿಸಿದಳು. ರವಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅವನೂ ಒಳಗೊಳಗೇ ಅತ್ತು ಅತ್ತು ಕೊರಗುತ್ತಿದ್ದ. ‘ರವಿ, ನಮ್ಮಿಬ್ಬರಿಗೆ ಬೇರೆ ದಾರಿಯೇ ಇಲ್ಲ ಎನ್ನುತ್ತೀಯ’. ‘ನೀನೇ ನೋಡುತ್ತಿದ್ದೀಯಲ್ಲ ಅನು, ಬೆಂಗಳೂರಿನ ಪ್ರತಿಯೊಂದು ಅನಾಥಾಶ್ರಮದಲ್ಲೂ ಹುಡುಕಿದ್ದಾಯಿತು. ಇನ್ನೆಲ್ಲಿ ಅಂತ ಹುಡುಕೋಣ’. ‘ಹಾಗಾದರೆ ನಮಗೆ ಬದುಕಲು ಬೇರೆ ಅವಕಾಶವೇ ಇಲ್ಲವೇ ?’. ‘ಅನು, ನೀನು ಮನಸ್ಸು ಮಾಡಿದ್ದರೆ ಇರುತ್ತಿತ್ತು. ಎಷ್ಟು ಹೇಳಿದೆ ನಾನು ನಿನಗೆ, ಈ ರೀತಿಯ ನಾಟಕ ಆಡಬೇಡ ಎಂದು, ಆದರೆ ನೀನು ಕೇಳಲೇ ಇಲ್ಲ. ಈಗ ನೋಡು, ವಿಪರೀತಕ್ಕಿಟ್ಟುಕೊಂಡಿದೆ. ನಮ್ಮ ನಾಟಕ ಬಯಲಾಗುವ ಹಂತ ಬಂದಿದೆ’. ಅವಳ ಬೊಗಸೆಗಳಲ್ಲಿ ತನ್ನ ಮುಖವನ್ನಿಟ್ಟು ರವಿ ಬಿಕ್ಕಿ ಬಿಕ್ಕಿ ಅತ್ತ.
ಅವನ ಅಳುವನ್ನು ನೋಡಲಾಗದೇ ಅನು ಅವನ ತಲೆಯ ಮೇಲೆ ಕೈಯಿಟ್ಟು ಸಂತೈಸುತ್ತಾ, ‘ರವಿ, ನನಗೇನೋ ಈಗಲೂ ಭರವಸೆಯಿದೆ. ನನ್ನ ನಿನ್ನ ಪ್ರೀತಿ ಯಾವತ್ತೂ ಕೇವಲ ದೈಹಿಕ ಆಕರ್ಷಣೆಯಾಗಿ ಮಾತ್ರ ಇರಲಿಲ್ಲ. ಅದನ್ನೂ ಮೀರಿದ ದೈವಿಕ ಸಂಬಂಧ ನಮ್ಮದು. ನಮ್ಮ ಆತ್ಮಗಳ ಸಂಗಮವಾಗಿ ಈಗ ಒಂದೇ ಆತ್ಮವಾಗಿದೆ. ನಾನು ಕೇವಲ ಉಸಿರು. ಆ ಉಸಿರಿನ ಚೇತನ ನೀನು. ಚೇತನವಿಲ್ಲದೇ ಈ ಆತ್ಮ ಏನೂ ಮಾಡಲಾಗದು, ಹಾಗೆಯೇ ಆತ್ಮವಿಲ್ಲದೇ ಚೇತನಕ್ಕೆ ಯಾವ ಶಕ್ತಿಯೂ ಇರುವುದಿಲ್ಲ. ಹೀಗೆ ಒಂದಾಗಿರುವ ನಾವು ಬದುಕನ್ನು ಎದುರಿಸಿ ನಿಲ್ಲಬೇಕು. ಆ ಆಸೆಯಿಂದಲೇ ಅಲ್ಲವೇ ನಾನು ಈ ನಾಟಕವನ್ನು ಆಡಿದ್ದು’. ‘ಹೌದು ಅನು, ನೀನೇನೋ ನನ್ನ ಗೌರವ ಉಳಿಸಲು, ಮಕ್ಕಳನ್ನು ಕೊಡುವ ಶಕ್ತಿ ನನ್ನಲ್ಲಿಲ್ಲ ಎಂಬ ಸತ್ಯವನ್ನು ಮುಚ್ಚಿಟ್ಟೆ. ಆದರೆ ಅಪ್ಪ, ಅಮ್ಮ, ನೆಂಟರಿಷ್ಟರು ನಿನ್ನನ್ನೇ ದೂಷಿಸಿದಾಗ ನಿನಗಾದ ನೋವು, ಹೇಗೆ ಹೇಳಲಿ ಅನು, ನೀನು ತಪ್ಪು ಮಾಡಿದೆ. ನನ್ನನ್ನು ಬಿಟ್ಟು ಬೇರೆ ಯಾರನ್ನಾದರೂ ಮದುವೆ ಮಾಡಿಕೊಳ್ಳುವ ಅವಕಾಶ ನಿನಗಿರುವಾಗ, ನನ್ನ ತಪ್ಪನ್ನು ಮುಚ್ಚಲು ಬಸಿರಾಗಿರುವ ಹಾಗೆ ನಾಟಕ ಯಾಕೆ ಮಾಡಿದೆ ಅನು, ಒಂಭತ್ತು ತಿಂಗಳೂ ಯಶಸ್ವಿಯಾಗಿ ನಾಟಕ ಮುಂದುವರೆಸಿಕೊಂಡು ಬಂದಿರುವ ನಿನ್ನನ್ನು ಅಭಿನಂದಿಸಬೇಕೋ, ಇಲ್ಲ ಬೈಯಬೇಕೋ ಒಂದೂ ತಿಳಿಯುತ್ತಿಲ್ಲ. ನಕಲಿ ಹೊಟ್ಟೆ ಇಟ್ಟುಕೊಂಡು ಎಷ್ಟೊಂದು ಸಂಕಟ, ನೋವು, ಹಿಂಸೆ ಪಟ್ಟೆ. ಆದರೆ ಈಗ, ನಿನಗೆ ಒಂಭತ್ತು ತಿಂಗಳಾದರೂ ಏಕೆ ಹೆರಿಗೆ ಆಗಲಿಲ್ಲ, ಆಸ್ಪತ್ರೆಗೆ ತೋರಿಸು ಎಂದು ಅಮ್ಮ ಹೇಳಿದಾಗ ನನ್ನ ಕರುಳೇ ಕಿತ್ತು ಬಂದಂತಾಯಿತು. ಮೊದಲೇ ನಾವಂದುಕೊಂಡಂತೆ ಯಾವುದಾದರೂ ಅನಾಥಾಶ್ರಮದಲ್ಲಿ ನಮಗೆ ಒಂದು ಎಳೇ ಮಗು ಸಿಗಬಹುದೆಂಬ ನಿನ್ನ ಆಸೆಗೆ, ಆಸ್ಪತ್ರಗೆ ಹೋಗುತ್ತೀವೆಂದು ಸುಳ್ಳು ಹೇಳಿ, ಎಲ್ಲಾ ಅನಾಥಾಶ್ರಮಗಳನ್ನೂ ಅಲೆದಿದ್ದಾಯಿತು. ಆದರೆ ಎಲ್ಲೂ ಹೊಸದಾಗಿ ಹುಟ್ಟಿದ ಮಗು ಸಿಗಲೇ ಇಲ್ಲ. ಈಗೇನು ಮಾಡೋಣ ?’ ‘ರವಿ, ಆ ಬನ್ನೇರುಘಟ್ಟದ ಆಶ್ರಮದಲ್ಲಿ ಇಪ್ಪತ್ತು ದಿನದ ಮಗು ಸಿಕ್ಕಿತ್ತಲ್ಲ, ಅದನ್ನು ನೀನು ಒಪ್ಪಿಕೊಂಡಿದ್ದರೆ ಚೆನ್ನಾಗಿತ್ತು’. ‘ಅನು, ಹಾಗೇನಾದರೂ ಮಾಡಿದ್ದರೆ ನಮ್ಮ ನಾಟಕ ಬಯಲಾಗಿ ಮನೆಯಲ್ಲಿ ದೊಡ್ಡ ರಾಮಾಯಣವೇ ಆಗುತ್ತಿತ್ತು. ಊರಲ್ಲಿ ನೂರಾರು ಹೆರಿಗೆ ಮಾಡಿಸಿರುವ ಅಜ್ಜಿಗೆ ಈಗ ತಾನೇ ಹುಟ್ಟಿದ ಮಗುವಿಗೂ ಇಪ್ಪತ್ತು ದಿನದ ಮಗುವಿಗೂ ವ್ಯತ್ಯಾಸ ಗೊತ್ತಾಗುವುದಿಲ್ಲ ಅಂದುಕೊಂಡಿದ್ದೀಯ, ಹುಂ, ನಮ್ಮ ಅಜ್ಜಿ ಕೇವಲ ಒಂದು ದಿನದ ಮಗುವನ್ನೂ ಕಂಡುಹಿಡಿಯಬಲ್ಲರು’. ‘ರವಿ, ನನ್ನ ನಿನ್ನ ಪ್ರೀತಿ ದೈವಿಕವಾದದ್ದು. ಅದಕ್ಕೆ ಇಷ್ಟು ಬೇಗ ಕೊನೆ ಬರುತ್ತದೆ ಅಂದುಕೊಂಡಿಲ್ಲ, ನಮ್ಮ ಪ್ರೀತಿಗೆ ಆ ಭಗವಂತನೂ ಅಸ್ತು ಅಂದಿರುವುದರಿಂದಲೇ ನನಗೆ ಈ ನಾಟಕ ಆಡುವ ಪ್ರೇರಣೆ ಸಿಕ್ಕಿದ್ದು ಅಂತ ಅನ್ನಿಸ್ತಾ ಇದೆ. ನೋಡೋಣ, ಆ ದೇವರೇ ಏನಾದರೂ ದಾರಿ ತೋರಿಸಬಹುದು’. ರವಿ ಮಗುವಿನಂತೆ ಅವಳ ಮಡಿಲಲ್ಲಿ ತಲೆಯಿರಿಸಿದ. ಅನು ಅವನ ತಲೆಕೂದಲಲ್ಲಿ ಬೆರಳಡಿಸುತ್ತಾ ಕಣ್ಣು ಮುಚ್ಚಿದಳು.
ಅಷ್ಟರಲ್ಲಿ ಎಲ್ಲಿಂದಲೋ ‘ಅಯ್ಯೋ, ಅಮ್ಮಾ, ನೋವು, ನಾನು ಸತ್ತೇ ಹೋಗ್ತೀನಿ’, ಎಂಬ ಕೂಗು ಕೇಳಿ ಬಂತು. ಪಕ್ಕನೇ ಎಚ್ಚರವಾಯ್ತು ಅನುಗೆ. ‘ರವಿ, ಯಾರೋ ನರಳ್ತಾ ಇರೋ ಧ್ವನಿ ನಿನಗೆ ಕೇಳಿಸ್ತಾ ಇದಿಯ, ಬಾ ನೋಡೋಣ’. ‘ಹುಂ, ನಾವೇ ಇನ್ನ
ು ಸ್ವಲ್ಪ ಹೊತ್ತಿಗೆ ಬದುಕು ಮುಗಿಸುತ್ತಿರುವಾಗ ಇನ್ನೊಬ್ಬರ ಕಷ್ಟಕ್ಕೆ ಏನು ಸಹಾಯ ಮಾಡೋಣ, ಯಾರಾದರೂ ನೋಡುತ್ತಾರೆ ಬಿಡು’. ರವಿ ನೀರಸವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ. ‘ಹಾಗನ್ನ ಬೇಡ ರವಿ, ಪಾಪ, ಯಾರೋ ಹೆಂಗಸು ನರಳುತ್ತಿರುವ ಹಾಗಿದೆ, ಸಾಯುವ ಮೊದಲು ಅವಳಿಗೆ ಸಹಾಯ ಮಾಡಿ ಪುಣ್ಯವನ್ನಾದರೂ ಸಂಪಾದಿಸೋಣ. ಈ ಪುಣ್ಯದಿಂದ ಮುಂದಿನ ಜನ್ಮದಲ್ಲಾದರೂ ನಮಗೆ ಮಕ್ಕಳಾಗಲಿ’. ಆರ್ದ್ರನಾಗಿ ಅನುವಿನತ್ತ ನೋಡಿದ ರವಿ. ‘ಅನು, ಅಂದರೆ ಮುಂದಿನ ಜನ್ಮದಲ್ಲಿಯೂ ನೀನು ನನ್ನನ್ನು ವರಿಸಲು ಸಿಧ್ಧಳಾಗಿದ್ದೀಯ !’. ‘ರವಿ, ಇದೇನು ಮಾತು, ನಾನು ಆಗಲೇ ಹೇಳಿದೆ, ನಾನು ಉಸಿರು, ನೀನು ಚೇತನ ಅಂತ, ಮುಂದಿನದಷ್ಟೇ ಅಲ್ಲ, ನಮಗೆ ಅಂತ ಆ ಭಗವಂತ ಎಷ್ಟು ಜನ್ಮಗಳನ್ನು ಕೊಟ್ಟರೂ ನಾವಿಬ್ಬರೂ ದೂರಾಗುವುದು ಸಾಧ್ಯವಿಲ್ಲ. ಎಷ್ಟು ಬೇಕಾದರೂ ಕಷ್ಟ ಕೊಡಲಿ, ನಿನ್ನ ಮಡದಿಯಾಗುವ ಒಂದೇ ಒಂದು ವರ ಸಾಕು ನನಗೆ’. ರವಿಯ ಕಣ್ಣುಗಳು ತೇವವಾದವು. ರವಿಯ ಕಣ್ಣುಗಳನ್ನು ಚುಂಬಿಸಿದ ಅನು, ‘ಈಗ ಬಾ, ಯಾರಿಗೆ ಏನಾಗಿದೆಯೋ ನೋಡೋಣ’ ಎನ್ನುತ್ತಾ ಕಷ್ಟದಿಂದ ನಕಲಿ ಹೊಟ್ಟಯನ್ನು ಹೊತ್ತು ಎದ್ದಳು.
ಪಾರ್ಕಿನ ಮೂಲೆಯೊಂದರ ಕಲ್ಲು ಬೆಂಚಿನ ಹಿಂದೆ ಹೆಂಗಸೊಬ್ಬಳು ನರಳುತ್ತಿದ್ದಳು. ಅವಳನ್ನು ನೋಡಿ ಅನು ಗಾಭರಿಯಿಂದ ‘ಏನಮ್ಮ, ನಿಮಗೆ ಹೆರಿಗೆ ನೋವು ಬಂದಿರುವ ಹಾಗಿದೆ, ಬನ್ನಿ ಆಸ್ಪತ್ರೆಗೆ ಹೋಗೋಣ’ ಎಂದಳು. ಆ ಹೆಂಗಸು ಬಹಳ ಕಷ್ಟದಿಂದ, ‘ಇಲ್ಲ, ನಾನು ಯಾವ ಆಸ್ಪತ್ರೆಗೂ ಬರುವುದಿಲ್ಲ. ನನಗೆ ಏಳಲೂ ಆಗುತ್ತಿಲ್ಲ. ಇಲ್ಲಿಯೇ ಹೆರಿಗೆ ಆಗುವ ಹಾಗಿದೆ. ದಯವಿಟ್ಟು ಸಹಾಯ ಮಾಡಿ’ ಎಂದಳು. ರವಿಯನ್ನು ದೂರ ಕಳಿಸಿದ ಅನು, ಆಸ್ಪತ್ರೆಗೆ ಹೋಗುತ್ತೇವೆಂದು ಸುಳ್ಳು ಹೇಳಿ ತಂದಿದ್ದ ಒಂದು ಸೀರೆಯನ್ನು ಅವಳಿಗೆ ಮರೆ ಮಾಡಿ ಹಿಡಿದಳು. ಸ್ವಲ್ಪ ಹೊತ್ತಿನಲ್ಲಿಯೇ ಆ ಹೆಂಗಸು ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಹೊರಗೆ ಬಂದ ಮಗು ಚಳಿಯಾದ್ದರಿಂದಲೋ ಏನೋ ಜೋರಾಗಿ ಅಳತೊಡಗಿತು. ತಕ್ಷಣವೇ ಅನು ತಾನು ತಂದಿದ್ದ ಶಾಲುವಿನಲ್ಲಿ ಮಗುವನ್ನು ಮೃದುವಾಗಿ ಸುತ್ತಿದಳು. ಬೆಚ್ಚಗಾಗಿದ್ದರಿಂದ ಮಗು ಸುಮ್ಮನಾಯಿತು. ಆ ಹೆಂಗಸು ಅನುವಿಗೆ ಕೈ ಮುಗಿಯುತ್ತಾ ‘ನೀವು ಯಾರೋ ಏನೋ ಗೊತ್ತಿಲ್ಲ, ಸಮಯಕ್ಕೆ ಬಂದು ಸಹಾಯ ಮಾಡಿದಿರಿ. ನಾನೊಬ್ಬ ಅನಾಥೆ, ನನ್ನವರು ಎನ್ನುವವರು ಯಾರೂ ಇಲ್ಲ. ಮನೆ ಮನೆಗಳಲ್ಲಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದೆ. ಈಗ ಒಂಭತ್ತು ತಿಂಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಒಂದು ಮನೆಯ ಮಾಲಿಕ ತನ್ನ ಸ್ನೇಹಿತರ ಜೊತೆ ಸೇರಿ ನನ್ನ ಮೇಲೆ ಅತ್ಯಾಚಾರ ಮಾಡಿದ. ಯಾರಿಗಾದರೂ ಹೇಳಿದರೆ ಸಾಯಿಸುತ್ತೇನೆಂದು ಹೆದರಿಸಿದ. ಆದರೂ ಧೈರ್ಯ ಮಾಡಿ ಪೋಲೀಸರಿಗೆ ದೂರು ಕೊಟ್ಟೆ. ಆದರೆ ಹಿಂದುಮುಂದಿಲ್ಲದ ನನ್ನಂಥ ಅನಾಥಳ ದೂರನ್ನು ಅವರು ತೆಗೆದುಕೊಳ್ಳಲಿಲ್ಲ. ಸಾಯಬೇಕು ಎಂದು ಸುಮಾರು ಬಾರಿ ಪ್ರಯತ್ನ ಮಾಡಿದೆ. ಆದರೆ ಯಾವಾಗಲೂ ಯಾವುದೋ ಒಂದು ಅದೃಶ್ಯ ಶಕ್ತಿ ನನ್ನನ್ನು ತಡೆಯುತ್ತಿತ್ತು. ಕಡೆಗೆ ಈ ಮಗುವಿಗಾಗಿಯಾದರೂ ಬಾಳಬೇಕೆಂದು ಇಲ್ಲಿವರೆಗೂ ತಡೆದೆ. ಆದರೆ ಈಗ ನನ್ನಲ್ಲಿ ಶಕ್ತಿ ಇಲ್ಲ ಎಂದು ಅನ್ನಿಸುತ್ತಿದೆ. ದಯವಿಟ್ಟು ಈ ಮಗುವನ್ನು ನೀವೇ ಸಾಕಿಕೊಳ್ಳಿ, ಇಲ್ಲ ಯಾವುದಾದರೂ ಅನಾಥಾಶ್ರಮಕ್ಕೆ ಕೊಟ್ಟು ಬಿಡಿ’ ಎನ್ನುತ್ತಾ ಕೈ ಮುಗಿದಳು.
ಅನು ರವಿಯನ್ನು ಕರೆದು ಅವಳ ಕಥೆಯನ್ನೆಲ್ಲ ಹೇಳಿದಳು. ರವಿ ಅನುವಿನ ಶಾಲುವಿನಲ್ಲಿ ಸುತ್ತಿದ್ದ ಆ ಮಗುವನ್ನು ಎತ್ತಿಕೊಂಡ. ಸ್ಪರ್ಶ ಬೇರೆಯಾದ್ದರಿಂದ ಮಗು ಮತ್ತೆ ಅತ್ತಿತು. ರವಿ ಮಗುವನ್ನು ಅನುವಿನ ಕೈಗೇ ಕೊಟ್ಟ. ಅನು ರವಿಯ ಮುಖ ನೋಡಿದಳು. ಅನುವಿನ ಕಣ್ಣುಗಳಲ್ಲಿದ್ದ ಬೇಡಿಕೆ ರವಿಗೆ ಅರ್ಥವಾಯಿತು. ತನ್ನ ಕಣ್ಣುಗಳಲ್ಲೇ ಸಂತೋಷದಿಂದ ಒಪ್ಪಿಗೆಯನ್ನು ಸೂಚಿಸಿದ. ಅನು ಆ ಹೆಂಗಸಿನ ಕಡೆ ನೋಡಿದಳು. ಆದರೆ ಅಷ್ಟರಲ್ಲಾಗಲೇ ಆ ಹೆಂಗಸಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಮುದ್ದಾದ ಆ ಮಗುವನ್ನು ಅನು ತನ್ನ ಎದೆಗಪ್ಪಿಕೊಂಡಳು. ಮಗು ಅವಳ ಬಟ್ಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಮಾತೃತ್ವದ ಪ್ರೀತಿ, ಮಮತೆ, ವಾತ್ಸಲ್ಯಗಳ ಕಳೆ ಅನುವಿನ ಮುಖದ ಮೇಲೆ ಮೂಡಿತು. ‘ರವಿ, ನಮ್ಮಿಬ್ಬರ ಆತ್ಮಗಳ ಸಂಗಮಕ್ಕೆ ಆ ದೇವರು ಕೊಟ್ಟ ಉಡುಗೊರೆ ಈ ‘ಪ್ರೀತಿ’ ಎಂದು ಮಗುವಿಗೆ ನಾಮಕರಣವನ್ನೂ ಮಾಡಿದಳು.