bk hema

Drama Others

4.7  

bk hema

Drama Others

ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ

3 mins
260


“ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಕ್ಷಮಯಾ ಧರಿತ್ರಿ ………… ಹುಂ!, ಇವೆಲ್ಲಾ ಮಹಿಳೆಗೆ ವರವೋ, ಶಾಪವೋ, ಇವೆಲ್ಲಾ ಏಕೆ ಮಹಿಳೆಗೆ ಮಾತ್ರ ಸೀಮಿತ ……………..” ಮನಸ್ಸು ಎಲ್ಲೆಲ್ಲೋ ಓಡುತ್ತಿತ್ತು. ವ್ಯಗ್ರವಾದ ಮನಸ್ಸು, ಸುಸ್ತಾದ ದೇಹ, …….. ನನ್ನ ನಿಯಂತ್ರಣ ತಪ್ಪುತ್ತಿದೆ ಎನಿಸುತ್ತಿತ್ತು. ಕಛೇರಿಯ ಬಿಡುವಿಲ್ಲದ ಕೆಲಸ ಮೈ ಮನಸ್ಸುಗಳನ್ನು ಹೈರಾಣ ಮಾಡಿತ್ತು. ಯಾಕಾದರೂ ಪ್ರೊಮೋಶನ್ ತೆಗೆದುಕೊಂಡೆನೋ ಅನಿಸುವಂತಾಗಿತ್ತು. ಸಂಸಾರವನ್ನು ಬಿಟ್ಟು ಬೇರೆ ಸ್ಥಳಗಳಿಗೆ ಹೋಗಲಾಗದೇ ಎರಡು ಮೂರು ಬಾರಿ ಪ್ರೊಮೋಶನ್ ಬಿಟ್ಟು ಕೊಟ್ಟಿದ್ದ ನಾನು ಈಗ ಇರುವ ಜಾಗದಲ್ಲೇ ಪ್ರೊಮೋಶನ್ ಸಿಕ್ಕಾಗ ಸಂತೋ಼ಷದಿಂದ ಕುಣಿದಾಡುತ್ತಾ ಒಪ್ಪಿಕೊಂಡಿದ್ದೆ. ಇದರಿಂದ ಒಮ್ಮೊಮ್ಮೆ ಮನೆ ಕೆಲಸ ಹಾಗೂ ಕಛೇರಿಯ ಹೆಚ್ಚುವರಿ ಕೆಲಸ ಎರಡನ್ನೂ ನಿಭಾಯಿಸಲು ಕಷ್ಟವಾಗುತ್ತಿತ್ತು. ಮನೆಯ ಕೆಲಸದಲ್ಲಿ ಯಾರ ಸಹಾಯ ಸಿಗದೇ ಇತ್ತೀಚೆಗೆ ತುಂಬಾ ಬೇಗ ಕೋಪ ಬರುತ್ತಿತ್ತು. “ಹುಂ! ಇಂದು ಮಹಿಳಾ ದಿನಾಚರಣೆಯಂತೆ, ಇಂದಿನ ಆಧುನಿಕ ಯುಗದಲ್ಲಿ ದಿನಕ್ಕೊಂದೊಂದು ಆಚರಣೆ, ಆದರೆ ಯಾವುದಾದರೂ ದಿನಾಚರಣೆ ಸಫಲತೆಯನ್ನು ಕಂಡಿದೆಯೇ, ಈ ಆಚರಣೆಗಳ ಉದ್ದೇಶ ಎಟ್ ಲೀಸ್ಟ್ ಆ ಒಂದು ದಿನವಾದರೂ ನೆರವೇರಿದೆಯೇ……..”, ಮನಸ್ಸು ಎಲ್ಲೆಲ್ಲೋ ಓಡುತ್ತಿದ್ದರೂ ದೇಹ ಯಾಂತ್ರಿಕವಾಗಿ ಮನೆಗೆ ಬಂದಿತ್ತು.


“ಹುಶ್ಯಪ್ಪಾ” ಎನ್ನುತ್ತಾ ಸುಸ್ತಾಗಿ ಸೋಫಾದಲ್ಲಿ ಒರಗಿ ಕಣ್ಣು ಮುಚ್ಚಿದೆ. ಮನಸ್ಸು ಬಿಸಿ ಬಿಸಿ ಕಾಫಿ ಜೊತೆಗೆ ಕುರುಕಲು ತಿಂಡಿ ಬಯಸುತ್ತಿತ್ತು. ದಿನವೂ ಸರಿಯಾದ ಸಮಯಕ್ಕೆ ಬಂದು ಗಂಡ ಮತ್ತು ಮಕ್ಕಳಿಗೆ ಬಿಸಿ ಬಿಸಿಯಾಗಿ ಕಾಫಿ, ತಿಂಡಿ ಮಾಡಿಕೊಡುತ್ತಿದ್ದ ನಾನು, ಕಛೇರಿಯಲ್ಲಿನ ಕೆಲಸದೊತ್ತಡದಿಂದಾಗಿ ಬಹಳ ತಡವಾಗಿ ಬಂದಿದ್ದೆ.  ಸಂಸಾರದ ಕತ೯ವ್ಯ ಕೈ ಬೀಸಿ ಕರೆಯುತ್ತಿತ್ತು. ಆದರೆ ದೇಹ ಮತ್ತು ಮನಸ್ಸು ಸಂಪು ಹೂಡಿತ್ತು. ಏನು ಮಾಡಿದರೂ ಏಳಲೊಲ್ಲದು. ಸುತ್ತೆಲ್ಲಾ ಕತ್ತಲು, ಮನೆಯಷ್ಟೇ ಅಲ್ಲ, ಮನಸಿನೊಳಗೂ ಕತ್ತಲು.  


“ಅರೇ, ನಾನು ಬೀಗ ತೆಗೆಯದೇ ಹೇಗೆ ಒಳಗೆ ಬಂದೆ, ನನಗಿಂತ ಮೊದಲು ಅವರೇನಾದರೂ ಬಂದಿರಬಹುದೇ, ಅಯ್ಯೋ ! ಮಕ್ಕಳನ್ನು ಶಿಶು ವಿಹಾರದಿಂದ ಕರೆತರಲು ಮರೆತೇ ಬಿಟ್ಟೆನಲ್ಲ, ಓಹ್, ಇಂದು ನನಗೇನಾಯಿತು, ಶಿಶು ವಿಹಾರದಲ್ಲಿ ಮಕ್ಕಳು ನನಗೋಸ್ಕರ ಕಾಯುತ್ತಿರುತ್ತಾರಲ್ಲಾ…..”. ಯಾಕೋ, ಒಳಗಿನಿಂದ ಅಳು ಒತ್ತರಿಸಿಕೊಂಡು ಬಂತು. ಹಿಂದೆಯೇ ಗಾಭರಿ, “ಮನೆ ಬೀಗ ತೆಗೆದಿದೆ, ಜೊತೆಗೆ ಮನೆಯಲ್ಲಿ ಯಾರ ಸುಳಿವೂ ಇಲ್ಲ, ಎಲ್ಲಾ ಕತ್ತಲು, ಓ, ಹಾಗಾದರೆ ಇದು ಖಂಡಿತ ಕಳ್ಳರ ಕೆಲಸವಿರಬಹುದು. ಹಾಗಾದರೇ ...... ಕಷ್ಟ ಪಟ್ಟು ಸಂಪಾದಿಸಿದ ಅಷ್ಟೋ ಇಷ್ಟೋ ಒಡವೆ, ರೇಷ್ಮೆ ಸೀರೆಗಳು ? ಮನೆಯ ವಸ್ತುಗಳು ?”  ಮನ ಮೂಕವಾಗಿ ರೋಧಿಸಿತು. ಆದರೆ ಏನು ಮಾಡಿದರೂ ದೇಹ ಕುಳಿತಲ್ಲಿಂದ ಏಳಲಿಲ್ಲ.


ಅಚಾನಕ್ಕಾಗಿ ಎಲ್ಲಿಂದಲೋ ಶ್ರೀಗಂಧದ ಪರಿಮಳ ತೇಲಿ ಬಂತು. ಆಹಾ! ಎಂಥಾ ಪರಿಮಳ, ದಣಿದ ಮೈ ಮತ್ತು ಮನಸ್ಸು ಆ ಪರಿಮಳಕ್ಕೆ ಆಹ್ಲಾದಗೊಂಡಿತು. ನನಗೇ ಅರಿವಿಲ್ಲದೇ ಕಣ್ಣು ಮುಚ್ಚಿ ಹಿತಕರವಾದ ಆ ವಾತಾವರಣವನ್ನು ಆಹ್ಲಾದಿಸತೊಡಗಿದೆ. ಒಂದು ಕ್ಷಣ ನನ್ನ ಮನಸ್ಸು ಎಲ್ಲಾ ಚಿಂತೆಯನ್ನು ಮರೆಯಿತು.  

ಇದ್ದಕ್ಕಿದ್ದಂತೇ ಮನೆ ಎಲ್ಲಾ ಜಗಮಗ ಪ್ರಕಾಶಗೊಂಡಿತು. ಶ್ರೀಗಂಧದ ಪರಿಮಳದ ಜೊತೆಗೆ ನನ್ನ ನೆಚ್ಚಿನ ಬಿಸಿ ಬಿಸಿ ಫಿಲ್ಟರ್ ಕಾಫಿಯ ಪರಿಮಳ, ಜೊತೆಗೇ ನನ್ನ ಇಷ್ಟದ ಮೈಸೂರು ಮಲ್ಲಿಗೆ, ಮೈಸೂರು ಪಾಕಿನ ಪರಿಮಳವೂ ಸೇರಿತು. ಏನೀ ವಿಚಿತ್ರ ಎಂದು ನೋಡಲು ಕಣ್ಣು ತೆರೆಯುತ್ತಿರುವಂತೆಯೇ ‘ಹ್ಯಾಪಿ ವಿಮೆನ್ಸ್ ಡೇ’ ಎಂಬ ಕೂಗು ಕೇಳಿ ಬಂತು. ನನ್ನ ಮುಂದೆ ನನ್ನವರ ಕೈಯಲ್ಲಿ ಕಾಫಿಯ ಬಟ್ಟಲು, ನನ್ನ ಮಗನ ಕೈಯಲ್ಲಿ ಮೈಸೂರು ಪಾಕಿನ ತಟ್ಟೆ, ನನ್ನ ಮಗಳ ಕೈಯಲ್ಲಿ ಮೈಸೂರು ಮಲ್ಲಿಗೆ, “ಓಹ್! ಇದೇನು ಕನಸೋ, ನನಸೋ”.  


ಕಕ್ಕಾಬಿಕ್ಕಿಯಾಗಿ ಕಣ್ಣು ಕಣ್ಣು ಬಿಡುತ್ತಿರುವಂತೆಯೇ ನನ್ನ ಕಳವಳವನ್ನು ನೋಡಿದ ನನ್ನವರು ಮೃದುವಾಗಿ ನನ್ನನ್ನು ಬಳಸಿ “ಹುಚ್ಚಿ, ಇದು ಕನಸಲ್ಲ, ನನಸು. ನಿನ್ನ ಶ್ರಮ, ಕಾಳಜಿ ಇವೆಲ್ಲಾ ನಮಗೆ ಅಥ೯ವಾಗುವುದಿಲ್ಲ ಅಂದುಕೊಂಡಿರುವೆಯಾ, ಈ ಸಂಸಾರಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ಕೊಡುತ್ತಿರುವ ನಿನ್ನ ಬಗ್ಗೆ ನನಗೆ ಅಪಾರ ಗೌರವ ಇದೆ. ಕಛೇರಿಯಲ್ಲಿ ಕೆಲಸದೊತ್ತಡ ಇದೆ ಎಂದು ನೀನು ಹೇಳಿದ್ದೆಯಲ್ಲಾ, ಅದಕ್ಕೆ ನಾನೇ ಮಕ್ಕಳನ್ನು ಶಿಶು ವಿಹಾರದಿಂದ ಕರೆತಂದೆ. ಹಾಗೇ ನಿನಗೆ ಸರ್ ಪ್ರೈಸ್ ಕೊಡಬೇಕು ಅಂತ ನಾವು ಇದೆಲ್ಲಾ ಪ್ಲಾನ್ ಮಾಡಿದ್ವಿ. ಇದೊಂದೇ ದಿನ ಅಂತ ಅಂದುಕೋಬೇಡ ಮಾರಾಯ್ತಿ, ಇನ್ನು ಮುಂದೆ ನಾನೂ ಮನೆಯ ಎಲ್ಲಾ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ನಾವಿಬ್ಬರೂ ಈ ಸಂಸಾರವೆಂಬ ಬಂಡಿಯ ಎರಡು ಚಕ್ರಗಳು. ಯಾವ ಚಕ್ರದ ಸ್ಥಿಮಿತ ತಪ್ಪಿದರೂ ಗಾಡಿಯ ಬ್ಯಾಲೆನ್ಸ್ ತಪ್ಪುತ್ತದೆ. ನಿನ್ನ ಬ್ಯಾಲೆನ್ಸ್ ತಪ್ಪಲು ನಾನು ಬಿಡುವಿದಿಲ್ಲ. ಹಾ! ಈಗ ಏನೂ ಯೋಚನೆ ಮಾಡದೇ ಬೇಗ ಫ್ರೆಶ್ ಆಗಿ ಬಾ, ನಿನ್ನ ಇಷ್ಟದ ಸಿನಿಮಾ ನೋಡಿಕೊಂಡು, ನಿನ್ನ ಇಷ್ಟದ ಊಟ ಮಾಡಿಕೊಂಡು ಬರೋಣ” ಅಂದರು.

“ಓಹ್! ಜೀವನ ಎಷ್ಟು ಸುಂದರ” ಎನಿಸಿಬಿಟ್ಟಿತು. “ಹೆಣ್ಣು ಬಯಸುವುದೇನು? ಅವಳನ್ನು ಪ್ರೀತಿಸುವ ಅಪ್ಪ, ಅಮ್ಮ, ಸಹೋದರ, ಸಹೋದರಿಯರು ಹಾಗೂ ಗಂಡ ಮತ್ತು ಮಕ್ಕಳು. ಕೇವಲ ಪ್ರೀತಿಗೆ ಸೋಲುವ ಅವಳನ್ನು ಅಥ೯ ಮಾಡಿಕೊಂಡು ಸರಿಯಾದ ರೀತಿಯಲ್ಲಿ ನಡೆಸಿಕೊಂಡಾಗ ಮೇಲೆ ಹೇಳಿದ ಆ ಆರೂ ಗುಣಗಳು ಅವಳಿಗೆ ಅಲಂಕಾರಪ್ರಾಯವಾಗುತ್ತದೆ” ಅನ್ನಿಸಿತು. “ಅದರೇ ಅದೇ ಅವಳನ್ನು ಕೆಣಕಿದಾಗ ಕೆರಳಿದ ಸಿಂಹಿಣಿಯಂತಾಗುವ ಅವಳು ಇಡೀ ಸೃಷ್ಠಿಯನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತಾಳೆ” ಎಂದು ಎಲ್ಲೋ ಓದಿದ ನೆನಪಾಯಿತು. ಹೌದು, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ. ನನ್ನನ್ನು ಪ್ರೀತಿಸುವ ನನ್ನ ಸಂಸಾರವನ್ನು ನೋಡುತ್ತಾ ಐದು ನಿಮಿಷದ ಹಿಂದೆ ನನ್ನನ್ನು ಕಾಡುತ್ತಿದ್ದ ನನ್ನ ಎಲ್ಲಾ ದೂರುಗಳು ಎಲ್ಲೋ ಮಾಯವಾದವು


Rate this content
Log in

Similar kannada story from Drama