2-. ಋಣಾನುಬಂಧ
2-. ಋಣಾನುಬಂಧ
ವಿಶ್ವ ತನ್ನ ತಂದೆತಾಯಿಯರ ನಾಲ್ಕು ಜನ ಮಕ್ಕಳಲ್ಲಿ ಮೂರನೆಯವನು. ನೋಡಲು ಸುಂದರ ಹಾಗೆಯೇ ಆಟ, ಪಾಠಗಳಲ್ಲೂ ಮುಂದೆ ಇದ್ದವ. ಅವನ ನಯವಿನಯದ ವ್ಯಕ್ತಿತ್ವಕ್ಕೆ ಮಾರು ಹೋಗದವರೇ ಇಲ್ಲ. ಅದೇನೋ,ಯಾಕೆ ಹಾಗೆ ಮಾತುಕತೆಯಾಗಿತ್ತು ಗೊತ್ತಿಲ್ಲ, ಇವನು ಚಿಕ್ಕ ಹುಡುಗನಾಗಿದ್ದಾಗಿದಂಲೇ ದೊಡ್ಡಪ್ಪನ ಮಗಳ(ಅಕ್ಕನ) ಮಗಳೊಂದಿಗೆ ಇವನ ಮದುವೆಯೆಂದು ಎರಡೂ ಮನೆಯ ಹಿರಿಯರು ಒಪ್ಪಿಕೊಂಡಿದ್ದರು.
ಮದುವೆ ಎಂದರೇನು, ಗಂಡ ಹೆಂಡತಿ ಸಂಬಂಧ ಎಂತಹದು ಎಂದರೇನೆಂದು ತಿಳಿಯದ ವಯಸ್ಸಿನಿಂದಲೇ ಇವರಿಬ್ಬರೂ ನೋಡುಗರ ದೃಷ್ಟಿಯಲ್ಲಿ ಗಂಡ ಹೆಂಡತಿಯರಾಗಿದ್ದರು.
ವಿಶ್ವ ಇದದ್ದು ಒಂದು ಊರಲ್ಲಾದರೆ, ಅವನ ಅಕ್ಕನ ಮಗಳಿದದ್ದು ಮತ್ತೊಂದು ಊರಲ್ಲಿ. ಪ್ರತಿ ದಸರಾ ಮತ್ತು ಬೇಸಿಗೆ ರಜೆಯಲ್ಲಿ ಅಲ್ಲದೆ ಹಬ್ಬಹರಿದಿನಗಳಲ್ಲಿ, ಸಂಬಂಧಿಕರ ಮದುವೆ, ಇತರ ಸಮಾರಂಭಗಳಲ್ಲಿ ಇಬ್ಬರ ಭೇಟಿಯಾಗುತ್ತಿತ್ತು. ಇಬ್ಬರಿಗೂ ಒಂದು ವರ್ಷದ ಅಂತರವಿತ್ತು. ಬಾಲ್ಯದಲ್ಲಿ ಯಾವುದೇ ಕ್ಲೇಶವಿಲ್ಲದೆ ಸೇರಿ ಆಡುತ್ತಿದ್ದರು. ಅವರು ಬೆಳೆದಂತೆಲ್ಲಾ ಹುಡುಗಾಟಿಕೆ ಕಮ್ಮಿಯಾಗಿ ಆ ಜಾಗದಲ್ಲಿ ನಿರ್ಮಲವಾದ ಪ್ರೀತಿ ಮೊಳೆಯತೊಡಗಿತು. ಅವಳು ನೋಡಲು ಸುರಸುಂದರಿಯಾಗಿದ್ದಳು, ಇವನನ್ನು ಮನಸಾರೆ ಇಷ್ಟಪಟ್ಟಿದ್ದಳು. ಇವನ ಏಳಿಗೆಗಾಗಿ ಅವಳು, ಅವಳ ಏಳಿಗೆಗಾಗಿ ಇವನು ತುಡಿಯುತ್ತಿದ್ದರು ಮಿಡಿಯುತ್ತಿದ್ದರು. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರ ಸಹಮತವಿತ್ತು.
ಅಕ್ಕನ ಮನೆಯವರು ತುಂಬಾ ಸ್ಥಿತಿವಂತರು, ಅವರಿಗೆ ಹೋಲಿಸಿದರೆ ವಿಶ್ವನ ಮನೆಯ ಪರಿಸ್ಥಿತಿ ಏನೇನು ಅಲ್ಲಾ. ಮತ್ತೊಬ್ಬರಿಗೆ ಕೊಡುವಷ್ಟು ಇಲ್ಲದಿದ್ದರೂ, ಮತ್ತೊಬ್ಬರ ಬಳಿ ಕೈ ಚಾಚುವ ಪರಿಸ್ಥಿತಿ ಏನೂ ಇರಲಿಲ್ಲ. ಹಾಗಾಗಿ ಇವರ ಪ್ರೀತಿಗೆನು ತೊಂದರೆಯಾಗಿರಲಿಲ್ಲ. ವಿಶ್ವ ಚೆನ್ನಾಗಿ ಓದಿ ತನ್ನ ಪದವಿಯನ್ನು ಮುಗಿಸಿದ. ಅಂತಿಮ ವರ್ಷದ ಪರೀಕ್ಷೆಗಳು ಮುಗಿದ ಮಾರನೇ ದಿನದಿಂದಲೇ ಪರಿಚಯದವರ ಅಂಗಡಿಯಲ್ಲಿ ಲೆಕ್ಕ ಬರೆಯಲು ಸೇರಿಕೊಂಡ. ಮನೆಯಲ್ಲಿ ಹಿರಿಯರು ನಾಲ್ಕು ದಿನ ಹಾಯಾಗಿದ್ದು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸು ಎಂದರೂ, ಓದು ಮುಗಿದ ಮೇಲೆ ತಂದೆಗೆ ಹೊರೆಯಾಗಬಾರದೆಂದು, ಕೊನೆಯ ಪಕ್ಷ ತನ್ನ ಖರ್ಚಿನ ಹಣವನ್ನಾದರೂ ತಾನು ಸಂಪಾದಿಸಬೇಕೆಂದು ಕೆಲಸಕ್ಕೆ ಸೇರಿದ. ಇಲ್ಲಿ ಬಹಳಷ್ಟು ಜನರಿಗೆ ತಿಳಿಯದಂತೆ ೧೯೮೭ ರಿಂದ ಹೆಚ್ಚುಕಮ್ಮಿ ೧೯೯೫ರವರೆಗೆ SDC, FDC ಹುದ್ದೆಗಳಿಗೆ ಸರ್ಕಾರದಿಂದ ಅರ್ಜಿ ಕರೆಯಲಿಲ್ಲ. ಜೊತೆಗೆ ಇತರೆ ಕೆಲಸಗಳಿಗೂ ಅರ್ಜಿ ಕರೆದದ್ದು ಕಮ್ಮಿಯೇ. ಇವನು ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಒಳ್ಳೆಯ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದ.
ಅದೊಂದು ದಿನ ಸಂಬಂಧಿಕರ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಭಾಗವಹಿಸಿದ್ದರು. ಎಂದಿನ ಸಲಿಗೆಯಂತೆ ವಿಶ್ವನ ತಂದೆ ಆ ಹುಡುಗಿಯನ್ನು ಕರೆಯುವಾಗ ಅವಳಪ್ಪ ಎಲ್ಲರ ಎದುರೇ ಸಿಟ್ಟಿನಿಂದ, ನೀವು ನನ್ನ ಮಗಳನ್ನು ಸೊಸೆಯೆಂದು ಕರೆಯಬೇಡಿ. ನಾನು ಅವಳಿಗೆ ಬೇರೆಕಡೆ ಸಂಬಂಧ ನೋಡುತ್ತಿದ್ದೇನೆ ಎಂದರು. ಆ ಕ್ಷಣಕ್ಕೆ ವಿಶ್ವನ ತಂದೆಗೆ ಆಘಾತವಾದಂತಾದರೂ ತೋರಿಸಿಕೊಳ್ಳದೆ, ಆಮೇಲೆ ವಿಚಾರಿಸುವ ಎಂದು ಸುಮ್ಮನಾಗಿದ್ದರು. ಅಲ್ಲದೆ ಅವರು ಮಾತನಾಡುತ್ತಾರೆ ಎಂದು ತಾವೂ ಮಾತನಾಡಿದರೆ ಎಲ್ಲರೆದುರಿಗೆ ಇಬ್ಬರ ಮರ್ಯಾದೆ ಹೋಗುವುದಲ್ಲದೆ ಮಕ್ಕಳಿಗೂ ಕೆಟ್ಟ ಹೆಸರೆಂದು ತಾಳ್ಮೆವಹಿಸಿದ್ದರು.
ಈ ಘಟನೆಯಾದ ನಾಲ್ಕೈದು ದಿನಗಳ ನಂತರ ತಾವೇ ಕರೆಮಾಡಿ, ಕಷ್ಟಸುಖ ವಿಚಾರಿಸಿದ
ನಂತರ ಅಂದಿನ ಕುರಿತು ಕೇಳಿದಾಗ, ಹುಡುಗಿಯ ತಂದೆ ಕಡ್ಡಿ ಮುರಿದ ಹಾಗೆ ಅದೇ ಮಾತನ್ನು ಹೇಳಿದ್ದಾರೆ. ಏಕೆಂದು ಇವರು ತೀರಾ ಒತ್ತಾಯ ಮಾಡಿದಾಗ, ಮಹಾರಾಣಿಯಂತೆ ಸಾಕಿದ ತಮ್ಮ ಮಗಳನ್ನು ಭಿಕ್ಷುಕರಿಗೆ ಕೊಡುವುದಿಲ್ಲ ಎಂದಿದ್ದಾರೆ. ಅದು ಏನಾಗಿತ್ತು ಅಂದರೆ, ಹುಡುಗಿಯ ಅಪ್ಪ ವಿಶ್ವನ ಊರಿಗೆ ಬಂದಾಗೊಮ್ಮೆ ಅವನನ್ನು ಮಾತನಾಡಿಸಲು ಅವನು ಕೆಲಸ ಮಾಡುತ್ತಿದ್ದ ಅಂಗಡಿ ಬಳಿ ಹೋಗಿದ್ದಾರೆ. ಅಂದು ಅಂಗಡಿಯ ಒಂದಿಬ್ಬರು ಕೆಲಸಕ್ಕೆ ಬಂದಿರದಿದ್ದ ಕಾರಣ, ಇವನೇ ತನ್ನ ನಿತ್ಯ ಕೆಲಸದ ಜೊತೆ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ತೆಗೆದುಕೊಡುತ್ತಿದ್ದ. ಇದನ್ನು ನೋಡಲು ಸಾಧ್ಯವಾಗದೆ ಅವರು ಇವನನ್ನು ಮಾತನಾಡಿಸದೆ ಹಾಗೆ ಹೋಗಿದ್ದರು. ಇದು ವಿಶ್ವನ ಗಮನಕ್ಕೂ ಬಂದಿರಲಿಲ್ಲ. ಇದು ಹೀಗೇ ಮುಂದುವರೆದರೆ ತಮ್ಮ ಮಗಳ ಭವಿಷ್ಯ ಏನಾಗಬಹುದು ಎಂದು ಯೋಚಿಸಿ, ಅವಳಿಗೆ ಬೇರೆಡೆ ಮದುವೆ ಮಾಡುವ ದೃಢ ನಿರ್ಧಾರ ಮಾಡಿದ್ದರು. ಯಾರು ಏನೇ ಹೇಳಿದರೂ ಅವರು ನಿರ್ಧಾರವನ್ನು ಬದಲಿಸಲಿಲ್ಲ. ಈ ವಿಷಯ ತಿಳಿದ ವಿಶ್ವನೂ ಅಕ್ಕಭಾವರೊಂದಿಗೆ ಮಾತನಾಡಿದ. ಅವರು ಬದಲಾಗುವುದಿಲ್ಲ ಎಂದು ಅರಿತಮೇಲೆ, ತನ್ನ ಹುಡುಗಿಯೊಂದಿಗೂ ಮಾತನಾಡಿದ. ಇದನ್ನು ಅವಳ ತಂದೆತಾಯಿ ನಿರೀಕ್ಷೆ ಮಾಡಿದ್ದರಿಂದ ಏನು ಹೇಳಿದ್ದರೋ, ಅದಕ್ಕವಳು ಅಪ್ಪ ಅಮ್ಮ ಹೇಗೆ ಹೇಳುತ್ತಾರೋ ಹಾಗೆ ಕೇಳುವೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದು ಬಿಟ್ಟಳು. ವಿಶ್ವನ ಯಾವುದೇ ಮಾತಿಗೂ ಅವಳದು ಅದೊಂದೇ ಉತ್ತರವಾಗಿತ್ತು.
ಬದುಕಲ್ಲಿ ಒಂದು ದಿನ ಇಂತಹಾ ಪರಿಸ್ಥಿತಿ ಬರಬಹುದು ಎಂದು ಕನಸಲ್ಲೂ ಊಹಿಸಿರದ ವಿಶ್ವನಿಗೆ ದೊಡ್ಡ ಆಘಾತವೇ ಆಗಿತ್ತು. ಅವನನ್ನು ಹೇಗೆ ಸಂತೈಸಬೇಕೆಂದು ಮನೆಯವರಿಗೂ ಚಿಂತೆಯಾಗಿತ್ತು. ಅದೊಂದು ಭಾನುವಾರ ಸಂಜೆ ಐದು ಗಂಟೆಗೆ ಮನೆಯ ಸ್ಥಿರ ದೂರವಾಣಿಗೆ ಕರೆಮಾಡಿ, ಹರೀಶ ಬಿಡುವಿದ್ದರೆ ಸಿಗುವೆಯ ಎಂದ. ಅವನ ಬಗ್ಗೆ ಆಗಲೇ ಅವನ ತಾಯಿಯಿಂದ ಎಲ್ಲಾ ವಿಷಯ ನನಗೆ ತಿಳಿದಿತ್ತು. ಅಲ್ಲದೆ ಹೇಗಾದರೂ ಮಾಡಿ ಅವನಿಗೆ ಸ್ವಲ್ಪ ಸಮಾಧಾನ ಮಾಡೆಂದು ಕೂಡ ಹೇಳಿದ್ದರು. ನಾನು ಅವಕಾಶಕ್ಕಾಗಿ ಕಾಯುತ್ತಿದ್ದೆ. ಹಾಗಾಗಿ ಅವನು ಕರೆದೊಡನೇ ಬೇರೇನೂ ಹೇಳದೆ ಬರುವೆನೆಂದು, ಅವನು ಹೇಳಿದ ಜಾಗಕ್ಕೆ ಹೋದೆ. ಅದು ಊರು ಹೊರಗಿನ ಪ್ರಶಾಂತ ಸ್ಥಳ, ಅದೂ ಸಂಜೆ ವೇಳೆ ಜನ ಬರುವುದು ತುಂಬಾ ವಿರಳ. ನಾನು ಹೋಗುವ ವೇಳೆಗೆ ಅವನು ಅಲ್ಲಿಗೆ ಬಂದಿದ್ದ. ನಾನು ಹತ್ತಿರ ಹೋದೊಡನೆ ನನ್ನನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅತ್ತುಬಿಟ್ಟ. ನಾನೂ ಅವನಿಗೆ ಸಮಾಧಾನ ಆಗುವವರೆಗೂ ಅಳಲೆಂದು ಸುಮ್ಮನಿದ್ದೆ. ಸ್ವಲ್ಪ ಹೊತ್ತಿನ ನಂತರ ಅವನೇ ಸಮಾಧಾನ ಮಾಡಿಕೊಂಡು ನಡೆದ ಎಲ್ಲಾ ವಿಚಾರವನ್ನು ತಿಳಿಸಿದ. ನನಗೆ ಗೊತ್ತಿದ್ದರೂ ತೋರಿಸಿಕೊಳ್ಳದೆ ಮೊದಲ ಬಾರಿ ಕೇಳಿದವನಂತೆ ನಾಟಕವಾಡಿದೆ. ನಾನು ಅವನಿಗೆ ಏನಾದರೂ ಹೇಳಬೇಕೆಂದು ಶುರುಮಾಡುವ ಮೊದಲೇ ಅವನು, ಹರೀಶ ಇಲ್ಲಿಯವರೆಗೆ ನನ್ನ ಬದುಕು ಬೇರೆ ರೀತಿ ಇತ್ತು. ಇಂದಿನಿಂದ, ಈ ಕ್ಷಣದಿಂದ ಆರಂಭವಾಗುವ ಬದುಕೆ ಬೇರೆ. ಇನ್ನು ಮುಂದೆ ಅಪ್ಪ ಅಮ್ಮನಿಗಾಗಿ, ಮನೆಯವರಿಗಾಗಿ ಬದುಕುವೆ. ಹಾಗೆಯೇ ಯಾವ ಕಾರಣಕ್ಕಾಗಿ ನನಗೆ ಹೀಗಾಯಿತೋ ಅದನ್ನು ಮೆಟ್ಟಿನಿಂತು ಒಳ್ಳೆಯ ಬದುಕನ್ನು ಬಾಳುವೆ. ನನಗೆ ಹೀಗಾಯಿತೆಂದು ಮನೆಯಲ್ಲಿ ಎಲ್ಲರೂ ಕೊರುಗುತ್ತಿದ್ದಾರೆ. ಅವರೆದುರು ನಾನು ಅತ್ತರೆ, ಮತ್ತಷ್ಟು ಸಂಕಟ ಪಡುತ್ತಾರೆ. ಅದಕ್ಕೆ ನಿನ್ನನ್ನು ಕರೆದು ಮನದಲ್ಲಿ ಇರುವುದನೆಲ್ಲಾ ಹೊರಹಾಕಿ ಆರಾಮವಾದೆ. ನಾಳೆಯಿಂದ ಮತ್ತೆ ನಾನು ಹಳೇ ವಿಶ್ವನಾಗಿರುತ್ತೇನೆ. ನಿನಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ ಎಂದ. ಅದಕ್ಕೆ ನನಗೆ ತಿಳಿದಷ್ಟು ನಾನು ಅವನಿಗೆ ಹೇಳಿದೆ.
ಅವನು ಹೇಳಿದ ಹಾಗೆ ಮಾರನೇ ದಿನದಿಂದ ಎಲ್ಲವನ್ನೂ ಮರೆತು ಮೊದಲಿನಂತೆ ಇರಲು ಆರಂಭಿಸಿದ. ಆ ಹುಡುಗಿಗೂ ಬೇರೆ ಕಡೆ ವರ ನೋಡಲು ಆರಂಭಿಸಿದ ವಿಷಯ ತಿಳಿಯಿತು. ಇದಾಗಿ ಒಂದು ವರ್ಷವಾಗಿರಬೇಕು, ವಿಶ್ವನಿಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿತು. ಮನೆಯಲ್ಲಿ ಎಲ್ಲರಿಗೂ ಆದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಕೆಲಸ ಸಿಕ್ಕ ಕಛೇರಿಯಲ್ಲಿ ಅನುರೂಪವಾದ ಹುಡುಗಿಯೂ ಸಿಕ್ಕಳು. ಇವನು ಆ ಹುಡುಗಿಗೆ ಈ ಹಿಂದೆ ನಡೆದ ಎಲ್ಲಾ ವಿಚಾರಗಳನ್ನು ಚಾಚೂ ತಪ್ಪದೆ ತಿಳಿಸಿ, ಅದಕ್ಕೆ ಅವಳ ಸಂಪೂರ್ಣ ಒಪ್ಪಿಗೆ ಸಿಕ್ಕಮೇಲೆ ಮನೆಯಲ್ಲಿ ಹೊಸ ವಿಷಯವನ್ನು ತಿಳಿಸಿದ.
ಇಷ್ಟಾದರೂ ವಿಶ್ವನ ಅಕ್ಕನ ಮಗಳಿಗೆ ಅವರು ಬಯಸಿದಂತ ಹುಡುಗ ಸಿಕ್ಕಿರಲಿಲ್ಲ. ಅದಕ್ಕಾಗಿ ಅವರು ಇವನ ಮನೆಗೆ ಬಂದು, ತಂದೆ ತಾಯಿಯರ ಬಳಿ ತಮ್ಮಿಂದ ಆದ ತಪ್ಪಿಗೆ ಕ್ಷಮೆಯಾಚಿಸಿ, ತಮ್ಮ ಮಗಳನ್ನು ತಂದುಕೊಳ್ಳುವಂತೆ ಬೇಡಿಕೊಂಡರು. ಅದನ್ನು ಅವರು ವಿಶ್ವನಿಗೆ ಹೇಳಲು ಕಾಯುತ್ತಿರುವಾಗಲೇ ಅವನು ತನ್ನ ಹೊಸ ವಿಷಯವನ್ನು ಹೇಳಿದ್ದ. ತಂದೆ ತಾಯಿಗೆ ಏನು ಮಾಡಬೇಕೆಂದು ತಿಳಿಯದೆ, ಮನೆಗೆ ಬಂದು ಹೋದವರ ವಿಷಯವನ್ನು ಹೇಳಿ ನಿರ್ಧಾರವನ್ನು ಅವನಿಗೆ ಬಿಟ್ಟರು. ಅವನು ಹಳೆಯದನ್ನು ಮರೆತು ಹೊಸತಿಗಾಗಿ ಆಗಲೇ ಮಾತು ಕೊಟ್ಟಿದ್ದರಿಂದ ಹೊಸ ಹುಡುಗಿಯನ್ನೇ ಮದುವೆಯಾಗಲು ನಿರ್ಧರಿಸಿ ಅವಳೊಂದಿಗೆ ಮದುವೆಯಾದ. ಅಕ್ಕನ ಮಗಳಿಗೆ ತಾನೇ ಮುಂದೆ ನಿಂತು ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿಸಿದ. ಈಗ ವಿಶ್ವ ಮತ್ತು ಕುಟುಂಬ ಕರ್ನಾಟಕದಲ್ಲಿದ್ದರೆ, ಅಕ್ಕನ ಮಗಳು ಮತ್ತು ಕುಟುಂಬ ಅಮೇರಿಕದಲ್ಲಿದೆ. ಒಟ್ಟಿನಲ್ಲಿ ಎರಡೂ ಕುಟುಂಬಗಳು ನೆಮ್ಮದಿಯಾಗಿ, ಪರಸ್ಪರ ಅನ್ಯೂನ್ಯವಾಗಿದ್ದಾರೆ.
ನಿಜವಾಗಿಯೂ ನನ್ನ ಗೆಳೆಯನ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಎದುರಾದ ಆಘಾತಕ್ಕೆ ಮತ್ತೇನೋ ಆಗುವ ಸಂಭವವಿತ್ತು. ಆದರೆ ಅವನು ತಂದೆತಾಯಿ, ಮನೆಗಾಗಿ ತೆಗೆದುಕೊಂಡ ನಿರ್ಧಾರಕ್ಕೆ, ಆದ ನೋವನ್ನು ಮೆಟ್ಟಿನಿಂತು ಬದುಕನ್ನು ಕಟ್ಟಿಕೊಂಡ ರೀತಿಗೆ HAT'S OFF ಹೇಳಲೇ ಬೇಕಾಲ್ಲವೇ.......
