STORYMIRROR

Harish Bedre

Classics Inspirational Others

4.5  

Harish Bedre

Classics Inspirational Others

1. ಬದಲಾದ ಬದುಕು (ಆರಂಭ)

1. ಬದಲಾದ ಬದುಕು (ಆರಂಭ)

3 mins
439



ನೀನು ನಮ್ಮ ಮರ್ಯಾದೆ ತೆಗೆಯಲೆಂದೇ ಹುಟ್ಟಿದ್ದೀಯ ಎಂದು ತಂದೆ ಹೇಳಿದ ಪ್ರತಿಬಾರಿಯೂ ಅಕ್ಷರನಿಗೆ ಇನ್ನಿಲ್ಲದ ನೋವಾಗುತ್ತಿತ್ತು. ಆದರೆ ಏನು ಮಾಡಬೇಕು ಎಂದು ತಿಳಿಯುತ್ತಿರಲಿಲ್ಲ. ಒಡಹುಟ್ಟಿದ ಅಕ್ಕ, ತಮ್ಮ ಇಬ್ಬರೂ ಜಾಣರು. ಚೆನ್ನಾಗಿ ಓದಿ ಅವರ ಕಾಲಮೇಲೆ ಅವರು ನಿಂತಿದ್ದಾರೆ. ಅಕ್ಷರ ದಡ್ಡನಲ್ಲ, ಆದರೆ ಅವನಿಗೆ ಓದು ತಲೆಗೆ ಹತ್ತಲಿಲ್ಲ ಅಷ್ಟೇ. ತರಗತಿಯಲ್ಲಿ ಗುರುಗಳು ಪಾಠ ಮಾಡುವಾಗ ಅವರು ಹೇಳಿದ್ದೆಲ್ಲ ಇವನಿಗೆ ಚೆನ್ನಾಗಿ ಅರ್ಥ ಆಗುತ್ತಿತ್ತು. ಆದರೆ ಅದನ್ನೇ ಓದಲು ಅಥವಾ ಬರೆಯಲು ಹೋದರೆ ಅಕ್ಷರಗಳೆಲ್ಲಾ ಗೋಜಲು ಗೋಜಲಾಗುತ್ತಿತ್ತು. ಏನು ಓದುತ್ತಿದ್ದೇನೆ, ಬರೆಯುತ್ತೇನೆ ಎಂದು ಅವನಿಗೆ ತಿಳಿಯುತ್ತಿರಲಿಲ್ಲ. ಎರಡು ಮೂರು ತರಗತಿಗಳಲ್ಲಿ ಡುಮುಕಿ ಹೊಡೆದು ಎಸ್ ಎಸ್ ಎಲ್ ಸಿ ಫೇಲ್ ಎನ್ನುವಲ್ಲಿಗೆ ಅವನ ಓದು ನಿಂತಿತು.

ಮನೆಯಲ್ಲಿ ಇರಲಾರದೆ ಏನಾದರೂ ಮಾಡೋಣ ಎಂದು ಅವನು ಹೊರಹೊರಟರೆ, ಎಲ್ಲದ್ದಕ್ಕೂ ತಂದೆಯಿಂದ ತಡೆ ಬರುತ್ತಿತ್ತು. ಅವರ ಮಾತನ್ನು ಧಿಕ್ಕರಿಸಿ ಮುಂದೆ ಹೋಗುವ ಧೈರ್ಯ ಇವನಿಗೂ ಇರಲಿಲ್ಲ. ಒಟ್ಟಿನಲ್ಲಿ ಎಲ್ಲರೂ ಅಕ್ಷರನಿಗೆ ಅಕ್ಷರ ಎಂದು ಹೆಸರಿಟ್ಟಿದ್ದೇ ತಪ್ಪು ಎಂದು ಹೇಳಿ ಹಂಗಿಸುವಂತಾಗಿತ್ತು. ನಿಜ ಹೇಳಬೇಕೆಂದರೆ ಅಕ್ಷರನಿಗೆ ಏನಾದರೂ ನೋಡಿದರೆ, ಕೇಳಿದರೆ ಅದು ಹಾಗಾಗೇ ಅವನ ಮನದಲ್ಲಿ ಅಚ್ಚಾಗಿ ಉಳಿಯುತ್ತಿತ್ತು. ಅವನು ನೋಡಿದ್ದು, ಕೇಳಿದ್ದರ ಬಗ್ಗೆ ಯಾರಾದರೂ, ಎಂದಾದರೂ ಕೇಳಿದರೆ, ಅತ್ಯಂತ ನಿಖರವಾಗಿ ಹೇಳುತ್ತಿದ್ದ. ಹಾಗೆಯೇ ಯಾರಾದರೂ, ಏನಾದರೂ ಕೆಲಸಗಳನ್ನು ಹೇಳಿ ವಹಿಸಿದರೆ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಮಾಡಿ ಸೈ ಅನಿಸಿಕೊಳ್ಳುತ್ತಿದ್ದ. ಅವನಿಗೆ ಅಕ್ಷರ ತಲೆಗೆ ಹತ್ತಲಿಲ್ಲ ಎನ್ನುವುದು ಬಿಟ್ಟರೆ, ಬೇರೆ ಯಾವುದರಲ್ಲೂ ಕಮ್ಮಿ ಇರಲಿಲ್ಲ. ಹೊಸಬರು ಯಾರಾದರೂ ಇವನೊಂದಿಗೆ ಮಾತನಾಡಿದರೆ, ಯಾವ ಕಾರಣಕ್ಕೂ ಇವನು ಎಸ್ ಎಸ್ ಎಲ್ ಸಿ ಫೇಲ್ ಎಂದು ನಂಬುತ್ತಿರಲಿಲ್ಲ.

ನಾನು

ಅದೊಂದು ದಿನ ಗೆಳೆಯನೊಬ್ಬ ಮನೆ ಬದಲಾಯಿಸುವ ಕೆಲಸಕ್ಕೆ ಸಹಾಯ ಕೇಳಿದ್ದನೆಂದು ಇವನು ಹೋಗಿದ್ದ. ಅದೇ ಸಂದರ್ಭದಲ್ಲಿ ಅವನ ತಂದೆ ಸಹೋದ್ಯೋಗಿಯೊಂದಿಗೆ ಅಲ್ಲಿಂದ ಹಾದುಹೋಗುವಾಗ, ಅಕ್ಷರ ಲಾರಿಯಲ್ಲಿ ವಸ್ತುಗಳನ್ನು ಜೋಡಿಸುವುದು ಕಣ್ಣಿಗೆ ಬಿತ್ತು. ಆ ಕ್ಷಣಕ್ಕೆ ಅವರಿಗೆ ಉರಿ ಎದ್ದಿತ್ತು. ಆದರೆ ಏನೂ ಹೇಳದೆ ಹಾಗೇ ಹೋಗಿದ್ದರು. ತಂದೆ ನೋಡಿದ್ದು ಅಕ್ಷರನ ಗಮನಕ್ಕೆ ಬಂದಿರಲಿಲ್ಲ. ಸಂಜೆ ಮನೆಗೆ ಬಂದ ತಂದೆ, ಅಕ್ಷರನನ್ನು ಕರೆದು ಕೆನ್ನೆಗೆ ಎರಡು ಬಾರಿಸಿದ್ದಲ್ಲದೆ, ಯಾಕೋ ಎದುರಿಗೆ ಇದ್ದು ನನ್ನ ಹೊಟ್ಟೆ ಉರಿಸುತ್ತೀಯ? ಎಲ್ಲಾದರೂ ದೂರ ತೊಲಗಬಾರದ ಎಂದುಬಿಟ್ಟರು. ಆ ಮಾತು ಕೇಳಿದ ಕ್ಷಣದಿಂದ ಅಕ್ಷರನಿಗೆ ನಿಂತಲ್ಲಿ ನಿಲ್ಲಲೂ, ಕುಳಿತಲ್ಲಿ ಕೂರಲು ಆಗಲಿಲ್ಲ. ರಾತ್ರಿ ಎಷ್ಟು ಹೊತ್ತಾದರೂ ನಿದ್ದೆಯೂ ಬರಲಿಲ್ಲ. ಏನು ಮಾಡಲಿ ಎಂಬ ತಹತಹ ಅವನನ್ನು ಕಾಡುತ್ತಿತ್ತು. ಅದೊಂದು ಹೊತ್ತಿನಲ್ಲಿ, ಅವನು ಅರಿವಿಗೆ ಬಾರದೆ, ಮನೆಯಿಂದ ಹೊರಬಂದು ಸಿಕ್ಕ ದಾರಿಯಲ್ಲಿ ನಡೆಯತೊಡಗಿದ. ಕಾಲುನೋವು ಬಂದು ಸುಸ್ತಾಗಿ ನಿಲ್ಲುವ ವೇಳೆಗೆ ಇದ್ದ ಊರಿನಿಂದ ಇಪ್ಪತ್ತೈದು ಮೂವತ್ತು ಮೈಲಿ ದೂರ ಬಂದಿದ್ದ. ಸುಸ್ತಾಗಿದ್ದರಿಂದ ಅಲ್ಲೇ ರಸ್ತೆ ಬದಿಯ ಮರದಡಿ ಮಲಗಿದ. ಬೆಳಿಗ್ಗೆ ಎಚ್ಚರವಾದಾಗ, ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಹೊಟ್ಟೆ ಜೋರಾಗಿ ಚುರುಗುಡುತ್ತಿತ್ತು.

ಎದ್ದೊಡನೆ ತಾನು ಎಲ್ಲಿರುವೆ ಅನ್ನುವುದೇ ತಿಳಿಯದೆ ಸುತ್ತ ಮುತ್ತ ನೋಡಿದ. ತಕ್ಷಣಕ್ಕೆ ಏನೂ ಹೊಳೆಯದಿದ್ದರೂ ನಂತರ ತಾನು ಮನೆ ಬಿಟ್ಟು ಬಂದಿರುವುದು ನೆನಪಿಗೆ ಬಂತು. ಅದರೊಡನೆ ತಂದೆ ಹೇಳಿದ ಮಾತು ಮತ್ತೆ ಮತ್ತೆ ಕಾಡತೊಡಗಿತು. ಇದರಿಂದ ಮನೆಗೆ ಹಿಂದಿರುಗುವ ಯೋಚನೆಯೇ ಬಾರದೆ ಮತ್ತೆ ಮುಂದಕ್ಕೆ ಹೆಜ್ಜೆ ಹಾಕತೊಡಗಿದ. ಒಂದಷ್ಟು ದೂರ ಬಂದ ಮೇಲೆ ಸಣ್ಣ ಕೆರೆಯೊಂದು ಕಣ್ಣಿಗೆ ಬಿತ್ತು. ಅದರಲ್ಲಿ ಕೈಕಾಲು ಮುಖ ತೊಳೆದುಕೊಂಡು ಹೊಟ್ಟೆ ಬಿರಿಯುವಷ್ಟು ನೀರು ಕುಡಿದ, ಸ್ವಲ್ಪ ಹಾಯೆನಿಸಿತು. ಒಂದಷ್ಟು ಹೊತ್ತು ಅಲ್ಲೇ ಇದ್ದ

ು ನಂತರ ಮತ್ತೆ ಹೆಜ್ಜೆ ಹಾಕತೊಡಗಿದ. ಮನಸ್ಸಿಗೆ ಮುಂದೇನು ಎಂದು ತಿಳಿಯದೆ, ಗೊತ್ತು ಗುರಿಯಿಲ್ಲದ ಕಡೆಗೆ ನಡೆಯುತ್ತಿದ್ದ. ಬಂದ ದಾರಿಯಲ್ಲಿ ಒಂದು ಊರು ಸಿಕ್ಕಿತು, ಅದು ಯಾವ ಊರು ಎಂದು ನೋಡುವ ಕುತೂಹಲ ಅವನಲ್ಲಿ ಇರಲಿಲ್ಲ. ಕಿವಿಗೆ ರೈಲಿನ ಸದ್ದು ಕೇಳಿಸಿ ಆ ದಿಕ್ಕಿನಲ್ಲಿ ನಡೆದ. ಯಾವುದೋ ರೈಲು, ಯಾವುದೋ ಊರಿಗೆ ಹೊರಟು ನಿಂತಿತ್ತು. ಉಟ್ಟ ಬಟ್ಟೆಯಲ್ಲಿ ಹೊರಟು ಬಂದಿದ್ದ ಅಕ್ಷರನ ಜೋಬಲ್ಲಿ ಬಿಡಿಗಾಸು ಇರಲಿಲ್ಲ. ಸುಮ್ಮನೆ ಹೋಗಿ ಬೋಗಿಯೊಂದರಲ್ಲಿ ಕುಳಿತ, ಅದೇ ಕ್ಷಣಕ್ಕೆ ರೈಲು ಹೊರಟಿತು. ಇವನು ಹತ್ತಿದ್ದು ಒಂದು ಗೂಡ್ಸ್ ಗಾಡಿ, ಹಾಗಾಗಿ ಯಾರೂ ತಪಾಸಣೆಗೆಂದು ಬರಲಿಲ್ಲ. 

ಮುಖದ ಮೇಲೆ ನೀರು ಬಿದ್ದಾಗಲೇ ಅಕ್ಷರನಿಗೆ ಎಚ್ಚರ. ಅವರು ಇವನಿಗೆ ಏನೇನೋ ಕೇಳುತ್ತಿದ್ದರು. ಮೊದಲಿಗೆ ಏನು ತಿಳಿಯದಿದ್ದರೂ ನಂತರ ಅವರು ಮಾತನಾಡುತ್ತಿರುವುದು ಹಿಂದಿ ಎಂದು ತಿಳಿಯಿತು. ಅಲ್ಪ ಸ್ವಲ್ಪ ತಿಳಿಯುತ್ತಿತ್ತೇ ಹೊರತು ಮಾತನಾಡಲು ಬರುತ್ತಿರಲಿಲ್ಲ. ಕಷ್ಟಪಟ್ಟು ನೆನಪು ಮಾಡಿಕೊಂಡು ಘರ್ ಚೋಡ್ ಅಯಾ ಎಂದ. ಅಲ್ಲಿದ್ದವರಲ್ಲಿ ಒಬ್ಬ, ಅಕ್ಷರನ ಬಗ್ಗೆ ಅನುಕಂಪ ತೋರಿ, ರೈಲ್ವೆ ಸ್ಟೇಷನ್ ಹೋಟೆಲಿನಲ್ಲಿ ಊಟ ಮಾಡಿಸಿ, ತನಗೆ ಬರುತ್ತಿದ್ದ ಹರಕು ಇಂಗ್ಲಿಷಿನಲ್ಲಿ ಊರಿಗೆ ಹೋಗುವೆಯ ಎಂದು ಕೇಳಿದ. ಅಕ್ಷರ ಇಲ್ಲ ಎಂದಿದ್ದಕ್ಕೆ, ಸಂಜೆವರೆಗೂ ಇಲ್ಲೇ ಇರು ಬರುವೆ ಎಂದು ತನ್ನ ಕೆಲಸಕ್ಕೆ ಹೋದ. ಹೋಗುವಾಗ ಹೋಟೆಲಿನವರ ಬಳಿ ಅಕ್ಷರನನ್ನು ಅಲ್ಲೇ ಇರಿಸಿಕೊಳ್ಳುವಂತೆ ಹೇಳಿದ.

ಅಲ್ಲಿ ಬಹಳ ಹೊತ್ತು ಸುಮ್ಮನೆ ಕೂರಲಾರದೆ ಹೋಟೆಲಿನವರ ಬಳಿ ಏನಾದರೂ ಕೆಲಸ ಕೊಡಿ ಮಾಡುವೆ ಎಂದ. ಅವರು ಬಹಳ ಯೋಚಿಸಿ ಕೊನೆಗೆ ಟೇಬಲುಗಳನ್ನು ಕ್ಲೀನ್ ಮಾಡಲು ಹೇಳಿದರು. ಅಲ್ಲಿಂದ ಅಕ್ಷರನ ಹೊಸ ಜೀವನ ಆರಂಭವಾಯಿತು. ಬಹಳ ಬೇಗ ಹಿಂದಿಯನ್ನು ಸುಸ್ಪಷ್ಟವಾಗಿ ಮಾತನಾಡುವುದು ಕಲಿತ. ತನ್ನ ಕೆಲಸದಿಂದ, ಮಾತುಗಳಿಂದ ಬಹಳ ಬೇಗ ಎಲ್ಲರ ಮನಗೆದ್ದ. ಹಂತಹಂತವಾಗಿ ಅದೇ ಹೋಟೆಲಿನಲ್ಲಿ ಕ್ಲೀನರಿಂದ ಸಪ್ಲೇಯರ್, ಸಪ್ಲೈಯರ್ ನಿಂದ ಆರ್ಡರ್ ಬಾಯ್ ಆದ. ಜೊತೆಗೆ ಒಳ್ಳೆಯ ಬಾಣಸಿಗನೂ ಆದ.

ಅಕ್ಷರ ಅಲ್ಲಿಗೆ ಬಂದು ದಿನಗಳು ಉರುಳಿ ವರ್ಷ ಎರಡಾಗಿತ್ತು. ಅದೊಂದು ದಿನ ಅವನದೇ ಊರಿನ ಪರಿಚಯದ ವ್ಯಕ್ತಿ ಬಂದವನು ಗುರುತು ಹಿಡಿದು ಮಾತನಾಡಿಸಿದಾಗ, ಅಪ್ಪಿತಪ್ಪಿಯೂ ತನ್ನ ತಂದೆಯ ಬಳಿ ಏನೂ ಹೇಳಬಾರದೆಂದೂ, ತಾಯಿ ಒಬ್ಬರೇ ಇದ್ದಾಗ, ನಿಮ್ಮ ಮಗ ಏನಾದರೂ ಒಳ್ಳೆಯದನ್ನು ಸಾಧಿಸಿ ನಂತರ ಬರುವೆನೆಂದು ತಿಳಿಸಲು ಹೇಳಿದ. ಆ ದಿನದಿಂದ ಗಟ್ಟಿ ನಿರ್ಧಾರ ಮಾಡಿ, ಆರ್ಡರ್ ಬಾಯ್ ಕೆಲಸ ಬಿಟ್ಟು ಸಂಪೂರ್ಣ ಅಡುಗೆ ಕೆಲಸದ ಕಡೆ ಗಮನಕೊಟ್ಟ. ಪ್ರತಿದಿನ ಒಂದೊಂದು ಹೊಸ ಪ್ರಯೋಗ ಮಾಡತೊಡಗಿದ. ಅಕ್ಷರ ಮಾಡುತ್ತಿದ್ದ ಹೊಸ ರುಚಿಗೆ ಮನ ಸೋಲದವರೆ ಇಲ್ಲ. ನಾಲ್ಕೇ ದಿನಕ್ಕೆ ಇವನ ಹೊಸರುಚಿ ಊರಲ್ಲೆಲ್ಲಾ ಪ್ರಸಿದ್ಧಿಯಾಗಿ, ಜನ ಹೋಟೆಲನ್ನು ಹುಡುಕಿಕೊಂಡು ಬರತೊಡಗಿದರು.

ಇದು ಅಕ್ಷರನಲ್ಲಿ ಹೊಸ ಉತ್ಸಾಹ ತಂದಿತು. ಅದೊಂದು ದಿನ, ಇಲ್ಲಿಯವರೆಗೆ ಅಲ್ಲಿರಲು ಅವಕಾಶ ಮಾಡಿಕೊಟ್ಟವರಿಗೆ ಮನಸಾರೆ ವಂದಿಸಿ, ಸೀದಾ ಮೈಸೂರಿಗೆ ಬಂದ. ಅಲ್ಲಿ ಮುಖ್ಯ ರಸ್ತೆಯೊಂದರಲ್ಲಿ ಸಿಕ್ಕ ಸಣ್ಣ ಮಳಿಗೆಯನ್ನು ಬಾಡಿಗೆ ಪಡೆದು ದರ್ಶಿನಿ ಹೋಟೆಲನ್ನು ಆರಂಭಿಸಿದ. ಮೊದಮೊದಲು ಇತ್ತ ನೋಡದ ಜನ, ಅಲ್ಲಿಂದ ಬರುತ್ತಿದ್ದ ಪರಿಮಾಳಕ್ಕೆ ನೋಡುವ ಎಂದು ಬಂದವರು, ರುಚಿಗೆ ಮನಸೋತು ಮತ್ತೆ ಮತ್ತೆ ಬರುವಂತಾದರು. ಅವರೇ ಇತರರಿಗೆ ಪ್ರಚಾರ ನೀಡತೊಡಗಿದರು. ನೋಡನೋಡುತ್ತಿದ್ದಂತೆ ಅಕ್ಷರನ ಪುಟ್ಟ ಹೋಟೆಲ್ ಪ್ರಸಿದ್ಧಿ ಪಡೆದು, ಜನ ಕಾದು ನಿಂತು ತಿನ್ನತೊಡಗಿದರು. ಜನಗಳ ಒತ್ತಾಯಕ್ಕೆ ಅಕ್ಷರ ಮತ್ತೊಂದು ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಹೋಟೆಲ್ ಮಾಡುವಂತಾಯಿತು. ಆ ಹೊಸ ಹೋಟೆಲ್ ಉದ್ಘಾಟಿಸಲು ಸ್ವತಃ ಹೋಗಿ ತಂದೆ ತಾಯಿಯನ್ನು ಕರೆತಂದ. ಅಕ್ಷರನ ತಂದೆಯೂ ತನ್ನ ಮಗನ ಬಗ್ಗೆ ಅತೀವ ಹೆಮ್ಮೆಯಿಂದ ಬಂದು ಉದ್ಘಾಟಿಸಿ, ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲೆಂದು ಆಶೀರ್ವಾದ ಮಾಡಿದರು.



Rate this content
Log in

Similar kannada story from Classics