STORYMIRROR

Harish Bedre

Classics Inspirational Others

4  

Harish Bedre

Classics Inspirational Others

ದೇವರು

ದೇವರು

3 mins
356

ಸರ್, ಡಾಕ್ಟರ್ ಅಶ್ವಥ್ ನಾರಾಯಣರವರ


ಹೌದು


ಸರ್, ನಾನು ಸುಶೀಲಮ್ಮ ಗೋಪಾಲ ರಾವ್ ಮೆಮೊರಿಯಲ್ ಹಾಸ್ಪಿಟಲಿಂದ ಮಾತನಾಡುತ್ತಿರುವೆ..‌


ಹೇಳಿ....

ಸರ್, ಡಾಕ್ಟರ್ ಜಗದೀಶ್ ನಿಮಗೆ ಕರೆ ಮಾಡಿ, ತುರ್ತು ಶಸ್ತ್ರಚಿಕಿತ್ಸೆ ಮಾಡುವುದಿದೆ, ಬರಲು ಸಾಧ್ಯವೇ ಕೇಳಿ ತಿಳಿಸಲು ಹೇಳಿದರು.....

ಹೌದಾ, ಎಷ್ಟು ಹೊತ್ತಿಗೆ...?

ಬೆಳಿಗ್ಗೆ ಹನ್ನೊಂದು ಗಂಟೆಗೆ.

ಸರಿ, ಅರ್ಧ ಗಂಟೆ ಮುಂಚೆಯೇ ಅಲ್ಲಿರುವೆ. ಅವರು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಿ.

ಸರ್, ಕಾರು ಕೇಳಿಸುವೆ.

ಬೇಡ ನಾನೇ ಬರುವೆ.

ಆಗಲಿ, ಥ್ಯಾಂಕ್ಯೂ ಸರ್.


ಡಾಕ್ಟರ್ ಅಶ್ವಥ್ ನಾರಾಯಣರವರಿಗೆ ಈಗ ಎಪ್ಪತ್ತೈದು ವರ್ಷ. ಅವರು ಸರ್ಕಾರಿ ವೈದ್ಯರಾಗಿ ಹಲವಾರು ಊರುಗಳಲ್ಲಿ ದುಡಿದು ಒಳ್ಳೆಯ ಹೆಸರು ಸಂಪಾದಿಸಿದ್ದರು. ನಿವೃತ್ತಿಯಾದ ಮೇಲೆ ಇತ್ತಿಚಿನ ಮೂರು ವರ್ಷಗಳವರೆಗೆ ಸುಶೀಲಮ್ಮ ಗೋಪಾಲ ರಾವ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವಯಸ್ಸಿನ ಪ್ರಭಾವ ಹಾಗೂ ಮನೆಯವರ ಒತ್ತಾಯದ ಮೇರೆಗೆ ಕೆಲಸವನ್ನು ಬಿಟ್ಟರಾದರೂ ಅತಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಯವರು ಕರೆ ಮಾಡಿದರೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿ ಬರುತ್ತಿದ್ದರು. ಇವರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ತೊಂದರೆ ಆದದ್ದು ಇತಿಹಾಸವೇ ಇಲ್ಲ. ಹಾಗಾಗಿ ಇದನ್ನು ಬಲ್ಲ ಬಹುತೇಕರು ಈಗಲೂ ಇವರನ್ನೇ ಬಯಸುತ್ತಾರೆ. ಆದರೆ ಡಾಕ್ಟರ್ ಜಗದೀಶ್ ಅತೀ ತುರ್ತು ಹಾಗೂ ಗಂಭೀರವಲ್ಲದ ವಿಚಾರಗಳಿಗೆ ಇವರನ್ನು ಕರೆಯುತ್ತಿರಲಿಲ್ಲ. ಇವರೂ ಕೂಡಾ, ಅವರು ಕರೆದಾಗ ತಪ್ಪದೇ ಹೋಗುತ್ತಿದ್ದರು.


 ಡಾಕ್ಟರ್ ಅಶ್ವಥ್ ನಾರಾಯಣರವರ ಮನೆಯಿಂದ ಆಸ್ಪತ್ರೆಗೆ, ಕಾರಿನಲ್ಲಿ ಎಷ್ಟೇ ನಿಧಾನವಾಗಿ ಚಲಿಸಿದರು ಅರ್ಧ ಗಂಟೆಯಲ್ಲಿ ತಲುಪಬಹುದು. ಹಾಗಿದ್ದೂ ಡಾಕ್ಟರ್ ಒಂಭತ್ತುವರೆಗೆ ಮನೆ ಬಿಟ್ಟರು. ಮನೆಯಿಂದ ಮುಖ್ಯ ರಸ್ತೆಗೆ ಬಂದಾಗ ವಾಹನದಟ್ಟಣೆ ಹೆಚ್ಚಿತ್ತು ‌ ಅದರಲ್ಲೇ ಅವರು ನಿಧಾನವಾಗಿ ಸಾಗುವಾಗ ಹಿಂದಿನ ಕಾರಿನವರು ಪದೇಪದೇ ಜೋರಾಗಿ ಹಾರ್ನ್ ಮಾಡುತ್ತಿದ್ದರು. ಅಕ್ಕಪಕ್ಕ ಮುಂದೆ ವಾಹನಗಳು ಇದ್ದ ಕಾರಣ ಬಹುದೂರದವರೆಗೆ ಹಿಂದಿನವರು ಮುಂದೆ ಹೋಗಲು ಅವಕಾಶ ಮಾಡಿಕೊಡಲು ಸಾಧ್ಯವಾಗಲಿಲ್ಲ. ಸರ್ಕಲ್ ಒಂದು ದಾಟಿದ ನಂತರ ವಾಹನದಟ್ಟಣೆ ಕಮ್ಮಿಯಾಗಿ ಹಿಂದಿನವರು ಮುಂದೆ ಹೋಗಲೆಂದು ಕಾರನ್ನು ಪಕ್ಕಕ್ಕೆ ತೆಗೆದುಕೊಂಡರು. ಮುಂದೆ ಬಂದ ಹಿಂದಿನ ಕಾರಿನವನು ಕಿಟಕಿ ತೆಗೆದು, ಡಾಕ್ಟರನ್ನು ನೋಡಿ ವಯಸ್ಸಾದ ಮೇಲೆ ಹೊರಗೆ ಬಂದು ನಮ್ಮ ಪ್ರಾಣ ಏಕೆ ತಿಂತೀರಾ? ಕಾಲು ಮುದುಡಿಕೊಂಡು ಮನೆಯಲ್ಲಿ ಇರಲು ಏನು ತೊಂದರೆ ಎಂದು ಬೈದು ವೇಗವಾಗಿ ಮುಂದೆ ಸಾಗಿದ.


ಡಾಕ್ಟರ್ ಅಶ್ವಥ್ ನಾರಾಯಣರವರು ಪೋನಿನಲ್ಲಿ ಹೇಳಿದ್ದಕ್ಕಿಂತ ಹತ್ತು ನಿಮಿಷ ಮುಂಚೆಯೇ ಆಸ್ಪತ್ರೆಗೆ ಬಂದಿದ್ದರು. ರೋಗಿಯ ಕೇಸ್ ಶೀಟ್ ತೆಗೆದುಕೊಂಡು ಕೂಲಂಕಷವಾಗಿ ನೋಡಿ, ಡಾಕ್ಟರ್ ಜಗದೀಶರವರ ಜೊತೆ ಮಾತನಾಡುತ್ತಾ ಆಪರೇಷನ್ ಕೊಠಡಿಯೊಳಗೆ ಹೋದರು. ಆಗಲೇ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿಸಿ ಹೊರಬಂದಾಗ ಗಂಟೆ ಎರಡಾಗಿತ್ತು. ಹಾಗಾಗಿ ಡಾಕ್ಟರ್ ಜಗದೀಶ್ ಇಬ್ಬರಿಗೂ ತಮ್ಮ ಕೋಣೆಯಲ್ಲೇ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. 


ಇಬ್ಬರ ಊಟ ಮುಗಿಯುವ ವೇಳೆಗೆ ಆಸ್ಪತ್ರೆ ಸಿಬ್ಬಂದಿ ಓಡುತ್ತಾ ಬಂದು ರಿಪೋರ್ಟ್ ಒಂದನ್ನು ಜಗದೀಶರವರಿಗೆ ಕೊಟ್ಟು ಹೋದ. ಅವರು ಕೈತೊಳೆದು ಅದನ್ನು ನೋಡುತ್ತಾ ಗಂಭೀರರಾದರು. ಇದನ್ನು ನೋಡಿ ಡಾಕ್ಟರ್ ಅಶ್ವಥ್ ನಾರಾಯಣ ಏನೆಂದು ಕೇಳಿದರು. ಅದಕ್ಕೆ ಡಾಕ್ಟರ್ ಜಗದೀಶ್ ಏನನ್ನು ಹೇಳದೆ ತಮ್ಮ ಕೈಯಲ್ಲಿದ್ದ ರಿಪೋರ್ಟ್ ಇವರಿಗೆ ಕೊಟ್ಟರು. ಅದರ ಪ್ರಕಾರ ಇಪ್ಪತ್ತೈದು ವರ್ಷದ ಯುವಕನೊಬ್ಬ ಅಪಘಾತಕ್ಕೊಳಗಾಗಿ ತಲೆ ಹಾಗೂ ಕಾಲಿಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದ. ಅವನು ಸ್ಥಿತಿ ತುಂಬಾ ಗಂಭೀರವಾಗಿದ್ದು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಹಾಗೆ ಮಾಡಿದರೂ ಅವನು ಬದುಕುಳಿಯುವ ಸಂಭವ 50:50 ಇತ್ತು. ಇದಕ್ಕೆ ಡಾಕ್ಟರ್ ಅಶ್ವಥ್ ನಾರಾಯಣರ ಉಪಸ್ಥಿತಿಯ ಅವಶ್ಯಕತೆ ಇತ್ತು. ಆದರೆ ಅವರು ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಮಾಡಿ ಸುಸ್ತಾಗಿದ್ದರಿಂದ ಮತ್ತೆ ಹೇಗೆ ಹೇಳಬೇಕು ಎಂದು ತಿಳಿಯದೆ ಯೋಚಿಸುತ್ತಿದ್ದರು. ರಿಪೋರ್ಟ್ ನೋಡಿದ ಡಾಕ್ಟರ್ ಅಶ್ವಥ್ ನಾರಾಯಣರವರು , ಡಾಕ್ಟರ್ ಶಸ್ತ್ರಚಿಕಿತ್ಸೆಗೆ ಸಿದ್ದಮಾಡಿಸಿ ಮುಗಿಸಿಬಿಡುವ ಎಂದರು.

ಸರ್, ನಿಮಗೆ ಸುಸ್ತಾಗಿದೆ.......

ಅಯ್ಯೋ ಜಗದೀಶ್ ನನ್ನ ಸುಸ್ತಿಗಿಂತ ಒಬ್ಬರ ಜೀವ ಉಳಿಸುವುದು ಮುಖ್ಯ ಅಲ್ಲವೇ, ಚಿಂತಿಸಬೇಡಿ ಎಂದರು. ಹೇಳಿದಂತೆ ಇದ್ದು ಶಸ್ತ್ರಚಿಕಿತ್ಸೆ ಮುಗಿಸಿಯೇ ಮನೆಗೆ ಹೊರಟರು.


ಇದಾಗಿ ಹದಿನೈದು ದಿನಗಳ ನಂತರ ಮತ್ತೆ ಆಸ್ಪತ್ರೆಯಿಂದ ಕರೆ ಬಂತು ಎಂದು ಹೊರಟರು. ತಮ್ಮ ಕೆಲಸ ಆದ ನಂತರ ವೃತ್ತಿ ಸಹಜವಾಗಿ ಕಳೆದ ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಬಗ್ಗೆ ಕೇಳಿದರು. ಮೊದಲನೆಯವ ನಾಲ್ಕು ದಿನಗಳ ಹಿಂದೆ ಗುಣಮುಖನಾಗಿ ಮನೆಗೆ ಹೋಗಿದ್ದು ಮತ್ತೊಬ್ಬನು ಇಂದಷ್ಟೇ ತುರ್ತು ನಿಗಾ ಘಟಕದಿಂದ ಸಾಮಾನ್ಯ ವಾರ್ಡಿಗೆ ಸ್ಥಳಾಂತರಗೊಂಡ ವಿಚಾರ ತಿಳಿಯಿತು. ಸರಿ ನೋಡುವ ಬನ್ನಿ ಎಂದು ಅವನಿದ್ದಲ್ಲಿಗೆ ಹೋದರು. ಆಗ ಡಾಕ್ಟರ್ ಜಗದೀಶ್, ಡಾಕ್ಟರ್ ಅಶ್ವಥ್ ನಾರಾಯಣರನ್ನು ತೋರಿಸುತ್ತಾ, ಆ ಹುಡುಗನಿಗೆ, ನೀನು ಇವತ್ತು ಬದುಕಿರುವೆ ಎಂದಾದರೆ ಅದಕ್ಕೆ ಕಾರಣ ಈ ದೇವರು, ಇವರ ಆಶೀರ್ವಾದ ತಗೋ ಎಂದರು.


ಆ ಹುಡುಗನಿಗೆ ಡಾಕ್ಟರ್ ಅಶ್ವಥ್ ನಾರಾಯಣರನ್ನು ನೋಡಿದೊಡನೆ ಕಣ್ಣು ಒದ್ದೆಯಾಗಿ ತಲೆ ಎತ್ತಲು ಸಾಧ್ಯವಾಗಲಿಲ್ಲ. ಮಲಗಿದ್ದ ಹಾಗೆಯೇ ಎರಡು ಕೈ ಜೋಡಿಸಿದ. ಆಗ ಹತ್ತಿರ ಬಂದ ಡಾಕ್ಟರ್ ಅಶ್ವಥ್ ನಾರಾಯಣರವರು, ಆ ದೇವರು ದೊಡ್ಡವನು, ನಿನ್ನನು ಬದುಕಿಸಿದ. ಇನ್ನು ಮುಂದೆ ಹುಷಾರಾಗಿರು ಎಂದು ಹೇಳುತ್ತಾ ಮುಂದೆ ಸಾಗಿದರು. ಅವರು ಹಾಗೆ ಹೇಳಿ ಹೋದರೂ ಆ ಹುಡುಗನಿಗೆ ಅಂದು ಇವರಿಗೆ ಬೈದು ಮುಂದೆ ಸಾಗಿದ ನೆನಪು ಬಲವಾಗಿ ಕಾಡುತ್ತಿತ್ತು.



Rate this content
Log in

Similar kannada story from Classics