STORYMIRROR

Harish Bedre

Abstract Classics Others

4  

Harish Bedre

Abstract Classics Others

ದಹನ (ವೈಯಕ್ತಿಕ ಅನುಭವ)

ದಹನ (ವೈಯಕ್ತಿಕ ಅನುಭವ)

3 mins
223


ಚಿತ್ರದುರ್ಗದ ಚಿನ್ಮುಲಾದ್ರಿ ರಾಷ್ಟ್ರೀಯ ಪ್ರೌಢ ಶಾಲೆಯ ಗಣಿತಶಾಸ್ತ್ರ ಮಾಸ್ತರರಾದ ವೆಂಕಟೇಶ್ ಸರ್ ರವರನ್ನು ಕಂಡರೆ ನನಗೆ, ನನ್ನನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ. ಪಾಠವನ್ನು ಎಷ್ಟು ಪ್ರೀತಿಯಿಂದ ಮಾಡುತ್ತಿದ್ದರೋ ಹಾಗೆಯೇ ಯಾರಾದರೂ ತಪ್ಪು ಮಾಡಿದರೆ ಅಷ್ಟೇ ಸಿಟ್ಟಿನಿಂದ ಪೆಟ್ಟು ಕೊಡುತ್ತಿದ್ದರು. ನಿಮಗೆ ಪಾಠ ಅರ್ಥವಾಗಲಿಲ್ಲವೇ ಒಂದು ಸಾರಿಯಲ್ಲ ಹತ್ತು ಬಾರಿ ಕೇಳಿದರೂ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. ಕೇಳಿದಾಗ ಅರ್ಥವಾಯಿತು ಎಂದು ನಂತರ ತಪ್ಪು ಮಾಡಿ ಗೊತ್ತಾಗಲಿಲ್ಲ ಎಂದರೆ ಸುಮ್ಮನೆ ಇರುತ್ತಿರಲಿಲ್ಲ. ಇದು ಮೊದಲೇ ನನಗೆ ಗೊತ್ತಿದ್ದರಿಂದ ಮತ್ತು ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಈಗ ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತೆಗೆದುಕೊಂಡಿದ್ದೆ. ಕೂಡು, ಕಳಿ ಎಂದು ಕಲಿತಿದ್ದವನಿಗೆ ಆಡ್ ಡಿವೈಡ್ ಎಲ್ಲಾ ಹೊಸ ಪದಗಳು. ಹಾಗಾಗಿ ಎಂಟನೇ ತರಗತಿಗೆ ಸೇರಿದ ಹೊಸತರಲ್ಲೇ ಅವರನ್ನು ಭೇಟಿಯಾಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೆ. ಅದಕ್ಕೆ ಅವರು, ನೀನೇನೂ ಚಿಂತಿಸಬೇಡ, ನಿನಗೆ ಅರ್ಥವಾಗುವಂತೆ ಹೇಳಿಕೊಡುವ ಜವಾಬ್ದಾರಿ ನನ್ನದು ಎಂದು ಆಡಿದ ಮಾತಿನಂತೆ ಹೇಳಿಕೊಡುತ್ತಿದ್ದರು.

ಇವರ ತರಗತಿ ಎಂದರೆ, ಮುಂದಿನ ಬೆಂಚಿನಲ್ಲಿ ಕೂರಲು ಹುಡುಗರು ಹೆದರುತ್ತಿದ್ದರು. ಬೇರೆಯವರ ತರಗತಿಯಲ್ಲಿ ಮುಂದೆ ಕುಳಿತ್ತಿದ್ದವರು ಇವರು ಬರುವ ಮುನ್ನ ಹಿಂದೆ ಎಲ್ಲಾದರೂ ಖಾಲಿ ಇದ್ದ ಜಾಗಕ್ಕೆ ಹೋಗಿ ಕೂರುತ್ತಿದ್ದರು. ಆಗ ಎತ್ತರದ ಕಾರಣ ಹಿಂದೆ ಕುಳಿತಿರುತ್ತಿದ್ದ ನಾನು ಮುಂದಿನ ಬೆಂಚಿಗೆ ಹೋಗುತ್ತಿದ್ದೆ. ಇದಕ್ಕೆ ಯಾರ ತಕರಾರು ಇರುತ್ತಿರಲಿಲ್ಲ. ಮುಂದಿನ ಸಾಲಿನಲ್ಲಿ ಕುಳಿತು, ಅವರನ್ನೇ ನೋಡುತ್ತಾ, ಅವರು ಹೇಳುವುದನ್ನು ಕೇಳುತ್ತಾ, ಕಪ್ಪು ಹಲಗೆಯ ಮೇಲೆ ಬರೆದಿದ್ದನ್ನು ಬರೆದುಕೊಳ್ಳುವುದು ಎಂದರೆ ನನಗೆ ಬಲು ಇಷ್ಟ. ಹೀಗೆ ಇಷ್ಟಪಟ್ಟು ಮಾಡುವುದರಿಂದ ಅವರ ಪಾಠ ಚೆನ್ನಾಗಿ ಅರ್ಥವಾಗುತ್ತಿತ್ತು.

ಎಂದಿನಂತೆ ಅಂದೂ ಮುಂದಿನ ಸಾಲಿನಲ್ಲಿ ಕುಳಿತಿದ್ದೆ,  ವೆಂಕಟೇಶ್ ಸರ್ ಬಂದವರೇ ಎರಡು ದಿನ ಹಿಂದೆ ಅವರು ಕೊಟ್ಟಿದ್ದ ಹೋಂ ವರ್ಕ್ ಬಗ್ಗೆ ಕೇಳಿ, ನನಗೆ ತೋರಿಸಲು ಹೇಳಿದರು. ನನ್ನ ತಾತ ತೀರಿಕೊಂಡಿದ್ದರಿಂದ ಶಾಲೆಗೆ ನಾಲ್ಕು ದಿನ ರಜೆ ಹಾಕಿ ಅಪ್ಪ ಅಮ್ಮನ ಜೊತೆ ಊರಿಗೆ ಹೋಗಿ ಅಂದೇ ಬಂದಿದ್ದೆ. ಅವರು ನಮಗೆ ಕೊಟ್ಟ ಹೋಂ ವರ್ಕ್ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಅದನ್ನೇ ಹೇಳುವ ಸಲುವಾಗಿ, ಸರ್ ಮಾಡಿಲ್ಲ..... ಎನ್ನುತ್ತಿರುವಾಗಲೇ ರಪ್ ಎಂದು ಕೆನ್ನೆಗೆ ಬಿಗಿದರು. ಕತ್ತೆ ಬಡವ ಎಷ್ಟೋ ಧೈರ್ಯ ನಿನಗೆ, ಕೊಟ್ಟ ಸಣ್ಣ ಹೋಂ ವರ್ಕ್ ಕೂಡಾ ಮಾಡದೆ ಬಂದಿರುವೆ, ನಡಿ ಹೊರಗೆ ಎಂದು ತರಗತಿಯಿಂದ ಹೊರಗೆ ಕಳಿಸಿದರು. ಇದು ಅನಿರೀಕ್ಷಿತ ನನಗೆ, ಅಲ್ಲದೆ ನನ್ನ ಪ್ರೀತಿಯ ಮಾಸ್ತರರು ಎಂದು ಎಲ್ಲರ ಎದುರು ಬೀಗುತ್ತಿದ್ದವನಿಗೆ ಅದೇ ಹುಡುಗರ ಮುಂದೆ ಬಿದ್ದ ಪೆಟ್ಟು  ಗೊತ್ತೆ ಆಗದಂತೆ ಕಣ್ಣನ್ನು ಒದ್ದೆ ಮಾಡಿತ್ತು. ಜೊತೆಗೆ ತರಗತಿಯಿಂದ ಹೊರಗೆ ಬಿಸಿಲಲ್ಲಿ ನಿಲ್ಲುವುದು ಎಲ್ಲರೆದುರು ತಲೆ ತಗ್ಗಿಸುವಂತೆ ಮಾಡಿತ್ತು.

ಅವಮಾನದಿಂದ ಅಳು ಬಂದರೂ ಏನೂ ಮಾಡುವಂತೆ ಇರಲಿಲ್ಲ. ಅವರ ತರಗತಿ ಮುಗಿಯುವವರೆಗೂ ಹೊರಗೆ ನಿಲ್ಲುವುದು ಅನಿವಾರ್ಯವಾಗಿತ್ತು. ಹೀಗೆ ತಲೆ ತಗ್ಗಿಸಿ ಬಿಸಿಲಲ್ಲಿ ನಿಂತಿರುವಾಗಲೇ ಅಕಸ್ಮಾತಾಗಿ ಕಣ್ಣು ಒಳಗೆ ಕುಳಿತಿದ್ದ ನನ್ನ ದುಷ್ಮನ್ ರಂಗನ ಕಡೆ ನೋಡಿದಾಗ, ಅವನು ಸಂತೋಷದಿಂದ ಮಗನೇ ನಿನಗೆ ಹೀಗೇ ಆಗಬೇಕು ಎನ್ನುವಂತೆ ಸನ್ನೆ ಮಾಡಿ ಕಿಚಾಯಿಸಿದ. ಇದು ಅವನ ಮೇಲೆ ಸಿಟ್ಟು ತರಿಸುವ ಬದಲು ಇದಕ್ಕೆ ಕಾರಣಕರ್ತರಾದ ವೆಂಕಟೇಶ್ ಸರ್ ಮೇಲೆ ಬಂದಿತ್ತು. ಬೇಡ ಬೇಡ ಎಂದರೂ, ಎಲ್ಲರೆದುರು ಅವರು ನನಗೆ ಹೊಡೆದಿದ್ದೆ ನೆನಪಾಗಿ, ಹೃದಯ ಸಮುದ್ರ ಕಲಕಿ ಹುಟ್ಟಿದೆ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿ ಉರಿದು ಹಾಡು ರಿಂಗಣಿಸುತ್ತಿತ್ತು. ಆದರೆ ಅವರು ದೊಡ್ಡವರು, ನಾನು ಸಣ್ಣವನು ಏನು ತಾನೇ ಮಾಡಲು ಸಾಧ್ಯ?

ಅಂದಿನಿಂದ ಅವರ ತರಗತಿಯ ಸಮಯದಲ್ಲಿ ಮುಂದೆ ಬಂದು ಕೂರುವುದನ್ನು ಬಿಟ್ಟುಬಿಟ್ಟೆ. ಇದು ಅವರ ಗಮನಕ್ಕೆ ಬಂದರೂ ಏನೂ ಮಾತನಾಡಲಿಲ್ಲ. ಇದೇ ಸಂದರ್ಭದಲ್ಲಿ ಕಾಮಣ್ಣನ ಹಬ್ಬ ಬಂತು. ನಮ್ಮ ಗಲ್ಲಿಯ ಹುಡುಗರಿಗೆ ಈ ಹಬ್ಬವನ್ನು ಆಚರಿಸುವುದು ಎಂದರೆ ಎಲ್ಲಿಲ್ಲದ ಸಡಗರ. ಅಲ್ಲಿನ ಹುಡುಗರೆಲ್ಲ ಒಟ್ಟಾಗಿ ಸೇರಿ ಸಂಜೆಯ ಹೊತ್ತು ಮನೆಮನೆಗೂ ಹೋಗಿ ಚಂದ ಎತ್ತುವುದು, ಹಣ ಕೊಡದವರ ಮನೆಯಲ್ಲಿ ಕಟ್ಟಿಗೆಯೋ, ಕುರುಳೊ ಕದ್ದುಕೊಂಡು ಬರುವುದರಲ್ಲಿ ಏನೋ ಸಂತೋಷ. ಒಂದು ವಾರ ಮುಂಚೆ ಚೌಕಾಕಾರದ ಗುಂಡಿ ತೆಗೆದು, ಅದಕ್ಕೆ ತಕ್ಕದಾದಂತ ಪುಟ್ಟ ಚಪ್ಪರ ಹಾಕಿ, ಹಬ್ಬದ ದಿನ ಹುಡುಗಿಯರಿಂದ ಆ ಸ್ಥಳವನ್ನು ಸಾರಿಸಿ ಗುಡಿಸಿ ರಂಗೋಲಿ ಹಾಕಿಸುತ್ತಿದ್ದೆವು. ಆ ದಿನ ಸಂಜೆ, ಕಾಮಣ್ಣನ ಪೋಟೋ ಇಟ್ಟು ಭಕ್ತಿಯಿಂದ ಪೂಜೆ ಮಾಡಿ, ಚಂದ ಎತ್ತಿದ ಹಣದಿಂದ ಕೊಂಡು ತಂದ, ಕದ್ದು ತಂದ ಕಟ್ಟಿಗೆ ಮುಂತಾದ ವಸ್ತುಗಳನ್ನು ಆ ಚೌಕಾಕಾರದ ಗುಂಡಿಯಲ್ಲಿ ಜೋಡಿಸಿಟ್ಟು ಬೆಂಕಿ ಹಾಕುತ್ತಿದ್ದೆವು. ನಂತರ ಅಲ್ಲಿ ನೇರೆದಿದ್ದವರಿಗೆ ಪ್ರಸಾದವನ್ನು ಹಂಚುತ್ತಿದ್ದೆವು. ಈ ವರ್ಷ ನನಗೆ ಹಿಂದೆಂದಿಗಿಂತಲೂ ಹೆಚ್ಚು ಸಂತೋಷವಾಗಿತ್ತು. ಅದಕ್ಕೆ ಕಾರಣ ಏನೆಂದರೆ, ತರಗತಿಯಲ್ಲಿ ಎಲ್ಲರೆದುರು ಕೆನ್ನೆಗೆ ಹೊಡೆದ ಮಾಸ್ತರರು ಕಟ್ಟಿಸುತ್ತಿದ್ದ ಮನೆಯಿಂದ ನಾಲ್ಕು ದೊಡ್ಡ ಮರದ ತುಂಡುಗಳನ್ನು ಕದ್ದು ತಂದು ಬೆಂಕಿಗೆ ಹಾಕಿದ್ದೆ.

ಮಾರನೇ ದಿನ ಚಂದ ಎತ್ತಿದ ಹಣದಲ್ಲಿ ವಿವಿಧ ಬಗೆಯ ಬಣ್ಣಗಳನ್ನು ತಂದುಕೊಂಡು ಪರಸ್ಪರ ಎರಚಾಡಿಕೊಳ್ಳುವಾಗ, ವೆಂಕಟೇಶ್ ಮಾಸ್ತರರು ಬರುವುದು ಕಾಣಿಸಿತು. ತಕ್ಷಣ ಅವರು ಕೆನ್ನೆಗೆ ಬಾರಿಸಿದ ವಿಷಯ ನೆನಪಾಗಿ, ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು, ಅವರಿಗೆ ನನ್ನ ಮುಖ ಗೊತ್ತಾಗದಂತೆ ನಾನೇ ಬಣ್ಣ ಬಳಿದುಕೊಂಡು, ಗೆಳೆಯರ ಕೈಯಲ್ಲಿ ಇದ್ದ ಕಡುನೀಲಿ ಬಣ್ಣವನ್ನು ತೆಗೆದುಕೊಂಡು ಅವರ ಮುಖ ಬಟ್ಟೆಗಳಿಗೆ ಹಾಕಿ ಓಡಿಹೋದೆ. ಇದು ನನ್ನ ಮನಸ್ಸಿಗೆ ಇನ್ನಿಲ್ಲದ ಸಂತೋಷ ನೀಡಿದ್ದು ಸುಳ್ಳಲ್ಲ.

ಇದಾಗಿ ನಾಲ್ಕು ದಿನಗಳು ಕಳೆದಿರಬೇಕು, ಊಟದ ಸಮಯದಲ್ಲಿ ಊಟ ಮುಗಿಸಿ ಹೊರನಿಂತಿದ್ದೆ, ನನ್ನನ್ನು ಗಮನಿಸಿದ ವೆಂಕಟೇಶ್ ಮಾಸ್ತರರು ತಮ್ಮ ಬಳಿ ಕರೆದರು. ನಾನು ಕೇಳಿದರೂ ಕೇಳಿಸದವನಂತೆ ಸುಮ್ಮನೆ ನಿಂತಿದ್ದೆ. ಇದನ್ನು ಗಮನಿಸಿದ, ಶಾಲೆಯ ಗುಮಾಸ್ತರಾದ ಬೋರಯ್ಯನವರು ಸ್ವತಃ ತಾವೇ ಬಂದು ನನ್ನ ಕೈಹಿಡಿದು ಎಳೆದುಕೊಂಡು ಹೋದರು. ಅವರು ಸೀದಾ ಎಲ್ಲಾ ಮಾಸ್ತರರು ಕುಳಿತಿದ್ದ ಜಾಗಕ್ಕೆ ಕರೆದುಕೊಂಡು ಹೋದರು. ನಾನು ಕಟ್ಟಿಗೆ ಕದ್ದಿದ್ದು, ಬಣ್ಣ ಹಾಕಿದ್ದು ಎಲ್ಲಾ ಗೊತ್ತಾಗಿದೆ. ಅದಕ್ಕೆ ತಕ್ಕ ಶಾಸ್ತಿ ಮಾಡಲು ನನ್ನನ್ನು ಎಳೆದುಕೊಂಡು ಬಂದಿದ್ದಾರೆ ಎಂದು ಖಾತ್ರಿಯಾಗಿ ಮೈ ನಡುಗುತ್ತಿತ್ತು. ಆದರೆ ವೆಂಕಟೇಶ್ ಸರ್ ತುಂಬಾ ಪ್ರೀತಿಯಿಂದ ನನ್ನ ಕೈಹಿಡಿದು, ಎಲ್ಲರಿಗೂ ಕೇಳುವಂತೆ, ಪಾಪ ಈ ಹುಡುಗ ಅಜ್ಜಿನೋ, ತಾತನೊ ತೀರಿಕೊಂಡರೆಂದು ಹೋಗಿದ್ದು ಗೊತ್ತಿಲ್ಲದೆ ನಾನು ಕೊಟ್ಟ ಹೋಂ ವರ್ಕ್ ಮಾಡಲಿಲ್ಲ ಅದು ನನ್ನ ಪ್ರೀತಿಯ ಶಿಷ್ಯನೇ ಮಾಡಲಿಲ್ಲ ಎಂದು ಸಿಟ್ಟಿನಿಂದ ಕೆನ್ನೆಗೆ ಹೊಡೆದೆ. ನಿನ್ನೆ ಹಾಜರಾತಿ ಪುಸ್ತಕ ನೋಡುವಾಗ ತಿಳಿಯಿತು. ತಪ್ಪಾಯ್ತು ಮಗ, ಈ ಮಾಸ್ತರನ ಮೇಲೆ ಸಿಟ್ಟಾಗಬೇಡ. ನಿನಗೆ ಏನು ಬೇಕೋ ಅದನ್ನು ತೆಗೆದುಕೊಂಡು ತಿನ್ನು ಎಂದು ಹಣ ನೀಡಲು ಬಂದರು. ನಾನು ಎಷ್ಟೇ ಬೇಡ ಎಂದರೂ ಬಿಡದೆ ಅಂಗಿಯ ಜೇಬಿನಲ್ಲಿ ಇಟ್ಟರು. ಇತರ ಮಾಸ್ತರರು ಕೂಡ, ಬೇಡ ಎನ್ನಬೇಡ ತೆಗೆದುಕೋ ಎಂದು ಒತ್ತಾಯಿಸಿದರು.

ಅವರೇನೋ ತಮ್ಮ ತಪ್ಪನ್ನು ಒಪ್ಪಿಕೊಂಡು ತಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಮತ್ತಷ್ಟು ಎತ್ತರಕ್ಕೆ ಏರಿದರು. ಆದರೆ ನಾನು ಮಾಡಿದ ತಪ್ಪನ್ನು ಹೇಳಲು ಆಗದೆ ಬಿಡಲು ಆಗದೆ ಮನದಲ್ಲಿ ಪಾಪಪ್ರಜ್ಞೆ ದಹಿಸುತ್ತಿದೆ.



Rate this content
Log in

Similar kannada story from Abstract