ಸೀರೆ
ಸೀರೆ


ರಾಜಮ್ಮ , ದೇವರಾಜ್ ದಂಪತಿಗೆ ನಾಲ್ಕು ಮಕ್ಕ ಳು. ಮೂರು ಹೆಣ್ಣು ನಾಲ್ಕನೆಯದು ಗಂಡು. ಒಮ್ಮೆ ಮೂರು ಹೆಣ್ಣು ಮಕ್ಕಳೂ ಸೇರಿ ಗೊಂಬೆ ಆಟ ಆಡೋವಾಗ ಒಂದು ಗೊಂಬೆಗೆ ಸೀರೆ ಉಡಿಸಲು ಹುಡುಕಾಡಿ ಯಾವುದೂ ಸರಿಯಾದ ಬಟ್ಟೆ ಸಿಗದಿದ್ದಾಗ , ಅಲ್ಲೇ ನೋಡ್ತಾ ಕೂತಿದ್ದ ತಮ್ಮ ಸುಂದರ್ ನ ಕರೆದು ಅಮ್ಮ ಅಪ್ಪ ಇಬ್ಬರೂ ಹೊರಗೆ ಹೋಗಿದ್ದಾರೆ ಸೀದಾ ಅಮ್ಮನ ರೂಮಿಗೆ ಹೋಗಿ ಯಾವುದಾದರೂ ಒಂದು ಹಳೆಯ ಸೀರೆ ತೊಗೊಂಡು ಬಾ ಅಂದಾಗ ಪಾಪ ಹೋದವನೆ ವಾರ್ಡ್ರ್ಡ್ರೋಬ್ ನಲ್ಲಿ ಎದುರಿಗೆ ಕಂಡಿದ್ದನ್ನ ತo ದು ಕೊಟ್ಟ. ಅದು ನೋಡಕ್ಕೆ ಬಹಳ ಹಳೆಯದು ಬೇರೆ , ಪೀಸ್ ಪೀಸ್ ಮಾಡಿ ಬೇಕಾದಷ್ಟು ತೊ ಗೊಂಡು ಉಳಿದದ್ದನ್ನ ಅಲ್ಲೇ ಇಟ್ಟುಬಿಟ್ಟರು. ಅಮ್ಮ ಬಂದ ತಕ್ಷಣ ಬೊಂಬೆ ತೋರಿಸಿದರು. ಅಮ್ಮ ಖುಷಿ ಆಗ್ತಾಳೆ ಅಂದ್ಕೊಂಡ್ರೆ ,ಸೀದಾ ರೂಮ್ಗೆ ಹೋಗಿ ಆ ಸೀರೇನೆ ತೆಗೆದು ನೋಡಿದ್ಲು ಅನ್ಕೊಂಡ ಹಾಗೆ ಆಯ್ತು ,ಅವರ ಅಜ್ಜಿ ಅವರ ತಾಯಿಗೆ ಕೊಟ್ಟಿ ದ್ದನ್ನ ಅವರು ಇವಳಿಗೆ ಕೊಟ್ಟಿ ರೋದಂತೆ . ಅಮ್ಮoಗೆ ಅದರ ಜೊತೆ ಭಾವನಾ ತ್ಮಕ ಸಂಭಂದ ಇತ್ತು ಅಂತ ಮಕ್ಕಳಿಗೆ ಅರ್ಥವಾ ಗಿರಲಿಲ್ಲ. ಅಮ್ಮನ ಮುಖ ನೋಡಿದ ತಕ್ಷಣ ಕೋಪ ಬಂದಿದೆ ಅಂತ ಗೊತ್ತಾಯ್ತು. ಅಮ್ಮ ಹೊಡಿತಾಳೇನೋ ಅನ್ನೋ ಭಯ .ಅಮ್ಮಾ ಸುಂದ್ರಾನೇ ತಂದು ಕೊಟ್ಟಿದ್ದು ಅಂತ ಹೇಳಿದರು. ತಕ್ಷಣ ಅವನಿಗೆ ನಾಲ್ಕು ಏಟು ಬಿತ್ತು .ಅವನು ಏನು ಹೇಳಿದರೂ ಕೇಳುವಷ್ಟು ತಾಳ್ಮೆ ಇರಲಿಲ್ಲ .ಹೆಣ್ಣು ಮಕ್ಕಳ ಜೊತೆ ನಿಂಗೇನು ಕೆಲಸ ಅಂತನೆ ಇನ್ನೊಂದು ಬಿತ್ತು . ಪಾಪ ಬಹಳ ನೊಂದ. ಅವನೇ ತಪ್ಪು ಮಾಡಿರೋದು ಅನ್ನೋ ತರಹೇನೆ ಆಗೋಯ್ತು. ಅಮ್ಮನಿಗೆ ಇದನ್ನ ಎಷ್ಟು ದಿನ ಆದ್ರೂ ಮರೆಯಲು ಸಾಧ್ಯ ವಾಗ್ತಿಲ್ಲ. ಯಾರಾದರೂ ಅದೇ ಕಲರ್ ಸೀರೆ ಉಟ್ಕೊಂಡಿದ್ದರೆ ,TV add ನಲ್ಲಿ ಅದೇ ಕಲರ್ ಸೀರೆ ತೋರಿಸಿದರೆ ಕಣ್ಣಲ್ಲಿ ತನಗೇ ಗೊತ್ತಿಲ್ಲದೆ ನೀರು ಹರಿಯುತ್ತಿತ್ತು. ಅಷ್ಟು ಆ ಸೀರೆಯ ಮೇಲಿನ ಮೋಹ . ಇದು ಮಕ್ಕಳಿಗೂ ಈಗೀಗ ತಿಳಿಯಿತು. ಆದರೆ ಅಮ್ಮಾ ಮಾತ್ರ ಎಷ್ಟು ಹೇಳಿದರೂ ಸಮಾಧಾನ ಆಗ್ತಿರಲಿಲ್ಲ .
ವರ್ಷಗಳು ಕಳೆದು ಮೂರು ಹೆಣ್ಣುಮಕ್ಕಳಿಗೂ ಮದುವೆ ಆಗಿ ಅವರವರ ಗಂಡನ ಮನೆ ಸೇರಿದ್ದಾರೆ. ಮಗ ಸುಂದರ್ sslc ನಂತರ , ಟೆಕ್ನಿಕಲ್ ಟ್ರೈ ನಿಂಗ್ ಮುಗಿಸಿ ಒಂದು ಚಿಕ್ಕ ಕಂಪನಿ ಕೆಲಸಕ್ಕೆ ಸೇರಿದ ಮೊದಲ ತಿಂಗಳ ಸಂಬಳದಲ್ಲಿ ಮರೆಯದೆ ಅಮ್ಮಂಗೆ ಅದೇ ಬಣ್ಣದ ಸೀರೆ ತಂದು ಕೊಟ್ಟ. ಅಮ್ಮನ ಮುಖದಲ್ಲಿ ಅಷ್ಟೊಂದು ಸಮಾಧಾನ ಕಾಣಲಿಲ್ಲ. ಆರು ತಿಂಗಳಾದಮೇಲೇ ಹಣ ಕೂಡಿಸಿ ಅದೇ ಬಣ್ಣದ ಹೆಚ್ಚು ಬೆಲೆಯ ಸೀರೆ ತಂದು ಕೊಟ್ಟ. ಬೇಡ ಅಂದರೂ ಯಾಕಪ್ಪಾ ಇಷ್ಟು ಬೆಲೆ ಕೊಟ್ಟು ಸೀರೆ ತರ್ತಿಯೇ ಇಲ್ಲಮ್ಮ ಅವತ್ತು ನಾವು ಹರಿದು ಹಾಕಿದ ಸೀರೆ ಬೆಲೆ ಮುಂದೆ ಇದೇನು ಇಲ್ಲ ಅಂದ. ಮತ್ತೆ ಕಣ್ಣಲ್ಲಿ ನೀರು. ಹಾಗೇ ಅಮ್ಮ ನಾನು ಆ ದಿನ ಮೊದಲ ಸಂಬಳಕ್ಕೆ ನಿನಗೆ ತಂದು ಕೊಟ್ಟ ಸೀರೆ ನೀನು ಒಂದು ದಿನವೂ ಉಟ್ಟುಕೊಂಡಿದ್ದು ನೋಡಿಲ್ಲವಲ್ಲ ಅಂದಾಗ ಇಲ್ಲಪ್ಪ ನಿನ್ನ ದೊಡ್ಡ ಅಕ್ಕ ಬಂದಿದ್ಲು ತುಂಬಾ ಚೆನ್ನಾಗಿದೆ ಅಂದ್ಲು ಅವಳಿಗೆ ಕೊಟ್ಟೆ ಅಂದಳು ಅಮ್ಮ. ಹೋಗ್ಲಿ ಇದನ್ನಾದರೂ ನೀನು ಉಪಯೋಗಿಸು ನನಗೆ ಸಂತೋಷ ಆಗತ್ತೆ ಅಂದರೆ ಇಲ್ಲ ಸುಂದ್ರು ,ನಾವು ಬೇರೆಯವರ ತರ ನಮ್ಮ ಹ
ೆಣ್ಣು ಮಕ್ಕಳಿಗೆ ಹೆಚ್ಚಾಗಿ ಏನೂ ಕೊಡದೆ, ಮದುವೆ ಮಾಡಿ ಕಳಿಸಿದೀವಿ .ಹಬ್ಬಕ್ಕೆ ಬಂದರೆ ಇದನ್ನ ಕೊಡೋಣ ಅಂತ ಇದ್ದೇನೆ ಅಂದಾಗ ಅಮ್ಮನ ಮಾತಿನಿಂದ ಮೂಕನಾದ.
ಸುಂದರ್ ಗೆ ತಮಿಳು ನಾಡಿನ ಕಾಂಚಿಪುರಕ್ಕೆ ಬೇರೊಂದು ಕಂಪನಿಯಲ್ಲಿ ಕೆಲಸಮಾಡಲು ಅವಕಾಶ ಬಂದು ಹೊರಡಬೇಕಾಯ್ತು. ಹೋದ ದಿನವೇ ಸಂಜೆ ಏನಾದರೂ ಮಾಡಿ ಅಮ್ಮನಿಗೆ ಒಂದು ಒಳ್ಳೆ ಸೀರೆ ಕೊಡಿಸಲೇ ಬೇಕು ಅಂತ ಮನಸ್ಸಾಗಿ ಅಂಗಡಿಯಲ್ಲಿ ನೋಡಲು ಹೋದ. ಅಲ್ಲಿ ಇವನ ಹಳೆಯ ಸ್ನೇಹಿತ ಒಬ್ಬ ಅಕಸ್ಮಾತ್ ಕಂಡಾಗ ಅವನು ಅದೇ ಊರಿನ ಹುಡುಗಿಯನ್ನ ಮದುವೆ ಆಗಿರುವ ವಿಷಯ ಹೇಳಿ ಮನೆಗೆ ಕರೆದು ಕೊಂಡು ಹೋದ. ನಂತರ ಅವನಿಗೆ ಪರಿಚಯದ ಒಂದು ಅಂಗಡಿಗೆ ಬಂದಾಗ ಅಲ್ಲಿ ಕಂತಿನಲ್ಲಿ ಸೀರೆ ಕೊಳ್ಳ ಬಹುದೆಂದು ತಿಳಿದು ,ಅರವತ್ತು ಸಾವಿರ ಬೆಲೆಯ ಸೀರೆಯನ್ನೇ ಸೆಲೆಕ್ಟ್ ಮಾಡಿದ. ತಿಂಗಳಿಗೆ ಐದು ಸಾವಿರ ಕಟ್ಟ ಬೇಕಿತ್ತು . ಸ್ನೇಹಿತನ ಭರವಸೆ ಮೇಲೆ ಮೊದಲನೇ ಕಂತು ಕಟ್ಟಿದ ತಕ್ಷಣವೇ ಅಂಗಡಿಯವರು ಸೀರೆಯನ್ನ ಕೊಟ್ಟರು.
ಬಂದು ಎರಡು ತಿಂಗಳಾಗಿದೆ . ಒಂದು ದಿನ ಅಕ್ಕ ನಿಂದ ಫೋನ್ ಕಾಲ್. ನೀನು ತಕ್ಷಣ ಹೊರಟು ಬಾ . ಅಮ್ಮಂಗೆ ಹುಷಾರಿಲ್ಲ ಅಸತ್ರೆಗೆ ಸೇರಿಸಿದ್ದೇ ವೆ ಅಂತ. ರಾತ್ರಿ ಬಸ್ ಹಿಡಿದು ಬಂದ. ಮನೆ ಹತ್ತಿರ
ಬರೋವಾಗ ಮನೆ ಮುಂದೆ ಜನ . ಏನಾಯ್ತೋ ಅಮ್ಮಂಗೆ ಅಂತ ಹೆದರಿದ .ಗೇಟ್ ಹತ್ತಿರ ಬಂದಾಗ ಪಕ್ಕದ ಮನೆಯವರು ಸುಂದ್ರೂ ಅಮ್ಮ ನಿಂಗೆ ಇದನ್ನ ಕೊಡು ಅಂತ ಕೊಟ್ಟಿದ್ದಾರೆ ಅಂತ ಹೇಳಿ ಒಂದು ಕವರ್ ಕೊಟ್ರು. ತೊಗೊಂಡು ಒಳಗೆ ಹೋದ. ಅಮ್ಮ ಬರೀ ಚಾಪೆ ಮೇಲೆ ಮಲಗಿದಾಳೆ. ಸುತ್ತಲೂ ಜನ ಅಳ್ತಿದಾರೆ . ಮುಖಾನೆ ಕಾಣದಷ್ಟು ಹಾರಗಳಿಂದ ಮುಚ್ಚಿ ಹೋಗಿದೆ. ಮೂರನೇ ಅಕ್ಕ ಬಂದು ನನ್ನ ಕೈಲಿದ್ದ ಸೀರೆ ಬ್ಯಾಗ್ ತೊಗೊಂಡು ನಿನ್ನೆ ಬೆಳಗ್ಗೆ ಚೆನ್ನಾಗಿ ಮಾತಾಡ್ತಿದ್ದೋಳು ನೋಡಪ್ಪ ಇವತ್ತು ನಮ್ಮನ್ನ ಬಿಟ್ಟು ಹೊರಟೇ ಬಿಟ್ಲು ಅಂದಳು.ಯಾರೋ ಅಲ್ಲಿ ದ್ದೋರು ಮುಂದಿನ ಕೆಲಸ ನೋಡಿ ಲೇಟ್ ಆಗತ್ತೆ ಅಂದಾಗ ರೂಮ್ ಒಳಗೆ ಬಂದು , ಆ ಕವರ್ ನೆನೆಪಾಗಿ ತೆಗೆದು ಓದಿದ.
" ಮಗೂ ಸುಂದ್ರೂ ನೀನು ತಂದು ಕೊಟ್ಟ ಎರಡು ಸೀರೆಗಳೂ ತುಂಬಾನೇ ಚೆನ್ನಾಗಿತ್ತು . ನೀನು ಬೇಜಾರು ಮಾಡ್ಕೋ ಬೇಡ ನಿನ್ನ ಅಕ್ಕಂದರಿಗೆ ಕೊಟ್ಟಿದ್ದೀನಿ. ನೀನು ಕಂಚಿಯಲ್ಲೇ ಇರೋದ್ರಿಂದ ಇನ್ನೊಂದು ಸೀರೆ ಏನಾದರೂ ತಂದರೆ ನಿನ್ನ ಇನ್ನೊಬ್ಬ ಅಕ್ಕನಿಗೆ ಕೊಟ್ಟು ಬಿಡು ಇಲ್ಲಿದಿದ್ದರೆ ಅವಳು ತಪ್ಪು ತಿಳ್ಕೊಂಡಾಳು. ನಮ್ಮ ತಮ್ಮ ನಮಗೆಲ್ಲಾ ಸೀರೆ ಕೊಡಿಸೋ ಅಷ್ಟು ದೊಡ್ಡೋನಾಗಿದ್ದಾನೆ ಅಂತ ಸಂತೋಷ ಪಡ್ತಾರೆ.ಮರಿಬೇಡ." ಇದನ್ನ ಪೋಸ್ಟ್ ಮಾಡಬೇಕಿತ್ತು ಏಕೋ ನನಗೆ ಹೆಚ್ಚು ದಿನ ಇರೋದಿಲ್ಲ ಅಂತ ಅನಿಸಿ ಪಕ್ಕದಮನೆ ಗಿರಿಗೆ ಕೊಟ್ಟಿದ್ದೀನಿ , ಓದು.
ಸುಂದ್ರು ಓದಿ ಮಡಚಿಟ್ಟು ಅಳ್ತಾ ಇದ್ದಾನೆ. ಎಲ್ಲ ರೂ ಅಮ್ಮನ ಅಕಾಲಿಕ ಸಾವಿಗೆ ದುಃಖ ತಡೆಯದೆ ಅಳ್ತಿದ್ದಾನೆ ಅಂದು ಕೊಂಡರೆ ಇವನದು ಯಾರೊಂದಿಗೂ ಹೇಳಿ ಕೊಳ್ಳಲಾಗದ ಸಂಕಟ.
ಮಿತ್ರರೇ ಇಲ್ಲಿ ಅಮ್ಮ ರಾಜಮ್ಮನ ಅತಿಯಾದ ಭಾವನಾತ್ಮಕ ಸಂಭಂದ ತಪ್ಪೋ. ತಮ್ಮ ತಪ್ಪನ್ನ ದೊಡ್ಡವರಾದಮೇಲಾದರೂ ಅಮ್ಮನಿಗೆ ತಿಳಿಸದ ಅಕ್ಕಂದಿರ ತಪ್ಪೋ, ಅಥವಾ ಸುಂದ್ರೂದೆ ಏನಾದರೂ ತಪ್ಪೋ ? ನಿಮ್ಮ ಊಹೆಗೆ ಬಿಟ್ಟಿದೆ.
.