B S Jagadeesha Chandra

Inspirational

2  

B S Jagadeesha Chandra

Inspirational

ಸಂಸಂ

ಸಂಸಂ

3 mins
11.9K



ಗಣಕ ಯಂತ್ರದ ಮುಂದೆ ಕುಳಿತು ಅಂತರ್ಜಾಲವನ್ನು ಕೆದಕುತ್ತಿದ್ದೆ. ಹಾಗೆಯೆ ಮಿಂಚಂಚೆ, ಕಥಾ ಅರಮನೆ ಎಲ್ಲವನ್ನೂ ಜಾಲಾಡುತ್ತಿದ್ದೆ. ಸಂಸಂ ಎಂದು ಬರೆದಿದ್ದ ಮಿಂಚಂಚೆ ಗಮನ ಸೆಳೆಯಿತು. ಯಾರಿದು ಸಂಸಂ? ನೆನಪೇ ಬರುತ್ತಿಲ್ಲವಲ್ಲ ಎಂದು ಅದನ್ನು ತೆರೆದೆ. ಸಂಸ್ಕೃತಿ (ಸ್ಯಾಮ್) ಎಂದಿತ್ತು. ಅಯ್ಯೋ  ಈ ತರಲೆ, ವಿಲಾಯಿತಿ, ಸ್ಯಾಮ್ ಎಂದು ನಗು ಬಂತು. ತಾನು ಬೆಂಗಳೂರಿಗೆ ಬರುತ್ತಿದ್ದೇನೆ, ನಿಮ್ಮೆಲ್ಲರನ್ನೂ ನೋಡಬೇಕೆನಿಸಿದೆ ಎಂದು ಬರೆದಿದ್ದಳು. ಸಂಸ್ಕೃತಿ ನನ್ನ ಅಣ್ಣನ ಮಗಳು. ಅಣ್ಣ ಅಂದರೆ ಸ್ವಂತ ಅಣ್ಣನಲ್ಲ, ದಾಯಾದಿ. ಅವಳು ಚಿಕ್ಕವಳಿದ್ದಾಗ ನನ್ನನ್ನು ಬಹಳ ಹಚ್ಚಿಕೊಂಡುಬಿಟ್ಟಿದ್ದಳು. ಅವಳ ಅಪ್ಪನಿಗೂ ನನಗೂ ಬಹಳ ಅಂತರವಿದ್ದುದರಿಂದ ಬಹಳಷ್ಟು ಜನ ಅವಳನ್ನು ನನ್ನ ತಂಗಿ ಎಂದುಕೊಂಡುಬಿಟ್ಟಿದ್ದರು. ಅಮೆರಿಕಕ್ಕೆ ಹೋದಮೇಲೆ ಅವಳ ಸಂಪರ್ಕ ಕಡಿಮೆ ಆಗುತ್ತಾ ಬಂತು. ಆದರೂ ಇತರರಿಂದ, ಅವಳು ಯಾರ್ಯಾರಿಗೋ  ಕರೆ ಮಾಡಿ, ಭಾರತದ ಸಂಪ್ರದಾಯ, ಪದ್ಧತಿ ಇವುಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾಳೆ ಎಂದು ಕೇಳಿದ್ದೆ. ಆದರೆ ಯಾವ ವಿವರಗಳು ನನಗೆ ಗೊತ್ತಿರಲಿಲ್ಲ. ಒಂದೆರಡು ಬಾರಿ ಕರೆ ಮಾಡಿ ಮದುವೆ, ಹರಕೆ, ನಂಬಿಕೆಗಳು ಇತ್ಯಾದಿಗಳ  ಬಗ್ಗೆ ಕೇಳಿದಾಗ ನಾನು ಎಲ್ಲ ಬಿಟ್ಟು ನನ್ನನ್ನು ಕೇಳುತ್ತೀಯಲ್ಲಾ ಎಂದು ತಮಾಷೆ ಮಾಡಿದ್ದೆ. 

ಸಂಸ್ಕೃತಿ ಚಿಕ್ಕಂದಿನಿಂದಲೂ ಬಹಳ ಬಿಂದಾಸ್ ಹುಡುಗಿ. ಸಂಕೋಚ, ಹೆದರಿಕೆ ಇವೆಲ್ಲವುಗಳಿಂದ ಅವಳು ಬಹು ದೂರ. ಬಹಳ ಮಾಡ್ ಆಗಿ ಬಟ್ಟೆಗಳನ್ನು ಧರಿಸುತ್ತಾ ತನ್ನ ಹೆಸರನ್ನು ಸ್ಯಾಮ್ ಎಂದು ಕರೆದುಕೊಂಡು ಮೆರೆಯುತ್ತಿದ್ದಳು. ಅವಳ ಅಪ್ಪ ಎಷ್ಟು ಬುದ್ಧಿ ಹೇಳಿದರೂ, ನಾವುಗಳು ನಾನಾ ಥರದಲ್ಲಿ ಹೇಳಿದರೂ ಅವಳು ನಾಯಿ ಬಾಲವೇ. ಹಾಗೂ ಹೀಗೂ ಮಾಡಿ ಅವಳು ಓದಿದ ಕೂಡಲೇ ಅಮೆರಿಕಕ್ಕೆ ಹಾರಿಬಿಟ್ಟಳು. ಎಲ್ಲರೂ ಅವಳು ತನ್ನ ತವರಿಗೆ ಹೋದಳು ಎಂದು ಟೀಕಿಸುತ್ತಿದ್ದರು. ಇದೇನು, ಸ್ಯಾಮ್ ಎಂದು ಬೀಗುತ್ತಿದ್ದ ಇವಳು ಸಂಸಂ ಎಂದು ಬರೆದುಕೊಂಡುಬಿಟ್ಟಿದ್ದಾಳೆ ಎಂದು ಆಶ್ಚರ್ಯವಾಯಿತು. 

ಅಂದು ಏನನ್ನೋ ಓದುತ್ತ ಕುಳಿತಿದ್ದಾಗ ಮನೆಯ ಕರೆಗಂಟೆ ಬಾರಿಸಿತು. ಹೋಗಿ ಬಾಗಿಲು ತೆರೆದಾಗ ತೆಳು ಹಳದಿ ಬಣ್ಣದ ಹತ್ತಿ ಸೀರೆ ಉಟ್ಟ ನೀರೆಯೊಬ್ಬಳು ನಿಂತಿದ್ದಳು. ಕೈಬಳೆಗಳ ಗಲಗಲ ಸದ್ದು, ಹಣೆಯಲ್ಲಿ ಸಿಂಧೂರ, ಕುಂಕುಮ, ಕಾಲಲ್ಲಿ ಉಂಗುರ, ಕರಿಮಣಿ ಸರ ಇವೆಲ್ಲವೂ ಅವಳ ಸಾಧಾರಣವಾದ ಸರಳವಾದ ಸೀರೆಯೊಂದಿಗೆ ಎತ್ತಿ ಕಾಣುತ್ತಿದ್ದವು. ಮುಖ ಎಲ್ಲೋ ನೋಡಿದಂತಿದೆ ಎನ್ನಿಸಿತು. ಆದರೆ ಇಷ್ಟೆಲ್ಲಾ ಯೋಚಿಸುವಷ್ಟ್ರರಲ್ಲಿ ರವೀ ಎಂದು ಅವಳು ನನ್ನನ್ನು ಅಪ್ಪಿಕೊಂಡು ಸಂಭ್ರಮಿಸಿದಳು. ನಾನು ಇದೇನೇ, ಸ್ಯಾಮ್, ನನ್ನ ಕಣ್ಣುಗಳನ್ನೇ ನಂಬಲಾಗುತ್ತಿಲ್ಲ, ಎಷ್ಟೊಂದು ಬದಲಾಗಿದ್ದಿ, ಭಾರತಕ್ಕೆ ಬಂದಕೂಡಲೇ ನಿನ್ನ ಅವತಾರವೇ ಬದಲಾಗಿದೆಯೆಲ್ಲ ಎಂದೆ, ಅವಳು ತಾನೇ ಸೋಫಾಮುಂದೆ ನೆಲದ ಮೇಲೆ ಚಕ್ಕಂಬಕ್ಕಲ ಹಾಕಿ ಕುಳಿತು, ಇದೇನು ಹೊಸ ಅವತಾರವಲ್ಲ, ಇದು ನನ್ನ ನಿತ್ಯದ ವೇಷ, ನಾನು ಈಗ ಸ್ಯಾಮ್ ಅಲ್ಲ, ಸಂಸಂ ಎಂದಳು. ಅಮೆರಿಕದಿಂದ ಬಂದು, ಸೋಫಾ ಬಿಟ್ಟು ನೆಲದಮೇಲೆ ಕುಳಿತುಕೊಳ್ಳುತ್ತಿ, ಹೆಸರು ಸಂಸಂ ಎನ್ನುತ್ತಿ, ಏನಿದು ಹೊಸವರಸೆ? ಎಂದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಎಂದಳು. ನನ್ನ ಬಿಟ್ಟ ಕಣ್ಣು, ಬಾಯಿ ತೆರೆದ ಹಾಗೆ ಇತ್ತು. ಅವಳೇ ಅದನ್ನು ಮುಚ್ಚಿಸಿ ನಿನ್ನ ಬಳಿ ನಾನು ಹೇಳುವುದು ಬೇಕಾದಷ್ಟಿದೆ, ಅದಕ್ಕೆ ಬಂದೆ, ಇನ್ನೆರಡು ದಿನ ಆದಮೇಲೆ ನನ್ನ ಗಂಡ ಹರಿ ಬರುತ್ತಾರೆ, ಅಷ್ಟರಲ್ಲೇ ನಿನ್ನ ಬಳಿ ನಾನು ಎಲ್ಲವನ್ನೂ ಹೇಳಿಕೊಂಡುಬಿಡಬೇಕು ಎಂದು ಅರಳು ಹುರಿದಂತೆ, ಒಂದೇ ಉಸಿರಿನಲ್ಲಿ ಮಾತನಾಡಿದಳು. 

ಎಲ್ಲಕ್ಕಿಂತ ಮುಖ್ಯವಾಗಿ ಅವಳ ಬದಲಾವಣೆಗೆ ಕಾರಣ ಏನು ಎಂಬುದು ನನ್ನ ಕುತೂಹಲವಾಗಿತ್ತು. ಅದಕ್ಕೆ ಅವಳು ಇದುವರೆಗೆ ನಡೆದ ಸಂಗತಿಯನ್ನೆಲ್ಲಾ ಬಿಡಿಸಿ ಹೇಳಿದಳು. ಅದರ ಸಾರಾಂಶವನ್ನು ಹೇಳಿಬಿಡುತ್ತೇನೆ. ನಿಮಗೂ ವಿವರಣೆ ದೊರಕಿದಂತಾಗುತ್ತದೆ. 

ಅಮೆರಿಕಕ್ಕೆ ಹೋದಕೂಡಲೇ ಅಲ್ಲಿ ಎಲ್ಲರೂ ಭಾರತದಬಗ್ಗೆ ನಾನಾ ಕಲ್ಪನೆಗಳನ್ನು ಮಾಡಿಕೊಂಡಿದ್ದರಂತೆ, ಹಿಂದೂಗಳು, ಭಾರತೀಯ ಸಂಪ್ರದಾಯ, ನಮ್ಮ ಬಟ್ಟೆ ಇವುಗಳ ಬಗ್ಗೆ ಅವರಿಗೆ ವಿಪರೀತ ಅಭಿಮಾನವಂತೆ. ಸಂಸ್ಕೃತಿಗಂತೂ ನಮ್ಮ ಸಂಪ್ರದಾಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ, ತಿಳುವಳಿಕೆಯಂತೂ ಶೂನ್ಯ. ಅವಳಿಗಿಂತ ಅಲ್ಲಿನ ಜನರಿಗೇ ಹೆಚ್ಚು ವಿಷಯಗಳು ತಿಳಿದ್ದುದನ್ನು ಕಂಡು ಅವಳಿಗೆ ತೀರಾ ಅವಮಾನವಾದಂತಾಯಿತು. ಒಂದು ಹಂತದಲ್ಲಿ ತಾನೆಂತಹ ಪೆದ್ದಿ, ಅಂತಹ ಒಳ್ಳೆಯ ಸಂಸ್ಕೃತಿ, ಸಂಪ್ರದಾಯಗಳನ್ನು ಇಟ್ಟುಕೊಂಡು ಭಾರತದಲ್ಲಿದ್ದಾಗ ಇಲ್ಲಿನವರನ್ನು ಮೂರ್ಖಳಂತೆ ಅನುಕರಿಸುತ್ತಿದ್ದೆ ಎಂದು ಅವಳಿಗೆ ನಾಚಿಕೆ, ಬೇಸರವಾಯಿತು. 

ಅಂದಿನಿಂದಲೇ ಅವಳು ನಮ್ಮ ಪದ್ದತಿಗಳು, ಸಂಪ್ರದಾಯಗಳು, ಸಂಸ್ಕೃತಿ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದಳು. ಇದನ್ನು ಸಂಗ್ರಹಿಸುತ್ತಾ ಅವುಗಳ ಹಿಂದಿನ ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಂಡಮೇಲೆ ಅವಳ ರೀತಿನೀತಿಗಳೇ ಬದಲಾಗಿ ಹೋದವು. ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಬಟ್ಟೆಗಳನ್ನು ಧರಿಸತೊಡಗಿದಳು, ಹಣೆಗೆ ಕುಂಕುಮ, ಕೈಗೆ ಬಳೆ, ಸರಳ ಜೀವನ ಇವೆಲ್ಲವನೂ ರೂಡಿಸಿ ಕೊಂಡುಬಿಟ್ಟಳು. ಹಿಂದೂಗಳು ಏಕೆ ಕುಂಕುಮ ಇಡುತ್ತಾರೆ, ಸಿಂಧೂರ, ಕಾಲುಂಗುರ ಇವುಗಳಿಂದ ಏನು ಪ್ರಯೋಜನ, ಮನೆಯ ಮುಂದೆ ತುಳಸಿ ಏಕಿರುತ್ತದೆ, ಬಳೆಗಳನ್ನು ಏಕೆ ಹಾಕಿಕೊಳ್ಳಬೇಕು, ಅರಿಶಿನವನ್ನು ಏಕೆ ನಿತ್ಯ ಬಳಸಬೇಕು, ಕಿವಿ ಚುಚ್ಚಿಸಿಕೊಂಡರೆ ಏನು ಉಪಯೋಗ ಇತ್ಯಾದಿ ಇತ್ಯಾದಿಗಳಿಗೆ  ವಿವರಣೆಗಳನ್ನು ಕೊಟ್ಟು ಸಂಸ್ಕೃತಿ ಸಂಪ್ರದಾಯ (ಸಂಸಂ) ಎಂಬ ಹೆಸರಿನಲ್ಲಿ  "ಭಾರತೀಯ ಸಂಸ್ಕೃತಿ / ಸಂಪ್ರದಾಯ ಮತ್ತು ಅದರ ಹಿಂದಿನ ವೈಜ್ಞಾನಿಕ ಮನೋಭಾವ" ಎಂಬ ವಿಷಯದ ಬಗ್ಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿಷಯ ಮಂಡಿಸತೊಡಗಿದಳು. ನಮ್ಮ ಪ್ರತಿಯೊಂದು ಸಂಪ್ರದಾಯಗಳನ್ನೂ ಸಂಗ್ರಹಿಸಿ ಅದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯೇ ಎಂಬುದನ್ನು ತಿಳಿದುಕೊಳ್ಳುವುದೇ ಅವಳ ಉದ್ಯೋಗವಾಯಿತು. ಹುಡುಕಿ ಹುಡುಕಿ ಭಾರತದಲ್ಲಿರುವ ಹಿರಿಯರಿಗೆ, ಮುತ್ಸದ್ದಿಗಳಿಗೆ ಕರೆಮಾಡಿ ವಿಷಯ ಸಂಗ್ರಹಿಸುತ್ತಿದ್ದಳು. 

ಇವೆಲ್ಲವೂ ಯಾವ ಮಟ್ಟಕ್ಕೆ ಹೋಯಿತೆಂದರೆ ಸಂಸ್ಕೃತಿ ಅಥವಾ ಸಂಸಂ  ಎಂದರೆ ಭಾರತದ ಸಂಸ್ಕೃತಿಯ ಪ್ರತಿನಿಧಿ ಎನ್ನುವ ಮಟ್ಟಿಗೆ ಹೋಯಿತು. ಈ ಸಂದರ್ಭದಲ್ಲೇ ಅವಳಿಗೆ ಭಾರತದ ಬಗ್ಗೆ ಅಭಿಮಾನವಿದ್ದ ಹರಿಯ ಭೇಟಿ ಆಗಿ ಕಡೆಗೆ ಅವರಿಬ್ಬರೂ ಒಪ್ಪಿ ಮದುವೆಯೂ ಆಗಿಹೋಯಿತು. 

ಹೀಗೆ ಭಾರತದಲ್ಲಿದ್ದಾಗ ಸ್ಯಾಮ್ ಆಗಿದ್ದು ಅಮೆರಿಕಕ್ಕೆ ಹೋದಮೇಲೆ ಮತ್ತೆ ಸಂಸ್ಕೃತಿಯಾಗಿ ಬದಲಾಗಿದ್ದ  ಅವಳು ಇಂದು ನನ್ನ ಮನೆಗೆ ಬಂದು ಒಂದು ದೊಡ್ಡ ಅಚ್ಚರಿಯನ್ನು ತಂದಿದ್ದಳು. 

ಸಂಕ್ರಾಂತಿ ಹಬ್ಬ ಮತ್ತು ಸೂರ್ಯನ ಬಗ್ಗೆ ತಿಳುವಳಿಕೆ, ಸಂಕ್ರಾಂತಿಯ ಹಬ್ಬದ ದಿನ ನೇರವಾಗಿ ದೇವರಮೇಲೆ ಸೂರ್ಯನ ಕಿರಣ ಬೀಳುವಂತೆ ಕಟ್ಟಿದ ದೇವಾಲಯಗಳು, ನಾವು ತಿನ್ನುವ ಎಳ್ಳು ಬೆಲ್ಲದ ಮಹತ್ವ, ಬೇವು ಬೆಲ್ಲದ ಹಿಂದಿನ ಔಷಧೀಯ ಗುಣ, ಸಾಂಕೇತಿಕ ಮಹತ್ವ, ಅರಿಶಿನದ ಉಪಯೋಗ ಅದನ್ನು ನಿತ್ಯವೂ ದೇಹದೊಳಗೆ, ಹೊರಗೆ ಬಳಸುವುದರಿಂದ  ಆಗುವ ಅನುಕೂಲಗಳು, ಸಿಂಧೂರವನ್ನು ಹಣೆ ಮತ್ತು ನೆತ್ತಿಯಮೇಲೆ ಹಚ್ಚುವುದರಿಂದ ಆಗುವ ಆರೋಗ್ಯದ ಮಹತ್ವ, ಅರಳಿ ಮರವನ್ನು ಏಕೆ ಪೂಜಿಸುತ್ತೇವೆ, ಶೌಚಾಲಯಕ್ಕೆ ಪಾಶ್ಚಿಮಾತ್ಯ ಪದ್ದತಿಯ ಕಮೋಡಿಗಿಂತ ಭಾರತೀಯ ಪದ್ಧತಿ ಹೇಗೆ ಒಳ್ಳೆಯದು ಇತ್ಯಾದಿ  ವಿಷಯಗಳನ್ನು ಬಿಡಿಸಿ ಬಿಡಿಸಿ ವಿವರಿಸಿ, ವೈಜ್ಞಾನಿಕ ಸಮರ್ಥನೆ ನೀಡಿದಳು. ಸ್ಯಾಮ್ ಎಂದು ಕರೆದುಕೊಂಡು ಠುಸ್ ಪುಸ್ ಎನ್ನುತ್ತಿದ್ದ ಹುಡುಗಿ ಇವಳೇನಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು. ಅಂತೂ ಎಷ್ಟೊಂದು ವಿಷಯವನ್ನು ನಾನೇ ಸಂಸ್ಕೃತಿಯಿಂದ ತಿಳಿದುಕೊಂಡೆ. ಪರವಾಗಿಲ್ಲವೇ ಹುಡುಗಿ ಎಂದು ಅವಳ ಬೆನ್ನು ತಟ್ಟಿದೆ. ನನಗೆ ನಮ್ಮ ಸಂಸ್ಕೃತಿಯ ಬಗ್ಗೆ ಬಹಳ ಹೆಮ್ಮೆ ಎನಿಸಿತು. 


Rate this content
Log in

Similar kannada story from Inspirational