ಮಾಡಿದ್ದುಣ್ಣೋ ಮಹರಾಯ
ಮಾಡಿದ್ದುಣ್ಣೋ ಮಹರಾಯ
ರಾಜ ಇನ್ನೂ ಬರಲೇ ಇಲ್ಲ ಎಂದು ಸರೋಜಾ ಚಡಪಡಿಸುತ್ತಿದ್ದರು. ನಿಶ್ಚಿಂತರಾಗಿದ್ದ ರಾಘವನ್, 'ಅವನು ಬರುವುದಿಲ್ಲ ಎಂದು ಗೊತ್ತಿದ್ದರೂ ಸುಮ್ಮನೆ ಏಕೆ ಚಡಪಡಿಸುವೆ' ಎಂದು ಹೆಂಡತಿಗೆ ಲಘುವಾಗಿ ಗದರಿದರು. 'ನಿಮಗೇನು ಗೊತ್ತು ತಾಯಿಯ ಕರುಳಿನ ಸಂಕಟ' ಎಂದು ಸರೋಜಾ ಉತ್ತರಿಸಿದಾಗ, ರಾಘವನ್, 'ಇದೇ ತಾಯಿ ಕರುಳಿನ ಸಂಕಟ ಮೂವತ್ತು ವರ್ಷಗಳ ಹಿಂದೆ ಇದ್ದಿದ್ದರೆ ನಮ್ಮ ಕಥೆಯೇ ಬೇರೆಯಾಗಿರುತ್ತಿತ್ತು' ಎಂದು ನಿಡುಸುಯ್ದರು.
ಹೌದು, ಸರೋಜಾ ಮತ್ತು ರಾಘವನ್ ಬಹಳ ಸ್ಥಿತಿವಂತರು, ಬಹಳ ಉನ್ನತ ಹುದ್ದೆಯಲ್ಲಿದ್ದವರು. ರಾಘವನ್ ಒಬ್ಬ ಒಳ್ಳೆಯ ಕಂಟ್ರಾಕ್ಟರ್ ಎಂದು ಹೆಸರು ಮಾಡಿದ್ದರೆ, ಸರೋಜಾ ಹೆಸರಾಂತ ಸಮಾಜ ಸೇವಕಿ ಎಂದು ಹೆಸರು ಗಳಿಸಿದ್ದರು. ಇಬ್ಬರೂ ಎಷ್ಟು ಉನ್ನತ ಸ್ಥಾನಕ್ಕೆ ಏರಿದರೆಂದರೆ ಅವರಿಗೆ ಮನೆಯಲ್ಲಿ ಎಲ್ಲಕ್ಕೂ ಆಳುಕಾಳುಗಳೇ. ಮನೆಯಲ್ಲಿ ಅಡುಗೆಗೆ ಅಳು, ಮನೆಕೆಲಸಕ್ಕೆ ಅಳು, ಎಲ್ಲಕ್ಕೂ ಅಳು, ತಮ್ಮ ಊಟವನ್ನು ಇನ್ಯಾರಾದರೂ ಮಾಡಬಹುದು ಎಂದಿದ್ದಾರೆ ಅದಕ್ಕೂ ಆಳುಗಳನ್ನು ಇಟ್ಟುಕೊಂಡು ಬಿಡುತ್ತಿದ್ದರೇನೋ. ಸ್ವಲ್ಪ ದಿನಗಳಾದಮೇಲೆ ರಾಘವನ್ ಅವರಿಗೆ ಇದು ಸ್ವಲ್ಪ ಅತಿಯಾಯಿತು ಎನ್ನಿಸಿ ಹೆಂಡತಿಗೆ ಹೇಳಿದಾಗ, ಸರೋಜಾ 'ನೀವು ಮಾತ್ರ ಹೊರಗೆ ಕೆಲಸ ಮಾಡಿಕೊಂಡು ಹೆಸರು ಮಾಡಿಕೊಂಡು ಬಿಡಿ, ನಾನು ಮಾಡಿದರೆ ಅದೇಕೆ ಅಸೂಯೆ' ಎಂದು ಹಂಗಿಸುತ್ತಿದ್ದರು. 'ಹಾಗಲ್ಲವೇ, ಗೃಹಿಣಿಯು ಗೃಹಲಕ್ಷ್ಮಿಯಂತೆ ಇರಬೇಕು' ಎಂದು ರಾಘವನ್ ಹೇಳಿದರೆ, ಸರೋಜಾ 'ಹಾಗು ಅಲ್ಲ, ಹೀಗೂ ಅಲ್ಲ, ಸುಮ್ಮನೆ ತೆಪ್ಪಗಿರಿ, ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ, ನಿಮಗೆ ಯಾವತ್ತೂ ಊಟ ತಪ್ಪಿಸುವುದಿಲ್ಲ' ಎಂದು ಬಾಯಿ ಬಡಿಯುತ್ತಿದ್ದರು. ಏನಾದರೂ ಮಾಡಿಕೋ ಎಂದು ರಾಘವನ್ ಕಡೆಗೆ ಸುಮ್ಮನಾಗಿ ಬಿಟ್ಟರು. ಮುಂದೆ ಅವರಿಗೆ ರಾಜ ಹುಟ್ಟಿದಾಗ ಸರೋಜಾ ವಿಧಿ ಇಲ್ಲದೆ ಒಂದಷ್ಟು ರಜೆಯನ್ನು ತೆಗೆದುಕೊಂಡರು. ಮಗುವಿಗೆ ಮೂರೂ ತಿಂಗಳಾಗುತ್ತಿದ್ದಂತೆ ಮತ್ತೆ ತಮ್ಮ ಹೊರಗಿನ ಕೆಲಸಗಳಲ್ಲಿ ತೊಡಗಿಸಿಕೊಂಡು ರಾಜನನ್ನು ನೋಡಿಕೊಳ್ಳಲು ಊರಿನಿಂದ ತನ್ನ ಸಂಬಂಧಿ ಸೀತಾಳನ್ನು ಕರೆಸಿಕೊಂಡರು. ರಾಘವನ್ ಅವರಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ ಆದರೆ ಸರೋಜಾ ಕೇಳಲಿಲ್ಲ. ರಾಜನಿಗೆ ಸೀತಮ್ಮನೆ ತಾಯಿಯಾಗಿ ಬಿಟ್ಟಿದ್ದಳು, ಅವಳೂ ತಾಯಿಯಂತೆಯೇ ನೋಡಿಕೊಳ್ಳುತ್ತಿದ್ದುರಿಂದ ಸರೋಜಳಿಗೆ ಎಲ್ಲವೂ ಸಲೀಸಾಯಿತು.
ರಾಜ ಏನು ಕೇಳಿದರೂ ಅದು ಎದುರಿಗೆ ಬಿದ್ದಿರುತ್ತಿತ್ತು. ಅದನ್ನು ಅವನು ಸೀತಮ್ಮನ ಮೂಲಕ ಪಡೆಯುತ್ತಿದ್ದುರಿಂದ ಅವನಿಗೆ ಅಪ್ಪ ಅಮ್ಮ ಅಪರಿಚಿತರಾಗಿಯೇ ಉಳಿದುಬಿಟ್ಟರು. ಅವರೊಂದಿಗಿನ ಒಡನಾಟ ಚೆನ್ನಾಗಿಯೇ ಇದ್ದರೂ ಅವನಿಗೆ ಅವರೆಂದೂ ತಂದೆ ತಾಯಿಗಳಂತೆ ಕಾಣಿಸಲೇ ಇಲ್ಲ. ಅವರೇ ತಂದೆ ತಾಯಿ ಎಂದು ಬುದ್ದಿ ಬಂದಾಗ ಗೊತ್ತಾದರೂ ಸೀತಮ್ಮನೆ ಅವನಿಗೆ ಹೆಚ್ಚು ಪ್ರಿಯಳಾಗಿದ್ದಳು.
ರಾಜ ಚೆನ್ನಾಗಿ ಓದಿ ಒಂದು ಒಳ್ಳೆಯ ಕೆಲಸವನ್ನು ಗಿಟ್ಟಿಸಿಕೊಂಡ. ಅದೇ ಸಮಯದಲ್ಲೇ ಸರೋಜಳಿಗೆ ಕಾಲಿಗೆ ಗಾಯವಾಗಿ, ಸಕ್ಕರೆ ಖಾಯಿಲೆಯಿಂದಾಗಿ ಒಂದು ಕಾಲನ್ನೇ ತೆಗೆಯಬೇಕಾಗಿ ಬಂದಿತು. ಇದೆ ಸಮಯದಲ್ಲೇ ರಾಘವನ್ ಅವರಿಗೆ ಕ್ಷಯ ರೋಗದ ಚಿಹ್ನೆಗಳು ಕಂಡುಬಂದವು. ಕಟ್ಟಡಗಳನ್ನು ಕಟ್ಟುವಾಗ ಅಲ್ಲಿದ್ದ ಧೂಳಿನ ವಾತಾವರಣದಿಂದ ಅವರು ಇಳಿ ವಯಸ್ಸಿನಲ್ಲಿ ಈ ತೊಂದರೆಗೆ ಒಳಗಾಗಬೇಕಾಯಿತು. ರಾಘವನ್ ಅವರಿಗೆ ಒಳ್ಳೆಯ ಶುದ್ಧ ಹವೆ ಇರುವ ಜಾಗಕ್ಕೆ ಕಳಿಸಿದರೆ ಒಳಿತು ಎಂದು ಡಾಕ್ಟರ್ ಗಳು ಸಲಹೆ ನೀಡಿದರು. ಅವರನ್ನು ಕಳಿಸಿದಮೇಲೆ ಕಾಲು ಮುರಿದುಕೊಂಡಿರುವ ಸರೋಜಾ ಅವರನ್ನು ಬಿಡಲಾಗುತ್ತದೆಯೇ? ರಾಜ ಅವರಿಬ್ಬರನ್ನು ತೀರ್ಥಹಳ್ಳಿಯ ಬಳಿ ಯಾವಾಗಲೋ ಖರೀದಿಸಿದ್ದ ತೋಟದ ಮನೆಗೆ ಕಳಿಸಲು ನಿರ್ಧರಿಸಿದ. ಇಬ್ಬರು ಇನ್ನು ಕೆಲಸಮಾಡಲು ಶಕ್ತರಿದ್ದರೂ ರಾಜನ ಬಲವಂತದಿಂದ ಅಲ್ಲಿಗೆ ಹೋಗಲೇ ಬೇಕಾಯಿತು. ದುಡ್ಡಿಗೇನೂ ಕೊರತೆ ಇರಲಿಲ್ಲ. ರಾಜ ಅವರನ್ನು ನೋಡಿಕೊಳ್ಳಲು ಒಂದು ಬಡ ಕುಟುಂಬವನ್ನೇ ಗೊತ್ತು ಮಾಡಿಕೊಟ್ಟ. ಇಲ್ಲಿ ತನ್ನನ್ನು ನೋಡಿಕೊಳ್ಳಲು ಸೀತಮ್ಮನನ್ನೇ ಇಟ್ಟುಕೊಂಡ.
ಇದೇ ರಾಜನನ್ನೇ ಕಾಲು ಮುರಿದುಕೊಂಡ ಸರೋಜಾ, ತಮ್ಮ ಹುಟ್ಟಿದ ಹಬ್ಬಕ್ಕೆ ಬರುತ್ತಾನೆ ಎಂದು ನಿರೀಕ್ಷ
ೆ ಇಟ್ಟುಕೊಂಡು ಕಾಯುತ್ತಿದ್ದರು. ರಾಘವನ್ ಅವರು ಇವೆಲ್ಲವನ್ನೂ ಮೊದಲೇ ನಿರೀಕ್ಷಿಸಿದ್ದುರಿಂದ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಆದರೆ ಸರೋಜಾ ಅವರಿಗೆ ರಾಜ ತನ್ನ ಮಗ, ತಾನು ಹೇಳಿದಂತೆ ಕೇಳಬೇಕು ಎಂಬ ಹಠ. ಅವರನ್ನು ಎಂದು ತಾಯಿಯಂತೆ ಕಾಣದ ರಾಜನಿಗೆ ಇವೆಲ್ಲವೂ ಅರ್ಥವಾಗುತ್ತಲೇ ಇರಲಿಲ್ಲ. ಅವರಿಬ್ಬರೂ ತನ್ನ ತಂದೆ ತಾಯಿ, ಅವರಿಬ್ಬರನ್ನು ತಾನು ಚೆನ್ನಾಗಿ ನೋಡಿಕೊಳ್ಳಬೇಕು ಇಷ್ಟೇ ಅವನ ಗುರಿ. ಆದ್ದರಿಂದ ಅವರಿಬ್ಬರಿಗೂ ಒಳ್ಳೆಯ ಮನೆ, ಅಳು ಕಾಳುಗಳನ್ನು ಗೊತ್ತು ಮಾಡಿ ಇಟ್ಟಾಗ, ತಾನು ಒಂದು ಒಳ್ಳೆ ಕೆಲಸ ಮಾಡಿದ್ದೇನೆ ಎಂದು ಅಂದುಕೊಂಡನೇ ಹೊರತು ಅವರು ತನ್ನ ತಂದೆ ತಾಯಿಗಳು, ಅವರ ಬಳಿ ತಾನು ಇರಬೇಕು ಎಂದೆಲ್ಲ ಅವನಿಗೆ ಹೊಳೆಯಲಿಲ್ಲ.
ಅವನು ಮಗುವಾಗಿದ್ದಾಗ ತಾವು ತಾಯಿ ತಂದೆ ತಾಯಿಗಳಂತೆ ನೋಡಿಕೊಂಡಿದ್ದರೆ ಅವನೂ ತಮ್ಮನ್ನು ಹಾಗೆಯೆ ನೋಡಿಕೊಳ್ಳುತ್ತಿದ್ದ, ತಾವು ಅವನನ್ನು ಹೇಗೆ ಬೆಳೆಸಿದವೋ ಹಾಗೆಯೆ ಅವನು ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ರಾಘವನ್ ಅವರು ಅರ್ಥ ಮಾಡಿಕೊಂಡಿದ್ದರು. ಆದರೆ ಸರೋಜಾ ಅವರು ಮಾತ್ರ ಇದನ್ನು ಒಪ್ಪುತ್ತಲೇ ಇರಲಿಲ್ಲ. ಇಲ್ಲಿ ಒಳ್ಳೆಯ ವಾತಾವರಣ ಇದೆ, ಬದುಕಿ ಬಾಳಲು ಯಾವ ಕೊರತೆಯೂ ಇಲ್ಲ, ನೋಡಿಕೊಳ್ಳಲು ಜನರಿದ್ದಾರೆ, ಅತಿ ಅಗತ್ಯ ಎಂದರೆ ಮಗ ಬರುತ್ತಾನೆ ಎಂದು ಸಕಾರಾತ್ಮಕವಾಗಿ ಯೋಚಿಸಿದ್ದರೆ ಯಾವ ಕೊರತೆಯೂ ಇರುತ್ತಿರಲಿಲ್ಲ. ಮಗ ತಮ್ಮೊಂದಿಗಿಲ್ಲ, ತಾವು ಮಗನೊಂದಿಗಿಲ್ಲ ಎಂದಷ್ಟೇ ಸಂಕುಚಿತವಾಗಿ ಯೋಚಿಸುತ್ತಿದ್ದರು, ಗಂಡನ ಸರಿಯಾದ ಅನಿಸಿಕೆಗಳಿಗೆ ಸ್ಪಂದಿಸದ ಸರೋಜಾ ಅವರ ಅರೋಗ್ಯ ಸುಧಾರಿಸುವುದು ನಿಧಾನವಾಗುತ್ತಿತ್ತು. ನಾವು ಇತರರಿಗೆ ಏನನ್ನು ಕೊಡುತ್ತೇವೋ ನಮಗೂ ಅದೇ ಹಿಂತಿರುಗಿ ಬರುತ್ತದೆ ಎಂಬ ಮಾತು ಸರೋಜಾ ಅವರ ನಿಘಂಟಿನಲ್ಲಿ ಇರಲೇ ಇಲ್ಲ. ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆ ಸರೋಜಾ ಅವರ ಬಾಳಿನಲ್ಲಿ ನಿಜವಾಗಿತ್ತು.
ರಾಘವನ್ ರಾಜನೊಂದಿಗೆ ಮಾತನಾಡಿ ಈ ಭಾನುವಾರ ಬಂದು ನಿಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತೇನೆ ಎಂದು ಹೇಳಿಸಿದ್ದರು. ರಾಜ ಫೋನ್ನಲ್ಲಿ ಭಾನುವಾರ ಬರುತ್ತೇನೆ ಎಂದಾಗ ಸರೋಜಾ, 'ನನ್ನ ರಾಜ ಎಂಥವನು ಎಂದು ನನಗೆ ಗೊತ್ತಿಲ್ಲವೇ' ಎಂದು ರಾಘವನ್ ಅವರಿಗೆ ದಬಾಯಿಸಿದಾಗ ರಾಘವನ್ ಅವರು ಒಳಗೇ ನಗುತ್ತಾ 'ನಿನ್ನ ಮಗನಲ್ಲವೇ' ಎಂದು ಸರೋಜಾಳನ್ನು ಹೊಗಳಿದರು. ನಾವೇನೋ ಸ್ಥಿತಿವಂತರಾಗಿದ್ದೇವೆ, ನೋಡಿಕೊಳ್ಳಲು ಆಳುಕಾಳುಗಳು ಇದ್ದಾರೆ ಇಲ್ಲವಾದಲ್ಲಿ ನಮ್ಮ ಗತಿ ಏನಾಗಿರುತ್ತಿತ್ತೋ ಎಂದು ರಾಘವನ್ ಅವರು ಒಂದು ಕ್ಷಣ ಅಧೀರರಾದರೂ, ಸಧ್ಯ ತಮ್ಮ ಮಗ ತಮಗೆ ಅಷ್ಟಾದರೂ ಗೌರವ ಕೊಡುತ್ತಿದ್ದಾನಲ್ಲಾ ಎಂದು ದೇವರಿಗೆ ಮನದಲ್ಲೇ ಪ್ರಣಾಮಗಳನ್ನು ಸಲ್ಲಿಸಿದರು. ಇನ್ನು ಮುಂದೆ ಏನಾದರೂ ಮಾಡಿ ತಾವಾದರೂ ಮಗನನ್ನು ಮಗನಂತೆ ಕಾಣಬೇಕು ಎಂದು ನಿರ್ಧರಿಸಿದರು. ಸರೋಜಾಳ ವಿಷಯವನ್ನು ಮಗನಿಗೆ ಮನದಟ್ಟು ಮಾಡಿಕೊಡಬೇಕು ಎಂದುಕೊಂಡರು. ಆಗ ಯಾರೋ ನಕ್ಕಂತೆ ಅವರಿಗೆ ಭಾಸವಾಯಿತು.
ಆ ಭಾನುವಾರ ಬಂತು, ರಾಜನೂ ಬಂದ, ಸರೋಜಾ ಅವರೂ ಸಂತೋಷದಿಂದ ಅವನನ್ನು ಸ್ವಾಗತಿಸಿ, ಹುಟ್ಟಿದ ಹಬ್ಬ ಆದಮೇಲೆ ಬಂದೆಯಲ್ಲೋ ಎಂದು ನಕ್ಕರು. ಇಷ್ಟು ದಿನವಂತೂ ನಾನು ನಿನ್ನನ್ನು ತಾಯಿಯಂತೆ ನೋಡಿಕೊಳ್ಳಲಿಲ್ಲ ಅದಕ್ಕೆ ನಿನಗೂ ಬೇಸರವಾಗಿದೆಯೇನೋ ಎಂದು ಯೋಚನೆಯಾಗಿತ್ತು, ಸಧ್ಯ ಬಂದೆಯಲ್ಲ ಎಂದರು. ರಾಘವನ್ ಅವರನ್ನು ತೋರಿಸಿ 'ಇವರಿಗಂತೂ ನಾನು ಇದುವರೆಗೆ ಮಾಡಿದ್ದು ಸ್ವಲ್ಪವೂ ಇಷ್ಟವಿಲ್ಲ, ನಿನಗೂ ಹಾಗೇನೋ?' ಎಂದರು. ರಾಜ, 'ಏನೇನೋ ಮಾತನಾಡಬೇಡ ಸುಮ್ಮನಿರಮ್ಮ' ಎಂದ. ನಂತರ ಸರೋಜಾ, ತಂದೆ ಮಗ ಇಬ್ಬರಿಗೂ, 'ನನ್ನನ್ನು ಎತ್ತಿಕೊಂಡು ಹೋಗಿ ಸೋಫಾ ಮೇಲೆ ಕೂಡಿಸಿ, ಮೂವರೂ ಒಂದು ಸೆಲ್ಫಿ ತೆಕ್ಕೊಳ್ಳೋಣ' ಎಂದರು. ಅಪ್ಪಣೆಯ ಪಾಲನೆಯಾಯಿತು. ಮೂವರೂ ಅಂಟಿಕೊಂಡು ಕುಳಿತಾಗ ರಾಜ ಸೆಲ್ಫಿ ತೆಗೆದ. ಸೆಲ್ಫಿಯ ಕ್ಲಿಕ್ ಶಬ್ದ ಸರೋಜಾ ಅವರ ಹೃದಯ ಬಡಿತಕ್ಕೆ ತಗುಲಿತ್ತೇನೋ ಎಂಬಂತೆ ಅವರು ಗಂಡ ಮಗನ ನಡುವೆ ಬೆಚ್ಚಗೆ, ಮಂದಹಾಸ ಬೀರುತ್ತಾ ಅಲ್ಲೇ ಕಲ್ಲಿನಂತೆ ಆಸೀನರಾಗಿ ಬಿಟ್ಟಿದ್ದರು. ಅವರು ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಲೇ ಇಲ್ಲ.