B S Jagadeesha Chandra

Inspirational

1  

B S Jagadeesha Chandra

Inspirational

ಅನುಭೂತಿ

ಅನುಭೂತಿ

2 mins
59



ಗುರೂಜಿ ಅವರು ಏನೋ ಕೆಲಸದಲ್ಲಿ ಮಗ್ನರಾಗಿದ್ದರು. ತಮ್ಮ ಆಪ್ತ ಕಾರ್ಯದರ್ಶಿಯಾದ ಹಿರಿಯಣ್ಣ ಅವರು ಹಾಸಿಗೆ ಹಿಡಿದದ್ದು, ಒಂದು ವೇಳೆ ಸರಿ ಹೋದರೂ ತಾವು ಕಾರ್ಯದರ್ಶಿಯ ಸ್ಥಾನದಿಂದ ತಮಗೆ ಬಿಡುವು ಮಾಡಿಕೊಡಿ ಎಂದು ಮೊದಲೇ ಹೇಳಿದ್ದುದು ಅವರಿಗೆ ಯೋಚನೆ ತಂದಿತ್ತು. ಈಗ ಅವರ ಜಾಗಕ್ಕೆ ಯಾರನ್ನು ನೇಮಿಸುವುದು ಎಂದು ಯೋಚಿಸಲಾರಂಭಿಸಿದರು. ಹಿರಿಯಣ್ಣವರ ಸ್ಥಾನಕ್ಕೆ ಬರಲು ಆಶ್ರಮದ ಹಲವಾರು ಜನ ನಾಮುಂದು ತಾಮುಂದು ಎಂದು ಕಾಯುತ್ತಿದ್ದರು. 

ಗುರೂಜಿ, ಆಶ್ರಮದಲ್ಲಿದ್ದ ಕಿರಿಯ ಕೆಲಸಗಾರ ರಾಮು ಹಾಗೂ ಸೇವಕನಾಗಿದ್ದ ಭೀಮಣ್ಣ ಇಬ್ಬರನ್ನು ಕರೆಸಿದರು. ಅವರಿಬ್ಬರನ್ನು ಕರೆದು ಏನೇನೋ ಕಿವಿಮಾತುಗಳನ್ನು ಹೇಳಿ ನಂತರ ತಮಗೆ ವಿಷಯವನ್ನು ತಿಳಿಸುವಂತೆ ಹೇಳಿದರು. ರಾಮು ಮತ್ತು ಭೀಮಣ್ಣ ಗುರೂಜಿ ಅವರ ಸಲಹೆಯಂತೆ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹತೆ ಇದ್ದ ಎಲ್ಲರ ಬಳಿಯೂ ಒಂದು ವಾರ ಕೆಲಸ ಮಾಡಿದರು. ನಂತರ ಗುರೂಜಿ ಅವರಿಗೆ ವರದಿ ಒಪ್ಪಿಸಿದರು. ಕಡೆಗೆ ಗುರೂಜಿ ಅವರು ಸಾಲಪ್ಪ ಅವರನ್ನು ಹಿರಿಯಣ್ಣನವರ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡರು. ಎಲ್ಲರಿಗೂ ಆಶ್ಚರ್ಯ, ಗುರೂಜಿ ಹೇಗೆ ಆಯ್ಕೆ ಮಾಡಿದರು ಎಂದು. ಇದಕ್ಕೆ ಗುರೂಜಿ ಅವರ ಉತ್ತರ ಬಹಳ ಸ್ವಾರಸ್ಯವಾಗಿತ್ತು. 

ಅವರು ಹೇಳಿದ ಮೊದಲ ನುಡಿ ಮುತ್ತು " ಓರ್ವ ವ್ಯಕ್ತಿಯ ಗುಣವನ್ನು ಅರಿಯಬೇಕಾದರೆ ಅವನು ತನಗಿಂತ ಕಿರಿಯ ಹಾಗು ಅಧೀನ ಕೆಲಸಗಾರರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂದು ಅರಿತರೆ ಸಾಕು". ನಾನು ಇದನ್ನೇ ಪ್ರಯೋಗ ಮಾಡಿದ್ದು. ರಾಮು ಮತ್ತು ಭೀಮಣ್ಣ ಕೆಲಸ ಮಾಡಿದ ಕಡೆ ಅವರಿಗೆ ಆದ ಅನುಭವಗಳ ವರದಿಯನ್ನು ನಾನು ತರಿಸಿಕೊಂಡು ಅದನ್ನು ಮತ್ತೆ ಪರಿಶೀಲಿಸಿ ನಿರ್ಧಾರ ತೆಗೆದುಕೊಂಡೆ.

ಕೆಲೆವೆಡೆ ಯಜಮಾನರು ಸಾಧುವಾಗಿದ್ದರೂ ಅವರ ಸಹವರ್ತಿಗಳು ಈ ಕಿರಿಯ ಹೊಸಬರಿಗೆ ಗೌರವ ಕೊಡುತ್ತಿರಲಿಲ್ಲ. ಯಜಮಾನರಿಗೆ ಇದು ಗೊತ್ತಿದ್ದರೂ, ಹಾಗೆ ಮಾಡಬಾರದು ಎಂದು ಬುದ್ದಿವಾದ ಹೇಳುತ್ತಿರಲಿಲ್ಲ.

ಇನ್ನು ಕೆಲವು ಕಡೆ ಯಜಮಾನರೇ ಸರಿಯಾಗಿ ವರ್ತಿಸದೆ, ಈ ಇಬ್ಬರನ್ನಂತೂ ಆಳುಗಳಂತೆ ನಡೆಸಿಕೊಂಡರು. ಚಿಕ್ಕವರು, ಇವರಿಗೇನು ಗೊತ್ತು? ಆಳುಗಳು, ಇವರಿರುವುದೇ ಕೆಲಸ ಮಾಡುವುದಕ್ಕೆ ಎಂಬ ಧೋರಣೆ, ವರ್ತನೆ, ಅವರ ನಡವಳಿಕೆಯಲ್ಲಿ ಕಾಣುತ್ತಿತ್ತು.

ಆದರೆ ಸಾಲಪ್ಪನವರು ತಮ್ಮ ಎಲ್ಲ ಸಹೋದ್ಯೋಗಿಗಳನ್ನೂ ಗೌರವದಿಂದ ನಡೆಸಿಕೊಂಡು ಈ ಹೊಸಬರನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಕೆಲಸಗಳನ್ನು ಕಲಿಸಿಕೊಟ್ಟರು.

ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ಜೀವನದಲ್ಲಿ ಬಹಳ ಮುಖ್ಯ. ನಮ್ಮಂತೆಯೇ ಇತರರು ಎಂಬುದನ್ನು ನಾವು ಮನಗಂಡರೆ ಅದಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ.ಇಂತಹವರಿಂದಲೇ ಏಳಿಗೆ ಸಾಧ್ಯ ಎಂದು ನೆರೆದಿದ್ದ ಜನರಿಗೆ ಮನದಟ್ಟು ಮಾಡಿಕೊಟ್ಟು ನಂತರ ಕೆಲವು ಕಿವಿಮಾತುಗಳನ್ನು ಹೇಳಿದರು.

ನಮ್ಮ ನಿತ್ಯಜೀವನದಲ್ಲೂ ನಾವು ವಿವಿಧ ರೀತಿಯ ಜನರನ್ನು ಗಮನಿಸಬಹುದು. ಅನೇಕರು ಅಧಿಕಾರ ಸಿಕ್ಕರೆ ಚಲಾಯಿಸಲು ನೋಡುತ್ತಾರೆಯೇ ವಿನಃ ಅದನ್ನು ಜನೋಪಯೋಗಕ್ಕೆ ಬಳಸುವುದಿಲ್ಲ. ಇನ್ನು ಕೆಲವರಂತೂ ಹಿರಿಯರು, ಯಜಮಾನರು ಎದುರಿಗೆ ಇದ್ದರೆ ಒಂದು ರೀತಿ ಅವರು ಕಣ್ಮರೆಯಾದೊಡನೆ ಇನ್ನೊಂದು ರೀತಿ ವರ್ತಿಸುತ್ತಾರೆ. ನಾವು ಇತರರಿಂದ ಏನನ್ನು ಬಯುಸುತ್ತೇವೆಯೋ ಅದನ್ನೇ ಇರರರೂ ನಮ್ಮಿಂದ ಬಯಸುತ್ತಾರೆ ಎಂಬುದನ್ನು ಸದಾ ನೆನಪಿಡಬೇಕು. ಇವೆಲ್ಲವನ್ನೂ ನಾವು ನಿಜ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.

ಹೌದು, ಮಾನವ ಧರ್ಮ ಎಂದರೆ ತನ್ನಂತೆ ಇತರರು ಎಂಬುದು ನಿಜವಾದಾಗ. 


Rate this content
Log in

Similar kannada story from Inspirational