Prabhakar Tamragouri

Drama Tragedy Classics

3.9  

Prabhakar Tamragouri

Drama Tragedy Classics

ಕತ್ತಲಿಂದ ಬೆಳಕಿನೆಡೆಗೆ

ಕತ್ತಲಿಂದ ಬೆಳಕಿನೆಡೆಗೆ

9 mins
295


ಕುಮಟಾ ಹವ್ಯಕ ಕಲ್ಯಾಣ ಮಂಟಪ ಸರೋಜಮ್ಮನ ಸ್ನೇಹಿತರು , ನೆಂಟರಿಷ್ಟರಿಂದ ತುಂಬಿ ಸಡಗರ ಸಂಭ್ರಮದಿಂದ ತುಳುಕಾಡುತ್ತಿತ್ತು . ಅಲ್ಲಿ ನೆರೆದಿದ್ದ ಹೆಂಗಸರು ತಮ್ಮ ಸೀರೆ ಹಾಗೂ ಹೊಸದಾಗಿ ಕೊಂಡ ಒಡವೆಗಳ ಪ್ರದರ್ಶನಕ್ಕಾಗಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ , ಕೆಲವರು ಅಪರೂಪಕ್ಕೆ ಸಿಕ್ಕ ಸ್ನೇಹಿತರೊಡನೆ ಹರಟೆ ಹೊಡೆಯುವುದರಲ್ಲಿ ಮಗ್ನರಾಗಿದ್ದರು . ಶಾಂಪೂ ಹಾಕಿ ತಲೆಗೆ ಸ್ನಾನ ಮಾಡಿ ಕೂದಲು ಹಾರಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಹದಿಹರೆಯದ ಹುಡುಗಿಯರು ಹುಡುಗರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದರು . ಪುಟ್ಟ ಮಕ್ಕಳು ಕಲ್ಯಾಣ ಮಂಟಪದ ಹೊರಗೆ ರಸ್ತೆಯ ಪಕ್ಕದಲ್ಲಿ ಮಾರುತ್ತಿದ್ದ ಬಲೂನು , ಪೀಪಿಗಾಗಿ ತಾಯಂದಿರನ್ನು ಪೀಡಿಸುತ್ತಿದ್ದವು . ಹೀಗೆ ಎಲ್ಲರೂ ಒಂದಿಲ್ಲೊಂದು ಕಾರ್ಯದಲ್ಲಿ ಮೈ ಮರೆತಿದ್ದರು . ಇದಕ್ಕೆಲ್ಲ ಕಾರಣ ಅಂದು ಸರೋಜಮ್ಮನ ಇಬ್ಬರು ಹೆಣ್ಣು ಮಕ್ಕಳ ವಿವಾಹ ನಡೆಯುತ್ತಿತ್ತು .


 ಸರೋಜಮ್ಮನವರೂ ಸಹ ಬೀಗರನ್ನು ವಿಚಾರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು . " ಸರೋಜಮ್ಮನವರೇ ಗೆದ್ರಿ ಬಿಡಿ . ಅಂತೂ ಇಬ್ಬರು ಹೆಣ್ಣು ಮಕ್ಕಳನ್ನೂ ಒಂದು ದಡ ಮುಟ್ಟಿಸಿದಿರಿ ........ ನಿಮ್ಮ ಯಜಮಾನರು ತೀರಿಹೋಗಿ ವರ್ಷ ಕಳೆಯುವುದರೊಳಗೇ ಕನ್ಯಾದಾನ ಮಾಡಿ ಪುಣ್ಯ ಕಟ್ಟಿಕೊಂಡಿರಿ ....." ಹೀಗೆ ಮದುವೆಗೆ ಬಂದ ನೆಂಟರಿಂದ , ಸ್ನೇಹಿತರಿಂದ ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ . "ಎಲ್ಲಕ್ಕೂ ಆ ಭಗವಂತನ ಕೃಪೆ . ಏನೋ ಮಕ್ಕಳ ಪುಣ್ಯ ಚೆನ್ನಾಗಿತ್ತು ಒಳ್ಳೆಯ ಕಡೆ ಸೇರಿದರು . ಇದರಲ್ಲಿ ನನ್ನದೇನಿದೆ ಹೇಳಿ ....? " ಎಂದು ಸರೋಜಮ್ಮ ಉತ್ತರಿಸುತ್ತಿದ್ದರು .


 ಆದರೆ , ಬಂದವರೆಲ್ಲರಿಗೂ ಸಂತಸ , ಸಂಭ್ರಮದ ಗಳಿಗೆಯಲ್ಲೂ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಸಂಶಯದ ಕೀಟ ಕೊರೆಯುತ್ತಿತ್ತು . ಈಗಿನ ಕಾಲದಲ್ಲಿ ಸರ್ಕಾರಿ ನೌಕರಿ , ಆಸ್ತಿಪಾಸ್ತಿ ಇದ್ದವರಿಗೇ ಒಂದು ಮದುವೆ ಮಾಡುವುದರಲ್ಲಿ ಸಾಕಪ್ಪ ಸಾಕು ಹೆಣ್ಣು ಜನ್ಮ ಎಂದೆನಿಸಿಬಿಡುತ್ತದೆ . ಇಂತಹ ಪರಿಸ್ಥಿತಿ ಇರುವಾಗ ಆಸ್ತಿಯಿಲ್ಲ , ಅಂತಸ್ತಿಲ್ಲ ಗಂಡನಿಗೆ ಬೇರೆ ಸರ್ಕಾರಿ ಕೆಲಸವಿರಲಿಲ್ಲ . ಹೀಗಿರುವಾಗ ಇಷ್ಟು ಅದ್ದೂರಿಯಾಗಿ ಹೇಗೆ ಮದುವೆ ಮಾಡ್ತಾ ಇದ್ದಾರೆ ....? ಒಂದು ವೇಳೆ ಮಗನೇನಾದರೂ ಕೊಟ್ಟಿದ್ದಾನೋ ಎಂದರೆ , ಮದುವೆ ಮಾಡಿಕೊಂಡು ಬೇರೆಯಾದವನು ಅಪ್ಪ ಅಮ್ಮನ ಇರುವನ್ನೇ ಮರೆತಿದ್ದ ..... ಹೀಗೆ ಅವರವರಲ್ಲೇ ಮಾತಾಡಿಕೊಳ್ಳುತ್ತಿದ್ದರು . ಹೆಣ್ಣು ಹೆಂಗಸು , ಇಷ್ಟು ಚೆನ್ನಾಗಿ ಮದುವೆ ಮಾಡುತ್ತಿದ್ದಾಳಲ್ಲ ಎಂದು ಹೃದಯಪೂರ್ವಕವಾಗಿ ಸಂತೋಷಪಡುವ ಯಾರೊಬ್ಬರೂ ಅಲ್ಲಿರಲಿಲ್ಲ . ಎಲ್ಲರಿಗೂ ಇಷ್ಟು ದೊಡ್ಡ ಖರ್ಚನ್ನು ಹೇಗೆ ನಿಭಾಯಿಸಿದ್ದಾಳೆ ಎಂಬ ಕೆಟ್ಟ ಕುತೂಹಲವಿತ್ತು .


ಅವರಿವರ ಮಾತು ಬಿಡಿ . ಸ್ವತಃ ಸರೋಜಮ್ಮನ ಮಗ , ಸೊಸೆಯೇ ಅಚ್ಚರಿಯಿಂದ ಕಣ್ಣು ಬಾಯಿ ಬಿಡುತ್ತಿದ್ದರು . ಸೊಸೆ ಭಾರತಿ , " ಏನ್ರೀ ನೋಡಿದ್ರಾ ನಿಮ್ಮಮ್ಮನ್ನ . ನಮ್ಮನ್ನ ಒಂದು ಮಾತು ಕೇಳದೇ ಹೇಗೆ ಧಾಂಧೂಮ್ ಅಂತ ಮದುವೆ ಮುಗಿಸಿಯೇ ಬಿಟ್ರು . ನನಗೇ ತಿಳಿಯದ ಹಾಗೆ ನೀವೇನಾದ್ರೂ ಲೋನ್ ತೆಗೆದುಕೊಟ್ಟಿದ್ದೀರೋ ಹೇಗೆ ...? " ಎಂದು ಗಂಡನನ್ನು ದಬಾಯಿಸಿದಳು . " ಇಲ್ಲ ಮಾರಾಯ್ತಿ , ಹಾಗೇನೂ ಇಲ್ಲ . ನಿನ್ನಪ್ಪಣೆ ಇಲ್ಲದೆ ನಾನು ಯಾವ ಕೆಲಸಾನೂ ಮಾಡಲ್ಲ ಅಂತ ನಿಂಗೆ ಗೊತ್ತಿಲ್ವ ? ನನಗೂ ನಿನ್ನಷ್ಟೇ ಆಶ್ಚರ್ಯ ಆಗ್ತಾ ಇದೆ . ಅಮ್ಮನ ಕಾರ್ಬಾರು ನೋಡಿ ಹೋಗಿ ಕೇಳಿ ಬಿಡ್ಲೇನು ಅಮ್ಮನ್ನ ...." ಎಂದು ಹೆಂಡತಿಯ ಅಪ್ಪಣೆಯನ್ನು ಪಡೆಯಲೆತ್ನಿಸಿದ ಶಂಕರ .


" ಸದ್ಯ ಹಾಗೇನೂ ಮಾಡ್ಬೇಡಿ . ಸುಮ್ನೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ . ನಮಗ್ಯಾಕೆ ಬೇಕು ಇಲ್ಲದ ಉಸಾಬರಿ . ಶಂಕರ ನಿನ್ನ ಹೆಸರಲ್ಲೇ ಸಾಲ ಮಾಡಿದ್ದೀನಿ ಕಣೋ . ಬಟ್ಟೆ ಅಂಗಡಿ , ಕಿರಾಣಿ ಅಂಗಡಿ ಸಾಹುಕಾರರಿಗೆ ನೀನೇ ಕೊಡಬೇಕು ಇಲ್ಲ ಅನ್ಬೇಡ.... ಅಂತ ಕಣ್ಣೀರು ಸುರಿಸಿ ನಿಮ್ಮನ್ನ ಸಾಲಗಾರರನ್ನಾಗಿ ಮಾಡಿದರೆ ಆಗ ಏನು ಮಾಡ್ತೀರಿ ...? ನಾನಂತೂ ಒಂದು ನಯಾಪೈಸೆನೂ ಕೊಡಲ್ಲ ನೋಡಿ " ಎಂದು ಅತ್ತೆ ಆಡಬಹುದಾದ ಮಾತುಗಳನ್ನು ತಾನೇ ಊಹಿಸಿ ಆಡಿ ಪರಿಣಾಮವನ್ನು ತಿಳಿಸಿದಳು . " ಹೌದು ಕಣೆ , ಜವುಳಿ ಅಂಗಡಿ , ಕಿರಾಣಿ ಅಂಗಡಿ ಸಾಹುಕಾರರೆಲ್ಲ ಬಂದಿದ್ದಾರೆ . ಒಂದು ವೇಳೆ ಹಾಗೇನಾದ್ರೂ ಮಾಡಿದ್ರೆ , ಯಾರನ್ನ ಕೇಳಿ ಸಾಲ ಮಾಡಿದೆ ? ಬೇಕಾದ್ರೆ ನೀನೇ ತೀರಿಸಿಕೋ ಎಂದು ನಮ್ಮ ಪಾಡಿಗೆ ನಾವು ಹೋದರಾಯಿತು " ಎಂದು ಹೆಂಡತಿಗೆ ಸಮಾಧಾನ ಹೇಳಿದ ಶಂಕರ .


ಎಲ್ಲರೂ ಅವರವರಲ್ಲೇ ಮಾತಾಡಿಕೊಂಡರೂ ಯಾರೂ ಸರೋಜಮ್ಮನನ್ನು ನೇರವಾಗಿ ಕೇಳುವ ಸಾಹಸ ಮಾಡಲಿಲ್ಲ . ಕೇಳಿದರೆ ತಮಗೇ ಹಣಕ್ಕಾಗಿ ಗಂಟುಬಿದ್ದರೆ ಎಂದು ಹತ್ತಿರದವರು ಸುಮ್ಮನಾದರೆ , ನಮಗ್ಯಾಕೆ ಬೇಕು ಇಲ್ಲದ ರಗಳೆ . ಹೇಗಾದ್ರೂ ಮಾಡ್ಲಿ ......ಎಂದು ದೂರದವರು ಸುಮ್ಮನಿದ್ದರು . ಅಂತೂ , ಸಂತಸ , ಸಡಗರ ,ಸಂಭ್ರಮ , ಸಂಶಯ ಎಲ್ಲದರ ನಡುವೆಯೂ ಮದುವೆ ಸಾಂಗವಾಗಿ ನೆರವೇರಿ ಹೆಣ್ಣು ಮಕ್ಕಳನ್ನು ಅವರ ಗಂಡನ ಮನೆಗೆ ಕಳಿಸಿಯಾಯಿತು . ಕರ್ತವ್ಯ ಮುಗಿಸಿದ ಸಂತೋಷದಿಂದಲೋ , ಮಕ್ಕಳು ದೂರ ಹೋಗುತ್ತಾರೆ ಎಂಬ ದುಃಖ ದಿಂದಲೋ ಅಥವಾ ಸತ್ತ ಗಂಡನ ನೆನಪಿನಿಂದಲೋ ಸರೋಜಮ್ಮನವರ ಕಣ್ಣುಗಳಲ್ಲಿ ಕಂಬನಿಯ ಧಾರೆ ಇಳಿಯುತ್ತಿತ್ತು . " ಹೆಣ್ಣು ಹುಟ್ಟಿದ ಮೇಲೆ ಇಂತಹ ನೋವು ಅನಿವಾರ್ಯ ! ಏಳಿ ಸಮಾಧಾನ ಮಾಡ್ಕೊಳ್ಳಿ " ಎಂದು ಸರೋಜಮ್ಮನ ಆತ್ಮೀಯರು ಸಮಾಧಾನ ಮಾಡುತ್ತಿದ್ದರು . 


 ನೆಂಟರ ಹಾಗೆ ಮನೆಯ ಮಗನೂ ಹೊರಟು ನಿಂತಾಗ ಮಾತ್ರ ಸರೋಜಮ್ಮನಿಗೆ ಹೆಣ್ಣು ಮಕ್ಕಳನ್ನು ಕಳಿಸಿದ ದುಃಖಕ್ಕಿಂತ ಹೆಚ್ಚು ನೋವಾಯಿತು . " ಅಮ್ಮಾ , ಪ್ರದೀಪನಿಗೆ ಕ್ಲಾಸು ತಪ್ಪುತ್ತಮ್ಮಾ , ನಾವು ಬರ್ತೀವಿ " ಎಂದು ಕುಂಟು ನೆಪ ಹೇಳಿ ಹೊರಟ ಮಗ ಸೊಸೆಯನ್ನು ತಡೆಯಬೇಕೆನಿಸಲಿಲ್ಲ . " ಇದಕ್ಕೋಸ್ಕರವೇ ಏನು ನಾನು ಗಂಡಿಗಾಗಿ ಹಂಬಲಿಸಿ , ಜೀವನದುದ್ದಕ್ಕೂ  ಕಷ್ಟಪಟ್ಟಿದ್ದು" ಎಂದು ಮನಸ್ಸು ವ್ಯಾಕುಲಗೊಂಡರೂ , ನಾಲಿಗೆ ಹತೋಟೆ ತಪ್ಪಲಿಲ್ಲ " ಸರಿ , ಹೋಗಿ ಬಾಪ್ಪ , ದೇವರು ಒಳ್ಳೆಯದು ಮಾಡಲಿ " ಎಂದಷ್ಟೇ ನುಡಿದರು . ಮಗ ,ಸೊಸೆ ಕಣ್ಮರೆಯಾಗುವವರೆಗೂ ಹೊರ ಜಗುಲಿಯ ಮೇಲೆ ನಿಂತು ನೋಡುತ್ತಲೇ ಇದ್ದರು ಸರೋಜಮ್ಮ .


" ಅಮ್ಮ ಒಬ್ಬಳೇ ಇಲ್ಲಿ ಏನ್ಮಾಡ್ತಿ . ನಮ್ಮ ಸಂಗಡ ಬಂದುಬಿಡು " ಎಂದು ಮಗ ತನ್ನನ್ನು ಕರೆಯುತ್ತಾನೇನೋ ಎನ್ನುವ ಅವರ ಸುಪ್ತ ಆಸೆ , ಮಗ ರಸ್ತೆ ತಿರುವನ್ನು ಹಿಂತಿರುಗಿ ನೋಡದೆ ತಿರುಗಿದಾಗ ಸಂಪೂರ್ಣವಾಗಿ ನುಚ್ಚು ನೂರಾಯಿತು . ಹಾಗೇ ನಿಧಾನವಾಗಿ ಒಳ ಬಂದವರಿಗೆ ಕೈಕಾಲು ಸೋತಂತಾಗಿ ಗೋಡೆಗೊರಗಿ ಕುಳಿತರು . ಸುಮಾರು ಎರಡು ತಿಂಗಳಿನಿಂದಲೂ ಮದುವೆಯ ಕೆಲಸಗಳಿಗಾಗಿ ಓಡಾಡಿ ದಣಿದ ದೇಹಕ್ಕೆ ವಿಶ್ರಾಂತಿಯ ಅಗತ್ಯವೆನಿಸಿದರೂ , ಏಕೋ ಮಲಗಬೇಕೆನಿಸಲಿಲ್ಲ ಸರೋಜಮ್ಮನಿಗೆ . " ಹೇಗೆ ಮಾಡಿದೆಯಮ್ಮ . ಹಣಕ್ಕೆ ಏನು ಮಾಡಿದೆ ....? ನನ್ನ ಕೈಲಾದ ಸಹಾಯ ಮಾಡ್ತೀನಮ್ಮ " ಎಂದು ಬಾಯಿ ಮಾತಿಗಾದರೂ ಕೇಳದೆ ಹೆಂಡತಿಯ ಸೆರಗು ಹಿಡಿದು ಹೋದ ಮಗನ ಬಗ್ಗೆ ಅತೀವ ಬೇಸರವಾಯಿತು .


ಮಗ ಏನು ಮಾಡಿದರೂ ಫೋಟೋದಲ್ಲಿದ್ದ ಪತಿ ತನ್ನನ್ನು ಅಭಿನಂದಿಸಿದಂತಾಯಿತು ಸರಿಜಮ್ಮನಿಗೆ . ಇವರ ಸಾವಿಗೆ ಬಹುಪಾಲು ಈ ಮಗನೇ ಕಾರಣವೆನಿಸಿತು . ಆ ದಿನ ಮಗ ಬಂದವನೇ " ಅಪ್ಪ ಈ ಸಲ ನಂದು ಫೈನಲ್ ಇಯರ್ ಅಲ್ವೇನಪ್ಪಾ . ಅದಕ್ಕೇ ಕಾಲೇಜ್ ನಲ್ಲಿ ಟೂರ್ ಆರೇಂಜ್ ಮಾಡಿದ್ದಾರೆ . ನನ್ನ ಸ್ನೇಹಿತರೆಲ್ಲ ಹೊರಟಿದ್ದಾರೆ . ನಾನೂ ಬರುತ್ತೇನೆಂದು ಹೆಸರು ಕೊಟ್ಟಿದ್ದೇನೆ . ಅದಕ್ಕೇ ನನಗೆ ಐದುನೂರು ರೂಪಾಯಿ ಬೇಕಪ್ಪ . ನಾಳೇನೇ ಕೊನೇ ದಿನ ಹಣ ಕೊಡ್ಲಿಕ್ಕೆ " ಎಂದು ಕೇಳಿದ್ದ . " ನೋಡು ಶಂಕರ , ಅಂತಹ ಶೋಕಿಯೆಲ್ಲ ನಮ್ಮಂಥವರಿಗಲ್ಲ . ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು . ಪರೀಕ್ಷೆ ಫೀಸ್ ಗೆ ಹಣ ಹೊಂದಿಸುವುದು ಹೇಗೆ ಅಂತ ನಾನು ಹಗಲು ರಾತ್ರಿ ಚಿಂತಿಸ್ತಾ ಇರುವಾಗ ಇಂತಹ ತಿರುಗಾಟಕ್ಕೆಲ್ಲ ಹಣ ಎಲ್ಲಿಂದ ತರ್ಲಿ ...? ಅವೆಲ್ಲ ಆಗಲ್ಲ ...." ಎಂದರು .


 "ಹಾಗೆಂದ್ರೆ ಹೇಗಪ್ಪಾ ...? ಬಂದೇ ಬರ್ತೀನಿ ಅಂತ ನನ್ನ ಸ್ನೇಹಿತರಿಗೆ ಮಾತು ಕೊಟ್ಟಿದ್ದೀನಿ . ಈಗ ನಾನು ಹೋಗದೇ ಇದ್ರೆ ನಂಗೆ ತುಂಬಾ ಅವಮಾನವಾಗುತ್ತೆ " " ನಾನು ಸಾಲಗಾರನಾದ್ರೆ ನಿಂಗೆ ಅವಮಾನ ಆಗೋಲ್ಲ ಅಲ್ವ ? " ಎಂದು ಮಾರ್ನುಡಿದರು ಇವರು . " ಒಂದು ಸಣ್ಣ ಆಸೆನೂ ನೆರವೇರಿಸಲು ಆಗದೇ ಇರುವ ನಿಮ್ಮಂಥವರಿಗೆ ಮಕ್ಕಳು ಯಾಕೆ ಬೇಕಿತ್ತೋ ?" ಎಂದು ಶಂಕರ ನುಡಿದಾಗ ನಮಗಿಬ್ಬರಿಗೂ ನಾಚಿಕೆಯಿಂದ ಕುಸಿದು ಬೀಳುವಂತಾಯಿತು . ನಾನೇ ಮೊದಲು ಸಾವರಿಸಿಕೊಂಡು " ಏಯ್ , ಏನ್ ಮಾತು ಅಂತ ಆಡ್ತೀಯೋ , ನಾಚಿಕೆ ಆಗಲ್ವ ? ಹೆತ್ತವರಿಗೆ ಈ ರೀತಿ ಮಾತನಾಡೋಕೆ ನಿಂಗೆಷ್ಟು ಧೈರ್ಯನೋ " ಎಂದು ಸ್ವಲ್ಪ ಜೋರಾಗಿಯೇ ಕೂಗಿದ್ದೆ . " ಮತ್ತಿನ್ನೇನಮ್ಮ , ಏನು ಕೇಳಿದ್ರೂ ಈಗ ಆಗೋಲ್ಲ , ಅವಲ್ಲ ನಮಗಲ್ಲ , ಅದ್ಯಾಕೆ , ಇದ್ಯಾಕೆ ಅಂತ ಉಪದೇಶ ಮಾಡ್ತಾರೆ . ಮೊದ್ಲಿಂದಾನೂ ಇದೇ ಆಗೋಯ್ತು . ಈಗ ಮಾತ್ರ ಸುಮ್ನಿರಲ್ಲ . ಐನೂರು ರೂಪಾಯಿ ಬೇಕೇ ಬೇಕು " ಎಂದು ಮೊಂಡು ಹಿಡಿದಿದ್ದ . ಮಗನನ್ನು ನಾನೇ ಹೊರಕ್ಕೆ ಕಳಿಸಿದ್ದೆ ಇನ್ನೇನು ಹೊಲಸು ಮಾತಾಡುವನೋ ಎಂಬ ಭಯದಿಂದ . ಧುಮುಗುಟ್ಟುತ್ತಲೇ ಹೊರ ನಡೆದಿದ್ದ . ಇವರೂ ಅವಮಾನದಿಂದ ತಲೆ ತಗ್ಗಿಸಿ ನಡೆದಿದ್ದರು . ಹೊರಗೆ ಹೋದವರು ತಮ್ಮ ವಾಚನ್ನು ಮಾರಿ ಮಗನಿಗೆ ಟೂರ್ ಹೋಗಲು ಹಣ ಕೊಟ್ಟಿದ್ದರು .


ಮಗನಾಡಿದ ಮಾತು ತಂದೆಯ ಹೃದಯಕ್ಕೆ ಬರೆ ಎಳೆದಂತಾಗಿತ್ತು . ವಯಸ್ಸಾದ ಅಪ್ಪನಿಗೆ ಮಗನಾಡುವ ಮಾತೇ ಇದು ? ಆದರೆ , ಮಗ ಇದ್ಯಾವುದೂ ತನಗೆ ಸಂಬಂಧಿಸಿಲ್ಲ , ಏನೂ ನಡೆದೇ ಇಲ್ಲವೆಂಬಂತೆ ಹಾಯಾಗಿ ಟೂರ್ ಮುಗಿಸಿಕೊಂಡು ಬಂದಿದ್ದ . ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತದೆಂದು ತಿಳಿದಿದ್ದರೆ ನಾನೇ ಹೇಗಾದರೂ ಹಣ ಹೊಂದಿಸುತ್ತಿದ್ದೆ ಎಂದು ಪರಿತಪಿಸಿದ್ದೆ . ಶಂಕರ ಎಷ್ಟೇ ಬಿರು ನುಡಿದರೂ , ಒರಟಾಗಿ ನಡೆದುಕೊಂಡರೂ ಅವನ ವಿದ್ಯಾಭ್ಯಾಸಕ್ಕೆಂದೂ ಇವರು ತೊಂದರೆ ಮಾಡಲಿಲ್ಲ . ಶಂಕರನ ಓದು ಮುಗಿದು ಬೆಂಗಳೂರಿನಲ್ಲಿ ಕೆಲಸ ಸಿಕ್ಕಾಗ ನಮಗೆ ಆಸರೆಯಾಗಬಹುದು ಎಂದು ತಿಳಿದಿದ್ದೆ . ಹಾಗಂತ ಇವರಿಗೂ ಹೇಳಿದಾಗ ," ನಿನಗೆಲ್ಲೋ ಬ್ರಾಂತು ಕಣೆ. ಅಂತಹ ಆಸೆನೆಲ್ಲ ಬಿಟ್ಟುಬಿಡು ..." ಎಂದಿದ್ದರು . ಕೆಲವೊಮ್ಮೆ ಮುಂದೆ ಹೀಗಾಗಬಹುದು ಎಂದು ತಿಳಿದಿದ್ದರೂ , ಹಾಗಾಗದಿರಲಿ ಎಂದು ಬೇಡಿಕೊಳ್ಳುತ್ತೇವೆ . ನಾನೂ ಹಾಗೇ ಮಾಡುತ್ತಿದ್ದೆ . ಆದರೆ , ಇವರ ಮಾತಿನಂತೆ ಶಂಕರ ಕೆಲಸದ ನೆಪದಲ್ಲಿ ಬೆಂಗಳೂರಿಗೆ ಹೋದವನು ನಮ್ಮಿಂದ ದೂರವೇ ಉಳಿದ .


ತಾನೇ ತನ್ನ ಸಹೋದ್ಯೋಗಿಯನ್ನು ರಿಜಿಸ್ಟರ್ ಮದುವೆಯಾದ . ಅವನು ಕರೆಯಲೂ ಇಲ್ಲ , ನಾವು ಯಾರೂ ಹೋಗಲೂ ಇಲ್ಲ . ಬೇರೆಯವರಿಂದ ವಿಷಯೆ ತಿಳಿದಾಗ ಹೆತ್ತೊಡಲು ಸಂಕಟ ಪಟ್ಟರೂ ಮಗನನ್ನು ಶಪಿಸಲಿಲ್ಲ . " ಎಲ್ಲಿಯಾದರೂ ನೀನು ಸುಖವಾಗಿರು . ನಮ್ಮ ಹಣೆಯಲ್ಲಿ ಬರೆದ ಹಾಗಾಗುತ್ತೆ " ಎಂದು ಇವರಿಗೆ ತಿಳಿಯದ ಹಾಗೇ ಕಣ್ಣೀರು ಒರೆಸಿಕೊಂಡಿದ್ದೆ . ಮಗ ಈ ರೀತಿಯಾದರೆ ಹೆಣ್ಣು ಮಕ್ಕಳು ಮತ್ತೊಂದು ರೀತಿ . ಇಬ್ಬರಿಗೂ ಒಂದೊಂದೇ ವರುಷದ ಅಂತರ . ಓದು ಮುಗಿಸಿ ಮನೆಯಲ್ಲೇ ಇದ್ದಾರೆ . ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾರೆ . ಲಂಚ , ಶಿಫಾರಸ್ಸು ಏನೂ ಇಲ್ಲದೆ ಸರ್ಕಾರಿ ಕೆಲಸ ಸಿಗುವುದಿಲ್ಲ . ಸಣ್ಣ ಪುಟ್ಟ ಅಂಗಡಿಗೆ ಕಳಿಸಲು ನಮ್ಮ ಮನಸ್ಸೇ ಒಪ್ಪುತ್ತಿರಲಿಲ್ಲ . ಹಾಗಾಗಿ ಆದಷ್ಟು ಬೇಗ ಮದುವೆ ಮುಗಿಸಿ ಜವಾಬ್ದಾರಿಯನ್ನು ಕಳೆದುಕೊಳ್ಳಬೇಕೆಂದು ನಮ್ಮ ಇಚ್ಛೆಯಾಗಿತ್ತು . ಆದರೆ , ಕೈಯಲ್ಲಿ ನಯಾಪೈಸೆಯೂ ಇಲ್ಲದೆ ಮದುವೆ ಮಾಡುವುದು ಹೇಗೆ ಎಂದು ಇವರು ಕೈಕಟ್ಟಿ ಕುಳಿತಿದ್ದರು .


 ಮಗನ ನಡವಳಿಕೆಯಿಂದ ಕುಗ್ಗಿ ಹೋಗಿದ್ದ ಇವರು , ಬೆಳೆದು ನಿಂತ ಹೆಣ್ಣು ಮಕ್ಕಳ ಯೋಚನೆಯಿಂದ ದಿನೇ ದಿನೇ ಸೊರಗುತ್ತಿದ್ದರು . ನಿದ್ರೆ ಬಾರದೆ ರಾತ್ರಿಯಿಡೀ ಹೊರಳಾಡುತ್ತಿದ್ದ ಇವರಿಗೆ ನಾನೇ , " ಸುಮ್ನೆ ಇಲ್ಲದ ಯೋಚನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ . ಮಗ ದೂರ ಹೋದ ಎಂದು ಸಂಕಟ ಪಡುವುದಕ್ಕಿಂತ , ಉಂಡಾಡಿ ಗುಂಡನಾಗಿ ಪೋಲಿಯಾಗಿ ನಮಗೆ ಹೊರೆಯಾಗದೆ ತನ್ನ ಕಾಲಮೇಲೆ ತಾನು ನಿಂತಿದ್ದಾನಲ್ಲ ಎಂದು ಸಂತೋಷಪಡಿ . ಅವನಿಗೂ ನಾವೇ ಅನ್ನ ಹಾಕಬೇಕಿದ್ದರೆ ಕೊರಗುವುದು ನ್ಯಾಯವಾಗುತ್ತಿತ್ತು . ಹೆಣ್ಣು ಮಕ್ಕಳಿಗೂ ಹೇಗೋ ಒಂದು ದಾರಿ ತೋರಿಸೇ ತೋರಿಸುತ್ತಾನೆ ಆ ಭಗವಂತ .....ಸುಮ್ಮನೆ ನಿದ್ದೆ ಮಾಡಿ . ಬಡವರಿಗೆ ಆರೋಗ್ಯವೇ ಆಸ್ತಿಯಂತೆ " ಎಂದು ಸಮಾಧಾನ ಮಾಡುತ್ತಿದ್ದೆ .


ಮೇಲೇನೂ ತೋರಿಸಿಕೊಳ್ಳದಿದ್ದರೂ ಒಳಗೇ ಚಿಂತೆಯೆಂಬ ಹುಳ ಕೊರೆದೂ ಕೊರೆದೂ ಇವರಿಗೆ ಎದೆ ನೋವು ಪ್ರಾರಂಭವಾಯಿತು . ಔಷಧಿ , ಮಾತ್ರೆಗಳು ಎಂದು ಖರ್ಚಿಗೆ ಇನ್ನೊಂದರ ಸೇರ್ಪಡೆಯಾಯಿತು . ಒಂದು ದಿನ ಇದ್ದಕ್ಕಿದ್ದಂತೆ ನೋವು ಜಾಸ್ತಿಯಾದಾಗ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದೆ . ಅಂದು ಸಾಯಂಕಾಲ ಆಸ್ಪತ್ರೆಯಲ್ಲಿ ಇವರು , " ಸರೋಜ , ನಾನು ಉಳಿತೀನಿ ಎನ್ನುವ ಭರವಸೆ ನನಗಿಲ್ಲ . ನಿಮಗೆ ಅಂತ ನಾನು ಏನೂ ಆಸ್ತಿ ಮಾಡ್ಲಿಲ್ಲ . ಮಕ್ಕಳಿಗೊಂದು ದಾರಿ ಮಾಡ್ಲಿಲ್ಲ . ನಿಮ್ಮನ್ನೆಲ್ಲ ನಡು ನೀರಲ್ಲೇ ಕೈಬಿಟ್ಟು ಹೋಗ್ತಿದ್ದೀನಿ ನನ್ನನ್ನು ಕ್ಷಮಿಸ್ತೀಯಾ " ಎಂದು ಕಣ್ಣೀರು ಸುರಿಸುತ್ತ ನುಡಿದರು . " ಛೆ , ಹಾಗೆಲ್ಲಾ ಮಾತಾಡಬೇಡಿ . ದೇವರು ನಂಬಿದವರ ಕೈ ಬಿಡಲ್ಲ . ನೀವು ಮೊದ್ಲು ಹುಷಾರಾಗಿ . ಆಮೇಲೆ ನಿಧಾನವಾಗಿ ಯೋಚನೆ ಮಾಡೋಣ " ಎಂದು ಸಂತೈಸಿ ರಾತ್ರಿಯ ಊಟದ ವ್ಯವಸ್ಥೆಯ ಜೊತೆಗೆ ಹಣ ಹೊಂದಿಸಲು ಮನೆಯ ಕಡೆ ಹೊರಟಿದ್ದೆ .


      

ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೂ , ಆಸ್ಪತ್ರೆ ಖರ್ಚು, ಮಕ್ಕಳ ಮದುವೆ ಎಲ್ಲಕ್ಕೂ ಹಣ ಹೊಂದಿಸುವುದು ಹೇಗೆ ಎಂದು ಮನಸ್ಸು ಕೆಲಸ ಮಾಡುತ್ತಲೇ ಇತ್ತು . ಇದೇ ಸಮಯಕ್ಕೆ ಸರಿಯಾಗಿ ಆಪ್ತ ಗೆಳತಿ ಜಾಹ್ನವಿ ಬಂದವಳೇ , " ಏನೇ ,ಹೇಗಿದಾರೆ ಯಜಮಾನ್ರು . ಡಾಕ್ಟರ್ ಏನು ಹೇಳಿದರು ....? " ಎಂದು ಪ್ರಶ್ನಿಸಿದಳು . " ಬಾ ...ಬಾ ... ಜಾಹ್ನವಿ . ನೀನು ಬಂದಿದ್ದು ಒಳ್ಳೆಯದೇ ಆಯ್ತು ಕಣೆ . ಮುಂದಿನ ದಾರಿ ಹೇಗೋ ಏನೋ . ದುಡ್ಡಿಗೆ ಏನು ಮಾಡುವುದು ಎಂದು ದಿಕ್ಕೇ ತೋಚ್ತಾ ಇಲ್ಲ ಕಣೆ " ಎಂದು ಅಲವತ್ತು ಕೊಂಡೆ . ನನ್ನ ತವರೂರಿನವಳೇ ಆದ ಜಾಹ್ನವಿ ನನ್ನ ಆಪ್ತ ಗೆಳತಿ ಮಾತ್ರವಲ್ಲ , ನನ್ನ ಹಿತೈಷಿ , ಮಾರ್ಗದರ್ಶಕಳೂ ಹೌದು . ಕಷ್ಟ ಕಾಲದಲ್ಲಿ ಸಹಾಯ ಮಾಡುವುದರ ಜೊತೆ ಸೂಕ್ತ ಸಲಹೆ ಕೊಡುತ್ತಿದ್ದಳು . ಅವಳಿಂದ ನಾನು ಯಾವ ವಿಷಯವನ್ನೂ ಮುಚ್ಚಿಡುತ್ತಿರಲಿಲ್ಲ . ನನ್ನ ಮಾತು ಕೇಳಿದ ಅವಳು " ಬಂದೆ ಇರು " ಎಂದು ಮನೆಗೆ ಹೋದವಳು ತಿರುಗಿಬಂದು ಒಂದು ಗಂಟನ್ನು " ಬಿಚ್ಚಿ ನೋಡು " ಎಂದು ನನ್ನ ಕೈಯಲ್ಲಿ ಇಟ್ಟಳು . " ಏನೇ ಇದು ? " ಎನ್ನುತ್ತಲೇ ಗಂಟನ್ನು ಬಿಚ್ಚಿದವಳೇ ದಂಗಾದೆ .


    

ಕಂತೆ ಕಂತೆ ನೋಟುಗಳು . ಬಿಟ್ಟ ಕಣ್ಣುಗಳಿಂದ ಅವಳನ್ನೇ ನೋಡುತ್ತಾ ನಿಂತಾಗ , " ಏನೇ ಹಾಗೆ ನೋಡ್ತೀಯಾ ? ಸರಿಯಾಗಿ ಎರಡು ಲಕ್ಷವಿದೆ . ಎಲ್ಲವೂ ನಿನ್ನದೇ . ನಿನ್ನ ಯಜಮಾನರನ್ನು ಉಳಿಸಿಕೋ . ಮಕ್ಕಳ ಮದುವೆ ಮಾಡು " ಎಂದಳು . " .....ಅಂದ್ರೆ ? " " ಅಂದ್ರೂ ಇಲ್ಲ , ಏನೂ ಇಲ್ಲ . ಇವೆಲ್ಲ ನಿನ್ನದೇ . ನೀನು ಕಷ್ಟಪಟ್ಟು ಉಳಿಸಿದ ಹಣ . ನೀನು ಪ್ರತಿ ತಿಂಗಳೂ ನನ್ನ ಕೈಲಿ ಕೊಡುತ್ತಿದ್ದೆಯಲ್ಲ .... ಅದನ್ನೆಲ್ಲಾ ನಿನ್ನ ಹೆಸರಲ್ಲೇ ಬ್ಯಾಂಕಿನಲ್ಲಿಟ್ಟಿದ್ದೆ . ಈಗ ನಿನಗೆ ಹಣದ ಅಗತ್ಯವಿದೆಯೆಂದು ತಿಳಿದು ಎಲ್ಲಾ ತಂದಿದ್ದೇನೆ " ಎಂದಾಗ , ಅಷ್ಟು ಹಣ ಜೀವಮಾನದಲ್ಲಿ ನೋಡಿರದಿದ್ದ ನನಗೆ ಹೃದಯಾಘಾತವಾಗದಿದ್ದುದೇ ಅಚ್ಚರಿ . ಇದು ನಾನು ಉಳಿಸಿದ ಹಣ ಎಂಬ ಭಾವನೆಯೇ ರೋಮಾಂಚನ ಉಂಟು ಮಾಡಿತು . ನೋಟಿನ ಕಟ್ಟನ್ನು ಮತ್ತೆ ಮತ್ತೆ ನೇವರಿಸಿದ್ದೆ .


ಈ ಹಣವನ್ನು ನಾನು ಅದೆಷ್ಟು ಕಷ್ಟಪಟ್ಟು ಉಳಿಸಿದ್ದೆ . ಗಂಡ ಬಂದ ಸಂಬಳವನ್ನೆಲ್ಲಾ ನನ್ನ ಕೈಗೆ ಹಾಕಿ

ನಿಶ್ಚಿಂತರಾದರೆ , ನಾನು ದುಂದುವೆಚ್ಚ ಮಾಡದೆ ಆದಷ್ಟು ಹಣ ಉಳಿಸುತ್ತಿದ್ದೆ . ಗಂಡನಿಗೆ ಸರ್ಕಾರಿ ಕೆಲಸವಿಲ್ಲ , ಹಿರಿಯರ ಆಸ್ತಿಯಿಲ್ಲ , ಆಪತ್ಕಾಲಕ್ಕೆ ಆಗುವ ಅಪ್ಪನ ಮನೆಯಿಲ್ಲ . ಮುಂದೆ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಬಾರದೆಂದು ಒಂದು ಪೈಸೆಯನ್ನೂ ಅನಾವಶ್ಯಕವಾಗಿ ಖರ್ಚು ಮಾಡುತ್ತಿರಲಿಲ್ಲ . ಮದುವೆಯಾಗಿ ಎಷ್ಟೋ ವರ್ಷಗಳ ಕಾಲ ಹೊಸ ಸೀರೆಯನ್ನೇ ನಾನು ಕೊಂಡಿರಲಿಲ್ಲ . ಅದೇ ಹಣವನ್ನು ಜಾಹ್ನವಿಯ ಕೈಯಲ್ಲಿಡುತ್ತಿದ್ದೆ . ಇದರಿಂದ ನಾನೆಷ್ಟೋ ಬಾರಿ ನೆಂಟರಿಷ್ಟರಿಂದ ಅಪಹಾಸ್ಯಕ್ಕೊಳಗಾಗಿದ್ದೆ . ಹತ್ತು ರೂಪಾಯಿ ಖರ್ಚಿಗೆ ಕೊಟ್ಟರೆ ಒಂಬತ್ತೇ ಕೊಟ್ಟಿದ್ದಾರೆ ಎಂದು ಭಾವಿಸಿ ಒಂದು ರೂಪಾಯಿಯನ್ನು ಡಬ್ಬಿಗೆ ಹಾಕುತ್ತಿದ್ದೆ . ನನ್ನ ಕೈ ಹಿಡಿತದಿಂದ ಮಕ್ಕಳಿಗೂ ಎಷ್ಟೋ ಬಾರಿ ಬೇಸರವಾಗುತ್ತಿತ್ತು . " ಬಡವರ ಮನೆಯಲ್ಲಿ ಹುಟ್ಟಲೇಬಾರದು . ಆಸೆಗಳನ್ನೆಲ್ಲಾ ಒಳಗೇ ಅದುಮಿ ಬದುಕುವುದಾದರೆ ಏತಕ್ಕೆ ....? " ಎಂದು ಎದುರೆದುರೇ ನುಡಿಯುತ್ತಿದ್ದರು . ಅದನ್ನೆಲ್ಲಾ ನಾನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ . ಆದರೆ , ಅವರ ಊಟ ,ಬಟ್ಟೆ , ವಿದ್ಯೆಗೆ ತೊಂದರೆ ಮಾಡಲಿಲ್ಲ .



ಹೀಗೆ ಹನಿ ಹನಿಯಾಗಿ ಉಳಿಸಿದ ಹಣ ಈ ಇಪ್ಪತ್ತೈದು ವರ್ಷಗಳಲ್ಲಿ ದೊಡ್ಡ ಗಂಟಾಗಿ ನನ್ನ ಆಪತ್ಕಾಲಕ್ಕೆ ಒದಗಿದೆ . ಅಂದು ನಾನು ಮನ ಬಂದಂತೆ ಖರ್ಚು ಮಾಡಿದ್ದರೆ ಇಂದು ಭಿಕ್ಷೆ ಬೇಡಬೇಕಾಗುತ್ತಿತ್ತು . ಹೀಗೆ ಆಲೋಚಿಸುತ್ತಾ ಕುಳಿತವಳನ್ನು ಎಚ್ಚರಿಸಿದವಳು ಜಾಹ್ನವಿಯೇ . " ಏನು ಯೋಚ್ನೆ ಮಾಡ್ತಾ ಇದ್ದೀಯಾ ? ಬೇಗ ಹೋಗಿ ಈ ವಿಷಯ ನಿನ್ನ ಯಜಮಾನರಿಗೆ ತಿಳಿಸು . ಬೇಗ ಗುಣ ಆಗ್ತಾರೆ " ಎಂದು ಕಳಿಸಿದ್ದಳು . ಇವರಿಗೆ ಈ ಸುದ್ದಿಯನ್ನು ತಿಳಿಸಲು ಬಂದವಳಿಗೆ ಎದುರಾದದ್ದು ದೊಡ್ಡ ಆಘಾತ . ಮಗ , ಹೆಂಡತಿ , ಮಕ್ಕಳು ಎಲ್ಲಾ ಇದ್ದೂ ಅನಾಥರಂತೆ ಯಾರೂ ಹತ್ತಿರದಲ್ಲಿಲ್ಲದ್ದಾಗ ಇಹಲೋಕದ ಯಾತ್ರೆ ಮುಗಿಸಿದ್ದರು . " ದೇವರು ನಮ್ಮ ಕೈ ಬಿಡಲಿಲ್ಲ " ಎಂದು ಹೇಳುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ .


ಧೈರ್ಯ ತಂದುಕೊಂಡು ಮುಂದಿನ ಕೆಲಸಕ್ಕೆ ಅಣಿಯಾದೆ . ಒಬ್ಬರಿಂದೊಬ್ಬರಿಗೆ ವಿಷಯ ತಿಳಿದು ಮಗನಿಗೂ ವಿಷಯ ತಿಳಿಯಿತು . ನಿರ್ವಿಕಾರವಾಗಿ ಕರ್ಮಾಂತರಗಳನ್ನು ಮುಗಿಸಿದ . ಅವನಿಂದ ಒಂದು ಪೈಸೆಯನ್ನೂ ಖರ್ಚು ಮಾಡಿಸಲಿಲ್ಲ . ಎಲ್ಲಕ್ಕೂ ನಾನೇ ಒದಗಿಸಿದೆ . ಅಚ್ಚರಿಯಾದರೂ ಚಕಾರವೆತ್ತಲಿಲ್ಲ . " ಅಮ್ಮ , ಇದು ನನ್ನ ಕರ್ತವ್ಯ . ನಾನು ಮಾಡ್ತೇನೆ . ಹಣದ ಬಗ್ಗೆ ಯೋಚಿಸಬೇಡ ...." ಎಂದು ಒಂದೇ ಒಂದು ಸಾಂತ್ವನದ ಮಾತನಾಡಿದನೇ ? ಛೆ , ಮಕ್ಕಳಿಂದ ಯಾವ ಪ್ರತಿಫಲವನ್ನೂ ಬಯಸಬಾರದು . ಅವರನ್ನು ಒಂದು ನೆಲೆಗೆ ತರುವುದು ನಮ್ಮ ಕರ್ತವ್ಯವೆಂದು ಭಾವಿಸಬೇಕು ಎಂದು ನನಗೆ ನಾನೇ ಸಂತೈಸಿಕೊಂಡಿದ್ದೆ . " ಅಮ್ಮ , ಇನ್ನು ಯಾರಿದ್ದಾರೆ ಇಲ್ಲಿ . ಎಲ್ಲರೂ ಬನ್ನಿ ನನ್ನ ಜೊತೆ " ಎಂದು ಕರೆಯಲಿಲ್ಲ . ತಂಗಿಯರ ಜವಾಬ್ದಾರಿ ಎಲ್ಲಿ ತನ್ನ ತಲೆಗೆ ಕಟ್ಟುತ್ತೋ ಎಂದು ಯಾರೊಂದಿಗೂ ಮುಖ ಕೊಟ್ಟು ಮಾತಾಡಲಿಲ್ಲ . ಕಾರ್ಯಗಳೆಲ್ಲಾ ಮುಗಿದ ಮೇಲೆ " ಮುಂದೇನು ಮಾಡುತ್ತಿ ? " ಎಂದು ಬಾಯಿ ಮಾತಿಗೂ ಕೇಳದೆ ತನ್ನ ದಾರಿ ಹಿಡಿದಿದ್ದ ಮಗನ ಮೇಲೆ ಅಂದೇ ನನಗೆ ಮನಸ್ಸು ಮುರಿದು ಹೋಗಿತ್ತು . ಹಾಗಾಗಿ ಹಣದ ವಿಷಯವನ್ನು ಅವನಿಗೆ ತಿಳಿಸಲೇ ಇಲ್ಲ .



ಹೆಣ್ಣು ಮಕ್ಕಳೇನು ಕಮ್ಮಿ ಎಂದು ತಿಳಿಯಬೇಡಿ . ಇದ್ದ ಅಪ್ಪನೂ ಹೋದ , ಅಣ್ಣ ಇದ್ದೂ ಇಲ್ಲದಂತಾಗಿದ್ದಾನೆ . ಕೆಲಸವೂ ಇಲ್ಲ . ಇನ್ನು ನಮ್ಮ ಮದುವೆ ಕನಸೇ ಸರಿ ಎಂದೆಲ್ಲಾ ಯೋಚಿಸುತ್ತಿದ್ದರು . ನನಗೆ ಕೇಳಿಸುವಂತೆಯೇ ನಿಟ್ಟುಸಿರು ಬಿಡುತ್ತಿದ್ದರು . ಸಣ್ಣ ಸಣ್ಣ ಮಾತಿಗೂ ಸಿಡಿದೇಳುತ್ತಿದ್ದರು . ಅವರ ಬೇಸರ ನನಗರ್ಥವಾಗಿಯೇ ಜಾಹ್ನವಿಯ ಸಹಾಯದಿಂದ ವರ ಹುಡುಕಿ ಇಬ್ಬರ ಮದುವೆಯನ್ನೂ ಒಟ್ಟಿಗೆ ನಡೆಸಿದೆ . ಹೀಗೆ ಮೂರು ಮಕ್ಕಳ ಬಣ್ಣ ಬಯಲಾಗಿದ್ದರಿಂದಲೇ ಹಣದ ವಿಷಯವನ್ನು ಎಲ್ಲರಿಂದಲೂ ಮುಚ್ಚಿಟ್ಟೆ . ಹೆಣ್ಣು ಮಕ್ಕಳಿಗೂ ಆಶ್ಚರ್ಯವಾಗಿದೆ . ಆದರೂ , ಸದ್ಯ ಹೇಗೋ ಏನೋ ನಾವಂತೂ ಪಾರಾದೆವಲ್ಲ ಎಂದು ಅಮ್ಮನ ಯೋಚನೆಯೇ ಇಲ್ಲದೆ ನಡೆದಿದ್ದರು . ಇದು ಹೀಗೆಯೇ ಆಗುತ್ತೆ ಎಂದುಕೊಂಡೇ ನಾನು ಮದುವೆಗೆ ಅಗತ್ಯವಿರುವಷ್ಟು ಹಣ ತೆಗೆದಿಟ್ಟು ಮಿಕ್ಕ ಹಣವನ್ನು ವೃದ್ಧಾಶ್ರಮಕ್ಕೆ ಕೊಟ್ಟು ನನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದೆ ......



 ಸರೋಜಮ್ಮ ಯೋಚಿಸುತ್ತಾ ಕುಳಿತಿರುವಾಗಲೇ ಅವರ ಸ್ನೇಹಿತೆ ಜಾಹ್ನವಿ ಬಂದವಳೇ , " ಯಾಕೆ ಸರೋಜ ಕತ್ಲೆಲಿ ಕುಳಿತಿದ್ದಿ ?" ಎಂದು ಲೈಟು ಹಾಕಿದರು . " ಇಲ್ಲ ಕಣೆ ಜಾಹ್ನವಿ , ನಿಜಕ್ಕೂ ಈಗ ನನ್ನ ಬಾಳಲ್ಲಿ ಬೆಳಕು ಮೂಡಿದೆ . ಮಕ್ಕಳನ್ನೆಲ್ಲಾ ಒಂದು ದಡ ಸೇರಿಸಿದ್ದೇನೆ . ಇನ್ನು ಅವರವರ ಬದುಕು ಅವರದು . ಸಂಸಾರದ ಜವಾಬ್ದಾರಿಗಳೆಲ್ಲವನ್ನೂ ಮುಗಿಸಿದ ಆನಂದದಲ್ಲಿ ಆಶ್ರಮ ಸೇರುತ್ತಿದ್ದೇನೆ . ನನ್ನವರಿಗೆ ಕೊಟ್ಟ ಮಾತು ಉಳಿಸಿಕೊಂಡು ಕತ್ತಲಿಂದ ಬೆಳಕಿನೆಡೆ ಸಾಗುತ್ತಿದ್ದೇನೆ . ನನ್ನ ಈ ಕೆಲಸದಲ್ಲಿ ದಾರಿ ತೋರಿಸಿದ ನಿನಗೆ ನಾನು ಸದಾ ಋಣಿ ಕಣೆ ...." ಎಂದು ಸ್ನೇಹಿತೆಯ ಕೈಗಳನ್ನು ಕಂಬನಿ ತುಂಬಿದ ತಮ್ಮ ಕಣ್ಣುಗಳಿಗೆ ಒತ್ತಿಕೊಂಡರು .        



Rate this content
Log in

Similar kannada story from Drama