Lakshmi Kanth L V

Drama Tragedy Thriller

4.3  

Lakshmi Kanth L V

Drama Tragedy Thriller

ಉತ್ತರವಿಲ್ಲದ ಮೌನ

ಉತ್ತರವಿಲ್ಲದ ಮೌನ

3 mins
351


ಏನಿದು..!! ಇಷ್ಟೊತ್ತಾದರೂ ನಾ ಇಳಿಯಬೇಕಿರುವ ಸ್ಥಳ ಬರಲೇ ಇಲ್ಲ. ಈ ಬಸ್ ಯಾಕೆ ಇಷ್ಟು ಸ್ಲೋ ಆಗಿ ಹೋಗ್ತಿದೆ ಎಂದು ಅಂದುಕೊಂಡು ಹಾಗೆ ಕಣ್ಮುಚ್ಚಿಕೊಂಡು ನಿದಿರೆಗೆ ಜಾರಿದ್ದೆ. ಧಡ್...........!!!!!! ಇದ್ದಕ್ಕಿದ್ದಂತೆ ಶಬ್ದ ಕೇಳಿ ಎಚ್ಚರಗೊಂಡೆ. ಎಲ್ಲೆಲ್ಲೂ ಅಯ್ಯೋ...!! ಅಮ್ಮಾ...!! ನೋವು...!! ಎಂದೆಲ್ಲಾ ಕಿರುಚಾಡುತ್ತಿರುವ ದನಿಗಳು. ಟೆನ್ಶನ್‌ನಿಂದ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿರುವ ಜನರು. ಸುತ್ತಲೂ ಜಾಮ್ ಆಗಿ ನಿಂತಿರುವ ವಾಹನಗಳು. ಏನಾಯ್ತು? ಎಂದು ನೋಡುವಷ್ಟರಲ್ಲಿ ಯಾರೋ ಒಬ್ಬ ಅಯ್ಯೋ ಪಾಪ.. ಹೀಗಾಗಬಾರದಿತ್ತು..! ಅವರ ಸಂಬಂಧಿಕರಿಗೆ ಫೋನ್ ಮಾಡಿ ಎಂದಿದ್ದಕ್ಕೆ ಇನ್ನೊಬ್ಬ ನನ್ನ ಪಾಕೆಟ್‌ಗೆ ಕೈ ಹಾಕಿ ಮೊಬೈಲ್ ಹುಡುಕುತ್ತಿದ್ದ. ನಾನು ಹೇ.. ಯಾಕೆ ನನ್ನ ಪಾಕೆಟ್‌ಗೆ ಕೈ ಹಾಕುತ್ತಿದ್ದೀಯ? ಎಂದು ಅವನನ್ನು ತಡೆಯಲು ಪ್ರಯತ್ನಿಸಿದೆ. ಅಯ್ಯೋ.. ಅವನನ್ನು ಮುಟ್ಟಲಾಗುತ್ತಿಲ್ಲ. ನೋಡಿದರೆ ನನ್ನದೇ ದೇಹ ಅಲ್ಲಿ ರಕ್ತಸಿಕ್ತವಾಗಿ ಸೀಟ್ ಮೇಲೆ ಬಿದ್ದಿದೆ. ಅದು ನಾನೇನಾ..? ಒಮ್ಮೆಲೆ ಯೋಚಿಸಿದರೆ, ಹೌದು ಅದು ನಾನೆ. ಯಾವುದೋ ಲಾರಿಯೊಂದು ಓವರ್‌ಟೇಕ್ ಮಾಡುವಲ್ಲಿ ವಿಫಲವಾಗಿ ನಾ ಕೂತಿದ್ದ ಬಸ್‌ನ ಪಕ್ಕಕ್ಕೆ ಜೋರಾಗಿ ಉಜ್ಜಿದೆ. ಲಾರಿಯ ಕಂಬಿಯೊಂದು ನನ್ನ ಎದೆಯೊಳಗೆ ಹೊಕ್ಕಿದೆ. ಕ್ಷಣಾರ್ಧದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ.

ನನ್ನ ಮೊಬೈಲ್‌ನಿಂದ ಲಾಸ್ಟ್ ಕಾಲ್ ಮಾಡಿದ್ದ ನಂಬರ್‌ಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದ ಒಬ್ಬ. ಸ್ವಲ್ಪ ಹೊತ್ತಿನ ಬಳಿಕ ನನ್ನ ಸ್ನೇಹಿತರು, ಅಪ್ಪ ಅಮ್ಮ ಎಲ್ಲರೂ ಏದುಸಿರು ಬಿಡುತ್ತಾ ಬಂದು ಅಯ್ಯೋ ಎಂದು ಗೋಳಿಡುತ್ತಿದ್ದುದು ನೋಡಿ ನಾನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಸ್ನೇಹಿತನಿಗೆ ಹೇ.. ನನಗೇನು ಆಗಿಲ್ವೋ!! ಅಂತ ಕಿರುಚಿದೆ. ನನ್ನ ಮಾತು ಅವರಿಗ್ಯಾರಿಗೂ ಕೇಳಿಸುತ್ತಿಲ್ಲ. ಎಲ್ಲರೂ ನನ್ನ ದೇಹವನ್ನು ಹೊತ್ತೊಯ್ದು ಆಂಬುಲೆನ್ಸ್ ಒಳಗೆ ಇಟ್ಟು ಹೊರಟರು.

ಅಲ್ಲಿ ತಾಯಿಯ ಆರ್ತನಾದ ಮುಗಿಲು ಮುಟ್ಟುವಂತೆ ಕೇಳಿಸುತ್ತಿತ್ತು, ಮಗನನ್ನು ಕಳೆದುಕೊಂಡ ಜೀವಕ್ಕೆ ತನ್ನೆಲ್ಲ ಶಕ್ತಿಯು ಕಳೆದುಕೊಂಡಂತೆ, ರೋಧಿಸುತ್ತ ಮಗನನ್ನು ಬಲವಾಗಿ ತಬ್ಬಿ, ಇನ್ನಷ್ಟು ಬಿಕ್ಕಳಿಸುತ್ತಿದ್ದರೆ, ಎಲ್ಲರಿಂದಲೂ ನಾನು ದೂರ ಹೋಗಿದ್ದೆ..! ನೀರವ ಮೌನ, ಅಮ್ಮ ಮಗನ ತಲೆಯನ್ನು ನೇವರಿಸುತ್ತ ಪದೇ-ಪದೇ ಕೇಳುತ್ತಿದ್ದಾಳೆ, ಏನಾದರು ಮಾತಾಡು ಕಂದ, ಏನಾದರು ಹೇಳು, ಏನಾಗಿದೆ ನಿಂಗೆ? ಯಾವುದಕ್ಕೂ ಉತ್ತರವಿಲ್ಲದ ಮೌನ..

ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸಾವಿನ ವಿಷಯದ ಸುಳಿವು ಅವಳಿಗೂ ತಿಳಿಯಿತು, ಅವಳ ಮನಸ್ಸು ಅವಳಿಗೆ ಗೊತ್ತಿಲ್ಲದೇನೇ ಅಳಲಾರಂಭಿಸಿತ್ತು. ಮಾನವೀಯತೆಗೆ ಅವಳ ಮನಸ್ಸಿನಲ್ಲಿ ಜೀವ ಬಂದಿತ್ತು. ಕಲ್ಲಾಗಿದ್ದ ಹೃದಯ ಕರಗುತ್ತಿದ್ದಂತೆ ಭಾಸವಾಗತೊಡಗಿತ್ತು, ಕನಿಕರದ ನೀರಾಗಿ ಹರಿಯುತ್ತ, ಕೊನೆಯ ಬಾರಿಗೆ ಮುಖ ನೋಡಲು ಬಂದಳು. ತನ್ನ ತಪ್ಪಿನ ಅರಿವಾಗಿ ತನ್ನನ್ನು ಪ್ರೀತಿಸುತ್ತಿದ್ದವನು ಏನಾದರೂ ಬದುಕಬಹುದು! ನನ್ನಿಂದ ಉಳಿಸಲು ಸಾಧ್ಯವಾಗಬಹುದೆಂದು ಓಡೋಡಿ ಬಂದಳು... ಆದರೆ ಎಲ್ಲವೂ ಏನಿಲ್ಲ. ಬಂದೊಡನೆ, ಏನು ಮಾಡಲು ತಿಳಿಯದೆ ದೂರದಿಂದಲೇ ನೋಡುತ್ತಿದ್ದಾಳೆ. ಅವಳಿಗೂ ಭಯವಿತ್ತು, ಇಷ್ಟೊಂದು ಜನರಿದ್ದಾರೆ, ನಾನು ಹೇಗೆ ಪ್ರತಿಕ್ರಿಯಿಸಲಿ ಎಂಬ ಅಂಜಿಕೆಯಿಂದ ಹಿಂದೆ ಸರಿದಳು, ಕಣ್ಣಲ್ಲಿ ಕಂಬನಿಯು ತುಂಬಿ ಬಂದರೂ, ಕಣ್ಮುಚ್ಚಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ದೇವರೆ ದಯವಿಟ್ಟು ಅವನನ್ನು ಬದುಕಿಸು ಎಂದು. ಆದರೆ ಅದಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು..!! ಅವಳು ನಿಂತಲ್ಲಿಯೇ ಈ ದೃಶ್ಯವನ್ನು ನೋಡಿ, ಕುಸಿದು ಬಿದ್ದಳು..!!

ವಿಧಿ-ವಿಧಾನಗಳೆಲ್ಲ ಮುಗಿದ ಮೇಲೆ, ಸ್ಮಶಾನದಲ್ಲಿ ಎಲ್ಲರೂ ಹೊರಟು ಹೋದಮೇಲೆ, ಇವಳು ಸಮಾಧಿಯ ಮೇಲೊಂದು ಹೂವನಿಟ್ಟು ಕಣ್ಗಳಲ್ಲಿ ನೀರು ತುಂಬಿಕೊಂಡು ತನ್ನೆಲ್ಲ ತಪ್ಪುಗಳನ್ನು ಮನ್ನಿಸುವಂತೆ ಕೇಳಿಕೊಂಡು ಮುಂದೆ ಹೆಜ್ಜೆ ಹಾಕತೊಡಗಿದಳು. ಇದೆಲ್ಲವನ್ನು ಗಮನಿಸುತ್ತಿದ್ದ ನನಗೆ, ಕ್ಷಣಾರ್ಧದಲ್ಲಿ ಅವಳನ್ನು ಕೂಗಿ ಕೂಗಿ ಕರೆಯತೊಡಗಿದೆ? ಅವಳು ತನ್ನ ಪಾಡಿಗೆ ತಾನು ಬಿಕ್ಕಳಿಸುತ್ತ, ಕಣ್ಣೀರು ಒರೆಸಿಕೊಳ್ಳುತ್ತ ಹೋಗುತ್ತಿದ್ದಳು. ನಾÀನು ಕೂಗುತ್ತ, ನಿಲ್ಲು ಎನ್ನುತ್ತ ಓಡೋಡಿ ಬಂದು ಅವಳ ಕೈಯನ್ನು ಹಿಡಿಯಲು ಪ್ರಯತ್ನಿಸಿದೆÀ!? ಆದರೆ.......?????!!!!! ಇಳಿ ಸಂಜೆಯ ಆ ಹೊತ್ತಿನಲ್ಲಿ ಸ್ಮಶಾನದ ನೀರವ ಮೌನದ ತನ್ನವರಿಲ್ಲದ, ತನ್ನ ವ್ಯಥೆಯನ್ನು ಯಾರಿಗೂ ಹೇಳಲಾಗದ ಪರಿಸ್ಥಿತಿಯನ್ನು ನೋಡಿಕೊಂಡು, ಅಳುತ್ತಲಿದ್ದೆ. ಒಂಟಿ...ಒಬ್ಬಂಟಿಯಾಗಿ...!! ಅದಾಗಲೆ ಅವಳು ಮರೆಯಾಗಿದ್ದಳು...!

ಬಾಳನ್ನು ಬೆಳಕಾಗಿಸಿಕೊಳ್ಳುವ ಕೋಟಿ ಕನಸುಗಳನ್ನು ಹೊತ್ತು, ಅವಳ ಬಳಿ ಪ್ರೀತಿಯ ನಿವೇದನೆಯ ಮೊಂಬತ್ತಿ ಹಚ್ಚಿದ್ದಕ್ಕೆ, ಕ್ಷಣಾರ್ಧದಲ್ಲಿ ‘ಉಫ್’ ಎಂದು ಆರಿಸಿ ಬದುಕನ್ನೇ ಕತ್ತಲಾಗಿಸಿಬಿಟ್ಟಳು..! ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವನನ್ನು, ಅವಳ ಕಲ್ಲು ಹೃದಯದಿಂದ ಮನಸ್ಸಿನ ಕನ್ನಡಿಗೆ ಹೊಡೆದು ಚೂರು ಮಾಡಿಬಿಟ್ಟಿದ್ದಳು, ಉದ್ವೇಗದಿಂದ ಉಸಿರೇ ಅವಳಾಗಿದ್ದ ನನ್ನನ್ನು; ಉಸಿರೇ ಬಿಟ್ಟು ಬಿಡು ಎಂದಳು!, ಹೂ-ಬಾಣದಂತೆ ಅವಳ ಕಣ್ಣು ಎಂದು ವರ್ಣಿಸುತ್ತಿದ್ದವನಿಗೆ, ಅವಳ ನಿರಾಕರಣೆಯ ಬಾಣ ಎದೆಯನ್ನು ಸೀಳಿ ಹಾಕಿತ್ತು. ನಿಜಕ್ಕೂ ಸ್ವಚ್ಛ 'ಪ್ರೀತಿ’ಯಿಂದ ತನ್ನ ಭವಿಷ್ಯದ ರೂಪು-ರೇಷೆಗಳನ್ನೆಲ್ಲ ಮರೆತು, ಸದಾ ಅವಳ ಗುಂಗಿನಲ್ಲಿ ತನ್ಮಯತೆಯಿಂದ ನನ್ನನ್ನೇ.. ಮರೆಯುತ್ತಿದ್ದೆ, ದಿನದ ಎಲ್ಲಾ ಪುಟಗಳಲ್ಲಿಯೂ ಅವಳ ಹೆಸರಿತ್ತು, ಅವಳದೆ ನೆನಪಿತ್ತು, ಅವಳದೇ... ಎಲ್ಲಾ....! ಅವಳು ಈ ಪ್ರೀತಿಯ ಪವಿತ್ರತೆಯನ್ನು ಅರ್ಥ ಮಾಡಿಕೊಳ್ಳದೆ ನಿರಾಕರಿಸಿ ನೀನು ‘ಸಾಯಿ' ಎಂದ ಮರುಕ್ಷಣವೇ ಕನಸುಗಳ ಗೋಪುರ ನೆಲಕ್ಕುರುಳಿತ್ತು. ಇದೇ ನೋವಿನ ಗುಂಗಲ್ಲಿ ಬಸ್ ಏರಿದ್ದವನು ನಿಜಕ್ಕೂ ಲೋಕದಿಂದಲೇ ಕಣ್ಮರೆಯಾಗಿದ್ದೆ.

ಈ ಬದುಕೊಂಥರಾ ಹೀಗೆ..!? ಯಾರನ್ನೋ ಇಷ್ಟಪಡ್ತೀವಿ, ಇಷ್ಟಪಟ್ಟವರ ಜೊತೆ ಬದುಕದೇ ಯಾರ ಜೊತೆಗೋ ಬದುಕ್ತೀವಿ, ಬೇಡವಾದವರನ್ನ ನೆನಪು ಮಾಡ್ಕೋತ್ತೀವಿ, ಬೇಕಿರುವವರು ನೆನಪಿಗೆ ಬಾ ಅಂದರೂ ಬರುವುದಿಲ್ಲ. ಕೆಲವರನ್ನ ಮರೆತೀವಿ, ಇನ್ನೂ ಕೆಲವರನ್ನ ನೆನಪು ಮಾಡಿಕೊಂಡು ಕೊರಗ್ತೀವಿ.. ಕೆಲವು ಸಾರಿ ನಮ್ಮವರು ಜೊತೆಗಿದ್ದರೂ ಅವರನ್ನು ಮಿಸ್ ಮಾಡ್ಕೊತಿವಿ. ಅವರು ಜೊತೆಯಲ್ಲದೆ ಆಳುತ್ತೇವೆ. ಒಮ್ಮೆ ಏನನ್ನೋ ಬಯಸೊ ಮನಸು ಇನ್ನೊಮ್ಮೆ ಮತ್ತೇನನ್ನೋ ಬಯಸುತ್ತೆ. ಇದಕ್ಕೆ ಕಾರಣ ಏನೆಲ್ಲಾ ಇರಬಹುದು. ಆದರೆ ಮನಸು ಮಾತ್ರ ಒಂದೇ ತಾನೆ. ಅದನ್ನು ಒಬ್ಬರಿಗೆ ಮಾತ್ರ ನೀಡಲು ಸಾಧ್ಯ ಅಲ್ವಾ..? ಇದನ್ನು ಅರಿಯದೇ ಎಡವಿ ಮಾತನಾಡುವ ಸಣ್ಣ ನೋವಿನ ನುಡಿಗೆ ಇಷ್ಟೊಂದು ದೊಡ್ಡ ಶಿಕ್ಷೆಯಾ? ಏನ್ ಲೈಫ್ ರೀ ಇದು..?


Rate this content
Log in

Similar kannada story from Drama