ದ್ವೀಪವೋ? ಶಾಪವೋ!
ದ್ವೀಪವೋ? ಶಾಪವೋ!
ಭಾಗ - ೧
ಕಗ್ಗತ್ತಲೆಯ ಕಾಡಿನಲ್ಲಿ
ಹೆಮ್ಮೆಯ ಕನ್ನಡ ನಾಡು,
ಅಲ್ಲೊಂದು ದಟ್ಟ ಕಾಡು.
ಕಾಡಿನೊಳಗೊಂದು ಬೀಡು,
ಅದರಲ್ಲಿ ಅವರ ಜೀವನ ಪಾಡು.
ಕಗ್ಗತ್ತಲೆಯ ಕಾಡಿನಲ್ಲಿ
ಕಾಡು ಪ್ರಾಣಿಗಳ ಭಯ.
ಆತ್ಮ ವಿಶ್ವಾಸ ಇದ್ದರು
ಸಂಕಟಗಳಿಗೆ ಮಾತ್ರ ಅಲ್ಲಿ ಜಯ.
ದಟ್ಟ ಕಾಡು, ಸುತ್ತಲೂ ಗುಡ್ಡಗಾಡು, ಹಚ್ಚ ಹಸಿರಿನಿಂದ ಕೂಡಿರುವ ಅಲ್ಲಿನ ಜನರ ಬೀಡು.ಅದೊಂದು ಸುಂದರ ದ್ವೀಪದಂತಹ ಪ್ರದೇಶ. ಜನಜೀವನವನ್ನು ಆವರಿಸಿರುವ ಶರಾವತಿಯ ಹಿನ್ನೀರು ಅವರಿಗೆ ಜೀವನದ ಒಂದು ಭಾಗದಂತಾಗಿತ್ತು. ಜನರು ಒಂದು ದಡದಿಂದ ಇನ್ನೊಂದು ದಡವನ್ನು ಸೇರಲು ಬೆಳಗಿನ ಸೂರ್ಯೋದಯವನ್ನು ಕಾಯಬೇಕು ಮತ್ತು ಸಂಜೆಯ ಸೂರ್ಯಾಸ್ತ ಆದ ನಂತರ ಯಾರಿಗೂ ಅತ್ತ ಕಡೆ ಮತ್ತು ಇತ್ತ ಕಡೆ ಪ್ರವೇಶವಿಲ್ಲ. ಅಗತ್ಯಗಳು ಏನೇ ಇರಲಿ ಅಲ್ಲಿರುವ ಬಡವನಾಗಲಿ, ಸಿರಿವಂತನಾಗಲಿ ಎಲ್ಲರೂ ಈ ನಿಯಮ ಉಲ್ಲಂಘಿಸದೆ ಬೇರೆ ಅವಕಾಶಗಳೇ ಇಲ್ಲ. ಜನರ ಪರದಾಟದ ನಡುವೆ ಅಲ್ಲಿನ ಜನರಿಗೆ ದೊರೆತಿದ್ದು ಭರವಸೆಯೆಂಬ ಕನಸಿಗೂ ನಿಲುಕದ ಆಸೆಗಳು ಮಾತ್ರ. ಹೇಳುವುದಕ್ಕೆ ಎಲ್ಲ ಸೌಲಭ್ಯ ಜನರ ಬಾಗಿಲನ್ನು ತಲುಪಿದೆ. ಆದರೆ, ವಾಸ್ತವ ಅನ್ನುವ ಲೋಕದಲ್ಲಿ ಎಲ್ಲವನ್ನೂ ಅರಿಯಲು ಒಂದೆರಡು ವಾರಗಳು ಅಲ್ಲಿ ಕಳೆದರೆ ಸಾಕು. ಜನರು ತಮ್ಮ ದಿನನಿತ್ಯದ ಜೀವನಕ್ಕೆ ಹೇಗೆಲ್ಲಾ ಕಟ್ಟು ಪಾಡುಗಳನ್ನು ಎದುರಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದು. ಅದೆಸ್ಟೋ ಪ್ರತಿಭೆ ಆ ಮಣ್ಣಿನಲ್ಲಿ ಹೊರ ಪ್ರಪಂಚಕ್ಕೆ ಕಾಲಿಡಲು ಆಗದೆ ಅಲ್ಲಿನ ಮಣ್ಣಿನಲ್ಲಿಯೇ ಮುದುಡಿ ಹೋಗುತ್ತಿದೆ. ಅಲ್ಲಿನ ಜೀವನಕ್ಕೂ, ಹೊರಗಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ಒಂದು ಇದೇ ಎಂದು ಹೇಳುವುದರಲ್ಲಿ ಇನ್ನೊಂದು ಇಲ್ಲದಂತಾಗಿದೆ. ಅಲ್ಲಿರುವ ಒಂದು ಪುಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಾಗಿಯು ಜನರು ಕೇಳಿ ಪಡೆದುಕೊಳ್ಳುವ ಒಂದು ದೌರ್ಭಾಗ್ಯದಂತಾಗಿದೆ. ಯಾಕೆ ಇದೆಲ್ಲ ಎಂಬ ಇದೇ ರೀತಿ ಉತ್ತರ ಸಿಗದ ಹಲವಾರು ಪ್ರಶ್ನೆಗಳನ್ನು ಜನರು ಇನ್ನೂ ಎದುರಿಸುತ್ತಿರುವ ಒಂದು ಪುಟ್ಟ ದ್ವೀಪ ಪ್ರದೇಶ. ಅಲ್ಲಿನ ಜೀವನವನ್ನು ವಿವರಿಸಿದರು ತುಂಬಾ ಕಡಿಮೆ. ಅದನ್ನು ಅಲ್ಲಿನ ಜನತೆಗೆ ಹೊರತು ಯಾರಿಗೂ ಅಷ್ಟು ಸುಲಭವಲ್ಲ. ವಿವರಿಸಿದರು ಅಲ್ಲಿನ ಜನರ ಭಾವನೆಗಳಿಗೆ ಸೀಮಿತವಾಗಿ ವಿವರಿಸಿದ್ದಾರೆ ಎಂದು ಹೇಳುವುದು ತುಂಬಾ ಕಷ್ಟ. ಅದೆಷ್ಟೋ ಬಾರಿ ಆ ಮಾರ್ಗದಲ್ಲಿ ಚಲಿಸುವ ಕೊನೆಯ ಬಸ್ಸನ್ನು ಹಿಡಿಯಲು ವಿಫಲಗೊಂಡ ಜನರು ಬೆಳಗಿನ ಸೂರ್ಯೋದಯ ಕಾಯಬೇಕಿತ್ತು ತಮ್ಮ ಮನೆಯ ತಲುಪಲು. ಈಗಿನ ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರನ್ನು ತಮ್ಮ ಮನೆಗಳಿಗೆ ಕರೆದೊಯ್ಯುವ ಆಸೆ, ಹಾಗೆಯೇ ಇಲ್ಲಿಯೂ ಕೂಡ ಇಲ್ಲಿನ ವಿದ್ಯಾರ್ಥಿಗಳು ಅಂತಹ ಆಸೆಗೆ ಕಟ್ಟುಬಿದ್ದರು ಪ್ರಯಾಣದ ಲೋಪಗಳ ಲೆಕ್ಕಾಚಾರ ಹಾಕಿ ಸುಮ್ಮನಾಗಿದ್ದಾರೆ.
ಮೊದಲೇ ಹೇಳಿದಂತೆ ಅಲ್ಲಿನ ಪರಿಸರ ಬೆಟ್ಟ ಗುಡ್ಡಗಳಿಂದ ಕೂಡಿರುವ ಒಂದು ಸುಂದರ ಪ್ರದೇಶ. ಹಚ್ಚ ಹಸಿರಿನ ಮರಗಳು, ಆಗೊಮ್ಮೆ ಈಗೊಮ್ಮೆ ಬೀಸುವ ತಂಗಾಳಿ, ಹಕ್ಕಿಗಳ ಕಲರವ, ಯಾವ ಪ್ರದೇಶದಲ್ಲಿ ನೋಡಿದರು ಹರಿಯುವ ನೀರು ಮತ್ತು ನೀರಿನ ಜುಳು-ಜುಳು. ಅದು ಕಾಣುವುದಕ್ಕೆ ದ್ವೀಪ, ಆದರೆ ಅದೊಂದು ದ್ವೀಪದಂತಹ ಪ್ರದೇಶವಷ್ಟೆ. ನೀರಿನಲ್ಲಿ ಮುಳುಗಿದ ಪ್ರದೇಶದ ಜನರು ಆ ನೀರಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಜನರು ಉಪಯೋಗಿಸುತ್ತಿದ್ದ ಲಾಂಚ್ ನಾ ಸಮಯ ಮುಗಿದ ನಂತರ ಯಾರದ್ದೇ ತಲೆಯಲ್ಲಿ ಇನ್ನೊಂದು ದಡವ ತಲುಪುವ ಆಲೋಚನೆ ಇಲ್ಲವೇ ಅವಸರ ಬಂದಲ್ಲಿ ಅವರು ಬೆಳಗಿವರೆಗೂ ಕಾಯಬೇಕಿತ್ತು. ಇಲ್ಲವೇ ೨ ಕೀ.ಮೀ ಕ್ರಮಿಸಬೇಕಾದದನ್ನು ಕೂಡ ೧೦೦ ಕೀ.ಮೀ ಆಗಿ ಬದಲಾಗುತ್ತಿತ್ತು. ಇದೊಂದು ಜಾದೂಗಾರನ ಜಾದೂವಲ್ಲ, ಮಾಂತ್ರಿಕನ ಮಂತ್ರವು ಅಲ್ಲ, ಯಾವ ಶಕ್ತಿಯ ಮಾಯೆುಯು ಅಲ್ಲ. ಎಲ್ಲ ಅಲ್ಲಿನ ಮೂಲಸೌಕರ್ಯಗಳ ಅಂತರಾಳದ ಜನರ ತ್ಯಾಗದ ಫಲ.
ಅಂದೂಮ್ಮೆ ಮಳೆಯ ಅಬ್ಬರದಲಿ ಮುರಿದುಬಿದ್ದ ವಿದ್ಯುತ್ ಕಂಬಗಳು, ಮರ-ಬಳ್ಳಿಗಳು ಮತ್ತು ಸಣ್ಣಪುಟ್ಟ ಮನೆಗಳು. ಆ ಒಂದು ಮಳೆಯ ಆರ್ಭಟ ಅದೆಷ್ಟೋ ನಷ್ಟಕ್ಕೆ ಕಾರಣವಾಗಿತ್ತು. ಆ ಒಂದು ಪ್ರದೇಶದಲ್ಲಿ ಇಂತಹ ಘಟನೆಗಳು ಪ್ರತಿ ವರ್ಷದ ಮಳೆಗಾಲದಲ್ಲಿನ ಸಂದರ್ಭದಲ್ಲಿ ಸಹಜವಾಗಿ ಹೋಗಿತ್ತು. ಇಂದು ಹೋದ ವಿದ್ಯುತ್ ಮರು ಪೂರೈಕೆಗೂಳ್ಳಲು ಅದೆಷ್ಟು ದಿನಗಳು ಕಾಯಬೇಕಿತ್ತೆಂದರೆ, ಅಲ್ಲಿನ ಜನರು ಮಳೆಗಾಲದಲ್ಲಿ ಸರಿಯಾಗಿ ವಿದ್ಯುತ್ ದೀಪಗಳು ಉಳಿಯುವುದನ್ನು ನೋಡಲು ವಾರಗಳು ಕಾದರು ಕಡಿಮೆಯೇನು ಅಲ್ಲವಾಗಿತ್ತು. ಅದನ್ನು ಅನುಭವಿಸುವ ಆ ಮುಗ್ಧ ಜನರು ವಾಸಿಸುತ್ತಿರುವುದೇ ಕಗ್ಗತ್ತಲೆಯ ಕಾಡಿನಲಿ. ಎಲ್ಲಿ ನೋಡಿದರಲ್ಲಿ ಭೀಕರ ಕಗ್ಗತ್ತಲೆ. ಮಲೆನಾಡ ಕಾಡಿನ ಕ್ರಿಮಿಕೀಟಗಳ ವಿಚಿತ್ರ ಸದ್ದು,ಪ್ರಾಣಿಗಳ ಭಯ ಇವೆಲ್ಲವೂ ಅಲ್ಲಿನ ದಾರಿಯಲ್ಲಿ ಓಡಾಡುವುದು ಇರಲಿ ಹೊರಬರಲು ಸಹ ಅದೇನೋ ಭಯ. ಆ ಸುಂದರ ದ್ವೀಪ ಮಳೆಗಾಲದ ಕತ್ತಲಲ್ಲಿ ಭಯಾನಕವಾಗಿರುತ್ತಿತ್ತು. ಅಂತಹ ಭಯಾನಕ ರಾತ್ರಿಯಲ್ಲಿಯು ಸಹ ಅಲ್ಲಿ ಹೆದರಿಕೆ ಇಲ್ಲದೆ ಅಲ್ಲೊಂದು-ಇಲ್ಲೊಂದು ಎಂಬಂತೆ ಮನೆಯ ನಿರ್ಮಿಸಿಕೊಂಡು ಬದುಕಿನ ಬಂಡಿಯನ್ನು ಓಡಿಸುತ್ತಿರುವ ಅಲ್ಲಿನ ಜನರು ದ್ವೀಪದಲಿ ದೀಪದ ಬೆಳಕ ಹಿಡಿದು ಜೀವನ ಸಾಗಿಸಿದ ದಿನಗಳು ಇನ್ನೂ ಉತ್ತರ ಸಿಗದ ಹಲವಾರು ಪ್ರಶ್ನೆಗಳು. ಅದಾಗಲೇ ಆ ದ್ವೀಪದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚಾಗಿ ಎಲ್ಲೆಂದರಲ್ಲಿ ಸಣ್ಣ-ಸಣ್ಣ ಊರುಗಳು ಹುಟ್ಟಿಕೊಂಡಿದ್ದವು. ಈಗಲೂ ಅಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದ್ದರು ಅಲ್ಲಿನ ಜನರಿಗೆ ಇನ್ನೂ ಬದಲಾಗದ ಜೀವನ ಶೈಲಿ. ಅಂದು ಹೇಗಿತ್ತೋ, ಇಂದು ಹಾಗೆಯೇ ಇದೆ ಅಲ್ಲಿನ ಜನ ಜೀವನ. ಅದೆಷ್ಟು ವರ್ಷಗಳು ಉರುಳಿದರು ಭರವಸೆಗಳು ಹುಟ್ಟುತ್ತಲೆ ಇದೆ ಹೊರತು ಉಳಿದೆಲ್ಲವೂ ಹಾಗೆಯೇ ಇದೆ.
ಅಂದು ಮಳೆಗಾಲದ ಸಂಜೆ ವೇಳೆಗೆ ಆತ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ಶೀಘ್ರವೇ ಹಿಂತಿರುಗಿ ಬಂದಿದ್ದಾನೆ. ಮನೆಯಲ್ಲಿ ತನ್ನ ಪತ್ನಿಯೊಂದಿಗೆ ಸ್ವಲ್ಪ ಸಮಯ ಮಾತನಾಡಿ ಮನೆಗೆ ಬಾರದ ಹಸು-ಕರುಗಳ ಕುರಿತು ಚಿಂತಿತನಾದ ಪತಿಯು ಅವುಗಳನ್ನು ಕರೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಗೆ ನಡೆದಿದ್ದ. ನಮ್ಮ ಮಲೆನಾಡಿನ ಜನರು ಜಾನುವಾರುಗಳಿಗೆ ನೀಡುವ ಆ ಒಂದು ಸ್ಥಾನ ಮಹತ್ವವಾದದ್ದು. ಕತ್ತಲು ಆವರಿಸುತ್ತಲೇ ಇತ್ತು ಜಾನುವಾರುಗಳು ಮರಳಿ ಬಂದರೂ, ಜಾನುವಾರುಗಳ ಹೊಡೆದುಕೊಂಡು ಬರುವೆನೆಂದು ಹೇಳಿ ಹೋದ ಪತಿ ಇನ್ನೂ ಬಾರದಿರುವುದ ಕಂಡು ಹೆದರಿದ ಪತ್ನಿ ರಾತ್ರಿ ಸುಮಾರು ೧೦ ಗಂಟೆಗೆ ಏನು ಮಾಡಬೇಕೆಂದು ತಿಳಿಯದೆ ತನ್ನ ಮಕ್ಕಳನ್ನು ಪಕ್ಕದ ಮನೆಯಲ್ಲಿ ಬಿಟ್ಟು ಕೈಯಲ್ಲಿ ಬೆಳಕನ್ನು ಹಿಡಿದು ತನ್ನ ಪತಿಯನ್ನು ಹುಡುಕಿಕೊಂಡು ಹೊರಟಳು. ಎಷ್ಟು ಹುಡುಕಿದರು ಪತಿಯ ಸುಳಿವು ಸಿಗದೆ ಭಯವು ಹೆಚ್ಚಾಯಿತು. ಅದರ ಮಧ್ಯೆ ಕಪ್ಪುಗಳ ಕರ-ಕರ, ಕೀಟಗಳ ಕಿರ-ಕಿರ. ಈ ಶಬ್ದದ ಮಧ್ಯೆ ಅವಳ ಹುಡುಕಾಟ ವಿಫಲ ಯತ್ನವಾಗಿ ಅವಳು ಬೇರೆ ದಾರಿ ಇಲ್ಲದೆ ತನ್ನ ಅಕ್ಕ ಪಕ್ಕದ ಮನೆಯವರನ್ನು ಸಹಾಯ ಕೇಳಿ ನಿಂತಿದ್ದಳು. ಕೆಲವರು ಪ್ರಾಣಿಗಳ ಬಗ್ಗೆ ಹೇಳುತ್ತಿದ್ದರೇ, ಇನ್ನು ಕೆಲವರು ತಮ್ಮ ಮೂಢನಂಬಿಕೆಯ ಗಂಟು ಬಿಚ್ಚಿ ಭೂತ, ದೆವ್ವಗಳೆಂದು ಶುರು ಮಾಡಿದ್ದರು. ಇದೆಲ್ಲಾ ಕೇಳಿ ಭಯಬೀತಳಾದ ಆ ಮಹಿಳೆಯಲ್ಲಿ ಧೈರ್ಯ ಹೇಳಿ ಹೊರಟು ನಿಂತ ಅಕ್ಕಪಕ್ಕದ ಮನೆಯ ಯುವಕರು. ರಾತ್ರಿಯ ಅವರ ಹುಡುಕಾಟದಲ್ಲಿ ಅವರಿಗೆ ಬಹಳಷ್ಟು ಅನುಭವ. ಹೋಗುವ ದಾರಿ ಕಗ್ಗತ್ತಲೆಯ ಕಾಡು, ಎಲ್ಲೆಂದರಲ್ಲಿ ಮುರಿದು ಬಿದ್ದ ಮರಗಳು ಹುಡುಕುತ್ತ ಹೊರಟವರಿಗೆ ಅದು ತಾವು ದಿನನಿತ್ಯ ನಡೆದಾಡುವ ದಾರಿಯಾಗಿದ್ದರು ಏನೋ ವಿಚಿತ್ರ ಅನುಭವ. ಹಿಂದೆಂದೂ ಆಗದ ಅನುಭವದ ಮಧ್ಯೆ ಅವರಿಗೆ ಆಗಾಗ ಕೇಳಿಸುತ್ತಿದ್ದ ಸಪ್ಪಳ ಇವರನ್ನು ಭಯಭೀತಗೊಳಿಸಿತ್ತು. ಹೀಗೆ ಮುಂದುವರಿಯ ಬೇಕಾದರೆ ಆಕಸ್ಮಿಕವಾಗಿ ಯಾವುದೋ ಕಾಡುಪ್ರಾಣಿ ಅಟ್ಟಿಸಿಕೊಂಡು ಬಂದಂತೆ ಭಾಸವಾಗಿ ಎಲ್ಲರೂ ಓಡತೊಡಗಿದರು. ಕೊನೆಯಲ್ಲಿ ಅದೊಂದು ಚಿಕ್ಕ ಮೃಗ ಎಂದು ತಿಳಿದ ಬಳಿಕ ಮತ್ತೆ ತಮ್ಮ ಹುಡುಕಾಟ ಆರಂಭಿಸಿದ್ದರು. ಆ ಎಲ್ಲದರ ಮಧ್ಯೆ ಪಿರಿ-ಪಿರಿ ಎಂದು ಬಿಡದೇ ಸುರಿಯುವ ಮಳೆರಾಯ, ಕಂಬಳಿ ಹೊದ್ದಿದ್ದರು ಕೊರೆಯುವ ಚಳಿ, ಎಲ್ಲದರ ಜೊತೆಗೆ ರಕ್ತ ಹೀರುವ ತಿಗಣೆ ಮಲೆನಾಡಿನ ಪ್ರತಿ ಕಾಡಿನಲ್ಲೂ ಸಾಮಾನ್ಯ. ಆದರೂ ಆ ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಟ್ಟು ಆತನನ್ನು ಹುಡುಕುತ್ತಿದ್ದ ಅಲ್ಲಿನ ಯುವಕರ ಒಂದು ಹುಡುಕುವ ದೃಢ ನಿರ್ಧಾರ ಮೆಚ್ಚುಗೆಗೆ ಪಾತ್ರವಾದದ್ದು. ಹುಡುಕುತ್ತಾ ಇದ್ದವರಿಗೆ ಒಮ್ಮೆಲೇ ಯಾರೋ ನರಳುವ ಶಬ್ದ ಕೇಳಿ ಎಲ್ಲರೂ ಅತ್ತ ಕಡೆ ಧಾವಿಸಿದರು. ನೋಡಿದರೆ ಮಳೆಯ ನೀರಿನಲ್ಲಿ ಕೊರೆದು ಹೋದ ಕಾಲುವೆ. ಇಷ್ಟು ದಿನ ಚಿಕ್ಕದಾಗಿದ್ದ ಆ ಕಾಲುವೆ ಮಳೆಯ ನೀರಿನ ರಭಸಕ್ಕೆ ಕೊರೆದು ಪ್ರಪಾತದಂತಾಗಿತ್ತು. ಆ ಪ್ರಪಾತಕ್ಕೆ ಕತ್ತಲೆಯ ಕಾರಣದಿಂದ ಜಾರಿದ್ದ ಆತನನ್ನು ಕಂಡು ಅವರಿಗೆ ಏನು ನಡೆದಿರುವ ಸಂಭವ ಇದೆಯೊ ಅದು ತಿಳಿದು ಹೋಗಿತ್ತು. ಮೊದಮೊದಲು ಎಲ್ಲರೂ ಆತನ ಕಾಲು ಮುರಿದು ಹತ್ತಲು ಆಗದೆ ಕುಳಿತಿರುವ ಎಂದು ತಿಳಿದಿದ್ದರು ಆದರೆ ಆತನ ಕಾಲಿಗೆ ಏನು ಆಗಿರಲಿಲ್ಲ. ಆದದ್ದು ಆತನ ಬೆನ್ನು ಮೂಳೆಗೆ ಕೆಳಗೆ ಬಿದ್ದವನ ಬೆನ್ನಿಗೆ ಬಲವಾಗಿ ಏಟು ಬಿದ್ದಿದ್ದರಿಂದ ಆತನಿಗೆ ನೋವಿನಲಿ ಏನು ಮಾಡಲಾಗದೆ ಅಸಹಾಯಕತನದಿ ನರಳುತ್ತಿದ್ದ. ಹೇಗೋ ಎಲ್ಲರೂ ಸೇರಿ ಅವನನ್ನು ಮೇಲಕ್ಕೆ ಎತ್ತಿ ಆ ಕಗ್ಗತ್ತಲೆಯ ಕಾಡಿನಲಿ ಹೊತ್ತೊಯ್ಯು ತೊಡಗಿದ್ದಾರೆ ಮಳೆಯ ಕಾರಣ ಹೊತ್ತು ಸಾಗುವುದು ಸುಲಭವಾಗಿರಲಿಲ್ಲ ಹೇಗೋ ಅದೇ ಕತ್ತಲೆಯ ಕಾಡಿನ ಹೊತ್ತು ನಡೆದು ಆತನ ಮನೆಯನ್ನು ತಲುಪಿದರು. ಅಷ್ಟರಲ್ಲಿ ಸಮಯ ಸುಮಾರು ಮಧ್ಯೆ ರಾತ್ರಿ ೧ ಗಂಟೆ. ಆ ಸಮಯಕ್ಕೆ ಅಲ್ಲಿನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಯಾರು ಇಲ್ಲ. ವೈದ್ಯರು ವಾರದಲ್ಲಿ ಎರಡು ದಿನಗಳ ಕಾಲ ಮಾತ್ರ ಇರುತ್ತಿದ್ದರು. ಆ ಕಾರಣದಿಂದ ಆತನನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಅವಶ್ಯಕತೆ ತುಂಬಾ ಹೆಚ್ಚಾಗಿತ್ತು. ಅಲ್ಲಿಯೂ ಒಂದು ಸಮಸ್ಯೆ, ರಾತ್ರಿಯ ಸಮಯ ನದಿಯನ್ನು ದಾಟುವಂತಿಲ್ಲ. ಆಸ್ಪತ್ರೆಗೆ ದಾಖಲು ಮಾಡಲು ಬೇರೆ ಉಳಿದಿರುವ ಮಾರ್ಗ ಆತನನ್ನು ಬೇರೊಂದು ದಾರಿಯಲ್ಲಿ ಕರೆದೊಯ್ಯುವುದು. ಅದು ತುಂಬಾ ದೂರವಾಗುವುದು ಎಂದು ತಿಳಿದರು ಬೇರೆ ಯಾವ ಅವಕಾಶವು ಇಲ್ಲದೆ ಅದೇ ಮಾರ್ಗದಲ್ಲಿ ಕರೆದೊಯ್ಯುವ ನಿರ್ಧರ ಕೈಗೊಳ್ಳಬೇಕಾಯಿತು. ಆ ರಾತ್ರಿ ಒಂದರ ಮೇಲೊಂದು ಸಮಸ್ಯೆ ಉದ್ಭವಿಸುತ್ತಲೇ ಇತ್ತು. ಈಗ ಮತ್ತೆ ಇನ್ನೊಂದು ಸಮಸ್ಯೆ ಹೋಗಲು ಬೇಕಾದ ವಾಹನದ ಕುರಿತು. ಸ್ವಂತ ವಾಹನ ಇಟ್ಟುಕೊಳ್ಳುವಷ್ಟು ಆ ಬಡ ದಂಪತಿಗಳು ದೊಡ್ಡವರೇನು ಆಗಿರಲಿಲ್ಲ. ದಿನನಿತ್ಯದ ಬದುಕಿಗಾಗಿ ಕೂಲಿ ಮಾಡಿ ಬದುಕುವ ಜೀವಗಳು. ಅಲ್ಲಿನ ಸುತ್ತಮುತ್ತಲಿನ ಜನರು ತುಂಬಾ ಸಹಾಯ ಜೀವಿಗಳು. ಆದ್ದರಿಂದ ತಿಳಿದ ಓರ್ವರಲ್ಲಿ ಸಹಾಯ ಕೇಳಿ ಆತನನ್ನು ಕರೆದುಕೊಂಡು ಹೊರಟರು. ಅದೇನು ಅಂಬುಲೆನ್ಸ್ ತರಹ ಮೂಲ ಸೌಕರ್ಯ ಇರುವ ವಾಹನವೇ? ಒಂದು ಸಾಮಾನ್ಯ ವಾಹನ ಅದರಲ್ಲಿ ಆತನ ನೋವಿನ ನರಳಾಟ. ಹೋಗುತ್ತಿರುವ ದಾರಿಯಾದರು ಸರಿಯಾಗಿ ಇದೆಯೇ!, ಆ ದಾರಿಯಲ್ಲಿ ವಾಹನ ಸಂಚಾರ ತುಂಬಾ ಕಷ್ಟಕರ. ದಾರಿಯುದ್ದಕ್ಕೂ ಸಣ್ಣ ಪುಟ್ಟ ಹೊಂಡಗಳು, ತಿರುವುಗಳು ಮತ್ತು ಕತ್ತಲೆ ಭೀತಿಯ ಹೆಚ್ಚಿಸುವ ದಟ್ಟ ಕಾಡುಗಳು, ಕಾಡು ಪ್ರಾಣಿಗಳು.
ಇದರ ನಡುವೆ ಹೇಗೋ ಆಸ್ಪತ್ರೆಯ ತಲುಪಿದರು ಏನು ಶೀಘ್ರ ಪರಿಹಾರ ಇಲ್ಲದಂತಾಗಿತ್ತು ಆತನ ನೋವಿಗೆ. ಅಲ್ಲೂ ಸಹ ಬೆಳಗಿನ ಸೂರ್ಯೋದಯದ ಸಮಯದ ವರೆಗೆ ವೈದ್ಯರು ಬರುವುದನ್ನು ನಿರೀಕ್ಷಿಸ ಬೇಕಿತ್ತು. ಅಲ್ಲಿದ್ದ ಓರ್ವ ನರ್ಸ್ ನ ಸಹಾಯದಿಂದ ಆತನ ನೋವನ್ನು ಕಡಿಮೆ ಗೊಳಿಸುವ ಸಲುವಾಗಿ ನೋವಿನ ಮದ್ದನ್ನು ನೀಡಿ ಆತನನ್ನು ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಮಾಡಲಾಗಿತ್ತು. ಇದೆಲ್ಲ ಸಂಭವಿಸಿದ್ದು ಆ ಒಂದು ಕಗ್ಗತ್ತಲೆಯ ಕಾಡಿನಲಿ. ಬೆಳಿಗ್ಗೆ ವೈದ್ಯರೊಬ್ಬರು ಬಂದು ಆತನನ್ನು ಪರಿಶೀಲನೆ ಮಾಡುವುದಾಗಿ ಹೇಳಿ ಎಲ್ಲರನ್ನೂ ಹೊರಗಡೆ ಕಳುಹಿಸಿ ಆತನ ಮೂಳೆಗಳಿಗೆ ಬಿದ್ದಿರುವ ಎಟನ್ನು ಪರಿಶೀಲಿಸಿ ಆತನಿಗೆ ಆಪರೇಷನ್ ಅಗತ್ಯ ಇರುವುದಾಗಿ ಹೇಳಿ ಅದರ ವಿವರಗಳನ್ನು ನೀಡಿ ಹೋದರು. ಬಡ ಜನರು ಹೇಗೋ ಕಂಡ ಕಂಡವರಲ್ಲಿ ಸಾಲವನ್ನು ಮಾಡಿ ಆತನಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಷ್ಟೆಲ್ಲಾ ನಡೆಯುವುದರ ಮಧ್ಯೆಯೂ ಕೂಡ ಹಾಸಿಗೆಯ ಮೇಲೆ ಮಲಗಿದ್ದವನಿಗೆ ತಾನು ಸಾಕಿದ ದನ-ಕರುಗಳ ಚಿಂತೆ ಇದು ನಮ್ಮ ಹಳ್ಳಿವಾಸಿಗರ ವಿಶಾಲ ಮನೋಭಾವ. ಮನೆಯಲ್ಲಿ ದುಡಿಯುವವರಿಲ್ಲ, ಎಲ್ಲ ಕೆಲಸಗಳು ಅರ್ಧದಲ್ಲಿ ನಿಂತಿದ್ದು. ಸಾಲ ಮರುಪಾವತಿ ಮಾಡುವವರಾರು? ಮನೆಗೆ ದುಡಿಯುವವರಾರು? ಇದಕ್ಕೆಲ್ಲ ಕಾರಣರಾರು?. ಒಂದು ಕಗ್ಗತ್ತಲೆಯ ಕಾಡಿನಲಿ ಕನಸು ಕಂಡ ಮನಸುಗಳು ಕರಗಿ ಕುಳಿತಿವೆ ಕತ್ತಲೆಯ ಕಾಡಿನಲಿ. ಇದು ಈ ಒಂದು ರಾತ್ರಿಯ ಕಥೆಯಲ್ಲ a ಒಂದು ದ್ವೀಪ ಪ್ರದೇಶದಲ್ಲಿ ವಾಸಿಸುತ್ತಿರುವ ಹಲವಾರು ಜನರು ಕಥೆ. ಅದೆಷ್ಟೋ ದಿನಗಳು ಜನರು ಮಳೆಗಾಲದ ಸಮಯದಲ್ಲಿ ವಿದ್ಯುತ್ ಇಲ್ಲದೆ ಪರದಾಟ ನಡೆುತ್ತಿದ್ದಾರೇ. ಅಂದು ಜನರ ಒಂದು ಪರದಾಟವ ಕಂಡು ಜನರಿಗೆಲ್ಲಾ ವಿದ್ಯುತ್ ಒದಗಿಸಿದರೆ ಅದು ಮಳೆಗಾಲದ ಮಳೆಯಲ್ಲಿ ಅದೇ ರಾಗ ಅದೇ ಹಾಡು. ಕಾಡು ನಾಡಾಗಿ ಮಾರ್ಪಾಡುಗೊಂಡರು ಜನರ ಪರದಾಟಕ್ಕೆ ಇನ್ನೂ ಬೀಳದ ಕಡಿವಾಣ. ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳುಗಳಿದ್ದರು ನಡೆದಾಡ ಬಹುದು. ಆದರೆ, ನಡೆದಾಡಲು ಸರಿಯಾದ ದಾರಿಯೇ ಇಲ್ಲದೆ ಹೋದಲ್ಲಿ ನಡೆದಾಡುವುದಾದರು ಹೇಗೆ? ಆಸ್ಪತ್ರೆಯೊಂದು ದುರಸ್ತಿಯಲ್ಲಿದ್ದರು ಸರಿ. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇದ್ದಿದ್ದರೆ ಹೇಗೆ? ಇಂದಿನ ತಂತ್ರಜ್ಞಾನ ಮತ್ತು ಆರ್ಥಿಕ ಸುಧಾರಣೆಯ ಕಾರಣ ಅಲ್ಲಿನ ಜನರಿಗೆ ತಮ್ಮ ಜೀವನ ನಡೆಸಲು ಮತ್ತು ತಮ್ಮದೇ ಆದ ವಾಹನಗಳನ್ನು ಹೊಂದಿ ದಿನನಿತ್ಯದ ಓಡಾಟ ನಡೆಸಲು ದೇವರು ಶಕ್ತಿಯನ್ನು ನೀಡಿದ್ದಾರೆ. ಅಲ್ಲಿನ ಜನರು ತಮಗೆ ಸಿಗಬೇಕಾದ ಅದೆಷ್ಟೋ ಸೌಲಭ್ಯಕ್ಕಾಗಿ ಇನ್ನೂ ಕಾಯುತ್ತಲೇ ಇದ್ದಾರೆ. ಒಂದು ತಲೆಮಾರಿನವರು ಅಲ್ಲಿನ ನದಿಗೆ ಸೇತುವೆಯಾಗುವ ಕನಸು ಕಂಡು, ಕಾಣದೆಯೇ ಮಣ್ಣು ಸೇರಿಹೋಗಿದ್ದಾರೇ ಮತ್ತು ಇಗೀನ ತಲೆಮಾರಿನವರು ಇನ್ನೂ ಕನಸು ಕಾಣುತ್ತಲೇ ಇದ್ದಾರೆ. ಹಸಿರು ಮಡಿಲಲ್ಲಿ ಬೆಳೆದ ಜನರು ಕಾಡನ್ನು ನಾಡು ಮಾಡುವ ಸಲುವಾಗಿ ಕಾಡುಗಳನ್ನೆಲ್ಲ ಕಡಿದು ಬದುಕುವ ಜನರಿಗಿಂತ ಭಿನ್ನವಾಗಿ, ಪರಿಸರ ಕಾಳಜಿ ವಹಿಸಿ ಪರಿಸರದ ಸಂರಕ್ಷಣೆ ಮಾಡುತ್ತಾ ಬಂದಿದ್ದಾರೆ. ಕಗ್ಗತ್ತಲೆಯ ಕಾಡು ಎಂದು ತಿಳಿದು ಕಗ್ಗತ್ತಲೆಯ ಕಾಡಲಿ ಇನ್ನೂ ಜೀವನ ಸಾಗಿಸುತ್ತಿರುವ ಆ ಜನರ ಪ್ರತಿ ಒಂದು ದಿನವು ವಿಸ್ಮಯಕಾರಿ ಬದಲಾವಣೆಗೊಳ್ಳಬೇಕಿದೆ.
ಭಾಗ-೨
ಹೆಣ್ಣೊಬ್ಬಳು
ನೆತ್ತರವ ಬಸಿದೆಮಗೆ
ಜನ್ಮವನು ಇತ್ತಿಹಳು.
ಕರುಳು ಬಳ್ಳಿಯ
ಹಂಚಿ ಹುಟ್ಟಿಹಳು.
ಹೆಣ್ಣು ನಮ್ಮ ಸಂಸ್ಕೃತಿಯ ಕಣ್ಣು. ಅವಳ ಬದುಕು ಕಷ್ಟದ ಹಾದಿಯನ್ನು ತೊರೆದು ಸಂತಸದ ಹಾದಿಯಲ್ಲಿ ಸಾಗಬೇಕು. ನಮ್ಮ ಕನ್ನಡಿಗರು ಹೆಣ್ಣಿಗೆ ನೀಡುವ ಸ್ಥಾನ, ಗೌರವ ಎಲ್ಲವು ಅದ್ಭುತ. ಆ ಒಂದು ಪುಟ್ಟ ದ್ವೀಪ ಪ್ರದೇಶದಲ್ಲಿ ಬೆಳೆದ ಹೆಣ್ಣಲ್ಲ, ಹೊರ ಜಗತ್ತಿನಲ್ಲಿ ಅತಿ ಸುಖ ಶಾಂತಿಯುತ ಜೀವನ ನಡೆಸಿದವಳು. ತನ್ನ ಮುಂದಿನ ಜೀವನ ಆ ಒಂದು ದ್ವೀಪ ಪ್ರದೇಶದಲ್ಲಿ ಜರುಗಲಿದೆ ಎಂದು ಕನಸಿನಲ್ಲಿ ಸಹ ಊಹಿಸದ ಆಕೆ ತನ್ನ ತಂದೆ ತಾಯಂದಿರ ಮುದ್ದಿನ ಮಗಳು. ತನ್ನೆಲ್ಲ ವಿದ್ಯಾಭ್ಯಾಸವನ್ನು ಪಟ್ಟಣದಲ್ಲಿಯೇ ಮುಗಿಸಿದ ಆಕೆಯನ್ನು ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಈ ಒಂದು ಪ್ರದೇಶದಲ್ಲಿ ಬೆಳೆದ ಓರ್ವ ಯುವಕನಿಗೆ ಮದುವೆ ಮಾಡಿಕೊಡುವ ಮಾತುಕಥೆ ನಡೆದಿತ್ತು. ಆ ಪ್ರದೇಶದ ಶಾಲೆಯೊಂದರ ಶಿಕ್ಷಕ ವೃತ್ತಿ ಮಾಡುತ್ತಿದ್ದ ಆತನ ಮನೆಯವರು ಮತ್ತು ಆ ಒಂದು ಹೆಣ್ಣಿನ ಮನೆಯವರು ಕುಳಿತು ಇವರಿಬ್ಬರ ಜೋಡಿಯ ಪ್ರಸ್ತಾವನೆ ನಡೆದೇ ಹೋಗಿತ್ತು. ಆ ಸುಂದರ ಹೆಣ್ಣುಮಗಳು ಮೊದಲು ಹಳ್ಳಿಯ ಜೀವನದಲ್ಲಿ ಕಾಲಿಡುವ ಅವಸರ ಅವಳ ಜೀವನದಲ್ಲಿ ಉಂಟಾಯಿತು. ಆಕೆಯು ಹಳ್ಳಿಯ ಜೀವನ ನಡೆಸುವ ಇಚ್ಛೆಯಿಂದಲೇ ಬಂದವಳು. ಅವಳ ಒಳಗೆ ಏನೋ ಒಂದು ಸಂತೋಷ. ಸುಂದರ ಪ್ರದೇಶ, ಹಸಿರು ಕಾಡುಗಳು, ಎತ್ತರದ ಶಿಖರಗಳು, ಅಲ್ಲಲ್ಲಿ ಜಾಲದಾರೆ, ಎಲ್ಲೆಡೆ ಕೇಳುವ ಹಕ್ಕಿಗಳ ಕಲರವ, ನೀರಿನಲ್ಲಿ ಪ್ರಯಾಣ, ತಂಪಾದ ಗಾಳಿ ಮತ್ತು ವಾತಾವರಣ, ಶುದ್ಧವಾದ ಪ್ರಪಂಚ. ಇದೆಲ್ಲಾ ಅವಳನ್ನು ಪಟ್ಟಣದಲ್ಲಿ ಓದಿ ಬೆಳೆದರು ಹಳ್ಳಿಯಲ್ಲಿ ಬದುಕುವ ನಿರ್ಧಾರಕ್ಕೆ ಕಾರಣವಾಗಿತ್ತು. ಮೊದಲು ಆಕೆ ಆ ಒಂದು ಅರ್ಧ ತಾಸಿನ ನದಿ ಪ್ರಯಾಣವನ್ನು ಮಾಡಿ ಮುಗಿಸಿದಾಗ ಎಲ್ಲವು ಕನಸಿನ ಜೀವನದಂತೆ ಆಕೆಗೆ. ದಿನನಿತ್ಯ ವಾಹನಗಳ ಸಂಚಾರಕ್ಕೆ ಆಗುತ್ತಿದ್ದ ಶಬ್ದ ಮಾಲಿನ್ಯ ಕೇಳಿ ಬೆಳೆದವಳ ಕಿವಿಗೆ ಇಂಪಾದ ಹಕ್ಕಿಗಳ ಕಲರವ. ಪಟ್ಟಣದ ಕಲುಷಿತವಾದ ಗಾಳಿ ಸೇವಿಸುತ್ತಿದ್ದವಳಿಗೆ ಸ್ವಚ್ಚಂದ ಗಾಳಿಯ ಅನುಭೂತಿ.
ಕರುಣೆಯ ಪರ್ಯಾಯ ಹೆಣ್ಣು,
ಕರೆದರು ಅವಳ ದೇಶದ ಕಣ್ಣು.
ಬಂದರೆ ಅವಳಿಗೆ ದಿನಕ್ಕೊಂದು ಕಷ್ಟ!
ದೇಶಕ್ಕೆ ತಾನೇ ನಿಜವಾದ ನಷ್ಟ.
ಪ್ರತಿ ಹೆಣ್ಣಿಗೆ ನಿಜವಾದ ಅವಶ್ಯಕತೆ ಇರುವುದು ತನ್ನವರ ಪ್ರೀತಿಯ ಕಾಳಜಿ ಮತ್ತು ಮೂಲಸೌಕರ್ಯಗಳು. ಒಂದು ಹೆಣ್ಣು ಯಾವುದೇ ಸರಿಯಾದ ಮೂಲಸೌಕರ್ಯ ಇಲ್ಲದೆ ಬದುಕುವುದು ತುಂಬಾ ಕಷ್ಟಕರ. ಆ ಒಂದು ಕಷ್ಟದ ಜೀವನವನ್ನು ಈಗಲೂ ತುಂಬಾ ಹಳ್ಳಿಗಳಲ್ಲಿನ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ. ಯಾವಾಗ ಮೂಲಸೌಕರ್ಯ ಇರುವುದಿಲ್ಲವೊ ಆಗ ಅವಳು ಅನಾರೋಗ್ಯ ಬಿದ್ದು ಸಂಕಷ್ಟ ಅನುಭವಿಸಬೇಕಾಗಿ ಬರುತ್ತದೆ. ಇತ್ತ ಮದುವೆಯ ನಂತರ ಈ ಒಂದು ಪ್ರದೇಶಕ್ಕೆ ಹೊಂದಿಕೊಳ್ಳಲು ಆಕೆಗೆ ಸ್ವಲ್ಪ ಸಮಯ ಬೇಕಾಗಿತ್ತು. ಬಿದ್ದ ಮಾಂಸ ಮುದ್ದೆಯ ತಿದ್ದಿ ನಡೆಸುವಳು ತಾಯಿ, ಜೀವನದಲ್ಲಿ ಅವಳನ್ನು ಕರೆವರೆಲ್ಲಾ ಕರುಣಾಮಯಿ. ಪ್ರಪಂಚದಲ್ಲಿನ ಪ್ರತಿ ಒಬ್ಬ ಹೆಣ್ಣಿನ ಜೀವನದಲ್ಲಿ ಸಂತಸ ತರುವ ವಿಷಯ ಆಕೆ ತಾಯಗುವುದು. ಈಗ ಆ ಪಟ್ಟಣದಿಂದ ಬಂದ ಆ ಹೆಣ್ಣುಮಗಳ ಸರದಿ. ಆಕೆ ಗರ್ಭ ಧರಿಸಿದ್ದಳು ಎಂದು ಪತಿಯಲ್ಲಿ ಮತ್ತು ತನ್ನ ತವರು ಮನೆಯಲ್ಲಿ ಅತಿ ಸಂತಸದಿ ತಿಳಿಸಿದ್ದಳು. ಪತಿಗೆ ಆಕೆಯ ಹೇರಿಗೆಯನ್ನು ತನ್ನ ಊರಿನಲ್ಲಿಯೆ ಮಾಡಿಸಬೇಕು ಎಂಬ ಬಯಕೆ. ಆದರೆ, ಆಕೆಯ ತಂದೆ ತಾಯಂದಿರಿಗೆ ಹೆದರಿಕೆ. ಆ ಊರಿನಲ್ಲಿ ಸರಿಯಾದ ಒಂದು ಆಸ್ಪತ್ರೆಯ ಸೌಲಭ್ಯ ಇಲ್ಲವೆನ್ನುವ ತಕರಾರು ಅವರದ್ದು. ಜನರ ಮಾಡಿದ ಅದೆಷ್ಟೋ ಪ್ರಯತ್ನದ ಫಲವಾಗಿ ಅಲ್ಲಿಗೆ ಒಂದು ಅಂಬುಲೆನ್ಸ್ ಸೇವೆ ದೊರೆತಿತ್ತು. ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿ ಇರುತ್ತಿದ್ದ ವೈದ್ಯರು. ಇದೆಲ್ಲಾ ಆತನಿಗೆ ತಿಳಿದಿರುವ ವಿಷಯವೇ ಆಗಿದ್ದರು ಆತನಿಗೆ ತಮಗೆ ಹುಟ್ಟುವ ಮಗು ಆ ಒಂದು ಸ್ವಚ್ಚಂದ ಪರಿಸರದಲ್ಲಿ ಹುಟ್ಟಬೇಕು ಎನ್ನುವ ಆಸೆ. ಹೇಗೊ ಎಲ್ಲರನ್ನೂ ಒಪ್ಪಿಸಿದವನಿಗೆ ಮುಂದಿನ ಸಂಕಷ್ಟಗಳ ಅರಿವೆ ಇರಲಿಲ್ಲ. ಅಂದೂಮ್ಮ ಆತ ಕೆಲಸಕ್ಕೆಂದು ದೂರದ ಊರಿಗೆ ಹೋಗಿದ್ದಾಗ ಆಕೆಗೆ ಹೇರಿಗೆ ನೋವು ಕಾಣಿಸಿಕೊಂಡಿತು. ಅಕ್ಕಪಕ್ಕದ ಮನೆಯವರು ಈತನಿಗೆ ವಿಷಯ ತಿಳಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲ ನಿರ್ಧರಿಸಿದ್ದರು. ಆಕೆಯನ್ನು ಆಸ್ಪತ್ರೆಗೆ ಸೇರಿಸುವುದರಲ್ಲಿ ಆತನ ಪತಿ ಅವಳತ್ತ ಧಾವಿಸಿ ಬಂದಿದ್ದ. ದುರದೃಷ್ಟಕರ ಆ ಊರಿನಲ್ಲಿ ಅಂದು ಕೂಡಾ ಯಾವುದೇ ವೈದ್ಯರು ಅಲ್ಲಿ ಇರಲಿಲ್ಲ ಎಂದು ತಿಳಿದು ಅಲ್ಲಿದ್ದ ಅಂಬುಲೆನ್ಸ್ ಏರಿ ತನ್ನ ಹೆಂಡತಿ ಮತ್ತು ಅತ್ತಿಗೆಯೊಂದಿಗೆ ಪಕ್ಕದ ಸಿಟಿಯತ್ತ ಹೊರಟು ನಿಂತಿದ್ದರು. ದೂರದ ಪ್ರಯಾಣ, ಹೆಂಡತಿ ನೋವಿನಿಂದ ನರಳಾಡುತ್ತಿದ್ದಾಳೆ. ಹೊಂಡ-ಗುಂಡಿಗಳಿರುವ ರಸ್ತೆಯಲ್ಲಿ ಸಾಗಬೇಕಾದ ಅನಿವಾರ್ಯತೆ. ಆ ಒಂದು ರಾತ್ರಿಯ ಪಯಣ ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ತಿಳಿದರು ಅಂಬುಲೆನ್ಸ್ ಚಾಲಕ ಅವರನ್ನು ಕರೆದೊಯ್ಯಲು ಸಿದ್ಧವಾಗಿದ್ದ. ಅಂಬುಲೆನ್ಸ್ ಆದರು ಆ ಒಂದು ರಸ್ತೆ ಅಭಿವೃದ್ಧಿ ಇಲ್ಲದ ಕಾರಣ ವೇಗದ ಮಿತಿ ತುಂಬಾ ನಿಧಾನಕರವಾಗಿತ್ತು. ಹೊಂಡ - ಗುಂಡಿಗಳ ಮಧ್ಯೆ ಗರ್ಭಿಣಿ ಮಹಿಳೆಯೊಬ್ಬಳ ಹೊತ್ತೊಯ್ಯುತ್ತಿದ್ದ ಆ ಅಂಬುಲೆನ್ಸ್ ಆ ಒಂದು ರಸ್ತೆಯ ಕಾರಣ ವಾಹನ ಒಮ್ಮೆಲೇ ನಿಂತಿದೆ. ಏನಾಯಿತು ಎಂದು ನೋಡಲು ಚಾಲಕ ಇಳಿದಾಗ ತಿಳಿದಿದ್ದು ವಾಹನದ ಒಂದು ಚಕ್ರ ಪಂಕ್ಚರ್ ಎಂದು. ಒಳಗಡೆ ನೋವಿನಿಂದ ಬಳಲುತ್ತಿರುವ ಗರ್ಭಿಣಿ ಹೊರಗಡೆ ಆ ಸಹಾಯಕ ಸ್ಥಾನದಲ್ಲಿ ನಿಂತಿರುವ ಪತಿ. ಆ ಒಂದು ದಾರಿಯಲ್ಲಿ ವಾಹನಗಳು ಬರುವುದೇ ಕಷ್ಟ ಇದರ ಮಧ್ಯೆ ಯಾರಾದರೂ ಬರುತ್ತಾರೆ ಎಂಬ ನಂಬಿಕೆಯಲ್ಲಿಯೆ ಚಾಲಕನೊಂದಿಗೆ ಸೇರಿ ವಾಹನದ ಚಕ್ರವನ್ನು ಬದಲಿಸುತ್ತ ರಸ್ತೆ ಕಡೆಗೆ ಆಗೊಮ್ಮೆ ಈಗೊಮ್ಮೆ ಎಂದು ನೋಡುತ್ತ ಕೆಲಸ ಮಾಡುತ್ತಿದ್ದ. ಒಳಗಿದ್ದ ಹೆಂಡತಿಯ ಹೆರಿಗೆ ನೋವು ಹೆಚ್ಚಾಗಿ ಒಳಗೆ ಪಕ್ಕದಲ್ಲಿ ಕುಳಿತಿದ್ದ ಅತ್ತಿಗೆ ಭಯದಿಂದ ಏನು ಮಾಡಬೇಕು ಎಂದು ತಿಳಿಯದೆ ಹೇಗೋ ಆಕೆಗೆ ಆ ಒಂದು ರಸ್ತೆ ಮಧ್ಯೆದಲ್ಲಿಯೇ ಹೆರಿಗೆ ಮಾಡಿಸಿದ್ದರು. ಗಂಡು ಮಗು ಎಲ್ಲರ ಮುಖದಲ್ಲಿ ಅಷ್ಟೊಂದು ನೋವಿನ ಮಧ್ಯೆ ಮೂಡಿತು ಸಂತಸ. ಅದೇ ಸಮಯಕ್ಕೆ ಸರಿಯಾಗಿ ಸಿದ್ಧವಾಗಿ ನಿಂತಿದ್ದ ವಾಹನ. ಆ ಒಂದು ತಾಯಿ, ಮಗುವಿನ ಸುರಕ್ಷತೆಗಾಗಿ ಆಸ್ಪತ್ರೆಗೆ ಹೋಗುವುದು ಇನ್ನೂ ಮುಖ್ಯವಾದ ಕೆಲಸವಾಗಿಯೇ ಉಳಿದಿತ್ತು.
ವಾಹನ ಸರಿಯಾದ ನಂತರ ಎಲ್ಲರೂ ಏರಿ ಕುಳಿತರು. ಇನ್ನು ಆಸ್ಪತ್ರೆ ತಲುಪಲು ಸುಮಾರು ೩೫ ಕಿ. ಮೀ ಕ್ರಮಿಸಬೇಕಾಗಿತ್ತು. ಅದೇ ರಸ್ತೆ ಅದೇ ಹೊಂಡ - ಗುಂಡಿ ಮತ್ತು ಅದೇ ನಿಧಾನ ಗತಿಯಲ್ಲಿ ಪ್ರಯಾಣ. ಹೇಗೋ ಮಧ್ಯೆ ರಾತ್ರಿ ೨ ಗಂಟೆಗೆ ಆಸ್ಪತ್ರೆ ತಲುಪಿದ್ದರು. ಮಧ್ಯೆ ರಾತ್ರಿಯ ಕಾರಣ ವೈದ್ಯರು ಬರಲು ಬೆಳಗಿನ ಸೂರ್ಯೋದಯದ ಕಾಯುವಿಕೆ. ವೈದ್ಯರು ಬಂದು ಆಕೆಯನ್ನು ಮತ್ತು ಮಗುವನ್ನು ಪರೀಕ್ಷಿಸಿ ಇಬ್ಬರು ಸುರಕ್ಷಿತ ಎಂದು ತಿಳಿಸಿ ಹೊರಟು ಹೋದರು. ಹೋಗುವ ಮುನ್ನ ಕೆಲ ದಿನಗಳ ಕಾಲ ಅದೇ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಹೇಳಿದರು. ಮಧ್ಯಾಹ್ನದ ಸಮಯಕ್ಕೆ ಮಗುವನ್ನು ಮತ್ತು ಆಕೆಯನ್ನು ನೋಡಲು ಆಕೆಯ ತಂದೆ - ತಾಯಿ ಮತ್ತು ಬಂಧುಗಳೆಲ್ಲ ಬಂದಿದ್ದರು. ಆಕೆ ಆರೋಗ್ಯವಾಗಿಯೇ ಇದ್ದಾಳೆ ಎಂದು ತಿಳಿದರು ಎಲ್ಲರೂ ಕೋಪಗೊಂಡಿದ್ದರು. ದಾರಿಯ ಮಧ್ಯೆ ಹೆರಿಗೆ ಆಗಿರುವ ವಿಷಯದಲ್ಲಿ ಎಲ್ಲರ ಕೋಪ ಅವನನ್ನು ಬೈಯಲು ಶುರುವಾಯಿತು. ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ, ದಾರಿಯ ಮಧ್ಯೆ ಯಾವುದಾದರೂ ಅನಾಹುತ ಸಂಭವಿಸಿದ್ದರೆ ಏನು ಮಾಡಬೇಕಿತ್ತು ಎನ್ನುವುದು. ಹಾಗೆಯೇ ಅವರ ನೋವು ಆ ಒಂದು ಊರಿನ ದುಸ್ಥಿತಿಯನ್ನು ಕೂಡ ಶಪಿಸುತ್ತಿತ್ತು. ಇಂತಹ ಒಂದು ಊರಿಗೆ ಎತ್ತಕ್ಕಾದರು ಮದುವೆ ಮಾಡಿಕೊಟ್ಟೆವು ಎಂಬ ನೋವಿನ ಮಾತು ಹೊರ ಹೊಮ್ಮಿತ್ತು. ಹಾಗೆಯೇ ಒಂದು ಪ್ರಸ್ತಾವನೆ ಕೂಡಾ ನಡೆದು ಬಿಟ್ಟಿತು. ಆಕೆಯ ಆರೋಗ್ಯ ಮತ್ತು ಮಗುವಿನ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರಿಬ್ಬರನ್ನೂ ಆ ಒಂದು ಪಟ್ಟಣದ ಜೀವನ ನಡೆಸಲು ಪ್ರಸ್ತಾವಿಸಲಾಗಿತ್ತು. ಆದರೆ ಹುಟ್ಟಿ ಬೆಳೆದ ಊರನ್ನು ಬಿಟ್ಟು ಹೋಗಲು ಇಷ್ಟ ಇಲ್ಲದ ಆತ ಏನನ್ನೂ ಮಾತನಾಡದೆ ಮೌನವಾಗಿ ನಿಂತಿದ್ದ. ಇದೆಲ್ಲಾ ಆತನ ಜೀವನದಲ್ಲಿ ನಡೆಯ ಬಾರದ ವಿಷಯವೇನಾಗಿರಲಿಲ್ಲ. ಎಕೆಂದರೆ ಇದು ಆತನಿಗೆ ಆ ಊರಿನಲ್ಲಿ ಹುಟ್ಟಿ ಬೆಳೆದ ಕಾರಣ ಸಹಜವಾದ ವಿಚಾರವಾಗಿತ್ತು. ಅವನಿಗೆ ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಯುವ ಹೊತ್ತಿಗೆ ಎಲ್ಲಾ ಅವರವರ ಮಾತನ್ನು ಆಡಿ ಮುಗಿಸಿ ತಮ್ಮ ಮನೆಯ ಕಡೆಗೆ ಹೊಟು ನಿಂತಿದ್ದರು. ಈತ ಎಲ್ಲರನ್ನು ಮೌನವಾಗಿಯೇ ಉತ್ತರಿಸಿ ಕಳುಹಿಸಿ ಕೊಟ್ಟಿದ್ದನು. ಹೇಗೋ ಹೆಂಡತಿ ಮಾತ್ರ ಮಗುವಿನ ಆಗಮನದ ಖುಷಿಯಲಿ ಎಲ್ಲವನ್ನು ಸ್ವಲ್ಪ ಸಮಯದವರೆಗೆ ಮರೆತು ಹೋಗಿದ್ದಳು. ಮನೆಯಲ್ಲಿ ಮಗುವಿನ ಆಗಮನದ ಸಂತಸ ಅದರೊಂದಿಗೆ ಹೇಗೋ ತನ್ನ ಪತ್ನಿಯ ಮನಸ್ಥಿತಿಯನ್ನು ಬದಲಿಸಿ ಅದೇ ಊರಿನಲ್ಲಿ ಜೀವಿಸುವುದಕ್ಕೆ ಒಪ್ಪಿಗೆ ಪಡೆದ ಪತಿ, ಇವರಿಬ್ಬರ ಜೀವನ ಮತ್ತೆ ಅದೇ ಪುಟ್ಟ ದ್ವೀಪದಲ್ಲಿ ಮುಂದುವರೆದಿತ್ತು. ಇದು ಬರೀ ಪಟ್ಟಣದಿಂದ ಬಂದ ಆಕೆಯ ಜೀವನದ ಘಟನೆ ಮಾತ್ರವಲ್ಲ ಎಕೆಂದರೆ ಇದು ಅಲ್ಲಿನ ಪ್ರತಿ ಹೆಣ್ಣುಮಕ್ಕಳ ಜೀವನದಲ್ಲಿ ನಡೆಯ ಬಹುದಾದ ಮತ್ತು ನಡೆಯುತ್ತಿರುವ ವಿಚಾರವಾಗಿ ಅಲ್ಲಿನ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿ ಉಳಿದಿದೆ. ಒಬ್ಬರಿಗೆ ಒಂದೊಂದು ರೀತಿಯ ಆರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಯಾರಿಗೆ ಯಾವಾಗ ಏನು ಬೇಕಾದರೂ ಆಗಬಹುದು. ಜೀವನದಲ್ಲಿ ಯಾವ ಯುದ್ಧವನ್ನು ಸರಿಯಾದ ಯಾವುದೇ ಅಸ್ತ್ರವಿಲ್ಲದೆಯೇ ಎದುರಿಸುವುದು ತುಂಬಾ ಕಷ್ಟಕರ. ಹಣ ಇದ್ದವರು ಜೀವನ ನಡೆಸಲು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆ ಒಂದು ಜಾಗದಲ್ಲಿ. ಇನ್ನು ಆಸರೆಯ ಕೈಗಳು ಚಾಚುವುದ ಕಾಯುತ್ತಲೇ ಕುಳಿತ ಅದೆಷ್ಟೋ ಜೀವಿಗಳಿಗೆ ಉತ್ತರ ನೀಡುವವರು ಯಾರು? ಇದೇನು ದ್ವೀಪವೋ ಇಲ್ಲವೇ ಜನರ ತ್ಯಾಗಕ್ಕೆ ದೊರೆತ ಶಾಪವೋ ಎಂದು ಅರಿಯಲಾಗದೆ ಹೋಗಿರುವಾಗ ಜನರೆಲ್ಲರು! ಎಲ್ಲವೂ ಉತ್ತರ ಹುಡುಕಬೇಕಾದ ಪ್ರಶ್ನೆಯಾಗಿ.
ಭಾಗ - ೩
ಸ್ನೇಹಿತರ ಆಗಮನ
ಆ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿ ಬೆಳೆದು ಬಂದವರಲ್ಲಿ ಎಲ್ಲರಂತೆಯೇ ನಾನು ಒಬ್ಬ. ಅದೇ ಊರಿನಲ್ಲಿ ಹುಟ್ಟಿ ಆಡಿ ಬೆಳೆದ ನನ್ನ ಜೀವನದಲ್ಲಿಯು ಕೆಲವೊಮ್ಮೆ ನೋವಿನ ಸಂಗತಿಗಳು ನಡೆದಿವೆ. ಆ ಊರಿನಲ್ಲಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆ ಮತ್ತು ಸಂತಸ ಎರಡು ಇದೆ. ನಮ್ಮೂರ ಪೂರ್ವಜರು ನಾಡಿನ ಜನತೆಗಾಗಿ ಬೆಳಕು ನೀಡುವ ಸಲುವಾಗಿ ತಮ್ಮ ಜೀವನವನ್ನು ನೀರಿನಲ್ಲಿ ಮುಳುಗಿಸಿ ಕೊಂಡವರು. ತಮ್ಮ ಹಾದಿಯನ್ನು ತಾವೇ ಕಟ್ಟಿಹಾಕಿಕೊಂಡವರು. ಅದೆಷ್ಟೋ ಕಷ್ಟಗಳನ್ನು ಎದುರಿಸಿ ಮಣ್ಣು ಸೇರಿದವರು. ಅಲ್ಲೊಂದು ಇಲ್ಲೊಂದು ಎಂಬಂತೆ ಇರುವ ಸರ್ಕಾರಿ ಶಾಲೆಗಳಲ್ಲಿ ಕಲಿತು ವಿದ್ಯಾವಂತರಾದ ಅದೆಷ್ಟೋ ಜನರು. ನಾವು ಹುಟ್ಟಿದ ನಂತರ ನಮ್ಮ ಕಣ್ಣಿಗೆ ಕಂಡಿದ್ದವು ಅಲ್ಪ ಸ್ವಲ್ಪ ಸೌಲಭ್ಯಗಳು. ಒಂದೊಂದಾಗಿ ಇಂದಿಗೂ ದೊರೆಯುವ ಸಾಧ್ಯತೆಯಲ್ಲಿಯೇ ಇದೆ ಆದರೆ ಸಿಗಬೇಕಾದ ಮೂಲ ಸೌಕರ್ಯ ಇನ್ನೂ ಪೂರ್ಣವಾಗಿ ದೊರೆತಿಲ್ಲ. ನಾನು ಚಿಕ್ಕಂದಿನಿಂದಲೂ ನೋಡುತ್ತ ಬಂದಿದ್ದೇನೆ ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಬೇಕಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಆಗಲೇಂದು ನಡೆಸಿರುವ ಅದೆಷ್ಟೋ ಹೋರಾಟಗಳು. ನಮ್ಮೂರ ಜನರು ಪಡೆದುಕೊಂಡಿರುವ ಸೌಲಭ್ಯಗಳಲ್ಲಿ ಅರ್ಧದಷ್ಟು ಹೋರಾಟ ನಡೆಸಿ ಪಡೆದು ಕೊಂಡಿರುವ ಸೌಲಭ್ಯಗಳು. ನಾನು ನಮ್ಮೂರ ಶಾಲೆಯಲ್ಲಿ ಓದಿದವನು. ದೇವರ ಆಶೀರ್ವಾದ ನನ್ನನ್ನು ನವೋದಯ ವಿದ್ಯಾಲಯದಲ್ಲಿ ಓದುವ ಅವಕಾಶ ಕಲ್ಪಿಸಿತ್ತು. ನನ್ನ ಪ್ರೌಢ ಶಿಕ್ಷಣ ಮುಗಿದ ನಂತರ ನನಗೆ ಹೊರ ರಾಜ್ಯದಲ್ಲಿ ಓದುವ ಅವಕಾಶ TVSM ಭಾರತದ ಒಂದು ಉನ್ನತ ದ್ವಿಚಕ್ರ ಮತ್ತು ತ್ರಿಚಕ್ರ ಕಂಪನಿಯ ನೆರವಿನಿಂದ ದೊರೆತಿತ್ತು. ಆ ಕಾರಣ ನನಗೆ ವಿವಿಧ ರಾಜ್ಯಗಳ ಸ್ನೇಹಿತರ ಒಡನಾಟ ದೊರೆತಿತ್ತು. ಅದರಲ್ಲಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯದ ಯುವಕರು ಇದ್ದರು.ನಾನು ಎಲ್ಲರಿಗೂ ನಮ್ಮೂರ ಸೌಂದರ್ಯವನ್ನು ವಿವರಿಸಿ ಎಲ್ಲರ ಮನಸ್ಸಿನಲ್ಲಿ ಒಂದು ಕುತೂಹಲಕರ ಭಾವ ಮೂಡಿಸಿದ್ದೆ. ಪ್ರತಿ ಭಾರಿ ರಜಾದಿನ ಬರುವ ಹೊತ್ತಿಗೆ ಎಲ್ಲರೂ ಕೇಳುವ ವಿಚಾರ ತಮ್ಮನ್ನು ಊರಿಗೆ ಕರೆದುಕೊಂಡು ಹೋಗುವುದರ ಕುರಿತು ಮಾತ್ರ. ಎಲ್ಲರನ್ನೂ ಒಮ್ಮೆಲೇ ಕರೆದೊಯ್ಯುವ ಆಸೆ ನನ್ನದು ಆದರೆ ಅದಕ್ಕೆ ಸರಿಯಾದ ಸಮಯ ಬಾರದೇ ಹೋಗಿತ್ತು. ಒಮ್ಮೆ ಒಂದೆರಡು ಸ್ನೇಹಿತರನ್ನು ಕರೆತಂದು ನಮ್ಮ ಊರನೆಲ್ಲ ಸುತ್ತಿಸಿ ಕರೆದು ಕೊಂಡು ಹೋಗಿದ್ದೆ. ನಮ್ಮ ಜನರಿಗೆ ಅನಿಸಿಕೆ ಮತ್ತು ಅಭಿಪ್ರಾಯದಲ್ಲಿ ಕುತೂಹಲ ಜಾಸ್ತಿ. ಒಂದು ವಸ್ತುವನ್ನು ಖರೀದಿಸಲು ಸಹ ನೂರು ಜನರ ಅಭಿಪ್ರಾಯ ನೋಡಿ, ಓದಿ ಖರೀದಿಸುವ ಜನರು. ನಾನು ಅಂದು ಕರೆದುಕೊಂಡು ಬಂದಿದ್ದ ಎಲ್ಲಾ ಸ್ನೇಹಿತರ ಕುತೂಹಲ ಮೂಡಿಸುವ ನಮ್ಮೂರ ಪ್ರವಾಸದ ಅನುಭವ ಎಲ್ಲರನ್ನೂ ನಮ್ಮೂರಿನ ಕಡೆ ಆಗಮಿಸುವ ಮನಸ್ಸನ್ನು ಹುಟ್ಟುಹಾಕಿತು. ಎಲ್ಲರೂ ಮತ್ತೊಂದು ರಾಜಾ ಸಿಗುವುದಕ್ಕೆ ನಿರೀಕ್ಷೆಯಲ್ಲಿದ್ದರು. ಆ ಸಮಯ ಬಂದುಬಿಟ್ಟಿತು, ಎಲ್ಲರಿಗೂ ದೀಪಾವಳಿ ಹಬ್ಬದ ಅಂಗವಾಗಿ ರಾಜಾ ಘೋಷಿಸಲಾಗಿತ್ತು. ಎಲ್ಲರೂ ಒಮ್ಮೆ ಹೋಗಿ ಸುತ್ತಾಡಿ ಬರುವ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದೇವು. ಆದರೆ ಎಲ್ಲರಿಗೂ ಅದೆಷ್ಟೊ ದಿನದ ನಂತರ ದೊರೆತ ರಾಜಾ. ಮನೆಯಲ್ಲಿ ಎಲ್ಲರೂ ಬೇಸರ ವ್ಯಕ್ತಪಡಿಸುತ್ತಾರೆ ಎಂದು ಎಲ್ಲವನ್ನೂ ರದ್ದುಗೊಳಿಸಿ ತಮ್ಮ ಮನೆಗಳಿಗೆ ಹೊರಡುವುದಾಗಿ ನಿರ್ಧಾರ ಕೈಗೊಂಡರು. ಆದರೆ ಅದರಲ್ಲಿ ಇಬ್ಬರಿಗೆ ನಮ್ಮೂರಿನ ಮೇಲಿನ ಕುತೂಹಲ ತಡೆಯಲು ಆಗದೆ ನನ್ನೊಂದಿಗೆ ಬರುವುದಾಗಿ ಹೇಳಿದರು. ನನಗೂ ಸಂತೋಷವಾಯಿತು. ನಮ್ಮ ಮನೆಗೆ ಅದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಬ್ಬರು ಸ್ನೇಹಿತರು ಬರುವ ಒಂದು ಸಂತಸದ ಸಂಗತಿ ಹೊತ್ತು ಮನೆಯ ಕಡೆ ಹೊರಟಿದ್ದೆವು. ನಮ್ಮ ನಾಡಿನ ಸುಂದರ ಪರಿಸರದ ಅನುಭವ ಪಡೆಯಲು ಬಸ್ಸುಗಳಲ್ಲಿ ಪ್ರಯತ್ನಿಸುವುದಕ್ಕಿಂತ ರೈಲ್ವೆ ಪ್ರಯಾಣ ಅತಿ ಉಲ್ಲಾಸಕರ. ನಾನು ಓದುವ ಕಾಲೇಜು ತಮಿಳುನಾಡಿನ ಒಂದು ಸುಂದರ ಪ್ರದೇಶ ಕೊಯಂಬತ್ತೂರಲ್ಲಿದ್ದ ಕಾರಣ ನಮಗೆ ಪ್ರಯಾಣ ಮಾಡಲು ಎರಡು ಮಾರ್ಗಗಳಿದ್ದವು. ಮೊದಲನೆಯದು ಮೈಸೂರಿನ ಮಾರ್ಗ ಹಾಗೂ ಎರಡನೇ ಮಾರ್ಗ ಬೆಂಗಳೂರಿನ ಮಾರ್ಗವಾಗಿ. ನಮ್ಮೂರ ತಲುಪಲು ಬೆಂಗಳೂರು ಮಾರ್ಗವಾಗಿ ಹೋದಲ್ಲಿ ಸುಮಾರು ೨೪ ಗಂಟೆಗಳ ಅವಧಿ ಮತ್ತು ಮೈಸೂರು ಮಾರ್ಗವಾಗಿ ಹೋದಲ್ಲಿ ೨೦ ಗಂಟೆಗಳ ಅವಧಿಯಲ್ಲಿ ಊರನ್ನು ತಲುಪಲು ಸಾಧ್ಯ ಎಂದು ನನಗೆ ಮೊದಲೇ ತಿಳಿದಿದ್ದ ಕಾರಣ ನಾನು ಮೈಸೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಸಿದ್ಧತೆಗಳನ್ನು ಕೈಗೊಂಡು ಯಾವ ಸಮಯದಲ್ಲಿ ಯಾವ ಬಸ್ ಹತ್ತಿ ಇಳಿಯಬೇಕಾಗುತ್ತದೆ ಮತ್ತು ಯಾವ ಕಡೆಯಿಂದ ರೈಲು ಪ್ರಯಾಣ ಆರಂಭ ಮಾಡಬಹುದು ಎಂದು ಮೊದಲೇ ನಿರ್ಧರಿಸಿ ಎಲ್ಲರನ್ನೂ ಕರೆದುಕೊಂಡು ಹೊರಟಿದ್ದೆ. ನಾವು ಮೈಸೂರಿನವರೆಗೆ ಬಸ್ನಲ್ಲಿ ಪ್ರಯಾಣಿಸಿ ಅಲ್ಲಿಂದ ಬೆಳಗಿನ ಜಾವ ಹೊರಡುವ ತಾಳುಗುಪ್ಪ ಎಕ್ಸ್ಪ್ರೆಸ್ ಹತ್ತಿ ಹೊರಟೆವು. ಬೆಳಗಿನ ಮೈಸೂರಿನಿಂದ ತಾಳುಗುಪ್ಪ ಹೊರಡುವ ಆ ರೈಲಿನ ಪ್ರಯಾಣ ಅತ್ಯಂತ ಮನಮೋಹಕ ಮತ್ತು ಆನಂದದಾಯಕ. ನಮಗೆಲ್ಲ ರೈಲಿನಲ್ಲಿ ಪ್ರಯಾಣ ತುಂಬಾ ಸಂತಸ ಉಂಟುಮಾಡಿತ್ತು. ಮನೆಗೆ ತೆರಳಿ ಎಲ್ಲರೂ ವಿಶ್ರಾಂತಿ ಪಡೆದು ಎಲ್ಲರೂ ಕುಳಿತು ಊಟ ಮುಗಿಸಿ ನಾಳಿನ ಕುರಿತು ಏನೇನು ಮಾಡಬೇಕು ಎಂಬ ಎಲ್ಲಾ ತಯಾರಿ ನಡೆಸಿ ಎಲ್ಲರೂ ನಿದ್ರಿಸಿದೆವು. ಬೆಳಿಗ್ಗೆ ಎದ್ದು ತಿಂಡಿ ತಿಂದು ಎಲ್ಲರನ್ನೂ ನಮ್ಮ ಅಕ್ಕಪಕ್ಕದ ಊರುಗಳ ಸುತ್ತಾಡಿಸಿಕೊಂಡು ಅವರ ಮನದಲ್ಲಿ ಇದ್ದ ನಮ್ಮೂರ ಸೌಂದರ್ಯವನ್ನು ಹೆಚ್ಚಿಸಿ ಮನೆಗೆ ಮರಳಿದೆವು. ದೀಪಾವಳಿ ಹಬ್ಬಕ್ಕೆ ಇನ್ನೂ ಕೇವಲ ಎರಡು ದಿನಗಳಿದ್ದ ಕಾರಣ ಮರುದಿನವೇ ಎಲ್ಲಾ ತಯಾರಿ ಮಾಡಿಕೊಳ್ಳಬೇಕು. ನಮ್ಮ ಮಲೆನಾಡಿನ ಮನೆಗಳಲ್ಲಿ ದೀಪಾವಳಿ ಆಚರಣೆ ತುಂಬಾ ಸಾಂಪ್ರದಾಯಿಕ ಮತ್ತು ಸಂಸ್ಕೃತಿಯ ಚೆಲುವು ಹೆಚ್ಚಿಸುವ ಒಂದು ಪ್ರಧಾನ ಹಬ್ಬ. ಕೆಲವರು ವಿಜಯ ದಶಮಿ ದಿನದಂದು ವಾಹನಗಳ ಪೂಜೆ, ಅಂಗಡಿ - ಮಳಿಗೆಯ ಪೂಜೆ ನೆರವೇರಿಸಿದರೆ ಇನ್ನೂ ಕೆಲವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ನಮ್ಮ ಮನೆಯಲ್ಲಿ ಸಹ ದೀಪಾವಳಿ ದಿನದ ಸಂದರ್ಭದಲ್ಲಿ ಆಚರಣೆ ತುಂಬಾ ವಿಜ್ರಂಭಣೆಯಿಂದ ನಡೆಯುತ್ತದೆ. ಲಕ್ಷ್ಮಿಪೂಜೆ, ವಾಹನಗಳ ಪೂಜೆ, ಆಯುಧಗಳ ಪೂಜೆ ಮತ್ತು ನಮ್ಮ ಮನೆಯ ಪುಟ್ಟ ಅಂಗಡಿಪೂಜೆ. ಈ ಬಾರಿ ಹಬ್ಬದ ಅಂಗವಾಗಿ ಇದ್ದ ಇಬ್ಬರು ಸ್ನೇಹಿತರಿಗೆ ನಮ್ಮ ಸಂಸ್ಕೃತಿ ತಿಳಿಸುವ ಸಂದರ್ಭ. ನಾಳೆ ನಡೆಯುವ ಹಬ್ಬದ ಅಂಗವಾಗಿ ಇಂದು ಎಲ್ಲರೂ ಸೇರಿ ಮನೆಯ ಎಲ್ಲಾ ವಾಹನಗಳನ್ನು ತೊಳೆಯಲು ನಿಂತಿದ್ದೆವು. ಧ್ವನಿ ವರ್ಧಕಗಳನ್ನು ಹಾಕಿಕೊಂಡು ಎಲ್ಲರೂ ಗಾಡಿಗಳನ್ನು ತೊಳೆಯುವ ಸಂದರ್ಭದಲ್ಲಿ ನನಗೊಂದು ಫೋನ್ ಬಂದಿತ್ತು. ನನ್ನ ಸ್ನೇಹಿತೆಯೊಬ್ಬಳು ಮಾಡಿದ ಆ ಒಂದು ಫೋನ್ ಅಂದು ನಮ್ಮನ್ನೆಲ್ಲ ಮೂಕರನ್ನಾಗಿಸಿತ್ತು. ನನ್ನ ಒಬ್ಬ ಸ್ನೇಹಿತನ ತಂದೆ ಆಕಸ್ಮಿಕವಾಗಿ ತೋರಿಕೊಂಡಿದ್ದರು. ನಮ್ಮ ಊರಿನಲ್ಲಿ ಸಿಗುವುದು ಬಿ. ಎಸ್. ಎನ್. ಎಲ್ ನ ಸಿಗ್ನಲ್ ಮಾತ್ರ. ಆದ ಕಾರಣ ವಿಷಯ ತಿಳಿಸಲು ತುಂಬಾ ಕಷ್ಟಪಡಬೇಕಾಗಿ ಬಂದಿತ್ತು. ಆ ನನ್ನ ಸ್ನೇಹಿತನ ಊರು ಪಾಂಡಿಚೆರಿಯಾದ ಕಾರಣ ಅಲ್ಲಿಗೆ ಮರುದಿನ ಮಧ್ಯಾಹ್ನದ ಸಮಯದಲ್ಲಿ ತಲುಪುವುದು ತುಂಬಾ ಕಷ್ಟಕರ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಆತ ಮನೆಯಲ್ಲಿ ಹಿರಿಯ ಮಗ. ನಮ್ಮೂರ ನೋಡಲು ಬಂದ ಆತ ನಮ್ಮೂರಿನ ಕಟ್ಟು ಪಾಡುಗಳಲ್ಲಿ ವೇದನೆಯನ್ನು ಹೊತ್ತು ಸಿಲುಕಿ ಕೊಂಡಿದ್ದರೆ ನನಗೆ ಏನು ಮಾಡಬೇಕು ಎಂಬ ವಿಷಯ ತಿಳಿಯದೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೋಗುವ ಯೋಚನೆ ಬಂದರು ಬೆಂಗಳೂರು ಮುಟ್ಟುವ ಹೊತ್ತಿಗೆ ಎಲ್ಲವೂ ಮುಗಿದು ಹೋಗುವ ಮುನ್ಸೂಚನೆ. ಇನ್ನು ಹತ್ತಿರವಿದ್ದ ವಿಮಾನ ನಿಲ್ದಾಣ ಮಂಗಳೂರಿನ ವಿಮಾನ ನಿಲ್ದಾಣ. ಅದರ ಕುರಿತು ಯೋಚಿಸಿದರೆ ಸರಿಯಾದ ಸಮಯಕ್ಕೆ ಯಾವುದೇ ವಿಮಾನಗಳ ಹಾರಾಟ ಇಲ್ಲವೆಂದು ತಿಳಿದು ಯಾವುದಾದರೂ ಬೇರೆ ಮಾರ್ಗ ಇದೆಯೆ ಎಂದು ಯೋಚಿಸುವ ಹೊತ್ತಿಗೆ ಸಮಯ ಮಧ್ಯಾಹ್ನ ಒಂದು ಗಂಟೆ. ಹೇಗೊ ನನ್ನ ತಲೆಯಲ್ಲಿ ಹೊಳೆದ ಒಂದು ಉಪಾಯ ಮಂಗಳೂರು ಮಾರ್ಗವಾಗಿ ಸೆಲಂ ತಲುಪುವುದು. ಅಲ್ಲಿಂದ ಬಸ್ಸಿನಲ್ಲಿ ಹೋದರೆ ಮರುದಿನ ಮಧ್ಯಾಹ್ನ ಆತನು ಮನೆಯ ತಲುಪುವ ಸಾಧ್ಯತೆ ಇದ್ದ ಕಾರಣ ದೇವರನ್ನು ಕೋರಿಕೊಂಡು ಆ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಹೊರಟು ನಿಂತಾಗ ನಮ್ಮ ಇನ್ನೊಬ್ಬ ಸ್ನೇಹಿತ ತಾನು ಆತನನ್ನು ಬಿಡುವುದಾಗಿಯು ನನ್ನನ್ನು ಮನೆಯಲ್ಲಿಯೇ ಉಳಿದುಕೊಂಡು ಉಳಿದೆಲ್ಲ ಸ್ನೇಹಿತಿಗೆ ವಿಷಯ ತಿಳಿಸ ಬೇಕಾಗಿಯು ಹೇಳುತ್ತಲೇ ನಾನು ಒಪ್ಪಿದೆ. ಈಗ ಇಲ್ಲಿರುವ ಸಮಸ್ಯೆ ಮಂಗಳೂರು ತಲುಪುವುದು. ಮೊದಲು ಬೆಂಗಳೂರಿನ ಮಾರ್ಗದಲ್ಲೂ ಇದೆ ಸಮಸ್ಯೆ ಉಂಟಾಗಿತ್ತು ಈಗ ಮತ್ತೊಮ್ಮೆ ಸರಿಯಾದ ಸಮಯಕ್ಕೆ ಬಸ್ಸುಗಳು ವ್ಯವಸ್ಥೆ ಇಲ್ಲ. ಆಗೊಮ್ಮೆ ಈಗೊಮ್ಮೆ ಬರುವ ಹಳೆ ಬಸ್ಸುಗಳು ಅದರಲ್ಲಿ ಕುಳಿತು ೩೦ ಕಿ. ಮೀ ಕ್ರಮಿಸ ಬೇಕಾದರೂ ಸುಮಾರು ೧ ಗಂಟೆ ಸಮಯ ಸಾಲುತ್ತಿರಲಿಲ್ಲ. ಹೀಗಿರುವಾಗ ಮಂಗಳೂರು ತಲುಪಲು ಸುಮಾರು ೧೩೭ ಕಿ. ಮೀ ಸಂಚಾರ ಮಾಡಾಬೇಕಾದ ಅನಿವಾರ್ಯತೆ. ಅಂದು ಮನೆಯಲ್ಲಿ ನಾಳಿನ ಪೂಜೆಗೆಂದು ತೊಳೆಯಲು ಹೊರಟಿದ್ದ ವಾಹನ ಮಾತ್ರ ನಮ್ಮ ಸಹಾಯಕ್ಕೆಂದು ಉಳಿದಿದ್ದು ನಾವು ಅದನ್ನು ಏರಿ ಮಂಗಳೂರಿನ ಕಡೆಯ ಪ್ರಯಾಣ ಆರಂಭಿಸಿದೆವು. ಮಂಗಳೂರು ತಲುಪಲು ಸಮೀಪದಲ್ಲಿದ್ದ ಕುಂದಾಪುರ ಎಂಬ ಪಟ್ಟಣಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ ಹೋಗುವ ಬಸ್ಸನ್ನು ಹತ್ತಿ ದೀಪಾವಳಿ ಹಬ್ಬದ ಆಚರಣೆಗೆಂದು ದೂರದ ಊರುಗಳಿಂದ ಬಂದಿದ್ದ ನನ್ನ ಸ್ನೇಹಿತರನ್ನು ನೋಡಿ ಮನದಲ್ಲಿನ ಎಲ್ಲಿಲ್ಲದ ಬೇಸರ. ಹೇಗೋ ಅವರು ಮರುದಿನ ಸರಿಯಾದ ಸಮಯಕ್ಕೆ ಮನೆಯನ್ನು ತಲುಪಿದರು. ಆದರೆ ನನ್ನ ಮನಸ್ಸಿನಲ್ಲಿ ಈ ಒಂದು ಘಟನೆ ಬಹಳ ಆಳವಾಗಿ ನೋವನ್ನು ಉಂಟು ಮಾಡಿತ್ತು. ನಮ್ಮೂರಿನ ಕುರಿತು ಎಲ್ಲೆಂದರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ನನಗೆ ಅಂದು ಎಲ್ಲಿಲ್ಲದ ಬೇಸರ ಉಂಟುಮಾಡಿತ್ತು. ಮನೆಗೆ ಬನ್ನಿ, ನಮ್ಮೂರು ಒಂದು ಸುಂದರ ಪ್ರಪಂಚ ಎಂದು ಎಲ್ಲರೊಂದಿಗೆ ಕರೆಯುತ್ತಿದ್ದ ನನ್ನಲ್ಲಿ ನಮ್ಮೂರಿನ ಪ್ರತಿಯೊಂದು ವ್ಯವಸ್ಥೆಯಲ್ಲಿ ಇರುವ ಲೋಪಗಳ ಅರಿವಿನೊಂದಿಗೆ ಮನಸ್ಸು ಭಾರವಾಗಿತ್ತು. ಹೌದು ನನ್ನ ಸ್ನೇಹಿತನ ತಂದೆಯ ಸಾವಿಗೆ ಮತ್ತು ನಮ್ಮೂರಿನ ವ್ಯವಸ್ಥೆಗೆ ಏನು ಸಂಬಂಧ ಎಂದು ಯೋಚಿಸುವ ಅಗತ್ಯವಿಲ್ಲ. ಎಕೆಂದರೆ ಇಲ್ಲಿನ ರಸ್ತೆ, ಹಾಗು ಓಡಾಡುವ ಮಾರ್ಗ ಮತ್ತು ಉಪಯೋಗಿಸುವ ಸಂಪರ್ಕ ಸಾಧನ, ಎಲ್ಲದರಲ್ಲೂ ಒಂದೊಂದು ಲೋಪ. ಅಂದು ನನ್ನ ಸ್ನೇಹಿತನ ಮನೆಯಿಂದ ಬಂದ ಬೇಸರದ ಸಂಗತಿ ಕೂಡಾ ನಮ್ಮನ್ನು ತಲುಪಲು ಸರಿಯಾದ ಸಂಪರ್ಕ ಸಾಧವಿಲ್ಲದೇ ಸಮಯ ವ್ಯರ್ಥಗೊಂಡು ನಂತರ ನಮ್ಮನ್ನು ತಲುಪಿತು. ನಂತರದಲ್ಲಿ ಅಲ್ಲಿನ ಸರಿಯಾದ ಸಂಪರ್ಕ ಇಲ್ಲದ ಒಂದು ದ್ವೀಪದ ಬದುಕು ಸಹ ಅಂದು ನಮ್ಮೊಂದಿಗೆ ಆಟವಾಡಲು ಶುರು ಮಾಡಿತ್ತು. ಪಕ್ಕದ ಪಟ್ಟಣದ ಕಡೆ ಪ್ರಯಾಣಿಸಿ ಅಲ್ಲಿಂದ ಹೋಗುವ ಎಲ್ಲಾ ಪ್ರಯತ್ನ ವಿಫಲವಾಗುವ ಎಲ್ಲಾ ಸಾಧ್ಯತೆಯ ಭಯ ಮೂಡಿಸಿತ್ತು. ಹಬ್ಬದ ಸಂದರ್ಭದಲ್ಲಿ ಅಂದು ಆ ಒಂದು ನದಿಯ ನೀರನ್ನು ದಾಟಲು ಹರಸಾಹಸ ಪಟ್ಟರು ತುಂಬಾ ಸಮಯ ವ್ಯರ್ಥವಾಗುವ ಎಲ್ಲಾ ಸಾಧ್ಯತೆಗಳಿತ್ತು. ಇನ್ನು ಮಂಗಳೂರು ತಲುಪಲು ನಾವು ಪಟ್ಟ ಪಾಡು ಹೇಳತೀರದು. ಇದು ನಮ್ಮೂರಿನ ವಿಚಾರಮಾತ್ರ ಅಲ್ಲವೇ ಅಲ್ಲ, ಎಕೆಂದರೆ ಆ ಒಂದು ಹಿನ್ನೀರಿನ ಪ್ರದೇಶದಲ್ಲಿ ಸುತ್ತ ಮುತ್ತಲು ಹಲವಾರು ಹಳ್ಳಿಗಳು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಯೊಂದು ವಿಚಾರದಲ್ಲೂ ಸಮಸ್ಯೆಯನ್ನು ಅನುಭವಿಸುತ್ತಲೇ ಬಂದಿದ್ದು ಇನ್ನೂ ಅದೇ ರೀತಿಯ ಸಮಸ್ಯೆ ಎಲ್ಲರೂ ಎದುರಿಸುವಂತೆಯೇ ಉಳಿದಿದೆ. ಕಾಣುವ ಕನಸು ಕಂಡಲ್ಲಿಯೇ ಕೊನೆಯಾದರೇ, ಕಂಡ ಕನಸಿಗೆ ಬೆಲೆ ಎಲ್ಲಿದೆ? ಎಲ್ಲ ಹುಡುಕಿಕೊಂಡು ಹೋಗುವ ಬದುಕು ನೀರಿನಲ್ಲಿ ಮುಳುಗಿಕೊಂಡಿರುವಾಗ ಜೀವ ಉಳಿಸುವವರಾರು?
ಭಾಗ ೪
ಕಾಡು ಜೀವನ
ಮಲೆನಾಡು ದಟ್ಟ ಕಾಡುಗಳ ತವರು ಎಂದೇ ಪ್ರಸಿದ್ಧವಾದ ಸ್ಥಳ . ಎಲ್ಲೆಂದರಲ್ಲಿ ಹರಿದಾಡುವ ಸರಿಸ್ರೃಪಗಳು ಜನರನ್ನು ಭಯದಿಂದ ಬದುಕುವಂತೆ ಮಾಡಿದ್ದರೂ, ಆ ದಟ್ಟ ಕಾಡಿನ ಉದರದೊಳು ಪುಟ್ಟ ಪುಟ್ಟ ಮನೆಗಳು ತಮ್ಮದೇ ಆದ ಸಾಮ್ರಾಜ್ಯವೊಂದನ್ನು ನಿರ್ಮಿಸಿಕೊಂಡು ಅಲ್ಲೊಂದು ಇಲ್ಲೊಂದು ಎಂಬಂತೆ ಎಲ್ಲೆಲ್ಲೂ ಕಾಣುವ ಆ ಹಸಿರು ರಾಶಿಯ ಮಧ್ಯದಲ್ಲಿ ಜನಜೀವನ ನಡೆಸುತ್ತಿದ್ದರು. ಆ ಕಾಡು ಜೀವನ ಅಲ್ಲಿನ ಜನರಿಗೆ ಹೊಸತೇ
ನೂ ಆಗಿರಲಿಲ್ಲ. ತಮ್ಮ ಪೂರ್ವಜರ ಕಾಲದಿಂದಲೂ ಇದೆ ರೀತಿಯ ಬದುಕನ್ನು ಜೀವಿಸುತ್ತಲೇ ಬಂದಿದ್ದಾರೆ. ಹುಟ್ಟಿನಿಂದ ಕಾಡು ಜೀವನ ನಡೆಸುತ್ತಿದ್ದ ಅಲ್ಲಿನ ಜನರಿಗೆ ಆ ಜೀವನ ಅಭ್ಯಾಸವಾಗಿ ಹೋಗಿತ್ತು. ಅಲ್ಲಿನ ಜನರಿಗೆ ತೊಂದರೆ ಉಂಟಾಗುವಂತಹ ಮುಖ್ಯ ಭಾಗವೆಂದರೆ ಅಲ್ಲಿನ ಸಂಪರ್. ಅಲ್ಲಿಗೆ ಬೇಕೆಂದಾಗ ಹೋಗುವುದು ತುಂಬಾ ಸುಲಭದ ಕೆಲಸವಲ್ಲ. ಎಲ್ಲ ರೀತಿಯ ವಾಹನ ಸಂಚಾರ ಒಂದು ನಿರ್ದಿಷ್ಟ ಸಮಯದ ನಂತರ ಸ್ಥಗಿತಗೊಳ್ಳುತ್ತಿತ್ತು. ಅದಲ್ಲದೆ ಎಲ್ಲಾ ಜಾಗಗಳಿಗೆ ವಾಹನಗಳು ಹೋಗುತ್ತಿರಲಿಲ್ಲ. ಎಷ್ಟೇ ಹುಡುಕಿದರು ಕೆಲವು ಜಾಗಗಳಲ್ಲಿ ನೆಟ್‌ವರ್ಕ್ ಮುಖ ನೋಡುವುದು ಅದ್ಭುತದ ಮಾತು. ಈ ಒಂದು ಆಧುನಿಕ ಯುಗದಲ್ಲಿ ಆ ಕಾಡುಗಳಲ್ಲಿ ಜೀವಿಸುವುದನ್ನು ತುಂಬಾ ಜನರಿಗೆ ಉಹಿಸಲು ಸಾದ್ಯವಿಲ್ಲ. ಅದರಲ್ಲೂ ಬೆಳಿಗ್ಗೆ ಎದ್ದ ಕೂಡಲೇ ಮತ್ತು ಮಲಗುವ ಮೊದಲು ಮೊಬೈಲ್ ಫೋನ್ಗಳನ್ನು ನೋಡಿ ಮಲಗುವ ಜನರಿಗಂತು ಇದು ಅಸಾಧ್ಯದ ಬದುಕು.
ಅಲ್ಲಿನ ಜನರ ಜೀವನದಲ್ಲಿ ದಿನಕ್ಕೊಂದು ಕಥೆ. ಅಂದು ಹೊರಗಡೆ ಕೆಲಸಕ್ಕೆಂದು ಊರು ಬಿಟ್ಟು ಹೊರಗಡೆ ಬದುಕುತ್ತಿದ್ದ ಆತ ಕೆಲ ದಿನಗಳ ಕಾಲ ರಜೆ ಹಾಕಿ ಮನೆಗೆ ಬರಲು ನಿರ್ಧರಿಸಿದ್ದ. ಆತ ಬರುವಾಗ ಜೊತೆಯಲ್ಲಿ ತನ್ನ ಸ್ನೇಹಿತನನ್ನು ಕರೆದುಕೊಂಡು ಬರುತ್ತಿದ್ದ. ಅಂದು ಆತನಿಗೆ ತನ್ನ ಮನೆಯವರೊಂದಿಗೆ ಮಾತನಾಡಲು ಸಂಪರ್ಕ ಮಾಡಲಾಗದ ಕಾರಣ ಬರುವ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಮೊದಲೇ ಅಲ್ಲಿ ಸಂಪರ್ಕಕ್ಕೆ ಸಿಗುವುದು ಕಷ್ಟ, ಅದರಲ್ಲೂ ಅದು ಮಳೆಗಾಲ ಬೇರೆ. ಆತನ ಮನೆ ಇದ್ದದ್ದು ಕಾಡುಗಳ ಮಧ್ಯೆಯಾದ್ದರಿಂದ ಮಳೆಗಾಲದಲ್ಲಿ ಅಲ್ಲಿನ ದಾರಿ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆ ಕಾರಣ ಆ ಪ್ರದೇಶವನ್ನು ಅಲ್ಲಿನ ಜನ ಮುಳುಗಡೆ ಪ್ರದೇಶ ಎಂದೇ ಕರೆಯುತ್ತಿದ್ದರು. ಅಲ್ಲಿನ ಸಂಪರ್ಕ ಕಲ್ಪಿಸುವ ಒಂದೇ ಒಂದು ಸಾಧನ 'ತೆಪ್ಪ'. ಜನರು ಓಡಾಡಲು ತೆಪ್ಪದ ಸಹಾಯದಿಂದ ಸಂಪರ್ಕ ಕಲ್ಪಿಸಿಕೊಂಡ್ಡಿದ್ದರು. ಅಂದು ಆತ ತನ್ನ ಸ್ನೇಹಿತನೊಂದಿಗೆ ಬರುವುದರಲ್ಲಿ ರಾತ್ರಿಯಾಗಿತ್ತು. ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ, ತೆಪ್ಪವನ್ನೆರಿ ಮನೆಗೆ ಹೋದರೆ ಮತ್ತೆ ಬರುವಾಗ ಅದನ್ನೇರಿ ಬರುವಂತ್ತಿತ್ತು. ಹಾಗಾಗಿ ಆಗಷ್ಟೇ ಮಗ ಬರುವುದು ತಿಳಿಯದ ತಂದೆ ಅಲ್ಲಿಂದ ಹೊರಟು ಮನೆಯ ಸೇರಿದ್ದರು. ಈತ ಬರುವ ಸಮಯಕ್ಕೆ ತೆಪ್ಪವು ಆ ಕಡೆಯ ದಡದಲ್ಲಿದ್ದ ಕಾರಣ ಇತ್ತ ಕಡೆ ಈತ ತನ್ನ ಸ್ನೇಹಿತರೊಂದಿಗೆ ಏನು ಮಾಡಬೇಕು ಎಂದು ತಿಳಿಯದೆ ಯೋಚಿಸುತ್ತ ನಿಂತಿದ್ದ. ಮೊದಲೇ ಅದು ಕಾಡು ಪ್ರದೇಶ, ಕಾಡು ಪ್ರಾಣಿಗಳ ಭಯ ಬೇರೆ. ಮಳೆಗಾಲ ಮಳೆಯಲಿ ಮತ್ತು ಕೊರೆಯುವ ಚಳಿಯಲ್ಲಿ ಆತನಿಗೆ ಏನು ಮಾಡಬೇಕು ತಿಳಿಯಲಿಲ್ಲ. ಒಂದೆರಡು ಬಾರಿ ಕೂಗು ಹಾಕಿ ನೋಡಿದ ಅತ್ತ ಕಡೆ ದಡದಲ್ಲಿ ಯಾರು ಇಲ್ಲದ ಕಾರಣ ಆತನ ಕೂಗಿಗೆ ಕಿವಿಗೊಡುವ ಯಾರೊಬ್ಬರೂ ಇರಲಿಲ್ಲ. ಅವರು ಸ್ವಲ್ಪ ಸಮಯ ಅಲ್ಲೆ ಕಾದು ಕುಳಿತರು. ನಡುಕದ ನಡುವೆ ಮಳೆಗಾಲದ ಆ ವಾತಾವರಣದಲ್ಲಿ ಕುಳಿತ ಆತನಿಗೆ ಮತ್ತು ಆತನ ಸ್ನೇಹಿತರಿಗೆ ಯಾರೊ ಕೂಗಿದಂತೆ ಕೇಳಿಸಿತು. ಆ ಧ್ವನಿ ವಿಭಿನ್ನವಾದ ಧ್ವನಿಯಾದ್ದರಿಂದ ಎಲ್ಲರಿಗೂ ಎನಾಗಿರಬಹುದು ಎಂಬ ಕುತೂಹಲ. "6-5=2" ಎಂಬ ಚಲನಚಿತ್ರವನ್ನು ಕೆಲವು ದಿನಗಳ ಹಿಂದಷ್ಟೇ ನೋಡಿದ್ದ ಅವರಿಗೆ ಆ ಕಾಡು ಮತ್ತು ಅಲ್ಲಿದ್ದ ದೊಡ್ಡ ಮರವೊಂದು ಅವರಿಗೆ ಭಯ ಉಂಟು ಮಾಡಿತ್ತು. ಚಲನ ಚಿತ್ರಗಳಲ್ಲಿ ತೋರಿಸುವುದೆಲ್ಲವೂ ನಿಜ ಅಲ್ಲವೇ ಅಲ್ಲ ಎನ್ನುವ ಒಬ್ಬ ಸ್ನೇಹಿತನಿದ್ದ ಕಾರಣ ಅವನು ಎಲ್ಲರನ್ನೂ ಧೈರ್ಯ ಹೇಳಿ ಆ ಒಂದು ಕೂಗಿನ ಹಿಂದಿರುವವರು ಯಾರಿರ ಬಹುದು ಎಂದು ತಿಳಿಯಲು ಹಾಗೆ ಸ್ವಲ್ಪ ಮುಂದೆ ಹೋಗಿ ನೋಡಿದರೆ ಯಾರು ಇಲ್ಲ. ನಂತರ ಎಲ್ಲರಿಗೂ ಇದು ನಮ್ಮ ಭ್ರಮೆ ಇರಬಹುದು ಎಂದು ಮಾತನಾಡಿಕೊಂಡು ಮತ್ತೆ ಕಾಯುತ್ತ ಕುಳಿತರು. ಸ್ನೇಹಿತರು ಆತನಿಗೆ ಅಕ್ಕ ಪಕ್ಕದಲ್ಲಿ ಯಾರಾದರೂ ತಿಳಿದವರು ಇದ್ದರೆ ಈ ರಾತ್ರಿ ಅಲ್ಲಿಯೇ ಉಳಿದು ಹೋಗೋಣ ಎಂದರು. ಅಷ್ಟರಲ್ಲಿ ಮಳೆ ಸ್ವಲ್ಪ ಕಡಿಮೆ ಆಗುತ್ತಿದ್ದ ಕಾರಣ ಮಳೆ ಕಡಿಮೆಯಾದ ನಂತರ ಮತ್ತೆ ಕೂಗು ಹಾಕಿದರು ಅಂದು ಅವರ ಅದೃಷ್ಟ ಚೆನ್ನಾಗಿದ್ದ ಕಾರಣ ಅವರ ಕೂಗು ಮನೆಗೆ ಕೇಳಿಸಿ ಅಲ್ಲಿಂದ ಅವನ ತಂದೆ ಮರು ಕೂಗು ಹಾಕಿ ತಾವು ಬರುವ ಸಂದೇಶವನ್ನು ಕೊಟ್ಟರು. ತಂದೆ ತೆಪ್ಪವನ್ನೇರಿ ಬಂದು ಇವರೆಲ್ಲರ ಕರೆದುಕೊಂಡು ಹೊರಟಾಗ ಆತನ ಸ್ನೇಹಿತರಿಗೆ ಆ ಒಂದು ತೆಪ್ಪದ ಪ್ರಯಾಣ ಹೊಸದಾದ್ದರಿಂದ ಅಷ್ಟಲ್ಲ ನಡೆದ ಮೇಲು ಮೂಖದಲ್ಲಿ ಆನಂದ ಮೂಡಿತು. ಆದರು ಕೆಲವರ ಮನದಲ್ಲಿನ ಭಯವು ಎದ್ದು ನಿಂತಿತ್ತು. ರಾತ್ರಿಯ ನದಿ ಪ್ರಯಾಣ. ಅದರಲ್ಲೂ ತೆಪ್ಪವೆಂದರೇ ಸುರಕ್ಷತೆ ಕಡಿಮೆ ಎಂದು ಅವರ ಮನದಲ್ಲಿ ನಡುಕ ಉಂಟಾಗಿತ್ತು. ಹೇಗೋ ಮನೆಯ ತಲುಪಿದ ಅವರು ರಾತ್ರಿ ಕಂಬಳಿ ಹೊದ್ದು ಬೆಚ್ಚನೆ ಮಲಗಿದರ. ಇದೊಂದು ಸಣ್ಣ ಘಟನೆಯಷ್ಟೆ ಆದರು ತಮ್ಮ ಸ್ವಂತ ಮನೆಗಳನ್ನು ತಲುಪಲು ಜನರು ಪಡುವ ಕಷ್ಟ ಹೇಳ ತೀರದು. ಕಾಡು ಪ್ರಾಣಿಗಳ ಭಯ, ಕಗ್ಗತ್ತಲೆಯ ಕಾಡಿನ ಭಯ, ಮಳೆಗಾಲದ ಅನಾಹುತಗಳ ಭಯ, ಮಕ್ಕಳ ಭವಿಷ್ಯದ ಭಯ, ಹೊಟ್ಟೆ ಪಾಡಿಗೆ ಓಡಾಡುವ ಭಯ. ಜೀವನದ ತುಂಬಾ ಭಯವನ್ನು ತುಂಬಿಕೊಂಡು ಬದುಕುವ ಜನರ ಜೀವನ ಹೇಳುವವರಿಲ್ಲದ, ಕೇಳುವವರಿಲ್ಲದ ಅನಾಥ ಶವದಂತಾಗಿದೆ. ಗಾಳಿ ಮಳೆಗೆ ಮುರಿದು ಬೀಳುವ ಮರ ಗಿಡಗಳು. ಜನರಿಗೆ ಬೆಳಕು ಇಲ್ಲದಂತೆ ಮಾಡುವುದಲ್ಲದೆ ಜನರ ಎಲ್ಲ ಸಂಪರ್ಕ ಸಾಧನವನ್ನು ಕಡಿತಗೊಳಿಸಿ ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದರೆ ಕೇಳುವ ಕಿವಿಗಳು ಕೆಲಸದ ಹಾಗೆ ಮುಚ್ಚಿ ಹೋಗಿರುವಾಗ ಯಾರಿಗೆ ಹೇಳಬೇಕು? ಯಾರನು ಕೇಳಬೇಕು?.
ಭಾಗ ೫
ಬರಿದಾದ ಜಲರಾಶಿ
ತುಂಬಿ ತಳುಕುತ್ತಿದ್ದಳು,
ಉಕ್ಕಿ ಹರಿಯುತ್ತಿದ್ದಳು,
ಜನರ ಜೀವನದಿ ಬೆರೆತು ಹೋಗಿದ್ದಳು,
ಬೇಸಿಗೆಯ ಬೇಗೆಯಲಿ ಬೆಂದು ಹೋಗಿದ್ದಳು.,
ಮಳೆ ಇಲ್ಲದೆ ಅಂದು ಬರಿದಾಗಿ ಕುಂತಿದ್ದಳು.
ತುಂಬಿ ಹರಿಯುವ ನದಿ ಶರಾವತಿ. ಸುಮಾರು ೧೩೦ ಕಿ.ಮೀ ಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ಹರಿಯುವ ಶರಾವತಿ ಜನರ ಕಣ್ಣುಗಳನ್ನು ಮಾತ್ರವಲ್ಲ ಜೀವನವನ್ನು ಸೊಗಸಾಗಿಸಿದ್ದು ಜನರ ಜೀವನಕ್ಕೆ ಬಹು ಕಾರಣಗಳಿಂದ ಉಪಯೋಗವಾಗುತ್ತಿದೆ. ಜೋಗವ ಅಂದಗೊಳಿಸುವಲ್ಲಿ ಶರಾವತಿಯ ಪಾತ್ರ ಪ್ರಮುಖವಾದದ್ದು. ಆ ಭೋರ್ಗರೆವ ಜೋಗ ಜಲಪಾತದ ಸೌಂದರ್ಯ ಕಣ್ಣುಗಳನ್ನು ತಂಪು ಮಾಡುವುದು. ಜನರ ಜೀವನ ಶರಾವತಿಯ ಹುಟ್ಟು ಅಂಬುತೀರ್ಥದಿಂದ ಹಿಡಿದು ಅದು ಸೇರುವ ಅರಬ್ಬಿ ಸಮುದ್ರದವರೆಗೆ ಜನರು ಲಾಭವನ್ನು ಪಡೆಯುತ್ತಲೆ ಇದ್ದಾರೆ. ಇಂತಹ ಶರಾವತಿಯ ಹಿನ್ನೀರಿನ ಪ್ರದೇಶದಲ್ಲಿ ಅಷ್ಟೇ ಜನರು ಜೀವನದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಶರಾವತಿಯಲ್ಲ. ಮಾನವನ ಉಪಯೋಗಕ್ಕೆ ಮಾಡಿದ ಹಲವಾರು ಕೆಲಸ ಕಾರ್ಯಗಳು ಒಳ್ಳೆಯದರ ಹಿಂದೆ ಒಂದು ಕೆಟ್ಟದ್ದು ಎಂಬಂತೆ ಸಂಕಷ್ಟಕ್ಕೆ ಈಡಾದ ಹಲವು ಜನರ ಜೀವನ ಈ ಒಂದು ಬೇಸಿಗೆಯ ಬೇಗೆಯಲ್ಲಿ ಪಡುವ ಕಷ್ಟಗಳ ಕೆಲವು ತುಣುಕುಗಳು ಅಲ್ಲಿನ ಜೀವನ ಶೈಲಿಯನ್ನು ಸ್ವಲ್ಪವಾದರು ಅರ್ಥ ಮಾಡಿಸಬಹುದು. ಬೇಸಿಗೆಯ ಬೇಗೆಯಲ್ಲಿ ಬರಿದಾದ ಶರಾವತಿಯ ಹಿನ್ನೀರು ಜೋಗವನ್ನಷ್ಟೆ ಅಲ್ಲ ಪರಿಣಾಮ ಬೀರುತ್ತಿದ್ದದ್ದು. ಶರಾವತಿ ಹಿನ್ನೀರಿನ ಆ ಒಂದು ದ್ವೀಪ ಪ್ರದೇಶದಲ್ಲಿ ಬದುಕುತ್ತಿರುವ ಎಲ್ಲರ ಜೀವನದಲ್ಲಿಯೂ ಅದರ ಪರಿಣಾಮ ಬೀರುತ್ತಿತ್ತು. ಬೆಳೆ ಬೆಳೆಯಲು ನೀರಿಲ್ಲದೆ ಜನ ಜೀವನದಲ್ಲಿ ವ್ಯತ್ತಾಸ ಉಂಟಾದರೆ ಜನರು ತಾನೇ ಏನು ಮಾಡುತ್ತಾರೆ? ಆದರು ಬೇರೆ ಕೆಲಸಗಳನ್ನು ಮಾಡಿ ಜನರ ಜೀವನ ಸಾಗುತ್ತದೆ ಎನ್ನುವಾಗ ಜನರಿಗೆ ಮತ್ತೆ ಪರಿಣಾಮ ಬೀಳುವುದು ಜನರ ಓಡಾಟದಲ್ಲಿ. ಒಂದರ ಹಿಂದೆ ಇನ್ನೊಂದು ಸಮಸ್ಯೆ ಉಂಟಾಗುವ ಇವರ ಜೀವನದಲ್ಲಿ ನೀರಿಲ್ಲದ ನದಿಯಲ್ಲಿ ದೋಣಿ ಸಾಗಿದಂತೆ. ನೀರಿಲ್ಲದೆ ಬರಿದಾದ ನದಿಯಲ್ಲಿ ದೋಣಿ ಸಾಗುವುದೇ? ಸಾಗದ ದೋಣಿ ಇದ್ದು ಏನು ಪ್ರಯೋಜನ?. ಅಲ್ಲಿನ ಜನರ ಬದುಕಿನಲ್ಲು ಹೀಗೆ, ಕೊನೆಯ ಪಕ್ಷ ಜನರಿಗೆ ಆ ದ್ವೀಪ ಪ್ರದೇಶದಿಂದ ಹೊರ ಓಡಾಡಲು ಲಾಂಚಿನ ವ್ಯವಸ್ಥೆಯೊಂದು ಮಾಡಲಾಗಿತ್ತು. ಆದರೆ ಕೆಲವೊಮ್ಮೆ ಕೆಲವು ವಸ್ತುಗಳು ಇದ್ದು ಇಲ್ಲದಂತಾಗುತ್ತದೆ. ನೀರೇ ಇಲ್ಲದಿರುವಾಗ ಮಾಡಿದ ಆ ಒಂದು ದೋಣಿಯ ವ್ಯವಸ್ಥೆಯಾದರು ಏನು ಮಾಡಿತು?. ಜನರ ಓಡಾಟ ಕಡಿತಗೊಂಡು ಜನರ ಜೀವನದ ಮೇಲೆ ಪರಿಣಾಮ ಬೀಳುವ ಸುಂದರ ವಿಚಿತ್ರ ವಿಪರ್ಯಾಸಗಳನ್ನೊಳಗೊಂಡ ಒಂದು ದ್ವೀಪ. ಜನರು ಓಡಾಡಲು ಇದ್ದ ಒಂದು ಸಾಧನವು ಇಲ್ಲದೆ ಹೋದರೆ ಏನು ಮಾಡಬಹುದು?. ಪ್ರತಿ ವರ್ಷವು ಜನರ ಆ ಕೋರಿಕೆಯು ಎಲ್ಲಿಯವರೆಗೆ ಕೋರಿಕೆಯಾಗಿಯೇ ಉಳಿಯುವುದೋ, ಅಲ್ಲಿಯ ತನಕ ಕಾಣುವ ಹಲವರ ಕಣ್ಣುಗಳು ಕಾಣದೆ ಕುರುಡಾಗಿ ಹೋದಂತೆ. ಜನ ಜೀವನಕ್ಕೆ ಅರ್ಥ ಕಲ್ಪಿಸುವ ಕೈ ಗಳು ಕಾಣದಾಗಿ ಹೋದರೆ ! ಜನರ ಬದುಕು ಹೇಗೆ ನಿರ್ಮಾಣವಾಗುವುದು?. ಅದೆಷ್ಟೋ ಹೋರಾಟಗಳ ತವರೂರು, ಅದೆಷ್ಟೋ ಕಲೆಗಳ ಮತ್ತು ಕಲಾ ಅಭಿಮಾನಿಗಳ ಬೀಡು, ಸುಂದರ ನದಿ, ಹಸಿರು ಕಾಡು, ಗುಡ್ಡ ಬೆಟ್ಟ ಇದೆಲ್ಲಾ ಇದ್ದು ಒಮ್ಮೊಮ್ಮೆ ದ್ವೀಪವೋ ಇಲ್ಲ ನಮಗೆ ದೊರೆತ ಶಾಪವೋ ಎನಿಸಿ ಬಿಡುವುದು ಅಲ್ಲಿನ ಜನರಿಗೆ . ಅಲ್ಲಿಂದ ಇಲ್ಲಿಗೆ ಮತ್ತು ಇಲ್ಲಿಂದ ಅಲ್ಲಿಗೆ ಎಂಬಂತೆ ಆ ನದಿಯ ಮೇಲೆ ಲಾಂಚ್ಗಳು ಓಡಾಡುತ್ತಿದ್ದರೇ ನೋಡಲು ಕಣ್ಣುಗಳು ಸಾಲದು. ಪ್ರತಿ ನಿತ್ಯ ಹಲವಾರು ಪ್ರವಾಸಿಗರು ಆ ಒಂದು ಲಾಂಚಿನಲ್ಲಿ ಪ್ರಯಾಣ ಮಾಡಿ ಆನಂದ ಪಡಲೆಂದೇ ಬಂದು ಹೋಗುತ್ತಾರೆ. ಆದರೆ ಅಲ್ಲಿನ ಕಷ್ಟ ನಷ್ಟ ಯಾರಿಗೂ ಊಹಿಸಲಾಗಿದೆ ಉಳಿದು ಹೋಗಿದೆ. ಆ ಒಂದು ಲಾಂಚಿನಲ್ಲಿ ವಾಹನಗಳನ್ನು ಏರಿಸುವುದು ಮತ್ತು ಇಳಿಸುವುದು ನೋಡುವ ಕಣ್ಣಿಗೆ ಆನಂದವನ್ನು ಮಾತ್ರವಲ್ಲದೇ ಬೇರೆ ಯಾವುದೋ ಒಂದು ಪ್ರಪಂಚದಲ್ಲಿ ಇರುವಂತೆ ಭಾಸವಾಗುವ ಪ್ರದೇಶ. ಪುಟ್ಟ ಪುಟ್ಟ ಹಳ್ಳಿಗಳು ಅಲ್ಲಿ ಹರಡಿಕೊಂಡಿರುವ ನೀರಿನಲ್ಲಿ ಲಾಭಕ್ಕಿಂತ ಹೆಚ್ಚಾಗಿ ನಷ್ಟವನ್ನೆ ಅನುಭವಿಸುತ್ತಿದ್ದಾರೆ. ನಿಜ ಯಾವ ಒಂದು ಲಾಭದಾಯಕ ಕೆಲಸದ ಹಿಂದೆ ಹಲವಾರು ನಷ್ಟಗಳು ಸಹಜವಾದದ್ದೆ. ಆದರೆ ಅದನ್ನು ಸರಿ ಮಾಡಿಕೊಡಲು ಯಾರೊಬ್ಬರಿಗೂ ಆಗದಿದ್ದರೆ ಲಾಭದ ಕೆಲಸವನ್ನು ಮಾಡಿ ಪ್ರಯೋಜನವಿಲ್ಲ. ಒಬ್ಬರ ಜೀವನ ಬೆಳಗಲು ಇನ್ನೊಬ್ಬರ ಜೀವನ ಕತ್ತಲಾದರೇ ಅಂತಹ ಕೆಲಸ ಎಂದೆಂದಿಗೂ ಅಪೂರ್ಣಗೊಂಡ ಕೆಲಸವಾಗಿಯೇ ಉಳಿಯುವುದು. ಒಬ್ಬರ ಹಸಿವು ಇನ್ನೊಬ್ಬರ ಹಸಿವನ್ನು ಲೆಕ್ಕಿಸದಂತ್ತಿದ್ದರೆ ಹಲವಾರು ಜನರು ಹಸಿವಿನಲ್ಲಿಯೇ ಮಣ್ಣಾಗ ಬಹುದು. ಆಗ ಪ್ರಪಂಚದಲ್ಲಿ ದಿನನಿತ್ಯ ಹಸಿವಿನ ಬಾಧೆಯಲ್ಲಿ ಸ್ಮಶಾನ ಸೇರಿದವರ ಸಂಖ್ಯೆ ಗಗನಕ್ಕೆ ಮುಟ್ಟುವ ಸಾಧ್ಯತೆ ಉಂಟಾಗುತ್ತಿತ್ತು. ಜನರ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರುವ ಮತ್ತು ಅಪಾಯ ಉಂಟು ಮಾಡುವ ಅಂಶಗಳೆಂದರೆ ಪಂಚ ಭೂತಗಳು. ಆ ಪಂಚ ಭೂತಗಳಲ್ಲಿ ಒಂದಾದ 'ವರುಣ' ಎಂದರೆ ನೀರು ಬಹು ದೊಡ್ಡ ಪ್ರಭಾವಕಾರಿ ಅಂಶ. ಇಲ್ಲಿ ಕೂಡ ಜನರು ಸಂಕಷ್ಟ ಅನುಭವಿಸುತ್ತಿಲವರುವುದು ನೀರಿಗೆ ಸಂಬಂಧಿಸಿದ ಒಂದು ಪ್ರಯಾಣ ಮಾರ್ಗಕ್ಕೆ. ಅತ್ತ ಕಡೆ ದಿನದ ಪೂರ್ತಿ ಪ್ರಯಾಣ ಮಾಡಲಾಗದೆ ವರ್ಷ ಪೂರ್ತಿ ಜನರು ಸಂಕಷ್ಟ ಅನುಭವಿಸುತ್ತಾ ಬಂದಿದ್ದರೇ, ದುರದೃಷ್ಟವಶಾತ್ ಮಳೆಯೇ ಇಲ್ಲದೆ ನೀರು ಕಡಿಮೆಗೊಂಡರು ಅಲ್ಲಿನ ಜನ ಪ್ರಯಾಣ ಅರ್ಧದಲ್ಲಿಯೇ ನಿಲ್ಲ ಬೇಕಾಗಿ ಬರಬಹುದು. ಹಲವರಿಗೆ ಇದರ ಕಾರಣ ಇನ್ನೂ ತಿಳಿಯದೆ ಇದು ಹೇಗೆ ಸಾಧ್ಯ ಎಂಬಂತೆ ಅದನ್ನು ಲೆಕ್ಕಿಸದೆ ಹೋಗುತ್ತಿದ್ದಾರೆ. ಅಲ್ಲಿನ ತುಂಬಿರುವ ನೀರು ಹಲವಾರು ಬೆಟ್ಟ ಗುಡ್ಡಗಳನ್ನು ಮುಳುಗಡೆ ಮಾಡಿಕೊಂಡು ಅದರ ಉದರದಲ್ಲಿ ಈಗಲೂ ಮರ ಗಿಡಗಳ ಪಳೆಯುಳಿಕೆ ಹಾಗೆಯೆ ಉಳಿದು ಕೊಡಿದೆ. ಮಳೆ ಇಲ್ಲದೆ ಒಮ್ಮೆ ನೀರು ಖಾಲಿಯಾದರೇ ಆ ಎಲ್ಲಾ ನೀರಿನಲ್ಲಿ ಮುಳುಗಡೆ ಹೊಂದಿರುವ ಮರ ಗಿಡಗಳ ಪಳೆಯುಳಿಕೆಗಳು ನೀರಿನ ಮಟ್ಟದಿಂದ ಹೊರ ಬಂದು ಅಲ್ಲಿನ ಜಲಪ್ರಯಾಣಾದಲ್ಲಿ ವಿಘ್ನ ಉಂಟುಮಾಡಿದರೆ ಅದು ಮತ್ತೆ ಇನ್ನಷ್ಟು ತೊಂದರೆ ಉಂಟಾಗುವ ನಿಟ್ಟಿನಲ್ಲಿ ಅಲ್ಲಿನ ಜಲ ಪ್ರಯಾಣವನ್ನು ರದ್ದುಗೊಳಿಸಬೇಕಾಗಿ ಬರುತ್ತದೆ. ಆದರೆ ಅದರ ಒಂದು ಪರಿಣಾಮ ಜನ ಜೀವನಕ್ಕೆ ಇನ್ನಷ್ಟು ಕಠಿಣವಾಗಿರುತ್ತದೆ. ಅಲ್ಲಿನ ಜನಕ್ಕೆ ಅದೊಂದು ಸುಂದರ ದ್ವೀಪ, ಆದರೇ ಇದನ್ನೆಲ್ಲ ನೆನಪು ಮಾಡಿಕೊಂಡರೆ ಆ ಒಂದು ಸುಂದರ ದ್ವೀಪವು ಅವರಿಗೆ ಶಾಪ.
ಭಾಗ - ೬
ಕನಸೋ? ನನಸೋ!
ಗುಂಪು ಗುಂಪಾಗಿ ಎಲ್ಲರೂ ಒಂದಾಗಿ ಬಣ್ಣ ಬಣ್ಣದ ಬಟ್ಟೆ ಧರಿಸಿ ಸಾಗುತ್ತಿರುವ ಆ ನವ ಪೀಳಿಗೆಯ ಪುಟ್ಟ ಮಕ್ಕಳ ಕಡೆಗೆ ಒಮ್ಮೆ ಕಣ್ಣು ಹಾಯಿಸಿದರೇ ಯಾರಿಗಾದರೂ ತಮ್ಮ ಬಾಲ್ಯ ನೆನಪಾಗದೆ ಹೋದಿತೇ!! ಕಲ್ಮಶವಿಲ್ಲದ ಮನಗಳು ಏನು ಅರಿಯದ ಮುಗ್ಧ ಮುಖಗಳು ಎಂದು ಅವರತ್ತ ಗಮನಹರಿಸುತ್ತಲೆ ತಿಳಿದು ಬರುತ್ತದೆ. ಅದು ಕನಸೋ ಇಲ್ಲವೇ ನನಸೋ ಎಂದು ಅರಿಯಲು ಯಾರಿಗಾದರೂ ಸಮಯ ಬೇಕಾಗಿಯೇ ತೀರುತ್ತದೆ. ಅಂದು ಶಾಲೆಯಿಂದ ಮನೆಗೆ ಮರಳುತ್ತಿದ್ದ ಒಬ್ಬ ಬಾಲಕ ಒಮ್ಮೆಲೇ ಜಾರಿ ನೆಲದ ಮೇಲೆ ಬಿದ್ದು ಒದ್ದಾಡಲು ಶುರು ಮಾಡಿದ್ದ ಹುಡುಗ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಅಕ್ಕ ಪಕ್ಕದಲ್ಲಿದ್ದ ಜನರೆಲ್ಲಾ ಓಡಿ ಬಂದು ಆತನನ್ನು ಹೊತ್ತೊಯ್ಯಲು ಮುಂದಾಗಿದ್ದರೆ ಅವರಿಗೆ ಎಲ್ಲಿಗೆ ಹೊತ್ತೊಯ್ಯ ಬೇಕು ಎಂದು ತಿಳಿಯದೆ ಅಲ್ಲಿದ್ದ ಒಬ್ಬ ನಾಟಿ ವೈದ್ಯರತ್ತ ಹೊತ್ತೊಯ್ಯದ್ದರು. ಆ ಬಾಲಕನ ಸ್ತಿತಿ ಅರಿಯಲು ಆಗದೆ ಅಲ್ಲಿಂದ ಆತನನ್ನು ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿ ಆತನನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವ ಎಲ್ಲಾ ವ್ಯವಸ್ಥೆ ಮಾಡಿದ್ದರು. ಆದರೆ ಆ ಪುಟ್ಟ ಬಾಲಕ ಇನ್ನು ಕಣ್ಣು ತೆರೆದಿರಲಿಲ್ಲ. ಆದ್ದರಿಂದ ಅಲ್ಲಿ ನೆರೆದಿದ್ದ ಕುಟುಂಬಸ್ಥರು ಗಾಬರಿಗೊಂಡು ಅಲ್ಲಿಗೆ, ಇಲ್ಲಿಗೆ ಎಂದು ಆತುರವಾಗಿ ಆಲೋಚಿಸುತ್ತಾ ಅವನ ತಾಯಿಗೆ ಸಮಾಧಾನ ಹೇಳುತ್ತಿದ್ದರು. ತಾಯಿಯ ಮಮತೆ ಆಕೆಯನ್ನು ಇನ್ನೂ ಧೈರ್ಯ ಹೀನಗೊಳಿಸಿ ಆಕೆಯನ್ನು ಇನ್ನು ಹೆಚ್ಚು ಸಂಕಟಕ್ಕೆ ತಳ್ಳಿಹಾಕಿತು. ಹೇಗೋ ಅಲ್ಲೇ ಸಮೀಪದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದರು. ಆ ಬಾಲಕ ತುಂಬಾ ತುಂಟ ಹಾಗೂ ಶಾಲೆಯಲ್ಲಿಯೇ ಅತ್ಯಂತ ಒಳ್ಳೆಯ ವಿದ್ಯಾರ್ಥಿ. ಅಂದು ಇದನ್ನೆಲ್ಲ ಕೇಳಿ ನಾನು ಯೋಚಿಸುತ್ತ ಮಲಗಿದೆ. ಬೆಳಿಗ್ಗೆಯ ಸಮಯ ಊರಿನ ಪ್ರತಿ ಒಬ್ಬರು ಗುಂಪು ಗುಂಪಾಗಿ ನಿಂತು ಬಾಲಕನ ಕುರಿತು ಮಾತನಾಡುತ್ತಿದ್ದಾರೆ. ನನಗೆ ಕೇಳಿ ಬಂದದ್ದು ಆ ಬಾಲಕನ ಜೀವನದಲ್ಲಿ ಇಷ್ಟು ಬೇಗ ಹೀಗೆ ಆಗಬಾರದಿತ್ತು ಎನ್ನುವ ವಿಷಯ. ಎಲ್ಲರೂ ತಮ್ಮ ತಮ್ಮ ಮನೆಗಳ ಮತ್ತು ಮಕ್ಕಳ ಆರೋಗ್ಯದ ಕುರಿತು ಚಿಂತೆಯಲ್ಲಿದ್ದರು. ಇಂತಹ ಸ್ಥಿತಿ ನಮಗೆ ಬಂದರು ಬರಬಹುದು, ಒಂದೊಮ್ಮೆ ಬಂದರೆ ಏನು ಮಾಡಬೇಕು ಎಂದು ಎಲ್ಲರು ಭಯಭೀತರಾಗಿದ್ದರು. ಹಳ್ಳಿಯ ಜನರು ಯಾರಿಗೆ ಯಾವಾಗ ಏನಾದರೂ ಆಗಬಹುದು. ಯಾವ ಹೊಸ ರೋಗವಾದರು ಬರಬಹುದು. ಎಲ್ಲರೂ ಒಂದಾಗಿ ಆ ಹುಡುಗನ ಜೀವನ ಮುಗಿದು ಹೋಯಿತಲ್ಲ ಎಂದು ಮಾತನಾಡುವಾಗ ನನಗೆ ಒಮ್ಮೆಲೇ ಹೃದಯ 'ದಗ್' ಎಂದಿತ್ತು. ಆರೋಗ್ಯವಾಗಿದ್ದ ಹುಡುಗ ಹೇಗೆ ತಾನೆ ಒಂದೇ ಒಂದು ರಾತ್ರಿ ಬೆಳಗಾಗುವುದರೊಳಗೆ ಮೃತಪಟ್ಟ ಎನ್ನುವ ವಿಚಾರ ತಿಳಿಯದೆ ಎಲ್ಲರನ್ನು ವಿಚಾರಿಸಿ ನೋಡಿದೆ. ಎಲ್ಲರೂ ಯಾವುದೋ ಹೊಸದೊಂದು ಕಾಯಿಲೆ ನಮ್ಮೂರಿನಲ್ಲಿ ಕಾಲಿಟ್ಟರು ಹಾಗೆ ಮಾತನಾಡುತ್ತಿದ್ದರು. ಜನರೆಲ್ಲಾ ಸರ್ಕಾರದ ವಿರುದ್ಧ ಸರಿಯಾದ ಔಷಧ ಪ್ರತಿಯೊಂದು ಊರಿನಲ್ಲಿ ದೊರೆಯಬೇಕು ಆ ಒಂದು ಹೊಸ ರೋಗದಿಂದ ಯಾರೊಬ್ಬರೂ ಮೃತ ಹೊಂದದೆ ಎಲ್ಲರು ಸರಿಯಾದ ಆರೋಗ್ಯದಿಂದ ಬದುಕಬೇಕು. ೨೪ ಗಂಟೆಗಳ ಕಾಲ ಅಂಬುಲೆನ್ಸ್ ಸೌಲಭ್ಯ ಕಲ್ಪಿಸ ಬೇಕು ಎಂದು ಎಲ್ಲರು ಸರ್ಕಾರದ ವಿರುದ್ಧ ಸಿಡಿದೆದ್ದು ನಿಂತಿದ್ದರು. ಹಳ್ಳಿಯ ಜನರ ಬದುಕಿನಲ್ಲಿ ಯಾವುದೇ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯನ್ನು ಎಚ್ಚರ ವಹಿಸುವಂತೆ ಘೋಷಣೆ ಕೂಗುತ್ತಿದ್ದರೆ ಅಲ್ಲೊಬ್ಬ ವ್ಯಕ್ತಿ ಯಾವುದೋ ಒಂದು ಹೊಸ ರೋಗ ಬಂದು ಸತ್ತರೆ ಇದಕ್ಕೆಲ್ಲ ಸರ್ಕಾರ ಏನು ಮಾಡಬೇಕು ಎಂಬಂತೆ ಮಾತನಾಡುತ್ತಿದ್ದರೇ ಅದೇ ವ್ಯಕ್ತಿಯನ್ನು ಎಲ್ಲರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಹೊಸ ಕಾಯಿಲೆಗೆ ಸರ್ಕಾರ ಔಷಧವನ್ನು ಕಂಡು ಹಿಡಿಯುವ ಯಾವುದೇ ಅವಶ್ಯಕತೆ ಇಲ್ಲ. ಆದರೆ ಸರಿಯಾದ ಪ್ರಥಮ ಚಿಕಿತ್ಸೆ ಸಿಗುವಂತೆ ಮಾಡಿ ಇನ್ನಾದರೂ ಜೀವ ಉಳಿಸುವ ಯೋಚನೆ ಮಾಡಲಿ ಎಂಬ ಎಲ್ಲರ ಒಂದು ಅಭಿಪ್ರಾಯ ಅಲ್ಲಲ್ಲಿ ವ್ಯಕ್ತವಾಗಿತ್ತು. ಎಲ್ಲಾ ಕಾಯಿಲೆಗಳು ಮೊದ ಮೊದಲು ಬಂದಾಗ ಹೊಸ ಕಾಯಿಲೆಗಳೆ ಆದರೆ ಆ ಒಂದು ಹೊಸ ಕಾಯಿಲೆಗೆ ಔಷಧಗಳೇ ಇರದೆ ಹೋಗಿದ್ದರೆ ಎಲ್ಲಾ ಕಾಯಿಲೆಗಳು ಹೊಸ ಕಾಯಿಲೆಯಾಗಿಯೇ ಉಳಿಯುತ್ತಿತ್ತು. ಪ್ರಥಮ ಚಿಕಿತ್ಸೆ ಸರಿಯಾದ ಔಷಧ ಸಿಗುವವರೆಗೆ ರೋಗಿಯನ್ನು ಸಾಯದಂತೆ ತಡೆಯ ಬಹುದು ಎನ್ನುವುದು ಎಲ್ಲರ ಅಭಿಪ್ರಾಯ. ಹೀಗೆ ಎಲ್ಲಾ ಹೊಸ ಹೊಸ ಅಭಿಪ್ರಾಯದಲ್ಲಿ ಅಲ್ಲಿದ್ದ ಒಂದು ಆಸ್ಪತ್ರೆಯ ವ್ಯವಸ್ಥೆ ಹೇಗಿದೆ ಎನ್ನುವುದು ಹೊರಬಂದಿತು. ಸರಿಯಾದ ಡಾಕ್ಟರ್ ಇಲ್ಲದ, ಹಳೆಯ ಕಟ್ಟಡಗಳ, ಯಾವುದೇ ಸರಿಯಾದ ಸೌಲಭ್ಯಗಳಿಲ್ಲದ ಮತ್ತು ರೋಗಿಗಳ ತುರ್ತು ಸಮಯದಲ್ಲಿ ಕೊಂಡೊಯ್ಯಲು ಒಂದು ಸರಕಾರಿ ಅಂಬುಲೆನ್ಸ್ನ ಸೇವೆಯು ಇಲ್ಲದೆ ಇರುವುದು ಬೆಳಕಿಗೆ ಬಂದಿತು. ಅಂತಹ ನೂರಾರು ಊರುಗಳು ಇರುವುದು ತಿಳಿದು ಬಂದ ಕಾರಣ ರಾಜ್ಯದ ಎಲ್ಲೆಡೆ ಜನರು ತಮಗೆ ಸರಿಯಾದ ಸೌಲಭ್ಯ ಬೇಕೆಂದು ಕೇಳಲು ಶುರು ಮಾಡಿದರು. ಆ ಒಂದು ಚಿಕ್ಕ ಊರಿನಲ್ಲಿ ನಡೆದ ಒಂದು ಅಮಾಯಕ ಜೀವದಾನದಲ್ಲಿ ಸರಿಯಾದ ದಾರಿ ಹಿಡಿಯಲು ಹೊರಟಿರುವ ಸರ್ಕಾರವನ್ನು ನೋಡಿ ಈಗಲಾದರೂ ಎಲ್ಲರಿಗೂ ಸರಿಯಾದ ಚಿಕಿತ್ಸೆ ದೊರೆಯುತ್ತದೆ. ಯಾವ ವ್ಯಕ್ತಿಯು ಕೈಯಲ್ಲಿ ಕಾಸಿಲ್ಲವೆಂದು ಚಿಕಿತ್ಸೆ ಪಡೆಯದೆ ಉಳಿಯುವುದಿಲ್ಲ ಎಲ್ಲರು ಒಳ್ಳೆಯ ಚಿಕಿತ್ಸೆ ಪಡೆಯುತ್ತಾರೆ ಎಂದು ತಿಳಿದು ನನಗೇನೂ ಬಹಳ ಸಂತಸ ಉಂಟಾಯಿತು. ಮರುದಿನ ಎಲ್ಲಾ ಕಾಲಿ ಇರುವ ವೈದ್ಯರ ಹುದ್ದೆಯನ್ನು ತುಂಬಲಾಗಿತ್ತು. ಸರ್ಕಾರಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದವರು ಇನ್ನು ಮುಂದೆ ಒಳ್ಳೆಯ ಚಿಕಿತ್ಸೆ ದೊರೆಯ ಬಹುದು ಎಂದು ಎಲ್ಲ ತಮ್ಮ ತಮ್ಮ ಆರೋಗ್ಯದ ಗಮನ ಹರಿಸಲು ಶುರು ಮಾಡಿದ್ದರು. ಇನ್ನೇನು ಎಲ್ಲಾ ಸರಿ ಹೋಯಿತು ಆದರೆ ಆ ಒಂದು ಜೀವ ಈ ಲೋಕವನ್ನು ಬಿಟ್ಟು ಹೋಯಿತಲ್ಲ ಎಂದು ದುಃಖಿಸ ಹೊರಟಾಗ ಒಮ್ಮೆಲೇ ಎಚ್ಚೆತ್ತು ಕುಳಿತ ನಾನು ಕಂಡದ್ದು ಕನಸು ಎಂದು ಅರಿಯುವ ಹೊತ್ತಿಗೆ ಆ ಹುಡುಗನ ನೆನಪಾಯಿತು. ಹಾಸಿಗೆಯಿಂದ ಎದ್ದ ನಾನು ಕೂಡಲೇ ಮುಖ ತೊಳೆದು ಹೊರ ಬಂದು ನೋಡಿದರೆ ಆ ಕನಸಿನಲ್ಲಿ ನಡೆದಂತೆ ಎಲ್ಲರು ಹೊರಗಡೆ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದರು. ಯಾವುದೋ ಅನಾಹುತ ನಡೆದಿರ ಬಹುದು ಎಂದು ಹೆದರಿಕೆಯಿಂದ ಅಲ್ಲಿದ್ದ ನನ್ನ ಸ್ನೇಹಿತನ್ನು ಕರೆದು ಕೇಳಿದೆ. ಅವರೆಲ್ಲ ಯಾವುದೋ ಬೇರೆ ವಿಷಯದ ಕುರಿತು ಮಾತನಾಡುತ್ತಿದ್ದರು. ಆದ್ದರಿಂದ ನಾನು ಅಲ್ಲಿಂದ ಹೊರಟು ಆ ಬಾಲಕನ ಸಂಬಂಧಿಗಳ ಮನೆಯ ಮುಂದೆ ಹೋಗಿ ನಿನ್ನೆಯ ಘಟನೆಯ ಪಲಿತಾಂಶವನ್ನು ಕೇಳಿದ. ಅಲ್ಲೇ ಬಾಗಿಲ ಬಳಿ ಕುಳಿತಿದ್ದ ಅಜ್ಜಿಯೊಬ್ಬರು ಕಣ್ಣೀರು ಹಾಕುತ್ತಾ ನನ್ನ ಮೊಮ್ಮಗನನ್ನು ಆ ದೇವರೇ ಕಾಪಾಡಬೇಕು ಆದ್ಯಾವುದೊ ದೊಡ್ಡ ರೋಗದಿಂದ ಆತನನ್ನು ವಾಸಿಮಾಡಿ ಅವನು ಗುಣಮುಖವಾಗಬೇಕು ಎಂದು ಹೇಳಿದಾಗ ನನಗೆ ಮತ್ತೆ ಏನು ನಡೆಯುತ್ತಿದೆ ಎಂಬುವುದು ತಿಳಿಯಲಿಲ್ಲ. ನನ್ನ ಕನಸಿನಲ್ಲಿ ಕಂಡಂತೆ ಯಾವುದೋ ಹೊಸ ರೋಗ ಬಂದಿದೆ ಎಂದು ಹೆದರಿ ನಾನು ಮತ್ತೆ ಆ ಬಾಲಕನ ತಂದೆಗೆ ಕರೆ ಮಾಡಿ ಪೂರ್ತಿ ವಿಷಯವನ್ನು ಅರಿತುಕೊಂಡೆ. ಆ ಬಾಲಕನಿಗೆ ಯಾವುದೇ ಹೊಸ ರೋಗ ಬಂದಿರಲಿಲ್ಲ ಅದರ ಬದಲಾಗಿ ದೊಡ್ಡದೊಂದು ರೋಗ ಆತನ ಜೀವನ ಪ್ರವೇಶ ಮಾಡಿದ್ದನ್ನು ತಿಳಿದು ಮೂಕನಾಗಿ ಕರೆಯನ್ನು ಅಂತ್ಯ ಗೊಳಿಸಿ ಅಲ್ಲಿಂದ ಹೊರಟು ಬಂದೆ. ಮನೆಗೆ ಬಂದ ನನ್ನ ಮನದಲ್ಲಿ ಉಳಿದ ಪ್ರಶ್ನೆ ಆತನ ಜೀವನ ಹೇಗೆ ಸರಿ ಹೋಗುವುದು ಎನ್ನುವುದು. ಆ ಪುಟ್ಟ ಬಾಲಕನ ಹೃದಯದಲ್ಲಿ ಸಣ್ಣದಾದ ರಂಧ್ರವೊಂದು ಆತನನ್ನು ಆ ದಿನ ಒಮ್ಮೆಲೇ ನೆಲದ ಮೇಲೆ ಬೀಳುವಂತೆ ಮಾಡಿತ್ತು. ಈಗಿನ ಯುಗದಲ್ಲಿ ಇದೆಲ್ಲವು ಸಣ್ಣ ಕೆಲಸ ವೈದ್ಯರ ತಂಡಕ್ಕೆ. ಎಕೆಂದರೆ ಇಂದು ಸರಿ ಆಗದ ಯಾವುದೇ ರೋಗವಿಲ್ಲ. ಆದರೆ ಇಲ್ಲದಿರುವ ಸಮಸ್ಯೆ ಈಗ ದುಡ್ಡಿನದ್ದಾಗಿತ್ತು. 'ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು' ಎಂಬ ದ. ರಾ ಬೇಂದ್ರೆಯವರ ಮಾತು ನೆನಪಾಯಿತು. ಇಲ್ಲಿ ಒಂದು ಆರೋಗ್ಯವಂತರಾಗಿರ ಬೇಕು ಇಲ್ಲವೇ ಇಂದೇನು ಸಂಭವಿಸುತ್ತದೆಯೋ? ನಾಳೆ ಏನು ಸಂಭವಿಸುತ್ತದೆಯೋ? ಎಂದು ಕೈಯಲ್ಲಿ ಕಾಸು ಹಿಡಿದು ಸಿದ್ಧವಾಗಿರ ಬೇಕು.
ಅಮ್ಮನಿಗೊಂದು ಪತ್ರ
ಆಗಿನ್ನೂ ಶಾಲೆಯ ಮೆಟ್ಟಿಲುಗಳನ್ನು ಏರಿ ಆತನಿಗೆ ವಿದ್ಯಾಭ್ಯಾಸ ಶುರುವಾಗಿರಲಿಲ್ಲ. ಅಷ್ಟರಲ್ಲಿ ಅವನಿಗೆ ಒಂದು ಒಳ್ಳೆಯ ಅವಕಾಶ ದೊರೆತಿತ್ತು. ಬೆಳೆದಿದ್ದು ಬಡ ಕುಟುಂಬದಲ್ಲಿಯಾದರೂ ಆತನಿಗೆ ದೊರೆತ ಆ ಒಂದು ಅವಕಾಶ ಆತನ ಜೀವನವನ್ನು ಎರಡು ಭಾಗವನ್ನಾಗಿಸಿತ್ತು. ಉಚಿತವಾಗಿ ವಿದ್ಯಾಭ್ಯಾಸವು ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಜವಾಹರ ನವೋದಯ ವಿದ್ಯಾಲಯ ಸಮಿತಿಯ ವತಿಯಿಂದ ದೊರೆತಿತ್ತು. ಆತನಿಗೆ ಉಚಿತ ವಿದ್ಯಾಭ್ಯಾಸ ದೊರೆತ ಕಾರಣ ಆತನು ತನ್ನ ಕುಟುಂಬದಿಂದ ಹೊರ ಉಳಿದು ವಿದ್ಯಾಭ್ಯಾಸ ಮಾಡಬೇಕಾಗಿ ಬಂದಿತ್ತು ಆತ ತನ್ನ ಬಾಲ್ಯದಿಂದಲೇ ಹೊರಗಡೆ ಪ್ರಪಂಚದಲ್ಲಿ ಬೆಳೆಯುತ್ತಾ ತಂದೆ ತಾಯಿಯಿಂದ ದೂರ ಉಳಿದಿದ್ದ. ವರುಷ ಕಳೆಯುತ್ತಾ ಬಂದಂತೆ ಆತನ ವಿದ್ಯಾಭ್ಯಾಸ ಕೊನೆಗೊಂಡಿತು. ಸತತ ೧೦ ವರ್ಷಗಳ ಕಾಲ ಮನೆಯಿಂದ ಹೊರಗಡೆ ಬೆಳೆದು ಆತ ತನ್ನವರ ಒಡನಾಟಕ್ಕೆ ಕಾದು ಕುಳಿತಿದ್ದ. ಆದರೆ ಆತನಿಗೆ ವಿದ್ಯಾಭ್ಯಾಸ ಮುಗಿಯುತ್ತಲೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ದೊರೆತಿತ್ತು. ಕೈಗೆ ಬಂದ ಕೆಲಸವನ್ನು ಯಾರೂ ತಾನೇ ಬೇಡ ಎನ್ನುವರು? ಆದ್ದರಿಂದ ಆತ ಕೆಲಸಕ್ಕೆಂದು ಮತ್ತೆ ತನ್ನ ಊರಿನಿಂದ ಹೊರಗೆ ಉಳಿಯಬೇಕಾಗಿ ಬಂದಿತು. ಮೊದಲೇ ಮನೆಯಿಂದ ಹೊರಗಡೆ ಬೆಳೆಯುತ್ತಿದ್ದ ಆತನಿಗೆ ದೊರೆತ ತನ್ನವರ ಒಡನಾಟ ಅತಿ ಕಡಿಮೆ. ಆತನಿಗೆ ಮೊದಲಾದರೆ ವರ್ಷದಲ್ಲಿ ಶಾಲಾ ಕಾಲೇಜಿನ ವಾರ್ಷಿಕ ಮತ್ತು ಅರ್ಧ ವಾರ್ಷಿಕ ರಜೆಗಳು ದೊರೆಯುತ್ತಿದ್ದವು. ಆತನು ಮನೆಗೆ ಬಂದು ಅಣ್ಣ - ತಮ್ಮ ಇಬ್ಬರೊಂದಿಗೆ ಅತಿ ಸಂತೋಷವಾಗಿ ಕೆಲ ದಿನಗಳ ಕಾಲ ಇರುತ್ತಿದ್ದ. ಆದರೆ ಈಗ ಕೆಲಸದ ಕಾರಣ ಅತಿ ಹೆಚ್ಚು ರಜೆಗಳನ್ನು ಹಾಕುವಂತಿಲ್ಲ. ಹಾಗೆಯೆ ಆತನ ಮನೆ ಇರುವುದು ಮತ್ತು ಆತ ಇರುವುದು ತುಂಬಾ ಅಂತರದಲ್ಲಿ. ಹಾಗಾಗಿ ಒಂದೆರಡು ದಿನ ರಜೆ ದೊರೆತರು ಆತನಿಗೆ ತನ್ನ ಊರಿನ ಆ ಒಂದು ಸಂಪರ್ಕದ ಸಮಸ್ಯೆಯ ಕಾರಣ ಮನೆಗೆ ಬಂದು ಹೋಗುವುದು ತುಂಬಾ ಕಷ್ಟವಾಗುತ್ತದೆ. ಆತನ ಸ್ನೇಹಿತರು ದೊರೆತ ರಾಜ ದಿನಗಳಲ್ಲಿ ರಾತ್ರೋರಾತ್ರಿ ಪ್ರಯಾಣ ಮಾಡಿ ಮನೆಗೆ ತೆರಳಿ ಆನಂದಿಸುತ್ತಿದ್ದರೆ ಈತನನ್ನು ಮನೆಯ ದಾರಿ ಹಿಡಿಯಲು ಅಲ್ಲಿನ ಒಂದು ಲಾಂಚ್ ಸಮಯ ಒಂದಕ್ಕೊಂದು ಹೊಂದಿಕೊಳ್ಳುವ ಯಾವುದೇ ಅವಕಾಶಗಳು ಇರಲಿಲ್ಲ. ಹಾಗಾಗಿ ಈತನಿಗೆ ಯಾವುದೇ ಪ್ರಯಾಣ ಮಾಡಲು ಒಂದು ಬೆಳಗಿನ ಜಾವ ಮಾತ್ರ ಸಾಧ್ಯವಾಗುತ್ತಿತ್ತು. ಇಲ್ಲವಾದರೆ ಈತ ಶಿವಮೊಗ್ಗದ ತನಕ ಪ್ರಯಾಣ ಬೆಳಸಿ ಅಲ್ಲಿದ್ದ ಒಂದು ತನ್ನ ಸ್ನೇಹಿತನ ಮನೆಯಲ್ಲಿ ಉಳಿದು ಮತ್ತೆ ಬೆಳಗಿನ ಜಾವ ತನ್ನ ಊರಿಗೆ ಹೊರಡಬೇಕಾಗಿತ್ತು. ಹಾಗಾಗಿ ಆತನ ರಜೆ ೨ ದಿನಗಳಿದ್ದರೆ ಮನೆಗೆ ಹೋಗಿ ಮುಖ ತೋರಿಸಿ ಮತ್ತೆ ಮರಳುವಂತಿತ್ತು. ಆತನಾದರು ಏನು ಮಾಡಬಲ್ಲ ಇರುವ ಬಸ್ಸಿನ ಎಲ್ಲಾ ಸಮಯ ಮುಗಿದು ಹೋದಮೇಲೆ ಏನು ತಾನೆ ಮಾಡಬಹುದು?!. ಇದು ಆತನ ಸಮಸ್ಯೆ ಮಾತ್ರವಲ್ಲ ಅಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯದ್ದು. ಮನೆಯಿಂದ ಹೊರಗುಳಿದು ಓದುತ್ತಿರುವ ಅಲ್ಲಿನ ಪ್ರತಿ ವಿದ್ಯಾರ್ಥಿಗೆ ಸಂಬಂಧಿಸಿದ ಸಮಸ್ಯೆ. ಹೇಳುವವರಿಲ್ಲ, ಕೇಳುವವರಿಲ್ಲ. ಆತನು ಮಾಡುತ್ತಿದ್ದ ಪ್ರತಿಯೊಂದು ಕಾರ್ಯ ಆತನ ಜೀವನದಲ್ಲಿ ಸಂತಸ ಮೂಡಿಸಿದರೆ, ಈ ಒಂದು ಸಮಸ್ಯೆ ಆತನ ಮನಸ್ಸನ್ನು ಎಂದೆಂದಿಗೂ ಗಾಯಗೊಳಿಸುತ್ತಲೇ ಇತ್ತು. ಕೆಲವೊಂದು ಮಕ್ಕಳಿಗೆ ಮನೆ ಎಂದರೆ ಅದೇನೋ ಒಂದು ಸಂತಸ. ಅಂತಹ ಮಕ್ಕಳು ಹೇಗೋ ಎಲ್ಲವನ್ನೂ ತೊರೆದು ಹೊರಗುಳಿದು ಅಭ್ಯಾಸ ನಡೆಸಿದರೆ ಸಿಗುವ ಒಂದೆರಡು ರಜಾ ದಿನಗಳನ್ನು ಸಹ ಸಂತಸದಿಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಸೇತುವೆ ಕಾಮಗಾರಿ ಶುರುವಾಗಿದೆ ಎಂಬ ವಿಚಾರ ಅಲ್ಲಿನ ಪ್ರತಿಯೊಂದು ಮನಗಳಿಗೆ ಏನೋ ಒಂದು ಧೈರ್ಯ ತಂದಿದ್ದರು ಸೇತುವೆ ನಿರ್ಮಾಣ ಪೂರ್ಣವಾಗುವ ವರೆಗೂ ಏನನ್ನೂ ಹೇಳಲು ಸಾದ್ಯವಿಲ್ಲ.
ಅಂದು ಆತ ಬರೆದಿದ್ದ ಅಮ್ಮನಿಗೊಂದು ಪತ್ರ,
ಪ್ರೀತಿಯ ಅಮ್ಮ,
ನಾನಿಲ್ಲಿ ಕ್ಷೇಮವಾಗಿದ್ದೇನೆ. ನೀವೇಲ್ಲರು ಕ್ಷೇಮ ಎಂದು ಭಾವಿಸಿದ್ದೇನೆ. ಈ ವರ್ಷವೂ ನನಗೆ 5 ದಿನಗಳ ಕಾಲ ರಜಾ ದೊರೆತಿದೆ. ನಾನು ಈ ವರ್ಷ ಹಬ್ಬಕ್ಕೆಂದು ಮನೆಗೆ ಬರುತ್ತಿರುವೆನು. ನಾವೆಲ್ಲರು ಈ ವರ್ಷದ ಗಣೇಶೋತ್ಸವವನ್ನು ಅತಿ ಸಂಭ್ರಮದಿಂದ ಆಚರಿಸೋಣ. ಈ ವರ್ಷ ನಾನಿಲ್ಲವೆಂದು ಬೇಸರಗೊಳ್ಳದೆ ಹಬ್ಬವನ್ನು ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಬೇಕು. ಎಂಟು ವರ್ಷಗಳಿಂದ ನಾನು ನಮ್ಮೂರಿನ ಗಣೇಶೋತ್ಸವದಲ್ಲಿ ಭಾಗವಹಿಸಲು ಆಗಿರದಿದ್ದರು ನನ್ನ ಮನಸ್ಸು ಮಾತ್ರ ೮ ವರ್ಷಗಳಿಂದ ಇಲ್ಲಿಯೇ ಸುತ್ತುತ್ತಿತ್ತು. ಚಿಕ್ಕಂದಿನಲ್ಲಿ ನೋಡಿದ್ದ ನಮ್ಮೂರಿನ ಆ ಒಂದು ಸಂಭ್ರಮಾಚರಣೆ ಈ ವರ್ಷ ನೋಡುವ ಭಾಗ್ಯ ದೊರೆತಿದೆ. ಖಚಿತವಾಗಿ ಮುಂದೊಮ್ಮೆ ನಾವೆಲ್ಲರೂ ಒಟ್ಟಿಗೆ ಹಬ್ಬವನ್ನು ಆಚರಿಸುವ ಸಮಯ ಬಂದೆ ಬರುತ್ತದೆ ಎಂದು ನಾನು ಕಾಯುತ್ತಿದ್ದೆ. ನಾವು ಹುಟ್ಟಿ ಬೆಳೆದ ಜಾಗದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಂತಸ ವ್ಯಕ್ತಪಡಿಸಲಾಗದಂತಹದ್ದು. ನಮ್ಮೂರಿನ ಆ ಒಂದು ಸಂಪರ್ಕವು ಸರಿ ಇದ್ದಿದ್ದರೆ ನಾನು ಈ ೮ ವರ್ಷಗಳ ಕಾಲ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಎಲ್ಲರ ಜೊತೆ ಸಂತಸದಿಂದ ಬೆಳೆಯುತ್ತಿದ್ದೆ. ಇಂದು ನನಗೆ ಮೊದಲ ಬಾರಿಗೆ ನಮ್ಮೂರಿನ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದ್ದರು ಈ ಒಂದು ವರ್ಷದಂತೆ ಪ್ರತಿ ವರ್ಷವೂ ಇರುವುದಿಲ್ಲ ಎನ್ನುವುದು ಕಟು ಸತ್ಯ. ಇಷ್ಟು ವರ್ಷಗಳು ಕಷ್ಟಪಟ್ಟು ಒಮ್ಮೆಲೇ ಎಲ್ಲವನ್ನೂ ಬಿಟ್ಟು ನಮ್ಮೂರಿಗೆ ಬಂದು ಇಲ್ಲಿಯೇ ಇದ್ದು ಬಿಡೋಣ ಎಂದು ಅದೇಷ್ಟೋ ಭಾರಿ ಅಂದು ಕೊಂಡರು ಕಲಿತ ವಿದ್ಯೆಗೆ ಬೆಲೆ ಇಲ್ಲದಂತಾಗಿ ಬಿಡುತ್ತದೆ ಎನ್ನುವ ನೋವು. ನನ್ನ ಪ್ರತಿಯೊಂದು ನೋವಿಗೆ ನಮ್ಮೂರಿನ ಮೂಲಸೌಕರ್ಯಗಳು ಸ್ಪಂದಿಸಿದ್ದರೆ ಆ ನೋವುಗಳು ಅಂತ್ಯಗೊಳ್ಳುತ್ತಿದ್ದವೋ ಏನೋ ತಿಳಿಯದು. ಆದರೆ ಎಲ್ಲವೂ ಸರಿಯಾಗಿ ಸ್ಪಂದಿಸಿದ್ದರೆ ಎಲ್ಲವು ಸುಖಮಯವಾಗಿ ಇರುತ್ತಿತ್ತು ಎನ್ನುವುದು ಸತ್ಯ ಸಂಗತಿ. ನಮ್ಮೂರಿನಲ್ಲಿ ಹುಟ್ಟಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ಇಲ್ಲಿನ ಸ್ವಚ್ಛ ಗಾಳಿ, ಸುಂದರ ಪರಿಸರ ಮತ್ತು ಎಲ್ಲದಕ್ಕೂ ಹೊಂದಿಕೊಳ್ಳುವ ಜನ ಇವೆಲ್ಲವೂ ನನ್ನನ್ನು ಇಲ್ಲಿಯೇ ಬೆಳೆಯ ಬೇಕೆಂದು ಹುರಿದುಂಬಿಸಿದರೂ ಇಂದಿಗೂ ನನ್ನಲ್ಲಿ ಉಳಿದಿರುವ ಆ ಒಂದು ನೋವು ನಮ್ಮೂರಿನಲ್ಲಿ ಇನ್ನೂ ಸರಿಗೊಳ್ಳದ ಆ ಒಂದು ಮೂಲ ಸೌಕರ್ಯಗಳ ಸಮಸ್ಯೆ. ಅದೆಷ್ಟೋ ಬಾರಿ ಸ್ನೇಹಿತರು ಕೇಳಿಯೆ ಬಿಡುತ್ತಿದ್ದರು ಆ ಹಳ್ಳಿಯಲ್ಲಿ ಏನಿದೆ?. ಅಲ್ಲಿ ಜನರು ಜೀವನ ನಡೆಸುವುದೇ ಕಷ್ಟ, ಹೀಗಿರುವಾಗ ಅಲ್ಲಿ ಅದೆಷ್ಟೋ ದಿನಗಳಿಂದ ಹೇಗೆ ನೀವು ಅಲ್ಲಿಯೇ ಬದುಕುತ್ತಿದ್ದಿರಾ ಎನ್ನುವುದು ಅವರ ಪ್ರಶ್ನೆ. ಇನ್ನು ಅವರ ಪ್ರಶ್ನೆಗೆ ಪೂರ್ತಿಯಾಗಿ ಉತ್ತರಿಸುವ ಸಮಯ ಬರದೇ ಇರುವುದು ನನ್ನ
ಮನೆಯ ಮಾಳಿಗೆಯಲ್ಲಿ
ಸೊರುತಿಹದು ಮನೆಯ ಮಾಳಿಗೆ ಅಜ್ಞಾನದಿಂದ ಎಂಬ ಶಿಶುನಾಳ ಶರೀಫರ ಸಾಹಿತ್ಯದ ಸಾಲುಗಳು ನಮ್ಮಲ್ಲಿ ಅಜ್ಞಾನ ತುಂಬಿದ್ದರೆ ಮನೆಯ ಮಾಳಿಗೆ ಕೂಡ ಸೊರುವುದು ಎಂದು ಎಲ್ಲರನ್ನೂ ಅಜ್ಞಾನದಿಂದ ಹೊರ ಬರಲು ಪ್ರೇರೇಪಿಸುತ್ತಿರುವಾಗ ಅಜ್ಞಾನ ತುಂಬಿದವರು ಹೊರ ಬರುವರೇ?. ಅಜ್ಞಾನ ಎನ್ನುವುದು ವಿದ್ಯಾವಂತರಲ್ಲಾಗಲಿ.. ಅಥಾವ ಅವಿದ್ಯಾವಂತರಲ್ಲಾಗಲಿ ಇಲ್ಲ. ಅಜ್ಞಾನ ಎನ್ನುವುದು ಮಾಡುವ ಕಾರ್ಯದಲ್ಲಿ, ನೋಡುವ ರೀತಿಯಲ್ಲಿ, ಆಡುವ ಮಾತಿನ ಎಳ್ಳೆಯಲ್ಲಿ ಮತ್ತು ಕಂಡರೂ ಕಾಣದಂತೆ ಕುಳಿತಿರುವ ವ್ಯಕ್ತಿಗಳ ಸ್ವಭಾವದಲ್ಲಿ ತುಂಬಿಕೊಂಡು ಕಣ್ಣನ್ನು ಮುಚ್ಚಿ ಕುಳಿತಿರುವಂತೆ ಮಾಡಿದೆ. ಅದೆಷ್ಟೋ ಮಂದಿಯ ಕೇಳುವವರಿಲ್ಲ, ಕೈ ಹಿಡಿದು ನಡೆಸುವವರಿಲ್ಲ. ಕೆಲವರು ತಾವು ಮಾಡುತ್ತಿರುವುದು ಸಮಾಜ ಸೇವೆ, ತಾವು ಮಾಡುತ್ತಿರುವುದು ಧಾರ್ಮಿಕ ಸೇವೆ ಮತ್ತು ಇನ್ನು ಕೆಲವರು ತಾವು ಮಾಡುತ್ತಿರುವುದು ಮಾನವ ಸೇವೆ ಎಂದು ಜೀವನ ಎಂಬ ರಂಗಭೂಮಿಯಲ್ಲಿ ರಂಗನ್ನು ಬಳಿದುಕೊಂಡು ಜನರ ನಂಬಿಸಿ ನಟನೆಯನ್ನು ತಮ್ಮ ಜೀವನದ ಭಾಗವಾಗಿ ಆರಿಸಿಕೊಂಡಿದ್ದಾರೆ. ಕೆಲವರು ದುಡ್ಡಿನ ಅಹಂಕಾರದಲ್ಲಿ ಮೆರೆದರೆ ಇನ್ನು ಕೆಲವರು ಜನಬಲ ಮತ್ತು ಅಧಿಕಾರ ಬಲದಲ್ಲಿ ಮೆರೆಯುತ್ತಿರುತ್ತಾರೆ. ಆ ಒಂದು ತಾನು ಎಂಬ ಅಹಂಕಾರದಲ್ಲಿ ತನ್ನವರು ಮತ್ತು ತನಗಾಗಿ ನಂಬಿ ನಿಂತಿವರು ಯಾರು ಕಾಣದಾಗಿ ತನ್ನವರ ಕಷ್ಟ ಅವರ ಕಣ್ಣಿಗೆ ಕಾಣದೆ ಹೊಗುವುದರಲ್ಲಿ ಆಶ್ಚರ್ಯ ಏನು ಇಲ್ಲ. ರಾಜಕೀಯದಲ್ಲಿ ದೊಡ್ಡ ಮಟ್ಟಿಗೆ ಗುರುತಿಸುವಂತಹ ಕೆಲಸಗಳು ಮಾತ್ರವೇ ಅತಿ ಶೀಘ್ರವಾಗಿ ಮುಗಿಯುತ್ತವೆ ಹೊರತು ಸಣ್ಣ ಪುಟ್ಟ ಕೆಲಸಗಳು ಆರಂಭದಲ್ಲಿಯೇ ಅಂತ್ಯ ಕಾಣುತ್ತದೆ
ಭಾಗ - ೬
ಯಾರು? ಹೊಣೆಯಾರು?
ಹಸಿದಾಗ ಸಿಗಲಿದಿದ್ದ ಊಟ,
ಪ್ರಕೃತಿಯ ವಿಕೃತ ಕಾಟ,
ಆಡಲಾಗದ ಜೀವನ ಆಟ,
ಕಲಿಸುತ್ತಿತ್ತು ದಿನಕ್ಕೊಂದು ಪಾಠ.
ಬೆಳಗದ್ದಿದ್ದರೇ ಬೆಳಕು ಮನೆಯನು,
ಮನೆಯೊಳಗೆ ಕತ್ತಲೆಯ ಛಾಯೆ .
ಮುಚ್ಚಿದರೆ ಇದ್ದೆಲ್ಲ ಮಾರ್ಗವನು,
ಜೀವನದ ತುಂಬೆಲ್ಲಾ ಮಾಯೆ.
ಕಣ್ಣೀರ ಒರೆಸದ ಕೈಗಳು
ಇದ್ದರೇನು ಎರಡು?
ಕಣ್ಗಳಿದ್ದು ಕಾಣದಿದ್ದರೇ
ನೀನೊಬ್ಬ ಕಣ್ಣಿದ್ದು ಕುರುಡು.
ಅದೆಷ್ಟೋ ತಲೆಮಾರುಗಳು ಇನ್ನೂ ಹೀಗೆಯೆ ಬದುಕಬೇಕು? ಬದಲಾವಣೆ ಜಗದ ನಿಯಮ ಎನ್ನುವ ಮಾತು ಕಾರ್ಯ ರೂಪಕ್ಕೆ ಬರುವುದಾದರು ಇನ್ನು ಎಷ್ಟು ದಿನ ಕಾಯಬೇಕು? ಅಲ್ಲಿನ ಜನರನ್ನು ಕೇಳಿದರೆ ಹೇಳುವ ಮಾತು ನಮ್ಮ ಕಷ್ಟ ತೀರಲು ನಾವುಗಳು ಮಣ್ಣು ಸೇರಿದರು ಆಗದ ಮಾತು ಎಂದು. ಅಲ್ಲಿ ನಡೆಯದ ಹೋರಾಟಗಳಿಲ್ಲ, ಪ್ರತಿ ಸೌಲಭ್ಯವನ್ನು ಜನರು ಹೋರಾಡಿಯೇ ಪಡೆದಿದ್ದಾರೆ. ಅನೇಕ ಸ್ತ್ರೀಶಕ್ತಿ ಸಂಘಟನೆಗಳು ತುಂಬಿರುವ ಆ ಊರಿನಲ್ಲಿ ಜನರು ಅದೆಷ್ಟೋ ಹೋರಾಡಿ ಪಡೆದರು ಮತ್ತೆ ಅದೇ ಹಳೆಯ ಕಥೆ. ಇಲ್ಲಿ ಯಾವುದೂ ಬದಲಾಗುವುದಿಲ್ಲ. ಬದಲಾವಣೆ ಜಗದ ನಿಯಮ ಎನ್ನುವ ಮಾತಿಗೆ ಇಲ್ಲಿ ಅರ್ಥವೇ ಇಲ್ಲ. ಆದರು ನಮ್ಮ ಜನರು ಇಲ್ಲಿ ಹೊರಡುವುದನ್ನು ನಿಲ್ಲಿಸದೆ ಇನ್ನು ಹೆಚ್ಚಾಗಿ ಮತ್ತು ಒಗ್ಗಟ್ಟಾಗಿ ಸಿಡಿದೆದ್ದು ನಿಂತಿದ್ದಾರೆ. ಹಲವಾರು ನಾಯಕರು ತಮ್ಮ ಕೈಲಾದ ಸಹಾಯ ಮಾಡಿದರು ಅಲ್ಲಿ ಜನರಿಗೆ ದೊರೆಯಬೇಕಾದ ಮುಖ್ಯ ಸೌಕರ್ಯಗಳ ಒಂದು ದೊಡ್ಡ ಪಟ್ಟಿಯೇ ಉಳಿದು ಹೋಗಿದೆ. ಕಾರ್ಯಗಳು ಆರಂಭಗೊಂಡು ಅಂತ್ಯದವರೆಗೆ ಹೋಗದೆ ಹಾಗೆ ಆರಂಭದಲ್ಲಿ ಮುಳುಗಿ ಹೋದ ಅಲ್ಲಿನ ಅದೆಷ್ಟೋ ಮೂಲ ಸೌಕರ್ಯಗಳ ಪಟ್ಟಿ. ಆ ಒಂದು ನದಿಯ ನೀರನ್ನು ಒಮ್ಮೆಯಾದರೂ ಸೇತುವೆಯ ಏರಿ ದಾಟಬೇಕು ಎಂದು ಬಯಸಿದ ಅದೆಷ್ಟೋ ಜೀವಗಳು ಮಣ್ಣು ಸೇರಿದ್ದರಿಂದ ಅದರ ಆಸೆ ಬಹಳಷ್ಟು ಜನ ಕೈ ಬಿಟ್ಟಿರುವಾಗ ಮತ್ತೆ ಸೇತುವೆಯ ಕನಸನ್ನು ಕೆಣಕುವ ನಮ್ಮ ಸರ್ಕಾರ ಅಲ್ಲಿ ಸೇತುವೆ ಮಾಡುವುದಾದರು ಯಾವಾಗ? ಜಗತ್ತಿಗೆ ಬೆಳಕ ನೀಡಲು ಬಯಸಿದ ಅದೆಷ್ಟೋ ಮನೆಗಳಿಗೆ ದಿನದ ಪೂರ್ತಿ ಬೆಳಕು ಚೆಲ್ಲುವ ಹೊಣೆ ಯಾರದ್ದು? ಈಗಂತೂ ಆಧುನಿಕ ಯುಗ, ಆಧುನಿಕ ಯುಗದ ಹೊಸ ಹೊಸ ಕಾಯಿಲೆಗಳು ಜನರ ಪ್ರಾಣಕ್ಕೆ ಅಪಾಯಕಾರಿಯಾಗಿರುವಾಗ ಅದನ್ನು ಮೆಟ್ಟಿ ನಿಲ್ಲಲು ಕೊನೆಯದಾಗಿ ಒಂದು ಒಳ್ಳೆಯ ಆರೋಗ್ಯ ಕೇಂದ್ರ ಮತ್ತು ಅದರಲ್ಲಿ ವೈದ್ಯರ ಬೆಂಗಾವಲು ದೊರೆಯುವುದು ಯಾವ ವರ್ಷಕ್ಕೆ? ಇನ್ನು ಹಳ್ಳಿಗಳ ಪುಟ್ಟ ಪುಟ್ಟ ಮನೆಗಳಿಗೆ ಸರಿಯಾದ ಮಾರ್ಗಗಳಿಲ್ಲದ ಊರಿಗೆ ಮಾರ್ಗ ಕಲ್ಪಿಸುವವರು ಯಾರು? ಜೀವನ ನಡೆಸಲು ಸರಿಯಾದ ವಸತಿ ಇಲ್ಲದೆ ಕಾಡು ಮೇಡುಗಳಲ್ಲಿ ಬದುಕುತ್ತಿರುವ ಜನರ ಜೀವನವನ್ನು ಕಟ್ಟುವವಯ್ರಾರು? ಇಂದಿಗೂ ಸಂಪೂರ್ಣವಾಗಿ ನೆಟ್ ವರ್ಕ್ ಸಿಗದ ಆ ಊರುಗಳಿಗೆ ಈ ಒಂದು ಆಧುನಿಕ ಯುಗದಲ್ಲು ನೆಟ್ ವರ್ಕ್ ಕಲ್ಪಿಸಲಾಗದೆ ಹಾಗೆ ಉಳಿದವರಾರು? ಸರಿಯಾದ ಮಾರ್ಗವೇ ಇಲ್ಲದಿರುವಾಗ ಇಲ್ಲಿಗೆ ಬಂದು ಬೆಳೆದ ಬೆಳೆಯನ್ನು ಖರೀದಿಸುವವರು ಯಾರು? ದಿನಕ್ಕೊಂದು ಸಮಸ್ಯೆ, ಒಂದರ ಹಿಂದೆ ಇನ್ನೊಂದು, ಒಂದರ ಒಳಗೆ ಮತ್ತೊಂದು. ಇದನ್ನೆಲ್ಲ ನೋಡುತ್ತಿದ್ದರೆ ದಿನಕ್ಕೊಂದು ಪ್ರಶ್ನೆ ಮೂಡದೇ ಉಳಿಯುವುದೇ?! ಪ್ರತಿಯೊಂದು ಪ್ರಶ್ನೆಗಳು " ಯಾರು? "ಎನ್ನುವುದನ್ನು ಸೂಚಿಸುತ್ತಿರುವಾಗ ಈ ಒಂದು ದ್ವೀಪ ಪ್ರದೇಶದಲ್ಲಿ ಆ "ಯಾರು?" ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು ?
ಜೀವನದಲ್ಲಿ ಹುಟ್ಟು ಮತ್ತು ಸಾವಿನ ನಡುವೆ ನಡೆವ ಅದೆಷ್ಟೋ ಸಂಗತಿಗಳು ಬೆಳಕಿಗೆ ಬಾರದೇ ಬದುಕು ಕತ್ತಲಿನಿಂದ ಬೆಳಕಿನಡೆಗೆ ಸಾಗಬಹುದು ಎಂದು ಕನಸು ಕಟ್ಟಿ ಕಟ್ಟಿದ ಕನಸು ನನಸಾಗುವ ಮುನ್ನ ಮಣ್ಣಾದ ಜೀವಗಳ ಮತ್ತು ಅದೇ ಕನಸುಗಳನ್ನು ಹೊತ್ತು ಇಂದಿಗೂ ಜೀವನ ನಡೆಸುತ್ತಿರುವ ಇನ್ನಷ್ಟು ಜೀವಗಳ ಬದುಕಿನ ಅಂಧಕಾರದ ಆಟವನ್ನು ಕಂಡರೂ ಕಾಣದ ಕಣ್ಣುಗಳಿಗೆ ಅರ್ಥ ಮಾಡಿಸುವ ಸಲುವಾಗಿ ಆ ಒಂದು ದ್ವೀಪ ಪ್ರದೇಶದಲ್ಲಿ ನಡೆದಿರಬಹುದಾದ ಹಲವಾರು ಕಲ್ಪನೆಯ ಕಥೆಗಳ ಮತ್ತು ಕೇಳಿ ಬೆರಗಾದ ವ್ಯೆಥೆಗಳ ಸಣ್ಣ ತುಣುಕುಗಳನ್ನು ಒಳಗೊಂಡ ಈ ಒಂದು 'ದ್ವೀಪವೋ? ಶಾಪವೋ?' ಎಂಬ ಶೀರ್ಷಿಕೆಯ ಪುಸ್ತಕ ಜನರನ್ನು ಅಲ್ಲಿನ ಪ್ರಪಂಚದಲ್ಲಿ ಹೇಗೆ ಮುಂದಕ್ಕೆ ಮತ್ತು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎನ್ನುವುದನ್ನು ಒಳಗೊಂಡಿದೆ. ಜನರು ತಮ್ಮ ಮನೆ, ಓಡಾಟ ಹಾಗೂ ಉಳಿದ ಹಲವಾರು ಮೂಲ ಸೌಕರ್ಯಗಳು ಸಿಗುವಲ್ಲಿ ಹೇಗೆಲ್ಲ ವಂಚಿತರಾಗಿರ ಬಹುದು ಮತ್ತು ಅವರ ಜೀವದನಲ್ಲಿ ಸಂದರ್ಭ ಯಾವ ರೀತಿಯಲ್ಲಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದಲ್ಲದೆ ಇದಕ್ಕೆಲ್ಲ ಯಾರು ಹೊಣೆಗಾರಿಕೆ ಎಂಬ ಪ್ರಶ್ನೆಯ ಉದ್ಭವ ಈ ಒಂದು ಪುಸ್ತಕದ ಅಂತ್ಯದಲ್ಲಿ ಕಾಡುತ್ತದೆ.
ಜೀವನದಲ್ಲಿ ಹುಟ್ಟು ಮತ್ತು ಸಾವಿನ ನಡುವೆ ನಡೆವ ಅದೆಷ್ಟೋ ಸಂಗತಿಗಳು ಬೆಳಕಿಗೆ ಬಾರದೇ ಬದುಕು ಕತ್ತಲಿನಿಂದ ಬೆಳಕಿನಡೆಗೆ ಸಾಗಬಹುದು ಎಂದು ಕನಸು ಕಟ್ಟಿ, ಕಟ್ಟಿದ ಕನಸು ನನಸಾಗುವ ಮುನ್ನ ಮಣ್ಣಾದ ಜೀವಗಳ ಮತ್ತು ಅದೇ ಕನಸುಗಳನ್ನು ಹೊತ್ತು ಇಂದಿಗೂ ಜೀವನ ನಡೆಸುತ್ತಿರುವ ಇನ್ನಷ್ಟು ಜೀವಗಳ ಬದುಕಿನ ಅಂಧಕಾರದ ಆಟವನ್ನು ಕಂಡರೂ ಕಾಣದ ಕಣ್ಣುಗಳಿಗೆ ಅರ್ಥ ಮಾಡಿಸುವ ಸಲುವಾಗಿ ಆ ಒಂದು ದ್ವೀಪ ಪ್ರದೇಶದಲ್ಲಿ ನಡೆದಿರಬಹುದಾದ ಹಲವಾರು ಕಲ್ಪನೆಯ ಕಥೆಗಳ ಮತ್ತು ಕೇಳಿ ಬೆರಗಾದ ವ್ಯೆಥೆಗಳ ಸಣ್ಣ ತುಣುಕುಗಳನ್ನು ಒಳಗೊಂಡ ಈ ಒಂದು 'ದ್ವೀಪವೋ? ಶಾಪವೋ?' ಎಂಬ ಶೀರ್ಷಿಕೆಯ ಪುಸ್ತಕ ಜನರನ್ನು ಅಲ್ಲಿನ ಪ್ರಪಂಚದಲ್ಲಿ ಹೇಗೆ ಮುಂದಕ್ಕೆ ಮತ್ತು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎನ್ನುವುದನ್ನು ಒಳಗೊಂಡಿದೆ. ಜನರು ತಮ್ಮ ಮನೆ, ಓಡಾಟ ಹಾಗೂ ಉಳಿದ ಹಲವಾರು ಮೂಲ ಸೌಕರ್ಯಗಳು ಸಿಗುವಲ್ಲಿ ಹೇಗೆಲ್ಲ ವಂಚಿತರಾಗಿರಬಹುದು ಮತ್ತು ಅವರ ಜೀವನದಲ್ಲಿ ಸಂದರ್ಭ ಯಾವ ರೀತಿಯಾಗಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದಲ್ಲದೆ ಇದಕ್ಕೆಲ್ಲ ಯಾರು ಹೊಣೆಗಾರಿಕೆ ಎಂಬ ಪ್ರಶ್ನೆಯ ಉದ್ಭವ ಈ ಒಂದು ಪುಸ್ತಕದ ಅಂತ್ಯದಲ್ಲಿ ಕಾಡುತ್ತದೆ. ಇಲ್ಲಿ ಎಲ್ಲವೂ ಇದೆ ಆದರು ಏನು ಇಲ್ಲ. ಜನರ ಜೀವನ ಕತ್ತಲೊಳು ಕಾಣದ ಕನಕದ ರಾಶಿಯಂತೆಯೆ ಉಳಿದು ಕೊಂಡರೆ ಏನು ಪ್ರಯೋಜನ? ಪ್ರತಿ ಒಬ್ಬರ ಜೀವನ ಚಿನ್ನದ ಗಣಿಯಂತೆ. ಗಣಿ ಇದ್ದು ಕಣಿಕೇಳಿ ಚಿನ್ನ ಹುಡುಕುವ ಅದೆಷ್ಟೋ ಕಣ್ಣುಗಳಮೇಲೆ ಬಿದ್ದ ಕಸವನ್ನೆತ್ತುವವಯ್ರಾರು? ಬದುಕುವ ಆಸೆಯಿಂದ ಬದುಕಬೇಕೇ ಹೊರತು ಎತ್ತಕ್ಕಾದರು ಬದುಕುತ್ತಿದ್ದೆವೋ ಎಂಬ ಸಂಶಯದಲ್ಲಿ ಬದುಕುವ ಬದುಕಾಗ ಬಾರದು. ಪ್ರತಿಯೊಂದು ತನ್ನ ಹೊಣೆ ಎಂಬ ಹಲವಾರು ಮುಖಗಳು ಮೂಕವಾಗಿ ಕುಳಿತಿರುವಾಗ ಮೂಕ ಮುಖಗಳು ಮಾತನಾಡುವುದ ನಿರೀಕ್ಷೆಣೆಯಲ್ಲಿ ಎಷ್ಟು ದಿನಗಳು ಜನರು ಕಾಯಬೇಕು? ಇವರ ಜೀವನದ ಹೊಣೆ ಯಾರೆಂದು ಹುಡುಕುವ ಹೋರಾಟದಲ್ಲಿ ಈ ಒಂದು 'ದ್ವೀಪವೋ? ಶಾಪವೋ' ಜನರ ಜೀವನದ ನೋವನ್ನು ಜನರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಕಾಡು, ನಾಡು ಇದೆಲ್ಲದರ ಜೊತೆಗೆ ಮನುಷ್ಯ ಜೀವನದ ಕಥೆ.