ಸ್ವಪ್ನ ಎಂ

Others

3.0  

ಸ್ವಪ್ನ ಎಂ

Others

ಸಮಾಧಿಯ ಮೇಲೊಂದು ಕಟ್ಟೆ ಪಂಚಾಯ್ತಿ

ಸಮಾಧಿಯ ಮೇಲೊಂದು ಕಟ್ಟೆ ಪಂಚಾಯ್ತಿ

7 mins
11.6K


ಅಮಾವಾಸ್ಯೆಯ ಕಗ್ಗತ್ತಲು, ನಿರ್ಜನವಾದ ಸ್ಮಶಾನ. ನಾಯಿ ಊಳಿಡುವ ಶಬ್ದ, ಗೂಬೆ ಕೂಗುವ ಶಬ್ಧ ಬಿಟ್ಟರೆ ಬೇರೇನೂ ಕೇಳಿಸದಷ್ಟು ಮೌನ. ಅಲ್ಲೆಲ್ಲೋ ಚೂರು ದೂರದಲ್ಲಿ ಈಗ ತಾನೇ ದೇಹದಿಂದ ದೂರವಾದ ಆತ್ಮ ತನ್ನ ದೇಹವನ್ನ ಸುಡುವುದನ್ನ ಹತ್ತಿರದಿಂದ ಕಂಡು ತನ್ನಲ್ಲೇ ಕೊರಗುತ್ತಲಿತ್ತು. ತನ್ನ ಮನೆ ಮಂದಿಯಲ್ಲರೂ ತನಗಾಗಿ ತನ್ನ ಇರುವಿಕೆಗಾಗಿ ಅವರುಗಳೆಲ್ಲ ಹಂಬಲಿಸುತ್ತಿದ್ದುದನ್ನ ನೋಡಿ ಆ ಆತ್ಮ ತನ್ನಲ್ಲೇ ರೋಧಿಸುತಿತ್ತು...

ತನ್ನ ಗಂಡ, ಮಕ್ಕಳು, ಮಗ, ಸೊಸೆ, ಮೊಮ್ಮಕ್ಕಳು ಹೀಗೆ ಹಲವು ಸಂಬಂಧಗಳು ತನ್ನ ಬಗ್ಗೆ ತಾನು ಇಷ್ಟು ದಿನ ಭೂಮಿಯ ಮೇಲೆ ತನ್ನ ಜವಾಬ್ದಾರಿಯನ್ನ ಎಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂಬುದನ್ನ ಸಾರುತಿತ್ತು...

ಅದನ್ನೆಲ್ಲವನ್ನು ನೋಡುತ್ತಿದ್ದ ಸರೋಜಮ್ಮನ ಆತ್ಮ ಅವರನ್ನೆಲ್ಲ ಬಿಗಿದಪ್ಪಿ ನಾನು ನಿಮ್ಮನ್ನ ಬಿಟ್ಟು ಹೋಗಲಾರೆ ಎಂದೆಂದಿಗೂ... ಎಂದು ಹೇಳಬೇಕು ಎಂದುಕೊಳ್ಳುತ್ತಿದ್ದವಳಿಗೆ ತನ್ನ ಆ ಸಂಬಂಧಗಳೆಲ್ಲಾ ಮರಿಚಿಕೆಯಂತೆ ಕಂಡಿತು...

ಕಣ್ಣೆದುರೇ ಕಾಣುತ್ತಿದ್ದ ತನ್ನ ಮಗ, ಮೊಮ್ಮಗ, ಸೊಸೆ, ಗಂಡ ಎಲ್ಲರೂ ಮಂಜು ಮಂಜಾಗಿ ಕಾಣುತ್ತಾ ಕ್ಷಣಾರ್ಧದಲ್ಲಿ ಕಣ್ಮರೆಯಾದರು..

ಸರೋಜಮ್ಮನ ಹೆಗಲ ಮೇಲೆ ಯಾರೋ ಕೈ ಇಟ್ಟ ಅನುಭವ...

ತಿರುಗಿ ನೋಡಿದರೆ ಯಾವುದೋ ಅಪರಿಚಿತ ಮುಖ, ಸರೋಜಮ್ಮನವರನ್ನ ಸಮಾಧಾನಿಸುತ್ತಾ ತನ್ನೊಂದಿಗೆ ಕರೆದೊಯ್ಯುತ್ತಿದೆ. ಸರೋಜಮ್ಮ ಭಯದಿಂದ ಆಕೆಯ ಮುಖವನ್ನೇ ನೋಡುತ್ತಾ ಯಾರು ನೀನು ಎಂಬಂತೆ ಪ್ರಶ್ನಿಸಿದರು. ಆಕೆ ಸರೋಜಮ್ಮನವರ ಮುಖಭಾವ ಅರ್ಥವಾದವರ ಹಾಗೆ "ನನ್ನ ಹೆಸರು ಲಲಿತಾ" ಎಂದಿದ್ದಳಷ್ಟೇ.

ಸರೋಜಮ್ಮ ಆಕೆಯ ಕೈಯಿಂದ ತನ್ನ ಕೈಗಳನ್ನ ಬಿಡಿಸಿಕೊಳ್ಳಲು ಕೋಸರಾಡುತ್ತಾ, ತನ್ನ ಕುಟುಂಬದವರನ್ನ ಸೇರಬೇಕು ಎಂದು ಹಂಬಲಿಸುತಿದ್ದಷ್ಟು ಲಲಿತಮ್ಮನ ಹಿಡಿತ ಬಲವಾಗಿತ್ತು. "ಹೇಯ್... ಎಲ್ಲಿ ಹೋಗ್ತಾ ಇದ್ಯಾ? ನೀನು ನಿನ್ನ ದೇಹದಿಂದ ದೂರ ಆಗಿದ್ಯಾ, ಆ ದೇಹದ ನಿನ್ನ ಋಣ ಇವತ್ತಿಗೆ ಮುಗಿದಿದೆ. ನಿನ್ನ ದೇಹವನ್ನ ದಹನ ಕೂಡಾ ಮಾಡಿ ಆಯ್ತು. ಇನ್ನೂ ನೀನು ಆತ್ಮ ಅಷ್ಟೇ..." ಲಲಿತಮ್ಮನವರ ಮಾತಿಗೆ

ಸರೋಜಮ್ಮ ಗಾಬರಿಯಿಂದ ಮತ್ತೆ ನೀ.... ವೂ....? ಎಂದಿದ್ದರು.

ಲಲಿತಮ್ಮ: "ಹೌದು, ನಾನು ನಿನ್ನಂತೆಯೇ ಒಂದು ಆತ್ಮ. ಜೀವನದಲ್ಲಿ ತುಂಬಾ ಅಸೂಹೆ, ಕೋಪ, ದ್ವೇಷ, ಮಾತ್ಸರ್ಯ ಅಂಥಾ ಇದ್ದು ಕೊನೆಗೆ ಸತ್ಮೇಲೆ ಪ್ರಾಯಶ್ಚಿತದ ದಾರಿ ಹುಡುಕ್ತಾ ಇದೀನಿ. ನನ್ನ ಆಸೆ ಇರೋದು ಒಂದೇ ಒಂದು. ನನ್ನ ಮೊಮ್ಮಗನನ್ನ ನೋಡ್ಬೇಕು ನಾನು, ಅವನನ್ನ ನೋಡಿದ ಕೂಡಲೆನೇ ನನ್ನ ಆತ್ಮಕ್ಕೆ ಶಾಂತಿ, ಆಗ್ಲೇ ನಂಗೇ ಮೋಕ್ಷ...

ಸರೋಜಮ್ಮ ಅರ್ಥವಾಗದವರ ಹಾಗೇ ಲಲಿತಮ್ಮನವರ ಮುಖ ನೋಡಿದ್ದಳು.

ಲಲಿತಮ್ಮ, ನಗುತ್ತಾ ಈಗತಾನೇ ನಮ್ಮ ಆತ್ಮಗಳ ಲೋಕಕ್ಕೆ ಕಾಲಿಡ್ತಾ ಇದಿಯಾ. ಒಂದೊಂದಾಗಿ ಎಲ್ಲವೂ ತಿಳಿಸಿ ಹೇಳ್ತಿನಿ. ಬಾ ನಮ್ಮಗಳ ಸ್ಥಾನಕ್ಕೆ ಹೋಗಣ.... ಅಲ್ಲಿವರೆಗೂ ದಾರಿ ಕ್ರಮಿಸೋಕೆ ನನ್ನ ಕಥೆ ಹೇಳ್ತಿನಿ ಎಂದು ತನ್ನ ಕಥೆ ಹೇಳಲು ಮುಂದಾದಳು...

"ನಿಂಗೋತ್ತಾ ಸರೋಜಾ? ನಂದು ಎಷ್ಟೊಂದು ಮುದ್ದಾದ ಕುಟುಂಬ ಅಂಥಾ? ಒಬ್ಬನೇ ಮಗ, ತುಂಬಾ ಮುದ್ದಾಗಿ ಸಾಕಿದ್ವಿ, ಅವ್ನಿಗೂ ಅಷ್ಟೇ ಅಪ್ಪ ಅಮ್ಮ ಅಂದ್ರೆ ಪ್ರಾಣ. ನನ್ನ ಮಗನ ಪ್ರತಿಶತ ನೂರರಷ್ಟು ಜಗತ್ತೇ ಅವನಿಗೆ ನಾನು ಅವನಪ್ಪ..

ನಮ್ಗೇ ಒಂದ್ ಚೂರು ನೋವಾದ್ರೂ ಅವನು ಸಹಿಸಿಕೊಳ್ತಾ ಇರಲಿಲ್ಲ. ಮಕ್ಕಳು ಸಣ್ಣೋರು ಇರುವಾಗ ನಾವು ಅವರಿಗೇ ತಂದೆ ತಾಯಿಗಳು, ಅದೇ ನಮಗೇ ವಯ್ಯಸ್ಸಾದಾಗ ಅವರೇ ತಂದೆ ತಾಯಿ ಎರಡೂ ಅಲ್ವಾ? ನನ್ನ ಮಗನೂ ಹಾಗೇ ಪುಟ್ಟಕ್ಕೆ ಇಟ್ಟ ಚಿನ್ನ. ಆದರೇ ನಾನೇ ನೋಡು ನನ್ನ ಮಗನ ಮೇಲಿನ ಅತಿಯಾದ ಮೋಹದಿಂದ ಅವನ ಸಂಸಾರನೇ ಹಾಳು ಮಾಡ್ಬಿಟ್ಟೆ ಅನ್ಸತ್ತೆ.

ಸರೋಜಮ್ಮ:, ಆಶ್ಚರ್ಯದಿಂದ ಎನ್ ಮಾಡ್ದೆ ಅಂಥದ್ದು? ಈಗ ಯಾಕೇ ಈ ಸ್ಥಿತಿ?

ಲಲಿತಮ್ಮ: "ಹೇಳ್ತಿನಿ ಸರೋಜಾ... ಮಗನ ಮದ್ವೆ ಆಯ್ತು. ಒಬ್ಬ ಮುದ್ದಾದ ಹುಡ್ಗಿಯನ್ನ ಸೊಸೆಯನ್ನಾಗಿ ಕೂಡಾ ತಗೊಂಡ್ ಬಂದ್ವಿ, ಹುಡುಗಿ ಕೂಡಾ ಅಪರಂಜಿ ನನ್ನನ್ನ ಸ್ವಂತ ತಾಯಿ ಥರಾ ನೋಡೋಳು"

ಸರೋಜಮ್ಮಾ ಖುಷಿಯಿಂದ "ಹೌದೌದು ನನ್ನ ಸೊಸೆನೂ ಹಾಗೇನೇ, ಅತ್ತೆ ನೀವ್ಯಾಕೆ ಆ ಕೆಲ್ಸ ಮಾಡ್ತೀರಾ? ನೀವ್ಯಾಕೆ ಈ ಕೆಲಸ ಮಾಡ್ತೀರಾ? ಸುಮ್ನೆ ಕೂತ್ಕೊಂಡು ಟಿವಿ ನೋಡಿ, ಬೇಸರ ಆದ್ರೆ ಬುಕ್ಸ್ ಓದಿ ಹೇಳೋಳು, ಬಂಗಾರ ನನ್ನ ಸೊಸೆ..." ಎಂದಿದ್ದರು ಖುಷಿಯಿಂದ

ಲಲಿತಮ್ಮ: "ಹೋ ಹೌದಾ....? ತುಂಬಾ ಖುಷಿ. ಪ್ರತಿ ಹೆಣ್ಣು ತನ್ನ ಅತ್ತೆಯಂದಿರಲ್ಲಿ ಅಮ್ಮನ್ನ ಕಂಡ್ರೆ, ವೃದ್ದಾಶ್ರಮಗಳೇ ಇರಲ್ಲಾ ಜಗತ್ತಲ್ಲಿ. ಆದ್ರೆ ಎಲ್ಲಾ ಅತ್ತೆನೂ ಸೊಸೆಗೆ ತಾಯಿ ಪ್ರೀತಿ ಕೊಡ್ಬೇಕು ಅಲ್ವಾ? ಆದ್ರೆ ನಾನು.......? ತಾಯಿ ಪ್ರೀತಿ ಹೋಗ್ಲಿ ಸರೋಜಾ, ಒಂದು ಹೆಣ್ಣಾಗಿ ಕೂಡಾ ನೋಡ್ಲಿಲ್ಲ ಆಕೆಯನ್ನ..." ಇಷ್ಟು ಹೇಳಿ ಲಲಿತಮ್ಮನ ಆತ್ಮ ಕಣ್ಣೀರು ಹಾಕಿ ರೋಧಿಸುತಿತ್ತು..

ಸರೋಜಮ್ಮ ಲಲಿತಾರನ್ನ ಸಮಾಧಾನಿಸುತ್ತಾ "ಯಾಕ್ರೀ ಏನಾಯ್ತು? ಸೊಸೆ ಒಳ್ಳೆವಳು ಹೇಳ್ತೀರಾ, ಅಂದ್ಮೇಲೆ ಅವಳನ್ನ ಚೆನ್ನಾಗಿ ನೋಡ್ಕೊಳ್ಳೋದು ನಿಮ್ಮ ಕರ್ತವ್ಯ ಅಲ್ವಾ?

ಸರೋಜಾಳ ಪ್ರಶ್ನೆಗೆ ಲಲಿತಾ "ಹೌದು ನಮ್ಮ ಕರ್ತವ್ಯ ನಿಜ, ಆದ್ರೆ ನನ್ನ ಮನಸ್ಥಿತಿ ಹಾಗಿರ್ಲಿವಲ್ಲ. ಒಂದು ಹೆಣ್ಣಿಗೆ ಹುಟ್ಟಿದಾಗ ತನ್ನ ತವರುಮನೆನೇ ಎಲ್ಲವೂ, ಮದ್ವೆ ಆದ್ಮೇಲೆ ಗಂಡ, ಆಮೇಲೆ ಮಕ್ಕಳೇ ಸರ್ವಸ್ವ.. ನಂಗೂ ಹಾಗೇ ನನ್ನ ಮಗನೇ ಜಗತ್ತು ಆಗಿದ್ದ. ಈ ಅಮ್ಮನ ಸ್ಥಾನಕ್ಕೆ ಪೈಪೋಟಿಯಾಗಿ ಬರೋಕೆ ಶುರು ಆದ್ಲು ಅವನ ಹೆಂಡತಿ ಅಂಥಾ ಅನಿಸ್ತಾ ಇತ್ತು. ಗಂಡ ಹೆಂಡತಿ ಇಬ್ರೂ ಖುಷಿಯಿಂದ ಇದ್ರೆ, ನನ್ನಿಂದ ಅವ್ಳು ಅವನನ್ನ ಕಸಿದುಕೊಳ್ತಾ ಇದಾಳೆನೋ ಅನ್ನೋ ಭಾವ.. ನನ್ನ ಮಗ ಇಷ್ಟು ದೊಡ್ಡೋನು ಆದ್ರೂ ಇನ್ನೂ ಚಿಕ್ಕ ಪುಟ್ಟ ವಿಷ್ಯಕ್ಕೂ ಅವನು ನನ್ನನ್ನೇ ಅವಲಂಬಿಸ್ಬೇಕು ಅನಿಸೋದು..

ಪಾಪಾ ನನ್ನ ಮಗ, ತನ್ನನ್ನೇ ನಂಬಿ ಬಂದ ಹೆಣ್ಣಿನ ಮನಸ್ಸು ನೋಯಿಸ್ಬಾರದು, ಇತ್ತ ಅಮ್ಮನಿಗೂ ಬೇಸರ ಮಾಡ್ಬಾರ್ದು ಅಂಥಾ ತುಂಬಾ ಪೇಚಾಡೋನು...

ಆದ್ರೆ ನನ್ನ ಯೋಚನೆಗಳೇ ಬೇರೆ.. ಹೆಂಡತಿ ಬಂದ್ಮೇಲೆ ಬದ್ಲಾಗಿದಿಯಾ ನೀನು ಅಂಥಾ ಅವ್ನು ಕೂತ್ರೂ ನಿಂತ್ರೂ ಹಂಗಿಸಿ ಹಂಗಿಸಿ ಮಾತಾಡ್ತಿದ್ದೆ. ನನ್ನಿಂದಾಗಿ ಗಂಡ, ಹೆಂಡತಿ ನಡುವಲ್ಲಿ ಸಾಮರಸ್ಯ ಅನ್ನೋದೇ ಇಲ್ಲದ ಹಾಗೆ ಆಗೋಯ್ತು.. ಮಾತು ಮಾತಿಗೂ, ಚಿಕ್ಕ ಪುಟ್ಟ ವಿಷ್ಯಕ್ಕೂ ಸೊಸೆಯೊಟ್ಟಿಗೆ ತುಂಬಾ ಜಗಳ ಮಾಡ್ತಿದ್ದೆ.

ಬದುಕಿದ್ದಾಗ ಮಗ, ಸೊಸೆಯನ್ನ ತುಂಬಾ ಕಾಡಿದಿನಿ ಸರೋಜಾ ನಾನು. ಅದಿಕ್ಕೆ ಆ ದೇವ್ರು ನಂಗೇ ಸರಿಯಾದ ಶಿಕ್ಷೆ ಕೊಟ್ಬಿಟ್ಟ, ಯ್ಯಾಕ್ಸಿಡೆಂಟ್ ಅಲ್ಲಿ ನನ್ನನ್ನ ಅವ್ರಿಂದ ದೂರ ಮಾಡ್ಬಿಟ್ಟಾ.. ಬಹುಶಃ ಆ ದೇವ್ರಿಗೆ ಗೊತ್ತಿತ್ತು ಅನ್ಸತ್ತೆ ಅವರ ನಡುವಲ್ಲಿ ಇರೋಕೆ ಯೋಗ್ಯತೆ ಇಲ್ಲ ನಂಗೇ ಅಂಥಾ...

ನಾನು ಸತ್ಮೇಲೆ ಆದ್ರೂ ಗಂಡ-ಹೆಂಡತಿ ಸುಖವಾಗಿ ಇರ್ತಾರೆ ಅಂದ್ರೆ ಪಾಪದ್ ಆ ಹುಡ್ಗಿಗೆ ನನ್ನ ಮಗ ನಿನ್ನಿಂದಾನೆ ನಮ್ಮ ಅಮ್ಮ ಸತ್ತಿದ್ದು ಅಂಥಾ ಪ್ರತಿ ಸಲಾ ಹಂಗಿಸ್ತಾನೇ. ಪಾಪಾ ಆ ಹುಡ್ಗಿ... ತನ್ನದಲ್ಲದ ತಪ್ಪಿಗೆ ಕೊರಗ್ತಾ ಇದೆ... ಲಲಿತಮ್ಮ ಅಳುತ್ತಿದ್ದರೆ, ಸರೋಜಮ್ಮ ಅವರನ್ನ ಸಮಾಧಾನಿಸುತ್ತಾ "ಹೋಗ್ಲಿ ಬಿಡಿ ಲಲಿತಮ್ಮ, ಈಗ ಎನ್ ತಾನೇ ಮಾಡೋಕೆ ಆಗತ್ತೆ? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.. ಪಶ್ಚಾತಾಪ ಆಗೋ ಟೈಂ ಅಲ್ಲಿ ಆಗ್ದೇ ಇವಾಗ ಆದ್ರೆ ಆ ನಿಮ್ಮ ಪಶ್ಚಾತಾಪಕ್ಕೆ ಅರ್ಥಾನೇ ಇಲ್ಲ..." ಎಂದು ಕ್ಷಣ ಕಾಲ ಅಲ್ಲೊಂದು ಸಮಾಧಿಯ ಮೇಲೆ ಕುಳಿತಿದ್ದರು...

ಯಾರೋ ಒಬ್ಬನ ನರಳುವಿಕೆ ಜಾಸ್ತಿ ಆಗುತಿತ್ತು, ನಾಯಿ ಬೊಗಳುವಿಕೆ ಕೂಡ ಅದಿಕ್ಕೆ ಸಾತ್ ಕೊಡುವ ಹಾಗೆ ಅದರ ಕೂಗುವಿಕೆ ಕೂಡಾ ಸ್ಪರ್ಧೆ ಕೊಡುತಿತ್ತು..

ಸರೋಜಮ್ಮ ಆಶ್ಚರ್ಯದಿಂದ ಲಲಿತಾರನ್ನ ನೋಡುತ್ತಾ "ಯಾರದು ಇಷ್ಟೊಂದು ಜೋರಾಗಿ ಅಳ್ತಾ ಇರೋದು?"

ಲಲಿತಮ್ಮ: "ಅದಾ..? ರಾಯರು ಅನ್ಸತ್ತೆ ಪಾಪಾ ಅವ್ರಿಗೆ ಅವರ ಕುಟುಂಬ ನೆನಪಾದಾಗ ಹೀಗೆ ಒಬ್ಬರೇ ಅಳ್ತಾರೆ. ಅದ್ರಲ್ಲೂ ಅವ್ರು ಇವತ್ತಿಗೆ ಸತ್ತು ಸರಿಯಾಗಿ ಒಂದ್ ತಿಂಗಳು ಆಯ್ತು... ಮನೆಯಲ್ಲಿ ಅವರ ಕಾರ್ಯ ಆಯ್ತಲ್ಲ ಅದನ್ನ ನೇನಿಸ್ಕೊಂಡು ರೋಧಿಸ್ತಾ ಇದಾರೆ ಅಷ್ಟೇ..."

ಸರೋಜಾ: "ಹೌದಾ..!! ಪಾಪಾ.. ನೋಡ್ಕೊಂಡ್ ಬರಣ...? ಬನ್ನಿ"

ಲಲಿತಮ್ಮ: "ಅಯ್ಯೋ ಸರೋಜಾ... ಈ ಆತ್ಮಗಳು ಅಂದ್ರೆ ಹೀಗೆ ಏನಾದ್ರೂ ಒಂದು ಆಸೆ ಇಟ್ಕೊಂಡು ಸತ್ತೋದೊರೆ ಆತ್ಮಗಳಾಗೋದು, ಆ ಆಸೆ ಈಡೇರೊ ತನಕ ಅವುಗಳ ಇಂಥಾ ರೋಧನೆ ತಪ್ಪಿದ್ದಲ್ಲ.. ಇಲ್ಲಿ ಪ್ರತಿಯೊಂದು ಆತ್ಮಕ್ಕೂ ಒಂದೊಂದು ಕಥೆ ಇದೆ. ಈ ಸುಡುಗಾಡು ಅನ್ನೋ ಪವಿತ್ರ ಭೂಮಿನೇ ಹೀಗೆ, ತಾವು ಜೀವಂತ ಇರುವಾಗ ಮಾಡಿದ ಪಾಪಗಳನ್ನ ನೆನೆದು, ಈಗ ಆ ಪಾಪಗಳನೆಲ್ಲ ಅವಲೋಕನ ಮಾಡ್ಕೊಳ್ಳೊ ಕರ್ಮಭೂಮಿ ಇದು... ಇವೆಲ್ಲ ಇಲ್ಲಿ ಸಹಜ ಬಾ" ಎಂದು ಹೊರಡಲು ಮುಂದಾದ ಲಲಿತಾಳನ್ನ ತಡೆದಿದ್ದಳು ಸರೋಜಾ...

"ಇರಿ ಸ್ವಲ್ಪ, ಕಷ್ಟಗಳನ್ನ ಹೇಳ್ಕೊಂಡ್ರೆ ದುಃಖ ಕಮ್ಮಿ ಆಗತ್ತಂತೆ... ಏನು? ಯಾರು ಅಂಥಾ ಕೇಳ್ಕೊಂಡು ಬರಣ"

ಲಲಿತಮ್ಮ: "ಸರೋಜಾ, ಅವ್ರು ಮನುಷ್ಯರಲ್ಲ ಹೇಳ್ಕೊಂಡ್ರೇ ದುಃಖ ಕಮ್ಮಿ ಆಗತ್ತೆ ಅನ್ನೋಕೆ, ಆತ್ಮಗಳು ನಾವೆಲ್ಲಾ...."

"ನಂಗೇ ಇನ್ನೊಬ್ಬರ ಕಷ್ಟ ನೋಡಿ ಸುಮ್ನೆ ಹೋಗೋಕೆ ಆಗಲ್ಲ, ನಿನ್ ಬರ್ಬೇಡಾ ನಾನೇ ಹೋಗಿ ಕೇಳ್ತೀನಿ" ಎಂದು ರಾಯರು ಕೂತಿರೋ ಸ್ಥಳಕ್ಕೆ ಬಂದಿದ್ದಳು ಸರೋಜಾ...

ತುಂಬಾ ವರ್ಷಗಳ ಹಳೆಯ ಸಮಾಧಿ ಅದು. ರಾಯರು ಕೂತು ತಮ್ಮ ಕಳೆದ ದಿನಗಳನ್ನ ಮೆಲುಕು ಹಾಕುತ್ತಿದ್ದರು....

ಮುಖವೆಲ್ಲ ಗಾಯದಿಂದ ಮುಳುಗಿ ಹೋಗಿತ್ತು. ರಕ್ತ ಇನ್ನೂ ತುಟಿಗಳಲ್ಲಿ ಜಿನುಗುತಿತ್ತು.. ಸರೋಜಾ ಅದನ್ನ ನೋಡಿದವಳೇ ತನ್ನ ಸೆರಗನ್ನ ಮುಂದೆ ಮಾಡಿ ಅವರ ತುಟಿಗೆ ಅಂಟಿದ್ದ ರಕ್ತವನ್ನ ಒರೆಸಲು ಮುಂದಾಗಿದ್ದಳು..

ರಾಯರ ಕಣ್ಣುಗಳು ಕೆಂಪಗಾಗಿದ್ದವು.. ಕೋಪದಲ್ಲಿ ಬುಸುಗುಡುವ ಹಾವಿನಂತೆ ಎದ್ದು ನಿಂತು. "ಹೇಯ್ ಯಾರ್ ನೀನು? ಹೇಳು ಹೇಳು... ನಂಗೇ ಚೆನ್ನಾಗಿ ಗೊತ್ತು ನೀನು ನನ್ನ ಸೊಸೆ ಅಂಥಾ ಕರಿಸ್ಕೊಂಡ್ ಇರೋ ಹೆಣ್ಣಿನ ರೂಪದ ರಾಕ್ಷಸಿ, ಅಲ್ವಾ?" ಬಾರೇ ಬಾ.. ನನ್ನ ಮಗ ಥೋ ಅವ್ನು ನನ್ನ ಮಗ ಅಲ್ಲ ನಿನ್ನ ಗಂಡ, ಅವ್ನ ಕಿವಿ ಚುಚ್ಚು "ಮತ್ತೆ ಏನಾದ್ರು ಆಸ್ತಿ ಇಟ್ಟಿದಾನಾ ಈ ಮುದುಕ ಅಂಥಾ?" ಎಂದು ಒಂದೇ ಸಮನೇ ಭಾವೋದ್ವೇಗದಿಂದ ಹೇಳುತ್ತಿದ್ದರು.

ಸರೋಜಾಳಿಗೆ ಅವರ ಮಾತು ಕೇಳಿ ಮನಸ್ಸು ಹಿಂಡಿದಂತಾಗಿತ್ತು..

"ರಾಯರೇ ನನ್ನ ಮಾತು ಕೇಳಿ ಇಲ್ಲಿ, ನಾನು ನಿಮ್ಮ ಸೊಸೆ ಅಲ್ಲಾ.. ಸಮಾಧಾನ ಮಾಡ್ಕೊಳ್ಳಿ" ಎಂದು ಸಮಾಧಾನಿಸಿದ್ದರು.

"ಯಾಕ್ ರಾಯರೇ ಏನಾಯ್ತು? ಯಾಕಿಷ್ಟೊಂದು ಹತಾಶೆಯಲ್ಲಿ ಇದೀರಾ?"

ರಾಯರು: ಎನ್ ಹತಾಶೆ ಯಾವದಕ್ಕೋಸ್ಕರ ಹತಾಶೆ? ಮದ್ವೆ ಆಗೋವರೆಗೂ ಅಷ್ಟೇ ಮಕ್ಕಳು ನಮ್ಮವರು ಅದಾದ್ಮೇಲೆ ಅವ್ರು ಯಾರೂ ನಮ್ಮವರಲ್ಲಾ, ಅವ್ರಿಗೋಸ್ಕರ ಅಂತಿರೋ ಅವರ ಸಂಗಾತಿ ಸ್ವತ್ತು, ಎಲ್ಲದಕ್ಕಿಂತ ಹೆಚ್ಚಾಗಿ ಈ ಮಕ್ಕಳು ಅನ್ನೋ ಸಂಬಂಧ ನಮ್ಮ ಮೂಲಕ ಈ ಭೂಮಿಗೆ ಬಂದ ಒಂದು ಜೀವ ಅಷ್ಟೇ, ಆ ಜೀವ ದೊಡ್ಡದಾಗಿ, ಅದಿಕ್ಕೆ ಬೇಕಾದಂತಹ ಜ್ಞಾನ, ಸಂಸ್ಕಾರ ಎಲ್ಲವನ್ನೂ ಕೊಡೋದು ನಮ್ಮ ಕರ್ತವ್ಯ, ಆದ್ರೆ ನಾವುಗಳು ಏನೋ ಸಾಧನೆ ಮಾಡಿದೀವಿ ಅನ್ನೋ ಅಷ್ಟು ಆ ನಮ್ಮ ಕರ್ತವ್ಯವನ್ನ ಹೊಣೆಗಾರಿಕೆ ಅನ್ಕೊಂಡು ಆ ಹೊಣೆಗಾರಿಕೆಯನ್ನ ಯಶಸ್ವಿಯಾಗಿ ಪೂರೈಸಿ ಬಿಟ್ಟಿದೀವಿ ಅಂಥಾ ಬೀಗ್ತಿವಿ... ಜಗತ್ತಲ್ಲಿ ದುಡ್ಡಿಗೆ ಇರೋ ಶಕ್ತಿ, ಬೆಲೆ, ಮನುಷ್ಯರಿಗಿಲ್ಲ ಮಾ... ನಾನೊಬ್ಬ ರಿಟೈರ್ಡ್ ಮೇಷ್ಟ್ರು ಕೈ ಕಾಲು ಸರಿ ಇದ್ದು, ವಯ್ಯಸ್ಸಿನ ಕಾಲದಲ್ಲಿ ಮುಂದಿನ ಜೀವನಕ್ಕೆ ಬೇಕು ಅಂಥಾ ಒಂದಿಷ್ಟು ಆಸ್ತಿ ಮಾಡಿದ್ದೆ. ಮಗನನ್ನ ನಂಗಿನ್ನ ತುಂಬಾ ದೊಡ್ಡ ಸ್ಥಾನದಲ್ಲಿ ಇರ್ಬೇಕು ಅಂಥಾ ಚೆನ್ನಾಗಿ ಓದಿಸ್ದೇ, ಮದ್ವೆ ಆಯ್ತು ನನ್ನ ಆಸ್ತಿಯಲ್ಲ ಇನ್ಯಾರಿಗೆ ಅಂಥಾ ಎಲ್ಲವೂ ನನ್ನ ಮಗನ ಹೆಸರಲ್ಲಿ ಬರ್ದು, ಈ ಮುದಿ ಜೀವಗಳ ಜವಾಬ್ದಾರಿ ನಿಂದು ಅಂಥಾ ಅವ್ನಿಗೆ ಹೇಳಿದ್ದೆ. ಆದ್ರೆ ನನ್ನ ಹತ್ರಾ ಇರೋ ಆಸ್ತಿ, ಹಣ ಇರುವಾಗ ನಂಗೇ ಸಿಗೋ ಮರ್ಯಾದೆ ಎಲ್ಲವೂ ಅವ್ನ ಹೆಸರಿಗೆ ಬಂದಾಗ ಇರ್ಲಿಲ್ಲ. ನನ್ನ ಕೊನೆಗಾಲದಲ್ಲೂ ನನ್ನ ಜೊತೆ ಇದ್ದೋಳು ನನ್ನ ಪಾರು, ನನ್ನ ಪಾರ್ವತಿ ಮಾತ್ರ...

ಮನುಷತ್ವನೆ ಇಲ್ದೆ ಪ್ರಾಣಿ ಥರಾ ನೋಡೋಕೆ ಶುರು ಮಾಡಿದ್ಲು ಸೊಸೆ ಅನಿಸ್ಕೊಂಡ್ ಹೆಮ್ಮಾರಿ, ಅವ್ಳು ಹೇಳಿದ್ದು ಕೇಳಿಲ್ಲ ಅಂದ್ರೆ ತನ್ನ ತಂದೆ ತಾಯಿ ಅಷ್ಟು ವಯ್ಯಸ್ಸಾದ ಮುದಿ ಜೀವ ಅಂತಾನೂ ನೋಡ್ದೆ ದನಕ್ಕೆ ಬಾರಿಸ್ದಂಗೆ ಬಾರ್ಸೋಳು. ಆದ್ರೆ ಮಗ ಬಂದ್ರೆ ಸಾಕು ತುಂಬಾ ಒಳ್ಳೆವಳ ಥರಾ ಸೊಗಲು ಹಾಕ್ಕೊಂಡು ಅವ್ನ ಎದ್ರು ನಮ್ದೇ ತಪ್ಪು ಅನ್ನೋ ಥರಾ ಬಿಂಬಿಸೋಳು. ಮಗನ ಬಾಯಲ್ಲಿ ತಂದೆ ತಾಯಿಗಾಳಾದ ನಾವುಗಳು ಕೇಳಬಾರದ ಎಲ್ಲಾ ಮಾತುಗಳನ್ನೂ ಕೇಳಿ ಆಯ್ತು.. ನಂಗೇ ಅದನ್ನೆಲ್ಲ ಸಹಿಸೋಕೆ ಆಗ್ದೇ ನನ್ನ ಪಾರುನೂ ಬಿಟ್ಟು ಒಬ್ನೇ ವಿಷ ಕುಡ್ದೇ. ಆದ್ರೆ ಅಲ್ಲಿ ನನ್ನ ಪಾರು ಇನ್ನೂ ಹಿಂಸೆ ಅನುಭವಿಸ್ತಾ ಇದಾಳೆ ಅವರೊಟ್ಟಿಗೆ ಇದ್ದು...

ಪಾಪಾ ನನ್ನ ಪಾರು, ಏಳೇಳು ಜನ್ಮದಲ್ಲೂ ನಿನ್ನ ಕೈಬಿಡಲ್ಲ ಅಂಥಾ ಹೇಳಿದ್ದ ನಾನೇ, ಆ ಬೇಜವಾಬ್ದಾರಿ, ಮನುಷತ್ವ ಇಲ್ಲದ ಆ ನನ್ನ ಮಗನ ಕಾರಣಕ್ಕೊಸ್ಕರ ನನ್ನ ಪಾರುವನ್ನ ಈ ಜೀವನ ಅನ್ನೋ ಸಾಗರದಲ್ಲಿ ಆಕೆಯನ್ನ ಓಬ್ಬೋಂಟಿಯಾಗಿ ಬಿಟ್ಟು ಬಂದ್ಬಿಟ್ಟೆ... ನಿಜಕ್ಕೂ ನಾನು ಪಾಪಿ, ಎಂದು ಆ ರಾಯರ ಆತ್ಮ ಇನ್ನೂ ಜೋರಾಗಿ ರೋಧಿಸಲು ಶುರುವಿಟ್ಟಿತ್ತು...

ರಾಯರ ಮಾತು ಕೇಳಿ ಸರೋಜಾಳಿಗೆ ಆಕೆಯ ಗಂಡನ ನೆನಪಾಗಿತ್ತು.. ಬರುತ್ತಿರುವ ಕಣ್ಣೀರನ್ನ ಒರೆಸಿಕೊಳ್ಳುತ್ತಾ, ಕಣ್ಣು ಮುಚ್ಚಿ ದೀರ್ಘ ಉಸಿರು ತೆಗೆದುಕೊಂಡಿದ್ದರು....

ಕಣ್ಣು ಬಿಟ್ಟು ನೋಡಿದವರ ಎದುರಲ್ಲಿ ನಿಂತಿದ್ದು ಸರೋಜಾರ ಪತಿ ಶಂಕರ್...

ಸರೋಜಾರಿಗೆ ಮಾತೇ ಹೊರಡಲಿಲ್ಲ. ತಮ್ಮನ್ನ ತಾವೇ ಹೌದೋ ಅಲ್ಲವೋ ಎಂಬಂತೆ ಪರೀಕ್ಷಿಸಿಕೊಂಡರು ಒಮ್ಮೆ.. ಆಶ್ಚರ್ಯದಿಂದ "ರೀ ನಂಗೇನೂ ಆಗಿಲ್ವ? ನಾನು ಇನ್ನೂ ಸತ್ತಿಲ್ವಾ?" ಎಂದವಳ ಮಾತಿಗೇ ಶಂಕರ್ ಮುಗುಳು ನಗುತ್ತಾ "ಕನಸು ಕಂಡ್ಯಾ?"

ಸರೋಜಾ: "ಇಲ್ಲಾ ರೀ, ಹಾಗಲ್ಲ ಅದು ನಮಗೂ ಮಕ್ಕಳು, ಮೊಮ್ಮಕ್ಕಳು, ಅಂತೆಲ್ಲ ಆಗಿ ನಾನು ಸತ್ತು ಸ್ಮಶಾನ ಅಂತೆಲ್ಲ ಎನ್ ಏನೋ ಥೋ ಬಿಡಿ.." ಎಂದು ತಲೆ ಕೊಡವಿದ್ದರು..

ಶಂಕರ್: "ಎನ್ ಸರೋಜಾ ಮಕ್ಕಳಾ? ನಮಗಾ? ಎಲ್ಲಿ ಇದಾರೆ ಸರೂ...? ನಂಗೇ ಆ ಯೋಗ್ಯತೆ, ಶಕ್ತಿ ಎರಡೂ ಇಲ್ಲ, ಅದೆಲ್ಲ ಗೊತ್ತಿದ್ರೂ 40 ವರ್ಷ ನನ್ನ ಜೊತೆ ಜೀವನದ ನೌಕೆಯಲ್ಲಿ ಪಾಲುದಾರಳು ಆಗಿದ್ದಾಕೆ ನೀನು.. ನೋಡು ನೀನು ಮಕ್ಕಳು, ಮೊಮ್ಮಕ್ಕಳು ಅಂಥಾ ಕನಸಲ್ಲೇ ನೋಡಿ ಖುಷಿ ಪಡ್ಬೇಕು.." ವಿಷಾದದ ನಗೆ ನಕ್ಕಿದ್ದರು..

ಸರೋಜಾ: "ರೀ ರೀ ಪ್ಲೀಸ್ ನೊಂದ್ಕೋಬೇಡಿ, ನಂಗೇ ಈಗ ಮಕ್ಕಳು ಮೊಮ್ಮಕಳು ಅಂಥಾ ನಾನು ಯಾವತ್ತೂ ಆಸೆ ಪಟ್ಟಿಲ್ಲ, ನಂಗೇ ಅವ್ರೇಲ್ಲ ಬೇಡವೂ ಬೇಡಾ. ಕಾಲಕ್ಕೆ ತಕ್ಕಂತೆ ಬದ್ಲಾಗೋ ಮಕ್ಕಳಿಗಿಂತಾನೂ ನಂಗೇ ನೀವು ಮಗುವಾಗಿ ನಿಮ್ಗೆ ನಾನು ಮಗುವಾಗಿ ಈ ಜನ್ಮ ಒಂದೇ ಅಲ್ಲ ಇನ್ನೂ ಏಳೇಳು ಜನ್ಮದಲ್ಲೂ ಹೀಗೆ ಇರಣ. ನಮ್ಮ ಪ್ರೀತಿಯಲ್ಲಿ ಯಾವ್ದೆ ರೀತಿ ಸ್ವಾರ್ಥ ಇಲ್ಲ, ಪ್ರತಿಫಲಾಪೇಕ್ಷೆ ಇಲ್ಲ, ಜೀವನ ಪೂರ್ತಿಯಾಗಿ ನಿಮ್ಮ ಮಡಿಲಲ್ಲಿ ನಾನು ಹೀಗೆ ಮಗುವಾಗಿ ಇರೋ ಅವಕಾಶ ಸಿಕ್ರೆ ಸಾಕು.. ಅದೇ ನನ್ನ ಕೋರಿಕೆ, ದಿನಾ ನಾನು ದೇವ್ರಲ್ಲಿ ಪ್ರಾರ್ಥಿಸೋದು ಇದೊಂದೇ... ನಂಗೇ ಜಗತ್ತಿನ ಯಾವ ಸಂಬಂಧವೂ ಬೇಡ. ನಿಮ್ಮ ಮುಂದೆ ಎಲ್ಲಾ ಸಂಬಂಧಗಳು ನಂಗೇ ನಶ್ವರ.. ಇಲ್ಲಿ ನಿಮ್ಗೆ ನಾನು ನಂಗೇ ನೀನು ಅನ್ನೋದು ಅಷ್ಟೇ ಶಾಶ್ವತ.. ಅದೇ ವಾಸ್ತವ ಕೂಡಾ ಹೌದು... ನನ್ನ ತಂದೆ ತಾಯಿಯ ಹೊರತಾಗಿ ನಾನು ಅತಿಯಾಗಿ ಅವಲಂಭಿಸೋ ಜೀವ ಅಂದ್ರೆ ನೀವು. ಪ್ರೀತಿ ಪಕ್ವ ಅನಿಸೋದು ಈ ಮುದಿ ವಯ್ಯಸಲ್ಲಿ. ನಾವು ನಮ್ಮ ಜೀವನದ ಆ ಪ್ರೀತಿಯ ಪಕ್ವತೆಯನ್ನ ಅನುಭವಿಸೋ ಹಂತ ತಲುಪಿದಿವಿ ಅದನ್ನ ಅಷ್ಟೇ ಖುಷಿಯಿಂದ ಆನಂದಿಸೋಣ.." ಎಂದವಳ ಮಾತುಗಳು ಕೇಳಿದ ಶಂಕರ್ ಗೇ ಏನೊಂದು ಮಾತು ಹೊಳೆಯಲಿಲ್ಲ..

ಆಕೆಯನ್ನ ತಬ್ಬಿ ಆಕೆಯ ಹಣೆಗೊಂದು ಚುಂಬಿಸಿದ್ದರು...

ರೀ ಮೊದ್ಲೇ ನಿಮ್ಗೆ ಬಿಪಿ, ಟ್ಯಾಬ್ಲೆಟ್ ತಗೊಂಡ್ರಾ? ನಾನೊಬ್ಬಳು ಏನೋ ಅರ್ಥ ಇಲ್ಲದ ಕನಸು ನೇನಿಸ್ಕೊಂಡು ಎಳಿ ಎದ್ದೇಳಿ.. ಜಾಗಿಂಗ್ ಗೇ ಲೇಟ್ ಆಯ್ತು ನಿಮ್ಮ ಸೆಕೆಂಡ್ ಲವ್ವರ್ ಪ್ರೀತಿಯ ಶಾರೂ, ಅಲಿಯಾಸ್ ಶಾರದಾ ಕಾಯ್ತಿರ್ತಾಳೆ.. ಎಂದು ಕಣ್ಣೊಡೆದಿದ್ದಳು ಸರೋಜಾ...

ಶಂಕರ್ ಅವಳ ಮಾತುಗಳಿಗೆ ಹುಸಿ ಮುನಿಸಿಕೊಂಡವರಂತೆ ನಟಿಸಿದ್ದರು..

ಸರೋಜಾ ಅವರನ್ನ ಛೇಡಿಸುತ್ತಾ ನಗುತ್ತಿದ್ದರೆ ಅವಳ ನಗುವಲ್ಲಿ ಶಂಕರ್ ಭಾಗಿಯಾಗಿದ್ದರು.. ಜೋರಾದ ನಗುವಿನ ಸದ್ದು ಕೇಳಿ ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಅಶ್ವಿನಿ ದೇವತೆಗಳು ಆಶೀರ್ವಧಿಸಿದ್ದಂತೂ ಸುಳ್ಳಲ್ಲ...Rate this content
Log in