ಸ್ವಪ್ನ ಎಂ

Tragedy Inspirational

3.7  

ಸ್ವಪ್ನ ಎಂ

Tragedy Inspirational

ಪಶ್ಚಾತಾಪ

ಪಶ್ಚಾತಾಪ

6 mins
2.9K


"ಲೋ.... ಮೊಮ್ಮಗನೇ ಕಿರಣಾ.... ತಾಯಿ ವೈಶಾಲಿ...

ಮಗು ವರ್ಷ.... ಮಗನೇ ಅಕ್ಷಯಾ..... ಯಾರಾದ್ರು ಇದ್ರೆ ಕುಡಿಯೋಕೆ ನೀರ್ ಕೊಡ್ರೋ..... ಕೆಮ್ಮಿ ಕೆಮ್ಮಿ ಗಂಟಲ ಪಸೆ ಒಣಗೋಗಿದೆ....." ಜಾನಕಿ ಅವರ ಈ ಚಡಪಡಿಸುವಿಕೆ ಕೇಳಿದರೂ ಅದನ್ನ ಮನಸ್ಸಿಗೆ ಹೋಗಲಿ ಕಿವಿಗೇ ಹಾಕಿಕೊಳ್ಳುವ ಸಾಹಸವನ್ನೂ ಯಾರೂ ಮಾಡಲಿಲ್ಲ.... ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು... ತಾವೇ ಎದ್ದು ಡೈನಿಂಗ್ ಟೇಬಲ್ ಮೇಲೇ ಇರೋ ನೀರನ್ನ ಕುಡಿದು, ಅಲ್ಲೇ ಇದ್ದ ಸೊಸೆ ವೈಶಾಲಿಯನ್ನ ನೋಡಿದರು...

"ಇವಳಿಗೇ ತಾನು, ತನ್ನ ಸಮಾಜ ಸೇವೆನೇ ಮುಖ್ಯ...!! ಇವಳು ಸಾಲು ಸಾಲಾಗಿ ಮಾಡೋ ಭಾಷಣಗಳಲ್ಲಿ, ಹಿರಿಯರು, ಅವರ ಬಗ್ಗೆ ಹೇಳುವ, ಗೌರವಯುತವಾದ, ಮಾತುಗಳು ಎಂಥವರ ಮನದಲ್ಲೂ ಆಳವಾಗಿ ಬೇರೂರಿ ಇವಳ ಬಗ್ಗೆ ಗೌರವ ತರಿಸತ್ತೇ, ಆದ್ರೆ ಮನೇಲಿ......?? ಹ್ಮ್... ನಾಟಕದ ಬದುಕು........

ಇನ್ನೂ ನನ್ನ ಮಗ, ಅಕ್ಷಯ್....

"ಪಾಪಾ ಅವನಿಗೇ ಅವನದ್ದೇ ಬ್ಯುಸಿ ಲೈಫ್...... ನನ್ನ ಮಗ ಒಬ್ಬ ಹೆಸರಾಂತ ಲಾಯರ್.... ಆದ್ರೆ ಏನ್ ಪ್ರಯೋಜನ? ಒಬ್ಬ ತಾಯಿ ಮನಸು ಅರ್ಥ ಮಾಡ್ಕೊಳ್ಳೋಕೆ ಆಗದೇ ಇರೋ ಇವನು ನ್ಯಾಯ ದೇವಿ ಮನಸ್ಸನ್ನ ಅರ್ಥ ಮಾಡ್ಕೊಂಡು ನ್ಯಾಯ ಕೊಡಿಸ್ತಾನಾ...??? ದಿನಕ್ಕೆ ಒಂದೇ ಒಂದು ಸಲ ಆದ್ರು ನನ್ನ ಮುಖ ನೋಡಿ "ಅಮ್ಮಾ ಹೇಗಿದಿಯಾ? ಊಟ ಆಯ್ತಾ? ಟ್ಯಾಬ್ಲೆಟ್ ತಗೊಂಡ್ರಾ?" ಎಂದು ಒಂದೇ ಒಂದು ಮಾತು ಕೇಳಿದ್ರು ಈ ಹೆತ್ತ ಕರುಳು ಮನಸ್ಸಲ್ಲೇ ಕುಣಿದು ಕುಪ್ಪಳಿಸಿಬಿಡ್ತಿತ್ತು... ಆದ್ರೆ....??? ನಮಗೇ ದಕ್ಕದೇ ಇರೋದರ ಬಗ್ಗೆ ನಿರೀಕ್ಷೆ ಇಟ್ಕೋಬಾರದಂತೆ.. ನಾನು ಆ ನಿರೀಕ್ಷೆಯಿಂದ ತುಂಬಾ ದೂರ ಇರ್ತೀನಿ... ಇರಲೇ ಬೇಕು....." ಅಸಹಾಯಕತೆಯ ಉಸಿರು ಹೊರದಬ್ಬಿ ತಮ್ಮ ಕೋಣೆ ಸೇರಿದರು... ಎಷ್ಟೇ ಮಗ್ಗಲು ತಿರುಗಿಸಿ ಮಲಗಿದರೂ ಜಾನಕಿ ಅವರಿಗೇ ನಿದ್ದೆಯ ಸುಳಿವೇ ಕಾಣಲಿಲ್ಲ.....

ಮನಸ್ಸು ಗತಕಾಲದ ನೆನಪಿಗೆ ಜಾರಿತ್ತು..... "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆ ಮಾತು ಬಹುಶಃ ನನ್ನನ್ನ ನೋಡೇ ಹೇಳಿರಬಹುದು.... ಒಂದು ಕಾಲದಲ್ಲಿ ತುಂಬಿದ ಸಂಸಾರದಲ್ಲಿ ಹುಳಿ ಹಿಂಡಿದ ಪಾಪಾ.. ಆ ಹಿರಿಯರ ಶಾಪ... ಅವರು ನೊಂದು ಶಪಿಸಿಲು ಕಾರಣವಾದ ಆ ನೋವಿನ ತಾಪ ಇಂದು, ಇವತ್ತು ತನ್ನ ಮಕ್ಕಳಿಂದ ಇಷ್ಟೊಂದು ನಿರ್ಲಕ್ಷ್ಯತೆಗೇ ಒಳಗಾಗಲು ಕಾರಣವಾಯಿತೇ?" ಇವತ್ತೇಕೋ ಅವರ ಮನಸ್ಸು ತೀರಾ ಭಾವುಕತೆಯ ಆಳಕ್ಕೆ ಇಳಿದು, ಪಾಪ ಪ್ರಜ್ಞೆ ತನ್ನ ಸಾಮ್ರಾಜ್ಯವನ್ನ ಮೆರೆದಿತ್ತು........

ನಿದ್ದೆಯಿಂದ ಎದ್ದ ಜಾನಕಿಯವರ ಕಣ್ಗಳು ಕೊಳಗಳಾಗಿದ್ದವು.....

ತನ್ನ ಗಂಡ ತನಗೇ ಬಹುವಾಗಿ ಪ್ರೀತಿಯಿಂದ ಕೊಟ್ಟ ಕಾಣಿಕೆ..... ಅದೇ ಆ ಬೆರಳಚ್ಚು ಯಂತ್ರ.... ಸಾಹಿತ್ಯದಲ್ಲಿ ತನಗಿದ್ದ ಆಸಕ್ತಿಯನ್ನ ಅರಿತ ಆಕೆಯ ಪತಿ, ಆಕೆಗೇ ತಮ್ಮ ಮೊದಲ ವರ್ಷದ ದಾಂಪತ್ಯದ ಸವಿ ನೆನಪಿಗಾಗಿ ಕೊಟ್ಟ ಉಡುಗೊರೆ ಅದು......

ಬೇಸರವಾದಾಗ, ತನ್ನ ಗಂಡನ ನೆನಪಾದಾಗ ಅದರಲ್ಲಿ ತನ್ನ ಭಾವನೆಗಳನ್ನ ಎರಡಕ್ಷರದಲ್ಲಿ ಟೈಪಿಸಿದರೆ ಸಾಕು, ಆಕೆಯ ಪ್ರತಿಯೊಂದು ಮನಸ್ಸಿನ ತುಮುಲತೆಯನ್ನ ತನ್ನ ಪತಿಯಲ್ಲಿ ಹೇಳಿಕೊಂಡ ಸಮಾಧಾನ, ಆತ್ಮತೃಪ್ತಿ ಆಕೆಯದು.....

ಒಂದೊಂದೇ ಆಕೆಯ ಮನಸ್ಸಿನ ಮಾತುಗಳನ್ನ ಅಕ್ಷರ ರೂಪದಲ್ಲಿ ಸೆರೆಹಿಡಿಯಲು ಮುಂದಾದಳು ಜಾನಕಿ......

ಹಣ್ಣೆಲೆಯಾದಾಗ ಮರವೇ ಆ ಎಲೆಗಳನ್ನ ತನ್ನಿಂದ ಕಿತ್ತೆಸೆದು ನಿರ್ಲಕ್ಷ್ಯತೆಯನ್ನ ತೋರುತ್ತದೆ.. ಜೀವನವೂ ಹಾಗೇ, ಮುಪ್ಪಿನ ಕಾಲದಲ್ಲಿ ಮಕ್ಕಳು ಮೊಮ್ಮಕ್ಕಳಿಂದ ಒಟ್ಟಾರೆಯಾಗಿ ನಾವು ಕಾಣುವ ಅಕ್ಕರೆ, ಮಮತೆ, ಪ್ರೀತಿ, ವಾತ್ಸಲ್ಯಕೆ ಬೆಲೆನೇ ಇಲ್ಲದೇ, ನಿರ್ಲಕ್ಷ್ಯತೆಗೆ ಒಳಗಾಗಿ, ಅಸಡ್ಡೆಗೇ ಒಳಗಾದಾಗ ಆಗೋ ನೋವು ಏನು ಅನ್ನುವುದರ ಅರಿವು ಇವತ್ತೂ ನನಗೇ ಆಗ್ತಾ ಇದೆ.

ತುಂಬಾ ಸಿನಿಮೀಯ ಸಂಭಾಷಣೆಗಳಲ್ಲಿ ಕೇಳಿದ್ದೆ, "ದೇಹಕ್ಕೆ ಆದ ಗಾಯ ಬೇಗ ವಾಸಿ ಆಗತ್ತೆ, ಆದ್ರೆ ಮನಸ್ಸಿಗೆ ಆದ ಗಾಯ........?"

ನಮ್ಮ ಜೀವನದಲ್ಲಿ ಅನುಭವಕ್ಕಿಂತ ಬೇರೊಬ್ಬ ಶಿಕ್ಷಕ ಇಲ್ಲಾ ಅನ್ನೋ ಮಾತು ಎಷ್ಟೊಂದು ಸತ್ಯ ಅಲ್ವಾ? ಜೀವನ ನಮಗೇ ತಿಳಿಯದೇ ಹೇಗ್ ಬೇಕೋ ಹಾಗೇ ಹೊಸ ಹೊಸ ಅನುಭವಗಳನ್ನ ನಮ್ಮಲ್ಲಿ ಮೂಡಿಸಿ ಪಾಠ ಕಲಿಸತ್ತೆ, ನಾವು ಕಲಿತ ಆ ಪಾಠದಿಂದ ಜಾಗೃತವಾಗಿ ಮುಂದೇ ಅಂಥಾ ತಪ್ಪು ಮರುಕಳಿಸದಂತೆ ನೋಡ್ಕೋಬೇಕು ಅಲ್ವಾ......? ಆದ್ರೆ ನಾನು....!!!!

ವಯ್ಯಸ್ಸಿನ ಹಮ್ಮೋ?, ಆಗಿನ ಕಾಲದಲ್ಲಿ ನಾನು ವಿದ್ಯಾವಂತೆ ಅನ್ನೋ ಜಂಭವೋ? ಅಥವಾ ವಿಭಕ್ತ ಕುಟುಂಬದಿಂದ ಬಂದ ನನಗೇ ಆ ಅವಿಭಕ್ತ ಕುಟುಂಬ ಅವರಲ್ಲಿನ ಕಟ್ಟು-ಪಾಡುಗಳು, ತರ್ಕಕ್ಕೂ ನಿಲುಕದಂತಹ ಆ ಮೌಢ್ಯತೆ, ನಾನೇ ಹೆಚ್ಚು ನನಗೇ ನನ್ನದೇ ಆದ ಪ್ರಾಶಸ್ತ್ಯ, ನನ್ನನ್ನ ನಾನು ಆ ಕುಟುಂಬದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಹುಚ್ಚು ಹುಂಬುತನವೋ? ನನ್ನಲ್ಲಿ ಅವರಿಂದ ವಿಭಿನ್ನವಾಗಿ, ಅವರುಗಳಿಂದ ಪ್ರತ್ಯೇಕವಾಗಿ ಇರಲು ಕಾರಣವಾಯಿತು.....

ಪ್ರಕೃತಿ ಸೊಬಗಿಗೆ ತವರುನಾಡಾದ ಮಲೆನಾಡು ನನ್ನೂರು. ಆಗಿನ ಕಾಲದಲ್ಲೇ ನಾನು ನನ್ನ ಮೆಟ್ರಿಕ್ ವಿದ್ಯಾಭ್ಯಾಸವನ್ನ ಮುಗಿಸಿದ್ದೆ.

ನನ್ನ ಅಪ್ಪ ಅಮ್ಮನಿಗೆ ನಾನೊಬ್ಬಳೇ ಮಗಳು, ಅತಿಯಾಗಿ ಮುದ್ದುಮಾಡಿ ಬೆಳೆಸಿದರ ಪರಿಣಾಮವೆನೋ ನಾ ಕಾಣೇ? ವಯ್ಯಸ್ಸು, ವಿದ್ಯೆಯ ಜೊತೆ ಹಠ, ಗರ್ವ, ಸ್ವಾಭಾವಿಕವಾಗಿಯೇ ನನ್ನ ಮನದಲ್ಲಿ ಅರಮನೆಯ ಆಕಾರದಲ್ಲಿ ವಿಶಾಲವಾಗಿ ಬೆಳೆದು ನಿಂತಿತ್ತು...

ಅಪ್ಪನ ಗೆಳೆಯರು ಶೇಷಾಚಲರಾಯರು ಆಗಿನ ಕಾಲದಲ್ಲೇ ತುಂಬಾ ಸ್ಥಿತಿವಂತರು, ಅವರದ್ದು ಕೂಡು ಕುಟುಂಬ, ಸುತ್ತ-ಮುತ್ತಲಿನ ನಾಲ್ಕು ಹಳ್ಳಿಗಳಲ್ಲೂ ಇವರು, ಇವರ ಕುಟುಂಬವೆಂದರೇ ಎಲ್ಲಿಲ್ಲದ ಗೌರವ....

ಕಾರಣ, ಮಾವನವರ ಶಿಸ್ತು, ಗಾಂಭೀರ್ಯ, ಅವರ ವ್ಯಕ್ತಿತ್ವ...

ಅವರಿಗಿದ್ದ ಮೂರೂ ಮಕ್ಕಳಲ್ಲಿ ಇಬ್ಬರು ಸಂಸಾರ ಎಂಬ ನೌಕೆಯಲ್ಲಿ ಅದಾಗಲೇ ಅವರ ಪಯಣವನ್ನ ಶುರು ಮಾಡಿದ್ದರಿಂದ ಅವರ ಕೊನೆಯ ಮಗ ಪ್ರಕಾಶನಿಗೆ ಹೆಣ್ಣು ಹುಡುಕುತ್ತಿದ್ದರು....

ಅದೇ ಸಮಯದಲ್ಲಿ ಅಪ್ಪನ ಭೇಟಿ, ಮಾವನವರಿಗೇ ನಾನೇ ಅವರ ಮನೆ ಸೊಸೆಯಾಗಬೇಕೆಂಬ ಹಂಬಲ ಅವರಲ್ಲಿ ಗೂಡು ಕಟ್ಟಿತ್ತು.... ಅಪ್ಪ-ಮಾವ ಇಬ್ಬರು ಬಾಲ್ಯ ಸ್ನೇಹಿತರು, ಆ ಒಂದು ಸಲುಗೆಗೋ ಏನೋ ಮಾವನವರು ನನ್ನ ಮದುವೆ ಪ್ರಸ್ತಾಪವನ್ನ ಅಪ್ಪನ ಬಳಿ ಇಟ್ಟೇ ಬಿಟ್ಟಿದ್ದರು....

ಆಗ ಅಪ್ಪನ ಖುಷಿಗೇ ಪಾರವೇ ಇಲ್ಲದಂತಾಗಿತ್ತು, ಒಳ್ಳೆ ಕುಟುಂಬ, ನಮಗಿಂತಲೂ ಹೆಚ್ಚು ಸ್ಥಿತಿವಂತರು, ಒಳ್ಳೆ ಕುಟುಂಬದಿಂದ ಬಂದ ಪ್ರಕಾಶ, ಸಂಸ್ಕಾರವಂತ, ಗುಣವಂತ, ರೂಪವಂತನೂ ಹೌದು.... ನನ್ನ ಮಗಳಿಗೇ ಅನುರೂಪನಾದ ಜೋಡಿ........

ಇದಕ್ಕಿಂತ ಬೇರೆ ಏನು ಬೇಕು ನನ್ನ ಮಗಳು ಖುಷಿಯಾಗಿರಲು? ಎಂದು ತಮ್ಮಲ್ಲಿಯೇ ಗುಣಾಕಾರ ಭಾಗಾಕಾರ ಮಾಡಿ ಮದುವೆಗೇ ಸಮ್ಮತಿಸಿಯೇ ಬಿಟ್ಟಿದ್ದರು.......

ನನಗೋ ನನ್ನ ತಂದೇ-ತಾಯಿಯರೇ ಪ್ರಪಂಚವಾಗಿದ್ದರು. ಅಲ್ಲಿಂದ ಗಂಡ, ಅತ್ತೆ, ಮಾವ, ನಾದಿನಿ ಎಂಬ ಹೊಸ ಸಂಬಂಧದ ಬಲೆ ನನಗೊಂದು ರೀತಿ ಹೊಸ ಪ್ರಪಂಚಕ್ಕೆ ಕಾಲಿಟ್ಟ ಅನುಭವ.... ನನಗೇ ಹೇಗೇ ನನ್ನ ತಂದೇ-ತಾಯಿಯರೇ ಪ್ರಪಂಚವೋ ಹಾಗೇ ಅವರಿಗೂ ಅವರ ಕುಟುಂಬ ಅಣ್ಣ, ಅಪ್ಪ-ಅಮ್ಮ, ಅತ್ತಿಗೆಯರೆಂದರೆ ಅಗಾಧ ಗೌರವ, ಪ್ರೀತಿ, ಅಭಿಮಾನ....

ನನ್ನ ಸರ್ವಸ್ವವೂ ನೀನೇ ಎಂದು ಬಂದ ನನ್ನಲ್ಲಿ ನನ್ನವನ ಕಾಳಜಿ, ಪ್ರೀತಿ, ಅವನ ಸಾಮೀಪ್ಯ ಪ್ರತಿ ದಿನ ಪ್ರತಿ ಕ್ಷಣ ನನ್ನ ಜೊತೆಗೇ, ನನ್ನಲ್ಲೇ ಮಾತ್ರ ಇರಬೇಕು ಎನ್ನುವುದು ನನ್ನ ಸ್ವಾರ್ಥನಾ? ಪ್ರತಿಭಾರಿ ಅವರ, ನನ್ನ ನಡುವೇ ಅವರು ಅವರ ಕುಟುಂಬಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆ ನನಗೇಕೋ ಸಹಿಸದ ನೋವಿಗೆ ಕಾರಣವಾಗಿತ್ತು.. ಅದೇ ಮನೋವ್ಯಾಕುಲತೆಯಾಗಿ ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು.... ಅವರ ಮೇಲಿನ ಅತಿಯಾದ ಪ್ರೀತಿಯೋ ಏನೋ ನಾ ಕಾಣೇ, ಕುಟುಂಬದ ಜೊತೆಗಿನ ಅವರ ಒಡನಾಟಕ್ಕೂ ನನ್ನೊಂದಿಗಿನ ಅವರ ಒಡನಾಟಕ್ಕೂ ಒರೆ ಹಚ್ಚಿದೇ... ಆಗ ನನ್ನ ಗಮನಕ್ಕೆ ಬಂದ ಸ್ಪಷ್ಟ ವಿಷಯ ಅವರ ಮೊದಲ ಆದ್ಯತೆ, ಪ್ರಾಮುಖ್ಯತೆ ಎನಿದ್ದರೂ ತಂದೆ ತಾಯಿ ಅಣ್ಣಂದಿರು ಎಂದು..... ಆಗ ಮನಸ್ಸು ಕಸಿವಿಸಿಗೇ ಸಿಲುಕಿತು. ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆನೋ ಎಂಬ ಭಾವನೆ ಮನದಲ್ಲಿ ಆಳವಾಗಿ ಬೇರೂರಿತ್ತು.....

ಅವರ ಪ್ರತಿಯೊಂದು ಮಾತುಗಳಲ್ಲೂ ಎಣಿಸಿ ಎಣಿಸಿ ತಪ್ಪುಗಳನ್ನ ಹುಡುಕುತ್ತಿದ್ದೆ... ಮಾತು ಮಾತಿಗೂ ಜಗಳ... ಚಿಕ್ಕ ಪುಟ್ಟ ವಿಷ್ಯಗಳನ್ನ ದೊಡ್ಡದು ಮಾಡಿ ರಾದ್ಧಾಂತ ಮಾಡುತಿದ್ದೆ... ಆಗ ಪ್ರಕಾಶನ ದೃಷ್ಟಿಯಲ್ಲಿ ನನ್ನ ವ್ಯಕ್ತಿತ್ವ ಕುಸಿಯತೊಡಗಿತು... ಅವನು ನನ್ನ ಮಾತುಗಳನ್ನ, ನನ್ನನ್ನ ಅಸಡ್ಡೆ ಇಂದ ಕಾಣಲು ಶುರುವಿಟ್ಟ, ಇತ್ತ ಮನೆಯಲ್ಲಿ ಅತ್ತೆ ಮನೆಯ ಸಂಪೂರ್ಣ ಅಲ್ಲದಿದ್ದರೂ ಭಾಗಶಃ ಜವಾಬ್ದಾರಿಯನ್ನ ತಮ್ಮ ಹಿರಿಸೊಸೆಯರಿಗೆ ವಹಿಸಿಕೊಟ್ಟಿದ್ದರು... ನನ್ನ ಚಿಕ್ಕ ಪುಟ್ಟ ತಪ್ಪುಗಳನ್ನ ಗಣನೆಗೇ ತೆಗೆದುಕೊಳ್ಳದೆ ಕ್ಷಮಿಸುತ್ತಿದ್ದ ಅತ್ತೆಯವರ ಮೃದು ಧೋರಣೆ ನನ್ನಲ್ಲಿಯ ಅಸಮಾಧಾನಕ್ಕೆ ಕಾರಣವಾಗುತ್ತಿತ್ತು. ಅದಕ್ಕೇ ಅಲ್ಲವೇ ಹೇಳುವುದು ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂದು........

ನನ್ನಲ್ಲಿಯೇ ಊಹೆ ಮಾಡಿ ನನ್ನ ಬಗೆಗಿನ ಮನೆಯವರ ವಿಚಾರ ಧಾರೆಗಳನ್ನ ಕಲ್ಪಿಸಿ ಸೌಧವನ್ನಾಗಿಸಿ ಬೆಳೆಸಿದ್ದೆ...

ಅಲ್ಲಿ ನನಗೇ ನನ್ನ ಗಂಡ, ಮುಂದೇ ನನಗೇ ಹುಟ್ಟೋ ಮಕ್ಕಳ ಭವಿಷ್ಯದ ಹೊರತು ಬೇರೇನೂ ಇರಲಿಲ್ಲ.... ಅದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲೇ ಇದೇ ಮನೆಯಲ್ಲೆ ನಮ್ಮ ಜೀವನ ಮುಂದುವರಿಸಿದರೆ ನನ್ನ ಗಂಡ ಎಲ್ಲರ ಕೈಗೊಂಬೆಯ ಹಾಗೇ ಎಲ್ಲರ ಅಡಿ ಆಳಾಗಿ ಬದುಕಬೇಕಾಗುತ್ತದೆ ಎನಿಸಲು ಶುರುವಾಯಿತು. ಹಿರಿ ಸೊಸೆಯರ ಮಕ್ಕಳಿಗೆ ಸಿಗೋ ಪಾಶಸ್ತ್ಯ ನನ್ನ ಮಕ್ಕಳಿಗೆ ಎಂದೂ ಸಿಗಲಾರದೆಂಬ ಹುಚ್ಚು ನಂಬಿಕೆ ಸದ್ದಿಲ್ಲದೆ ಹುಟ್ಟಿತ್ತು ನನ್ನ ಮನದ ಮೂಲೆಯಲ್ಲಿ... ಹೇಗಾದರೂ ಮಾಡಿ ಅಲ್ಲಿಂದ ಆ ಕುಟುಂಬದಿಂದ ದೂರ ಆಗಿ ಸ್ವಾವಲಂಬನೆ ಇಂದ ನಮ್ಮ ಬದುಕನ್ನ ಕಟ್ಟಿಕೊಳ್ಳಬೇಕು ಎಂಬ ಹಂಬಲ. ಆ ಮನೆಯಲ್ಲಿಯ ಕಟ್ಟುನಿಟ್ಟಿನ ಸಂಪ್ರದಾಯಗಳು ಕ್ಷಣ ಕ್ಷಣಕ್ಕೂ ನನ್ನನ್ನ ಉಸಿರುಗಟ್ಟುವಂತೆ ಮಾಡುತಿತ್ತು.....

ಆಗಲೇ ಮನಸಲ್ಲಿ ಒಂದು ದೃಢ ನಿರ್ಧಾರಮಾಡಿಯೇ ಬಿಟ್ಟೆ... ಹೇಗಾದರೂ ಸರಿ ಇಲ್ಲಿಂದ ನಾನು ನನ್ನ ಗಂಡ ಇಬ್ಬರು ದೂರವಾಗಲೇ ಬೇಕು ಎಂದು, ಆಗಲೇ ಶುರುವಾಗಿದ್ದು ಇಲ್ಲ ಸಲ್ಲದ ಆರೋಪ ಪ್ರತ್ಯಾರೋಪ...

ಆ ಆರೋಪ ಪ್ರತ್ಯರೋಪಗಳಲ್ಲಿ ನನ್ನದೇ ಮೇಲುಗೈ ಸಾಧಿಸುವ ಹಾಗೇ ಅವರ ಅತ್ತಿಗೇಯರ ಮೇಲೆಲ್ಲಾ ಜಾಡಿ ಮಾತುಗಳನ್ನ ಹೇಳಿ, ನನ್ನನ್ನ ನಾನು ತುಂಬಾ ಸಂಭಾವಿತಳಂತೆ ಪ್ರಕಾಶನ ಎದಿರು ಬಿಂಬಿಸಿದೆ...

ಈ ಸಣ್ಣ ಪುಟ್ಟ ಕದನವೇ ಮುಂದುವರೆದು ಅದಕ್ಕೊಂದು ಮುಕ್ತಾಯ ಎಂಬಂತೆ ಎಲ್ಲರ ಮನಸಲ್ಲೂ ಮನೇ ಭಾಗವಾಗಿ ವಿಭಕ್ತವಾದ ಕುಟುಂಬ ಸಾಗಿಸಬೇಕು ಎಂದು ನಿರ್ಧರಿಸಿಯಾಗಿತ್ತು... ಒಂದು ಹೆಣ್ಣು ಮನಸು ಮಾಡಿದ್ರೆ ಒಂದು ಕುಟುಂಬದ ಕಣ್ಣಾಗಿ, ಆ ಕುಟುಂಬದ ಶ್ರೇಯೊಭಿಲಾಷಿಯಾಗಿ, ರಥವನ್ನ ಮುನ್ನೆಡೆಸುವ ಸಾರಥಿಯ ಹಾಗೇ ಇರಬಹುದು ಆದರೇ ಅದೇ ಹೆಣ್ಣಿಂದ ಜೇನುಗುಡಿನಂತಹ ಸಂಸಾರ ಒಡೆದು ಛಿದ್ರಮಾಡಿ, ಮನಸು ಮನಸುಗಳ ನಡುವೆ ದ್ವೇಷ, ಅಸೂಯೆಯ ಜ್ವಾಲೆಯನ್ನ ಹೊತ್ತಿಸಿ ಆ ಕುಟುಂಬದ ಇರುವಿಕೆಯನ್ನೇ ಅಳಿಸಿ ಹಾಕಬಹುದು ಎನ್ನುವುದಕ್ಕೆ ಅಂದು ನಾನು ಜ್ವಲಂತ ಸಾಕ್ಷಿಯಾಗಿದ್ದೆ........

ತಮ್ಮ ಇಳಿ ವಯ್ಯಸ್ಸಿನಲ್ಲಿ ಮಕ್ಕಳ ಆಸರೆಯನ್ನೇ ನೆಚ್ಚಿ, ತಮ್ಮ ಕೊನೆಗಾಲವನ್ನ ಎಣಿಸುತ್ತಿದ್ದ ಆ ಹಿರಿ ಜೀವಗಳೆರಡು ಮಕ್ಕಳ ಈ ಜಗಳ, ವಂಶಪಾರಂಪರಿಕವಾಗಿ ಬಂದ ಮನೆಯ ಭಾಗ ಈ ಎಲ್ಲಾ ವಿಷಯಗಳು ಅವರಿಗೇ ಅರಗಿಸಿಕೊಳ್ಳಲಾರದ ತುತ್ತಾಗಿ ಪರಿಣಮಿಸಿತ್ತು...

ಸೂಕ್ಷ್ಮ ಮನಸ್ಸಿನ ಅತ್ತೆಯವರು ತಮ್ಮ ಮಕ್ಕಳನ್ನ, ತಮ್ಮ ಕುಟುಂಬವನ್ನ, ಆ ಸ್ಥಿತಿಯಲ್ಲಿ ನೋಡಲು ಆಗದೇ ಅದನ್ನೇ ಮನೋವ್ಯಾಧಿಯನ್ನಾಗಿ ಮಾಡಿಕೊಂಡು ಮಂಕಾಗಿ ಹೋಗಿದ್ದರು...

ಇನ್ನು ಮಾವ.... ಊರಿನಲ್ಲಿ ಗರ್ವ, ಹೆಮ್ಮೆ, ಶಿಸ್ತಿನಿಂದ ಬಾಳಿದ ಅವರಿಗೆ ಅವರ ಸಂಸಾರದ ಬಿರುಕನ್ನೆ ತಮ್ಮ ಮನರಂಜನೆಯ ವಿಷಯ ವಸ್ತುವನ್ನಾಗಿ ಆಯ್ದು ಊರ ಜನರ ಬಾಯಿಗೆ ಆಹಾರವಾಗಿದ್ದರು....

"ಹೇಯ್ ನಿಂಗೋತ್ತಾ...? ತಮ್ಮ ಎಡೆಯಲ್ಲೇ ದೊಡ್ಡ ಹಂದಿ ಬಿದ್ದು ಒದ್ದಾಡ್ತಾ ಇದೆ, ಬೆರೆದವರ ಎಡೆಯಲ್ಲಿನ ನೊಣ ಆಯೋ ಚಿಂತೆ ಈ ಶೇಷಾಚಲ ಅನ್ನೋ ದೊಡ್ಡ ಜನಗಳದ್ದು.." ಎಂದು ತಲೆಗೊಂದು ಮಾತುಗಳು.......

ಇವೆಲ್ಲವುಗಳಿಂದ ಮಾವನವರು ಹೊರಗೆಲ್ಲೂ ಹೋಗದಂತೆ ಏನೋ ತಪ್ಪು ಮಾಡಿದವರ ಹಾಗೇ ತಲೆ ತಪ್ಪಿಸಿಕೊಂಡು ಮನೆಯೊಳಗೆ ಇದ್ದರು.....

ಕಡೆಗೂ ಮನೆ ಆಸ್ತಿ ಭಾಗವಾಗುವ ಸಮಯ.....

ಎಲ್ಲರೂ ಇದೆ ಸಮಯಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಅನಿಸತ್ತೆ.... ಪ್ರತಿ ಆಸ್ತಿಯನ್ನ ಸರಿ ಸಮಾನವಾಗಿ ಭಾಗ ಮಾಡಿಯಾಯಿತು... ಮಾವ, ಅತ್ತೆ ಮಾತ್ರ ಮನೆಯನ್ನ ಭಾಗಮಾಡಲು ಸುತಾರಾಂ ಒಪ್ಪಲಿಲ್ಲ....

ತಾವು ಬೆಳೆದ ಮನೆ, ಅನ್ನೋ ವ್ಯಾಮೋಹ... ಅವರನ್ನ ಅಲ್ಲೇ ಇರುವಂತೆ ಮಾಡಿತ್ತು... ಪ್ರಕಾಶ ಅತ್ತೆ ಮಾವರೊಂದಿಗೆ ಇರಲು ಒಪ್ಪಿದ್ದ.. ಆದರೇ ಅತ್ತೆಯವರು. "ನಿನ್ನ ಕರುಣೆಯ ಅಗತ್ಯತೆ ಮತ್ತು ಅವಶ್ಯಕತೆ ಎರಡು ನೀವೆಲ್ಲ ಮಕ್ಕಳು ನಮ್ಮಿಂದ ದೂರವಾದಾಗಲೆ ಮುಗಿದು ಹೋಯಿತು.. ಈಗ ನಿಮ್ಮ ಅವಶ್ಯಕತೆ ನಮಗಿಲ್ಲ.. ಅವರಿಗೇ ನಾನು ನನಗೇ ಅವ್ರು ಅಷ್ಟೇ ಇನ್ನೂ ನಮ್ಮ ಜೀವನ ಎಂದು..." ಕಟುವಾಗಿ ಹೇಳಿದ್ದರು....

ನಾವು ಆದಾಗ್ಯೂ ಹಳ್ಳಿಗೆ ಆಗಿಂದಾಗ್ಗೆ ಹೋಗಿ ಬರುತ್ತಾ ಇದ್ವಿ... ಆದ್ರೆ, ಸುಳಿವೇ ಇಲ್ಲದೇ ಒಂದು ದಿನ ಮಾವ ಅತ್ತೆ ಹಳ್ಳಿಯಿಂದ ಅದಾಗಲೇ ಕಣ್ಮರೆಯಾಗಿದ್ದರು... ಎಲ್ಲಿ ಹುಡುಕಿದರೂ ಅವರ ಸುಳಿವಿಲ್ಲ.... ಪ್ರಕಾಶ ಅವರ ತಂದೆ ತಾಯಿಯ ಸುಳಿವಿಲ್ಲದೆ ತುಂಬಾ ನೊಂದಿದ್ದ... ಆದರೇ ಮರೆವೆಂಬ ಮದ್ದು ಅದನ್ನ ಕಾಲಕ್ರಮೇಣ ಮರೆಸಿತ್ತು....

ಪ್ರಕಾಶನನ್ನೂ ಕೂಡ ಒಂದೊಳ್ಳೆ ಉದ್ಯೋಗ ಅರಸಿ ಬಂತು.... ಬಳಿಕ ಅಕ್ಷಯ್ ಹುಟ್ಟಿದ... ನಿನ್ನನ್ನ ವಿದ್ಯಾವಂತನನ್ನಾಗಿ ಮಾಡುವುದೇ ನಮ್ಮ ಗುರಿಯಾಗಿತ್ತು... ನೀನು ನಿನ್ನ ಪರಿಶ್ರಮದಿಂದ ಒಬ್ಬ ಒಳ್ಳೆ ನ್ಯಾಯವಾದಿಯಾದೆ... ಈ ಖುಷಿಯನ್ನ ಸಂಭ್ರಮಿಸುವ ಮೊದಲೇ ಅವರು ಕಾಲವಾಗಿದ್ದರು....

ಆಗ ನಂಗೇ ಎಲ್ಲವೂ ನೀನೇ ಆಗಿದ್ದೆ..... ನಿನ್ನ ಹೊರತು ಬೇರೆನೂ ಬೇಕಿರಲಿಲ್ಲ.... ನಿನ್ನ ಮೇಲೆ ಅಷ್ಟೊಂದು ಅವಲಂಬಿಸಿದ್ದೆ...... ನಿನ್ನ ಮೇಲೇ ನನ್ನ ನಿರೀಕ್ಷೆಗಳು ಜಾಸ್ತಿಯಾಗಿತ್ತು... ನಿಂಗೂ ಮದುವೆ ವಯ್ಯಸ್ಸು....

ಸುಲಕ್ಷಣೆಯಾದ ಹುಡುಗಿಯನ್ನ ಮದುವೆ ಮಾಡಿಸಿದ್ದಾಯ್ತು... ಈಗ ನನ್ನ ಅತ್ತೆ, ಮಾವನವರ ಸ್ಥಿತಿ ನಂಗೇ ಬರುವ ಸಮಯ... ಆಗ ಅತ್ತೆಗೇ ಹೇಳಿಕೊಳ್ಳಲು ಮಾವನವರು ಇದ್ದರು... ಆದರೇ ನಂಗೇ... ನಾ ಒಂಟಿ... ಒಂಟಿತನದ ಭಾದೆ.... ನಿಂಗೂ ಮುದ್ದಾದ ಮಕ್ಕಳು ಆದವು...... ಅವರ ಆಟ ಪಾಠದಲ್ಲಿ ಕಾಲ ನೂಕಿದೆ... ಈಗ ಅವರುಗಳಿಗೂ ನಾನು ಬೇಡವಾದೇ..... ಇನ್ನೂ ಸಾಕು.... ನನ್ನಿಂದ ನಿಮ್ಮೆಲ್ಲರ ನಿರ್ಲಕ್ಷ್ಯತೆಯನ್ನ ಸಹಿಸುವ ಶಕ್ತಿ ಇಂದು ಹುದುಗಿಹೋಗಿದೇ....

"ವೈಶಾಲಿ.... ನಾನು ಮಾಡಿದ ತಪ್ಪನ್ನ ನೀನು ಮಾಡಬಾರದು ಎಂಬ ಉದ್ದೇಶದಿಂದ ನನ್ನ ಕಥೆಯನ್ನ ನಿನ್ನ ಎದುರಲ್ಲಿ ಅರುಹಿದ್ದು.... ಹಣ್ಣೆಲೆ ಉದುರುವಾಗ ಹಸಿರೆಲೆ ನಗುವುದು ಸಾಮಾನ್ಯ... ಆದರೇ ಆ ಎಲೆಗೇ ಅವಾಗ ತಾನು ಮುಂದೊಂದು ದಿನ ಹಣ್ಣೆಲೆಯಾಗುವ ಕಲ್ಪನೇ ಮರೆಯಾಗಿರುತ್ತದೆ... ಮಗಳೇ ನಿನ್ನ ಮೇಲೇ ನಂಗೇ ಕಿಂಚಿತ್ತೂ ಬೇಸರವಿಲ್ಲ... ದಯವಿಟ್ಟು ಎಚ್ಚೆತ್ತುಕೊ.... ಮಗನೇ...... ನಿನ್ನನ್ನ ದೂಷಿಸಲಾರೆ ನಾನು... ಆದರೇ ಕೊನೆಯದಾಗಿ ನಿನ್ನಲ್ಲಿ ಒಂದು ಮಾತು.... ನಿನಗಾಗಿ ಕಾಯುವವರಿಗೆ ನೀನು ಸಮಯಕೊಡದೇ ಹೋದಲ್ಲಿ ಮುಂದೊಂದು ದಿನ ನಿಂಗೂ ಅದೇ ಸ್ಥಿತಿ ಬರುತ್ತದೆ... ಕಾಲಚಕ್ರ ಒಂದೆಡೆಗೆ ಯಾವತ್ತೂ ನಿಲ್ಲಲಾರದು....."

ಇಲ್ಲಿಗೇ ಜಾನಕಿಯ ಬರವಣಿಗೆ ಮುಕ್ತಾಯವಾಗಿತ್ತು...

ಅಷ್ಟೇ ಅಲ್ಲ ಅವರ ಜೀವ ಮತ್ತು ಜೀವನದ ಅಂತ್ಯ ಕೂಡ.....



Rate this content
Log in

Similar kannada story from Tragedy