Gireesh pm Giree

Abstract Children Stories Action

3  

Gireesh pm Giree

Abstract Children Stories Action

ದೀಪಾವಳಿ

ದೀಪಾವಳಿ

2 mins
177


ಕನಸಿನ ಹಣತೆಗೆ ನನಸೆಂಬ ಬೆಳಕಿನ ಬತ್ತಿಯ ಇಟ್ಟು, ಯಶಸ್ಸು ಎನ್ನುವ ಜ್ಯೋತಿ ಬೆಳಗಿಸಿ ಅದು ಜಯದ ಸಂಕೇತವಾಗಿ ಉರಿದು, ಅಂದಕಾರದ ಕತ್ತಲ ಭವಣೆಯ ಬೇನೆಯ ತೊಲಗಿಸಿ, ಅಜ್ಞಾನವ ದೂರಿಕರಿಸಿ ,ಹೊಸ ಅಧ್ಯಾಯವ ಸೃಷ್ಟಿಸಿ ನೋವನ್ನು ನೀಗಿಸಿ, ನಲಿವನ್ನು ಉಣಪಡಿಸುವ ಬೆಳಕಿನ ಹಬ್ಬ ನಾಡ ತುಂಬಾ ಬೆಳಗಲು ಕಾತರದಿಂದ ಕಾಯುತ್ತಿದೆ.

 ದೀಪಾವಳಿ ಬಾಲ್ಯದ ದಿನಗಳಲ್ಲಿ ಅದು ಹಬ್ಬಗಳ ಹಬ್ಬವಾಗಿತೆಂದರೆ ತಪ್ಪಾಗಲಾರದು. ಯಾವಾಗಲೂ ಚಂದಿರನ ಸುಂದರ ನೋಟಕ್ಕೆ ಬೆಳಗುತ್ತಿದ್ದ ಬೆಳದಿಂಗಳ ರಾತ್ರಿ ಮತ್ತು ಮನೆಯ ಸುತ್ತು ಆ ದಿನ ಮಾತ್ರ ಚಂದಿರನು ಇಲ್ಲದಿದ್ದರೂ ಸಹ ದೀಪಗಳು ಚಂದಿರನಂತೆ ಬೆಳಗಿ ಅಂಗಳ ಮಂಗಳಕರವಾಗಿ ಕೂಡಿರುತ್ತಿತ್ತು. ಒಂದೊಂದು ದೀಪಗಳ ಸಾಲುಗಳು ಕೇವಲ ಬೆಳಕು ಚೆಲ್ಲುತ್ತಾ ಕತ್ತಲೆಯನ್ನು ದೂರ ಸರಿಸುವ ಜೊತೆಯಲ್ಲಿ ಅದು ನಮ್ಮೊಳಗಿನ ಕೆಟ್ಟ ಆಲೋಚನೆಯನ್ನು ಸುಟ್ಟು ಮನದೊಳಗೆ ಉತ್ತಮ ಆಲೋಚನೆಗಳ ಚಿಂತನೆ ಮಂಥನೆ ಬೆಳಗಿ ಬದುಕನ್ನು ವಿನ್ಯಾಸಗೊಳಿಸುತ್ತಿತ್ತು.

ಸಾಮಾನ್ಯವಾಗಿ ಹಬ್ಬಗಳಲ್ಲಿ ಹೆಚ್ಚಿನವು ಬೆಳಗಿರುವ ಜಾವದಲ್ಲೇ ಮುಗಿದು ಹೋಗುವುದೇ ಹೆಚ್ಚು. ಆದರೆ ಈ ದೀಪಗಳ ಹಬ್ಬ ಇರುಳನ್ನು ಕೂಡ ಬೆಳಗಿಸಿ ಬಡವ ಶ್ರೀಮಂತ ಎನ್ನುವ ತಾರತಮ್ಯ ಇಲ್ಲದೆ ದೀಪವು ಬೆಳಗಿ ಸಂತಸವನ್ನು ಉಣಪಡಿಸುತ್ತದೆ.

     ಬಾಲ್ಯದಲ್ಲಿ ಈ ದೀಪಾವಳಿ ಮೇಲೆ ಒಲವು ಮೂಡಲು ಕಾರಣಗಳು ಒಂದಾ ಎರಡಾ ಹೊಸ ಬಟ್ಟೆ ತೆಗೆಯುವ ಖುಷಿ, ಅಮ್ಮ ಮಾಡಿದ ಸಿಹಿ ಅವಲಕ್ಕಿಯ ಸವಿಯುವ ಮಜಾ,ಅಪ್ಪ ತರುವ ಪಟಾಕಿಯನ್ನು ಹೊಡೆಯೋ ಗಮ್ಮತ್ತು, ಈ ಹಬ್ಬಕ್ಕೆ ಪುಷ್ಟಿಯನ್ನು ನೀಡುತ್ತಿತ್ತು. ಹೌದು ಈ ಪಟಾಕಿ ಮಜಾ ಸರಣಿ ಕಥೆಗಳು ನೆನಪಲ್ಲಿ ಈಗಲೂ ತುಳುಕಿದೆ.ಆ ದಿನಗಳಲ್ಲಿ ಪಟಾಕಿಗಾಗಿ ನನ್ನ ಮತ್ತು ಅಕ್ಕನ ನಡುವೆ ಸಣ್ಣ ಜಗಳವೇ ನಡೆದು ಹೋಗುತ್ತಿತ್ತು. ನಕ್ಷತ್ರ ಕಡ್ಡಿಗಾಗಿ ಅವಳು ಅಪ್ಪನ ಬೇಡಿದರೆ ಮೆಣಸಿನ ಚಿಟಿ ಚಿಟಿ ಪಟಾಕಿಗಾಗಿ ಅಪ್ಪನನ್ನು ಬೆಂಬಿಡದ ಬೇತಾಳನಂತೆ ಕಾಡುತ್ತಿದ್ದೆ. ಆದರೆ ಅಪ್ಪ ಮಾತ್ರ ತುಂಬಾ ಜಿಪುಣ ಅಕ್ಕನಿಗೆ ನಕ್ಷತ್ರ ಕಡ್ಡಿಯ ಐದರ ಪೊಟ್ಟಣ ತಂದರೆ, ನನಗೆ ಮಾತ್ರ ಒಂದೇ ಮೆಣಸಿನ ಪಟಾಕಿಯ ಪ್ಯಾಕು!. ನಾನು ಬರೆದುಕೊಡುತ್ತಿದ್ದ ಪಟಾಕಿಯ ಲಿಸ್ಟಿಗೆ ಬೆಲೆ ಇಲ್ಲದೆ ಅನಾಥವಾಗಿ ಎಲ್ಲಿ ಬಿದ್ದಿರುತ್ತಿತ್ತೋ ಏನೋ. ಅಪ್ಪನ ನಡೆಗೆ ತಂದ ಪಟಾಕಿ ಹೊಡೆಯೋ ಬದಲು ನಾನು ಅಕ್ಕನಿಗೆ ನೀನೇ ಇದರ ಸೂತ್ರಧಾರಿ ಎಂದು ಹೊಡೆಯುತ್ತಿದ್ದೆ. ಆದರೆ ಅಮ್ಮನ ಮಧ್ಯಸ್ಥಿಕೆ ಜಗಳ ಹೊಡೆದಾಟವನ್ನು ದೂರ ಮಾಡುತ್ತಿತ್ತು .


ಆ ದಿನದಲ್ಲಿ ಪಟಾಕಿ ಹೊಡೆಯೋ ಬರದಲ್ಲಿ ದೀಪಗಳನ್ನು ಇಡುವುದು ಉದಾಸೀನ ಕೈಗೆ ಎಣ್ಣೆ ಆಗುತ್ತೆ ಅಂತ!. ಆದರೆ ಮನೆಯ ಹಿರಿ ಜೀವಗಳು ದೀಪಾವಳಿಯ ಮಹತ್ವವನ್ನು ಹೇಳುತ್ತಲೇ ದೀಪವನ್ನು ನನ್ನಿಂದ ಇಡಿಸುತ್ತಿದ್ದರು.ದೀಪಾವಳಿಯ ಎಣ್ಣೆ ಸ್ನಾನ, ನರಕ ಚತುರ್ದಶಿಯ ಕಥೆ, ರಾಮಾಯಣದ ಕೆಲವು ಸನ್ನಿವೇಶವನ್ನು ಹಿರಿ ಜೀವಗಳ ಬಾಯಿಯಿಂದ ಕೇಳುವುದು ಸಂತಸ. ಹಾಗೆಯೇ ತುಳಸಿ ಕಟ್ಟೆಯು ದೀಪಗಳ ಶೃಂಗಾರದಿಂದ ಬಂಗಾರದಂತೆ ಹೊಳೆಯುತ್ತಿತ್ತು. ಮನೆಯ ಮೂಲೆಯಲ್ಲಿ ನೇಲಿಸುತ್ತಿದ್ದ ಗೂಡು ದೀಪಾವಳಿಗೆ ಮೆರುಗಿನ ಬೊಟ್ಟನ್ನು ಇಡುತ್ತಿತ್ತು.

ಬಾಲ್ಯದ ಆ ದೀಪಾವಳಿಯ ಗಮ್ಮತ್ತು ಇಂದಿಗೂ ಪ್ರಾಯ ಬೆಳೆದಂತೆ ಮರೆಯಾಗುತ್ತಿದೆ. ಅಂದು ಅಕ್ಕಪಕ್ಕದ ಗೆಳೆಯರೊಂದಿಗೆ ಸೇರಿ ಹೊಡೆಯೋ ಪಟಾಕಿ ಸದ್ದು ಗಮ್ಮತ್ತು ಇಂದಿಗೂ ಮನದ ಮೂಲೆಯಲ್ಲಿ ಹಾಗೆ ಅಚ್ಚುತ್ತಿದೆ. ದೀಪಗಳ ಸಾಲು ಎದುರಾಗುವ ಸೋಲನ್ನು ದೂರ ಮಾಡುವ ಭರವಸೆಯ ಸಂಕೇತವಾಗಿದೆ. ಈ ದೀಪಾವಳಿ ಎಲ್ಲರ ಬದುಕನ್ನು ದೀಪ ಪ್ರಜ್ವಲಿಸಿದಂತೆ ಪ್ರಜ್ವಲಿಸಲಿ, ಹೊಸ ಅಧ್ಯಾಯವ ಬರೆಯಲಿ. ದೀಪದಿಂದ ದೀಪ ಬೆಳಗಲಿ, ಅದು ಜ್ಞಾನ ಜ್ಯೋತಿಯ ರೂವಾರಿಯಾಗಲಿ, ಶಾಂತಿ ಸೌಹಾರ್ದತೆ ನೆಲೆಯಲ್ಲಿ ನೆಲೆಸಲಿ ,ಮಾನವನ ಕಷ್ಟವ ದೂರ ಮಾಡಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.


Rate this content
Log in

Similar kannada story from Abstract