Gireesh pm Giree

Abstract Children Stories Drama

3  

Gireesh pm Giree

Abstract Children Stories Drama

ಮಾನ್ಸೂನ್

ಮಾನ್ಸೂನ್

2 mins
174



ಬಿರು ಬೇಸಿಗೆಯಲ್ಲಿ ಬೆವರುತ್ತಾ, ಸೆಖೆ, ಬಾಯಾರಿಕೆಯನ್ನು ಹೋಗಲಾಡಿಸಲು ಕಸರತ್ತು ಮಾಡುತ್ತಾ ಕ್ರಿಕೆಟ್ ಆಡುವುದು ಇದ್ದೇ ಇದೆ. ಆದರೆ ಮುಂಗಾರು ಮಳೆಯಲ್ಲಿ ನೆನೆಯುತ್ತಾ ಗದ್ದೆಯಲ್ಲಿ ಆಡುವ ಕ್ರಿಕೆಟ್ ಆಡುವ ಗಮ್ಮತ್ತೇ ಬೇರೆ. ಆಟವೂ ಅಲ್ಲೇ, ಗುದ್ದಾಟ, ತಳ್ಳಾಟವೂ ಅಲ್ಲೇ! 


ಹೌದು, ಮನೆಯ ಪಕ್ಕದಲ್ಲಿ ಗದ್ದೆ ಮುಂಗಾರು ಸುಮಾರಾಗಿ ಸುರಿದು ಕಂಬಳದ ಗದ್ದೆಯಂತಾಗಿರುತ್ತದೆ. ಅದು ಈ ಮಾನ್ಸೂನ್ ಕ್ರಿಕೆಟ್ಗೆ ಹೇಳಿ ಮಾಡಿಸಿದ ಅಖಾಡ. ಚೆಂಡನ್ನು ನೆಲದಲ್ಲಿ ಹಾಕಲು ಅವಕಾಶವೇ ಇಲ್ಲದ ಕಾರಣ ಇಲ್ಲಿ ಪುಲ್ಟಾಸ್ ಬಾಲ್ಗಳಿಗೆ ಮಾತ್ರ ಅವಕಾಶ. ಹಾಗಂತ ಇದು ಬ್ಯಾಟಿಂಗ್ ಪ್ರಿಯ ʼಪಿಚ್ʼ ಎಂದರೆ ತಪ್ಪಾದೀತು. ಏಕೆಂದರೆ ಇಲ್ಲಿ ಸಿಕ್ಸರ್ ಹೊಡೆದರೆ ಔಟ್ ಎಂಬ ನಿಯಮಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಈ ಸೂಪರ್ ಸಿಕ್ಸ್ ಮಾನ್ಸೂನ್ನಲ್ಲಿ ದಾಂಡಿಗರಿಗೆ ನಿಯಂತ್ರಣ ಹಾಕಲು ನಾವೇ ಮಾಡಿಕೊಂಡಿರುವ ನಿಯಮ! ಹಾಗಂತ ಇಲ್ಲಿ ಮನೋರಂಜನೆ ಭರಪೂರವಾಗಿದೆ. 

 

ಬ್ಯಾಟ್ಸ್ಮನ್ ಹೊಡೆಯೋ ಚೆಂಡನ್ನು ಹಿಡಿಯಲು ನಮ್ಮೆಲ್ಲಾ ಪ್ರಯತ್ನ ಪಡುತ್ತೇವೆ. ಚೆಂಡು ಸಿಗುತ್ತದೋ ಇಲ್ಲವೋ ಅನ್ನುವುದು ಬೇರೆ ವಿಚಾರ, ನಮ್ಮ ಬಟ್ಟೆಯ ಬಣ್ಣವಂತೂ ಬದಲಾಗುತ್ತದೆ. ಹಾಗೆಂದು ಪ್ರಯತ್ನ ಬಿಟ್ಟರೆ ಸಹ ಆಟಗಾರರ ʼಪ್ರೋತ್ಸಾಹʼ ಎದುರಿಸಬೇಕಾಗುತ್ತದೆ!. ಕೆಲವು ಬ್ಯಾಟ್ಸ್ಮನ್ಗಳ ಪಾಡಂತೂ ದೇವರಿಗೇ ಪ್ರೀತಿ. ಅವರಿಗೆ ಕ್ರೀಸ್ನಲ್ಲಿ ನಿಲ್ಲಲೂ ಆಗದು, ಇನ್ನೊಂದು ಬದಿಗೆ ಓಡಲೂ ಬರದು. ಕ್ರೀಸ್ ಬಿಟ್ಟು ಕದಲದ ಇಂತವರಿಗೆ ʼಸಹಸ್ರನಾಮಾರ್ಚನೆʼ ಕಾದಿರುತ್ತದೆ. ಪಾಪ, ಅವರು ಮನೆಯಲ್ಲಿ ಅಮ್ಮನ ಬೈಗುಳ ತಪ್ಪಿಸಿಕೊಳ್ಳಲು, ಅಂಗಿಗೆ ಕೆಸರು ತಾಗದಂತೆ ಈ ಕಸರತ್ತು ಮಾಡಲೇಬೇಕಾಗಿತ್ತು! 


ಈ ಕ್ರಿಕೆಟ್ನಲ್ಲಿ ಚೆಂಡನ್ನು ಬೌಡರಿ ಗೆರೆ ದಾಟಿಸುವುದೇ ಬ್ಯಾಟ್ಸ್ಮನ್ ಗೆ ದೊಡ್ದ ಸಂಗತಿ. ಬೌಂಡರಿ ದಾಟಿದರೆ ಆಗುವಂತಹ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಆದರೂ ಗಟ್ಟಿ ಹೊಡೆಯುವಂತೆಯೂ ಇರಲಿಲ್ಲ, ಸಿಕ್ಸರ್ ಬಾರಿಸುವಂತಿಲ್ಲ… ಎಲ್ಲಿ ಚೆಂಡು ಕಾಣೆಯಾಗುತ್ತೋ ಎಂಬ ಆತಂಕ. ಮಳೆ ನೀರಿನಿಂದ ಒದ್ದೆಯಾದ ಕೈಯಿಂದ ಬ್ಯಾಟ್ ಜಾರಿ ಹಾರಿಹೋಗುತ್ತಿತ್ತು. ಈ ಚಿಮ್ಮುವ ಬ್ಯಾಟ್ನಿಂದ ತಪ್ಪಿಸುಕೊಳ್ಳುವುದೂ ಇನ್ನೊಂದು ಬಗೆಯ ಕಸರತ್ತು. 


ಆಗಸದಿಂದ ಮುತ್ತ ಹನಿಯೂ ನಿರಂತರವಾಗಿ ಭುವಿಯತ್ತ ಧಾವಿಸುವುದನ್ನು ಲೆಕ್ಕಿಸದೆ ಇನ್ನೊಂದು ಆಟ ಆಡುವವರೇ ಎಲ್ಲರೂ. ಆ ಮಳೆಯಿಂದ ಒದ್ದೆಯಾದ ತಲೆಯನ್ನು ಸವರುತ್ತಾ ಆಟವನ್ನು ಆನಂದಿಸುತ್ತಿದ್ದರು. ಇನ್ನೊಂದು ಮತ್ತೊಂದು ಮಗದೊಂದು ಎನ್ನುತ್ತಾ ಕತ್ತಲು ಸುತ್ತಲೂ ಆವರಿಸುವ ತನಕ ಆಡುತ್ತಿದ್ದೆವು. 


ಬಾಲ್ಯದಲ್ಲಿ ಆರಂಭವಾದ ಈ ಮಾನ್ಸೂನ್ ಕ್ರಿಕೆಟ್ ನಾವು ಕಾಲೇಜಂಗಳದಲ್ಲಿದ್ದರೂ ನಿಂತಿಲ್ಲ. ಇದು ಆಟಕ್ಕಿಂತ ಮುಗಿಲಾದ ಒಂದು ಭಾವಬಂಧನ. ಅದಕ್ಕೆ ನನ್ನ ಗೆಳೆಯರೇ ಕಾರಣ. ಧನ್ಯವಾದ ಮಳೆಯೇ ಮತ್ತು ಗೆಳೆಯರೇ… ಇನ್ನು ಬೈಯುತ್ತಾ ಕೆಸರ ಬಟ್ಟೆ ಒಗೆಯುವ ಅಮ್ಮನಿಗೆ ಒಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ! 


Rate this content
Log in

Similar kannada story from Abstract