Vadiraja Mysore Srinivasa

Drama Horror Fantasy

3  

Vadiraja Mysore Srinivasa

Drama Horror Fantasy

ತೀರ್ಪಿನ ಆ ದಿನ - ಕೊನೇ ಅಧ್ಯಾಯ

ತೀರ್ಪಿನ ಆ ದಿನ - ಕೊನೇ ಅಧ್ಯಾಯ

12 mins
388


ಇಲ್ಲಿಯವರೆಗೆ 

ಜಡ್ಜ್ ಸೀತಾರಾಮಯ್ಯ ನವರ ಹೆಸರಿಗೆ ಕೆಲವು ಪತ್ರಗಳು ಬರುತ್ತವೆ; ಫ್ರಮ್ ಅಡ್ರೆಸ್ ಇರದ, ಯಾವುದೇ ವಿಷಯ ಇರದ ಆ ಪತ್ರಗಳಲ್ಲಿ, ಕೇವಲ ಒಬ್ಬ ವ್ಯಕ್ತಿಯ ಅಪೂರ್ಣ ಚಿತ್ರವಿರುತ್ತದೆ. ಅದು ಪ್ರೊಸೆಕ್ಯುಷನ್ ಲಾಯರ್ ನವೀನ್ ಕೃಷ್ಣ ರನ್ನೇ ಹೋಲುತ್ತ್ತ್ದೆ. ನವೀನ್ ಕೃಷ್ಣ ಮೈಸೂರ್ ಮರ್ಡರ್ ಕೇಸ್ ನಲ್ಲಿ ಪ್ರೊಸೆಕ್ಯುಷನ್ ಲಾಯರ್ ಆಗಿ ವಾದ ಮಾಡುತ್ತಿರುತ್ತಾರೆ.

ಜಡ್ಜ್ ಪಿಂಟೋ ಮೂಲಕ ಆರೋಪಿ ಹೆಂಡತಿ ಹಾಗು ಮಗಳನ್ನು ಹುಡುಕಲು ಹಾಗು, ಎರ್ನಾಕುಲಂ ನಲ್ಲಿ ಪತ್ರ ಕಳುಹಿಸುತ್ತಿರುವರು ಯಾರೆಂದು ಪತ್ತೆ ಹಚ್ಚಲು ಕಳುಹಿಸುತ್ತಾರೆ.

ಪತ್ರ ಬರೆಯುತ್ತಿರುವುದು ಒಬ್ಬ 8 ವರ್ಷದ ಮಲಯಾಳಂ ತಂದೆ ಹಾಗು ತಾಯಿಗೆ ಹುಟ್ಟಿದ ಹುಡುಗ ಎಂದು ಗೊತ್ತಾಗುತ್ತದೆ. 

ಅವನ ಹೆಸರು ಒಮ್ಮನ ಕುಟ್ಟಿ.

ಮುಂದೆ ಓದಿ....


               ತೀರ್ಪಿನ ಆ ದಿನ

              ಕೊನೇ ಅಧ್ಯಾಯ

                       ಸಾಕ್ಷಿ


ಜಡ್ಜ್ ಸೀತಾರಾಮಯ್ಯ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತರು. ಸ್ವಲ್ಪ ಕಾಲ ಏನು ಹೇಳಲು ತೋಚದೆ ಸುಮ್ಮನಿದ್ದರು. ಲಾಯರ್ ರಾಮಯ್ಯ ಆ ಕಡೆಯಿಂದ ಉತ್ತರ ಬರದಿದ್ದನ್ನು ನೋಡಿ, ನುಡಿದರು. "ಸಾರ್? ಯಾಕೋ ತುಂಬಾ ಗೊಂದಲ ಆಗ್ತಾ ಇದೆ ಈ ಕೇಸ್. ನಿಮ್ಮಲ್ಲಿಗೆ ಬಂದ ಆ ಎನ್ನವೆಲೊಪ್ಗು, ಮರಾಠಿ ಮಾತನಾಡುವ ಆ ಮಲಯಾಳೀ ಹುಡುಗನಿಗೂ ಮತ್ತೆ ಮೈಸೂರ್ ಮರ್ಡರ್ ಕೇಸಿಗೂ ಏನೋ ಒಂದು ಸಂಬಂಧ ಇದೆ ಅಂತ ನನಗನ್ನಿಸ್ತಾ ಇದೆ. ಈಗ ಮುಂದೆ ಏನ್ ಮಾಡಬಹುದು ನೀವೇ ಹೇಳಿ ಸಾರ್."


ಜಡ್ಜ್, ಲಾಯರ್ ರಾಮಯ್ಯನ ಮಾತನ್ನು ಕೇಳಿ ಅವರಿಗೂ ಸರಿ ಎನ್ನಿಸಿತು; "ರಾಮಯ್ಯ, ಆ ಪಿಂಟೋ ಇನ್ನೊಂದ್ ಎರಡು ದಿವಸ ಅಲ್ಲೇ ಇದ್ದು, ಆ ಸತಾರಾದ ಬಗ್ಗೆ ಹೆಚ್ಚು ತಿಳಿದು ಕೊಳ್ಳಲಿ. ಹಾಗೆ, ಆ ಮಹದೇವಪ್ಪನ ಮಗಳ ಬಗ್ಗೆನೂ ವಿಚಾರಣೆ ಮಾಡಕ್ ಹೇಳಿ. ಅದು ನಾವು ಅಂದುಕೊಂಡಂತೆ ಸಂಬಂಧ ಇರದೇ ವಿಷಯ ಆಗಿರಬಹುದು. ಮೇ ಬಿ, ಆ ಹುಡುಗಿ ಎಲ್ಲೊ ಹೋಗಿರಬಹುದು ಅಂತ ಅನ್ನಿಸತ್ತೆ."


ರಾಮಯ್ಯ ಫೋನ್ ಮಾಡಿ ಪಿಂಟೋಗೆ ವಿಷಯ ಹೇಳಿದಾಗ ಪಿಂಟೋ ಕೂಡ ಅದರಂತೆ ಆಗಲಿ ಎಂದು ಪೊನ್ನಪ್ಪ ಕುಟ್ಟಿ -ಒಮ್ಮನ್ ಕುಟ್ಟಿಯ ತಂದೆ - ಮನೆ ಕಡೆ ಹೊರಟ. ಅವನಿಗರಿವಿಲ್ಲವಂತೆ, ಅವನನ್ನು, ಈರಣ್ಣ ತನ್ನ ಅನುಮಾನ ನಿಜವೆಂದು ತೆಳಿದು, ಪೂರ್ತಿ ವಿಷಯ ತಿಳಿದು ನಂತರ ಕಮಿಷನರ್ಗೆ ಫೋನ್ ಮಾಡುತ್ತೇನೆ ಎಂದು ತನಗೆ ತಾನೇ ಮಾತನಾಡಿಕೊಳ್ಳುತ್ತಾ ಹಿಂಬಾಲಿಸಿದ.


ಪಿಂಟೋ ತನ್ನ ಮಲಯಾಳೀ ಸ್ನೇಹಿತ ಹರಿಯನ್ನೊಡಗೊಂಡು ಕುಟ್ಟಿ ಮನೆಯ ಹತ್ತಿರ ಹೋಗುತ್ತಿದ್ದಂತೆ, ಒಮ್ಮನ್ ಕುಟ್ಟಿಯ ತಂದೆ, ಪೊನ್ನಪ್ಪ ಕುಟ್ಟಿ ಬಾಗಿಲು ಹಾಕಿಕೊಂಡ. ಹರಿ ತನ್ನ ವಿದ್ಯೆಯೆನ್ನಲ್ಲಾ ಬಳಸಿ ಕೊನೆ ಹಣದ ಆಮಿಷ ತೋರಿಸಿದಾಗ ಪೊನ್ನಪ್ಪ ಬಾಗಿಲು ತೆರೆದು ಇಬ್ಬರನ್ನು ಒಳಗೆ ಬರಲು ಹೇಳಿದ. ಹರಿ ಹಣ ಸ್ವಲ್ಪ ಅಡ್ವಾನ್ಸ್ ಆಗಿ ಕೊಟ್ಟು ಪಿಂಟೋ ಹೇಳಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ.


ಪೊನ್ನಪ್ಪ ಹಣವನ್ನು ತನ್ನ ಜೋಬಿನೊಳಗಿಟ್ಟು ಗಡಗಡನೆ ಮಲಯಾಳಂ ಬಾಷೆಯಲ್ಲಿ ಹೇಳ ತೊಡಗಿದ. ಪಿಂಟೋ ಅವನ ಮುಖವನ್ನುನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ.


ಪೊನ್ನಪ್ಪ ಮುಗಿಸಿ ಪಿಂಟೋ ಮುಖವನ್ನೇ ನೋಡಿದ. ಹರಿ, ಸ್ವಲ್ಪ ಕಾಲ ಪಿಂಟೋ ಮುಖವನ್ನೇ ನೋಡುತ್ತಿದ್ದವನು ನಿಧಾನವಾಗಿ ಹೇಳಿದ. " ಈ ಪೊನ್ನಪ್ಪ ಮರದ್ ಕೆಲಸ ಮಾಡೋ ವ್ಯಕ್ತಿ. ಒಂದ್ ಸಾರಿ ಸತಾರದಲ್ಲಿ ತುಂಬಾ ದೊಡ್ ಕೆಲಸ ಇತ್ತಂತೆ ಆಗ, ಅಲ್ಲಿರೋ ಇವ್ನ ಒಬ್ಬ ಸ್ನೇಹಿತ ಇವನನ್ನು ಬಾ ಅಂತ ಕರೆದ್ಕೊಂಡ್ ಹೋಗಿದ್ನತೆ ಸಂಸಾರ ಸಮೇತ. ಇದು ಒಂದು ವರುಷದ ಹಿಂದಿನ ಮಾತು; ಅಲ್ಲಿಂದ ಬಂದಾಗ್ನಿಂದ, ಈ ಒಮ್ಮನ್ ಕುಟ್ಟಿ ಒಂದ್ ಥರ ಆಡೋದಿಕ್ಕೆ ಶುರು ಮಾಡಿದನಂತೆ. ರಾತ್ರಿ ಒಂದ್ ಹೊತ್ತಲಿ ಎದ್ದು ನಾನು ಬೆಂಗಳೂರಿಗೆ ಹೋಗ ಬೇಕು ಅಂತೆಲ್ಲ ಗಲಾಟೆ ಮಾಡ್ತಾನಂತೆ. ಈ ಪೊನ್ನಪ್ಪ ವಾಮಾಚಾರ ಮಾಡೊವ್ನ್ ಹತ್ತಿರ ಮಗನನ್ನು ಕರೆದು ಕೊಂಡು ಹೋಗಿದ್ದನಂತೆ, ಅದಿಕ್ಕೆ ಅವನು ಯಾವುದೊ ಭೂತ ಹಿಡ್ಕೊಂಡಿದೆ ಅಂತ ಹೇಳಿ ಏನೋ ಮಂತ್ರ ಮಾಡಕ್ ಹೋಗಿ ಆ ಹುಡುಗನಿಗೆ ಜ್ಞಾನನೇ ತಪ್ಪಿಸಿಬಿಟ್ಟಿದ್ನಂತೆ. ಆವಾಗಿನಿಂದ, ವಿಷಯ ಮುಚ್ಚಿಟ್ಟು, ಬರಿ ಮಗ ಬರೆಯೋ ಪತ್ರಗಳನ್ನ ಪೋಸ್ಟ್ ಮಾಡ್ತಾ ಇದ್ದೀನಿ ಅಂತ ಹೇಳಿದ ಈ ಪೊನ್ನಪ್ಪ.

ಯಾರಿಗೂ ತೊಂದರೆ ಕೊಡಲ್ವಂತೆ ಹುಡುಗ. ಆಗಾಗ ಸುಮ್ಮನೆ ತನ್ನಸ್ಟಕ್ ತಾನೇ ಯಾವುದೋ ಬಾಷೇಲಿ ಮಾತಾಡ್ಕೊಂತ ಇರ್ತಾನಂತೆ. ಅದು ಬಿಟ್ಟರೆ, ಇಡೀ ದಿವಸ ಪಿಕ್ಚರ್ ಬರೀತಿರ್ತಾನಂತೆ.” 


ಹರಿ ಏನೋ ಜ್ಞಾಪಿಸಿಕೊಂಡು ಇನ್ನೊಂದೆರಡು ಪ್ರಶ್ಚನೆಗಳನ್ನು ಕೇಳಿದ ಪೊನ್ನಪ್ಪನಿಗೆ. ಅವನು ಉತ್ತರ ಹೇಳಿದನ್ನು ಮತ್ತೆ ತರ್ಜುಮೆ ಮಾಡಿ ವಿವರಿಸಿದ ಪಿಂಟೋ ಗೆ.


“ಅಷ್ಟೇ ಅಲ್ಲ ಪಿಂಟೋ, ಮಲಯಾಳಂ ಬಾಶೆಲಿ ಅವ್ರ ಅಪ್ಪನ ಹತ್ರ ಮಾತಾಡ್ತಾ ಇರ್ತಾನಂತೆ; ಇದ್ದಕ್ ಇದ್ದಂತೆ, ಕೆಲುವು ಸಲ ಏನ್ ಮಾಡಿದ್ರು ಉತ್ತರ ಕೊಡಲ್ವಂತೆ ಅವ್ನ ಬಾಶೆಲಿ, ಬದಲಿಗೆ ಬಡ ಬಡಾಂತ ಬೇರೆ ಬಾಷೆಯೆಲ್ಲಿ ಮಾತಾಡಕ್ಕೆ ಶುರು ಮಾಡ್ತಾನಂತೆ. ಅದು ನೀನು ಹೇಳಿದ ಹಾಗೆ ಮರಾಠಿ ಇರಬೇಕು."

ಪಿಂಟೋ ಏನು ಹೇಳಬೇಕೆಂದು ತೋಚದೆ ಸುಮ್ಮನೆ ಕುಳಿತ. ಸ್ವಲ್ಪ ಸುಧಾರಿಸಿಕೊಂಡು ಹೇಳಿದ, "ಅವ್ನು ಬರ್ದಿರೋ ಪಿಕ್ಟುರೆಗಳನ್ನೆಲ್ಲ ಸ್ವಲ್ಪ ಕೊಡು ಅಂತ ಹೇಳು; ನೋಡೋಣ ಎನ್ರಾದ್ರೋ ಕ್ಲೂ ಸಿಗಬಹುದಾ ಅಂತ.” ಪಿಂಟೋ ಹೇಳಿದ್ದನ್ನು ಕೇಳಿ, ಪೊನ್ನಪ್ಪನಿಗೆ ವಿಷಯ ವಿವರಿಸಿ ಹೇಳಿದ. ಪೊನ್ನಪ್ಪ ಹೋಗಿ ಒಂದು ಕಾರ್ಡ್ ಬೋರ್ಡ್ ಬಾಕ್ಸ್ ತುಂಬಾ ಬರೆದಿದ್ದ ಚಿತ್ರಗಳನ್ನೆಲ್ಲಾ ತಂದು ಅವರ ಮುಂದಿಟ್ಟ.


ಪಿಂಟೋ ಒಂದೊಂದಾಗಿ ಚಿತ್ರಗಳನ್ನು ನೋಡುತ್ತಾ ಹೋಗುತ್ತಿದ್ದವನು, ಇದ್ದಕಿದ್ದಂತೆ, ಒಂದು ಚಿತ್ರ ವನ್ನು ಹಿಡಿದು ಎದ್ದು ನಿಂತ!


ಅದು ಒಬ್ಬ ವ್ಯಕ್ತಿ ರಿವಾಲ್ವರ್ ಹಿಡಿದು ನಿಂತಿರುವ ಚಿತ್ರ. ಸೂಕ್ಷ್ಮ ವಾಗಿ ಗಮನಿಸಿದಾಗ, ಅದರಲ್ಲಿರುವ ವ್ಯಕ್ತಿ ಅಂದು ರಾಮಯ್ಯ ರಾಮಯ್ಯ ಕೊಟ್ಟ ಚಿತ್ರ ಜೇಬಿನಿಂದ ತೆಗೆದು ನೋಡಿದ ಚಿತ್ರ ಆ ವ್ಯಕ್ತಿಯ ಹಾಗೆ ಇದ್ದುದನ್ನು ಕಂಡು, ಒಡನೆ ತನ್ನ ಮೊಬೈಲ್ ನಲ್ಲಿ ಆ ಚಿತ್ರವನ್ನು ಸೇವ್ ಮಾಡಿಕೊಂಡ ಪಿಂಟೋ.


ಬಹುಶ ಸತಾರದಲ್ಲಿ ಏನಾದರೂ ಉತ್ತರ ಸಿಗಬಹುದೆಂದು ತನಗೆ ತಾನೇ ಮಾತನಾಡಿಕೊಂಡು ಕೇಳಿದ. "ಹರೀ, ಸತಾರದಲ್ಲಿ ಯಾವ ಜಾಗದಲ್ಲಿ ಕೆಲಸ ಮಾಡ್ತಾ ಇದ್ದನಂತೆ ಕೇಳು ಸ್ವಲ್ಪ. ಹಾಗೆ, ಅಲ್ಲಿರೋ ವ್ಯಕ್ತಿಗಳ ಹೆಸರು ಹಾಗು ಅಡ್ರೆಸ್ ಎಲ್ಲ ಬೇಕು ಅಂತ ಹೇಳು."


ಅಲ್ಲಿಂದ ಹೊರಟ ಪಿಂಟೋ ಹೋಟೆಲ್ ರೂಮಿಗೆ ಹೋಗಿ ಲಾಯರ್ ರಾಮಯ್ಯನವರಿಗೆ ಫೋನ್ ಮಾಡಿದಾಗ ರಾತ್ರಿ 10 ಘಂಟೆ.


ರಾಮಯ್ಯ ಎಲ್ಲ ವಿಷಯ ಕೇಳಿದವರು, ಆ ಚಿತ್ರ ವಾಟ್ಸಪ್ಪ್ ಮಾಡಲು ಹೇಳಿದರು.


ತಮ್ಮ ಮೊಬೈಲ್ ನಲ್ಲಿ ನಿಧಾನವಾಗಿ ಓಪನ್ ಆಗುತಿದ್ದ ಆ ಚಿತ್ರವನ್ನು ನೋಡಿ ಲಾಯರ್ ಹೌಹಾರಿದರು. ರಿವಾಲ್ವರ್ ಹಿಡಿದು ನಿಂತಿದ್ದ ವ್ಯಕ್ತಿ ಪ್ರೊಸೆಕ್ಯುಷನ್ ಲಾಯರ್ ನವೀನ್ ಕೃಷ್ಣನನ್ನೇ ಹೋಲುತ್ತಿತ್ತು!


ಜಡ್ಜ್, ರಾಮಯ್ಯ ಹೇಳಿದುದನ್ನೆಲ್ಲಾ ಕೇಳಿ, ಕೇಸನ್ನು ಮುಂದೆ ಹಾಕದೆ ಬೇರೆ ದಾರಿಯೇ ಇಲ್ಲವೆಂದು ನಿರ್ಧಾರಕ್ಕೆ ಬಂದವರು, ಏನು ಕಾರಣವನ್ನು ಕೊಡಬೇಕೆಂಬುದರ ಬಗ್ಗೆ ಲಾಯರ್ ರಾಮಯ್ಯನವರ ಹತ್ತಿರ ಮಾತನಾಡಿ ಆ ನಂತರ ನಿರ್ಧಾರಕ್ಕೆ ಬರಬೇಕೆಂದು ನಿಶ್ಚಯಸಿದರು.


ಪಿಂಟೋ ಲಾಯರ್ಗೆ ಮಾಡಿದ ನಂತರ, ಮೈಸೂರಿನಿಂದ ಫೋನ್ ಬಾರದ ಕಾರಣ, ತಾನೇ ಶೈಲೇಶ್ಗೆ ಫೋನ್ ಮಾಡಿದ. ಫೋನ್ ನಾಟ್ ರೀಚಬಲ್ ಅಂತ ಬಂದಾಗ, ಆತಂಕದ ಗೆರೆಗಳು ಮೂಡಿದವು ಪಿಂಟೋನ ಹಣೆಯ ಮೇಲೆ.


ತನ್ನ ಕಾಂಟಾಕ್ಟ್ ಲಿಸ್ಟ್ನಲ್ಲಿದ್ದ, ತನ್ನ ಇನ್ನೊಬ್ಬ ಬಂಟ ಸುರೇಶ್ಗೆ ಫೋನ್ ಮಾಡಿ ಶೈಲೇಶ್ ಇಳಿದು ಕೊಂಡಿದ್ದ ಹೋಟೆಲ್ಗೆ ಹೋಗಲು ಹೇಳಿದ ಪಿಂಟೋ.


ರಾತ್ರಿ 12 ಘಂಟೆಯಾದರೂ, ಕುರ್ಚಿಯ ಮೇಲೆ ಕುಳಿತು ಯೋಚಿಸುತ್ತಿದ್ದ ಪಿಂಟೋ ಫೋನ್ ರಿಂಗ್ ಆಗಿದ್ದು ಕೇಳಿ ಘಾಬರಿನಿಂದ ನೋಡಿದ. ಅದು ಸುರೇಶ ನಿಂದ ಬರುತ್ತಿತ್ತು.


ಫೋನ್ ಕಿವಿಗಿಟ್ಟು ಸುರೇಶ ಹೇಳಿದ ಮಾತು ಕೇಳಿ ಪಿಂಟೋ ಘಾಬರಿನಿಂದ ಎದ್ದು ನಿಂತ.


ಸುರೇಶ್, ರಿಸೆಪ್ಶನ್ ನಿಂದ ಇಂಟರ್ಕ್ಯಾಮ್ ಮಾಡಿದರೂ ಶೈಲೇಶ್ ತೆಗೆಯಲಿಲ್ಲ. ಬೀಗದ ಕೈ ಕೊಟ್ಟಿರದಿದ್ದ ಕಾರಣ, ಅವರು ರೂಮ್ನಲ್ಲೇ ಇರಬೇಕೆಂದು ಹೇಳಿದ ರೆಸೆಪ್ಟಿವ್ನಿಸ್ಟ್. ಹೋಟೆಲ್ ಮಾಲೀಕನ ಹತ್ತಿರ ಮಾತನಾಡಿ ಡೂಪ್ಲಿಕೇಟ್ ಕೀ ಇಂದ ಶೈಲೇಶ್ ರೂಮ್ ತೆಗೆಸಿ ನೋಡಿದರೆ, ಹಾಸಿಗೆಯ ಮೇಲೆ ಮಂಚಕ್ಕೆ ಕಟ್ಟಿ ಹಾಕಿದ್ದ ಶೈಲೇಶ್ ಮಾತನಾಡಲಾಗದೆ ಒದ್ದಾಡುತ್ತಿದ್ದ; ಅವನ ಬಾಯಿಗೆ ಬಟ್ಟೆ ತುರುಕಲಾಗಿತ್ತು.


ಅವನನ್ನು ಬಿಡಿಸಿ, ನೀರು ಕುಡಿಸಿದಾಗ ಶೈಲೇಶ್ಗೆ ಜೀವ ಬಂದಂತಾಯಿತು.


ಪಿಂಟೋಗೆ ಫೋನ್ ಮಾಡಿದ ಶೈಲೇಶ್, ಬೆಳೆಗ್ಗೆ ಯಾರೂ ಇಬ್ಬರು ದಾಂಡಿಗರು ಬಂದವರು ಬೆದರಿಸಿ ಹೀಗೆ ಮಾಡಿದರೆಂದು ಹೇಳಿದ. ಅಷ್ಟೇ ಅಲ್ಲಾ, ನಾಳೆ ಬೆಳೆಗ್ಗೆ ಒಳಗೆ ವಾಪಸ್ ಬೆಂಗಳೂರಿಗೆ ಹೋಗದೆ ಇದ್ದರೇ ಜೀವ ತೆಗೆಯುವುದಾಗಿ ಹೇಳಿದ್ದರಂತೆ ಬೆಳಿಗ್ಗೆ ಬಂದ ಆ ಅಪರಿಚಿತರು.


ಪಿಂಟೋ ಕೆಲ ಸಮಯ ಏನು ಹೇಳದೆ ಇದ್ದವನು, ಕೊನೆಗೆ ಶೈಲೇಶ್ ಗೆ ಸಮಾಧಾನ ಮಾಡಿ ಅವನನ್ನು ಸುರೇಶ ಜೊತೆ ಸುರೇಶನ ಮನೆಗೆ ಕಳುಹಿಸಿ, ತಾನು ಮುಂದೆ ಮಾಡಬೇಕಾದ ಕೆಲಸದ ಬಗ್ಗೆ ಯೋಚಿಸಿದ.


ಇದು ಕೇವಲ ಇನ್ಫಾರ್ಮಶನ್ ಕಲೆಕ್ಷನ್ ಮಾಡುವ ಕೆಲಸವಲ್ಲವೆಂದು ಅರಿವಾಯಿತು ಪಿಂಟೋ ಗೆ. ಇದು ತುಂಬಾನೇ ಕಾಂಪ್ಲಿಕೇಟೆಡ್ ಆಗ್ತಾಯಿದೆ. ಸ್ವಲ್ಪ ಹುಷಾರಾಗಿ ಮುಂದುವರೆಯಬೇಕೆಂದು ನಿರ್ಧರಿಸಿದ.

ಪಿಂಟೋ ಪೊನ್ನಪ್ಪ ಕುಟ್ಟಿ ಮನೆಯಿಂದ ಹೋಗುವುದನ್ನೇ ಕಾದಿದ್ದ ಈರಣ್ಣ ಮಲಯಾಳೀ ಪೊಲೀಸ್ ಆಫೀಸರ್ ಜೊತೆಗೂಡಿ, ಪೊನ್ನಪ್ಪನ ಮನೆ ಬಾಗಿಲು ಬಡೆದ.


ಪೊಲೀಸ್ ಆಫೀಸರ್ನನ್ನು ನೋಡಿ ಹೆದರಿದ ಪೊನ್ನಪ್ಪ, ಪಿಂಟೋ ಹಾಗು ಅವನ ಸ್ನೇಹಿತ ಹರಿಯೊಡನೆ ನಡೆದ ಸಂಬಾಷಣೆಯನ್ನೆಲ್ಲ ವಿವರಿಸಿ ಹೇಳಿದ ಹಾಗೂ, ಕಾರ್ಡ್ ಬೋರ್ಡ್ ಬಾಕ್ಸ್ನಲ್ಲಿದ್ದ ಚಿತ್ರಗಳೆನ್ನ ತಂದು ಅವರ ಮುಂದಿಟ್ಟ.


ಈರಣ್ಣ, ರಿವಾಲ್ವರ್ ಹಿಡಿದು ನಿಂತಿದ್ದ ವ್ಯಕ್ತಿಯ ಚಿತ್ರ ನೋಡಿ ಘಾಬರಿಗೊಂಡ. ವಿಷಯ ತುಂಬಾ ರಿಸ್ಕಿ ಯಾಗಿದೆ ಹಾಗೆ ಇದರಿಂದ ಸಿಗುವ ದುಡ್ಡು ಕೂಡ ಹೆಚ್ಚಿನದೇ ಎಂದು ತನಗೆ ತಾನೇ ಮಾತಾಡಿಕೊಂಡವನು ಕುಟ್ಟಿ ಬರೆದಿದ್ದ ಕೆಲವು ಚಿತ್ರಗಳ ಫೋಟೋ ತೆಗೆದುಕೊಂಡವನೇ, ಅದನ್ನು ಕಮಿಷನರ್ಗೆ ಕಳಿಸುವ ಬದಲಿಗೆ, ಲಾಯರ್ ನವೀನ್ ಕೃಷ್ಣ ಮೊಬೈಲ್ ಗೆ ಕಳುಹಿಸಿದ.


ಅವನು ಊಹೆ ಮಾಡಿದ್ದಂತೆ ಕೆಲವೇ ಸೆಕೆಂಡ್ಗಳಲ್ಲಿ, ಅವನ ಮೊಬೈಲ್ ರಿಂಗ್ ಆಯಿತು.

ಹೊಗೆಸೊಪ್ಪಿನಿಂದ ಕೆಂಪಾದ ಹಲ್ಲುಗಳನ್ನು ತೋರಿಸುತ್ತಾ, ಮೊಬೈಲ್ ತೆಗೆದು ಹೇಳಿದ ಈರಣ್ಣ. "ಹೇಳಿ ಲಾಯರ್ ಸಾಹೇಬ್ರೆ? ಏನ್ ಮಾಡ್ಲಿ ನೆಕ್ಸ್ಟ್ ಅಂತ. ಹಾಗೆ, ಸ್ವಲ್ಪ ಖರ್ಚಿಗೆ ಹಣ ಕೂಡ ಬೇಕಾಗಬಹುದು. ತೊಂದರೆ ಇಲ್ಲ ತಾನೇ?"


"ಎಲ್ಲಿದ್ದಾನೆ ಆ ಪಿಂಟೋ? ಅವ್ನು ಫೋಟೋ ನೋಡಿದ್ನ ಕೇಳು? ಹಾಗೆಯೇ, ಅವನೇನಾದರೂ ಫೋಟೋ ಎಲ್ಲಿಗಾದ್ರೂ ಕಳಿಸಿದ್ನ ಅಂತಾನೂ ಕೇಳು ಈರಣ್ಣ. ದುಡ್ಡಿನ ಬಗ್ಗೆ ಯೋಚ್ನೆ ಬೇಡ. ನೀನು ಕೇಳಿದ್ದಿಕ್ಕಿಂತಾ ಹೆಚ್ಚುಕೊಡ್ತೀನಿ. ಈಗ ನಾನು ಹೇಳೋದನ್ನ ಕೇಳಿಸಿಕೋ ಈರಣ್ಣ " ಹೇಳಿದ ನವೀನ್ ಕೃಷ್ಣ.


ಈರಣ್ಣ ತನ್ನ ಹಲ್ಲು ಬಿಡುತ್ತಾ ಯೋಚಿಸಿದ; ಏನ್ ಮಾಡಿರಬಹುದು ಈ ಲಾಯರ್ ಮುದ್ದುಕೃಷ್ಣ?

ಕನ್ನಡ ಬರುವ ತನ್ನ ಮಲಯಾಳೀ ಸ್ನಿಹಿತ ಹಾಗು ಆ ಏರಿಯಾದ ಇನ್ಸ್ಪೆಕ್ಟರ್ ಜಗದೀಶ್ನನ್ನ ಹತ್ತಿರ ಕರೆದು, ಒಮ್ಮನ್ ಕುಟ್ಟಿಯನ್ನು, ಲಾಯರ್ ಹೇಳಿದಂತೆ, ಮುಗಿಸಿಬಿಡುವಂತೆ ಕಿವಿಯಲ್ಲಿ ಪಿಸುಗುಟ್ಟಿದ.


ಈರಣ್ಣನ ಮಾತನ್ನು ಕೇಳಿ ಹೌಹಾರಿದ ಇನ್ಸ್ಪೆಕ್ಟರ್, ಆಗದೆಂದು ತಲೆಯಾಡಿಸಿದ. ಈರಣ್ಣ ಕೊನೆಗೆ ಇನ್ನೊಂದು ಉಪಾಯವನ್ನು ಹೇಳಿದ; ಅದನ್ನು ಕೇಳಿದ ಇನ್ಸ್ಪೆಕ್ಟರ್ ಜಗದೀಶ್ ಈರಣ್ಣನ ಕಿವಿಯಲ್ಲಿ ಅದಕ್ಕಾಗುವ ಖರ್ಚಿನ ಮೊತ್ತ ಹೇಳಿದ.


ಮೈಸೂರಿನಲ್ಲಿ, ಸುರೇಶನ ಮನೆಯಲ್ಲಿ ಮಲಗಿ ನಿದ್ರೆ ಮಾಡಿ, ಹೊಟ್ಟೆ ತುಂಬಿದ ಮೇಲೆ, ಫೋನ್ ಮಾಡಿ ಪಿಂಟೋವಿನ ಹತ್ತಿರ ಮುಂದಿನ ಕಾರ್ಯಕ್ರಮದ ಬಗ್ಗೆ ವಿಚಾರಿಸಿದ ಶೈಲೇಶ. ಪಿಂಟೋ ಹೇಳಿದಂತೆ, ಸುರೇಶನಿಗೆ ಪರಿಚಯವಿರುವ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮೂಲಕ, ಹೆಚ್ಚಿನ ವಿವರಗಳನ್ನು ತಿಳಿದುಕೊಂಡವನಿಗೆ, ಮೈಸೂರ್ ಹಾಗೂ ಕೇರಳ ಬಾರ್ಡರ್ ಹತ್ತಿರದ ಮನೆಯೊಂದರಲ್ಲಿ ಮಹದೇವಪ್ಪನ ಮಗಳನ್ನು ಕೂಡಿ ಹಾಕಿರುವುದಾಗಿ ತಿಳಿದು ಬಂತು. 


ಸುರೇಶ ಇನ್ನಷ್ಟು ಸ್ನೇಹಿತರನ್ನೊಡಗೊಂಡು, ಶೈಲೇಶ್ನನ್ನು ಜೀಪಿನಲ್ಲಿ ಕರೆದು ಕೊಂಡು ಸಂಗೀತ - ಮಹದೇವಪ್ಪನ ಮಗಳ ಹೆಸರು - ಇರುವ ಮನೆಯ ಹತ್ತಿರ ಹೋಗಿ ಅಲ್ಲಿದ್ದ ಒಬ್ಬ ವಯಸ್ಸಾದ ವಾಚುಮೆನ್ಗೆ ಹಣದ ಆಮಿಷ ತೋರಿಸಿ, ಒಳಗೆ ಹೋಗಿ ನೋಡಿದಾಗ ಅವರಿಗೆ ಕಂಡಿದ್ದು ಸಂಗೀತ ಮಾತ್ರವಲ್ಲ.

ಹಾಸಿಗೆಯ ಮೇಲೆ ಜ್ಞಾನ ತಪ್ಪಿ ಬಿದ್ದಿದ್ದ ಇನ್ನೊಬ್ಬ ವ್ಯಕ್ತಿಯನ್ನು ನೋಡಿ ಆಶ್ಚರ್ಯದಿಂದ ಸಂಗೀತಾಳನ್ನು ಆ ವ್ಯಕ್ತಿ ಯಾರೆಂದು ಕೇಳಿದರು.


ಅವಳ ಉತ್ತರ ಅವರನ್ನು ತಬ್ಬಿಬ್ಬು ಮಾಡಿತು. ಆ ವ್ಯಕ್ತಿಯನ್ನು ಕೂಡ ಕರೆದು ಕೊಂಡು ಬೆಂಗಳೂರಿನ ಕಡೆ ಹೊರಟರು.  


ಜಡ್ಜ್ ಅವರ ಸೀಟಿನಲ್ಲಿ ಕುಳಿತೊಡನೆ, ಎಲ್ಲರೂ ಕುಳಿತು ಕೊಂಡರು. ಮೈಸೂರ್ ಮರ್ಡರ್ ಕೇಸ್ ನಂಬರ್ ಜೋರಾಗಿ ಹೇಳುತ್ತಾ ಅಂದಿನ ಕಲಾಪ ಶುರು ಮಾಡಿದ ಹೆಡ್ ಕ್ಲರ್ಕ್.


ರಾಮಯ್ಯ ಎದ್ದು ನಿಂತು ತಲೆ ಬಾಗಿ ನುಡಿದರು.


"ಮಹಾ ಸ್ವಾಮಿಗಳೇ, ನನಗೆ ಎರಡು ನಿಮಿಷ ಮಾತನಾಡಲು ಅವಕಾಶ ಬೇಕು. ದಯವಿಟ್ಟು ಅಪ್ಪಣೆ ಕೊಡಬೇಕು."


ಜಡ್ಜ್ ಸೀತಾರಾಮಯ್ಯ ಒಮ್ಮೆ ನವೀನ್ ಕೃಷ್ಣ ಕುಳಿತಿದ್ದ ಕಡೆ ನೋಡಿ, ಅನಂತರ ರಾಮಯ್ಯ ಕಡೆ ನೋಡಿ ನುಡಿದರು. "ನೀವು ನಿಮ್ಮ ಕೇಸಿಗೆ ಸಂಬಂದಿಸಿದ ಆರ್ಗ್ಯುಮೆಂಟ್ಸ್ ಎಲ್ಲಾ ಮುಗಿಸಿದ್ದೀರಲ್ಲವೇ ರಾಮಯ್ಯರವರೆ? ಮತ್ತೆ ಈಗ ಸಮಯ ಕೇಳುವ ಅಂತ ಸಂದರ್ಭವಾದರೋ ಏನು ಬಂದಿದೆ?"


ರಾಮಯ್ಯ ತಮ್ಮ ಗಂಟಲು ಸರಿ ಪಡಿಸಿಕೊಂಡು ನುಡಿದರು.


"ಮಹಾ ಸ್ವಾಮಿಗಳೇ, ಮೈಸೂರ್ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ, ಹೊಸದೊಂದು ಸಾಕ್ಷಿ ತಮ್ಮ ಮುಂದೆ ಹಾಜರು ಪಡಿಸಬೇಕಾಗಿದೆ. ಅದಕ್ಕೆ ತಮ್ಮ ಅಪ್ಪಣೆ ಬೇಕು.”


"ಒಬ್ಜೆಕ್ಷನ್ ಮಹಾ ಸ್ವಾಮಿಗಳೇ. " ಎದ್ದು ನಿಂತು ಗುಡುಗಿದ ನವೀನ್ ಕೃಷ್ಣ. "ಇಂದು ತೀರ್ಪು ಕೊಡಲು ತಾವು ನಿರ್ಧರಿಸಿ ಒಂದು ವಾರವೇ ಕಳೆದಿದೆ. ಹಾಗಾಗಿ, ಈ ಕೊನೆ ಗಳಿಗೆಯಲ್ಲಿ ಸಾಕ್ಷಿಗಳನ್ನು ಹಾಜರು ಪಡಿಸುವುದು ಸರಿಯಲ್ಲ. ದಯವಿಟ್ಟು, ಡಿಫೆನ್ಸ್ ಲಾಯರ್ ರವರ ಕೇಳಿಕೆಯನ್ನು ನಿರಾಕರಿಸ ಬೇಕಾಗಿ ತಮ್ಮಲ್ಲಿ ವಿನಂತಿ."

“ಪ್ರೊಸೆಕ್ಯುಷನ್ ಲಾಯರ್ ಹೇಳುವುದು ಸರಿಯಿದೆ ರಾಮಯ್ಯ. ನಿಮಗೆ ಸಾಕಷ್ಟು ಕಾಲಾವಕಾಶ ವಿದ್ದರೂ, ಕೊನೆ ಗಳಿಗೆಯುಲ್ಲಿ ಹೀಗೆ ಸಮಯ ಕೇಳುವುದು ಸರಿಯಲ್ಲ. ಇಷ್ಟು ದಿನ ಇಲ್ಲದಿದ್ದ ಸಾಕ್ಷಿ ಈಗ ಹೇಗೆ ಪ್ರತ್ಯಕ್ಷವಾದರೂ?" ಕೇಳಿದರು ಜಡ್ಜ್.


ಉತ್ತರಕ್ಕೆ ಲಾಯರ್ ರಾಮಯ್ಯ ರೆಡಿಯಾಗಿದ್ದರು.


"ಹೌದು ಮಹಾಸ್ವಾಮಿ. ಸಾಕಷ್ಟು ಸಮಯ ಇತ್ತು. ಆದರೆ, ಆರೋಪಿ ಮಹದೇವಪ್ಪ ಈವರೆಗೂ ತನ್ನ ಬಾಯಿ ಬಿಟ್ಟಿದ್ದೆ ಇಲ್ಲ, ಇದು ತಮಗೂ ಗೊತ್ತು. ಆದರೆ, ಆ ಕೇಸಿಗೆ ಸಂಬಂಧಿಸಿದಂತೆ ಮತ್ತೊಂದು ಸಾಕ್ಷಿ ತಮ್ಮ ಮುಂದೆ ಬರಲು ತಯ್ಯಾರಾಗಿದ್ದಾರೆ. ಈ ಸಾಕ್ಷಿಯ ಬಗ್ಗೆ ಗೊತ್ತಾಗಿದ್ದೇ ಎರಡು ದಿನದ ಹಿಂದೆ; ಅಷ್ಟೇ ಅಲ್ಲ ಸ್ವಾಮಿ, ಆ ಸಾಕ್ಷಿ ಈ ಊರಿನಲ್ಲಿಲ್ಲ. ಹಾಗಾಗಿ, ತಡವಾಗಿದೆ. ಕ್ಷಮೆ ಇರಲಿ.."


ನವೀನ್ ಕೃಷ್ಣ ಧೇಡೀರನೇ ಎದ್ದು ನಿಂತು ಒಮ್ಮೆ ರಾಮಯ್ಯನ ಕಡೆ ಕೆಕ್ಕರಿಸಿ ನೋಡಿ, ಅನಂತರ ಜಡ್ಜ್ ಕಡೆ ನೋಡಿ ನುಡಿದ. "ಹೊಸ ಸಾಕ್ಷಿ? ಇದೇನಿದು ಸ್ವಾಮಿಗಳೇ? ಈ ಕೇಸು ಈ ಯುಗದಲ್ಲಿ ಮುಗಿಯುವುದಿಲ್ಲ. ದಿನಕೊಂದು ಸಾಕ್ಷಿ ಕರೆತರುತ್ತಿದ್ದಾರೆ ನಮ್ಮ ಸ್ನೇಹಿತ, ಡಿಫೆನ್ಸ್ ಲಾಯರ್ ರವರು. ದಯವಿಟ್ಟು ಇದಕ್ಕೆ ತಾವು ಅವಕಾಶ ಕೊಡಬಾರದು.”


ಸೀತಾರಾಮಯಯ್ಯ ಮುದ್ದುಕೃಷ್ಣ ಕಡೆಗೊಮ್ಮೆ ನೋಡಿ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ತೋರಿಸದೆ ನುಡಿದರು .


"ನಮ್ಮ ಕಾನೂನಿನಲ್ಲಿ, ಆರೋಪಿಗೆ ತನ್ನನ್ನು ತಾನು ನಿರಪರಾಧಿಯೆಂದು ರುಜುವಾತು ಪಡಿಸಲು ಸಾಕಷ್ಟು ಅವಕಾಶ ಕೊಡುವುದು ನ್ಯಾಯ ಸಮ್ಮತ. ಇನ್ನೋಸೆಂಟ್ ಶುಡ್ ನೆವರ್ ಬಿ ಪನಿಶ್ಡ್.


ಇದು ವರೆಗೂ ತನ್ನ ಪರವಾಗಿ ಆರೋಪಿ ಏನು ಹೇಳಲಿಲ್ಲ. ಅದಕ್ಕೆ ಯಾವೂದೋ ಬಲವಾದ ಕಾರಣ ಇರಬಹುದಲ್ಲವೇ? ಹಾಗಾಗಿ, ತೀರ್ಪನ್ನು ಮುಂದೆ ಹಾಕಿ, ಹೊಸ ಸಾಕ್ಷಿಯನ್ನು ಪ್ರಸ್ತುತಗೊಳಿಸಲು ಅವಕಾಶ ಕೊಡಲಾಗಿದೆ. ಕೋರ್ಟ್ ಇದಕ್ಕೆ ಮುಂದಿನ ಸೋಮವಾರ ನಿಗದಿ ಪಡಿಸಿದೆ. ದಿ ಕೋರ್ಟ್ ಈಸ್ ಅದ್ಜುರ್ನ್ಡ್."

ಜಡ್ಜ್ ನಿಂತೊಡನೆ. ನೆರೆದಿದ್ದ ಸಭಾ ಸದರು ಎದ್ದು ನಿಂತರು. ರಾಮಯ್ಯನ ಮುಖದಲ್ಲಿ ಕಿರುನಗೆಯೊಂದು ಮೂಡಿದ್ದನ್ನು, ನವೀನ್ ಕೃಷ್ಣ ಗಮನಿಸದೆ ಹೋಗಲಿಲ್ಲ. ಚಿಂತೆಯ ಗೆರೆಗಳು, ಅವನ ಹಣೆಯಲ್ಲಿ ಕಾಣಿಸಿಕೊಂಡವು.


ಫೋನ್ ಬಂದೊಡನೆ, ಶೈಲೇಶ್ ಹೇಳಿದ್ದೆಲ್ಲವನ್ನು ಕೇಳಿದ ಪಿಂಟೋ, ಆ ಹೊಸ ವ್ಯಕ್ತಿಯ ಫೋಟೋ ತೆಗೆದು ವಾಟ್ಸಾಪ್ಪ್ನಲ್ಲಿ ರಾಮಯ್ಯನವರಿಗೆ ಕಳುಹಿಸಲು ಹೇಳಿದ.


ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಏನಾದರೋ ಅಡಚಣೆಗಳಾಗಬಹುದೆಂದು ಶೈಲೇಶ್ಗೆ ಎರ್ನಾಕುಲಂ ನಲ್ಲಿ ನಡೆದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ ಎಚ್ಚರಿಕೆಯಿಂದರಲು ತಿಳಿಸಿದ.


ಪಿಂಟೋ ತನ್ನ ಸ್ನೇಹಿತ ಹರಿಗೆ ಒಮ್ಮನ್ ಕುಟ್ಟಿಯನ್ನು ಬೆಂಗಳೂರಿಗೆ ಕರೆದೊಯ್ಯಲೂ ಒಂದು ವ್ಯಾನ್ಗೆ ವ್ಯವಸ್ಥೆ ಮಾಡಲು ಹೇಳಿ, ಲಾಯರ್ ರಾಮಯ್ಯನವರಿಗೆ ಫೋನ್ ಮಾಡಿದ.


ಸಂಗೀತಾಳನ್ನು ಬಚ್ಚಿಟ್ಟಿದ್ದ ವಿಷಯ ಕೇಳಿ ಚಿಂತೆಯ ಗೆರೆಗಳು ಮೂಡಿದರೆ, ಪಿಂಟೋ ಕಳುಹಿಸಿದ ವ್ಯಕ್ತಿಯ ಚಿತ್ರ ನೋಡಿ, ಘಾಬರಿನಿಂದ ಎದ್ದು ನಿಂತರು, ಲಾಯರ್ ರಾಮಯ್ಯ. ಆ ಚಿತ್ರ ಮಹದೇವಪ್ಪ ಮರ್ಡರ್ ಮಾಡಿದ ಎನ್ನಲಾದ ಚೆನ್ನನ ಚಿತ್ರವಾಗಿತ್ತು!


ಇತ್ತ ಒಮ್ಮನ್ ಕುಟ್ಟಿಯ ಮನೆಗೆ ಹೋದ ಪಿಂಟೋಗೆ ಶಾಕ್ ಕಾದಿತ್ತು.


ಮನೆಯ ಬಾಗಿಲು ತೆರೆದಿತ್ತು; ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿದ್ದವು. ಮನೆಯಲ್ಲಿ ಒಮ್ಮನ್ ಕುಟ್ಟಿಯಾಗಲಿ ಅಥವಾ ಅವನ ತಂದೆ, ಪೊನ್ನಪ್ಪ ಕುಟ್ಟಿಯಾಗಲಿ ಇರಲಿಲ್ಲ!


ಫೋನ್ ಹೊರಗೆ ತೆಗೆದು ರಾಮಯ್ಯನವರಿಗೆ ಕಾಲ್ ಮಾಡಿದ ಪಿಂಟೋ.

ಪಿಂಟೋ ಮಾತು ಕೇಳಿದ ರಾಮಯ್ಯನವರಿಗೆ ಅರ್ಥವಾಯಿತು ಏನಾಗುತ್ತಿದೆಯೆಂದು. ಒಮ್ಮನ್ ಕುಟ್ಟಿಯನ್ನು ಸಾಕ್ಷಿಯಾಗಿ ಕರೆದುಕೊಂಡು ಬರಬಹುದೆಂದು, ಆ ನವೀನ್ ಕೃಷ್ಣ ಹೇಗೋ ಅವನನ್ನು ಕಿಡ್ನಾಪ್ ಮಾಡಿಸಿದ್ದಾನೆ. ಹೇಗಾದರೋ ಮಾಡಿ ಸೋಮವಾರದೊಳಗಾಗಿ ಒಮ್ಮನ್ ಕುಟ್ಟಿಯನ್ನು ಹುಡುಕಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಪಿಂಟೋಗೆ ಹೇಳಿದರು ರಾಮಯ್ಯ.


ಪಿಂಟೋ ತನ್ನ ಸ್ನೇಹಿತ ಹರಿಯೊಡಗೊಂಡು ಅವನಿಗೆ ತಿಳಿದಿದ್ದ ಸರ್ಕಲ್ ಇನ್ಸ್ಪೆಕ್ಟರ್ ಹತ್ತಿರ ಹೋಗಿ ನಡೆದ ವಿಷಯವನ್ನೆಲ್ಲ ಹೇಳಿ, ಒಮ್ಮನ್ ಕುಟ್ಟಿ ಹಾಗು ಅವನ ತಂದೆ ತಾಯಿಯರನ್ನು ಹುಡುಕಲು ಸಹಾಯ ಕೇಳಿದ.

ಪೊಲೀಸ್ ಸ್ಟೇಷನ್ ನಿಂದ ಹೊರಗೆ ಬರುತ್ತಿದ್ದಂತೆ, ಅವನಿಗೆ ಈರಣ್ಣ ದೂರದಲ್ಲಿ ನಿಂತು ಯಾರೊಡನೆಯೂ ಮಾತನಾಡುತ್ತಿರುವುದು ಕಾಣಿಸಿತು. ಇದೆಲ್ಲವೂ ಆ ಈರನಣ್ಣನ ಕೈವಾಡವೇ ಎಂದು ಅರಿತು, ಅವನಿಗೆ ತಿಳಿಯದಂತೆ, ಅವನನ್ನೇ ಫಾಲೋ ಮಾಡಿಕೊಂಡು ಹೊರಟ ಪಿಂಟೋ.


ಪಿಂಟೋ ತನ್ನ ಲಕ್ ಚೆನ್ನಾಗಿದೆ ಎಂದು ಕೊಂಡ; ಈರಣ್ಣ, ನೇರವಾಗಿ, ಒಮ್ಮನ್ ಕುಟ್ಟಿಯನ್ನು ಬಚ್ಚಿಟ್ಟಿದ್ದ ಮನೆಯ ಹತ್ತಿರ ಹೋಗುತ್ತಿದ್ದಂತೆ, ಪಿಂಟೋ ಹರಿಗೆ ಫೋನ್ ಮಾಡಿ, ಮೊಬೈಲ್ ನಲ್ಲಿ ಲೊಕೇಶನ್ ಕಳುಹಿಸುತ್ತೇನೆ ವ್ಯಾನ್ ತೆಗೆದುಕೊಂಡು ಇಲ್ಲೇ ಬಾ, ಇಲ್ಲಿಂದಲೇ ಬೆಂಗಳೂರಿಗೆ ಹೋಗೋಣ ಎಂದು ಮೆಸೇಜ್ ಮಾಡಿ, ಅವನ ಬರವಿಗಾಗಿ ಕುಳಿತ.


ಹರಿ ಪರಿಸ್ಥಿತಿಯನ್ನು ಅರಿತು, ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದವನು, ಪಿಂಟೋ ಜೊತೆಗೂಡಿ, ಈರಣ್ಣನನ್ನು ಕಟ್ಟಿ ಹಾಕಿ ಅವನ ಬಾಯಿಗೆ ಬಟ್ಟೆ ತುರುಕಿ, ಒಮ್ಮನ್ ಕುಟ್ಟಿ ಹಾಗು ಅವನ ತಂದೆಯನ್ನು ವ್ಯಾನ್ ನಲ್ಲಿ ಕೂಡಿಸಿಕೊಂಡು, ಬೆಂಗಳೂರಿನತ್ತ ಸಾಗಿದರು.


ಆಗ ಘಂಟೆ ರಾತ್ರಿ ಹನ್ನೆರಡಾಗಿತ್ತು. 


ವ್ಯಾನ್ ನಲ್ಲಿ ಕುಳಿತೊಡನೆ, ಪಿಂಟೋ ರಾಮಯ್ಯ ನಂಬರಿಗೆ ಫೋನ್ ಮಾಡಿ ತಾನು ಹುಡುಗನನ್ನು ಕರೆದು ಕೊಂಡು ಬರುತ್ತಿರುವುದನ್ನು ತಿಳಿಸಿ, ಬೆಳಗ್ಗೆ, ಹತ್ತು ಘಂಟೆಗೆ, ಕೋರ್ಟ್ಗೆ ಡೈರೆಕ್ಟ್ ಆಗಿ ಬರುತ್ತೇವೆಂದು ತಿಳಿಸಿದ.

ಕೋರ್ಟ್ ನಲ್ಲಿ ಮಾತನಾಡುತ್ತಿದ್ದ ಪ್ರೇಕ್ಷಕರು ಹಾಗು, ಲಾಯರ್ಗಳು, ಜಡ್ಜ್ ಬಂದೊಡನೆ ಮಾತು ನಿಲ್ಲಿಸಿದರು.

ಎಂದಿನಂತೆ, ಹೆಡ್ ಕ್ಲರ್ಕ್, ಮೈಸೂರ್ ಮರ್ಡರ್ ಕೇಸ್ ನಂಬರ್ ಜೋರಾಗಿ ಹೇಳಿದ.


ಪ್ರೊಸೆಕ್ಯುಷನ್ ಲಾಯರ್ ನವೀನ್ ಕೃಷ್ಣ ಹಾಗು ಇತರರು ಜಡ್ಜ್ ತೀರ್ಪು ಕೊಡುತ್ತಾರೆಂದು ನೋಡುತ್ತಿದ್ದರೇ, ರಾಮಯ್ಯ ಎದ್ದು ತಮ್ಮ ಗಂಟಲು ಸರಿ ಪಡಿಸಿಕೊಂಡು ಜಡ್ಜ್ ಕಡೆ ನೋಡುತ್ತಾ ನುಡಿದರು.


"ಮಹಾ ಸ್ವಾಮಿಗಳೇ, ಮೈಸೂರ್ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ, ಒಂದು ಹೊಸ ತಿರುವು ಬಂದಿದೆ. ಸಾಮಾನ್ಯವಾಗಿ ನಾವು ಪ್ರಸ್ತುತ ಪಡಿಸುವ ಎಲ್ಲ ಸಾಕ್ಷಿಗಳು ನಡೆದ ಘಟನೆಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಪಟ್ಟವರಾಗಿರುತ್ತಾರೆ; ಕೆಲವರು ಪ್ರತ್ಯಕ್ಷ ಸಾಕ್ಷಿಗಳಾದರೆ, ಇನ್ನು ಕೆಲವರು, ಪರೋಕ್ಷ.

ಆದರೆ, ಈ ಕೇಸಿನಲ್ಲಿ ಬಹಳ ವಿಚಿತ್ರವಾದ, ಹಿಂದೆಂದೂ ಕೇಳರಿಯದ ರೀತಿಯಲ್ಲಿ, ಸಾಕ್ಷಿಯನ್ನು ನಾವು ಇನ್ನು ಕೆಲವೇ ನಿಮಿಷಗಳಲ್ಲಿ ತಮ್ಮ ಮುಂದೆ ಹಾಜರು ಪಡಿಸುತ್ತೇವೆ."


ಹೀಗೆ ಹೇಳಿದ ರಾಮಯ್ಯ ತಮ್ಮ ಗಡಿಯಾರ ನೋಡಿಕೊಂಡರು. ಯಾಕೆ ಈ ಪಿಂಟೋ ಇನ್ನು ಬರಲಿಲ್ಲವಲ್ಲ? ಇಷ್ಟುಹೊತ್ತಿಗೆ ಆ ಹುಡುಗನನ್ನು ಕರೆದು ಕೊಂಡು ಬರಬೇಕಿತ್ತು ಎಂದು ತಮಗೆ ತಾವೇ ಮನಸ್ಸಿನಲ್ಲಿ ಮಾತನಾಡಿಕೊಂಡು ಜಡ್ಜ್ ಕಡೆ ನೋಡಿದರು.


ನವೀನ್ ಕೃಷ್ಣ ಎದ್ದು ನಿಂತು ಹೇಳಿದರು. "ಇದೇನು ಮಹಾಸ್ವಾಮಿ? ಕೋರ್ಟ್ನ ಅತ್ಯಮೂಲ್ಯ ಸಮಯ ಹಾಗು ಹಣ ಎರಡು ವ್ಯರ್ಥವಾಗ್ತಾ ಇದೆ. ದಯವಿಟ್ಟು, ಇನ್ನು ಈ ಕೇಸನ್ನು ಬೆಳಿಸದೆ ತಮ್ಮ ತೀರ್ಪನ್ನು ಕೊಡಬೇಕೆಂದು ವಿನಯದಿಂದ ಕೇಳಿಕೊಳ್ಳುತ್ತೇನೆ."


ಜಡ್ಜ್ ಸೀತಾರಾಮಯ್ಯ ನವೀನ್ ಕೃಷ್ಣ ಕಡೆಗೊಮ್ಮೆ ನೋಡಿ ರಾಮಯ್ಯನವರನ್ನು ಉದ್ದೇಶಿಸಿ ಮಾತನಾಡಿದರು.

"ಡಿಫೆನ್ಸ್ ಲಾಯರ್ ರಾಮಯ್ಯನವರೇ, ಇನ್ನು ಎಷ್ಟು ಹೊತ್ತು ಬೇಕು ನಿಮ್ಮ ಸಾಕ್ಷಿ ಕೋರ್ಟ್ಗೆ ಬರಲು? ಅವರು ಬರುತ್ತಿರುವುದಾದರೋ ಎಲ್ಲಿಂದ?"


ರಾಮಯ್ಯ ಜಡ್ಜ್ ಕಡೆ ನೋಡುತ್ತಾ ನುಡಿದರು. "ಮಹಾಸ್ವಾಮಿಗಳೇ, ಸಾಕ್ಷಿ ಬೇರೆ ಊರಿನಿಂದ ಬರುತ್ತಿದ್ದಾರೆ. ಹಾಗಾಗಿ ಸ್ವಲ್ಪ ತಡವಾಗಿದೆ. ಕ್ಷಮೆ ಇರಲಿ."


ಅತ್ತ ಎರ್ನಾಕುಲಂ ನಲ್ಲಿ ಈರಣ್ಣ ಹೇಗೋ ಮಾಡಿ ಕೈ ಬಿಡಿಸಿಕೊಂಡವೇ, ಗಡಿಯಾರ ನೋಡಿದ. ರಾತ್ರಿ ಎರಡಾಗಿತ್ತು.


ಆ ಹುಡುಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆಂದು ಅರಿತಿದ್ದ ಈರಣ್ಣ, ಮುದ್ದುಕೃಷ್ಣ ನಂಬರಿಗೆ ಫೋನ್ ಮಾಡಿ ವಿಷಯ ತಿಳಿಸಿದ.


ಬೆಂಗಳೂರಿನ ಹತ್ತಿರ ಬರುತ್ತಿದ್ದ ಹಾಗೆ ಹಿಂಬಾಲಿಸಿಕೊಂಡ ಬಂದ ಲಾರಿಯನ್ನು ಒಳಗಿದ್ದ ಪಿಂಟೋ ಗಮನಿಸಲಿಲ್ಲ. ತುಮುಕೂರಿನ ಹತ್ತಿರ ಬರುತಿದ್ದ ವಾನ್ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು, ವ್ಯಾನ್ ಪಕ್ಕದಲ್ಲಿದ್ದ ಹೊಲದತ್ತ ಜೋರಾದ ಶಬದಿಂದ ಬಿದ್ದಿತು!


ಜಡ್ಜ್ ತಮಗಾಗುತ್ತಿದೆ ಅಸಮಾಧಾನವನ್ನು ತೋರಿಸುತ್ತಾ ನುಡಿದರು.


“ಡಿಫೆನ್ಸ್ ಲಾಯರ್ ರಾಮಯ್ಯನವರೇ, ಪ್ರೊಸೆಕ್ಯುಷನ್ ಲಾಯರ್ ಹೇಳುವ ಮಾತಿನಲ್ಲಿ ಸತ್ಯ ಇದೆ. ಹೀಗೆ ಕೋರ್ಟ್ನ ಸಮಯ ವ್ಯರ್ಥ್ ಮಾಡುವುದು ಸರಿಯಲ್ಲ. ಹಾಗಾಗಿ, ನಾವು ಈ ಕೇಸಿನ ತೀರ್ಪನ್ನು ಓದದೇ ಬೇರೆ ದಾರಿಯೇ ಇಲ್ಲ..ನಾವು..." ಸೀತಾರಾಮಯ್ಯ ಮಾತು ಮುಗಿಸುವುದಕ್ಕೆ ಮುಂಚೆ, ಎಂಟು ವರ್ಷದ ಒಬ್ಬ ಹುಡುಗ ಜನಗಳ ಮಧ್ಯೆದಿಂದ ಬಂದವನೇ, ಕೋರ್ಟ್ ಮಧ್ಯೆದಲ್ಲಿ ನಿಂತ.


ಜಡ್ಜ್ ಆಶ್ಚರ್ಯದಿಂದ ಅವನೆಡೆಗೆ ನೋಡುತ್ತಿದ್ದಂತೇ, ಆ ಹುಡುಗ ಯಾವುದೋ ಬಾಷೆಯಲ್ಲಿ, ಏನನ್ನೋ ಹೇಳ ತೊಡಗಿದ.


ಎಲ್ಲರೂ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೇ, ಹಿಂದೆ ಕುಳಿತಿದ್ದ ಲಾಯರ್ ರಾಮಯ್ಯ ಈತನೇ ಒಮ್ಮನ್ ಕುಟ್ಟಿ ಎಂದು ತಿಳಿದು ಪಿಂಟೋ ಗಾಗಿ ಹುಡುಕಾಡಿದರು. ಅವನು ಕಾಣದಿದ್ದುದರಿಂದ, ಜಡ್ಜ್ ಮುಂದೆ ಬಂದು ನಿಂತು ಹೇಳಿದರು.


"ಮಹಾ ಸ್ವಾಮಿ ಈ ಹುಡುಗನೇ ನಮ್ಮ ಹೊಸ ಸಾಕ್ಷಿ. ಆದರೆ, ಅವನಿಗೆ ಕನ್ನಡ ಬರುವುದಿಲ್ಲ. ಅವನು ಮಾತನಾಡುತ್ತಿರುವ ಬಾಶೆ ಮರಾಠಿ. ಹಾಗಾಗಿ, ನಮ್ಮ್ ಡಿಫೆನ್ಸ್ ಅಸಿಸ್ಟೆಂಟ್ ಮುರಳೀಧರ, ಅವರಿಗೆ ಮರಾಠಿ ಚೆನ್ನಾಗಿ ಬರುತ್ತದೆ, ಅವರು ಆ ಹುಡುಗ ಹೇಳುವುದನ್ನು ಟ್ರಾನ್ಸ್ಲಟೆ ಮಾಡುತ್ತಾರೆ. ಬೇಕಿದ್ದಲ್ಲಿ, ಆನಂತರ, ಹೇಳಿಕೆಯನ್ನು ಬೇರೆಯವರ ಹತ್ತಿರ ಚೆಕ್ ಮಾಡಿಸ ಬಹುದು. ಹೇಗೂ ಎಲ್ಲ ಸ್ಟೇಟ್ಮೆಂಟ್ ರೆಕಾರ್ಡ್ ಆಗಿರುತ್ತದೆ."

ಜಡ್ಜ್ ಹುಡುಗನಿಗೆ ಕಟಕಟೆಯಲ್ಲಿ ನಿಲ್ಲವು ಹೇಳಿದರು; ಮುರಳೀಧರ ಅವರು ಹೇಳಿದನ್ನು ಮರಾಠಿಗೆ ಟ್ರಾನ್ಸ್ಲಟೆ ಮಾಡಿ ಹೇಳಿದ ಆ ಹುಡುಗನಿಗೆ, ಅವನಿಗೆ ತಿಳಿದಿರುವ ವಿಷಯಗಳನ್ನೆಲ್ಲ ಹೇಳಲು ಹೇಳಿದರು, ಡಿಫೆನ್ಸ್ ಲಾಯರ್ ರಾಮಯ್ಯ.


ಒಮ್ಮನ್ ಕುಟ್ಟಿ ಹೇಳಿದ್ದನು, ಟ್ರಾನ್ಸ್ಲಟೆ ಮಾಡುತ್ತಾ ಹೋದರು ಮುರಳೀಧರ.


"ಸ್ವಾಮಿಗಳೇ, ನಾನು ನ್ಯಾಯ ಕೇಳಲು ಬಂದಿದ್ದೇನೆ. ಒಂದು ವರ್ಷಗಳ ಕಾಲ, ಅಲೆದಾಡಿ ಈಗ ತಮ್ಮ ಬಳಿ ಬಂದಿದ್ದೇನೆ. ನನಗೆ ದಯವಿಟ್ಟು ನ್ಯಾಯ ದೊರಕಿಸಿ ಕೊಡಿ.


ಮಹಾರಾಷ್ಟ್ರದ ಸತಾರ ದಲ್ಲಿ ಒಂದು ವರ್ಷದ ಕೆಳಗೆ ಒಂದು ಕೊಲೆಯಾಯಿತು. ಆ ಕೊಲೆಯ ಬಗ್ಗೆ ಯಾರಿಗೂ ಸುಳುವು ಸಿಗದ ಹಾಗೆ ಬಹಳ ಚತುರತೆಯಿಂದ ಆ ಕೇಸನ್ನು ಮುಚ್ಚ ಲಾಯಿತು."


ತಮ್ಮ ಕೈ ಎತ್ತಿ, ಮುರಳೀಧರ ಮಾತು ನಿಲ್ಲಿಸಿದ ಮೇಲೆ ಕೇಳಿದರು ಜಡ್ಜ್ ಸೀತಾರಾಮಯ್ಯ. "ನೀನು ಯಾರು? ನಿನ್ನ ಹೆಸರೇನು?"


ಮುರಳೀಧರ ಮರಾಠಿಯಲ್ಲಿ ಟ್ರಾನ್ಸಲ್ಟ್ ಮಾಡಿ ಆ ಹುಡುಗನಿಗೆ ಕೇಳಿದ.


ಹುಡುಗ ಹೇಳಿದ್ದನ್ನು ತಕ್ಷಣ ತರ್ಜುಮೆ ಮಾಡದೆ, ಆ ಹುಡುಗನ ಮುಖವನ್ನೇ ನೋಡುತ್ತಿದ್ದ.


ಬೇಸತ್ತ ಜಡ್ಜ್ ಕೇಳಿದರು. "ಯಾಕೆ? ನಿಮಗೂ ಅರ್ಥ ವಾಗಲಿಲ್ಲವೇ ಆ ಹುಡುಗ ಹೇಳಿದ್ದು?" ಎಂದು ಕೇಳಿದರು.

ಸಾವರಿಸಿಕೊಂಡು ಹೇಳಿದ ಮುರಳೀಧರ. "ಅರ್ಥವಾಯಿತು ಸ್ವಾಮಿ. ಆದರೆ, ಆ ಹುಡುಗ ಹೇಳಿದ ಮಾತು ಕೇಳಿ ಸ್ವಲ್ಪ ತಬ್ಬಿಬಾಯಿತು."


"ಅಂತದ್ದೇನು ಹೇಳಿದ ಆ ಹುಡುಗ? ಏನು ಮುದ್ದುಕೃಷ್ಣ ಎಂದು ಹೇಳಿದ ಹಾಗಿತ್ತು?" ಎಂದರು ಜಡ್ಜ್.


"ಹೌದು ಸ್ವಾಮಿ. ಆ ಹುಡುಗ ಹೇಳಿದ ಅವನ ಹೆಸರು ನವೀನ್ ಕೃಷ್ಣ ಅಂತ ಹಾಗೂ...." ತಡವರಿಸ್ಕೊಂಡು ಹೇಳಿದ ಮುರಳೀಧರ, "ಇಲ್ಲಿರುವ ಲಾಯರ್ ಹೆಸರು ನವೀನ್ ಕೃಷ್ಣ ಅಲ್ಲವಂತೆ."


ನವೀನ್ ಕೃಷ್ಣ ಎದ್ದು ನಿಂತು ಜೋರಾಗಿ ಕಿರುಚಿ ಹೇಳಿದ. " ಏನಿದು ಮಹಾ ಸ್ವಾಮಿ? ಮೈಸೂರ್ ಕೇಸಿಗೆ ಸಂಬಂಧಿಸಿದಂತೆ ಸಾಕ್ಷಿ ಎಂದು ಹೇಳಿ ಯಾರೋ ಹುಡುಗನನ್ನು ಕರೆಸಿ, ಈಗ ನಮ್ಮ ಮೇಲೆ ಏನೋ ಅಪಪ್ರಚಾರ ಮಾಡುತ್ತಿರುವ ಹಾಗಿದೆ."


ಜಡ್ಜ್ ನವೀನ್ ಕೃಷ್ಣ ಕಡೆ ನೋಡುತ್ತಾ ಹೇಳಿದರು. “ವಿಷಯ ಏನು ಅಂತ ತಿಳಿಯದೇನೆ ತಾವು ವಿನಾ ಕಾರಣ ಅಡ್ಡಿ ಪಡಿಸುತ್ತಿದ್ದೀರಿ. ಮೊದಲಿಗೆ ಆ ಹುಡುಗನ ಮಾತನ್ನು ಪೂರ್ತಿಯಾಗಿ ಕೇಳೋಣ."


ಹುಡುಗ ಮುಂದುವರೆಸಿದ. ಸುಮಾರೋ ಐದು ನಿಮಿಷಗಳ ಕಾಲ ನಿರರ್ಗಳವಾಗಿ ಮರಾಠಿಯಲ್ಲಿ ಹೇಳಿದ್ದನ್ನು ಕೇಳಿದ ಮುರಳೀಧರ, ತನ್ನ ಜೋಬಿನಿಂದ ಕರ ವಸ್ತ್ರ ತೆಗೆದು ಹಣೆಯಲ್ಲಿದ್ದ ಬೆವರನ್ನು ಒರೆಸಿ ಕೊಂಡು ಜಡ್ಜ್ ನೋಡುತ್ತಾ, ತಡವರಿಸಿಕೊಂಡು ಹೇಳಿದ.


"ಮಹಾಸ್ವಾಮಿಗಳೇ, ಈ ಹುಡುಗನ ಪ್ರಕಾರ, ಒಂದು ವರ್ಷದ ಕೆಳಗೆ, ಸತಾರದಲ್ಲಿ, ಒಂದು ಕೊಲೆಯಾಗಿದೆಯೆಂತೆ. ಆ ಕೊಲೆಯಾದ ವ್ಯಕ್ತಿಯ ಹೆಸರು ನವೀನ್ ಕೃಷ್ಣ."

 

"ವಾಟ್ ನಾನ್ಸೆನ್ಸ್? ಏನ್ ಹೇಳ್ತಾ ಇದ್ದೀರಾ ನೀವು? ನಿಮಗೆ ಮರಾಠಿ ಸರಿಯಾಗಿ ಬರುತ್ತೆ ತಾನೇ?" ಜೋರಾಗಿ ಕೇಳಿದರು ಜಡ್ಜ್.


ಮುರಳೀಧರ ತಲೆ ಎತ್ತಿ ನುಡಿದ. "ಖಂಡಿತ ಬರುತ್ತೆ ಸ್ವಾಮಿ. ನಾನು ಹೇಳಿದ್ದೆಲ್ಲವೂ ಆ ಹುಡುಗ ಹೇಳಿದ ಮಾತೆ. ಅಷ್ಟೇ ಅಲ್ಲ ಸ್ವಾಮಿ, ಇಲ್ಲಿರುವ ಪ್ರೊಸೆಕ್ಯುಷನ್ ಲಾಯರ್ ಹೆಸರು ನವೀನ್ ಕೃಷ್ಣ ಅಲ್ಲವಂತೆ, ಅವರ ನಿಜವಾದ ಹೆಸರು, ನೀಲೇಶ್ ಅಂತ ಹೇಳಿದ ಆ ಹುಡುಗ."


ಕೋರ್ಟ್ನಲ್ಲಿ ಇದ್ದವರೆಲ್ಲರೂ ಜೋರಾಗಿ ಮಾತನಾಡಲು ತೊಡಗಿದರು.


"ಆರ್ಡರ್, ಆರ್ಡರ್. ಸದ್ದು. ಸ್ವಲ್ಪ ಎಲ್ಲರೂ ಸುಮ್ಮನಿರಿ." ಎಂದು ಹೇಳುತ್ತಾ ಜಡ್ಜ್ ಮುರಳೀಧರ ಕಡೆ ನೋಡುತ್ತಾ ಹೇಳಿದರು. “ಕೇಳಿ ಆ ಹುಡುಗನನ್ನು, ಏನಾದರೋ ಸಾಕ್ಷಿ ಇದೆಯೇ ಅವನ ಹತ್ತಿರ ಅಂತ?”

ಮುರಳೀಧರನ ಮಾತು ಕೇಳಿ ಆ ಹುಡುಗ ಗಹಗಿಸಿ ನಕ್ಕು ಹೇಳಿದ ಮಾತನ್ನು ಮುರಳೀಧರ ತಡವರಿಸುತ್ತ ತರ್ಜುಮೆ ಮಾಡಿದ. "ಕೊಲೆಯಾದ ನವೀನ್ ಕೃಷ್ಣ ನಾನೇ. ನನ್ನ ಶರೀರ ಸತರಾದ ಫಾರಂ ಹೌಸ್ನಲ್ಲಿ ಮಾವಿನ ಮರದ ಕೆಳಗೆ ಹೂತಿಟ್ಟಿದೆ. ನನ್ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ...ಇಲ್ಲಿ ನಿಂತಿರುವ ನೀಲೇಶ್.."

ಎಲ್ಲರೂ ನೋಡುತ್ತಿದ್ದಂತೇ, ನವೀನ್ ಕೃಷ್ಣ ಕಟಕಟೆಯ ಕಡೆ ಧಾವಿಸುತ್ತ ಹೇಳಿದ. 


"ಮಹಾ ಸ್ವಾಮಿ. ಇದೆಂತ ಅನ್ಯಾಯ? ಆ ಹುಡುಗ ಹೇಳುತ್ತಿರುವುದೆಲ್ಲ ಸುಳ್ಳು. ಆಧಾರ ವಿಲ್ಲದೆ ಬಾಯಿಗೆ ಬಂದಂತೆ ಹೇಳುವುದನ್ನು ತಾವು ಖಂಡಿತ ಪರಿಗಣಿಸ ಬಾರದು."


ಯಾವ ಪರಿವೆಯೂ ಇಲ್ಲದವಂತೆ, ಆ ಹುಡುಗ ಮಾತು ಮುಂದುವರೆಸಿದ. ಅವನ ಮಾತನ್ನು ಮುರಳೀಧರ ತರ್ಜುಮೆ ಮಾಡಿ ಹೇಳಿದ.


"ಅಲ್ಲಿ ಇನ್ನು ಕೆಲಸದವರು ಇರುತ್ತಾರೆ, ಅಲ್ಲಿ ಇರುವುದು ಒಂದೇ ಮಾವಿನ ಮರ. ಅದರ ಕೆಳಗೆ ಅಗಿಯಲು ಹೇಳಿ. ಅಲ್ಲಿ ಸಿಗುವ ಶವದ ಬಲಗೈ ಬೆರಳಿನಲ್ಲಿ ನೀಲಿ ಬಣ್ಣದ ಒಂಗುರವಿದೆ. ಅದೇ ಸಾಕ್ಷಿ ಆ ವ್ಯಕ್ತಿ ಕೊಲೆಯಾದ ನವೀನ್ ಕೃಷ್ಣ ಎನ್ನುವುದಕ್ಕೆ. ಹಾಗೆ ಎರಡನೇ ಸಾಕ್ಷಿ, ಮಹದೇವಪ್ಪ. ಆತ ಕೊಲೆಯಾಗುವುದನ್ನು ಪ್ರತ್ಯಕ್ಷವಾಗಿ ನೋಡಿದವನು. ಆದರೆ....." ಹುಡುಗ ತಡವರಿಸಿಕೊಂಡು ಮಾತನಾಡಿದ. "ಅವನು ಎಲ್ಲಿ ಬಾಯಿ ಬಿಡುತ್ತಾನೋ ಎಂದು ಅವನ ನಾಲಿಗೆಯನ್ನೇ ಕತ್ತರಿಸಿ ಹಾಕಿದ್ದಾನೆ ಈ ನೀಲೇಶ."


ಜಡ್ಜ್ ಸೀತಾರಾಮಯ್ಯ ಹಾಗೂ ಲಾಯರ್ ರಾಮಯ್ಯ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.


ಕೊನೆಗೆ ಜಡ್ಜ್ ಹೇಳಿದರೂ. " ಆರೋಪಿ ಮಹದೇವಪ್ಪನ ನಾಲಿಗೆ ಪರೀಕ್ಷೆ ಯಾಗಲಿ." ಕಾನ್ಸ್ಟೇಬಲ್, ಇನ್ನೊಂದು ಕಟಕಟೆಯಲ್ಲಿ ನಿಂತಿದ್ದ ಮಹದೇವಪ್ಪನ ಬಾಯಿ ತೆಗೆಸಿ ಒಳಗೆ ಇಣುಕಿದ.


ನೋಡಿದವೇ ಜೋರಾಗಿ ಕಿರುಚಿದ!


"ಮಹಾ ಸ್ವಾಮೀ.... ಇವನಿಗೆ ನಾಲಿಗೆಯೇ ಇಲ್ಲಾ......"


ರಾಮಯ್ಯನವರ ಮೊಬೈಲ್ ರಿಂಗ್ ಆಯಿತು. ಕೋರ್ಟ್ನಲ್ಲಿ ಮೊಬೈಲ್ ಬಳಕೆ ನಿಷಿದ್ಧ ಆದರೂ. ಜಡ್ಜ್ ಕಡೆಗೊಮ್ಮೆ ನೋಡಿ ಮೊಬೈಲ್ ತೆಗೆದು ನೋಡಿದರೆ, ಅದು ಪಿಂಟೋನ ಕಾಲ್ ಆಗಿತ್ತು. ಮೊಬೈಲ್ ಕಿವಿಗಿಟ್ಟು ಕೇಳಿದ ರಾಮಯ್ಯ ಅಲ್ಲೇ ಕುಸಿದು ಕುಳಿತರು.


ಮುರಳೀಧರ ಓಡಿ ಬಂದು ರಾಮಯ್ಯನವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು. ಜಡ್ಜ್ ಸೀತಾರಾಮಯ್ಯ ಎದ್ದು ನಿಂತು ಕೇಳಿದರು. "ಏನಾಯಿತು ರಾಮಯ್ಯನವರಿಗೆ?"


ಸುಧಾರಿಸಿಕೊಂಡು ನುಡಿದರು ರಾಮಯ್ಯ." ಮಹಾ ಸ್ವಾಮಿಗಳೇ, ನನಗೇನು ಅರ್ಥವಾಗುತ್ತಿಲ್ಲ. ಈಗ ತಾನೇ ಪಿಂಟೋ ಫೋನ್ ಮಾಡಿ ಹೇಳಿದ... ಅವರು ನಮ್ಮ ಸಾಕ್ಷಿ ಒಮ್ಮನ್ ಕುಟ್ಟಿ ಎನ್ನುವ ಹುಡುಗನನ್ನು ಕರೆದುಕೊಂಡು ಬರುತ್ತಿದ್ದ ವ್ಯಾನ್ ಆಕ್ಸಿಡೆಂಟ್ ಆಗಿದೆ ಹಾಗೂ ಆ ಹುಡುಗ, ಒಮ್ಮನ್ ಕುಟ್ಟಿ, ಮೂರ್ಛೆ ತಪ್ಪಿದ ಕಾರಣ ಅವನನ್ನು ಅಲ್ಲೇ ಇದ್ದ ಹಾಸ್ಪಿಟಲ್ಗೆ ಕರೆದುಕೊಂಡು ಹೋಗಿದ್ದಾನೆ.... ಆ ಹುಡುಗನಿಗೆ ಇನ್ನು ಪ್ರೆಗ್ನೆ ಬಂದಿಲ್ಲ ವಂತೆ ಪಿಂಟೋ ಅಲ್ಲೇ ಆ ಹುಡುಗನ ಮುಂದೆ ನಿಂತಿದ್ದಾನಂತೆ. ಹಾಗಾದರೇ ಇಲ್ಲಿರುವ ಈ ಹುಡುಗಾ ...." ಮಾತನ್ನು ಅರ್ಧಕ್ಕೆ ನಿಲಿಸಿ ಕಟಕಟೆಯೇತ್ತ ನೋಡಿದರು ಲಾಯರ್ ರಾಮಯ್ಯ


ರಾಮಯ್ಯ ಹೇಳಿದ್ದನು ಕೇಳಿದ ಜಡ್ಜ್ ಸೀತಾರಾಮಯ್ಯ ತಾವೂ ಕಟಕಟೆಯಲ್ಲಿದ್ದ ಆ ಹುಡುಗನ ಕಡೆ ನೋಡಿದರು...


ಅಲ್ಲಿ ನೆರೆದಿದ್ದ ಜನರೆಲ್ಲರೂ, ನವೀನ್ ಕೃಷ್ಣ ಆದಿಯಾಗಿ, ರಾಮಯ್ಯನವರ ಮಾತನ್ನು ಕೇಳಿ ಸ್ತಬ್ದರಾದ್ರೂ....

ಎಲ್ಲರೂ, ಕಟಕಟೆಯಲ್ಲಿ ನಿಂತಿದ್ದ ಹುಡುಗನ ಕಡೆ ನೋಡ ನೋಡುತ್ತಿದಂತೆ, ಅವನು ಗಹ ಗಹಿಸಿ ನಗುತ್ತಾ ಮಾಯಾ ವಾದ....

                                      ***** ಮುಗಿಯಿತು ******



Rate this content
Log in

Similar kannada story from Drama