Vadiraja Mysore Srinivasa

Drama Crime Thriller

3  

Vadiraja Mysore Srinivasa

Drama Crime Thriller

ಪ್ರತೀಕಾರ

ಪ್ರತೀಕಾರ

7 mins
839


ತನ್ನ ವ್ಯಾನಿಟಿ ಬ್ಯಾಗನ್ನು ತೆಗೆದು ಇನ್ನೊಮ್ಮೆ ನೋಡಿದಳು; ಸೀಲಾಗಿದ್ದ ಬಾಟಲಿ ಸುರಕ್ಷಿತವಾಗಿತ್ತು. ಬ್ಯಾಗನ್ನು ಪಕ್ಕಕ್ಕಿಟ್ಟು, ಕನ್ನಡಿಯ ಮುಂದೆ ನಿಂತು, ಕಣ್ಣುಗಳು ಮಾತ್ರ ಕಾಣುವಂತೆ ಮುಖಕ್ಕೆ ಸುತ್ತಿದ್ದ ದುಪಟ್ಟಾವನ್ನು ನಿಧಾನವಾಗಿ ಬಿಚ್ಚಿದಳು. ಕನ್ನಡಿಯಲ್ಲಿ ಕಂಡದ್ದು ವಿಕಾರವಾದ ಮುಖ; ಮೂಗಿನ ಬದಲು, ಎರಡು ಸಣ್ಣ ರಂದ್ರಗಳಿದ್ದವು, ಹರಿದ ತುಟಿ, ಕಪ್ಪಾಗಿದ್ದ ಹಲ್ಲುಗಳು, ಮಾಂಸಖಂಡಗಳೆಲ್ಲಾ ಕರಗಿ ಎದ್ದು ಕಾಣುತಿದ್ದ ಎಲುಬುಗಳು.

ಕಣ್ಣಿನಿಂದ ಧುಮುಕುತ್ತಿದ್ದ ಕಣ್ಣೀರು ನಿಧಾನವಾಗಿ ಕೆಳಗಿದ್ದ ಟೀಪಾಯ್ ಮೇಲೆ ಬಿದ್ದವು. ಅಲ್ಲಿಟ್ಟಿದ್ದ, ಸುಮಾರು 12 ವರ್ಷಗಳಿಂದ ಕಲೆ ಕಾಕಿದ್ದ ದಿನ ಪತ್ರಿಕೆಯ ಕಟ್ಟಿಂಗ್ಸ್ ಮೇಲೆ ಬಿದ್ದು ಪೇಪರ್ ಒದ್ದೆಯಾಗ ತೊಡಗಿತು. ಪೇಪರ್ ಕಟ್ಟಿಂಗ್ಸ್ ತೆಗೆದು, ಅವೆಲ್ಲವನ್ನು ವ್ಯಾನಿಟಿ ಬ್ಯಾಗ್ನಲ್ಲಿಟ್ಟಳು.

ಹನ್ನೆರಡು ವರುಷಗಳ ಕೆಳೆಗೆ ನಡೆದ ಘಟನೆಯನ್ನ ನೆನೆದು ಗಡ,ಗಡನೆ ನಡುಗಿದಳು. ಅವಳ ಪ್ರತೀಕಾರದ ಕಿಡಿ ಹೊತ್ತಿದ್ದೆ ಅಂದು. ಮುಖದತುಂಬಾ ಬ್ಯಾಂಡೇಜ್ ಹಾಕಿದ್ದರಿಂದ, ಅವಳ ಸ್ನೇಹಿತೆ ಬಂದಾಗ ಮಾತನಾಡಲು ಆಗದೆ ದುಃಖಪಟ್ಟಳು. "ನಿನ್ನನ್ನು ಈ ಅವಸ್ಥೆಗೆ ತಂದವನನ್ನು ನೀನು ಗುರುತಿಸುವುದಾದರೂ ಹೇಗೇ?” ಎಂದು ಅವಳ ಸ್ನೇಹಿತೆ ಕೇಳಿದ ಪ್ರಶ್ನೆಗೆ ಅವಳ ಹತ್ತಿರ ಉತ್ತರ ವಿರಲಿಲ್ಲ. ಆದರೆ, ಯಾರೋ ಹಾಕಿದ್ದ ಗುಲ್ಜಾರ್ ಬರೆದಿರುವ ಹಳೆ ಹಿಂದಿ ಹಾಡೊಂದು ‘ನಾಮ್ ಭೂಲ್ಜಾಯೆಗಾ ......ಮೇರಿ ಆವಾಜಿ ಹೀ ಪೆಹೆಚ್ಚಾನುಹೆಯ್...’ ತೆಗಿದಿದ್ದ ಕಿಟಕಿಂದ ಕೇಳಿ ಬಂದು ಕತ್ತಲಲ್ಲಿ ತಡಕಾಡುತ್ತಿದ್ದವಳಿಗೆ, ಬೆಳಕು ಕಂಡಂತಾಯ್ತು.

 ಆರು ತಿಂಗಳು ಕಾದಿದ್ದವಳು, ಕೇವಲ ಎರಡೇ ನಿಮಿಷದಲ್ಲಿ ತನ್ನ ಮುಖದ ಮೇಲೆ ಆಸಿಡ್ ಸುರಿದು ತನ್ನ ಜೀವನವನ್ನ ನರಕ ಮಾಡಿದ ವ್ಯಕ್ತಿಯನ್ನು ಹುಡುಕುವ ಕೆಲಸ ಶುರು ಮಾಡಿದಳು.

ಠಾಣೆಯೊಳಗೆ ಬಂದು ಮುಖವನ್ನು ಪೂರ್ತಿ ಮುಚ್ಚಿಕೊಂಡು ತನ್ನ ಮುಂದೆ ನಿಂತಿದ್ದ ಹುಡುಗಿಯನ್ನು ಮೇಲಿಂದ ಕೆಳಗಿನ ವರೆಗೂ ನೋಡಿ ಏನು ಎಂಬಂತೆ ತಲೆಯೆತ್ತಿ ಕೇಳಿದ ಕಾನ್ಸ್ಟೇಬಲ್. ತಾನು ಬಂದ ಕಾರಣವನ್ನು ವಿಶದವಾಗಿ ಆ ಹುಡುಗಿ ವಿವರಿಸಿ ಹೇಳಿದನ್ನು ಕೇಳಿದ ಕಾನ್ಸ್ಟೇಬಲ್, ಸ್ವಲ್ಪವೂ ಕನಿಕರವಿಲ್ಲದ ಧ್ವನಿಯಲ್ಲಿ ನುಡಿದ. "ಮೇಡಂ, ನಾವು ದಿನಕ್ಕೆ ಹತ್ತಾರು ಜನಗಳನ್ನು ಅರೆಸ್ಟ್ ಮಾಡುತ್ತೇವೆ. ನಿಮ್ಮ ಪ್ರಕಾರ, ನಿಮ್ಮ ಮೇಲೆ ಆಸಿಡ್ ಹಾಕಿದ ತಕ್ಷಣ, ನೀವು ಕಣ್ಣು ಮುಚಿಕೊಂಡೆನೆಂದು, ನೀವೇ ಹೇಳುತ್ತಿದ್ದೀರಿ. ನೀವು ಅವನ ಮುಖವನ್ನೇ ನೋಡಿಲ್ಲ. ಹೀಗಿರೋವಾಗ, ನೀವು ಅವನನ್ನು ಗುರುತಿಸುವುದಾದರೂ ಹೇಗೆ? ಆದದ್ದಾಗಿ ಹೋಗಿದೆ ಸುಮ್ಮನೆ ಇದನ್ನು ಇಲ್ಲ್ಗೆ ಬಿಟ್ಟಿಬಿಡಿ. ನಮಗೆ ನೂರಾರು ಇಂಪಾರ್ಟೆಂಟ್ ಕೇಸುಗಳಿವೆ.”

ಕಾನ್ಸ್ಟೇಬಲ್ ಮಾತನ್ನು ಕೇಳಿ ಹುಡುಗಿ ಕೆಲಕಾಲ ಚಿಂತಿಸಿ ಹೇಳಿದಳು. "ಹೌದು, ನೀವು ಆರೋಪಿಗಳನ್ನು ಅರೆಸ್ಟ್ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಾಗ, ಅವರನ್ನು ವಿಚಾರಣೆ ಮಾಡುವ ಸಮಯದಲ್ಲಿ, ಅದನ್ನು ರೆಕಾರ್ಡ್ ಮಾಡುವುದಿಲ್ಲವಾ?"

ಗಹಗಹಿಸಿ ನಗುತ್ತ ಹೇಳಿದ ಕಾನ್ಸ್ಟೇಬಲ್. "ಮೇಡಂ, ಇದು ಅಮೇರಿಕಾ ಅಲ್ಲ. ಹಾನ್, ಕೆಲವು ಸಾರಿ, ವಿಡಿಯೋ ರೆಕಾರ್ಡಿಂಗ್ ಮಾಡುವುದುಂಟು. ಆದರೆ ಅದು ತುಂಬಾ ಕಾಂಫಿಡೆಂಟಿಯಾಲ್. ಹಾಗೆ ಜನರಲ್ ಪಬ್ಲಿಕ್ಕಿಗೆಲ್ಲ ತೋರಿಸುವುದಕ್ಕಾಗುವುದಿಲ್ಲ."

ಹುಡುಗಿ ಎಷ್ಟೇ ಕೇಳಿಕೊಂಡರೂ, ಕಾನ್ಸ್ಟೇಬಲ್ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಸಾಕಾಗಿ ಹೇಳಿದ ಅವನು. "ಒಂದ್ ಸಾರಿ ನಮ್ಮ ಸಾಹೇಬರಹತ್ರ ಕೇಳಿ ನೋಡಿ. ಅವ್ರು ಒಪ್ಪಿಕೊಂಡ್ರೆ, ನಿಮ್ ಕೆಲಸ ಆಗತ್ತೆ."

ಹುಡುಗಿಯನ್ನು ಅಡಿಯಿಂದ ಮುಡಿಯವರೆಗೂ ನೋಡಿದ ಇನ್ಸ್ಪೆಕ್ಟರ್ ಬಾಯಿ ಚಪ್ಪರಿಸುತ್ತ ಹೇಳಿದ

"ಹೌದು. ನಮ್ಮ ಕಾನ್ಸ್ಟೇಬಲ್ ಹೇಳಿದ ಹಾಗೆ, ಎಲ್ಲರಿಗೂ ತೋರಿಸಿಲಿಕ್ಕಾಗುವುದಿಲ್ಲಾ. ಆದರೆ, ನಿನ್ನ ವಿಷ್ಯದಲ್ಲಿ, ಸ್ವಲ್ಪ ರಿಯಾಯಿತಿ ಕೊಡಬಹುದೇನು. ಆದರೆ, ನನಗೇನು ಸಿಗತ್ತೆ ಅದರಿಂದ? ಒಂದ್ ಕೆಲಸ ಮಾಡು.. ನಾಳೆ ಸಂಜೆ 8 ಘಂಟೆಮೇಲೆ ಬಾ…. ಹಾನ್, ಮುಖ ಕವರ್ ಆಗಿರ್ಲಿ ಪರವಾಗಿಲ್ಲ…. ಆದರೆ…ಮುಖ ಮಾತ್ರ. ಜ್ಞಾಪಕ ಇರಲಿ." ಗಹ ಗಹಿಸುತ್ತಾ ಹೇಳಿದ ಇನ್ಸ್ಪೆಕ್ಟರ್, 

ವಿಡಿಯೋ ಆನ್ ಮಾಡುವುದಕ್ಕೆ ಹೇಳಿ, ಕಣ್ಣು ಮುಚ್ಚಿ ಏಕಾಗ್ರತೆಯಿಂದ, ಪ್ರತಿಯೊಂದು ಶಬ್ದವನ್ನು ಕೇಳಿಸಿಕೊಂಡಳು, ಹುಡುಗಿ. ಅವಳ ಮುಖಕ್ಕೆ ಆಸಿಡ್ ಎರಚಿದ ದಿನ ಆ ಪೊಲೀಸ್ಸ್ಟೇಷನ್ನಲ್ಲಿ 7 ಮಂದಿಯನ್ನು ರೌಂಡ್ ಅಪ್ ಮಾಡಿದ್ದರು. ಅವಳು ಕೇಳಿಸಿಕೊಳ್ಳುವಾಗ ಒಂದು ಧ್ವನಿ ಪರಿಚಿತವೆನ್ನಿಸಿ ಅದನ್ನು ಮತ್ತೆ ಮತ್ತೆ ಕೇಳಿದಳು. 25 ವರ್ಷದ ಹುಡುಗನನ್ನು ಪೊಲೀಸರು ಘಟನೆ ನಡೆದ ದಿನವೇ ಬಂಧಿಸಿದ್ದರು; ಬೇರೆ ಯಾವುದೋ ಜಗಳದಲ್ಲಿ, ಆ ಹುಡುಗ ಹೊಡೆದಾಡಿ ಒಂದು ಕಾಲು ಕಳೆದುಕೊಂಡಿದ್ದ.

ಇನ್ಸ್ಪೆಕ್ಟರ್ ಕಡೆ ನೋಡುತ್ತಾ ನುಡಿದಳು ಹುಡುಗಿ. “ಇವನೇ ಅವನು!

ಅಂದು ಅವನು ಆಸಿಡ್ ಸುರಿಯುವಾಗ ಕಿರುಚಿದ ಧ್ವನಿ ಇನ್ನು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲಿದೆ. ದಯವಿಟ್ಟು, ಆ ಹುಡುಗನ ಡೀಟೇಲ್ಸ್ ನನಗೆ ಕೊಡಿ ಸರ್.”

ಅಂದು ಶುರುವಾದ ಅವಳ ಆ ಪಯಣ ಇಂದು, 12 ವರ್ಷಗಳ ನಂತರ ಕೊನೆಗೊಳ್ಳಲಿದೆ. ಈ 12 ವರುಷಗಳಲ್ಲಿ ಅವಳು ಪಟ್ಟ ಯಾತನೆ, ನೋವು ಅಷ್ಟಿಷ್ಟಲ್ಲ. ಕೊನೆಗೂ ತನ್ನ ಜೀವನ ಹಾಳುಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಅವಳು ಸಫಲತೆಯನ್ನು ಪಡೆದದ್ದಸ್ಟೇ ಅಲ್ಲದೆ, ಅವನಿಗೆ ಕೊಡಬೇಕಾದ ಶಿಕ್ಷೆಯನ್ನು ಕೂಡ ತಯ್ಯಾರಿ ಮಾಡಿಕೊಂಡಿದ್ದಳು

ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡಳು; ಮಧ್ಯಾಹ್ನ 4 ಘಂಟೆಗೆ ಇನ್ನು 10 ನಿಮಿಷಗಳಿತ್ತು. ಬಸ್ ಹೊರಡುವುದು, ರಾತ್ರಿ 8.30ಕ್ಕೇ. ಸೂಟ್ಕೇಸ್ನಲ್ಲಿ ತನ್ನ ಬಟ್ಟೆಗಳನ್ನು ಜೋಡಿಸಿಕೊಂಡಳು. ಹಾಗೆ, ವ್ಯಾನಿಟಿ ಬಾಗ್ನಲ್ಲಿದ್ದ, ಪೇಪರ್ ಕಟ್ಟಿಂಗ್ಸ್ ಗಳೆನ್ನವಲ್ಲೂ, ಸೂಟಕೇಸ್ನಲ್ಲಿ ಭದ್ರ ಪಡಿಸಿದಳು.

ಲಕ್ಸುರಿ ಸ್ಲೀಪರ್ ಬಸ್ಸಿನಲ್ಲಿ ಮಲಗಿ, ಕಣ್ಣುಮುಚ್ಚಿದಳು. ಕೆಲವೇ ಕ್ಷಣಗಳಲ್ಲಿ ಹಾಳಾದ ತನ್ನ ಜೀವನವನ್ನೇ ಬದಲಾಯಿಸಿದ ಆ ಘಟನೆ ಯನ್ನ ನೆನೆದು ನಡುಗಿದಳು. ಈ ಹನ್ನೆರಡು ವರುಷದ ಪ್ರತಿ ದಿನವೂ ಪ್ರತೀಕಾರದ ಕಿಚ್ಚಿನಲ್ಲಿ ಬೆಂದು, ಅವಳ ದೇಹ ಹಾಗು ಮನಸ್ಸು ಎರಡೂ ಬರಡಾಗಿದ್ದವು.

ಬೀರುವಿನ ಮುಂದೆ ನಿಂತು ಡ್ರೆಸ್ಸಿಗಾಗಿ ಹುಡುಕಾಡಿದವಳಿಗೆ ಕೈಗೆ ಸಿಕ್ಕಿದ್ದು 12 ವರ್ಷಗಳ ಕೆಳೆಗೆ ಆಸಿಡ್ ಅಟ್ಯಾಕ್ ಆದ ದಿನ ತೊಟ್ಟಿದ್ದ ಚೂಡಿದಾರ್ ; ಅದನ್ನೇ ಧರಿಸಿ ಹೊರಟಿದ್ದಳು ಪ್ರತೀಕಾರಕ್ಕಾಗಿ!

ಡ್ರೈವರ್ ಬಂದು ಅವಳನ್ನೆಬ್ಬಿಸಿದಾಗಲೇ ತಿಳಿದಿದ್ದು ಊರು ಬಂದಾಯಿತೆಂದು. ಸೂಟ್ಕೇಸ್ ಹಿಡಿದು, ತನ್ನ ಸುತ್ತ ಮುತ್ತಾ ಬಂದ ಆಟೋ ಡ್ರೈವೇರ್ಗಳನ್ನು ಲೆಕ್ಕಿಸದೆ, ಸುತ್ತಲೂ ನೋಡಿದಳು, ಒಳ್ಳೆಯ ಒಂದು ಹೋಟೆಲ್ಲಿಗಾಗಿ. ಮುಖ ತೊಳೆದು, ಟೀ ಆರ್ಡರ್ ಮಾಡಿ, ತನ್ನ ವ್ಯಾನಿಟಿ ಬ್ಯಾಗ್ ನಿಂದ ತೆಗೆದ ಡೈರಿಯಲ್ಲಿ ಅಡ್ರೆಸ್ ಮತ್ತೊಮ್ಮೆ ಚೆಕ್ ಮಾಡಿದಳು. ಹಾಗೆ, ತಾನು ಮಾಡಬೇಕಾಗಿರುವ ಎಲ್ಲ ಕೆಲಸಗಳು, ಆಡಬೇಕಾದ ಮಾತುಗಳನೆಲ್ಲವನ್ನು ಒಮ್ಮೆ ಮೆಲುಕು ಹಾಕಿ, ಆಟೋ ರಿಕ್ಷಾ ಹತ್ತಿ, ಅಡ್ರೆಸ್ ಹೇಳಿ ಕುಳಿತಳು.

ತಾನು ಹೋಗಬೇಕಾದ ಮನೆಗೆ ಸ್ವಲ್ಪ ಮುಂಚೆಯೇ ಇಳಿದು, ರಿಕ್ಷಾದವನಿಗೆ ಹಣಕೊಟ್ಟು ಅವನು ತಿರುಗಿ ಹೋಗುವವರೆಗೂ ಕಾದಿದ್ದು, ಡೈರಿ ಕೈಲಿ ಹಿಡಿದು, ಅಡ್ರೆಸ್ ಹುಡುಕುತ್ತ, ಆ ಮನೆಯ ಮುಂದೆ ಬಂದು ನಿಂತು, ಇನ್ನೊಮ್ಮೆ ಅಡ್ರೆಸ್ ಸರಿಯಿದೆಯೆಂದು, ಚೆಕ್ ಮಾಡಿ, ಗೇಟ್ ಶಬ್ದ ಬಾರದಂತೆ ನಿಧಾನವಾಗಿ ತೆಗೆದಳು.

ತಾನು 12 ವರ್ಷಗಳಿಂದ ಕಾದು ಕುಳಿತಿದ್ದ ಆ ಕ್ಷಣ ಬಂತೆಂದು ತಿಳಿದು, ಕಾಲಿಂಗ್ ಬೆಲ್ ಸ್ವಿಚ್ ಎಲ್ಲೂ ಕಾಣದಿದ್ದರಿಂದ, ಉಸಿರು ಬಿಗಿ ಹಿಡಿದು ಮೆಲ್ಲನೆ ಬಾಗಲನ್ನು ಬಡಿದಳು.

ಎಂದಿನಂತೆ, ದುಪಟ್ಟಾದಿಂದ ಅವಳ ಮುಖ ಕಣ್ಣನ್ನು ಬಿಟ್ಟು ಪೂರ್ತಿಯಾಗಿ ಮುಚ್ಚಿತ್ತು.

ಕಣ್ಣುಗಳು ಬೆಂಕಿಯ ಕಿಡಿ ಕಾರುತ್ತಿತ್ತು.

ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದದುದರಿಂದ, ಮತ್ತೊಮ್ಮೆ ಬಾಗಿಲು ಬಡಿದಳು; ಈ ಸಾರಿ ಸ್ವಲ್ಪ ಜೋರಾಗಿ.

ಒಳಗಿನಿಂದ, ಹೆಜ್ಜೆಯ ಸಪ್ಪಳ ಕೇಳಿ ಬಂತು.

ಬಾಗಿಲು ತೆರೆದವನು ಒಬ್ಬ ಮಧ್ಯ ವಯಸ್ಸಿನ, ಲುಂಗಿಯನ್ನಿಟ್ಟು, ದೊಗಲೆ ಜುಬ್ಬಾ ತೊಟ್ಟು, ಮುಖದ ತುಂಬಾ ಗಡ್ಡ ಬೆಳೆಸಿಕೊಂಡಿದ್ದ ವ್ಯಕ್ತಿ. ಅವನು ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟಿದ್ದ.

"ಯಾರು. ಯಾರು ಬೇಕು ನಿಮಗೆ," ಹುಡುಗಿಯನ್ನೇ ನೋಡುತ್ತಾ ಕೇಳಿದ ಅವನು. ಹುಡುಗಿ, ಅವನ ಮುಖವನ್ನು ಹೆಚ್ಚಿಗೆ ಗಮನಿಸದೆ, ಅವನಾಡಿದ ಮಾತನ್ನು ಕೇಳಿಸಿಕೊಂಡಳು. ಹೌದು, ಅದೇ ಧ್ವನಿ, ಯಾವಾಗಲೂ, ತನ್ನ ಕಿವಿಯಲ್ಲಿ ಪ್ರತಿಧ್ವನಿಸುವ ಆ ಧ್ವನಿಯೇ ಇದು ಎಂದು, ಹುಡುಗಿ ಅವನನ್ನು ಪಕ್ಕಕ್ಕೆ ಸರಿಸಿ, ಒಳಗೆ ಹೋದಳು.

ಅದೊಂದು ಚಿಕ್ಕ ಮನೆ. ಒಂದು ಬೆಡ್ರೂಮ್; ಹಾಲಿಗೆ ಸೇರಿದಂತೆ ಇರುವ ಅಡುಗೆ ಮನೆ, ಸ್ಪ್ರಿಂಗ್ ಹೊರಬಂದಿರುವ ಸೋಫಾ ಹಾಗು, ಧೂಳಿನಿಂದ ಕೂಡಿದ ಟೀಪಾಯ್. ಪೈಂಟ್ ಮಾಡಿ, ಆ ಮನೆಗೆ ದಶಕಗಳೇ ಕಳೆದಿದ್ದವು. ಗೋಡೆಗಳಲ್ಲಿ ಬಿರುಕುಗಳಿದ್ದವು. ಅಡುಗೆ ಮನೆಯಲ್ಲಿ, ಕೆಲವು ಪಾತ್ರೆ ಹಾಗು ಒಂದೆರಡು ಡಬ್ಬಗಳು ಮಾತ್ರವಿದ್ದವು.

ಗೋಡೆಯ ಮೇಲೆ ಯಾವ ಭಾವ ಚಿತ್ರಗಳು ಇರಲಿಲ್ಲಾ.

ಹುಡುಗಿಗೆ, ತಾನು ಸರಿಯಾದ ಜಾಗಕ್ಕೆ ಬಂದಿದ್ದೇನೆಂಬ ಖಾತ್ರಿ ಬೇಕಿತ್ತು. ಸೋಫಾ ಮೇಲೆ ಕುಳಿತು, ವ್ಯಾನಿಟಿ ಬ್ಯಾಗ್ ನನ್ನ ಹತ್ತಿರವೇ ಇಟ್ಟುಕೊಂಡಳು.

ಅವನು ನಿಧಾನವಾಗಿ ನಡೆದು ಬಂದು ಎದುರಿನ ಸೋಫಾಮೇಲೆ ಕುಳಿತ. ಬಾಗಿಲು ತೆರೆಯುವಾಗ ಒಳಗಿನಿಂದ ಬಂದ ಶಬ್ದದ ಕಾರಣ ಹುಡುಗಿಗೆ ಈಗ ಗೊತ್ತಾಯಿತು; ಅವನಿಗೆ ಇದ್ದದ್ದು ಒಂದೇ ಕಾಲು. ಇನ್ನೊಂದು ಕಾಲಿನ ಬದಲು, ವಾಕಿಂಗ್ ಸ್ಟಿಕ್ ಹಿಡಿದು ನಡೆದು ಬಂದಿದ್ದ.

"ಯಾರು ನೀವು? ಹೀಗೆ ನನ್ನನ್ನು ಪಕ್ಕಕ್ಕೆ ತಳ್ಳಿ ಒಳಗೆ ಬಂದಿದ್ದರ ಅರ್ಥವಾದರೂ ಏನು? ಏನು ಬೇಕು ನಿಮಗೆ?" ನಿಧಾನವಾದ ಧ್ವನಿಯಲ್ಲಿ ಕೇಳಿದ.

ಹುಡುಗಿ ಗಮನ ವಿಟ್ಟು ಕೇಳಿದಳು ಆ ಧ್ವನಿಯನ್ನು; ಸರಿಯಾದ ಸ್ಥಳಕ್ಕೇ ಬಂದಿದ್ದೇನೆಂದು ಅವಳಿಗೆ ಈಗ ಖಚಿತವಾಯಿತು.

"ನಾನು ಯಾರೆಂದು ಹೇಳಬೇಕೇ? ಹೇಳಿದರೂ, ನೀನು ನನ್ನನ್ನು ಗುರುತಿಸಿವುದಾದರೋ ಹೇಗೆ? ಕಳೆದ 12 ವರ್ಷಗಳಿಂದ, ಇಂದಿನ ಹಾಗೆ, ಪ್ರತಿ ದಿವಸವೂ, ಮುಖವನ್ನು ಮುಚ್ಚಿಕೊಂಡೇ ಬರುತ್ತಿದ್ದೇನೆ." ಮುಖಕ್ಕೆ ಸುತ್ತಿದ್ದ ದುಪಟ್ಟಾ ನಿಧಾನವಾಗಿ ತೆಗೆದು ತನ್ನ ವಿಕಾರ ವಾದ ಮುಖವನ್ನು ತೋರಿಸಿದಳು. 

ಅವನು ಸುಮ್ಮನೆ ಅವಳ ಮುಖವನ್ನೇ ನೋಡಿದ. ಯಾವ ಪ್ರತಿಕ್ರಿಯೆಯೂ ಇಲ್ಲದೆ.

"ಈಗ ಹೇಳು. ಗೊತ್ತಾಯಿತೇ? ನಾನು ಯಾರೆಂದು." ಕಿರುಚುವ ಧ್ವನಿಯಲ್ಲಿ ಹೇಳಿದಳು ಹುಡುಗಿ.

ಅವನ ಮೌನ ಅವಳನ್ನು ಇನ್ನು ರೊಚ್ಚಿಗೆಬ್ಬಿಸಿತು. ವ್ಯಾನಿಟಿ ಬ್ಯಾಗನ್ನು ನಿಧಾನ ವಾಗಿ ತನ್ನೆಡೆಗೆ ಎಳೆದುಕೊಂಡು, ದುಪಟ್ಟದಲ್ಲಿ ಅದನ್ನು ಮುಚ್ಚಿ, ಅವನಿಗೆ ಕಾಣಿಸದಂತೆ, ಒಳಗಿನಿಂದ, ಆ ಬಾಟಲಿಯನ್ನು ಹೊರ ತೆಗೆದಳು.

“ಸರಿಯಾಗಿ ಕಣ್ಣು ಬಿಟ್ಟು ನೋಡು; 12 ವರ್ಷದ ಕೆಳೆಗೆ ಕೇವಲ ಎರಡೇ ನಿಮಿಷದಲ್ಲಿ, ನೀನು ಮಾಡಿದ ಅಪರಾಧವನ್ನು. ನನಗೆ ಚೆನ್ನಾಗಿ ಗೊತ್ತು; ನಿನ್ನ ಈ ಹೀನ ಕೃತ್ಯಕ್ಕೆ ಬಲಿಯಾದವಳು ನಾನೊಬ್ಬಳೇ ಅಲ್ಲಅಂತ.” ಕಣ್ಣಿನಿಂದ ಕಿಡಿ ಕಾರುತ್ತಾ ನುಡಿದಳು.

 "ನಿಂಗೊತ್ತಾ? ಆಸಿಡ್ ಮುಖದ ಮೇಲೆ ಬಿದ್ದಾಗ ಏನಾಗತ್ತೆ ಅಂತ? ಧಗ ಧಗ್ಗನೆ ಉರೀತೀರೋ ಕಲಿಜ್ಜಲು ಮುಖದ ಮೇಲೆ ಬಂದು ಅಪ್ಪಳಿಸಿದಂತಾಗುವ ಆ ವೇದನೆ, ಆಸಿಡ್ ಸುರಿಯುವ ನಿನ್ನಂತಾ ರಾಕ್ಷಸರಿಗೆ ಹೇಗೆ ಗೊತ್ತಾಗಬೇಕು?"

ದುಃಖ್ಖ ತಡೆಯಲಾಗದೆ, ಗಳ ಗಳನೆ ಅತ್ತಳು ಹುಡುಗಿ.

ಅವನು ಏನನ್ನು ಹೇಳದೆ ಸುಮ್ಮನಿದ್ದ.

ಕಣ್ಣೊರೆಸಿಕೊಂಡು, ಎದ್ದು ನಿಂತಳು ಹುಡುಗಿ. "ನಾನು ಕಳೆದ 12 ವರ್ಷದಲ್ಲಿ ಅನುಭವಿಸಿದ ನೋವು, ಸಮಾಜದಿಂದ ನನಗೆ ದೊರೆತ ತಿರಸ್ಕಾರ ಇದೆಲ್ಲವನ್ನು ಸಹಿಸಿಕೊಂಡಿದ್ದು ಯಾಕೆ ಗೊತ್ತಾ? ನೀನು ಸಿಕ್ಕ ಕೂಡಲೇ, ಕತ್ತು ಹಿಚುಕಿ ಸಾಯಿಸೋದಿಕ್ಕೆ. ಆದರೆ ಒಂದು ದಿನ ನನಗರಿವಾಯಿತು; ನನ್ನ ಜೀವನ ಹಾಳುಮಾಡಿದ ನಿನಗೆ ಅಷ್ಟು ಸುಲಭವಾದ ಶಿಕ್ಷೆ ಕೊಡಬಾರದೆಂದು. ಅದಿಕ್ಕೆ,” ತಾನು ತಂದಿದ್ದ ಬಾಟಲಿಯ ಮುಚ್ಚಳ ತೆಗೆಯುತ್ತಾ ಹೇಳಿದಳು ಹುಡುಗಿ. "ಈ ಆಸಿಡ್ ನಿನ ಮುಖದ ಮೇಲೆ ಎರಿಚಿ, ನನಗಾದ ನೋವಿನ ಅನುಭವ ನಿನಗೂ ಕೊಡಬೇಕು ಅಂತ."

ಹುಡುಗಿ ಬಾಟಲಿಯಲ್ಲಿದ್ದ ಆಸಿಡ್ ಅವನ ಮುಖದ ಮೇಲೆ ಎರಚಬೇಕೆನ್ನುವಷ್ಟರಲ್ಲಿ, ಅವನು ಇದುವರೆಗೂ ಯಾವ ಪ್ರತಿಕ್ರಿಯೆಯನ್ನು ಕೊಡದ್ದಿದ್ದನ್ನುನೋಡಿ, ಅನುಮಾನ ಬಂದು ಬಾಟಲಿ ಕೆಳಗಿಳಿಸಿದಳು ಹುಡುಗಿ.

ಅವನು ಸುಮ್ಮನೆ ಅವಳನ್ನೇ ನೋಡುತ್ತಿದ್ದ.

"ಮೊದಲಿಗೆ, ನೀನು ಕಣ್ಣಿಗೆ ಹಾಕಿಕೊಂಡಿರೋ ಆ ಕನ್ನಡಕ ತೆಗಿ. ನಾನು ಆಸಿಡ್ ಎರೆಚುವುದನ್ನು ನಿನ್ನ ಕಣ್ಣಿಂದ ನೋಡುತ್ತಿರಬೇಕು."

ಅವನು ನಿಧಾನ ವಾಗಿ ಎದ್ದು ನಿಂತು, ತನ್ನ ಕನ್ನಡಕ ತೆಗೆದ.

ಕಣ್ಣುಗಳಿರಬೇಕಾದ ಜಾಗದಲ್ಲಿ, ಎರಡು ಗುಳಿಗಳು ಮಾತ್ರವಿದ್ದವು. 

ಅವನು ಸಂಪೂರ್ಣ ಅಂಧನಾಗಿದ್ದ!

ಮೊಟ್ಟ ಮೊದಲ ಬಾರಿಗೆ, ಅವನು ಮಾತನಾಡಿದ; "ನಿನಗೆ ಈಗಾಗಲೇ ಗೊತ್ತಾಗಿರಬೇಕು, ನಾನೊಬ್ಬ ಅಂಧ, ನಡೆಯಲು ಇರುವುದು ಒಂದೇ ಕಾಲು ಅಂತ. ಇದೆಲ್ಲದರ ಜೊತೆ, ನನ್ನ ಮುಖಕ್ಕೆ ಆಸಿಡ್ ಹಾಕಬೆಂದಿದ್ದರೆ, ನಾನು ನಿನ್ನನ್ನು ತಡೆಯುವುದಿಲ್ಲ. ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ನೀನು ಹೇಳಿದ ಹಾಗೆ, 12 ವರ್ಷದ ಕೆಳೆಗೆ, ನಾನು ಮಾಡಿದ ಆ ಹೀನ ಕೃತ್ಯವನ್ನು ಈ ಆಸಿಡ್ನಿಂದ ಕೂಡ ತೊಳೆಯಲಾಗದು. ನೀನು ನಂಬಿದರೆ ನಂಬು, ಬಿಟ್ಟರೆ ಬಿಡು. ಆಸಿಡ್ ದಾಳಿ ಆದ ನಂತರ ನಾನು ನಿನ್ನನ್ನು ಹುಡುಕದ ಜಾಗವೇ ಇಲ್ಲ."

ಹುಡುಗಿ ಚೇತರಿಸಿಕೊಂಡು ನುಡಿದಳು, "ಯಾಕೆ? ನನ್ನ ಹುಡುಕಿದ್ದಾದರೋ ಯಾಕೆ? ನನ್ನ ಪೂರ್ತಿ ದೇಹವನ್ನು ಆಸಿಡ್ ನಿಂದ ಸುಡುವುದಕ್ಕೇನು?"

ಸಮಾಧಾನದ ಸ್ವರದಲ್ಲಿ ಹೇಳಿದ "ಖಂಡಿತ ಇಲ್ಲ. ನಾನು ನಿನ್ನನ್ನು ಹುಡುಕಿದ್ದು, ನಿನ್ನ ಕಾಲಿಗೆ ಬಿದ್ದು ಕ್ಷಮೆಯಾಚಿಸಲೆಂದು. ಮತ್ತೆ, ನೀನು ಯಾವ ಶಿಕ್ಷೆ ಕೊಟ್ಟರೂ ಅದನ್ನು ಅನುಭವಿಸಲೆಂದು."

ಅವನು ಹೇಳುತ್ತಿರುವುದು ಸತ್ಯವೋ ಅಥವಾ ಸುಳ್ಳು ಎಂದು ತಿಳಿಯಲೆಂದು, ಹುಡುಗಿ, ಅವನನ್ನೇ ಸೂಕ್ಷ್ಮವಾಗಿ ಗಮನಿಸಿದಳು. 

ಅವಳ ಇಂಗಿತವನ್ನರಿತವನಂತೆ ನುಡಿದ; "ನಾನು ನಿನ್ನ ಜಾಗದಲ್ಲಿದ್ದಿದ್ದರೆ, ನಿನ್ನಂತೆ ನಾನು ಅನುಮಾನ ಪಡುತ್ತಿದ್ದೆ. ಆದರೆ, ನಾನು ಹೇಳಿದ್ದು ಸತ್ಯ. ಅಷ್ಟೇ ಅಲ್ಲ, ನನಗೆ ತಿಳಿದಿತ್ತು, ಒಂದಲ್ಲ ಒಂದು ದಿನ, ನೀನು ನನ್ನನ್ನು ಹುಡುಕಿಯುವೆಯೆಂದು." ಸೋಫಾದ ಮೇಲೆ ತಪ್ಪನೆ ಕುಳಿತ. ಅವನ ಕಣ್ಣಿನ ಕುಳಿಕೆಗಳಿಂದ, ನೀರು ಬರ ತೊಡಗಿತು.

ಒಂದು ಕ್ಷಣ, ಆ ಹುಡುಗಿಗೆ ಅವನ ಮೇಲೆ ಕನಿಕರ ಹುಟ್ಟಿತು. ಆದರೆ ತತ್ಕ್ಷಣ ಮನಸ್ಸು ಖಠಿಣಮಾಡಿಕೊಂಡು, ನುಡಿದಳು. "ನೀನು ಆಸಿಡ್ ಹಾಕಿದ್ದು ಯಾಕೆಂದು ಇನ್ನೂ ಹೇಳಲಿಲ್ಲ.

ಕಳೆದ 12 ವರ್ಷಗಳಲ್ಲಿ ಸರಿಯಾಗಿ ನಾನು ನಿದ್ದೆ ಮಾಡಿದ್ದೇ ಇಲ್ಲ. ನನ್ನ ಮದುವೆ ಮುರಿದು ಬಿತ್ತು, ನನ್ನ ಪಾಲಿಗೆ ನನ್ನವರೂ ಅಂತ ಇದ್ದ ನನ್ನ ತಾಯಿ ಆತ್ಮ ಹತ್ಯೆ ಮಾಡಿಕೊಂಡರು. ನಾನು ಎಷ್ಟೋ ಸಾರಿ ಜೀವ ಕಳೆದುಕೊಳ್ಳಬೇಕೆಂದುಕೊಂಡರೂ, ನನ್ನಲ್ಲಿ ಉರಿಯುತ್ತಿದ್ದ ಪ್ರತೀಕಾರದ ಜ್ವಾಲೆ ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ.

ಗೊತ್ತಾ ನಿನಗೆ? ನಂಗೆ ಬೇಕಾಗಿರುವುದು ಪ್ರತೀಕಾರ ಮಾತ್ರ." ಕಿರುಚಿ ಹೇಳಿದಳು ಹುಡುಗಿ.

"ನನಗೂ ಬದುಕುವ ಯಾವ ಆಸೆಯೂ ಇಲ್ಲ. ಹೋಗು, ಅಡುಗೆ ಮನೆಯಲ್ಲಿ ಒಂದು ಹರಿತವಾದ ಚಾಕು ಇದೆ. ದಯವಿಟ್ಟು ನನ್ನನ್ನು ಮುಗಿಸಿಬಿಡು. ನಾನು ಯಾವ ಅಡೆತಡೆಯನ್ನು ಮಾಡುವುದಿಲ್ಲಾ” ಯಾವ ಭಾವನೆಯೂ ಇಲ್ಲದೆ ಹೇಳಿದ.

"ಒಹ್? ಅಷ್ಟು ಸುಲಭವಾಗಿ ಸಾಯೋ ಆಸೇನ? ನಿನ್ನ ಚಾಕುವಿನಿಂದ ಸಾಯಿಸುವುದಾ?” ಹ... ಹ... ಹ...ಗಹ ಗಹಿಸಿ ನಕ್ಕಳು. "ಇದಕ್ಕಾಗೇ ಏನು ನಾನು 12 ವರ್ಷ ಕಾದಿದ್ದು? ಇಲ್ಲ….ನೀನು ಕೂಡ ನರಳಿ, ನರಳೀ ಸಾಯಬೇಕು. ಆವಾಗಲೇ ನನಗೆ ತೃಪ್ತಿ."

ನಿಧಾನ ವಾದ ಧ್ವನಿಯಲ್ಲಿ ಹೇಳಿದ. "ನೀನು ಯಾವ ಶಿಕ್ಷೆ ಕೊಟ್ಟರೂ ಅದು ನನಗೆ ಒಪ್ಪಿಗೆ. ಆದರೆ, ಶಿಕ್ಷೆ ಕೊಡುವುದಕ್ಕೆ ಮುಂಚೆ ನಾನು ಆ ಹೀನ ಕೆಲಸ ಮಾಡಿದ್ದಾದರೋ ಯಾಕೆ ಎಂದು ತಿಳಿದುಕೊಳ್ಳುವುದಿಲ್ಲವಾ?"

" ಅಲ್ಲಾ ನನಗು ನಿನಗೂ ಯಾವ ಸಂಭಂದವೂ ಇಲ್ಲ. ನಾನು ಯಾರೂ ಅಂತ ಕೂಡ ನಿನಗೆ ಗೊತ್ತಿರಿಲಲಿಲ್ಲ. ಅಪರಚಿತೆ ನಾನು. ಏನು ಕಾರಣವಿದ್ದೀತು?"

"ಪ್ಲೀಸ್? ನನ್ನಮಾತು ನಂಬು. ನೀ ಹೇಳಿದಂತೆ, ನೀನು ನನಗೆ ಅಪರಚಿತೆ. ಕೇವಲ ನಿನ್ನ ಫೋಟೋ ಮಾತ್ರ ತೋರಿಸಿದ್ದ ಅವನು. ಬಾಟಲಿ ನಲ್ಲಿ ಆಸಿಡ್ ಇರುವ ವಿಷಯ ಕೂಡ ಗೊತ್ತಿರಲಿಲ್ಲ. ಅದರಲ್ಲಿ ಮೂತ್ರ ಇದೆ, ಅವಳಿಗೆ ಅವಮಾನ ಮಾಡೋ ಉದ್ದೇಶ ಅಂತ ಸುಳ್ಳು ಹೇಳಿದ್ದ ಅವನು."

“ಏನೂ? ಛೀ, ಹಣಕ್ಕಾಗಿ ಈ ಕೆಲಸ ಮಾಡಿದೆಯಾ ನೀನು?" ಕಿರುಚಿದಳು.

"ಹಣಕ್ಕಾಗಿ ಅಲ್ಲ." ಮೊಟ್ಟ ಮೊದಲ ಬಾರಿಗೆ ಅವನು ಗಡಸು ಧ್ವನಿಯಲ್ಲಿ ಹೇಳಿದ. "ಅವನು ನನ್ನ ತಂಗಿಯನ್ನು ಹಿಡಿದಿಟ್ಟಿದ್ದ. ಅವಳ ಜೀವನ ಹಾಳು ಮಾಡುವುದಾಗಿ ಹೆದರಿಸಿದ್ದ. ಅವನು ಮೊದಲು ತೋರಿಸಿದ ಬಾಟಲಿಯಲ್ಲಿ ನಿಜವಾಗಲೂ ಮೂತ್ರದ ವಾಸನೆಯಿತ್ತು." ಜೋರಾಗಿ ಅಳ ತೊಡಗಿದ.

ಹುಡುಗಿ ಮಾತನಾಡದೆ ನಿಂತಳು. "ನೀನು ಹೇಳುತ್ತಿರುವುದೆಲ್ಲ ನಿಜವಾ? ನಡುಗುವ ಧ್ವನಿಯಲ್ಲಿ ಕೇಳಿದಳು.

"ಈ ಅವಸ್ಥೆಯಲ್ಲಿ ಸುಳ್ಳು ಹೇಳಿ ನಾನು ಸಾಧಿಸುವುದಾದರೋ ಏನು? ನನಗೆ ಬದುಕುವ ಆಸೆ ಖಂಡಿತ ಇಲ್ಲ. ದೇವರಿಗೆ ಗೊತ್ತು."

ಹುಡುಗಿ ಹತಾಶೆಯಿಂದ ಕೈ ಚೆಲ್ಲಿ ಕುಳಿತಳು. "ನಿನ್ನನ್ನು ಹುಡುಕಲು 12 ವರ್ಷಗಳಿಂದ ನಾನು ಪಟ್ಟ ಪಾಡು ನಿನಗೇನೂ ಗೊತ್ತು? ಪೊಲೀಸ್ ಇನ್ಸೆಕ್ಟರ್ ಕಡೆಯಿಂದ ನಿನ್ನ ಡೀಟೇಲ್ಸ್ ತೊಗೊಳಕ್ಕೆ, ನನ್ನ ದೇಹವನ್ನೇ ಕೊಟ್ಟೆ, ಆ ನೀಚನಿಗೆ." ಅಳುತ್ತ ಹೇಳಿದಳು.

ಕುಳಿತಿದ್ದವನು ಎದ್ದು ಹುಡುಗಿಯ ಹತ್ತಿರ ಬಂದು ಅವಳ ಕೈ ಗಟ್ಟಿಯಾಗಿ ಹಿಡಿದು ಅಳುತ್ತಾ ನುಡಿದ. "ಸಾಧ್ಯವಾದರೆ, ದಯವಿಟ್ಟು ನನ್ನನ್ನು ಕ್ಷಮಿಸು. ಆಸಿಡ್ ದಾಳಿಗೆ ಗುರಿಯಾದವರನ್ನು ನಾನು ನೋಡಿದ್ದೇ ಇಲ್ಲ. ನಿನ್ನ ಮೇಲೆ ಎರಿಚಿದಾಗ ಆದ ಪರಿಣಾಮ ನೋಡಿ ಜೋರಾಗಿ ಕಿರುಚಿದೆ.

ನನ್ನ ಕೈಯಲ್ಲಿ ಆ ಹೀನ ಕೆಲಸ ಮಾಡಿಸಿದವನನ್ನು ಮುಗಿಸಿ ಬಿಡಬೇಕೆಂದು ಹೋರಾಡಿದೆ. ಅವನು ನನ್ನ ಕಾಲು ಕತ್ತರಿಸಿದ; ನನ್ನ ಎರಡೂ ಕಣ್ಣು ಕಿತ್ತುಕೊಂಡ. ನನ್ನ” ಅಳುತ್ತಾ ಹೇಳಿದ “ತಂಗಿಯ ಶೀಲವನ್ನು ಉಳಿಸ ಲಿಲ್ಲ."

ಹುಡುಗಿ ಕಣ್ಣೊರೆಸಿಕೊಳ್ಳುತ್ತಾ ನುಡಿದಳು. "ನಿನ್ನ ಹತ್ತಿರ ಆ ಹೀನ ಕೆಲಸ ಮಾಡಿಸಿದವನು ಯಾರೆಂದಾದರೋ ಗೊತ್ತಾ ನಿನಗೆ?"

ಅವನು ಎದ್ದು ನಿಂತು ಅವಳೆಡೆಗೆ ನೋಡುತ್ತಾ ಹೇಳಿದ. "ಯಾರು ಅಂತಾನೂ ಗೊತ್ತು; ಮತ್ತು ಯಾಕೆ ಅಂತಾನೂ ಗೊತ್ತು."

ಹುಡುಗಿ ಆಶ್ಚರ್ಯದಿಂದ ನುಡಿದಳು. " ಏನೂ? ಯಾರೋ ಅಂತಾನೂ ಗೊತ್ತಾ? ಯಾರು ಆ ಪಾಪಿ?"

ಯಾವ ಭಾವನೆಯೂ ಇಲ್ಲದ ಧ್ವನಿಯಲ್ಲಿ ಹೇಳಿದ " ನಿನ್ನ ಜೀವನ ಹಾಳು ಮಾಡಿ, ನನ್ನನ್ನು ಈ ಪಾಪ ಕೂಪಕ್ಕೆ ತಳ್ಳಿದವನು ಬೇರೆ ಯಾರೂ ಅಲ್ಲ.

ತುಂಬಾ ಹಣವಿರುವ ಮನೆತನದ ಹೆಣ್ಣಿಗಾಗಿ, ನಿನ್ನನ್ನು ಹೇಗಾದರೂ ದೂರ ಮಾಡಬೇಕೆಂಬ ಉದ್ದೇಶ್ಯವಿದ್ದ …………ಆ ನಿನ್ನ ಪ್ರಿಯತಮ!”


Rate this content
Log in

Similar kannada story from Drama