ಬಾಡಿಗೆ ನಾಯಿ
ಬಾಡಿಗೆ ನಾಯಿ
ಬೆಂಗಳೂರಿನ ಬಹಳ ಜನನಿಬಿಡವಾದ ಪ್ರದೇಶಲ್ಲಿದ್ದ ಆ ಅಂಗಡಿಯ ರಸ್ತೆಯ ಆ ಬದಿಯಲ್ಲಿ ನಿಂತು ಅಂಗಡಿಯ ಕಡೆ ನೋಡಿದೆ. ಬಾಗಿಲು ಆಗತಾನೆ ತೆಗೆದ ಹಾಗಿತ್ತು; ಅಂಗಡಿಯ ಮಾಲೀಕ, ಒಳಗಿನಿಂದ, ಒಂದೊಂದೇ ಪ್ರಾಣಿಗಳನ್ನು ತಂದು, ಅಂಗಡಿಯ ಮುಂದಿದ್ದ, ಪ್ರಾಣಿಗಳಿಗೆಂದೇ ಮಾಡಿದ್ದ ಕಟಕಟೆಯಲ್ಲಿಡುತ್ತಿದ್ದ.
ನಾನು ಬಹಳವೇ ಬೇಗ ಬಂದೆನೆಂದು ಸ್ವಲ್ಪ ಅಂಜುತ್ತಾ, ಅಂಗಡಿಯ ಒಳಗೆ ಇಣುಕಿ ನೋಡಿದೆ.
ಅಲ್ಲಿ ಇರದಿದ್ದ ಪ್ರಾಣಿಗಳೇ ಇಲ್ಲ; ವಿಧವಿಧ ವಾದ ನಾಯಿಗಳು, ಮೊಲ, ಬೋನಿನಲ್ಲಿ ಕುಳಿತು ಕಿರುಚುತ್ತಿದ್ದ ಗಿಳಿ! ಒಂದು ಪುಟ್ಟ ಕಾಡಿನೊಳಗೆ ಹೋದಂತಿತ್ತು.
ಅಂಗಡಿಯ ಮಾಲೀಕ, ನನ್ನನ್ನು ನೋಡಿ ತನ್ನ ಪೊದೆಯೆಂತೆ ಬೆಳೆದಿದ್ದ ಹುಬ್ಬೇರಿಸಿದ.
"ಹೇಳಿ ಸಾರ್? ಏನ್ ಬೇಕು ನಿಮಗೆ?"
"ಸಾರ್, ನನಗೆ ಒಂದು ನಾಯಿ...." ತಡವರಿಸುತ್ತ ನುಡಿದೆ "ಬೇಕಿತ್ತು"
ಹಳೆ ಕನ್ನಡ ಸಿನಿಮಾದ ಖಳ ನಾಯಕನಂತೆ ನಗುತ್ತ ಹೇಳಿದ ಅಂಗಡಿಯಾತ.
"ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಯಾವ ರೀತಿಯ ನಾಯಿ ಬೇಕಿತ್ತು ನಿಮಗೆ?"
ಅಂಗಡಿಯಲ್ಲಿ ಕಿರುಚುತ್ತಿದ್ದ ಪಕ್ಷಿಗಳು, ಮುಲುಗುತ್ತಿದ್ದ ಮೊಲಗಳು, ನನ್ನ ಹತ್ತಿರ ಬಂದು ಮೂಸುತಿದ್ದ ನಾಯಿಗಳು; ಒಹ್, ನಾನು ಯಾಕಾದರೂ ಬಂದೆನೆಂದು ಪಶ್ಚಾತ್ತಾಪ ಪಡುತ್ತಾ, ಅಂಗಡಿಯಾತನನ್ನು ನೋಡುತ್ತಾ ಹೇಳಿದೆ.
"ಸ್ವಾಮಿ, ನನಗೆ ನಾಯಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯಿಲ್ಲ; ಯಾವುದಾದರೋ ಒಂದು ಸಾಧಾರಣ ನಾಯಿ ಬೇಕಿತ್ತು ಕೆಲವು ದಿನಗಳ ಕಾಲ ಬಾಡಿಗೆಗೆ."
ಅಂಗಡಿಯಾತ, ನನ್ನ ಪೂರ್ತಿಮಾತನ್ನು ಕೇಳಿಸಿಕೊಳ್ಳಲಿಲ್ಲ; "ಸಾರ್, ನಿಮಗೆ ಬೇಕಾದ ವೆರೈಟಿ ನಮ್ಮಲ್ಲಿದೆ. ಜರ್ಮನ್ ಶೆಫರ್ಡ್, ಡಾಬರ್ಮಾನ್, ಲ್ಯಾಬ್ರಡಾರ್ , ರೋಟ್ಟ್ವಿಲ್ಲೆರ್ ಅಥವಾ, ಇಟಾಲಿಯನ್ ಗ್ರೆಯ್ಹೊಂಡ ಹೇಳಿ ಯಾವುದು ಬೇಕು? ಅಷ್ಟೇ ಅಲ್ಲ, ನಮ್ಮಲ್ಲಿ ಬಹಳ ಜನಪ್ರಿಯವಾದ ಪೊಮೇರಿಯನ್....." ಹೇಳುತ್ತಲೇ ಹೋದ ಅಂಗಡಿಯಾತ.
ಅವನ ಮಾತನ್ನು ಮಧ್ಯದಲ್ಲೇ ತುಂಡರಿಸುತ್ತ ಸ್ವಲ್ಪ ಒರಟಾಗೆ ಹೇಳಿದೆ. "ಸ್ವಾಮಿ, ನೀವು ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ ಅಂತ ಕಾಣತ್ತೆ. ನನಗೆ ಯಾವ ನಾಯಿಯಾದರೂ ಸರಿ. ಬಾಡಿಗೆಗೆ ಕೆಲವು ದಿವಸಕ್ಕೆ ಮಾತ್ರ ಬೇಕಿತ್ತು."
"ಏನು? ಬಾಡಿಗೆಗ?" ಮತ್ತೆ ಹುಬ್ಬೇರಿಸುತ್ತ ನುಡಿದ.
"ಒಂದು ವಾರದ ಮಟ್ಟಿಗೆ.. ನೀವು ಯಾವ ನಾಯಿಯನ್ನು ಕೊಟ್ಟರೂ ಪರವಾಗಿಲ್ಲ. ಒಂದು ವಾರದ ನಂತರ ಹಿಂದಿರುಗಿ ತರುತ್ತೇನೆ. " ತಡವರಿಸುತ್ತ ನುಡಿದೆ ನಾನು.
"ಆದರೆ, ನಾವು ಸಾಮಾನ್ಯವಾಗಿ ಹಾಗೆಲ್ಲ ಬಾಡಿಗೆ ಕೊಡುವುದಿಲ್ಲವಲ್ಲ? ಹೌದು, ನಿಮಗೆ ಬಾಡಿಗೆ ನಾಯಿ ಏತಕ್ಕೆ?"
ಅವನ ಮುಖವನ್ನು ನೋಡದೆ, ನನ್ನಷ್ಟಕ್ಕೆ ನಾನು ನನ್ನ ಕಿಸೆಯಿಂದ ಪರ್ಸ್ ತೆಗೆದೆ; ನೋಟಿನ ಕಂತೆಗಳನ್ನು ನೋಡುತ್ತಿದ್ದ ಹಾಗೆ, ಅವನು ನಾಲಿಗೆ ಹೊರತೆಗೆದು ಚಪ್ಪರಿಸುತ್ತ ನುಡಿದ.
"ಈಗರ್ಥವಾಯಿತು ಬಿಡಿ ಸರ್. ನಿಮ್ಮ ಮಗಳೇ ನಿಮ್ಮನ್ನು ಇಲ್ಲಿಗೆ ಕಳಿಸಿದ್ದಾಳೆ. ನನಗೆ ಗೊತ್ತು, ಹೆಣ್ಣು ಮಕ್ಕಳೇ ಹಾಗೆ. ನೀವು ಪ್ರೀತಿಯಿಂದ ಸಾಕಿದ ನಾಯಿ, ಪಾಪ ಕೊನೆಯುಸಿರಿಳೆದಿದೆ. ಆ ದುಃಖದಿಂದ ನಿಮ್ಮ ಮಗಳು ಕಂಗಾಲಾಗಿದ್ದಾಳೆ. ಪಾಪ ನಾಯಿಯ ಅಗಲಿಕೆಯಿಂದ ತುಂಬಾ ದುಃಖ್ಖ ಪಡುತ್ತಿರಬೇಕು ನಿಮ್ಮ ಮಗಳು. ಅದಕ್ಕಾಗೇ, ನಿಮಗೆ ಕೆಲವು ದಿನದ ಮಟ್ಟಿಗೆ, ನಾಯಿ ಬೇಕಿದೆ. ಕರೆಕ್ಟ್?" ಮೀಸೆಯ ಮೇಲೆ ಕೈ ಆಡಿಸುತ್ತಾ, ಎಲ್ಲವನ್ನು ತಿಳಿದವನಂತೆ ನುಡಿದ ಅಂಗಡಿಯಾತ.
ನನಗೆ ಬರುತ್ತಿದ್ದ ಕೋಪವನ್ನು ತಡೆಯುತ್ತಾ ಹೇಳಿದೆ. "ಸ್ವಾಮಿ, ನನಗೆ ಮುದ್ದಾದ ಮಗಳಿರುವುದು ನಿಜ. ಆದರೆ ನಮ್ಮ ಮನೆಯಲ್ಲಿ ನಾಯಿ ಇದ್ದರೆ ತಾನೇ ಸಾಯಲಿಕ್ಕೆ? ನನಗೆ ನಾಯಿಯನ್ನು ಕಂಡರೆ ಆಗುವುದಿಲ್ಲ, ಇನ್ನು ಸಾಕುವುದಂತೂ ದೂರದ ಮಾತು."
"ಏನು? ನಿಮಗೆ ನಾಯಿಯನ್ನು ಕಂಡರೆ ಆಗುವುದಿಲ್ಲವೇ? ಮತ್ತೆ, ನೀವು ಈ ಪೆಟ್ ಶಾಪಿಗೇಕೆ ಬಂದಿರಿ?" ಗದರುತ್ತಾ ನುಡಿದ ಅಂಗಡಿಯಾತ.
"ಸ್ವಾಮಿ, ದಯವಿಟ್ಟು ತಪ್ಪು ತಿಳಿಯ ಬೇಡಿ. ನಾನು ಚಿಕ್ಕವನಿದ್ದಾಗ ನಾಯಿಯೊಂದು ಕಚ್ಚಿ, 14 ಇಂಜೆಕ್ಷನ್ ತೆಗೆದುಕೊಂಡವನು ನಾನು. ಇಷ್ಟಕ್ಕೂ, ಆ ನಾಯಿ ನಾವು ಸಾಕಿದ ನಾಯಿಯೇ ಆಗಿತ್ತು." ನನ್ನ ಧ್ವನಿಯನ್ನು ನವಿರು ಗೊಳಿಸುತ್ತ ನುಡಿದೆ.
"ಒಹ್? ಈಗರ್ಥವಾಯಿತು ಬಿಡಿ ಸಾರ್. ನೀವು ಸಿನಿಮಾ ಪ್ರೊಡ್ಯೂಸರ್ ಅಥವಾ ಅಸಿಸ್ಟೆಂಟ್ ಡೈರೆಕ್ಷರ್! ಕರೆಕ್ಟ್?, ನಿಮ್ಮ ಸಿನಿಮಾ ಶೂಟಿಂಗಿಗೆ ನಾಯಿ ಬೇಕಿದೆ. ಹೌದಲ್ಲವೇ?" ನಾನು ಬಾಯಿ ತೆರೆದು ಉತ್ತರ ಕೊಡುವುದಕ್ಕೆ ಮುಂಚೆ, ಆತ ಮುಂದುವರೆದ.
"ಸಾರ್, ಇಡೀ ಬೆಂಗಳೂರಿನಲ್ಲೇ ನಮ್ಮಂತ ಪೆಟ್ ಶಾಪ್ ಇನ್ನೊಂದಿಲ್ಲ ಗೊತ್ತಾ ನಿಮಗೆ? ಯಾವುದೇ ಸಿನಿಮಾ ಶೂಟಿಂಗಿಗೆ ನಾಯಿ ಬೇಕಿದ್ದಲ್ಲಿ, ನಮ್ಮಲ್ಲಿಗೆ ಮೊದಲು ಬರುವುದು. ಕಳೆದ ವರ್ಷ ಒಂದು ಸಿನಿಮಾ ದಲ್ಲಿ ನಮ್ಮ ನಾಯಿ ಎಂಥ ಆಕ್ಟಿಂಗ್ ಮಾಡಿತ್ತೆಂದರೆ, ಆ ಪ್ರೊಡ್ಯೂಸರ್, ಎಲ್ಲ ಪೋಸ್ಟರ್ನಲ್ಲೂ, ಹೀರೋ ಬದಲು, ನಮ್ಮ ನಾಯಿಯ ಪಿಕ್ಚರ್ ಹಾಕಿಸಿದ್ರು." ತಂಬಾಕಿನಿಂದ ಹುಳುಕಾದ ತನ್ನ ಹಲ್ಲುಗಳನ್ನು ಪ್ರದರ್ಶಿಸುತ್ತಾ ನುಡಿದ ಅಂಗಡಿಯಾತ.
ನನ್ನ ಕೋಪ ಕೈ ಮೀರುತ್ತಿತ್ತು. ಹೇಗೋ ಅದನ್ನು ಬಿಗಿಹಿಡಿದೆ. . "ಸಾರ್, ನಾನು ಒಬ್ಬ ವಿದ್ಯಾವಂತ ಹಾಗು ಬಹಳ ಒಳ್ಳೆಯ ನಾಗರೀಕ ಕೂಡ. ನನ್ನ ಸಮಸ್ಯೆ ಕೇವಲ ನಾಯಿಯಿಂದ ಮಾತ್ರ ಬಗೆ ಹರಿಸಲು ಸಾಧ್ಯ. ಅದಕ್ಕಾಗಿಯೇ ನನಗೆ ಒಂದು ವಾರದ ಮಟ್ಟಿಗೆ ನಾಯಿಯೊಂದು ಬೇಕಿತ್ತು. ಸಾಧ್ಯವಿಲ್ಲದಿದ್ದರೆ ಹೇಳಿ, ಬೇರೆ ಅಂಗಡಿಗೆ ಹೋಗುತ್ತೇನೆ.." ನನ್ನ ಪರ್ಸ್ ಕೈಲಿ ಹಿಡಿದು ತಿರುಗಿಸುತ್ತಾ ನುಡಿದೆ.
ಪರ್ಸ್ ನೋಡುತ್ತಿದಂತೆ, ಅವನ ಕಣ್ಣುಗಳು ಅಗಲವಾದವು. ಬಾಯಿ ಚಪ್ಪರಿಸುತ್ತ ನುಡಿದ. "ಸಾರ್. ದಯವಿಟ್ಟು ತಪ್ಪು ತಿಳಿಯ ಬೇಡಿ. ನಾನು ಗಾಂಧೀಜಿಯವರು ಹೇಳಿದಂತೆ, ಗ್ರಾಹಕರನ್ನು ದೇವರಂತೆ ನೋಡುವ ಮನುಷ್ಯ. ನೀವು ನಮ್ಮ ಅಂಗಡಿಗೆ ಬಂದು ಉಪಕಾರ ಮಾಡುತ್ತಿದ್ದೀರಿ. ಹೇಳಿ ಸಾರ್, ಯಾವ ನಾಯಿ ಬೇಕು ನಿಮಗೆ. ನೀವೇ ಆರಿಸಿಕೊಳ್ಳಿ." ನನ್ನ ಕೈ ಹಿಡಿದು ಅಂಗಡಿಯ ಒಳಗೆಲ್ಲಾ ರೌಂಡ್ ಹೊಡೆಸಿದ ಅಂಗಡಿಯಾತ.
ತನ್ನ ಪಾಡಿಗೆ ತಾನು ಬಟ್ಟಲಿನಲ್ಲಿದ್ದ ತನ್ನ ಊಟ ಮಾಡುತ್ತಾ, ಯಾರ ಪರಿವೆಯೂ ತನಗೆ ಬೇಡವಂತಿದ್ದ ಕಂದು ಬಣ್ಣದ ನಾಯಿಯ ಕಡೆ ಬೊಟ್ಟು ಮಾಡಿ ತೋರಿಸಿ ಹೇಳಿದೆ. " ಆ ನಾಯಿಯನ್ನು ಕೊಡಿ."
ಮತ್ತೆ ಹುಬ್ಬೇರಿಸಿ ನುಡಿದ "ಸಾರ್.. ಅದು ಮಾರಾಟಕ್ಕಿಟ್ಟಿರುವ ನಾಯಿಯಲ್ಲ. ಅದು ನನ್ನ ಸಾಕು ನಾಯಿ ಸ್ಟಾನ್ಲಿ. ಅದಿಲ್ಲದೇ ನಾನು ಒಂದು ದಿನ ಕೂಡ ಇರಲಾರೆ. ಆದರೆ, ನೀವು ಒಬ್ಬ ಸ್ಪೆಷಲ್ ಕಸ್ಟಮರ್. ಹಾಗಾಗಿ, ಬಹಳ ದುಃಖದಿಂದ ನಿಮಗೆ ಒಪ್ಪಿಸುತ್ತಿದ್ದೇನೆ. ಜೋಪಾನ ವಾಗಿ ನೋಡಿಕೊಂಡು, ಒಂದು ವಾರದ ನಂತರ ತಿರುಗಿ ಕರೆದುಕೊಂಡು ಬನ್ನಿ. ಸ್ಟಾನ್ಲಿ ಇಲ್ಲದೆ ನನಗೆ ಜೀವನವೇ ಇಲ್ಲ.
ಸಾರ್ ನಾನು ಎಂತ ದೇಶಪ್ರೇಮಿ ಗೊತ್ತೇ ನಿಮಗೆ? ನಮ್ಮಲಿರುವ ಇಲ್ಲ ನಾಯಿಗಳಿಗೂ ನಾನು ಇಂಗ್ಲಿಷ್ ಹೆಸೆರೇ ಇಟ್ಟಿದ್ದೇನೆ."
ನನಗಾಗುತ್ತಿದೆ ಅಸಮಾಧಾನವನ್ನು ಮರೆತು ಆಶ್ಚರ್ಯದಿಂದ ಕೇಳಿದೆ. "ಇಂಗ್ಲಿಷ್ ಹೆಸೆರೇ? ಅದೇನು ಕಾರಣ?"
"ಸಾರ್, ದೇಶ ಪ್ರೇಮ ನನ್ನ ಕಣ, ಕಣದಲ್ಲೂ ಇದೆ. ನಮ್ಮ ತಂದೆ ಫ್ರೀಡಂ ಫೈಟರ್ ಆಗಿದ್ದವರು. ಅವರು ಯಾವಾಗಲೂ ಹೇಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ, ಹೋಟೆಲ್ ಗಳ ಮುಂದೆ ಬರೆಯುತ್ತಿದ್ದರಂತೆ; ಡಾಗ್ಸ್ ಅಂಡ್ ಇಂಡಿಯನ್ಸ್ ನಾಟ್ ಅಲೋಡ್, ಅಂತ. ಹಾಗಾಗಿ, ನಾನು ನಮ್ಮ ದೇಶ ಪ್ರೇಮದ ಕುರುಹಾಗಿ, ಎಲ್ಲ ನಾಯಿಗಳಿಗೂ, ಬ್ರಿಟಿಷ್ ಹೆಸ್ರಿಟ್ಟಿದ್ದೇನೆ."
ನನಗೆ ಬರುತ್ತಿದ್ದ ನಗುವನ್ನು ತಡೆಯುತ್ತ, ಹಣ ಎಷ್ಟು ಕೊಡಬೇಕೆಂದು ಕೇಳಿದೆ. ಅವನು ಕೇಳಿದ ಹಣ ದುಪ್ಪಟ್ಟಾದರೂ, ನನ್ನ ಕೆಲಸ ಮುಗಿಯುವುದು ಮುಖ್ಯವೆಂದು, ಹಣ ಅವನ ಕೈಯಲ್ಲಿ ತುರುಕಿ, ನಾಯಿಯ ಬೆಲ್ಟ್ ಹಿಡಿದು ಹೊರನಡೆದೆ.
ಹಣವನ್ನು ಕಿಸೆಗೆ ತುರುಕಿ, ಹಿಂದೆಯೇ ಓಡೋಡಿ ಬಂದ ಅಂಗಡಿಯಾತ. ಸ್ಟಾನ್ಲಿಯನ್ನು ತಬ್ಬಿ ಲೊಚ ಲೋಚನೆ ಮುತ್ತಿಟ್ಟು, ದುಃಖದಿಂದ ಬೀಳ್ಕೊಡುತ್ತಾ ನನ್ನ ಮುಖವನ್ನೇ ನೋಡುತ್ತಾ ನುಡಿದ.
"ಸಾರ್, ತುಂಬಾ ಹುಷಾರಾಗಿ ನೋಡಿಕೊಳ್ಳಿ ನನ್ನ ಸ್ಟಾನ್ಲಿಯನ್ನು. ಹೌದು, ನೀವು ನಾಯಿ ಬಾಡಿಗೆಗೆ ತೆಗೆದುಕೊಂಡಿದ್ದಾದರೂ ಏತಕ್ಕಾಗಿ ಎಂದು ಹೇಳಲೇ ಇಲ್ಲವಲ್ಲಾ?"
ಬೆಲ್ಟ್ ಗಟ್ಟಿಯಾಗಿ ಹಿಡಿದು, ನನ್ನ ಮುಖವನ್ನು ಅತ್ತ ತಿರುಗಿಸಿ, ಅಂಗಡಿಯವನಿಂದ ದೂರ ಹೋದ ನಂತರ ನುಡಿದೆ.
"ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ನಾಯಿ ಸಾಕಿಕೊಂಡಿರುವ ಕೆಲವು ದುಷ್ಟ ಹಾಗೂ ಅನಾಗರೀಕ ವ್ಯಕ್ತಿಗಳಿದ್ದಾರೆ. ಎಷ್ಟು ಹೇಳಿದರು ಕೇಳದೇ, ಬೇಕೆಂದೇ ನನ್ನ ಮನೆಯ ಮುಂದೆ ನಾಯಿಗಳಿಂದ ಹೊಲಸು ಮಾಡಿಸುತ್ತಾರೆ. ಇಷ್ಟು ದಿನ ನಾನು ಅಸಹಾಯ ಕತೆಯಿಂದ ನೋಡುತ್ತಲಿದ್ದ.
ಇನ್ನು ಮುಂದೆ ಒಂದು ವಾರದವರೆಗೂ ಅವರಿಗೆ ಕಾದಿದೆ, ಟಿಟ್ ಫಾರ್ ಟ್ಯಾಟ್; ಸ್ಟಾನ್ಲಿಯ ಸಹಾಯದಿಂದ ಅವರಿಗೆ ತಿರುಗೇಟು ಕೊಡಲಿದ್ದೇನೆ!"
